ಗಳಿಗೆ ಅರೆಗಳಿಗೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಒಂದು ಗಳಿಗೆಯಲ್ಲಿ ನಾನು ಧಗ ಧಗಿಸುವ ಬೆಂಕಿ
ಮತ್ತೊಂದು ಗಳಿಗೆಯಲ್ಲಿ ಭೋರ್ಗರೆವ ಪ್ರವಾಹ

ನನ್ನ ಮೂಲವೆಲ್ಲಿ? ಕುಲವೆಲ್ಲಿ?
ಯಾವ ಸಂತೆಯ ಸರಕು ನಾನು?

ಒಂದು ಗಳಿಗೆಯಲ್ಲಿ ನಾನು ಚಂದ್ರನಿಗೆ ಸಖ
ಮತ್ತೊಂದರಲ್ಲೊ ದೇವರ ಜತೆಗಿನ ಮಹಾ ಕುಡುಕ

ಒಂದು ಗಳಿಗೆಯಲ್ಲಿ ನಾನು ಬಾವಿಯಲ್ಲಿ ಬಿದ್ದ ಜೋಸೆಫ್‌
ಮತ್ತೆ ಒಂದು ಕ್ಷಣ, ನಾನು ಸಂಕಟಗಳ ಪ್ರತಿರೂಪ

ಇಗೊ ಈಗ ನಾನು ದೈತ್ಯವಂಚಕ
ಅರೆಗಳಿಗೆಯಾಚೆಗೆ ನಾನು ಕ್ರುದ್ಧ, ಮಾತಿರದ ಮೂಕ

ಈ ಗಳಿಗೆಯಲ್ಲಿ ನಾನು ಈ ಎಲ್ಲದರಿಂದ ಮುಕ್ತ
ಕಾರಣ, ಆ ಶೃಂಗದ ಕಡೆಗೆ ನಾನೀಗ ಪ್ರಯಾಣಿಕ
*****