ಅನುಭವ ಇಲ್ಲದ ಕವಿತೆ

ಅನುಭವ ಇಲ್ಲದ ಕವಿತೆ ತಿಂಗಳು
ತುಂಬದ ಕೂಸು ಅವಸರವಸರದಿಂದ
ಉಸಿರಿಗಾಗಿ ವಿಲಿವಿಲಿಸುತ್ತ
ಹೊರ ಬರುತ್ತದೆ ಬಿಸಿಲಿಗೆ

ರಾತ್ರಿ ಅಂಗಡಿ ಮುಚ್ಚಿ
ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ
ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ
ತಪ್ಪಿ ಊಹಾತೀತಗಳ ಪರಸ್ಪರ ಧೈರ್ಯದ ಮೇಲೆ

ಸಂಪರ್ಕ ತಪ್ಪಿದ ವಿಮಾನದಂತೆ ಅಂತರಾಳದಲ್ಲಿ
ಚಡಪಡಿಸುತ್ತದೆ

ಹಳೆಮನೆಯ ಚೆಕ್ಕೆಗಳ ಒಡಕು ಹೆಂಚುಗಳ
ಒರಲೆ ಹತ್ತಿ ಲಡ್ಡಾದ ಜಂತಿಗಳ ತಂತಿಗಳ
ರಾಶಿ ರಾಶಿ ಅವಶೇಷಗಳ ನಡುವೆ ಹುಳು
ಹುಳಿಸಿ ಬೇಯುವ ಇಲಿಯ ಥರ
ಕವಿತೆ ರಕ್ತಕ್ಕಾಗಿ ನೋಯುತ್ತದೆ ತಿವಿದಂತೆ
ಮಾಂಸಕ್ಕಾಗಿ ಕೋಶಕ್ಕಾಗಿ ನರಮಂಡಲಕ್ಕಾಗಿ
ಕಾಯುತ್ತದೆ ಕಾಣದೆ ಹೆದರಿ ಬೆವರುತ್ತದೆ.
ಒಂದೆರಡು ಕಣ್ಣುಗಳ ಕುಕ್ಕಿ ಹೆಸರೆತ್ತಿ
ಅರಚಿ ಕೆಲವರ ಹೊಂದಿಸಿ ಹೊತ್ತಿಸಿ
ತರಕಾರಿ ಪಲ್ಯದಂತೆ ತವೆಯಲ್ಲಿ
ಸುಟ್ಟು ಸೀದು ಮಲೆನಾಡ ಘಟ್ಟ
ದ ದಾರಿಯ ಮೈಲಿಗಲ್ಲಂತೆ ಒಂಟಿ
ಯಾಗಿ ನಿಲ್ಲುತ್ತದೆ

ಹಾಯುವ ವಾಹನದ ಸದ್ದೆ ಈಗ
ಅದರ ಉಸಿರು
ಕಾಣದ ಊರೆ ಹೆಸರು
*****