ಕಥೆಯ ಜೀವಸ್ವರ

ಜಾದೂಗಾರ, ಬಣ್ಣಬಣ್ಣದ ಕಾಗದಗಳ ಚೂರುಗಳನ್ನು ಬಿಡಿಬಿಡಿಯಾಗಿ ಜಗಿದು ನುಂಗುತ್ತಾನೆ. ನಂತರ ಬಾಯಿಂದ ಎಳೆಯೊಂದನ್ನು ಹಿಡಿದು ಸರಸರ ಎಳೆದಾಗ ಮೀಟರುಗಟ್ಟಲೆ ಬಣ್ಣದ ಚಂದದ ಕಾಗದದ ಸುರುಳಿ ಹೊರಬರುತ್ತಲೇ ಹೋಗುತ್ತದೆ.

ಬರವಣಿಗೆಯ ವಿಸ್ಮಯವೂ ಇಂಥದೇ. ಅಂತಃಕರಣವನ್ನು ಕಲಕಿದ, ಸಂವೇದನೆಯನ್ನು ಹಿಗ್ಗಿಸಿದ ಸಂಗತಿಗಳೆಲ್ಲ ಮನಸ್ಸಿನ ಮೂಸೆಯಲ್ಲಿ ತೆಪ್ಪಗೆ ಮಾಗುತ್ತಿರುತ್ತವೆ. ಕಂಡ, ಕೇಳಿದ ಸಂಗತಿಗಳೂ ಇಲ್ಲಿ ಪಾಕಗೊಳ್ಳುತ್ತಿರುತ್ತವೆ. ವಿಭಿನ್ನ ಅನುಭವಗಳ ಚಿಂದಿಗಳನ್ನಾಯುವ ಈ ಕಾಯಕ ಗುಪ್ತವಾಗಿ ಸಂವೇದನೆಯ ಹದದಲ್ಲಿ ನಡೆಯುತ್ತದೆ. ನಂತರ ಯಾವುದೋ ಪ್ರೇರಣೆಗೆ ಕೆರಳಲ್ಪಟ್ಟ ಎಳೆಯೊಂದನ್ನು ಹಿಡಿದಳೆದರೆ ಸಾಕು, ಆ ನೋಟದ ವಿನ್ಯಾಸಕ್ಕೆ ಸಂಬಂಧಪಟ್ಟ ವಿಭಿನ್ನ ವಿವರಗಳೆಲ್ಲ ಜಾದೂಗಾರನ ಕಾಗದದ ಸುರುಳಿಯಂತೆ ಹೊಂದಿಕೊಂಡು ಹೊರಬರತೊಡಗುತ್ತವೆ. ತರ್‍ಕಾತೀತವಾದ ಒಂದು ಬಂಧದಲ್ಲಿ ಈ ವಿವರಗಳು ಸೆರೆಯಾಗಿರುತ್ತವೆ. ಲೇಖಕ ನಡುವೆ ತಲೆಹಾಕಿದರೆ ಈ ಎಳೆ ತುಂಡಾಗಲೂಬಹುದು. ಆಗ ಮತ್ತೆ, ಹುರಿಹಾಕುವ ಕೆಲಸ.

ಕಥೆಗೆ ಅದರ ಸ್ವರ ಒದಗಿಬರುವುದು ಹೇಗೆ? ಸುಮಾರಾಗಿ ಹೇಳುವುದಾದರೆ ನಮ್ಮ ಮನಸ್ಸಿಗೆ ಬರಲು ವಿವರಗಳಿಗೆ ಎರಡು ದಾರಿಗಳಿವೆ. ಒಂದು, ತಲೆಯ ಮುಖಾಂತರ, ಹೀಗೆ ಬಂದವು ಒಂದು ಬಗೆಯ ವೃತ್ತ ಪತ್ರಿಕೆಯ ಸುದ್ದಿಯ ರೂಪದಲ್ಲಿರುತ್ತವೆ. ಈ ಮಾರ್‍ಗ ಎಲ್ಲಾ ವಿದ್ಯಮಾಗಳನ್ನು ಅತ್ಯಂತ ಎಚ್ಚರದಿಂದ ‘ಬೌದ್ಧಿಕ ಮಾಹಿತಿಯಾಗಿಸುತ್ತಿರುತ್ತದೆ. ಕಂಬಾಲಪಳ್ಳಿಯಲ್ಲಿ ಸತ್ತವರ ಸಂಖ್ಯೆ, ಕೊಂದವರ ಜಾತಿ, ಭಸ್ಮಗೊಂಡ ಆಸ್ತಿ ಪಾಸ್ತಿಯ ಕರಾರುವಾಕ್ಕಾದ ಬೆಲೆ, ಸಂತಾಪ ಸೂಚಿಸಲು ಬಂದವರ ಹೇಳಿಕೆಗಳು… ಇತ್ಯಾದಿ.

ಇನ್ನೊಂದು, ಒಳ ದಾರಿ. ಇಲ್ಲಿ ಒಂದ ಸನ್ನಿವೇಶ, ಸಂಗತಿ ಅಥವಾ ವಿಚಾರವನ್ನು ಮಾನವೀಯ ನೆಲೆಯಲ್ಲಿ ‘ಅನುಭವಿ’ಸುತ್ತೇವೆ. ಕಂಬಾಪಳ್ಳಿಯಲ್ಲಿ, ಗತಿಸಿದ ಗಂಡನ ಅಂಗಿಯೊಂದನು ಎದೆಗವಚಿಕೊಂಡು ಮೌನವಾಗಿ ಕೂತಿರುವ ಹೆಂಗಸು, ಸಂತಾಪ ಸೂಚಿಸಲೆಂದು ಬಂದವರ ಬೆವರು ಒರೆಸಲೆಂದು ಕರ್ಚೀಫಿಗಾಗಿ ಜೇಬಿಗೆ ಕೈಹಾಕಿದಾಗ-ವಿಚಿತ್ರವಾದ ಆಸೆಯಿಂದ ಚುರುಕಾಗುವ ಸಂತ್ರಸ್ತರ ಕಣ್ಣುಗಳು… ನಮ್ಮನ್ನು ಕಾಡುವ ಸಂಗತಿಗಳಾಗುತ್ತವೆ. ವಿಸ್ತೃತ ಮಾನವೀಯ ತಳಮಳದಲ್ಲಿ ನಮ್ಮನ್ನು ಅಲ್ಲಾಡಿಸಿಬಿಡುವ ಈ ದೃಶ್ಯಗಳು ಬರೇ ವಿವರಗಳಾಗುವುದಿಲ್ಲ, ನಮ್ಮ ಒಳಬಾಳುವೆಯ ಭಾಗವಾಗತೊಡಗುತ್ತವೆ. ಇವು ತಕ್ಕ ಕಾಲಕ್ಕೆ, ತಕ್ಕ ಪ್ರೇರಣೆಗೆ ಮೇಲೆದ್ದು ಒದಗಿ ಬಂದು ನಮ್ಮ ಬರವಣಿಗೆಗೆ ಭಾವಾರ್‍ಥ ತುಂಬಿ ಜೀವಂತವಾಗಿಸುತ್ತವೆ.

ಪ್ರವಾಸಿಗರಿಗೆ ತೋರಿಸುತ್ತಿರುವಾಗ ತಾನೂ ಮೊದಲ ಬಾರಿಗೆ ನೋಡುತ್ತಿರುವ ಟೂರಿಸ್ಟ್ ಗೈಡ್‌ನಂತೆ ಇರುತ್ತಾನೆ, ಕತೆಗಾರ. ಈತ ಈಸು ಕಲಿಯುತ್ತಲೇ ನದಿ ದಾಟುವ ಈಜುಗಾರ. ಈತ ವಿನಮ್ರನಾದಷ್ಟೂ, ಪರವಶನಾದಷ್ಟೂ ಒಳ ಬಾಗಿಲುಗಳು ತೆರೆಯತೊಡಗುತ್ತವೆ. ಅನಾಮಿಕನಾದಷ್ಟೂ ಅವನ ವಿಶ್ವ ವಿಶಾಲವಾಗುತ್ತದೆ.

ಇತ್ತೀಚಿನ ಕತೆಗಳನ್ನು ನೋಡಿದಾಗ ‘ಕತೆಗಳ ಫಾರ್‍ಮುಲಾ’ ಒಂದು ತಯಾರಾಗಿಹೋಗಿದೆ ಎಂಬ ಆತಂಕವಾಗುತ್ತಿದೆ. ಒಣ ವೈಚಾರಿಕತೆಯಿಂದ ವೃತ್ತಪತ್ರಿಕೆಯ ಸುದ್ದಿಯ ನೆಲೆಯಲ್ಲಿ ಬದುಕನ್ನು ನೋಡುವುದೇ ‘ಸಾಮಾಜಿಕತೆ’, ಸರಳತೆ-ಸ್ಪಷ್ಟತೆಗಳನ್ನು ಬೇಕೆಂತಲೇ ತ್ಯಜಿಸಿ ಭಾಷಿಕ ನೆಲೆಯಲ್ಲಿ ಗಹನವಾಗಿ ಬರೆಯುವುದೇ ‘ಗಹನತೆ’, ಸೂಕ್ಷ್ಮ-ಸರಳ ಸಂಗತಿಗಳನ್ನು ಬರೆದರೆ ಅದು ‘ಭಾವುಕತೆ’- ಎಂಬಂಥ ಕೆಲ ಮೂಢನಂಬಿಕೆಗಳು ನೆಲೆಯೂರುತ್ತಿರುವಂತೆ ತೋರುತ್ತಿದೆ. ಒಬ್ಬ ನಡುವಯಸ್ಸಿನ ಪಾಲಕನಿಗೆ ಶಾಲೆಗೆ ಹೋಗುತ್ತಿರುವ ತನ್ನ ಮಕ್ಕಳ ಕುರಿತಾಗಿ ಇರುವ ಮಮತೆಯನ್ನೋ, ಭ್ರಷ್ಟ ತಂದೆತಾಯಿಗಳಿಂದಾಗಿ ಮನೆಯ ರೂಪವೇ ಬದಲಾಗುವಾಗ ಹದಿಹರೆಯದ ಮಕ್ಕಳು ಅನುಭವಿಸುವ ಮೂಕ ತಳಮಳವನ್ನೋ – ಬಿಂಬಿಸುವ ಕತೆಗಳ್ಯಾಕೆ
ಬರುತ್ತಿಲ್ಲ? ಇಡೀ ದಿನ ಕ್ರಿಮಿನಲ್ ಗಳ ಜೊತೆಗೇ ಇದ್ದು ಪ್ರತೀ ಸಂಜೆ ತನ್ನ ಕುಟುಂಬಕ್ಕೆ ಮರಳುವ ಪೊಲೀಸನೊಬ್ಬನ ದಾರುಣ ದ್ವಂದ್ವಗಳೇಕೆ ನಮ್ಮ ಕಥೆಗಳಿಗೆ ವಸ್ತುವಾಗುತ್ತಿಲ್ಲ? ತೀವ್ರವಾದ ಒಳ ಬಾಳಿನಿಂದ ಹೊಮ್ಮಬೇಕಾದ ಸಾಹಿತ್ಯ ಬರೇ ತಲೆಯಿಂದ ಹೊರಟಿದ್ದರಿಂದ ಹೀಗಾಯಿತೆ? ಅಥವಾ ಒಳದಾರಿಗಳನ್ನು ನಾವು ಬೇಕೆಂತಲೇ ಮುಚ್ಚಿಕೊಂಡಿದ್ದೇವೆಯೆ?

ಬದುಕಿನಲ್ಲಿ ನಮ್ಮ ರುಚಿ, ಬೆರಗು, ಮನೋಮೌನ ಹೆಚ್ಚಿದಾಗಲೇ ನಮ್ಮ ಬರವಣಿಗೆಯ ಗುಣಮಟ್ಟ ಹೆಚ್ಚುವುದು ಸಾಧ್ಯ. ಪಿಕಾಸೋನನ್ನು ನಿನ್ನ ಆದರ್‍ಶ ಯಾರು ಅಂತ ಕೇಳಿದಾಗ ‘ಮಗು’-ಎಂದನಂತೆ. ಚಾಪ್ಲಿನ್ ಮಗುವಿಗೆ ಒಂದು ಬಕೆಟ್ ನೀರು, ಸಾಬೂನು ಕೊಡಿ ಮತ್ತು ಬಚ್ಚಲಲ್ಲಿ ಬಿಟ್ಟುಬಿಡಿ. ಆಗ ನೋಡಿ ನೊರೆಯಲ್ಲಿ ಮೂರು ಲೋಕವನ್ನೂ ಸೂರೆ ಮಾಡಬಲ್ಲ ಅದ್ಭುತ ಕಲಾವಿದನನ್ನು’ ಎಂದನಂತೆ.

ಕತೆಗಾರ ಬರವಣಿಗೆಯ ಹಂಗಿಲ್ಲದೆ ತೀವ್ರವಾಗಿ, ತನ್ನ ಇರವನ್ನು ‘ಅನುಭವಿ’ಸಬೇಕಾದ್ದು ಮುಖ್ಯ. ತನ್ನದೇ ಆದ ಒಂದು ನಚ್ಚುಗೆಯ restless ಭಾವಪ್ರಪಂಚವನ್ನು ಅತ್ಯಂತ ಏಕಾಂಗಿಯಾಗಿ ಆತ ಕಟ್ಟಿಕೊಳ್ಳಬೇಕು. ಸುತ್ತಣ ಜೀವ ಜಾಲದೊಂದಿಗೆ ಅತ್ಯಂತ ಖಾಸಗಿಯಾದ, ಮೌನದ ನಂಟೊಂದು ಆತನೊಳಗೆ ರೂಪುಗೊಳ್ಳಬೇಕು. ನಂತರವೇ ಒಳಗಿನ ಸಹಜಸ್ವರಗಳು ಅವನ ಬರವಣಿಗೆಯಲ್ಲೂ ಹೊಮ್ಮಿಯಾವು.
*****

ಭಾವನಾ ಏಪ್ರಿಲ್ ೨೦೦೦

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.