ಹೊಸ ವರ್ಷ: ಹಳೆಯ ಕಹಿ ನೆನಪು

ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು.

ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ ಅವರ ದುರಂತಮಯ ಸಾವಿನೊಂದಿಗೆ ಅಂತ್ಯಗೊಂಡರೂ, ರಾಜ್ಯದ ಜನತೆಯ ಪಾಲಿಗೆ ಅಲ್ಲವಾದರೂ ಸರ್ಕಾರಕ್ಕಂತೂ ಮುಗಿಯದ ಸಮಸ್ಯೆಯಾಗಿದೆ. ನರಹಂತಕ ವೀರಪ್ಪನ್ ವಶದಲ್ಲಿದ್ದ ನಾಗಪ್ಪ ಅವರ ಸಾವಿಗೆ ಕಾರಣ ನಿಗೂಢವಾಗಿದ್ದು, ಜನತಾ ದಳ(ಯು) ನಾಯಕರು ಮತ್ತು ವೀರಶೈವ ಮಠಾಧೀಶರೂ ಸೇರಿದಂತೆ ನಾಗಪ್ಪ ಅವರ ಬೆಂಬಲಿಗರು ಸಾವಿನ ಬಗ್ಗೆ ಸಿಬಿ‌ಐ ತನಿಖೆಗೆ ಒತ್ತಾಯಪಡಿಸುತ್ತಿರುವಾಗಲೇ ಸರ್ಕಾರ ನ್ಯಾಯಾಂಗ ವಿಚಾರಣೆ ಏರ್ಪಡಿಸುವ ನಿರ್ಧಾರ ಪ್ರಕಟಿಸಿದೆ.

ಸಿಬಿ‌ಐ ತನಿಖೆಯೇ ಆಗಬೇಕೆಂಬ ಒತ್ತಾಯ ಹೆಚ್ಚತೊಡಗಿದೆ. ಮಠಾಧೀಶರು ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಏರ್ಪಡಿಸಿ, ಸಿ‌ಐಡಿ ತನಿಖೆಯಿಂದಲೇ ನಾಗಪ್ಪ ಅವರ ಸಾವಿನ ನಿಗೂಢ ಬಯಲಾಗಲು ಸಾಧ್ಯ ಎಂಬುದನ್ನು ಪುನರುಚ್ಚರಿಸುತ್ತಿದ್ದಾರೆ. ಇದೀಗ ಸಾವಿನ ಪ್ರಕರಣ ಹಾಗೂ ಆ ಸಂಬಂಧದ ಚಳವಳಿ ದುರದೃಷ್ಟವಶಾತ್ ಜಾತೀಯ ಸ್ವರೂಪ ಪಡೆಯುತ್ತಿರುವುದನ್ನು ಜನ ಗುರುತಿಸತೊಡಗಿದ್ದಾರೆ. ಹೊಸ ವರ್ಷದಲ್ಲಿ ಬದಲಾದ ಮತ್ತು ಹೊಸ ವಾತಾವರಣವನ್ನು ನಿರೀಕ್ಷಿಸುತ್ತಿದ್ದ ಜನತೆ, ನಾಗಪ್ಪ ಹತ್ಯೆ ಪ್ರಕರಣ ಸಂಬಂಧದ ಆಗ್ರಹಪೂರ್ವಕ ಒತ್ತಾಯ, ಚಳವಳಿಯಾಗಿ ಮಾರ್ಪಟ್ಟಿದ್ದು ಅದು ಯಾವ ರೂಪ ಪಡೆದೀತು ಎಂಬುದನ್ನು ಆತಂಕದಿಂದಲೇ ಕಾದುನೋಡುತ್ತಿದ್ದಾರೆ.

ನಾಗಪ್ಪ ಅವರ ಅಪಹರಣವಾದಾಗ ಅವರ ಬಿಡುಗಡೆಗೆ ಸರ್ಕಾರ, ರಾಜ್‌ಕುಮಾರ್ ಅಪಹರಣವಾದಾಗ ತೋರಿದಷ್ಟು ಆಸಕ್ತಿ ತೋರಿಲ್ಲ ಎಂಬುದೇ ನಾಗಪ್ಪ ಬೆಂಬಲಿಗರ ದೂರು ಆಗಿತ್ತು. ಆದರೆ ನಾಗಪ್ಪ ಅವರ ಬಿಡುಗಡೆಗೆ ವಿಶೇಷ ಕಾರ್ಯಪಡೆ (ಎಸ್‌ಟಿ‌ಎಫ್)ಯನ್ನು ಸರ್ಕಾರ ಚುರುಕುಗೊಳಿಸುವಷ್ಟರಲ್ಲಿ ನಾಗಪ್ಪ ಅವರ ಕುಟುಂಬ ವರ್ಗದವರು ಮತ್ತು ಜನತಾ ದಳ (ಯು) ನಾಯಕರು ಅದನ್ನು ತೀವ್ರವಾಗಿ ವಿರೋಧಿಸಿದ ಕಾರಣ ಎಸ್‌ಟಿ‌ಎಫ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

ನಂತರ ವೀರಪ್ಪನ್ ಕಳುಹಿಸಿದ ಕ್ಯಾಸೆಟ್‌ನಲ್ಲಿ ಜೇಲಿನಲ್ಲಿರುವ ಕೊಳತ್ತೂರು ಮಣಿಯನ್ನು ಸಂಧಾನಕ್ಕೆ ಕಳುಹಿಸುವಂತೆ ಒತ್ತಾಯಪಡಿಸಲಾಗಿತ್ತು. ಆರಂಭದಲ್ಲಿ ಸರ್ಕಾರ ಅದನ್ನು ವಿರೋಧಿಸಿದರೂ, ನಂತರ ನಾಗಪ್ಪ ಅವರ ಕುಟುಂಬದವರ ಮತ್ತು ಬೆಂಬಲಿಗರ ಒತ್ತಾಯಕ್ಕೆ ಮಣಿದು ಜಾಮೀನಿನ ಮೇಲೆ ಮಣಿಯ ಬಿಡುಗಡೆಗೆ ಸರ್ಕಾರ ಪ್ರಯತ್ನಿಸಿದ್ದು ನಿಜ. ಗಂಭೀರ ಆಪಾದನೆಯ ಮೇಲೆ ಮಣಿಯನ್ನು ಬಂಧಿಸಿರುವಾಗ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಸುಲಭದಲ್ಲಿ ಒಪ್ಪಿಕೊಳ್ಳುತ್ತದೆ ಎಂದು ನಿರೀಕ್ಷಿಸುವುದೇ ತಪ್ಪು. ಮಣಿಯನ್ನು ಸಂಧಾನಕ್ಕೆ ಕಳುಹಿಸಲು ಸರ್ಕಾರ ವಿಫಲವಾದಾಗ, ವೀರಪ್ಪನ್ ನೀಡಿದ ಗಡುವು ಮುಕ್ತಾಯಗೊಂಡಿತು. ತಮಿಳುನಾಡು ಎಸ್‌ಟಿ‌ಎಫ್‌ನವರು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ ನಾಗಪ್ಪ ಸಾವಿಗೀಡಾಗಿದ್ದಾರೆ ಎಂದು ತಿಳಿಸುವ ವೀರಪ್ಪನ್ ಕ್ಯಾಸೆಟ್ ನಾಗಪ್ಪ ಕುಟುಂಬದವರನ್ನು ತಲುಪಿದಾಗ ನಾಗಪ್ಪ ಸತ್ತು ಮೂರು ದಿನಗಳಾಗಿದ್ದುವು.

ನಾಗಪ್ಪ ಅವರ ಮೃತದೇಹದ ಮೇಲೆ ಒಂದೇ ಬುಲೆಟ್ ಹೊಕ್ಕಿರುವ ಗುರುತು ಇದ್ದ ಕಾರಣ ಅದು ದೂರದಿಂದ ಹೊಡೆದ ಗುಂಡು ಇರಬಹುದೇ ಅಥವಾ ಅವರನ್ನು ಸಮೀಪದಿಂದಲೇ (ವೀರಪ್ಪನ್ ಬಳಗದವರು) ಸಾಯಿಸಿರಬಹುದೇ ಎಂಬ ಜಿಞಸೆ ಆರಂಭವಾಯಿತು. ಕರ್ನಾಟಕ ಎಸ್‌ಟಿ‌ಎಫ್ ಪಡೆಯವರ ಅಚಾತುರ್ಯದಿಂದ ಸತ್ತಿರಬಹುದು ಎಂಬ ವಾದವೂ ಇದೆ. ಈ ಎಲ್ಲ ಗೊಂದಲ ನಿವಾರಣೆಯಾಗಬೇಕಾದರೆ ಸಿಬಿ‌ಐ ತನಿಖೆ ಅಗತ್ಯ ಎಂದು ನಾಗಪ್ಪ ಕುಟುಂಬದವರು ಮತ್ತು ಜನತಾ ದಳ ಮುಖಂಡರು ಒತ್ತಾಯಿಸುತ್ತಿದ್ದಾರೆ. ಇದು ಯಾವ ಹಂತ ತಲುಪೀತು ಎಂದು ಈಗಲೇ ಹೇಳಲಾಗದು.

ಈ ಮಧ್ಯೆ ಕಾವೇರಿ ನೀರು ಬಿಡುವ ವಿಚಾರ ಹೊಸ ತಿರುವು ಪಡೆದಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದ್ದು, ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂಬ ನಿಲುವು ತಾಳಿದ್ದ ರಾಜ್ಯ ಸರ್ಕಾರ, ಇತ್ತೀಚೆಗೆ ದೆಹಲಿಯಲ್ಲಿ ಕಾವೇರಿ ನದಿ ಪ್ರಾಧಿಕಾರದ ಸಭೆ ಸೇರಲು ನಿಯೋಜಿತವಾಗಿದ್ದಾಗ, ೧೨೦೦ ಕೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಲು ಒಪ್ಪಿರುವುದು ಮತ್ತೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಈ ತೀರ್ಮಾನವನ್ನು ರೈತ ಮುಖಂಡರು ಹಾಗೂ ವಿರೋಧ ಪಕ್ಷದವರು ಆಕ್ಷೇಪಿಸಿದ್ದಾರೆ. ಮುಂದೇನು ಎಂದು ರಾಜ್ಯದ ಜನತೆ ಆತಂಕದಿಂದ ಪ್ರಶ್ನಿಸಲಾರಂಭಿಸಿದ್ದಾರೆ.

ವೀರಪ್ಪನ್‌ನನ್ನು ಹಿಡಿಯುವಲ್ಲಿ ವೀರಾವೇಶದ ಹೇಳಿಕೆಗಳು ಕೇಳಿಬರುತ್ತಿವೆಯೇ ಹೊರತು, ಗಂಭಿರ ಪ್ರಯತ್ನ ಕಂಡುಬರುತ್ತಿಲ್ಲ. ಈ ಕಾಡುಗಳ್ಳ ಯಾವಾಗ ಏನು ಮಾಡುತ್ತಾನೆ ಎಂಬುದು ನಮ್ಮ ಪೊಲೀಸ್ ಗೂಢಚಾರರಿಗೂ ಗೊತ್ತಾಗುವುದಿಲ್ಲ. ಇದು ಅನುಭವದ ಮಾತು. ಇಂಥ ಅನಿಶ್ಚಿತ ವಾತಾವರಣದಲ್ಲಿಯೇ ಹೊಸ ವರ್ಷ ಆರಂಭವಾಗಿದೆ ಎಂಬುದನ್ನು ಮರೆಯಲಾಗದು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.