ಅವಸ್ಥೆ – ೨

ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ ಹೋಗಬೇಕೆಂಬ ಆಸೆಯಿತ್ತು. ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ಸೇರಿ ಸಿಲ್ಕಿನ ಕ್ಲೋಸ್ ಕಾಲರ್ ಕೋಟು, ಪ್ಯಾಂಟುಗಳನ್ನು ಧರಿಸಿ ಕಾರಿನಲ್ಲಿ ಓಡಾಡುತ್ತ ಪೇಪರಲ್ಲಿ ಆಗೀಗ ಸುದ್ದಿಯಾಗುವಷ್ಟು ಗಣ್ಯವ್ಯಕ್ತಿಯಾಗಿದ್ದ.

ಆತನ ಆಸೆಗಳ ಪೂರೈಕೆಗಿದ್ದ ಒಂದು ಕೊರತೆಯೆಂದರೆ ಅವನಿಗೆ ಸರಿಯಾಗಿ ಇಂಗ್ಲಿಷ್ ಬರದೇ ಇದ್ದುದು. ರೋಟರಿಯ ಪ್ರೆಸಿಡೆಂಟಾಗುವುದೂ ಈ ಐಬಿನಿಂದಾಗಿ ಸಾಧ್ಯವಾಗದೆ ಕಾಲೇಜಿನಲ್ಲಿದ್ದಾಗ ತಾನು ಪುಂಡಾಟಿಕೆಯಲ್ಲಿ ಕಾಲ ಕಳೆದದ್ದಕ್ಕಾಗಿ ವಿಷಾದ ಪಡುತ್ತಿದ್ದ. ಎಷ್ಟು ಹಣವಿದ್ದರೂ ಅವನ ವರ್ಚಸ್ಸು ಊರಿನ ಆಚೆ ನಡೆಯುತ್ತಿರಲಿಲ್ಲ.

ಪೋಲೀಸ್ ಮುಖ್ಯರನ್ನೆಲ್ಲ ಕ್ಲಬ್ಬುಗಳಲ್ಲಿ ಕಾಣುತ್ತಿದ್ದ ಈ ವ್ಯಕ್ತಿಯ ಆಪ್ತನಾಗಲು ಇಷ್ಟಪಟ್ಟು ಅಣ್ಣಾಜಿ ಜಿಲ್ಲೆಗೆ ಬಂದ ಮೊದಲ ವಾರದಲ್ಲಿ ಅವನನ್ನು ಹೋಗಿ ನೋಡಿ ಇಂಗ್ಲಿಷಲ್ಲಿ ಮಾತಾಡಿಸಿದ್ದ. ತಾನು ಸ್ಟೇಟ್ಸ್‌ಮನ್ನಿನ ಸಂಪಾದಕ ವರ್ಗದಲ್ಲಿ ಕೆಲಸ ಮಾಡಿದವನೆಂದೂ ಈಗ ಕೆಲಸ ಬಿಟ್ಟು ಒಂದು ಪುಸ್ತಕ ಬರೆಯುತ್ತಿರುವುದಾಗಿಯೂ ತನ್ನ ಹೆಸರು ಅಣ್ಣಾಜಿ ಎಸ್. ಕತ್ರೆಯೆಂದೂ ಪರಿಚಯ ಮಾಡಿಕೊಂಡು ಊರಿನ ಗಣ್ಯವ್ಯಕ್ತಿಯೂ ಕಾಂಗ್ರೆಸ್ ಧುರೀಣನೂ ಆದ ಚನ್ನವೀರಯ್ಯ ಈ ಜಿಲ್ಲೆಯ ಸ್ವಾತಂತ್ರ್ಯ ಯೋಧರ ಕಥೆಗಳನ್ನು ತಾನು ಬರೆಯುತ್ತಿರುವ ಪುಸ್ತಕಕ್ಕೆ ಒದಗಿಸಲು ಸಾಧ್ಯವೇ ಎಂದು ಕೇಳಿದ್ದ.

ಅಮೃತಶಿಲೆಯ ಕಲ್ಲು ಹಾಸಿದ ಹಜಾರದಲ್ಲಿ ಬೆತ್ತದ ಕುರ್ಚಿ ಮೇಲೆ ತುಂಬ ತಿಳಿದವನಂತೆ ಕೂತು ತಲೆಹಾಕುತ್ತ ಚನ್ನವೀರಯ್ಯಕೇಳಿಸಿಕೊಂಡ. ರೇಡಿಯೋದಲ್ಲಿ ಕೇಳಿಬರುವ ಇಂಗ್ಲಿಷಿನಂತೆ ನಿರರ್ಗಳವಾದ ಅಣ್ಣಾಜಿಯ ಇಂಗ್ಲಿಷಿನಿಂದ ಬೆವರುತ್ತ, ಏನೋ ತಿಳಿದವನಂತೆ ಮಾತಿನ ಮಧ್ಯೆ ’ಐಸೀ’ ’ಆಲ್‌ರೈಟ್’ ಎನ್ನುತ್ತ, ಈ ಭೇಟಿ ಮುಗಿಯುವುದಕ್ಕಾಗಿ ಕಾದ. ಟೀ ತರಲೆಂದು ಒಳಗೆ ಹೋಗಿ, ಮ್ಯಾಜಿಸ್ಟ್ರೇಟರ ಮಗಳಾದ್ದರಿಂದ ಕಾನ್ವೆಂಟಿನಲ್ಲಿ ಓದಿದ್ದ ಹೆಂಡತಿಯನ್ನು “ಅವನು ಏನು ಹೇಳ್ತಿದಾನೆ? ಒಳ್ಳೇ ರೈಲು ಬಿಟ್ಟಂಗೆ ಮಾತಾಡ್ತಾನೇ -ಗೊತ್ತೇ ಆಗ್ಲಿಲ್ಲ” ಎಂದು ಜಬರದಸ್ತಿನಲ್ಲಿ ಮುಗುಳ್ನಗುತ್ತ ಕೇಳಿದ. ತನ್ನ ರೋಟರಿಯ ಪ್ರಗತಿಯ ಅನೇಕ ಅಗತ್ಯಗಳಲ್ಲಿ ಇಂಗ್ಲಿಷ್ ಮಾತಾಡಬಲ್ಲ ಹೆಣ್ಣೂ ಒಂದೆಂದು ತನ್ನ ಶ್ರೀಮಂತಿಕೆಯ ಬಲದಿಂದ ಉಮೆಯನ್ನು ಗಳಿಸಿದ್ದ. ಕಸೂತಿ ಹಾಕುತ್ತ ಅಣ್ಣಾಜಿಯ ಮಾತುಗಳನ್ನು ಒಳಗಿನಿಂದ ಕೇಳಿಸಿಕೊಂಡ ಉಮಾ ಡೈನಿಂಗ್ ಟೇಬಲಿನ ಮೇಲೆ ಟೀ ಮತ್ತು ಬಿಸ್ಕತ್ತುಗಳನ್ನಿಡುತ್ತ ಗಂಡನಿಗೆ ಅವನ ಮಾತಿನ ತಾತ್ಪರ್ಯ ತಿಳಿಸಿ ಅವನನ್ನು ಒಳಗೆ ಕರೆಯುವಂತೆ ಹೇಳಿದಳು. ಚನ್ನವೀರಯ್ಯ ’ಕಮ್ ಇನ್’ ಎಂದ ಮೇಲೆ ಒಳಗೆ ಹೋದ ಅಣ್ಣಾಜಿ ಉಮೆಗೆ ಗೌರವದಿಂದ ಬಾಗಿ, ತಾನು ಕೊಲ್ಹಾಪುರದಲ್ಲಿದ್ದಾಗ ಕನ್ನಡ ಬರುತ್ತಿತ್ತೆಂದೂ ಈ ಊರಲ್ಲಿ ತನ್ನ ಬಿಡುವು ಸಮಯದಲ್ಲಿ ಕೆಲವು ಹುಡುಗರಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದೇನೆಂದೂ ತನ್ನ ಹರಕು ಮುರುಕು ಕನ್ನಡದಲ್ಲಿ ತಿಳಿಸಿದ. ಸ್ವಾತಂತ್ರ್ಯ ಬಂದರೂ ನಮ್ಮ ಜನಕ್ಕೆ ಇಂಗ್ಲಿಷ್ ವ್ಯಾಮೋಹ ಹೋಗಲಿಲ್ಲ; ನೀವು ಕನ್ನಡದಲ್ಲಿ ಆರೇಟರ್ ಅಂತ ಕೇಳಿದೀನಿ ಎಂದು ಚನ್ನವೀರಯ್ಯನನ್ನು ಹೊಗಳಿ ಟೀಯನ್ನು ಸವಿದು ಉಮೆಯನ್ನು ಅಭಿನಂದಿಸಿದ.

ಚನ್ನವೀರಯ್ಯ ಹೀಗೆ ಹಠಾತ್ತನೆ ತನಗೊಬ್ಬ ಬುದ್ಧಿಜೀವಿಯ ಸ್ನೇಹವಾದ್ದರಿಂದ ಹಿಗ್ಗಿದ. ತನ್ನ ರೋಟರಿ ಗೆಳೆಯರಿಗೆ ಇಷ್ಟು ನಿರರ್ಗಳ ಇಂಗ್ಲಿಷ್ ಮಾತಾಡುವವನನ್ನು ಗುರುತು ಮಾಡಿಕೊಟ್ಟು ಅವರ ಗರ್ವ ಇಳಿಸಬೇಕೆಂದುಕೊಂಡ. ತಾನೂ ಗುಪ್ತವಾಗಿ ಅವನಿಂದ ಇಂಗ್ಲಿಷ್ ಕಲಿಯಬೇಕೆಂದು ನಿರ್ಧರಿಸಿದ.

ಅಣ್ಣಾಜಿಯ ಪ್ಲಾನ್ ಅವನು ತಿಳಿದದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿತ್ತು. ಪ್ರತಿ ಬೆಳಿಗ್ಗೆ ಚನ್ನವೀರಯ್ಯ ಅಣ್ಣಾಜಿಯನ್ನು ಕಾರ್ ಕಳಿಸಿ ಕರೆಸಿಕೊಳ್ಳುತ್ತಿದ್ದ. ಸುಪ್ರಭಾತ ಕೇಳಿಸಿಕೊಳ್ಳುತ್ತ ಲಾನ್ ಮೇಲೆ ಅಡ್ಡಾಡುವ ಚನ್ನವೀರಯ್ಯ ಗೇಟಿನಿಂದಲೇ ಅಣ್ಣಾಜಿಯನ್ನು ತಾನು ಕಲಿಯುತ್ತಿದ್ದ ಸಂಭಾಷಣೆಯ ಇಂಗ್ಲಿಷಿಂದ ಸ್ವಾಗತಿಸಿ, ಒಳಗೆ ಕರೆದುಕೊಂಡು ಹೋಗುತ್ತಿದ್ದ. ಬ್ರೇಕ್‌ಫ಼ಾಸ್ಟ್ ನಡೆಯುವಾಗ ಈ ಇಂಗ್ಲಿಷ್ ಸಂಭಾಷಣೆ ಮುಂದುವರಿಯುತ್ತಿತ್ತು. ಇದು ಚೆನ್ನಾಗಿದೆ, ವಂದನೆ. ಸಕ್ಕರೆ ಬೇಕೋ? ಎಷ್ಟು ಚಮಚ? ಇವತ್ತಿನ ಹವೆ ಚೆನ್ನಾಗಿದೆ ಇತ್ಯಾದಿಗಳನ್ನು ಹೇಳುತ್ತ ಕೇಳುತ್ತ, ಚನ್ನವೀರಯ್ಯನು ಕಾಲೇಜಿನಲ್ಲಿ ತಪ್ಪಾಗಿ ಕಲಿತದ್ದನ್ನೆಲ್ಲ ಅಣ್ಣಾಜಿ ತಿದ್ದುತ್ತ ಬ್ರೇಕ್‌ಫ಼ಾಸ್ಟ್ ಮುಗಿಯುತ್ತಿತ್ತು. ಇಷ್ಟಕ್ಕಿಂತ ಹೆಚ್ಚು ಇಂಗ್ಲಿಷ್ ಮೊದಲೇ ಗೊತ್ತಿದ್ದ ಉಮೆ ಅಣ್ಣಾಜಿಯ ವಿದ್ಯಾವಂತ ನಡೆನುಡಿಗಳಿಂದ ಖುಷಿಪಡುತ್ತ ಬಡಿಸುತ್ತಿದ್ದಳು. ಅವನಷ್ಟು ಸುಶಿಕ್ಷಿತರು ಯಾರೂ ಅವಳ ಮನೆಗೆ ಬರುತ್ತಿರಲಿಲ್ಲ. ಬರುವವರೆಲ್ಲ ಕಾಳಸಂತೆಕೋರರು, ಜೂಜುಗಾರರು. ಒರಟಾಗಿ ಮಾತಾಡುತ್ತ, ತಾನೊಬ್ಬಳು ಒಳಗಿದ್ದೇನೆಂಬುದನ್ನು ಗಮನಿಸದೆ ಕೊಟ್ಟ ತಿಂಡಿ ಕಾಫ಼ಿಗಳನ್ನು ಹೀರಿ, ತೇಗಿ, ತಮ್ಮ ಮೆಟ್ಟಿಗೆ ಅಂಟಿದ ಮಣ್ಣು ಸಗಣಿಗಳನ್ನು ಕಾರ್ಪೆಟ್ಟಿಗೆ ಒರೆಸಿ ಹೋಗುವವರು. ತಮ್ಮ ಮನೆಯ ಈ ಶ್ರೀಮಂತಿಕೆ ಬಗ್ಗೆ ಅಣ್ಣಾಜಿಯಲ್ಲಿದ್ದ ಸೂಕ್ಷ್ಮ ತಿರಸ್ಕಾರವನ್ನವಳು ಗಮಸಿದ್ದಳು. ಈ ಇಂಗ್ಲಿಷ್ ಪಾಠ ಇತ್ಯಾದಿಗಳನ್ನು ಯಾವುದೋ ಗುಪ್ತ ಉದ್ದೇಶಕ್ಕಾಗಿ ಈತ ಮಾಡುತ್ತಿದ್ದಾನೆ, ಇವನು ರಹಸ್ಯ ವ್ಯಕ್ತಿ ಎಂದು ಅವಳಿಗೆ ಗುಮಾನಿ ಬಂದಿತ್ತು. ಎಸಳಾದ ಮೂಗು ತುಟಿಗಳ, ಸ್ವಲ್ಪ ಕಂದು ಬಣ್ಣದ ಮುಖದ, ಚುರುಕಾದ ಚಿಕ್ಕ ಕಣ್ಣುಗಳ, ಚಿರತೆಯಂಥ ಮೈ ಕಟ್ಟಿನ ಉಮೆಯನ್ನು ಅಣ್ಣಾಜಿ ಬಹಳ ಸೂಕ್ಷ್ಮವಾಗಿ ಖುಷಿಪಡಿಸುತ್ತಿದ್ದ. ಅವಳ ಇರುವಿಕೆಯನ್ನ ಏಕಾಗ್ರವಾಗಿ ತನ್ನ ಇಡೀ ವ್ಯಕ್ತಿತ್ವ ಗಮನಿಸುತ್ತದೆ ಎಂಬುದನ್ನು ಯಾವ ಮಾತೂ ಆಡದೆ ಅವಳಿಗೆ ತಿಳಿಯುವಂತೆ ಮಾಡುತ್ತಿದ್ದ. ಅವನಿಗೆ ಶ್ರೀಮಂತರ ಬಗ್ಗೆ ಇದ್ದ ತಿರಸ್ಕಾರ, ಅವನು ಮೌನವಾಗಿದ್ದಾಗಿನ ಅವನ ಮುಖದ ಅಗಮ್ಯ ಭಾವಗಳನ್ನು ಗುರುತಿಸಿದ್ದ ಉಮೆ ತನ್ನ ಬಗೆಗಿದ್ದ ಅವನ ಗೌರವದಿಂದ ಕೃತಜ್ಞಳಾಗಿದ್ದಳು.

ಅವನು ನೇರ ಹೇಳದಿದ್ದರೂ ಅವನಿಗೆ ಇಷ್ಟವೆಂದು ಗಮನಿಸಿ ಅವಳು ಥಳುಕಿನ ರೇಯಾನ್ ಸೀರೆಗಳನ್ನು ಬಿಟ್ಟು ಗಂಜಿ ಹಾಕಿ ಇಸ್ತ್ರಿ ಮಾಡಿದ ಹತ್ತಿಯ ಸೀರೆಗಳನ್ನೇ ಉಡುವಳು. ಅವನು ಹೋಗುವಾಗ ವಿಶೇಷ ತಿಂಡಿಯೇನಾದರೂ ಮಾಡಿದ್ದರೆ ಅವರಿಗೆ ಕೊಡಿರೆಂದು ಗಂಡನಿಗೆ ಹೇಳಿ ಟಿಫ಼ನ್‌ಬಾಕ್ಸಿನಲ್ಲಿಟ್ಟು ಕೊಡುವಳು. ಅವನು ಗಂಡನ ನೆಪದಲ್ಲಿ ತನಗೆಂದೇ ತಂದುಕೊಡುತ್ತಿದ್ದ ಗಾರ್ಕಿ ಚೆಕಾವ್ ಕಥೆಗಳನ್ನೆಲ್ಲ ಓದಿ ಮೆಚ್ಚಿಕೆ ಸೂಸುವಳು. “ನನಗೆ ಓದಲು ಬಿಡುವೇ ಇರುವುದಿಲ್ಲ. ಅವಳು ನಿತ್ಯ ಓದಿ ಹೇಳ್ತಾಳೆ” ಎಂದು ಚನ್ನವೀರಯ್ಯ ನಗುತ್ತ ಇಂಗ್ಲಿಷಲ್ಲಿ ಹೇಳಿದಾಗ ಅಣ್ಣಾಜಿ ನಿರ್ಭಾವದಿಂದ ಅವನನ್ನು ತಿದ್ದುವನು.

” ತಿಟಟ ಡಿಚಿಜ ಣ ಡಿಥಿಜಚಿಥಿ ಅಲ್ಲ – ಡಿಚಿಜ ಣ ಡಿಥಿಜಚಿಥಿ ಣ .”

“ಙ, ಙ. ಡಿಚಿಜ ಣ ಡಿಥಿಜಚಿಥಿ ಣ -ನನ್ನ ಫ಼್ರೆಂಡ್ಸೆಲ್ಲ ಡಬಲ್ ಗ್ರಾಜುಯೇಟ್ಸ್ ಆದರೂ ಈ ತಪ್ಪು ಮಾಡ್ತಾರೆ ನೋಡಿ. ಹಾಗಾಗಿ ನಂಗೂ ಅದೇ ಅಭ್ಯಾಸವಾಗಿ ಹೋಗಿದೆ” -ಚನ್ನವೀರಯ್ಯ ನಗುತ್ತ ಸಿಗರೇಟ್ ಹೊತ್ತಿಸಿ ಅಣ್ಣಾಜಿಗೂ ನೀಡುವನು.

“ಙ ಣ ಜಿಡಿಣ ಜಿಜಿಡಿ ಣ ಣ ” ಎಂದು ಅಣ್ಣಾಜಿ ನಗುವನು. ಚನ್ನವೀರಯ್ಯ “ಇಛಿ ” -ಎನ್ನುವನು. ತಾನು ಇದನ್ನು ಗಮನಿಸುತ್ತಿದ್ದೇನೆಂಬುದನ್ನು ಅಣ್ಣಾಜಿಯೂ ಅರಿತಿರುವುದನ್ನು ಕಂಡು ಉಮೆಗೆ ದಿಗಿಲಾಗುವುದು.

ತನ್ನ ರೂಮು ಅಪಾಯವೆಂದು ಹೆದರಿದ್ದ ಅಣ್ಣಾಜಿ ಚನ್ನವೀರಯ್ಯನಿಗೆ ಇಂಗ್ಲಿಷಲ್ಲಿ ಹೇಳಿದ್ದ -ಬ್ರೇಕ್‌ಫ಼ಾಸ್ಟ್ ಸಮಯದಲ್ಲಿ:

“ನನ್ನ ರೂಮು ಪಿಗ್‌ಸ್ಟೈ ಇದ್ದಂಗಿದೆ. ಹೊರಗೆ ಕ್ಯಾಟ್ಸ್ ಅಂಡ್ ಡಾಗ್ಸ್ ಆಗಿ ಮಳೆ ಬೀಳುವಾಗಂತೂ ಒಳಗೆ ಮಳೆ ಡ್ರಿಪ್ ಆಗಲು ಶುರುವಾಗತ್ತೆ. ಕೆಲವು ಸಾರಿ ಫ಼ರ್ರಿಯಾದ ಕಂಬಳಿ ಹುಳುಗಳು ಮೂವಿಂಗ್ ರ್‍ಯಾಗ್ಸ್‌ನಂತೆ ಗೋಡೆ ಮೇಲೆ ಹರೀತಿರ್ತಾವೆ.”

ತನಗೆ ಇಂಗ್ಲಿಷಿನ ಈಡಿಯಮ್ಮುಗಳ ಇನ್ನೊಂದು ಪಾಠವೋ ಇದು, ಅಥವಾ ಏನಾದರೂ ಅಣ್ಣಾಜಿ ಹೇಳುತ್ತಿರುವನೋ, ಅಥವಾ ಎರಡೂ ಒಟ್ಟಿಗೋ -ಥಟ್ಟನೆ ಅರಿಯಲಾರದೆ ಪುಂಖಾನುಪುಂಖವಾದ ಪದವೃಂದಗಳಿಗೆ ಸೋಜಿಗಪಡುತ್ತ ನೆನಪಿಡಲು ಪ್ರಯತ್ನಿಸುತ್ತ ಚನ್ನವೀರಯ್ಯ ಕೇಳಿಸಿಕೊಂಡ. ಗಂಡ ಪೆದ್ದಾಗಿ ಕೇಳಿಸಿಕೊಳ್ಳುವುದು ನೋಡಿ ಉಮೆಗೆ ನಗು ಬಂತು.

“ನನಗೊಂದು ರೂಮು ಬೇಕು. ಮುನಿಸಿಪಾಲಿಟಿ ಸದಸ್ಯರಲ್ಲವೇ ನೀವು ಮಿಸ್ಟರ್ ಚನ್ನವೀರಯ್ಯ. ಎಲ್ಲಾದರೂ ರೆಕಮೆಂಡ್ ಮಾಡಿ ಕೊಡಿಸುತ್ತೀರ?”

ಚನ್ನವೀರಯ್ಯ ಇನ್ನೂ ಚೇತರಿಸಿಕೊಂಡಿರಲಿಲ್ಲ. ಅವನಿಗೆ ಇಂಗ್ಲಿಷಿಂದ ಆಗಿದ್ದ ಆಘಾತ ’ಮುನಿಸಿಪಾಲಿಟಿ ಸದಸ್ಯ ತಾನು’ ಎಂಬ ತನ್ನ ಘನತೆಯನ್ನು ನೆನಪು ಮಾಡಿ ಕೊಡುವಂಥ ಅರ್ಥವಾಗುವ ಮಾತಿನಿಂದ ಕಡಿಮೆಯಾದಂತಾಗಿ ಚನ್ನವೀರಯ್ಯನ ಮುಖದಲ್ಲಿ ಸಮಾಧಾನ ಮೂಡಿತು. ಅವನ ಮುಗುಳ್ನಗುವಿನ ಅಸಂಬದ್ಧತೆಯನ್ನು ಸವಿಯುತ್ತ ಅಣ್ಣಾಜಿ ಸುಮ್ಮನೇ ಕೂತ. ಉಮೆ ಕನ್ನಡದಲ್ಲಿ ಹೇಳಿದಳು:

“ಅಷ್ಟು ಕೆಟ್ಟ ರೂಮಿನಲ್ಲಿ ನೀವು ಯಾಕಿರಬೇಕು? ಗರಾಜ್ ಮೇಲೆ ನಮ್ಮ ಗೆಸ್ಟ್ ರೂಮಿದೆಯಲ್ಲ, ಬೇರೆ ರೂಮು ಸಿಗುವ ತನಕ ಇಲ್ಲೇ ಬಂದಿರಿ.”

ಚನ್ನವೀರಯ್ಯ ಸುಧಾರಿಸಿಕೊಳ್ಳುತ್ತ “ಎಸ್, ಎಸ್” ಅಂದ. ತಾನು ಗರಾಜ್ ಅನ್ನುವುದನ್ನು ಪದೇ ಪದೇ ಮರೆತು “ಗ್ಯಾರೇಜ್” ಅಂದು ಅಣ್ಣಾಜಿಯಿಂದ ತಿದ್ದಿಸಿಕೊಳ್ಳುತ್ತಿದ್ದರೂ ತನ್ನ ಹೆಂಡತಿ ಉಮಾ ಎಷ್ಟು ಬೇಗ ಸರಿಯಾದ ಉಚ್ಚಾರಣೆಯನ್ನು ಹಿಡಿದುಬಿಡುವಳೆಂದು ಅವನಿಗೆ ಸಿಟ್ಟು, ಮಾತ್ಸರ್ಯ, ಇಂಥವಳು ತನ್ನ ವಸ್ತುವೆಂಬ ಅಭಿಮಾನ ಒಟ್ಟಿಗೇ ಹುಟ್ಟಿದುವು.

ಕೃಷ್ಣಪ್ಪ ತಂದ ಟ್ರಂಕು ಬೆಡ್ಡಿಂಗನ್ನು ಉಮೆಯೇ ಜವಾನನ ಮುಖಾಂತರ ಗೆಸ್ಟ್ ರೂಮಿಗೆ ಸಾಗಿಸಿದಳು. ಅಣ್ಣಾಜಿಯ ಅದೃಷ್ಟವನ್ನು ಕೃಷ್ಣಪ್ಪ ಆಶ್ಚರ್ಯದಿಂದ ಗಮನಿಸಿದ. ಇಲ್ಲಿ ಅಣ್ಣಾಜಿಯ ಕ್ವಿಲ್ಟ್‌ನ ಅಗತ್ಯವಿರಲಿಲ್ಲ. ಬೀರುವಿನಲ್ಲಿ ಅದನ್ನು ಉಮೆ ಇರಿಸಿದಳು. ಬುಕ್‌ಕೇಸಿನಲ್ಲಿ ತಾನೇ ಪುಸ್ತಕಗಳನ್ನು ಜೋಡಿಸಿದಳು. ಬೀಟೆ ಮರದ ಕಾಟ್‌ನ ಮೇಲೆ ಡನ್‌ಲಪ್ ಹಾಸಿಗೆ ಹಾಸಿತ್ತು. ಅದರ ಮೇಲೆ ಶುಭ್ರವಾದ ಬಿಳಿ ಶೀಟನ್ನು ಟಿಕ್ ಮಾಡಿ ಮೇಲೆ ಪಕ್ಷಿಗಳ ಚಿತ್ರವಿದ್ದ ಇನ್ನೊಂದು ಬಟ್ಟೆ ಹಾಸಿತ್ತು. ಮೇಜಿನ ಮೇಲೆ ತಣ್ಣೀರಿನ ಫ಼್ಲಾಸ್ಕ್ ಇತ್ತು. ರೂಮಿಗಂಟಿಕೊಂಡಂತೆ ಬಾತ್ ಕಕ್ಕಸಗಳಿದ್ದವು. ನೆಲದ ಮೇಲೆ ರತ್ನಗಂಬಳಿ ಹಾಸಿತ್ತು -ಕಿತ್ತಲೆ ಬಣ್ಣದ ಕರ್ಟನ್‌ಗಳು ಕಿಟಕಿಗೆ ಹಾಕಲಾಗಿದ್ದವು. ಈ ರೂಮಲ್ಲಿ ಅಣ್ಣಾಜಿಯ ಬಣ್ಣಗೆಟ್ಟ ಅಂಕುಡೊಂಕಾದ ಟ್ರಂಕು ಅತ್ಯಂತ ಕ್ಷುದ್ರವಸ್ತುವಿನಂತೆ ಸೈಡ್ ಟೇಬಲ್ ಮೇಲಿರುವುದನ್ನು ಉಮೆ ನಸು ನಗುತ್ತ ಗಮನಿಸಿದಳು. ತಾನೇ ಅದನ್ನು ಎತ್ತಲು ಹೋಗಿ ಭಾರವಾಗಿರುವುದನ್ನು ಕಂಡು ಜವಾನನಿಂದ ಅದನ್ನು ಎತ್ತಿಸಿ ಬೀರುವಿನಲ್ಲಿ ಇಡಿಸಿದಳು.

“ಊಟ ಮುಗಿಸಿ ಅಣ್ಣಾಜಿ ಬರುತ್ತಾರೆ” ಎಂದ ಕೃಷ್ಣಪ್ಪ.

ಉಮೆಯ ಮುಖ, ಇದರಿಂದ ಖಿನ್ನಗೊಂಡಂತೆ ಕಂಡಿತು. ಕೃಷ್ಣಪ್ಪ ’ನಾನು ಹೋಗುತ್ತೀನಿ’ ಎಂದಾಗ ’ಇರಿ’ ಎಂದು ಉಮೆ ಜವಾನನ ಕೈಯಲ್ಲಿ ಬೋರ್ನವೀಟ ತರಿಸಿಕೊಟ್ಟು, “ಇವರು ಕ್ಲಬ್ಬಿಗೆ ಹೋಗಿದ್ದಾರೆ. ಬರೋದು ಲೇಟು. ನೋಡಬೇಕಾದರೆ ಕಾದಿರಿ” ಎಂದಳು. “ಇಲ್ಲ” ಎಂದು ಕೃಷ್ಣಪ್ಪ ಅವಳಿಗೆ ಮೌನವಾಗಿ ನಮಸ್ಕರಿಸಿ ಹೊರಟುಹೋದ. ಮೆಟ್ಟಿಲು ಇಳಿಯುವಾಗ ಅವನಿಗೆ ನೆನಪಾಯಿತು. ಅಣ್ಣಾಜಿಯನ್ನು ನೋಡಲು ಬಂದ ಕಾರಣವನ್ನೇ ಅವನು ಮರೆತುಬಿಟ್ಟಿದ್ದ. ತಾನು ಕಾಲೇಜನ್ನು ಬಿಡುತ್ತಿದ್ದೇನೆಂಬ ನಿರ್ಧಾರವನ್ನು ನಾಳೆ ಹೇಳಿದರಾಯಿತೆಂದು ಹಾಸ್ಟೆಲಿಗೆ ಹೋಗಿ ಊಟ ಬೇಡವೆಂದು ಮಲಗಿದ. ಬೆಳಗಿನ ಝಾವದ ತನಕ ನಿದ್ದೆ ಹತ್ತಲಿಲ್ಲ. ಈ ಹಿಂದೆ ಅವನಿಗೆ ಅನ್ನಿಸದಿದ್ದ ದಿಗಿಲು -ಇದ್ದಕ್ಕಿದ್ದಂತೆ ರಾತ್ರೆಯೆಲ್ಲ ಅವನನ್ನು ಕಾಡಿತು. ಬೆಳಗಿನ ಝಾವವಾಗುತ್ತಿದ್ದಂತೆ ಹಾಸ್ಟೆಲಿನ ಎದುರು ನಿಲ್ಲಿಸಿದ ಲಾರಿಗಳನ್ನು ಸ್ಟಾರ್ಟ್ ಮಾಡುವ ಗದ್ದಲದಿಂದ ಎಂದಿನಂತೆ ಇವತ್ತು ಅವನಿಗೆ ಕರೆಕರೆಯಾಗಲಿಲ್ಲ. ಬದಲಾಗಿ ಈ ಪರಿಚಿತ ಶಬ್ದದಿಂದ ಸಮಾಧಾನವಾಯಿತು.

..
..
..

ಮಾರನೇ ಬೆಳಿಗ್ಗೆ ಎದ್ದಾಗ ಕೃಷ್ಣಪ್ಪನ ಕಣ್ಣುಗಳು ನಿದ್ದೆಯಿಲ್ಲದೆ ಕೆಂಪಾಗಿದ್ದುವು. ಹಾಸ್ಟೆಲಲ್ಲಿ ಅವನಿಗೆ ಉಚಿತ ವಸತಿ ಊಟಗಳ ವ್ಯವಸ್ಥೆಯಿದ್ದರೂ ಬೆಳಿಗ್ಗೆ ಅವನ ರೂಮಿಗೆ ಯಾವನಾದರೂ ಒಬ್ಬ ಹೈಸ್ಕೂಲು ಓದುತ್ತಿದ್ದ ವಿದ್ಯಾರ್ಥಿ ಕಾಫ಼ಿ ತಂದುಕೊಡುತ್ತಿದ್ದ. ಅವನೆ ಸೇವೆಗೆ ಪೈಪೋಟಿಯೇ ನಡೆಯುತ್ತಿತ್ತು ಹಾಸ್ಟೆಲಲ್ಲಿ. ತನ್ನ ಮನಸ್ಸು ಯಾಕೆ ಹೀಗೆ ಕಲಸಿಕೊಂಡಿದೆ ಎಂದು ಅರ್ಥವಾಗದೆ ಮುಖ ತೊಳೆದು ಮತ್ತದೇ ದಿಗಿಲುಪಡುತ್ತ ಕೃಷ್ಣಪ್ಪ ಕೂತಾಗ ಕಿಶೋರ ಕುಮಾರ ಎಂಬ ಶ್ರೀಮಂತರ ಮನೆಯ ಹುಡುಗ ಕಾಫ಼ಿಯನ್ನಿಟ್ಟು “ಗೌಡರೇ ಕಾಫ಼ಿ” ಎಂದು ಕಿಟಕಿ ನೋಡುತ್ತ ಕೂತ ಅವನನ್ನು ಕರೆದು ಹೇಳಿದ. ಕೃಷ್ಣಪ್ಪ ಕೃತಜ್ಞತೆಯಿಂದ ಕಾಫ಼ಿ ಇಸಕೊಂಡು “ನಿಂದಾಯಿತಾ? ಕೂತುಕೊ” ಎಂದ.

“ಗೌಡರೇ ನಿಮ್ಮ ಮೇಲೆ ಅದೇನೇನೋ ಗಲೀಜೆಲ್ಲ ಹಾಸ್ಟೆಲ್ ಗೋಡೆ ಮೇಲೆ ಅದ್ಯಾರೋ ಸುವರ್‍ಗಳು ಬರ್ದಿದಾವೆ -ಹಾಸ್ಟೆಲಲ್ಲಿ ಎಲ್ರಿಗೂ ತುಂಬ ಸಿಟ್ಟು ಬಂದಿದೆ” ಎಂದ.

“ಬರೀಲಿ ಬಿಡು” ಎಂದ ಕೃಷ್ಣಪ್ಪ. ತನಗೆ ರಾತ್ರಿ ನಿದ್ದೆ ಬಂದಂತಿರಲಿಲ್ಲ. ಯಾವ ಹೊತ್ತಲ್ಲಿ ಬಂದು ಈ ಪೋಕರಿಗಳು ಬರೆದಿರಬಹುದೆಂದು ಕೃಷ್ಣಪ್ಪನಿಗೆ ಆಶ್ಚರ್ಯವಾಯಿತು.

“ಏನೇನೋ ಗಲೀಜೆಲ್ಲ ಬರ್ದಿದಾರೆ. ಓದ್ಲಿಕ್ಕೆ ಹೇಸಿಗೆಯಾಗುತ್ತೆ. ಅಳಿಸ್ತ ಇದಾರೆ -ನೀವದನ್ನ ಓದಬಾರ್ದು ಅಂತ.”

ಕೃಷ್ಣಪ್ಪ ಮುಗುಳ್ನಕ್ಕು ಕಾಫ಼ಿ ಕುಡಿದ ಬಟ್ಟಲನ್ನು ಎತ್ತಿಕೊಂಡು ಕೆಳಗೆ ಹೊರಟ್ಯ. ಕಿಶೋರ ಬಟ್ಟಲು ಬೇಡಿದರೂ ಕೊಡಲಿಲ್ಲ.

ಬ್ರಶ್ಶನ್ನು ಸುಣ್ಣದಲ್ಲದ್ದಿ ಗೋಡೆಗೆ ಬಳಿಯುತ್ತ ನಿಂತ ಹಾಸ್ಟೆಲ್ಲಿನ ತನ್ನ ಸಹಪಾಠಿಗಳಿಗೆ ಕೃಷ್ಣಪ್ಪ,

“ಹೋಗ್ಲಿ ಬಿಡ್ರೊ -ಯಾಕೆ ತಲೆ ಕೆಡಿಸಿಕೊಳ್ತೀರಿ?” ಎಂದ.

ಇದು ವಾಲಿಬಾಲ್ ಟೀಮಿನ ಫಟಿಂಗರ ಕೆಲಸವೆಂದು ಊಹಿಸಿದ್ದ ಹಾಸ್ಟೆಲಿನ ಹುಡುಗರು ಕ್ಷುದ್ರರಾಗಿದ್ದರು. ಒಕ್ಕಲಿಗ ವಿದ್ಯಾರ್ಥಿಗಳಿಗೇ ಆದ ಅವಮಾನವೆಂದು ಈ ಹುಡುಗರು ಸಿಟ್ಟಾಗಿದ್ದಾರೆಂದು ಕೃಷ್ಣಪ್ಪನಿಗೆ ಹೊಳೆಯಿತು.

“ಸೂಳೆಮಕ್ಕಳ ಪುಳಚಾರನ್ನ ಕಕ್ಕಸ್ತೀವಿ”

ಹಳೆಯ ಮೋಟಾರ್ ಸೈಕಲೊಂದನ್ನು ಇಟ್ಟುಕೊಂಡು ರೋಫಾಗಿ ಓಡಾಡಿಕೊಂಡಿದ್ದ ಶಾಮಣ್ಣ ಹೇಳಿದ. ದೊಡ್ಡ ಜಮೀಂದಾರನ ಮಗನಾಗಿದ್ದರೂ ಶಾಮಣ್ಣನಿಗೆ ತನ್ನ ಜನಾಂಗದ ಬುದ್ಧಿಜೀವಿಯೆಂದು ಕೃಷ್ಣಪ್ಪನ ಮೇಲೆ ಗೌರವ.

“ನಾನು ಕಾಲೇಜನ್ನೆ ಬಿಡಬೇಕೂಂತಿದೀನಿ” ಎಂದು ಕೃಷ್ಣಪ್ಪ ಅವರನ್ನು ಸಮಾಧಾನಪಡಿಸಲು ಹೇಳಿದ.

“ಗೌರೀ ಸಿಸ್ಟರ್‍ನ ಕಾಲಿನ ಕೆಳಗೆ ನುಸಿಯೋ ಹಾಗೆ ಇವರನ್ನು ಬಗ್ಗಿಸ್ತೀವೊ ಇಲ್ವೋ ನೋಡಿ. ನೀವು ಯಾಕೆ ಕಾಲೇಜು ಬಿಡಬೇಕು?” ಎಂದ ಶಾಮಣ್ಣ. ಅವನು ಸಹ ಹುಡುಗಿಯರನ್ನು ರೇಗಿಸುತ್ತಿದ್ದರೂ ಕೃಷ್ಣಪ್ಪನ ಬಗ್ಗೆ ಗೌರಿ ದೇಶಪಾಂಡೆಗೆ ಗೌರವವೆಂದು ತಿಳಿದು ಅವನು ಗೌರಿಯನ್ನು ಮಾತ್ರ ಸಿಸ್ಟರ್ ಎಂದು ಸೇರಿಸಿ ಕರೆಯುತ್ತಿದ್ದುದು. ಕೃಷ್ಣಪ್ಪ ಇನ್ನು ಹೆಚ್ಚು ಮಾತಾಡದೆ ರೂಮಿಗೆ ಹೋಗಿ ಓದಲು ಕೂತ. ಆದರೆ ಅವನ ಮನಸ್ಸು ಏಕಾಗ್ರಗೊಳ್ಳದೆ ಅವನಿಗೆ ಅರಿಯಲಾರದೆ ದಿಗಿಲಿನಿಂದ ವಿಚಲಿತವಾಯಿತು. ತನಗೆ ಮೀರಿದ್ದೇನೋ ತನ್ನ ಎದುರಾಗುತ್ತಿದೆ ಎಂಬುದಕ್ಕೆ ಈ ದಿಗಿಲು ಸೂಚನೆಯೆಂದು ಕೃಷ್ಣಪ್ಪನಿಗೆ ಅನ್ನಿಸಿತು. ಬೆಳಗಿನ ತಿಂಡಿಯನ್ನು ತಿನ್ನದೆ ಅಣ್ಣಾಜಿಯನ್ನು ನೋಡಲೆಂದು ನಿಧಾನವಾಗಿ ನಡೆದುಕೊಂಡು ಹೊರಟ.

ತನ್ನ ದಿಗಿಲಿಗೆ ಕಾರಣವೇನೆಂದು ಸ್ಪಷ್ಟವಾಗಿ ಗೊತ್ತಾಗದಿದ್ದರೂ ಗೌರಿ ದೇಶಪಾಂಡೆಯ ಮೌನವಾದ ಮೂರ್ತಿ ಅವನ ಮನಸ್ಸಿಗೆ ಬಂದು ಅವಳು ತನಗೆ ತೀರಾ ಅವಶ್ಯವಾಗಿಬಿಡುತ್ತಿದ್ದಾಳೆ ಎಂದು ಹೊಳೆಯಿತು. ಪಾರ್ಕಿನಲ್ಲಿ ನಡೆಯುತ್ತಿದ್ದ ಕೃಷ್ಣಪ್ಪನಿಗೆ ಸೀದ ಅವಳ ಮನೆಗೆ ಹೋಗಿ ಅವಳನ್ನು ನೋಡಬೇಕೆನ್ನಿಸಿತು. ನೋಡಿ ಏನು ಹೇಳುವುದು? ನಿನ್ನನ್ನು ಪ್ರೀತಿಸುತ್ತೀನಿ ಎಂದು ಹೇಳುವುದೆ? ಅದು ಸಾಧ್ಯವಿಲ್ಲ. ಅದಕ್ಕೆ ಕಾರಣ ತನ್ನ ಗರ್ವವೆ? -ತಿಳಿಯಲಿಲ್ಲ. ಅಂತೂ ತನ್ನಲ್ಲೇನೋ ಕೊರತೆಯಿದೆ. ಅವಳಿಂದಲ್ಲದೆ ಅದು ತುಂಬದು ಎನ್ನಿಸತೊಡಗಿತು. ತಾನು ನಿಸ್ಸಹಾಯಕನಾಗಿ ಅವಳ ಮನೆಗೆ ಎಲ್ಲಿ ಹೋಗಿಬಿಡಬಹುದೋ ಎಂದು ದಿಗಿಲಾಯಿತು. ಗೋಡೆಯ ಮೇಲೆ ಕಾಣಿಸಿಕೊಂಡಿದ್ದ ಬರಹಗಳು ತನ್ನ ಗಾಂಭೀರ್ಯ ತನ್ನ ಅಂತರಂಗಗಳ ಮೇಲೆ ಹೊರಗಿನ ಕ್ಷುದ್ರತೆಯ ಆಘಾತದ ಪ್ರಯತ್ನವಾಗಿ ಕಂಡು ಅದು ತನ್ನನ್ನು ಬಾಧಿಸುತ್ತಿಲ್ಲವೆಂದು ಕೃಷ್ಣಪ್ಪ ತಿಳಿದಿದ್ದ; ಇಂಥದನ್ನು ಗಮನಿಸುವುದು ಕೂಡ ಕಳಪೆಯೆಂದು ಅವನು ಅಂದುಕೊಂಡಿದ್ದ. ಆದ್ದರಿಂದ ತನಗಾಗುತ್ತಿದ್ದ ದಿಗಿಲು ಅವನಿಗೆ ಇನ್ನಷ್ಟು ರಹಸ್ಯವಾಗಿ ಕಂಡಿತು.

ಅಣ್ಣಾಜಿ ಮೆತ್ತನೆಯ ಸೋಫ಼ಾದ ಮೇಲೆ ಕಾಲು ಚಾಚಿಕೊಂಡು ಚಾರ್ಮಿನಾರ್ ಸೇದುತ್ತ ಉಮೆ ಜೊತೆ ಮಾತಾಡುತ್ತಿದ್ದ. ಉಮೆ ಸ್ಟೂಲೊಂದರ ಮೇಲೆ ಅವನಿಗೆ ಎದುರಾಗಿ ಕೂತು ಕೈ ಬೊಗಸೆ ಮಾಡಿ ಅದರಲ್ಲಿ ತನ್ನ ಗುಂಡಾದ ಮುಖವನ್ನಿಟ್ಟು ತನ್ನ ದೊಡ್ಡ ಕಣ್ಣುಗಳಿಂದ ಅವನನ್ನು ಮೆಚ್ಚುಗೆಯಿಂದ ನೋಡುತ್ತ ಕೇಳಿಸಿಕೊಳ್ಳುತ್ತಿದ್ದಳು. ಅಣ್ಣಾಜಿ ಫ಼್ರೆಂಚ್ ಕ್ರಾಂತಿಯ ಕಥೆಯನ್ನು ರಮ್ಯವಾಗಿ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿಸುವಂತೆ ಹೇಳುತ್ತಿದ್ದ. ಕೃಷ್ಣಪ್ಪ ಮೌನವಾಗಿ ಒಳಗೆ ಬಂದು ಇನ್ನೊಂದು ಸೋಫ಼ಾದಲ್ಲಿ ಕೂತು, ಅಣ್ಣಾಜಿಗೆ ಹಠಾತ್ತನೆ ಪ್ರಾಪ್ತವಾದ ಅದೃಷ್ಟವನ್ನು ಸುತ್ತು ಕಣ್ಣು ಹರಿಸಿ ನೋಡಿದ. ಮೇಜಿನ ಮೇಲೆ ಹೂವಿನ ಕುಂಡ ಬೇರೆ. ಉಮೆಯ ಕಣ್ಣುಗಳು ಹೊಳೆಯುತ್ತಿದ್ದವು. ಅಣ್ಣಾಜಿ ತನ್ನ ಒಂದು ತಿಂಗಳ ಗಡ್ಡವನ್ನು ನುಣ್ಣನೆ ಕ್ಷೌರ ಮಾಡಿ, ಸ್ನಾನ ಮುಗಿಸಿ, ಶುಭ್ರವಾದ ಪಂಚೆಯುಟ್ಟು ಜುಬ್ಬ ತೊಟ್ಟು ಕೂತಿದ್ದ.

“ಮಿಸ್ಟರ್ ಚನ್ನವೀರಯ್ಯ ರೋಟರೀಲಿ ಇವತ್ತು ಸಂಜೆ ಮಾತಾಡೋಕೆ ಹೇಳಿದ್ದಾರೆ. ನೀನೂ ಬಾ” ಎಂದು ಕೃಷ್ಣಪ್ಪನ್ನ ಅಣ್ಣಾಜಿ ಕರೆದ. ಕೃಷ್ಣಪ್ಪನಿಗೆ ಕಾಫ಼ಿ ತರಲು ಉಮಾ ಕೆಳಗಿಳಿದು ಹೋದಳು.

ಕೃಷ್ಣಪ್ಪ ಉತ್ತರ ಕೊಡದಿದ್ದುದನ್ನು ಕಂಡು ಅಣ್ಣಾಜಿ,

“ಮಾರ್ಕ್ಸ್‌ವಾದದ ಚಾರಿತ್ರಿಕ ಸಿದ್ಧಾಂತದ ಬಗ್ಗೆ ಮಾತಾಡ್ತಿದೀನಿ” ಎಂದ.

“ರೋಟರೀಲಿ?”

ಕೃಷ್ಣಪ್ಪ ವ್ಯಂಗ್ಯವಾಗಿ ಕೇಳಿದ.

“ವೈ ನಾಟ್?” ಅಣ್ಣಾಜಿಯೂ ವ್ಯಂಗ್ಯವಾಗಿ ಹೇಳಿದ. “ಬಿತ್ತುವುದು ನನ್ನಂಥವರ ಕೆಲಸ. ಉದಾಹರಣೆಗೆ ಉಮಾ ನೋಡು. ಬ್ಯೂರೋಕ್ರಾಟ್ ಹಿನ್ನೆಲೆಯಿಂದ ಬಂದು ಕಾಂಪ್ರಡಾರ್ ಕ್ಯಾಪಿಟಲಿಸ್ಟ್ ವರ್ಗ ಸೇರಿದ್ದಾಳೆ. ಆದರೆ ಪೋಟೆನ್ಸಿಯಲ್ಲಿ ಅವಳು ರೆವಲ್ಯೂಶನರಿ. ಶ್ರೀಮಂತ ವರ್ಗ ಅಂಥವಳನ್ನೂ ತನ್ನ ಸ್ವತ್ತಾಗಿ ಮಾಡಲು ನೋಡುತ್ತದೆ. ಆದರೆ…..”

“ಈಗ ನೀನೂ ಅದರ ಸ್ವತ್ತಾಗಿದ್ದೀಯಲ್ಲ?” ಕೃಷ್ಣಪ್ಪ ರೂಮಿನ ವೈಭವದ ಮೇಲೆ ಕಣ್ಣು ಹಾಯಿಸಿ ಹೇಳಿದ. ಅಣ್ಣಾಜಿ ವ್ಯಂಗ್ಯವಾಗಿ ನಕ್ಕು ಕೃಷ್ಣಪ್ಪನ ಟೀಕೆಯನ್ನು ತಳ್ಳಿ ಹಾಕಿದ.

ತಾನು ಹೆಚ್ಚು ಹೊತ್ತು ಕೂತಿರುವುದು ಉಮಾಗೆ ಇಷ್ಟವಿಲ್ಲವೆನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ ಕೃಷ್ಣಪ್ಪ ಕಾಫ಼ಿ ಕುಡಿದು ಎದ್ದ. ಇನ್ನೂ ಸ್ವಲ್ಪ ಕೂತಿರಲು ಅಣ್ಣಾಜಿ ಒತ್ತಾಯ ಮಾಡಿದರೂ ಕೃಷ್ಣಪ್ಪ ಕೇಳದೆ ಸಂಜೆ ಮೀಟಿಂಗಿಗೆ ಬರುವೆನೆಂದು ಹೇಳಿ ಊರಾಚೆಗಿದ್ದ ಗುಡ್ಡದ ಕಡೆ ನಡೆದ. ಅವನಿಗೆ ಒಂಟಿಯಾಗಿರುವುದು ತುಂಬ ಅಗತ್ಯವಾಗಿತ್ತು. ಗೌರಿ ಮನೆಯಿಂದ ದೂರವಿರುವುದೂ ಅವಶ್ಯವೆನ್ನಿಸಿತ್ತು.

..
..
..

ಊರಿನ ಹತ್ತಿರವಿದ್ದ ಗುಡ್ಡದ ಮೇಲೊಂದು ಗುಹೆಯಿತ್ತು. ಈ ಗುಹೆಯಲ್ಲಿ ಬರೀ ಕೌಪೀನಧಾರಿಯಾದ ಉದ್ದ ಗಡ್ಡವನ್ನು ಬಿಟ್ಟ ಮುದುಕ ಬೈರಾಗಿಯೊಬ್ಬನಿದ್ದ. ಅವನ ಹೆಸರೇನು ಯಾರಿಗೂ ತಿಳಿಯದು. ಯಾರ ಹತ್ತಿರವೂ ಅವನು ಮಾತಾಡುತ್ತಿರಲಿಲ್ಲ. ಪ್ರತಿ ಬೆಳಿಗ್ಗೆ ಅವನು ಗುಡ್ಡ ಇಳಿದು ಊರಿಗೆ ಬರುತ್ತಿದ್ದ. ದಿನಕ್ಕೊಂದು ಬೀದಿಯನ್ನು ಆರಿಸಿಕೊಂಡು ಬೀದಿಯ ತುದಿಯಲ್ಲಿ ನಿಂತು ಗಟ್ಟಿಯಾಗಿ ರಾಗವಾಗಿ ಭಗವದ್ಗೀತೆಯ ಅಧ್ಯಾಯಗಳನ್ನು ಒಂದು ಗಂಟೆ ಕಾಲ ಹಾಡುತ್ತಿದ್ದ. ಅವನು ನೆಲದ ಮೇಲಿಟ್ಟ ಬುಟ್ಟಿಯಲ್ಲಿ ದಾರಿಹೋಕರು ಅಕ್ಕಿಯನ್ನೊ ಬೇಳೆಯನ್ನೊ ಹಣ್ಣನ್ನೊ ಹಾಕುತ್ತಿದ್ದರು. ಈ ಸಣ್ಣ ಬುಟ್ಟಿ ತುಂಬಿದ ಮೇಲೆ ಬೈರಾಗಿ ಏನನ್ನೂ ಸ್ವೀಕರಿಸುತ್ತಿರಲಿಲ್ಲ. ತನ್ನ ಪಠನ ಮುಗಿಸಿ ಬೆಟ್ಟಕ್ಕೆ ಹಿಂದಿರುಗಿ ಅದನ್ನು ಬೇಯಿಸಿ ತಿಂದುಬಿಡುತ್ತಿದ್ದ ಅಷ್ಟೆ.

ಕೃಷ್ಣಪ್ಪನಿಗೆ ಈ ಬೈರಾಗಿಯೆಂದರೆ ಕುತೂಹಲ. ಬೆಟ್ಟ ಹತ್ತಿ ಅವನ ಗುಹೆಯ ಹತ್ತಿರ ಕೂತ. ಬೈರಾಗಿ ತನ್ನ ನಿತ್ಯದ ಅಕ್ಕಿಬೇಳೆಯನ್ನು ಒಂದು ಕಲ್ಲುಮರಿಗೆಗೆ ಹಾಕಿ ಗುಹೆಯ ಹೊರಗಿದ್ದ ಮೂರು ಕಲ್ಲುಗಳ ಒಲೆಯ ಮೇಲಿಟ್ಟು ಬೇಯಿಸುತ್ತಿದ್ದ. ಕೃಷ್ಣಪ್ಪ ನಮಸ್ಕಾರ ಎಂದು ಅಲ್ಲೇ ಒಂದು ಬಂಡೆಯ ಮೇಲೆ ಕೂತು ಕಾದ. ಬೈರಾಗಿ ಮಾತಾಡಲಿಲ್ಲ. ಅನ್ನ ಬೇಳೆಗಳು ಬೆಂದ ಮೇಲೆ ಗುಹೆಯ ಒಳಗಿಂದ ಬೈರಾಗಿ ಮುತ್ತುಗದ ಎಲೆಗಳನ್ನು ತಂದು ಕಡ್ಡಿಯಿಂದ ಅವುಗಳನ್ನು ಹೆಣೆದು ಮೂರು ದೊಡ್ಡ ಎಲೆಗಳನ್ನು ಮಾಡಿದ. ಪಾತ್ರೆಯಲ್ಲಿ ಇದ್ದುದನ್ನು ಸಮವಾಗಿ ಈ ಮೂರು ಎಲೆಗಳಿಗೂ ಬಡಿಸಿ ಒಂದನ್ನು ಸ್ವಲ್ಪ ದೂರ ಹೋಗಿ ಇಟ್ಟು ಬಂದ. ಬಂಡೆಗಳ ಮರೆಯಿಂದ ಒಂದು ನಾಯಿ ಈ ಆಹಾರಕ್ಕೆ ನಿಧಾನವಾಗಿ ಬರುವುದನ್ನು ಕೃಷ್ಣಪ್ಪ ಕಂಡ. ಅವರಸರವಿಲ್ಲದೇ ಬೈರಾಗಿ ಹಿಂದಕ್ಕೆ ಬಂದು ಮತ್ತೊಂದು ಎಲೆಯನ್ನು ಕೃಷ್ಣಪ್ಪನ ಎದುರಿಗಿಟ್ಟು ಉಳಿದ ಎಲೆಯ ಎದುರು ತಾನು ಕೂತು ಕಣ್ಣು ಮುಚ್ಚಿ ಧ್ಯಾನ ಮಾಡಿದ. ಏನು ಹೇಳಬೇಕು ಕೃಷ್ಣಪ್ಪನಿಗೆ ತಿಳಿಯಲಿಲ್ಲ. ಬೈರಾಗಿ ಊಟ ಮಾಡಲು ತೊಡಗಿದ ಮೇಲೆ ಕೃಷ್ಣಪ್ಪನೂ ಎಲೆಯ ಮೇಲಿದ್ದುದನ್ನು ತಿಂದ. ಅದರಲ್ಲಿ ಯಾವ ರುಚಿಯೂ ಇರಲಿಲ್ಲ. ಆದರೆ ಹಸಿವಾಗಿತ್ತು -ತಿಂದ.

ಬೈರಾಗಿ ಊಟ ಮುಗಿಸಿ ಎಲೆಯನ್ನು ದೂರ ಎಸೆದು ಬಂದ. ಕೃಷ್ಣಪ್ಪನೂ ಎಸೆದು ಮೊದಲಿದ್ದ ಜಾಗಕ್ಕೆ ಬಂದು ಕೂತ. ಈಗಲೂ ಬೈರಾಗಿ ಮಾತಾಡಲಿಲ್ಲ. ಕ್ರಮೇಣ ಕೃಷ್ಣಪ್ಪನಿಗೂ ಮಾತಿನ ಅಗತ್ಯ ಕಾಣಲಿಲ್ಲ. ಬೈರಾಗಿ ನೆರಳಿನಲ್ಲಿ ಮಲಗಿ ಕಣ್ಣುಮುಚ್ಚಿದ. ಈ ಬೈರಾಗಿ ಬರೀ ಠೊಳ್ಳೋ, ಗಟ್ಟಿಯೋ, ಮುಕ್ತನೋ, ಈಡಿಯಟ್ಟೋ -ಇಂಥ ಪ್ರಶ್ನೆಗಳೆಲ್ಲ ಅಪ್ರಸ್ತುತ ಎನ್ನಿಸಿಬಿಟ್ಟಿತು. ಇದರಿಂದ ಕೃಷ್ಣಪ್ಪನಿಗೆ ತನಗಾಗುತ್ತಿದ್ದ ದಿಗಿಲು ಇನ್ನಷ್ಟು ಹೆಚ್ಚಿತು. ಹಲವು ಸಾಧ್ಯತೆಗಳ ಎದುರಿಗೆ ನಿಂತಿರುವುದರಿಂದ ಈ ದಿಗಿಲು ತನಗೆ ಹುಟ್ಟಿರಬೇಕು. ಈ ಬಂಡೆಗಳಿಂದ ಉರುಳಿ ಸಾಯಬಹುದು. ಈ ಬೈರಾಗಿಯಂತೆ ದಿನಕ್ಕೊಮ್ಮೆ ತಿಂದು ಸುಮ್ಮನೇ ಇದ್ದುಬಿಡಬಹುದು. ಅಣ್ಣಾಜಿಯಂತೆ ಸಮಾಜದ ಜೊತೆ ಪರದಾಡಬಹುದು. ಗೌರಿಯನ್ನು ಪ್ರತಿ ರಾತ್ರೆ ತಬ್ಬಿ ಸಂಭೋಗಿಸಿ ಮಕ್ಕಳನ್ನು ಪಡೆಯಬಹುದು. ಯಾವುದೂ ಅಗತ್ಯವಲ್ಲ. ಯಾವುದನ್ನಾದರೂ ಮಾಡಬಹುದು. ಮಾಡದೆ ಈಗಿನಂತೆ ಇರಬಹುದು. ಹಾಗಿರುವುದೂ ಇನ್ನೊಂದನ್ನು ಮಾಡಿದಂತೆಯೇ. ಯಾವುದಕ್ಕೂ ಅರ್ಥವಿಲ್ಲ. ಅಥವಾ ತಾನು ಕೊಟ್ಟ ಅರ್ಥವಿದೆ.

ಬೈರಾಗಿ ಎದ್ದು ಕೂತ. ಅವನ ಮುಖ ನಿರ್ಭಾವವಾಗಿತ್ತು. ಎದ್ದು ಹೋಗಿ ಒಂದು ಬಂಡೆಗೆ ಮರೆಯಾಗಿ ಕೂತು ಉಚ್ಚೆ ಹೊಯ್ದು ಬಂದು ಮತ್ತೆ ಮಲಗಿದ.

ಈ ಬೈರಾಗಿ ಪ್ರತಿನಿತ್ಯ ತಾನು ಹೀಗಿರುವುದೆಂದು ನಿರ್ಧಾರ ಮಾಡಿ ಹೊರಡುತ್ತಾನೆಯೇ? ಅಥವಾ ಅವನ ನಿರ್ಧಾರ ಆಗಿ ಹೋಗಿದೆಯೆ? ಅವನಿಗೆ ಖುಷಿಯಾಗುತ್ತಿದೆಯೆ? ಅಥವಾ ಅದರ ಅಗತ್ಯವಿಲ್ಲವೆ?

ಇವನು ಹೀಗೆ ಸುಮ್ಮನೇ ನಾಳೆಯ ತನಕ ಇದ್ದುಬಿಡುವನಲ್ಲ? ಕರ್ಮ ಮಾಡು, ಕರ್ಮ ಮಾಡದೆ ಸುಮ್ಮನೇ ಇದ್ದುಬಿಡು. ಹಿಗ್ಗಬೇಡ, ಕುಗ್ಗಬೇಡ, ಇತ್ಯಾದಿಗಳನ್ನು ನಿತ್ಯರಾಗವಾಗಿ ಒದರುವುದರ ಮೂಲಕ ತನ್ನ ನಿತ್ಯದ ಅನ್ನ ಸಂಪಾದಿಸಿ ಬರಿದೇ ಇರುತ್ತಾನಲ್ಲ -ಯಾವುದರಿಂದ ಇವನು ಚಲಿಸುತ್ತಾನೆ? ಇತ್ಯಾದಿಗಳಿಂದ ರಗಳೆಯಾಗಿ ಕೃಷ್ಣಪ್ಪ ಅಪ್ರಯತ್ನವಾಗಿ ಥಟ್ಟನೇ ಎದ್ದು ನಿಂತು

“ಸ್ವಾಮಿಗಳೇ ಹೇಳಿ ನಂದೊಂದು ಪ್ರಶ್ನೆಯಿದೆ” ಎಂದ. ಬೈರಾಗಿ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತ ಮಲಗಿಯೇ ಇದ್ದ.

“ನೀವೇನು ಮೌನಿಗಳ? ಹಾಗಾದರೆ ಯಾಕೆ ನಿತ್ಯ ಭಗವದ್ಗೀತೆ ಹಾಡ್ತೀರಿ ಬೀದಿಗಳ ಮೇಲೆ, ನಿಮ್ಮ ಉದ್ದೇಶ ಏನು?”

ಬೈರಾಗಿ ಮುಖವನ್ನೂ ತಿರುಗಿಸಲಿಲ್ಲ. ಆತ ಕಿವುಡನಿರಬಹುದೆನ್ನಿಸಿತು. ತನ್ನ ಮಾತುಗಳು ವೃಥಾ ಕಿರುಚಾಟವಾಗುತ್ತಿರುವುದನ್ನು ಗಮನಿಸಿದರೂ ತಡೆದುಕೊಳ್ಳಲಾರದೆ ಬೈರಾಗಿಯ ಹತ್ತಿರ ಕೂತು ಕೂಗಿದ:

“ಹೇಳ್ರೀ…..”

ಕೃಷ್ಣಪ್ಪನಿಗೆ ತಾನು ತೀರಾ ಹಾಸ್ಯಾಸ್ಪದನಾಗಿಬಿಟ್ಟಂತೆ ಎನ್ನಿಸಿತು. ನಿಸ್ಸಹಾಯಕನಾಗಿ ಬೈರಾಗಿಯ ಕೈಯನ್ನು ಬಲವಾಗಿ ಹಿಡಿದ. ಪ್ರತಿಭಟಿಸದೆ ಅವನ ಕೈಯಲ್ಲಿ ತನ್ನ ಕೈಯನ್ನಿಟ್ಟು ಬೈರಾಗಿ ಪೂರ್ವದಿಕ್ಕನ್ನು ನೋಡುತ್ತಲೇ ಕೂತಿದ್ದ. ಕಿರುಚಿಕೊಳ್ಳಬೇಕೆನ್ನಿಸಿತು. ಕಣ್ಣು ಕಿವಿ ಮೂಗು ಚರ್ಮಗಳು ಹೊರಗನ್ನು ಒಳಗೆ ಬಿಡುತ್ತಲೇ ಇರುತ್ತವಲ್ಲವೆ? ಹೊರಗನ್ನೂ ಒಳಗನ್ನೂ ಇನ್ನಷ್ಟು ಆಪ್ತವಾಗಿ ಶಿಶ್ನ ಯೋನಿಗಳು ಬಿಗಿಯುತ್ತವಲ್ಲವೆ? ಈ ಸತ್ಯ ಬಿಟ್ಟು ಬೇರೇನನ್ನು ಈ ಗೋಸಾಯಿ ಕಂಡಿದ್ದಾನೆ? ತಾನವನಿಂದ ಪ್ರತಿಕ್ರಿಯೆ ಅಪೇಕ್ಷಿಸಿದ್ದರಿಂದಲ್ಲವೇ ಅವನ ಅಗಮ್ಯತೆ ಇನ್ನಷ್ಟು ರಹಸ್ಯವಾಗಿಬಿಟ್ಟಿದ್ದು? ಅವನು ಈಡಿಯಟ್ಟಿದ್ದರೂ ತನ್ನನ್ನು ಗೆದ್ದಿದ್ದಾನೆ. ಒಂದು ಕ್ಷಣ ಅವನನ್ನು ಹಿಂಸೆ ಮಾಡಿಯಾದರೂ ಪ್ರತಿಕ್ರಿಯೆ ಪಡೆಯಬೇಕೆಂಬ ಚಪಲವನ್ನು ಅದುಮಿಕೊಂಡು ನಿರಾಸೆಯಲ್ಲಿ ಕೃಷ್ಣಪ್ಪ ಎದ್ದು ನಿಂತ. ಭಾರವಾದ ಕಾಲುಗಳನ್ನು ಎಳೆಯುತ್ತ ಬೆಟ್ಟ ಇಳಿದು ಊರಿಗೆ ನಡೆದ.

ರೋಟರಿ ಕ್ಲಬ್ಬಿನ ಸಭೆಯಲ್ಲಿ ಅದರ ರಿಚುಯಲ್ಲುಗಳನ್ನು ಅಣ್ಣಾಜಿ ಸಹಿಸುತ್ತಿರುವುದಕ್ಕೆ ಆಶ್ಚರ್ಯಪಡುತ್ತ ಕೃಷ್ಣಪ್ಪ ಕೂತ. ಅಣ್ಣಾಜಿ ವ್ಯಕ್ತಿ ಮತ್ತು ಸಮಾಜದ ಅನ್ಯೋನ್ಯತೆಯ ಬಗ್ಗೆ, ಉತ್ಪಾದನಾ ವಿಧಾನಗಳ ಬದಲಾವಣೆ, ವರ್ಗಪ್ರಜ್ಞೆ, ಕ್ರಾಂತಿಗಳ ಬಗ್ಗೆ ನಿರರ್ಗಳ ಇಂಗ್ಲಿಷಲ್ಲಿ ಮಾತಾಡುವುದನ್ನೂ; ಇಂಗ್ಲಿಷಲ್ಲಿ ನಡೆಯುವ ಈ ಕ್ರಾಂತಿ ಸಿಲ್ಕ್ ಜುಬ್ಬ, ಸೂಟುಗಳನ್ನು ತೊಟ್ಟ ಮಂದಿಗೆ ಜೋಗುಳದಷ್ಟು ಆಪ್ಯಾಯಮಾನವಾಗಿ ಕಾಣುವುದನ್ನೂ ಅಸಹ್ಯಪಡುತ್ತ ಕೃಷ್ಣಪ್ಪ ಅನುಭವಿಸಿದ. ಕರ್ಮ ಪುನರ್ಜನ್ಮಗಳಂತೆಯೇ ಈ ಕ್ರಾಂತಿಯೂ ಕಾಲಾನುಕಾಲದಲ್ಲಿ ಇನೆವಿಟಬಲ್ -ಯಾಕಾಗಬಾರದು? ಪ್ರಳಯದಂತೆ? ಚನ್ನವೀರಯ್ಯ ಬೀಗುತ್ತ ಕೂತಿದ್ದ. ವಂದನಾರ್ಪಣೆಗೆ ಮುಂಚೆಯೇ ಕೃಷ್ಣಪ್ಪ ಎದ್ದು ಹಾಸ್ಟೆಲಿಗೆ ಹೋದ.

..
..
..

ಕತ್ತಲಾಗಿತ್ತು. ಹಾಸ್ಟೆಲಿನ ಎದುರು ಗೌರಿ ದೇಶಪಾಂಡೆಯ ಕಾರು ನಿಂತಿತ್ತು. ಡ್ರೈವರ್ ಸಿಗರೇಟು ಸೇದುತ್ತ ಕಾರಿನ ಹೊರಗೆ ನಿಂತಿದ್ದ. ಹಾಸ್ಟೆಲಿನ ಹುಡುಗರೆಲ್ಲ ಬಲು ಸಂಭ್ರಮದಲ್ಲಿ ಗುಂಪುಗಳಾಗಿ ನಿಂತು ಉದ್ವೇಗದಿಂದ ತಮ್ಮತಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದರು. ಈ ಹಾಸ್ಟೆಲ್ಲಿನ ಒಳಗೆ ಒಂದು ಹೆಣ್ಣು ಜೀವ ಬಂದದ್ದು ಇದೇ ಮೊದಲ ಬಾರಿ. ಒಂದು ಹೆಣ್ಣು ಸೊಳ್ಳೆ ಕೂಡ ತಮ್ಮ ಗಂಡು ಹಾಸ್ಟೆಲ್ಲಿಗೆ ಬರಲಾರದು ಎಂದು ತಿಳಿದ ಈ ಹುಡುಗರಿಗೆ ಗೌರಿ ದೇಶಪಾಂಡೆಯ ಆಗಮನ ಐತಿಹಾಸಿಕ ಘಟನೆಯಾಗಿಬಿಟ್ಟಿತ್ತು. ಕೃಷ್ಣಪ್ಪನನ್ನು ಕಂಡೊಡನೆ ಮಾತು ನಿಲ್ಲಿಸಿದರು. ಕೃಷ್ಣಪ್ಪ ಮಹಡಿ ಹತ್ತಿ ಹೋಗಿ ತನ್ನ ರೂಮಿನ ಬಾಗಿಲು ತೆರೆದ. ಗೌರಿ ಅದೇನೋ ಪುಸ್ತಕವನ್ನು ಮಗ್ನಳಾಗಿ ಓದುತ್ತಿದ್ದವಳು ರೂಮಿನ ಬಾಗಿಲು ತೆರೆದೊಡನೆ ಎದ್ದು ನಿಂತಳು.

“ಕ್ಷಮಿಸಿ, ನಿಮ್ಮ ರೂಮಿಗೆ ಬಂದು ತೊಂದರೆ ಕೊಡುತ್ತಿದ್ದೇನೆ” ಎಂದು ಮೃದುವಾಗಿ ನಕ್ಕಳು. ಅವಳ ಹಾಲು ಬಣ್ಣದ ಅಗಲವಾದ ಮುಖ ಶಾಂತವಾಗಿತ್ತು. ಹಣೆಯ ಮೇಲೆ ದೊಡ್ಡ ಪುಡಿಕುಂಕುಮವನ್ನು ಇಟ್ಟಿದ್ದಳು. ಸ್ವಲ್ಪ ದಪ್ಪವಾದ ಅವಳ ಕೆಳತುಟಿ, ಭಾರವಾದ ಮೊಲೆಗಳು, ದುಂಡನೆಯ ತೋಳುಗಳು, ನೀಳವಾದ ಕಾಲುಗಳು, ಅವಳು ನಿಲ್ಲುವ ತ್ರಿಭಂಗಿ, ಇಡೀ ಬೆನ್ನಿನ ಮೇಲೆ ಭಾರವಾಗಿ ಇಳಿದಿದ್ದ ಕಪ್ಪು ಜಡೆ -ಇವು ಒಟ್ಟಿನಲ್ಲಿ ಮೋಹ ಹುಟ್ಟಿಸುವಂತಿದ್ದರೆ ಅವಳ ಪ್ರಶಾಂತವಾದ ದೊಡ್ಡ ಕಣ್ಣುಗಳು, ಕೊರೆದುಬಿಟ್ಟಂತಿದ್ದ ಅವಳ ಹುಬ್ಬುಗಳು, ಅದಕ್ಕೆ ವಿರುದ್ಧವಾಗಿ ಇವಳು ಅಗಮ್ಯ ಎಂಬ ಭಾವನೆ ಹುಟ್ಟಿಸುತ್ತಿದ್ದವು. ಮೌನದ ಮಡುವಿನಲ್ಲಿ ಸದಾ ಅಡಗಿಕೊಂಡ ಕನ್ನೆಯಂತೆ ಕಾಣುತ್ತಿದ್ದಳು. ತನ್ನ ಸಂತೋಷ ಮೆಚ್ಚುಗೆ ಬಚ್ಚಿಡಲಾರದೆ ಕೃಷ್ಣಪ್ಪನೂ ಕಲ್ಲಿನಲ್ಲಿ ಕಡೆದ ಕಪ್ಪು ವಿಗ್ರಹದಂತೆ ನಿಂತ.

“ಕೂರಬಹುದಲ್ಲ?”

ತುಂಟ ನಗೆ ನಕ್ಕು ಗೌರಿ ಕೇಳಿ, ಇದ್ದುದು ಒಂದೇ ಕುರ್ಚಿಯಾದ್ದರಿಂದ ತಾನೆಲ್ಲಿ ಕೂರುವುದೆಂದು ಹುಡುಕಿದಳು. ಹಾಸಿಗೆ ಮೇಲೆ ಕೃಷ್ಣಪ್ಪ ಅವಳಿಗೆ ಕುರ್ಚಿ ತೋರಿಸಿದ. ಗೋಡೆಯ ಮೇಲೆ ಕೃಷ್ಣಪ್ಪನಿಗೆ ಪೂಜ್ಯರಾಗಿದ್ದ ವಿವೇಕಾನಂದ ಗಾಂಧೀಜಿಯವರನ್ನು ಗೌರಿ ಗಮನಿಸಿದಳು.

“ನೀವು ಕಾಲೇಜು ಬಿಡ್ತಿದ್ದೀರಂತೆ ನಿಜವ?” ಎಂದಳು.

“ಹೌದು, ಅದಕ್ಕೆ ಕಾರಣ ನನಗೇನಾದರೂ ಬೇರೆ ಮಾಡಬೇಕೂಂತ ಅನ್ನಿಸಿದ್ದು. ನೀವಲ್ಲ.”

ಗೌರಿಗೆ ಸಮಾಧಾನವಾದದ್ದು ಕೃಷ್ಣಪ್ಪನಿಗೆ ತಿಳಿಯಿತು. ಗೌರಿ ಹೇಳಿದಳು.

“ನಿಮ್ಮಕಾಗದ ಬಂತು. ನನಗೆ ನನ್ನ ತಾಯಿ ಬಿಟ್ಟರೆ ನೀವು ಮಾತ್ರ ಇರೋದು -ಹೇಗೆ ಹೇಳಲಿ ಗೌರವಾನೋ ಪ್ರೀತೀನೋ -ಅಂತೂ….ಆದರೆ ಮಾತ್ರ ಇದನ್ನ ಬಾಯಿ ಬಿಟ್ಟು ಹೇಳ್ದೆ ಅಂತ ಮನಸ್ಸಿಗೆ ಹಚ್ಚಿಕೋಬೇಡಿ. ಯಾವ ಉದ್ದೇಶಾನೂ ಇರ್ಲಿಲ್ಲ ನನಗೆ ಇಲ್ಲಿ ಬರಲಿಕ್ಕೆ.”

ಗೌರಿ ತುಂಬ ಸಹಜವಾಗಿ ಮಾತಾಡಿದ್ದಳು. ಕೃಷ್ಣಪ್ಪ ತಲೆಬಾಗಿ ಕೂತು ಹೇಳಿದ:

“ಈ ಹುಡುಗರ ಹಾಸ್ಟೆಲಿಗೆ ಒಬ್ಬರೇ ಬಂದಿದೀರಲ್ಲ. ನಿಮ್ಮ ತಾಯಿ ಏನೆಂದುಕೋತಾರೆ?”

“ನೀವೂ ಇಂಥ ಪ್ತಶ್ನೆ ಕೇಳ್ತೀರೀಂತ ಅಂತ ನನಗೆ ಅನ್ನಿಸಿರಲಿಲ್ಲ…” ಕೃಷ್ಣಪ್ಪನಿಗೆ ತನ್ನ ಉತ್ತರದಿಂದ ನಾಚಿಕೆಯಾದ್ದನ್ನು ಗಮನಿಸಿದ ಗೌರಿ ನಗುತ್ತೆ ಹೇಳಿದಳು:

“ನನ್ನ ತಾಯಿ ಜೈಲಲ್ಲಿರೋ ನನ್ನ ತಂದೇನ್ನ ಬಿಟ್ಟು ಬಂದದ್ದರಿಂದ ನನ್ನ ಯಾವ ಇಷ್ಟಕ್ಕೋ ವಿರೋಧ ಬರಲ್ಲ….”

“ಹಾಗಂತ ಅಂದು ನೀವು ರಚ್ಚು ತೀರಿಸಿಕೊಳ್ಳಬಾರದಲ್ಲ?”

ಕೃಷ್ಣಪ್ಪ ಚೇತರಿಸಿಕೊಂಡಿದ್ದ.

“ಇದು ರಚ್ಚು ಅಂತ ನಿಮಗೆ ಯಾಕೆ ಅನ್ನಿಸತ್ತೆ? ನಾನು ನಿಮ್ಮನ್ನ ಇಷ್ಟಪಡ್ತೀನಿ ಅಂತ ಹೇಳಿದೆ. ನಿಮಗೆ ಗರ್ವ ಅಲ್ಲವೆ? ಇಂಥ ಮಾತನ್ನ ನಾನು ಆಡಬಹುದೂಂತ ಕೂಡ ನಿಮ್ಮ ಸ್ವಭಾವದಿಂದ ನೀವು ನಿರೀಕ್ಷಿಸಿರಲಿಲ್ಲ.”

ಕೃಷ್ಣಪ್ಪ ತಬ್ಬಿಬ್ಬಾದ. ಗೌರಿ ಎದ್ದು ನಿಂತು

“ಬರಬೇಕೂಂತ ಅನ್ನಿಸಿದಾಗ ಬನ್ನಿ ಮನೆಗೆ” ಎಂದು ಹೊರಟುಹೋದಳು.

ಪ್ರೇಮ ಎಷ್ಟು ತೀವ್ರವಾಗುತ್ತದೋ ಅಷ್ಟೇ ಪ್ರೀತಿಯ ವಸ್ತು ಅಗಮ್ಯವೆನಿಸುತ್ತದೆ ಎಂಬುದು ಕೃಷ್ಣಪ್ಪನ ಅನುಭವಕ್ಕೆ ಬಂತು. ನಾವು ತೀವ್ರವಾಗಿ ಆಸೆಪಟ್ಟಿದ್ದನ್ನು ಭೋಗಿಸಲ್ಲ, ಅಥವಾ ಆಸೆ ತೀವ್ರವಾಗಿದ್ದಾಗ ಭೋಗಿಸಲ್ಲ -ಎಂದುಕೊಳ್ಳುತ್ತಾನೆ ಕೃಷ್ಣಪ್ಪ ಸಾವನ್ನು ಎದುರಿಸುತ್ತ.

ಹೀಗೆ ಪ್ರೇಮ ಆಸೆ ನಿರಾಸೆಗಳ ಯಾವತ್ತೂ ಬಗೆಹರಿಯದ ಬೆಂಕಿಯ ಚಕ್ರಕ್ಕೆ ಕೃಷ್ಣಪ್ಪನನ್ನು ಗೌರಿ ಸಿಕ್ಕಿಸಿದ್ದಳು. ಮತ್ತಿನ್ನೊಂದು ರಾತ್ರಿಯನ್ನು ನಿದ್ದೆಯಿಲ್ಲದೆ ಕಳೆದು, ಬೆಳಿಗ್ಗೆ ಎದ್ದು ಅಣ್ಣಾಜಿಯನ್ನು ನೋಡಲು ಹೋದ. ಅಣ್ಣಾಜಿ ಬ್ರೇಕ್‌ಫ಼ಾಸ್ಟ್ ಮುಗಿಸಿ ತೋಟದಲ್ಲಿ ಚನ್ನವೀರಯ್ಯನ ಜೊತೆ ಕೂತಿದ್ದ. ಚನ್ನವೀರಯ್ಯ ಹರಕು ಮುರುಕು ಇಂಗ್ಲಿಷಲ್ಲಿ ಹಿಂದಿನ ದಿನದ ಅಣ್ಣಾಜಿ ಭಾಷಣವನ್ನು ತನ್ನ ಗೆಳೆಯರೆಲ್ಲ ಮೆಚ್ಚಿಕೊಂಡಿದ್ದನ್ನೂ, ದೊಡ್ಡ ದೊಡ್ಡ ಅಡ್ವೊಕೇಟರೂ ಆ ಇಂಗ್ಲಿಷಿಗೆ ತಲೆದೂಗಿದ್ದನ್ನೂ ವಿವರಿಸುತ್ತಿದ್ದ. ಕೃಷ್ಣಪ್ಪನಿಗೆ ಕೂರಲು ಕುರ್ಚಿ ಕೊಡಬೇಕೋ, ಅಥವಾ ನಿಂತಿದ್ದು ಮಾತಾಡಿ ಹೋಗುವ ಮಟ್ಟದವನೋ ಎಂಬುದನ್ನು ತೀರ್ಮಾನಿಸಲಾರದೆ ಚನ್ನವೀರಯ್ಯ ಅವನನ್ನು ದಿಟ್ಟಿಸಿ ನೋಡುತ್ತಿದ್ದಾಗ ಅಣ್ಣಾಜಿ ಗೆಲುವಿನಿಂದ ಎದ್ದು ನಿಂತು ತನ್ನ ಕುರ್ಚಿಯನ್ನೆ ಅವನಿಗೆ ಕೊಡುವುದನ್ನು ಕಂಡು ಚನ್ನವೀರಯ್ಯ “ಬೇಡಿ, ಕುರ್ಚಿ ತರಿಸ್ತೇನೆ” ಎಂದು ಕರ್ಕಶವಾಗಿ “ಏ ಮಾದ-ಏ ಮಾದ, ಎಲ್ಲಿ ಹೋದೆಯೊ” ಅಂತ ಕೂಗಿದ. ಅಣ್ಣಾಜಿ ನಿಂತಿರುವುದು ನೋಡಿ, ಅವನೂ ನಿಂತ. ಅಣ್ಣಾಜಿಯ ಗೌರವಕ್ಕೆ ಪಾತ್ರನಾದ ಕೃಷ್ಣಪ್ಪನನ್ನು ಆಪಾದಮಸ್ತಕ ಪರೀಕ್ಷಿಸಿದ. “ಇವರು ಮಿಸ್ಟರ್ ಕೃಷ್ಣಪ್ಪ ಗೌಡರು -ಇನ್ನು ಹತ್ತು ವರ್ಷಗಳಲ್ಲಿ ಈ ದೇಶದ ದೊಡ್ಡ ನಾಯಕರಾಗುತ್ತಾರೆ -ರೈತನಾಯಕರಾಗುತ್ತಾರೆ. ಒರಿಜಿನಲ್ ಆಗಿ ಯೋಚನೆ ಮಾಡಬಲ್ಲವರು. ಗ್ರಾಸ್ ರೂಟ್ಸ್ ಪಾಲಿಟಿಕ್ಸ್ ಮಾಡಬಲ್ಲರು” ಎಂದು ಅಣ್ಣಾಜಿ ಕೃಷ್ಣಪ್ಪನನ್ನು ಗುರ್ತುಮಾಡಿಕೊಡುತ್ತಿದ್ದಂತೆ ಚನ್ನವೀರಯ್ಯ ಲಾನಿನ ಹುಲ್ಲು ನೋಡುವುದನ್ನು ಕಂಡು ಅಣ್ಣಾಜಿ ತನ್ನ ಪಾಠದ ಕ್ರಮಕ್ಕೆ ಹಿಂದಿರುಗಿದ. “ಗ್ರಾಸ್ ರೂಟ್ಸ್ ಅನ್ನೋದು ಈಡಿಯಮ್. ಗಾಂಧಿ ಪಾಲಿಟಿಕ್ಸ್ ಗ್ರಾಸ್ ರೂಟ್ಸ್ ಪಾಲಿಟಿಕ್ಸ್ ಉದಾಹರಣೆಗೆ. ಮೇಲುಮೇಲಿನ ಬದಲಾವಣೆಗಳಿಗೆ ಮಾತ್ರ ಪ್ರಯತ್ನಿಸದೆ ಕಾಮನ್ ಪೀಪಲ್ಸ್‌ನ ಕಾನ್‌ಶಸ್‌ನೆಸ್ಸನ್ನೂ ಬದಲು ಮಾಡಲು ಪ್ರಯತ್ನಿಸೋದು -ನಿನ್ನೆ ಅದೇ ನಾನು ಮಾತಾಡಿದ್ದು.”

ಚನ್ನವೀರಯ್ಯ ಅರ್ಥಪೂರ್ಣವಾಗಿ ಕೃಷ್ಣಪ್ಪನನ್ನೂ ಒಳಪಡಿಸಿಕೊಳ್ಳಲು ಯತ್ನಿಸುವ ಮಾತಿನಲ್ಲಿ ಹೇಳಿದ:

“ಈಗಿನ ಕಾಲದ ಇಂಗ್ಲಿಷ್ ಸ್ಟಾಂಡರ್ಡ್ ಎಷ್ಟು ಇಳಿದಿದೆ ಅಂದ್ರೆ ಡಬಲ್ ಗ್ರಾಜುಯೇಟುಗಳಿಗೂ ಅರ್ಥವಾಗಲ್ಲ. ಅಲ್ಲೇನ್ರಿ ಮಿಸ್ಟರ್ ಕೃಷ್ಣಪ್ಪ ಗೌಡ -ಡೆಮಾಕ್ರಸಿ ಅಂತ ಕಾಕಪ್ಪ ಬೋಳಪ್ಪಗಳನ್ನೂ ಮೇಷ್ಟ್ರಾಗಿ ಮಾಡಿದ್ರೆ ನಮ್ಮ ಮಕ್ಕಳು ಹೇಗೆ ಕಲಿತಾರು ಹೇಳ್ರಿ.”

ಗೌರಿ ದೇಶಪಾಂಡೆಯ ಮನೆಗೆ ಹೋಗದಿರಲೆಂದು ಕೃಷ್ಣಪ್ಪ ಅಣ್ಣಾಜಿಯನ್ನು ನೋಡಲು ಬಂದದ್ದು. ಆದರೆ ಲಾನಿನ ಮೇಲೆ ನಡೆಯುತ್ತಿದ್ದ ಈ ನಾಟಕ ಅವನಿಗೆ ಅಸಹನೀಯವಾಯಿತು.

“ಕ್ಷಮಿಸಿ -ನಾನು ಹೋಗಬೇಕು” ಎಂದ. ಉಮೆಯೇ ಸ್ವತಃ ಟ್ರೇನಲ್ಲಿ ಕಾಫ಼ಿ ತರುವುದು ಕಂಡು ಮುಳ್ಳಿನ ಮೇಲೆ ಕೂತಂತೆ ಕಾಫ಼ಿ ಕುಡಿದ. ಅವನು ಏಳಬೇಕೆಂದಿದ್ದಾಗ ಚನ್ನವೀರಯ್ಯನೇ ಕಾರು ತರಲು ಹೇಳಿ ಹೊರಟದ್ದರಿಂದ ಅಣ್ಣಾಜಿ ಜೊತೆ ಅವನ ಗರಾಜ್ ಮೇಲಿನ ರೂಮಿಗೆ ಹೋದ. ಬಾಗಿಲು ಹಾಕಿಕೊಂಡು.

“ಅಣ್ಣಾಜಿ -ನಾನು ಕಾಲೇಜನ್ನು ಬಿಟ್ಟೆ. ಹುಡುಗಾಟಿಕೆ ಸಾಕಾಯ್ತು” ಎಂದ. ಅಣ್ಣಾಜಿ ಹರ್ಷದಲ್ಲಿ ಕೃಷ್ಣಪ್ಪನನ್ನು ತಬ್ಬಿಕೊಳ್ಳಲು ಹೋಗಿ, ಅವನು ಸೆಟೆದದ್ದು ಕಂಡು, ಅವನಿಗೆ ಮೈ ಮುಟ್ಟಿಸಿಕೊಳ್ಳುವುದೆಂದರೆ ಮುಜುಗರವೆಂಬುದನ್ನು ನೆನಪು ಮಾಡಿಕೊಂಡು ಚಾಚಿದ ಕೈಗಳನ್ನು ಹಾಗೇ ಎತ್ತಿ

“ಗ್ರೇಟ್ -ಹಳ್ಳಿಗೆ ಹೋಗು” ಎಂದು ಸಿಗರೇಟ್ ಹತ್ತಿಸಿದ. ಇಬ್ಬರೂ ಸ್ವಲ್ಪ ಹೊತ್ತು ಮೌನವಾಗಿ ಕೂತಿದ್ದರು.

“ನಿನ್ನೆ ಮೀಟಿಂಗಿಗೆ ಡಿ.ಎಸ್.ಪೀ ನೂ ಬಂದಿದ್ದ.” ಕೃಷ್ಣಪ್ಪ ಪ್ರಶ್ನಾರ್ಥಕವಾಗಿ ಅಣ್ಣಾಜಿ ಮುಖ ನೋಡಿದ.

“ಎಸ್. ನಾನು ರೆಸ್ಪಕ್ಟಬಲ್ ಆಗೋಕೆ ಪ್ರಯತ್ನಿಸ್ತ ಇದೀನಿ. ಆದರೆ ನೋಡು -”

ಎಂದು ಅವತ್ತಿನ ಹಿಂದೂ ಪತ್ರಿಕೆಯ ಒಳಮುಖದ ಕಾಲಂ ಒಂದನ್ನು ತೋರಿಸಿದ. ಅದರಲ್ಲಿ ಸ್ವಾಮೀಜಿ ಎಂದು ಕರೆಸಿಕೊಳ್ಳುತ್ತ ತೆಲಂಗಾಣ ಪ್ರದೇಶದಲ್ಲಿ ರೈತರನ್ನು ಹಿಂಸೆಗೆ ಪ್ರಚೋದಿಸಿದವನೊಬ್ಬ ತಪ್ಪಿಸಿಕೊಂಡಿದ್ದಾನೆಂದೂ, ಅವನನ್ನು ಹಿಡಿದುಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುವುದಾಗಿಯೂ ಪ್ರಕಟವಾಗಿತ್ತು. ಬೋಳಿಸಿದ ತಲೆ, ಕಾವಿ ಜುಬ್ಬ, ಕಾವಿ ಪಂಚೆ ಧರಿಸಿದ ಎತ್ತರವಾದ ನಿಲುವಿನ ಕೋಲುಮುಖದ ಈ ಸ್ವಾಮೀಜಿಯ ವರ್ಣನೆಯೂ ಸುದ್ದಿಯಲ್ಲಿತ್ತು. ಕೃಷ್ಣಪ್ಪ ಅನುಮಾನದಿಂದ ಬಂಗಾಳಿ ಗೃಹಸ್ಥನಂತೆ ಕಾಣುವ ಅಣ್ಣಾಜಿಯನ್ನು ನೋಡುತ್ತಿದ್ದಾಗ ಅಣ್ಣಾಜಿ ತನ್ನ ಟ್ರಂಕಿನಿಂದ ಒಂದು ಕಾವಿ ಜುಬ್ಬ ಪಂಚೆಗಳನ್ನು ಹೊರಗೆ ತೆಗೆದು ಕಾಗದದಲ್ಲಿ ಸುತ್ತಿ

“ಇನ್ನಿದರ ಉಪಯೋಗವಿಲ್ಲ. ಇದನ್ನು ಸುಟ್ಟುಬಿಡು” ಎಂದ.

“ಮುಂದೆ” ಎಂದ ಕೃಷ್ಣಪ್ಪ.

“ನೀನು ಹಳ್ಳಿಗೆ ಹೋದ ಮೇಲೆ ಅಲ್ಲಿ ಎಲ್ಲಾದರೂ ನನ್ನ ಮುಚ್ಚಿಡು. ಈಗ ಸದ್ಯ ನಾನು ರಾಯ್ ಧೋರಣೆಯಿಂದ ಮಾರ್ಕ್ಸ್‌ವಾದವನ್ನು ಟೀಕಿಸಿ ಮಾತಾಡುತ್ತ ಬರೆಯುತ್ತ ನನ್ನ ಐಡೆಂಟಿಟೀನ ಮುಚ್ಚಿಕೊಂಡಿರ್ತೇನೆ. ನೋಡು.”

ಎಂದು ರೂಮಲ್ಲಿ ತನ್ನೊಂದು ಪುಸ್ತಕದಿಂದ ಕತ್ತರಿಸಿ ಅಂಟಿಸಿದ್ದ ಲಿಂಕನ್ ಮತ್ತು ರೂಸ್‌ವೆಲ್ಟರ ಫ಼ೋಟೋಗಳನ್ನು ತೋರಿಸಿದ.

ಕೃಷ್ಣಪ್ಪನಿಗೆ ತನಗಾಗುತ್ತಿದ್ದ ನಿಷ್ಕಾರಣವಾದ ದಿಗಿಲುಗಳನ್ನು ಹೇಳಿಕೊಳ್ಳಬೇಕೆನ್ನಿಸಿದರೂ, ಮಾತಾಡಲು ಇಷ್ಟವಾಗಲಿಲ್ಲ. ಕಾವಿ ಅಂಗಿ ಪಂಚೆಗಳನ್ನು ಅವತ್ತಿನ ಹಿಂದೂನಲ್ಲಿ ಸುತ್ತಿಕೊಂಡು ಹೊರಡಲು ನಿಂತಾಗ ಬಾಗಿಲು ತಟ್ಟಿದ್ದು ಕೇಳಿಸಿತು. ಅಣ್ಣಾಜಿಯ ಕಣ್ಣುಗಳಲ್ಲಿ ಸಂತೋಷ ಚಿಮ್ಮಿತು.

“ಉಮಾ ಇರಬೇಕು. ಮಾರ್ವಲಸ್ ಉಮನ್. ರೆವಲ್ಯೂಶನರಿಗೆ ಪಕ್ಕದಲ್ಲಿ ಅಂಥ ಒಬ್ಬ ಉಮನ್ ಇದ್ದರೆ” ಎಂದು ಹೋಗಿ ಬಾಗಿಲು ತೆರೆದ. ಉಮಾ ಗಾರ್ಕಿಯ ಕಥೆಗಳ ಪುಸ್ತಕ ಹಿಡಕೊಂಡು ನಿಂತು “ಬರಲೇ” ಎಂದಳು. “ಇರು, ನಾವು ಗಾರ್ಕೀನ್ನ ಚರ್ಚಿಸ್ತ ಇದೇವೆ” ಎಂದರೂ ಕೃಷ್ಣಪ್ಪ ಒಪ್ಪಲಿಲ್ಲ. ಪ್ರೇಮದಲ್ಲಿ ಹೊಳೆಯುವ ಉಮೆಯ ಕಣ್ಣುಗಳು, ಅವಳ ಉಸಿರಿಗೆ ಏರಿಳಿಯುವ ಉಬ್ಬಿದ ಎದೆ, ಚುರುಕಾದ ಅವಗಾಹನೆಗಳಿಂದ ತನ್ನಲ್ಲಿ ಅಸೂಯೆ ಹುಟ್ಟುತ್ತಿದೆ ಎಂಬುದನ್ನು ಗಮನಿಸಿ ಅವನಿಗೆ ಕಸಿವಿಸಿಯಾಗಿತ್ತು. ಅಣ್ಣಾಜಿಗೂ ಉಮೆಯನ್ನು ನೋಡಿ ಅವಳ ಜೊತೆ ಒಂಟಿಯಾಗಿರಲು ದಿಗಿಲಾಗಿರಬಹುದು -ತನ್ನನ್ನು ಕೂತಿರಲು ಒತ್ತಾಯ ಮಾಡುತ್ತ ಮಹಡಿ ಮೆಟ್ಟಿಲು ಇಳಿದು ಬಂದು ಬೀಳ್ಕೊಟ್ಟ.

ಕೃಷ್ಣಪ್ಪನಿಗೆ ಗೌರಿಯ ಮನೆಗೆ ಸೀದ ಹೋಗಬೇಕೆನ್ನಿಸಿ ಅವಳ ಮನೆ ಕಡೆ ನಡೆದ. ಮನೆ ಹತ್ತಿರವಾಗುತ್ತಿದ್ದಂತೆ ದಿಗಿಲಾಗತೊಡಗಿತು. ಅವಳು ಮನೆಯಲ್ಲಿರಕೂಡದು ಎಂದು ಆಸೆಪಡುತ್ತ ಗೇಟ್ ಎದುರು ನಿಂತ. ಪೋರ್ಟಿಕೋನಲ್ಲಿ ಕಾರ್ ಇಲ್ಲದಿದ್ದುದು ಕಂಡು ಮನಸ್ಸು ಹಗುರವಾಯಿತು. ಈ ಹೊತ್ತಿಗೆ ಅವಳು ಕಾಲೇಜಿಗೆ ಹೋಗಿರುತ್ತಾಳೆಂಬುದನ್ನು ಅವನು ಮರೆತೇಬಿಟ್ಟಿದ್ದ. ಅಥವಾ ಕಾರಲ್ಲಿ ಅವಳ ತಾಯಿಯೆಲ್ಲಾದರೂ ಹೋಗಿರಲಿಕ್ಕೂ ಸಾಕು. ತೋಟದಲ್ಲಿ ಹೂಗಿಡಗಳ ಮಧ್ಯೆ ಕೆಲಸ ಮಾಡುವ ಜವಾನನೊಬ್ಬ ಕೃಷ್ಣಪ್ಪನನ್ನು ಗಮನಿಸಿ, “ಸಣ್ಣಮ್ಮೋರು ಇಲ್ಲ, ದೊಡ್ಡಮ್ಮೋರನ್ನ ನೋಡಬೇಕೇನು?” ಎಂದ. ಕೃಷ್ಣಪ್ಪ ಬೇಡವೆಂದು ಸರಸರನೆ ನಡೆದ. ಅವನ ಮನಸ್ಸು ಹಗುರಾಗಿತ್ತು.

ಎಲ್ಲಿಗೆ ಹೋಗಬೇಕು ತಿಳಿಯದೆ ಅಡ್ಡಾಡುತ್ತಿದ್ದಂತೆ, ಬಿಸಿಲೇರುತ್ತಿದ್ದಂತೆ ಇವತ್ತು ಆ ಗೋಸಾಯಿಯ ಮೌನದ ರಹಸ್ಯವನ್ನು ಭೇದಿಸಲೇಬೇಕೆಂದು ಮನಸ್ಸು ಮಾಡಿ ಬೆಟ್ಟ ಹತ್ತಿದ. ಬೆಳಿಗ್ಗೆ ತಿಂಡಿ ತಿನ್ನದ್ದರಿಂದ ತನಗೆ ತುಂಬ ಹಸಿವಾಗುತ್ತಿರುವುದು ಅನುಭವವಾಯಿತು. ರಾತ್ರಿ ನಿದ್ದೆ ಬೇರೆ ಇಲ್ಲದೆ ದಣಿವಾಗಲು ಶುರುವಾಯಿತು.

ದೂರದಿಂದಲೇ ಬೈರಾಗಿ ಒಲೆಗೆ ಬೆಂಕಿ ಹಾಕುತ್ತಿರುವುದು ಕಾಣಿಸಿತು. ಇದನ್ನು ಕಂಡು ಹಸಿವು ಹೆಚ್ಚಾಯಿತು. ಹಿಂದಿನ ದಿನದಂತೆಯೇ ಬಂಡೆಯೊಂದಕ್ಕೆ ಒರಗಿ ಕೂತ. ಬೈರಾಗಿ ಒಲೆಯ ಮೇಲೆ ಮಡಕೆಯನ್ನಿಟ್ಟು ಗುಹೆಯಿಂದ ಒಂದು ದಪ್ಪನೆಯ ಪುಸ್ತಕ ತಂದು ಓದುತ್ತ ಕೂತ. ಆ ಪುಸ್ತಕ ಯಾವುದೆಂದು ಕುತೂಹಲವಾಯಿತು. ಆದರೆ ಎದ್ದು ಹೋಗಿ ನೋಡುವುದರಿಂದ ಅವನ ಏಕಾಗ್ರತೆಗೆ ಭಂಗ ಬಂದೀತೆಂದು ಸುಮ್ಮನಾದ. ಸ್ವಲ್ಪ ಹೊತ್ತಿನ ಮೇಲೆ ಬೈರಾಗಿ ಗುಹೆಯಿಂದ ಮುತ್ತುಗದ ಎಲೆಗಳನ್ನು ತಂದು ಮೂರು ಊಟದೆಲೆಗಳನ್ನು ಹೆಣೆದ. ಅವನ ಊಟದಲ್ಲಿ ಇವತ್ತೂ ತನಗೆ ಪಾಲಾಗುತ್ತಿದೆ. ಅಷ್ಟರಮಟ್ಟಿಗೆ ತನ್ನ ಇರುವಿಕೆಯನ್ನು ಅವನು ಗಮನಿಸಿದ್ದಾನೆ. ಯಾವ ಸಂದಿಯಿಂದಲೋ ನಾಯಿ ಪ್ರತ್ಯಕ್ಷವಾಗಿ ಇನ್ನೊಂದು ಬಂಡೆಯ ನೆರಳಲ್ಲಿ ಮಲಗಿ ನಾಲಿಗೆ ಚಾಚಿ ಉಸಿರಾಡತೊಡಗಿತು. ಕಪ್ಪು ಚುಕ್ಕೆಗಳ ಬೂದು ಬಣ್ಣದ ನಾಯಿ, ಯಾವತ್ತೋ ಈ ಬೈರಾಗಿಯ ಹಿಂದೆ ಬಂದು ಇಲ್ಲಿ ಠಿಕಾಣಿ ಬಿಟ್ಟಿರಬೇಕು.

ಮಡಿಕೆಯಲ್ಲಿದ್ದುದು ಬೆಂದ ಮೇಲೆ ಬೈರಾಗಿ ಅದನ್ನು ಸರಿಯಾಗಿ ಮೂರು ಪಾಲು ಮಾಡುತ್ತಿರುವಾಗ ಕೃಷ್ಣಪ್ಪ ಎದ್ದು ಒಲೆಯ ಹತ್ತಿರ ಹೋಗಿ ಕೂತ. ಬೈರಾಗಿ ಒಂದು ಎಲೆಯನ್ನು ನಾಯಿಗೆ ಇಟ್ಟು ಬರಲು ಹೋದಾಗ ಅವನು ಓದುತ್ತಿದ್ದುದು ವಾಲ್ಮೀಕಿಯ ಸಂಸ್ಕೃತ ರಾಮಾಯಣವೆಂಬುದನ್ನು ಕೃಷ್ಣಪ್ಪ ಗಮನಿಸಿದ. ನಂತರ ಮೌನದಲ್ಲಿ ಅಕ್ಕಪಕ್ಕ ಕೂತು ಇಬ್ಬರ ಊಟವೂ ನಡೆಯಿತು. ಇವತ್ತು ಬೇಯಿಸಿದ್ದರಲ್ಲಿ ಅಕ್ಕಿ ಬೇಳೆಗಳ ಜೊತೆ ಕಾಯಿ ಮತ್ತು ಬೆಲ್ಲಗಳೂ ಇದ್ದವು. ಯಾರೋ ಅದನ್ನು ಇಕ್ಕಿರಬೇಕು.

ಬೈರಾಗಿಯನ್ನು ಮಾತಾಡಿಸಬೇಕೆನ್ನಿಸಿತು. ತನ್ನನ್ನು ಅತ್ಯಂತ ತೀವ್ರವಾಗಿ ಬಾಧಿಸುವ ಪ್ರಶ್ನೆಯನ್ನು ಕೇಳಿದರೆ ಹೇಗೆ?

“ಒಂದೊಂದು ಸಾರಿ ಏನು ಮಾಡಬೇಕು ಗೊತ್ತಾಗಲ್ಲ. ನೂರಾರು ಸಾಧ್ಯತೆಗಳು ಎದುರಾಗ್ತಾವೆ. ಯಾಕೆ ಬದುಕಬೇಕು ತಿಳಿಯಲ್ಲ.”

ಕೃಷ್ಣಪ್ಪನಿಗೆ ತನ್ನದು ಅಸಂಬದ್ಧ ಪ್ರಲಾಪವೆನ್ನಿಸುವಂತೆ ಬೈರಾಗಿ ಯಾವ ಭಾವನೆಯನ್ನೂ ತೋರಿಸದೆ ತಿನ್ನುತ್ತ ಕೂತಿದ್ದ. ಅವನ ಮೌನದಿಂದ ತನ್ನ ಪ್ರಶ್ನೆಯೇ ಸುಳ್ಳೋ, ಸ್ವಕಲ್ಪಿತವೋ ಎಂದು ಕೃಷ್ಣಪ್ಪನಿಗೆ ಅನುಮಾನವಾಯಿತು. ಅಥವಾ ಯಾವನೋ ಪೆದ್ದನ ಬಳಿ ಒಳಗಿನದನ್ನು ಹೇಳಿಕೊಳ್ಳುವ ಮೂರ್ಖ ಕೆಲಸ ತಾನು ಮಾಡುತ್ತಿರಬಹುದು. ಅರ್ಧ ಊಟದ ನಡುವೆಯೇ ಎಲೆಯನ್ನೆಸೆದು ಗುಹೆಗೆ ಅಷ್ಟು ದೂರದಲ್ಲಿದ್ದ ಹಳ್ಳದಲ್ಲಿ ಕೈ ತೊಳೆದ. ಹಿಂದಕ್ಕೆ ಬರುವಾಗ ಜರುಗಿದ ಒಂದು ಘಟನೆಯಿಂದ ಬೈರಾಗಿ ಅವನಿಗೆ ಇನ್ನಷ್ಟು ರಹಸ್ಯದ ವ್ಯಕ್ತಿಯಾದ.

ಒಬ್ಬ ಮುದುಕ -ತಲೆಗೆ ಟೋಪಿ ಹಾಕಿ ಅಂಗಿಯ ಮೇಲೊಂದು ಧೋತ್ರ ಹೊದ್ದವ -ಊಟ ಮಾಡುತ್ತಿದ್ದ ಬೈರಾಗಿಯ ಎದುರು ಬಂದು ನಿಂತ. ಧೋತ್ರದಿಂದ ಮುಖ ಒರೆಸಿಕೊಳ್ಳುತ್ತ ನೀರು ಕೇಳಿದ. ಬೈರಾಗಿ ಹೂಜಿಯಲ್ಲಿದ್ದ ನೀರನ್ನೂ ಎಲೆಯಿಂದ ಕಟ್ಟಿದ ದೊನ್ನೆಯನ್ನೂ ಅವನಿಗೆ ತೋರಿಸಿದ. ಮುದುಕ ನೀರು ಕುಡಿದು, ದೊನ್ನೆಯ ತಳದಲ್ಲಿದ್ದುದನ್ನು ಕಣ್ಣಿಗೆ ಒರೆಸಿಕೊಂಡು

“ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಬೇಕು. ದಾರಿ ತಪ್ಪಿಬಿಟ್ಟೆ. ಇಲ್ಲಿಂದ ದೂರವ?” ಎಂದು ಕೇಳಿದ.

ಬೈರಾಗಿಯ ಊಟ ಮುಗಿದಿತ್ತು. ಎದ್ದು ನಿಂತ. ಕೈ ತೊಳೆದು ಬಂದು

“ಈ ದಾರಿಯಲ್ಲಿ ಹೋಗಿ, ಆ ದೊಡ್ಡ ಬಂಡೆಯ ಹತ್ತಿರ ಬಲಕ್ಕೆ ತಿರುಗಿ, ಅಲ್ಲಿ ಮೆಟ್ಟಿಲುಗಳು ಇವೆ. ಸುಮಾರು ನೂರು ಮೆಟ್ಟಿಲು ಹತ್ತಿದರೆ ದೇವಸ್ಥಾನ ಸಿಗತ್ತೆ” ಎಂದ.

ಮುದುಕ ಕೈ ಮುಗಿದು ಹೋದ ಮೇಲೆ ಆಶ್ಚರ್ಯದಿಂದ ಬೈರಾಗಿಯನ್ನು ನೋಡುತ್ತ

“ಅದೇಕೆ ನೀವು ನನ್ನ ಹತ್ತಿರ ಮಾತಾಡಲ್ಲ?” ಎಂದ.

ಈ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ವ್ಯಾಯಾಮದಿಂದ ಎಡಪಾರ್ಶ್ವಕ್ಕೆ ಜೀವ ಹರಿಸಲು ಯತ್ನಿಸುತ್ತಿರುವ ಈ ಘಟನೆ ನೆನೆಸಿಕೊಂಡು ಹೇಳುತ್ತಾನೆ: “ಪ್ರಶ್ನೆ ಫ಼್ಯಾಕ್ಚುಯಲ್ ಆಗಿದ್ದರೆ ಮಾತ್ರ ಈ ಬೈರಾಗಿ ಉತ್ತರ ಕೊಡುತ್ತಿದ್ದ. ಅಭಿಪ್ರಾಯದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರಲಿಲ್ಲ. ಅಣ್ಣಾಜಿ ಉಕ್ಕುವ ಮನುಷನಾದರೆ ಈ ಬೈರಾಗಿ ಅಗತ್ಯವಿದ್ದಷ್ಟು ಮಾತ್ರ ಜಗತ್ತಿಗೆ ತೆರೆದುಕೊಂಡಿದ್ದವ. ಆದರೆ ಇದರಿಂದಾಗಿ ಅವನ ಒಳಗೆ ಏನು ಮಾಗಿ ಫಲ ಬಿಟ್ಟಿತೋ. ಅದರಿಂದ ಅವನೇನು ಪಡೆದನೋ, ಯಾರೇನು ಪಡೆದರೊ ಹೇಳಕ್ಕಾಗಲ್ಲ. ಆದರೆ ನಾನಾಗಲಿ ಅಣ್ಣಾಜಿಯಾಗಲಿ ಕೊನೆಗೆ ಕಡಿದಿದ್ದಾದರೂ ಏನು?” ಹೀಗೆ ಕೃಷ್ಣಪ್ಪ ಮಾತಾಡುವಾಗ ಅವನು ತುಂಬ ಖಿನ್ನನಾಗಿರುತ್ತಾನಾದ್ದರಿಂದ ಇದು ಕೂಡ ಅವನ ಒಟ್ಟು ಅಭಿಪ್ರಾಯವೆಂದು ಹೇಳಲಿಕ್ಕಾಗುವುದಿಲ್ಲ. ಆ ಬೈರಾಗಿಯಂತೂ ಅವನನ್ನು ಕಾಡಿದ್ದಾನೆ ಎಂಬುದಷ್ಟು ನಿಜ: ಅವನಷ್ಟೇ ಮೌನಿಯಾಗಿ ಒಳಗಿರುವುದನ್ನು ಧಗಧಗ ಉರಿಸಿಕೊಂಡಿರಬೇಕೆಂಬ ಆಸೆ ಅವನನ್ನು ಬಿಟ್ಟಿಲ್ಲ -ಮಲಮೂತ್ರ ವಿಸರ್ಜನೆಯ ವ್ಯವಧಾನ ಕಳೆಯುತ್ತಿರುವ ಈಗಲೂ ಕೂಡ.

ಅವನು ಮಾತಾಡುತ್ತಾನೆ ಎಂದು ಗೊತ್ತಾದ ಮೇಲೆ ಅವನನ್ನು ಮಾತಾಡಿಸುವಂಥ ಪ್ರಶ್ನೆ ತನ್ನಲ್ಲೇನಿದೆ ಎಂದು ಕೃಷ್ಣಪ್ಪ ಸಂಕಟಪಡುತ್ತ ಹುಡುಕಿದ. ಕೇಳುವ ಪ್ರಶ್ನೆ ನಿಜವಾದ ಪ್ರಶ್ನೆಯಾಗಿರಬೇಕು. ಸ್ಪಷ್ಟವಾಗಿ ಕೇಳುವಂತಿರಬೇಕು -ಇಂಥಲ್ಲಿಗೆ ದಾರಿ ಎಲ್ಲಿ ಎನ್ನುವಷ್ಟು. ತನ್ನ ಕಷ್ಟಗಳೆಲ್ಲ ಮನಸ್ಸಿನ ಲಾಲಸೆಯಿಂದ ಹುಟ್ಟಿದ್ದಿರಬಹುದೆಂದು ಕೃಷ್ಣಪ್ಪನಿಗೆ ಭಯವಾಯಿತು. ಅಥವಾ ತನ್ನ ಸಮಸ್ಯೆ ಏನೆಂಬುದೇ ನಿಜವಾಗಿ ತನಗೆ ಗೊತ್ತಿಲ್ಲವೆಂದುಕೊಂಡ. ಒಮ್ಮೆ ಅಂಥ ಪ್ರಶ್ನೆ ಕೇಳುವುದು ಸಾಧ್ಯವಾದರೂ ಅದು ಈ ಬೈರಾಗಿಯ ಅರಿವಿಗೆ ದಕ್ಕಲಾರದಾಗಿ ಅವನು ಸುಮ್ಮನಿರಬಹುದು. ಅಥವಾ ಯಾವುದೂ ಇನ್ನೊಬ್ಬರನ್ನು ಕೇಳಿ ಬಗೆಹರಿಸಿಕೊಳ್ಳಬಲ್ಲ ಪ್ರಶ್ನೆಯಲ್ಲ ಎಂಬ ನಿಲುವೂ ಆತನದ್ದಿರಬಹುದು.

ಕೃಷ್ಣಪ್ಪ ಸಂಜೆಯಾಗುತ್ತಿದ್ದಂತೆ ಬೆಟ್ಟವನ್ನಿಳಿದ. ಗೌರಿ ದೇಶಪಾಂಡೆಯನ್ನು ಹೋಗಿ ನೋಡುವುದೆ? ನೋಡಿದರೆ ಏನು ಹೇಳುವುದು? ತನ್ನೆಲ್ಲ ವರ್ತನೆಗಳೂ ಅಪಕ್ವವೆನ್ನಿಸಿ ಹಾಸ್ಟೆಲಿಗೆ ಹೋದ. ಹುಡುಗರೆಲ್ಲ ತನ್ನನ್ನು ಏನೋ ಕೇಳಲು ಕಾಯುತ್ತಿದ್ದಾರೆ ಎಂದು ಗೊತ್ತಾದರೂ “ಸುಸ್ತಾಗಿದೆ ಕಣ್ರೋ. ನಾಳೆ ಮಾತಾಡಾಣ” ಎಂದು ರೂಮಿಗೆ ಹೋಗಿ ಮಲಗಿದ. ಕಿಶೋರ ತಂದುಕೊಟ್ಟ ಹಾಲನ್ನು ಕುಡಿದು, ಅವನು ಕೊಟ್ಟ ಲಕೋಟೆಯನ್ನು ಆತುರದಿಂದ ಒಡೆದು ಓದಿದ.

“ಇವತ್ತು ನನ್ನನ್ನು ಕೇಳಿಕೊಂಡು ಮನೆಗೆ ಬಂದಿದ್ದವರು ನೀವೇ ಇರಬೇಕು. ಮಹಡಿಯಲ್ಲಿದ್ದ ನನ್ನ ತಾಯಿಗೆ ಇನ್ನು ಯಾರು ಕವಿಯ ಹಾಗೆ ಕಂಡಿರಲು ಸಾಧ್ಯ? ನಾಳೆ ಬನ್ನಿ -ಬರಬೇಕೆನ್ನಿಸಿದರೆ. ಸಂಕೋಚ ಮಾಡಿಕೋಬೇಡಿ. ನಿಮ್ಮವಳೇ ಗೌರಿ ದೇಶಪಾಂಡೆ.”

ಕೃಷ್ಣಪ್ಪನಿಗೆ ಸಂತೋಷವಾಯಿತು. ಭಯವಾಯಿತು. ಸಾವಿನ ಜೊತೆ ಹೆಣಗುತ್ತಿರುವ ಈ ದಿನಗಳಲ್ಲಿ ಆಗ ನಡೆಯುತ್ತಿದುದನ್ನೆಲ್ಲ ನೆನಪು ಮಾಡಿಕೊಂಡು ಅವನು ಆಶ್ಚರ್ಯ ಪಡುತ್ತಾನೆ. ನಮ್ಮ ಕಲ್ಪನೆ ಯಾಕೆ ಪ್ರೀತಿಗೆ ದಕ್ಕಿದ ಹೆಣ್ಣಿಗಿಂತ ದಕ್ಕಲಾರದೆ ಹೋದವಳನ್ನೇ ಹೆಚ್ಚು ಹಚ್ಚಿಕೊಳ್ಳುತ್ತದೆ? ಅವಳನ್ನು ಅಷ್ಟು ಬಯಸಿಯೂ ಯಾಕೆ ತನಗೆ ಅವಳನ್ನು ಸರಳವಾಗಿ ಸ್ಪಷ್ಟವಾಗಿ ನೀನು ನನಗೆ ಬೇಕು ಎಂದು ಕೇಳುವುದು ಸಾಧ್ಯವಾಗಲಿಲ್ಲ? ಅಷ್ಟು ಸುಲಭವಾಗಿ, ಚುರುಕಾಗಿ, ಹಗುರಾಗಿ ಮಾತಾಡಿಬಿಡುತ್ತಿದ್ದ ಆಕೆಗೂ ಹೆಣ್ಣಿಗೆ ಗಂಡು ಬೇಕಾಗುವ ರೀತಿಯಲ್ಲಿ ನೀನು ನನಗೆ ಬೇಕು ಎಂದು ಸೂಚಿಸುವುದು ಸಾಧ್ಯವಾಗಲಿಲ್ಲ? ದೈವಿಕವೆನಿಸುತ್ತಿದ್ದ ಅವಳ ಮುಖವನ್ನು ನೆನೆದಾಗ ಅವಳ ಮಾಟವಾದ ದೇಹವನ್ನು ಬಯಸುವುದು ಸಾಧ್ಯವಾಗುತ್ತಿರಲಿಲ್ಲ. ಅವಳ ದೇಹವನ್ನು ಕೂಡುವ ಬಯಕೆಯಾದಾಗ ಅವಳ ಮಾತು ಮುಖ ಕಣ್ಣೋಟಗಳು ನೆನಪಾಗಿ ತನ್ನ ಆಸೆಗಳ ಬಗ್ಗೆ ಹೇಸಿಗೆಪಡುವಂತಾಗುತ್ತಿತ್ತು. ಆದ್ದರಿಂದ ಆ ದಿನಗಳಲ್ಲಿ ತನ್ನ ಭಾವನೆಯನ್ನೆಲ್ಲ ಇಡೀ ತನ್ನ ಪ್ರಾಣ ಬಯಸುವ ಒಂದು ಮಾತನ್ನಾಗಿ, ಒಂದು ಪ್ರಶ್ನೆಯನ್ನಾಗಿ, ಒಂದು ಅಚಲ ನಿರ್ಧಾರವನ್ನಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ.

ಕೃಷ್ಣಪ್ಪನಿಗೆ ಅವತ್ತು ನಿದ್ದೆ ಬಂತು. ಮಧ್ಯರಾತ್ರೆ ಏನೋ ಗಲಾಟೆಯಾದಂತಾಗಿ ಎಚ್ಚರಾಯಿತು. ಎದ್ದು ದೀಪ ಹಾಕಿದ. ಮಹಡಿಯ ಮೆಟ್ಟಿಲುಗಳನ್ನು ಇಳಿಯುವಾಗ ಹಾಸ್ಟೆಲಿನ ವಿದ್ಯಾರ್ಥಿಗಳೆಲ್ಲ ಆವೇಶದಿಂದ ಯಾರನ್ನೋ ಒಳಗೆ ನೂಕುತ್ತಿದ್ದಂತೆ ಕಂಡಿತು. ಕೃಷ್ಣಪ್ಪ ಅವಸರವಾಗಿ ಇಳಿಯುತ್ತಿದ್ದಂತೆ ಶಾಮಣ್ಣ ಏದುಸಿರು ಬಿಡುತ್ತ ಕೃಷ್ಣಪ್ಪನನ್ನು ಅವನ ರೂಮಿಗೆ ತಳ್ಳಿಕೊಂಡು ಹೋಗಿ ಬಾಗಿಲು ಹಾಕಿಕೊಂಡು ಕೈಮುಗಿದು ನಿಂತ. ಶಾಮಣ್ಣ ಕುಡಿದಂತಿತ್ತು. ದಮ್ಮಿನಿಂದ ಉಸಿರಾಡುತ್ತ ಬಡಬಡಿಸಿದ:

“ನೀವು ಸ್ವಲ್ಪ ಸುಮ್ಗಿರಬೇಕು. ಆ ಹಾರುವ ಮಕ್ಕಳ ಪುಳಚಾರು ಕಕ್ಕಿಸಿದ ಮೇಲೆ ನಿಮ್ಮನ್ನ ಕರೀತೀವಿ. ನಿಮ್ಮ ಕಾಲಿಗೆ ಬೀಳಿಸ್ತೀವಿ. ಅವರಿಗೇನೂ ಅಪಾಯ ಮಾಡಲ್ಲ. ನಿಮ್ಮಾಣೆ” -ಎಂದು ಶಾಮಣ್ಣ ಲಗುವಿನಿಂದ ಹೊರಗೆ ಹೋಗಿ ಕೃಷ್ಣಪ್ಪನ ಬಾಗಿಲನ್ನು ಹಾಕಿಕೊಂಡು ಚಿಲಕ ಹಾಕಿದ. ಕೃಷ್ಣಪ್ಪ ನಿಸ್ಸಹಾಯಕನಾಗಿ ಕೂತು ಕೆಳಗೆ ಅತ್ಯಂತ ನಾಚಿಕೆ ಸ್ವಭಾವದ ಹುಡುಗರೂ ಅಬ್ಬರಿಸಿ ಬೈಯುವುದನ್ನೂ, ದಬ್ ದಬ್ ಶಬ್ದಗಳನ್ನೂ, ವಾಗ್ವಾದವನ್ನೂ, ಇದ್ದಕ್ಕಿದ್ದಂತೆ ಎಲ್ಲವೂ ಸ್ತಬ್ಧವಾದುದನ್ನೂ ಕೇಳಿಸಿಕೊಂಡ. ಚಿಲಕ ತೆಗೆಯಿತು. ಶಾಮಣ್ಣ ಎದುರು ನಿಂತು “ನಾಳೆ ಬೇಕಾದರೆ ನಮಗೆಲ್ಲ ಬೈಯ್ರೀ, ಈಗ ಕೆಳಗೆ ಬನ್ನಿ. ಆ ಸುವರ್‍ಗಳು ನಿಮಗೆ ಅಪಾಲಜಿ ಕೇಳಕ್ಕೆ ಒಪ್ಪಿಕೊಂಡಿದಾವೆ” ಎಂದ.

ಕೃಷ್ಣಪ್ಪ ಕೆಳಗೆ ಬಂದು ನೋಡಿದ ದೃಶ್ಯ ಹಾಸ್ಯಾಸ್ಪದವಾಗಿತ್ತು. ಗ್ಯಾಂಗಿನ ಲೀಡರ್ ರಾಮುವನ್ನು ಒಂದು ಮಂಚದ ಕಾಲಿಗೆ ಕಟ್ಟಿಹಾಕಲಾಗಿತ್ತು. ಹಾಸ್ಟೆಲಿನ ಒಲೆಯ ಬೂದಿ ಕರಿಗಳನ್ನು ತಂದು ಅವನ ಮುಖಕ್ಕೆ ಬಳಿಯಲಾಗಿತ್ತು. ಅವನ ಇಬ್ಬರು ಸಂಗಡಿಗರ ಕೈಗಳನ್ನು ಹಿಂದಕ್ಕೆ ಕಟ್ಟಿ ಕಾಲುಗಳಿಗೆ ಹಗ್ಗ ಬಿಗಿದು ಆ ಹಗ್ಗವನ್ನು ಕಿಟಕಿಯ ಸರಳಿಗೆ ಬಿಗಿದಿತ್ತು. ರಾಮುವಿನ ಬೂದಿ ಕರಿ ಬಳಿದಿದ್ದ ದೊಡ್ಡ ಮೀಸೆಯ ಮುಖ ಭಯ ಕೋಪ ತಾತ್ಸಾರಗಳಿಂದ ವಿಕಾರವಾಗಿತ್ತು. ಶಾಮಣ್ಣ ಅವನ ಎದುರು ನಿಂತು, ಗೆಲುವಿನಿಂದ ಬೀಗುತ್ತ ಕೃಷ್ಣಪ್ಪನ ಸಮ್ಮುಖದಲ್ಲಿ ಜಬರದಸ್ತಿನಿಂದ ವಿಚಾರಣೆ ನಡೆಸಿದ -ಗೌರವಸೂಚಕವಾದ ಬಹುವಚನದಲ್ಲಿ. ಆದರೆ ಈ ಹದಕ್ಕೆ ಬರುವ ಮುಂಚೆ ಆಡಬೇಕಾದ ಮಾತುಗಳನ್ನೆಲ್ಲ ಆಯಾ ಕ್ರಮದಲ್ಲಿ ಆಡಿ ಮುಗಿದಿತ್ತೆಂದು ಕೃಷ್ಣಪ್ಪನಿಗೆ ತಿಳಿಯದಿರಲಿಲ್ಲ.

“ಮಧ್ಯರಾತ್ರೆ ನಮ್ಮ ಹಾಸ್ಟೆಲಿನ ಗೋಡೆ ಮೇಲೆ ನೀವು ಹೊಲಸುಹೊಲಸಾಗಿ ಬರೀತ ಇದ್ದರೋ ಇಲ್ವೊ?”

ಶಾಮಣ್ಣನ ಪ್ರಶ್ನೆಗೆ ರಾಮು ಮುನಿಸಿನ ಧ್ವನಿಯಲ್ಲಿ ಹೇಳಿದ.

“ಹೂ……..”

“ಅದು ಹೇಲು ತಿನ್ನುವಂಥ ಕೆಲಸ ಅನ್ನೋದನ್ನ ಒಪ್ಪಿಕೋತೀರ?”

ಶಾಮಣ್ಣ ತನ್ನ ಪ್ಯಾಂಟಿನ ಜೇಬಿನಿಂದ ಸೈಕಲ್ ಚೈನನ್ನು ಹೊರಗೆಳೆಯುತ್ತಿರುವುದನ್ನೆ ನೋಡುತ್ತ ರಾಮು ವಿಕಾರವಾದ ಮುಖದಲ್ಲಿ

“ಸರಿ” ಎಂದ.

“ಕೃಷ್ಣಪ್ಪ ಗೌಡರು ನಮಗೆಲ್ಲ ಲೀಡರ್. ಅವರ ಕ್ಷಮಾಪಣೆ ಕೇಳಿಕೊಳ್ಳಬೇಕು ನೀವು. ಅದಕ್ಕೆ ಮುಂಚೆ ನಿಮ್ಮನ್ನು ನಾವು ಫ಼್ರೀ ಮಾಡ್ತೇವೆ. ಯಾಕೇಂದ್ರೆ ನೀವು ನಿಜವಾದ ವಿಷಾದ ವ್ಯಕ್ತಪಡಿಸಬೇಕು.”

ಶೋಕಿಲಾಲನೆಂದು ತಾನು ತಿಳಿದಿದ್ದ ಶಾಮಣ್ಣನ ಈ ಮಗ್ಗುಲು ಕಂಡು ಕೃಷ್ಣಪ್ಪನಿಗೆ ಸೋಜಿಗವಾಯಿತು. ಶಾಮಣ್ಣನ ಕಣ್ಣನ್ನೇ ಗಮನಿಸಿ ಹುಡುಗರು ಮೂವರನ್ನೂ ಬಿಚ್ಚಿದರು. ರಾಮು ಸೆಟೆದುಕೊಂಡೇ ಕೃಷ್ಣಪ್ಪನ ಕಡೆಗೆ ತಿರುಗಿ

“ನಮ್ಮ ವಾಚುಗಳನ್ನ ಬಿಚ್ಚಿಟ್ಟುಕೊಂಡಿದ್ದಾರೆ – ಕೊಡಿಸಿ ಮತ್ತೆ” ಎಂದ.

“ಛೇ ನಾವೇನು ಕಳ್ಳರಲ್ಲ” ಎಂದು ಶಾಮಣ್ಣ ಅವರ ಮೂರು ವಾಚುಗಳನ್ನೂ ಹಿಂದಕ್ಕೆ ಕೊಟ್ಟು ಹುಡುಗರ ಜೊತೆ ಅವರಿಗೆ ಸುತ್ತುವರೆದು ನಿಂತು ಕೃಷ್ಣಪ್ಪನನ್ನು ಅವರಿಗೆ ಎದುರಾಗಿ ನಿಲ್ಲಿಸಿದ.

ಕೃಷ್ಣಪ್ಪ ತನ್ನ ಸಹಜವಾದ ಮಾತಿನ ಕ್ರಮದಲ್ಲಿ ಯಾವ ಉದ್ವೇಗವೂ ಇಲ್ಲದೆ ಹೇಳಿದ:

“ನನಗೇನೂ ನಿಮ್ಮ ಕ್ಷಮಾಪಣೆ ಬೇಡ. ನೀವು ಮತ್ತು ನಾನು, ಅಥವಾ ಗೌರಿ ದೇಶಪಾಂಡೆಯವರು ಮತ್ತು ನೀವು ಸಮಸಮಾಂತ ತಿಳಿದು ಹೀಗೆ ಮಾಡೋದು, ನೋಡಿ, ಸರಿಯಲ್ಲ. ಪಾಪ ನೀವೇನು ಮಾಡ್ತೀರಿ -ನಿಮ್ಮ ಹಾಗೆ ನಾನೂ ಆ ಕಾಲೇಜಲ್ಲಿ ಕಾಲಾನ ವ್ಯಯ ಮಾಡ್ತಿರೋದ್ರಿಂದ ಅಂಥ ಭ್ರಮೆ ನಿಮಗೆ ಉಂಟಾಗಿದೆ…”

ಹೊರಡುವುದರಲ್ಲಿದ್ದ ರಾಮುವನ್ನು ಶಾಮಣ್ಣ ಕೈತಡೆದು, ಕಣ್ಣು ಕೆಕ್ಕರಿಸಿ ನಿಲ್ಲಿಸಿ,

“ಅವರಿಗೆ ಬೇಡದೇ ಇರಬಹುದು. ಆದರೆ ನಾವು ಡಿಮ್ಯಾಂಡ್ ಮಾಡ್ತೀವಿ ಅವರ ಕ್ಷಮಾಪಣೆ ಕೇಳಿ ಅಂತ.”

ರಾಮು ತಡವರಿಸುತ್ತ –

“ತಪ್ಪಾಯ್ತು -ಕ್ಷಮಿಸಬೇಕು” ಎಂದ.

ಶಾಮಣ್ಣ “ಒಂದು ಬಕೆಟ್ಟು ನೀರು ತರ್ರೋ” ಎಂದ.

ಬಕೆಟ್ಟು ತಂದಾಗ ತನ್ನ ಟವಲನ್ನು ಅದರಲ್ಲದ್ದಿ ರಾಮುವಿನ ಮುಖ ತೊಳೆಯಲು ಹೋದ. ಅವನು ಮುಖ ತಿರುಗಿಸಿದಾಗ

“ನೀವು ಕ್ಷಮಾಪಣೆ ಕೇಳಿಕೊಂಡ ಮೇಲೆ ನಾನು ಬಳೆದ ಮಸೀನ ಒರಸೋದು ನನ್ನ ಡ್ಯೂಟಿ ನೋಡಿ” ಎಂದ.

ರಾಮು ಒಪ್ಪಲಿಲ್ಲ. ತಾನೇ ತೊಳೆದುಕೊಂಡ. ಆಮೇಲೆ ಶಾಮಣ್ಣ-

“ಈಗ ಗೋಡೆ ಮೇಲೆ ನೀವು ಬರೆದದ್ದನ್ನು ನೀವೇ ಅಳಿಸಬೇಕು. ಅದು ಕರಾರು” ಎಂದ.

ರಾಮು ಮತ್ತು ಸಂಗಡಿಗರು ಒಪ್ಪಿಕೊಂಡು ಹೊರಟರು. ಇಡೀ ಹಾಸ್ಟೆಲ್ ಹೊರಗೆ ನಿಂತು ಅವರು ಒರೆಸುವುದನ್ನು ಈಕ್ಷಿಸಿತು.

ರಾಮು ಮತ್ತು ಸಂಗಡಿಗರನ್ನು ಶಿಕ್ಷಿಸುವುದನ್ನು ಕ್ಷುಲ್ಲಕ ಎನ್ನುವಂತೆ ಗಂಭೀರವಾಗಿ ತಾನು ವರ್ತಿಸಿದ್ದರೂ, ಆ ಶಿಕ್ಷೆಯನ್ನು ತಾನು ಸೂಕ್ಷ್ಮವಾಗಿ ಬಯಸಿರಲೂಬಹುದು ಎನ್ನಿಸುತ್ತದೆ ಈಗ ಕೃಷ್ಣಪ್ಪನಿಗೆ. ಮುಂದೆ ಅವನ ರಾಜಕೀಯ ಜೀವನದಲ್ಲಿ ಇಂಥ ಪ್ರಸಂಗಗಳೆಷ್ಟೋ ಎದ್ದಾಗ ಸೇಡು ತೀರಿಸಿಕೊಳ್ಳುವುದರಲ್ಲಿ ತಾನು ತೋರಿಸುತ್ತಿದ್ದ ನಿರಾಸಕ್ತಿಯೇ ತನ್ನ ಎದುರಾಳಿಗಳನ್ನು ನಿರ್ನಾಮ ಮಾಡಬಲ್ಲ ಅಸ್ತ್ರವಾದದ್ದಿದೆ. ತಾನು ಬಾಯಾರೆ ಹೇಳದೆ ಆಗಬೇಕಾದ್ದು ಬೇರೆಯವರಿಂದ ಆದದ್ದಿದೆ. ತಾನು ಶುಚಿಯಾಗಿದ್ದು ಬೇರೆಯವರ ಕೈಯಿಂದ ಇಂಥ ಕೆಲಸ ಮಾಡಿಸಿಕೊಳ್ಳುವುದು ಸರಿಯೋ? -ಆದರೆ ಇಂಥ ನೈತಿಕ ಪ್ರಶ್ನೆಗಳು ಯಃಕಶ್ಚಿತ ಸೂಕ್ಷ್ಮಗಳು ಅನ್ನಿಸುವಂಥ ಸಾಮಾಜಿಕ ನ್ಯಾಯಕ್ಕೆ ಸಂಬಂಧಪಟ್ಟ ಸಂದರ್ಭಗಳು ಅವು. ದೀನದಲಿತರ ಪರವಾಗಿ ಹೋರಾಟದಲ್ಲಿ ಒಮ್ಮೆ ಗಟ್ಟಿಯಾಗಿ ಅಚಲವಾಗಿ ನಿಂತ ಬಳಿಕ ಅದರಲ್ಲಿ ಗೆಲ್ಲಲು ಮಾಡುವ ಕೆಲಸವೆಲ್ಲ ನ್ಯಾಯವಾದ್ದು ಎಂದು ಅಣ್ಣಾಜಿ ಹೇಳಿರಲಿಲ್ಲವೆ? ಈಗ ಮಾತ್ರ ಒಂದೊಂದು ಬೆರಳನ್ನೂ ಮಡಿಸಿ ಬಿಚ್ಚುವುದನ್ನು ಕಲಿಯುತ್ತಿರುವ ಕೃಷ್ಣಪ್ಪನನ್ನು ತಾನು ಒರಟಾಗಲು ಬಿಟ್ಟ ತನ್ನ ವ್ಯಕ್ತಿತ್ವದ ಅಂಶಗಳು ಕಾಡುತ್ತವೆ. ಸಂಪೂರ್ಣ ಪರಹಿತಕ್ಕೆ ಬದುಕುವುದರಲ್ಲಿ ಕೂಡ ನಾವು ಇಡಿಯಾಗಿ ಉಳಿಯುತ್ತೇವೆಂಬುದು ನಿಶ್ಚಿತವಲ್ಲವೆನಿಸುತ್ತದೆ.

ಮಾರನೇ ದಿನ ಬೆಳಿಗ್ಗೆ ಹೋಗಿ ಗೌರಿ ದೇಶಪಾಂಡೆಯನ್ನು ಕೃಷ್ಣಪ್ಪ ನೋಡಿದ್ದ. ಅವಳು ಕಾಲೇಜಿಗೆ ಹೋಗದೆ ಮನೆಯಲ್ಲಿ ಉಳಿದಳು. ತನ್ನ ಮಗಳು ಯಾವುದಾದರೂ ಒಬ್ಬ ಹುಡುಗನನ್ನು ಹಚ್ಚಿಕೊಂಡಿದ್ದಾಳಲ್ಲ ಎಂದು ಅವಳ ತಾಯಿ ಅನಸೂಯಾ ಬಾಯಿಗೆ ಖುಷಿಯಾದಂತೆ ಕಂಡಿತು. ಎತ್ತರವಾಗಿ, ತೆಳ್ಳಗೆ ಇದ್ದ ಅನಸೂಯಾ ಬಾಯಿ ಹಸಿರು ಬಣ್ಣದ ರೇಶ್ಮೆ ಸೀರೆಯುಟ್ಟು ಮಹಡಿಯಿಂದ ಇಳಿದು ಬಂದು ಕೃಷ್ಣಪ್ಪನಿಗೆ ಮುಜುಗರವಾಗದ ರೀತಿಯಲ್ಲಿ ಉಪಚರಿಸಿದರು. ಅವರ ತಲೆಗೂದಲಿನಲ್ಲಿ ಬಿಳಿಕೂದಲು ಕಾಣಿಸಿಕೊಂಡಿದ್ದರೂ ಆಕೆಯ ಮುಖ ಇನ್ನೂ ಯೌವನದ ಚುರುಕುಗಳನ್ನೂ ಮೋಹಕತೆಯನ್ನೂ ಉಳಿಸಿಕೊಂಡಿತ್ತು. ಕೃಷ್ಣಪ್ಪನಿಗೂ, ಮಗಳಿಗೂ ತಿಂಡಿ ಕೊಟ್ಟು ಫ಼್ಲಾಸ್ಕಿನಲ್ಲಿ ಕಾಫ಼ಿಯನ್ನಿಟ್ಟು, ಇಬ್ಬರನ್ನು ಮಾತಾಡಿಕೊಂಡಿರುವಂತೆ ಹೇಳಿ ತನ್ನ ಕೋಣೆಗೆ ಹೊರಟುಹೋದರು.

ಗೌರಿಯೇ ಕೃಷ್ಣಪ್ಪನಿಗೆ ಉಪ್ಪಿಟ್ಟು ಬಡಿಸುತ್ತ ಅವನ ಬಿಗಿ ಸಡಿಲ ಮಾಡಲು ಪ್ರಯತ್ನಿಸಿದಳು.

“ಮುಂದೇನು ಮಾಡಬೇಕೂಂತ ಇದೀರಿ?”

ಕೃಷ್ಣಪ್ಪ ಈ ಪ್ರಶ್ನೆಗೆ ಉತ್ತರ ಹೇಳಲು ಕಷ್ಟಪಡುವುದನ್ನು ಗೌರಿ ಗಮನಿಸಿದಳು:

“ಗೊತ್ತಿಲ್ಲ. ಊರಿಗೆ ಹೋಗಿ ಇರ್ತೀನಿ. ನಂಗೊಂದು ತಾಯಿ ಇದೆ, ಸ್ವಲ್ಪ ಗದ್ದೆ ಇದೆ. ಹಳ್ಳೀಲಿ ಇರ್ತ ಏನು ಮಾಡಬೇಕೂಂತ ಹೊಳೆಯುತ್ತೊ ಅದನ್ನು ಮಾಡ್ತೀನಿ. ನೀವು?”

ಕೃಷ್ಣಪ್ಪ ಸೌಜನ್ಯಕ್ಕಾಗಿ ಈ ಪ್ರಶ್ನೆ ಕೇಳಿರಲಿಲ್ಲ. ಉಪ್ಪಿಟ್ಟನ್ನು ತಿಂದು ಮುಗಿಸಿದ ಕೃಷ್ಣಪ್ಪನಿಗೆ ಸೇಬನ್ನು ಕತ್ತರಿಸಿದಳು. ನಂಜಪ್ಪನವರು ತನ್ನ ತಾಯಿಗೆಂದು ಸಿಮ್ಲಾದಿಂದ ಬುಟ್ಟಿಯಲ್ಲಿ ಸೇಬು ತರಿಸುತ್ತಾರೆ ಎಂದು ಕೃಷ್ಣಪ್ಪನಿಗೆ ಹೇಳಿ ಅವನ ಪ್ರತಿಕ್ರಿಯೆ ಗಮನಿಸಬೇಕೆಂಬ ಆಸೆ ಅದುಮಿಕೊಂಡಳು.

“ಒಬ್ಬ ಹುಡುಗಿಗೆ ತಾಯಿಯಾಗುವ ಆಸೆ ಇಲ್ಲದೆ ಇರಬಹುದು ಅನ್ನೋದನ್ನ ನೀವು ಒಪ್ಪಿಕೋತೀರ?”

ಕೃಷ್ಣಪ್ಪ ಇಂಥ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. ಗೌರಿ ಅವಸರಪಡದೆ ಅವನ ಉತ್ತರಕ್ಕಾಗಿ ಕಾದಳು.

“ನಾನು ಆ ಬಗ್ಗೆ ಯೋಚನೆ ಮಾಡಿರ್ಲಿಲ್ಲ. ಹೆಂಗಸು ಮಕ್ಕಳಿಗಾಗಿ ಆಸೆ ಪಡೋದು ಸಹಜ ಅಂದುಕೊಂಡಿದ್ದೆ.”

“ಅಲ್ಲ -ನಾನು ಹೇಳ್ತಿರೋದು ಅವಳಿಗೆ ಮಕ್ಕಳ ಮೇಲೆ ಆಸೆ ಇರ್ತದೆ. ಆದರೆ ತಾನೇ ಸ್ವತಃ ತಾಯಿಯಾಗಬೇಕೂಂತ ಇಲ್ಲದೇ ಇರಬಹುದು.”

“ಯಾಕೆ -ಭಯದಿಂದಲ?”

“ಇಲ್ಲ. ಭಯ ಕೂಡ ಅಲ್ಲ. ಗಂಡಸಿನ ಸಂಗದ ಆಸೆ ಇದ್ದೂ ತನ್ನ ದೇಹ ಮಕ್ಕಳನ್ನು ಪಡೆಯೋ ಸಾಧನವಾಗೋದು ಒಬ್ಬ ಹೆಣ್ಣಿಗೆ ಇಷ್ಟವಾಗದೇ ಇರಬಹುದು. ಇದು ಅನೈಸರ್ಗಿಕ ಅಂತೀರ?”

“ನಿಮಗೆ ಹಾಗೆ ಅನ್ನಿಸಿದರೆ ಆಗ ನಾನದನ್ನ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನಿಸುತ್ತೀನಿ. ಆದರೆ ನೀವು ತುಂಬ ಜನರಲ್ ಆಗಿ ಕೇಳಿದರೆ ನನಗೇನು ಹೇಳ್ಬೇಕು ತಿಳಿಯಲ್ಲ.”

ಗೌರಿ ಉತ್ಸುಕಳಾಗಿ ಹೇಳಿದಳು –

“ರೂಮಲ್ಲಿ ಕೂತು ಮಾತಾಡೋಣ ಬನ್ನಿ.”

ಬೇಕಾದರೆ ಸಿಗರೇಟ್ ಹಚ್ಚಿ ಎಂದು ಒಂದು ಡಬ್ಬಿಯನ್ನು ಎದುರಿಗಿಟ್ಟಳು. ನಂಜಪ್ಪ ತನ್ನ ಉಪಯೋಗಕ್ಕೆಂದು ಇಲ್ಲಿ ಬಿಟ್ಟಿರುವ ಪ್ಲೇಯರ್ಸ್ ಡಬ್ಬಿಯಿರಬಹುದೆಂಬ ಯೋಚನೆ ಕೃಷ್ಣಪ್ಪನಿಗೆ ಬಂದು ಹೋಯಿತು. ಸಿಗರೇಟ್ ಹಚ್ಚಿ ಕೂತವನಿಗೆ ಗೌರಿ,

“ಎಸ್. ನನಗೆ ಹಾಗನ್ನಿಸುತ್ತೆ. ಇದಕ್ಕೆ ಕಾರಣ ನಾನಿರೋ ವಿಶೇಷ ಸಂದರ್ಭಾಂತ ದಯವಿಟ್ಟು ತಿಳೀಬೇಡಿ. ಅಮ್ಮ ಹಾಗೆ ಅಂದುಕೊಂಡು ತುಂಬಾ ನರಳ್ತಾರೆ. ನಂಗೆ ತುಂಬ ದೇಶಗಳಲ್ಲಿ ತಿರುಗಾಡಬೇಕು, ತುಂಬ ಪುಸ್ತಕ ಓದಬೇಕು, ಬಗೆಬಗೆಯ ಜನರ ಜೊತೆ ಬೆರೀಬೇಕು -ಹೀಗೆ ಏನೇನೊ ಅನ್ನಿಸ್ತ ಇರತ್ತೆ. ಯಾವನೋ ಒಬ್ಬ ಗಂಡನ್ನ ಕೂಡಿಕೊಂಡು ಅವನ ಸಹಧರ್ಮಿಣಿಯಾಗಿ ಇಡೀ ಆಯಸ್ಸು ಕಳೀಬೇಕು ಅನ್ನಿಸಲ್ಲ.”

ಕೃಷ್ಣಪ್ಪ ಸುಮ್ಮನೆ ಕೂತ. ಗೌರಿ ನಗುತ್ತ.

“ನಿಮಗೆ ಶಾಕ್ ಆಗಿರಬಹುದು ಅಲ್ವ? ಆದರೆ ನಿಜವಾಗಿಯೂ ಹಾಗೆ ನನಗೆ ಅನ್ನಿಸತ್ತೆ. ಜೊತೆಗೇನೇ ನಾನು ನಮ್ಮ ತಾಯಿ ಹಾಗೇನೇ -ನನಗೆ ಗಂಡಸು ಬೇಕು. ನಾನು ಚಲ್ಲು ಹುಡುಗಿ ಅಲ್ಲಾಂತಲೂ ತಿಳಿದಿದ್ದೇನೆ. ಬನ್ನಿ -”

ತನ್ನ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯವಿಲ್ಲದಂತೆ ಮಾಡಲು ಗೌರಿ ಕೃಷ್ಣಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋಗಿ ಗುಲಾಬಿಗಳನ್ನು ತೋರಿಸಿದಳು. ತೋಟದ ಮೂಲೆಯಲ್ಲಿ ಒಂದು ಮರದ ಪೊಟರೆಯಲ್ಲಿದ್ದ ಹಕ್ಕಿಯ ಗೂಡನ್ನು ತೋರಿಸಿದಳು -ಪಕ್ಕದಲ್ಲಿ ನಿಂತು. ಮೃದುವಾದ ತುಪ್ಪಳದಲ್ಲಿ ಇನ್ನೂ ಹಸಿಹಸಿಯಾಗಿದ್ದ, ಕೆಂಪು ಬಾಯನ್ನು ತೆರೆದು ಚೀ ಚೀ ಎನ್ನುವ ಮರಿಯನ್ನು ತೋರಿಸುತ್ತ ಗೌರಿ ತನ್ನ ರಟ್ಟೆಯ ಮೇಲೆ ತುಂಬ ಸ್ವಾಭಾವಿಕವಾಗಿ ತನ್ನ ಮುಖವನ್ನು ಒತ್ತಿದ್ದಳು. ಅವಳು ಹರ್ಷದಿಂದ ಅದರುತ್ತ ಮೈಮರೆತು ನಿಂತದ್ದು ಕೃಷ್ಣಪ್ಪನಿಗೆ ತಿಳಿಯಿತು. ಅವನು ಹುಡುಗನಾಗಿದ್ದಾಗ ಇಂಥ ಎಷ್ಟೋ ಗೂಡುಗಳನ್ನು ಹುಡುಕಿಕೊಂಡು ಹೋಗಿದ್ದಾನೆ. ಕೆಲವೊಮ್ಮೆ ಅನಗತ್ಯ ಕ್ರೌರ್ಯದಿಂದ ಚಾಟರಿ ಬಿಲ್ಲಲ್ಲಿ ಹಕ್ಕಿಯ ಕಾಲಿಗೆ ಹೊಡೆದು ಅವುಗಳನ್ನು ನೋಯಿಸಿದ್ದಾನೆ. ಆದರೆ ಗೌರಿಯ ಉತ್ಸಾಹದಿಂದ ಅವನು ಇವತ್ತು ತುಂಬ ಮೃದುವಾದ, ಹೂಗಳ ಚಿತ್ರವಿದ್ದ ಗರಿಗರಿಯಾಗಿ ಇಸ್ತ್ರಿಯಾದ ಬಿಳೀಸೀರೆಯುಟ್ಟು, ಜಡೆಯನ್ನು ಎದೆಯ ಮೇಲೆ ಬಿಟ್ಟು ಸಂತೋಷದಲ್ಲಿ ಒದ್ದೆಯಾದ ಕಣ್ಣುಗಳಿಂದ ಗೌರಿ ಕೃಷ್ಣಪ್ಪನ ಮುಖವನ್ನು ನೋಡಿದಳು. ಹಗುರವಾಗಿ ಮುಟ್ಟುತ್ತ ತನ್ನ ಪಕ್ಕದಲ್ಲೆ ನಿಂತ ಗೌರಿಗೆ ಇನ್ನಷ್ಟು ಒತ್ತಿಕೊಂಡು ನಿಲ್ಲನೇಕೆನ್ನಿಸಿದ್ದನ್ನು ಕೃಷ್ಣಪ್ಪ ತಡೆದುಕೊಂಡ.

ಬೆಟ್ಟದ ಕಡೆ ಹೋಗೋಣವೇ ಎಂದು ಕೃಷ್ಣಪ್ಪ ಸೂಚಿಸಿದಾಗ ಗೌರಿ ಒಪ್ಪಿ ಕಾರಿನಲ್ಲಿ ಹೋಗೋಣವೇ ಎಂದಳು. ಕೃಷ್ಣಪ್ಪನಿಗೆ ಅದರಿಂದ ಮುಜುಗರವಾದರೂ ಅವಳನ್ನಷ್ಟು ದೂರ ನಡೆಸುವುದರಿಂದ ಬಳಲಿಯಾಳೆಂದು ಒಪ್ಪಿಕೊಂಡ. ದಾರಿಯಲ್ಲಿ ಅವಳಿಗೆ ಮಹೇಶ್ವರಯ್ಯ ಮತ್ತು ಅಣ್ಣಾಜಿಯ ಬಗ್ಗೆ ಹೇಳಿದ. ಇಷ್ಟು ಸುಲಭವಾಗಿ ತನ್ನ ಬಗ್ಗೆ ಗೌರಿಯ ಬಳಿ ಮಾತಾಡಿಕೊಳ್ಳುತ್ತಿದ್ದೇನೆಂದು ಕೃಷ್ಣಪ್ಪನಿಗೆ ಆಶ್ಚರ್ಯವಾಯಿತು. ಬೆಟ್ಟದ ತಪ್ಪಲಲ್ಲಿ ಕಾರು ನಿಲ್ಲಿಸಿ ಬೈರಾಗಿಯ ಬಗ್ಗೆ ಅವಳಿಗೆ ಗೊತ್ತೆ ಎಂದು ಕೇಳಿದ. ಊರಿನಿಂದ ದೂರ ಬದುಕುತ್ತಿದ್ದ ಅವಳಿಗೆ ಗೊತ್ತಿರಲಿಲ್ಲ. ಕೃಷ್ಣಪ್ಪ,

“ಬನ್ನಿ ಅವರನ್ನು ನೋಡುವ” ಎಂದು ಗೌರಿಯ ಜೊತೆ ಬೆಟ್ಟ ಹತ್ತುವಾಗ ಹೇಳಿದ:

“ನೋಡಿ ನಿಮ್ಮ ಪ್ರಶ್ನೆಗೆ ಏನು ಹೇಳಬೇಕು ಗೊತ್ತಿಲ್ಲ. ನಿಮಗೆ ಹಾಗನ್ನಿಸತ್ತೆ ಅಂದ್ರೆ ಸರಿ. ಆದರೆ..”

ಗೌರಿ ಏದುಸಿರು ಬಿಡುವುದು ಕಂಡು ನಿಂತ. ಮುಂದಿನ ದಾರಿ ಸ್ವಲ್ಪ ಕಡಿದಾಗಿತ್ತು. ಒಂದು ಬಂಡೆಯನ್ನು ಏರಬೇಕಾಗಿತ್ತು. ಗೌರಿ ಸೀರೆಯನ್ನು ಮುದುಡಿಕೊಂಡು ಸ್ವಾಭಾವಿಕವಾದ ಧ್ವನಿಯಲ್ಲಿ ಹೇಳಿದಳು:

“ರಚ್ಚಿಗೆ ಹಾಗೆ ಮಾಡ್ತಿದೀನಿ ಅಂತ ನಮ್ಮ ಅಮ್ಮನ ಹಾಗೆ ನೀವೂ ಯೋಚಿಸಬೇಡಿ.”

“ಇಲ್ಲ” ಎಂದು ಕೃಷ್ಣಪ್ಪ ಬಂಡೆಯನ್ನು ಹತ್ತಿ ಗೌರಿಯನ್ನು ಹತ್ತಿಸಿಕೊಳ್ಳಲು ಕೈ ಚಾಚಿದ. ಗೌರಿ ಅವನ ಶಕ್ತಿಯುತವಾದ ರಟ್ಟೆಗಳಿಗೆ ಹಗುರವಾಗಿ ಚಿಮ್ಮಿ ಬಂಡೆ ಹತ್ತಿದಳು.

“ಪಾಲಿಟಿಕ್ಸ್ ಅಂದ್ರೆ ನನಗೆ ಬೋರ್” ಎಂದು, ಇದು ತನ್ನ ಖಚಿತ ಅಭಿಪ್ರಾಯವೆನ್ನುವಂತೆ ಹೇಳಿದಳು: “ಇದೇ ಸಣ್ಣ ಊರೂಂತ ನನಗೆ ಅನ್ನಿಸತ್ತೆ. ದೊಡ್ಡೂರಲ್ಲಿ ಪ್ರೈವಸಿ ಇರುತ್ತೆ. ಬೊಂಬಾಯಿಗೋ ಡೆಲ್ಲಿಗೋ ಹೋಗಿ ಓದಬೇಕೂಂತಿದೀನಿ. ಅದು ಹೇಗೆ ನೀವು ಹಳ್ಳೀಲಿ ಇರ್ತೀರೊ -” ಕೃಷ್ಣಪ್ಪ ಅವಳು ಹೇಳಿದ್ದಕ್ಕಿಂತ ಹೆಚ್ಚನ್ನು ಅವಳ ಮಾತಲ್ಲಿ ಹುಡುಕಿದ. ಬೈರಾಗಿಯ ಗುಹೆಯ ಎದುರು ನಾಯಿ ಗದ್ದಲ ಮಾಡುತ್ತ ಆವೇಶದಲ್ಲಿದ್ದಂತೆ ಕಂಡಿತು. ಒಲೆಯ ಮೇಲೆ ತನ್ನ ಆಹಾರವನ್ನು ಬೇಯಿಸುತ್ತಿದ್ದ ಬೈರಾಗಿ ಎದ್ದು ನಿಂತು ನಾಯಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದ. ಗುಹೆಯ ಹತ್ತಿರ ಬರುತ್ತಿದ್ದಂತೆ ಗೌರಿ ಭಯದಲ್ಲಿ ಸಣ್ಣಗೆ ಕೂಗಿಕೊಂಡು ಕೃಷ್ಣಪ್ಪನಿಗೆ ಆತು ನಿಂತಳು. ಒಂದು ನಾಗರಹಾವು ಹೆಡೆ ಬಿಚ್ಚಿ ನಾಯಿಯನ್ನು ಹೆದರಿಸುತ್ತ ಗುಹೆಯ ಕಡೆ ಚಲಿಸುತ್ತಿತ್ತು. ಬೈರಾಗಿ ನಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಸರ್ಪ ಅವಸರವಾಗಿ ಗುಹೆಯನ್ನು ಹೊಕ್ಕಿತು. ಬೈರಾಗಿ ನಾಯಿಯನ್ನು ತಡವುತ್ತ ಗುಹೆಯಿಂದ ಆಚೆ ಅದನ್ನು ಹೋಗುವಂತೆ ಪುಸಲಾಯಿಸಲು ಶುರುಮಾಡಿದ. ನಾಯಿ ಕ್ರಮೇಣ ಶಾಂತವಾಗಿ ತನ್ನ ಜಾಗದಲ್ಲಿ ಮಲಗಿ ಗುಹೆಯ ಕಡೆ ನೋಡುತ್ತ ಗುರುಗುಟ್ಟುತ್ತ ಮಲಗಿತು. ಮಡಕೆಯಲ್ಲಿದ್ದದ್ದು ಬೆಂದ ಮೇಲೆ ಬೈರಾಗಿ ಎಲೆಗಳನ್ನು ತರಲು ಗುಹೆಯ ಒಳಗೆ ಹೋಗುತ್ತಿರುವುದನ್ನು ನೋಡಿದ ಗೌರಿ ಭಯಗ್ರಸ್ತಳಾಗಿ ಕೃಷ್ಣಪ್ಪನನ್ನು ಗಟ್ಟಿಯಾಗಿ ಹಿಡಿದು ನಡುಗತೊಡಗಿದಳು. ಗುಹೆಯಿಂದ ಬುಸ್ ಎನ್ನುವ ಶಬ್ದ ಬಂತು. ಒಳ ಹೋಗಲಿದ್ದ ಬೈರಾಗಿ ಸ್ತಬ್ಧವಾಗಿ ನಿಂತ. ಮೈಯೆಲ್ಲ ಕಿವಿಯಾಗಿ ಮಲಗಿದ್ದ ನಾಯಿ ಮತ್ತೆ ಉದ್ವಿಗ್ನವಾಗಿ ಬೊಗಳುತ್ತ ಓಡಿ ಬಂತು. ಬೈರಾಗಿ ಅದನ್ನು ತಬ್ಬಿ ಹಿಡಿದು ಸಂತೈಸಲು ನೋಡಿದ. ಕೃಷ್ಣಪ್ಪನ ಹತ್ತಿರ ನಾಯಿಯನ್ನು ಎಳೆದು ತಂದು ಅದನ್ನು ಹಿಡಿದುಕೊಳ್ಳುವಂತೆ ಕಣ್ಣಿಂದ ಸೂಚಿಸಿದ. ಕೃಷ್ಣಪ್ಪನು ನಾಯಿಯನ್ನು ಹಿಡಿದುಕೊಂಡಿದ್ದಾಗ ಹೊರಗೆ ಮಡಕೆಯಲ್ಲಿದ್ದ ನೀರಿನಿಂದ ಸಮತಲವಾಗಿದ್ದ ಎದುರಿನ ಕಲ್ಲಿನಲ್ಲಿ ನಾಲ್ಕು ಜಾಗಗಳನ್ನು ತೊಳೆದ. ಕೃಷ್ಣಪ್ಪ, “ಸ್ವಾಮಿ, ನಮಗೆ ಊಟ ಬೇಡ”ವೆಂದಾಗ ಮಡಕೆಯಲ್ಲಿದ್ದ ಅರ್ಧ ಭಾಗವನ್ನು ದೂರದಲ್ಲಿ ನಾಯಿಗೆ ಬಡಿಸಿ, ನಾಯಿಯನ್ನು ಊಟದೆಡೆ ಎಳೆದುಕೊಂಡು ಹೋದ. ಆದರೆ ನಾಯಿ ಊಟವನ್ನು ಒಲ್ಲದೆ ಹಿಂದಕ್ಕೋಡಿ ಗುಹೆಯ ಎದುರು ನಿಂತು ಬೊಗಳತೊಡಗಿತು. ಹಾವು ಬುಸ್ ಎನ್ನುತ್ತಲೇ ಇತ್ತು. ಮತ್ತೆ ಬೈರಾಗಿ ನಾಯಿಯನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ಅದರ ಊಟದೆದುರು ನಿಲ್ಲಿಸಲು ನೋಡಿದ.

ಗೌರಿ ಈ ನಾಟಕವನ್ನೆಲ್ಲ ಚಕಿತಳಾಗಿ ನೋಡುತ್ತ ಕೂತಳು. ನಾಯಿ ಬೈರಾಗಿಯ ಕೈಯಲ್ಲಿ ಒದ್ದಾಡುತ್ತಲೇ ಇತ್ತು.

“ನಾಯಿಯನ್ನು ಅದರ ಪಾಡಿಗೆ ಬಿಟ್ಟುಬಿಡುವ ಮನುಷ್ಯ ನೀವು ಅಂತ ತಿಳಿದಿದ್ದೆ” ಎಂದ ಕೃಷ್ಣಪ್ಪ. ಗೀತೆಯ “ನೈನಂ ಹಂತಿ ನ ಹನ್ಯತೇ” ಅವನಿಗೆ ನೆನಪಾಗಿತ್ತು. ಬೈರಾಗಿ ನಿತ್ಯ ಓದುವ ಪುಸ್ತಕವಲ್ಲವೇ ಅದು?

ಬೈರಾಗಿ ತೀವ್ರವಾಗಿ ಕೃಷ್ಣಪ್ಪನ ಮಾತನ್ನು ಗಮನಿಸಿದಂತೆ ಅನ್ನಿಸಿತು. ಒಂದು ಸಣ್ಣ ನಿಟ್ಟುಸಿರು ಅವನಿಂದ ಹೊರಬಂದದ್ದನ್ನು ಕೃಷ್ಣಪ್ಪ ಗಮನಿಸಿ ಕುತೂಹಲದಿಂದ ಅವನ ಪ್ರತಿಕ್ರಿಯೆಗೆ ಕಾದ. ಬೈರಾಗಿ ನಾಯಿಯನ್ನು ಬಿಟ್ಟ. ನಾಯಿ ಚಂಗನೆ ಜಿಗಿದು ಗುಹೆಯ ಎದುರು ನಿಂತು ಬೊಗಳಿತು. ಬುಸ್ ಎನ್ನುವ ಶಬ್ದ ಏರುತ್ತ ಇಳಿಯುತ್ತ ಇಡೀ ಗುಹೆ ಉಸಿರಾಡುತ್ತಿರುವ ಭಾವನೆ ಉಂಟಾಯಿತು. ಬೈರಾಗಿಯ ಮುಖ ವಿವರ್ಣವಾದ್ದನ್ನು ಕೃಷ್ಣಪ್ಪ ಗಮನಿಸಿದ. ಗೌರಿ ಕೃಷ್ಣಪ್ಪನನ್ನು ತಬ್ಬಿ ತನ್ನ ಮುಖವನ್ನು ಅವನ ಎದೆಯ ಮೇಲೆ ಮುಚ್ಚಿಕೊಂಡಳು. ಕೃಷ್ಣಪ್ಪ ಮುಂದಿನ ಅನಿವಾರ್ಯ ಘಟನೆಗೆ ಕಾದ. ನಾಯಿ ಗುಹೆಯನ್ನು ನುಗ್ಗಿತು. ಹಾವು ಬುಸುಗುಡುವ ಶಬ್ದ ಮಾತ್ರ ಮೊದಲು ಕೇಳಿಸುತ್ತಿದ್ದು, ಅದು ಕ್ರಮೇಣ ಕಡಿಮೆಯಾಗಿ ಬಟ್ಟೆ ಒಗೆಯುವಂತೆ ಬಡಿಯುವ ಶಬ್ದ ಗುಹೆಯಿಂದ ಬಂತು. ಇನ್ನೊಂದು ಕ್ಷಣದಲ್ಲಿ ರಕ್ತವನ್ನು ಮೂತಿಯ ತುಂಬ ಬಳಿದುಕೊಂಡ ನಾಯಿ ಇನ್ನೂ ಒದ್ದಾಡುತ್ತಿದ್ದ ಹಾವನ್ನು ಕಚ್ಚಿಕೊಂಡು ಪೊದೆಗಳ ಸಂದಿಗೆ ಓಡಿತು. ಗುಹೆಯ ಬಾಗಿಲಿಂದ ತೊಟ್ಟಿಕ್ಕಿದ್ದ ರಕ್ತವನ್ನು ನೋಡುತ್ತ ಬೈರಾಗಿ ಬಡಿಸಿಕೊಂಡಿದ್ದ ತನ್ನ ಆಹಾರವನ್ನು ಬಾಚಿ ಎಸೆದು ಬಂದು ಕೂತ. ಅವನು ಶಾಂತನಾಗಲು ಪ್ರಯತ್ನಿಸುತ್ತಿರುವಂತೆ ಕಂಡಿತು.

ಈಗಲೂ ಕೃಷ್ಣಪ್ಪ ಈ ಘಟನೆಯನ್ನು ನೆನಪು ಮಾಡಿಕೊಳ್ಳುತ್ತ “ಆ ಬೈರಾಗಿ ತಾನು ಕಂಡ ಹಿಂಸೇನ್ನ ದಕ್ಕಿಸಿಕೊಂಡನೋ ಇಲ್ಲವೋ ನನಗೆ ತಿಳಿಯಲ್ಲ” ಅಂತಾನೆ.

..
..
..

ಬಲಗೈ ಬೆರಳುಗಳನ್ನು ಚೂರು ಚೂರೇ ಮಡಿಸುತ್ತ ಬಿಚ್ಚುತ್ತ ಹಸ್ತವನ್ನು ಅಲ್ಲಾಡಿಸಲು ಕೃಷ್ಣಪ್ಪ ಶುರು ಮಾಡಿದ. ನಂತರ ಒಂದು ಬೆಳಿಗ್ಗೆ ಮೊಣಕೈ ಮತ್ತು ಕಾಲನ್ನು ಮಡಿಸುವುದು ಕೂಡ ತನಗೆ ಸಾಧ್ಯವಾಗಬಹುದೆಂಬ ಭರವಸೆ ಮೂಡಿದಾಗ ಸಣ್ಣದಾಗಿ ಗೆಲುವು ಅವನಲ್ಲಿ ಹುಟ್ಟಿತು. ಅಮೆರಿಕಾದಿಂದ ಹಿಂದಕ್ಕೆ ಬಂದು ದೆಹಲಿಯ ಮಿರಾಂಡದಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ದೇಶಪಾಂಡೆಗೆ ನಾಲ್ಕು ದಿನಗಳ ಮಟ್ಟಿಗೆ ಬಂದು ತನ್ನನ್ನು ನೋಡಿಹೋಗುವಂತೆ ಬರೆಸಬೇಕೆನ್ನಿಸಿತು. ಅವಳನ್ನು ನೋಡಿ ಕೊನೆಪಕ್ಷ ಹದಿನೈದು ವರ್ಷಗಳ ಮೇಲಾಗಿತ್ತು. ಇನ್ನೂ ಅವಳು ಮಕ್ಕಳಾಗದೆ ಮದುವೆಯಾಗದೆ ಇದ್ದಾಳೆ. ಫ಼ಿಲಡೆಲ್ಫಿಯಾದಲ್ಲಿ ಅವಳು ಓದುತ್ತಿದ್ದಾಗ ತಾನೊಬ್ಬ ಅಮೆರಿಕನ್ ಜೊತೆ ಬದುಕುತ್ತಿರುವುದಾಗಿ ಬರೆದಿದ್ದಳು. ಮೂರು ವರ್ಷಗಳ ನಂತರ ಅವನಿಗೆ ಸ್ವಂತ ಮಕ್ಕಳು ಬೇಕೆಂಬ ಆಸೆಯಿರುವುದಾಗಿಯೂ, ಅದನ್ನು ಅವನು ಹೇಳಿಕೊಳ್ಳದಿದ್ದರೂ ತನ್ನಿಂದ ಅವನು ನಿರಾಶನಾಗಕೂಡದೆಂದು ಅವನಿಂದ ಬೇರೆಯಾಗುತ್ತಿದ್ದೇನೆಂದೂ ಬರೆದಿದ್ದಳು. ಅಂದ ಮೇಲೆ ಅವತ್ತು ಗೌರಿ ಮಾತನಾಡುವಾಗ ಮಕ್ಕಳು ಬೇಡವೆಂಬುದಕ್ಕೆ ಅವಳ ಅಪಕ್ವತೆ ಕಾರಣವಿರಬಹುದೆಂಬ ತನ್ನ ಊಹೆ ಸರಿಯಲ್ಲವೆಂದು ಕ್ರಮೇಣ ಅವನಿಗೆ ಖಾತ್ರಿಯಾಗಿತ್ತು.

ಅಂತೂ ಅವು ಕೃಷ್ಣಪ್ಪನ ಪಾಲಿಗೆ ಅತ್ಯಂತ ಆತಂಕದ ದಿನಗಳು. ಆಳವರಿಯದ ಪ್ರಪಂಚದ ಅಂಚಿನಲ್ಲಿ ತುದಿಗಾಲಿನ ಮೇಲೆ ನಿಂತವನಂತೆ ಆಗ ಅವನು ಇರುತ್ತಿದ್ದ. ಲಘುವಾಗಿ ಉಲ್ಲಾಸವಾಗಿ ಗೌರಿ ಅವನ ಜೊತೆ ಇರಲು ಪ್ರಯತ್ನಿಸಿ ಸೋತಿದ್ದಳು. ಇಬ್ಬರೂ ಒಟ್ಟಿಗಿದ್ದಾಗ ಒಬ್ಬರನ್ನೊಬ್ಬರು ದೀಪದಂತೆ ಚೂಪಾಗಿ ಉರಿಸಿಕೊಳ್ಳುತ್ತಿದ್ದುದು ಇತ್ತೇ ವಿನಾ ಆರಾಮಾಗಿ ಒಬ್ಬರ ಬಿಸಿಗೆ ಇನ್ನೊಬ್ಬರು ಕರಗಿ ಮೆತ್ತಗಾದದ್ದು ಇಲ್ಲ. ಗೌರಿ ತನ್ನನ್ನು ಕೃಷ್ಣಪ್ಪ ಸ್ವೀಕರಿಸಲು ಅಗತ್ಯವಾದ ಮಾತೆಂದು ಏನೋ ಶುರುಮಾಡುವಳು:

“ನಿಮಗೆ ನಾನು ಹೇಳಿಲ್ಲ ಅಲ್ಲವ? ನನ್ನ ತಂದೆ ಬೆಳಗಾಂನಲ್ಲಿದ್ದಾಗ ನಂಜಪ್ಪನವರು ಅವರೂ ಸ್ನೇಹಿತರು. ಒಟ್ಟಿಗೆ ಏನೋ ಬಿಸಿನೆಸ್ ಮಾಡುತ್ತಿದ್ದರು. ನಮ್ಮನೇಲೇ ನಂಜಪ್ಪ ಇಳ್ಕೊತ್ತ ಇದ್ದುದ್ದು. ನನ್ನ ತಂದೆಗೆ ಇನ್ನೊಬ್ಬ ಪ್ರೇಯಸಿಯೂ ಇದ್ದಳಂತೆ -”

ಕೃಷ್ಣಪ್ಪನಿಗೆ ಇವೆಲ್ಲ ಅನಗತ್ಯ ವಿವರಣೆಗಳೆನ್ನಿಸಿ ಅನ್ಯಮನಸ್ಕನಾಗಿಬಿಡುತ್ತಿದ್ದ. ತನ್ನ ಜೊತೆ ಯಾವುದೋ ಉತ್ಕರ್ಷ ಬಯಸಿ ಬಂದ ಕೃಷ್ಣಪ್ಪನನ್ನು ತಾನು ಸಣ್ಣ ವಿಷಯಗಳಿಗೆ ಎಳೆಯುತ್ತಿದ್ದೇನೆಂದು ಅವಳಿಗೆ ಪಶ್ಚಾತಾಪವಾಗಿಬಿಡುತ್ತಿತ್ತು. ಅವನಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಮಾಡಿಸಿ ಬಡಿಸುವುದರಲ್ಲಷ್ಟೆ ಈ ನೆಲದ ಕೆಲಸಗಳನ್ನು ಅವನ ಜೊತೆ ಅವಳು ಮಾಡುತ್ತಿದ್ದುದು.

ಪ್ರತಿ ಸಂಜೆ ಬಂದುಬಿಡುತ್ತಿದ್ದ ಕೃಷ್ಣಪ್ಪ ಗೌರಿ ತನಗೆ ಅಪರಿಚಿತಳೋ ಎನ್ನುವಂತೆ –

“ಕ್ಷಮಿಸಿ. ನಿಮಗೆ ಓದಬೇಕಿತ್ತೋ ಏನೋ. ಪರೀಕ್ಷೆ ಹತ್ತಿರವಾಗುತ್ತಿದೆಯಲ್ಲವೆ?”

ಎನ್ನುವನು. ಹೀಗೆ ಸಲಿಗೆಯಲ್ಲೂ ದೂರ ಉಳಿಯುವ ಕೃಷ್ಣಪ್ಪ ಅವಳಿಗೆ ಇಷ್ಟವೂ ಆಗುವುದು.

“ಇಲ್ಲ ಬನ್ನಿ” ಎನ್ನುವಳು. ಕೃಷ್ಣಪ್ಪ ಏನೂ ಮಾತನಾಡದೆ ಅವನ ವಿಶಾಲವಾದ ಕಣ್ಣುಗಳನ್ನು ರೂಮಿನಲ್ಲಿ ವಿರಾಮವಾಗಿ ಹರಿಸುತ್ತ ಕೂತರೆ,

“ಹಾಡಲ?” ಎಂದು ಗೌರಿ ಕೇಳುವಳು. ಹಾಡಿನಿಂದ ಕೃಷ್ಣಪ್ಪ ಸಡಿಲವಾಗುವನೆಂದು ಅವಳಿಗೆ ಗೊತ್ತು. ಮಗಳು ಕೃಷ್ಣಪ್ಪನ ಎದುರಿಗೆ ಹಾಡುತ್ತ ಕೂತಿರುವುದನ್ನು ಅನಸೂಯಾಬಾಯಿ ಇಳಿದು ಬಂದು ಕೇಳಿಸಿಕೊಳ್ಳುವಳು. ಅವಳು ಮೂಲೆಯಲ್ಲಿದ್ದ ಮೋಡದ ಮೇಲೆ ಯಾರಿಗೂ ಆತಂಕವಾಗದ ರೀತಿಯಲ್ಲಿ ಶಾಂತವಾಗಿ ಕೂತಿರುವುದು ಕೃಷ್ಣಪ್ಪನಿಗೆ ಪ್ರಿಯವಾಗುವುದು. ಗುಂಗುರು ಕೂದಲಿನ ಕಪ್ಪು ವಿಗ್ರಹದಂತಿದ್ದ ದೃಢಕಾಯನಾದ ಕೃಷ್ಣಪ್ಪನನ್ನೂ, ಹಾಲಿನ ಬಣ್ಣದ ತೀವ್ರ ಭಾವನೆಗಳ ತನ್ನ ಮಗಳನ್ನೂ ಕಣ್ತುಂಬ ನೋಡುತ್ತ ಅನಸೂಯಾಬಾಯಿ ಖುಷಿಪಡುವರು. ಅವರು ಸದಾ ಓದುತ್ತಿದ ಶರತ್ ಕಾದಂಬರಿಯ ಪ್ರಸಂಗಗಳಲ್ಲಿ ಈ ಇಬ್ಬರನ್ನೂ ಇಡುವರು. ನಂಜಪ್ಪನವರು ಈ ನಡುವೆ ಬಂದರೆ ಯಾರಿಗೂ ಮುಜುಗರವಾಗುವುದಿಲ್ಲ. ಬಡವನಾದ ಕೃಷ್ಣಪ್ಪನ ಜೊತೆಗಿನ ಸ್ನೇಹ ಮೊದಲಲ್ಲಿ ಅವರಿಗೆ ಇಷ್ಟವಾಗದಿದ್ದರೂ ಗೌರಿ ಎಂದರೆ ಹೆದರುತ್ತಿದ್ದ ನಂಜಪ್ಪ ಸುಮ್ಮನಾಗಿದ್ದರು. ಈಚೀಚೆಗೆ ಮಹಾ ದೈವಭಕ್ತರಾಗಿದ್ದ ನಂಜಪ್ಪ ಸಂಜೆ ಗಣಪತಿ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಕುಂಕುಮ ಪ್ರಸಾದ ತಂದಿರುತ್ತಿದ್ದರು. ಈ ಪ್ರಸಾದವನ್ನು ಮೂವರಿಗೂ ಕೊಟ್ಟು ಅವರು ಮಹಡಿ ಹತ್ತಿ ಹೋಗುವರು. ಯಾವಾಗ ಅನಸೂಯಾಬಾಯಿ ಎದ್ದು ಹೋಗುತ್ತಿದ್ದರೋ ಗೌರಿಗಾಗಲೀ ಕೃಷ್ಣಪ್ಪನಿಗಾಗಲೀ ಗೊತ್ತಾಗುತ್ತಿರಲಿಲ್ಲ.

ಯಾಕೆ ಗೌರಿಯನ್ನು ತಾನು ಆಗ ಪಡೆಯಲಿಲ್ಲ? ಕೃಷ್ಣಪ್ಪನಿಗೆ ಒಂಟಿಯಾಗಿದ್ದಾಗ ಅವಳನ್ನು ಕೂಡುವ ತೀವ್ರ ಆಸೆಯಾಗುತ್ತಿತ್ತು. ಆದರೆ ತಾನು ಚತುಷ್ಪಾದಿಯಾಗಿ ಅವಳನ್ನು ಸಂಭೋಗಿಸಿವುದನ್ನು ಕಲ್ಪಿಸಿಕೊಳ್ಳುತ್ತಿದ್ದಂತೆಯೇ ತನ್ನ ಬಗ್ಗೆ ಅತ್ಯಂತ ಜಿಗುಪ್ಸೆಯಾಗಿಬಿಡುತ್ತಿತ್ತು. ಅವನನ್ನು ಇಂಥ ಪಾಪಭಾವನೆಯಿಂದ ಬಿಡುಗಡೆ ಮಾಡಿದವಳೆಂದರೆ ಲೂಸಿನಾ -ಮೈಯ ಚಳಿಯನ್ನು ಬಿಡಿಸಿ ಅದರ ಪ್ರತಿಯೊಂದು ಸಂದಿಮೂಲೆಯನ್ನೂ ಜೀವಂತವೆಂದು ತೋರಿಸಿದವಳು. ಆದರೆ ಅದು ಮೊದಲೇ ಗೌರಿಯಿಂದ ಆಗಿದ್ದರೆ….

ಮಧ್ಯಾಹ್ನ ಒಂದು ದಿನ ಕೃಷ್ಣಪ್ಪ ಅಣ್ಣಾಜಿಯನ್ನು ನೋಡಲೆಂದು ಹೊರಟ. ಈಚೆಗೆ ಅಣ್ಣಾಜಿ ದುಡ್ಡಿಗಾಗಿ ಪರದಾಟವಾಡಬೇಕಾಗಿರಲಿಲ್ಲ. ಬೇಕಾದ್ದಕ್ಕಿಂತ ಹೆಚ್ಚು ದುಡ್ಡು ಅವನ ಹತ್ತಿರ ಓಡಾಡುತ್ತಿತ್ತು. ಕೃಷ್ಣಪ್ಪ ತಂದುಕೊಟ್ಟಿದ್ದ ಸಾಲವನ್ನೆಲ್ಲ ಹಿಂದಕ್ಕೆ ಕೊಟ್ಟಿದ್ದ. ಎಲ್ಲಿಂದ ಇಷ್ಟು ಹಣವೆಂದು ಕೃಷ್ಣಪ್ಪ ಕೇಳದಿದ್ದರೂ, ಅವನೇ ಉಮೆಯ ಔದಾರ್ಯವನ್ನು ಹೊಗಳಿದ್ದ. ಅವಳು ಗಂಡನಿಗೆ ತಿಳಿಯದಂತೆ ಅವನ ಕಪ್ಪು ಹಣವನ್ನು ತಿಜೋರಿಯಿಂದ ಕದ್ದುಕೊಡುತ್ತಿರಬಹುದು. ಅಣ್ಣಾಜಿಯನ್ನು ಇದರ ಅನೈತಿಕತೆ ಬಾಧಿಸುವುದಿಲ್ಲ. ಕೃಷ್ಣಪ್ಪನ ಜೊತೆ ಮಾರ್ಕ್ಸ್ ಲೆನಿನ್ ವಾದಗಳ ಅತ್ಯಂತ ಸೂಕ್ಷ್ಮ ಸಮಸ್ಯೆಗಳ ಬಗ್ಗೆ ಈಗಲೂ ಮೈಮರೆತು ಮಾತಾಡುವನು. ಉಮೆ ಇದನ್ನು ಕೇಳಿಸಿಕೊಳ್ಳುತ್ತ ತನ್ನ ಎಣ್ಣೆಗೆಂಪು ಬಣ್ಣದ ದುಂಡುಮುಖವನ್ನು ಕೈಗಳಲ್ಲಿಟ್ಟು ಕೂತಿರುವಳು. ಅತ್ಯಂತ ಜಟಿಲವಾದ ವಾದಗಳನ್ನು ಅವಳ ಕಡೆ ತಿರುಗಿ ಅಣ್ಣಾಜಿ ಮಂಡಿಸುವನು. ಆರಾಧನೆಯಲ್ಲಿ ಹೂವೆಸೆಯುವಂತೆ ವಿಚಾರಗಳನ್ನು ಉಮೆಗೆ ಎಸೆಯುತ್ತ ಅಣ್ಣಾಜಿ ದೇವಿಯ ವಿಗ್ರಹವನ್ನು ಪೂಜಿಸುತ್ತ ಕೂತವನಂತೆ ಆಗ ಕೃಷ್ಣಪ್ಪನಿಗೆ ಕಾಣುವನು.

ಅವತ್ತು ಮಧ್ಯಾಹ್ನ ಹೋಗಿ ಬಾಗಿಲೆದುರು ನಿಂತಿದ್ದಾಗ ಉಮೆ ನರಳುತ್ತಿದ್ದಂತೆಯೂ ಮತ್ತು ಅಣ್ಣಾಜಿ ಗುಟ್ಟಾಗಿ ಏನೋ ಹೇಳುತ್ತಿದ್ದಂತೆಯೂ ಕೇಳಿಸಿತು. ಬಾಗಿಲನ್ನು ತಟ್ಟಹೋದವನು ಹಿಂದೆಗೆದ. ತನ್ನ ಹೆಜ್ಜೆ ಸಪ್ಪಳ ಕೇಳಿಸಿರಬೇಕು. ಇಬ್ಬರೂ ಎದ್ದು ಆವೇಗದಿಂದ ಉಸಿರಾಡುತ್ತ ಗಡಿಬಿಡಿಯಲ್ಲಿ ಓಡಾಡುತ್ತಿರುವುದನ್ನು ಬಾಗಿಲಿಂದ ಕೇಳಿಸಿಕೊಂಡ ಕೃಷ್ಣಪ್ಪನಿಗೆ ಮುಜುಗರವಾಯಿತು. ತಾನೀಗ ಹೊರಟುಹೋಗುವುದೂ ಸರಿಯಲ್ಲ; ನಿಂತಿರುವುದೂ ತಪ್ಪು. ಏನು ಮಾಡುವುದೆಂದು ತಿಳಿಯದೆ – “ನಾನು ಕೃಷ್ಣಪ್ಪ. ಆಮೇಲೆ ಬರ್ತೀನಿ. ಸುಮ್ಮನೆ ಬಂದಿದ್ದೆ -ಅಷ್ಟೇ” ಎಂದ. ಅಣ್ಣಾಜಿಗೆ ಇದರಿಂದ ತುಂಬ ಸಮಾಧಾನವಾದದ್ದು ಅವನ ಧ್ವನಿಯಿಂದಲೇ ಹೊಳೆಯಿತು:

“ಓ ಕೃಷ್ಣಪ್ಪನ? ಇರು. ಇರು. ಹೋಗಬೇಡ.”

ಕೃಷ್ಣಪ್ಪನಿಗೆ ಇನ್ನಷ್ಟು ಕಷ್ಟವಾಯಿತು. ಈಗ ತಾನು ಹೋಗುವಂತಿಲ್ಲ. ಏನೂ ಆಗದಿದ್ದ ರೀತಿಯಲ್ಲಿ ಅಣ್ಣಾಜಿ ಉಮೆಯರ ಮುಖ ನೋಡಬೇಕು. ಅವರಿಬ್ಬರೂ ಮುಚ್ಚಿಟ್ಟುಕೊಳ್ಳುವುದು ಕಷ್ಟವಾಗದಂತೆ, ಇದೆಲ್ಲ ತಿಳಿಯದ ಪೆದ್ದನಂತೆ ತಾನು ಕಾಣಿಸಿಕೊಳ್ಳಬೇಕು.

ಬಾಗಿಲು ತೆರೆಯಿತು. ಕೂದಲು ಕೆದರಿದ್ದ ಉಮೆ ಬಟ್ಟೆಯಿಂದ ಪುಸ್ತಕಗಳ ಧೂಳು ಹೊಡೆಯುತ್ತ ಸ್ಟೂಲಿನ ಮೇಲೆ ನಿಂತಿದ್ದಳು. ಅವಳು‌ಈ ಕೆಲಸದಲ್ಲಿದ್ದುದರಿಂದ ಕೂಡಲೇ ಬಾಗಿಲು ತೆರೆಯಲಾಗಲಿಲ್ಲೆಂದು ತಾನು ತಿಳಿಯಬೇಕು. ಆದರೆ ಅಣ್ಣಾಜಿ ಈಗ ತಾನೇ ಎದ್ದವನಂತೆ ಕಣ್ಣುಜ್ಜಿಕೊಳ್ಳುತ್ತಿರುವುದು ಮಾತ್ರ ಆಭಾಸವಾಗಿತ್ತು. ಆದರೆ ಒಂದೆರಡು ನಿಮಿಷಗಳಲ್ಲಿ ಅಣ್ಣಾಜಿ ಲೆನಿನ್ನಿನ “ಡೆಮೊಕ್ರಟಿಕ್ ಸೆಂಟ್ರಲಿಸಂ” ತತ್ವದಲ್ಲಿದ್ದ ಕಾಂಟ್ರಡಿಕ್ಷನ್ನುಗಳನ್ನು ನಿಜವಾಗಿಯೂ ಮಗ್ನನಾಗಿ ಚರ್ಚಿಸುತ್ತಿದ್ದ. ನಡುವೆ ಲೆನಿನ್ ಹೇಳಿದ ಮಾತೊಂದು ಸರಿಯಾಗಿ ನೆನಪಾಗದೆ, “ಉಮ, ಲೆನಿನ್‌ನ ಕಲೆಕ್ಟೆಡ್ ವರ್ಕ್ಸ್ ಇದೆಯಲ್ಲ -ಕೊಡು” ಎಂದ. ಉಮೆ ಪುಸ್ತಕ ತಂದು ಎದುರಿಟ್ಟಳು. “ಮಿಸ್ಟರ್ ಚನ್ನವೀರಯ್ಯನಿಗಿಂತ ಇವಳೇ ಬೇಗ ಕಲಿತಿದ್ದಾಳೆ. ಇವಳಿಗೆ ವಿಚಾರಶಕ್ತಿಯೂ ಇದೆ” ಎಂದು ಅಣ್ಣಾಜಿ ಹೊಗಳಿ, ಪುಸ್ತಕದಲ್ಲಿ ತನಗೆ ಬೇಕಾದ ಮಾತನ್ನು ಹುಡುಕಿದ. ಉಮೆ ಕಾಫ಼ಿ ಮಾಡಿ ತರಲು ಕೆಳಗೆ ಹೋದಳು.

ಕೃಷ್ಣಪ್ಪ ತನ್ನ ಜೀವನದಲ್ಲೆಲ್ಲ ತೀವ್ರವಾದ ಅಸೂಯೆಯನ್ನು ಅವತ್ತು ಅನುಭವಿಸಿದ. ಉಮೆಯ ನಡಿಗೆಯಲ್ಲಿ ಕಂಡ ಹಿತವಾದ ಆಯಾಸ ಅವನನ್ನು ವಿಚಲಿತಗೊಳಿಸಿತು. ಅಣ್ಣಾಜಿಯ ಹಾಗೆ ತಾನು ಯಾಕಿಲ್ಲವೆಂದು ತೀವ್ರ ಅತೃಪ್ತನಾದ. ಇವನಿಗೊಂದು ಹಸಿವು ಬಾಯಾರಿಕೆಗಳ ದೇಹವೇ ಇಲ್ಲವೋ ಏನೊ ಅನ್ನಿಸುವಂತಿದ್ದ ಅಣ್ಣಾಜಿ ತನಗೆ ಬೇಕಾದ್ದನ್ನು ಹೆಣ್ಣಿನಿಂದ ಇಷ್ಟು ಸುಲಭವಾಗಿ ಪಡೆಯುವಾಗ ತನಗೇಕೆ ಸಾಧ್ಯವಾಗುತ್ತಿಲ್ಲ? ಕಲ್ಪನೆಯಲ್ಲೂ ಅವನು ಗೌರಿಯನ್ನು ಬತ್ತಲಾಗಿ ನೋಡಲಾರ. ಅಣ್ಣಾಜಿ ಸತ್ತ ಮೇಲೂ ಈ ಅಸೂಯೆ ಕೃಷ್ಣಪ್ಪನಲ್ಲಿ ಉಳಿದಿತ್ತು. ಅದನ್ನು ಅವನು ಕಳಕೊಂಡಿದ್ದೆಂದರೆ ಲೂಸಿನಾ ಅವನ ಇಡೀ ದೇಹವನ್ನು ಅವಳ ತುಟಿ ಮತ್ತು ನಾಲಿಗೆಯ ತುದಿಗಳಿಂದ ಬೆಂಕಿಯ ಹಾಸಿಗೆ ಮಾಡಿ ಅದರ ಮೇಲೆ ತನ್ನ ಚಿರತೆಯಂತೆ ಮಾಟವಾದ ದೇಹವನ್ನು ನೀಡಿದಾಗ. ಕೃಷ್ಣಪ್ಪ ಇದ್ದಕ್ಕಿದ್ದಂತೆ ಎದ್ದು ನಿಂತದ್ದು ನೋಡಿ ಅಣ್ಣಾಜಿ ಯಾವ ದೈನ್ಯವೂ ಇಲ್ಲದೆ:

“ಹೋಗಬೇಡ -ಕೂತಿರು. ಉಮೆ ಅನುಮಾನದಿಂದ ಒದ್ದಾಡಿಯಾಳು. ನಿನ್ನ ಊಹೆ ಸರಿ. ಆದರೆ ಇದೆಲ್ಲ ನನ್ನ ಕೈ ಮೀರಿದ್ದು.”

ಎಂದ. ಇಷ್ಟು ಸರಳವಾಗಿ ಬಿಡಬಲ್ಲ ಅಣ್ಣಾಜಿಯನ್ನು ಕಂಡು ಕೃಷ್ಣಪ್ಪ ಚಕಿತನಾದ.

..
..
..
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.