ಭಾನುವಾರ

ಈ ದಿನ ಭಾನುವಾರ-
ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ
ನನ್ನ ದಡದಲ್ಲಿರುವ ಗಿಡಮರ ಬಳ್ಳಿ
ಪ್ರತಿಫಲಿಸಿ,
ಏನೋ ಸಮಾಧಾನ.
ಅಂಥ ಅವಸರವಿಲ್ಲ,
ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ
ಕೊಡಬಹುದು.
ಬೆಳೆದಿರುವ ಗಡ್ಡ ಇನ್ನೂ ಒಂದೆರಡು ತಾಸು
ಕಾಯಬಹುದು.
ಈ ಒಂದು ದಿನವಾದರೂ
ಬರುವ ಹೋಗುವ ಅವಸರದ ಹೆಜ್ಜೆಗಳ,
ಬೆಳೆವ ಕ್ಯೂ ಬಾಲಗಳ, ಉರುಳು ಗಾಲಿಗಳ,
ಫೋನುಗಳ, ಫೈಲುಗಳ ರಗಳೆಯಿಲ್ಲದ ಹಾಗೆ
ಬಿದ್ದಲ್ಲೇ ಬಿದ್ದು ನಾನೇ ನಾನಾಗಬಹುದು.
ಈ ನಾನು
ಪರಕ್ಕೆ ಟಿಕೆಟ್ಟು ತೆಗೆದಿರಿಸಿ
ಇಹದ ವೆಯಿಟಿಂಗ್ ರೂಮಿನಲ್ಲಿ
ರೈಲಿಗೆ ಕಾಯುತ್ತಿಲ್ಲ.
ನನ್ನ ಉದ್ಧಾರಕ್ಕೆ
ಯಾವ ದೇವರಿಗೂ ಲಂಚ ಕೊಡಬೇಕಾಗಿಲ್ಲ.
ಸಾಧ್ಯವಾದಷ್ಟು ಈ ಬೀದಿಗಳ ಮೇಲೆ
ನನ್ನ ಗಾಲಿಗಳನ್ನು ಉಜ್ಜಿ ಸವೆಸಿದ್ದೇವೆ;
ಈ ಒಂದು ದಿನ, ನಿಂತ ಗಾಲಿಗಳ ಕೀಲುಗಳಿಗೊಂದಿಷ್ಟು
ಎಣ್ಣೆ ಹೊಯ್ಯುತ್ತೇನೆ.
ಎಂಥ ಸೊಗಸಾಗಿದೆ ಕಿಟಕಿಯಾಚೆಗೆ
ನೀಲಿಯಲ್ಲಿ ತೆಳ್ಳಗೆ ತೇಲುವ ಮೋಡ,
ಕೆಳಗೆ ಒಂದೇ ಗುಡ್ಡ, ಗುಡ್ಡದ ಮೇಲೆ
ತಲೆಗೆದರಿ ನಿಂತ ಒಂದೇ ಮರ.
ಎಲ್ಲವೂ ರಜಾ ತೆಗೆದುಕೊಂಡಂತಿದೆ
ಈ ವಿರಾಮ!
ಇಂಥ ಭಾನುವಾರದ ಒಂದು ಕ್ಷಣವನ್ನೆ
ನಿತ್ಯವಾಗಿಸಿಕೊಂಡಿರಬಹುದೆ
ಸಂತ-ಸಿದ್ಧರ ಮನಸ್ಸು?
ಹಾಗೆ ನೋಡಿದರೆ, ಈ ಒಂದು ಕ್ಷಣ
ನಾನು ಒಬ್ಬ ಸಿದ್ಧ
ಅಥವಾ ಸ್ವಲ್ಪ ಕೆಳಗಿನ ಬುದ್ಧ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.