ಪಾಂಚಾಲಿಯ (ಷಷ್ಠಮ) ಪುರುಷ

ಅತ್ತೆ ಗಾಂಧಾರಿಯ
ದರುಶನಕೆಂದಿಂದು ಹೋದಾಗ
ಮತ್ತೆ ಕಂಡೆ (ನಾ) ಅವನನ್ನ
ಅವರ ಪಾದಕೆ ಮೈಮಣಿಯಲು,
ಅವನ ಪಂಚೆಯ ಅಂಚು ತಾಕಿ
ಮಿಂಚು ಹೊಡೆಯಿತು,
ನೂರ್ಮನ.

ಬೇಡವೆಂದರೂ
ತೆರೆತೆರೆದು ಹರಿದಾಡಿದವು
ಕಣ್ಗಳು
ಅವನೆದೆಯ ಬಯಲಲ್ಲಿ.
ಎಲ್ಲ ಕೇಳುವಂತೆ ಕೂಗಿಟ್ಟವು
ಆ ಭುಜಶೃಂಗಗಳನ್ನೇರಿ.

ದುಂಬಿಯಾದವು
ಕೊಳದಲಿ ನಳನಳಿಸುವ
ನೇತ್ರಕಮಲಗಳ ನೋಡಿ,
ಹಕ್ಕಿಯಾಗಿ ಹಾರಿದವು
ಕತ್ತಿನಡಿಗಿಳಿದ ಮೇಘಮೋಡಿಗೆ
ಭಾಸ್ಕರ ನಗುವ
ಆ ಆಗಸದ ಹಣೆಯ ನೋಡಿ.

ಎತ್ತ ಹೊರಳಿದರೂ ಚುಚ್ಚುತಿದೆ
ನನ್ನ ಹಸಿಮನದಲಿ ನೆಟ್ಟ
ಅವನ ಠೀವಿಯ ಹರಳು.
ಕಳೆಯಬಲ್ಲೆನೆ ನಾನು?
ಮಿಡಿವ ನೋವಿನೊಡನೆ
ಈ ಹಾಳು‌ಇರುಳು

ಅಂದು ಸ್ವಯಂವರದಿ,
ಸೂರ್ಯಪುತ್ರಕಳೆಯ ಅವನನು
ಸೂತಪುತ್ರನೆಂದೆನೆ ನಾನು?
ಅಣ್ಣನ ಸಂಜ್ಞೆಗೆ
ಅಪ್ಪನ ಬಿರುನೋಟದೀಟಿಗಂಜಿ
ಮನ ನುಡಿದ್ದನ್ನುಡಿಯದೇ
ಇನ್ನೇನೋ, ಏನೇನೋ
ಒದರಿತು ನಾಲಿಗೆ.

ಅವ್ವನ ಸೂಚನೆಯಂತೆ
ನಾಚಿಕೆಯಿಲ್ಲದೆ ಹಂಚಿಕೊಂಡರು
ಈ ನೀಚ ‘ಪಂಚ’ರು.
ಮನವಿಲ್ಲದೇ ಮೈಕೊಟ್ಟವಳಿಗೆ
-ಟುಕಲಾರನೆ?
ಮೈಮನಗಳೆರಡೂ ಬಯಸುವ
ಆ ಶ್ರೇಷ್ಠ ಷಷ್ಠಮನು.


೯ ಮಾರ್ಚ ೧೯೯೮

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.