ರಂಗದಿಂದೊಂದಿಷ್ಟು ದೂರ

ನಿನ್ನೆವರೆಗೆ ಜಯಭೇರಿ ಹೊಡೆದ ನಾ
-ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ
ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು
ಇನ್ನೇನುಂಟು?
ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ
ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ
ಹಾಕಿಸಿಕೊಂಡು ಒಬ್ಬಂಟಿ
ಅಲ್ಲಲ್ಲಿ ಹರಡಿ ಬಿದ್ದ ಮೇಕಪ್ ಸಾಮಗ್ರಿ
ತಂಬು ಹರಿದ ಚಿಂದಿ ಲೈಟಿನ ಝರಿ
ಧೂಳು ಹೆಕ್ಕುತ್ತ ಕೂಡ್ರುವ ಬಿಕೋ ಕೆಲಸ
ಮೂಲೆ ಮೂಲೆಯಲ್ಲು ಹರಿದ ನಿದ್ರೆ

ಪ್ರತಿ ಮೌನಕ್ಕು ಮಾತು ತೊಡಿಸಿ ಅರ್ಥ ಕೂಡಿಸುವ
ಡೊಂಬರಾಟ ಸ್ವಲ್ಪ ಗೂಟಕ್ಕಿಟ್ಟು
ಆರಾಮು ಮಾತು ಗುಟುಕುತ್ತ ಬದುಕಿನಾಟ ಆರಂಭಿಸೋಣ
-ವೇ ಅಥವ ಎಲ್ಲವನು ಗುಡಿಸಿ ನೀರೊಲೆಗಿಟ್ಟು
ಕೊಂಚ ಸುಧಾರಿಸಿಕೊಂಡು
ಮತ್ತೆ ಸ್ಟೇಜು ಕಟ್ಟುವ ಹೊಣೆ ಹೊತ್ತುಕೊಳ್ಳೋಣವೇ
ನಾವು ಕಟ್ಟ ಬಲ್ಲೆವು ಮಾತ್ರ ನಟಿಸಲಾರೆವು ಜೀಯಾ
ಯಾಕೆ ಗೊತ್ತ
ನಮಗೆ ಇಲ್ಲದ್ದ ತೊಡಿಸುವುದಕ್ಕಿಂತ ಇದ್ದದ್ದ
ಕಳಚುವುದೇ ಸುಲಭ. ರಂಗಕಿಂತಲೂ ಜಾಸ್ತಿ ನೇಪಥ್ಯ ಗುರ್‍ತು

ಮಂಕು ಕತ್ತಲೆಯಲ್ಲವಯವಗಳ ತಪಾಸಣೆ
ಕಷ್ಟವಲ್ಲವೆ ಮತ್ತೆ ಆದರೂ ತಡವುತ್ತೇವೆ
ತಡವುತ್ತಲೇ ಗಟ್ಟಿಗೊಳ್ಳುತ್ತೇವೆ
ಮತ್ತೆ ಹೀಗೆ ಎಲ್ಲ ಬಿಚ್ಚಿ ಬಿಟ್ಟೆ ಹರಾಜಿಗಿಟ್ಟು
ಕೂಡ್ರುತ್ತೇವೆ ಸಾಯುವುದಿಲ್ಲ
ನಮ್ಮ ಸಮಾಧಾನಕ್ಕಲ್ಲ
ತಬ್ಬಲಿ ತಬಲಾ ಪೀಯನ್ನುಗಳ ಸ್ಥಾಯೀ ಬರಗಾಲಕ್ಕಲ್ಲ
ಗಡಗಡೆಯಿಂಧಡ್ಡುರುಳುವ
ರಾಸ್ತಾ ಹೂ ಪಾರ್‍ಕು ಅರಣ್ಯಗಳಿಗಾಗಲ್ಲ
ಸಾಯಲಿ, ಜಂಗು ಕಬ್ಬಿಣದ ಖುರ್‍ಚಿಗಳಿಗಾಗೂ ಅಲ್ಲ
ಬದುಕಿದ್ದೇನೆ ಎನ್ನುತ್ತೇವೆ
ರಂಗದಿಂದೊಂದಿಷ್ಟು ದೂರ ಕೂತು
ಕನಿಷ್ಠ ಬದುಕಿದಂತೆ ನಟಿಸುತ್ತೇವೆ
ನಮ್ಮ ನಿಸ್ವಾರ್‍ಥ ಸ್ವಾರ್‍ಥಕ್ಕಾಗೇ.
*****