ಬೆತ್ತಲಾಗು ನೀನು ಎಂದ ಜಲಾಲುದ್ದೀನ ರೂಮಿ

ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. ೧೨೦೭ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದನು. ಈಗ ಅದು ಆಫ್‌ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ ೧೨೭೩ರಲ್ಲಿ ಸತ್ತ. ಸಾಯುವ ಹೊತ್ತಿಗೆ ಪರ್ಶಿಯನ್ ನಾಗರಿಕತೆಯ ಅತ್ಯುತ್ತಮ ಕವಿ ದಾರ್ಶನಿಕರಲ್ಲಿ ಒಬ್ಬನಾಗಿದ್ದ.

ರೂಮಿಯ ಜೀವನ ಅನೇಕ ತಲ್ಲಣಗಳಿಂದ, ಎದೆಯೊಡೆವ ಹುಡುಕಾಟಗಳಿಂದ ಕೂಡಿದೆ. ೩೩ನೇ ವಯಸ್ಸಿಗೆ ಅತ್ಯಂತ ದೊಡ್ಡ ದಾರ್ಶನಿಕ, ಅಧ್ಯಾಪಕನೆಂದು ಕೀರ್ತಿ ಗಳಿಸಿದ್ದ ವ್ಯಕ್ತಿ ರೂಮಿ. ದೊರೆಗಳು, ದೊಡ್ಡ ವರ್ತಕರು, ಪ್ರತಿಷ್ಠಿತರೆಲ್ಲ ಅವನ ಉಪನ್ಯಾಸಗಳಿಗೆ ಹಾತೊರೆಯುತ್ತಿದ್ದರು. ಈ ಎಲ್ಲ ಕೀರ್ತಿ ಅವನಿಗೆ ಒಮ್ಮೆಲೆ ವಾಕರಿಕೆ ತರಿಸಿತು. ೩೮ನೇ ವಯಸ್ಸಿನಲ್ಲಿ ತನ್ನೆಲ್ಲ ಕೀರ್ತಿ, ಗೌರವಗಳ ವಿರುದ್ಧವೇ ತಿರುಗಿಬಿದ್ದ. ತನ್ನ ಪ್ರಸಿದ್ಧಿಯ ಭಾರವೇ ಅವನಿಗೆ ತಡೆಯಲಾಗದೆ ಹೋಯಿತು. ಸಾಂಪ್ರದಾಯಿಕ ಮೌಲ್ಯಗಳ ಚೌಕಟ್ಟಲ್ಲೆ ವಿಜೃಂಭಿಸುತ್ತಿರುವುದರಿಂದ ಮಾತ್ರ ತನ್ನ ಸುತ್ತ ಕೀರ್ತಿ ಜೇಡರಬಲೆ ಹಬ್ಬುತ್ತಿದೆ ಎಂದು ಅವನಿಗೆ ಖಾತ್ರಿಯಾಯಿತು. ಕೀರ್ತಿ ಸುತ್ತ ಬೆಳೆದಷ್ಟು ಒಳಗೊಳಗೆ ಆತ ದಿಗ್ಭ್ರಾಂತನಾದ. ಅತೃಪ್ತಿಯಿಂದ ಕುದಿಯತೊಡಗಿದ. ಸಾಂಪ್ರದಾಯಿಕ ಜೀವನದಲ್ಲಿ ಮುಳುಗುವುದೇ ಮೃತ್ಯು ಎನ್ನಿಸಿ ಅದರಾಚೆಗೆ ಹಾರಲು ಒದ್ದಾಡ ತೊಡಗಿದ. ಅಧ್ಯಯನ ಅಧ್ಯಾಪನಗಳಿಗಿಂತ ಕ್ರಿಯೆ ಮತ್ತು ಅನುಭವಗಳು ಅವನಿಗೆ ವಿಶೇಷ ಆಕರ್ಷಕವಾಗಿ ಕಾಣಿಸತೊಡಗಿದವು. ಒಬ್ಬ ಅತ್ಯುತ್ತಮ ದಾರ್ಶನಿಕ-ಅಧ್ಯಾಪಕ ತನ್ನ ಕಸುಬಿನಿಂದಲೇ ತಪ್ಪಿಸಿಕೊಳ್ಳಬಯಸಿದ.

ಈ ಹುಡುಕಾಟದಲ್ಲಿ ಅವನ ಆಂತರಿಕ ಜೀವನ ಕೂಡ ಪೂರ ಬದಲಾಗಿಬಿಟ್ಟಿತು. ಆತ ತನ್ನ ಅದುವರೆಗಿನ ಶಿಕ್ಷಣ ಮತ್ತು ಸಾಧನೆಗಳ ವಿರುದ್ಧವೇ ಬಂಡೆದ್ದ. ಸೂಫಿ ಅನುಭವಕ್ಕಾಗಿ ಅನೇಕ ಪ್ರಯಾಣಗಳನ್ನು ಮಾಡಿ ವಾಪಸ್ಸಾದ. ಈ ಗೊಂದಲದ, ತೀವ್ರ ಹುಡುಕಾಟದ ದಿನಗಳಲ್ಲೇ ಒಬ್ಬ ಸೂಫಿ ಗುರು ಶಂಸ್ ತಬ್ರೀಜ್ ಎಂಬಾತನನ್ನು ಭೇಟಿಯಾದ. ಆ ಭೇಟಿ ಒಂದು ಮಹಾನ್ ಸಂಬಂಧದ ಯಾತ್ರೆಯಾಗಿಬಿಟ್ಟಿತು. ದಟ್ಟ ಪ್ರೇಮದ, ದಟ್ಟ ಜ್ಞಾನದ, ದಟ್ಟ ಯಾತನೆಯ, ದೊಡ್ಡ ಸಂಭ್ರಮದ ಸಂಬಂಧ ಅದು. ಒಂದು ಮಟ್ಟದಲ್ಲಿ ತಬ್ರೀಜ್-ರೂಮಿಯ ಸಂಬಂಧ ಎಲ್ಲ ದೊಡ್ಡ ಸಂಬಂಧಗಳ ಪ್ರತೀಕ. ಅದು ಅಂತಿಮವಾಗಿ ಲಿಂಗ ವ್ಯತ್ಯಾಸಗಳು ಮರೆಯಾಗುವ ರೀತಿಯದು. ಈ ರೀತಿಯ ಸಂಬಂಧಕ್ಕೆ ಮುಜುಗರಪಟ್ಟುಕೊಂಡರೆ ಇದನ್ನು ಸಾಂಪ್ರದಾಯಿಕ ಅರ್ಥದ ಗಂಡು-ಹೆಣ್ಣಿನ ಸಂಬಂಧ ಎಂದರೂ ನಡೆದೀತು. ತನ್ನ ಪ್ರೇಮಿ-ಗುರುವಿನ ಮೇಲೆ ರೂಮಿ ೨೫೦೦ ಪದ್ಯಗಳ ’ದಿವಾನ್-ಎ-ಷಂಸ್’ ಎಂಬ ಕೃತಿಯನ್ನೇ ಬರೆದ. ಪ್ರೇಮ ಜ್ಞಾನಗಳೆರಡು ಒಂದೇ ಆಗುವ ಸಂಬಂಧ ಅದು. ಆ ಬಗ್ಗೆ ರೂಮಿ ಹೀಗೆ ಹೇಳಿದ- “ನನ್ನ ಒಳ ಮನಸ್ಸಿನ ಸಮುದ್ರದಿಂದ ತಬ್ರೀಜ್ (ಶಂಸ್‌ನವನು) ನನ್ನನ್ನು ಹೊರಗೆಳೆದ. ಆಗ ಬೆಳಕಿನ ಮಹಾ ಶರೀರವೆದ್ದಿತು. ಶಂಸ್‌ನ ತಬ್ರೀಜ್ ಕಣ್ಣಿನ ಬೆಳಕಾದ. ತರ್ಕದ ಸ್ಪಷ್ಟತೆಯಾದ. ಆತ್ಮದ ಪ್ರಖರ ಕಾಂತಿಯಾದ. ಆತ ನನ್ನ ಎಲ್ಲ ಸಂತೋಷಗಳ ಅಂತಿಮ ರೂಪನಾದ”.

ಇದರಿಂದ ಉನ್ಮತ್ತನಾದ ರೂಮಿ, ಗೌರವಾರ್ಹ ಪ್ರಧ್ಯಾಪಕ ರೂಮಿ, ’ಸಮಾ’ ಎಂಬ ಕುಣಿತ, ಹಾಡುಗಳ ಕೂಟವನ್ನೇ ಕಟ್ಟಿದ. ತಾಪಸರು ತಪಗುಟ್ಟಿ ಜಿನುಗಿದರೆ ಜನ ಸಹಿಸಬಲ್ಲರು. ಜ್ಞಾನಿಗಳು ಹಾಗೇ ಇರಬೇಕು. ಆದರೆ, ಹುಚ್ಚು ಹರೆಯದವರ ಹಾಗೆ ಒಬ್ಬ ಮಧ್ಯ ವಯಸ್ಕ ಗುರು ಕುಣಿದರೆ? ಆದರೂ ಹಳೆಯ ಗೌರವದಿಂದ ಸುಮ್ಮನಿದ್ದರು. ಆದರೆ, ತಬ್ರೀಜನ ಸ್ನೇಹದಿಂದಾಗಿ ಉಳಿದ ಲೋಕದಿಂದ ರೂಮಿ ದೂರವಾಗತೊಡಗಿದ. ಇದಕ್ಕೆಲ್ಲ ತಬ್ರೀಜ ಕಾರಣ ಎಂದು ರೂಮಿಯ ಹಳೆಯ ಅಭಿಮಾನಿಗಣ ಉರಿದುಬಿದ್ದಿತು. ಅವರ ಕೋಪ ಶಂಸ್‌ನ ಮೇಲೆ ತಿರುಗಿತು. ಒಂದು ದಿನ ಶಂಸ್ ತಬ್ರೀಜ್ ಕಣ್ಮರೆಯಾದ. ರೂಮಿಗೆ ತನ್ನ ಪ್ರೇಮಮೂಲ ಕಣ್ಮರೆಯಾದಂತೆ ಜ್ಞಾನಮೂಲ ಮರೆಯಾದಂತೆ ಅನಿಸಿ ಅನಾಥನಾಗಿ ಬಿಟ್ಟ. ದುಃಖಮೂಲ ಮಾತ್ರ ಉಳಿದು ಹಗಲುರಾತ್ರಿಗಳು ಹಾಡಿದ, ಕುಣಿದ, ಹುಚ್ಚನಂತಾದ. ತಬ್ರೀಜ್‌ನನ್ನು ಹುಡುಕುತ್ತ ಎಲ್ಲವನ್ನೂ ಬಿಟ್ಟು ಕಣ್ಮರೆಯಾದ. ತಬ್ರೀಜ್ ಡಮಾಸ್ಕಸ್‌ನಲ್ಲಿದ್ದಾನೆ ಎಂದು ಹುಡುಕುತ್ತ ಅಲ್ಲಿಗೂ ಹೋದ. ಆದರೆ, ತಬ್ರೀಜ್ ಎಲ್ಲ ಘನ ಪ್ರೇಮದ ಹಾಗೆ ಅಲೆಮಾರಿಯ ಪ್ರತೀಕ. ರೂಮಿ ತನ್ನ ಸೃಜನಶೀಲ ತೀವ್ರತೆಗಳ ಶಿಖರ ಮುಟ್ಟಿದ್ದು ಈ ದಿನಗಳಲ್ಲೆ.

ಅಲೆಮಾರಿಯಾಗಿ ಹಂಬಲಿಸಿ ವಿಹ್ವಲನಾಗಿ ತನ್ನ ಅತ್ಯುತ್ತಮ ಕಾವ್ಯವನ್ನು ರೂಮಿ ಸೃಷ್ಟಿಸಿದ. ಇದರಲ್ಲಿ ಪ್ರೇಮವೆಂಬ ಬೆಂಕಿ ಎಷ್ಟು? ದಾರ್ಶನಿಕ ಅನುಭವವೆಂಬ ಬೆಳಕು ಎಷ್ಟು? ಎಂದು ಬಿಡಿಸಿ ಹೇಳುವುದು ಕಷ್ಟ. ಸಂಪ್ರದಾಯವೆಂಬ ಗೋಡೆ ಹಾರಲು ತವಕಿಸುವ ಮನಸ್ಸುಗಳಿಗೆ ಇದೊಂದು ರೆಕ್ಕೆ. ಎಲ್ಲ ದೊಡ್ಡ ಮಧುರ ಪ್ರೇಮದ ಗರ್ಭದಲ್ಲೇ ಕಟುವಿರಹವೂ ಇರುತ್ತದೆಂಬ ಅನುಭವವನ್ನು ಈ ಕವಿತೆಗಳು ಹೃದಯ ಸ್ಪರ್ಶಿಯಾಗಿ ಹೇಳುತ್ತವೆ ಮತ್ತು ಅಂತಿಮವಾಗಿ ಆ ಪ್ರಯಾಣದಲ್ಲಿ ದೊಡ್ಡಜ್ಞಾನವೂ ಹುಟ್ಟುತ್ತದೆ.

ಅಲೆಮಾರಿಗಾಗಿ ಹಂಬಲ
ಮುಂಜಾವಿನಲ್ಲಿ ಚಂದ್ರ ಕಾಣಿಸಿಕೊಂಡ
ಕೆಳಗಿಳಿದು ಬಂದ ನನ್ನನ್ನೆ ನೋಡಿದ
ಬೇಟೆಹದ್ದು ಗಕ್ಕನೆರಗಿ ಹಿಡಿದಂತೆ ಹಕ್ಕಿ
ಹೊತ್ತು ನನ್ನನ್ನು ಆಕಾಶಕ್ಕೆ ಹಾರಿದ

ನನ್ನನ್ನು ನೋಡಿಕೊಂಡೆ ನಾನು ಇರಲೇ ಇಲ್ಲ
ಚಂದ್ರನ ಬೆಳಕಿನಲ್ಲಿ ನನ್ನ ದೇಹ ಆತ್ಮವೇ ಆಗಿಬಿಟ್ಟಿತ್ತು
ಆತ್ಮದೊಳಗೆ ನಾನು ಪ್ರಯಾಣ ಮಾಡಿದೆ
ಬರೀ ಚಂದ್ರನೆ ಕಂಡ ಎಲ್ಲೆಲ್ಲೂ ಬರೀ ಚಂದ್ರನೇ
ಶೂನ್ಯದ ಗುಟ್ಟೆಲ್ಲ ಬಚ್ಚಿಟ್ಟಹಾಗೆ.

ದೇವಲೋಕದ ನವನೆಲೆಗಳೆಲ್ಲ ಚಂದ್ರನಲ್ಲಿ ಕರಗಿಹೋದವು
ಜೀವದ ಹಡಗು ಸಮುದ್ರದಲ್ಲಡಗಿ ಕೂತಿತು
ಸಮುದ್ರ ಉಕ್ಕಿತು ಅರಿವು ಮರಳಿತು ಸುತ್ತ ದನಿ ಹರಡಿತು
ಎತ್ತ ತಿರುಗಿದರೂ ಅದೇ ದನಿ
ಎದ್ದಿತು, ಬಿದ್ದಿತು.

ಕಡಲ ನೆರೆನೊರೆಯುಕ್ಕಿತು, ಪ್ರತಿನೊರೆಯ ನಡುವಿಂದ
ಏನೊ ಎದ್ದು ಮೈತಾಳಿ ಬಂದಿತ್ತು.
ಪ್ರತಿ ನೊರೆನರಜಿನ ಮೈ ಸಮುದ್ರದ ಕುರುಹು ಪಡೆದು
ಮತ್ತದೇ ಸಮುದ್ರದಲ್ಲಿ ಬಯಲಾಗಿಬಿಟ್ಟಿತ್ತು.
ತಬ್ರೀಜಿನ ಅದೃಷ್ಟವಿರದೆ
ಚಂದ್ರನೂ ಸಿಗುವುದಿಲ್ಲ. ಸಮುದ್ರವೂ ಅಗಲಾಗುವುದಿಲ್ಲ.

ಆ ಸುಂದರಾಂಗ ನನ್ನ ಕೈಗೊಂದು ಕಸಪೊರಕೆ ಕೊಟ್ಟು
ಹೇಳಿದ: ಸಮುದ್ರದ ಧೂಳು ಗುಡಿಸು
ಆಮೇಲೆ ಪೊರಕೆ ಬೆಂಕಿಗೆ ಹಾಕಿ ಉರಿವಾಗ
ಹೇಳಿದ: ಆ ಪೊರಕೆಯನ್ನು ಬೆಂಕಿಯಿಂದ ಮೇಲೆತ್ತು
ದಿಗ್ಭ್ರಾಂತನಾಗಿ ಅಡ್ಡಬಿದ್ದೆ
ಆತ ಹೇಳಿದ: ಶರಣಾಗತ ರಕ್ಷಕನಿಲ್ಲದೆ ಶರಣಾಗತನಾಗುವುದನ್ನು ಕಲಿ.
ಶರಣಾಗತ ರಕ್ಷಕನಿಲ್ಲದೆ ಶರಣಾಗತನಾಗುವುದು ಹೇಗೆ?
ಆತ ಹೇಳಿದ: ’ಬೇಷರತ್ತಾಗಿ’.
ಕುತ್ತಿಗೆ ಕೆಳಗೆ ಮಾಡಿ ಹೇಳಿದೆ
’ಶರಣಾಗತನ ಕುತ್ತಿಗೆ ಕತ್ತರಿಸು’.
ಕತ್ತಿಯಿಂದ ಕತ್ತರಿಸಿದಷ್ಟೂ ತಲೆ ಬೆಳೆಯಿತು
ಕುತ್ತಿಗೆಯಿಂದ ಶತಸಾವಿರಕೋಟಿ ತಲೆಗಳು ಚಿಮ್ಮಿದವು.
ತಲೆಯೊಳಗಿಂದ ಬತ್ತಿಗಳು ಜಗ್ಗನೆ ಹೊತ್ತಿಕೊಂಡವು.

ಪೂರ್ವ ಪಶ್ಚಿಮಗಳೆಲ್ಲ ದೀಪಗಳಿಂದ ಕಿಕ್ಕಿರಿದವು.
ದಿಕ್ಕುಗಳೇ ಇರದಕಡೆ ಪೂರ್ವವೆಲ್ಲಿ? ಪಶ್ಚಿಮವೆಲ್ಲಿ?
ಅದೊಂದು ಉರಿವ ನೀರೊಲೆ, ಸ್ನಾನದ ಬಚ್ಚಲು
ಮನಸ್ಸೇನೆಂದು ಮುದ್ದೆಯಾಗಿರುವಾಗ, ಹೃದಯಕ್ಕೆಲ್ಲಿಯ ಆತಂಕ?
ಈ ಬಚ್ಚಲಮನೆಯಲ್ಲೇ ಎಷ್ಟು ಹೊತ್ತು ಇರುತ್ತಿ?
ಬಚ್ಚಲಾಗು ನೀನು, ಬೆತ್ತಲಾಗು ನೀನು, ಉರಿವ ಒಲೆಗೆ ಬೀಳಬೇಡ
ಸುತ್ತ ಚಿತ್ತ ಚಿತ್ತಾರಗಳನ್ನು ನೋಡು
ಕಿಟಕಿಯಾಚೆಗೆ ನೋಡು, ಕಿಟಕಿಗಾಜಿನ ಬೆಳಕು ಅವನನ್ನು
ಸುಂದರಾಂಗವಾಗಿಸಿದೆ. ಕಿಟಕಿಯಾಚೆಗೆ ಚೆಲುವ ರಾಜಕುಮಾರ!
ನೆಲಜಲಗಳಿಗೂ ನಲ್ಲನ ನೆರಳಿಂದಲೇ ಬಂದ ಕಾಂತಿ!
ದೂರ ದೇಶಗಳಿಗೆ ಹಾರಾಡಿದೆ ಹೃದಯ
ಹೊತ್ತು ಮುಳುಗುತ್ತ ಬಂತು. ನನ್ನ ಕಥೆ ಮುಗಿವ ಹಾಗೇ ಇಲ್ಲ!
ಅವನ ಕಥೆಯ ಹಾಡಿಗೆ ಹಗಲುರಾತ್ರಿಗಳು ನಾಚಿ ತಲೆತಗ್ಗಿಸಿವೆ
ನನ್ನ ದೊರೆ ತಬ್ರೀಜ್‌ನಿಂದ ಮತ್ತನಾಗಿದ್ದೇನೆ.
ಸುಖದ ಸುಗ್ಗಿಯ ಮೇಲೆ ಸುಗ್ಗಿ ಸುರಿದು ಚಿತ್ತಾಗಿದ್ದೇನೆ!

ನುಡಿಯಲ್ಲಿ ನಿನ್ನ ಚೆಲುವು ಮೂಡಲಿಲ್ಲವೆ?
ನನ್ನ ಎದೆಗೂಡಲ್ಲಿ ಪ್ರೀತಿ ಅಡಗಿಕೂತುಬಿಟ್ಟಿದೆ.
ನಿನ್ನ ಪ್ರೀತಿಯಿರದೆ ನಾನು ಗುಲಾಬಿ ಮೂಸಿದೆನೆ?
ಮುಳ್ಳಿನಂತೆ ನನ್ನನ್ನು ಉರಿಸಿಬಿಡು.
ಮಾತಿಲ್ಲದ ಮೀನಿನಂತೆ ನಾನು ಮೌನಿಯೆ?
ಸಮುದ್ರದಂತೆ ಅದರ ಅಲೆಗಳಂತೆ ತೊಯ್ದಾಡುತ್ತಿದ್ದೇನೆ.
ತುಟಿಗಳ ಮೇಲೆ ಮುದ್ರೆಯೊತ್ತಿ ಮುಚ್ಚಿರುವ ಮುಖವೆ,
ಮೂಗುದಾರ ಹಾಕಿ ಮುತ್ತು ನನ್ನನ್ನು.
ಒಂಟೆಯ ಹಾಗೆ ದುಃಖದ ಮೇವನ್ನು ಮೆಲುಕು ಹಾಕುತ್ತಿದ್ದೇನೆ,
ಬೆದೆಯೊತ್ತಿ ಬರುವ ಒಂಟೆಯ ಹಾಗೆ ಬಾಯೆಲ್ಲ ನೊರೆನೊರೆ
ನಾನು ಬಚ್ಚಿಟ್ಟುಕೊಂಡಿದ್ದೇನೆ, ಮಾತಿಲ್ಲದೆ ಮುದುಡಿದ್ದೇನೆ,
ನಲ್ಲನ ಎದುರು ಮಾತ್ರ ಬಿಚ್ಚಿ ಹಬ್ಬಿದ್ದೇನೆ.
ನೆಲದಾಳದಲ್ಲಿ ಕೂತಿರುವ ಬೀಜ ನಾನು,
ವಸಂತದ ಕರೆಗಾಗಿ ಕಾಯುತ್ತಿದ್ದೇನೆ.
ನನ್ನ ಉಸಿರಿಲ್ಲದೆಯೂ ಸಿಹಿಯಾಗಿ ಉಸಿರಾಡಬಲ್ಲೆ,
ಸ್ವಂತ ತಲೆಯಿಲ್ಲದೆಯೆ ತಲೆ ಕೆರೆದುಕೊಳ್ಳಬಲ್ಲೆ.

ಅವನು ನಿದ್ರಿಸುತ್ತಿದ್ದ ಹಾಗೆ ಕಂಡ.
ತೋಟದಿಂದ ನಾನು ಕೂಗಿದೆ- “ಬೇಗ, ಬೇಗ ಬಾ. ಕದ್ದ ಹಣ್ಣು ನನ್ನಲ್ಲಿದೆ”.
ಆ ಕಳ್ಳ ನಿದ್ರಿಸುತ್ತಿರಲಿಲ್ಲ.
ಜೋರಾಗಿ ನಕ್ಕು ಹೇಳಿದ- “ತಗಲೂಫಿ ತೋಳವೆ? ಸಿಂಹದ ಕೈಯಿಂದ ಹೇಗೆ ಕದ್ದೆ?”
ಮೋಡಗಳಿಂದ ಯಾರು ಹಾಲು ಹಿಂಡುತ್ತಾರೆ?
ಯಾರು ಮೋಡಗಳ ನಾಡಿಗೆ ಹೋಗುತ್ತಾರೆ?
ಸ್ವತಃ ಆ ಮೋಡಗಳೇ ಪ್ರೀತಿ ಹರಿಸಿ ಕರೆಯದಿದ್ದರೆ?
ಅಸ್ತಿತ್ವದಲ್ಲೇ ಇಲ್ಲದ್ದು ಅಸ್ತಿತ್ವಕ್ಕೆ ಹೇಗೆ ಬರುತ್ತೆ?
ದಿವ್ಯಕೃಪೆಯಿಂದ ಮಾತ್ರ ಅಸ್ತಿತ್ವವೇ ಇಲ್ಲದ್ದು ಅಸ್ತಿತ್ವವಾಗುತ್ತೆ.
ಇಲ್ಲವೇ ಇಲ್ಲ ಎನ್ನುವ ಹಾಗೆ ಸುಮ್ಮನೆ ಕೂರು.
ಆಗ ದಿವ್ಯಪ್ರಾರ್ಥನೆಯಲ್ಲೆಂಬಂತೆ ದರ್ಶನವಾಗುತ್ತದೆ.
ವಿನಯದ ಮೂಲಕ ಮಾತ್ರ ನೀರು ಬೆಂಕಿಯನ್ನು ಗೆಲ್ಲುತ್ತದೆ.
ಬೆಂಕಿ ಎದ್ದೆದ್ದು ಬೊಬ್ಬೆ ಹೊಡೆದರೆ
ನೀರು ಸುಮ್ಮನೆ ಅಡ್ಡ ಬೀಳುತ್ತದೆ.
ತುಟಿ ಹೊಲಿದುಕೊಂಡಿದ್ದಾಗ,
ಹೃದಯಕ್ಕೆ ಸಾವಿರ ನಾಲಗೆ ಚಿಮ್ಮುತ್ತವೆ.
ಶ್, ಈಗ ಮೌನವಾಗಿರು
ಎಷ್ಟೊತ್ತು ಎಷ್ಟೊತ್ತು ಅವನನ್ನು ಗೋಳು ಹೊಯ್ದುಕೊಳ್ಳುತ್ತಿ?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.