ಶಾಮಣ್ಣ – ೫

ಪಂಚಮಾಶ್ವಾಸಂ

ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ ಇನ್ನೊಬ್ಬರು ತನ್ನ ಪಾದಗಳಿಷ್ಟಿರಬೇಕು ಎಂದು ಭಾವಿಸುವವನಾದ ಅವನು ಕೊತ್ತಲಿಗಿಗೆ ಮಾಡಿದ ದೊಡ್ಡ ಉಪಕಾರವೆಂದರೆ ಬ್ಯಾಂಕು ಮುಂಜೂರು ಮಾಡಿಸಿದ್ದು. ದಲಿತರು, ಶೂದ್ರರು, ದೇವದಾಸಿಯರು, ರಂಗಕಲಾವಿದರೇ ಬಹುಪಾಲು ವಾಸಿಸುತ್ತಿರುವ ಸೋಮವಾರಪೇಟೆ, ಶನಿವಾರಪೇಟೆ, ಅಂಬೇಡಕರ ನಗರ, ಇಂದಿರಾನಗರ ಇಂಥ ಒಂದೊಂದು ಓಣಿಗೂ ಒಬ್ಬೊಬ್ಬರಂತೆ ಇರುವ ಅಮರ ಅಕ್ಬರ ಅಂಥೋಣಿ ಮುಂತಾದ ಪಿಗ್ಮಿ ಕಲೆಕ್ಟರುಗಳು ಸಂಗ್ರಹಿಸಿ ತಂದು ಕಟ್ಟುವ ಹಣವನ್ನೇ ಸದರಿ ಗ್ರಾಮದ ಸೀನಪ್ಪ, ಯಂಟೇಸಪ್ಪ, ಉಮೇಚಪ್ಪ ಮೊದಲಾದ ಸಿರಿವಂತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದು ಅವರು ಅದನ್ನೇ ಹೆಚ್ಚಿನ ಬಡ್ಡಿ ದರದಲ್ಲಿ ಸೋಮವಾರಪೇಟೆ, ಶನಿವಾರಪೇಟೆ ಮೊದಲಾದ ಕಡೆ ವಾಸಿಸುತ್ತಿರುವ ಶ್ರಮಿಕರಿಗೆ ಸಾಲ ಕೊಡುವುದು. ಹೀಗಾಗಿ ಆ ಬ್ಯಾಂಕು ಬಂದಂದಿನಿಂದ ಬಡವರ ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಿದೆ. ಅದಕ್ಕಾಗಿ ಶ್ರಮಿಸುವ ಮತ್ತು ದೇಶಾವರಿ ನಗೆಯನ್ನು ಗಾಳ, ದಾಳ ಎರಡೂ ಮಾಡಿಕೊಂಡಿರುವ ಬ್ಯಾಂಕಿನ ಸ್ಟಾಫು ಒಂದೇ ಮರದ ಎರಡು ಕೊಂಬೆ ರೆಂಬೆಗಳಂತಿರುವುದು. ಆ ಮರದ ಕಾಂಡವೇ ಮ್ಯಾನೇಜರು.

ಜವಾನ ಕಂ ಅಟೆಂಡರನಾಗಿರುವ ಓಬಯ್ಯ ಆ ಬ್ಯಾಂಕಿಗೇನೆ ಒಂದು ಹಾರ್ಟ್ ಇದ್ದಂತೆ. ಸೋಮವಾರಪೇಟೆಯ ಎಸ್. ಎಸ್.ಎಲ್.ಸಿ ಪದವಿಯನ್ನು ಏಳನೆ ಅಟೆಂಪ್ಟಿಗೆ ಪಡೆದವನೂ, ಹುಣಸೇಮರದ ಮನೆಯ ಓಬವ್ವ ಅಲಿಯಾಸ್ ಅನಾರ್ಕಲಿಯ ಮೊಮ್ಮಗನೂ ವಿಟಪುರುಷನೊಂದಿಗೆ ನಡೆದ ಮಾರಾಮಾರಿಯಲ್ಲಿ ಎಡಗಾಲಿನ ಮೂರು ಬೆರಳುಗಳನ್ನುಕಳೆದುಕೊಂಡವನೂ, ಡಿಸ್ಟ್ರಿಕ್ಟ್ ಹೆಲ್ತ್ ಆಫೀಸರ್ ಡ್.ರಾಜೇಂದ್ರಗುಪ್ತ ಎಂ.ಬಿ.ಬಿ.ಎಸ್., ಎಂ.ಎಸ್., ಅವರ ಕೈ ಬೆಚ್ಚಗೆ ಮಾಡಿ ಅಂಗವಿಕಲನೆಂದು ಸರ್ಟಿಫಿಕೇಟ್ ಪಡೆದು ಆ ಆಧಾರದ ಮೇಲೆ ನೌಕರಿಗೆ ಸೇರಿದಂಥವನೂ, ಇಲಿಯನ್ನು ಹುಲಿಯನ್ನಾಗಿಯೂ; ಹುಲಿಯನ್ನು ಇಲಿಯಾಗಿಯೂ ಮಾಡುವುದರಲ್ಲಿ ನಿಸ್ಸೀಮನೂ ಆದಂಥ ಅವನು ಮಿರಿಮಿರಿ ಮಿಂಚುವ ಬುಷ್‌ಷರ್ಟ್ ಪ್ಯಾಂಟು ತೊಟ್ಟುಕೊಂಡು ಹುಣಸೆ ಮರದ ಮನೆಯಿಂದ ಹೊರಬಿದ್ದು ಖಲೀನನ ಪಾನ್ ಶಾಪಿನಲ್ಲಿ ಪಡೆದ ತ್ರೀಹಂಡ್ರಡ್ಡನ್ನು ದವಡೆಯಲ್ಲಿ ಪ್ರತಿಷ್ಟಾಪಿಸಿಕೊಂಡು ಶನಿವಾರ ಪೇಟೆಯಲ್ಲಿ ಹತ್ತು ಸಾರಿ ಕೊಟ್ಟೆಲಪ್ಪನ ತೇರು ಬಜಾರದಲ್ಲಿ ಐದುಸಾರಿ, ನಂತರ ಬರುವ ಬಸ್‌ಸ್ಟಾಂಡಿನಲ್ಲಿ ಮೂರು ಸಾರಿ ಪಿಚುಕು ಪಿಚುಕು ಅಂತ ಉಗುಳಿ ಭೂಮ್ತಾಯಿರುಣಾ ತೀರಿಸುತ್ತ, ತೊಂಬೂಲದುಂಡೆಯನ್ನು ಮುನುಸೋಬರ ಮನೆ ಮುಂದಿರುವ ಮಾತ್ಮಾಗಾಂಧಿಯವರ ಕಾಲಬುಡಕ್ಕೆ ಉಗುಳಿ ಹತ್ತೂಕಾಲಿಗೆಲ್ಲ ಬ್ಯಾಂಕು ಸೇರಿಕೊಂಡು ಬರುವವರನ್ನು ಮಾವಂದಿರಂತೆಯೂ, ಹೋಗುವವರನ್ನು ಅಳಿಯರಂತೆಯೂ ಸಂಭೋದಿಸುತ್ತ ಇಡಿ ಬ್ಯಾಂಕಿನಲ್ಲಿ ತುಂಬ ಜನಪ್ರಿಯ ವ್ಯಕ್ತಿಯಾಗಿರುವನು.

ಮೀಸಲಾತಿ ಆಧಾರದ ಮೇಲೆ ಬಿ.ಎ., ಪಾಸು ಮಾಡಿ ನೌಕರಿಗೆ ಸೇರಿರುವ ಟಿ.ಎಂ.ಕೆ. ವಿಶ್ವೇಶ್ವರನು (ಅಂದರೆ ತೂಲಹಳ್ಳಿ ಮಾದಿಗರ ಕರಿಯಪ್ಪನ ಮಗ ವಿಶ್ವೇಶ್ವರ) ಲಟಿಗಾಪುಟಿಗಾ ಲೂನಾದ ಮೇಲೆ ವಯಾ ಬಡೇಲಡುಕು ಮೂಲಕ ತೂಲ ಹಳ್ಳಿಯಿಂದ ಅಪ್ ಅಂಡ್ ಡೌನು ಮಾಡುತ್ತಿದ್ದರೆ, ಜಮಾತೇ ಇಸ್ಲಾಮಿನ ಹೊಸಪೇಟೆ ವಿಭಾಗದ ಸಂಚಾಲಕರ ಮಗನಾದ ಇಸ್ಮಾಯಿಲು ಮಾದೇದೇವಿ ಮೂಲಕ ಅಂಡ್ ಡೌನ್ ಮಾ‌ಉತ್ತಿರುವನು. ಕುಪ್ಪಿನಕೇರಿ ಲಿಂಗಾಜನೇಯನ (ಹದಿನಾರನೆ ಶತಮಾನದಲ್ಲಿ ಕುಂತಳ ನಾಡಿನ ಪಂಚಗಣಾಧೀಶ್ವರರಾದ ಕೊಟ್ಟೂರಿನ ಕೊಟ್ಟೂರೆಶ್ವರರ, ನಾಯಕನ ಹಟ್ಟಿ ತಿಪ್ಪ್ರುದ್ರಸ್ವಾಮಿ, ಕೂಲಹಳ್ಳಿ ಮುದ್ಧಾನೇಶ, ಅರಸೀಕೆರೆಯ ಕೋಲ ಶಾಂಟೇಶ, ಹರಪನಹಳ್ಳಿ ಕೋಲ ಶಾಂತೆಶರು ಅದೇ ತಾನೆ ಹಾಳಾದ ಹಂಪೆಯಿಂದ ತಂತಮ್ಮ ಕಾರ್ಯಕ್ಷೇತ್ರಗಳಿಗೆ ಹೊರಟು ಹಾದಿ ಮಧ್ಯೆ ಬಂದ ಕುಪ್ಪಿನಕೇರಿ ಗ್ರಾಮದಲ್ಲಿ ತಂಗಿದರು. ತಮ್ಮನ್ನು ಸತ್ಕರಿಸಲೆಂದು ಬಂದ ಗ್ರಾಮಕಾಧಿದೇವತೆಯಾದ ಆಂಜನೇಯನ ಕೊರಳಲ್ಲಿ ಲಿಂಗವಿರದಿರುವುದನ್ನು ನೋಡಿ ಖೇದಗೊಂಡರು. ಲಿಂಗಾಂಗಿಯಲ್ಲದವರಿಂದ ಸತ್ಕಾರ ಸ್ವೀಕರಿಸಲು ನಿರಾಕರಿಸಿದರು. ಆಗ ಬೇರೆ ದಾರಿ ಕಾಣದೆ ಒಪ್ಪಿಕೊಂಡ ಆಂಜನೇಯನಿಗೆ ಲಿಂಗಧಾರಣೆ ಮಾಡಿದರು. ಅಂದಿನಿಂದ ಲಿಂಗಾಂಜನೇಯನೆಂದು ಹೆಸರಾಗಿ ವೀರಶೈವರಿಂದ ಪೂಜಿಸಿಕೊಳ್ಳತೊಡಗಿದನು. ಪ್ರಪಂಚದಲ್ಲಿ ತನ್ನ ಆಂಜನೇಯನೊಂದೇ ಲಿಂಗ ಧರಿಸಿರುವುದೆಂಬ ಹೆಗ್ಗಳಿಕೆಯಿಂದ ಕುಪ್ಪಿನಕೆರಿಯ ಒಂದೊಂದ್ಹೊತ್ತಿಗೂ ಪರದಾಡುತ್ತಿರುವ ಸದ್ಭಕ್ತ ಗಣಂಗಾದಿಗಳು ಬೀಗುತ್ತಿರುವರು) ಅರ್ಚಕನೂ, ಬಿಪಿ‌ಎಮ್ಮೂ, ಮತ್ತಿಸ್ಕೂಲು ಟೀಚರೂ, ವಾಲ್ಮೀಕಿ ಸಂಘದ ಗೌರವಾಧ್ಯಕ್ಷರೂ, ಅಸ್ತ್ಮಾ ರೊಗಿಗಳು ಆದಂಥ ಗರಡಿ ಮನೆ ಹನುಮಂಥಯ್ಯನವರ ಪಂಚಮ ಸುಪುತ್ರಿ ಕುಮಾರಿ ಜಿ.ಎಂ. ಶಾಂತಿ ಮೇರಾಲಾಂ ಮೂಲಕ ಅಪ್ ಅಂಡ್ ಡೌನ್ ಮಾಡುತ್ತಿರುವಳು.

ನುಗ್ಗೇಹಳ್ಳಿ ಪೀಠದ ಜಗದ್ಗಿರುಗಳ ಅಂತರಂಗದ ಬಂಟರೆಂದೇ ಖ್ಯಾತರಾಗಿರುವ ಪ್ರಭು ಒಡೆಯರ ಮಠದ ಚಂಬಸ್ಯನವರು ಕೊತ್ತಲಿಗಿಗೆ ಅಪ್ ಅಂಡ್ ದ‌ಊನ್ ಮಾಡಲು ಸೆಕೆಂಡ್ಯಾಂಡು ಬಜಾಜ್ ಸೂಪರು ಮಾಡಿಕೊಡಿರಿವರು.
ರಾಷ್ಟ್ರೀಯ ಸ್ವಯಂ ಸೇವಾ ದಳದ ಕಾರ್ಯಕರ್ತರೂ; ಅತಲ್ ಬಿಹಾರಿ ವಾಜಪೇಯಿಗಳ ಉಗ್ರಾಭಿಮಾನಿಗಳೂ ಆದಂಥ ಗೋವಿಂದಾಚಾರ್ಯರು ಹೀರೋಹೋಂಡಾದ ಮೂಲಕ ಹೊಸಪೇಟೆಯಿಂದ ಅಪ್ ಅಂಡ್ ದೌನ್ ಮಾಡುತ್ತಿರುವರು. ಶ್ರೀಯುತ ಹೆಬ್ರಿಯವರು ಬಾಬ್ರಿ ಮಸೀದಿ ಕೆಡವಲೆಂದು ಅಯೋಧ್ಯೆಗೆ ಹೋಗಿ ಅಲ್ಲಿಂದ ಮಸೀದಿಯ ಇಟ್ಟಿಗೆಯ ಚೂರು ತಂದು ತಮ್ಮ ಮನೆಯ ಮುಂದೆ ಸಾರ್ವಜನಿಕವಾಗಿ ವೀಕ್ಷಣೆಗೆ ಇರಿಸಿದ್ದರು. ನರರೂಪ ರಾಕ್ಷಸನೂ; ಹಿಟ್ಲರನ ಆಂತರಂಗಿಕ ವ್ಯಕ್ತಿಯೂ ಆದಂಥ ಷಿಂಡ್ಲರ್ ಸಮಾಧಿ ಕಡೆ ಯಹೂದಿಗಳು ತಿರಸ್ಕಾರದಿಂದ ನೋಡುತ್ತಿದ್ದರಲ್ಲ ಹಾಗೆಯೇ ರಾಮಜನ್ಮಭೂಮಿ ಕಾರ್ಯಕರ್ತರು ನೋಡಿ ಖುಷಿಪಟ್ಟರು. ಹೆಬ್ರಿಯವರು ಆ ಇಟ್ಟಿಗೆ ತುಂಡನ್ನು ಇಕ್ಬಾಲ್ಕೇರಿಯೊಳಗೆ ಮೆರವಣಿಗೆ ಮಾಡಿಸಿ ಲಾಲಕ್ರಿಷ್ಣ ಅದ್ವಾನಿಯವರ ಗಮನ ಸೆಳೆಯಲು ಪ್ರಯತ್ನಪಟ್ಟರಾದರೂ ಪೊಲಿಸ್ ಅಧಿಕಾರಗಳ ಸಕಾಲಿಕ ಎಚ್ಚರದಿಂದಾಗಿ ಅದು ಸಾಧ್ಯವಾಗಲಿಲ್ಲ. ಹೋದೋರು, ಬಂದೋರಿಗೆಲ್ಲ ತಾವು ತಾವು ಫೋಟೊ ತೋರಿಸುತ್ತ ಉ.ಪ್ರ.ಮು.ಮಂ.ಕಲ್ಯಾಣಸಿಂಗ್ ಯಾದವರ ಜೊತೆ ತೆಗೆಸಿಕೊಂಡ ಈಸ್ಟ್ಮನ್ ಕಲ್ಲರು ತಾವು ಫೋಟೊ ತೋರಿಸುತ್ತ “ನಿಜವಾದ ಮುಖ್ಯಮಂತ್ರಿ ಅಂದ್ರೆ ನೋಡಿ ಮಾರಾಯ್ರೆ… ಅಂಥೋರು ನಮ್ಮ ಮುಖ್ಯಮಂತ್ರಿ ಆದಾಗ ಮಾತ್ರ ಕರ್ನಾಟಕದ ಉದ್ಧಾರ ಸಾಧ್ಯ ಎಂದೋ, ಶ್ರೀರಾಮ ಕರ್ನಾಟಕದಲ್ಲಿ ಹುಟ್ಟಿದ್ದರೆ ಆ ಕಥೆಯೇ ಬೇರೆ ಆಗ್ತಿತ್ತೆಂದೋ ಹೇಳುತ್ತಿದ್ದರು. ಬಾಬ್ರಿ ಮಸೀದಿಯನ್ನೂ, ಮುಸ್ಲಿಮ್ಮರನ್ನೂ ಬಯ್ದವರಿಗೆ ಮಾತ್ರ ಸಾಲ ಮುಂಜೂರುಮಾಡುವರು. ಈ ಕಾರಣದಿಂದಾಗಿ ಹಲ್ಲು ಸಂಧಿಯಲ್ಲಿ ಕಡ್ಡಿ ತೂರಿಸುವುದನ್ನು ಅಬ್ಯಾಸ ಮಾಡಿಕೊಂಡಿರುವ ಮೇನೇಜರ್ ಹೆಬ್ರಿ ಗೋವಿಂದಾಚಾರ್ಯರಿಗೂ; ಅಲಗಾಡುತ್ತಿರುವ ಮೇಲ್ದವಡೆಯ ಮುಂಬಾಗದ ಹಲ್ಲಿನ ಹಿಂದೂ ಮುಂದೂ ಜಿಹ್ವಾ ಸಂಚಲನ ಮಾಡುವ ಜಮಾತೆ ಇಸ್ಲಾಮಿನ ಔರಸಪುತ್ರ ಇಸ್ಮಾಯಿಲರಿಗೂ ಸದಾ ಎಣ್ಣೆ ಸೀಗೇಕಾಯಿ ಸಂಬಂಧ. ಗಿರಾಕಿಗಳನ್ನೂ, ಜನರನ್ನೂ ಪರಸ್ಪರ ವಿರುದ್ಧ ಎತ್ತಿಕಟ್ಟುವುದರಲ್ಲಿಯೇ ಅರ್ಧಾಯುಷ್ಯ ಕಳೆದಿರುವ ಇವರು ತೋರಿಕೆಗೆ ಸದಾ ಮುಗುನಗುತ್ತಲಿರುವರು. ರಾಜಕೀಯ ಬೆಂಬಲವಿಲ್ಲದಿದ್ದರೆ ಅವರು ಮಥುರೆಯ ಯಾದವರಂತೆ ಪರಸ್ಪರ ಹೊಡೆದಾಡಿಕೊಂಡು ಸಾಯುವರೆ? ಆದರೆ ಸ್ಥಳೀಯ ರಾಜಕಾರಣಿಯಾದ ಗುಲಾಂನಬಿಯ ‘ದು‌ಆ’ ಇಸ್ಮಾಯಿಲರ ಮೇಲೂ, ಕರಣಂ ಸೇತೂ ಮಾಧವಾಚಾರ್ಯ ಹಿರಿಯ ಕಾಂಗ್ರೆಸ್ ಮುಖಂಡರ (ಹರಪನಹಳ್ಳಿಯ ಕರಣಂಗಾರಿ ಓಣಿಯಲ್ಲಿರುವ ಅವರ ಮನೆಯಲ್ಲಿ ಅವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲರೊಂದಿಗೆ ತೆಗೆಸಿಕೊಂಡಿರುವ ಬ್ಲಾಕ್ ಅಂಡ್ ವೈಟ್‌ಭಾವಚಿತ್ರವನ್ನು ಇಂದಿಗೂ ನೋಡಬಹುದಾಗಿದೆ) ‘ಧೀರ್ಘಾಯುಷ್ಮಾನ್ ಭವ’ ಎಂಬ ಆಶೀರ್ವಾದ ಹೆಬ್ರಿಯವರ ಮೇಲಿರುವುದು.

ಅವರೀರವರನ್ನು ಕೂಳು ನೀರು ದೊರಕದ ಊರಿಗೆ ಎತ್ತಂಗಡಿ ಮಾಡಿಸಿ ಅವರ ಜಾಗದಲ್ಲಿ ವೀರಶೈವ ಜಂಗಮ ಕೋಮಿಗೆ ಸೇರಿದವರನ್ನು ತರಲೋಸುಗ ಶ್ರೀಯುತ ಪಿ.ಎಂ.ಚಂಬಸಯ್ಯನವರು ಜಗದ್ಗುರುಗಳ ಮೂಲಕ ಮಾಡುತ್ತಿರುವ ಪ್ರಯತ್ನ ಇದುವರೆಗೂ ನೆರವೇರಿಲ್ಲ.

ಹದಿನೇಳು ವರ್ಷಗಳಲ್ಲಿ ಹಿಂದೆಯೇ ಋತುಮತಿಯಾಗಿದ್ದು ಅವಿವಾಹಿತೆಯಾಗಿ ಉಳಿದಿರುವ ಕು.ಜಿ.ಎಂ.ಶಾಂತಿಯವರಿರದಿದ್ದಲ್ಲಿ ಆ ಬ್ಯಾಂಕು ಎಂದೋ ಸರಯೂ ನದಿಯ ತಟವಾಗಿರುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ವಿವಾಹವೇ ದುಃಖಕ್ಕೆ ಮೂಲ ಎಂದು ವಾದಿದುವ ಉಗ್ರ ಸ್ತ್ರೀವಾದಿಯಾಗಿರುವ ಆಕೆ ಸ್ಲೀವ್ಲೆಸ್ ಬ್ಲೌಜು ತೊಟ್ಟು; ಹೊಕ್ಕಳ ಮತ್ತು ಕಿಬ್ಬೊಟ್ಟೆ ಕಾಣಿವಂತೆ ಪಾರದರ್ಶಕ ಸೀರೆ ಉಟ್ಟು ಬರುವ ಆಕೆ ಜೂನಿಯರ್ ಸಿಲ್ಕ್ ಸ್ಮಿತಾ ಎಂದೇ ಹೆಸರಾಗಿರುವಳು… ಆಕೆಯಿಂದಾಗಿಯೇ ಸದರೀ ಬ್ಯಾಂಕಿನ ಠೇವಣಿ ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆಯಾಗಿರುವುದು. ಎಂಥ ಘೇಂಡಾಮೃಗವೂ ಆಕೆಯತ್ತ ಮುಗುಳುನಗೆ ಚೆಲ್ಲದೆ ಇರದು. ಮೇನೇಜರು ಗೋವಿಂದಾಚಾರ್ಯರೂ; ಇಸ್ಮಾಯಿಲ್; ಚಂಬಸ್ಯ ಈ ಮೂವರು ಈಕೆಯ ಕೃಪಾಕಟಾಕ್ಷಕ್ಕೆ ಒಳಗಾಗಲು ತಂತಮ್ಮ ಜಾತಿಮತ ಸಂಘಟನೆಗಳನ್ನು ಮರೆಯುವರು… ಪತ್ತೆದಾರಿ ಕಾದಂಬರಿಯ ಪುರುಷೋತ್ತಮನಾದ ಓಬಲೇಶನು ಬ್ಯಾಂಕಿನ ವಿದ್ಯಮಾನಗಳಿಗೆ ಉಪ್ಪು, ಹುಳಿ ಖಾರ ಬೆರೆಸಿ ಊರಲ್ಲಿ ಟಾಂ ಟಾಂ ಹೊಡೆಯುವನು.

ಇಂಥ ಸನ್ನಿವೇಶದಲಿಯೇ ಶಾಮಾ ಶಾಸ್ತ್ರಿಯು ಡ್ಯೂಟಿಗೆ ಜಾಯಿನಾದುದು. ಹೇಗೋ ಸ್ಮಾರ್ಥ ಬ್ರಾಹ್ಮಣನಾದ ಶಾಸ್ತ್ರಿಯು ಬಂದು ತನ್ನ ಬಲಗೈಯನ್ನು ಬಲಪಡಿಸಿದಂತಾಯ್ತು ಎಂದು ಮೇನೇಜರು ಬಗೆದನು.
“ಮೇನೇಜರ್ರೂ ಆರೆಸ್ಸೆಸ್ಸು ಕುಳ ಶಾಸ್ತ್ರಿ… ಅಯೋಧ್ಯೆಯನ್ನು ಹೃದಯದಲ್ಲಿಟ್ಕೊಂಡು ಅವನು ಕೆಲಸ ಮಾಡ್ತಿರೋದು ಮ್ಯಾನೇಜ್ಮೆಂಟಿಗೆ ಗೊತ್ತಾಗಿದೆ… ಅವನನ್ನು ಯಾವುದಲ್ಲಾದರೂ ಇರುಕಿಸಿ ಬೆಂಡೆತ್ತಬೇಕೆಂದು ಗೌರ್‍ಮೆಂಟೂ ಕಾಯ್ತಾ ಇದೆ… ಅವನತ್ರ ಸ್ವಲ್ಪ ಹುಷಾರಿಂದ ವರ್ತಿಸು…” ಎಂದು ಇಸ್ಮಾಯಿಲೂ…
ಸ್ಮಾರ್ಥರೆಂದರೆ ಲಿಂಗಾತ್ಯರಿದ್ದಂತೆ… ನೀವೂ ಹರಿಹರರ ನಡುವೆ ಭಿನ್ನ ಇಲ್ಲಾಂತ ಹೇಳ್ತೀರಿ ನಾವು ಇದೆ ಅಂತ ಹೇಳ್ತೀವಿ ಅಷ್ಟೆ… ನೀವು ವೀಭೂತಿ ಹಚ್ತೀರಿ… ನಾವೂ ವೀಭೂತಿ ಹಚ್ತೀವಿ… ಶಿವಭಕ್ತ ರಾವಣನನ್ನು ಕೊಂದ ರಾಮ ಇಂಥಲ್ಲೇ ಹುಟ್ಟಿದ್ದೂಂಥ ಹೇಳ್ತಾನಲ್ಲ ಆ ಮೇನೇಜರು ಅವನೆನಾದ್ರು ಹೋಗಿ ಕೌಸಲ್ಯಮ್ಮನ ಹೆರಿಗೆ ಮಾಡಿಸಿದ್ದನೇನು?… ಅವ್ನೂ ಅಷ್ಟೇ ಆ ಜಮಾತೆ ಇಸ್ಲಾಮಿನ ಇಸ್ಮಾಯಿಲೂ ಅಷ್ಟೆ… ಅವರಿಬ್ರು ಒಂದು ಹಾವಿನ ಎರಡು ತಲೆಗಳಿದ್ದಂತೆ… ಅವರಿಬ್ರನ್ನು ಪೋಲೀಸ್ರು ಇಂದಲ್ಲ ನಾಳೆ ಹಿದ್ಕೊಂಡು ಹೋಗಿ ಒದಿತಾರೆ ನೋಡ್ತಿರು…. ಅದ್ರಿಂದ ಅವರಿಬ್ರ ಜೊತೆ ಸಲಿಗೆ ಬೆಳಸಬೇಡ… ಅದೇನಿದ್ರು ನನ್ ಜೊತೆ ಬೆಳೆಸು… ವಿಭೂತಿ ಹಚ್ಚೋ ನಾವಿಬ್ರು ಎಂದಿದ್ರು ಒಂದೆ ಏನಂತೀ?ಆ?” ಎಂದು ಪಿ.ಎಂ.ಚಂಬಸ್ಯನೂ ಶಾಸ್ತ್ರಿಯ ಕಿವಿಯಲ್ಲಿ ಊದತೊಡಗಿದರು.
ಶಾಮಾಶಾಸ್ತ್ರಿ ಈ ಮುವ್ವರನ್ನು ಒಂದು ಪಗಡಿಯಲ್ಲೂ; ಜಿ.ಎಂ.ಶಾಂತಿಯ ಸ್ಲೀವ್ ಲೆಸ್ ತೋಳನ್ನು ಇನ್ನೊಂದು ಪಗಡೆಯಲ್ಲೂ ಇಟ್ಟು ತೂಗತೊಡಗಿದ. ಆಕೆಯ ತುಂಬುದೋಳಿನ ಮೇಲೆ ಒಂದರ ಕೆಳಗೆ ಒಂದರಂತೆ ಇದ್ದ ಹಳೆ ಇಪ್ಪತ್ತು ಪೈಸೆದಷ್ಟು ಅಗಲದ ಮೈಲಿ ಕಲೆಗಳು ಆತನ ಹೃದಯ ರಹಸ್ಯ ಸ್ಥಾವರದ ಮೇಲೆ ಧಾಳಿ ಮಾಡತೊಡಗಿದವು.
“ನಿಮ್ಮ ತೋಳಿನ ಮೇಲೆ ಒಂದು ಕವಿತೆ ಬರೆಯುವ ಆಸೆಯಾಗಿದೆ… ಅದನ್ನು ಮುಟ್ಟಲು ಆಸ್ಪದ ಕೊಟ್ಟು ಕವಿತೆಯನ್ನು ಸದೃಢಗೊಳಿಸುವಿರಾ?” ಎಂದು ಕೇಳುವ ಪ್ರಯತ್ನ ದಿನಂಪ್ರತಿ ಮಾಡತೊಡಗಿದ… ತುಂಬ ಗುಟ್ಟಾಗಿ…
ತೋಳಿಲ್ಲದ ರವಿಕೆ ಹೆಣ್ಣೆ
ಕುಣಿಯುವ ನವಿಲಿನ ಕಣ್ಣೆ
ಹೃದಯದಿ ಗೀತೆಯ ರಚಿಸು
ಅರಳಲಿ ಬದುಕಿನ ಸೊಗಸು
…ಎಂಬಂಥ ಚೌಪದಿ ಪದಿಯನ್ನು ರಚಿಸಿ ‘ಶ್ಯಾಂ’ ಎಂಬ ಸಂಕ್ಷಿಪ್ತ ನಾಮದಿಂದ ಕಳಿಸಿದ ಅದು ಜನ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಯುವಕರ ಗಮನ ಮಾತ್ರ ಸೆಳೆಯಿತು. ಅವರು ಅಲ್ಲಲ್ಲಿ ಗಟ್ಟಿಯಾಗಿ ಹಾಡಿಕೊಂಡರು. ಗೋಡೆಗಳ ಮೇಲೂ ಬರೆದು ಖುಷಿಪಟ್ಟರು. ತಿಂಗಳ ಭವಿಷ್ಯ ಓದುವ ಪ್ರೌಡರ ಗಮನವನ್ನು ಅದು ಸೆಳೆಯಲಿಲ್ಲ. ಸೆಳೆದರೂ ಪೋಲಿ ಪದ್ಯ ಎಂದುಕೊಂಡರು…
ಆ ಹನಿಗವಿತೆ ಪ್ರಕಟಗೊಂಡ ತರುಣದಲ್ಲಿ ಶಾಸ್ತ್ರಿಗೆ ಸಂತೋಷವಾಯಿತಾದರೂ ಅದು ಅಲ್ಪಾಯುಷಿಯಾಗಿತ್ತು. ‘ಶ್ಯಾಂ’ ಎಂಬುದರ ಬದಲು ಶಾಮಾಶಾಸ್ತ್ರಿ ಎಂದು ಬರೆದು ಕಳುಹಿಸಿದ್ದರೆ ಚೆನ್ನಾಗಿತ್ತು ಎಂದುಕೊಂಡ. ಕಾವ್ಯದ ಬಗ್ಗೆ ಯಾವುದೇ ಆಸಕ್ತಿ ಉಳಿಸಿಕೊಂಡಿರದಿದ್ದ ಶಾಂತಿ ಆ ಕಡೆ ತಿರುಗಿ ಸಹ ನೋಡಲಿಲ್ಲ…
ಆದರೆ ಶಾಮ ನಿರಾಶನಾಗಲಿಲ್ಲ… ತೋಳಿಲ್ಲದ ರವಿಕೆ ಕುರಿತು ಯಶಸ್ವಿಯಾದ ಚೌಪದಿಗಳನ್ನು ರಚಿಸುವುದರಲ್ಲಿ ಪಳಗಿದ. ದಿನಕ್ಕೊಂದರಂತೆ ಬರೆಯತೊಡಗಿದ. ಅದೂ ಯಾರಿಗೂ ಕಾಣದಂತೆ… ಮುಖ್ಯವಾಗಿ ಟಾಯ್ಲೆಟ್ಟಿಗೆ ಹೋದಾಗ ಚೌಪದಿಗಳು ಮೊಳೆಯತೊಡಗಿ ಮಲಗಿದ ಸ್ವಲ್ಪ ಹೊತ್ತಿಗೆಪೂರ್ಣ ರೂಪ ಪಡೆಯತೊಡಗಿದವು… ಹೊತ್ತಿಲ್ಲದ ಗೊತ್ತಿಲ್ಲದ ಹೊತ್ತಿನಲ್ಲಿ ಎದ್ದು ಡೈರಿಯಲ್ಲಿ ಬರೆದಿಟ್ಟುಕೊಂಡುಬಿಡುತ್ತಿದ್ದ.
ಇದೇ ತೋಳಿಲ್ಲದ ರವಿಕೆಯ ಉಪಾಸನೆಯಿಂದಾಗಿಯೇ ಅವನು ಅನಸೂಯಾ ತೋಳಿಲ್ಲದ ರವಿಕೆ ತೊಡುವುದನ್ನು ಅಭ್ಯಾಸ ಮಾಡಿಕೊಂಡಿರುವಳೋ ಇಲ್ಲವೋ ಎಂದು ಯೋಚಿಸಿ ಬೆಂಗಳೂರಿಗೆ ಹೋಗಲು ದಾರಿ ಮಾಡಿಕೊಟ್ಟಿತು. ಎಂದೂ ಊಹಿಸಬಹುದು.
ಇಂಥ ಚೌಪದಿಗಳ ರಚನಾ ಚಟದಿಂದಾಗಿ ಅವನು ಯಾವ ಕಡೆಗೂ ವಾಲದ ನಿಟ್ಟನೆ ನಿಟಾರಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡ. ಯಾರ ಜೊತೆಗೂ ಹೆಚ್ಚಿಗೆ ಬೆರೆಯುತ್ತಿರಲಿಲ್ಲ ನೀರಲ್ಲಿನ ತುಪ್ಪದ ಹನಿಯಂತೆ ಮಾತಾಡಿದರೆ ಹೋಯ್ತು, ಮುತ್ತು ಹೊಡೆಯದರೆ ಹೋಯ್ತು ಎಂಬ ಗಾದೆ ಮಾತಿನ ಸಮರ್ಥಕನಂತೆ ಇದ್ದುಬಿಡುತ್ತಿದ್ದ. ತಾನಾಯಿತು, ತನ್ನ ಕೆಲಸವಾಯಿತು. ಯಾವುದೋ ಒಂದು ಬಸ್ಸು ಏರುತ್ತಿದ್ದ. ಸಕಾಲಿಕವಾಗಿ ತಲುಪುತ್ತಿದ್ದ. ಕೆಲಸ ಮಾಡುವ ನಡುವೆ ಓರೆಗಣ್ಣಿನಿಂದ ಶಾಂತಿಯ ಸ್ಲೀವ್ ಲೆಸ್ ರವಿಕೆ ಕಡೆ ನೋಡುತ್ತಿದ್ದ. ಆಕೆ ನೋಡಿದೊಡನೆ ಮುಖ ತಗ್ಗಿಸಿ ಜಲಜಲ ಬೆವೆಯುತ್ತಿದ್ದ. ಯಾರು ಏನು ಕೇಳಿದ್ರು, ಹೇಳಿದ್ರು ‘ಎಸ್’ ಎಂತಲೋ ‘ಆಯ್ತು’ ಎಂತಲೋ ಅಂತಿದ್ದ. ‘ನೋ’ ಅಥವಾ ‘ಇಲ್ಲ’ ಎಂಬ ಶಬ್ದ ಅವನ ಸ್ಮೃತಿಪಟಲದಲ್ಲೇ ಇರಲಿಲ್ಲ. ಲಂಚ್ ಅವರ್‍ನಲ್ಲೂ ಅಷ್ಟೆ. ಎಲ್ಲರೂ ಒಂದು ಕಡೆ, ಅವನು ಕೂಡುತ್ತಿದ್ದುದೇ ಮತ್ತೊಂದು ಕಡೆ… ಯಾರೊಬ್ಬರ ಟಿಫಿನ್ ಬಾಕ್ಸ್‌ಗಳ ಕಡೆ ಅಪ್ಪಿತಪ್ಪಿ ಇಣುಕಿ ನೋಡುತ್ತಿರಲಿಲ್ಲ. ತನ್ನ ಟಿಫಿನ್ ಬಾಕ್ಸ್‌ನಲ್ಲಿಣುಕಲು ಯಾರಿಗೂ ಆಸ್ಪದ ಕೊಡುತ್ತಿರಲಿಲ್ಲ… ಅಯೋಧ್ಯೆಯಲ್ಲಿ ಚಳಿ ತಾಳಲಾರದೆ ಗೋವಿಂದಾಚಾರ್ಯ ಅಮೇಧ್ಯ ತಿಂದ, ಮದ್ಯ ಕುಡಿದ ಎಂಬ ಸುದ್ದಿ ಓಬಲೇಶನ ಮೂಲಕ ಹಬ್ಬಿದ್ದ ಕಾರಣದಿಂದ ಅವನು ದೂರ ಇರುತ್ತಿದ್ದ. ಇಸ್ಮಾಯಿಲನದಂತೂ ಇನ್ನೊಂದು ಕರ್ಮ. ಯಾವುದೇ ಪ್ರಾಣಿಯ ಮಾಂಸ ತಿಂದರೂ ಅವನ ಮೈತುಂಬ ತಿಂಡಿ ತುರಿಕೆ ಅಲರ್ಜಿ, ಚಂಬಸ್ಯವರಂತೂ ಅಪ್ಪಟ ಸಸ್ಯಾಹಾರಿಯಾಗಿದ್ದರೂ ಮಾಂಸ ತಿನ್ನುತ್ತಿರುವಂಥ, ಮದ್ಯ ಕುಡಿಯುತ್ತಿರುವಂಥ, ಕನಸುಗಳನ್ನು ಕಾಣುತ್ತಿದ್ದರು. ಅಂಗ ಸೌಷ್ಟವ ಕಾಪಾಡಿಕೊಳ್ಳುವ ನಿಮಿತ್ತ ಶಾಂತಿಯವರ ಬಾಕ್ಸಿನಲ್ಲಿ ಹಸೀತರಕಾರಿಯೇ ಹೆಚ್ಚಿನ ಪ್ರಮಾಣದಲ್ಲಿರುತ್ತಿತ್ತು. ಆಕೆ ತುಟಿಗೆ ಅಂಟಿಸದೆ ತಿನ್ನುತ್ತಿದ್ದಾಗ ಅವರೆಲ್ಲರಂತೆ ವಕ್ಶಸ್ಥಳವನ್ನು ನೋಡುವ ಧೈರ್ಯ ಶಾಮಣ್ಣ ಮಾಡುತ್ತಿರಲಿಲ್ಲ… ಬೇರೆ ಯಾರೊಂದಿಗೂ ಮಾತಾಡುತ್ತಿರಲಿಲ್ಲ… ಮಾತಾಡುತ್ತಿದ್ದುದೂ ಎಷ್ಟು ಬೇಕೋ ಅಷ್ಟು ಹಾಲಿಗೆ ಹೆಪ್ಪು ಬೆರೆಸಿದಂತೆ. ಆದ್ದರಿಂದ ಅವರೆಲ್ಲರು ಅವನಿಗೆ ‘ಗುಮ್ಮನ ಗುಸುಗ’ ಎಂದು ಬಿರುದು ಕೊಟ್ಟಿದ್ದರು.
ಮಿತಭಾಷಿ ‘ಗುಮ್ಮನ ಗುಸುಗ’ ಮುಂದೊಂದಿನ ತನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಎಲ್ಲರಿಗೂ ಹಂಚಿದ. ಮುಹೂರ್ತಕ್ಕೆ ಮೊದಲೆ ಹೋಗಿ ಮುಯ್ಯಿ ಮಾಡಿ ಶುಭಕೋರಿ ಬಂದರು. ಗುಮ್ಮನ ಗುಸುಗನ ಮಧುಚಂದ್ರಕ್ಕಾಗಲೀ; ತಾತನ ಶವಸಂಸ್ಕಾರಕ್ಕಾಗಲೀ; ಶ್ರಾದ್ಧ ಕಾರ್ಯಗಳಿಗಾಗಲೀ ಮೇನೇಜರ್ ಹೆಬ್ರಿ ಗೋವಿಂದಾಚಾರ್ಯರು ಸಾಕಷ್ಟಿ ರಜೆಯನ್ನು ಮುಂಜೂರು ಮಾಡಿದರಲ್ಲದೆ, ಆಗಾಗ್ಗೆ ಹಣ ಸಹಾಯ ಮಾಡಿದರು. ಎಲ್ಲ ಮುಗಿಸಿಕೊಂಡು ಬಂದ ಗುಮ್ಮನ ಗುಸುಗ ತನ್ನ ಜೀವನದಲ್ಲಿ ಯಾವೊಂದು ಮಹತ್ವದ ಘಟನೆ ನಡೆದೇ ಇಲ್ಲವೆಂಬಂತೆ ಇದ್ದುಬಿಟ್ಟ. ಯಾರಾದರೂ ಮಾತಾಡಿಸಿದರೆ ಹ್ಹೂಂ… ಹ್ಹಾಂ… ಅಷ್ಟೇ. ಜಿ.ಎಂ. ಶಾಂತಿಯ ಸ್ಲೀವ್‌ಲೆಸ್ ಬ್ಲೌಜು ಕೂಡಾ ಆಕರ್ಶಣೆ ಕಳೆದುಕೊಂಡಿತ್?. ತನ್ನ ತೋಳೇ ಆಕರ್ಷಣೆ ಕಳೆದುಕೊಂಡಿರುವುದೋ ಎಂಬ ಅನುಮಾನ ಬಂದು ಕು.ಶಾಂತಿ ಒಳಗೊಳಗೆ ಸಂಕಟಪಡ ತೊಡಗಿದಳು… ಶಾಸ್ತ್ರಿಯ ಸಿಂಪ್ಲಿಸಿಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಮೂಲಕಾವನ ಗಮನ ಸೆಳೆಯಲು ಪ್ರಯತ್ನ ಮಾಡಿದಳು. ಕೊನೆಗೂ ಸಾಧ್ಯವಾಗದಿದ್ದಾಗ ಹಾಳು ಬಾವಿಗೆ ಬೀಳು ಎಂದು ತನ್ನ ಪಾಡಿಗೆ ತಾನು ಇದ್ದುಬಿಟ್ಟಳು.

ಅವರಾರಿಗೂ ಅರ್ಥವಾಗದ ಸಂಕಟವನ್ನು ಶಾಸ್ತ್ರಿಯು ಅನುಭವಿಸುತ್ತಿದ್ದ. ಬದುಕಿನ ಕ್ಷಣ ಭಂಗುರಕ್ಕೆ ಕನ್ನಡಿ ಹಿಡಿಯುವ ಸಂಕಟವದು. ಬಲವಂತ ಸಂಭೋಗಕ್ಕೆ ಸಮನಾದ ಸಂಕಟವದು. ಆ ಸಂಕಟ ಕುರಿತು
ಸಂಕಟ ಸಂಕಟ ಬಾಳೆಲ್ಲ ಸಂಕಟ
ಬದುಕಿಗೆ ಹೆಂಡತಿಯೆಂಬುದು ಕಂಟಕ
ಸಂಸಾರವೆಂಬುದು ಒಣರೊಟ್ಟಿ ಕಡಿದಂತೆ
ಕೊರೆವ ಚಳಿಯಲ್ಲಿ ತಣ್ಣೀರೊಳಗೆ ಮಿಂದಂತೆ
…ಎಂದು ಡೈರಿಯಲ್ಲಿ ಬರೆದುಕೊಂಡ… ಅದು ಅವನಿಗಷ್ಟೇ ಗೊತ್ತು…!
ಯಾರಿಗೂ ಹೇಳದಿದ್ದರೂ ಆ ಸಂಕಟವನ್ನು ಅವನ ಮುಖದ ನಿರಿಗೆಗಳು ಪ್ರಕಟಿಸದೆ ಇರುತ್ತಿರಲಿಲ್ಲ. ಅಲ್ಲದೆ ಕೊತ್ತಲಿಗೆ ಏನು ಕೊಟ್ಟೂರಿಗೆ ದೂರದ ಗ್ರಾಮವಾಗಿರಲಿಲ್ಲ… ಕೊಟ್ಟೂರಿನಲ್ಲಿ ಹೂಸು ಬಿಟ್ಟರೆ ಕೊತ್ತಲಿಗಿ ಗ್ರಾಮದವರು ಮೂಗು ಮುಚ್ಚಿಕೊಳ್ಳುವರು. ಗುಲಾಂನಬಿ ಕೆಮ್ಮಿದರೆ, ಸೋಮವಾರಪೇಟೆಯಲ್ಲಿ ಮುಲುಕಿದರೆ ಕೊಟ್ಟೂರಿನಲ್ಲಿ ಸದ್ಗೃಹಸ್ಥರು ಹ್ಹಾಹಾಽಽ ಎಂದು ಉದ್ಗರಿಸುವರು…
ಆ ದಿನ ಲಂಚ್ ಅವರಿನಲ್ಲಿ ತನ್ನ ಮೂಲೆ ಅಲಂಕರಿಸಿದ್ದ ಶಾಮಣ್ಣ ತಲೆತಗ್ಗಿಸಿ ಕೂತಿದ್ದ. ಕೆಟ್ಟದಾಗಿ ಹಸಿದಿದ್ದ. ಹಸಿವೆಗಿಂತಲೂ ಭಯಂಕರವಾದುದು ತಾಯಿ ಹೆಂಡತಿ ನಡುವಿನ ಜಗಳ. ಅವರು ಪರಸ್ಪರ ಎಸೆಯುತ್ತಿದ್ದ ಮಾತುಗಳು ತಲೆತಿನ್ನತೊಡಗಿದವು. ದೇಹದ ಬಿಳಿ ಮತ್ತು ಕೆಂಪು ರಕ್ತ ಕಣಗಳು ಕ್ರಿಯಾಶೂನ್ಯವಾಗಿದ್ದವು. ಯಾರನ್ನೋ ನೆನಪಿಸಿಕೊಂಡರೆ ಯಾರೋ ನೆನಪಾಗತೊಡಗಿದರು… ಭಯವಾಯಿತು… ಕಣ್ಣಲ್ಲಿ ನೀರು ಒತ್ತರಿಸಿ ಬಂದು ಹನಿಹನಿಯಾಗಿ ಧುಮ್ಮಿಕ್ಕಿದವು.
ಶಾಮಣ್ಣ ಯಾರಿಗೂ ಗೊತ್ತಗದಂತೆ ಅಳುತ್ತಿರುವುದು ಓಬಳೇಶ ಪತ್ತೆ ಹಚ್ಚಿದ. ಶಾಸ್ತ್ರಿಗೂ ಅಳಲಿಕ್ಕೆ ಬರ್‍ತದೆ ಎಂದು ಟಾಂಟಾಂ ಸಾರಿದ. ಅದನ್ನು ಕೇಳಿ ಕೆಲವರು ನಕ್ಕರು. ಆದರೆ ಸಹೋದ್ಯೋಗಿಗಳು ನಗಲಿಲ್ಲ… ಅಳಲಿಕ್ಕೇನಾಗಿದೆ ಈ ಹೊಸ ಮದು ಮಗನಿಗೆ… ತಾವ್ನಾದದ್ರು ಇವನ ಪಾಲಿಗೆ ಸತ್ತು ಹೋಗಿದ್ದೀವಾ? ತಮ್ಮ ಬಳಿ ಹೇಳಲಿಕ್ಕಾಗದಂಥ ಯಾವ ಸಂಕಟವು ಇವನನ್ನು ತಿನ್ನುತ್ತಿರುವುದು! ಧಾವಿಸಿದರು ಅವನ ಬಳಿಗೆ… ಚಂಬಸಯ್ಯ ಅವನ ಮುಖ ಮೇಲೆತ್ತಿಸಿದ. ಇಸ್ಮಾಯಿಲ್ ಕರವಸ್ತ್ರದಿಂದ ಕಣ್ಣೊರೆಸಿದ… ಶಾಂತಿ ಲೊಚಗುಟ್ಟಿದಳು… “ರ್ರೀ… ಯಾರಾದ್ರು ಅವರ್‍ನ ಕರ್ಕೊಂಡು ಹೋಗಿ ತಿಂಡಿ ಕೊಡಿಸಿಕೊಂಡು ಬರಬಾರದೆ” ಎಂದರು ಮೇನೇಜರು…
ಆಗೋದೆಲ್ಲ ಆಯಿತು. ಎದೆಯೊಳಗೆ ಸಮಾಧಾನದ ತಂಗಾಳಿ ಬೀಸಿತು. ದೇಹ ಮನಸ್ಸು ಹಗುರಾಯಿತು. ಶಾಸ್ತ್ರಿ ತಾನು ಕೊತ್ತಲಿಗಿಯಲ್ಲಿ ಸಂಸಾರ ಹೂಡಬೇಕಾಗುವ ಅನಿವಾರ್ಯತೆ ಕುರಿತು ಕೊನೆಗೂ ಹೇಳಿದ.
ಅದನ್ನು ಕೇಳಿ ಅವರೆಲ್ಲರು ಹ್ಹಾಽಽ ಎಂದು ಉದ್ಗರಿಸಿದರು.
ಊರಿಗೆ ಬಂದವರ ಪೈಕಿ ಒಬ್ಬರಾದರೂ ನೀರಿಗೆ ಬಂದರಲ್ಲ…
ಓಬಳೇಶ ನಗಾಡಿದ. ಅವನ ಅಂಗಿಯ ಪಾರದರ್ಶಕತೆ ಆ ನಗುವನ್ನು ಮರೆಮಾಚಿತು.
*
*
*
ಶಾಮಣ್ಣ ಕೊತ್ತಲಿಗಿಯಲ್ಲಿ ಮನೆ ಮಾಡುವನೆಂದೂ; ಅದರಲ್ಲಿ ತನ್ನ ಹೊಸ ಹೆಂಡತಿಯನ್ನು ತಂದು ಸಂಸಾರಹೂಡಲಿರುವನೆಂದೂ ಈ ಮೂಲಕ ಹಲವಾರು ದಶಕಗಳಿಂದ ತಮ್ಮ ಗ್ರಾಮಕ್ಕೆ ವಕ್ಕರಿಸಿದ ಅಪ ಶೃತಿ, ಅಪನಿಂದೆಗಳು ದೂರವಾಗುವುದರ ಮಂಗಳಕರ ಸೂಚನೆ ಎಂದು ಓಬಳೇಶನು ಕಂಡಕಂಡವರಿಗೆಲ್ಲ ಹೇಳುತ್ತ ಹೋಗಿ ಗ್ರಾಮದ ಮೂಲನಿವಾಸಿಗಳು ಸಮಾಧಾನದ ಉಸಿರು ಬಿದಲಿಕ್ಕೆ ಕಾರಣನಾದನು.

ಪಂಡಿತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಶಾಮಾ ಶಾಸ್ತ್ರಿ ತಮ್ಮ ಗ್ರಾಮದಲ್ಲಿ ಮನೆ ಮಾಡುವುದು ಶುಭಸೂಚಕವೆಂದೇ ಎಲ್ಲರು ಭಾವಿಸಿದರು. ಸದ್ಗೃಹಸ್ತ ಕಲ್ಪನೆಯೇ ಅಪರೂಪವಾಗಿದ್ದಂಥ ಗ್ರಾಮವದು. ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದರೂ ಒಂದೇ ಒಂದು ಜಿನತತ್ವವು ಕೇಳಲು ಸಾಧ್ಯವಿಲ್ಲದಂಥ ಗ್ರಾಮವದು. ಕದಂಬ, ಚಾಲುಕ್ಯರ ಶಿಲ್ಪ ಶಾಸನಗಳೊಂದೇ ಅಲ್ಲದೆ ವಿಜಯನಗರದ, ಚಿತ್ರದುರ್ಗದ, ಹೈದರಾಲಿ ಟಿಪ್ಪೂಸುಲ್ತಾನ ಕಾಲದ ಶಿಲ್ಪಾವಶೇಷಗಳು ಗ್ರಾಮದ ಒಳಹೊರಗೆ ಚೆಲ್ಲಾಪಿಲ್ಲಿಯಾಗಿರುವುವು. ಗುಡೇಕೋಟೆ, ಜರ್ಮಲಿ, ಹರಪನಹಳ್ಳಿ ಮೊದಲಾದ ಪಾಳೆಪಟ್ಟುಗಳ ಅಧೀನದಲ್ಲಿದ್ದಂಥ ಗ್ರಾಮವದು. ದಕ್ಷಿಣ ಭಾರತದ ಪ್ರಾಚೀನ ಜೈನ ಕೇಂದ್ರವೆಂದು ಹೆಸರು ಪಡೆದಿದ್ದ ಕೋಗಳಿ, ಹಡಗಲಿ, ಕೊಪ್ಪಳಗಳೇನು ಸದರಿ ಗ್ರಾಮಕ್ಕೆ ದೂರವಿಲ್ಲ… ಆದರೂ ಈ ಗ್ರಾಮದಲ್ಲಿ ಜೈನಮತದ ಒಂಚುರು ನೆರಳು ಸಹ ಇಲ್ಲ.

ರಾಜಾಸ್ಥಾನದ ಸುಡುಸುಡು ಮರುಭೂಮಿಗೆ ಬೇಸತ್ತು ಮಾರ್ವಾಡಿಗಳು ಗುಂಪುಗುಂಪಾಗಿ ಎಲ್ಲ ಗ್ರಾಮಗಳನ್ನು ಸೇರಿಕೊಂಡರಾಗಲೀ ಸದರಿ ಗ್ರಾಮವನ್ನು ಮಾತ್ರ ಸೇರಿಕೊಳ್ಳಲಿಲ. ಫೂಕ್‌ಚಂದ್ ಅಮೃತ್‌ಲಾಲ್ ಎಂಬ ಮಾರ್ವಾಡಿಯು ಸ್ವಾತಂತ್ರ್ಯ ಪೂರ್ವದಲ್ಲಿ ಈ ಗ್ರಾಮ ಸೇರಿಕೊಂಡು ಜವಳಿ ವ್ಯಾಪಾರ ಆರಂಭಿಸುವುದರ ಜೊತೆಗೆ ಬಡ್ಡಿ ವ್ಯಾಪಾರವನ್ನೂ ಶುರುಮಾಡಿದ್ದುಂಟು. ಗ್ರಾಮಸ್ಥರು ಕೂಡ ಅನ್ಯೋನ್ಯವಾಗಿಯೇ ಇದ್ದರು. ಸ್ವಾತಂತ್ರ್ಯ ಬಂದ ಎರಡನೇ ವರ್ಷದಲ್ಲಿ ಏನಾಯಿತೋ ಏನೋ? ಸೋಮವಾರಪೇಟೆಯ ವಾಲ್ಮೀಕಿ ಜನಾಂಗದವರು ರಾತ್ರೋರಾತ್ರಿ ಆ ಮಾರ್ವಾಡಿ ಮನೆ ಮೇಲೆ ಕ್ರೂರವಾಗಿ ಧಾಳಿ ಮಾಡಿದರು. ಇದರಿಂದ ತತ್ತರಿಸಿ ಹೋಯಿತು ಆ ಅಹಿಂಸಾವಾದಿ ಕುಟುಂಬವು. ಆ ಕುಟುಂಬದ ಸಮಸ್ತರನ್ನು ದಾರುಣವಾಗಿ ಕೊಲೆ ಮಾಡಿ ಅವರ ಹೆಣಗಳನ್ನು ಸಾಲು ಮರಗಳಿಗೆ ನೇತು ಹಾಕಿದರು… ಎಂಬುದು ಒಂದು ವರ್ಗದವರ ಅಂಬೊಣ.

ಸಂಡೂರು ಪ್ರಾಂತದ ದಟ್ಟ ಅರಣ್ಯಗಳಿಂದ ಶ್ರೀಗಂಧದ ಲೂಟಿ ಮಾಡಿ ಪೋಲಿಸ್ ವ್ಯವಸ್ಥೆಯು ತಲೆ ತಿನ್ನುತ್ತಿದ್ದ ಬೋಳುತಲೆ ದುರುಗಪ್ಪನು ಈ ಗ್ರಾಮದವನೆ, ಸ್ವಗ್ರಾಮದಲ್ಲೊಂದೇ ಅಲ್ಲದೆ ಮಲಮೂತ್ರ ಮೈಥುನ ನಾಗರೀಕ ದಾಟಿಯಲ್ಲಿ ಮಾಡಲರಿಯದ, ದೇಹದ ಮುಖ್ಯ ಭಾಗವನ್ನು ಸರಿಯಾದ ಬಟ್ಟೆ ಬರೆಯಿಂದ ಮುಚ್ಚಿಕೊಳ್ಳಲರಿಯದ, ಅಡುಗೆ ಮಾಡಲರಿಯದ, ಉಂಡಕೂಳನ್ನು ಅರಗಿಸಿಕೊಳ್ಳಲರಿಯದ ಜನರೇ ತುಂಬಿರುವ ಗೊಲ್ರಟ್ಟಿ, ಮಾದೇಪ್ರ, ಜರುಮಲಿ, ಗುಂಡುಮುಳುಗೇ ಮೊದಲಾದ ಕುಗ್ರಾಮಗಳಿಂದ ಐವತ್ತು ನೂರು ರೂಪೈಗೊಂದರಂತೆ ಹೆಣ್ಣುಗಳನ್ನು ಕೊಂಡು ಪೂನಾ ಬಾಂಬೆಗಳಿಗೆ ಮಾರಾಟ ಮಾಡಿ ಲಕ್ಷಗಟ್ಟಲೆ ಧನಕನಕ ಸಂಪಾದಿಸಿ ರಾಷ್ಟ್ರೀಯ ಹೆದ್ದಾರಿಗಂಟಿಕೊಂಡಂತೆ ನಿಪ್ಪಾಣಿ ಬಳಿ ರಾಜ್ ವಿಹಾರ್ ಹೋಟೆಲ್ ಕಟ್ಟಿಸಿಕೊಂಡು ಚಿನ್ನದ ಚಮಚೆಯಿಂದ ಫ್ರೂಟ್ಸಾಲಾ ತಿಂದು ಹಂಸತೂಲಿಕಾ ತಲ್ಪದ ಮೆಲೆ ಮಲಗುತ್ತಿರುವ ಅಂಬುಜಾಕ್ಷಿ ಅಲಿಯಾಸ್ ತುಂಬರಗುದ್ದಿ ಚವುಡವ್ವನ ಸ್ವಾಸ್ತಿ ಸದರೀ ಗ್ರಾಮವೇ. ಇಂಥ ಅನೇಕ ವಿಧ್ವಂಸಕ ದೃಶ್ಯಾವಳಿಗಳ ತವರೆನಿಸಿಕೊಂಡದ್ದು ಸ್ವಾತಂತ್ರ್ಯಾ ನಂತರವೇ ಎಂಬುದು ಗಮನಾರ್ಹ ಸಂಗತಿ.

ವಿಜಯನಗರದ ಪತನಾನಂತರ ವಿಜಯನಗರದಿಂದಲೂ; ಮೈಸೂರು ಪ್ರಾಂತ ಪತನಾ ನಂತರ ಮೈಸೂರು ಪ್ರಾಂತದಿಂದಲೂ ಹರಪನಹಳ್ಳಿ ಪತನಾ ನಂತರ ಹರಪನಹಳ್ಳಿ ಕಡೆಯಿಂದಲೂ; ಹೀಗೆ ಚಿತ್ರದುರ್ಗ, ಸೀರ್ಯ, ಬಿಜಾಪುರ, ಗೋಲ್ಕೊಂಡಾ ಪ್ರಾಂತಗಳಿಂದ ಇತಿಹಾಸ ಪ್ರಸಿದ್ಧ ಜಟ್ಟಿಗಳೂ, ಸಂಗೀತಗಾರರೂ; ರಂಗ ನಟರೂ, ನಟಿಯರೂ ತಂಡೋಪತಂಡವಾಗಿ ಹರಿದು ಬಂದು ಸದರೀ ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟರು ಎಂದು ಈ ಕುರಿತು ಮಹಾ ಸಂಶೋಧನಾ ಪ್ರಬಂಧ ಮಂಡಿಸಿರುವ ಡಾ. ಅಭಿಷೇಕ್ ಗೋಡ್ಲೆಯವರು ಅಭಿಪ್ರಾಯಪಟ್ಟಿರುವರು. ಉದರಂಭರಣಕ್ಕಾಗಿ ಪೈಲ್ವಾನರಾಗಲೀ; ಯಾರಾಗಲೀ ಒಳ್ಳೆಯದೂ ಮಾಡಿರಬಹುದು ಹಾಗೇ ಕೆಟ್ಟದ್ದೂ ಮಾಡಿರಬಹುದು.

ಈಗಲೂ ಕೊತ್ತಲಿಗಿಯ ಸೋಮವಾರಪೇಟೆಯಲ್ಲಿ ಯಾವುದೇ ಬಯಲಾಟ, ನಾಟಕ, ಭಾಮಾಕಲಾಪವೇ ಮೊದಲಾದ ರಂಗಪ್ರಾಕಾರಗಳ ಪಠ್ಯವನ್ನು ನೋಡುತ್ತಲೆ, ಕೇಳುತ್ತಲೆ ಬಾಯಿಪಾಟ ಮಾಡಿ ಆಯಾ ಪಾತ್ರ ಹೊಕ್ಕು ಬೆಳ್ಳಂಬೆಳಗು ಅಭಿನಯಿಸುವ ಸಾಮರ್ಥ್ಯವುಳ್ಳ ರಂಗನಟಿಯರಿದ್ದಾರೆ. ದಿನಕ್ಕೊಂದು ಟನ್ ಹುಣಸೆ ಬೊಟ್ಟು ಕುಟ್ಟುವಂಥ ದಿನಗಟ್ಟಲೆ ಉಪವಾಸವಿದ್ದರೂ ಮೈ ಮತ್ತು ಮುಗುಳುನಗೆ ಮಾಸದಂಥ, ಎಷ್ಟು ಹಡೆದರೂ ಕಿಪ್ಪೊಟ್ಟೆ ಮಾಂಸ ತುಳುಕಾಡುತ್ತಿರುವ ಸೋಮವಾರಪೇಟೆಯಿಂದಾಗಿಯೇ ಸದರೀ ಗ್ರಾಮಕ್ಕೆ ಐತಿಹಾಸಿಕ ಮಹತ್ವ ಪ್ರಾಪ್ತವಾಗಿರುವುದು. ಎಂಥ ಪೈಲ್ವಾನರನ್ನೂ; ಜಿತೇಂದ್ರಿಯರನ್ನೂಹಾಸಿಗೆ ಮೇಲೆ ಕೆಡವ ಬಲ್ಲಂಥ ನೂರಾರು ಸುಂದರ ಮತ್ತು ಬಟ್ಟಲುಗಣ್ಣುಗಳಿಗಿಲ್ಲಿ ಬರವಿಲ್ಲ. ಈ ಗ್ರಾಮದ ವಾತಾವರಣದಲ್ಲಿ ತೆಗೆದುಕೊಳ್ಳುವ ಉಚ್ವಾಸವೇ ರತಿಕ್ರಿಡಾ ಮನೋಭಾವವನ್ನು ಏಕ್‌ಧಂ ಉದ್ದೀಪಿಸುತ್ತದೆ. ಶೂನ್ಯದಿಂದ ಕೈಬಳೆ, ಕಾಲ್ಗೆಜ್ಜೆ ಮುಲುಕುವ ಸದ್ದು ಕೇಳಿ ಬರುತ್ತದೆ. ಕಕ್ಕಸುಗೇರಿಯಲ್ಲಿ ನಿಂತರೂ ಕುಂತರೂ ಸುಗಂಧ ಪರಿಮಳ ದ್ರವ್ಯ ಮೂಗಿಗೆ ತುರಿ ಪಂಚೇಂದ್ರಿಯಗಳಿಗೆ ರೆಕ್ಕೆ ಮೂದಿಸುತ್ತದೆ, ಎಂಥ ಅಮಾಯಕನೂ ರಾಸಲೀಲಾ ವಿನೋದದ ಸೆಳವಿಗೆ ಸಿಲುಕಿ ಸೋಮವಾರ ಪೇಟೆ ಕಡೆಗೆ ಪರಾವರ್ತಿತ ಪ್ರತಿಕ್ರಿಯೆಯಿಂದ ನಡೆಯುತ್ತಾನೆ… ಈ ಗ್ರಾಮದಲ್ಲಿ ಕಾಗೆ ಕೋಗಿಲೆಯಾಗಿದೆ, ಕೆಂಬೂತ ನವಿಲಾಗಿದೆ, ಕೊಕ್ಕರೆ ಚಕೋರಿಯಾಗಿದೆ. ಗ್ರಾಮದ ಓಣಿ ಓಣಿಯಲ್ಲಿ “ಲೈಂಗಿಕ ರೋಗತಜ್ಞರು” ಎಂದು ಬೋರ್ಡು ಹಾಕ್ಕೊಂಡಿರುವ ಡಾಕ್ಟರು ಸಿಗುತ್ತಾರೆ. ಈ ಊರಿಗೆ ಬರುವ ಎಂಥ ಪತಿವ್ರತೆಯರೂ ಈ ಗಾಳಿ ತಗುಲು ಕೆಡುತ್ತಾರೆ ಎಂಬ ಪ್ರತೀತಿ ಇದೆ. ಕೆಲವೊಂದು ಸಂದರ್ಭಗಳಲ್ಲಿ ಅದು ನಿಜವಾಗಿರುವ ಉದಾಹರಣೆಗಳು ಇಲ್ಲದಿಲ್ಲ. ಪುಂಖಾನುಪುಂಖವಾಗಿ ಕುಂತಳನಾಡನ್ನೊಂದೇ ಅಲ್ಲದೇ, ಯಡದೊರೆನಾಡು, ಸಿಂಧುವಾಡಿನಾಡು, ಇಂದುವಾಡಿನಾಡು ಇವೇ ಮೊದಲಾದ ಛಪ್ಪಾನಾರು ನಾಡುಗಳಲ್ಲಿ ಹರಡಿರುವ ಕಾರಣದಿಂದಾಗಿಯೋ ಏನೋ ಮರ್ಯಾದೆಯುಳ್ಳ ಯಾವ ಸದ್ಗೃಹಸ್ತನೂ ಸಂಸಾರ ಸಮೇತ ಬಂದು ಇಲ್ಲಿ ಇರಲು ಇಷ್ಟಪಡುವುದಿಲ್ಲ… ಅಥವಾ ಇದನ್ನೇ ಒಂದು ನೆವ ಮಾಡಿ ಮನುಜ್ಷ್ಯ ಸದ್ಗೃಹಸ್ಥ ಮನೋಭಾವದಿಮ್ದ ದೂರ ಉಳಿಯುವ ಪ್ರಯತ್ನಮಾಡಿರಬಹುದು. ಇದೆಲ್ಲ ಅಂತೆ ಕಂತೆ ಮಾತ್ರ. ಇದರಲ್ಲಿ ಎಷ್ಟು ಸುಳ್ಳೋ ಎಷ್ಟು ನಿಜವೋ? ಇಂಥ ಅನುಭವಗಳಿಗೆ ತುತ್ತಾದವರೇ ಹೇಳಬೇಕು…

ಇಂಥ ಕಪೋಲಕಲ್ಪಿತವೋ; ನಿಜವೋ ಆದ ಸುದ್ದಿಗಳು ತಾಂಡವಾಡುತ್ತಿದ್ದುದರಿಂದಾಗಿ ಸಾಮಾನ್ಯವಾಗಿ ಸರಕಾರಿ ನೌಕರರು ಹೆಂಡತಿಯೊಡನೆ ಬಂದು ಸಂಸಾರ ಹೂದುವುದಿಲ್ಲ… ಅಥವಾ ಯಾವ ಹೆಂಡತಿಯೂ ಈ ಊರಿಗೆ ಬಂದು ಗಂಡನೊಂದಿಗೆ ಜೀವಿಸಲು ಒಪ್ಪುವುದಿಲ್ಲ. ಹೆಂಡತಿ ಕಾಟ ಕೊಟ್ಟು ಗಂಡನನ್ನು ವರ್ಗ ಮಾಡಿಸುವುದು, ಗಂಡನ ಒತ್ತಾಯಕ್ಕೆ ಹೆಂಡತಿ ಮೆಡಿಕಲ್ ಲೀವ್ ಹಾಕಿ ವರ್ಗ ಮಾಡಿಸಿಕೊಂಡು ಹೋಗುವಳು. ಆದ್ದರಿಂದ ಅನಿವಾರ್ಯವಾಗಿ ಉಳಿದವರು ಸಾಮಾನ್ಯ ಕಂತಿನ ಮೇಲೆ ಗಾಡಿಗಳನ್ನು ಕೊಂಡು ಅಪ್ ಅಂಡ್ ಡೌನ್ ಮಾಡ್ತಿರೋದೇ ಹೆಚ್ಚು.

ಇಂಥ ವಿವರಣೆ, ವಿಶ್ಲೇಷಣೆಗಳಿಗೆ ಸತ್ಯ ಮಿಥ್ಯಗಳಿಗತೀತವಾಗಿ ಉಳಿದಿರುವ ಘಟನೆ ಸಂಘಟನೆಗಳ ಕಾರಣದಿಂದಾಗಿ ಶಾಮಣ್ಣ ಕೊತ್ತಲಿಗಿಯಲ್ಲೇ ಮನೆ ಮಾಡಬೇಕಿದೆ! ಎಂದು ಹೇಳಿದಾಗ ಸಹೋದ್ಯೋಗಿಗಳೆಲ್ಲರು ಅವನ ಕಡೆ ಬೆಕ್ಕಸ ಬೆರಗಾಗಿ ನೋಡಿದರು. ಪ್ರಪಂಚ ಜ್ಞಾನದ ರಿಸೀವರ್ರಾದ ಯಾಂಟನಾದಂತಿದ್ದ ಅವರು ಗರುಡ ಪುರಾಣದಲ್ಲಿ ಬರುವ ಫಲ್ಗುಣಿ ಎಂಬ ರೌರವ ನದಿಯ ಒಟ್ಟು ಮೊತ್ತವೇಕೊತ್ತಲಗಿ ಗ್ರಾಮವು ಎಂದು ಈ ಮೊದಲೆ ತಿಳಿದುಕೊಂಡಿದ್ದ. ಅವನ ಸಾಂಪ್ರದಾಯಿಕ ಕರ್ಮಠ ಮನಸ್ಸು ‘ಇಸ್ಸಿ’ ಅಂತಿದ್ದರೆ, ಸೃಜನಶೀಲ ಮನಸ್ಸು ಮನುಷ್ಯರ ಕ್ಷುದ್ರ ಬದುಕನ್ನೇ ಕಥೆ, ಕವಿತೆ, ಕಾದಂಬರಿಯನ್ನಾಗಿಸಬೇಕೆಂದು ಹೇಳುತ್ತಿತ್ತು. ಅದೇ ಮನಸ್ಸಿನ ಕ್ರಾಂತಿಕಾರಕ ಭಾಗವು ವೆರಿಯರ್ ಎಲ್ವಿನ್ ಗೊಂಡೋ ಪ್ರದೇಶದ ಆದಿವಾಸಿಗಳನ್ನು ಉದ್ಧಾರ ಮಾಡಿದಂತೆ ನೀನೂ ಇಲ್ಲೇ ನೆಲೆಗೊಂಡು ಈ ಗ್ರಾಮದಲ್ಲಿ ಸಾಮಾಜಿಕ ಬದಲಾವಣೆ ಮಾಡು ಎಂದು ಬೋಧಿಸುತ್ತಿತ್ತು. ವೇಷ ಮರೆಸಿಕೊಳ್ಳುವುದರಲ್ಲಿ ಈಗಾಗಲೇ ನಿಷ್ಣಾತನಾಗಿರುವ ಶಾಮಣ್ಣ ಬಹುಶಃ ಓಬಳೇಶನಿಗೂ ಗೊತ್ತಿಲ್ಲದಂತೆ ವೇಷ ಮರೆಸಿಕೊಂಡುಸೋಮವಾರಪೇಟೆಯನ್ನು ಪ್ರವೇಶಿಸಿ ದೇವದಾಸಿಯರೂ, ರಂಗಕಲಾವಿದರೂ ಎಂಬೊಂದು ಸಚಿತ್ರ ಲೇಖನಕ್ಕೆ ವಿಷಯ ಸಂಗ್ರಹಿಸಿದ್ದನು. ಹೀಗೆ ಸಂಗ್ರಹಿಸುವಾಗ ಆರುಮೂರಾಗ್ಲಿ, ಮೂರು ಆರಾಗ್ಲಿ ಈ ಊರಿಗೆ ಹೆಂಡತಿಯನ್ನು ಕರೆದುಕೊಂಡು ಬಂದು ವಾಸ ಮಾಡಬಾರದೆಂದು ಶಪಥ ಮಾಡಿದ್ದನು. ತಾಯಿ ಮತ್ತು ಹೆಂಡತಿಯರೆಂಬ ಅಜ್ಞಾತ ಅಂಶಗಳಿರುವ ಎರಡು ಸಮೀಕರಣಗಳನ್ನು ‘ನಾನು’ ಎಂಬ ಒಂದೇ ಸೂತ್ರದಿಂದ ಬಿಡಿಸುವುದು ಸಾಧ್ಯವಿಲ್ಲವೆಂಬ ಸಂಗತಿಯನ್ನು ಮನದಟ್ಟು ಮಾಡಿಕೊಂಡಿದ್ದನು. ಸಂಕಲನದ ವ್ಯವಸ್ಥೆಯೇ ಬೇರೆ, ವ್ಯವಕಲನದ ವ್ಯವಸ್ಥೆಯೇ ಬೇರೆ; ಅವೆರಡು ಒಂದೇ ಚಿನ್ಹೆಯೊಳಗೆ ಅಡಾಗುವುದಿಲ್ಲ… ಆ ಎರಡು ಭಿನ್ನ ಜಾತಿಯ ಧೃವಗಳು ಒಂದಾಗಿದ್ದೇ ಆದರೆ ಬಕ್ಷಾಲಿಯ ಗಣಿತ ಗ್ರಂಥಕ್ಕೆ ಸರಿಸಮಾನರಾಗುತ್ತಾರೆ. ಎರಡು ಭಿನ್ನ ಮನೋಭಾವದ ಪ್ರಾಣಿಗಳು ಒಂದೇ ಬೋನಿನಲ್ಲಿ ಒಟ್ಟಿಗೆ ಇರಲಿಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೆ ತಾಯಿ ಮತ್ತು ಹೆಂಡತಿ
ಹಿಂಗಾಳಿ, ಮುಂಗಾಳಿಗಳಾಗಿ ಒಟ್ಟಿಗೆ ಜೀವಿಸಲುಸಾಧ್ಯವೇ ಇಲ್ಲವೆಂದು ಬಗೆದೇ ಕೊತ್ತಲಗಿಯಲ್ಲಿ ಮನೆ ಹುಡುಕಲು ನಿಶ್ಚಯಿಸಿದನು. ಈ ಕುರಿತು ಗೆಳೆಯರ ಸಹಕಾರವನ್ನು ಕೋರಿದನು. ಅಷ್ಟೊತ್ತಿಗಾಗಲೇ ಪರಸ್ಪರ ಏಕವಚನ ಸಂಬೋಧಿಸುವಷ್ಟರ ಮಟ್ಟಿಗೆ ಸಲಿಗೆ ಸಾಧಿಸಿದ್ದ ಅವರ ಪೈಕಿ ಒಬ್ಬನಾದ ಪಿ.ಎಂ.ಚಂಬಸ್ಯನು –
“ನಿಂಗೆ ಬುದ್ಧಿ ನೆಟ್ಟಗಿದ್ದಂಗಿಲ್ಲ ಶಾಸ್ತ್ರೀ… ನಿನ್ನಂಥೋರು ನಮ್ಮಂಥೋರು ಗೊತ್ತಿದ್ದೂ ಗೊತ್ತಿದ್ದು ಈ ಊರಲ್ಲಿ ಸಂಸಾರ ಹೂಡೋದೇನು! ನೌಕರಿ ಮಾಡ್ತಿರೋ ತಪ್ಪಿಗೆ ಗಾಡಿ ತಗೊಂಡು ಅಪ್ಪಂಡೌನ್ ಮಾಡ್ಬೇಕಯ್ಯಾ ಅಪ್ಪಂಡೌನೂ” ಎಂದು ಕೆಮ್ಮಿದನು.
“ನೀನು ಅಪ್ಪಂಡೌನು ಮಾಡೋದಾದ್ರೆ ನಾನೊಂದೊಳ್ಳೆ ಗಾಡೀನ ಕಡ್ಮೆ ರೇಟಿಗೆ ಕೊಡಿಸ್ತೀನಿ ಮೇರಾ ದೋಸ್ತ್. ಜಾಡ್ರ ಕಾಳಪ್ಪನತ್ರ ಯಯ್ಪಿಸಿಕ್ಸ್ ಮಾಡೆಲ್ ಅವಂತಿ ಐತೆ. ಬೋತಿಂಗು ಬರ್ದಂಗೆ ಓರಾಯ್ಲು ಮಾಡಿಸಿಟ್ಟಿದ್ದಾನೆ… ಏನು ಬ್ರೇಕೂ? ಏನು ಗೇರೂ? ಒಂದ್ಲೀಟ್ರೀಗೆ ಫಿಫ್ಟಿಫೈವ್ ಕೊಡ್ತದಪ್ಪಾ… ಒಳ್ಳೆ ರೆಡ್ಡು ಪೇಂಟಾಕಿಸಿದ್ದಾನೆ… ಬೇಕಂದ್ರೆ ಕೊಡಿಸ್ತೀನಿ… ಇನ್‌ಸ್ಟಾಲ್ಮೆಂಟ್‌ಮ್ಯಾಲೇ ಕೊಟ್ರಾಯ್ತು… ಚಂಬಸ್ಯಯ್ಯ ಹೇಳ್ದಂತೆ ಕೊಟ್ರೂಗೂ ಇಲ್ಗೂ ಅಪ್ಪಂಡೌನ್ ಮಾಡಿಬಿಡು ಮಾರಾಯಾ” ಎಂದು ಇಸ್ಮಾಯಿಲು ಕಕ್ಕುಲಾತಿಯಿಂದ ನುಡಿದನು.
ಮೇನೇಜರು ಹೆಬ್ರಿಯವರು…
“ಉತ್ತರ ಪ್ರದೇಶದ ಸರಯೂದ್ಂದಾ ಕಡೆ ಇನ್ನೂ ರಮಾಯಣ, ಮಹಾಭಾರತದ ಎಪಿಕ್ ಲೈಫ್ ಸ್ಟೈಲು ಇನ್ನೂ ಜೀವಂತ ಇದೆ ನೋಡು ಇಸ್ಮಾಯಿಲ್… ಅಲ್ಲಿ ಗೋಡೋ, ಗೋರಖ್ಪುರ್ ಕಾಡೊಳ್ಗೆ ಇನ್ನೂ ಭಾರತೀಯ ಆರ್ಷೇಯ ಸಂಸ್ಕೃತಿ ಆಚರಿಸ್ತಾನೆ ಬದುಕಿದ್ದಾರೆ ಜನ…
ಅಲ್ಲಿನ ಯಾವ ಲೈಂಗಿಕ ಕ್ರಿಯೆಗೂ ವ್ಯಭಿಚಾರ, ಸೂಳೆಗಾರಿಕೆ ಅನ್ನೋದೆ ಇಲ್ಲ ನೋಡಿ. ಅಲ್ಲಿ ಒಬ್ಬನಿಗೆ ಐದಾರು ಜನ ಹೆಂಡ್ರು ಇರೋದ್ನೂ ನೋಡಿದೆ. ಏಳೆಂಟು ಮಂದಿ ಗಂಡಸರೊಂದಿಗೆ ಬಾಳುವೆ ಮಾಡ್ತಿರೋ ಫೂಲವಂತಿ ಮೊಲೆ ಇಷ್ಟಿಷ್ಟು ದಪ್ಪ ಇರಬೌದು ನೋಡಿ. ನನ್ನ ಲೆಕ್ಕಾಚಾರದ ಪ್ರಕಾರ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಶ್ರೀರಾಮಚಂದ್ರನ ಸಂಗಡ ಅಯೋಧ್ಯೆಯ ಸಾವಿರಾರು ಮಂದಿ ಸ್ರೀಪುರುಷರೂ ಹೋದ್ರು ಎಂಬ ಸತ್ಯವನ್ನು ನಾನು ಇತ್ತೀಚೆಗೆ ಪತ್ತೆ ಹಚ್ಚಿದ್ದೀನಿ ಚಂಬಸ್ಯಯ್ಯಾ… ಕಳಕೊಂಡಸತಿಯನ್ನು ರಾಮ ಹುಡುಕುತ್ತಾ, ಹುಡುಕುತ್ತಾ ವಯಾ ಈ ಪ್ರದೇಶದ ಮೂಲಕ ಶ್ರೀಲಂಕಾದ ಕಡೆ ಹೋದ… ಶ್ರೀರಾಮನನ್ನು ಹುಡುಕುತ್ತಾ, ಹುಡುಕುತ್ತಾ ಸಾವಿರಾರು ಮಂದಿ ಅಯೋಧ್ಯೆಯ ಸ್ರೀಪುರುಷರೂ ಸುಸ್ತಾಗಿ ಈ ಇಲ್ಲೇ ನೆಲೆ ನಿಂತರು ನೋಡು… ಅವರೇ ಕೊತ್ತಲಿಗಿಯ ಮೂಲ ನಿವಾಸಿಗಳು ಕಣಪ್ಪಾ… ಇಂಥ ಕಡೆ ಸಂಸಾರ ಸಮೇತ ವಾಸ ಮಾಡೋಕೂ ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿರ್ಬೇಕು ಶಾಸ್ತ್ರಿ. ಮಕ್ಳು ಪಥ ಸಂಚಲನಕ್ಕೆ ಹೋಗ್ತಿರೋದ್ರಿಂದ ನೀನು ಅಪ್ಪಂಡೌನ್ ಮಾಡಬೇಕಾಗಿದೆ” ಎಂದು ಮುಂತಾಗಿ ಹೇಳಿದರು ನಿರರ್ಗಳವಾಗಿ.
ಇಸ್ಮಾಯಿಲ್ಲಗೆ ಅದಕ್ಕೆ ಪ್ರತಿಯಾಗಿ ಏನು ಹೇಳಬೇಕೋ ತಿಳಿಯಲಿಲ್ಲ. ಚಂಬಸ್ಯನೂ ಅಷ್ಟೆ… ತಲೆ ಕೆರೆದುಕೊಂಡ.
ಅವರೆಲ್ಲ ಅಲ್ಲಿಂದ ಕದ್ಲಿ ಹೋದ ಮೆಲೆ ಓಬಳೇಶ ಶಾಮಣ್ಣಗೆ ಜೊತೆಯಾದ…
“ಅವ್ರೆಲ್ಲ ಇಲ್ಲಿ ವಾಸ ಮಾಡ್ತಿರೋರು ದನಗಳೂಂತ ತಿಳ್ಕೊಂಡಾರೆ… ಅವರ ಮಾತು ಕಟ್ಕೊಂರೆ ಕೂಳಿಗೆ ಕೂಳು, ನೀರಿಗೆ ನೀರು ಅಷ್ಟೇ” ಎಂದು ಹೇಳಿದ ಅವನಿಗೆ ಶಾಮಣ್ಣ ಒಂದು ಮಸಾಲೆ ದೋಸೆ ತಿನ್ನಿಸಿ ಒಂದು ಕಾಫಿ ಕುಡಿಸಿದ. ಇದರಿಂದ ಹುಮ್ಮಸ್ಸು ಹೆಚ್ಚಿಸಿಕೊಂಡ ಓಬಳೇಶ ಸ್ವಲ್ಪ ಓಪನ್ ಆದ.
“ಈ ಮೂರ್‍ಮಂದಿ ಒಳಾಗಿಂದು ಹೊರಾಗಿಂದು ನಂಗೆಲ್ಲ ಗೊತ್ತು ಸೋಮಿ… ಎಲ್ಲಾ ಬಿಚ್ಚಿ ಡ್ರಾಯರು ಮ್ಯಾಲೆ ಅವ್ರು ನಿಂತ್ಕಳ್ಳಿ ಗಂಡಸ್ರಾದ್ರೆ… ಆಗ ಗೊತ್ತಾಗತೈತಿ ಅವ್ರ ಹಣೇ ಬರಾ… ಈ ಊರಾಗೇನೈತೋ ಅದೆಲ್ಲ ಅವ್ರ ಮಯ್ಯಿಮ್ಯಾಗ ಐತೆ ನೋಡ್ರಿ… ಆ ಚಂಬಸ್ಯಯ್ಯ ತನ್ ಮಗಳ್ನ ಎಲ್ಲೆಲ್ಲಿ ಎನೇನು ಮಾಡಲಕ ಇಟ್ಟಾನೆಂಬೋದು ನಿಮ್ಗೆ ಗೊತ್ತಾದ್ರೆ ನೀವಿವ್ರ ಸಂಗಾಟ ಒಂದ್ ಸೆಕೆಂಡಿರಾಕಿಲ್ಲ ಬಿಡ್ರಿ… ಆ ಇಸ್ಮಾಯಿಲ್ಲೂ ಅಷ್ಟೆ… ಹೆಬ್ರಿನೂ ಅಷ್ಟೆ ಅದ್ನೆಲ್ಲ ಕಟ್ಕೊಂಡೀಗ ಮಾಡೊದಾದ್ರು ಏನೈತೆ… ಈಗ್ನಿಮ್ಗೊಂದು ಮನಿ ತೋರಿಸ್ಬೇಕಷ್ಟೆ!… ಆ ಕೆಲಸಾನ ನಂಗೆ ಬಿಡ್ರಿ… ಅರ್‍ಮನೆಯಂಥ ಮನೇನ ಕೊಡ್ಸೋ ಜವಾಬ್ದಾರಿ ನಂದು… ನೀವು ಚಿಂತೆ ಮಾಡೋದು ಬ್ಯಾಡ… ನೀವು ನಾಳೆ ಬರೋ ಹೊತ್ಗೆ ನೋಡಿಟ್ಟಿರ್‍ತೀನಿ” ಎಂದು ಹೇಳಿ ಹೋದನು.
ಸಹೋದ್ಯೋಗಿಗಳ ಪೈಕಿ ಇಸ್ಮಾಯಿಲ, ಚಂಬಸ್ಯಯ್ಯ ಆಡಿದ ಮಾತುಗಳನ್ನು ಹೆಜ್ಜೆಹೆಜ್ಜೆಗೊಂದರಂತೆ ಗಾಳಿಗೆ ಬಿಟ್ಟನು. ಹೆಬ್ರಿಯವರ ಮಾತಿನಲ್ಲಿ ಕೆಲವೊಂದು ಪೂರ್ವಗ್ರಹಗಳ ವಾಸನೆ ಇರುವುದನ್ನು ಗುರುತಿಸಿದನು.
“ಏನೋ ಶಾಮಾ… ಹೆತ್ತೋಳ್ಗಿಂತ ಹೆಚ್ಚಾದ್ಲೇನೋ ನಿಂಗೆ… ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ಅವಳ್ನೊಂದೆ ಕರ್‍ಕೊಂಡೋಗಬೇಕೆಂದ್ಕೊಂಡಿದ್ದೀಯಾ… ಅಲ್ಲಿ ಅವಳೇನು ನಿನ್ನ ಆರೈಕೆ ಮಾಡ್ತಾಳೋ ಮಾಡ್ಲಿ… ನನ್ನ ದೇಹ ನನ್ಗೆ ಭಾರ ಆದೀತಾ… ತುಲಸಿ ರಾಮಾಯಣವನ್ನೋ; ಲಲಿತಾಷ್ಟಕವನ್ನೋ ಓದ್ಕೊಂಡು ಕಾಲ ಹಾಕ್ತೀನಿ…. ಏನೇ ವರಲಕ್ಷ್ಮೀ… ತಾಯಿ ಮಗನ್ನಗಲಿಸಿ ಅದ್ಯಾವ ನರಕಕ್ಕೆ ಹೋಗ್ತೀಯೇ ಮಳ್ಳೀ… ಅದೆಷ್ಟು ದಿನ ನಿನ್ನಾಟ ನಡೀತದೋ ನಡಿಯಲಿ… ನಾನೂ ನೋಡ್ತೀನಿ” ಎಂದು ತಾಯಿ ವಟಗುಟ್ಟುತ್ತಿದ್ದ ಮಾತುಗಳನ್ನು ನೆನಪಿಸಿಕೊಳ್ಳುತ್ತ ಗ್ರಾಮೀಣ ಸಾರಿಗೆ ಹತ್ತಿದ….
ಜೀವಾವಧಿ ಶಿಕ್ಷೆಗೊಳಗಾಗಿರುವ ಖೈದಿಯಂತೆ ತಲೆ ತಗ್ಗಿಸಿ ನಡೆಯುತ್ತ ಮನೆ ತಲುಪಿದ. ಪಡಸಾಲೆಯ ಒಂದು ಕಡೆ ಬತ್ತಿ ಹೊಸೆಯುತ್ತ ಕೂತಿದ್ದ ತಾಯಿ ಅಲುಮೇಲಮ್ಮನೂ; ನೆಲ ಬಳಿಯುತ್ತಿದ್ದ ಹೆಂಡತಿ ವರಲಕ್ಷ್ಮಿಯೂ ತಲಾ ಒಂದೊಂದು ಕೋನದಲ್ಲಿ ತನ್ನ ಕಡೆ ನೋಡಿ ನಿಟ್ಟುಸಿರು ಬಿಟ್ಟರು ಸುಯ್ ಅಂತ.
ಬಟ್ಟೆ ಬದಲಾಯಿಸಿ ಬಚ್ಚಲಿಗೆ ಹೋಗಿ ಬಂದ.
“ಸ್ನಾನ ಮಾಡಿ ಸಂಧ್ಯಾವಂದನೇನೆ ಮಾಡಲ್ವೇನೋ… ಪುರುಷ ಸೂಕ್ತ ಹೇಳೋದ್ಬೇ ವಾರ್‍ದಿಂದ ನಾನು ಕೇಳೇ ಇಲ್ಲ… ಮಾವನವ್ರು ಹೊರಟು ಹೋದ್ಮೇಲೆ ಮನೆ ಎಂಬೊದು ಶೂದ್ರರ ದನದ ಕೊಟ್ಟಿಗೆಗಿಂತ ಅತ್ತತ್ತ ಆಯ್ತು… ಒಂದು ಮಡಿ ಇಲ್ಲ ಒಂದು ಆಚಾರ ಇಲ್ಲ…” ಎಂದು ಕೂತ ಕಡೆಯಿಂದ ಕೂಗಿ ಹೇಳಿತು.
ಆ ಮಾತಿನಿಂದ ಖತಿತಳಾಗಿ ವರಲಕ್ಷ್ಮಿಯು –
“ಅದಕ್ಯಕತ್ತೆ ಹಂಗತೀರಾ… ನಾನೇನೀ ಮನೇನ ದನದ ಕೊಟ್ಟಿಗಿ ಮಾಡೀವ್ನಾ… ಬೆಳಗ್ನಿಂದ ಒಂದು ಕಾಳು ನೀರ್‍ನ ಬಾಯ್ಗೆ ಹಾಕ್ಕೊಳ್ದೆ ವಿಶೇಷಾರ್ಚನೆ ಮಾಡ್ಲಿವಾ…” ಎಂದು ಮಾತೆಸೆದಳು.
“ಹ್ಹಾ…ಹ್ಹಾ… ಮಾಡಿದ್ದೀಯಾ… ಮಸಡಿದ್ದೀಯಾ… ಬಚ್ಚಲೊಳಗೆ ಕೂತ್ಕೊಂಡು ಅವಲಕ್ಕಿ ಕೊಬ್ರಿ ಮುಕ್ಕುತ್ತಿದ್ನ ನಾನ್ನೋಡಿಲ್ಲಾಂತ ಅಂದ್ಕೊಂಡೀ ಏನು!”
ಅತ್ತೆಯವರ ಮಾತು ಕೂರ್ದನಿಯಂತೆ ತಿವಿಯಲು ಜಿಗಿದು ನಿಂತಳು ವರಲಕ್ಷ್ಮಿಯು –
“ಆಯ್ಯೋ ರಾಮ ರಾಮಾ… ಎಂಥಾ ಮಾತಾಡ್ತಿದೀರಲ್ಲ ಅತ್ತೆ. ನಾನೇನಾದ್ರು ಹಾಗೆ ಮಾಡಿದ್ದ ಪಕ್ಷದಲ್ಲಿ ನನ್ನ ಕೈಕಾಲು ಬಿದ್ದು ಹೋಗ್ಲಿ… ಇವತ್ತು ಹೇಳಿ ಕೇಳಿ ರಥಸಪ್ತಮಿ, ತಿಲಮಿಶ್ರಿತ ಜಲಸ್ನಾನ ಮಾಡಿ ಹೊರಗಡೆ ಬಂದು ಯದಾ ಜನ್ಮಕ್ಷತಂ ಶಾಪಂ ಮಯಾ ಅಂತ ನೂರು ಸಾರಿ ಜಪಿಸಿದ್ದನ್ನು ನೀವೇ ಕೇಳಿದ್ದೀರಿ… ಅವರ ಸಂಧ್ಯಾವಂದನೆಗೆ ಅನುಕೂಲವಾಗ್ಲೀ ಅಂತ ನಾನು ಶುಚಿ ಮಾಡ್ತಿದ್ರೆ ಮೇಲೀ ಮಾತಾಡ್ತಿದ್ದೀರಿ” ಎಂದು ಪಟಪಟ ಹೇಳಿ ನನ್ನ ಕಡೆ ತಿರುಗಿ –
“ಅವ್ರ ಮಾತು ಕೇಳಿ ಅಪಾರ್ಥ ಮಾಡ್ಕೋಬೇಡಿ… ವಯಸ್ಸಾದೋರು ಹಾಗೆ ಮಾತಾಡೋದ್ರಲ್ಲಿ ತಪ್ಪೇನು ಇಲ್ಲ… ಯಾರು ಏನೇ ಹೇಳ್ಕೊಳ್ಳಿ… ನಾನು ಪ್ರಾಣ ಬೇಕಾದ್ರೆ ಬಿಡ್ತೀನೇ ಹೊರತು ಆಚಾರ ವಿಚಾರವನ್ನು ಮಾತ್ರ ಬಿಡೋಳಲ್ಲ” ಎಂದು ಅಫಿಡವಿಟ್ ಸಲ್ಲಿಸಿದಳು.
ತನ್ನ ತಾಯಿ ಮಾಡುತ್ತಿರುವುದು ಸುಳ್ಳು ಅಪಾದನೆಯಂತ ತನಗೆ ಗೊತ್ತು. ತನ್ನನ್ನು ಹೆಂಡತಿ ವಿರುದ್ಧ ಎತ್ತಿಕಟ್ಟುವ
ಪ್ರಯತ್ನವನ್ನು ಅನೇಕ ಸಾರಿ ಮಾಡಿರುವಳು. ಆದರೆ ತಾನು ಎಹ್ಟು ಮಾತ್ರಕ್ಕೆ ಸೊಪ್ಪು ಹಾಕಿಲ್ಲ. ತನಗು ವರಲಕ್ಷ್ಮಿ ಬಚ್ಚಲಲ್ಲಿ ಏನೆಲ್ಲ ತಿನ್ನುವುದು ಬೇಕಾಗಿದೆ. ಆದರೆ ಆಕೆ ಹಾಗೆ ಮಾಡಬೇಕಲ್ಲ. ಮಡಿ ಆಚಾರಗಳೇ ಸ್ತ್ರೀರೂಪ ಧರಿಸಿ ತನ್ನ ಹೆಂಡತಿಯಾಗಿರುವಳೆಂದುಕೊಂಡಿರುವೆನು.
ಪ್ರತಿದಿನ ಒಂದಲ್ಲಾ ಒಂದು ತಿಥಿ ನಕ್ಷತ್ರ ಶೋದಿಸಿಯೇ ಆಕೆ ದಿನಚರಿ ಆರಂಭಿಸುವುದು. ಯಾವುದೇ ವ್ರತ ನಿಯಮ ನೋಂಪಿಯನ್ನು ಪತಿಪತ್ನಿಯರೀರ್ವರೂ ಸೇರಿ ಮಾಡಿದಾಗ ಮಾತ್ರ ಪುಣ್ಯ ಸಂಚಯವಾಗುವುದಾಗಿ ಹೇಳುವಳು…
ಆದರೆ ಇವತ್ತು ರಥಸಪ್ತಮಿಯನ್ನು ಹಿಡಿದುಕೊಂಡಿದ್ದಾಳೆ. ಮನೆಯಲ್ಲಿದ್ದರೆ ಕಾಫಿ ಒತ್ತಟ್ಟಿಗಿರಲಿ ಒಂದು ಕಪ್ಪು ನೀರನ್ನು ಸಹ ಕುಡಿಯಲು ಆಸ್ಪದ ಕೊಡಲಾರಳೆಂದುಕೊಂಡ ಶಾಮ ಹೊರಡುವ ಅವಸರದಲ್ಲಿ ಎಡಗಾಲ ಚಪ್ಪಲಿಯನ್ನು ಬಲಗಾಲಿಗೂ ಬಲಗಾಲ ಚಪ್ಪಲಿಯನ್ನು ಎಡಗಾಲಿಗೂ ತೊಡುವ ಪ್ರಯತ್ನ ಮಾಡುತ್ತ ಸಿಕ್ಕಿಬಿದ್ದ.
“ನ್ರೀ, ಆಗಲೇ ಹೊರಡ್ತಿದೀರಲ್ಲ… ಇವತ್ತು ರಥಸಪ್ತಮಿ ಎಂಬುದನ್ನು ಮರ್‍ತುಬಿಟ್ಟಿರೇನು? ಅದ್ಹೇಗೆ ಬೇಳೆಸಿದ್ರೆನೋ ಈ ಅತ್ತೆಯವರು- ಶ್ರೀರಾಮನಿಗೇ ಗೊತ್ತು!” ಎಂದು ಓಡಿ ಬಂದು ಕೈಹಿಡಿದು ತಡೆದಳು ವರಲಕ್ಷ್ಮಿ.
ಆಕೆಯ ಸ್ಪರ್ಶ ಎಷ್ಟೊಂದು ಆಪ್ಯಾಯಮಾನವಾಗಿತ್ತು ಎಂದರೆ ಆ ಕೂಡಲೆ ಸುಖೋಪಭೋಗವನ್ನು ಸವಿಯಬೇಕೆಂಬ ಮನಸ್ಸಾಯಿತು. ಆದರೆ ಆ ಆಸೆ ಕ್ಷಣಭಂಗುರವೆಂದು ಅರ್ಥವಾಯಿತು.
“ಏನೇ… ನನ್ನ ಮಗನ್ನ ನಾನೂ, ಮಾವನವ್ರೂ ಹೇಗೆ ಬೆಳೆಸಿದೆವಂಥ ಕೇಳ್ತಿದ್ದೀಯಾ… ಹೇಳ್ತೀನಿ ಕೇಳೆ…” ತಾಯಿಯ ಮಾತು ಮುಂದುವರಿದಿರುವುದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಹೆಂಡತಿಯು ತನ್ನನ್ನು ಬಚ್ಚಲಿಗೆ ಎಳೆದುಕೊಂಡು ಹೋಗಿ
ಯದಾ ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು
(ಹೇಳ್ತಾ ಸ್ನಾನ ಮಾಡ್ತೀ… ಆ ಎಲ್ಲ ಮಂತ್ರ ತನಗೆ ನೆನಪಿದ್ದರೆ ತಾನೆ! ಆಕೆ ಹೇಳಿದಳು)
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮಿ
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಂ|
ಮನೋ ವಾಕ್ಕಾಯಜಂ ಯಚ್ಚ ಜ್ಞಾತಾ ಜ್ಞಾತೇಚಯೇ ಪುನಃ
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ
ಸಪ್ತವ್ಯಾಧಿ ಸಮಾಯುಕ್ತ ಹರಮಾಕರಿ ಸಪ್ತಮಿ||… ಎಂದು ಮುಂತಾಗಿ ಆಕೆಯೆ ಹೇಳುತ್ತ ಸ್ನಾನ ಮಾಡಿಸಿದಳು… ಹೆತ್ತ ಕೂಸಿಗೆ ತಾಯಿ ಸ್ನಾನ ಮಾಡಿಸಿದಂತೆ…
ಇವತ್ತು ರಥಸಪ್ತಮಿ ಎಂದು ಮೊದಲೇ ನೆನಪಿಗೆ ಬಂದಿದ್ದಲ್ಲಿ ಆತ ಹೋಟಲಿಗೆ ಹೋಗಿ ತಿಂಡಿ ಗಿಂಡಿ ತೆಗೆದುಕೊಂಡು ಮನೆಯಲ್ಲಿ ಕಾಲಿಡುತ್ತಿದ್ದ… ತೋಳಿಲ್ಲದ ರವಿಕೆಯನ್ನು ತೊಡೆಸಿದರೆ ತನ್ನ ಹೆಂಡತಿ ಜಿ.ಎಂ.ಶಾಂತಿ ಥರ ಕಾಣಿಸಬಹುದೆ ಎಂದುಕೊಂಡ. ಹಾಗೆ ಕಲ್ಪಿಸಿಕೊಂಡು ಹೆಂಡತಿಯ ತೋಳು ಸವರಲು ಪ್ರಯತ್ನಿಸುತ್ತಲೇ ‘ಸಪ್ತ ಸಪ್ತಿವಹ” ಎಂಬ ಮಂತ್ರ ಗೊಣಗುತ್ತ ಸೂರ್ಯದೇವನಿಗೆ ಅರ್ಘ್ಯ ಕೊಟ್ಟ…
ಉತ್ತರಾಬಾದ್ರೆ ನಕ್ಷತ್ರದಲ್ಲಿ ಹುಟ್ಟಿ ಮೀನ ರಾಶಿಯಲ್ಲಿ ಜಾಗ ಪಡೆದಿರುವ ತಾನು ರಥಸಪ್ತಮಿಯ ಪುಣ್ಯ ರಾತ್ರಿಯಂದು ಹೊಟ್ಟೆತುಂಬ ಊಟಮಾಡಬಾರದೆಂದೂ, ಸಂಭೋಗ ಕಲ್ಪಿಸಿಕೊಂಡರೆ ರೌರವ ನರಕ ಪ್ರಾಪ್ತವಾಗುವುದೆಂದೂ ಆಕೆ ಹೇಳಲು ಶಾಮನು ವಿಧಿಯನ್ನು ಹಳಿಯುತ್ತ ಅವಲಕ್ಕಿ ತಿಂದು ಬೋರಲು ಮಲಗಿ ನೂರಾರು ಕನಸು ಕಂಡನು. ಪರಸ್ತ್ರೀಯರ್ರ್‍ ಕಿಕ್ಕಿರಿದ್ದಿಂತಹ ಕನಸುಗಳು ಅವು… ಬೆಳಗಾಗೆ ಹೆಂಡತಿಗೆ ಹೇಳಿದರೆ ವಿವಾಹೇತರ ಸಂಬಂಧವನ್ನು ತನ್ನ ಗಂಡ ಕನಸಿನಲ್ಲಾದರೂ ಇಟ್ತುಕೊಂಡಿರಬಹುದೆಂದು ಆಕೆ ಊಹಿಸಿ ಸಂದೇಹಿಸದಿರಲಾರಳೆಂದುಕೊಂಡ.

ಮರುದಿನ ಸೂರ್ಯೋದಯಕ್ಕೂ ಪೂರ್ವದಲ್ಲೇ ಅತ್ತೆ ಸೊಸೆಯರೀರ್ವರ ವಾಗ್ವಾದ ತಾರಕಕ್ಕೆ ಮುಟ್ಟಿತ್ತು. ಅವರ ಜಗಳಕ್ಕೆ ಹೆದರಿ ಉದಿಸಲು ದಿನಕರ ಹಿಂದೇಟು ಹಾಕುತ್ತಿದ್ದ. ತಾಯಿ ವ್ಯಾಸ ಪೀಠದ ಮುಂದೆ ಜಪಮಾಲೆ ಹಿಡಿದು ಕೂತಿರುವುದನ್ನೂ; ಹೆಂಡತಿ ತುಲಸೀ ಕಟ್ಟೆಗೆ ಪೂಜೆಮಾಡುತ್ತಿರುವುದನ್ನೂ ಗಮನಿಸಿ ಎಚ್ಚರಗೊಂಡ. ಬ್ರಾಹ್ಮೀ ಮುಹೂರ್ತದಲ್ಲಿ ಗಂಡನನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಳು.
ಲಗುಬಗೆಯಿಂದ ಶಾಮ ಎದ್ದು ಒಂದಿತ್ತು, ಒಂದಲ್ಲ ಎನ್ನೋ ಹಾಗೆ ಶೌಚಾದಿ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ನಶ್ಯ ಪುಡಿ ಬಣ್ಣದ ಪ್ಯಾಂಟು ಧರಿಸಿದ. ಪವಿತ್ರ ಶ್ರೋತ್ರಿಗಳ ವಂಶದಲ್ಲಿ ಜನಿಸಿ ಪ್ಯಾಂಟು ತೊಡುವುದೆಂದರೇನು? ಮಡಿಧೊತರ ಉಟ್ಟು ನೌಕರಿಗೆ ಹೋಗಬಾರದೇಕೆ? ಹೆಂಡತಿ ಗೊಣಗುತ್ತ ಮಜ್ಜಿಗೆ ಅನ್ನ ಕಲೆಸಿಟ್ಟಿದ್ದ ಟಿಫಿನ್ ಬಾಕ್ಸ್ ಕೈಗೆ ಕೊಟ್ಟಳು.

ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಹೊರಟು ಕೊತ್ತಲಿಗಿ ತಲುಪಿದ.
ಹಿಂದಿನ ದಿನ ರಥ ಸಪ್ತಮಿಯಾಗಿದ್ದ ಕಾರಣಕ್ಕೋ ಅದು ಪವಿತ್ರ ಮಾಘಮಾಸದ ಅಷ್ಟಮಿಯ ದಿನವಾಗಿದ್ದರಿಂದಾಗಿಯೋ, ಹಿರೇಮಗಳುರಿರಿನಿಂದ ‘ರಾಸ್ವಸೇ’ದ ರಾಜ್ಯ ಘಟಕದ ಸಂಚಾಲಕರಾದ ಶ್ರೀಯುತ ಚಕ್ರವರ್ತಿಯವರು ಬಂದು ನಿಕ್ಕರು ಪ್ರದರ್ಶಿಸಲಿರುವ ಕಾರಣಕ್ಕೋ ಮೇನೇಜರು ಹೆಬ್ರಿಯವರು ಅಂದು ರಜೆ ಹಾಕಿದ್ದರು.

ಇಸ್ಲಾಮಿನ ಪವಿತ್ರ ಮೂರ್ತಿಯಾದ ಅಯತುಲ್ಲಾ ಖೋಮೇನಿ ಮರಣದಂಡನೆ ಘೋಷಿಸಿರುವ ಸಲ್ಮಾನ್ ರಷ್ಡಿ ಬರೆದದ್ದೆನಲಾದ ಕೃತಿಯೊಳಗಿಂದ ಜಮಾತೆ ಇಸ್ಲಾಮಿಗೆ ಸ್ಪೂರ್ತಿ ಪಡೆಯುವ ನಿಮಿತ್ತ ಸೆಟಾನಿಕ್ ವರ್ಸೆಸ್ಸನ್ನು ಕಂಕುಳಲ್ಲಿಟ್ಟುಕೊಂಡು ಇಸ್ಮಾಯಿಲು ಮೇನೇಜರ ಗತ್ತಿನಿಂದ ಬ್ಯಾಂಕಿನೊಳಗೆ ತಿರುಗಾಡುತ್ತಿದ್ದನು. (ಪ್ರವಾದಿಯವರನ್ನು ಹೀಗಳೆದ ಕಥೆ ಪ್ರಕಟಿಸಿದ್ದ ಇಂಗ್ಲೀಷ್ ದಿನಪತ್ರಿಕೆಯ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲು ಕುಂತಳನಾಡಿನಿಂದ ಹೋಗಿದ್ದ ನೂರು ಮಂದಿ ತಂಡದ ನೇತೃತ್ವವನ್ನು ಇಸ್ಮಾಯಿಲು ವಹಿಸಿದ್ದ ಎಂಬುದು ಪೋಲೀಸ್ ದಾಖಲೆಯಲ್ಲಿದೆ)
ತನ್ನನ್ನು ಯಾರೋ ನೋಡಲು ದುಬಾ‌ಐಯಿಂದ ಬರುತ್ತಿದ್ದಾರೆ ಎಂಬ ಕಾರಣದಿಂದ ಕು.ಜಿ.ಎಂ.ಶಾಂತಿ ರಜೆ ಹಾಕಿದ್ದಳು. ಅದನ್ನೇ ಒಂದು ಜೋಕು ಮಾಡಿಕೊಂಡು ಅಡ್ಡಾಡುತ್ತಿದ್ದ ಓಬಳೇಶನು ತನ್ನ ಪ್ರಿಯತಮೆ ಏನೋ ಎಂಬಂತೆ ಫೈಲು ಹಿಡಿದು ಬಂದು ಕಿವಿಯಲ್ಲಿ ತ್ರೀ ಹಂಡ್ರಡ್ ಬಾಯಿ ಇಟ್ಟು “ಸೋಮಿ… ಮನೆ ನೋಡಿದ್ದೀನಿ… ಲಂಚ್ ಅವರಾದ್ಮೇಲೆ ಹೋಗಾಣು” ಎಂದ. ಶಾಮ ಹ್ಹೂ ಅಂದ.
ಅದಕ್ಕೂ ಮೊದಲೆ ಗುಂಡುಮುಣುಗು ಸಿದ್ದನಗೌಡ ಎಂಬ ರೋಹಿಯಾವಾದಿ ಸಾಲಕೊಡಿಸಲು ಹತ್ತಾರು ಮಂದಿ ರೈತರನ್ನು ಕಟ್ಟಿಕೊಂಡು ಬಂದು ಒಳಗೆ ಬೀಡು ಬಿಟ್ಟಿದ್ದ. ಆತ ಮಾತು ಮಾತಿಗೆ ಲೋಹಿಯಾರವರು ಹಳ್ಳಿಗಳ ಸರ್ವತೋಮುಖ ಪ್ರಗತಿ ಕುರಿತು ಏನು ಹೇಳಿದ್ದಾರೆಂದರೆ ಎಂಬ ಪಲ್ಲವಿ ಪೋಣಿಸುತ್ತ ತಲೆ ನೋವಾಗಿದ್ದ. ಆ ತಲೆನೋವಿಗೆ ಒಂದು ತಿಂಗಳ ಇತಿಹಾಸವಿದೆ.

ಅಪಾತ್ರರಿಗೆ ಸಾಲವನ್ನಾಗಲೀ, ವಿದ್ಯೆಯನ್ನಾಗಲೀ, ಅನ್ನವಾಗಲೀ ಕೊಡಬಾರದೆಂದು ವೇದೋಪನಿಷತ್ತುಗಳಲ್ಲಿ ಹೇಳಿದೆ ಎಂದು ಯೋಚಿಸಿ ಮನಸ್ಸಿನಲ್ಲಿಟ್ಟುಕೊಂಡು ಸದರಿ ದಿನ ಬರಲು ಹೇಳಿ ಬರಲು ಹೆಬ್ರಿ ರಜೆ ಹಾಕಿದ್ದರು.
ನಲವತ್ತನೇ ವಯಸ್ಸಿನಲ್ಲಿ ಅಂದರೆ ಕಳೆದ ವಾರ ಇನ್ನೇನು ಮುಟ್ಟು ನಿಲ್ಲಲ್ಲಿದೆ ಎಂಬಂತಿದ್ದ ಹೆಂಗಸನ್ನು ಮದುವೆಯಾಗಿ ಕ್ರಾಂತಿ ಮಾಡಿದ ಗೌಡರು “ಕಸ್ಟಮರ್ ಈಸ್ ಗಾಡ್, ಗಾಡ್ ಈಸ್ ಕಸ್ಟಮರ್ ಕಣ್ರೀ… ನೇಗಿಲಿಗೆ ಸಿಟ್ಟು ಬರೋಕು ಮೊದ್ಲೆ ಇವ್ರೀಗೆ ಲೋನ್ ಸ್ಯಾಂಕ್ಷನ್ ಮಾಡ್ರಿ… ಇಲ್ಲಾಂದ್ರೆ… ನಾವು ರೈತ ವಿರೋಧಿ ಬ್ಯಾಂಕಿನ ಮುಂದೆ ಸತ್ಯಾಗ್ರಹ ಆರಂಭಿಸ್ತೀವಿ” ಎಂದು ಷೋಕಾಸ್ ನೋಟೀಸು ನೀಡಿಬಿಟ್ಟ.
ಅದನ್ನು ಕೇಳಿ ಎಲ್ಲರು ಅಲ್ಲಾಡಿ ಹೋದರು. ಕೊತ್ತಲಿಗಿ ಸೆಗ್ಮೆಂಟ್ ಏರಿಯಾದಲ್ಲಿ ನೂರಾರು ಚಳುವಳಿ ಮಾಡಿರುವ ಅನುಭವ
ಗುಂಡುಮುಣುಗು ಗೌಡರಿಗುಂಟು. ಉಪವಾಸ ಕೂತು ರಾಜ್ಯದ ನೂರಾರು ಮಂದಿ ನಾಯಕರ ಗಮನ ಸೆಳೆದಿರುವ ಆತನನ್ನು ಎದುರು ಹಾಕಿಕೊಳ್ಳುವ ಧೈರ್ಯ ಖುದ್ದ ಚಿನ್ನದಿಂದ ಮಾಡಲ್ಪಟ್ಟ ಈಚಲು ಮರವನ್ನು ಪೂಜಿಸುವ ಈಡಿಗರಿಗೂ ಇಲ್ಲ…

ಹೆಬ್ರಿ ಮೇಲೆ ರೈತ ನಾಯಕರನ್ನು ಎತ್ತಿಕಟ್ಟಲು ಇದೇ ಸುವರ್ಣಾವಕಾಶವೆಂದು ಬಗೆದ ಇಸ್ಮಾಯಿಲು, ಚಂಬಸ್ಯಯ್ಯ ಗೌಡರ ಬಳಿಗೆ ಹೋಗಿ “ಇದ್ರಲ್ಲಿ ನಮ್ಮದೇನು ತಪ್ಪು ಐತೆ ಗೌಡ್ರೇ…” ಬರಲಿಕ್ಕೆ ಹೇಳಿ ರಜೆ ಹಾಕಿದ್ದು ಮೇನೇಜರ್ರು ತಪ್ಪಲ್ಲೇನು? ಆತ ಬಂದ್ಮೇಲೆ ಕೊರಳ ಪಟ್ತಿ ಹಿಡ್ದು ಕೇಳಿ… ಅದ್ಕೆ ಅಡ್ಡ ಬಂದ್ರೆ ಕಪಾಳಕ್ಕೆ ಹಾಕಿ, ಆಯ್ತಾ” ಎಂದು ಹೇಳಿದರು.

“ಆ ಹೆಬ್ರೀನೂ ಅಷ್ಟೇ ನೀವು ಕೊಬ್ರೀನೂ ಅಷ್ಟೇ ಕಾಣ್ರೀ… ಬ್ರಾಂದಿ ಇನ್ ಡಿಫರೆಂಟ್ ಬಾಟಲ್ಸು… ನಿಮ್ಮಂಥ ಬ್ಯೂರೋಕ್ರಾಟ್ಸನ್ನ ನಂಬ ಬಾರ್ದೂಂತ ನಮ್ ಲೋಹಿಯಾ ಹೇಳಿದ್ದಾರೆ. ಅದ್ಕೆ ನಾವು ಅಮರಾಣಾಂತ ಉಪಾಸ ಸತ್ಯಾಗ್ರಹ ಆರಂಭಿಸ್ತೀವಿ” ಎಂದು ಅವರ ಮುಖಕ್ಕೆ ರಾಚಿದಂತೆ ಹೇಳಿ ಸಣ್ಣ ರೈತರ ಕಡೆ ತಿರುಗಿ “ಇವ್ರಿಗೆ ಬುದ್ಧಿ ಕಲಿಸಬೇಕೆಂದ್ರೆ ಉಪಾಸ ಸತ್ಯಾಗ್ರಹವೊಂದೇ ಬ್ರಹ್ಮಾಸ್ತ್ರ, ಬರ್ರಿ ಸತ್ಯಾಗ್ರಹ ಮಾಡೋಣ” ಎಂದು ಹೇಳಿದನು ಗುಮುಸಿ ಗೌಡ’
ಆತನ ಮಾತು ಕೇಳಿ ರೈತರು ತಲೆಕೆರೆದುಕೊಂಡರು.

“ಏಯ್… ಹೋಗಿ ಗವುಡ್ರೆ… ಸಾಲ ಕೊಡಿಸ್ತೀನಂತ ಕರ್ಕೊಂಡು ಬಂದು ನಮ್ಮನ್ನ ಉಪಾಸನ್ವಾಸ ಕುಂಡ್ರುಸ್ತಿದ್ದೀರಲ್ಲ? ಇದೇ ಕೆಲಸಾನ ನಮ್ಮನ್ಯಾಗ ನಾವು ಮಾಡ್ತಿಲ್ಲೇನು? ಬ್ಯಾಂಕಿನೋರು ಸಾಲ ಕೊಟ್ರೆ ಹತ್ತು, ಕೊಡ್ಲಿಲ್ದಿದ್ರೆ ಇಪ್ಪತ್ತು… ನಡ್ಕೋತ ನಮ್ಮೂರ್‍ಕಡೀಕೆ ನಾವೊಂಟೋಕೀವಿ… ನಿಮ್ಗೂ ಬುದ್ಧಿ ಇಲ್ಲಾಂದ್ರೆ ನಮ್ಗೂ ಇಲ್ಲೇನು?” ಎಂದು ಹೇಳಿ, ಟುವೆಲ್ಲು ಕೊಡವಿ ಹೆಗಲ ಮೇಲೆ ಹಾಕಿಕೊಂಡು ಬಸ್‌ಸ್ಟಾಂಡಿನ ದಾರಿ ಎಲ್ಲೈತೆಲ್ಲೈತಂತ ಹೊರಟೇ ಬಿಟ್ಟರು.
“ಹೋಗ್ರೋ ಹೋಗ್ರಿ… ಸತ್ಯಾಗ್ರಹದ ಮರ್ಮ ಅರ್ಥಾಗ್ದ ಹೊರ್‍ತು ನೀವು ಉದ್ಧಾರಾಗೋದಿಲ್ಲ… ನಮ್ಮ ದೇಶ ಉದ್ಧಾರಾಗ್ದೆ ಐದು ಸಾವ್ರ ವರ್ಷದ ಹಿಂದೆ ಎಲ್ಲಿತ್ತೋ ಅಲ್ಲೇ ಉಳಿಕೋತೈತಿ” ಎಂದು ಅವರನ್ನು ಬೀಳ್ಕೊಟ್ಟು ಗೌಡರ ತನ್ನ ಹೆಗಲ ಮೇಲಿದ್ದ ಹಸಿರು ಟವಲನ್ನೇ ಧ್ವಜದೊಪಾದಿಯಲ್ಲಿ ಅಂಗಳದ ಕ್ರೋಟನ್ ಗಿಡಕ್ಕೆ ನೇತುಹಾಕಿ, ಪದ್ಮಾಸನ ಹಾಕಿಕೊಂಡು ಕೂತೇ ಬಿಟ್ಟರು.
ಇವರ ಹೆಂಡತಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಚಂಬಸ್ಯಯ್ಯ ಕಾಫಿ ಕುಡ್ದು ಬರ್ತೀನಂತ ಹೇಳಿ ಹೊರಹೊಂಟನು. ಅವತ್ತು ಕೆಟ್ಟಗಳಿಗೆ ಇದ್ದುದರಿಂದಾಗಿಯೋ! ಜಿಲ್ಲಾ ನಾಯಕನೋರ್ವನ ಭಾಷಣ ಸದರೀ ಗ್ರಾಮದಲ್ಲಿ ಇದ್ದುದ್ದರಿಂದಾಗಿಯೇ ಏನೋ ಯಾರೊಬ್ಬರೂ ಬ್ಯಾಂಕಿನ ಕಡೆ ಬಂದಿರಲಿಲ್ಲ.
ಅರ್ಧ ಮುಕ್ಕಾಲು ಗಂಟೆಗೂ ಮೊದಲೆ ಲಂಚ್ ಅವರ್ ಶುರು ಆಯಿತು. ಕು.ಶಾಂತಿಯ ಗೈರುಹಾಜರಿಯಿಂದಾಗಿ ‘ಲಂಚವರ್ರೂ’ ಬನ್ನಿ ವೃಕ್ಷದಂತೆ ಬಿಕೋ ಎನ್ನಲಾರಂಭಿಸಿತು.

ತನ್ನ ಗಂಡನ ದೇಹದಲ್ಲಿ ತಾಮಸ ಗುಣ ಉದ್ಭವಿಸಬಾರದೆಂಬ ಕಾರಣದಿಂದ ಹೆಂಡತಿ ಕಟ್ಟಿದ್ದ ಮಜ್ಜಿಗೆ ಅನ್ನವನ್ನು ಬ್ಯಾಂಕಿನ ಘೂರ್ಕಾ ಎಂದೇ ಹೆಸರುಪಡೆದಿದ್ದ ನಾಯಿಗೆ ಹಾಕಲು ಓಬಳೇಶನಿಗೆ ಕೊಟ್ಟ. ಅವನು ಹಾಕಿ ಬಂದು “ಇನ್ನು ನಾವು ಮನೆ ನೋಡಲಕ ಹೋಂಡೋನೇನ್ರಿ” ಅಂದ.
ಇಸ್ಮಾಯಿಲ್ ಹೇಳಿದ “ಗೌಡ ಯಜಿಟೇಷನ್ನು ಮಾಡ್ತಿರುವಾಗ್ಲೆ ಹೋಗಬೇಕೇನು ಶಾಸ್ತ್ರಿ” ಅಂದ. ಅದೇ ಹೊತ್ತಿಗೆ ಚಂಬಸ್ಯನ ಜೊತೆ ಬಂದ ಶ್ರೀಮತಿ ಪಾರ್ವತಮ್ಮ ಗುಮಿಸಿಗೌಡರಿಂದಾಗಿ ಸತ್ಯಾಗ್ರಹ ಕಾಲಾಫ್ ಲಕ್ಷಣ ತೋರಿತು.
ಶಾಮು ಓಬಳೇಶರು ಪದ ವಿಂಗಡನೆಗೊಂಡ ವಕ್ರ ಮತ್ತು ಉಕ್ತಿಗಳಂತೆ ಹೊರ ಹೊಂಟರು. ಇಲ್ಲಿ ಮುಳುಗುತ್ತ ಅಲ್ಲಿ ತೇಲುತ್ತ; ಅಲ್ಲಿ ಮುಳುಗುತ್ತ ಇಲ್ಲಿ ತೇಲುತ್ತ ಸೈಬೀರಿಯನ್ ಹಕ್ಕಿಗಳಂತೆ ಅವರೀರ್ವರು ನಡೆಯತೊಡಗಿದರು.

ತಾಮಸ, ಸಾತ್ವಿಕ ಪ್ರವೃತ್ತಿಗಳೇ ವ್ಯಕ್ತಿರೂಪ ಧರಿಸಿ ನಡೆಯುತ್ತರುವರೇನೋ ಎಂಬಂತೆ ಅವರೀರ್ವರೂ ನಡೆಯ ತೊಡಗಿದರು.
ನಾಗರೀಕ ಅನಾಗರೀಕ ಜಾಯಮಾನಗಳಂತೆ; ಸುರ ಅಸುರರಂತೆ; ಹಿಂದಿನಕಾಲದ ಇಂದಿನ ಕಾಲಗಳಂತೆ; ಅಂತರಂಗ ಬಹಿರಂಗದಂತೆ ಅವರು ನಡೆಯುತ್ತಿರುವುದನ್ನು ಸಮಸ್ತರು ನೋಡತೊಡಗಿದರು.

ಕೆಲವರಂತೂ ಅಯ್ಯೋ ಪಾಪ!… ಇವನಿಗೇನು ಬಂತು ರೋಗ ಎಂಬಂತೆ ನೋಡ ತೊಡಗಿದರು. ಕೆಲವರು ಹ್ಹೋಽಽಹ್ಹೋಽಽಹ್ಹೋಽಽಃಃಓಽಽ ಎಂದು ಉದ್ಗರಿಸಿ ಶುಭ ಕೋರಿದರು. ಇಂಥ ಕಂಟಕ, ಸಂಕಟಗಳ ಮೂರ್ತಿವೆತ್ತ ಓಬಳೇಶನೇ ಪಕ್ಕದಲ್ಲಿರುವಾಗ ಶಾಮ ಯಾಕೆ ಹೆದರುವುದು?
ತ್ರಿಕಾಲ ಪೂಜೆ ಮಾಡುವಳೆಂದೂ, ಒಬ್ಬ ಬ್ರಾಹ್ಮಣನಿಗಾದರೂ ಊಟಹಾಕದ ಹೊರತು ಒಂದು ತುತ್ತು ಅನ್ನ ಮುಟ್ತುವವಳು ಅಲ್ಲವೆಂದೂ; ಈ ಪ್ರಪಂಚದಲ್ಲಿರುವ ಸಮಸ್ತ ದೇವಾನುದೇವತೆಗಳ ಫೋಟೋಗಳಿಂದ ಮನೆಯ ಗೋಡೆಗಳನ್ನು ಅಲಂಕರಿಸಿರುವಳೆಂದೂ ಸದ್ಗುರು ಸದಾನಂದ ಬಾಬಾರವರು ಮಂತ್ರಿಸಿಕೊಟ್ತಿರುವ ಪವಿತ್ರ ಭಸ್ಮ, ಕುಂಕುಮ ಸದಾ ನೊಸಲ ಮೇಲೆ ಅಲಂಕರಿಸಿಕೊಂಡಿರುವಳೆಂದೂ ಎಂದು ಮುಂತಾಗಿ ಮನೆ ಮಾಲೀಕಳಾದ ಕಾವಲಿ ಫಕೀರಮ್ಮನ ಗುಣಗಾನ ಮಾಡಿದ ಓಬಳೇಶ ದಾರಿಯುದ್ದಕ್ಕೂ.

ಓಬಳೇಶ ಪರಮೆಶ್ವರ ಶಾಸ್ತ್ರಿಗಳ ಮೊಮ್ಮಗನೂ, ಸದರೀ ಗ್ರಮದ ಬ್ಯಾಂಕ್ ಆಫೀಸರನೂ ಆದ ಶಾಮಾ ಶಾಸ್ತ್ರಿಯನ್ನು ತಮ್ಮ ಕೇರಿಗೆ ಕರೆದುಕೊಂದು ಬರುತ್ತಿರುವನೆಂಬ ಸಂಗತಿಯು ಅದಾವ ಮಾದಿಯಿಂದಾಗಿಯೋ ಕೇರಿಯಲ್ಲಿ ಬಿತ್ತರವಾಗಿದ್ದಿತು. ಅಲ್ಲಿನ ಇರುವೆ ಎಂಬತ್ತು ನಾಲ್ಕು ಕೋಟಿ ಜೀವರಾಶಿಗಳು ಆ ಮಹಾಮಹಿಮನನ್ನು ಸ್ವಾಗತಿಸಲು ತುದಿಗಾಲಮೇಲೆ ನಿಂತು ಕಾಯಿತ್ತಿದ್ದವು.

ಬರೀ ಒಂದೇ ನಮೂನಿಯ ಮತ್ತು ಸವಕಲಾದ ಪ್ರಪಂಚವನ್ನು ನೋಡೀ, ನೋಡೀ ಸಾಕಾಗಿದ್ದ ಶಾಮಣ್ಣ ಎದುರಾಗುತ್ತಿದ್ದ ಶಾಮಣ್ಣ ಎದುರಾಗುತ್ತಿದ್ದ ಹೊಸ ಪ್ರಪಂಚವನ್ನೂ,ಹೊಸ ಪ್ರಪಂಚದ ರಂಗುರಂಗಿನ ಜೀವರಾಶಿಯನ್ನೂ; ಪುಳಕಗೊಳಿಸುತ್ತಿರುವ ಭಾವನೆಗಳನ್ನೂ ನೋಡಿ ಮೂಕ ವಿಸ್ಮಿತನಾಗುತ್ತಿದ್ದನು. ನರಕವಾಸಿಯೋರ್ವನಿಗೆ ಸ್ವರ್ಗ ತೋರಿಸಿದಾಗ ಅವನು ಯಾವ ರೀತಿ ಪ್ರತಿಕ್ರಿಯಿಸಬಹುದೋ ಬೆರಗಾಗಬಹುದೋ ಹಾಗೆ…

ಈಗ ಇರುವುಂಥ ಯಾವುದೇ ಅಸಹ್ಯಕರ ಭಾವನೆ ಆ ಕಾಲದಲ್ಲಿರಲಿಲ್ಲ. ಆ ಕಾಲದಲ್ಲಿ ಅದು ಯಕ್ಷರು, ಕಿನ್ನರರು, ಕಿಂಪುರುಷರು, ಗಂಧರ್ವರು ವಾಸಿಸುತ್ತಿರುವ, ವಾಸಿಸಲು ಯೋಗ್ಯವಾದ ಬಡಾವಣೆಯಾಗಿತ್ತು. ಆ ಬಡಾವಣೆಯನ್ನು ದೂರದಿಂದ, ಹತ್ತಿರದಿಂದ ನೋಡಲು ಪ್ರವೇಶಿಸಲು ಎಂಥ ಸಜ್ಜನರು ಹಾತೊರೆಯುತ್ತಿದ್ದರು.
ಶೂದ್ರಾತಿ ಶೂದ್ರನಂತೆ ವೇಷಮರೆಯಿಸಿಕೊಂಡು ಬಂದು ಹೋದ ಅನುಭವಕ್ಕಿಂತ ಶ್ರೋತ್ರಿಯ ನೈಜ ಸ್ವರೂಪದಲ್ಲಿ ಪ್ರವೇಶಿಸುವ ಅನುಭವವೇ ಅನನ್ಯವೆನಿಸಿತು.
ಶನಿವಾರಪೇಟೆ ದಾಟಿದ ನಂತರ ಎದುರಾದ ಬುಧವಾರಪೇಟೆಯೇ ಸೋಮವಾರಪೇಟೆಯ ಬುಲಂದೇ ದರವಾಜ ಇದ್ದಂತೆ ಎಂದೊಂದು ಕ್ಷಣ ಶಾಮನಿಗೆ ಅರ್ಥವಾಗಲಿಲ್ಲ. ದೂರದಲ್ಲೆಲ್ಲೋ ತಬಲ, ಮದ್ದಲೆ, ಕಂಜರ, ದಂಬಡಿಯೇ ಮೊದಲಾದ ಚರ್ಮ ವಾದ್ಯಗಳೂ; ಪಿಟೀಲು, ವೀಣೆ, ತಂಬುರಿಗಳೇ ಮೊದಲಾದ ತಂತಿ ವಾದ್ಯಗಳೂ, ಹಾರ್ಮೋನಿಯುಂಗಳು ಪರಸ್ಪರ ಮಧುರವಾಗಿ ಸಂಭಾಷಿಸುತ್ತಿರುವವೇನೋ ಎಂಬಂತೆ ಕೇಳಿ ಬರುತ್ತಿರುವುದು.
ಅಲ್ಲೊಂದೆರಡು ಕಡೆ ಹುಡುಗಿಯರು ಹುಡುಗರು ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ ಮೊದಲಾದ ಆಟಗಳನ್ನು ಆಡುತ್ತಿರುವುದು ಕಂಡಿತು. ಪಿಟ್ಟೆ ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದ ಎರಡು ನಾಯಿಗಳು ಬಂದು ಶಾಮನ ಕಾಲ ಮೀನ ಖಂಡವನ್ನು ಮೂಸಿ ಹೋದವು.

ಬಾಗಿಲಲ್ಲಿ; ಕಿಟಕಿಯಲ್ಲಿ ನಿಂತು ಕೂತು ಅಡಗಿ ಇಣುಕುವ ಕಿನ್ನರಿ ಯಕ್ಷಿಯರು.
ಸಿದ್ಧಾರ್ಥನ ಕುತೋಹಲದಿಂದ ನೋಡುತ್ತ ಓಬಳೇಶನ ಹಿಂದೆ ಸಾಗಿದ ಶಾಮಣ್ಣ ಅಲ್ಲಿಂದ ಒಂದೈವತ್ತು ಹೆಜ್ಜೆ ನಡೆದು ಅವರು ಮನೆಯೊಂದರ ಮುಂದೆ ನಿಂತರು. ಬಾಗಿಲ ಮುಂದೆ ಸುಂದರವಾದ ತುಲಸಿಕಟ್ಟೆ.
ಓಬಳೇಶ “ಓಯ್ ಪಕ್ಕೀರಮ್ಮತ್ತಾ… ಇಂಟ್ಲೂ ಉನ್ನಾವಾ ಲೇದಾ… ಯಾವರೋಚ್ಚಾರೂ ಸೂಡು… ಬಿರ್‍ನರಾವೇ” ಎಂದು ಕೂಗಿದ.
ತ್ರಿಪುಂಡ್ರಾಕ್ಷೆಯಾಗಿದ್ದ ಸ್ಥೂಲ ದೇಹಿಯೋರ್ವಳು ‘ವಸ್ತುನ್ನಾ, ವಸ್ತುನ್ನಾಽಽ’ ಎನ್ನುತ್ತ ಹೊರಗೆ ಬಂದಳು.
(ಹಿಂದೆ ರಂತಿ ದೇವರು ಮಾಡಿದ ಯಜ್ಞದಲ್ಲಿ ಅನೇಕ ಪಶುಗಳನ್ನು ಕೊಂದು ಅವುಗಳ ಚರ್ಮ ರಾಶಿ ಹಾಕಿರಲಾಗಿ ಅಲ್ಲಿಂದ ಹರಿದು ಬಂದು ಔರೈಯಾದ ಬಳಿ ಯಮುನೆಯನ್ನು ಸೇರಿಕೊಳ್ಳುವ ಚಂಬಲ್ ನದಿಯೇ ಸ್ತ್ರೀರೂಪ ಧರಿಸಿ ಫಕೀರಮ್ಮ ಎಂಬ ಅಭಿಧಾನ ಪಡೆದಿರುವುದೋ…)
ಮಹಾ ಪತಿವ್ರತೆಯೂ; ಅತ್ರಿಮುನಿಯ ಪತ್ನಿಯೂ; ಕರ್ದಮ ಮುನಿಯಿಂದ ದೇವಹೂತಿಯೆಂಬಾಕೆಯಲ್ಲಿ ಜನಿಸಿದವಳೂ ಆದಂಥ ಅನಸೂಯಳು ತನ್ನ ಪ್ರಾತಿವ್ರತ್ಯದ ಪರೀಕ್ಷಾರ್ಥವಾಗಿ ಬಂದ ತ್ರಿಮೂರ್ತಿಗಳಿಗೆ ನಮಸ್ಕರಿಸಿ ಪರ್ಣಕುಟಿಯೊಳಗೆ ಕರೆದುಕೊಂಡು ಹೋದಂತೆ ಫಕೀರಮ್ಮ ನಮಸ್ಕರಿಸಿ ಶಾಮಣ್ಣನನ್ನು ಒಳಗಡೆ ಕರೆದುಕೊಂಡು ಹೋಗಿ ಉನ್ನತಾಸನದ ಮೇಲೆ ಕುಳ್ಳರಿಸಿ, ಹಣ್ಣು ಹಂಪಲು ನೀಡಿ ಸತ್ಕರಿಸಿ ಅಷ್ಟು ದೂರ ನೆಲದ ಮೇಲೆ ಪದ್ಮಾಸನ ಹಾಕಿ ಕುಳಿತುಕೊಂಡಳು. ಒಂದಿಬ್ಬರು ಮೂರು ಮಂದಿ ತರುಣಿಯರು ಆಕೆಯ ಎಡಬಲಕ್ಕೆ ಕೂತುಕೊಂಡು ತಾವು ಅಮಾಯಕರೇನೋ ಎಂಬಂತೆ ನೋಡ ತೊಡಗಿದರು.
ಅವರ ಆ ಮಾದಕ ನೋಟಗಳನ್ನು ಹೇಗೆ ಎದುರಿಸಬೇಕೆಂದು ತಿಳಿಯಲಾರದೆ ಕಕ್ಕಾಬಿಕ್ಕಿಯಾಗಿ, ಆ ಕಕ್ಕಾಬಿಕ್ಕಿಯನ್ನು ಹೊರಗಡೆ ತೋರಗೊಡದಂತೆ, ಅಮಾಯಕನಂತೆ ಕುತಿದ್ದ ಶಾಮಣ್ಣನು ಒಳಗೊಳಗೆ ಪ್ರಾಪಂಚಿಕ ಸೌಂದರ್ಯದ ಬಗ್ಗೆ ಮೂಕವಿಸ್ಮಿತನಾದನಾದರೂ ಮಂದಸ್ಮಿತನಾಗಲಿಲ್ಲ.
( ಅವು ಹಿಂದೆಂದಾರೂ ಮಂದಸ್ಮಿತ ನೋಟದಿಂದ ಯಾವ ಸುಂದರಿಯ ನೋಟವನ್ನು ಎದುರಿದವನಾಗಿದ್ದರೆ ತಾನೆ)
ಫಕೀರಮ್ಮ ಆ ಹುಡುಗಿಯರ ಕಡೆ ತಿರುಗಿ – “ಏಯ್… ಪೆದ್ದವಾಳ್ಳು… ವಾಳ್ಳ ಕಾಳ್ಳಕಿ ಮೊಕ್ಕಿ ನಮಸ್ಕರಿಂಚಕೂಡಾ ಅಲಾಗೆ ಕೂಚಾರಾಮಿ! ಪೋಯಿ ನಮಸ್ಕರಿಂಚಂಡಿ” ಎಂದು ತಾರೀಫು ಮಾಡಿದ್ದು ಕಂಡು ಶಾಮಣ್ಣನ ಎದೆ ಧಸಕ್ಕೆಂದಿತು. ಅವರೆಲ್ಲಿ ಬಂದು ತನ್ನ ಸೂಕ್ಷ್ಮ ಗ್ರಾಹಿಯಾದ ಪಾದಮುಟ್ಟಿ ಬಿಡುವರೋ; ಅದರಿಂದ ತನ್ನ ದೇಹದ ಉಷ್ಣಮಾನದ ಏರಿಕೆಯಾಗಿ ಬಿಡುವುದೋ ಎಂದು ಅವನು ಹೆದರುತ್ತಿರುವಾಗಲೆ ಅವರು ಒಬ್ಬೊಬ್ಬರ್ಂತೆ ಎದ್ದು ಹೋಗಿ ಪಾದ ಮುಟ್ಟಿ ನಮಸ್ಕರಿಸಿಯೇ ಬಿಟ್ಟರು.
ದೀರ್ಘಾಯುಷ್ಮಾನ್ ಭವ ಎಂದು ಆಶೀವದಿಸಬೇಕೋ, ಶೀಗ್ರ ಕಲ್ಯಾಣಮಸ್ತು ಎಂದು ಅಶೀರ್ವದಿಸಬೇಕೋ, ಶತಪುತ್ರ ಸೌಭಾಗ್ಯವತೀರಸ್ತು ಎಂಬ ಗೊಂದಲಕ್ಕೆ ಬಿದ್ದ ಶಾಮಣ್ಣನಿಗೆ ಪೂರ್ಣಚಂದ್ರನ ಮೆಲಿರುವ ಹದಿನರು ಕಾಮಕಲೆಗಳ ಕುರಿತಾದ ಶ್ಲೋಕವೊಂದು ತನಗರಿವಿಲ್ಲದಂತೆ ನೆನಪಾಗಿ ಬಿಡಲು ಅವನು –
ಪೂಷಾ ಯಶಾಸ್ಸು ಮನಸಾ ರತಿಃ ಪ್ರಾಪ್ತಿಸ್ತಥಾ ದೃತಿಃ
ಋದ್ಧಿ ಸ್ಯೌಮ್ಯಾ ಮರೀಶಸ್ಚ ತಥಾ ಚೈವಾಂಶು ಮಾಲಿನೀ
ಅಂಗೀರಾ ಶಶಿನೀ ಚೇತಿ ಛಾಯಾ ಸಂಪೂರ್ಣ ಮಂಡಲಾ
ತಿಷ್ಟಿಶ್ಚೈವಾಮೃತಾ ಚೇತಿ ಕಲಾಸೋಮಸ್ಯ ಷೋಡಶ…
… ಎಂದು ಕಣ್ಣುಮುಚ್ಚಿ ಗಟ್ಟಿಯಾಗಿ ನುಡಿದುಬಿಟ್ಟನು.
ಅದನ್ನು ಕೇಳಿ ಫಕೀರಮ್ಮ ಭಕ್ತಿ ಪರವಳಾಗಿ “ಸಾಕ್ಷಾತ್ ಪರಮೇಶ್ವರ ಶಾಸ್ತ್ರಿಗಳೇ ನಮ್ಮ ಮನೆಗೆ ಬಂದು ಆಶೀರ್ವಾದ ಮಾಡ್ದಂಗಾಯ್ತು” ಎಂದು ಉದ್ಗರಿಸಿದಳು.
ಹುಡುಗಿಯರ ಪೈಕಿ ಎತ್ತರದ ನಿಲುವಿನ ಹುಡುಗಿ ಮಾತ್ರ ಶಾಮಣ್ಣನ ಶ್ಲೋಕೋಚ್ಚಾಣೆಯಿಂದ ಬೆರಗಾಗಲಿಲ್ಲ.. ಆ ಚೌಪದಿಯನ್ನು ಒಂದೆರಡು ಬಾರಿ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವಂತೆ ಕಣ್ಮುಚ್ಚಿ ನಿಂತಿದ್ದು ನಂತರ ತೆರೆದಳು.
“ಇದೇ ಶ್ಳೋಕವನ್ನು ನಾನೂ ಹೇಳ್ಲೇನ್ರೀ ಶಾಸ್ತ್ರಿಗಳೇ” ಎಂದು ಕೇಳಿದಳು.
ಅದರಿಂದ ಆತನಿಗೆ ಆಶ್ಚರ್ಯವಾಯಿತು.
“ಅದ್ನೇಳಾಕೇನದು ಚಿತ್ರಾಂಗದ ನಾಟಕದ ಮಾತಂದ್ಕೊಂಡೀ ಏನೇ ವಿಜ್ಜೀ… ಬಾಯಿ ಮುಚ್ಕೊಂಡು ಕೂಕ ಬಾರೇ” ಎಂದು ಫಕೀರಮ್ಮ ಸಿಡುಕಿದಳು.
“ಹೇಳ್ಲಿ ಬಿಡ್ರೀ…” ಎಂದ ಶಾಮ.
ವಿಜಯ ಕಣ್ಣು ಮುಚ್ಚಿಕೊಂಡು ಪೂಷಾಯಶಸ್ಸು… ಎಂದು ರಾಗ ಬದ್ಧವಾಗಿ ಶುರುಮಾಡಿ ಎಲ್ಲೂ ತಡವರಿಸದೆ ಕಲಾ ಸೋಮಸ್ಯೆ ಷೋಡಶ ಎಂಬಲ್ಲಿಗೆ ಮುಗಿಸಿದಳು.
ತಾನು ಚಿಕ್ಕಂದಿನಲ್ಲಿ ಈ ಶ್ಲೋಕ ಬಾಯಿ ಪಾಠ ಮಾಡಲು ತೆಗೆದುಕೊಂಡಿದ್ದು ವಾರಕ್ಕಿಂತಲೂ ಹೆಚ್ಚುಸಮಯವನ್ನು. ಆದರೆ ಈ ತರುಣಿ ಕಿವಿಯಲ್ಲಿ ಕೇಳಿದೊಡನೆ ನಾಲಿಗೆಗೆ ತಂದುಕೊಂಡು ಒಂದೇ ಏಟಿಗೆ ಹೇಳಿಬಿಟ್ಟಳಲ್ಲ! ಅದೂ ಅಲ್ಲದೆ ಶೂದ್ರ ಕುಲದಲ್ಲಿ ಹುಟ್ಟಿದವಳು..!
ಆಶ್ಚರ್ಯ ಮತ್ತು ಸಂತೋಷ ತಡೆಯಲಾಗದೆ ಶಾಮಣ್ಣ ಎದ್ದುಹೋಗಿ ವಿಜಯಳ ತಲೆಯನ್ನು ಮೆಚ್ಚುಗೆಯಿಂದ ನೇವರಿಸಿ “ಅದ್ಭುತ ಪ್ರತಿಭಾವಂತೆ ಕಣಮ್ಮಾ” ಎಂದು ಉದ್ಗರಿಸಿ ಕೂತನು.
ಅದರಿಂದ ವಿಜಯಳ ಮುಖದಲ್ಲಿ ಯಾವುದೇ ಭಾವನೆ ಮೂಡಲಿಲ್ಲ. ಬದಲಿಗೆ –
“ಇದೇ ಚಂದ್ರನ ಮಂತ್ರ ಶಾಸ್ತ್ರದಲ್ಲಿರೋ ಶ್ಲೋಕ ಹೇಳ್ಳೇನ್ರಿ” ಎಂದು ಕೇಳಿದಳು.
“ವಿಜ್ಜಿ ನಿನ್ನ ತಲೆ ಹರಟೆ ಜಾಸ್ತಿ ಆತು…” ಬಾಯಿ ಮುಚ್ಚಿಕೊಂಡು ಬಂದು ಕೂಡ್ತೀಯೋ ಇಲ್ಲವೋ” ಎಂದು ಫಕೀರಮ್ಮ ಗದರಿಸಿದಳು.
“ಹೇಳಮ್ಮಾ.. ಇದ್ಕಿಂತ ಸಂತೋಷ ಯಾವ್ದಿದೆ” ಎಂದು ಶಾಮಣ್ಣ ಕುತೋಹಲದಿಂದ ಹೇಳಿದ.
ವಿಜಯ ಮತ್ತೆ ಕಣ್ಣು ಮುಚ್ಚಿಕೊಂಡು –
“ಅಮೃತಾ ಮಾನದಾ ಪೂಷಾ ಪುಷ್ಟಿಸುತ್ತಿಷ್ಟೀರತಿ ರ್ಧೃರ್ತಿಃ
ಶಶಿನೀ ಚಂದ್ರಿಕಾ ಕಾಂತ ಜ್ಯ್ರೋತ್ಸ್ನಾ ಶ್ರೀಃ ಪ್ರೀತಿ ರಂಗದಾ
ಪೂರ್‍ಣಾ ಪುರ್‍ಣಾಮೃತಾ ಕಾಮದಾಯಿನ್ಯಶೃಶಿನಃ ಕಲಾಃ… ಇದ್ರ ಅರ್ಥ ವಿವರಣೆ ಮಾಡಿ ಹೇಳಲೇನ್ರಿ ಶಾಸ್ತ್ರಿಗಳೇ” ಎಂದು ಮರು ಪ್ರಶ್ನೆ ಹಾಕಿದಳು.
ಮೊಮ್ಮಗಳ ಈ ವರ್ತನೆಯಿಂದ ಬೇಸರಗೊಂಡ ಫಕೀರಮ್ಮ ಆಕೆಯ ಕಿವಿ ಹಿಡಿದು ಎಳೆದುಕೊಂಡು ಬಂದು ಪಕ್ಕದಲ್ಲಿ ಕೂಡ್ರಿಸಿಕೊಂಡಳು. ಆ ಹುಡುಗಿ ಸ್ಥಿತ ಪ್ರಜ್ಞೆಯಂತೆ ಕೂತು ತನ್ನ ಬೊಗಸೆ ಕಣ್ಣುಗಳಿಂದ ಪಿಳಿಪಿಳಿ ನೋಡ ತೊಡಗಿತು.
ಶಾಮಣ್ಣನಿಗೆ ಆಶ್ಚರ್ಯದ ಜೊತೆ ನಾಚಿಕೆಯೂ ಆಯಿತು. ಸಂತೋಷವನ್ನು, ಮೆಚ್ಚುಗೆಯನ್ನು ಯಾವ ಪರಿವೇಷದ ಸಹಾಯದಿಂದ ವ್ಯಕ್ತಪಡಿಸಬೇಕೆಂಬುದೇ ಒಂದು ಕ್ಷಣ ತಿಳಿಯಲಿಲ್ಲ. ಬೆವೆತ, ಒರೆಸಿಕೊಂಡ.
“ವಿಜಯಾ.. ನೀನು ಸಾಮಾನ್ಯಳಲ್ಲ.. ಅದ್ಭುತ ಪ್ರತಿಭಾವಂತೆ… ದೇವರು ನಿನ್ಗೆ ಒಳ್ಳೆಯದು ಮಾಡ್ಲಿ… ಅದಿರ್‍ಲಿ… ಏನೋದ್ತಿದೀಯಾ?” ಎಂದು ಕೇಳಿದ.
“ಸಂಸ್ಕೃತದಲ್ಲಿ ಬಿ.ಎ., ಮಾಡ್ತಿದೀನಿ ಶಾಸ್ತ್ರಿಗಳೇ” ಎಮ್ದು ಯಾವ ಬಿಂಕು ಬಿನ್ನಾಣವಿಲ್ಲದೆ ನುಡಿಯಿತು.
ಶಾಮಣ್ಣ ತನ್ನ ತಾತನವರನ್ನು ನೆನಪು ಮಾಡಿಕೊಂಡು ನಿಟ್ಟುಸಿರುಬಿಟ್ಟ. ಮನು ಮಹಾಶಯನೇನಾದರು ಎದುರಿಗೆ ಬಂದರೆ ಎರಡು ಸಾರಿ ಜಾಡಿಸಬೇಕೆನ್ನುವಷ್ಟು ಸಿಟ್ಟು ಬಂತು.
ಈ ಓಣಿ ಈ ಊರು ತಾನು ಸಂಸಾರ ಸಮೇತ ವಾಸಿಸಲಿಕ್ಕೆ ಯೋಗ್ಯ ಸ್ಥಳವೆಂದು ನಿರ್ಧರಿಸಿದ.

“ಯತ್ತೈ ಬ್ಯಾಂಕೀಕಿ ಪೋಡಾನಿಕಿ ಪೊದ್ದವುತುಂದಿ… ಇಲ್ಲುನಿ ಚ್ಸೇಕಿ ಪೋದಾಮು” ಎಂದು ಓಬಲೇಶ ಸಮಯ ಪ್ರಜ್ಞೆಯಿಂದ ಎಚ್ಚರಿಸಿದ.
ವಿಜಯಳ ರೂಪ ಮತ್ತು ಬುದ್ಧಿಮತ್ತೆ ತುಂಬಿಕೊಂಡು ಬಾಗಿಲು ದಾಟಿದಾದ ಮೇಲೆ ಆಕೆ ಕಡೆ ಅಭಿಮಾನದಿಂದ ನೋಡಿದ.
ಫಕೀರಮ್ಮ ತಾನು ಕಳೆದು ವರ್ಷವಷ್ಟೆ ಕಟ್ಟಿಸಿರುವ ಮನೆ ಅಲ್ಲಿಗೆ ಕೇವಲ ನೂರು ಅಡಿ ದೂರದಲ್ಲಿತ್ತು. ಮನೆ ಬಗ್ಗೆ ಶಾಮನಿಗೆ ಯಾವ ಕುತೋಹಲವೂ ಉಳಿದಿರಲಿಲ್ಲ. ಅವನಿಗೆ ಕುತೋಹಲವಿದ್ದುದು ವಿಜಯಳ ಬಗ್ಗೆ… ಈ ವಯಸ್ಸಿನಲ್ಲಿ ಅದ್ಭುತ ಸೂಕ್ಷ್ಮಗ್ರಾಹಿಯಾಗಿರುವ ಅವಳು ಅದ್ಭುತ ಹುಡುಗಿ ಎಂದುಕೊಂಡ.

ಆಕೆಯ ನೆನಪಿನಲ್ಲಿ ಮನೆಯ ಮುಂದೆ ಕೊಟ್ಟೂರಿನ ತನ್ನ ಮನೆಯಷ್ಟು ಕಿಮ್ಮತ್ತಿನ ಬಾಗಿಲು, ನಿಷ್ಣಾತ ಕಾಷ್ಠ ಶಿಲ್ಪಿ ತಯಾರಿಸಿದ ಅದರ ಮೇಲೆ ಪರಮೇಶ್ವರ ಕಾಮ ದಹನ ಮಾ‌ಅಡಿದ ಚಿತ್ರಣಾತ್ಮಕ ವಿವರವಿತ್ತು. ಬಾಗಿಲ ಪಲಕಗಳ ಒಂದುಕಡೆ ಪದ್ಮಾಸನೆಯಾದ ಲಕ್ಷ್ಮಿದೇವಿಯ ಚಿತ್ರವಿದ್ದರೆ ಇನ್ನೊಂದು ಪಲಕದ ಮೇಲೆ ಮಹಿಷಾಸುರನನ್ನು ಮೆಟ್ಟಿನಿಂತಿರುವ ಚಾಮುಂಡಿಯ ಚಿತ್ರ ಇರುವುದು.
ಫಕೀರಮ್ಮ ತನ್ನ ಬೊಜ್ಜು ಹೊಟ್ಟೆಯ ‘ಬಾಳೆ’ಯಿಂದ ಬೀಗದ ಗೊಂಚಲು ತೆಗೆಯುವಾಗ ಶಾಮ ಆಕೆಯ ಕಿಬ್ಬೊಟ್ಟೆಯನ್ನೂ; ಸುರುಳಿ ಸುತ್ತಿ ಆತ್ಮಲಿಂಗದಂತಿದ್ದ ಹೊಕ್ಕಳನ್ನೂ ನೋಡಿದ. ಮೂರು ನಾಲ್ಕು ನಮೂನಿಯ ಉಂಗುರಗಳಿದ್ದ ನೀಳ ಬೆರಳುಗಳಲ್ಲಿ ಛಾವಿ ಹಿಡಿದು ಆಕೆ ಅದನ್ನು ಪತ್ತಾಡೊಳಗಡೆ ತೂರಿಸಿ ತಿರುವಿದ್ದು ಅರ್ಥಗರ್ಭಿತವಾಗಿ ಕಂಡಿತು.

ತೆರೆದ ಬಾಗಿಲೊಳಗಡೆ ಮೊದಲಿಗೆ ಪ್ರವೇಶಿಸಿದ ಓಬಳೇಶ ಲೈಟು ಹಾಕಿದನಲ್ಲದೆ ಕಿಟಕಿಗಳನ್ನೂ ತೆರೆದ.

ಅಡುಗೆ ಮನೆಯನ್ನು ಕಿಚನ್‌ರೂಂ ಎಂದೂ; ಬಚ್ಚಲ ಕೋಣೆಯನ್ನು ಬಾತ್ರೂಮ್ ಎಂದೂ, ದೇವರ ಕೋಣೆಯನ್ನು ದೇವರ ಕೋಣೆ ಎಂದೂ ವಿವರಿಸಿದ. ಈ ರೂಮನ್ನಾದ್ರು ಬೆಡ್ರೂಮಾದ್ರು ಮಾಡ್ಕೋ ಬೌದು, ಈ ರೂಮನ್ನಾದ್ರು ಬೆಡ್ರೂಮಾದ್ರು ಮಾಡ್ಕೋ ಬೌದು ಎಂದ. ಒಂದೊಂದು ರೂಮಿಗೂ ಎರಡೆರಡು ಕಪಾಟುಗಳಿದ್ದವು. ಐವತ್ತು ಮಂದಿ ಸಲೀಸಾಗಿ ಕೂಡ್ರಬಹುದಾದಷ್ಟು ವಿಶಾಲವಾದ ಹಝಾರ ಬೇರೆ… ಮನೆ ಹೆಣ್ಣು ಮಕ್ಕಳು ಸಣ್ಣಪುಟ್ಟ ಕೆಲಸಗಳಿಗೆ ಹೊರಗೆ ಹೋಗುವಂತಿಲ್ಲ… ಎರಡು ಮೂರು ಕಡೆ ಕೊಳಾಯಿ, ಕಕ್ಕಸು ಕೋಣೆ, ಅಲ್ಲೊಂದು ಇಲ್ಲೊಂದು ಕಡೆ ಇರುವ ಪುಟ್ಟ ತೆಂಗಿನ ಗಿಡಗಳ ಬುಡಕ್ಕೆ ಬಟ್ಟೆ ತೊಳೆದ ನೀರು ಹರಿದು ಹೋಗುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ಬೆಳೆದು ನೆರಳು ಕೊಡಲಿರುವ ಕಣಗಿಲೆ, ದಾಸವಾಳ ಗಿಡಗಳಡಿ ಆರಾಮ ಛೇರಿನ ಮೇಲೆ ಒರಗಿಕೊಂಡು ಪುರಾಣ ಪಾರಾಯಣ ಮಾಡಬಹುದು. ಈ ಕಡೆ ನಿಂತರೆ ಆ ಕಡೆಯಲ್ಲಿರುವ ಮನೆಯವರು ಕಾಣುತ್ತಾರೆ. ಆ ಕಡೆಯಲ್ಲಿ ನಿಂತರೆ ಈ ಕಡೆಯಲ್ಲಿರುವ ಮನೆಯವರು ಕಾಣುತ್ತಾರೆ. ಆದರೆ ಆ ಕಡೆ ಈ ಕಡೆಯಲ್ಲಿರುವ ಮನೆಯವರಿಗೆ ಈ ಮನೆಯವರು ಮಾತ್ರ ಕಾಣುವುದಿಲ್ಲ… ಫಕೀರಮ್ಮನ ಅಳಿಯ ಚಲುವಯ್ಯನವರು ಮಾಡಿಕೊಟ್ಟ ಬ್ಲೂಪ್ರಿಂಟ್ ಆಧಾರದ ಮೇಲೆ ಕಟ್ಟಿರುವ ಮನೆ, ಚಲುವಯ್ಯ ಅನೇಕ ಮಂತ್ರಿಗಳ ಮನೆಗಳ ಆರ್ಕಿಟೆಕ್ಟು. ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲನಿಯ ಬಹುಪಾಲು ಮನೆಗಳ ವಾಸ್ತುಶಿಲ್ಪಿ, ಬೆಂಗಳೂರಿನಿಂದ ವರ್ಷಕ್ಕೆರಡು ಮೂರು ಸಾರಿ ಇಲ್ಲಿಗೆ ಬಂದು ತಮ್ಮ ವಿಜಯಾಳ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿರುತ್ತಾರೆ. ಪಾಪ! ತಾಯಿಯಿಲ್ಲದ ಹುಡುಗಿಗೆ ಆಕೆಯ ಹೆಣ್ಣಜ್ಜಿಯಾದ ಫಕೀರಮ್ಮನೇ ದಿಕ್ಕು , ಮಗಳಿಗೆಂದು ಚಲುವಯ್ಯನವರೇ ಕಟ್ಟಿಸಿಕೊಟ್ಟಿರುವ ಮನೆ ಇದು.
ಇದೇ ಮನೆಯನ್ನು ಪಾರ್ಟಿ ಆಫೀಸು ಮಾಡಿಕೊಳ್ಳಬೇಕೆಂದು ರಾಜಕಾರನಿಗಳಾದ ಗುಲಾಂ ನಬಿ, ದಯಾನಂದ ಸಾಗರ್ ಮೊದಲಾದವರು ಪೈಪೋಟಿಗಿಳಿದ್ದಿದ್ದುಂಟು. ಜಮಾತೆ ಇಸ್ಲಾಮಿಯ ವಲಯ ಕಛೇರಿಯನ್ನಾಗಿ ಮಾಡಿಕೊಳ್ಳಬೇಕೆಂದು ಇಸ್ಮಾಯಿಲನೂ, ಆರ್.ಎಸ್.ಎಸ್.ನ ವಲಯ ಕಛೇರಿಯನ್ನಾಗಿ ಮಾಡಿಕೊಳ್ಳಬೇಕೆಂದು ಹೆಬ್ರಿಯೂ ಪ್ರಯತ್ನಿಸಿದ್ದುಂಟು. ಪ್ರಸಿದ್ಧ ಆರೆಂಪಿ ಸರ್ಜನ್ ರಾಮಣ್ಣನವರಿಗೂ ಕೊಡಲಿಕ್ಕಾಗಲಿಲ್ಲವೆಂದ ಮೇಲೆ ಪಾರ್ಟಿ ಆಫೀಸಿಗಾಗಲೀ, ಸಂಘಟನೆಯ ಕಛೇರಿಗಳಿಗಾಗಲೀ ಕೊಡಲಿಕ್ಕಾಗುವುದೇ? ಕಮ್ಯುನಿಸ್ಟ್ ಪಾರ್ಟಿ ಕಛೇರಿ ಮಾಡ್ಲಿಕ್ಕೆ ಕಾಮ್ರೇಡ್ ರಾಮಚಂದ್ರರಾವ್ ಕೇಳಿದ್ರು ಅಂದ ಮೇಲೆ ನೀವೇ ಲೆಕ್ಕ ಹಾಕಿ… ಇಲ್ಲಿಗೆ ಒಂದು ಹರಿದಾರಿ ದೂರದಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ವಿಜಯನಗರ ಉಕ್ಕಿನ ಕಾರ್ಖಾನೆ ಮಾಡಬೇಕೆಂದು ನಿರ್ಧರಿಸಿ ಒಂದೆರಡು ದಶಕಗಳ ಹಿಂದೆ ಶಿಲಾನ್ಯಾಸ ಮಾಡಿರೋದ್ರಿಂದಾಗಿಯೇ ಎಡಪಂಥದೋರು, ಬಲಪಂಥದೋರು, ಒಳ್ಳೆಯೋರು, ಕೆಟ್ಟೋರು ಎಲ್ಲಾರು ಇಲ್ಲಿಗೆ ಮುಗೆ ಬಿದ್ದಿರೋದು… ಈ ಮನೆಯ ವಾಸ್ತು ಇಟ್ಟುಕೊಟ್ಟೋರು ನಿಮ್ಮ ತಾತಂದಿರಾಗಿರೋದ್ರಿಂದಾಗಿಯೂ ಇದರಲ್ಲಿ ವಾಸೊಸಲಿಕ್ಕೆ ಎಲ್ಲಾರು ಒಂದಲ್ಲಾ ಒಂದು ಪ್ರಯತ್ನ ಮಾಡ್ತಾನೆ ಇದ್ದಾರೆ.
ಈ ಮನೆಯೊಂದೇ ಅಲ್ಲ… ಇದರ ಜಾಗ ಕೂಡ ಅದ್ಭುತವಾದದ್ದು. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹೆಗ್ಗೆರೆ ಗ್ರಾಮದಿಂದ ರಾಯನೋರ್ವ ಈ ಊರಿಗೆ ಬ್ರೆಡ್ಡಿನ ಸಂಸ್ಕೃತಿಯನ್ನು ಪರಿಚಯಿಸಿದ್ದೂ ಜಾಗದಿಂದಲೇ …ಹೀಗೆ ಹೇಳ್ತಾಹೋದ್ರೆ ಹೊತ್ತು ಹೋಗಿದ್ದೇ ತಿಳಿಯುವುದಿಲ್ಲ.
ಇದಿಷ್ಟು ಓಬಳೇಶನ ಮಾತಿನ ಗ್ರಾಂಥಿಕ ಭಾಷಾ ರೂಪ.
“ಸೋಮಿ, ನಿಮ್ಮ ತಾತನವರೆ ಕಣಪ್ಪ ನಮ್ ಚೆಲುವ್ನೀಗೆ ಒಂದು ದಾರಿ ತೋರಿಸಿಕೊಟ್ಟೋರು. ಅವನೆಷ್ಟಿದ್ರೂ ಮೂರು ಹೆಣುಮಕ್ಳುಹುಟ್ಟಿದ್ಮ್ಯಾಕ ಹುಟ್ದೋನು… ಜನ್ಮದಾರಭ್ಯ ಕುಜ ದೋಷದಿಂದ ಬಳಲ್ತಾ ಇದ್ದ… ನಿಮ್ಮ ತಾತ್ನೋರು ಯಾವ ಗಳಿಗೇಲಿ ಅಂತ್ರ ಮಂತ್ರಿಸಿ ಕಟ್ಟಿದ್ರೋ ಏನೋ… ಅವತ್ನಿಂದ ಛೇಂಜಾತು ನೋಡ್ರಿ ನಮ್ಮ ಚಲುವ್ನ ನಸೀಬು… ಬಂಗಾರದ್ತಟ್ಯಾಗ ಉಂಬುವಷ್ಟು ಆ ದೇವ್ರು ಸಿರಿವಂತಿಗೆ ಕೊಟ್ಟಾನ. ಅದೆಲ್ಲ ಪರಮೇಶ್ವರ ಶಾಸ್ತ್ರಿಗಳ ಆಶೀರ್ವಾದ ಕಣ್ರಪ್ಪಾ… ಹೆಂಗೋ ದೇವ್ರು ಮೆಚ್ಯಾನ… ನೀವಿಲ್ದಿದ್ರೆ ಹೆಂಗೋ ನಮ್ಮನ್ಯಾಗ ಪೂಜೆ ಪುನ್ಸ್ಕಾರ ಸುಸೂತ್ರವಾಗಿ ನಡೀತಾವ… ಇರಾಮ ಸಿಕ್‌ಸಿಕ್ಕಾಗ ನನ್ ಮಮ್ಮಕ್ಳೀಗೆ ಸ್ಲೋಕಾಭ್ಯಾಸ ಮಾಡಿಸ್ರಿ… ನಿಮ್ಗೆ ತಿಳ್ದಷ್ಟು ಬಾಡಿಗೆ ಕೊಡ್ರಿ… ನಾನೇನು ಅಡುವಾನ್ಸು, ಗಿಡುವಾನ್ಸು ಕೇಳೋಳಲ್ಲ… ಆ ದೇವ್ರು ಬೇಕಾದಂಗ ಕೊಟ್ತು ಮರ್‍ತಾನ… ಒಳ್ಳೆ ಟೇಮು ನೋಡಿ ಅಮ್ಮಾವರ್‍ನ ಕರ್ಕೊಂಡು ಬಂದು ಬಿಡ್ರಿ… ಮನೆ ತೊಳ್ಸೀ..ಬಳ್ಸೀ ರೆಡಿ ಮಾಡಿಟ್ಟಿರ್‍ತೀನಿ…” ಎಂದು ಹೇಳಿದ ಫಕೀರಮ್ಮನ ಅಂತಃಕರಣಕ್ಕೆ ಶಾಮ ಶರಣಾಗಿ ಹೋದ.
“ಆಯ್ತಮ್ಮಾ ನಿಮಿಷ್ಟದಂತಾಗ್ಲಿ… ನಾಡಿದ್ದು ದಿನ ಪ್ರಶಸ್ತವಾಗಿದೆ. ಸಂಸಾರ ಸಮೇತ ಬಂದು ಬಿಡ್ತೀವಿ…” ಎಂದ ಶಾಮಣ್ಣ. ಓಬಳೇಶನೊಂದಿಗೆ ಅಲ್ಲಿಂದ ಬೀಳ್ಕೊಂಡ.
*
*
*
ಅತ್ತೆಯಿಂದ ಸೊಸೆ ಅಗಲೋದು ಸೊಸೆಯಿಂದ ಅತ್ತೆ ಅಗಲೋದು ಎಷ್ಜ್ಟೊಂದು ಹೃದಯ ಸ್ಪರ್ಶಿಯಾಗಿರುತ್ತದೆಂಬುದಕ್ಕೆ ಹೊರಟುನಿಂತ ವರಲಕ್ಷ್ಮಿ ಅತ್ತೆಯವರಿಂದ ಅಲುಮೇಲಮ್ಮನ ಪಾದಕ್ಕೆ ಬಿದ್ದು “ಆಶೀರ್ವಾದ ಮಾಡತ್ತೆ…” ಎಂದು ಕೇಳಿದ್ದೇ ಸಾಕ್ಷಿ. ಅದಕ್ಕೂ ಮೊದಲು ಅವರೀರ್ವರ ನಡುವೆ ಭೀಕರ ವಾಗ್ಗದನವಾಗಿತ್ತು.
ತನ್ನನ್ನು ಒಂಟಿ ಮಾಡಿ ಮಗ ತನ್ನ ಹೆಂಡತಿಯನ್ನು ತಾನು ಕರೆದುಕೊಂಡು ಹೋಗಲಿದ್ದಾನೆ ಎಂಬ ಸುದ್ದಿ ತಿಳಿದ ಕ್ಷಣದಿಂದ ಅಲುಮೇಲಮ್ಮ ಕರುಳನ್ನು ಬಾಯಿಗೆ ತಂದುಕೊಂಡು ಹೊಯ್ದಾಡಿದ್ದರು.
ಪೂಜ್ಯ ಶಾಸ್ತ್ರಿಗಳ ಫೋಟೊದೆದುರಿಗೆ ನಿಂತುಕೊಂಡು – “ನೀವು ನನ್ನನ್ನು ಅನಾಥೆಯನ್ನಾಗಿ ಮಾಡಿ ಹೋಗಿ ಬಿಟ್ರಿ ಮಾವನೋರೆ… ನಿಮ್ ಜೊತೆ ನಾನೂ ಹೊರಟು ಬಂದಿದ್ರೆ ಈ ನರಕ ಅನುಭೋಸ ಬೇಕಾಗ್ತಿರ್‍ಲಿಲ್ಲ. ನಾನೇನು ತಪ್ಪು ಮಾಡ್ತಿದ್ದೀನೀಂತ ಈ ನಿಮ್ಮ ಮೊಮ್ಮಗ ನನ್ನನ್ನಿಲ್ಲಿ ಒಂಟಿಯಾಗಿ ಬಿಟ್ಟು ತನ್ನ ಹೆಂಡತಿಯನ್ನು ತಾನು ಕರ್‍ಕೊಂಡು ಹೋಗ್ಲಿಕ್ಕೆ ಸಜ್ಜಾಗಿದಾನೆ? ಎಂಥಾ ಸೊಸೇನ ತಂದು ಕೂರಿಸಿದ್ದೀರಿ ನನ್ ನರೆತಿರೋ ತಲೆ ಮೇಲೆ… ಆಕೆ ಬಂದದ್ದೇ ಬಂದದ್ದು ಮನೆ ರಣರಂಗ ಆಗಿಬಿಟ್ತು. ಮಗನ್ನೂ ಸೊಸೆಯನ್ನೂ ಅವರ ಪಾಡಿಗೆ ಅವರ್‍ನ ಬಿಟ್ಟು ದೂರ ಹೊರಟು ಹೋಗೋಣಾಂದ್ರೆ ನನ್ಗೆ ನನ್ನೋರು ತನ್ನೋರ್ರೆಂಭೋರು ಯಾರಿದ್ದಾರೇಳ್ರಿ…” ಎಂದು ಮುಂತಾಗಿ ಏಕಪ್ರಕಾರವಾಗಿ ಮಾಡುತ್ತಿದ್ದ ಧಾಳಿಯನ್ನು ಹೆಂಡತಿ ವರಲಕ್ಷ್ಮಿಯೂ ಸಮರ್ಥಳಾಗೇ ಎದುರಿಸಿದಳು.
ಓಣಿಯವರು ಬಂದು ಅವರೀರ್ವರ ನಡುವೆ ರಾಜಿ ಕುದುರಿಸಲು ಕೆಲವು ಸೂತ್ರಗಳನ್ನು ಮಂಡಿಸಿದರಾದರೂ ಅವು ಇರುಪಕ್ಷಗಳಿಂದ ತಿರಸ್ಕೃತವಾದವು. ತನ್ನ ಹೆಂಡತಿಯನ್ನು ತಾನು ಕರೆದುಕೊಂಡು ಹೋಗದೆ ಬೇರೆ ದಾರಿಯೇ ಉಳಿಯಲಿಲ್ಲ ಶಾಮನಿಗೆ.
ಒಂಟೆತ್ತಿನ ಬಂಡಿಯ ನಂಜುಂಡಿ ಲಗ್ಗೇಜನ್ನೆಲ್ಲ ಹೇರಿಕೊಂಡು ಬಸ್‌ಸ್ಟಾಂಡ್ ಕಡೆ ಹೋಗಿದ್ದಾನೆ. “ಆಗಾಗ್ಗೆ ಬಂದು ಮುದುಕಿ ಯೋಗಕ್ಷೇಮ ನೋಡ್ಕೊಂಡು ಹೋಗ್ತಿರಪ್ಪ… ಹೆತ್ತ ತಾಯಿ ಎಷ್ಟು ಕೊಟ್ರು ಸಿಗೋದಿಲ್ಲವೆಂದು ಹೆತ್ತೇಳು ಮಕ್ಕಳಿಂದಲೂ ತಿರಸ್ಕೃತಗೊಂಡಿರುವ ವೃದ್ಧೆ ಗಂಗವ್ವ ಹೇಳಿದಾದ ಮೇಲೆ
ತಾನೇನು ಕಡ್ಮೆ ಅಂತ ಬಂದ ಅಂಬಾರಿ ಸುಶೀಲವ್ವ –
“ವರಲಕ್ಷ್ಮಿ ಬಂಗಾರದಂಥ ಹುಡುಗಿಯಪ್ಪಾ… ತಗ್ಗಿಸಿದ ತಲೇನ ಮೇಲೆತ್ತೋದಿಲ್ಲ… ಈಗಿನ ಕಾಲದ ಹುಡುಗಿಯರಂತೆ ಚಮಕ್ ಚಮಕ್ಕಂತ ಅಡ್ಡಾಡೊದಿಲ್ಲ ತಾನಾಯ್ತು ತನ್ ಬಾಳ್ವೆಯಾತು ಅನ್ನಂಗಿರ್‍ತಾಳೆ… ಇಂಥ ಪುರಾಣ ಕಾಲದ ಹುಡುಗೀನ ಮದುವೆಯಾಗಿರೋ ನೀನೇ ಪುಣ್ಯವಂತ… ಹೆಂಡ್ತಿ ಮಾತ್ನ ಮೀರಬ್ಯಾಡ… ಆಕೇ ಮನಸೀಗೆ ನೋವಾಗೋ ಹಂಗ ನಡಕೋ ಬೇಡ… ಮನೆ ಹೆಂಡತಿ ಉಸ್ರು ಬಿಟ್ರೆ ಒಳ್ಳೆಯದಾಗೊಲ್ಲ…” ಎಂದು ಮುಂತಾಗಿ ಸಾಂಸಾರಿಕ ನೀತಿ ಸಂಹಿತೆಯನ್ನು ಮಂಡಿಸಿದಳು.
ಏನು ತಿಳಿಯಿತೋ ಏನೋ ವರಲಕ್ಷ್ಮಿ ಕಣ್ಣಿರಿನಿಂದ ಮುಖವನ್ನು ಒದ್ದೆ ಮಾಡ್ಕೊಂಡು ನಿಂತಿದ್ದ ತನ್ನತ್ತೆಯ ಬಳಿಗೆ ದುಡುದುಡನೆ ಹೋದವಳೆ ಕೊಸರಿ ದೂರಸರಿಯಲು ಸಾಧ್ಯವಾಗದಂತೆ ಆಕೆಯ ಪಾದವನು ಗಟ್ಟಿಯಾಗಿ ಹಿಡಿದುಕೊಂಡು –
“ಅಷ್ಟಪುತ್ರ ಸೌಭಾಗ್ಯವತೀರಸ್ತೂಂತ ಆಶೀರ್ವಾದ ಮಾಡ್ರಿ ಅತ್ತೆಮಾಽಽ” ಎಂದು ಕೇಳಿಯೇ ಬಿಟ್ಟಳು.
ಸೊಸೆ ವರ್ತನೆಯಿಂದ ಅತ್ತೆಯ ಹೃದಯ ಜಲಜಲ ಕರಗಿ ಹೋಯಿತು. ಆ ಸಂತೋಷಕ್ಕೂ ಅಳುತ್ತ ಆಶೀರ್ವಾದ ಮಾಡಿದಳಲ್ಲದೆ ರೆಟ್ಟೆ ಹಿಡಿದು ಮೇಲಕ್ಕೆತ್ತಿ ಗಾಢವಾಗಿ ಅಪ್ಪಿಕೊಂಡು… ಅತ್ತೆಯ ಹುದಯಪರಿವರ್ತನೆಗೆ ಬೆರಗಾಗಿ ಸೊಸೆಯೂ ಭಾವ ಪರವಶಳಾದಳು… ಆ ಕ್ಷಣದಿಂದ ಅವರಿಬ್ಬರು ಅಂತಃಕರಣದ ಎರಡು ನಮೂನೆಗಳಾದರು. ನೋಡಿದವರೆಲ್ಲರೂ ಗದ್ಗದಿರಾದರು.
ಅತ್ತೆ ಸೊಸೆಯಂದಿರಿದ್ದರೆ ಅಲುಮೇಲಮ್ಮ ವರಲಕ್ಷ್ಮಿಯರಂತಿರಬೇಕು ಎಂಬಂತೆ.
“ಅತ್ತೆಮ್ಮಾ ನೀವೊಬ್ರೆ ಹೆಂಗಿರ್‍ತೀರಾ? … ನಂಗೆ ಭಯವಾಗ್ತದೆ ನಾನು ಹೋಗೋದಿಲ್ಲ ನಿಮ್ ಸೇವೆ ಮಾಡ್ಕೊಂಡಿಲ್ಲೇ ಇರ್‍ತೀನಿ ಅತ್ತೆಮ್ಮಾ” ವರಲಕ್ಷ್ಮಿ ಪ್ಲೇಟು ಬದಲಾಯಿಸಿ ಎಲ್ಲರನ್ನೂ ಮುಖ್ಯವಾಗಿ ಗಂಡನನ್ನು ಅಚ್ಚರಿಗೀಡು ಮಾಡಿದಳು.
ಅದಕ್ಕಿದ್ದು ಅಲುಮೆಲಮ್ಮ ಬಾಯಿ ದೊಡ್ಡದು ಮಾಡಿ ನಗೆಯಾಡುತ್ತ –
“ದೀಪ ನುಂಗೋ ನನ್ಗೆ ದೀವಟಿಗೆ ನುಂಗೋ ಸೊಸೆಯಾಗಿರೋ ನೀನೆ ಹೇಗಾಡಿದ್ರೆ ಹೇಗಮ್ಮಾ… ನೀನು ನಿನ್ ಗಂಡನ್ಜೊತೆ ಒಂದು ಕಡೆ ನೆಮ್ಮದಿಯಿಂದ ಜೀವಿಸಬೇಕೆಂದಾಗಬೇಕೆಂದೇ ನಾನೀ ಹಂಚಿಕೆ ಹೂಡಿದ್ದು… ನಿನ್ನಂತೆ ನಾನೇನು ಆ ಅಂಜುಪುಕ್ಕನ ಹೆಂಡತಿಯಾಗಿದ್ದೆ ಅಂತ ತಿಳ್ಕೊಂಡಿ ಏನು? ನಾನು ಮಿಲಿಟರಿ ಆಫೀಸರ ಹೆಂಡತಿಯಾಗಿದ್ದೋಳು ತಿಳಿತಾ… ನನ್ ಕಡೆ ನೀವು ಚಿಂತೆ ಮಾಡೋದು ಬೇಕಾಗಿಲ್ಲ…” ಎಂದು ಕೆಚ್ಚೆದೆಯಿಂದ ಧೈರ್ಯ ಹೇಳಿದ್ದು ಕಂಡು ಶಾಮಣ್ಣನಿಗೆ ಆಶ್ಚರ್ಯ ಮತ್ತು ಸಂತೋಷವಾಯಿತು.
ಅಲುಮೆಲಮ್ಮ ಅಷ್ಟು ದೂರದವರೆಗೆ ಹೋಗಿ ಮಗ ಸೊಸೆಯನ್ನು ಬೀಳ್ಕೊಟ್ಟಳು.
ಶಾಮಂಣ ದಂಪತಿಗಳು ಜೊತೆ ಜೊತೆಯಾಗಿ ಬಸ್‌ಸ್ತಾಂಡ್ ಕಡೆ ದಯಮಾಡಿಸುತ್ತಿರುವುದನ್ನು ಓಣಿಯ ಅಬಾಲವೃದ್ಧರಾದಿಯಾಗಿ ಎಲ್ಲರೂ ಕಣ್ತುಂಬ ನೋಡಿ ಶುಭ ಕೋರಿದರು. “ಲೋ ಮಿತ್ರ… ನಿನ್ ಬರವಣಿಗೆಗೆ ತುಸು ಹೊತ್ತು ವಿಶ್ರಾಂತಿ ಕೊಡ್ತೀಯಾ ನಮ್ಮಪ್ಪಾ… ಗಾರ್ದಭವೊಂದು ಮೂತ್ರ ವಿಸರ್ಜಿಸಿದಂತೆ ಸುಮ್ಮನೆ ಬರ್‍ಕೊಂಡು ಹೋಗ್ತಿದೀಯಲ್ಲ… ಕೆಲವು ಕಡೆ ಓದುಗರನ್ನು ರಂಜಿಸುವ ನಿಮಿತ್ತ ಸುಳ್ಳುಗಳನ್ನು ಪೋಣಿಸ್ತಿದೀಯಾಂತ ಅನ್ನಿಸ್ತಿದೆ” ಹಸ್ತ ಪ್ರತಿಯೊಳಗಿಂದ ಶಾಮಣ್ಣನ ಆತ್ಮವು ಕೂಗಿಕೊಂಡಿತು.
ಬಸ್ಸಿನಲ್ಲಿ ತಾನು ಹಿಡಿದ ಸೀಟಿನಲ್ಲಿ ಹೆಂಡತಿಯನ್ನು ಪ್ರತಿಷ್ಟಾಪಿಸಿ ಚಿಲ್ಲರೆ ವಿಷಯವಾಗಿಯೋ ಟಿಕೆಟ್
ಕೊಡಲಿಲ್ಲವೆಂದೋ, ಕೊಟ್ಟ ಟಿಕೆಟ್‌ನಲ್ಲಿ ಪಂಛ್ ಮಾಡಿಲ್ಲ ಎಂದೋ ತನಗಿರೋ ಪ್ರಪಂಚ ಜ್ಞಾನ ಅನುಮಾನಿಸ್ತಿದೀಯಾ ಎಂದೋ ಶಾಮಣ್ಣ ಕಂಡಕ್ಟರ್ ಬಳಿ ತಗಾದೆ ಶುರು ಮಾಡಿದ ಎಂದು ನಾನು ಬರೆಯುತ್ತಿದ್ದ ನಾನು ಬರೆದದ್ದನ್ನು ಅರ್ಧಕ್ಕೆ ನಿಲ್ಲಿಸಿ ದಿಗ್ಭ್ರಮೆಗೊಂಡು ಆರೊಗ್ಯ ಸುಧಾರಿಸಿ ಹೊಸತನದಿಂದ ನಳನಳಿಸುತ್ತಿರುವ ಶಾಮಣ್ಣನ ಪಾತ್ರದ ಕಡೆ ನೋಡಿದೆ.
“ನಡುವೆ ಮತ್ತೆ ಕಾಣಿಸಿಕೊಂಡು ತಕರಾರೆತ್ತಿದ್ದಕ್ಕೆ ಕೃತಜ್ಞತೆಗಳು ಶಾಮೂ… ಕೆಲವು ವಾಸ್ತವಾಂಶಗಳನ್ನು ಅನುಲಕ್ಷಿಸಿ ಕೆಲವು ಸುಳ್ಳುಗಳನ್ನು ಪೋಣಿಸದೇ ಹೋದ್ರೆ ಕಾದಂಬರಿ ಕಳೆಗಟ್ತಿದೇನೋ… ಸದರೀ ಕಾದಂಬರಿಯ ವಿವಿಧ ಅಂಗಳಗಳಲ್ಲಿ ವರ್ಣ ವಕ್ರತೆ, ಪದ ವಕ್ರತೆ ಬಳಸದೆ ಹೋದರೆ ಬರಹದಿಂದ ಧ್ವನಿ ಎಂಬುದು ಹುಟ್ಟಬಹುದೇನೋ… ‘ಕವಿ ವ್ಯಾಪಾರ ವಕ್ರತಾ’ ಎಂಬ ಕುಂತಕನ ಸಿದ್ಧಾಂತ ಬಳಸಿಕೊಂಡು ಬರೆ ಅಂತ ನೀನೇ ಹೇಳಿದ್ದು ಮರೆತು ಬಿಟ್ಟೆ ಏನು?” ಎಂದು ನನ್ನ ವಕ್ರಬುದ್ಧಿಯನ್ನು ಸಮರ್ಥಿಸಿಕೊಂಡೆನು.

ಏನೋ ಒಂದಿಷ್ಟು ಬರೆದ ಮಾತ್ರಕ್ಕೆ ಕುಂತಕನ ಮರಿಮೊಮ್ಮಗನಂತೆ ಮಾತಾಡ್ತಿದ್ದೀಯಲ್ಲೋ ಬೇಕೂಫಾ… ವಾಣಿಜ್ಯ ದೃಷ್ಟಿಯಿಂದ ನೀನು ಕೆಲವು ರಂಜನೀಯ ಅಂಶಗಳನ್ನು ಸೇರಿಸ್ತಿದೀಯಲ್ಲಾ… ಇದ್ಕೆ ನಾನು ನಿನಗೆ ಏನು ಹೇಳೋದು? ಡಾ. ಅಭಿಷೇಕ್ ಗೋಡ್ಲೆ ಬರೆದಿರೋ ಪಿಹೆಚ್ಡೀ ಪ್ರಬಂದವನ್ನಷ್ಟೇ ಆಧಾರವಾಗಿಟ್ಟುಕೊಂಡು ಕೊತ್ತಲಿಗಿಯ ಸಾಮಾಜಿಕ ವಿನ್ಯಾಸವನ್ನು ವಿಶ್ಲೇಷಿದ್ದು ಎಷ್ಟರಮಟ್ಟಿಗೆ ಸರಿ? ನೀನು ನಿನ್ನ ಬದುಕಿನ ದ್ರವ್ಯದ ಮಾಪನದಿಂದ ನೋಡುವ ಗೋಜಿಗೆ ಹೋಗಲಿಲ್ಲ. ಹೆಬ್ರಿ, ಇಸ್ಮಾಯಿಲ್ ಎಂಬಿಬ್ಬರು ಮೂಲಭೂತವಾದಿಗಳಿಗೆ ಮುಖಾಮುಖಿಯಾಗಿ ಕಾಮ್ರೇಡ್ ಪಶುಪತಿ ಎಂಬುವನು ಆ ವ್ಯವಸ್ಥೆಯೊಳಗೆ ಹುಟ್ಟಿಕೊಂಡಿದ್ದು ನಾನಲ್ಲಿಗೆ ನೌಕರಿಗೆ ಸೇರಿದ ಮೇಲೆಯೇ. ಅವನು ಹಿಂದೆಂದೋ ಆರ್.ಎ ಬ್ರಾಂಡಿನ ರಘುರಾಮನ ಪೂರ್ವಾಶ್ರಮದಲ್ಲಿದ್ದು; ಅವನಿಂದ ತರಬೇತಿ ಪಡೆದು ಬಂದಿದ್ದನಂತೆ. ನನ್ನ ಬ್ರಾಹ್ಮಣ್ಯವನ್ನೆ ಒಂದು ದೌರ್ಬಲ್ಯವೆಂದು ಭಾವಿಸಿ ಅನೇಕ ಸಂದರ್ಭಗಳಲ್ಲಿ ನನ್ನ ಮೇಲೆ ಮಾನಸಿಕವಾಗಿ ಆಕ್ರಮಣ ಮಾಡಿದ. ಅದರ ಕಡೆ ನೀನು ಕಣ್ಣು ಹೊರಳಿಸಲಿಲ್ಲ.

ಆ ಇಂಜಿನಿಯರ್ ಚಲುವಯ್ಯನ ಮಗಳು ವಿಜಯ ಸಂಸ್ಕೃತದಲ್ಲಿ ನನಗಿಂತ ಬುದ್ಧಿವಂತಳು ಎಂಬ ಅರ್ಥದಲ್ಲಿ ಬರೆದಿರುವಿ… ಕೇವಲ ಶೂದ್ರತ್ವ ಮತ್ತು ಲಿಂಗದ ಆಧಾರದ ಮೇಲೆ ನೀನು ಆಕೆ ಪರ ವಕಾಲತ್ತು ಮಾಡಿರುವಿಯಲ್ಲದೆ, ನಾನು ಶತದಡ್ಡ; ಮೂರ್ಖನೆಂಬಂತೆ ಬರೆದಿರುವಿ. ಆಕೆ ತಾನು ಹೇಳಿದ ಶ್ಲೋಕಾರ್ಥ ವಿವರಿಸಲಿಕ್ಕೆ ನೀನು ಅಡ್ಡಗಾಲು ಹಾಕಿದಿ ಅಲ್ಲವೆ? ಪ್ರೀತಿಸಿದೋನು ಕೈಹಿಡಿಯಲಾರದ ಕಾರಣಕ್ಕೆ ಸತ್ತು ಹೋದ ಸಾವಿತ್ರಿಯ ಮಗಳು ಎಂಬ ವಿವರ ನಿನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಗುಂಡೂರವ್‌ರವರ ಮನೆಗೆ ಬ್ಲೂಪ್ರಿಂಟ್ ಒದಗಿಸಿದೋನು ತಾನೆಂಬ ಕಾರಣದಿಂದಾಗಿ ಆ ಇಂಜಿನೀಯರ್ ಚಲುವಯ್ಯ ವಿಜಯಾ ತನ್ನ ಮಗಳು ಅಂತ ಸಾರ್ವಜನಿಕವಾಗಿ ಹೇಳಿಕೊಳ್ಳೊದಿಲ್ಲ. ಬೆಂಗಳೂರಲ್ಲಿ ರಘುರಾಮನ ಮನೆಯ ಹಿಂಭಾಗದ ರಸ್ತೆಯ ಕನ್ನೀರವ್ವನ ಬಾವಿ ಆಕಾರದ ಮನೆಯೇ ಆತನದು. ಅವನೇ ಮುಂದೊಂದಿನ ಆ ರಘುರಾಮನ ಮಾತು ಕಟ್ಟಿಕೊಂಡು ನನ್ನನ್ನು ತನ್ನ ಮನೆಯಿಂದ ಬಿಡಿಸಿದ್ದು. ಇಂಥ ಎಷ್ಟೋ ವಿವರಗಳು ನಿನಗೆ ಅಷ್ಟು ಸುಲಭವಾಗಿ ತಿಳಿಯಲಾರವು. ತಿಳಿದುಕೊಳ್ಳುವ ಗೋಜಿಗೂ ನೀನು ಹೋಗುವವನಲ್ಲ. ಮತ್ತೊಂದು ವಿಷಯ ಅಂದರೆ ನನ್ನ ತಾಯಿ ಮತ್ತು ಹೆಂಡತಿ ನಡುವೆ ಪ್ರಸಿದ್ಧವಾದ ಜಗಳ ಎಂದೂ ನಡೆದಿರಲಿಲ್ಲ. ನನ್ನ ಮೇಲೆ ಹಕ್ಕು ಚಲಾಯಿಸುವ ನಿಮಿತ್ತ ಅವರು ಮಾಡುತ್ತಿದ್ದುದು ಕೇವಲ ಕೋಳಿಜಗಳ ಮಾತ್ರವಾಗಿತ್ತು. ತಾಯಿಯೋರ್ವಳು ತನ್ನ ಮಗನನ್ನು ಪ್ರೀತಿಸುವುದಕ್ಕಿಂತ ಹೆಚ್ಚಗಿ, ಹೆಂಡತಿಯೋರ್ವಳು ತನ್ನ ಗಂಡನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ, ಅತ್ತೆ ಸೊಸೆಯನ್ನೂ; ಸೊಸೆ ಅತ್ತೆಯನ್ನೂ ಪ್ರೀತಿಸುತ್ತಿದ್ದರು ಎಂದು ಹೇಳಿದರೆ ನಿನಗೆ ಆಶ್ಚರ್ಯವಾಗಬಹುದು. ಸೊಸೆ ಅತ್ತೆಯೊಳಗೆ ತಾಯಿಯ ಹುಡುಕಾಟ ನಡೆಸಿದರೆ, ಅತ್ತೆ, ಸೊಸೆಯೊಳಗೆ ಗತಿಸಿದ ತನ್ನ ಮಾವನ ಹುಡುಕಾಟ ನಡೆಸಿದ್ದಳು. ಇನ್ನೊಂದು ವಿಚಿತ್ರ ಅಂಶವೆಂದರೆ ನನ್ನ ತಾಯಿ ತನ್ನ ಮಗನಾದ ನನ್ನೊಳಗೆ ಗತಿಸಿದ ತನ್ನ ಗಂಡ (ಅಂದರೆ ನನ್ನ ತಂದೆ)ನನ್ನು ಹುಡುಕುತ್ತಿದ್ದಳು. ಹೆಂಡತಿಯಾದ ವರಲಕ್ಷ್ಮಿ ತನ್ನ ಗಂಡನಾದ ನನ್ನಲ್ಲಿ ತಾನು ಎಂದೋ ಓದಿ ಮರೆತಿದ್ದ ಪುರಾತನ ಶ್ಲೋಕವನ್ನು ಹುಡುಕುವ ಕ್ರಿಯೆ ಆರಂಭಿಸಿದ್ದಳು.

ತಾಯಿ ಮಗನನ್ನು ಮಗ ಎಂದು ಗುರುತಿಸದಿರುವಾಗ ಹೆಂಡತಿ ಗಂಡನನ್ನು ಗಂಡ ಎಂದು ಗುರುತಿಸದಿರುವಾಗ ನಾನು ತಾಯಿಯನ್ನು ತಾಯಿ ಎಂದಾಗಲೀ ಹೆಂಡತಿಯನ್ನು ಹೆಂಡತಿ ಎಂದಾಗಲೀ ಗುರುತಿಸಲು ಹೇಗೆ ಸಾಧ್ಯವಾದೀತು? ಆ ಕರ್ಮಠ ವ್ಯವಸ್ಥೆಯೊಳಗೆ ನಾನು ಸಹಜವಾಗಿ ಅರಳಲೇ ಇಲ್ಲ. ತಾತ, ತಾಯಿ, ಹೆಂಡತಿ, ನೆನಪುಗಳು, ಸ್ಮೃತಿಗಳು, ಗೆಳೆಯರು ಇವರೆಲ್ಲ ನಿಷೇದಿತ ಪ್ರದೇಶಕ್ಕೆ ಕಾವಲಿರುವ ಸೈನಿಕರಂತೆಯೇ ಕಾಣಿಸುತ್ತಿದ್ದರೇ ಹೊರತು ನನ್ನ ಅಂತರಂಗದ ಧ್ವನಿಗಳಾಗಲಿಲ್ಲ. ನನ್ನ ಯಾವ ಭಾವನೆಗಳಿಗೂ ಸ್ಪಂದಿಸಲೇ ಇಲ್ಲ. ಹೀಗಾಗಿ ನಾನು ಸಂಬಂಧಗಳನ್ನು ಉಲ್ಲಂಘಿಸುವ ಕನಸು ಕಾಣತೊಡಗಿದೆ. ಈ ಕನಸು ವಯಸ್ಸಿನಲ್ಲಿ ನನಗಿಂತ ಹಿರಿಯದಾದುದು ಎಂದರೆ ಅರ್ಥವಾಗುತ್ತದೆ ತಾನೆ? ಪೂರ್ಣ ಪ್ರಮಾಣದಲ್ಲಿ ಕರ್ಮಠ ವ್ಯವಸ್ಥೆಯನ್ನು ಉಲ್ಲಂಘಿಸುವ ಸಮರ್ಥನೋರ್ವನ ನಿರೀಕ್ಷೆಯಲ್ಲಿಯೇ ಒಬ್ಬರನ್ನೊಬ್ಬರು ಹುಟ್ಟಿಸುತ್ತ ಪೋಷಣೆ ಎಂಬರ್ಥದಲ್ಲಿ ಬೇಟೆಯಾಡುತ್ತಿದ್ದರು. ನಮ್ಮ ವಂಶದ ಹಿರಿಯರು ಎಂದು ಹೇಳಿದರೆ ಕ್ರೌರ್ಯ ಎಂದು ಭಾವಿಸಬೇಡ. ಆದ್ದರಿಂದ ಉಲ್ಲಂಘನೆಯನ್ನೇ ನನ್ನ ಕಾಯಕ ಮತ್ತು ಧ್ಯೇಯ ಮಾಡಿಕೊಂಡೆ. ಪ್ರತಿಕ್ಷಣ ಪ್ರತಿಯೊಂದನ್ನು ಉಲ್ಲಂಘಿಸುತ್ತಲೇ ಹೋದೆ. ಸಾಯುವ ಕ್ಷಣದಲ್ಲೂ ಉಲ್ಲಂಘಿಸುವಂಥಾದ್ದು ಏನು ಉಳಿದಿದೆ ಎಂದು ಯೋಚಿಸುತ್ತಿದ್ದ ನಾನು ಮಣಿಕರ್ಣಿಕಾಚಕ್ರ ಪುಷ್ಕರಣಿಯ ಕನಸು ಕಂಡೆ…. ಬದುಕಿದವರನ್ನು ಒಂದಲ್ಲಾ ಒಂದು ಇಕ್ಕಟ್ಟಿಗೆ ಸಿಕ್ಕಿಸುವ?ವಂಶದ ಬಳುವಳಿಯನ್ನು ನಾನೂ ಮುಂದುವರಿಸಿದೆ ಅಷ್ಟೆ” ಎಂದು ಒಂದೇ ಉಸುರಿಗೆ ಹೇಳಿ ಶಾಮಣ್ಣ ಪಾತ್ರವು ಒಂದು ಕ್ಷನ ಚಿಂತಾಕ್ರಾಂತವಾಯಿತು.

ಅದರ ಮಾತುಗಳು ನನ್ನ ಮನಕಲಕಿದವು. ನಾನು ಒಂದು ಕ್ಷಣ ಮೌನ ವಹಿಸಿದೆ. ನಂತರ ನಾನು ಮಾತಾಡಿದೆ. “ಶಾಮಾ ನಿನ್ನ ಸಂಕಟವನ್ನು ಅರ್ಥ ಮಾಡಿಕೊಳ್ಳುತ್ತಿರುವ ಒಂದು ಕಿರು ಪ್ರಯತ್ನ ಮಾಡುತ್ತಿರುವೆ. ಉಲ್ಲಂಘನೆ ಎಂಬ ಕ್ರಿಯಾಪದದ ವ್ಯಾಖ್ಯಾನ ರೂಪವೇ ನಿನ್ನ ಬದುಕು. ಆ ಶಬ್ದವನ್ನು ಸಾರ್ಥಕಪಡಿಸಲೆಂದೇ, ಧೃಡಗೊಳಿಸಲೆಂದೇ ನೀನು ಅವತರಿಸಿದಿ ಎಂದು ಕಾಣುತ್ತದೆ… ಉಲ್ಲಂಘಿಸಬೇಕಿದ್ದುದನ್ನೆಲ್ಲ … ಯಾವುದು ಉಲ್ಲಂಘಿಸಬಾರದಿತ್ತೋ ಅದೆಲ್ಲವನ್ನು ಉಲ್ಲಂಘಿಸಿದ್ದಾಯಿತು. ನೀನು ಸತ್ತು ಹೋದಿ… ಮಾನವ ಜಗತ್ತಿನಲ್ಲಿ ನೀನು ನಗಣ್ಯ … ಜೀವ ಜಗತ್ತಿನಲ್ಲಿ ಆತ್ಮಗಳಿಗೆ ಯಾವ ಬೆಲೆ ಇದೆ ಹೇಳು? ಆದ್ದರಿಂದ ಸಮಾಜದಲ್ಲಿ ಸಂಬಂಧಗಳು ಯಾವ ಭಾವನಾತ್ಮಕ ನೆಲೆಯಲ್ಲಿ ಗುರುತಿಸಲ್ಪಡುತ್ತಿದ್ದವು ಎಂಬುದು ಮುಖ್ಯವೇ ಹೊರತು ಯಾರು? ಯಾರಲ್ಲಿ? ಏನನ್ನು ಕುರಿತು ಹುಡುಕಾಟ ನಡೆಸಿದ್ದರು ಎಂಬುದು ಮುಖ್ಯ! ನಾನೂ ಕೂಡ ಅಷ್ಟೆ. ಓದುಗರ, ಬುದ್ಧಿಜೀವಿಗಳ, ಜ್ಯೂರಿಗಳನ್ನಾಕರ್ಷಿಸುವ ಯಾವ ಅಂಶಗಳು ನಿನ್ನ ಬದುಕಿನಲ್ಲಿ, ವ್ಯಕ್ತಿತ್ವದಲ್ಲಿದ್ದವು ಎಂಬುದನ್ನು ಶೋದಿಸುತ್ತಿರುವೆ. ನೀನು ಯಾವ ಸ್ಥಿತಿಯಲ್ಲಿದ್ದು ಸಮಾಜವನ್ನು ಪುಳಕಗೊಳಿಸಿದಿ ಎಂಬುದು ಮುಖ್ಯ. ನಾವೆಲ್ಲ ಬದುಕೆಂಬ ಕೇರಂ ಬೋರ್ಡ್ ಮೇಲೆ ಕಪ್ಪು ಬಿಳಿ ಕಾಯಿಗಳು ಮಾತ್ರ… ನಾವೆಂದೂ ಸ್ಟ್ರೆಕರ್ ಆಗುವುದು ಸಾಧ್ಯವಿಲ್ಲ… ಚಲನೆ ಒಬ್ಬರಿಗಿಂದ ಇನ್ನೊಬ್ಬರಿಗೆ ವಿಸ್ತರಿಸುತ್ತದೆ. ನೀನು ಆಟದಿಂದ ಹೊರಬಿದ್ದಿರುವಿ. ನಾನು ಹೊರಬೀಳುವುದನ್ನೇ ಸಮಾಜ ಕಾಯುತ್ತಿದೆ ಅಷ್ಟೆ . ಆದ್ದರಿಂದ ಸೇಡು ಎಂಬ ಕ್ರಿಯೆಗೆ ಪ್ರತ್ಯಯ ಸ್ಥಾನ ಕೊಡಬೇಡ.

ಕಾಮ್ರೇಡ್ ಪಶುಪತಿ ಬಗ್ಗೆ ವಿಷಯ ಸಂಗ್ರಹಿಸಿದ್ದೇನಾದರೂ ಆ ಪಾತ್ರವನ್ನು ಮಂಡಲ್ ಎಲೆಕ್ಷನ್ ಸಮಯದಲ್ಲಿ ಹೊರತರಬೆಕೆಂದಿದ್ದೆ. ಇನ್ನು ವಿಜಯಾಳನ್ನು ಕಟ್ಕೊಂಡು ಮಾಡಬೇಕಾಗಿರೋದಾದ್ರು ಏನು? ಮುಂದೆ ಕಾಂಚನಾ ಪಾತ್ರ ಬರಲಿರುವುದರಿಂದ ವಿಜಯಾಳನ್ನು ನೇಪಥ್ಯಕ್ಕೆ ತಳ್ಳುವುದು ವಾಸಿ, ಏನಂತೀಯಾ? ಕಾದಂಬರಿಯ ವಸ್ತು ಸಂವಿಧಾನದಲ್ಲಿ ಕೆಲವು ಕಡೆ ರಾಜಿ ಮಾಡ್ಕೋ ಬೇಕಾಗುತ್ತೆ ಮಾರಾಯಾ… ನನ್ನನ್ನು ಅನಾವಶ್ಯಕ ಪ್ರಾಸಿಕ್ಯೂಟ್ ಮಾಡಿ ಗೊಂದಲದಲ್ಲಿ ಸಿಕ್ಕಿಸಬೆಡ” ಎಂದು ಸ್ಪಷ್ಟವಾಗಿ ಹೇಳಿದೆ.

ಅದಕ್ಕೆ ಪ್ರತಿಕ್ರಿಯೆಯಾಗಿ ಶಾಮಣ್ಣ ಪಾತ್ರವು ಕಣ್ಣಂಚಿನಲ್ಲಿ ನಕ್ಕಿತು.

” ಆಳೋ ಪಕ್ಷದ ಮರ್ಜಿ ಹಿಡಿದು ಕಾಮ್ರೇಡ್ತನಕ್ಕೆ ತಿಲಾಂಜಲಿಕೊಟ್ಟು ಕೊಳಚೆ ನಿರ್ಮೂಲಾ ಪ್ರಾಧಿಕಾರದ ಅಧ್ಯಕ್ಷನಾದ. ಅವನು ಅಲ್ಲಿಂದ ಇನ್ನೊಂದು ಪಕ್ಷ ಸೇರಿ ಆ ಪಕ್ಷದ ಯುವ ಶಾಖೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ನೀನೀ ಕಾದಂಬರಿ ಮುಗಿಸೋ ಹೊತ್ತಿಗೆ ಅಥವಾ ನಂತರ ಅವನು ಮಂತ್ರಿಯಾಗಲೂಬಹುದು. ಎಷ್ಟು ಪ್ರೀತಿ ತೋರಿಸಿದರೂ ಬ್ರಾಹ್ಮಣ್ಯ ಕಾರಣಕ್ಕೆ ನನಗೆ ಬಗೆಯ ಬಾರದ ದ್ರೋಹ ಬಗೆದ ಅವನು ನಿನ್ನ ಮೇಲೆ ಖಂಡಿತ ಸೇಡು ತೀರಿಸಿಕೊಳ್ಳಲಾರದೆ ಇರಲಾರ. ಸ್ವಲ್ಪ ಹುಷಾರಿಂದಿರು. ಕಾಲ ಹೀಗೆ ಇರೋದಿಲ್ಲ… ಆ ಹೆಬ್ರೀನೂ ಅಷ್ಟೆ. ಬ್ರಾಹ್ಮಣ್ಯವನ್ನು ಸರಿಯಾಗಿ ಪ್ರಕಟಿಸುತ್ತಿಲ್ಲವೆಂಬೊಂದೇ ಕಾರಣದಿಂದ ಆ ನೀಚ ಅವನೊಂದಿಗೆ ಶಾಮೀಲಾಗಿ ನನ್ನನ್ನು ಕಸದ ಬುಟ್ಟಿಗೆ ತಳ್ಳಿದ… ಅಂಥವರ ಮುಗುಳು ನಗೆಯೇ ಅಮೇರಿಕೆಯ ಪರಮಾಣು ಅಸ್ತ್ರಗಳಿಗಿಂತ ಅಪಾಯಕಾರಿಯಾದುದು ಎಂಬುದು ಜ್ಞಾಪಕದಲ್ಲಿರಲಿ ಮಹಾರಾಯಾ… ಸಾಮಾಜಿಕವಾಗಿ ಪ್ರಿಯವಾಗುವಂತಹ ಅಂಶಗಳನ್ನು ನಮ್ಮ ವಂಶದ ಕಮ್ಮಠ ತಾಕೀತುದಾರರಾದ ತಾತನವರಾಗಲೀ, ತಾಯಿಯಾಗಲೀ, ಹೆಂಡತಿಯಾಗಲೀ ಬೆಳೆಸಿ ಪೋಷಿಸಿ, ಪ್ರಕಟಗೊಳಿಸಲು ಅವಕಾಶ ಕೊಟಿದ್ದಲ್ಲಿ ನಾನು ಖಂಡಿತ ಉಲ್ಲಂಘಿಸುವ ಕಾರ್ಯಕ್ಕೆ ತೊಡಗುತ್ತಿರಲಿಲ್ಲ. ನಾನೂ ಎಲ್ಲರಂತೆ ಹನ್ನೊಂದರ ಪೈಕಿ ಇನ್ನೊಂದಾಗಿ ಸುಖವಾಗಿರುತ್ತಿದ್ದೆನು. ಅವರೆಲ್ಲ ತಮ್ಮ ಮೂಗುದಾಣ, ಲಗಾಮು ಇತ್ಯಾದಿಗಳನ್ನು ಬಿಗಿಪಡಿಸುತ್ತಲೇ ಹೋದರು. ಪ್ರಪಾತ ಸೃಷ್ಟಿಸಿದವರೂ; ಅದರಲ್ಲಿ ನೂಕಿದವರೂ; ನಾನು ಬೀಳುವ ವಿವಿಧ ಭಂಗಿಗಳನ್ನು ನೋಡಿ ದುಃಖದ ಮರೆಯಲ್ಲಿ ಸಂತೋಷಪಟ್ಟವರೂ ಆ ನನ್ನ ತಾಕೀತುದಾರರೇ. ಮೀಸೆ ಟ್ರಿಮ್ ಮಾಡಿದರೆ ಪಾತ್ರದ ಗಾತ್ರವನ್ನು ಸ್ಲಿಮ್ ಮಾಡಿದರೆ ಮಾತಿನ ಧಾಟಿಯನ್ನು ಅವರೋಹಣಗೊಳಿಸಿದರೆ ನಾಯಕ ಸ್ಥಾನ ಪಡೆಯುವ ಅದೇ ಪಾತ್ರವು ಮೀಸೆ ಹುರಿಗೊಳಿಸಿದರೆ; ದೇಹ ಸ್ಥೂಲ ಮಾಡಿದರೆ, ಮಾತಿನ ಧಾಟಿ ಆರೋಹನಗೊಳಿಸಿದರೆ ಖಳನಾಯಕನ ಸ್ಥಾನಕ್ಕೇರುತ್ತದೆ. ಇದೆಲ್ಲ ಮೇಕಪ್ ಮಾಡುವವರ ನಿರ್ದೇಶಕರ ಕೈಯಲ್ಲಿರುತ್ತದೆ. ಅವರೆಲ್ಲ ನೇಪಥ್ಯದಲ್ಲಿರುತ್ತಾರಾದ್ದರಿಂದ ಅವರು ಸಾಮಾಜಿಕವಾಗಿ ಅರ್ಥವಾಗುವುದೇ ಇಲ… ಅವರು ಮಾಡಿದಂತೆ ಮಾಡಿಸಿಕೊಂಡು; ಅವರು ಕುಣಿಸಿದಂತೆ ಕುಣಿಯುವ ಪಾತ್ರಗಳು ಸಾಮಾಜಿಕವಾಗಿ ಛೀ ಥೂ ಎಂದು ಉಗುಳಿಸಿಕೊಳ್ಳುತ್ತವೆ. ಹಾಗಾದವನು ನಾನು… ಅಂದ ಮಾತ್ರಕ್ಕೆ ನೇಪಥ್ಯದಲ್ಲಿರುವ ಸಂಚುಗಾರರ ಕಡೆ ಬೆರಳು ಮಾಡಿ ತೋರಿಸುತ್ತಿರುವೆನೆಂದು ತಿಳಿದುಕೊಳ್ಳೇಡ… ಅವರು ವ್ಯವಸ್ಠೆಯ ಒಂದು ಕಿರು ಭಾಗ ಮಾತ್ರ. ಸ್ವಾತಾಂತ್ತ್ಯೋತ್ತರವಾಗಿ ಸಾಮಾಜಿಕ ಪರಿವೇಷವೇ ಹಾಗೆ ಬದಲಾಗುತ್ತ ಹೋಗುತ್ತಿದೆ. ಬದಲಾ‌ಅಗುತ್ತಿರುವ ಪರಿಸ್ಥಿತಿಯಲ್ಲಿ ಯಾರು ಯಾವ, ಯಾವ ಕಾರ್ಯನಿರ್ವಹಿಸುತ್ತಿದ್ದಾರೆ? ಯಾರು ಯಾರನ್ನು, ಯಾವ ಯಾವ, ಪ್ರಮಾಣದ ಮುಗುಳು ನಗೆ ಆತ್ಮೀಯತೆಯಿಂದ ಬೇಟೆಯಾಡುತ್ತಾರೆ? ನಿಮ್ಮ ಮಸೂರ ಹಾಕುವ ಕಡೆಯಲ್ಲಿ ಪೀನ ಮಸೂರವನ್ನೋ; ಪೀನ ಮಸೂರ ಹಾಕುವ ಕಡೆಯಲ್ಲಿ ನಿಮ್ನ ಮಸುರವನ್ನೋ ಹಾಕಿ ರಸ್ತೆಗಳ ಮೂಲ ಆಕಾರವನ್ನೇ ಹೆಚ್ಚು ಕಡಿಮೆ ಮಾಡಿ ಬಿಡಬಲ್ಲ ಚಾಣಾಕ್ಷರಿಂದಲೇ ಈ ಸಮಾಜ ತುಂಬಿಕೊಂದಿದೆ ಕಣಯ್ಯಾ… ನಾನಾ ನಮೂನೆಯ ಹಸಿವುಗಳನ್ನು ಸೃಷ್ಟಿಸುವವರೂ ಅವರೇ; ಆ ಜಾಗಗಳಲ್ಲಿ ಕಮರುಡೇಗುಗಳಲ್ಲಿ ಪ್ರತಿಷ್ಠಾಪಿಸುವವರೂ ಅವರೇ ಮಿತ್ರ… ಚಿತ್ರ ವಿಚಿತ್ರಕಾರದ, ಪಂಚೇಂದ್ರಿಯಗಳಿಗೆ ನಿಲುಕದಂಥ ಜೇಡರ ಬಲೆಗಳ ಕೇಂಗಳಲ್ಲಿ ನಿಗೂಢವಾಗಿ ಕೂತು ಕಬಳಿಸುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿರುವ ಅವರಿಗೆ ಮಾನವೀಯ ಸಂಬಂಧಗಳ ಸೂಕ್ಷ್ಮ ಅರಿವು ಇರುವುದಿಲ್ಲ. ಬೇಟೆಯ ಗುಣ, ಸ್ವಭಾವ, ಕರಾಮತ್ತಿಗೆ ಮರುಳಾದ, ಪರವಶರಾದ ಅವರು ಮುಂದೆ ತಮ್ಮನ್ನು ತಾವೇ ಬೇಟೆಯಾಡಿಕೊಳ್ಳುತ್ತಾರೆ ನೋಡು… ವ್ಯವಸ್ಥೆ ಎಂಬುದು ದೊಡ್ಡ ಜೇಡರ ಹುಳ. ಒಂದು ವ್ಯವಸ್ಥೆ ಇನ್ನೊಂದು ವ್ಯವಸ್ಥೆಯನ್ನು ಕಬಳಿಸುತ್ತ ಹೋಗುತ್ತದೆ. ಯಾವ ಜೇಡರ ಹುಳ ಸಂಜೀವಿನಿ ಪರ್ವತದ ಶಿಖಿರಾಗ್ರದ ಮೇಲೆ ವಿರಾಜಮಾನವಾಗಿರುವುದು ಹೇ‌ಉ? ಯಾವ ಜೇಡರ ಹುಳು ಅಮೃತ ಕುಡಿದು ಅನಾದಿ ಕಾಲದಿಂದ ಜೀವಂತವಾಗಿರುವುದು?… ಆದ್ದರಿಂದ ಇದೆಲ್ಲ ಯಾವ ಸಿದ್ಧಾಂತದ ಮಾಪನಗಳಿಗೆ ಎಟಕುವಂಥಾದ್ದಲ್ಲ… ಇದೆಲ್ಲ ಯಾವ ಅಸ್ತ್ರಕ್ಕೂ ಬಗ್ಗುವಂಥಾದ್ದಲ್ಲ… ಇದೆಲ್ಲ ಯಾವ ಬದುಕಿಗೂ ನಿಲುಕುವಂಥಾದ್ದಲ್ಲ… ಇದೆಲ್ಲ ಆ ಪರಮಾತ್ಮನ ಪಂಚೇಂದ್ರಿಯಗಳಿಗೂ ಜೀರ್ಣವಾಗುವಂಥಾದ್ದಲ್ಲ… ಸೃಷ್ಟಿ, ಸ್ಥಿತಿ, ಲಯ ಶಕ್ತಿ ಕೇಂದ್ರಗಳೆಂದು ಆರ್ಷೇಯ ಕಲ್ಪನೆಗಳಿಂದ ಗುರುತಲ್ಪಡುತ್ತಿರುವಂಥ ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿತ್ವ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಸೃಷ್ಟಿಯನ್ನು ಸ್ಥಿತಿಯೂ; ಸ್ಥಿತಿಯನ್ನು ಲಯವೂ; ಲಯವನ್ನು ಸೃಷ್ಟಿಯೂ ಕಬಳಿಸುತ್ತಾ ಹೋಗುತ್ತದೆ. ಕೊಟ್ಟ ಕೊನೆಗೆ ಉಳಿದುಕೊಳ್ಳುವುದು ತ್ರಿಮೂರ್ತಿತ್ವದ ಸ್ಥಿತಿಯೇ ಎಂಬುದನ್ನು ಜ್ಞಾಪಕದಲ್ಲಿಟ್ಟಿಕೋ ಮಿತ್ರಮಾ…” ಎಂದು ಮುಂತಾಗಿ ಶಾಮಣ್ಣ ಆಚಾರ್ಯತ್ರಯರೇ ಏಕೀಭವಿಸಿದಂತೆ ಮಾತಾಡಿತ್ತಿರುವುದು ಕೇಳಿ ನಾನು ಸಖೇದಾಸ್ಚರ್ಯಗೊಂಡೆನು.

“ಅಬ್ಬಾ! ಎಷ್ಟೊಂದು ಅದ್ಭುತವಾಗಿ ಮಾತಾಡಿದೆಯೋ ಶಾಮಾ… ರಜನೀಶ, ಸಾಯಿಬಾಬಾರಿಂದ ಹಿಡಿದು ಬನ್ನಂಜೆ ಗೋವಿಂದಾಚಾರ್ಯರವರೆಗೆ ಅನೇಕರ ಭಾಷಣ ಕೇಳಿದ್ದೀನಿ. ಆದರೆ ಅವರ ಯಾವ ಮಾತುಗಳೂ ನಿನ್ನ ಮಾತುಗಳಷ್ಟು ಪರವಶಗೊಳಿಸಿರಲಿಲ್ಲ ನೋಡು… ಸಾವು ವಿಜೃಂಭಿಸಿರುವ ಬದುಕಿನ ಅಖಾಡಕ್ಕೆ ನುಗ್ಗಿ ಅದನ್ನು ಸಮರ್ಥವಾಗಿ ಎದುರಿಸಿದಂಥವನಾದ ನೀನು ಕೆಲಕಾಲ ನಮ್ಮೊಂದಿಗಿರಲಿಲ್ಲವೆಂಬುದೇ ಬೇಸರದ ಸಂಗತಿ. ಹ್ಹೂ ಇರಲೀ… ಹೀಗೆ ಮಾತಾಡ್ತಾ ಕಾಲ ಹರಣ ಮಾಡೋಕೆ ಸಮಯವಿಲ್ಲ!… ಈ ಕಾದಂಬರಿಯ ಪ್ರಕಾಶಕ ಚನ್ನಬಸವಣ್ಣ ಎಂಥೊರಂಥ ನಿನ್ಗೂ ಗೊತ್ತಿರಬೇಕಲ್ಲ?”
“ಯಾವ ಚನ್ನಬಸವಣ್ಣ?”
“ಅದೇ ಕಣಪ್ಪಾ… ಹಿಂದೊಮ್ಮೆ ಬಳ್ಳಾರಿಯಲ್ಲಿ ನಡೆದ ಜಿಲ್ಲಾ ಬಂಡಾಯ ಸಮ್ಮೇಳನಕ್ಕೆ ನೀನೂ ನಾನೂ ಹೋಗಿದ್ದಿಲ್ಲೇ… ರಂಗನಾಥೂ; ವಡ್ಡರ್ಸೆ ಶೆಟ್ರೂ ಅವ್ರೂ ಇವ್ರೂ ಬಂದಿದ್ರಲ್ಲ… ನಿನ್ಗೂ ವೀರಣ್ಣಗೂ ಜಗಳ ಬಿದ್ದಿತ್ತು ನೋಡು!…”
“ನನ್ನ ಜಗಳದಿಂದ ತಪ್ಪಿಸಿಕೊಂಡೊರ್‍ಯಾರೂ ಇಲ್ಲ ಬಿಡು… ಅಂದ ಹಾಗೆ ರಾಜಶೇಖರ ನೀರಮಾನ್ವಿ ಜೊತೆಯಲ್ಲಿ… ಗಂಜಿ ಮಾಡಿದ ಬಿಳಿ ಬಟ್ಟೆ ಉಟ್ಕೊಂಡು ಗಡ್ಡ ಬಿಟ್ಕೊಂಡು ಯುವ ರಾಜಕಾರಣಿಯಂತೆ ಅಡ್ಡಾಡ್ತಿದ್ದರಲ್ಲ… ನಮ್ಮನ್ನೆಲ್ರನ್ನ ಮನೆಗೆ ಕರ್ಕೊಂಡು ಹೋಗಿ ಬಿಳಿಜೋಳದ ರೊಟ್ಟಿ ಎಣ್ಣೆಗಾಯಿ ಕಡ್ಲೆಪುರಿ ಗುರಾಳುಪುಡಿ ಗೋದಿಹುಗ್ಗಿ, ಇದೆಲ್ಲ ತಿನ್ನಲು ಕೊಟ್ತು ಮೇಲೊಂದು ಕಪ್ಪು ಕಷಾಯ ಕುಡಿಯಲು ಕೊಟ್ರಲ್ಲ…”
“ಹ್ಹಾ…ಹ್ಹಾ… ಅವರೇ ಕಣೋ ಶಾಮೂ…”
“ಹೌದೇನು! ಆ ಮನುಷ್ಯನ್ನ ಹೇಗೆ ಮರೀಲಿಕ್ಕೆ ಸಾಧ್ಯವೋ… ಅವರು ಜೋಳದನ್ನ ಕಟಂಬಲಿ,ಕಿಚಡಿ, ನವಣಕ್ಕಿ ಬಾನದ ಬಗ್ಗೆ ಮಾಡಿದ ಉಪನ್ಯಾಸ ನನ್ ಕಿವಿಯಲ್ಲಿ ಇನ್ನೂ ಗುಂಯ್‌ಗುದುತ್ತಲೇ ಇದೆ. ಅದ್ನೆಲ್ಲ ನಾನು ನಮ್ ಅನಸೂಯಳ ಕೈಯಿಂದ ಮಾಡಿಸ್ಕೊಂಡು ತಿಂದೆ ಬಿಡು… ಅವರೊಂದ್ನಮೂನಿ ಸ್ಟ್ರಿಕ್ಟೂಂತ ಕೇಳಿದ್ದೆ…”
“ಹೌದಪ್ಪಾಹೌದು… ಸ್ಟ್ರಿಕ್ಟಿರೋ ಕಡೆ ಸ್ಟ್ರಿಕ್ಟು… ಸಲಿಗೆ ಇರೋ ಕಡೆ ಸಲಿಗೆಯಿಂದ ಇರ್‍ತಾರೆ… ಈಗ ಸಧ್ಯಕ್ಕೆ ಬಳ್ಳಾರೀಲಿ ಲೋಹಿಯಾದ ತಲೆ ಕೆಡೆಸಿಕೊಂಡು ಕಾರ್ಯಕ್ರಮ ಏರ್ಪಡಿಸ್ತಿರೋರು ಅವರೊಬ್ರೆ. ಇದೇ ಮಾರ್ಚ್ ಇಪ್ಪತ್ಮೂರರಂದು ಬಳ್ಳಾರೀಲಿ ಲೋಹಿಯಾರವರ ಎಪ್ಪತ್ತೆಂಟನೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಕಣಪ್ಪಾ… ಅವತ್ತು ನಿನ್ ಕಥಿ ಇರೋ ಈ ಕಾದಂಬರಿ ಬಿಡುಗಡೆ ಆಗಬೇಕಾಗಿದೆ. ಮಾರ್ಚ್ ಇನ್ನೆಷ್ಟು ದೂರ ಇದೆ? ಈ ಫೆಬ್ರವರಿ ಆದ ಮೇಲೆ ಬರೋದೆ ಮಾರ್ಚು… ಅದ್ಕೆ ಬರೆಯೋ ನಡ್ವೆ ತತ್ವಜ್ಞಾನ ಬಿಚ್ಕೊಂಡು ಕೂಡ್ರಲಿಕ್ಕೆ ಸಮಯವಿಲ್ಲ…”
“ಹೋ…ಹಾಗೋ ಸಮಾಚಾರ! ಹೋಗಿಹೋಗಿ ಆ ಪುಣ್ಯಾತ್ಮನ ಹುಟ್ಟುಹಬ್ಬದಂದು ನನ್ನಂಥ ನರಾಧಮನ ಕುರಿತಾದ ಕಾದಂಬರೀನ ಪ್ರಕಟಿಸಲಿಕ್ಕೆ ಯಾಕೆ ಹೋದ್ರೂಂತ ಆ ಚನ್ನಬಸಣ್ಣ… ಅವರಿಗೆ ಇದು ಬಿಟ್ರೆ ಬೇರೆ ಯಾವ್ದೂ ಸಿಗಲಿಲ್ವೆ!”
“ಅದೆಲ್ಲ ಇರ್‍ಲಿ ಮಾರಾಯ… ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿದರೆ ಫಲವೇನು? ಉಳಿದಿರೋ ಸಮಯಾವಕಾಶದೊಳಗೆ ಕಾದಂಬರಿ ಮುಗಿಸಕೊಡಬೇಕಿದೆ… ಪಂಚಾಯ್ತಿ ಮಾಡೋದು ಬೇಡ… ಈಗ ನಿನ್ನ ಕಥೀನ ನಾನೇ ಶುರು ಮಾಡ್ಲೋ… ನೀನೆ ನಿನ್ನ ಕಥೀನ ಶುರುವು ಮಾಡ್ತೀಯೋ ಅಷ್ಟು ಹೇಳು?”
“ಒಳ್ಳೆ ಶಾರ್ಟ್‌ಟೆಂಪರ್ನ ಕೈಲಿ ಸಿಕ್ಕಿ ಹಾಕ್ಕೊಂಡು ಬಿಟ್ಟಿದ್ದೀನಲ್ಲಪ್ಪಾ ಶಿವ್ನೇ… ಈ ಭಾಗವನ್ನು ನೀನು ಬರೆದ್ರೆ ರಂಜನೀಯಾಂಶಗಳನ್ನು ಸೇರಿಸಿ ನನ್ನ ಕಥೀನ ವಾಸ್ತವಾಂಶಗಳಿಮ್ದ ದೂರ ಇಡ್ತೀ… ಅದ್ಕೆ ಒಂದು ಧಂ ನಾನು ನನ್ನ ಕಥಿಯನ್ನೇ ಹೇಳಬೇಕೆಂದು ನಿರ್ಧರಿಸಿದ್ದೀನಿ… ಈ ಭಾಗದಲ್ಲಿ ನಾನು ನನ್ನ ಕಥೆಯನ್ನು ಎಲ್ಲಿಂದ ಶುರು ಮಾಡಬೇಕೆಂದು ತೋಚ್ತಾ ಇಲ್ಲ… ಮೊದಲಿಂದ ಹೇಳಬೇಕೆಂದರೆ ಪರಮ ಸ್ವಾರ್ಥಿಯಾದ ನೀನು ಆಗ್ಲೆ ಬರೆದು ಬಿಟ್ಟಿರುವಿ… ನೀನು ಅದೆಷ್ಟು ನಿಷ್ಕರುಣಿ ಎಂದರೆ ನೀನು ಕಥೆ ನಡುವೆ ನನ್ನನ್ನು ಕೊಂದು ಇದ್ದೊಂದು ಮನೆಯನ್ನು ವಿಲೇವಾರಿ ಮಾಡಿ ಬಿಟ್ಟಿರುವಿ… ಅದಾವ ಪ್ರೇರಣೆಯಿಂದ ನೀನು ಅನಂತಪುರಕ್ಕೆ ಹೋಗಿ ನನ್ನ ಹೆಂಡತಿಯನ್ನು ಕಂಡೆಯೊ ಏನೋ? ವಿಧವೆಯಾದ ನಂತರ ವರಲಕ್ಷ್ಮಿ ಹುತಾತ್ಮಳಂತೆ ಬದುಕುತ್ತಿರುವಳೆಂದು ಚಿತ್ರಿಸಿರುವಿ. ಮದುವೆಯಾದ ಕ್ಷಣದಿಂದ ಆಕೆ ವೈಧವ್ಯದ ಏಳು ಸುತ್ತಿನ ಕೋಟೆಯ ನಿರ್ಮಾಣಕ್ಕೆ ತೊಡಗಿದಳು. ಅದರ ಸುಳಿವು ದೊರಕಿದ್ದು ಮಧುಚಂದ್ರ ಎಂಬ ಆಕೆಯ ಅಟ್ಟಹಾಸಕ್ಕೆ ಹೋಗಿದ್ದಾಗ… ಅದರ ಪೂರ್ಣ ಅರಿವು ಆಗಿದ್ದು ಆಕೆಯೊಡನೆ ಕೊತ್ತಲಗಿಯಲ್ಲಿ ಸಂಸಾರ ಹೂಡಿದಾಗ… ಆಕೆ ಪಾತಿವ್ರತ್ಯವೆಂಬ ಕ್ರೌರ್ಯವನ್ನು ಪ್ರತಿಕ್ಷಣ ಝಳಪಿಸ ತೊಡಗಿದಾಗ … ಎಲ್ಲಿಂದ ಶುರು ಮಾಡಲಿ ಮಿತ್ರಮಾ?”

“ಕುರಿಕೇಳಿ ಮಸಾಲೆ ಅರೀತಾರೇನೋ ಮಾರಾಯಾ…ಬಂದ, ಕೊಂದ, ತಿಂದ ಅಂತ ಮೂರೇ ಶಬ್ದಗಳಲ್ಲಿ ಕಥೆ ಮುಗಿಸಿದ್ರೆ ಕೇಳೋದ್ಕೆ ಯಾವ ಸ್ವಾರಸ್ಯ ಇರ್‍ತದೆ ಹೇಳು… ನೀನು ಹೇಳೋದು ಆಗಲೆ ನನಗೂ ಓದುಗರಿಗೂ ಮನವರಿಕೆಯಾಗಿದೆ! ಬೀಜ ಮೊಳೆಯುವ, ಗಿಡವಾಗುವ, ಹೂವು ಹೀಚುಗಾಯಿ ಹಣ್ಣು ಬಿಡುವ ಕ್ರಮದಂತೆಯೇ ಸ್ವಾಭಾವಿಕವಾಗಿ ಬದುಕು ಬದುಕಾಗಿ ಅರಳಬೇಕು. ಸಮಾಜವೆಂಬುದು ಬಯೋಲಾಗಿಕಲ್ ಗಾರ್ಡನ್ ಕಣಪ್ಪಾ… ಅಲ್ಲಿನ ಒಂದೊಂದು ಘಟಕಕ್ಕೂ ಒಂದು ನಿರ್ದಿಷ್ಟವಾದ ನೀತಿ ಸಂಹಿತೆ ಇರುತ್ತೆ. ತುಲಸಿ ಗಿಡ ತುಲಸಿ ಗಿಡಾನೆ, ಅಶ್ವಥ್ ಮರ ಅಶ್ವಥ್ ಮರಾನೇ… ಪೂಜಿಸಿಕೊಳ್ಳುವ ಒಂದೇ ಕಾರಣದಿಂದ ಅವುಗಳು ತಮ್ಮ ಜಾಯಿಮಾನವನ್ನು ಅದುಲು ಬದುಲು ಮಾಡಿಕೊಳ್ಳಲು ಸಾಧ್ಯವಿಲ್ಲ. ಯರನ್ನೇ ಕೇಳಿದರೂ ತುಲಸಿ ಗಿಡವನ್ನು ಅಶ್ವತ್ಥಮರ ಎಂದು ಹೇಳಲಾರರು. ಮನುಷ್ಯನ ಬದುಕು ಯಾವ ಹಂತದಲ್ಲಿಯಾದರೂ ಆರಂಭವಾಗಿರುವುದೇ ಇಲ್ಲ. ಕೆಲವರ ಬದುಕು ಆರಂಭವಾಗುವುದು ಸತ್ತ ನಂತರವೇ. ಬದುಕು ಮತ್ತು ಸಾವು ಇವು ಕೇವಲ ಮನುಷ್ಯ ಬದುಕಿನ ಎರಡು ನೆಪಗಳು ಮಾತ್ರ. ಆದ್ದರಿಂದ ಕಥೆಗೆ ಮನುಷ್ಯ ಬದುಕಿನ ಯಾವ ಮುಲಾಜೂ ಇರೋದಿಲ್ಲಾಪ್ಪ… ನೀನು ಎಲ್ಲಿಂದ ಅಂದರೆ ಅಲ್ಲಿಂದಲೇ ಆರಂಭಿಸಬಹುದು. ಇದಕ್ಕೆ ನಿರೂಪಕನಾದ ನನ್ನ ಅಭಂತರ ಇಲ್ಲ.”
“ನೀನು ಹೇಳ್ತಿರೊದು ಸರಿ ಇದೆ ಕುಂವೀ… ಎಲ್ಲಿಂದಲಾದರೂ ಯಾಕೆ ಆರಂಭಿಸಲಿ, ಹೇಗೋ ನೀನು ದಂಪತಿಗಳಾದ ನಮ್ಮನ್ನು ಕರ್ಕೊಂಡು ಬಂದು ಕೊತ್ತಲಿಗಿಗೆ ಬಿಟ್ಟಿದ್ದೀಯಲ್ಲ… ಅಲ್ಲಿಂದಲೇ ಚೂಟಿಯಾಗಿ ಆರಂಭಿಸಿಬಿಡ್ತೇನೆ… ಜವಾನನ ಹೆಸರು ಓಬಳೇಶನಲ್ಲ… ಅವನ ಹೆಸರು ಮಾದನ್ನ ಅಂತ. ಹಾಗೆ ಚಂಬಸ್ಯಯ್ಯನ ಹೆಸರು ಓಂಕಾರಯ್ಯ ಅಂತ…. ಇಸ್ಮಾಯಿಲನ ಜನ್ಮಾಂಕಿತ ಔರಂಗ ಜೇಬ ಅಂತ. ನಂತರ ಅವನು ಇರಿಸಿಕೊಂಡಿದ್ದು ಖಲೀಲ ಅಂತ. ಹೀಗೆಲ್ಲ ಹೆಸರುಗಳನ್ನು ಎಚ್ಚರಿಕೆಯಿಂದ ಬದಲಾಯಿಸಿಕೊಂಡಿರುವಿ. ನಾನು ಮತ್ತೆ ಏರು ಪೇರು ಮಾಡೊದು ಬೇಡ. ನೀನು ಈಗಾಗಲೇ ಬದಲಾಯಿಸಿದ ಹೆಸರುಗಳನ್ನು ಹಾಗೇ ಬಳಸಿಕೊಂಡು ಹೇಳುವೆ. ಕೈಗೆ ಪೆನ್ನು, ಪ್ಯಾಡು, ಪೇಪರೂ ತಗೋ”
*
*
*
ಹ್ಹಾ… ಹ್ಹಾ… ನನ್ನ ಧರ್ಮ ಪತ್ನಿಯಾದ ವರಲಕ್ಷ್ಮಿಯೇ… ನೀನೇ ಪಾತಿವ್ರತ್ಯದ ಏಕಮಾತ್ರ ವಾರಸುದಾರಳಂತೆ ಎಷ್ಟು ಬಿಂಕದಿಂದ ಮುಂದೆ ನಡೆಯುತ್ತಿದ್ದಂತೆಯೇ ಪುಣ್ಯಾತ್ಗಿತ್ತಿ… ನೀನು ಇಡುತ್ತಿದ್ದ ಒಂದೊಂದು ಹೆಜ್ಜೆಗೆ ಅಕ್ಕ ಪಕ್ಕದ ಮನೆಗಳು ಅಲ್ಲಾಡಿಹೋಗಿ ಒಳಗಿದ್ದವರು ಹೊರಗಡೆ ಬಂದು; ಹೊರಗಿದ್ದವರು ಒಳಗಡೆ ಹೋಗಿ ಪಂಚಮಹಾಪತಿವ್ರತೆಯರೇ ಶಾಮಾಶಾಸ್ತ್ರಿಯ ಹೆಂಡತಿಯಾಗಿ ಮುಂದೆಮುಂದೆ ಅದೆಷ್ಟು ಸತ್ವದಿಂದ ನಡೆಯುತ್ತಿರುವಳು ಎಂದು ಮಾತಾಡಿಕೊಂಡರು. ಪ್ರತಿಯೊಂದು ಹೆಜ್ಜೆ ಮೂಲಕ ತಾನು ಉಚ್ಚಕುಲ ಸಂಜಾತೆಯೆಂಬ ಭಾವನೆ ಪ್ರಕಟಿಸುತ್ತಿದ್ದಳು.
ಆ ಓಣಿ ಈ ಓಣಿಗಳೆಲ್ಲ ದಾಟಿ ಬುಧವಾರ ಪೇಟೆ ತಲುಪಿದಾಗ ಫಕೀರಮ್ಮ, ವಿಜಯ, ಓಬಳೇಶ ಮೊದಲಾದವರ ಕಚ್ಚಾ ದೇಗುಲಗಳನ್ನು ನೋಡಿ “ಏನ್ರೀ ಬರೀ ಹೆಣ್ದೇವತೆಗಳ ಗುಡಿಳದಾಳೆ… ಬರೀ ಶೂದ್ರ ದೇವತೆಗಳು ಇವು… “ಪುರುಷ ದೇವತೆಗಳ ಗುಡಿಗಳೊಂದೂ ಕಾಣಿಸ್ತಿಲ್ವಲ್ಲಾ” ಎಂದು ಖೇದ ವ್ಯಕ್ತಪಡಿಸಿದಳು.
“ಇಲ್ರಮ್ಮಾ… ಈ ಓಣಿ ಆಚೆ ಕಡೆ ಆಂಜನೇಯಸ್ವಾಮಿ ಗುಡಿಯೊಂದೈತೆ…” ಎಮ್ದು ಓಬಳೇಶ ಹೇಳಿದ್ದು ಆಕೆಗೆ ಸರಿಕಾಣಲಿಲ್ಲ.
“ನಮ್ ಮನಿ ಬಾಗ್ಲಮೇಲ ಎಲಾ ದೇವಾನ್ದೇವತೆಗಳಾದವು… ಮನಸೊಂದ್ನ ಸುದ್ದಿಟ್ಕಂಡ್ರೆ ಕೈಲಾಸ ವಯಕುಂಟ ಎಲ್ಲಾವು ಮನ್ಸಾಗೆರ್‍ತಾವು.” ಎಂದು ಫಕೀರಮ್ಮ ಹೇಳಿದ್ದು ಆಕೆಗೆ ಸರಿಕಾಣಲಿಲ್ಲ.

ಒಂದು ಕೇಳುತ್ತ ಒಂದು ಬಿಡುತ್ತ ನಡೆದು ಮನೆಯ ಏರಿಕೆ ಬಾಗಿಲು ನೋಡಿ ತೃಪ್ತಿ ಪಟ್ಟಳು. ಅಡುಗೆಮನೆ, ಬಚ್ಚಲಮನೆ, ದೇವರಕೋಣೆ, ಹಿತ್ತಿಲು, ಹಜಾರನೋಡಿ ಸಂತೋಷಪಟ್ಟಳು. ಒಳ್ಳೆ ದೈವಭಕ್ತರು ಈ ಮನೇನ ಕಟ್ಟಿಸಿದಂತಿದೆ ಎಂದು ಗೊಣಗುತ್ತ ತಾನೊಬ್ಬಳೆ ಸಾಮಾನುಗಳನ್ನು ಆಯಾ ಜಾಗಕ್ಕೆ ಸರಿ ಹೊಂದಿಸಿದಳು… ಹೆಸರು, ನಡೆ, ನುಡಿ, ಅನುಮಾನಿಸಿ ಯಾರನ್ನೂ ಬಾಗಿಲಿಂದೀಚೆ ಬಿಟ್ಟುಕೊಳ್ಳಲಿಲ್ಲ. ಅವರ್‍ಯಾರೂ ಬಾಗಿಲು ದಾಟುವ ಪ್ರಯತ್ನವನ್ನೂ ಮಾಡಿಲಿಲ್ಲ. ಸುಜಾ ತಂದುಕೊಟ್ಟ ಒಂದುತಂಬಿಗೆ ಹಾಲನ್ನು ಕಾಯಿಸಿ ಉಕ್ಕಿಸಲೆಂದು ಒಳ ಒಯ್ದಳು. ಫಕೀರಮ್ಮ ಕಾಯಿಪಲ್ಲೆ ಅದೂ ಇದೂ ತಂದಿಟ್ಟಳು. ಅದನ್ನೂ ಒಳಗೊಯ್ದಳು. ಓಣಿಯ ಸದಭಿರುಚಿ ವರ್ತನೆಯನ್ನೂ; ಆಕೆಯ ಮಡಿಯುಡಿಯ ಪ್ರತಿಕ್ರಿಯೆಯನ್ನು ನೋಡಿ ವಿಜಯ ದೂರದಲ್ಲಿ ನಗಾಡುತ್ತಿದ್ದಳು.
ನನ್ನ ಹೊಟ್ಟೆ ಹಸಿದಿತ್ತು… ನೀರು ತುಂಬಿಸಿಟ್ಟು “ಬೇಗನೆ ಅಡುಗೆ ಮಾಡಿದರೆ…” ಎಂದೆ. “ಶ್ರೋತ್ರಿಗಳ ವಂಶರವರಾದ ನೀವೆ ಹೀಗೆ ಮಾತಾಡೋದೆ? …ಗೃಹ ಶಾಂತಿ, ನವಗ್ರಹ ಪೂಜೆ, ಇತ್ಯಾದಿ ಎಲ್ಲ ಮಾಡಿಸಬೇಕಿದೆ. ಹೋಗಿ ವೈದೀಕಕ್ಕೆ ಒಳ್ಳೆ ಪುರೋಹಿತರನ್ನು ಕರ್ಕೊಂಡು ಬನ್ನಿ” ಅಂದಳು… ನಾನು ಸ್ನಾನ ಮಾಡಿ ಸೀದ ಊಳೂರು ಕೃಷ್ಣಮೂರ್ತಿ ಶರ್ಮರ ಮನೆಗೆ ಹೋದೆ. ರಾತ್ರಿ ಊಟದ ತಾಪತ್ರಯದಿಂದಾಗಿ ಇಂಥದೇ ಆಮಂತ್ರಣದ ನಿರೀಕ್ಷೆಯಲ್ಲಿದ್ದ ಅವರು ಕೂಡಲೆ ಜೊತೆಗೆ ಹೊರಟು ಬಂದರು. ಫಕೀರಮ್ಮನನ್ನು ಮಹಾ ಬ್ರಾಹ್ಮಣ ಪ್ರೇಮಿ ಎಂದೂ ದೈವ ಭಕ್ತೆ ಎಮ್ದೂ ಹೊಗಳಿದರು.

ಹೋಗುತ್ತಲೆ ವರಲಕ್ಷ್ನಿ ಅವರ ಪಾದಕ್ಕೆ ನೀರು ಸುರಿದು ಒಳ ಬರಮಾಡಿಕೊಂಡಳು. ವೈದಿಕ ವಿಶಯದಲ್ಲಿ ಅಪಾರ ಆಸಕ್ತಿ ವಹಿಸಿದ ವರಲಕ್ಷ್ಮಿಯನ್ನೂ ಪರಮೇಶ್ವರ ಶಾಸ್ತ್ರಿಗಳ ಮನೆಯ ಸೊಸೆ ಅಂದರೆ ನಿನ್ನಂತಿರಬೆಕಮ್ಮಾ ಎಂದು ಹೊಗಳಿದರು. ದಂಪತಿಗಳಾದ ನೀವೀರ್ವರೂ ಬುಧವಾರ ಪೇಟೆಯನ್ನು, ಗುರುವಾರ ಪೇಟೆಯನ್ನಾಗಿ ಮಾಡಬೇಕೆಂದು ಸಲಹೆ ಕೊಟ್ಟರು.

ಮನೆಯ ಹಜಾರದ ನಡುವೆ ಪುಟ್ಟ ಯಜ್ಞ ಕುಂಡ ಸ್ಥಾಪಿಸಿ ವೃದ್ಧ ಶರ್ಮರು ಹವನ, ಹೋಮ ಮಾಡಿಸಿದರು. ಮನಸೇಚ್ಛೆ ಮಂತ್ರಗಳನ್ನು ಹೇಳಿದರು. ಓನಿಯ ಹುಡುಗರು ಹುಡುಗಿಯರು ಕುತೋಹಲದಿಂದ ಇಣುಕಿ ಹಾಕುತ್ತಿದ್ದುದ್ದನ್ನು ದೀಕ್ಷಾ ಕೈಕರ್ಯದ ನಡುವೆ ನಾನು ಓಡಿಸಬೇಕಾಗಿತ್ತು. ಏನೋ ಹುಡುಗರು ಕುತೋಹಲ; ನೋಡಿಕೊಳ್ಳಲಿ ಎಂದು ನಾನು ಸುಮ್ಮನಿದ್ದರೆ ಆಕೆಯೇ ದೊಡ್ಡ ದನಿ ತೆಗೆಯುತ್ತಿದ್ದಳು.
ಹಜಾರದಿಮ್ದೀಚೆ ಕೂತಿದ್ದ ಫಕೀರವ್ವ, ಓಬವ್ವ, ಚವುಡವ್ವ, ತಮ್ಮಣ್ಣ ಮೊದಲಾದವರು ತಮ್ಮ ಕೇರಿಯಲ್ಲಿ ಇಂಥದೊಂದು ಪೂಜೆ ಆಗುತ್ತಿರುವುದನ್ನು ಉಲ್ಲಾಸಮಯ ಭಕ್ತಿಯಿಂದ ನೋಡುತ್ತಿದ್ದರು
ಮಂಗಳಾರತಿಗೆ ಮೊದಲು ನಿಲುವಂಜಿ ನಿಂಗವ್ವ ಮತ್ತಕೆಯ ಸಂಗಡಿಗರು ಇದ್ದಕ್ಕಿದ್ದಂತೆ ಸ್ಪೂರ್ತಿಯಿಂದ
ಉಣ್ಣಬಾರದು ನಿಮ್ಮ ಮನೆಯಲ್ಲಿ ನಾವು
ಗನ್ನಗಾತಕ ಪಾಪಿ ನೀವು
ಅನ್ನವನುಂಡರೆ ನಿಮ್ಮ ಬ್ರಾಹ್ಮಣಿಕೆ ಹೋಗುವುದೆಂದು
ದುಮ್ಮಾನದಲ್ಲಿ ಹರಿನುಡಿದ
ಉಪ್ಪರಿಗೆ ಹತ್ತಿ ಭುವನತ್ರಿಗೆ ಬೀಳಲು
…ಎಂದು ಏರು ದನಿಯಲ್ಲಿ ಹಾಡುತಲೆ ನನ್ನ ಹೆಂಡತಿ “ಸಾಕು ಮಾಡ್ರೆಮ್ಮ ಸಾಕು ಮಾಡಿ ಹಾಡಲು ಇಂಥ ಹಾಡು ಸಿಕ್ಕಿತೇನು ನಿಮ್ಗೆ… ನಾವೇನು ನಿಮ್ಗೆ ಊಟ ಬಡಿಸ್ತೀವಾ” ಎಂದು ತಕರಾರು ಎತ್ತಿದಳು.
ನಾವು ಹಾಡಿದರಲ್ಲಿ ತಪ್ಪೇನೈತಿ… ಅಧ್ಯಾತುಮದ ಗೀತೆಗೆ ಬ್ಯೆಲೆ ಕೊಡ್ತಿಲ್ವಲ್ಲೀ ತಾಯಿ?” ಎಂದು ಅವರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ವರಲಕ್ಷ್ಮಿಗೂ ಅವರಿಗೂ ಇನ್ನೇನು ಜಟಾಪಟಿ ನಡೆಯುವುದು ಎನ್ನುವಷ್ಟರಲ್ಲಿ ಫಕೀರಮ್ಮ ಪುಸಲಾಯಿಸಿದ್ದಕ್ಕೆ ವಿಜಯಾ –
ಮಂಗಳಂ ಸುಗುಣಾಭಿ ರಾಮಗೆ
ಮಂಗಳಂ ಗುಣಧಾಮಗೆ
…ಎಂದು ಸುಶ್ರಾವ್ಯವಾಗಿ ಹಾಡತೊಡಗಿದಳು. ಒಂದು ಕ್ಷಣ ಆ ತರುಣಿಯ ಮಧುರ ಶಾರೀರಕ್ಕೆ ವರಲಕ್ಷ್ಮಿ ಮನಸೋತು –
ಜಾನಕೀರಮಣನಿಗೆ
ಮುನಿಗಣ ಸೇವ್ಯಗೆ
ಮಾನವೇಂದ್ರಗೆ ಪೂರ್ಣಚಂದ್ರಗೆ
ಧೇನುಪುರಿ ಶ್ರೀರಾಮಗೆ
… ಎಂದು ತಾನೂ ಧ್ವನಿ ಸೇರಿಸಿ ಹಾಡಿದಳು.
ಮಂಗಳಾರತಿ ಆದ ನಂತರ ಎಲ್ಲರೂ ಚದುರಿದರು. ಹೊರಡಲಿದ್ದ ವಿಜಯಾಳನ್ನು ಹತ್ತಿರ ಕರೆದು ವರಲಕ್ಷ್ಮಿ ಆಕೆಯ ತಲೆ ನೆವರಿಸಿ ಏನಮ್ಮಾ ಎಂತಮ್ಮಾ ಎಂದು ವಿಚಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದಳು.
ಆ ಕ್ಷಣದಿಂದ ನಮ್ಮ ಹೊಸ ಮನೆ ಹೊಸ ಸಂಸಾರ ಅಧಿಕೃತವಾಗಿ ಆರಂಭವಾಯಿತು. ರಾತ್ರಿ ಬಹಳ ಹೊತ್ತು ಆಕೆ ಮಲಗಲಿಲ್ಲ. ಊರು, ಓಣಿ, ಜನ, ಮತ್ತವರ ಸ್ವಭಾವ ಕುರಿತು ಅದು ಇದು ಮಾತಾ‌ಇದಳು. ಅತ್ತೆಯವರು ಊಟ ಮಾಡಿದ್ರೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಿದಳು. ಆ ಹುಡುಗಿ ವಿಜಯ ಎಷ್ಟೊಂದು ಚೆನ್ನಾಗಿ ಹಾಡಿದ್ಲು ಅಲ್ಲಾವಾ… ಅಂಥದೊಂದು ಹೆಣ್ಣು ಮಗಳು ನಮಗೆ ಹುಟ್ಟಿದರೆ ಹೀಗಿರ್‍ತದೆ… ನೀವು ಗಂಡು ಮಗು ಆಗಬೇಕೂಂತ ಬಯಸ್ತೀದೀರೇನೋ! ಎಂದಿತ್ಯಾದಿ ಮಾತಾಡಿದಳು. ನಾನು ಆಕೆಯ ಪ್ರತಿ ಮಾತಿಗೆ ಹ್ಹೂಂಗುಟ್ತುತ್ತಿದ್ದೆನು. ಏನ್ರೀ ಎಲ್ಲಾದ್ಕೂ ಹ್ಹೂಂಗುಟ್ಟುತ್ತಿದ್ದೀರಲ್ಲ ಎಂದು ತಕರಾರು ಎತ್ತಿದಳು.
“ಹೌದು! ನಾನು ಆಕೆಯ ಮಾತಿಗೆ ಪ್ರತಿನುಡಿಯುತ್ತಿರಲಿಲ್ಲ.. ಆಕೆ ಎಂದರೆ ನನಗೊಂದು ರೀತಿಯ ಭಯ. ಯಾವುದೋ… ನನ್ನನ್ನು ವಿರೋಧಿಸುವ ಶಕ್ತಿ ಆಕೆಯಲ್ಲಿ ಆಶ್ರಯ ಪಡೆದಿದೆ ಎಂದು ದೃಡವಾಗಿ ನಂಬಿದ್ದೆ. ಅದನ್ನು ಓಡಿಸುವ ಪ್ರಯತ್ನ ನಾನು ಮಾಡಿರಲಿಲ್ಲ.
“ಹೌದು! ಅಂಥದೊಂದು ಹೆಣ್ಣು ಮಗಳ ತಂದೆಯಾಗುವುದು ಹೆಮ್ಮೆಯ ವಿಷಯ; ಇದನ್ನು ಹೇಳಬೇಕೆಂದು ಕೊಂಡಿದ್ದಾಗ –
“ಏನ್ರೀ… ಬೆಕ್ಕು ಕಣ್ಮುಚ್ಕೊಂಡು ಹಾಲು ಕುಡಿದ್ರೆ ತನ್ನನ್ನು ಯಾರೂ ನೋಡ್ಲಿಲ್ಲಾಂತ ತಿಳ್ಕೊಳ್ತದಂತೆ” ಎಂದು ಇದ್ದಕ್ಕಿದ್ದಂತೆ ಮುಖ ದಿಮ್ಮನೆ ಮಾಡಿಕೊಂಡಳು.
ಏನಾದರೂ ಹೇಳಲಿಕ್ಕೆ ಕೇಳಲಿಕ್ಕೆ ಕೊಟ್ಟೂರಲ್ಲಾದರೆ ಅಮ್ಮ ಇರುತ್ತಿದ್ದಳು. ಆದರೆ ಇಲ್ಲಿ ತಾನೆ ಯಾರಿದ್ದಾರೆ… ಮಾಪಕ ಕಡ್ಡಿಯ ಒಂದು ತುದಿಯಲ್ಲಿ ನಾನಿದ್ದರೆ ಇನ್ನೊಂದು ತುದಿಯಲ್ಲಿ ಹೆಂಡತಿವರಲಕ್ಷ್ಮಿ ಇರುವಳು. ಮೆಲಿಂದ ಕೆಳಗೆ ಸಂಖ್ಯೆಗಳನ್ನು ಎಣಿಸುತ್ತಿದ್ದರೆ ಆಕೆ ಕೆಳಗಿಂದ ಮೇಲಕ್ಕೆ ಸಂಖ್ಯೆಗಳನ್ನು ಎಣಿಸುವಳು.
“ಯಾಕೆ… ಹಾಗಂತೀಯ ವರಲಕ್ಷ್ಮೀ” ಎಂದು ಪ್ರೀತಿಯಿಂದಲೇ ಕೇಳಿದೆ.

“ಮತ್ತೇನು… ನೀವು ಆ ಹುಡುಗಿ ಕಡೆ ಹುಳಿಹುಳಿ ನೋಡ್ತಿದ್ದುದನ್ನು ನಾನು ನೋಡ್ಲಿಲ್ಲಾಂತ ತಿಳ್ಕೊಂಡಿದ್ದೀರೇನು?” ಎಂದಳು, ಬಾರಕೋಲಿನಿಂದ ಬಾರಿಸಿದಂತೆ.
ಆಕೆ ಹಾಗೆ ಮಾತಾಡಬಹುದೆಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ… ಅದನ್ನು ಕೇಳಿ ನನಗೆ ಬೇಸರವಾಗಲೀ ದುಃಖವಾಗಲೀ ಆಗಲಿಲ್ಲ. ಬದಲಿಗೆ ಅನುಕಂಪ ಮೂಡಿತು.
“ಹುಚ್ಚಿ… ತಮಾಷೆ ಮಾಡ್ಬೇಡ… ಅದಕ್ಕೂ ಒಂದು ಮಿತಿ ಇರಬೇಕು…” ಎಂದು ರಮಿಸುವ ಪ್ರಯತ್ನ ಮಾಡಿದೆ. ಒಂದು ಕ್ಷಣ ನನ್ನ ಮುಖವನ್ನು ದಿಟ್ಟಿಸಿದಳು.
“ನೀವಂಥೊರಲ್ಲ ಬಿಡ್ರಿ” ಎಂದಳು… ನಾನು ಸುಮ್ಮನಿದ್ದೆ. ಹೌದು : ಖಂಡಿತ ನಾನು ಅಂಥವನಲ್ಲ… ಅಫಿಡವಿಟ್ ಮುಂಜೂರು ಮಾಡುವ ಕೋರ್ಟಿನ ಶಿರಸ್ತೆದಾರಳಂತಿರುವ ಹೆಂಡತಿಯಿಂದ ನಾನು ನನ್ನ ಪ್ರತಿಯೊಂದು ನಡೆ ನುಡಿ ಕುರಿತು ಪ್ರಮಾಣ ಪತ್ರ ಪಡೆಯಬೇಕು…. ಎಂಥ ವಿಚಿತ್ರ! ಪ್ರತಿ ಕ್ಷಣ, ಪ್ರತಿ ಚಲನವಲನವನ್ನು ಆಕೆ ಗಮನಿಸುವಳು… ಅನುಮಾನ ಬಂತೆಂದರೆ ಹಿಂದು ಮುಂದು ನೋಡದೆ ಪಾಟೀ ಸವಾಲಿಗೆ ಗುರಿ ಮಾಡುವಳು… ಹೌದು, ನನ್ನ ಗಂಡ ನಿರಪರಾಧಿ ಎಂದು ಸಮಾಧಾನ ಪಡುವಳು. ದೇವರ ಮೇಲೆ ಹೂವು ತಪ್ಪಬಹುದು… ಆದರೆ ಈ ಪಾಟೀ ಸವಾಲಾಗಲೀ, ಸಮಾಧಾನ ಹೊಂದುವುದಾಗಲೀ ತಪ್ಪುವುದಿಲ್ಲ… ಇದು ನಾನು ಕೆಲವು ತಿಂಗಳುಗಳಿಂದ ಅನುಭವಿಸುತ್ತಿರುವ ನಿತ್ಯಕರ್ಮ.

ಮರುದಿನ ಬ್ಯಾಂಕಿಗೆ ಹೋದಾಗ ಎಲ್ಲರೂ ಬುಧವಾರ ಪೇಟೆಯಲ್ಲಿ ಮನೆ ಮಾಡೋದೆಂದರೆ ಸಾಮಾನ್ಯ ಸಂಗತಿಯೇ ಎಂದು ಆಶ್ಚರ್ಯ ವ್ಯಕ್ಯಪಡಿಸಿದರು. “ವೈನಿಯವ್ರ ಕೈರುಚಿ ತೋರಿಸಲ್ವೇ ಶಾಸ್ತ್ರಿ” ಎಂದು ಹೆಬ್ರಿ ಕೇಳಿಯೇ ಬಿಟ್ಟ. ಅದಕ್ಕೆ ಎಲ್ಲರೂ ಹೌದೌದೆಂದು ತಲೆ ಅಲ್ಲಾಡಿಸಿದರು. ಇಸ್ಮಾಯಿಲ ನನ್ನ ಕಿವಿಯಲ್ಲಿ “ಹಾಗೇನಾದ್ರು ಕರ್ಕೊಂಡೋಗೀಯಾ ಶಾಸ್ತ್ರಿ! ಅವನ ಕಚ್ಚೆ ಸುಮಾರಂತ ನನ್ನ ಮಾತಿನ ಅರ್ಥವಲ್ಲ. ಸಂಪ್ರದಾಯಸ್ಥ ಹೆಂಗಸರನ್ನು ಆರೆಸ್ಸೆಸ್‌ಗೆ ಹೆಚ್ಚು ಹೆಚ್ಚಾಗಿ ಸೇರಿಸ್ಕೋಬೇಕಂತ ಮೇಲಿಂದ ಹುಕುಂ ಬಂದಿದೆಯಂತೆ… ಹೆಂಗಸರು ಪರಿಚಯವಾದೊಡನೆ ಆತ ಹೇಳೋದು ಪಥ ಸಂಚಲನದ ಮಹತ್ವದ ಬಗ್ಗೆ. ಪಥ ಸಂಚಲನ ಒಂಥರಾ ಅಫೀಮಿದ್ದಂತೆ… ಅದ್ಕೆ ಒಂದ್ಸಾರಿ ಅಡಿಕ್ಟಾದರೆ… ಮುಖ್ಯವಾಗಿ ಲೇಡೀಸು… ಮಾಡ್ಕೊಂಡ ಗಂಡನ್ನಾದ್ರು ಬಿಟ್ಟಾರು ಪಥ ಸಂಚಲವನ್ನು ಮಾತ್ರ ಬಿಡಲಾರರು, ಹೇಳ್ದೆ ಕೇಳ್ದೆ ಹೆಬ್ರಿ ಬಂದು ಬಿಡ್ತಾನೆ ಹುಷಾರ್…” ಎಂದು ಪಿಸು ನುಡಿದ…

ಇದನ್ನು ದೂರದಿಂದಲೇ ಗಮನಿಸಿದ ಚಂಬಸ್ಯಯ್ಯ ಲಂಚ್ ಅವರ್‌ಗಿಂತ ಸ್ವಲ್ಪ ಮುಂಚೆ ಟಾಯ್ಲೆಟ್ ಬಳಿ ಜೊತೆಯಾದ…. “ಏನಾ ಇಸ್ಮಾಯಿಲೂ ನೀನೂ ತುಂಬ ಮಾತಾಡ್ತಿದ್ರಲ್ಲ… ಏನ್ಸಮಾಚಾರ! ಹಂಚಿನ ಗುಡೀಲಿ ರುಕ್ಕಮ್ಮ ಎಂಬ ರಂಡೇನ ಜೊತೆ ಮಾಡ್ಕೊಂಡಿರೋದು ಯಾರ್‍ಗೂಗೊತ್ತಾಗಲ್ಲಾಂತ ತಿಲ್ಕೊಂಡಿದ್ದಾನೀಸುಮಾಯಿಲು… ಹಿಂದೂ ಸ್ತ್ರೀಯರೆಂದರೆ ಅವನಿಗೆ ಎಳ್ಳಷ್ಟು ಗೌರವವಿಲ್ಲ ಶಾಸ್ತ್ರಿ… ಸ್ವಲ್ಪ ಹುಷಾರಿಂದ ಇರಪ್ಪ… ನೀನು ಮೊದ್ಲೇ ಬಾಯಿ ಸತ್ತೋನು… ಈ ದರಿದ್ರ ಊರಲ್ಲಿ ಸಂಸಾರ ಹೂಡಿ… ದಾರಿದ್ರ್ಯವನ್ನು ಮೈ ಮೇಲೆ ಎಳ್ಕೊಳ್ಳಕ್ಕೆ ಸಜ್ಜಾಗಿದ್ದೀಯ” ಎಂದು ಒಂದ ಮಾಡುತ್ತ ಹೇಳಿದ.
ನಂತರ ಅವನು ಅಣ್ಣತಮ್ಮಂದಿರಂತೆ ನಗುನಗುತ್ತ ಇದ್ದುದು ಕಂಡು ನನಗೆ ಆಶ್ಚರ್ಯವಾಯಿತು. ಅಲಾಯಿದವಾಗಿ ನನ್ನ ಕಡೆ ಕಣ್ಣು ಮಿಟುಕಿಸುತ್ತಿದ್ದರು. ಅವರ ಪರಸ್ಪರ ಬೇಟೆಯಾಡುವುದರಲ್ಲಿ ನಿಷ್ಣಾತರಿರುವರು ಎಂದುಕೊಂಡೆ.

ನಾನು ನೌಕರಿಗೆ ಸೇರುವುದಕ್ಕಿಂಥ ಮೊದಲಿಂದಲೂ ಆ ಮುವ್ವರ ಪರಿಚಯ ನನಗಿಲ್ಲದಿರಲಿಲ್ಲ. ಹೆಬ್ರಿ ಗೋವಿಂದಾಚಾರ್ಯ ತುರ್ತು ಪರಿಸ್ಥಿತಿ ಅವಧಿಯಲ್ಲಿ ಸರಕಾರದ ವಿರುದ್ಧ ಪಿತೂರಿ ಮಾಡಿದ ಆಪಾದನೆಗಾಗಿ ಜೈಲಿಗೆ ಹೋಗಿದ್ದ. ಅವನಿದ್ದದ್ದು ಪ್ರಸಿದ್ಧ ಯರವಾಡ ಜೈಲಿನಲ್ಲಿ… ಜೈಲೊಳಗೆ ಇದ್ದು ಆರೆಸ್ಸೆಸ್ ಮುಖವಾಣಿ ಪತ್ರಿಗೆಗೆ ಪ್ರಾಸಬದ್ಧ ಮತ್ತು ಒತ್ತಕ್ಷರದ ಕಠಿಣ ಪದಗಳುಳ್ಳ ಕಿರು ಲೇಖನಗಳನ್ನು ಗುಪ್ತನಾಮ ಇಟ್ಟುಕೊಂಡು ಬರೆಯುತ್ತಿದ್ದ. ಒತ್ತಕ್ಷರ ಬಳಕೆ ಕುರಿತು ಕಲಿಯುತ್ತಿದ್ದ ನಾನು ಅದನ್ನು ಗುಟ್ಟಾಗಿ ಸಂಪಾದಿಸಿ ಓದುತ್ತಿದ್ದೆ. ಅವುಗಳಿಂದ ಪ್ರೇರಿತನಾಗಿ ನಾನು ಕೂಡ ಒಂದು ಖಾಕಿ ಚೆಡ್ಡಿ ಹೊಲಿಸಿಟ್ಟುಕೊಂಡಿದ್ದೆ. ತೊಡುತ್ತಿರಲಿಲ್ಲ. ವಾರದ ಎರಡು ಸಲ ಪಥ ಸಂಚಲನದ ಕನಸು ಕಾಣುತ್ತಿದ್ದೆ. ತುರ್ತು ಪರಿಸ್ಥಿತಿ ತೆಗೆದು ಹಾಕಿದ ಮರು ವಾರ ಕೊಟ್ಟೂರಿನ ಮೈದಾನದಲ್ಲಿ ಆತ ತನ್ನ ಸಂಗಡಿಗರೊಡನೆ ಪಥ ಸಂಚಲನ ಮಾಡಿದ್ದು ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ.

ಇಸ್ಮಾಯಿಲ ಹರಪನಳ್ಳಿ ಆಚೆ ಇರುವ ಕ್ಯಾದಿಗೆ ಹಳ್ಳಿ ಬಸಾಪುರ, ಹುಣಿಸೀಕಟ್ಟೆ ದಲಿತರನ್ನು ಕೆಲವು ಸವರ್ಣೀಯರನ್ನು ತಿರುಚನಾಪಳ್ಳಿಯ ದರಗಾಕ್ಕೆ ಸಾಗಿಸಿ ಇಸ್ಲಾಂ ಮತಕ್ಕೆ ಮತಾಂತರಗೊಳಿಸಿದ ಜಮಾತೆ ಇಸ್ಲಾಮಿನ ಗುಂಪಿನಲ್ಲಿದ್ದುದಾಗಿ ಕೇಳಿದ್ದೆ. ವಕೀಲರೋರ್ವರ ತಂಗಿಯನ್ನಪಹರಿಸಿ ಸಿಕ್ಕಿಹಾಕಿಕೊಂಡು ಹಲ್ಲೆಗೀಡಾಗಿದ್ದ. ಅವನು ಮತಾಂತರಗೊಳಿಸಿದವರ ಪೈಕಿ ಪ್ರಭುದೇವನೆಂಭೋರ್ವನು ಈಗಲೂ ಕೊಟ್ಟೂರು ಬಳಿ ನಗೀರ್ ಅಹಮದ್ ಎಂಬ ಹೆಸರಿಟ್ಟುಕೊಂಡು ದೆಹಲಿಯ ಚಾಂದಿನಿ ಚೌಕದಲ್ಲಿ ತಯಾರಾಗುತ್ತಿರುವ ತಂಬಾಕಿನ ವಿವಿಧ ನಮೂನೆಗಳನ್ನು ಗ್ರಾಮದ ಜನರಿಗೆ ಪರಿಚಯಿಸುತ್ತಿರುವನು. ಅವನೂ, ಇಸ್ಮಾಯಿಲೂ ಈಗಲೂ ವರ್ಹಕ್ಕೊಂದು ಸಾರಿ ಅಜ್ಮೀರಿಗೆ ಹೋಗಿ ಬರುತ್ತಿರುತ್ತಾರೆ.

ಚಂಬ್ಸ್ಯಯ್ಯ ಮಾತ್ರ ಅವರಿಬ್ಬರಿಗಿಂತ ಚೆನ್ನಾಗಿ ಪರಿಚಯ. ಪೀಠದ ಅಧಿಕಾರ ಕುರಿತಂತೆ ಲಿಂಗಾಯಿತ ಜಾತಿಯ ಎರಡು ಕೋಮುಗಳ ನಡುವೆ ಐದಾರು ವರ್ಷಕ್ಕೊಮ್ಮೆಯಾದರೂ ಸಂಭವಿಸುವ ಗಲಭೆಯಲ್ಲಿ ಆತ ಮಚ್ಚು ಹಿಡಿದುಕೊಂಡು ಪಂಚಾಚಾರ್ಯ ಮಾರಾಜ್ಕೂ ‘ಜೈ’ಎಂದು ಕೂಗುತ್ತ ಅಡ್ಡಡುತ್ತಿದ್ದುದನ್ನು ನಾನು ನೋಡಿರುವುದುಂಟು. ಅಲ್ಲದೆ ಆತ ತನ್ನ ಕಿರಿ ಪತ್ನಿ ಗೌರಮ್ಮನನ್ನು ವೃದ್ಧಾತಿ ವೃದ್ಧ ಜಗದ್ಗುರುಗಳ ಸೇವೆಗೆ ಬಿಟ್ಟಿದ್ದಾನೆ. ಜಗದ್ಗುರುಗಳ ಸ್ನಾನ ಕಾರ್ಯದ ಮೇಲ್ವಿಚಾರಕಿಯಾದ ಆಕೆಯ ಮೂಲಕ ಹಲವು ವೀರಶೈವ ಪುಡಾರಿಗಳು ಜಗದ್ಗುರುಗಳಿಂದ ರಾಜಕೀಯ ಮತ್ತು ರಾಜಕೀಯೇತರ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿರುವರೆಂದು ನಾನು ಕೇಳಿರುವುದುಂಟು. ಗೌರಮ್ಮ ಜಗದ್ಗುರುಗಳ ನೂರೆರಡನೇ ಹುಟ್ಟುಹಬ್ಬವನ್ನು ಅವರಿಂದ ವೀರ್ಯಸ್ಖಲನ ಮಾಡಿಸುವುದರ ಮೂಲಕ ಯಶಸ್ವಿಯಾಗಿ ಆಚರಿಸಿದಳೆಂದು ಮುಂತಾಗಿ ವಿಡಂಬನಾತ್ಮಕ ಲೇಖನ ಬರೆದು ಕರಪತ್ರ ಹಂಚಿದ ಕಾರಣಕ್ಕಾಗಿ ಸ್ಥಳೀಯ ಹವ್ಯಾಸಿ ಪತ್ರಕರ್ತ ಪ್ರಕಾಶನನ್ನು ಹಿಡಿದು ಅವನ ತಲೆ ಬೋಳಿಸಿ ಕತ್ತೆ ಮೇಲೆ ಬತ್ತಲೆಯಾಗಿ ಕೂಡ್ರಿಸಿ ಪೀಠದ ಕೇಂದ್ರ ಸ್ಥಳವಾದ ಶಿವಪುರದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದಂದಿನಿಂದಲೇ ಚಂಬಸ್ಯಯ್ಯ ಹೆಚ್ಚಿಗೆ ಪ್ರಚಾರಕ್ಕೆ ಬಂದದ್ದು.

ಆದರೆ ಈ ಮೂವರು ಈ ಚರಿತ್ರೆ ಎಲ್ಲ ನನಗೆ ಗೊತ್ತಿಲ್ಲವೆಂದುಕೊಂಡು ಪರಮ ಸಜ್ಜನರಂತೆ ವರ್ತಿಸುತ್ತಿರುವರು. ಇದನ್ನೆಲ್ಲ ಸಂದರ್ಭಾನುಸಾರ ಪ್ರಕಟಿಸಿ ಅವರ ಮೇಲೆ ಹಿಡಿತ ಸಾಧಿಸಬೇಕೆಂದು ನಿರ್ಧರಿಸಿದೆ. ಇವರೊಂದೇ ಅಲ್ಲ, ಸಮಾಜದ ಅನೇಕರ ಒಳಗುಟ್ಟುಗಳನ್ನು ದಾಖಲು ಮಾಡಿಕೊಂಡಿರುವೆ. ಇದು ನನ್ನ ಪ್ರಮುಖ ಹವ್ಯಾಸಗಳಲ್ಲಿ ಒಂದು. ನಮ್ಮ ವಂಶದ ತಾಕೀತುದಾರರ ಗುಟ್ಟುಗಳನ್ನೂ ನಾನು ಸಂಗ್ರಹಿಸಿಕೊಂಡಿರುವೆ – ತಂದೆಯವು, ತಾತನವು, ತಾಯಿಯವು… ಆದರೆ ಹೆಂಡತಿ ಮಾತ್ರ ಗುಟ್ಟುಗಳೇ ಇಲ್ಲದ ಶೂನ್ಯ ಸಿಂಹಾಸನದಂತೆ ಗೋಚರಿಸುತ್ತಿರುವಳು.

ವಿವಾಹ ನಂತರದ ಇಷ್ಟು ದಿನಗಳಲ್ಲಿ ಆಕೆ ತನ್ನ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಒಂದೇ ಒಂದು ಗುಟ್ಟನ್ನು ಅನುಭವಿಸುವುದಾಗಿಲ್ಲ. ಬಚ್ಚಿಟ್ಟುಕೊಳ್ಳುವುದಾಗಿಲ್ಲ… ಅದಕ್ಕೆಂದು ನಾನು ಅನೇಕ ಅವಕಾಶಗಳನ್ನು ಕಲ್ಪಿಸಿರುವುದುಂಟು. ಆಕೆ ಮುಖ್ಯವಾಗಿ ನಿರ್ಮೋಹಿ. ಆಕೆಯನ್ನು ಆಕರ್ಶಿಸುವ ಯಾವ ವಸ್ತುವೂ ಭೂಮಿ ಮೇಲಿಲ್ಲ. ಮಲ್ಲಿಗೆ ಮತ್ತು ಗುಲಾಬಿ ಹೂಗಳ ನಡುವೆ ಅಂತರ ಗುರುತಿಸಲಾರಳು. ಕಾಗೆ ಮತ್ತು ನವಿಲಿನ ನಡುವೆಯೂ ಅಷ್ಟೆ. ಆಕೆಯ ಚಿತ್ತವನ್ನು ಸೂರೆಗೊಳ್ಳುವ ಶಕ್ತಿಗಾಗಿ ಹುಡುಕಾಟ ನಡೆಸಿ ವಿಫಲನಾದೆ… ಆಕೆಯನ್ನು ಲೈಂಗಿಕವಾಗಿ ಉದ್ರೇಕಿಸುವ ವಸ್ತುವನ್ನು ಆ ಸೃಷ್ಟಿಕರ್ತನು ಸೃಷ್ಟಿಸಿಯೇ ಇಲ್ಲವೆಂದು ನನಗೆ ಗೊತ್ತಾದದ್ದು ಯಾವಾಗ ಎಂದರೆ ಗಂಡು ಹೆಣ್ಣುಗಳು ಬತ್ತಲೆಯಾಗಿ ಸಾಮೂಹಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿರುವಂಥ ಚಿತ್ರಗಳೇ ತುಂಬಿದ್ದ ‘ರತಿವಿಲಾಸ’ ಎಂಬ ನಿಷೇದಿತ ಪತ್ರಿಕೆಯನ್ನು ‘ಸ್ವರ್ಣಗೌರಿ ವ್ರತವು’ ಎಂಬ ಪುಸ್ತಕದ ಒಳಗಿರಿಸಿ ಕಿಟಕಿ ಕಿಂಡಿಯಲ್ಲಿಣುಕಿ ನಾನು ಆಕೆಯ ಪ್ರತಿಕ್ರಿಯೆಯನ್ನು ಗಮನಿಸಿದ್ದುಂಟು. ಅದನ್ನು ತೆರೆದು ನೋಡಿ ಆಕೆ ಮೂರ್ಛೆ ಹೋದಳು. ಎದೆ ಎದೆ ಬಡಿದುಕೊಂಡಳು. ಅದನ್ನು ಹರಿದು ಚಿಂದಿಮಾಡಿ ಸುಟ್ಟು ಗೋಮೂತ್ರ ಸಿಂಪಡಿಸಿ ಮನೆಯನ್ನು ಶುದ್ಧ ಮಾಡಿದಳು. ನನ್ನನ್ನು ವಾರದ ದಿನಮಾನ ಕೆಟ್ಟದಾಗಿ ತರಾಟೆ ತೆಗೆದುಕೊಂಡು ಶಿಕ್ಷಿಸಿದಳು ಇತ್ಯಾದಿ…

ಒಂದು ನಿಜ ಹೇಳಬೇಕೆಂದರೆ ಆಕೆಯಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಕಾಮೋತ್ತೇಜಕ ವಸ್ತುಗಳಿಗಾಗಿ ನಾನು ಗುಟ್ಟಾಗಿ ಹುಡುಕಾಟ ನಡೆಸಿದ್ದುಂಟು. ಕಿಷ್ಕಿಂದೆಯಲ್ಲಿ ಆಂಧ್ರದಲ್ಲಿ ರೆಡ್ಡಿಯವರು ರಾಜಸುಯಯಜ್ಞ ನಡೆಸುತ್ತಿರುವರೆಂಬ ಸುದ್ದಿ ಕೇಳಿ ಹೊಸಪೇಟೆ ತಲುಪಿ ಉಳ್ಳಾಗೆಡ್ಡೆಯವರೋಣಿಯಲ್ಲಿ ಲೈಂಗಿಕ ತಜ್ಞರೋರ್ವರ ವಿಳಾಸ ಪಡೆದು ರಾಣಿಪೇಟೆಯಲ್ಲಿದ್ದ ಅವರನ್ನು ಸಂಪರ್ಕಿಸಿ, ನೂರಾರು ರುಪಾಯಿಕೊಟ್ಟು ಪಡೆದ ಐದು ಗ್ರಾಂ ಭಸ್ಮವನ್ನು ಆಕೆಗರಿವಿಲ್ಲದಂತೆ ಪಂಚಕಜ್ಜಾಯದಲ್ಲಿರಿಸಿ ತಿನ್ನಿಸಿದ್ದೂ ಉಂಟು.

ಇದೇ ಮೊನ್ನೆ ಬಸ್ಸಿನಲ್ಲಿ ಪ್ರಯಾಣಿಸುವಾಗ್ಗೆ ಪ್ರೌಡ ಶಾಲಾ ವಿಧ್ಯಾರ್ಥಿಯೋರ್ವನು ಭುಜ ತಾಕಿಸಿದ ಎಂಬ ಕಾರಣಕ್ಕೆ ದೊಡ್ಡ ರಂಪಾಟ ಮಾಡಿಬಿಟ್ಟಂಥ ನನ್ನ ಹೆಂಡತಿಯಲ್ಲಿ ಯಾವ ಗುಟ್ಟುಗಲನ್ನು ಹುಡುಕಲು ಸಾಧ್ಯವಾದೀತು? ಸಮಾಜಕ್ಕೆ ನಿರುಪದ್ರವಿಯೂ; ನನಗೆ ಕರ್ಮಠ ಉಪದ್ರವಿಯೂ ಆದೆ ಆಕೆ ದ್ವೀಪದಂತೆ ವಾಸಿಸಬೇಕೆಂದು ಇಚ್ಛಿಸುತ್ತಾಳೆ. ವಾರಕ್ಕೊಂದಾದರೂ ವ್ರತವನ್ನು ಮಾಡುತ್ತಾಳೆ. ನನ್ನ ಹೆಂಡತಿಗೆ ತಿಥಿಗಳ ಪರಿಚಯವಿದೆ.. ನಕ್ಷತ್ರಗಳ ಪರಿಚಯವಿದೆ, ವಾರಗಳ ಪರಿಚಯವಿದೆ, ಘಳಿಗೆಗಳ ಪರಿಚಯವಿದೆ. ಆಕೆ ಜೀವಂತ ಪಂಚಾಂಗವೆಂದರೂ ಸರಿಯೇ. ಆದರೆ, ಗಂಡನಾದ ನನ್ನ ಮನಸ್ಸಿನ ಭಾವನೆಗಳ ಪರಿಚಯವಿಲ್ಲ.. ಸಾಂಸಾರಿಕ ಛಂದಸ್ಸಿನ ಪರಿಚಯವಿಲ್ಲ, ದಾಂಪತ್ಯದ ವ್ಯಾಕರಣದ ಪರಿಚಯವಿಲ್ಲ. ಅವುಗಳನ್ನು ಪರಿಚಯ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಸಂಸಾರವೆಂಬ ಉದಕದಲ್ಲಿ ತೈಲದ ಬಿಂದುವಿನಂತೆ ಇರುವ ಆಕೆಯಲ್ಲಿ ಯಾವ ಗುಟ್ಟನ್ನು ಯಾವ ದೋಶವನ್ನು ಹುಡುಕಲಿ?

ದಿನಗಳೆದಂತೆ ಬುಧವಾರಪೇಟೆ ಆಕೆಗೆ ನರಕ ಸದೃಶವಾಗ ತೊಡಗಿತು. ಅವರು ಹಾಗೆ! ಇವರು ಹೀಗೆ! ಎಂದು ಸಿಡಿಮಿಡಿಗುಟ್ಟ ತೊಡಗಿದಳು. ಪೂರ್ವ ನಿರ್ಧರಿತ ಒಪ್ಪಂದದಂತೆ ನಾನು ಫಕೀರಮ್ಮನ ಮನೆಯಲ್ಲಿ ದಿನಕ್ಕೆ ಒಂದಾವರ್ತಿ ಪ್ರಾತಃಕಾಲದಲ್ಲಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವುದರ ಬಗ್ಗೆ; ಐದು ರೂಪಾಯಿ ದಕ್ಷಿಣೆ ಸ್ವೀಕರಿಸುವ ಬಗ್ಗೆ, ಪಾದಾಭಿವಂದನೆ ಸ್ವೀಕರಿಸುವ ಬಗ್ಗೆ ತಕರಾರು ಶುರು ಮಾಡಿದಳು. ಪಾಪ ಸಂಚಯದ ಒಂದು ಭಾಗವೇ ದಕ್ಷಿಣೆ ಎಂದು ವಾದಿಸತೊಡಗಿದಳು. ಪಾದಾಭಿವಂದನೆ ಮಾಡುವುದರ ಮೂಲಕ ವಕ್ಷಸ್ಥಳ ತೋರಿಸಿ ತನ್ನ ಗಂಡನಾದ ನನ್ನ ಚಿತ್ತವನ್ನು ಅಪಹರಿಸುವ ಪ್ರಯತ್ನ ಮಾಡುತ್ತಿರುವರೆಂದು ತರ್ಕಿಸ ತೊಡಗಿದಳು. ಆಕೆಯ ತರ್ಕಕ್ಕೆ ಗೊಬ್ಬರ ಹಾಕುವ ರೀತಿಯಲ್ಲಿ ವಿಜಯಾ; ರಾಗಿಣಿ; ಮೇನಕೆ ಎಂಬ ತರುಣಿಯರು ಕೂಡಾ ಅಷ್ಟೇ ಸಲಿಗೆಯಿಂದ ಇದ್ದರು. ವಿಜಯಾ ಶಂಕರಾಚಾರ್ಯ ವಿರಚಿತ ‘ಸೌಂದರ್ಯಲಹರಿ’ಯ ಕೆಲವು ಕ್ಲಿಷ್ಟ ಸ್ತೋತ್ರಗಳ ಅರ್ಥ ಬಯಸಿ ಆಗೊಮ್ಮೆ, ಈಗೊಮ್ಮೆ ನಮ್ಮ ಮನೆಗೆ ಬರುತ್ತಿದ್ದುದು ಕ್ರಮೇಣ ಇಷ್ಟಪಡದಾದಳು. ಆದಿತಾಳದ ರೂಪರೇಷೆಗಳನ್ನು ತಿಳಿದುಕೊಳ್ಳುವ ನಿಮಿತ್ತ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಕರ್ನಾಟಕ ಸಂಗೀತ ವಿದ್ಯಾರ್ಥಿನಿ ರಾಗಿಣಿಯ ಮೇಲೆ ಕಿಡಿಕಾರ ತೊಡಗಿದಳು. ಸಂಖ್ಯಾಶಾಸ್ತ್ರದ ವಿದ್ಯಾರ್ಥಿನಿಯಾದ ಮೇನಕೆಗೂ ವರಲಕ್ಷ್ಮಿಗೂ ನನ್ನ ಗೈರುಹಾಜರಿಯಲ್ಲಿ ಜಗಳ ಆಯಿತೆಂದು ವಿದ್ಯುತ್ ಇಲಾಖೆಯ ಮೀಟರ್ರೀಡರು ಯಾಕೂಬ ಹೇಳಿದ. ಇದರಲ್ಲಿ ಸುಳ್ಳೆಷ್ಟೊ ನಿಜವೆಷ್ಟೋ!… ಆಕೆ ಎಷ್ಟೇ ವಿರೋಧಿಸಿದರು ಆ ಮೂರು ಮಂದಿ ತರುಣಿಯರು ನನ್ನಿಂದ ಸಾಧ್ಯವಾದಷ್ಟು ಜ್ಞಾನವನ್ನು ಸಂಪಾದಿಸುತ್ತಿದ್ದರು. ಅವರೆಂದೂ ನನ್ನ ಬಳಿ ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸುದುದಿಲ್ಲ. ಹತ್ತಿರ ಬಂದರೆ ದೂರ ಸರಿಯುವ, ದೂರವಾದರೆ ಹತ್ತಿರ ಸುಳಿಯುವ ನನ್ನ ಸ್ವಭಾವ ನನಗೆ ಗೊತ್ತಿದ್ದೇ ಇತ್ತು. ವರಲಕ್ಷ್ಮಿಯ ಕಾರುಬಾರಿನಿಂದ ಅವರೆಲ್ಲಿ ದೂರವಾಗಿಬಿಡುವರೋ! ಆಗ ಮತ್ತೆಲ್ಲಿ ತಾನು ಅವರಿಗೆ ಹತ್ತಿರವಾಗಲು ಪ್ರಯತ್ನಿಸುವೆನೋ ಎಂಬ ಅಳುಕಿನಿಂದಾಗಿ ನಾನು, ಅವರ ಮತ್ತು ನನ್ನ ನಡುವೆ ಒಂದು ಅಂತರ ಕಾಯ್ದುಕೊಂಡು ಬಂದಿದ್ದೆ. ಯಾರು ಯಾರನ್ನೂ ಮೋಹಿಸುವುದು ಸಾಧ್ಯವಿರಲಿಲ್ಲ!… ಆದರೆ ಅದು ಆಕೆಗೆ ಅರ್ಥವಾಗುವುದು ಸಾಧ್ಯವಿರಲಿಲ್ಲ. ರೆಡ್‌ಹ್ಯಾಂಡ್ನಲ್ಲಿ ಹಿಡಿಯಬೇಕೆಂದು ನಿರ್ಧರಿಸಿರುವಳಂತೆ ಇರುತ್ತಿದ್ದಳು. ಎಲ್ಲರಿಗೂ ಕೇಳಿಸುವಂತೆ “ವಿಜಯಾ ಕಾಲೇಜ್ನಿಂದ ಈಗ ಬಂದ್ಯಾ… ಊಟಾ ಆಯ್ತಾರಾಗಿಣಿ… ಸಂಗೀತ ತರಗತಿಗೆ ಹೋಗಿದ್ಯಾ… ಇತ್ಯಾದಿ ಇತ್ಯಾದಿ ಹೊರಗಡೆ ಮಾತಾಡಿಸುತ್ತಿದ್ದ ಆಕೆ ಅವರೇನಾದರೂ ಮನೆ ಕಡೆ ಸುಳಿದರೆ ಬನ್ರಮ್ಮಾ ಕೂತ್ಕೋಳ್ಳಿ… ಒಂದು ಕಪ್ಪು ಪಾನಕ ಮಾಡಿಕೊಡ್ತೀನಿ… ಕೋಸಂಬರಿ ತಿಂದು ಕುಡಿಯುವಿರಂತೆ” ಎಂದೆನ್ನುತ್ತಿರಲಿಲ್ಲ. ಶ್ರೀಲಲಿತಾಷ್ಟಕದ ಮೂರು ಖಂಡಗಳಂತಿದ್ದ ಆ ಮುವ್ವರನ್ನು ನಾನು ಪರಿಭಾವಿಸುವುದೆಂಬ ಗೊಂದಲದಲ್ಲಿದ್ದ ನಾನು ತಾತ, ತಾಯಿ ಮತ್ತು ಕರ್ಮಠವೆಂಬೀ ಮೂರು ಕೋರ್ಟುಗಳು ಜೀವಾವಧಿ ಶಿಕ್ಷೆ ವಿಧಿಸಿ ತುರಂಗ ಪಾಲು ಮಾಡಿರುವ ಸಂಗೀತ, ಸಾಹಿತ್ಯ ಮತ್ತು ಸಂಖ್ಯಾ ಶಾಸ್ತ್ರಗಳ ಮೂರು ಹವ್ಯಾಸಗಳೆ; ಪ್ರತಿಭೆಗಳೇ ಈ ಮೂರು ಮಂದಿ ತರುಣಿಯರು ಎಂದು ಭಾವಿಸಿದ್ದೆನು. ಆದ್ದರಿಂದ ಅವರ ತರುಣ ಪ್ರತಿಭೆಗಳನ್ನು ಆರಾಧಿಸುತ್ತಿದ್ದೆ ಮತ್ತು ಗೌರವಿಸುತ್ತಿದ್ದೆನೇ ಹೊರತು ಕಾಮ ದೃಷ್ಟಿಯಿಂದ ಪ್ರೀತಿಸುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೆ ಅಳುಕು ಎಂಬ ಸಂಕೋಲೆಯನ್ನು ಕಾಲಿಗೆ ತೊಡರಿಸಿಕೊಂಡು ಸಂಕೋಚವೇ ಮೂರ್ತಿವೆತ್ತಂತೆ ಅಡ್ಡಾಡುತ್ತಿದ್ದೆನು.

ನಾನು ಸ್ಲೀವ್‌ಲೆಸ್ ಬ್ಲೌಸಿನ ಆಕೆ, ಮನೆಗೆ ನನ್ನ ಗೈರುಹಾಜರಿಯಲ್ಲಿ ಬಂದು ಲಗ್ನ ಪತ್ರಿಕೆಯನ್ನು ನನ್ನ ಹೆಂಡತಿಗೆ ತಂದು ಕೊಟ್ಟು ಅಕೆಯೊಂದಿಗೆ ಗಂಟೆಗಟ್ಟಲೆ ಹರಟಬಹುದು ಎಂದು ಯೋಚಿಸಿರಲಿಲ್ಲ… ಹೆಬ್ರಿಯವರ ಊರಿಗೆ ಹೋಗಿ ಹೆಬ್ರಿಗೂ, ಇಸ್ಮಾಯಿಲರ ಊರಿಗೆ ಹೋಗಿ ಇಸ್ಮಾಯಿಲಗೂ; ಚಂಬಸ್ಯಯ್ಯನ ಊರಿಗೆ ಹೋಗಿ ಚಂಬಸ್ಯಯ್ಯನಿಗೂ ಕೊಟ್ಟಿದ್ದ ಆಕೆ, ಕೊಟ್ಟೂರಿಗೆ ಹೋಗಿ ನನ್ನ ತಾಯಿಯವರಿಗೂ ಕೊಟ್ಟಿರಬಹುದೆಂದು ಭಾವಿಸಿದ್ದುದೇ ತಪ್ಪಾಗಿತ್ತು. ಗ್ರಹಲಾಘವವೇ ಸಿದ್ಧಾಂತ ರಹಸ್ಯವೇ ಹೆಣ್ಣು ರೂಪ ಧರಿಸಿರುವುದೇನೋ ಎಂಬಂತಿದ್ದ ಆಕೆಗೆ ಏನ್ರೀ ಶಾಂತೀ ನನ್ಗೆ ನಿಮ್ಮ ಲಗ್ನ ಪತ್ರಿಕೆ ಕೊಡ್ಲಿಲ್ವಲ್ಲಾ” ಎಂದು ಕೇಳುವ ಬಯಕೆಯಿಂದ ಕೇಳುವ ಧೈರ್ಯ ಮಾಡಲೂ ಇಲ್ಲ ನಾನು. ಅದೇ ದಿನ ಗುಂಡುಮುಗುಳು ಸಿದ್ಧನಗೌಡ ನನಗೆ ಪಶುಪತಿಯೆಂಬ ದೊಗಳೆ ಉಡುಪುಧರಿಸಿದ್ದ ದೊಗಳೆ ವ್ಯಕ್ತಿಯನ್ನು ಪರಿಚಯಿಸಿಕೊಟ್ಟಿದ್ದ. ಈ ದೇಶದಲ್ಲಿ ಮಾರ್ಕ್ಸಿಜಂ ಜೀವಂತವಾಗಿ ಉಳಿದಿರೋದಾದ್ರೆ ಅದು ಬ್ರಾಹ್ಮಣರಿಂದ ಮಾತ್ರ ಎಂದು ಅವನು ಪರಿಚಯವಾದ ಕ್ಷಣ ಹಸ್ತಲಾಘವ ಮಾಡಿ ಹೇಳಿ ಬಿಟ್ಟಿದ್ದ. ಅವನು ನನ್ನನ್ನು ಹೊಗಳಿದನೋ, ತೆಗಳಿದನೋ ಎಂದೊಂದು ಕ್ಷಣ ಅರ್ಥವಾಗಲಿಲ್ಲ. ಚತುರ್ಭುಜಾಕೃತಿಗಳನ್ನು ಚೌರಸಗಳನ್ನಾಗಿಯೂ; ಚೌರಸಗಳನ್ನು ವೃತ್ತಗಳನ್ನಾಗಿಯೂ ಮಾರ್ಪಡಿಸಬಲ್ಲ ಚಾಣಾಕ್ಷನಂತಿದ್ದ. ಪೈಥಾಗೋರಿಯಸ್ ಪ್ರಮೇಯದ ಮೂಲಕ ಸಮಾಜವನ್ನು ಅರ್ಥಮಾಡಿಕೊಳ್ಳಲು, ಪಡೆವ ಉತ್ತರಕ್ಕೆ ತಾನೇ ವಾರಸುದಾರನೆಂಬಂತೆ ಬೀಗುತ್ತಿದ್ದ. ಮೂರುಗ್ ಗೂಟಗಳ ನಡುವೆ ಕಟ್ಟಿದ ದಾರಗಳ ಪೈಕಿ ನನಗೂ ಆ ಪೈಕಿ ಒಂದನ್ನು ಕೊಟ್ಟಿದ್ದ. ಅಲುಮೇಲಮ್ಮ ನನಗೆ ಗೊತ್ತಿದ್ದಲೇ ಹೊರತು ಮಾರ್ಕ್ಸಿಜಮ್ಮ ನನಗೆ ಗೊತ್ತಿರಲಿಲ್ಲ. ಅದನ್ನು ತಿಳಿದುಕೊಳ್ಳುವ, ಭೇದಿಸುವ ಗೋಜಿಗೂ ನಾನು ಹೋಗಿರಲಿಲ್ಲ. ಸಹನೌಭುನಕ್ತು, ಸಹವೀರ್ಯಂ ಕರವಾವಹೈ ಎಂಬುದರಲ್ಲಿಯೇ ಇದೆಲ್ಲ ಅಡಗಿಹೋಗಿದೆಯಲ್ಲಾ ಎಂದು ಕೊಂಡಿದ್ದ ನಾನು… ನಾನು ಗೂಟದ ಈಶಾನ್ಯಕ್ಕಿದ್ದರೆ ಪಶುಪತಿ ಯಮ ದಿಕ್ಕಿನಲ್ಲಿ; ಗುಮಿಸಿ ಗೌಡ ನೈರುತ್ಯ ದಿಕ್ಕಿನಲ್ಲಿದ್ದರು. ಅವರು ತಂತಮ್ಮ ಕಡೆ ಜಗ್ಗಾಡುತ್ತಿರುವಾಗ ನಾನೋರ್ವನೇ ಗೂಟಕಿತ್ತು ಕೊಂಡು ಮನೆ ಕಡೆ ಓಡುವುದು ಹೇಗೆ ಸಾಧ್ಯವಾದೀತು?… ನಾನೀ ಬಿಡುಗಡೆ ಪ್ರಯತ್ನದಲ್ಲಿರುವಾಗಲೇ ಶಾಂತಿ ಲಗ್ನ ಪತ್ರಿಕೆಗಳನ್ನು ಅಂಕಗಣಿತ; ಬೀಜಗಣಿತ, ರೇಖಾಗಣಿತವನ್ನಡಗಿಸಿಟ್ಟುಕೊಂಡಂತಿದ್ದ ನಿಘೂಡ ವ್ಯಾನಿಟ್ ಬ್ಯಾಗಿನೊಳಗಿಟುಕೊಂಡು ಬ್ಯಾಂಕಿನಿಂದ ಸೀದ ಬುಧವಾರ ಪೇಟೆ ಕಡೆ ಲಟಗೂ ಪುಟಗೂ ಹೊರಟಿದ್ದಳು.

ಆಕೆ ನಮ್ಮ ಮನೆ ತಲುಪುವ ಕೆಲವು ಕ್ಷಣಗಳ ಹಿಂದೆಯಷ್ಟೆ ವರಲಕ್ಷ್ಮಿಯು ಮಡಿಮುಡಿಯಿಂದ ಮಾಧ್ವನವಮಿಯನ್ನು ಆಚರಿಸುವ ಸನ್ನಾಹದಲ್ಲಿದ್ದಳು. ಈಶ್ವರಾಂಶ ಸಂಭೂತವಾದ ಜೀವಾತ್ಮನೇ ನಿತ್ಯಶಾಶ್ವತವೆಂದು ಬೋಧಿಸುವ ತಹತಹಿಕೆಯಿಂದ ಶ್ರೋತೃವಿಗಾಗಿ ಹುಡುಕಾಡುತ್ತ ಹಿತ್ತಲಿಗೂ ಅಂಗಳಕ್ಕೂ ನಡುವೆ ಅಡ್ಡಾದುತ್ತಿದ್ದಳು. ಕೇಳುವವರು, ಜ್ಞಾನತೃಷಿಗಳೊಬ್ಬರೂ ಆಕೆಗೆ ದೊರಕಿರಾಲಿಲ್ಲ. ಅನ್ಯಥಾರ್ಗತಿನಾಸ್ತಿ ಎಂಬಂತೆ ತನ್ನ ನಿರುಪಾದಿಕವಾದ ಪ್ರತಿಬಿಂಬವನ್ನೇ ಎದುರಿಗಿಟ್ಟುಕೊಂಡು ಅದಕ್ಕೆ ಆಚಾರ್ಯತ್ರಯರಲ್ಲೋರ್ವರಾದ ಮಾಧ್ವಾಚಾರ್ಯರ ತತ್ವದ ನಿರ್ವಚನವನ್ನು ಹೇಳತೊಡಗಿದಳು ಮೌನವಾಗಿ -ಮಳೆ ಬರುತ್ತಾ ಇರುವುದು, ಒಂದೇ ಸಮನೆ ಸುರಿಯುತ್ತಿರುವ, ಸಿಂಪಡಿಸುತ್ತಿರುವ ತುಂತುರು ಮಳೆ ಅದು…ಮೇಘಾಚ್ಛಾಧಿತ ಆಕಾಶ. ಸೂರ್ಯಕಿರಣಗಳು ಹಾಯದಂತೆ ತಡೆಯುತ್ತಿರುವ ಅಪಾರದರ್ಶಕ ಮೋಡಗಳು. ಆದ್ದರಿಂದ ನಮಗೆ ಸೂರ್ಯದರ್ಶನವಾಗದು. ಕ್ರಮೇಣ ಮಳೆ ಕಡಿಮೆಯಾಗುತ್ತದೆ. ಮೇಘಗಳು ಕರಗುತ್ತವೆ, ತಿಳಿಗೊಳ್ಳುತ್ತವೆ. ಆಗ ಸೂರ್ಯ ಕಿರಣಗಳು ನಯನ ಮನೋಹರವಾಗಿ; ಆಹ್ಲಾದಕರವಾಗಿ ಕಾಣಲಾರಂಭಿಸುವವು. ಆದರೂ ತುಂತುರು ತುಂತುರುಗಳ ಪೈಕಿ ಯಾವುದೋ ಒಂದು ಬಿಂದುವನ್ನು ಕಿರಣ ಪ್ರವೇಶಿಸಿ ವಕ್ರವಾಗಿ ಬಾಗಿ ವರ್ಣ ವಿಭಜನೆ ಗೊಳ್ಳುವುದು… ಬಿಂದುವೇ ಸೂರ್ಯನ ಕಿರಣವನ್ನು ವಿಶ್ಲೇಷಿಸಿ ಇಂದ್ರ ಧನಸ್ಸೊಂದನ್ನು ನಿರ್ಮಿಸಿ ದಿಗಂತದಲ್ಲಿ ಪ್ರತಿಷ್ಟಾಪಿಸುವುದು. ಹಾಗೆ ನಿರ್ಮಿತಗೊಂಡ ಇಂದ್ರ ಧನಸ್ಸಿಗೆ ಉಪಾಧಿಯೇಯೇ ವರ್ಷ ಬಿಂದುವು. ಆದರೆ ಅದು ಅಲ್ಲಿರುವುದಿಲ್ಲ. ಇಂದ್ರಧನಸ್ಸನ್ನು ನಿರ್ಮಿಸಿದ ಸೂರ್ಯನಿಗಾಗಲೀ, ಸೂರ್ಯಕಾಂತಿಯ ಕಿರಣಕ್ಕಾಗಲೀ; ಅದನ್ನು ಗ್ರಹಿಸಿ ಸಪ್ತ ವರ್ಣಗಳಾಗಿ ವಿಶ್ಲೇಷಣೆಗೊಂಡು ಆಕೃತಿ ತಳೆದಂಥ ಇಂದ್ರಧನಸ್ಸುಗಾಗಲೀ ನಡುವೆ ಯಾವುದೇ ಹೋಲಿಕೆಗಳಿರುವುದಿಲ್ಲ. ಆದರೆ ಜಲಬಿಂದುವನ್ನು ಪ್ರವೇಶಿಸಿದ ಕಿರಣವೇ ಇಂದ್ರಧನಸ್ಸಾಗಿ ಪರಿವರ್ತನೆಗೊಳ್ಳುವುದು. ಆದರೆ ಇಂದ್ರ ಧನಸ್ಸಿಗೂ ಸೂರ್ಯನಿಗೂ ನಡುವೆ ವ್ಯತ್ಯಾಸ ಅಪಾರ. ಆದರೆ ಸೂರ್ಯನಿಲ್ಲದೆ ಇಂದ್ರಧನಸ್ಸಿಗೆ ಅಸ್ತಿತ್ವವೇ ಇಲ್ಲ. ಇಂದ್ರ ಧನಸ್ಸಿನ ರಚನೆಗೆ ಮೂಲಕಾರಕವೂ, ಪ್ರೇರಕವೂ ಆದ ಉಪಾಧಿ ಸ್ಥಿತಿಯಲ್ಲಿದ್ದ ಜಲಬಿಂದುವೂ ಇಲ್ಲ… ಇಂಥದೇ ಆದ ನಿರುಪಾಧಿಕ ಪ್ರತಿಬಿಂಬವನ್ನೇ ಆಕೆ ಅಂತರಂಗದಿಂದ ಹೊರಗಡೆ ತೆಗೆದಿಟ್ಟುಕೊಂಡು ಸಂಭಾಷಿಸುವ ಪ್ರಯತ್ನಕ್ಕೆ ತೊಡಗಿದ್ದಳು. ಸತ್ಯ, ಜ್ಞಾನ, ಅನಂತ, ಆನಂದಗಲೆಂಬೀ ಕಲ್ಯಾಣ ಗುಣಗಳ ಪೈಕಿ ಒಂದಾದರೂ ಬುಧವಾರ ಪೇಟೆಯ ತಮ್ಮ ಮನೆಯಂಗಳದಲ್ಲಿ ತಿರುಗಾಡುತಿಲ್ಲವಲ್ಲ ಎಂದು ಆಕೆ ಬೇಸರಗೊಂಡಿದ್ದಳು.

ಇನ್ನೇನು ಆಕೆ ನಿರಾಸೆಗೊಳ್ಳಲಿರುವಳು ಎನ್ನುವಷ್ಟರಲ್ಲಿ ಶಾಂತಿ ಬಂದು ಅಂಗಳದಲ್ಲಿದ್ದ ಐವತ್ತಾರು ಚುಕ್ಕಿಗಳಷ್ಟು ಉದ್ದದ ಮುವತ್ತಾರು ಚುಕ್ಕಿಗಳಷ್ಟು ಅಗಲದ, ಪ್ರತಿ ಆರು ಚುಕ್ಕಿಗಳ ಸಹಾಯದಿಂದ ಏಳುದಳಗಳುಳ್ಳ, ಪುಷ್ಪಗಳಳುಳ್ಳ ರಂಗವಲ್ಲಿ ಕಂಡು ಎಕ್ಸಲೆಂಟ್ ಎಂದು ಉದ್ಗರಿಸಿದಳು. ತಾನು ಶಾಮಾಶಾಸ್ತ್ರಿಯ ಧರ್ಮ ಪತ್ನಿಯನ್ನು ನೋಡುತ್ತಿರುವುದು ಇದೇ ಪ್ರಥಮ ಸಲ. ಇನ್ನೇನು ತಾನು ಕೂಗಿದೊಡನೆ ಹೊರಬಂದು ಕಾಣಿಸಿಕೊಳ್ಳಲಿರುವ ಆಕೆ ಅವರಂತಿರಬಹುದೇ? ಇವರಂತಿರಂತಿರಬಹುದೇ ಎಂದು ಕಲ್ಪಿಸಿಕೊಳ್ಳತೊಡಗಿದಳು. ಅವರಂತಿದ್ದರೆ ಹೇಗೆ ಸಂಭೋದಿಸಲಿ? ಇವರಂತಿರಂತಿದ್ದರೆ ಹೇಗೆ ಸಂಭೋದಿಸಲಿ? ಎಂದೊಂದು ಕ್ಷಣ ಭಾಷಾ ಲೆಕ್ಕಾಚಾರಕ್ಕೆ ತೊಡಗಿದಳು. ಮಡಿಯುಡಿ ಆಚಾರ ವಿಚಾರದಲ್ಲಿ ಶಾಸ್ತ್ರಿಪತ್ನಿ ತುಂಬ ಕಟ್ಟುನಿಟ್ತೆಂದೂ; ಮನುಮನ್ವಂತರದ ತಾನೂ ಒಂದು ಸ್ಮೃತಿ ಬರೆದು ಹೊಸದೊಂದು ಮನ್ವಂತರ ಅವತರಿಸುವಂತೆ ಮಾಡಲು ತುಂಬ ಸನ್ನದ್ಧಳಾಗಿರುವಳೆಂದೂ; ಯಾರನ್ನೇ ಪ್ರಪಥಮ ಬೆಟ್ಟಿಯಾದರೂ ಅವರನ್ನು ನೋಟದಿಂದ ಅಟಕಾಯಿಸಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತದ ಸಿದ್ಧಾಂತಗಳ ಮೂಲಕ ವಿಶ್ಲೇಷಿಸಿ ಬಿಡಬಲ್ಲ ಸಮರ್ಥಲೇಂದೂ ಅವರಿವರಿಂದ ಕೇಳಿ ತಿಳಿದುಕೊಂಡಿದ್ದ ಶಾಂತಿ “ಯಾರಿದ್ದೀರಿ” ಒಳಗಡೆ? ಎಂದು ಕೂಗಲೆಂದು ಬಾಯಿ ತೆರೆದಳಾದರೂ ಅದು ಸಾಧ್ಯವಾಗಲಿಲ್ಲ. ಅಕ್ಕದ ಮನೆಯ ರುಕ್ಮಿಣಿ; ಪಕ್ಕದ ಮನೆಯ ದಾರಾಸಿಂಗ್; ಎದುರುಮನೆಯ ವೆಂಕಮ್ಮರೇ ಮೊದಲಾದ ಅಷ್ಟದಿಕ್ಪಾಲಕರು ಬಂದು ಬಂದು ಇಣುಕಿ ನೋಡಿ ಹೋದರು. ಕುಂಟೋ ಬಿಲ್ಲೆ ಆಟದಲ್ಲಿ ಇಡಿ ಬುಧುವಾರಪೇಟೆಗೇ ಛಾಂಪಿಯನ್ನಲೇಂದು ಹೆಸರಾಗಿದ್ದ ಹೇಮಮಾಲಿನಿ ಎಂಬ ಬಾಲೆಯೋರ್ವಳು ಒಳ್ಳೆಬ್ಯಾಲೆಪಟುವಿನಂತೆ ಕುಂಟುತ್ತ ಬಂದು “ಆಂಟೀ… ಆಂಟೀ… ಬಂದಿದ್ದಾರ್‍ನೋಡ್ರೀ ವರಲಕ್ಷ್ಮಾಂಟೀ” ಎಂದು ಕೂಗಿ ಹಾಗೆಯೇ ಕುಂಟುತ್ತಾ ಹೋದಳು.

ಒಂದು ಕೈಯಲ್ಲಿ ಯಾವುದೋ ಪೂಜಾ ಸಾಮಗ್ರಿ ಹಿಡಿದುಕೊಂಡು ಇನ್ನೊಂದು ಕೈಯನ್ನು ನಾರುಮಡಿಯುಡಿಗೆ ಒರೆಸಿಕೊಳ್ಳುತ್ತಾ ಹೊರಬಂದ ವರಲಕ್ಷ್ಮಿಯು ಆಗಂತುಕೆಯನ್ನು ಲೇಡಿಹೆಲ್ತ್‌ವರ್ಕರಳೆಂದು ಅಪಾರ್ಥ ಮಾಡಿಕೊಂಡು “ಬಂದೆ ಏನಮ್ಮಾ ಬಂದೆಯಾ?… ಎಲ್ರೂ ಆರೋಗ್ಯದಿಂದೇವಮ್ಮಾ ನನಗಿನ್ನೂಮುಟ್ಟು ನಿಂತಿಲ್ಲಮ್ಮಾ… ಮುಟ್ಟು ನಿಂತಾಗ ನಾನೇ ಹೇಳಿ ಕಳಸ್ತೀನಿ ಬರುವಿಯಂತಮ್ಮಾ” ಎಂದು ದಡ ದಡ ನುಡಿದಳು.
ಅದನ್ನು ಕೇಳಿ ಶಾಂತಿಗೆ ಆಶ್ಚರ್ಯವಾಯಿತು. ತಾನು ಬಿಳಿ ಸೀರೆ ಬಿಳಿ ರವಿಕೆ ತೊಟ್ಟು ಸಿಂಪಲ್ಲಾಗಿ ಬಂದಿರುವುದನ್ನು ಕಂಡು ತಪ್ಪು ತಿಳಿದಿದ್ದಾಳೀ ಅಪೂರ್ವ ಸತಿಯು ಎಂದು ಊಹಿಸಿ –
“ಅದಲ್ರೀ ನಾನೂ…” ಎಂದು ಸರಿಪಡಿಸಲೆತ್ನಿಸುತ್ತಿರುವಷ್ಟರಲ್ಲಿ,

“ಓಹೋ… ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದವಳೋ… ನಿನ್ಗೆ ಎಷ್ಟು ಸಾರಿ ಹೇಳಬೇಕಮ್ಮಾ… ಹೀಗೆವಾರಕ್ಕೊಂದೆರಡು ಸಾರಿ ಬಂದು ಪೀಡಿಸಬೇಡಾಂತ… ನಮ್ಮನೇಲೇ ಸಾವ್ರಾರಮಂದಿಗೆ ಹಂಚೋವಷ್ಟು ಆಧ್ಯಾತ್ಮ ತುಂಬಿಕೊಂಡಿದೆ. ನಮ್ಮೆಜಮಾನ್ರು ಯಾರಂತ ತಿಳಿಕೊಂಡೀಯೇ ತಾಯಿ, ಪರಮ ಪಂಡಿತರಾದ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಳೂ… ವೇದೋಪನಿಷತ್ತುಗಳನ್ನೆಲ್ಲ ಅವರ ಪತ್ನಿಯಾದ ನಾನೂ ತಿಳ್ಕೊಂಡಿದ್ದೀನಮ್ಮಾ… ತಿಳಿತಾ… ಹೋಗಿ ಬಾ… ಇವತ್ತು ಮಧ್ವ ನವಮಿ… ದಯವಿಟ್ಟು ತೊಂದರೆ ಕೊಡಬೇಡ…” ಎಂದು ವರಲಕ್ಷ್ಮಿಯು ಮತ್ತೆ ಅನ್ಯಥಾ ಭಾವಿಸಿ ನುಡಿದಿದ್ದನ್ನು ಕೇಳಿ ಜಿ.ಎಂ.ಶಾಂತಿಗೆ ಅಪಾರ ನಗು ಬಂತು.

“ನಾನು ಕಣ್ರೀ… ನಿಮ್ಮೆಜಮಾನ್ರ ಕೊಲಿಗ್ಗೂ…” ಒಳಗೆ ಕರೆಯದಿದ್ದುದನ್ನು ನೋಡಿ ’ಸ್ವಲ್ಪ ಕೆಲಸ ಇದೆ ಒಳಗೆ ಬರ್‍ಲೇ” ಎಂದು ಕೇಳಿದಳು.

ಒಳಗೆ ಚಾಪೆ ಹಾಕಿ ಕೂಡ್ರಿಸಿದಳು ವರಲಕ್ಷ್ಮಿ. ಯಾವ ಜಾತಿ? ಏನು ಕೆಲಸ? ಹೇಗಂತ ಕೇಳುವುದು… ಶಾಂತಿ ತಾನು ಹೀಗೆ ಅಂತ ಹೇಳಿಕೊಂಡಳು. ಜಿ.ಎಂ. ಅಂತ ಇನ್ಷಿಯಲ್ಲಿರೋದರಿಂದ ಜಂಗಮರಿರಬಹುದೆಂದು ಊಹಿಸಿದಳು. ವಿವಾಹಿತಳೋ ಅವಿವಾಹಿತಳೋ ಎಂಉ ಕೊರಳ ಕಡೆ ನೋಡಿದಳು. ಯಾವುದೋ ಕಪ್ಪು ಮಣಿದಾರ ನೋಡಿ ವಿವಾಹಿತೆ ಎಂದೂಹಿಸಿದಳು. ತಾಯ್ತನದ ರೇಖೆಗಳು ನೋಡಬೇಕೆಂದರೆ ಸೀರೆಯನ್ನು ಹೊಕ್ಕಳು ಕಾಣಿಸದಂತೆ ಉಟ್ಟಿರುವಳು… ಸೊಂಟದ ಸ್ನಾಯುಗಳು ಉಬ್ಬಿರಿವುದು ನೋಡಿದರೆ ಆಗಲೆ ಎರಡಾದರೂ ಹೆರಿಗೆಯಾಗಿರಬಹುದು!
“ಮಕ್ಳೆಷ್ಟು?” ಎಂದು ಕೇಳಿಯೇ ಬಿಟ್ಟಳು ಪರಮ ಮುಗ್ಢೆ.
“ಇನ್ನೂ ಎಲ್ರೀ!” ಅಡಗೋಡೆ ಮೇಲೆ ದೀಪ ಇಟ್ಟಂತೆ ,
“ಅಯ್ಯೋ ಪಾಪ ಭಗವಂತ ಕೊಟ್ಟಿಲ್ವೆ!”
“ಮದುವೆ ಆಗಿದ್ರೆ ತಾನೆ ಮಕ್ಳಾಗೋದು!”
“ಇನ್ನೂ ಮದುವೆ ಆಗಿಲ್ವೆ… ಪಾಪ”
“ಲಗ್ನ ಪತ್ರಿಕೆ ಕೊಡ್ಲಿಕ್ಕೆ ಕಣ್ರೀ ನಾನು ಬಂದಿರೋದು?” ಎಂದು ಶಾಂತಿ ಹೇಳುತ್ತಲೆ ವರಲಕ್ಷ್ಮಿ ಈಗಾಗಲೇ ಎಷ್ಟು ಉರಿದಿರಬಹುದೆಂದು ಯೋಚಿಸಿದಳು. ತನ್ನ ಗಂಡ ಎಳೆ ತೋರಿಸಿದರೆ ಹಚ್ಚಡ ನುಂಗುವ ಸ್ವಭಾವದವನಲ್ಲ… ಆದರೂ ಅವರಿಗೆ ಒಳಗಡೆ ಬುದ್ಧಿ –
ಲಗ್ನಪತ್ರಿಕೆ ಕೊಟ್ಟದ್ದೂ ಇಸಿಕೊಂಡದ್ದೂ ಎಲ್ಲಾ ಆಯಿತು. ಚಹಾ, ಕಾಫಿ, ಪಾನಕ ಇದೆಲ್ಲ ಮಾಡುಕೊಡುವ ಜಾಯಮಾನದವಳಲ್ಲ ನನ್ನ ಹೆಂಡತಿ. ಶಾಂತಿ ಒಂದು ಕಪ್ಪು ನೀರು ಇಸಿದುಕೊಂಡು ಕುಡಿದು ಆಕೆಯ ನಿರ್ದೇಶನದಂತೆ ಅಲ್ಲೆ ಒಂದುಕಡೆ ಬೋರಲಿಟ್ಟಳು. “ನಿಮ್ಮ ಗಂಡ ತುಂಬ ಓಳ್ಳೆಯವರು, ಯಾರೊಂದಿಗೂ ಹೆಚ್ಚು ಮಾತಾಡುವವರಲ್ಲ… ಕೆಲಸದಲ್ಲೂ ಅಷ್ಟೆ, ವೆರಿ ಸಿನ್ಸಿಯರ್ರು… ನೀವು ಕೂಡಾ ಅಷ್ಟೆ… ತುಂಬಿದ ಕೊಡ ಇದ್ದಂತಿರುವಿರಿ… ಅವರಿಗೆ ನಿಮ್ಮನ್ನು; ನಿಮಗೆ ಅವರನ್ನು ಜೊತೆ ಮಾಡಿದ ಆ ದೇವರನ್ನು ಅಭಿನಂದಿಸಲೇ ಬೇಕು. ನಿಮ್ಮಂಥ ಆದಿ ದಂಪತಿಗಳು ವಾಸಿಸುತ್ತಿರುವುದರಿಂದ ಈ ಬುಧವಾರ ಪೇಟೆಗೆ ಖಂಡಿತ ಒಳ್ಳೆಯದಾಗುತ್ತದೆ. ಋಷಿಗಳು ತಪಸ್ಸು ಮಾಡುತ್ತಿದ್ದ ಕಾಡು ಅರಣ್ಯಗಳಿಗಿಂತ ಈ ಬುಧವಾರ ಪೇಟೆಯನ್ನು ನೀವು ತಿದ್ದಬೇಕು. ಹಾಗೆ ಹೀಗೆ ಅಂತ ಶಾಂತಿ ನನ್ನ ಬಗ್ಗೆ ಪ್ರಮಾಣಪತ್ರ ಮುಂಜೂರು ಮಾಡಿದಳು.

ಆಕೆಯ ಮಾತುಗಳಿಂದ ವರಲಕ್ಷ್ಮಿ ಉಬ್ಬಿಹೋದಳು. ನಿಂಬೆಹಣ್ಣು ಇದ್ದಿದ್ದರೆ, ಪಾನಕ ಮಾಡಿಕೊಡದೆ ಇರುತ್ತಿರಲಿಲ್ಲ ಆಕೆ. ತನ್ನ ಗಂಡ ಈಗ ಎಲ್ಲಿರಬಹುದು? ಏನು ಮಾಡುತ್ತಿರಬಹುದು ಎಂದು ಆಕೆ ಊಹಿಸುತ್ತಿರುವಾಗಲೇ ನಾನು ಬಂದದ್ದು. ಎರಡು ನಮೂನೆಯ ಕ್ಲಿಷ್ಟ ಗ್ರಂಥಗಳು ಒಂದಾಗಿರುವವೆಂದುಕೊಂಡ, ಕೊಲಿಗ್ಗೇನೋ ಆತ್ಮೀಯತೆಯಿಂದಲೇ ಮಾತಾಡಿಸಿದಳು… ನಾನು ಆಕೆಗೆ ಏನು ಕೇಳುವುದು ಏನು ಬಿಡುವುದು! ಯಾವ ಕೋನದಲ್ಲಿ ಹೇಗೆ ಕುಳಿತುಕೊಳ್ಳುವುದು! ಎಂಬ ಗೊಂದಲಕ್ಕೀಡಾದೆ. ಪರಸ್ತ್ರೀ ಎದುರಿಗೆ ನನ್ನ ವರ್ತನೆ ಹೀಗೇ ಇರಬೇಕೆಂದು ನಿರ್ಧರಿಸುವಾಕಿ ನನ್ನ ಹೆಂಡತಿ, ಸಾಂಪ್ರತು ನಾನೂ ಮಾತಾಡದೆ ಇರಲಿಲ್ಲ. “ಮದುವೆಗೆ ತಪ್ಪಿಸಬಾರ್ದೂರೀ… ನಿಮ್ಮ ಮಿಸೆಸ್ಸನ್ನು ಕರ್‍ಕೊಂಡು ಬನ್ನಿ” ಎಂದು ಹೇಳಿ ಅಲ್ಲಿಂದ ಹೋದಳು!

ಶಾಂತಿಯಂಥ ಸಹೋದ್ಯೋಗಿ ಜೊತೆ ನಾನು ಕೆಲಸ ಮಾಡ್ತಿದೀನಂತ ನಾನು ಹಿಂದೆ ಹೇಳಿರಲಿಲ್ಲ. ಯಾಕೆ ಹೇಳೋದಂತ ಸುಮ್ಮನಿದ್ದೆ. ಆ ಕಾರಣದಿಂದ ವರಲಕ್ಷ್ಮಿ ಚಾವತ್ತು ದಿಮ್ಮಗೆ ಇದ್ದಳು. ಆದರೆ ನನಗೆ ಮಾತ್ರ ದಿಮ್ಮಗೆ ಇರುವ ಸ್ವಾತಂತ್ರ್ಯವೂ ಇರಲಿಲ್ಲ.. ನಾನು ಎದುರಿಗಿದ್ದರೆ ಅಂತರಂಗವನ್ನು ಹೊಕ್ಕು ಮನದ ಕೋಣೆ ಕೋಣೆಗಳನ್ನು ಜಾಲಾಡುತ್ತಿದ್ದಳು. ದೂರವಿದ್ದರೆ ತನ್ನ ಮನಸ್ಸನ್ನು ಕಾವಲು ನಾಯಿಯೊಗಿ ನನ್ನೊಂದಿಗೆ ಕಳಿಸುತ್ತಿದ್ದಳು… ಆ ನಾಯಿ ನಾನು ಎಲ್ಲಿ ಹೋದರೆ ಅಲ್ಲಿ ಬಿಜಯಂಗೈಯುತ್ತಿತ್ತು. ಮೌನವಾಗಿ ಬೊಗುಳಿ ಎಚ್ಚರಿಸುತ್ತಿತ್ತು. ನಡುವಳಿಕೆಯನ್ನು ನಿಯಂತ್ರಿಸುತ್ತಿತ್ತು. ಆ ನಾಯಿಯೊಂದು ನಮೂನಿಯ ಸದ್ಭಾವನಾ ಯಾತ್ರೆ ಎಂದರೂ ಸರಿಯೆ?…

ಮೊದಲೇ ನನ್ನನ್ನು ನಿರ್ಬಂಧಿತ ವ್ಯಕ್ತಿತ್ವ, ಮಂಗಳಾರತಿ ಕೊಟ್ಟರೆ ಉಷ್ಣ ತೀರ್ಥ ಕೊಟ್ಟರೆ ಶೀತ ಎಂಬ ಜಯಮಾನದ್ದು. ತನ್ನ ಪಾತಿವ್ರತ್ಯ ಪ್ರಭಾವದಿಂದ ಗಂಡನ ಆಯುರಾರೋಗ್ಯ ವೃದ್ಧಿಸುವಂತೆ ಮಾಡಬೇಕೆಂದೂ; ಅವನು ಅರಿಷಡ್ವರ್ಗಗಳಿಂದ ಬಹುದೂರ ಬಹುದುರ ಉಳಿದು ಸಂತತ್ವದಿಂದ ಪ್ರಜ್ವಲಿಸಬೇಕೆಂದೂ ಅಕೆ ದಿನ ದಿನಕ್ಕೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೋಳ್ಳುತ್ತಿದ್ದಳು. ಇದನ್ನು ವಿರೋಧಿಸುವ ಶಕ್ತಿ ನನ್ನಲ್ಲಿಲ್ಲದಿರಲಿಲ್ಲ… ಆದರೆ ಅದನ್ನು ಪ್ರಕಟಿಸುವ ಧೈರ್ಯ, ವ್ಯವಧಾನ ಇರಲಿಲ್ಲವೆಂದು ಹೇಳಬಹುದು.

ಆಕೆ ಬೆಚ್ಚಿ ಬೀಳುವಂತೆ ಗದರಿಸಬೇಕೆಂದು ನಾನು ಅನೇಕ ಸಾರಿ ನಿರ್ಧರಿಸಿದ್ದುಂಟು. ಆದರೆ ಅದು ಕೇವಲ ನಿರ್ಧಾರವಾಗಿ ಮಾತ್ರ ಉಳಿಯಿತು. ನನಗರಿವಿಲ್ಲದಂತೆ ಅದು ನಿಧಾನವಾಗಿ ಬೆಳೆಯತೊದಗಿತ್ತು. ಅದು ನನ್ನ ಗಮನಕ್ಕೆ ಬರಲಿಲ್ಲ. ಸನಿಹದಲ್ಲೆ ದೊಡ್ಡದೊಂದು‌ಉಕ್ಕಿನ ಕಾರ್ಖಾನೆ ಉದ್ಭವಿಸಲಿರುವುದರಿಂದ; ಸಾವಿರಾರು ಕಾರ್ಮಿಕರು ಕೆಲಸ ಮಾಡಲಿರುವುದರಿಂದ; ಸಾವಿರಾರು ಹೊಸ ಸಂಸಾರಗಾಲು ನೆಲೆಯೂರಲಿರುವುದರಿಂದ; ಒಂದೊಂದನ್ನು ಒಂದೊಂದು ನುಂಗುವ ಹೊಂಚುವ ಕೆಲಸ ಮಾಡುವ ಶಕ್ತಿಗಳು ವಿಜೃಂಭಿಸಲಿರುವುದರಿಂದ, ಅದಕ್ಕೆ ಸಮಷ್ಟಿಯಾಗಿ ವ್ಯಭಿಚಾರ, ಜೂಜು, ಬ್ರಷ್ಟಾಚಾರ ದಬ್ಬಾಳಿಕೆ; ಶೋಶಣೆ ಇತ್ಯಾದಿ ಅವಾಂತರಗಳು ಹುಟ್ಟಿಕೊಳ್ಳಲಿರುವುದರಿಂದ… ಇದೆಲ್ಲ… ಅಂದರೆ ಹತ್ತದಿನೈದು ವರ್ಷಗಳ ನಂತರ… ಆದರೆ ಸಂಘಟಕನಾದವನು ಈ ಕ್ಷಣದಿಂದಲೇ ಎಚ್ಚೆತ್ತುಕೊಳ್ಳಬೇಕು. ಉಸಿರಾಡೋಕೆ ಆಮ್ಲಜನಕ ಸಿಗೋದೋರನ್ನೆಲ್ಲ ಒಂದೇ ಕಟ್ಟಿಗೆ ತರಬೇಕು. ವ್ಯವಸ್ಥೆ ನಿಯಂತ್ರಕರಿಗೆ ತಲೆ ನೋವಾಗಬೇಕು. ಅದ್ಕೆ ಏನು ಮಾಡಬೇಕು ಗೊತ್ತಾ? ಒಂದು ಭೂಗತ ಪತ್ರಿಕೆ ಪತ್ರಿಕೆ ಮತ್ತು ಚಟುವಟಿಕೆ ಆರಂಭಿಸಬೇಕು. ಅದರಲ್ಲಿ ಅಂಥದ್ದೇನೂನೂ ಇರೊದಿಲ್ಲ ಕಣಪ್ಪಾ… ಹೆಸರಿಗೆ ಭೂಗತ ಅಷ್ಟೆ… ಈ ಪ್ರಕಾರವಾಗಿ ಮಧ್ಯ ಪ್ರವೇಶಿಸಿದ ಪಶುಪತಿ ಗದರಿಸಬೇಕೆಂಬ ನಿರ್ಧಾರವನ್ನು ಕೆಡದಂತೆ ಮೀಥೆಲ್ ಎಂಬ ದ್ರವದೊಳಗಿರಿಸಿದ. ತನ್ನ ಸೈಕ್ಲೋಸ್ಟೈಲ್ ಪತ್ರಿಕೆಗೆ ಕ್ರಾಂತಿಕಾರಿ ಪ್ರೇಮ ಕವಿತೆಗಳನ್ನು ಬರೆಯಬೇಕೆಂದೂ; ಅವಕ್ಕೆಲ್ಲ ‘ಮಾಲೆ’ ಎಂಬ ಗುಪ್ತ ನಾಮ ಇಟ್ತುಕೋ ಎಂದು ಸೂಚಿಸಿದ. (ಮಾ…ಎಂದರೆ ಮಾವೋ; ಲೆ ಅಂದರೆ ಲೆನಿನ್)… ನಾನು ಭಲಾ ಎಂದೆ. ವಂತಿಗೆ ಕೇಳಿದ… ಜೇಬಿನಲ್ಲಿದ್ದ ಐವತ್ತು ರೂಪಾಯಿ ಕೊಟ್ಟೆ.

ಗುಮುಸಿ ಗೌಡ ಯಾವ ಗಳಿಗೆಯಲ್ಲಿ ಪರಿಚಿಯಿಸಿದನೋ ಪಶುಪತಿ ಏಕವಚನ ಸಂಭೋದನೆಯಿಂದ ಬಲವಾಗಿ ತಗುಲಿಕೊಂಡ… ಯಾಕೋ ಆತ್ಮೀಯ ಎನ್ನಿಸಿದ. ಆ ಕೆಂಪಂಗಿ ತೊಟ್ಟುಕೊಂಡೋರು ಸದಾ ಹುಳಿ ಹುಳಿ ನೋಡುತ್ತಿರುತ್ತಾರೆ ಕಣ್ರೀ… ಅವರಿಂದ ದೂರ ಇರ್ರೀ… ಅವನ ಪರಿಚಯಯಾದಂದಿನಿಂದ ನಿಮ್ಮ ತುಟಿ ಕಪ್ಪಾಗ್ತಿವೆ. ಕೈಬೆರಳಿಂದ ಎಂಥದೋ ವಾಸನೆ ಎಂದು ಹೆಂಡತಿ ಕೇಳತೊಡಗಿದ ಕ್ಷಣ ಗದರಲಿಕ್ಕೆ ಯೋಗ್ಯವಾದುದು ಎಂದುಕೊಂಡೆ. ಆತ ಲ್ಯಾಟಿನ್ ಅಮೇರಿಕನ್ ರಾಷ್ಟ್ರಗಳಲ್ಲಿ ಮಾರ್ಕ್ಸಿಜಂ ಗಾಳಿ ಬೀಸಿದುದರ ಬಗ್ಗೆ ಹೇಳುತ್ತ ಸಿಗರೇಟು ಚುಟ್ಟ ಸೇದುವ ಅಭ್ಯಾಸ ಮಾಡಿಸಿದ. ಒಂದು ಗ್ಲಾಸ್ ಬಿಯರ್ ಕುದಿಯೋದ್ರಿಂದ ಮನುಷ್ಯನ ಅಂತರಂಗದ ಮತ್ತು ಬಹಿರಂಗ ಕೆಂಪು ವರ್ಣಕ್ಕೆ ತಿರುಗುವುದೆಂದು ಹೇಳಿದ್ದ… ನನ್ನ ಅಂತರಂಗದ ಯಾವುದೋ ಅನಾಥ ಕೂಗಿಗೆ ಗುಮುಸಿ ಗೌಡ ಮತ್ತು ಪಶುಪತಿ ಸ್ಪಂದಿಸುತ್ತಿರುವರೆಂದುಕೊಂಡೆ. ಅವರೂ; ಅವಾಲೋಚನೆಗಳೂ; ಭಾವನೆಗಳೂ, ಚಟಗಳೂ ಪವಿತ್ರ… ಆಧುನಿಕ ಮನುಷ್ಯ ಕೂಪಸ್ಥ ಮಂಡೂಕವಾಗಿರಬೇಕೆ?

“ರ್ರೀ ಸಿಗರೇಟು ಸೇದೋದ್ನ ಕಲ್ತಿದೀರಿ… ಹೌದು ತಾನೆ?” ಎಂದೊಂದು ದಿನ ಜಗ್ಗಿ ಕೇಳಿಯೇ ಬಿಟ್ಟಳು. ಸಂರಕ್ಷಕ ದ್ರವದಿಂದ ನಿರ್ಧಾರದ ಪುಟ್ಟ ಕಳೇಬರ ಹೊರಗೆ ಬಂದು ಜೀವ ಪಡೆಯಿತು.

“ಹೌದೇ ನಿಂದೆನು ಭಯಾನಾ? ನಾನು ಗಂಡ್ಸು… ಬೇಕಾದ್ದು ಮಾಡ್ತೀನಿ… ಇವತ್ತು ಸೇದ್ತೀನಿ… ನಾಳೆ ಕುಡಿಯೋದನ್ನ ಕಲೀತೀನಿ… ನಾಡಿದ್ದು ತಿನ್ನೋದನ್ನ ಕಲೀತೀನಿ… ಅದ್ನ್ಯಾರೆ ನೀನು ಕೇಳೋಕೆ… ತಾತನ ಬದ್ಲೀಗೆ ನೀನು ಹುಟ್ಕೊಂಡಿದ್ದೀಯಾ ಅಷ್ಟೆ;” ಎಂದು ಕಣ್ಣು ಉರಿ ಮಾಡಿ ಇಡೀ ಕೇರಿಗೇ ಕೇಳಿಸುವಂತೆ ಗದರಿಸಿಯೇ ಬಿಟ್ಟೆ. ಪ್ರತಿಘಟಿಸಿದ್ದಲ್ಲಿ ಛಳೀರನೆ ಏಟುಕೊ‌ಅಬೇಕೆಂದುಕೊಂದಿದ್ದೆನಾದರೂ ಅದಕ್ಕೆ ಆಸ್ಪದ ಕೊಡಲಿಲ್ಲ.
ನಾನು ಗದರಿಸಿದ್ದು ಕೇರಿಯಲ್ಲಿ ಮತ್ತು ಬ್ಯಾಂಕಿನಲ್ಲಿ ದೊಡ್ಡ ಸುದ್ದಿಯಾಯಿತು. ಅವರೆಲ್ಲ ಕೊಲೆಗಾರನ ಕಡೆ ನೋಡುವಂತೆ ಭಯಾಶ್ಚರ್ಯ ಗಳಿಂದ ನೋಡತೊಡಗಿದರು. “ಅಂತೂ ಶಾಸ್ತ್ರಿಗಳು ತಮ್ಮ ಹೆಂಡರನ್ನು ಗದರಿಸಿದಳು. ದೇವರು ದೊಡ್ಡವನು” – ಕೇರಿಯ ಮಂದಿ ಮಂಗಳಾರತಿ ಮಾಡಿ ಅಭಿನಂದಿಸುವುದೊಂದೇ ಬಾಕಿ!

ನಾನು ನನಗೇ ಕಗ್ಗಂಟಾಗಿದ್ದೆನೆಂಬುದಕ್ಕೆ ಸಾಕ್ಷಿಯಾಗಿ ನಾನು ಅಂದಿನಿಂದ ಸಿಗರೇಟನ್ನು ಸಾರ್ವಜನಿಕವಾಗಿ ಸೇದತೊಡಗಿದೆ. “ಅಲ್ಲಾಹು… ನೀನು ದೊಡ್ಡೋನು.” ಎಂದು ಇಸ್ಮಾಯಿಲು ನನ್ನಿಂದ ಸಿಗರೇಟು ವಿನಿಮಯ ಮಾಡಿಕೊಳ್ಳತೊಡಗಿದ. ಹೊಟ್ಟೆ ಹುಣ್ಣು ಎಂಬ ಕಾರಣದಿಂದ ಚಂಬಸ್ಯಯ್ಯ ಧೂಮ್ರಪಾನದಿಂದ ದೂರ ಇದ್ದನಾದರೂ ಮತ್ತೆ ಸೇದ ತೊಡಗಿದ. ನಾವು ಮುವ್ವರು ಸಿಗರೇಟು ಸೇದುತ್ತಿದ್ದರೆ ಹೆಬ್ರಿಯ ಕಣ್ಣುಗಳು ಕೆಂಪಾಗತೊಡಗಿದವು. ನಮ್ಮ ಗಂಟಲುಗಳಿಗೆ ಹೊಗೆ ಅಡರಿದರೆ ಆತ ಕೆಮ್ಮ ತೊಡಗಿದ…

ಆಗಲೆ ಹಿಂದೊಮ್ಮೆ ಹೋಗಿ ಪರಿಚಯ ಮಾಡಿಕೊಂದಿದ್ದ ಹೆಬ್ರಿ ನನ್ನ ಗೈರು ಹಾಜರಿಯಲ್ಲಿ ಒಂದೆರಡು ಬಾರಿ ಮನೆಗೆ ಹೋಗಿ ನನ್ನ ಹೆಂಡತಿಯ ಕಿವಿ ಚುಚ್ಚಿದ – ಪತಿಯನ್ನು ಸನ್ಮಾರ್ಗದಲ್ಲಿ ನಡೆಸೂ ಅಂತ. ಅಲ್ಲಾಡಿ ಹೋಗಿದ್ದ ಆಕೆ ಕೆಲ ದಿನ ಹೇಳಿರಲಿಲ್ಲ.
ಅಲ್ಲದೆ ನಾನು ಆಕೆಯನ್ನು ಗದರಿಸದೇ ಮಾತಾಡುತ್ತಿರಲಿಲ್ಲ. ಅಂಗಳದಲ್ಲಿ, ಹಿತ್ತಿಲಲ್ಲಿ ಕೂತು ರಾಜಾರೋಷವಾಗಿ ಸಿಗರೇಟು ಸೇದುತ್ತಿದ್ದಿದನ್ನು ನೋಡಿ ಪರವಾ ಇಲ್ಲ ಎಂದು ಕೊಂಡರು. ಕೇರಿ ಜನ. ನಡೆದ ಝಟಾಪಟಿ ನಾನು ವರಲಕ್ಷ್ಮಿಯ ಜಡೆ ಹಿಡಿದು ಎಳೆದಾಡಿದ್ದುಂಟು. ಅತ್ತೆಯವರ ಪಾದ ಸೇವೆಯೇ ಮೇಲು ಎಂದು ನಿರ್ಧರಿಸಿದಳಾದರೂ ತನ್ನ ಗಂಡ ಮತ್ತಷ್ಟು ಕೆಟ್ಟರೆ ಎಂದು ಅನುಮಾನ ಬಂದು ನಿಂತುಕೊಂಡಳು.

ಆಕೆಯ ಸಮಕ್ಷಮದಲ್ಲಿ ಪ್ರಕಟಗೊಳ್ಳುತ್ತಿದ್ದ ವರ್ತನೆ ಎಲ್ಲರೆದುರಿಗೂ ಪ್ರಕಟವಾಗ ತೊಡಗಿತು. ಯಾರಾದರು ‘ಅಪ್ಪ’ ಎಂದರೆ ನಾನು ‘ತಾತ’ ಎನ್ನತೊಡಗಿದೆ. ಕೆರೆಯ ಒಡ್ಡಿಗೆ ಅಚ್ಚುಕಟ್ಟಾಗಿ ಹೊಂದಿಕೊಂಡು ಏರಿ ಆಕೃತಿ ಎಲ್ಲಿವರೆಗೆ ದೃಡವಾಗಿರುತ್ತದೋ ಅಲ್ಲಿವರೆಗೆ ನೀರಿನ ಸಂಗ್ರಹ ಇರುತ್ತದೆ. ಏರಿಯ ಒಂದು ಕಲ್ಲು ಕದಲಿದರೆ ನೀರು ಇಡೀ ಏರಿಯನ್ನೇ ಆಪೋಶನ ತೆಗೆದುಕೊಳ್ಳುತ್ತದೆ. ಧೀರ್ಘಕಾಲ ಬಂಧನದಲ್ಲಿರುವ ಹಕ್ಕಿಗೆ ಸ್ವಾತಂತ್ರ್ಯದ ರುಚಿ ತೋರಿಸಿದರೆ ಅದು ಆಗಸದ ತುಂಬ ರೆಕ್ಕೆಗಳನ್ನು ಹರಡಿ ಅಳೆಯುತ್ತಿದೆ. ಇದಕ್ಕೆ ನಾನೇ ಸಾಕ್ಷಿಯಾದೆ. ನನಗೆ ಹೆಂಡತಿ ಮೇಲೆ ಪ್ರೀತಿ ಇಲ್ಲದಿರಲಿಲ್ಲ… ಆದರೆ ಮತ್ತೆಲ್ಲಿ ನನ್ನ ಮೇಲೆ ಹಿಡಿತ ಸಾಧಿಸುವಳೋ ಎಂಬ ಆತಂಕ. ಆಕೆ ಗುಟ್ಟಾಗಿ ವಾರ್ತಾಯ ಸುಯಂತಾಂ ಪ್ರವಾಚಿತಃ ವರಲಕ್ಷ್ಮೀ ಶಾಸ್ತ್ರೀಯಾ… ಎಂದು.

ಪತ್ರದ ಮೂಲಕ ಸದರೀ ವಾರ್ತೆಯನ್ನು ಕೊಟ್ಟೂರಿನಲ್ಲಿರುವ ನನ್ನ ತಾಯಿಯವರಿಗೆ ಬಿತ್ತರಿಸಿದಳೋ; ಅಥವಾ ಆಕೆಗೆ ಕನಸು ಬಿತ್ತೋ… ಆಕೆಯ ಎಚ್ಚರಿಕೆ ನೀಡುವ ದೀರ್ಘಾಯುಷ್ಯ ಕೋರುವ ಪತ್ರವೂ ಬೆಂಗಳೂರಲ್ಲಿ ಪ್ರಸಿದ್ಧ ಪತ್ರಕರ್ತನಾಗಿರುವ ಪದ್ಮಶ್ರೀ ಬಿರುದಾಂಕಿತನಾಗಿರುವ ಕಮಲಾಕರನ ಪತ್ರವೂ, ಏಕ ಕಾಲದಲ್ಲಿ ಬಂದವು. ಆತ ತನ್ನ ಪತ್ರದಲ್ಲಿ ಆಡಳಿತ ಪಕ್ಷವಾದ ಕಾಂಗ್ರೇಸ್‌ನ ದುರಾಡಳಿತದಿಂದ ಕರ್ನಾಟಕದ ಪ್ರಜೆಗಳು ಬೇಸತ್ತಿರುವರೆಂದೂ; ವಿರೋಧ ಪಕ್ಷವಾಗಿರುವ ಜನತಾದಳವು ಮುಂಬರುವ ಚುನಾವಣೆಯಲ್ಲಿ ನಿಚ್ಚಳವಾದ ಬಹುಮತ ಸಾಧಿಸಲಿರುವುದೆಂದೂ; ಅದಕ್ಕೆ ಸ್ಲೋಗನ್ನುಗಳೇ ಮೊದಲಾದ ಹಾಡುಗಳನ್ನು ನೀನು ಕೂಡಲೆ ಬಂದು ಬರೆದುಕೊಟ್ಟಲ್ಲಿ ಕೈತುಂಬ ಒಳ್ಳೆ ಸಂಭಾವನೆ ದೊರಕುವುದಲ್ಲದೆ ನೀನು ಸಾಹಿತ್ಯ ಅಕಾಡೆಮಿಯ ಸದಸ್ಯನಾಗುವಿ ಎಂದು ಬರೆದಿದ್ದ. ಅಲ್ಲಿ ಅಂಥ ಕವಿಗಳೇ ಸಾಕಷ್ಟಿರುವಾಗ ನಾನಲ್ಲಿಗೆ ಹೊಗಿ ಏನು ಕಡಿಯುವುದು!

ಹೆಬ್ರಿಗೂ ಗುಟ್ಟಾಗಿ ಹೇಳಿರುವಿಯಲ್ಲದೆ ಕೊಟ್ಟೂರಿಗೂ ಪತ್ರ ಬರೆದು ತಿಳಿಸಿರುವಿಯಾ: ಆ ಮುದುಕಿ ಎದುರಿಗೇ ಹೋಗಿ ಸಿಗರೇಟು ಸೇದಲಿಕ್ಕು ಹೆದರುವುದಿಲ್ಲವೆಂದು ಹೆಂಡತಿಯನ್ನು ಕೈಗೆ ತೆಗೆದುಕೊಂಡೆ. ಆಕೆಗೂ ನನಗೂ ನಡುವೆ ಮಾತಿಗೆ ಮಾತು ಬೆಳೆದು ಕಪಾಳಕ್ಕೆ ಛಳೀರನೆ ಒಂದು ಏಟು ಕೊಟ್ಟೆ. ನಂತರ ರಾತ್ರಿ ಆಕೆ ಮುಲುಕಿದಾಗ ಅದೇ ಕಪಾಲಕ್ಕೆ ನಾನೇ ತೈಲ ಲೇಪಿಸಿ ಸಮಾಧಾನ ಮಾಡಿದೆ. ನನ್ನ ದೂರ ಮಾಡಬೇಡಿರೆಂದು ಆಕೆ ಗೊಣಗುತ್ತ ಆಕೆ ನನ್ನನ್ನು ತಬ್ಬಿಕೊಂಡಳು. ಮನಸ್ಸಿನಲ್ಲಿ ಯಾರನ್ನೋ ಕಲ್ಪಿಸಿಕೊಂಡು ನಾನೂ ಆಕೆಯನ್ನು ತಬ್ಬಿಕೊಂಡೆ. ಮುಂದೆಂದೂ ಹೊಡೆಯುವುದಿಲ್ಲವೆಂದು ಭರವಸೆ ನೀಡಿದೆ.
ಮಹಾಪತಿವ್ರತೆಯಾದ ಹೆಂಡತಿಯನ್ನು ಹೊಡೆಯುವುದರ ಮೂಲಕ ಕರ್ಮಠ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವ ನನ್ನನ್ನು ಮನೆಗೆ ಬರ ಮಾಡಿಕೊಂಡು ಪೂಜೆ ಪುನಸ್ಕಾರ ಮಾಡಿಸುವುದನ್ನು ಫಕೀರಮ್ಮ ಹಂತ ಹಂತವಾಗಿ ನಿಲ್ಲಿಸಿದಳು. ಯ್ಯಜ್ಞವಲ್ಕ್ಯರ ಶಿಕ್ಷಾಸ್ಮೃತಿವರೆಗೆ ಬಂದಿದ್ದ ವಿಜಯಾಳನ್ನು ಆಕೆಯ ತಂದೆ ಚಲುವಯ್ಯ ಬೆಂಗಳೂರಿಗೆ ಕರೆದುಕೊಂಡು ಹೋಗಿ (ವಿಚಿತ್ರವೆಂದರೆ) ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಸಂಸ್ಥೆಗೆ ಸೇರಿಸಿದ. ಮಕ್ಕಳೊಂದಿಗ ಮತ್ತು ವಿವಾಹಿತನೂ ಆದ ತನ್ನ ಸಂಗೀತ ಮಾಸ್ತರ ವೃಷಭೇಂದ್ರಾಚಾರನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಳು ರಾಗಿಣಿ. ಮೂರನೆ ಹುಡುಗಿ ಮೇನಕೆಯ ರಕ್ತ ರಾತ್ರಿ ನಾಟಕದಲ್ಲಿ ಉತ್ತರೆಯ ಪಾತ್ರ ವಹಿಸಲು ಆಂಧ್ರದ ಬೊಮ್ಮನಾಳಿಗೆ ಹೋಗಿ ಧರ್ಮರಾಯನ ಪಾತ್ರ ವಹಿಸಿದ್ದ ಪ್ರತಾಪರೆಡ್ಡಿಯೊಂದಿಗೆ ದೈಹಿಕ ಸಂಬಂಧವಿರಿಸಿಕೊಂಡು ಅಲ್ಲಿಯೇ ಶಾಶ್ವತವಾಗಿ ಉಳಿದುಬಿಟ್ಟಳು.

ಈ ಎಲ್ಲ ಅಹಿತಕರ ವಿದ್ಯಮಾನಗಳಿಂದ ಜ್ಞಾನೋದಯವಾಗಿ ಫಕೀರಮ್ಮ ಸದಾನಂದ ಬಾಬಾನೇ ದಿಕ್ಕು ಎಂದು ಭಾವಿಸಿ ಆತನ ಆಶ್ರಮವನ್ನು ಹುಡುಕಾಡುವ ನಿಮಿತ್ತ ಹೇಳದೆ ಕೇಳದೆ ಹೊರಟು ಹೋಗಿ ಕೆಲ ದಿನಗಳಾಗಿರುವುದು. ಅನೇಕ ಪ್ರಮುಖ ರಾಜಕಾರಣಿಗಳನ್ನು ಶಿಷ್ಯರನ್ನಾಗಿ ಹೊಂದಿದ್ದೂ ಸಾಂಗ್ಲಿಯಾನಾ ಐ.ಪಿ.ಎಸ್. ಎಂಬ ಚಲನಚಿತ್ರ ಬಿಡುಗಡೆಯಾದಂದಿನಿಂದ ಮನಶ್ಶಾಂತಿ ಬಯಸಿ ದಿನಕ್ಕೊಂದು ಟೆಂಟ್ ಬದಲಾಯಿಸುತ್ತಿರುವ ಬಾಬಾ ಎಲ್ಲಿರುವನೆಂದು ಹೇಗೆ ಹೇಳುವುದು? ಸ್ಥಳ ಬದಲಾಯಿಸುತಿರುವುದರ ಜೊತೆಗೆ ವೇಷವನ್ನೂ ಬದಲಾಯಿಸುತಿರುವನೆಂದು ಪ್ರತೀತಿ ಹುಟ್ಟಿಕೊಂಡಿರುವುದರಿಂದ ಆತ ಇಂಥಲ್ಲಿ, ಇದೇ ವೇಷದಲ್ಲಿರುವನೆಂದು ಯಾರು ನಿಖಿರವಾಗಿ ಹೇಳುವುದು ಸಾಧ್ಯ! ಆತನ ಇರುವಿಕೆಗಾಗಿ ಕರ್ನಾಟಕ ತುಂಬ ಪ್ಯಾಸೆಂಜರ್ ಗಾಡಿಯಂತೆ ಫಕೀರಮ್ಮ ಅಡ್ಡಾಡಿದಳು. ಹುಬ್ಬಳ್ಳಿಯ ರೇಲ್ವೆ ಪ್ಲಾಟ್‌ಫಾರಂ ಮೇಲೆ ಮಲಗಿದ್ದ ಆಕೆಯ ಕನಸಿನಲ್ಲಿ ಬಾಬಾ ಕಾಣಿಸಿಕೊಂಡು ‘ಈ ಕೂಡಲೆ ನೀನು ದೇಹತ್ಯಾಗ ಮಾಡಿ ಸ್ವರ್ಗ ಮತ್ತು ನರಕದ ಚೌರಾಸ್ತಾದಲ್ಲಿ ಕಾಯುತ್ತಿರು… ನಾನು ಸಾಂಗ್ಲಿಯಾನಾ ಚಿತ್ರಕ್ಕೆ ಮೋಕ್ಷ ದಯಪಾಲಿಸಿ ಬಂದು ಸ್ವರ್ಗಕ್ಕೆ ಕರೆದುಕೊಂಡು ಹೋಗುವೆ’ನೆಂದು ಅಪ್ಪಣೆ ಕೊಡಿಸಿದನಂತೆ. ಸಂಗತಿಗಳು ಹೀಗಿರುವಾಗ ಇಂಜಿನಿಯರ್ ಚಲುವಯ್ಯ ತನ್ನ ಅತ್ತೆಯ ಅನ್ವೇಷಣಾ ಕಾರ್ಯವನ್ನು ನಿಲ್ಲಿಸಿ ಆಕೆಯ ಹೆಸರಿನಲ್ಲಿ ತಿಥಿ ಶ್ರಾದ್ಧ ಕಾರ್ಯಗಳನ್ನು ಅಚ್ಚುಕಟ್ಟಾಗಿ ಪೂರೈಸಿದ. ಕೊತ್ತಲಿಗಿಯ ತಮ್ಮ ಹೊಸ ಮನೆಯಲ್ಲಿ ಆಕೆಯ ಪ್ರಥಮ ಪುಣ್ಯತಿಥಿಯಂದು ಶರಣೆ ಫಕೀರಮ್ಮನ ಭಜನಾ ಮಂಡಲಿಯನ್ನು ಶುರು ಮಾಡಬೇಕೆಂದಿರುವನು. ಅದರ ಪ್ರಾರಂಭೋತ್ಸವಕ್ಕೆ ಭದ್ರಗಿರಿ ಅಚ್ಯುತ ಕೇಶವದಾಸರನ್ನು ಕರೆಸಬೇಕೆಂದಿರುವನಂತೆ. “ಎಷ್ಟು ದಿನಗಳಲ್ಲಿ ಮನೆಯನ್ನು ಖಾಲಿ ಮಾಡಲು ಸಾಧ್ಯ ಶಾಸ್ತ್ರಿಗಳೇ?” ಎಂಬೊಂದು ಮಾತು ಆತನಿಂದ ಬಂತು…. (ಕೋರ್ಟ್‌ನಲ್ಲಿ ನೋಟರಿ ತಗಿನ ಮಠರನ್ನು ಹಿಡಿದುಕೊಂಡು ಶಾಸ್ತ್ರಿ ಎಂಬ ವಿಶೇಷಣವನ್ನು ಹೆಸರಿನಿಂದ ಖಾಯಂ ಆಗಿ ಬೇರ್ಪಡಿಸಬೇಕು. ಅದು ಎಂದು ಸಾಧ್ಯವಾಗುವುದೋ?)
ಹೀಗೆ ಹೇಳಿಕೊಳ್ಳೋದು ಸಾಕಷ್ಟಿದೆ ಕುಂವೀ… ಆದರೆ ನೀನು ಕಥಾನಕವನ್ನು ಬೇಗನೆ ಮುಗಿಸಬೇಕೆಂದು ಆತುರ ಪಡುತ್ತಿರುವಿ. ಪ್ರಕಾಶಕ ಚನ್ನಬಸವಣ್ಣನವರು ನಿನ್ನ ಮೇಲೆ ಒತ್ತಡ ಹೇರಿರುವುದು ನನಗೆ ಅರ್ಥವಾಗುತ್ತದೆ. ಈ ಕಾದಂಬರಿಯ ಕೆಲವು ಕಂತುಗಳನ್ನು ಸಿದ್ಧಣ ಅರಕೆಯವರು ತಮ್ಮ ವಾರ ಪತ್ರಿಕೆಯಲ್ಲಿ ನಾನು ಓದಿರಲಿಲ್ಲವೆಂದು ತಿಳಿದುಕೊಳ್ಳಬೇಡ. ಓದಿ ಆತಂಕ ಗೊಂಡಿದ್ದೆ. ಏನಪ್ಪಾ ಇವನು ನನ್ನ ಬದುಕಿನ ಪೂರ್ವೋತ್ತರವನ್ನು ಅದೆಷ್ಟು ರೋಮಾಂಟಿಕ್ಕಾಗಿ ನೋಡ್ತಿದ್ದಾನಲ್ಲ ಎಂದು ಬೇಸರಪಟ್ಟಿದ್ದೆ. ಅಷ್ಟರಲ್ಲಿ ನಿನಗೂ, ಚಂದ್ರಶೇಕರ ಆಲೂರು ಎಂಬದರ ಸಂಪಾದಕ ಮಹಾಶಯನಿಗೂ ವಾಗ್ವಾದ ನಡೆದು ಕಂತು ಕೊಡುವುದನ್ನು ಅಲ್ಲಿಗೆ ನಿಲ್ಲಿಸಬಿಟ್ಟೆ ಎಂಬುದೂ ಅಷ್ಟೊತ್ತಿಗಾಗಲೆ ಸತ್ತಿದ್ದ ನನಗೆ ಗೊತ್ತಾಯಿತು. ಬದುಕಿದೆ ಎಂದು ಸಮಾಧಾನದ ಉಸಿರುಬಿಟ್ಟೆ.

ಮನುಷ್ಯ ಎಷ್ಟೇ ಆಧುನಿಕ, ನಾಗರಿಕ, ಸನಾತನಿ ಎಂದುಕೊಂಡರೂ ಅವನು ಬೇಟೆಯಡುವ ಗುಣದಿಂದ ಪಾರಾಗಿಲ್ಲ. ಅದನ್ನೇ ಸ್ಥಾಯಿಯಾಗಿಟ್ಟುಕೊಂಡು ಒಬ್ಬನ ಅಸ್ತಿತ್ವವನ್ನು ಇನ್ನೋರ್ವನು ಮುಗಿಸುತ್ತ ನಡೆದಿರುವನು. ಯಾವುದೋ ಒಂದು ಅನುಭೂತಿಗಾಗಿ ಹಪಹಪಿಸುತ್ತಿರುವನು. ಇದಕ್ಕೆ ಉಲ್ಲೇಖಾರ್ಹ ಉದಾಹರಣೆ ಎಂದರೆ ನಾನು ಮತ್ತು ನನ್ನ ಬದುಕು. ನೀನು ಮತ್ತು ನಿನ್ನ ಬದುಕು, ಅವರು ಮತ್ತು ಅವರ ಬದುಕು, ಇವರು ಮತ್ತು ಇವರ ಬದುಕು, ನೀನು, ನಾನು, ಅವರು, ಇವರು ಮೊದಲಾದವರೆಲ್ಲ ಮಾನವ ಸರಪಣಿ ಕೊಂಡಿಗಳು. ಒಂದು ಕಳಚಿಕೊಂಡರೆ ಇಡೀ ಸರಪಳಿಯೇ ದುರ್ಬಲವಾಗುತ್ತದೆ. ಈ ಸಂದರ್ಭದಲ್ಲಿ ವಾಲ್ಮೀಕಿಯ ದಶರಥನ ಬಾಯಿಯಿಂದ ಒಂದು ಮಾತು ಹೇಳಿಸುತ್ತಾನೆ. ಅದೇನೆಂದರೆ –
ಭಯೋ ವಿನಯ ಮಾಸ್ಥಾಯ ಭವ ನಿತ್ಯಂತ ಜಿತೇಂದ್ರಿಯಃ
ಕಾಮಕ್ರೋಧ ಸಮುತ್ಥಾನಿತ್ಯಜೇಥಾ ವ್ಯಸನಾನಿ ಚ… ಅಂತ… ಅಂದರೆ –
ಹೆಚ್ಚು ವಿನಯ ಸಂಪನ್ನನಾಗಿ ಇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೋ ಕಾಮಕ್ರೋಧಾದಿ ಮದ್ಯ ಮೃಗಯಾದಿ ವ್ಯಸನಗಳನ್ನು ಹತ್ತಿರ ಸೇರಿಸಬೇಡ ಅಂತ. ಆದರೆ ರಾಮನನ್ನು ಕಾಡಿದ್ದು ಅಧಃಪತನಕ್ಕೀಡು ಮಾಡಿದ್ದು ಅವೆ… ಇಡೀ ರಾಮಾಯಣ, ಮಹಾಭಾರತದಂಥ ಮಹಾಕಾವ್ಯದಲ್ಲಿ ಪ್ರತಿಯೊಂದು ಪಾತ್ರಕ್ಕೂ ಕಾರ್ಯ ಕಾರಣ ಸಂಬಂಧವಿದೆ. ಬೇಕು ಬೇಡಗಳ ಘರ್ಷಣೆ ಇದೆ. ಒಂದು ಪಾತ್ರ ಇನ್ನೊಂದು ಪಾತ್ರದ ಅಸ್ತಿತ್ವದ ಮೇಲೆ ಆಕ್ರಮಣ ಮಾಡುತ್ತದೆ. ಕಟ್ಟಕೊನೆಗೆ ಮಹಾಕಾವ್ಯ ಧ್ವನಿಸುವುದು ಬೇಟೆ ಸ್ವಭಾವನ್ನೇ. ಇದು ನಮ್ಮೆಲ್ಲರ ಭಾವ-ಸ್ವಭಾವಗಳನ್ನು ನಿಯಂತ್ರಿಸುತ್ತದೆ. ಪ್ರೇರೇಪುಸುತ್ತದೆ. ಆದ್ದರಿಂದ ನಾವು ಹೊರಗೆ ಕಾಣಿಸುವುದೇ ಬೇರೆ, ಅಂತರಂಗದ ಮುಲಕ ಹೊಂಚುವುದೇ ಬೇರೆ… ಬರು ಬರುತ್ತ ಯಾರು ಯಾರಿಗೂ ಗುರುತು ಸಿಗುವುದೇ ಇಲ್ಲ… ಅಂತಿಮ ಕ್ಷಣಗಳಲ್ಲಿ ನಮ್ಮ ನಮ್ಮ ಮುಖಚಹರೆಯೇ ಬದಲಾಗಿರುತ್ತದೆ. ವಿಶಾದದ ಮೂಟೆಗಳಂತಾಗಿ ಬಿಡುತ್ತೇವೆ. ನನ್ನದೂ ಹಾಗೆಯೇ ಸಂಭವಿಸಿದ್ದು. ಎಲ್ಲರಿದ್ದೂ ಒಂಟಿಯಾಗಿ ಬಿಟ್ಟೆ. ಜಾತ್ರೆಯಲ್ಲಿ ನನ್ನದು ಅರಣ್ಯ ರೋದನವಾಗಿತ್ತು. ಅದನ್ನು ಕೆಳಿ ಇಡೀ ಜಾತ್ರೆ ಆನಂದಿಸುತ್ತಿತ್ತು. ಅದಿರಲಿ, ಈಗವನ್ನೆಲ್ಲ ಕೂಡ್ರಲಿಕ್ಕೆ ಸಮಯವಿಲ್ಲ. ಯಾವ್ಯಾವಾಗ ಏನು ನಡೆಯಬೇಕಿತ್ತೋ ಅದೆಲ್ಲ ನಡೆಯಿತು. ನನ್ನ ಬದುಕಿನಲ್ಲಿ ನಡೆದ ಮಾರ್ಪಾಡುಗಳಿಗೆ ಯಾರೊಬ್ಬರು ಕಾರಣವಲ್ಲ ನಾನೇ ಕಾರಣ.

ನಾನು ಬಯ್ದಾಗ ಹೊಡೆದಾಗ, ಜರಿದಾಗ ವರಲಕ್ಷ್ಮಿ ಪ್ರತಿಭಟನೆಯನ್ನೊಡ್ಡಿದ್ದಲ್ಲಿ ನಾನು ಉಲ್ಲಂಘನೆಗೆ ಮುಂದಾಗುತ್ತಿರಲಿಲ್ಲ. ನನ್ನ ವರ್ತನೆ ಆಕೆಯ ಮೇಲೆ ಅಷ್ಟೊಂದು ದುಷ್ಪ್ರಭಾವ ಬೀರಬಹುದೆಂದು ಗೊತ್ತಿದ್ದರೆ ಆಕೆಯನ್ನು ಸೂತ್ರದ ಗೊಂಬೆ ಎಂದು ಭಾವಿಸುತ್ತಿರಲಿಲ್ಲವೇನೋ! ಆದರೆ ಏನು ಮಾಡುವುದು? ಪರಿಸ್ಥಿತಿಯ ಕೈಗೊಂಬೆಯಾಗಿದ್ದ ನಾನೇ ಕಿಳ್ಳೇಕ್ಯಾತರವರಾಗಿ ಇನ್ನೊಂದು ಗೊಂಬೆಯನ್ನು ಆಡಿಸುತ್ತಿದ್ದುದು ಸೋಜಿಗದ ವಿಷಯ.

“ಶಾಮಣ್ಣಾ… ತಾತ್ವಿಕವಾಗಿ ಮಾತೋಡೋದಿಕ್ಕೆ ಸಮಯವಿಲ್ಲ. ಆಡುವವರ ವಿಷಯ ಆಡಿಸುವವರಿಗೆ ಗೊತ್ತು. ಆಡಿಸುವವರ ವಿಷಯ ಆಡುವವರಿಗೆ ಗೊತ್ತು. ಅವರಿಬ್ಬರ ನಡುವೆ ಒಪ್ಪಂದ ಇರುತ್ತದೆ. ಕೃತಿಯ ಮೂಲ ಉದ್ದೇಶ ಆ ಅಂಥ ಒಪ್ಪಂದವನ್ನು ಭೇದಿಸುವುದೇ ಆಗಿದೆ. ಆದ್ದರಿಂದ ನೀನು ನಿನ್ನ ಪತ್ನಿ ಬಗ್ಗೆ ಹೆಚ್ಚು ಒತ್ತು ಕೊಡಬೇಡ. ಹೆಂಡತಿ, ತಾಯಿ, ಗಂಡ, ಮಗ ಈ ಪಾತ್ರಗಳ ಪೈಕಿ ಓದುಗ ಒಬ್ಬನಾಗಿರುತ್ತಾನೆ. ಗಂಡನಿಂದ ಒದೆ ತಿಂದ ಹೆಂಡತಿ ಏನು ಮಾಡಬೇಕೋ ವರಲಕ್ಷ್ಮಿ ಅದನ್ನೆ ಮಾಡಿದ್ದಾಳೆ. ನಿನ್ನ ತಾಯಿ ಬಿಟ್ರೆ ಯಾರಿದ್ದರೆ ಆಕೆಗೆ ದಿಕ್ಕು? ತನ್ನ ಕಷ್ಟ ಸುಖ ಹೇಳಿಕೊಳ್ಳಲು ಆಕೆಗಿದ್ದ ಒಂದೇ ಒಂದು ಆಸರೆ ತನ್ನತ್ತೆ ಅಂದರೆ ನಿನ್ನ ತಾಯಿ. ಆ ಸೇತುವೆಯನ್ನು ಸ್ಪೋಟಿಸುವ ಪ್ರಯತ್ನ ಮಾಡೀಡೀ ನೀನು, ತನ್ನ ಗಂಡ ಸತ್ಯಹರಿಶ್ಚಂದ್ರನಂತೆ, ಏಕಪತ್ನಿ ವ್ರತಸ್ಥ ಶ್ರೀರಾಮಚಂದ್ರನಂತಿರಬೇಂಬುದು ಪ್ರತಿಯೊಂದು ಹೆಣ್ಣಿನ ಆಸೆ… ವಿವಾಹದ ನಂತರ ಹೆಂಡತಿಯೇ ತಾಯಿ, ತಂದೆ ಎಲ್ಲ… ಅದನ್ನು ಅರ್ಥ ಮಾಡಿಕೊಳ್ಳದೆ ಹೆಂಡತಿಯಂಥ ರೋಗ ನಿರೊಧಕ ಶಕ್ತಿಯನ್ನು ತುಚ್ಛೀಕರಿಸಿದೆ. ನೀನು ಸಿಗರೇಟು ಸೇತ್ತಿದ್ದೀ, ಜೂಜಾತಿದ್ದೀ, ಪರಸ್ತ್ರೀ ವ್ಯಾಮೋಹಿಯಾಗ್ತಿದ್ದೀ ಇದು ಸರಿಯಲ್ಲ ಎಂದು ಪ್ರಶ್ನಿಸಿದ ತಾಯಿಯನ್ನು ಕೇರ್ ಮಾಡದವನು ನೀನು.. ಇದೆಲ್ಲ ತಪ್ಪು ಹೌದಲ್ಲೋ… ನಿಜ ಹೇಳು?”

“ಇದು ತಪ್ಪು ಒಪ್ಪುಗಳ ವಿಚಾರ ಸಂಕಿರಣವಲ್ಲೋ ಬೆಪ್ಪೇ… ಪ್ರತಿಯೊಂದು ಕಾಲಘಟ್ಟದಲ್ಲಿ ಉಬ್ಬರವಿಳಿತಗಳು ಸಹಜ ಮತ್ತು ಪ್ರಕೃತಿ ನಿಯಮ. ಬಂಧಿಸಲ್ಪತ ಪ್ರತಿಯೊಂದು ಜೀವಿ ಸ್ವೇಚ್ಛೆಗಾಗಿ ತಹತಹಿಸುತ್ತದೆ ಪಡೆಯುತ್ತದೆ ಮತ್ತು ಅನುಭವಿಸುತ್ತದೆ. ಅದರ ಆವರ್ತನೆಯನ್ನು ಸಮಾಜ ಅಪಾಯಕಾರಿ ಎಂದು ಭಾವಿಸಬಹುದು. ಆದರೆ ಅದಕ್ಕೆ ಆ ಪ್ರೇರಣೆ ಸಿಕ್ಕದ್ದು ‘ಬಂಧನ” ಎಂಬ ಸಂದರ್ಭದಲ್ಲಿಯೇ. ವರಲಖ್ಮಿ ನನ್ನ ಒಬ್ಬ ಶ್ರೋತ್ರಿ ಎಂದು ಭಾವಿಸಿದಳೇ ಹೊರತು ತನ್ನ ಗಂಡ ಎಂದು ಭಾವಿಸಲಿಲ್ಲ. ಯಾವ ಯಾವ ಸಮಯದಲ್ಲಿ ಸಂಭೋಗಿಸಿದರೆ ಯಾವ ಯಾವ ಜಾಯಮಾನದ ಮಕ್ಕಳು ಹುಟ್ಟುವರೆಂದು ಆಕೆ ಓದಿ ತಿಳಿದುಕೊಂಡಿದ್ದಳು. ಆಕೆಯ ದೃಷ್ಟಿಯಲ್ಲಿ ಸತಿ ಪತಿ ಮಿಲನ ವಂಶೋದ್ಧಾರದ ಪವಿತ್ರ ಕಾರ್ಯವಾಗಿತ್ತೇ ಹೊರತು ಸ್ವಾಭಾವಿಕ ಕ್ರಿಯೆಯಾಗಿರಲಿಲ್ಲ; ಹಸಿವು ತೃಷೆಗಳಂತೆ ಒಂದು ದೈಹಿಕ ಅಗತ್ಯವಂತೂ ಮೊದಲೇ ಆಗಿರಲಿಲ್ಲ. ಸ್ಪರ್ಷ ಮತ್ತು ಸಲಿಗೆಯನ್ನು ಅನಾಗರೀಕವೆಂದು ತಿಳಿದುಕೊಂಡಿದ್ದಳು. ಆಕೆಯ ವ್ಯಕ್ತಿತ್ವವೇ ಹಾಗೆ ರೂಪಗೊಂದಿತ್ತು, ಮಹರಾಯ, ಆಕೆಯ ಭಾವನೆಗಳನ್ನು ಬದಲಾಯಿಸುವುದು ಒಂದೆ, ಕಪ್ಪು ನಾಯಿಯ ಬಣ್ಣ ಬಿಳಿ ಮಾಡುವುದು ಒಂದೇ ಎಂದು ಅರ್ಥಮಾಡಿಕೊಂಡೆ. ಆಕೆ ದೈಹಿಕವಾಗಿ ಭಾವನಾತ್ಮಕವಾಗಿ ಸ್ಪಂದಿಸಿದ್ದರೆ ನಾನ್ಯಾಕೆ ಪಶುಪತಿಯ ಕಾಮ್ರೇಡುತನಕ್ಕೆ ಮರುಳಾಗುತ್ತಿದ್ದೆನೋ! ನೀನೇ ಹೇಳು. ವೈವಾಹಿಕ ವ್ಯವಸ್ಥೆ ಮತ್ತು ಧರ್ಮದಿಂದ ದೊರೆಯದಿದ್ದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕಂಡ್ಕೊಂಡ ದಾರಿಯ ಪೈಕಿ ಪಶುಪತಿಯೂ ಒಂದು ಎಂದು ಹೇಳಬಹುದು. ದಾರಿಯೊಳಗಿಂದ ಮತ್ತೊಂದು ದಾರಿ ಹುಟ್ಟುವುದಲ್ಲಾ, ಹಾಗೆ ಮುಂದೊಂದು ದಿನ ಹುಟ್ಟಿದ್ದು ರಾಖೇಶ ಎಂಬ ಕಾಲು ಹಾದಿ, ನನಗೆ ಅರ್ಥವಾಗದೆ ಉಳಿದವರ ಪೈಕಿ ಅವನೂ ಒಬ್ಬ, ಅವನ ಬಗ್ಗೆ ನೀನು ಅವಕಾಶಕೊಟ್ಟರೆ ಸವಿಸ್ತಾರವಾಗಿ ಹೇಳುವೆ. ಇಲ್ಲವಾದರೆ ಇಲ್ಲ. ಅವನನ್ನು ಪೂರ್ತಿ ನಿರ್ಲಕ್ಷಿಸಿದರೆ ಕಥೆಯೇ ನಿರ್ಜೀವವಾಗಿ ಬಿಡುತ್ತದೆ. ಊಟದ ರುಚಿಯನ್ನು ಉಪ್ಪು ಹೇಗೆ ಹೆಚ್ಚಿಸುವುದೋ ಹಾಗೆ ರಾಖೇಶನ ಬಗ್ಗೆ ಸ್ವಲ್ಪಾದ್ರು ಪ್ರಸ್ತಾಪಿಸಲಿಲ್ಲಾಂದ್ರೆ ಕಥೆಗೆ ಕ್ಲೈಮ್ಯಾಕ್ಸ್ ಎಂಬುದೇ ಇರುವುದಿಲ್ಲ. ವಾಟ್ ಎ ಗ್ರೇಟ್ ಪರ್ಸನ್ ರಾಖೇಶ್… ದೊಡ್ಡಸ್ತಿಕೆ ದೊಡ್ಡತನ, ಮಾನವೀಯತೆಯ ಸೆಲೆ ಅಂಥ ಚಿಲ್ಲರೆ ಮಂದಿ (ಚಿಲ್ಲರೆ ಎಂದು ಕರೆದವರು ಯಾರು?)ಯ ಮನಸ್ಸಿನಲ್ಲಿ ಆಶ್ರಯ ಪಡೆಯುತ್ತದೆ. ನಾನು ಕೆಲವು ಸಂದರ್ಭದಲ್ಲಿ ಇನ್ನೇನು ಮುಳುಗಿ ಹೋಗುತ್ತಿರುವನೆಂದು ಕೈಚೆಲ್ಲಿದಾಗ ಆಪದ್ಭಾಂಧವನಂತೆ ಬಂದು ಕೈಹಿಡಿದೆತ್ತಿ ಮತ್ತೆ ಬದುಕು ನೀಡಲು ಪ್ರಯತ್ನಿಸಿದ ಅವನು ನನ್ನ ದೃಷ್ಟಿಯಲ್ಲಿ ನನ್ನ ತಾತ; ನನ್ನ ತಾಯಿ, ನನ್ನ ಹೆಂಡತಿ, ನಿನ್ನಂಥ ಗೆಳೆಯರಿಗಿಂತ ಅವನೇ ಹೆಚ್ಚು. ಎಲ್ಲರೂ ನನ್ನ ಬಗ್ಗೆ ಅಸಹ್ಯ ಪಟ್ಟು ಛೀ ಥೂ ಎಂದು ಉಗುಳುತ್ತಿದ್ದ ಕಾಲದಲ್ಲಿ ಅವನು ನನ್ನನ್ನು ಪ್ರೀತಿಸಿದ. ಗೌರವಿಸಿದ ತಾಯಿಯಂತೆ ವಾತ್ಸಲ್ಯ ಹರಿಸಿದ. ಯಾರನ್ನಾದರೂ ಮರೆತೇನು? ಆದರೆ ಅವನನ್ನು ಮಾತ್ರ ಮರೆಯಲಾರೆ! ಆದ್ದರಿಂದ ಕಾದಂಬರಿಯ ಉದ್ದಗಲಗಳ ವಿಸ್ತೀರ್ಣದ ಬಗ್ಗೆ ತಲೆಕೆಡೆಸಿಕೊಳ್ಲದೆ ಅವನ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಿಕ್ಕೆ ಅನುಮತಿ ಕೊಡು.

“ಆಯ್ತು ಅವನನ್ನು ಲವಣ ಪ್ರಮಾಣದಲ್ಲಿ ಪ್ರಸ್ತಾಪಿಸುವಿಯಂತೆ… ಈಗ ಮಾತ್ರ ನೀನು ನಿನ್ನ ಬದುಕಿನ ಸಂಕ್ರಮಣದ ಕಾಲದ ಬಗ್ಗೆ ಸಂಕ್ಷಿಪ್ತವಾಗಿ ಅರ್ಥಗರ್ಭಿತವಾಗಿ ಹೇಳುವ ಪ್ರಯತ್ನ ಮಾಡಬೇಕು ನೋಡು. ನಾನು ತಿಳಿದಿರೋ ಮಟ್ಟಿಗೆ ಪಶುಪತಿ ನಿನ್ನನ್ನು ಕಾಮ್ರೇಡ್ ಬಲೆಯಲ್ಲಿ ಕೆಡವಲು ಪ್ರಯತ್ನಿಸಿದ. ಅವನು ಎಲ್ಲಾ ಕಾಮ್ರೇಡರಂತೆ ಸತ್ಕುಲ ಸಂಜಾತ… ಎಲ್ಲೋ ಹುಟ್ಟಿದ; ನಿನ್ನನ್ನು ನಿನ್ನ ತಾತನವರು ನಿನ್ನ ಬಗ್ಗೆ ಎಂಥೆಂಥ ಕನಸುಗಳನ್ನು ಇಟ್ಟುಕೊಂದಿದ್ದರೋ ಅವನ ಬಗ್ಗೆ ಅವನ ಹೆತ್ತವರೂ ಕನಸಿನ ಗೋಪುರ ಕಟ್ಟಿಕೊಂಡಿದ್ದರು. ನನಗೆ ತಿಳಿದ ಮಟ್ಯಿಗೆ ಪದವಿಪೂರ್ವ ತರಗತಿಯಲ್ಲಿ ಓದುತ್ತಿದ್ದಾಗ ಡಾ.ಕುರುವಳ್ಳಿ ಗೋವಿಂದರೆಡ್ಡಿ ಎಂಬ ಮೇಷ್ಟ್ರು ಅವನ ಮೇಲೆ ಮಾರ್ಕ್ಸ್‌ವಾದದ ಪ್ರಭಾವ ಬೀರಿದರು. ಮೇಲ್ಜಾತಿಗಳ ಬಗ್ಗೆ ಬಂಡವಾಳಶಾಹಿಗಳ ಬಗ್ಗೆ ಕುತಾರ್ಕಿಕ ನಿಲುವುಗಳನ್ನು ಪಡೆದ, ಓದದ ಹುಡುಗರನ್ನು ಅದೇ ತನ್ನ ಮೇಷ್ಟ್ರ ವಿರುದ್ಧ ಎತ್ತಿಕಟ್ಟಿ ಕಾಲೇಜಿಂದ ಬಹಿಷ್ಕರಿಸಲ್ಪಟ್ಟ ನಂತರ ಗುಲಬರ್ಗಾದಲ್ಲಿ ನಡೆದ ಕಿಸಾನ್ ರ್‍ಯಾಲಿಯಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರನ್ನು ಟೀಕಿಸಿ ಗುಮಿಸಿ ಗೌಡರ ಪರಿಚಯ ಮಾಡಿಕೊಂಡ. ಗೌಡನೇ ಅವನನ್ನು ಕೊತ್ತಲಿಗೆಗೆ ಕರೆತಂದು ಉಡಾಫೆ ಕೆಲಸಗಳಿಗೆ ಹಚ್ಚಿದ. ನಿನಗೂ ಅಂಥ ಗೆಳೆಯನ ಅಗತ್ಯ ಇತ್ತು… ಪರಿಚಯ ಮಾಡಿಕೊಂಡೆ. ಕಳ್ಳಿ ಹಾಲನ್ನು ಹಾಲೆಂದು ಭ್ರಮಿಸುವ ನೀನು ಅವನು ಹೇಳಿದ್ದಕ್ಕೆಲ್ಲ ಕುಣಿದು ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡೆ.

ಎರಡನೆಯದಾಗಿ ರಾಖೇಶನ ಬಗ್ಗೆ ಸಂಕ್ಷಿಪ್ತವಾಗಿ ಕಾದಂಬರಿಯಲ್ಲಿ ಪರಿಚಯಿಸಿರುವೆ. ಅವನ ವ್ಯಕ್ತಿತ್ವಕ್ಕೆ ನಿನ್ನಂತೆ ನಾನೂ ಮಾರು ಹೋದೆ. ನನಗೆ ಟಲೆಹಿಡುಕರ ಪರಿಚಯ ಇಲ್ಲ. ಅವರಂತೆ ಅವನೂ ಏನೋ ಸಹಾಯ ಮಾಡುತ್ತಿರುವಂತೆ ನಟಿಸಿದ. ತಾನು ತೋರಿಸಿದವರೊಂದಿಗೆ ಮಲಗದ ನನ್ನನ್ನು ಸಂದೇಹಿಸಿದ. ಅವನ ಪಾದರಸದಮ್ಥ ಚಟುವಟಿಕೆ ನನಗಿಷ್ಟವಾಯಿತು. ಒಂದು ಸುದೀರ್ಘ ಕಾದಂಬರಿಯಾಗುವಷ್ಟು ಬದುಕು ಅವನದಾಗಿರಬಹುದು. ಸದ್ಯಕ್ಕೆ ಅದೆಲ್ಲ ಬೇಕಾಗಿಲ್ಲ. ನೀನು ಮುಂದೆ ಹೇಳುವ ಘಟನೆಗಳಿಗೆ ಅದು ಪೂರಕವೆನಿಸಿದರೆ ಎಷ್ಟು ಬೇಕೋ ಅಷ್ಟು ಬಳಸಿಕೋ; ನನ್ನ ಅಭ್ಯಂತರವಿಲ್ಲ.

ಈಗ ನೀನು ಹೆಂಡತಿ ಮತ್ತು ತಾಯಿಯರೊಂದಿಗೆ ಘರ್ಷಣೆಗಿಳಿದಿರುವಿ, ಮೊದ ಮೊದಲು ಹಾವು ಮುಂಗುಸಿಯಂತೆ ಪರಸ್ಪರ ಕಚ್ಚಾಡುತ್ತಿದ್ದ ಅವರು ಈಗ ಒಂದಾಗಿರುವರು, ಸತ್ಕುಲ ಪ್ರಸೂತನಾದ ನಿನ್ನ ಪತನವಾಗದಂತೆ ನೋಡಿಕೊಳ್ಳಲು ಗುಟ್ಟಾಗಿ ಒಪ್ಪಂದಮಾಡಿರುವರೆಂದುಕೋ… ಅದಕ್ಕೆ ಪುರಕವಾಗಿ ಪ್ರತಿಭಟನೆಯ ನಡುವೆಯು ನಿನ್ನ ಹೆಂಡತಿಯ ಮುಟ್ಟು ನಿಂತಿದೆ. ಆಕೆಗೆ ಉಂಡಕೂಳು ಸೇರುತ್ತಿಲ್ಲ. ತಲೆ ಸುತ್ತು ಬಂದಂತಾಗುತ್ತಿದೆ. ಅಡುಗೆ ಮನೆ ಹೊಕ್ಕೊಡನೆ ಆಕೆ ಹೊಯ್ಕ ಹೊಯ್ಕಂತ ವಾಂತಿ ಮಾಡಿಕೊಳ್ಳುತ್ತಿರುವಳು ( ವಾತ್ಸಾಯನನನ್ನು ಓದಿಕೊಂಡಿರುವೆಯಾದರೂ ತಾಯ್ತನವನ್ನು ಅನುಭವಿಸುವ ಕುರಿತು ನೀನು ಓದಿಕೊಂದಿಲ್ಲ.) ಆ ಸ್ಥಿತಿಯಲ್ಲಿ ನೀನು ನಿನ್ನ ಹೆಂಡತಿಯನ್ನು ಅಲಕ್ಷಿಸುವಷ್ಟು, ತಿರಸ್ಕರಿವಷ್ಟು ಕ್ರೂರಿ ಅಲ್ಲ ಎಂಬುದು ನನಗೂ ಗೊತ್ತು. ನೀನೇ ಅಡುಗೆ ಮಾಡುವಿ ( ಆಕೆ ಮಾಸಿಕ ಮುಟ್ಟು ಅನುಭವಿಸಿದಾಗ ಅಡುಗೆ ಮಾಡಿರುವ ಅನುಭವ ಈಗ ನಿನ್ನ ಸಹಾಯಕ್ಕೊದಗುತ್ತದೆ ನೋಡು) ನೀನೆ ಆಕೆಗೆ ಬಡಿಸುವಿ… ಒಮ್ಮೊಮ್ಮೆ ಒತ್ತಾಯದಿಂದ, ಪ್ರೀತಿಯಿಂದ … ಆಕೆ ಮಾಡಿಕೊಳ್ಳುವ ವಾಂತಿಯನ್ನು ಬಳಿಯುವಿ… ಮಾತೃಪ್ರಧಾನ ಭಾವನೆಯಿಂದ, ತಾಯ್ತನದ ಅರಿವು ಆಕೆಗು ಇಲ್ಲ. ಯಾರಾದರೂ ತನಗೆ ಮಾಟ ಮಡಿಸಿರಬಹುದೇ? ಯಾರಾದರೂ ತನಗೆ ಮದ್ದು ಇಟ್ಟಿರಬಹುದೆ ಎಂದು ಆಕೆ ಶಂಕಿಸುತ್ತಾಳೆ. ಮನೆಯಲ್ಲಿ ವೃದ್ಧೆಯರಿದ್ದರೆ ಹೀಗೆ ಆಕೆ ಶಂಕಿಸುತ್ತಿರಲಿಲ್ಲ. ಆಕೆ ದಿನದಿಂದ ದಿನಕ್ಕೆ ಸೊರಗುತ್ತ ಹೋಗುತ್ತಾಳೆ. ಹುಣಸೆಕಾಯಿ ಚೀಪುವ ಆಸೆಯಾಗುತ್ತದೆ. ಜೋಡಿಮಣ್ಣು ತಿನ್ನುವ ಆಸೆಯಾಗುತ್ತದೆ, ಯಾರಾದರು ತಲೆ ಇರಿಸಿ ಮಲಗಿಕೊಳ್ಳಲು ತನ್ನ ತೊಡೆಯ ಆಶ್ರಯವನ್ನು ಕೊಡಬಾರದೆ ಎಂದು ಆಶಿಸುತ್ತಾಳೆ. ಆಕೆಯ ಬಯಕೆ, ಆಸೆ, ನಿರಾಸೆ, ಕೋರಿಕೆ ಕನವರಿಕೆಗಳೆಲ್ಲ ನಿನ್ನಲ್ಲಿ ಆಶ್ಚರ್ಯ ಹುಟ್ಟಿಸುತ್ತವೆ. ಆತುರದಿಂದ ಸ್ಪಂದಿಸದೇ ಇರುವುದಿಲ್ಲ ನೀನು. ಆ ಒಂದು ದಿನ ಬ್ಯಾಂಕಿಗೆ ರಜೆ ಹಾಕಿರುವ ನೀನು ಶನಿವಾರ ಪೇಟೆಯ ಕೊನೆಯಲ್ಲಿರುವ ಡಾಕ್ಟರ್ ಶೋಬಾರವರನ್ನು ಮನೆಗೆ ಕರೆ ತಂದು ಹೆಂಡತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿರುವಿ, ಪರೀಕ್ಷಿಸಿದ ನಂತರ ಡಾಕ್ಟರ ಮುಖ ಅರಳಿದ್ದು ನೋಡಿ ನೀನು ಗಾಬರಿಗೊಳ್ಳುತ್ತೀ… ಆಗ ಡಾಕ್ಟರ್ ಹೇಳುತ್ತಾರೆ

“ಶಾಸ್ತ್ರಿಯವರೇ ನೀವು ತಂದೆಯಾಗ್ತಿದ್ದೀರಿ… ಅಂತ”… ಆಗ ನಿನ್ನ ಮುಖ ಹಿರಿಹಿರಿ ಹಿಗ್ಗಿ ಕುಂಬಳಕಾಯಿಯಾಗುತ್ತದೆ.
ನುರಿತ ನಾಟಕೀಯ ಶೈಲಿಯಲ್ಲಿ ‘ಥ್ಯಾಂಕ್ಸ್ ಡಾಕ್ಟರ್ ಥ್ಯಾಂಕ್ಸ್’ ಎಂದು ಹೇಳುವಿ. ಗರ್ಭಿಣಿಯ ಆರೈಕೆ ಕುರಿತು ಅವರು ನಿನಗೆ ಕೆಲವು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಇಂಥಾದ್ದು ಇಷ್ಟು ಪ್ರಮಾಣದಲ್ಲಿ ಕುಡಿಯಬೇಕು, ತಿನ್ನಬೇಕು… ಇತ್ಯಾದಿ. ಮಾನಸಿಕವಾಗಿಯೂ ಗರ್ಭಿಣಿ ನೆಮ್ಮದಿಯಿಂದಿರಬೆಕೆಂದು ಹೇಳುತ್ತರೆ. ಆಗ ನೀನು ಹ್ಹಾ! ಹ್ಹೂ ಎಂದು ಉದ್ಗರಿಸುವಿ ಪೆದ್ದನಂತೆ. ಆ ಕೂಡಲೆ ನೀನು ನಿನ್ನ ತಾಯಿಯ ಗರ್ಭದಲ್ಲಿದ್ದ ದಿನಗಳನ್ನು ಜ್ಞಾಪಿಸಿಕೊಳ್ಳುವಿ. ತಾಯಿ ಅನುಭವಿಸಿದ ಸಂಕಟ, ಸಂತೋಷ ಊಹಿಸಿಕೊಳ್ಳುವಿ… ಇಂಥ ಊಹೆಗಳಿಂದ ನಿನಗೆ ಹೆಂಡತಿ ಬಗ್ಗೆ ಪ್ರೀತಿ ಕಾಕ್ಕುಲಾತಿ ಹೆಚ್ಚುತ್ತದೆ; ಹುಟ್ತುವ ಮಗು ಗಂಡೊ; ಹೆಣ್ಣೋ ಎಂಬ ಸಂದೇಹ ಕಾಡಲಾರಂಭಿಸುತ್ತದೆ. ತಾನು ಗರ್ಭಿಣಿ ಎಂದು ತಿಳಿದ ವರಲಕ್ಷ್ಮಿಯ ಮುಖದಲ್ಲಿ ಹೆಮ್ಮೆ ಮೂಡುತ್ತದೆ. ಜಂಗಮರುಂಡ ಗಂಗಾಳದಂಥ ತನ್ನ ತವರುಮನೆಯನ್ನು ನೆನಪಿಸಿಕೊಂಡು ಮತ್ತೆ ಆಕೆ ಮ್ಲಾನವದನೆಯಾಗುವಳು. ಹಾಲುಂಡ ತವರು ಎಲ್ಲ ನೀನೆ ಎಂಬಂತೆ ಆಕೆ ನಿನ್ನ ಕಡೆ ನೋಡಿ ನಿಟ್ಟುಸಿರು ಬಿಡುತ್ತಾಳೆ. ಆ ಕ್ಷಣ ಆಕೆಯನ್ನು ನೀನು ಅಪ್ಪಿಕೊಂಡು ಮುದ್ದಿಸುತ್ತೀ… ಧೈರ್ಯ ನೀಡುತ್ತೀ… ಅಜ್ಜಿಯಾಗುವಿ ಎಂದು ಕೊಟ್ಟುರಿಗೆ ಸುದ್ದಿ ತಿಳಿಸುತ್ತೀ… ಅಜ್ಜಿಯ ಚರಪಟ್ಟಾಧ್ಯಕ್ಷೆ ಸ್ತಾನ ಅಲಂಕರಿಸಲಿರುವ ಕ್ಷಣಗಳನ್ನು ನೆನೆದು ಪುಳಕಗೋಳ್ಳುತ್ತ ಅಲುಮೆಲಮ್ಮ ಸೀದಾ ನಿಮ್ಮ ಮನೆಗೆ ಬಂದುಬಿಡುತ್ತದೆ. ಗರ್ಭಿಣಿ ಸೊಸೆಯ ಮೇಲೆ ವಾತ್ಸಲ್ಯದ ಮಹಾಪೂರ ಹರಿಸುತ್ತದೆ. ಅವರಿಬ್ಬರು ಮತ್ತೆ ಕಚ್ಚಾಡಬಹುದೆಂದು ಊಹಿಸುತ್ತೀ… ಸೋಲುವುದೇ ಆನಂದದ ಅನುಭವ. ಗೆಳೆಯರೊಂದಿಗೆ ಆ ಆನಂದವನ್ನು ಹಂಚಿಕೊಳ್ಳುವ ತವಕ. ಬ್ಯಾಂಕಿಗೆ ಹೋಗುತ್ತೀ. ಸಂತೋಷದ ಕಾರಣ ಹೇಳುತ್ತೀ. ಅವರಿಗೆ ‘ಎಸ್ಕೇಸಿ’ ತರಿಸುತ್ತೀ…” ಎಂದು ಸವಿವರವಾಗಿ ವಿವರಿಸಿ ನಂತರ –
“ಆದರೆ ಇದೆಲ್ಲ ಸರಿಕಣಪ್ಪಾ! ಈ ಎಲ್ಲ ವಿವರಗಳು ಜನಸಾಮಾನ್ಯ ಓದುಗರಿಗೆ ಈಗಾಗಲೆ ಅರ್ಥ ಆಗಿರ್‍ತವೆ. ಪತ್ನಿಯ ಆಯುರಾರೋಗ್ಯ ಬಯಸಿ ಪತಿಯು ಕೊಲ್ಲೂರು ಮೂಕಾಂಬಿಕೆಗೆ ಸಹಸ್ರ ಕುಂಕುಮಾರ್ಚನೆ ಮಾಡಿಸುವುದಾಗಿ ಹರಕೆ ಹೊತ್ತನು ಎಂಬ ವರ್ಣಾತ್ಮಕ ವಿವರಗಳು ಈಗಾಗಲೇ ಜನಪ್ರಿಯ ಕಥಾನಕಗಳಲ್ಲಿ ಬಂದಿವೆ. ಈಗ ಓದುಗರ ಕುತೋಹಲವಿರುವುದು ನಿನಗೂ ಮತ್ತು ಅನಸೂಯಳಿಗೂ ಹೇಗೆ ಸಂಬಂಧವೇರ್ಪಟ್ಟಿರು ಎಂಬ ಬಗ್ಗೆ. ದಯವಿಟ್ಟು ಅದರ ಬಗ್ಗೆ ಹೇಳಿ ಪುಣ್ಯ ಕಟ್ಟಿಕೋ ಮಹಾರಾಯ” ಎಂದು ಅಂಜಲೀಬದ್ಧನಾಗಿ ಕೇಳಿಕೊಂಡೆನು.
ನನ್ನ ಮಾತು ಕೇಳಿ ಶಾಮಣ್ನ ಪಾತ್ರವು ಚಿಂತಾಕ್ರಾಂತವಾಯಿತು. ಅದರ ತುಟಿಗಳು ಕಂಪಿಸತೊಡಗಿದವು. ಮುಖದ ಸ್ನಾಯುಗಳು ಹಿಂದಕ್ಕೂ ಮುಂದಕ್ಕೂ ಸರಿದಾಡಿದವು. ಒಂದು ಕ್ಷಣ ಕಣ್ಣು ಮುಚ್ಚಿ ನಿಟ್ಟುಸಿರು ಬಿಡುತ್ತ ತೆರೆಯಿತು. ನನ್ನನ್ನೆ ತೀಕ್ಷ್ಣವಾಗಿ ದಿಟ್ಟಿಸಿತು. ಅದನ್ನು ಅದರ ಪಾಡಿಗೆ ಬಿಟ್ಟು ಹೆಂಡತಿ ತಂದುಕೊಟ್ಟ ಚಹಕುಡಿದೆ.
“ನೋಡು, ಅನ್ನಪೂರ್ಣ… ನನ್ನ ಪ್ರೀತಿಯ ಗೆಳೆಯನಾದ ಶಾಮಣ್ಣ ಹಸ್ತಪ್ರತಿಯೊಳಗೆ ಹೇಗೆ ಮಿಸುಕಾಡುತ್ತಿದ್ದನೆ… ಅವನ ಪರಿಸ್ಥಿತಿ ಸಾಮಾಜಿಕವಾಗಿ ಬಿಗಡಾಯಿಸಿದ್ದಾಗ ನೀನೆ ಒಮ್ಮೆ ಏನ್ರೀ ಶಾಮಣ್ಣ ಅಂತೊಬ್ಬ ಗೆಳೆಯ ನಿಮಗಿದ್ದಾನಲ್ಲ… ಆತನಿಗೂ ನಿಮ್ಗೂ ಆಗಾಗ್ಗೆ ಜಗಳ ಆಗ್ತಿತ್ತಂತೆ,

ಆದ್ರೂ ನೀವು ಪರಸ್ಪರ ಕಂಡೊಡನೆ ಹಲೋ ಹಲೋ ಅಂತಿದ್ದರಂತಲ್ಲ ಎಂದು ಕೇಳಿದ್ದಿ. ಸಾಮಾಜಿಕವಾಗಿ ಅಪಭ್ರಂಶಗೊಂಡಿರುವ ಅವನನ್ನು ನಿನಗೆ ಪರಿಚಯ ಮಾಡಿಸಿರಲಿಲ್ಲ. ಈಗ ಇಲ್ಲಿ ಯಾವ ಸ್ಥಿತಿಯಲ್ಲಿದ್ದಾನೆ ನೋಡು” ಎಂದು ಹೇಳಬೇಕೆನ್ನಿಸಿತು.

ಅಕ್ಷರಗಳ ಕ್ರೋಟಾನ್ ಪೊದೆಗಳ ನಡುವೆ ತಲೆ ಮರೆಸಿಕೊಂಡಿರುವ ಅವನನ್ನು ಆಕೆ ಗುರುತಿಸಲಾರಳು ಎಂದುಕೊಂಡು ಸುಮ್ಮನಾದೆ. ಆದರೆ ಶಾಮಣ್ಣನ ಪಾತ್ರವು ಮಾತ್ರ ಆಕೆಯನ್ನು ನೋಡಿರದೆ ಇರಲಿಲ್ಲ. “ಒಳ್ಳೆ ಹೋಂಸಿಕ್‌ನ ಕೈಲಿ ಸಿಕ್ಕಿಹಾಕಿಕೊಂಡಿದ್ದೀನಲ್ಲಪ್ಪಾ ಶಿವನೇ. ಬೇರೆ ಯಾವ ವಿಷಯದ ಬಗ್ಗೆ ನಿಸ್ಸಂಕೋಚವಾಗಿ ಹೇಳಬಹುದು. ಆದರೆ ಅನಸೂಯಳ ಪರಿಚಯಕ್ಕೆ ಕಾರಣವಾದ ಘಟನೆ ಬಗ್ಗೆ ಹೇಗೆ ಹೇಳುವುದು? ಆತ್ಮಹತ್ಯಾ ಸದೃಶವಾದ ಘಟನೆ ಅದು… ಹೇಳದಿದ್ದರೆ ಬಾಯಿಗೆ ಬಂದಂತೆ ಬರೆದು ಬಿಸಾಕಲಿಕ್ಕೂ ಹೇಸುವವನಲ್ಲ ಈತ… ನಾನೇನು ತಪ್ಪು ಮಾಡಿದ್ದೀನಂತ ಹಿಂಜರಿಯಲಿ? ಎಲ್ಲರೂ ಮಾಡಿದ್ದೇ ನಾನು ಮಾಡಿದ್ದು! ಅದರಲ್ಲಿ ತಪ್ಪೇನು… ಹೇಳಿ ಬಿಡುವುದೇ ವಾಸಿ” ಎಂದು ಮನದಲ್ಲಿ ಮಂಡಿಗೆ ತಿಂದು ಶಾಮಣ್ಣ ಪಾತ್ರವು ಅಕ್ಷರಗಳಿಮ್ದ ಮೆಲ್ಲಗೆ ನವನೀತದಂತೆ ತೇಲಿ ಬಂದಿತು. “ಹೇಳ್ತೀನಿ ಮಾರಾಯ ಹೇಳ್ತೀನಿ ಅದನ್ಯಾಕೆ ಮುಚ್ಚಿಟ್ಟುಕೊಳ್ಳಲಿ” ಎಂದು ಶುರು ಮಾಡಿತು.
*
*
*
ಆಕೆ ಬಹು ಪತಿವ್ರತಾ ಶಿರೊಮಣಿಯಂತೆ ಉದಾತ್ತಧ್ಯೇಯದ ಹೆಂಗಸಾಗಿರಲಿಲ್ಲ. ಒಂದೇ ಮಾಪಕದಿಂದ ಎಲ್ಲ ಗಂಡಸರನ್ನು ಅಳೆಯುವಂತೆ ನನ್ನನ್ನೂ ಅಳೆದಂಥವಳು ಕಣಪ್ಪಾ… ಆಕೆಯೊಂದಿಗೆ ನನ್ನ ದೈಹಿಕ ಸಂಬಂಧವೇರ್ಪಡಬಹುದು ಅಂತ ನಾನುಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಪರಸ್ತ್ರೀಯರ ವಿಷಯದಲ್ಲಿ ನಾನು ಮಾನಸಿಕವಾಗಿ ಉದ್ರೇಕಗೋಳ್ಳುತ್ತಿದ್ದೆನೇ ಹೊರತು ದೈಹಿಕವಾಗಿ ಸಂಬಂಧವೇರ್ಪಡಿಸಿಕೊಳ್ಳಲು ನಾನೆಂದೂ ಮುನ್ನುಗ್ಗುತ್ತಿರಲಿಲ್ಲ. ಹಾಗೆ ನಾನು ಪ್ರಯತ್ನಪಟ್ಟಿದ್ದಲ್ಲಿ ಮಧುಚಂದ್ರವೆಂಬ ಅಣಕಕ್ಕೆ ಹೆಂಡತಿಯೊಂದಿಗೆ ಶೃಂಗೇರಿಗೆ ಹೋಗಿದ್ದಾಗಲೇ ಮಾಡಬಹುದಿತ್ತು. ತುಂಗೆಯಲ್ಲಿ ಸ್ನಾನ ಮಾಡುವಾಗ ತಿರಮಕೂಡಲು ನರಸೀಪುರದ ಶಾಮಲವರ್ಣದ ಕೋಮಟಿಗರ ಮಹಿಳೆಯೋರ್ವಳು ಕಣ್ಣುಗಳಿಂದ ನನ್ನನ್ನು ಅಟಕಾಯಿಸಿದ್ದಳು, ಹೆಂಡತಿಯ ಉಗ್ರವ್ರತೋಪಾಸನೆಯಿಂದಾಗಿ ನನಗೂ ಆಸೆಯಾಯಿತು ಅಂತಿಟ್ಟುಕೋ… ಮುಂದುವರೆಯುವುದು ಯಾಕೋ ನನ್ನಿಂದ ಸಾಧ್ಯವಾಗಲಿಲ್ಲ. ರುದ್ರನಾಯಕನ ಮಗಳು ಅನಸೂಯಳೊಂದಿಗೆ ಲೈಂಗಿಕ ಮುದ್ರೆಯೊತ್ತಲಿಕ್ಕೆ ನಾನು ಸಾಕಷ್ಟು ಸ್ವತಂತ್ರನಿದ್ದೆ. (ಇಗೋ, ಮತ್ತೊಂದು ವಿಷಯ ಉತ್ತರದ ಕಡೆ ದೀರ್ಘಕಾಲ ಹೋಗಿದ್ದ ರುದ್ರನಾಯಕ ರುದ್ರಾನಂದಾವದೂತನಾಗಿ ಬೆಂಗಳೂರಿಗೆ ಬಂದು ನೆಲೆಸಿ ಐದಾರು ತಿಂಗಳಾಗಿದೆ… ಆತ ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸಿ ಆಳುವ ಮತ್ತು ವಿರೋಧ ಪಕ್ಷದ ಅನೇಕ ಧುರೀಣರ ಗಮನ ಸೆಳೆದಿದ್ದಾನೆ. ಅನೇಕ ಜನ ಸಿನಿಮಾ ನಿರ್ಮಾಪಕರೂ, ನಿರ್ದೇಶಕರೂ; ಜನಪ್ರಿಯ ನಟ ನಟಿಯರೂ ಆತನ ದರ್ಶನಕ್ಕಾಗಿ ಸಾಲು ಸಾಲಾಗಿ ನಿಂತು ಕಾಯುತ್ತಿದ್ದಾರೆ. ಉತ್ತರ ಭಾರತದ ಬನ್ಸಿಲಾಲ್ ಮಿರ್ದಾ, ಮೆಹ್ರಾ, ಗ್ರೋವರ್, ಮೊದಲಾದ ರಾಜಕಾರಣಿಗಳೂ; ಟಾಟಾ, ಬಿರ್ಲಾ, ಮಫತ್ಲಾಲ್ ಮೊದಲಾದ ಕೈಗಾರಿಕೋದ್ಯಮಿಗಳೂ ಆತನ ಪರಮ ಶಿಷ್ಯ ವಲಯದಲ್ಲಿ ಈಗಾಗಲೆ ಸೇರಿರುವರಂತೆ, ಆತನ ಮಂತ್ರದಿಂದಾಗಿಯೇ ರಾಷ್ಟ್ರಪತಿಗಳ ಗಬ್ಬು ಲೋಳೆಯನ್ನು ಸ್ರವಿಸುತ್ತಿದ್ದ ಎಡಗಿವಿ ಸಂಪೂರ್ಣ ಆರೋಗ್ಯವಾಗಿರುವುದಂತೆ, ಫ್ರಾಂಸ್ ದೇಶದಲ್ಲಿ ವಿಶೇಷವಾಗಿ ತಯಾರಿಸಲಾದ ಸೆಂಟ್ ಅನ್ನು ಗುಟ್ಟಾಗಿ ತರಿಸಿ ಅರಳೆಯಲ್ಲದ್ದಿ ಕಿವಿಯಲ್ಲಿಟ್ಟುಕೊಳ್ಳುತ್ತಿದ್ದುದೂ ಅದಾ ಪರಿಮಳದಲ್ಲಾವುದೋ ಮಾಂತ್ರಿಕ ಶಕ್ತಿ ಇರುವುದೆಂದೂ ಅದರೀದಾಗಿಯೇ ಅವರು ಪ್ರಧಾನ ಮಂತ್ರಿಗಳನ್ನೂ ಅವರ ಸಚಿವ ಸಂಪುಟವನ್ನು ಕೇರ್ ಮಾಡುತ್ತಿಲ್ಲವೆಂದೂ ಕೆಲವು ರಾಜಕಾರಿಣಿಗಳು ಪಾರ್ಲಿಮೆಂಟಿನಲ್ಲಿ ಹುಯಿಲೆಬ್ಬಿಸಿದ್ದ ಸುದ್ದಿ ಎಲ್ಲ ಪತ್ರಿಗೆಗಳಲ್ಲಿ ಪ್ರಕಟವಾಗಿತ್ತು. ನೀವು ಗಮನಿಸಿರಬಹುದು. .. ಆ ರಾಷ್ಟ್ರಪತಿಗಳೇ ತಮ್ಮ ಎಡಗಿವಿ ಗುಣವಾದ ಕಾರಣಕ್ಕೆ ಅದೇ ದೆಹಲಿಯ ಕಮಲಾಕಾರದ ಬವಾಯಿ ಧ್ಯಾನ ಮಂದಿರದಲ್ಲಿ ಬೀಡುಬಿಟ್ಟಿದ್ದ ರುದ್ರಾನಂದಾವಧೂತರ ಬಳಿಗೆ ಬಂದು ಪಾದಾಭಿವಂದನೆ ಮಾಡಿದ ಫೋಟೋಗಳನ್ನೂ ಎಲ್ಲ ಪತ್ರಿಕೆಗಳೂ ಪ್ರಕಟಿಸಿದವು. ನೀನು ಗಮನಿಸಿದೆಯೊ! ಇಲ್ಲವೋ! ಈಗ ಆತ ತನ್ನ ನೂರೊಂದು ಮಂದಿ ಸ್ತ್ರೀ ಪುರುಷ ಶಿಷ್ಯರೊಂದಿಗೆ ಕರ್ನಾಟಕಕ್ಕೆ ಬಂದಿರುವುದು ರಾಜ್ಯ ರಾಜಕಾರಣವನ್ನು ಆಮೂಲಾಗ್ರ ಬದಲಾಯಿಸಲಿಕ್ಕೇ ಅಮ್ತ. ದೇವಲೋಕದ ನಂದನವನದಲ್ಲಿ ವಾಸಿಸುವ ದುಂಬಿಗಳೆಲ್ಲವು ಆತನ ಜಿಹ್ವಾಗ್ರದ ಮೇಲೆ ನೆಲೆಸಿರುವವಂತೆ… ಅದಕ್ಕೆ ಆತ ‘ಗುಂಯ್ ಎಂದೊಡನೆ ಪಾಪ, ನರಕ ಎಲ್ಲವೂ ಹೇಳದೆ ಕೇಳದೆ ಓಡಿ ಹೋಗಿ ಭಕ್ತರ ಇಷ್ಟಾರ್ಥಗಳು ಆ ಕ್ಷಣ ಕೈಗೂಡಿ ಬಿಡುವವಂತೆ… ಪರಮ ದೈವಭಕ್ತರೂ, ಸನಾತನ ಪ್ರೇಮಿಗಳೂ ಆದ ಮುಖ್ಯಮಂತ್ರಿಗಳು ಆತಗೆ ಆಶ್ರಮ ನಿರ್ಮಿಸಿಕೊಳ್ಳಲೆಂದು ನೆಲಮಂಗಲದ ಬಳಿ, ರಾಷ್ಟ್ರೀಯ ಹೆದ್ದಾರಿಗಂಟಿಕೊಂಡಂತೆ ಒಂದು ನೂರಾ ಐವತ್ತೆರಡೆಕರೆ ಇಪ್ಪತ್ತೇಳು ಸೆಂಟ್ಸ್ ಜಮೀನು ಮುಂಜೂರು ಮಾಡಿರುವರಲ್ಲದೆ ಸರಕಾರದ ಬೊಕ್ಕಸದಿಂದ ಒಂದು ಕೋಟಿ ಬಿಡುಗಡೆ ಮಾಡಿ ವಿರೋಧ ಪಕ್ಷದವರ ಟೀಕೆಗೆ ಗುರಿಯಾಗಿರುವರಂತೆ. ಕರ್ನಾಟಕದ ಏಳೆಂಟು ಕೋಟಿ ಪ್ರಜೆಗಳ ಕಲ್ಯಾಣೊದ್ಧಾರ ಕಾರ್ಯಕ್ಕಾಗಿ ಶ್ರಮಿಸುತ್ತಿರುವ ರುದ್ರಾನಂದಾವಧೂತರು ಕರ್ನಾಟಕದ ಮಹಾನ್ ಅಲೌಕಿಕ ಆಧ್ಯಾತ್ಮದ ಆಸ್ತಿ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿರುವರಂತೆ. ಹೀಗೆ ಸಂಪಾದಿಸುತ್ತಿರುವ ಹಣವನ್ನು ಆತ ಗುಟ್ಟಾಗಿ ತಮ್ಮ ಮಗಳ ಬಳಿಗೆ ಸಾಗಿಸುತ್ತಿರುವವರಂತೆ. ಅಂತರಾಷ್ಟ್ರೀಯ ಇನ್‌ಸ್ಟ್ಯಾಂಟ್ ಫುಡ್ ತಯಾರಿಕಾ ಸಂಸ್ಥೆಯ ಗೌರವಾಧ್ಯಕ್ಷರಾಗಿರುವ ರಘುರಾಮ ಆಗಾಗ್ಗೆ ಉಪನ್ಯಾಸಕೊಡುವ ನೆಪದಲ್ಲಿ ವಿದೇಶಗಳಿಗೆ ಹಾರುತ್ತ ಆ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಭದ್ರಪಡಿಸುತ್ತಿರುವನಂತೆ. ಮುಂದೊಂದು ದಿನ ಎಕ್ಸಾರ್‌ಸಿಸ್ಟ್‌ಥರದ ಭಯಾನಕ ಇಂಗ್ಲೀಷ್ ಚಿತ್ರವನ್ನು ಕೊಪ್ಪೆಲಾ ಎಂಬುವವನ ನಿರ್ದೇಶನದಲ್ಲಿ ತೆಗೆಯಬೇಕೆಂದು ಪೂರ್ವಸಿದ್ಧತೆ ನಡೆಸಿರುವನಂತೆ. ಇದು ನಿಜ… ಬೇಕಾದರೆ ನೀನು ಹೋಗಿ ನೋಡಿ ಸತ್ಯಾಸತ್ಯಗಳನ್ನು ತಿಳಿದುಕೊಳ್ಳಬಹುದು) ಆದರೆ ಆಕೆ ನನ್ನನ್ನು ತನ್ನ ಹೃದಯದಲ್ಲಿ ಉದಾತ್ತ ಪ್ರೇಮಿಯ ಸ್ಥಾನದಲ್ಲಿರಿಸಿದ್ದಳೋ, ಕಾಮಾತುರನ ಸ್ಥಾನದಲ್ಲಿರಿಸಿದ್ದಳೋ, ಸೊದರ ಸ್ಥಾನದಲ್ಲಿರಿಸಿದ್ದಳೋ, ನನಗೊಂದೂ ಅರ್ಥವಾಗದೆ ಹತ್ತಿರವಿದ್ದರೂ ಬಹುದೂರ ಉಳಿದುಬಿಟ್ಟೆ. ಇನ್ನು ಜಲಜಾಕ್ಷಿ ತನ್ನ ರಫ್‌ನೆಸ್ ನಡುವಳಿಯಿಂದಾಗಿ ನನ್ನಲ್ಲಿ ಲೈಂಗಿಕಾಸಕ್ತಿ ಹುಟ್ಟಿಸಲೇ ಇಲ್ಲ. ನನಗೆ ಮೊದಲಿಂದಲೂ ಬಾಡಿಬಿಲ್ಡರ್ಸ್‌ಗಳೆಂದರೆ ಎಲ್ಲಿಲ್ಲದ ಹೆದರಿಕೆ. ಇನ್ನು ನನಗೆ ಮುಂದೆಂದೂ ಯಾವ ಸ್ತ್ರೀಯೊಂದಿಗೂ ಲೈಂಗಿಕ ಸಂಪರ್ಕವಿಟ್ಟುಕೊಳ್ಳಳು ಸಾಧ್ಯವಗಲೇ ಇಲ್ಲ. ಇದಕ್ಕೆ ಪ್ರಮುಖ ಕಾರಣವನು ನಿನ್ನ ಕಿವಿಯಲ್ಲಿ ಪಿಸುಗುಟ್ಟುತ್ತಿದ್ದೇನೆ. ಕೇಳಿಸಿಕೋ… ನನ್ನ ಶಿಶ್ನ ತುಂಬ ಚಿಕ್ಕದು. ಬಾಕಿ ಟೈಂನಲ್ಲಿ ಎರೆಕ್ಟಾಗಿರ್ತದೆ. ಆದರೆ ಹೆಂಗಸರು ಲೈಂಗಿಕವಾಗಿ ಇಷ್ಟ ಪಡುತ್ತಾರೆ ಎನ್ನು ಕ್ಷಣದಲ್ಲಿ ಇದ್ದಕ್ಕಿದ್ದಂತೆ ಮುದುಡಿಕೊಂಡು ಬಿಡುತ್ತದೆ. ಈಡಿಪಸ್ ಕಾಂಪ್ಲೆಕ್ಸ್ ಅಂತೀಯೋ ಸುಡುಗಾಡಂತೀಯೋ… ನಂಗೊತ್ತಿಲ್ಲಪ್ಪಾ… ನನ್ನ ನೀನು ತಾಯಿಗ್ಗಂಡ ಎಂದು ಬೈದರೂ ಸರುಯೇ.. ಹೇಳಿ ಬಿಡ್ತಿದೀನಿ. ನನ್ನ ತಾಯಿ ನನ್ನ ಕೈಯಿಂದ ಬೆನ್ನುಜ್ಜುತ್ತಿದ್ದಳು… ಆಕೆಯ ಬೆನ್ನು ಆಕರ್ಷಕವಾಗಿತ್ತು. ಸ್ಪರ್ಷದ ಮೂಲಕ ನನ್ನಲ್ಲಿ ರೋಮಾಂಚನದ ತರಂಗಗಳನ್ನು ಹರಡಿಸುತ್ತಿದ್ದಳು. ಒಮ್ಮೊಮ್ಮೆ ಆಕೆ ನನ್ನನ್ನು ತನ್ನ ಬೆನ್ನುಜ್ಜಲು ಕರೆಯದಿದ್ದಾಗ ನನಗೆ ಅಳುವೇ ಬಂದು ಬಿಡುತ್ತಿತ್ತು. ಆಕೆಯ ಬೆನ್ನು ಉಜ್ಜುವುದು ಕೂಡ ನನ್ನ ಪಾಲಿಗೆ ಹಸ್ತ ಮೈಥುನ ಜಾತಿಯ ಮತ್ತೊಂದು ಕ್ರಿಯೆಯಾಗಿತ್ತು. ಯಾಕೆಂದರೆ ನನ್ನ ಅರಿವಿಗೆ, ಕೈಗೆ ಎಟುಕುತ್ತಿದ್ದ ತಾಯಿ ಮಾತ್ರ ಏಕ ಮಾತ್ರ ಮಹಿಳೆಯಾಗಿದ್ದಳು. ಮತ್ತೊಂದು ವಿಷಯವೆಂದರೆ ಚಿಕ್ಕ ಗಾತ್ರದ ಶಿಶ್ನವನ್ನು ಯಾರಾದರೂ ನೋಡಿ ಅಪಹಾಸ್ಯ ಮಾಡಿಯಾರೆಂಬ ಅಳುಕು ನನ್ನನ್ನು ಕಾಡುತ್ತಿತ್ತು. ಗುದದ್ವಾರವೂ ಚಿಕ್ಕದಿತ್ತು. ಆದ್ದರಿಂದ ಘನಪದಾರ್ಥ ತಿನ್ನಲು ಹಿಂಜರಿಯುತ್ತಿದ್ದೆನು. ಹಾಗೆಯೇ ಶಿಶ್ನದ ದ್ವಾರಕೂಡ… ಮಲ ಮೂತ್ರ ವಿಸರ್ಗಿಸುವಾಗ ಸಾಕಷ್ಟು ತಿಣುಕುತ್ತಿದ್ದುದು ಅನಿವಾರ್ಯವಾಗಿತ್ತು. ಆದ್ದರಿಂದ ನಾನು ಯಾರೊಂದಿಗೂ ಶೌಚಕಾರ್ಯಕ್ಕೆ ಹೊಗುತ್ತಿರಲಿಲ್ಲ. ಒಂಟಿಯಾಗಿ ಬಹುದೂರ ಹೋಗಿ ಸುತ್ತಮುತ ಯಾವ ನರಹುಳುವಿಲ್ಲದಿರುವುದನ್ನು ಖಚಿತಪಡಿಸಿಕೊಂಡು ಪೊದೆಗಳ ನಡುವೆ ಕುತು ಮುಗಿಸುತ್ತಿದ್ದೆ. ಇಷ್ಟೊಂದು ಸಂಕೋಚದಿಂದ ಮುದುಡಿ ಹೋಗುತ್ತಿದ್ದ ನಾನು ಪ್ರೇಮ ಮದುವೆ ಎಂದರೆ ಹೆದರುತ್ತಿದ್ದೆ. ಮದುವೆಯ ನಂತರ ಒಂದು ದಿನ ‘ಸೌಂದರ್ಯ ಲಹರಿ’ ಯ ಪಠಣದಿಂದ ಉದ್ರೇಕಗೊಂಡು ನನ್ನನ್ನು ಅಂಗಾತಮಲಗಿಸಿ ತುಂಬ ಹೊತ್ತಿನ ತನಕ ನನ್ನ ಶಿಶ್ನದೊಂದಿಗೆ ಬಗೆ ಬಗೆಯ ಆಟ ಆಡಿದಳು… ಅದಕ್ಕೊಂದು ವ್ಯಕ್ತಿತ್ವ ಸೃಷ್ಟಿಸಿದಳು. ಸಂಕೋಚ ಭಯ, ಆತಂಕ ದೂರ ಮಾಡಿದಳು… ಅತ್ಯತಿದ್ದಷ್ಟದಶಾಂಗುಲಂ… ಎಂದು ಮುಂತಾಗಿ ಪುರುಷಸೂಕ್ತ ಜಪಿಸುತ್ತ ಅದೇ ನಾನಾಗಿದ್ದೆ…. ಕ್ರಮೇಣ ಪ್ರವೇಶಿಸಿದಳು… ದೇದಿಪ್ಯಮಾನವಾಗಿ ಹೊಳೆದ ಗರ್ಭಗುಡಿಯನ್ನು ನೂರೆಂಟು ವಾದ್ಯನಿನಾದಗಳೊಂದಿಗೆ ಉತ್ಸವ ಮೂರ್ತಿ ತುಂಬುತ್ತಿರುವಂಥ ಅನುಭವವಾಯಿತು. ಅದೊಂದು ನಿರ್ವಚನೀಯ ಆನಂದವಾಗಿತ್ತು… ಅಂಥ ಆನಂದ ನೀಡಿದ ದಿವ್ಯ ಮಹಿಳಾಮೂರ್ತಿಯಾದ ವರಲಕ್ಷ್ಮಿ ನನ್ನ ಪಾಲಿಗೆ ಆರಾಧ್ಯದೈವವಾದಳು. ಆ ದೈವ ಪ್ರವೇಶಕ್ಕೆ ನಿಯೋಗ ಸೂತ್ರಗಳ ಆಧಾರದಿಂದ ನಿರಾಕರಿಸಿದಾಗ ನಾನು ಕನಲುತ್ತಿದ್ದೆ… ಅಂಗಲಾಚುತ್ತಿದ್ದೆ… ದೈಹಿಕ ಸ್ಪಂದನ, ಸ್ಪರ್ಷ; ಆಕ್ರಂದನಗಳಿಗಾಗಿ ಮೊರೆ ಇಡುತ್ತಿದ್ದೆ… ಆಯುರ್ವೇದದ ಬ್ರಹ್ಮಚಾರಿತ್ರ್ಯದ ಶ್ಲೋಕ ಸೃಂಖಲೆಯಿಂದ ಬಂಧಿತಳಾಗಿದ್ದ ಆಕೆ ನಿಯಮಿತ ಮತ್ತು ವಂಶೋದ್ಧಾರಕ್ಕೆ ಮಾತ್ರ ಸಂಭೋಗವೆಂಬ ಪವಿತ್ರ ಕಾರ್ಯವನ್ನು ಕೈಗೊಳ್ಳಬೇಕೆಂದು ಕಟ್ಟುನಿಟ್ಟಾಗಿ ಸಲಹೆ ನೀಡುತ್ತಿದ್ದಳು. ತಾನು ಅದರಂತೆ ಪಾಲಿಸುತ್ತಿದ್ದಳು… ಇಂಥದೊಂದು ಕೌಟುಂಬಿಕ ವಲಯದಲ್ಲಿ ಸಿಲುಕಿಕೊಂಡಿದ್ದ ನಾನು ಕಚ್ಚೆಹರುಕನಾಗಲು ಹೇಗೆ ಸಾಧ್ಯ? ನೀನೆ ಊಹಿಸು… ನನ್ನ ತಳಮಳ, ದುಗುಡ, ಮೌನಾಕ್ರಂದಗಳನ್ನು…

ಹೌದು ನೀನು ನನ್ನ ಮಾತೃತ್ವದ ಸಾಯುಜ್ಯವನ್ನು ಊಹಿಸಿರುವುದು ಸರಿಯಾಗಿದೆ. ಅದುವರೆಗೆ ತಾಯಿಯೋರ್ವಳ ಮಗನಾಗಿದ್ದ ನಾನು; ಹೆಂಡತಿಯೋರ್ವಳ ಗಂಡನಾಗಿದ್ದ ನಾನು ಕೆಲವು ತಿಂಗಳಲ್ಲಿ ತಂದೆಯಾಗಲಿರುವನೆಂದು ಡಾಕ್ಟರ್ ಶೋಭಾ ತಿಳಿಸಿದಾಗ ಆದ ಆನಂದ ಅಷ್ಟಿಷ್ಟಲ್ಲ… ಆ ಅನಂದವನ್ನು ಹೇಗೆ ಪ್ರಕಟಿಸಬೇಕೆಂದು ನನಗೆ ತಿಳಿಯಲಿಲ್ಲ. ತಾಯ್ತನವೆಂಬುದು ಸೃಷ್ಟಿಶೀಲ ಕಾವ್ಯಕ್ರಿಯೆ ಎಂಬುದು ನನಗೆ ಹೊಳೆಯಲಿಲ್ಲ… ನನ್ನ ಹೆಂಡತಿ ನನ್ನನ್ನು ಮೀರಿ ಬೆಳೆಯುತ್ತಿರುವಳೆಂದುಕೊಂಡೆ… ನನ್ನನ್ನು ಶಿಕ್ಷಿಸುವ, ಪ್ರೀತಿಸುವ, ಸಂಸಾರಿಕ ವ್ಯವಸ್ಥೆಯ ವರ್ಣರಂಜಿತ ಗೋಪುರಕ್ಕೆ ನವರತ್ನ ಖಜಿತ ಕಳಸವೊಂದು ಭ್ರೂಣದ ರೂಪದಲ್ಲಿ ಆಕೆಯ ಗರ್ಭದಲ್ಲಡಗಿ ಕೂತಿದೆ ಎಂದುಕೊಂಡೆ… ಅದು ವೇಗವಾಗಿ ಬೆಳೆದು ಆಕ್ರಮಿಸುತ್ತಿರುವುದೆಂದು ಕೊಂಡೆ. ಹಿತ್ತಲ ದಾಸವಾಳ ಗಿಡದಡಿ ನೆರಳಲ್ಲಿ ಮೆತ್ತನೆಯ ಕುರ್ಚಿ ಮೇಲೆ ಆಕೆಯನ್ನು ಕೂಡ್ರಿಸಿ ಆಕೆಯ ಪುರಾಣ ಸದೃಶ, ಪವಾಡ ಸದೃಶವಾದ ಕಿಪ್ಪೊಟ್ಟೆಯನ್ನು ನೋಡುತ್ತಾ, ಆನಂದಿಸುತ್ತ, ಪುಳಕಗೋಳ್ಳುತ್ತ ಕ್ಷಣಗಳನ್ನು ಎಣಿಸುತ್ತ ಹೋಗಿ ಇನ್ನೂರಾ ಎಂಬತ್ತೆಂಟನೇ ದಿನವನ್ನು ತಲುಪಬೇಕೆಂದುಕೊಂಡೆ. ಆದರೆ ವರಲಕ್ಷ್ಮಿ ನನ್ನ ಕಾವ್ಯಮಯ ಆಲೋಚನೆಯನ್ನು ಪರಸ್ಕರಿಸಲಿಲ್ಲ… ಅನಾಗರೀಕ, ಆದಿವಾಸಿ ಕಲ್ಪನೆ ಎಂದು ದೂರುತ್ತಿದ್ದಳು. ತಾನು ಧರಿಸಿರುವ ಗರ್ಭ ತನ್ನ ಸ್ವಾರ್ಜಿತವೆಂದು ಭಾವಿಸಿದ್ದಳೊ ಏನೋ! ತನ್ನ ಗರ್ಭಸ್ಥ ಮಗು ಹೆಚ್ಚು ಸಾತ್ವಿಕಗಳನ್ನು ರೂಢಿಸಿಕೊಳ್ಳಲೆಂದೋ ಪರಮ ದೈವೀಭೀರುವಾಗಲೆಂದೋ… ಆಕೆ ಪ್ರತಿನಿತ್ಯ ಪವಿತ್ರ ಧಾರ್ಮಿಕ ಗ್ರಮ್ಥಗಳ ಪಠಣ ಮಾಡುತ್ತಿದ್ದಳು… ಆಯಾ ದಿನಕ್ಕೆ ಸಂಬಂಧಿಸಿದ; ಆಯಾ ತಿಥಿಗಳಿಗೆ ಸಂಬಂಧಿಸಿದ; ಆಯಾ ನಕ್ಷತ್ರಗಳಿಗೆ ಸಂಬಂಧಿಸಿದ; ಆಯಾ ದಿನದ ವಾರಸುದಾರರಾದ ದೇವತೆಗಳಿಗೆ ಸಂಬಂಧಿಸಿದಂತೆ ವ್ರತೋಪಾಸನೆ ಮಾಡುತ್ತಿದ್ದಳು…

ಆ ವ್ರತೋಪಾಸನೆಗಳಿಗೆ ಪರಿಕರಗಳನ್ನು ಒದಗಿಸುವುದು ನನ್ನ ದಿನಚರಿಯ ಪ್ರಮುಖ ಅಂಶವಾಗಿತ್ತು. ಅವನ್ನೆಲ್ಲ ಶ್ರದ್ಧೆಯಿಂದ ಪ್ರೀತಿಯಿಂದ ತಂದು ಕೊಡುತ್ತಿದ್ದೆ. ತುಂಬೆ ಹೂವು, ಗರಿಕೆ; ಬಿಲ್ವ ಪತ್ರೆಗಾಗಿ ನಾನು ಕೊತ್ತಲಗಿಯ ಆಜು ಬಾಜಿನಲ್ಲಿದ್ದ ಕುರುಚಲ ಕಾಡಿನಲ್ಲಿ ಅಲೆದಾಡುತ್ತಿದ್ದೆ… ಹಾಗೆ ಅಲೆದಾಡುವ ಸಂದರ್ಭದಲ್ಲಿ ಕೆಲವು ರೈತಾಪಿ ಮಹಿಳೆಯರು ಕಟ್ಟಿಗೆ ಹುಲ್ಲಿನ ಹೊರೆಯನ್ನು ಹೊತ್ತು ಎದುರಾಗುತ್ತಿದ್ದರು. ಅವರ ಸುಂದರ ನಿತಂಬಗಳನ್ನು ಮರೆಯಾಗುವವರೆಗೂ ನೋಡಿ ಸಂತೋಷಪಡುತ್ತಿದ್ದೆ; ಉದ್ರೇಕಗೊಳ್ಳುತ್ತಿದ್ದೆ. ಲೈಂಗಿಕ ಸಾಮರಸ್ಯಕ್ಕೆ ಪೂರ್ಣ ವಿರಾಮ ಜಾರಿಕೊಂಡಿದ್ದ ನಾನು ನನ್ನ ಹವ್ಯಾಸಗಳಾದ ಚಿತ್ರಕಲೆ, ಸಂಗೀತ, ಸಾಹಿತ್ಯದ ಕಡೆ ಹೆಚ್ಚು ಗಮನಹರಿಸಿದೆ… ಕಲಾಪ್ರಕಾರಗಳಿಗೂ ಲೈಂಗಿಕ ಚಟುವಟಿಕೆಗಳಿಗೂ ನಡುವೆ ಗಹನ ವ್ಯತ್ಯಾಸವಿಲ್ಲವೆಂದು ನನ್ನ ಭಾವನೆ… ‘ಶಾಶಾ’ ಎಂಬ ಹೆಸರಿಟ್ಟುಕೊಂಡು ಬರೆದ ವ್ಯಂಗಚಿತ್ರಗಳು ಸಾಕಹ್ಟು ಪತ್ರಿಗೆಗಳಲ್ಲಿ ಪ್ರಕಟಗೊಂಡವು. ವೃಷಭೇಂದ್ರಾಚಾರ್ ತನ್ನ ಮೆಚ್ಚಿನ ಶಿಷ್ಯೆ ರಾಗಿಣಿಯೊಂದಿಗೆ ತಮಿಳುನಾಡಿನ ಧರ್ಮಪುರಿಗೆ ಓಡಿಹೋಗಿದ್ದರಿಂದ ಬಿಕೋ ಎನ್ನುತ್ತಿದ್ದ ಗಂಡನ ಹಾರ್ಮೋನಿಯಮ್ಮನ್ನು ಆತನ ಹೆಂಡತಿ ಸರಸತಮ್ಮ ವಾರದ ಉದರಭರನಕ್ಕಾಗಿ ನನಗೆ ಕಡಿಮೆ ಬೆಲೆಗೆ ಮಾರಿದ್ದಳು… ಅದನ್ನು ವಿರಾಮದ ಸಮಯದಲ್ಲಿ ಎದುರಿಗಿಟ್ಟುಕೊಂಡು ನುಡಿಸುತ್ತಿದ್ದೆ. ಸಣ್ಣ ದ್ವನಿಯಲ್ಲಿ ಹಾಡುತ್ತಿದ್ದೆ. ಶಂಕರಾಭರಣರಾಗವೊಂದನ್ನು ಹೊರತುಪಡಿಸಿ ಮಿಕ್ಕ ರಾಗಗಳನ್ನು ನುಡಿಸುತ್ತಿದ್ದೆ (ಎಲವೋ… ಮುಂದೆ ಎಂದಾದರು ಶಂಕರಾಭರಣರಾಗದ ಆ ದಿಕ್ಷಿತರ ಕೃತಿಯನ್ನು ನೀನು ಹಾಡಿದಿ ಎಂದರೆ ನಿನ್ನ ನಾಲಿಗೆ ತುಕ್ಕು ಹಿಡಿಯುತ್ತದೆ… ಅಂಗವಿಕಲ ಬುದ್ಧಿಗೇಡಿ ಮಕ್ಕಳಿಗೆ ತಂದೆಯಾಗಿ ಪಡಬಾರದ ನೋವು ಅನುಭವಿಸುವಿ ಹುಷಾರ್… ಪೂಜ್ಯರಾದ ಶಾಸ್ರಿಗಳ ಆಜ್ಞೆಯನ್ನು ಉಲ್ಲಂಘಿಸುವುದುಂಟೇನು?). ಅಕ್ಕ ಪಕ್ಕದ ಮನೆಯವರು ಗುಟ್ಟಾಗಿ ಕೇಳಿ ಸಂತೋಷ ಪಡುತ್ತಿದ್ದರು… ಬುಧವಾರಪೇಟೆಯ ಕೊನೆ ಮನೆಗೆ ಬಂದು ಹೋಗುತ್ತಿದ್ದ ನಿವೃತ್ತ ಕನ್ನಡ ಪಂಡಿತರಾದ ನಾಗಭೂಶಣ ಶರ್ಮರು ಲಯದಗುಂಟ ಬಳಿಗೆ ಬಂದು ‘ದುರ್ಗದ ಭೈರವಿ ವೆಂಕಟ ಸುಬ್ಬಯ್ಯ ನವರೇ ನೀನಾಗಿ ಹುಟ್ಟಿರುವಿಯಪ್ಪಾ ’ ಎಂದು ಮೆಚ್ಚಿಗೆಯಿಂದ ಉದ್ಗರಿಸಿ ಹೋದರು… ಇದಾವುದೋ ಪಾತರದವರ ಮನೆ ಎಂದು ಪರಸ್ಥಳದವರು ಬಂದು ನಿಜ ತಿಳಿದುಕೊಂಡು ಹೋದ ಉದಾಹರಣೆಗಳು ಉಂಟು.

ಇನ್ನು ಸಾಹಿತ್ಯ ಅಂದರೆ ಚೌಪದಿ, ಚೌಪದಿ ಅಂದರೆ ಸಾಹಿತ್ಯ ಅಂತ ತಿಳಿದುಕೊಂಡಿದ್ದೆ. ಹಡಗಲಿಯ ತೋಟದ ಮನೆಯಲ್ಲಿ ಜೋತಿಷಿಯ ರೂಪ ಧರಿಸಿ ಅಡಗಿಕೊಂಡಿದ್ದ ಆಂಧ್ರದ ನಕ್ಸಲೀಯ ವೇಣುಗೂ, ಪೋಲೀಸರಿಗೂ ನಡೆದ ಎನ್‌ಕೌಂಟರ್‍ನಲ್ಲಿ ಪ್ರಾಣಾರ್ಪಣೆ ಮಾಡಿದ್ದ ನರಸಪ್ಪ ಎಂಬ ಪಿಸೀಯ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದ ಕಾಮ್ರೇಡ್ ಪಶುಪತಿಯ ಭೂಗತ ಕೈ ಬರಹದ ಪತ್ರಿಕೆಗೆ ಆಗೊಮ್ಮೆ ಈಗೊಮ್ಮೆ ‘ಚೂರಿ’ ಗುಪ್ತನಾಮ ಇಟ್ತುಕೊಂಡು ಸರಕಾರದ ಬಗ್ಗೆ ಖಾರವಾದ ಲೆಖನಗಳನ್ನು ಬರೆಯುತ್ತಿದ್ದೆ. ಜೊತೆಗೆ ಮನ್ಮಥ ಎಂಬ ಹೆಸರಿನಲ್ಲಿ ಜನಪ್ರಿಯ ಲೈಂಗಿಕ ಪತ್ರಿಕೆಗೆ ವೈವಿಧ್ಯಮಯ ಸಂಭೋಗ ಕುರಿತು ಲೇಖನಗಳನ್ನು ಬರೆಯುತ್ತಿದ್ದೆ. ವಿಪ್ರ ಎಂಬ ಹೆಸರಿನಿಂದ ಧರ್ಮವಾಣಿ, ವಿಕ್ರಮ, ಮೊದಲಾದ ಧಾರ್ಮಿಕ, ಬಲಪಂಥೀಯ ಪತ್ರಿಕೆಗಳಿಗೂ ಬರೆಯುತ್ತಿದ್ದೆನು. ಆದರೆ ನಿಜನಾಮದಿಂದ ಮಾತ್ರ ಬರೆಯುತ್ತಿರಲಿಲ್ಲ… ಇಷ್ಟು ಮಾಡಿಯೂ ಇರುತ್ತಿದ್ದ ಬಿಡುವಿನ ಸಮಯವನ್ನು ಗುಮುಸಿಗೌಡ, ಪಶುಪತಿಯರೊಂದಿಗೆ ( ಬ್ರಾಹ್ನಣರಾಗಿದ್ದೂ ಯೌವನದಲ್ಲಿ ಕುಸ್ತಿ ದೇಹದಾರ್‍ಧ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಂಗ್ಲಾಧಿಕಾರಿಗಳಿಂದ ಪೈಲ್ವಾನಾಚಾರ್ಯರೆಂದು ಕರೆಸಿಕೊಂಡಂಥವರು) ಅಲೌಕಿಕ ಆಧ್ಯಾತ್ಮಿಕವಾಗಿಯೂ; ಓಬಳೇಶ, ಮಾರುತಿ, ಅಂಜಿನಿ, ಕೊಟ್ರರೇ ಮೊದಲಾದ ಅರಿಷಡ್ವರ್ಗಗಳೊಂದಿಗೆ ಲೌಕಿಕವಾಗಿಯೂ; ( ಈ ಸಂಧರ್ಭದಲ್ಲಿಯೇ ತನ್ನ ಚತುರ್ಭಾಷಾ ಪಾಂದಿತ್ಯದೊಂದಿಗೆ ರಾಖೇಶ ಎಂಬ ಪ್ರಸಿದ್ಧ ಪಿಂಪ್ ಚಕ್ರವರ್ತಿಯ ಪರಿಚಯವಾದದ್ದು) ಹೆಬ್ರಿ, ಇಸ್ಮಾಯಿಲ ಚಂಬಸ್ಯಯ್ಯ, (ಶ್ರೀಮತಿ ಶಾಂತಿ ತನ್ನ ಗಲ್ಫ್ ಪತಿಯೊಂದಿಗೆ ಹನಿಮೂನಿಗೆಂದು ಕೆಮ್ಮಣ್ಣು ಗುಂಡಿಗೆ ಹೋಗಿ ಅಲ್ಲಿಯೇ ಮೊಕ್ಕಂ ಮಾಡಿರುವಳು)ರೊಂದಿಗೆ ನವುಕರಿಕವಾಗಿಯೂ ಕಳೆಯುತ್ತಿದ್ದೆನು. ಒಂದು ವಿಚಿತ್ರವೆಂದರೆ ಗೌಡ, ಪಶುಪತಿಗಳಂಥ ಕಾಮ್ರೇಡರೊಂದಿಗೆ ಮಾತಾಡುವಾಗ ಯಾರು ಯಾರ್‍ಯಾರ ಜೊತೆ, ಯಾವ ಯಾವ ವಿವಿಧ ಲೈಂಗಿಕ ಚಟುವಟಿಕೆ ಆರಂಭಿಸಿದರು ಎಂಬುದು ಚರ್ಚನೀಯವಾಗಿರುತ್ತಿತ್ತು. ಪೈಲ್ವಾನಾಚಾರ್ಯರಿಗಿಂತ, ಶರ್ಮರು ಕುಮಾರವ್ಯಾಸ, ಲಕ್ಷ್ಮೀಶನ ಕಾಲದಲ್ಲಿದ್ದ ಪೈಲ್ವಾನರಿಗೆ ಒತ್ತುಕೊಟ್ಟು ಮಾತಾಡುತ್ತಿದ್ದರು. ಓಬಳೇಶ, ಮಾರುತಿ ಮೊದಲಾದವರು ನಶ್ವರ ಜಗತ್ತಿನ ಬಗ್ಗೆ ಮಾತಾಡುತಿದ್ದರೆ ಹೆಬ್ರಿ ಮತ್ತು ಸಂಗಡಿಗರು ಕೆಮ್ಮಣ್ಣು ಗುಂಡಿಯಂಥ ನಿಸರ್ಗ ಧಾಮದಲ್ಲಿ ತಮ್ಮ ಕೊಲಿಗ್ಗು ಶಾಮ್ತಿಯ ಲೈಂಗಿಕ ಚಟುವಟಿಕೆಯನ್ನು ಊಹಿಸಿ ಮಾತಾಡುತ್ತಿದ್ದರು. ಅದಾ ಸೊಬಗಿನಿಂದ ಪರಿಚಿತಗೊಂಡಿದ್ದ ನಾನು ಎರೋಟಿಕ್ ಮಾತುಗಳನ್ನು ಕೇಳಿ ಆನಂದಿಸುತ್ತಿದ್ದೆ ಮತ್ತು ಗುಪ್ತ ರೀತಿಯಲ್ಲಿ ವಿವಾಹಿತನಾಗಿದ್ದೂ ವಾರಕ್ಕೊಂದೆರಡು ಬಾರಿ ಹಸ್ತ ಮೈಥುನ ಮಾಡಿ ಸುಖ ಪಡುತ್ತಿದ್ದೆನು. ಮಾನಸಿಕವಾಗಿ ಈ ಅವ್ಯವಸ್ಥೆಯಲ್ಲಿದ್ದ ನಾನು ತೋರಿಕೆಗೆ ಮಹಾ ಸೆಕ್ಸೀ ಎಂಬಂತೆ ಕೊಚ್ಚಿಕೊಳ್ಳುತ್ತಿದ್ದೆನು. ಹಾಗೆ ವರ್ತಿಸುತ್ತಿದ್ದೆನು.

ಅಷ್ಟೊತ್ತಿಗಾಗಲೆ ನಾನು ಸದರಿ ಗ್ರಾಮದ ಹಲವು ಪ್ರತಿಭೆಗಳ ತ್ರಿವೇಣಿ ಸಂಗಮ ಎಂದೇ ಹೆಸರಾಗಿ ಬಿಟ್ತಿದ್ದೇ. “ರ್ರೀ… ಅಲ್ಲಿ ಹೊಗ್ತಿದ್ದಾರಲ್ಲ… ಹನುಮಂತೇವ್ರು ಅರ್ಚಕರಿಗೆ ಪ್ಯಾಂಟು ತೊಡಿಸಿದ್ರೆ ಹೇಗಿರುತ್ತೋ ಹಾಗಿದಾರಲ್ಲ ಅವ್ರೆ ಕಣ್ರೀ… ಅವ್ರು ಎಷ್ಟು ಚಂದ ಚಿತ್ರ ಬರೀತಾರೆ ಗೊತ್ತಾ? ಯಾರಾದ್ರು ನೋಡಿದ್ರೆ ಅವ್ರಂಗೆ ಚಿತ್ರ ಬಿಡಿಸಿ ಬಿಡ್ತಾರೆ ನೋಡ್ರಿ” ಎಂದು ಗೃಹಿಣಿಯೋರ್ವಳು ತನ್ನ ಗಂಡಗೆ ಹೇಳಿಕೊಳ್ಳುತ್ತಿರುವುದು ಕಿವಿಗೆ ಬಿತ್ತು. ಅವ್ರು ಚಿತ್ರ ಬರಿತಾರಂತ ನಿನಗೆ ಹೇಗೆ ಗೊತ್ತಾಯ್ತು ಕಣೆ… ಅವ್ರು ಬ್ಯಾಂಕ್ನಲ್ಲಿ ಕೆಲ್ಸ ಮಾಡ್ತಿರೋದು ನಂಗೊತ್ತಿಲ್ಲಂದ್ಕೊಂಡೀ ಏನು” ಎಂದು ಆಕೆಯ ಗಂಡ ಸಿಡುಕುತ್ತಿರುವುದನ್ನೂ ಗಮನಿಸದೇ ಇರಲಿಲ್ಲ.

ಹೀಗೆ ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಕೂಡ… ಲಲಿತಲವಂಗ ಲತಾಪರಿಶೀಲನ… ಎಂಬ ಜಯದೇವನ ಸಾಲುಗಳನ್ನು ಸಣ್ಣಗೆ ಗೊಣಗುತ್ತಿದ್ದುದನ್ನು ಕೇಳಿಸಿಕೊಂಡ ಎಂಥವರಿಗೂ ಈತಗೆ ಹಾಡಲಿಕ್ಕೆ ಬರ್‍ತದೆಂದು ಗೊತ್ತಾಗುತ್ತಿತ್ತು. ಅದು ಇದು ಓದಿದವರಿಗೆ ಗಮನಿಸಿದವರು ಇವನಿಗೆ ಬರೆಯೋ ಐಲು ಬೇರೆ ಇದೆ ಎಂದು ತಮಾಷೆ ಮಾಡದೆ ಇರುತ್ತಿರಲಿಲ್ಲ ಪರಸ್ಪರ. ಆದರೆ ಬ್ಯಾಂಕಿನಲ್ಲಿ ನಮ್ಮ ಕೊಲಿಗ್ಸು ಮಾತ್ರ… ತಮಗೆ ಗೊತ್ತಿಲ್ಲದ್ದು ಇವನಿಗೇನು ಗೊತ್ತೈತೆ… ಇವ್ನೇನು ಮಹಾ… ಗುಮ್ಮನಸುಗ, ಹೋಂಸಿಕ್ಕೂ ಇತ್ಯಾದಿ ಲೇಬಲ್ಲುಗಳನ್ನು ಒಳಗೊಳಗೆ ಅಂಟಿಸಿ ಹೊರಗಡೆ ಮಾತ್ರ “ಏನು ಶಾಸ್ತ್ರಿ… ನೀನು ಚಿತ್ರ ಬಿಡಿಸ್ತೀಯಂತೆ, ನೀನು ಪದ ಹಾಡ್ತೀಯಂತೆ, ನೀನು ಜೂನಿಯರ್ ಕುವೆಂಪು ಅಂತೆ” ಇತ್ಯಾದಿ ಲೇವಡಿ ಮಾಡುತ್ತಿದ್ದರು. ನಾನು ಅವರೆದುರಿಗೆ ಪ್ರತಿಭೆ ಪ್ರಕಟಿಸುವ ಗೋಜಿಗೆ ಹೊಗುತ್ತಿರಲಿಲ್ಲ. ಈ ಒಳಗಾಗಿ ಅವರು ಮೂವ್ವರು ಪರಸ್ಪರ ಸಂಚು ನಡೆಸಿ ಒಲೆಯ ಮೂರು ಗುಂಡುಗಳಂತೆ ಹಲ್ಲು ಕಡಿಯುತ್ತ ಇದ್ದು ಬಿಟ್ಟಿದ್ದರು. ಅದೊಂದು ನಮೂನಿ ಮಾನಸಿಕವಾಗಿ ಮರಣಾಂತಿಕ ಹಲ್ಲೆಯ ಕ್ರಮವೆನ್ನಬಹುದೇನೋ. ಬ್ಯಾಂಕಿನೊಳಗಡೆ ಸೋದರ ವಾತ್ಸಲ್ಯದ ಮೂರು ಟೊಂಗೆಗಳೇ ತಾವೆಂಬಂತೆ ಪೋಜುಕೊಡುತ್ತಿದ್ದ ಅವರು ಎಂಟೀ ಮೀಲ್ಸ್ ಬಾಕ್ಸ್‌ಗಳೊಡನೆ ಬ್ಯಾಂಕು ದಾಟುತ್ತಲೆ ಬಣ್ಣಬದಲಾಯಿಸಿಕೊಂಡು ಬಿಡುತ್ತಿದ್ದರು. ನನ್ನನ್ನು ಜಾತಿವಾದಿ, ಕರ್ಮಠ ಬ್ರಾಹ್ಮಣ, ಮಹಾಸಂಪ್ರದಾಯವಾದಿ ಎಂದು ಬರೆಯುತ್ತಿದ್ದ ಅವರು ಅದೆಂಥ ಕ್ರಿಯಾ ಸ್ವಭಾವ ಉಳ್ಳವರಾಗಿದ್ದರೆಂದರೆ ಹೇಳುತ್ತೇನೆ ಕೇಳು –

ಚಂಬಸ್ಯಯ್ಯ ಪಂಚಮ ಶೀಲ ಲಿಂಗಾಯತರನ್ನು ಜೊತೆ ಮಾಡಿಕೊಂಡು ಇಸ್ಮಾಯಲಿ ಮತ್ತು ಹೆಬ್ರಿ ವಿರುದ್ಧ ಹಲ್ಲು ಮಸೆಯುತ್ತಿದ್ದರೆ ಇಸ್ಮಾಯಿಲ ಅಮಾಯಕ ಮುಸ್ಲಿಮರಿಗೆ ಅವರಿಬ್ಬರ ಬಗ್ಗೆ ಚಾಡಿ ಟೊಂಗು ಟುಸುಕು ಚುಚ್ಚುತ್ತಿದ್ದನು. ಹೆಬ್ರಿ ಬ್ರಾಹ್ಮಣರನ್ನು ಜೊತೆ ಮಾಡಿಕೊಂಡು ಮಾಡುತ್ತಿದ್ದುದು ಅದೇ ಕೆಲಸವನ್ನೇ… ಚಂಬಸಯ್ಯ ವೀರಶೈವ ಮಹಾಸಮ್ಮೇಳನ ಮಾಡಲು ಪ್ರಯತ್ನಿಸುತ್ತಿದ್ದನು… ಆ ಬಗ್ಗೆ ಒಳಗೊಳಗೆ ಚಂದಾ ಎತ್ತುತ್ತಿದ್ದುದು ಗುಟ್ಟಾಗಿ ಉಳಿದಿರಲಿಲ್ಲ. ಅವನು ಸುಮ್ಮನಿದ್ದರೂ ಅವನ ಹಣೆ ಮೇಲೆ ಲಕಲಕ ಹೊಳೆಯುತ್ತಿದ್ದ ತ್ರಿಪುಂಡ್ರ ಭಸ್ಮಧಾರಣವೇ ಸಂಘಟನೆಯ ಕಾರ್ಯವನ್ನು ಮಾಡುತ್ತಿತ್ತು. ಅಲ್ಲದೆ ಪೀಠದ ಜಗದ್ಗುರುಗಳು ಆ ಕ‌ಎ ಈ ಕಡೆ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳುವ ನಿಮಿತ್ತ ಹೊರಡುವಾಗ ಬ್ಯಾಂಕಿನಾಚೆ ತಿಂಗಳಿಗೊಮ್ಮೆಯಾದರೂ ಕಾರು ನಿಲ್ಲಿಸಿ ಆತಗೆ ಬರಲು ಹೇಳುತ್ತಿದ್ದರು. ಇದೊಂದು ಅವನಿಗೆ ಕೋಡು ಮೂಡಿಸಲು ಸಹಾಯಕವಾಗಿತ್ತು. ಇತ್ತೀಚೆಗೆ ಇಸ್ಲಾಮ್ ಮತದ ಲಾಂಛನ ಪ್ರಾಯವಾಗಿ ತಾನು ಬಿಟ್ತಿರುವ ಗಡ್ಡವನ್ನು ಪ್ರದರ್ಶಿಸುತ್ತ ಸದರೀ ಗ್ರಾಮದಲ್ಲಿ ಜಮಾತೆ ಸಂಘಟನೆಯ ಶಾಖೆ ತೆರೆಯುವ ನಿಮಿತ್ತ, ಇಸ್ಮಾಯಿಲ್ ನಿರುಪದ್ರವಿ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರ ತೊಡಗಿದ್ದುದು ಗುಟ್ಟಾಗಿ ಉಳಿದಿರಲಿಲ್ಲ. ಒಂದು ಮಸೀದಿ ಕಟ್ಟಿಸುವುದು ಅವನ ಪರಮ ಗುರಿಯಾಗಿತ್ತು. ಭ್ರಾತೃತ್ವ, ಸೋದರತೆ ಸಾರುವ ಬಕ್ರೀದ್, ರಂಜಾನ್ ಹಬ್ಬಗಳನ್ನು ಅವನು ಸತ್ರಗಳಂತೆ ಬಳಸಿಕೊಳ್ಳ ತೊಡಗಿದ್ದನು. ತಾನು ಬೊಂಬಾಯಿಯಲ್ಲಿರುವ ಹಾಜಿಮಸ್ತಾನ್ ಯೂಸೂಫ್ ಪಟೇಲರಿಗೆ ಒಂದು ಪತ್ರ ಬರೆದರೆ ಸಾಕು ಅವರು ಲಕ್ಷಾಂತರ ರೂಪಾಯಿ ಸೂಟ್ಕೇಸಿನಲ್ಲಿಟ್ಟು ಕಳಿಸಿಬಿಡುವರೆಂದು ಹೇಳಿಕೊಳ್ಳುತ್ತಿದ್ದುದು ಸೋಜಿಗದ ಸಂಗತಿಯಾಗಿತ್ತು. ಇವರಿಬ್ಬರಿಗಿಂತ ಹೆಬ್ರಿಯ ಸಂಘಟನೆ ತುಂಬ ಅಚ್ಚುಕಟ್ಟಾಗಿತ್ತು. ಅವನು ಆಗಲೆ ಉಡುಪಿ ಹೋಟಲಿನ ರಾಮಕೃಷ್ಣ ಭಟ್ಟರನ್ನು ಹಿಡಿದುಕೊಂಡು ಛೋಟಾ ಬೃಂದಾವನ್ ಸ್ಥಾಪಿಸುವುದರಲ್ಲಿ ಯಶಸ್ವಿಯಾಗಿದ್ದನು. ಶ್ರೀ ಶ್ರೀ ಶ್ರೀ ರಾಘವೇಂದ್ರ ಯತೀಂದ್ರರು ಮಂಚಾಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಆಯಾಸ ಪರಿಹಾರಾರ್ಥವಾಗಿ ಕೊತ್ತಲಗಿಗೆ ಆಗಮಿಸಿದ್ದರಲ್ಲದೆ ಈಗ ಬೃಂದಾವನ ಸ್ಥಾಪಿಸಿರುವ ಜಾಗದಲ್ಲೆ ವಿಶ್ರಮಿಸಿಕೊಂಡರೆಂಬ ಕಥೆಗಳನ್ನು ಹೇಳುತ್ತಿದ್ದರು. ಆದವಾನಿಯ ಸಿದ್ದಿಮಸೂದ್ ಖಾನನಿಗೆ ಅವರು ಜನಿವಾರ ಹಾಕಿದ್ದಲ್ಲದೆ ಅವನನ್ನು ಅಪ್ಪಟ ಸಸ್ಯಾಹಾರಿಯನ್ನಾಗಿ ಮಾಡಿದರೆಂದು ಹೇಳುತ್ತಿದ್ದರು. ರಾವಣನು ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿ ಒಯ್ಯುತ್ತಿದ್ದಗ ಆಕೆ ತನ್ನ ಕಾಲಲ್ಲಿದ್ದ ಕೊತ್ತಲಗ ಎಂಬ ಆಭರಣವನ್ನು ಬಿಚ್ಚಿ ಎಸೆದಳೆಂದೂ; ಅದು ಬಿದ್ದ ಈ ಜಾಗವೇ ಕೊತ್ತಲಗಿ ಎಂದು ಹೆಸರಾಗಿದೆ ಎಂದೂ ನಿರ್ಭಿಡೆಯಿಂದ ಹೇಳಿ ಜನರನ್ನು ಮರುಳು ಮಾಡುತ್ತಿದ್ದನು. ಸೀತಾನ್ವೇಷಣೆಯಲ್ಲಿದ್ದ ಶ್ರೀರಾಮಚಂದ್ರನು ಸುಗ್ರೀವ, ಅಂಗದ ಜಾಂಬುವಂತ, ಆಂಜನೇಯರೇ ಮೊದಲಾದ ಕಪಿಸೇನೆಯೊಂದಿಗಿಲ್ಲಿ ಬಂದು ತಂಗಿದ್ದನೆಂದು ವಾದಿಸುತ್ತಿದ್ದನು. ತನ್ನ ವಾದಕ್ಕೆ ಪೂರಕವಾಗಿ ಅಷ್ಟೊತ್ತಿಗಾಗಲೇ ಇದ್ದ ರಾಮದೇವರ ಗುಡಿ, ಆಂಜನೇಯ ಗುಡಿಗಳ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದನು. ಕುಪ್ಪಿಕರ ಕೇರಿ ಆಂಜನೇಯ ಸ್ವಾಮಿ ಕೊರಲಲ್ಲಿರುವುದು ಶಿವದಾರವಲ್ಲವೆಂದೂ; ಅದು ಜನಿವಾರವೆಂದೂ ವಾದಿಸಲು ಹೋಗಿ ಅಲ್ಲಿನ ಪೈಲ್ವಾನರಿಂದ ಒದೆಸಿಕೊಂಡು ಮರಳಿರುವುದೂ ಉಂಟು. ಮತ್ತೊಂದು ವಿಷಯವೆಂದರೆ ಹೆಬ್ರಿಯವರ ಸೂಚನೆ ಮೇರೆಗೆ ಆ ಗ್ರಾಮದ ಅನೇಕ ಜನ ಬ್ರಾಹ್ಮಣರು ಈ ದೇಶವನ್ನು ಭಾರತ ಅಥವಾ ಇಂಡಿಯ ಎನ್ನುತ್ತಿರಲಿಲ್ಲ. ನಮ್ಮ ದೇಶ ‘ಹಿಂದೂಸ್ತಾನ” ಎಂದು ಹೇಳಿಕೊಳ್ಳುತ್ತಿದ್ದರು. ಸದರಿ ಗ್ರಾಮದ ಶಿಕ್ಷಣ ಸಂಸ್ಥೆಗಳ ಲೆಕ್ಚರ್‍ಸೂ, ಮಾಸ್ತರನ್ನು ಹಿಡಿದುಕೊಂಡು ಆರೆಸ್ಸೆಸ್ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿದ್ದನು. ವಾರಕ್ಕೊಂದೆರಡು ಸಾರಿಯಾದರೂ ಮುಂಗಡವಾಗಿ ಬಂದು ಪಥ ಸಂಚಲನವನ್ನು ಪರಾಮರ್ಶಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡುತ್ತಿದ್ದನು. ಹಾಗೆಯೇ ಉತ್ತರ ಭಾರತದ ಕೋಮು ಗಲಭೆಯನ್ನು ಪ್ರಸ್ತಾಪಿಸುತ್ತ ಮುಸ್ಲಿಮರು ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರ ಮಾಡಿದರೆಂಬುದರ ಬಗ್ಗೆ ನಿಖರವಾಗಿ ಅಂಕಿ ಅಂಶಗಳನ್ನು ಒದಗಿಸುತ್ತಿದ್ದನು. ಆದರೆ ಅವನು ಹೇಳುತ್ತಿದ್ದ ಯಾವುದೂ ಎಲ್ಲ ಪಥ ಸಂಚಲಿಗರ ಮಿದುಳು ತೂರಿ ಆಶ್ರಯ ಪಡೆಯುತ್ತಿರಲಿಲ್ಲವೆಂಬುದೇ ಸಮಾಧಾನದ ಸಂಗತಿಯಾಗಿತ್ತು.

ಈ ಮೂವರ ಧಾರಾವಾಹಿಗಳು ಈ ಪ್ರಕಾರವಾಗಿ ಮುಂದುವರಿಯುತ್ತಿರುವಾಗ್ಗೆ ಗುಮುಸಿ ಗೌಡ ಮತ್ತು ಪಶುಪತಿಯರೆಂಬ ಕಾಮ್ರೇಡುಗಳು ಗ್ರಾಮದಲ್ಲಿ ಮಾಡುತ್ತಿದ್ದ ಸಂಘಟನೆಯೇ ವಿಚಿತ್ರವಾಗಿತ್ತು. “ನೋಡಯ್ಯಾ ಗೌಡ… ಜಮಾತೆ, ಆರೆಸ್ಸೆಸ್ ಚಡ್ಡಿಗಳಿಗಿಂತ ಈ ದೇಶಕ್ಕೆ ಅಪಾಯಕಾರಿಯಾದುದೆಂದ್ರೆ ಮಾರ್ಕ್ಸಿಜಮ್ಮು… ಕನಿಷ್ಟ ಜಮಾತೆಯರೂ; ಆರೆಸ್ಸೆಸ್ನೋರೂ ತಂತಮ್ಮ ಜಾತಿಗಳ ಬಗ್ಗೆ ಒತ್ತಿ ಒತ್ತಿ ಹೇಳ್ತಾನೆ ಜಾತ್ಯಾತೀತ ಕಲ್ಪನೇನ; ಅದರಿಂದಾಗೋ ಅಪಾಯಗಳ್ನ ಪರೋಕ್ಷವಾಗಿ ತಿಳಿಸಿಕೊಡ್ತಿದ್ದಾರೆ… ಜನರಿಗೆ ಒಂದು ಜಾತಿ ಬಗ್ಗೆ ತಿಳಿದೊಡನೆ ಆ ಜಾತಿಯಿಂದಾಗುವ ಅಪಾಯವೂ ಗೊತ್ತಾಗುತ್ತೆ… ಆದರೆ ಕಾಮ್ರೇಡ್ಸ್ ಕಥೆ ಆ ಥರ ಅಲ್ಲ… ಅವರಿಗೆ ಜಾತಿ ಸಮಸ್ಯೆ ಮುಖ್ಯ ಅಲ್ಲ… ಅವರಿಗೆ ವರ್ಗ ಸಮಸ್ಯೆ ಮುಖ್ಯ… ಅದ್ನ ಮನವರಿಕೆ ಮಾಡಿಕೊಡೋದೆ ನಮ್ಮ ರೈತ ಸಂಘಟನೆಯ ಮುಖ್ಯ ಅಂಶಗಳಲ್ಲಿ ಒಂದು ಕಣಪ್ಪಾ… ಮುಂದೆ ಒಂದಲ್ಲಾ ಒಂದು ದಿನ ಹಸಿರು ಟವೆಲ್ಲು ವಿಧಾನಸೌದದ ಮೇಲೆ ಹಾರೇ ಹಾರಾಡ್ತದೆ… ಅದ್ರಿಂದ ನೀನು ರೈತ ಸಂಘಟನೆ ಬಿಟ್ಟು ಕಾಮ್ರೇಡ್ಸ್ ಜೊತೆ ಸೇರ್‍ತೀನಿ ಅನ್ನೋದು ಸರಿ ಅಲ್ಲ” ಎಂದು ಪ್ರೊ. ನಂಜುಂಡಸ್ವಾಮಿ ಗೌಡನ ರಾಜೀನಾಮೆ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಬುದ್ಧಿ ಧೋರಣೆಯಿಂದಾಗಿ ನನ್ಗೆ ಬೇಸರವಾಗಿದೆ. ನಿಮ್ಮ ರೈತ ಸಂಘದಿಂದ ನಮ್ಮ ರೈತಾಪಿ ಮಂದಿಗೆ ಬ್ಯಾಂಕಿನಿಂದ ಸಾಲ ಕೊಡಿಸ್ಲಿಕ್ಕೆ ಆಗ್ತಾ ಇಲ್ಲ… ಹಸಿರು ಕಲರ್‍ನ ನೋಡಿದಾಕ್ಷಣ ಗೋರ್ಮೆಂಟ್ ಎಂಪ್ಲಾಯಿಸು ಜೋರಾಗಿ ನಗಾಡ್ತಾರೆ… ನಿಮ್ಮ ರೈತ ಸಂಘದಿಂದ ನಮ್ಮ ರೈತಾಪಿ ಮಂದಿಗೆ ಬೈಂಸೂ ಅಮ್ತಾರೆ… ನಮ್ ಕೈಗೆ ಈಗ ಬೇಕಾಗಿರೋದು ಗ್ರೀನಲ್ಲ… ರೆಡ್ಡು… ರೆಡ್ಡೊಂದ್ರೆ ಡಾರ್‍ಕ್‌ರೆಡ್ಡೂ” ಎಂದು ಗುಡುಗುಡಿಸಿ ಗೌಡ ತನ್ನ ಹೆಗಲ ಮೇಲಿದ್ದ ಹೆನ್ನರಡು ಮುಕ್ಕಾಲು ರುಪಾಯಿ ಬೆಲೆ ಬಾಳುವ ಹಸಿರು ಟವಲನ್ನು ಪ್ರೊಫೆಸರ್ ಮುಂದಿದ್ದ ಟೇಬಲ್ ಮೇಲಿಟ್ಟು ಬಂದು ಪಶುಪತಿಯಿಂದ ಕಾಮ್ರೇಡ್ ಎಂಬ ಬಿರುದು ಪಡೆದಿದ್ದ. ಅದೂ ಅಲ್ಲದೆ ಶ್ರೀಮತಿ ಗೌಡ ಈ ಮೊದಲೆ ಕಾಮ್ರೇಡ್ ಎಂದು ಹೆಸರು ಪಡೆದಿದ್ದಂಥಾಕಿಯಾಗಿದ್ದಳು.

ಇವರಿಬ್ಬರು ತಮ್ಮ ಹೋರಾಟ ಈ ದೇಶದ ಜಾತಿ ವ್ಯವಸ್ಥೆ ವಿರುದ್ಧವಾಗಲೀ; ವರ್ಣ ವ್ಯವಸ್ಥೆ ವಿರುದ್ಧವಾಗಲೀ ಅಲ್ಲ… ಈ ಬಂದವಾಳ ಶಾಹಿ ವ್ಯವಸ್ಥೆ ವಿರುದ್ಧ ಎಂಬ ಘೋಷಣೆಯೊಂದಿಗೆ ತಮ್ಮ ಸಂಘಟನೆ ಆರಂಬಿಸಿದ್ದರು. ಉದಾರ ಮನೋಭಾವದಿಂದ ಛೋಟಾ ಬೃಂದಾವನ್ ಕಟ್ಟಿಸಿದ್ದ ಮತ್ತು ಪಥ ಸಂಚಲನಾಕಾರ್ಯದ ಯಾಜಕರಾಗಿದ್ದ ರಾ.ಕೃ. ಭಟ್ಟರು ತಮ್ಮ ಹೋಟೆಲ್ಲಿನ ಮಹಡಿಯಲ್ಲಿದ್ದ ಕೋಣೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫೀಸ್ ತೆರೆದುಕೊಳ್ಳಲು ಪಶುಪತಿಗೆ ಬಿಟ್ಟುಕೊಟ್ಟಿದ್ದರು. ಇದಕ್ಕೆ ತಕರಾರೆತ್ತಿದ ಹೆಬ್ರಿಗೆ ” ಆ ಪಶುಪತಿ ಪಾಪ ನಕ್ಸಲೈಟ್ ಥರ ಕಾಣ್ತಿದ್ದಾನೆ… ಒಂದು ಹೋಗಿ ಒಂದು ಆದ್ರೆ ಏನು ಮಾಡೋದು ಸ್ವಾಮಿ… ಆ ಮಾರ್ವಾಡಿಗೆ ಆದ ಗತಿ ನಮ್ಗೂ ಆದ್ರೆ ಏನು ಮಾಡೋದುಂಟು… ನಾವು ಮೊದ್ಲೇ ಘಾಟಾಚೆಗಿನ ಮಂದಿ… ಅವ್ರ ಜುಟ್ಟು ನಂ ಕೈಲಿ ಇರ್ಲಿ ಅಂತ ಬಿಟ್ಟುಕೊಟ್ಟಿದ್ದೀನಿ…” ಎಂದು ಹೇಳಿದ್ದರು. ನಾನು ಆಗೊಮ್ಮೆ, ಈಗೊಮ್ಮೆ ಪಾರ್ಟಿ ಆಫೀಸಿಗೆ ಹೋಗುವಾಗ ಶ್ರೀಯುತ ರಾ.ಕೃ. ಭಟ್ಟರು ಎಂಥದು ಮಾರಾಯ್ರೆ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಕಳಾದ ನೀವು ಕಾಮ್ರೇಡ್ಸ್ ಜನ ಹುಡುಕ್ಕೊಂಡು ಬರೋದೇ?” ಎಂದೊಂದು ಮಾತನ್ನು ಮಾತ್ರ ಹೇಳುತ್ತಿದ್ದರು. ಆಗ ನಾನು ಟೈಂಪಾಸ್ಗೆ ಎಂಬೊಂದು ಮಾತನ್ನು ಹೇಳುತ್ತಿದ್ದೆನು.

ಕಾಮ್ರೇಡ್ಗಳೀರ್ವರು ಕಲೆಯನ್ನೇ ಒಂದು ಶ್ರಮವೆಂದೂ, ಭ್ರಮೆ ಎಂದು ಭಾವಿಸಿ ಬುಧವಾರ ಪೇಟೆ, ಸೋಮವಾರಪೇಟೆ ಮತ್ತು ಗ್ರಾಮಕ್ಕಂಟಿಕೊಂಡಂತಿರುವ ಕೇರಿ ಓಣಿಗಳಲ್ಲಿ ವ್ಯಕ್ತಿ ಮತ್ತು ಜನಪದ ರಮ್ಗಭೂಮಿಯನ್ನು ನೆಚ್ಚಿಕೊಂಡು ಬದುಕುತ್ತಿರುವ ಹಿರಿ ಕಿರಿಯ ಕಲಾವಿದ, ಕಲಾವಿದೆಯರನ್ನು ತಮ್ಮ ಸಂಘಟನೆಯ ತೆಕ್ಕೆಗೆ ತರಲು ಅಪಾರವಾಗಿ ಶ್ರಮಿಸಿದರು. ಬೆಂಗಳೂರಲ್ಲಿ ಮಕ್ಕಳು ಮತ್ತು ಮಹಿಳಾ ಕಲ್ಯಾಣ ನಿಗಮದ ಅಧ್ಯಕ್ಷೆಯಾಗಿಯೂ; ಜೊತೆಗೆ ಕಬ್ಬನ್‌ಪಾರ್ಕನ್ನು ಖಾಸಗಿ ಮತ್ತು ಹವ್ಯಾಸೀ ಪ್ರಣಯಿಗಳಿಂದ ಮುಕ್ತಗೊಳಿಸಿ ಧ್ಯಾನ, ತಪಸ್ಸು ಮಾಡಲು ಯೋಗ್ಯವಾದಂಥ ವಾತಾವರಣವನ್ನು ಸೃಷ್ಟಿಸಬೇಕೆಂದು ಸರಕಾರ ರಚಿಸಿರುವ ಆಯೋಗವೊಂದರ ಸದಸ್ಯೆಯೂ ಆಗಿರುವಂಥ ಭುವನೇಶ್ವರಿ ದೇವಿಯವರು ಒಮ್ಮೆ ಬಂದು ಸಾಂಕೇತಿಕವಾಗಿ ಕಲಾವಿದರ ಸಂಘಟನೆಯನ್ನು ಉದ್ಘಾಟಿಸಿದ್ದುಂಟು.

ಕೊತ್ತಲಿಗಿಯ ಎರಡು ಕಣ್ಣುಗಳೇ ಗೌಡ ಮತ್ತು ಪಶುಪತಿಯರೆಂದೂ ವರ್ಣಿಸಿ ಆಕೆ ಕಂಟೆಸ್ಸಾ ಕಾರು ಹತ್ತುವಾಗ ಮುಪ್ಪಾನು ಮುದುಕಿ ಮುಕುಡವ್ವೆ ಅಡ್ಡ ತುರುಬಿ ‘ಏನಭೇ ಬುವ್ವೀ… ಕುಂಡರಲಾಕ ಕಾರು ಬಂದಾಚ್ನಣ ನಾವ್ಯಾರು ನಿನ ಕಣ್ಣಿಗೆ ಬೀಳಲ್ಲೇನೆ. ನನ್ ಮೊಮ್ಮಕ್ಳೀಗೆ ಒಂದು ಬಾರಿ ತೋರಿಸೇ ನೀನು ಹೊಂಡಬೇಕು’ ಎಂದು ಸೀರೆ ಹಿಡಿದು ಜಗ್ಗಾಡಿದಳು… ಆಕೆಗೆ ಏನೋ ಒಂದು ಸಮಾಧಾನ ಹೇಳಿ ಅಧ್ಯಕ್ಷೆ ಕಾರು ಹತ್ತಿ ಹೋಗಿ ಬಿಟ್ಟಳು. ಆ ದಿನದಿಂದ ಕಾಮ್ರೇಡರ ನಸೀಬ ಸ್ವಲ್ಪ ಸುಧಾರಿಸಿತು. ಅಖಿಲ ಕರ್ನಾಟಕ ಗ್ರಾಮಾಂತರ ಕಲಾವಿದರ ಮಹಾಸಮ್ಮೇಳನವನ್ನು ನಡೆಸಿ ಸರಕಾರದ ಗಮನವನ್ನು ಸೆಳೆಯಬೇಕೆಂದು ಅವರು ಕೆಲಸ ಶುರುಮಾಡಿದರು. ಜಮಾತೆ ಅಂತ ಇಸ್ಮಾಯಿಲನನ್ನಾಗಲೀ; ಜಂಗಮ ಎನ್ನೋ ಕಾರನದಿಂದ ಚಂಬಸ್ಯಯ್ಯನನ್ನಾಗಲೀ; ಆರೆಸ್ಸೆಸ್ ಎಂಬ ಕಾರಣದಿಂದ ಹೆಬ್ರಿಯವರನ್ನಾಗಲೀ ಅವರು ದೂರ ಮಾಡಲಿಲ್ಲ… ಒಮ್ಮೆ ಪೀಠಾಪುರಕ್ಕೆ ಬಂದಿದ್ದ ಪಶುಪತಿ ಜಗದ್ಗುರುಗಳ ಪಾದಕ್ಕೆ ಅಡ್ಡಬಿದ್ದಿದ್ದ ಎಂಬ ಕಾರಣದಿಂದ, ಅವನ ತಂದೆ ಲಿಂಗಾಯಿತ ಎಂಬ ಕಾರಣದಿಂದ ಚಂಬಸ್ಯಯ್ಯ ಅವನನ್ನು ಬಲವಾಗಿ ಹಚ್ಚಿಕೊಂಡ. ಆದರೆ ತಾಯಿ ಅನ್ಯ ಜಾತಿಯವಳು ಎಂಬ ಕಾರಣದಿಂದ ತೀರಾ ಹತ್ತಿರ ಮಾತ್ರ ಸೇರಿಸಿಕೊಳ್ಳಲಿಲ್ಲ.
ಈ ಎಲ್ಲ ವಿದ್ಯ ಮಾನಗಳಿಗೆ ಪ್ರೋತ್ಸಾಹ ನೀಡುತ್ತ ಎಲ್ಲ ಸಂಘಟನೆಗಳಿಂದ ರಾಜಕೀಯ ಲಾಭ ಪಡೆಯ ತೊಡಗಿದ

ಗುಲಾಂನಬಿ ಅಮೇರಿಕಾದಿಂದ ಹೇರ್‌ಡೈತರಿಸಿಕೊಳ್ಳುತ್ತಿದ್ದಾನೆಂಬ ಖ್ಯಾತಿಗೆ ಪಾತ್ರನಾಗಿದ್ದು ಅದಕ್ಕೂ ಒಂದು ತಿಂಗಳ ಹಿಂದಿನಿಂದಲೇ ಗುಲಾಮ್ ನಬಿ ಬಜಾರಕ್ಕೆ ಹೊರಟ ಎಂದರೆ ಅದೊಂದು ಡೆಮಾನ್‌ಸ್ಟ್ರೇಟ್ ಇದ್ದಂತಿರುತ್ತಿತ್ತು. ಅಮೇರಿಕಾದ ಬ್ರಿಯರ್ಲೀ ಹೇರ್ ಡೈಯನ್ನೇ ಉಪಯೋಗಿಸಿ ಹೊಸ ಯೌವನ ಪಡೆಯಿರಿ ಎಂಬ ಜಾಹಿರಾತೇ ಜೀವಂತವಾಗಿ ಅಡ್ಡಾಡುತ್ತಿರುವುದೇನೋ ಎಂಬಂತೆ ಇರುತ್ತಿತ್ತು. ಅನೇಕ ಮಧ್ಯ ವಯಸ್ಕರು ಆತನ ಕಾರಿರುಳಿನಂಥ ಗಡ್ಡ ಮೀಸೆಯಿಂದ ಸ್ಪೂರ್ತಿ ಪಡೆದಿದ್ದರು. ಅಲ್ಲದೆ ಆತ ಗೋಲ್ಡನ್ ಕೇಸ್‌ನಿಂದ ಸಿಗರೇಟು ತೆಗೆದು ರಜನೀಕಾಂತ್ ಸ್ಟೈಲ್‌ನಲ್ಲಿ ಬಾಯಿಗೆ ಎಸೆದುಕೊಳ್ಳುತ್ತಿದ್ದುದನ್ನು ನೋಡಿ ಕಾಲೇಜ್ ವಿದ್ಯಾರ್ಥಿಗಳು ಸ್ಪೂರ್ತಿ ಪಡೆದಿದ್ದರು. ಹೀಗೆ ಇಡೀ ಗ್ರಾಮಕ್ಕೆ ಸ್ಪೂರ್ತಿಯ, ತಾರುಣ್ಯದ ಚಿಲುಮೆಯಾಗಿದ್ದ ಗುಲಾಂನಬಿ ‘ಸರ್ವೇಜನೋ ಸುಖಿನೋ ಭವಂತು’ ಎಂಬ ಆರ್ಯೋಕ್ತಿಗೆ ಮಾದರಿಯಂತಿದ್ದ ಮತ್ತು ಒಳಗೊಳಗೇ ಮುಂದೆ ಬಂದವರನ್ನು ಹಾಯುತ್ತಿದ್ದ. ಹಿಂದೆ ಬಂದವರನ್ನು ತಿವಿಯುತ್ತಿದ್ದ. ಆದರದು ಹಾಯಿಸಿಕೊಂದವರಿಗಾಗಲೀ. ತಿವಿಸಿಕೊಂಡವರಿಗಾಗಲೀ ಆ ಕೂಡಲೆ ಅರಿವಾಗುತ್ತಿರಲಿಲ್ಲ. ಇಂಥ ಜಾಯಮಾನದ ಗುಲಾಂನಬಿಯಿ ಎಲ್ಲಾ ಸಂಘಟನೆಗಳಿಗೆ ಬೆಂಬಲ ನೀಡುತ್ತ ಬೆಂಬಲ ಪಡೆಯುವುದರಲ್ಲಿ ನಿಸ್ಸೀಮ ರಾಜಕಾರಣಿಯಾಗಿದ್ದ, ಸಂಘಟಕರಾದ ಚಂಬಸ್ಯಯ್ಯ; ಇಸ್ಮಾಯಿಲೂ, ಹೆಬ್ರಿ, ಗೌಡ, ಪಶುಪತಿ, ಅವನು ಒಂದು ವರ್ಷದ ಹಿಂದೆ ಹಾಲುಗಲ್ಲಿನಿಂದ ಕಟ್ಟಿಸಿರುವ ಮನೆಗೆ ವಾರಕ್ಕೊಮ್ಮೆಯಾದರೂ ಎಡತಾಕುತ್ತಿದ್ದರಾದರೂ ನಾನು ಮಾತ್ರ ಯಾರು ಪುಸಲಾಯಿಸಿದರೂ ಅಲ್ಲಿಗೆ ಹೋಗಿರಲಿಲ್ಲ… ಅವರಿವರ ಬಳಿ ನಬಿ “ಬುಧವಾರ ಪೇಟೇಲಿ ವಾಸ ಮಾಡುತ್ತಿದ್ದು ನಿಂ ಬ್ಯಾಂಕಿನಲ್ಲಿ ಕೆಲಸ ಮಾಡ್ತಿದ್ದಾನಂತಲ್ರೀ… ಆತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗನಂತಲ್ರೀ… ಆತ ಒಮ್ಮೆ ಕೂಡ ನನ್ನ ಕಂಡಿಲ್ಲಲ್ರೀ” ಎಂದು ಹೇಳಿಕೊಳ್ಳುತ್ತಿದ್ದುದುಂಟು.

ಆ ನಂತರ ಆತನನ್ನು ನಾನು ಕಾಣಬೇಕಾಗಿ ಬಂತು. ಕಂಡೊಡನೆ ನನ್ನ ಬಗ್ಗೆ ಒಂದು ವ್ಯಂಗ ಚಿತ್ರ ಬರೀರಿ ಅಂದ. ಸಿಗರೇಟ್ ಹೊಕ್ಕೊಳ್ಳುತ್ತಿರುವ ಚಿತ್ರ ಬರೆದು ತೋರಿಸಿದೆ. ಅಮೇರಿಕಾದ “ಜಿಮ್ಮಿಕಾರ್ಟರ್ ಮೀಸೆ ಬಿಟ್ಟರೆ ಹೇಗಿರ್ತದೋ ಹಾಗಿದ್ದೀನಲ್ರಿ’ ನಾನು ಅಂದ. “ಹೌದ್ರಿ” ಅಂದೆ.

“ಕೊತ್ತಲಗೀಲಿ ಜೂನಿಯರ್ ದಿನಕರ್ ದ್ಸಾಯಿ ಅಂತ ಹೆಸರಾಗಿದ್ದರಲ್ಲ… ಹಾಗಿದ್ದ ನನ್ ಮೆಲೋಂದು ಚೌಪದಿ ಬರ್ದು ತೋರಿಸ್ರಿ” ಅಂದ. ನಾನು ಕೂಡಲೆ ಆತನ ಪೈಲಟ್ ಪೆನ್ನನ್ನೂ ಬೈಸನ್ ಬ್ರಾಂಡ್ ಪೇಪರನ್ನೂ ಇಸುಕೊಂಡು –
ಕೊತ್ತಲಗಿಯ ರವಿಚಂದ್ರ ನಮ್ಮ ಗುಲಾಂ ನಬೀ
ಈ ಜನಕ್ಕೆಲ್ಲ ನಿನೇ ಕಣಪ್ಪಾ ಹರಿಯಾಣ ಜಿಲೇಬಿ
ನಿನ್ನ ನಂಬಿದ ಜನಕೆ ಸಿಗುವುದು ಕೂಳು ನೀರು
ನಂಬದವರು ನೆಕ್ಕುವರು ಒಣ ಜಾಲಿ ಬೇರು

…ಎಂದು ಬರೆದು ತೋರಿಸಿದೆ. ಅದನ್ನು ಓದಿ ನಕ್ಕೂ ನಕ್ಕೂ ಸುಸ್ತಾದ… “ವಂಡರ್ ಫುಲ್ ವಂಡರಫುಲ್” ಎಂದು ಉದ್ಗರಿಸಿ ಹಸ್ತಲಾಘವ ಮಾಡಿದ. ’ಅಲ್ರೀ ಶಾಸ್ತ್ರೀ… ನೀವು ಸೊಗಸಾಗಿ ಪದ ಹಾಡ್ತೀರಂತೆ ಹೌದೇನು ಎಂದು ಕೇಳಿದ. ’ಹೌದ್ರೀ’ ಅಂದೆ. ಯಾವ ಪದ ಅಂತ ಕೇಲಿದ. ’ತ್ಯಾಗರಾಜ, ದೀಕ್ಷಿತ, ಪುರಂದರದಾಸ’ ಅಂದೆ. “ಸಿ.ಎಚ್.ಆತ್ಮಾ, ಸೈಗಲ್ ಮುಖೇಶ್ರವು ಬರಲ್ವೇನು?” ಅಂದ. ಇಲ್ಲ ಅಂದೆ. ’ಮೇರಾ ದಿಲ್ ಹೀ ಟೂಟ್ಗಯಾ” ಎಂದು ತಾನೇ ಹಾಡಿದ. ಸೊಗಸಾದ ಶಾರೀರ ಎಂದೆ. ತನ್ನ ದೇಹ ನೋಡಿಕೊಂಡು “ಪ್ರತಿದಿನ ಜಾಗಿಂಗೂ ವ್ಯಾಯಾಮ ಮಾಡ್ತೀನ್ರೀ ಅದ್ಕೇ ನನ್ ಪರ್ಸನಾಲಿಟಿ ಹೀಗಿರೋದು” ಎಂದ. ನಮ್ಮ ನಾಯಕರಾದ ಹೆಗಡೆಯವರಿಗೂ ನಾನೇ ವ್ಯಾಯಾಮದ ಪ್ರಾಮುಖ್ಯ ಹೇಳಿಕೊಟ್ಟಿದ್ದು… ಅದ್ಕೆ ಅವರು ಸ್ಲಿಮ್ಮಾಗಿ, ಯಂಗಾಗಿ ಕಾಣ್ತೊರೋದು… ಒಮ್ಮೆ ನನ್ ಜೊತೆ ಬೆಂಗ್ಳೂರಿಗೆ ಬನ್ನಿ… ಅವ್ರ ಪರಿಚಯ ಮಾಡ್ಕೋಡ್ತೀನಿ… ಆ ಪಟೇಲ್ರೂನೂ ಕೂಡ… ಅವರಿಗೆಲ್ಲ ನಿಮ್ಮಂಥೋರ್‍ನ ಕಂಡ್ರೆ ತುಂಬ ಇಷ್ಟ’ ಅಂದ. ನಾನು ಆಗ್ಲಿ ಅಂದೆ… “ಒಳ್ಳೆ ಚಿಕನ್ ಪುಲಾವ್ ಮಾಡಿದ್ದಾರೆ ತಿಂಥಿರೇನು” ಅಂದ. ನಾನು ಸಸ್ಯಾಹಾರಿ ಅಂದೆ. “ಸ್ಟೆಬಿಲಿಟಿ ಸ್ಟೆಮಿನಾ ಹೆಚ್‌ಬೇಕೆಂದ್ರೆ ನಿಮ್ಮಂಥ ಯಂಗ್ ಪೀಪಲ್ಲು ಚಿಕನ್ನು ತಿನ್ನ ಬೇಕ್ರಿ, ಚಿಕ್ಕನ್” ಅಂದ. ನಾನು ಸುಮ್ಮನಿದ್ದೆ. ತದನಂತರ ಆತ ಆಶ್ಚರ್ಯಕರ ರೀತಿಯಲ್ಲಿ ರಾಮಾಯಣ ಮಹಾಭಾರತಗಳಿಂದ ಶ್ಲೋಕಗಳನ್ನು ಉದ್ಧರಿಸಿ ಮಾತಾಡಿದ. ಅವತ್ತಿನಿಂದ ನಾನು ಆತನ ಸ್ನೇಹ ಬೆಳೆಸಿಕೊಂಡೆ ಎನ್ನುವುದಕ್ಕಿಂತ, ಆತನೇ ನನ್ನ ಸ್ನೇಹ ಬೆಳೆಸಿಕೊಂಡ ಎಂದು ಹೇಳಬಹುದು.

ಅಲ್ಲಿಂದ ಬಂದ ಮೇಲೆ ನಾನು ನಬೀ ಮನೆಯಲ್ಲಿ ಚಿಕನ್ ತಿಂದೆ ಎಂಬ ಗುಲ್ಲು ಹಬ್ಬಿತು. ನನ್ನ ಹೆಂಡತಿ ನನ್ನ ಬಾಯಿ ಕೈ ಮೂಸಿ ನೋಡಿ ಅಯ್ಯೋ ಚಿಕನ್ ವಾಸನೆ ಎಂದು ರಂಪ ಮಾಡುವುದು, ತಣ್ಣ್ಗಾಗುವುದು. ಇದು ದಿನಚರಿ ಮಾಡಿಕೊಂಡಳು.

ಅಂದಿನಿಂದ ಮನೆ ಮುಂದೆ ಎಂಜಲು ಹೆಕ್ಕಲು ಬರುತಿದ್ದ ಕೋಳಿಗಳನ್ನು ನೋಡಿದೊಡನೆ ಅರಿವಿಲ್ಲದಂತೆ ಜೊಲ್ಲು ಸುರಿಸಲು ಶುರು ಮಾಡಿದೆ. ಚಿಕನ್ ಬಿರ್ಯಾನಿ ತಿಂದೇ ತೀರಬೇಕೆಂದು ಕಠೋರ ನಿರ್ಧಾರಕೈಕೊಂಡು ಹೊಸಪೇಟೆಯ ಚಂದ್ರಶೀಲಾ ಮಿಲಿಟರಿ ಖಾನಾವಳಿಗೆ ಹೋಗಿ ಚಿಕನ್ ಬಿರಿಯಾನಿ ತಿಂದೇ ಬಿಟ್ಟು ಮನೆಗೆ ವಾಪಸಾದೆ. ಅಭ್ಯಾಸ ಬಲದಿಂದ ನನ್ನ ಹೆಂಡತಿ ಕೈ ಬಾಯಿ ಮೂಸಿ ನೋಡಿ “ಪರವಾ ಇಲ್ಲ ಪುಳಿಯೋಗರೆ ವಾಸನೆ ಬರ್‍ತೀದೆ… ದೇವರು ಈಗಲಾದ್ರು ನಿಮಗೆ ಒಳ್ಳೆಬುದ್ಧಿ ಕೊಟ್ಟನಲ್ಲ” ಎಂದು ಸಮಾಧನ ಗೊಂಡಳು. ಅಂದಿನಿಂದ ನಾನು ವಾರಕ್ಕೆರಡು ಬಾರಿಯಾದರೂ ಚಿಕನ್ ಬಿರಿಯಾನಿ ಗುಟ್ಟಾಗಿ ತಿನ್ನತೊಡಗಿದೆ. ಇದನ್ನು ಹೇಗೋ ಪತ್ತೆ ಮಾಡಿದ ಪಶುಪತಿ “ಪ್ರಸಾದದೊಂದಿಗೆ ತೀರ್ಥ ಹೇಗೋ ಹಾಗೆ ಬಿರಿಯಾನಿಗಿಂತ ಮೊದಲು ಬಿಯರು ಕುಡಿದ್ರೆ ಮೈಂಡು ಚುರುಕಾಗುತ್ತೆ, ಮೈಗು ಕಲರ್ ಬರುತ್ತೆ… ಬೀಯರ್ರೂ ಬ್ರಾಂಡಿ ಕುಡಿದೇ ಇದ್ರೆ ಮಾರ್ಕ್ಸ್ ಏಂಜಲ್, ಚೆಗುವೆರಾ ಇವರಾರೂ ಅರ್ಥಾಗೊಲ್ಲ ಶಾಸ್ತ್ರೀ… ಒಂದು ವಿಚಿತ್ರ ಅಂದ್ರೆ ಬ್ರಾಂದಿ ಕುಡೀದೆ ಇದ್ರೆ ಗಾಂಧಿನೂ ಅರ್ಥಾಗೊಲ್ಲ…” ಎಂದು ಏನೇನೋ ಹೇಳಿದ…
ಅವತ್ತು ನಾನು ಕುದಿಯದೇ ಇದ್ದರೂ ಕುಡಿದೇ ಎಂಬ ಸುದ್ದಿ ಹಬ್ಬಿತು. ಯಥಾ ರೀತಿ ಮುಗ್ಧ ಹೆಂಡತಿ ಸಂದೇಹಿಸಿದಳು. ನಾನು ಬಿಯರ್ ಕುಡಿದು ಮನೆಗೆ ಬರತೊಡಗಿದ ಮೇಲೆ “ಓಹೋ ನನ್ನ ಗಂಡ ಕುಡಿದಿರೋದು ಶ್ರೀರಾಮ ಎಂಬ ಪಾಯಸವನ್ನು ಅಂತೂ ಬುದ್ಧಿ ಬಂತು” ಎಂದು ಸಮಾಧಾನ ಪಟ್ಟುಕೊಂಡಳು. ಅಂದಿನಿಂದ ನಾನು ಕುಡಿದೂ ತಿಂದು ಬರತೊಡಗಿದೆ. ಪಾಪ… ನನ್ನ ಹೆಂಡತಿ ವರಲಕ್ಷ್ಮಿಗಿದು ಗೊತ್ತಾಗಬೇಕಲ್ಲ… ಮೊದಲೇ ಕರ್ಮಠ ಹೆಂಗಸು.
ಶಾಮಣ್ಣ ಪಾತ್ರವು ನಿರರ್ಗಳವಾಗಿ ಹೇಳುತ್ತಿರುವಾಗ –

ಹಸ್ತ ಪ್ರತಿಯೊಳಗಿಂದ ವರಲಕ್ಷ್ಮಿ ಪಾತ್ರವು ಎಲ್ಲರನ್ನು ತಳ್ಳಿಕೊಂಡು ಮುನ್ನುಗ್ಗಿ ಬಂದು… “ಕಾದಂಬರಿಕಾರರೇ… ಮುಂದೆ ಹೇಳೋದಿಕ್ಕೆ ನನ್ನ ಗಂಡನಿಗೆ ಆಸ್ಪದ ಕೊಡಬೇಡಿ… ತಾವು ಆಡುತ್ತಿದ್ದ ಆಟ ನನಗೆ ಗೊತ್ತಿರಲಿಲ್ಲಾಂತ ತಿಳಿಕೊಂದಿರುವ ಅವರು ಮುಗ್ಧರು… ಅವರು ಕುಡಿಯೋದನ್ನು; ತಿನ್ನೋದನ್ನು ಅಭ್ಯಾಸ ಮಾಡಿಕೊಂಡಿದ್ದೆಲ್ಲ ನನಗೆ ಚೆನ್ನಾಗಿ ಗೊತ್ತು… ಆದರೇನು ಮಾಡಬೇಕಿತ್ತು? ನಾನು… ಅತ್ತು ರಂಪಾಟ ಮಾಡಿ ಪ್ರತಿಭಟಿಸಿದಾಗಲೆಲ್ಲ ಅವರು ದನಕ್ಕೆ ಚುಚ್ಚುವ ಹಾಗೆ ಚುಚ್ಚುತ್ತಿದ್ದರು. ಕಷ್ಟ ಸುಖ ಹೇಳಿಕೊಳಲಿಕ್ಕೆ ನನ್ಗೂ ಯಾರು ಇರಲಿಲ್ಲ… ಆಯಕಟ್ಟಾದ ಜಾಗಕ್ಕೆ ಬಲವಾದ ಏಟು ಬಿದ್ದು ನಾನು ಸತ್ತರೆ ಅನುಭೋಸೋರು ನನ್ನ ಗಂಡತಾನೆ… ಎಂದು ಯೋಚಿಸಿ ನಾನು ತೆಪ್ಪಗಿದ್ದು ಬಿಟ್ಟೆ ನನ್ನ ಕರ್ಮ… ತಪ್ಪಿಸಲಿಕ್ಕೆ ಯಾರಿಗೂ ಸಾಧ್ಯವಿರಲಿಲ್ಲ. ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಮ್ತ ಹಿರಿಯರು ಹೇಳಿರುವುರು… ಅವರೇನು ಹೇಳ್ತಿದ್ದಾರಂತ ಲೇಖಕರಾದ ನೀವು ಹಾಗೇ ಬರೆದುಬಿಡಬಹುದೇನು? ನಾಳೆ ದಿನ ನಮ್ಮ ಗತಿ ಏನು? ಬಾಳಿ ಬದುಕಬೇಕಾಗಿರುವ ನನ್ನಿಬ್ಬರು ಮಕ್ಕಳ ಗತಿ ಏನು? ಅವರು ಸತ್ರು… ಆದರೆ ಅವರ ಮನಸ್ಸಿನ ಶೂದ್ರತ್ವ ಸಾಯ್ಲಿಲ್ಲ ನೋಡಿ… ಆದ್ರಿಂದ ಬರೆಯುವಾಗ ನೀವು ಜರಡಿ ಹಿಡಿದರೆ ಒಳ್ಳೆಯದು… ಒಡಹುಟ್ಟಿದ ಅಣ್ಣನಿಗಿಂತ ಹೆಚ್ಚು ಅಂತ ತಿಳ್ಕೊಂಡು ಹೇಳ್ತಿದೀನಿ…” ಎಂದು ದಡ ಬಡ ಹೇಳಿ ಮತ್ತೆ ಮರೆಯಾಗಿ ಹೋಯಿತು.

ಹೆಂಡತಿಯ ಮಾತು ಕೇಳಿ ಶಾಮಣ್ಣ ಪಾತ್ರ ಒಂದು ಕ್ಷಣ ದಿಗ್ಭ್ರಮೆಗೊಂಡಿತು. ನಾನು ತಿಂದದ್ದು ಕುಡಿದದ್ದನೆಲ್ಲ… ಪಾಯಸ ತೀರ್ಥ, ಪ್ರಸಾದ ಅಂತ ಬೊಗಳೆ ಬಿಟ್ಟು ತೆಪ್ಪಗಿದ್ದು ಪ್ರೋತ್ಸಾಹಿಸಿದಳಲ್ಲ ಇವಳು… ಇದ್ದದ್ದು ಇದ್ದಂತೆ ಪ್ರತಿಭಟಿಸಿದ್ರೆ ನಾನೇನು ಜೀವ ತೆಗೆಯುತ್ತಿದ್ದೆನೇನು! ಶಿವ… ಶಿವಾ… ಎಂಥ ಸ್ತ್ರೀಯರಿದ್ದಾರೀ ಪ್ರಪಂಚದಲ್ಲಿ?… ಆಕೆಯ ಮೌನವನ್ನು ನಾನು ಅಪಾರ್ಥ ಮಾಡಿಕೊಂಡು ಮುಂದುವರೆದೆನಲ್ಲಾ… ಎಂದು ಒಳಗೊಲಗೇ ಮಮ್ಮಲನೆ ಮರುಗಿತು…

“ಶಾಮಣ್ಣ… ಈಗ ಅದ್ನೆಲ್ಲಾ ಯೋಚಿಸಿದರೇನು ಉಪಯೋಗವಿಲ್ಲ… ಮಾನವೇ ಸ್ತ್ರೀಯರ ದೊಡ್ಡಸ್ತಿಕೆ… ಆಕೆಗೆ ನೀನು ಅಲ್ಲದೆ ನನ್ನೋರು ತನ್ನೋರು ಎಂಬುವವರು ಯಾರಿದ್ದರು ಹೇಳು! ನೀನು ಆಕೆಗೆ ಅರ್ಥಪೂರ್ಣವಾದ ಆಶ್ರಯವನ್ನು ನೀಡಲಿಲ್ಲ. ಆಕೆಯ ಭಾವನೆಗಳನ್ನು ನೀನು ಗೌರವಿಸಲಿಲ್ಲ. ನಿನ್ನ ಭಾವನೆಗಳನ್ನು ಆ ಸಾಧ್ವಿ ಅರ್ಥ ಮಾಡಿಕೊಳ್ಳಲಿಲ್ಲ. ಅದೆಲ್ಲ ಇರಲಿ… ಏನೋ ಹೇಳಿ ಇಲ್ಲದ ರಗಳೆಗೆ ದಾರಿ ಮಾಡಿಕೊಡೋದು ಬೇಡ…

ನಾನು ನಿನ್ನಲ್ಲಿ ಯಾವ ವಿಷಯದ ಬಗ್ಗೆ ಅರಿಕೆ ಮಾಡಿಕೊಂಡಿದ್ದೆನೆಂದರೆ… ಅದನ್ನು ಮರೆತಿರುವಿಯೋ ಅಥವಾ ವಿತಂಡವಾದಕ್ಕೆ ಹೆಸರಾಗಿರುವ ನೀನು ನನ್ನನ್ನು ದಾರಿ ತಪ್ಪಿಸುತ್ತಿರುವಿಯೋ? ಭಗವಂತನಿಗೇ ಗೊತ್ತು… ಅನಸೂಯಾಳೊಂದಿಗೆ ನಿನ್ನ ಸಂಬಂಧ ಏರ್ಪಟ್ಟ ಬಗ್ಗೆ ಹೇಳು ಅಂತ…”

“ಅದನ್ನೆ ಹೇಳಬೇಕೆಂದಿದ್ದೆನೋ ಮಹಾರಾಯ… ಆದ್ರೆ ಅಷ್ಟರಲ್ಲಿ ಅವಳು ಬೇರೆ ಶಿವಪೂಜೆಲಿ ಕರಡಿ ಬಿಟ್ಟಂತೆ ಒಂದು ಗಲಿಬಿಲಿಗೊಳಿಸಿಬಿಟ್ಟಳು ನೋಡು… ಎಲ್ಲ ಗೊತ್ತಿದ್ದೂ ಆಕೆ ತೆಪ್ಪಗಿದ್ದು ಸಹಿಸಿಕೊಂಡಲೆಂಬ ಸಂಗತಿ ತಿಳಿದು ಬರಸಿಡಿಲೆರಗಿದಂತಾಯ್ತು ನೋಡು… ತಾನು ಬಯಸಿ ಬಂದ ವೈಧವ್ಯದ ಭಾಗ್ಯವನ್ನು ಆಕೆ ಅನುಭವಿಸ್ತಿದ್ದಾಳೀಗ… ಅದಕ್ಕೆ ನಾನು ಜವಾಬ್ದಾರನಲ್ಲ. ನಾನು ಮರಣೋತ್ತರವಾಗಿ ಹೇಳುತ್ತಿರುವುದನ್ನೆಲ್ಲ ಆಕೆ ಕದ್ದು ಕೇಳುತ್ತಿರುವಳೆಂದು ಅರ್ಥವಾಯಿತು. ನಾನು ಬದುಕಿದ್ದಾಗ ಕೇಳಲಿಕ್ಕೆ ಸನ್ನದ್ಧಳಾಗಿದ್ದರೆ ಖಂಡಿತ ಸವಿವರವಾಗಿ ಹೇಳಿ ಹೃದಯದ ಭಾರವನ್ನು ತುಸುವಾದರೂ ಕಡಿಮೆ ಮಾಡಿಕೊಂಡು ಸಾಯುತ್ತಿದ್ದೆ. ಈಗಲಾದ್ರು ನನ್ನ ಕಥೆ ಕೇಳಿ ಆಕೆ ಸಂತೋಷದಿಂದ ಹಾಲು ಕೀರು ಕುಡಿಯಲಿ… ಏನಾಗಬೇಕಿದೆ ಅದರಿಂದ… ಈಕೆಯಂತೂ ಹೊರಗಿನಿಂದ ಬಂದವಳು… ಸರೆ… ನನ್ನ ತಾಯಿಗಾದರೂ ನನ್ನ ಮೇಲೆ ಒಂಚೂರು ಕರುಣೆ ಇರಲಿಲ್ಲವಲ್ಲ. ಆ ಮುದುಕಿಗೆ ಹೆತ್ತ ಮಗನಿಗಿಂತ ಕರ್ಮಠ ಬ್ರಾಹ್ಮಣ್ಯ ಹೆಚ್ಚಾಯ್ತು ನೋಡು… ನೀನಿಲ್ಲಿಂದ ತೊಲಗ್ಲಿಲ್ಲಾಂದ್ರೆ ಆತ್ಮಹತ್ಯೆ ಮಾಡ್ಕೊಂಡು ಬಿಡ್ತೀನಂತ ಹೆದರಿಸ್ತು ಕಣೋ ಆ ನನ್ನ ತಾಯಿ… ಇಂಥಾದ್ನೆಲ್ಲ ನೆನೆಸಿಕೊಂಡ್ರೆ ಸತ್ತಿರೋ ನಾನು ಮತ್ತಷ್ಟು ಸಾಯಬೇಕೆನಿಸುತ್ತೋ ಕುಂವೀ… ಹಾಳಾದೋನೇ!” ಎಂದು ಹೇಳಿ ಬಿಕ್ಕ ತೊಡಗಿತು.
ಅದರ ಮಾತು ಕೇಳಿ ನನ್ನ ಕರುಳು ಕಿತ್ತು ಬಾಯಿಗೆ ಬಂದಿತು –

“ನನ್ ಮಾತಿಗೆ ಬೆಲೆಕೊಟ್ಟು ಸುಮ್ನಿರ್‍ತೀಯೋ ಇಲ್ವೋ ಶಾಮಾ… ಧೈರ್ಯ ತಂದ್ಕೋ ಮಾರಾಯಾ… ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಸತ್ತಮೇಲೂ ಸಹ ನೀನು ನಿನ್ನ ತಾಯಿ ಬಗ್ಗೆ ಇಷ್ಟೊಂದು ಕಠಿಣ ನಿಲುವು ತಳೆಯ ಬೇಡ… ಆ ವೃದ್ಧ ಮಾತೆ ಕಾಶೀಕ್ಷೇತ್ರದಲ್ಲಿ ಅನಾಥಳಾಗಿ ತಿರುಗಾಡುತ್ತಿದೆಯಮ್ತೆ… ಸಂಪರ್ಕ ಮಾಧ್ಯಮಗಳಿಗೆ ನಿಲುಕದ ರೀತಿಯಲ್ಲಿ… ಆಕೆಯ ಪ್ರಜ್ಞೆ ಪ್ರವಾಹದ ಮೂಲಕ ಅದೆಷ್ಟು ಕಹಿ, ಸವಿ ವಾಸ್ತವ ಅವಾಸ್ತವ ಸಂಗತಿಗಳು ಓತ ಪ್ರೋತವಾಗಿ ಕೊಚ್ಚಿ ಹೋಗ್ತಿವೆಯೋ ಏನೋ… ಅದನ್ನೆಲ್ಲ ಸೃಜನಶೀಲತೆಯ ಅಣೆಕಟ್ಟಿನಲ್ಲಿ ಹಿಡಿದಿಟ್ಟರೆ ಒಂದು ಮಹಾಕಾವ್ಯವೇ ಹುಟ್ಟಬಹುದು. ಆಕೆ ಎಂದೋ ನಿನ್ನ ಕುರಿತಂತೆ ಕಹಿಯಾಗಿ ನಡೆದುಕೊಂಡ ಆಡಿದ ಮಾತುಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಿರಬಹುದು ಗೆಳೆಯಾ! ತಾಯಿ ಹೃದಯ ಅರ್ಥ ಮಾಡಿಕೋ! ಗಾರ್ಕಿ ಕಥೆಯಲ್ಲಿ ಬರುವ ತಾಯಿ ವಿನಃ ಮಾನವೇತಿಹಾಸದ ಯಾವ ತಾಯಿಯೂ ತನ್ನ ಮಗನಿಗೆ ಅಹಿತ ಬಯಸಿರಲಾರಳು… ಅದನ್ನೆಲ್ಲ ಮರೆತು, ಇಲ್ಲವೆ ಬದಿಗಿರಿಸಿ ನೀನು ಹೇಳಬೇಕೆಂದಿರೋದನ್ನು ಹೇಳಿ ಹೃದಯ ಹಗುರ ಮಾಡಿಕೋ… ಹೇಳಪ್ಪಾ… ಹೇಳು… ಕಾದಂಬರಿ ಬಿಡುಗಡೆಯಾಗುವ ದಿನ ದೂರವಿಲ್ಲ…” ಎಂದು ಸಮಾಧಾನದ ಮಾತುಗಳನ್ನಾಡಿದೆ.

ಇದ್ದಕ್ಕಿದ್ದಂತೆ ಕಿಟಾರನೆ ಕಿರುಚಿಕೊಂಡು ಅಳಲು ಶುರು ಮಾಡಿದ ಪ್ರವರ ಅಲಿಯಾಸ್ ನಿರ್ವಾಣವನ್ನು ತೊಟ್ಟಿಲಿಂದ ಎತ್ತಿಕೊಂಡ ಅನ್ನಪೂರ್ಣ ಮೂಲೆ ಸೇರಿ ಮೊಲೆ ಉಣಿಸುತ್ತ ಏನೇನೋ ಗೊಣಗುಟ್ಟತೊಡಗಿದಳು.
ಒಂದು ಕ್ಷಣ ಕವಿದ ಮೌನ ಭೇದಿಸಿ ಶಾಮಣ್ಣ ಪಾತ್ರವೇ ಮಾತನಾಡಲಾರಂಭಿಸಿತು.

“ಕಾಶಿಯಲ್ಲಿ ಪಶ್ಚಾತ್ತಾಪ ಪಡುತ್ತಿರುವಳೆಂದು ನೀನು ಹೇಳಿದರೆ ನಾನು ನಂಬುವುದಿಲ್ಲ್?. ಆಕೆ ಮಧ್ಯಪ್ರದೇಶದ ಜಬ್ಬಲ್ಪುರ ಸಮೀಪದಲ್ಲಿ ನರ್ಮದಾ ತೀರದ ಎಡಬಲ ಎಲ್ಲೋ ಅಲೆದಾಡುತ್ತಿರುವಳೆಂಬುದು ನನ್ನ ಭಾವನೆ… ಇರಲಿ… ಅದೆಲ್ಲ ಕಟ್ಕೋಂಡೆನಾಬೇಕಾಗಿದೆ ಈಗ… ಬದುಕಿಗಿಂತ ಸದೃಶವಾದ ನರಕ ಬೇರೊಂದಿಲ್ಲಾಂತ ಆ ಹೆಂಡತಿಗೆ; ತಾಯಿಗೆ ಈಗಾಗಲೆ ಅರ್ಥವಾಗಿರಬೇಕು… ಅರ್ಥವಾಗಿರದಿದ್ದರೆ ಅದು ಅವರವರ ಕರ್ಮ. ಇವರೆಲ್ಲ ನಡುನಡುವೆ ಕ್ಯಾತೆ ತೆಗೆದು ನನಗೆ ತೊಂದರೆ ಕೊಡುತ್ತಿದ್ದಾರೆ. ನಾನೆಲ್ಲಿ ಅವರ ಸಚ್ಚಾರಿತ್ರ್ಯದ ವಿರುದ್ಧ ಸಾಕ್ಷಿ ನುಡಿದುಬಿಡುವೆನೋ! ಎಂಬ ಭಯ ಕಾಡುತ್ತಿರಬಹುದು. ನಾನು ಯಾರ ಪರವೂ ಇಲ್ಲ… ಯಾರ ವಿರುದ್ಧವೂ ಅ ನೀನು ನನ್ನ ಮೆಲೆ ನಿರೂಪಕ ಶಕ್ತಿಯನ್ನು ಹೇರಿರದಿದ್ದರೆ ನಾನು ಚುನಾವಣಾ ಪ್ರಚಾರಕಾರ್ಯಕ್ಕೆ ಸೋನಿಯಾರೊಂದಿಗೆ ಬರಲಿರುವ ಪ್ರಿಯಾಂಕಳನ್ನು ನೋಡಲು ಹೋಗುತ್ತಿದ್ದೆ… ಕುಂವೀ… ಯಾವ ಪಕ್ಷ ಬಹುಮತ ಸಾಧಿಸಬಹುದು ಈ ಚುನಾವಣೆಯಲ್ಲಿ?”
ಅದರ ಮಾತು ಕೇಳಿ ನನಗೆ ಬೇಸರವಾಯಿತು. ಸುಮ್ಮನೆ ಕಾಲಕ್ಷೇಪ ಮಾಡುತ್ತಿರುವುದಲ್ಲ ಇದು.
ಯಾವುದಾದ್ರು ಬರ್ಲಿ ಕಣಪ್ಪಾ… ನಿಂದು ನೀನು ಹೇಳು ಅಂದ್ರೆ-” ಎಂದೆ.

“ಅತಂತ್ರ ಲೋಕಸಭೆಗೂ, ನನಗೂ ಯಾವ ವ್ಯತ್ಯಾಸವಿಲ್ಲ ನೋಡು… ಆಯ್ತು ಹೇಳ್ಟೇನೆ… ಇಲ್ಲಿವರೆಗೆ ನಾನು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಹಾಗೆ ಸರಿಯಾಗಿ ಬರೆದುಕೊಂಡಿರುವೆ ತಾನೆ. ನೀನು ಯಾವ ಸಂಗತಿಯನ್ನಾದ್ರು ಮರೆಮಾಚಿದೀ ಅಂದರೆ ನನ್ನ ಕಥೆಗೆ ಊನ ತಟ್ಟುತ್ತದೆ. ನಾನು ಹೇಳಿದ್ದು ಯವುದೋ ಪಠ್ಯೇತರವೆಂದು ಭಾವಿಸಬೇಡ… ಮುಂದಿನ ಕಥೆಗೆ ಅದೆಲ್ಲ ಬೇಸ್ಮೆಂಟ್ ಇದ್ದಂತೆ… ನಾನು ಚೆನ್ನಾಗಿರುವಷ್ಟು ಕಾಲ ಎಲ್ಲರೂ ನನ್ನೊಂದಿಗೆ ಚೆನ್ನಾಗೇ ಇದ್ದರು. ಗುಲಾಂ ನಬಿ ಕೂಡ ಅಷ್ಟೆ. ಯಾವಾಗ? ಯಾರಿಗೆ? ಯಾವ ರೀತಿಯ ಹುಳ ಕಡಿಯುವುದೋ ದೇವರಿಗೇ ಗೊತ್ತು? ಇದ್ದಕ್ಕಿದ್ದಂತೆ ಬೆನ್ನು ಮಾಡಿ ಬಿಡುತ್ತರೆ… ತೋಳ ಹಾಳು ಬಾವಿಗೆ ಬೀಳುವುದನ್ನೇ ಕಾಯುತ್ತಿರುತ್ತಾರೆ ಕೈಯಲ್ಲಿ ಕಲ್ಲು ಹಿಡಿದುಕೊಂಡು. ಚಿಕ್ಕ ಗಾಯಗೊಂಡ ಕಾಳೋರಗ ನಿರ್ನಾಮವಾಗುವುದು ಸಾವಿರ ಸಾವಿರ ಇರುವೆಗಳಿಂದ ಎಂಬುದನ್ನು ಮರೆಯಬೇಡ… ಇವತ್ತಿನ ಸಮಾಜದಲ್ಲಿ ಮನುಷ್ಯ ಸದೃಡವಾಗಿ ಬದುಕಿರಬೇಕಾದರೆ, ಲಾಂಛನಪ್ರಾಯವಾಗಿ ಜೀವಿಸಬೇಕಾದರೆ ಅವನು ಮುಖವಾಡಗಳ ಮೊರೆ ಹೋಗಬೇಕು. ಅವುಗಲನ್ನು ಆಶ್ರಯಿಸಬೇಕು. ಅವುಗಳನ್ನು ಪಡೆಯಬೇಕು. ಸಾಂದರ್ಭಿಕವಾಗಿ ಸಕಾಲಿಕವಾಗಿ ಧರಿಸಬೇಕು. ಹೀಗಾಗಿ ಮುಖವಾಡಗಳನ್ನು ಧರಿಸಿರುವ ಮನುಷ್ಯರಿಂದಲೇ ಸಮಕಾಲೀನ ಸಮಾಜ ತುಂಬಿಕೊಂಡಿದೆ. ಯಾರ ನೈಜಸ್ವರುಪ ತಿಳಿಯುವುದೇ ಇಲ್ಲ. ಯಾವ ಮುಖವಾಡದ ಹಿಂದೆ ಯಾರು ಇದ್ದು ಯಾವ ಸಂಚು ಹೂಡಿರುತ್ತಾರೋ ಅರ್ಥವಾಗುವುದಿಲ್ಲಪ್ಪಾ… ಹೆಂಡತಿ, ತಾಯಿ, ಎಲ್ಲರೂ ಇದಕ್ಕೆ ಹೊರತಲ್ಲ… ಆದರೆ ಮುಖವಾಡ ಧರಿಸದೆ ಸ್ಪಂದಿಸಿದವಳೆಂದರೆ ಅನಸೂಯ ಮಾತ್ರ ನೋಡು… ಆಕೆಯ ಪರಿಚಯವಾಗಿರದಿದ್ದಲ್ಲಿ… ನನ್ನ ದೇಹಕ್ಕೆ, ಮನಸ್ಸಿಗೆ, ಬದುಕಿಗೆ, ತಪ್ಪಿಗೆ, ಒಪ್ಪಿಗೆ ಆಕೆ ಸ್ಪಂದಿಸಿರದಿದ್ದಲ್ಲಿ ನಾನೆಂದೋ ನಿಮ್ಹಾನ್ಸ್ ಶವಾಗಾರ ಪೆಟ್ಟಿಗೆಯಲ್ಲಿ ಕೊಳೆಯುತ್ತ ಬಿದ್ದಿರುತ್ತಿದ್ದೆ. ನನ್ನ ಬದುಕು ನಿನ್ನಂಥ ಯಾರನ್ನೂ ಆಕರ್ಷಿಸುತ್ತಿರಲಿಲ್ಲ.

ಆಕೆಯ ಪರಿಚಯವಾದದ್ದು ನನ್ನ ಬದುಕಿನ ಸುವರ್ಣಾಧ್ಯಾಯವೆಂದೇ ನಾನು ಭಾವಿಸುತ್ತೇನೆ…
*
*
*
ನಾನು ಚಿಕ್ಕಂದಿನಿಂದ ಮುಂದೇನಾಗಬೇಕೆಂದು ಯೋಚಿಸಿರಲಿಲ್ಲವಾದರೂ ಬ್ಯಾಂಕ್ ನೌಕರಿಗೆ ಸೇರಿಕೊಂಡ ಕೆಲ ವರ್ಷಗಳ ನಂತರ ಶಿಕ್ಷಕನಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳತೊಡಗಿಡೆ. ಯಾವುದೇ ಒಂದು ನೌಕರಿಗೆ ಅವರದೇ ಆದ ಒಂದು ನಿರ್ದಿಷ್ಟ ವ್ಯಕ್ತಿತ್ವ ಉಳ್ಳವರಾಗಿದ್ದರೆ ಚೆನ್ನಾಗಿರುತ್ತದೆ. ಪೋಲೀಸ್ ಆಗೋರು ಶಿಕ್ಷಕ ವೃತ್ತಿಗೆ ಹೇಗೆ ಸರಿ ಹೋಗುವುದಿಲ್ಲವೋ ಹಾಗೆ, ಶಿಕ್ಷಕನೋರ್ವನ ಉತ್ತಮ ಅಂಶಗಳೆಲ್ಲವು ನನ್ನ ವ್ಯಕ್ತಿತ್ವದಲ್ಲಿದ್ದವು. ಮುಖ್ಯವಾಗಿ ಅಮಾಯಕತೆ, ಯಾರಿಂದಲೂ ಮೋಸಹೋಗಲಾರದಂಥ ಸೌಮ್ಯ ವ್ಯಕ್ತಿತ್ವ. ಅದರ ಅರಿವಾಗುವ ಹೊತ್ತಿಗೆ ತುಂಬ ವಿಳಂಬವಾಗಿತ್ತು. ಇದಕ್ಕೆ ಕಾರಣಗಳಿಲ್ಲದಿಲ್ಲ. ಇದಕ್ಕೆ ಸಂಬಂಧಿಸಿದ ವಿವರಗಳು ಮುಂದೆ ಅನಿವಾರ್ಯ ಸ್ಥಿತಿಯಲ್ಲಿ ಬರುತ್ತದೆ.

ಇದ್ದಕ್ಕಿದ್ದಂತೆ ನಮ್ಮ ಬ್ಯಾಂಕಿನ ಸಂಘದ ರಾಷ್ತ್ರಮಟ್ಟದ ಪದಾಧಿಕಾರಿಗಳ ಪೈಕಿ ಕಲ್ಕತ್ತಾದಿಂದ ಶ್ರೀಕಾಂತ್ ಬರುವಾ; ದೆಹಲಿಯಿಂದ ಅತುಲ್ಕುಮಾರ್ಬಗೀಚ, ಬೊಂಬೈಯಿಂದ ಸುನೀತ್ ಚೌಗಲೆ ಬೆಂಗಳೂರಿಂದ ಆತ್ಮಾನಂದ್ ಮೇಲು ಕೋಟೆ ಮೊದಲಾದವರು ಕೊತ್ತಲಿಗಿಗೆ ಬಂದುಬಿಟ್ಟರು. ಒಂದಲ್ಲಾ ಒಂದು ಭೂಗತಚಟುವಟಿಕೆಗಳು ಉತ್ತರ ಭಾರತದ ಬಹುಪಾಲು ನಗರಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದುದರಿಂದ ಈ ಸಾಲಿನ ಬ್ಯಾಂಕ್ ನೌಕರರ ಪೂರ್ಣಾಧಿವೇಶನವನ್ನೂ ಜೊತೆಗೆ ಬ್ಯಾಂಕಿನ ಸುವಾರ್ಣ ಮಹೋತ್ಸವವನ್ನೂ ಒಟ್ಟಿಗೆ ವಿಜೃಂಭಣೆಯಿಂದ ಆಚರಿಸಲು ಸೌಮ್ಯ ಮತ್ತು ನಿರುಪದ್ರವಿ ಸ್ಥಳವಾದ ಕೊತ್ತಲಿಗಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಶ್ರೀಲಂಕಾದಿಂದ ತಮಿಳು ಉಗ್ರಗಾಮಿಗಳ ತಂಡವೊಂದು ಬೆಂಗಳೂರಲ್ಲಿ ಸ್ಥಾವರ ಸ್ಥಾಪಿಸಿಕೊಂಡು ಬುಡಮೇಲು ಕೃತ್ಯದಲ್ಲಿ ತೊಡಗಿದೆ ಎಂದು ಗುಪ್ತವರದಿ ಆಧಾರದ ಮೇಲೆ ಬೆಂಗಳೂರಲ್ಲಿ ಮಾಡಲು ಸಾಧ್ಯವಿರಲಿಲ್ಲ. ಬ್ಯಾಂಕ್ ವ್ಯವಸ್ಥೇನೆ ಬಂಡವಾಳ ಶಾಹಿಗಳ ಮತ್ತು ಜಮೀನ್ದಾರರ ಪರವಾಗಿದೆ. (ಈಗಲೂ ಆಂಧ್ರ ಪ್ರದೇಶದ ತೆಲಂಗಾಣ ಪ್ರಾಂತದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಲಕ್ಷಗಟ್ಟಲೆ ಹಣವನ್ನು ಕಡಿಮೆ ಬಡ್ಡಿ ಧರಕ್ಕೆ ಪಡೆದು ಶೇ. ಹತ್ತರಷ್ಟು ಬಡ್ಡಿದರ ಹೇರಿ ಚಿಕ್ಕ ಚಿಕ್ಕ ಹಿದುವಳಿದಾರರಿಗೆ ಸಾಲ ನೀಡಿರುವ ನೂರಾರು ಮಂದಿ ಜಮೀನ್ದಾರರನ್ನು ನೋಡಬಹುದಾಗಿದೆ!) ಆದ್ದರಿಂದ ಆಂಧ್ರದ ಯಾವ ಭಾಗದಲ್ಲೂ ಈ ಅಧಿವೇಶನ ನಡೆಸುವುದಕ್ಕೆ ಆಸ್ಪದಕೊಡುವುದಿಲ್ಲವೆಂದು ನಕ್ಸಲೈಟ್ಸ್ ಬೆದರಿಕೆಯೊಡ್ಡಿರುವುದರಿಂದ ಆಂಧ್ರಪ್ರದೇಶದಲ್ಲಿ ಮಾಡಲು ಸಾಧ್ಯವಿಲ್ಲ. ಭೂಗತ ದೊರೆಗಳು; ರಾಜಕಾರಣಿಗಳು, ಷೇರ್ ದಲ್ಲಾಳಿಗಳು, ಹವಾಲ ದೊರೆಗಳು ಇವರ ಪರವಾಗಿ ಬ್ಯಾಂಕ್ ವ್ಯವಸ್ಥೆ ವಿರುದ್ಧ ಶಿವಸೇನಾ ನಾಯಕರು ಸಮರ ಸಾರಿರುವುದರಿಂದ ಮಹಾರಾಷ್ಟ್ರದಲ್ಲೂ ನಡೆಸುವಂತಿಲ್ಲ. ಹೀಗೆ ಪ್ರತಿಯೊಂದು ರಾಜ್ಯದಲ್ಲಿ ಒಂದಲ್ಲ ಒಂದು ತಳಮಳಗಳು ಬ್ಯಾಂಕಿನ ಅವಿಭಾಜ್ಯ ಅಂಗವಾದ ಪತ್ತೆದಾರಿಕೆಯ ಶಾಖೆಯ ಛೀಫ್ ಕುರಿಯನ್ ನೀಡಿರುವ ವರದಿಯ ಆಧಾರದ ಮೇಲೆ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಮತ್ತು ಕಲಾ ಸಾಂಸೃತಿಕ ಪುಟ್ಟ ನಗರವೆಂದು ಹೆಸರಾದ ಕೊತ್ತಲಿಗಿಯೇ ಮಹಾ ಅಧಿವೇಶನ ನಡೆಸಲು ಸೂಕ್ತ ಎಂಬ ನಿರ್ಣಯವನ್ನು ಕಳೆದೆರಡು ತಿಂಗಳ ಹಿಂದೆ ಡೆಹ್ರಾಡೋನ್‌ನಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ‌ಒಮ್ಮತದಿಂದ ಸ್ವೀಕರಿಸಲಾಯಿತು. ಒಂದು ಉಲ್ಲೇಖಾರ್ಹ ಸಂಗತಿ ಎಂದರೆ ಕೊತ್ತಲಿಗಿ ಶಾಖೆ ಠೇವಣಿ ಸಂಗ್ರಹಣಾ ಕಾರ್ಯದಲ್ಲಿ ಎಲ್ಲಾ ಶಾಖೆಗಳಿಗಿಂತ ಮುಂಚೂಣಿಯಲ್ಲಿರುವುದೆಂದೂ, ಇದಕ್ಕೆ ಶಕ್ತಿ ಮೀರಿ ಶ್ರಮಿಸಿದವರು ಶ್ರೀಮತಿ ಶಾಂತಿ ಗರಡಿಮನಿ ಮತ್ತು ಪಂಡಿತ್ ಶಾಮಾಶಾಸ್ತ್ರಿ (ಪಂಡಿತ್ ಎಂಬುದು ನಮ್ಮ ಮನೆ ಹೆಸರು… ನಿನಗೆ ಗೊತ್ತಿಲ್ಲ) ಎಂದೂ ಕುರಿಯನ್ ತಮ್ಮ ಗುಪ್ತ ವರದಿಯಲ್ಲಿ ವ್ಯಕ್ತಪಡಿಸಿದ್ದರು. ಸೌಂದರ್ಯ ಮತ್ತು ಸಂಸ್ಕೃತ ಇವೆರಡೂ ಜೊತೆಜೊತೆಯಾಗಿದ್ದರೆ ಎಂಥ ಪವಾಡ ನಡೆಯುತ್ತದೆ ಎಂಬುದಕ್ಕೆ ಇವರೀರ್ವರೇ ನಿದರ್ಶನವೆಂದು ವರದಿಯಲ್ಲಿ ಪ್ರಶಂಸಿಸಲಾಗಿತ್ತು. ಗುಪ್ತ ವರದಿಯಲ್ಲಿದ್ದ ಇನ್ನು ಕೆಲವು ಪ್ರಮುಖ ಅಂಶಗಳೆಂದರೆ ಇಡೀ ಭಾರತದಲ್ಲಿ ವಾಯು ಮಾಲಿನ್ಯ ಶಬ್ದ ಮಾಲಿನ್ಯವಿಲ್ಲದ ಮತ್ತು ಫ್ಲೋರಿನ್ ಯುಕ್ತ ಶುದ್ಧ ನೀರು ದೊರಕುವ ಏಕೈಕ ಕಿರುನಗರಿ ಕೊತ್ತಲಿಗಿ ಎಂದು ಹೆಗ್ಗಳಿಸಲಾಗಿತ್ತು. ಇವೆಲ್ಲವುಗಳ ಜೊತೆಗೆ ಬ್ಯಾಂಕಿನ ಸೀನಿಯರ್ ನೌಕರರಾದ ಚಂಬಸ್ಯಯ್ಯ ; ಇಸ್ಮಾಯಿಲ್ ಮತ್ತು ಹೆಬ್ರಿಯವರನ್ನು ಸ್ವಜಾತಿ ದ್ರೋಹಿಗಳೆಂದೂ, ಸ್ವಹಿತ ಸಾಧಿಸಿಕೊಳ್ಳುವ ಸಲುವಾಗಿ ಬ್ಯಾಂಕ್ ಹಿತಾಸಕ್ತಿಯನ್ನು ಬಲಿಕೊಡಲಿಕ್ಕೂ ಹಿಂಜರಿಯದವರೆಂದೂ. ನಡುವಳಿಕೆ ಉತ್ತಮಪಡಿಸಿಕೊಳ್ಳಲು ಆರು ತಿಂಗಳು ಕಾಲಾವಧಿಯನ್ನು ನೀಡಲಾಗುವುದೆಂದೂ ವಿವರಿಸಲಾಗಿತ್ತು.

ಬರೂವ ಮತ್ತು ಬಗೀಚರು ಆ ಮುವ್ವರಿಗೆ ಛೀಮಾರಿ ಹಾಕಿದರು. ಹಾಗೆಯೇ ಶ್ರೀಮತಿ ಶಾಂತಿ ಮತ್ತು ಪಂ.ಶಾಮಾಶಾಸ್ತ್ರಿಯವರ ಕೈಕುಲುಕಿ ರಾಷ್ರೀಯ ಮಟ್ಟದಲ್ಲಿ ಅತ್ಯುತ್ತಮ ಸೇವಾ ಸ್ವರ್ಣ ಪದಕ ಪಡೆದುದಕ್ಕೆ ಅಭಿನಂದನೆಗಳೆಂದೂ, ಮುಂದೆ ನಡೆದ ಮಹಾಧಿವೇಶನಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವ ಸನ್ಮಾನ್ಯ ರಿಜರ್ವ್ ಬ್ಯಾಂಕ್ ಗವರ್ನರರೇ ತಮ್ಮ ಅಮೃತ ಹಸ್ತದಿಂದ ಪ್ರಶಸ್ತಿ ಪ್ರಧಾನ ಮಾಡುವರೆಂದೂ ನಿಮಗೆ ಉತ್ತಮ ಅವಕಾಶಗಳು ಕಾದಿವೆ ಎಂದೂ ಹೇಳಿದರು.
ಶ್ರೀಯುತ ಮೇಲುಕೋಟೆಯವರಿಗೆ ಮಹಾಧಿವೇಶನವನ್ನು ನಡೆಸುವ ಜವಾಬ್ದಾರಿ ವಹಿಸಿ ಅವರೆಲ್ಲ ಶಿಸ್ತಿನ ಸಿಪಾಯಿಗಳಂತೆ ಗೊತ್ತುಪಡಿಸಿದ ವೇಳೆಗೆ ಅಲ್ಲಿಂದ ಬೀಳ್ಕೊಂಡರು.
ಬಂದು ಹೋದವರ ಟಿಪ್ ಟಾಪ್ ಡ್ರೆಸ್ಸೂ; ಗಡ್ಡ ಮೀಸೆ ರಹಿತ ಕಿತ್ತಳೆ ವರ್ಣದ ಮುಖಗಳನ್ನು ಅವರು ಟಿಸ್ಸಾ ಪುಸ್ಸಾ ಅಂತ ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದ ಸ್ಟೈಲು ಇವೆಲ್ಲವನ್ನು ಗಮನಿಸಿದ ಗ್ರಾಮದ ಮುಗ್ಧ ಜನತೆಯು ಅವರನ್ನು ವಿಶ್ವಸುಂದರಿ ನಡೆಸಬೇಕೆಂದಿರುವ ಜನಪ್ರಿಯ ಹಿಂದಿ ಸಿನಿಮ್ಮ ನಟರೆಂದು ಅಪಾರ್ಥ ಮಾ‌ಇಕೊಂಡರು. ಅವರಲ್ಲಿ ಶಶಿಕಪೂರ್ ಯಾರು? ದಿಲೀಪ್ ಕುಮಾರ್ ಯಾರು! ಧರ್ಮೇಂದ್ರ ಯಾರು ಅಂತೆಲ್ಲ ಕೇಳಿ ನಿಜ ತಿಳಿದುಕೊಂಡು ಮುಖ ಚಿಕ್ಕದು ಮಾಡಿಕೊಂಡು ಹೋಗತೊಡಗಿದರು. ಅವರ ಪೈಕಿ ಅನೇಕರು ನನ್ನನ್ನು ಶಾಂತಿಯನ್ನು ಹೀರೋ ಹೀರೋಯಿನ್ನುಗಳೆಂದು ಆಯ್ಕೆ ಮಾಡಲಿಕ್ಕೆ ಬಂದಿರುವರೆಂದು ಊಹಿಸಿ ಪೆಚ್ಚಾದರು.

ಅತ್ಯುತ್ತಮ ಸೇವಾ ಪ್ರಶಸ್ತಿಯ ಬಗ್ಗೆ ನನ್ನಲ್ಲಿ ಯಾವ ಭಾವನೆಗಳೂ ಇರಲಿಲ್ಲ… ಅದನ್ನು ಸೃಷ್ಟಿಸಿದವಳೇ ಶಾಂತಿ. ನಾನು ಶಾಂತಿ ಜನರ ದೃಷ್ಟಿಯಲ್ಲಿ ಹೀರೋ ಹೀರೋಯಿನ್ನುಗಳೇ ಆದೆವು. ಕೆಲವು ಪತ್ರಕರ್ತರು ಬಂದು ವಿಷಯ ತಿಳಿದು ಫೋಟೋ ಕ್ಲಿಕ್ಕೆನಿಸಿಕೊಂಡು ಹೋದರು. ಓಬಳೇಶ ಕ್ವಾರ್ಟುಬೇಕಂತ ‘ಪಾತಿಕ ರುಪಾಯಿ’ ಇಸಿದುಕೊಂಡು ಹೋದ. ಆದರೆ ತ್ರಿಮೂರ್ತಿಗಳ ಮುಖದಿಮ್ಮಗುಟ್ಟತೊಡಗಿತು. ಅವರ ಕುರ್ತ್ಸಿತ ಭಾವನೆಯಿಂದ ಅವರು ಒಟ್ಟಾದರು – ದ್ರೌಪದಿಯ ವಸ್ತ್ರಾಪಹರಣ ಮಾಡಲಿಕ್ಕೆ ಗಾಂಧಾರಿ ಪುತ್ರರು ಒಟ್ಟಾದ ಹಾಗೆ.

ಇನ್ನೇನು ಮನೆಗೆ ಹೋಗಿ ಗರ್ಭಿಣಿ ಪತ್ನಿಗೆ ವಿಷಯ ಅರುಹಿ ಸಂತೋಷಪಡಿಸಬೇಕೆಂದು ಹೊರಡಬೇಕೆನ್ನುವಷ್ಟರಲ್ಲಿ ಗುಲಾಂನಬಿ ಕಾರುಕೊಟ್ತು ಮನೆಗೆ ಕರೆಯಿಸಿಕೊಂಡು ನಮ್ಮೀರ್ವರನ್ನು ಸತ್ಕರಿಸಿ ಸಂತೋಷಿಸಿದ ಹಳೇಕೋಟೆ ವೃತ್ತದ ಬಳಿ ಗುಮಿಸಿಗೌಡ “ಇದು ಕಮ್ಯುನಿಷ್ಟರ ಜನಪರ ಕಾಳಜಿಗೆ ಸಂದ ಪ್ರಶಸ್ತಿ” ಎಂದು ಪ್ರಶಂಸಿಸಿದ. ಅವರೆಲ್ಲರಿಮ್ದ ಬಿಡಿಸಿಕೊಂಡು ಮನೆಗೆ ಹೋದರಲ್ಲಿ ‘ಯಾರೋ ಶೂದ್ರಹುಡುಗರು ತನ್ನ ಮೇಲೆ ನೀರು ಸಿಂಪಡಿಸಿ ಮಡಿ ಕೇಡೆಸಿದರೆಂಬ’ ಕಾರಣಕ್ಕೆ ಹೆಂಡತಿ ಸಿಡಿ ಮಿಡಿಗೊಂಡಿರುವುದು ಕಂಡಿತು. ಮತ್ತೆ ಸ್ನಾನ ಮಾಡಿ ಮಡಿಯಿಂದ ಬಂದ ಆಕೆ ಅಪ್ಪಿಕೊಳ್ಳಲು ಬಂದ ನನ್ನಿಂದ ದೂರ ಸಿಡಿದಳು. ಸಂತೋಷದ ಕಾರಣ ಹೇಳಿದೆ. ನಾನು ಹೇಳಿದ್ದನ್ನು ಆಕೆ ಹೇಗೆ ಅರ್ಥೈಸಿಕೊಂಡಳೋ ತಿಳಿಯದು. ‘ಹೌದಾ’ ಅಂದಳು ಅಷ್ಟೆ. ಅವಳ ನಿರ್ಲಕ್ಷ್ಯ ಪೂರಕ ಪ್ರತಿಕ್ರಿಯೆಯಿಂದ ನಾನು ಪಾತಾಳಕ್ಕಿಳಿದು ಹೋದೆ… ‘ಥೂ ನಿರ್ಜೀವ ಕಾಷ್ಟ ಶಿಲ್ಪ’ ಎಂದು ಮನಸ್ಸಿನಲ್ಲೇ ಬಯ್ದುಕೊಂಡೆ.

(ಛೇ! ಎಷ್ಟೊಂದು ಸುಳ್ಳು ಹೇಳ್ತಿದಾರಲ್ಲ ಇವ್ರು… ಅದನ್ನು ಕೇಳುತ್ತಲೆ ನಾನು ಸಂತೋಷದಿಂದ ಉಬ್ಬಿಹೋದುದರ ಬಗೆಗಾಗಲೀ, ಲಜ್ಜಾಭರಣ ಕಳಚಿಟ್ಟು ಅಪ್ಪಿಕೊಂಡು ಮುದ್ದಿಸಿದ್ದರ ಬಗೆಗಾಗಲೀ ಇವರು ಚಕಾರ ಎತ್ತುತ್ತಿಲ್ಲವಲ್ಲ. ನನ್ನನ್ನು ಅರ್ಥ ಮಾಡಿಕೊಂಡಿದ್ದು ಇಷ್ಟೇ ಏನು)
ಸಂತೋಷದ ಸಂಗತಿಯ ಬಗೆಗಾಗಲೀ; ದುಃಖದ ಸಂಗತಿಯ ಬಗೆಗಾಗಲೀ ಹೇಳಿಕೊಳ್ಳ ಬೇಕೆಂದಿದ್ದರೆ ಮಾಡಿದ್ದಾರೆ ಈ ಪ್ರಪಂಚದಲ್ಲಿ? ಮಾಡಿಕೊಂಡ ಹೆಂಡತಿಯೇ ನನ್ನ ಸಂತೋಷದ ಗಳಿಗೆಗಳ ಬಗ್ಗೆ ಸ್ಪಂದಿಸಲಿಲ್ಲವೆಂದ ಮೇಲೆ ಬೇರೆಯವರು ಹೇಗೆ ಸ್ಪಂದಿಸುಯಾರು? ಎಂದು ಯೋಚಿಸಿ ಭ್ರಮ ನಿರಸನ ಪಟ್ಟುಕೊಂಡೆ. ಯಾವುದೇ ವಿಷಯವನ್ನು ಅರ್ಧಾಂಗಿಯ ಬಳಿ (ಅರ್ಧಾಂಗ ಲಕ್ವ ಪೀಡಿತ) ಹೇಳಬಾರದೆಂದು ಆ ಕ್ಷಣ ನಿರ್ಧರಿಸಿದ ನಾನು ಮುಂದೆಂದೂ ವಿಚಲಿತನಾಗಲಿಲ್ಲ.

ಮುಂದೆ ಎರಡು ಪ್ರಮುಖ ಘಟನೆಗಳು ಕೆಲವೇ ದಿನಗಳಲ್ಲಿ ನಡೆದವು. ಅವುಗಳ ಪೈಕಿ ಒಂದೆಂದರೆ ಕಾಮ್ರೇಡ್ ಪಶುಪತಿಗೆ ಲೆನಿನ್ ಗ್ರಾಡ್‌ನಲ್ಲಿ ನಡೆಯಲಿರುವ ಎಡಪಂಥೀಯ ಮಹಾಸಮ್ಮೇಳನದಲ್ಲಿ ಪಾಲ್ಗೊಂಡು ರಷ್ಯಾ ಪ್ರವಾಸ ಮಾಡಿ ಜಾಗತಿಕ ಮಾದಲ್ಲಿ ತಮ್ಮ ಕಮ್ಯುನಿಸ್ಟ್ ರಾಷ್ಟ್ರದ ಹಿರಿಮೆಯನ್ನು ಸಾರಬೇಕೆಂದು ರಷ್ಯಾ ಸರಕಾರದಿಂದ ಆಮಂತ್ರಣ ಬಂದಿದ್ದು. ವೃತ್ತಿ ರಂಗಭೂಮಿ ಕಲಾವಿದೆಯರಿಂದ ಸಂಗ್ರಹಿಸಲ್ಪಟ್ಟ ಹಣವನ್ನೆಲ್ಲ ವಶೀಲಿಗೆ ಉಪಯೋಗಿಸಿದ್ದನೆಂಬುದು ತದನಂತರ ನನಗೆ ಅರ್ಥವಾಯಿತು. ಬೆಂಗಳೂರಲ್ಲಿ ಕಮ್ಯೂನಿಸ್ಟ್ ಪಕ್ಷದ ರಾಷ್ರನಾಯಕರಾದ ಶ್ರೀನಿವಾಸ ಅಯ್ಯರ್, ನೆಡುಂಚಿಯನ್ ಮೊದಲಾದವರ ಕೈಕಾಲಿಗೆ ಬಿದ್ದು ಅಂಗಲಾಚಿದ್ದ. ಇದಕ್ಕೆ ಸಂಬಂಧಿಸಿದಂತೆ ತಾನು ಸೃಷ್ಟಿಸಿದ ಖೋಟಾ ದಾಖಲೆಗಳನ್ನು ತೋರಿಸಿ ನಂಬಿಸಿದ್ದ. ನಡಬಾನಳ್ಳಿಗೆ ಹೋಗಿ ಬರುವುದಾಗಿ ಹೇಳಿಹೋದವನು ಕಾಮ್ರೇಡ್ ಸತ್ಯಮೂರ್ತಿಯೊಂದಿಗೆ ದೆಹಲಿಗೂ ಹೋಗಿ ಡಾಂಗೆಯವರಿಗೆ ಕಲೆ ಬಿದ್ದು ಬಂದ. ಅವನ ತಿಂಗಳುಗಳ ಶ್ರಮ ವ್ಯರ್ಥವಾಗಲಿಲ್ಲ. ಅಲ್ಲಿಂದ ಬಂದ ಆಮಂತ್ರಣ ಹಿಡಿದುಕೊಂಡು ಎಡ ಬಲಗಳ ನಡುವೆ ಭೇದವೆಣಿಸದೆ ಎಲ್ಲರ ಮನೆ ಬಾಗಿಲು ತಟ್ಟಿ ಗುಟ್ಟಾಗಿ ಹಣ ಸಂಗ್ರಹಿಸಿದ. ಮುಗ್ದ ನಿರುಪದ್ರವಿ, ಅಮಾಯಕ ಕಾರ್ಯಕರ್ತನಾಗಿದ್ದ ಗೌಡ ತನ್ನ ಇಪ್ಪತ್ತೆಕರೆ ಹೊಲವನ್ನು ಚಿನ್ನಡೀಚಲುಮ ಪೂಜೆ ಮಾಡುವವರಿಗೆ ಆಯ್ಕೆ ಮಾಡಿ ಕೊಟ್ಟು ಪಡೆದ ಸಾಲದ ಮೊಬಲಗನ್ನು ತನ್ನರ್ಧ ವಯಸ್ಸಿನ ಪಶುಪತಿಗೆ ನೀಡಿದ್ದು ಕೂಡ ಮೂರನೇ ವ್ಯಕ್ತಿಗೆ ತಿಳಿಯದು. ಅದಕ್ಕಿಂತ ಮೊದಲು ತನ್ನ ತಂದೆ ಲಕ್ಷಾಧೀಶ್ವರರೆಂದೂ; ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಕೌಂಡ್‌ದೌನ್ ಸ್ಥಿತಿಯಲ್ಲಿರುವ ಅವರಿಗೆ ತಾನು ಏಕ ಮಾತ್ರ ಪುತ್ರನೆಂದೂ. ಅವರು ಇಷ್ಟರಲ್ಲೇ ಸ್ವರ್ಗೈಕ್ಯರಾದೊಡನೆ ಲಕ್ಷಾಂತರ ರೂಪಾಯಿ ಆಸ್ತಿ ತನ್ನದಾಗುವುದೆಂದು ಹೇಳಿ ಅನೇಕರನ್ನು ನಂಬಿಸಿದ್ದಂತೆ ನನ್ನನ್ನೂ ನಂಬಿಸಿದ್ದ. ಕುಂಟಳನಾಡಿನಲ್ಲಿ ಕಮ್ಯುನಿಸ್ಟ್ ಸಂಘಟನೆಗಾಗಿ ಸೋವಿಯತ್ ಸರಕಾರ ರನಗೆ ಒಂದು ಲಕ್ಷಡಾಲರ್ ಅಂದರೆ ಮೂವತ್ತೈದು ಲಕ್ಷ ನಗದು ಕೊಡಲಿದೆ ಎಂದು ಅವನು ಹೇಳಿದ್ದಕ್ಕೆ ಎಲ್ಲರಂತೆ ಒಪ್ಪಿದೆ. ಪ್ರಪಂಚ ಜ್ಞಾನಶೂನ್ಯ ನಾನು ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಅವನ ವಾಗ್ ವೈಖರಿ ಪ್ರಚಂಡವಾಗಿತ್ತು. ಅವನ ಬೆಣ್ಣೆಯಲ್ಲಿ ಮುಳ್ಳುಮುರಿಯುವ, ಕೂದಲು ಸೀಳುವ ಅವನ ತಂಜಾವರಿ ಮಾತುಗಳಿಗೆ ಕಲ್ಲುಗಳೂ ಸ್ಪಂದಿಸುತ್ತಿದ್ದವು. ಬ್ಯಾಂಕಿನಿಂದ ಐವತ್ತು ಸಾವಿರ ತುಪಾಯಿ ಸಾಲ ಕೊಡಿಸುವಂತೆ ಅವನು ನಂಗೆ ದುಂಬಾಲು ಬಿದ್ದ. ಸೋವಿಯತ್ತಿನಿಂದ ಮರಳಿದ ಮರು ದಿನವೇ ಸಾಲ ಚುಕ್ತಾ ಮಾಡುವುದಾಗಿ ನಂಬಿಸಿದ. ನಾನು ನಂಬಿ ಬಿಟ್ಟೆ.ನಾನೇ ಜಾಮೀನು ಕೊಟ್ಟು ಅವನಿಗೆ ಬ್ಯಾಂಕಿನಿಂದ ಹಣ ಕೊಡಿಸಿಯೂ ಬಿಟ್ಟೆ. ಇದಕ್ಕೆ ತ್ರಿಮೂರ್ತಿಗಳು ಎಷ್ಟೊಂದು ಅದ್ಭುತ ರೀತಿಯಲ್ಲಿ ಸಹಕರಿಸಿದರೆಂಬುದು ನೆನೆದರೆ ಭಯವಾಗುತ್ತದೆ. ಹಾಗೆ ಲಕ್ಷಗಟ್ಟಲೆ ಹಣ ಸಂಗ್ರಹಿಸಿಕೊಂಡ ಅವನು ಸೋವಿಯತ್‌ಗೆ ಹೋಗಲಿಲ್ಲ. ಬದಲಿಗೆ ಬೊಂಬಾಯಿಗೆ ಹೋಗಿ ನೆಲೆಸಿರುವನೆಂದು ನನಗೆ ಧೀರ್ಘಕಾಲದ ನಂತರ ತಿಳಿದುಬಂತು… ಅಷ್ಟೊತ್ತಿಗೆ ಕಾಲ ನನ್ನನ್ನು ಜೀರ್ಣಿಸಿಕೊಂಡು ಬಿಟ್ತಿತ್ತು.

ಇನ್ನೊಂದು ಘಟನೆಯೆಂದರೆ ಡಾ. ಮೇಲುಕೋಟೆಯವರ ಅಧ್ಯಕ್ಷತೆಯಲ್ಲಿ ರಚಿತಗೊಂಡಿದ್ದ ಸಮಿತಿ ನಡೆಸಿದ ಕಲಾಪಗಳು… ಡಾ. ಮೇಲುಕೋಟೆ ಎಂಬ ಹೆಸರು ಕೇಳಿ ಅಯ್ಯಂಗಾರರಿರಬೇಕೆಂದುಕೊಂಡರೆ ತಪ್ಪು. ಮೇಲುಕೋಟೆಯ ದಲಿತಕೇರಿಯಿಂದ ಬಂದಂಥವರಾಗಿದ್ದ ಅವರು ಸಂಘಟನಾಕಾರ್ಯದಲ್ಲಿ; ಬ್ಯಾಂಕ್ ವಹಿವಾಟು ಜ್ಞಾನದಲ್ಲಿ ನುರಿತ ವ್ಯಕ್ತಿಯಾಗಿದ್ದು ಮೇನೇಜ್‌ಮೆಂಟಿನಿಂದ ಮೆಚ್ಚುಗೆ ಗಳಿಸಿದ್ದ ಪ್ರಭಾವಶಾಲಿ ಮಧ್ಯವಯಸ್ಕರಾಗಿದ್ದರು. ಪಾದರಸದಂತಿದ್ದ ವ್ಯಕ್ತಿತ್ವದ ಅವರು ಜಿಲ್ಲೆಯ ಅನೇಕ ರಾಜಕಾರಣಿಗಳನ್ನು‌ಊ, ವರ್ತಕರನ್ನೂ; ಪ್ರಗತಿಪರ ಮನಸ್ಕರನ್ನೂ ಸಂಪರ್ಕಿಸಿದ್ದು ತಡವಾಗಲಿಲ್ಲ ಮತ್ತು ಅದರಿಂದ ಎಲ್ಲಾ ರೀತಿಯ ಸಹಕಾರ ಪಡೆದುಕೊಂಡಿದ್ದೂ ತಡವಾಗಲಿಲ್ಲ. ಅಲ್ಲದೆ ರಾಜ್ಯ ಸರಕಾರ ಕೂಡ ತನ್ನ ಎಲ್ಲ ಇಲಾಖೆಗಳಿಗೆ ಸಹಕರಿಸುವಂತೆ ಆಜ್ಞೆ ಹೊರಡಿಸಿತು. ಸಾಂಸ್ಕೃತಿಕ ಅಧ್ಯಕ್ಷತೆಗೆ ನನ್ನ ಹೆಸರನ್ನು ಹೆಬ್ರಿ ಸೂಚಿಸಿದರೆ ಚಂಬಸ್ಯಯ್ಯ, ಇಸಮಾಯಿಲು ಒಕ್ಕೊರಲಿಂದ ಬೆಂಬಲಿಸಿದರು. ಕಾಂ.ಪಶುಪತಿ ಸೋವಿಯತ್‌ನಲ್ಲಿ ಈಗ ಏನು ಮಾಡುತ್ತಿರಬಹುದೆಂದು ಯೊಚಿಸಿದ್ದ ನಾನು ದಿಗ್ಗನೆ ಎಚ್ಚತ್ತು ನಿರಾಕರಿಸಿದೆ. ಡಾ. ಮೇಲುಕೋಟೆಯವರ ಒತ್ತಾಯಕ್ಕೆ ಮಣಿಯಬೇಕಾಯಿತು. ಸಾಂಸ್ಕೃತಿಕ ಸಲಹಾ ಸಮಿತಿಯ ಸದಸ್ಯತ್ವ ಸ್ವೀಕರಿಸುವಂತೆ ಗೌಡನನ್ನು ಒತ್ತಯಿಸಿದೆ… ನನ್ನವರು, ತನ್ನವರು ಎನ್ನುವವರು ಒಬ್ಬರು ಇರಲಿ ಅಂತ, ಪಶುಪತಿಯ ಬಗ್ಗೆ ಅನುಮಾನ ಶುರುವಾಗಿತ್ತೋ ಏಮೋ! ಆತ ಒಪ್ಪಿಕೊಳ್ಳಲಿಲ್ಲ. ಮಂಕಾಗಿದ್ದ… ಸಾಂಸ್ಕೃತಿಕ ಸಲಹಾ ಸಮಿತಿಗೆ ಸ್ಥಳೀಯ ಕಲಾವಿದೆಯರಿರದಿದ್ದರೆ ಸರಿ ಕಾಣುವುದಿಲ್ಲ ಎಂದಾ ಹೆಬ್ರಿ ಸೂಚಿಸಿದ. ಅದಕ್ಕೆ ಎಲ್ಲರೂ ‘ಹೌದೌದು’ ಎಂದರು. ಕಳೆದ ಇಪ್ಪತ್ತು ವರ್ಷಗಳಿಂದ ಸಾವಿರಾರು ರಂಗ ಪ್ರಯೋಗಗಳಲ್ಲಿ ನಟಿಸಿ ನಾಡಿನಾದ್ಯಂತ ಮನೆಮಾತಿರುವ ಹುಲಕೋಟಿ ರಮಾಬಾಯಿಯವರ ಹೆಸರನ್ನು ಸೂಚಿಸಿದವರು ಮೇಲುಕೋಟೆಯವರೆಂದರೆ ನಿನಗೆ ಆಶ್ಚರ್ಯವಾಗಬಹುದು. ನಿನ್ನಂತೆ ಆಕೆಯ ಹೆಸರು ಕೇಳಿದ್ದೆನಾದದರು ಆಕೆ ಇದೇ ಕೊತ್ತಲಿಗಿಯಲ್ಲಿರುವಳೆಂಬ ಸಂಗತಿ ನನಗೂ ಗೊತ್ತಿರಲಿಲ್ಲ. ವರದಾಚಾರ್, ಸದಾಶಿವರಾಯರು, ಹಿರಣ್ಣಯ್ಯ, ವೆಂಕೋಬರಾಯರು, ನಲವಡಿಯವರು, ಕಂದಗಲ್ಲುರವರು… ಇವರೇ ಅಲ್ಲದೆ ಗತಕಾಲದ ಶ್ರೀಮಂತ ರಂಗ ಪ್ರತಿಭೆಗಳೊಂದಿಗೆ ಸಾವಿರಾರು ನಾಟಕಗಳಲ್ಲಿ ನಟಿಸಿರುವ, ಸಾವಿರ, ಸಾವಿರ, ರಂಗ ಗೀತೆಗಳನ್ನು ಹಾಡಿ ನಾಡ ಹೃದಯವನ್ನು ಸೂರೆಗೊಂಡಿರುವ ಆಕೆಗೆ ಮಾಸಾಶನ ಬರುವಂತೆ ಮಾಡಿದವರು ಬೇರೆ ಯಾರೂ ಅಲ್ಲ… ಈಗ ಸಚಿವರಾಗಿರುವ ಎಂ.ಪಿ. ಪ್ರಕಾಶ್‌ರವರೇ… ಅವರ ಶ್ರಮದಿಂದಾಗಿಯೇ ರಮಾಬಾಯಿಯವರಿಗೆ ಸರಕಾರ ಆಶನವಸನ ಕಲ್ಪಿಸಿಕೊಟ್ಟಿತ್ತು. ಡಾ. ಮೆಲುಕೋಟೆಯವರೇ ಕಾರು ಕೊಟು ಓಬಳೇಶನನ್ನು ಕಳಿಸಿ ರಮಾಬಾಯಿಯವರನ್ನು ಕರೆಸಿಕೊಂಡರು. ಆ ತೊಂಬತ್ತರ ಹರೆಯದ ವೃದ್ಧೆ ಬರುತ್ತಲೆ ಡಾ. ಮೇಲುಕೋಟೆ ಎದ್ದು ಹೋಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ನಾನೂ ಆಕೆಯ ತೆಜಸ್ಸಿಗೆ ಬೆರಗಾಗಿ ನಾನೂ ನಮಸ್ಕರಿಸಿದೆ. ನಮ್ಮ ಅಪೇಕ್ಷೆಯಂತೆ ಆಕೆ ಸದಸ್ಯತ್ವ ಒಪ್ಪಿಕೊಂಡರು. ಒಂದು ಗಂಟೆಹೊತ್ತು ನಮ್ಮೆಲ್ಲರೊಂದಿಗೆ ಗತಕಾಲದ ರಸನಿಮಿಷಗಳ ಬಗ್ಗೆ ಹೇಳಿತು. ಒಂದೆರಡು ರಂಗ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿತು. ಈಗ ಪಾಕಿಸ್ತಾನದಲ್ಲಿರುವ ನೂರ್‍ಜಹಾನ್ ರಮಾಬಾಯಿಯವರ ಮೆಚ್ಚಿನ ಶಿಷ್ಯೆಯಾಗಿದ್ದಳಂದರೆ, ಆಕೆಯ ದೈತ್ಯಪ್ರತಿಭೆಯನ್ನು, ಹಾಗೆಯೇ ಕುಂದನ್ಲಾಲ್ ಸೈಗಲ್ರವರೂ ಆಕೆಯ ಶಾರೀರಕ್ಕೆ ಮಾರು ಹೋಗಿದ್ದರೆಂದರೆ ನೀನೇ ಊಹಿಸಿಕೋ ಆಕೆಯ ದೈತ್ಯಪ್ರತಿಭೆಯನ್ನು, ಆಕೆಯ ಹಾಸ್ಯ ಪ್ರಜ್ಞೆಗೆ ನಾವು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು.

ನಾವೆಲ್ಲರು ಯಾವ? ಯಾವ? ಮತ್ತು ಎಂಥ? ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಒಂದು ಗಂಟೆ ಕಾಲ ಚರ್ಚಿಸಿ ಕೆಲವು ನಿರ್ಧಾರಗಳಿಗೆ ಬಂದೆವು. ಬೆಂಗಳೂರು, ಮೈಸೂರಿನಿಂದ ಇಂಥಿಂಥ ಕಲಾವಿದರನ್ನು ಕರೆಸುವುದೆಂದು ನಿರ್ಧಾರವಾದ ಮೇಲೆ ಬ್ಯಾಂಕ್ ಕಲಾವಿದರೇ ಒಂದು ಜನಪ್ರಿಯ ನಾಟಕವನ್ನು ಅಭಿನಯಿಸಿದರೆ ಹೇಗೆ ಎಂಬ ವಿಷಯ ಪ್ರಸ್ತಾಪವಾಯಿತು. ಆ ಕುರಿತ ಚರ್ಚೆಯೇ ಅರ್ಧ ತಾಸು ತಿಂತು. ತದ ನಂತರ ಸಂಗ್ಯಾಬಾಳ್ಯಾ ಎಂಬ ಸರಳ ಸುಂದರ ಪ್ರೇಮ ದುರಂತಗಳಿಂದ ಕೂಡಿದ ನಾಟಕವನ್ನು ಅಭಿನಯಿಸುವುದೆಂದು ತೀರ್ಮಾನಿಸಲಾಯಿತು.

ಸಂಗ್ಯಾಬಾಳ್ಯಾ ಎಂಬ ನಾಟಕದ ಬಗ್ಗೆ ನಿನಗೆ ಗೊತ್ತಿರಬೇಕಲ್ಲವೆ? ನಾನೂ, ನೀನೂ ಹೂವಿನ ಹಡಗಲಿಗೆ ಹೋಗಿ ನೋಡಿ ಬಂದೆವಲ್ಲ ಅದು. ಗಂಗಿಯ ತಳಮಳದ ಸುತ್ತ ಹೆಣೆದುಕೊಳ್ಳುವ ಆ ದುರಂತಮಯ ನಾಟಕವನ್ನು ಮರೆಯಲು ಹೇಗೆ ಸಾಧ್ಯಾ ಮಿತ್ರಾ? ಅದರ ಒಂದೊಂದು ದೃಶ್ಯವೂ ಕಣ್ಣಿಗೆ ಕಟ್ಟಿದಂತಿದೆ ಅಲ್ಲವೆ? ನೋಡಿದ ಆದಿನ ಸಂಗ್ಯಾನ ಪಾತ್ರದಲ್ಲಿ ನಾನು ಎಂದಾದರೊಂದು ದಿನ ಕಾಣಿಸಿಕೊಳ್ಳಬೇಕೆಂದು ಇಷ್ಟಪಟ್ಟಿದ್ದೆ. ಆ ಬಗ್ಗೆ ನಿನ್ನ ಬಳಿ ಪ್ರಸ್ತಾಪಿಸಿದ್ದೆ ಕೂಡ.

ಆಗ ನೀನು ‘ನಿನ್ನಂಥ ಪುಕ್ಕಲು ಮನುಷ್ಯ ಆ ಪಾತ್ರ ಮಾಡುವುದು ಸಾಧ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಿ. ನಿನ್ನ ಪ್ರತಿಕ್ರಿಯೆಯೊಂದಿಗೆ ನನ್ನ ಆಸೆ ತಳುಕುಬಿದ್ದು ಆ ಕ್ಷಣದಿಂದ ನನ್ನಲ್ಲಿ ಬೆಳೆಯಿತು. ಗೃಹಿಣಿಯಾದ ಗಂಗಿಯನ್ನು ಉತ್ಕಟವಾಗಿ ಪ್ರೀತಿಸುವ ಸಂಗ್ಯಾನ ಪಾತ್ರ ನನ್ನ ನೆನಪಿನ ಶೃಂಖಲೆಯಿಂದ ಕಳಚಿಕೊಂಡು ಹೋಗಲೇ ಇಲ್ಲ. ಗತಕಾಲದ ನೆನಪನ್ನು ಗುತ್ತಿಗೆ ಹಿಡಿದು ಆ ಪಾತ್ರವನ್ನು ಅಭಿನಯಿಸುವ ನಿಮಿತ್ತ ನಾನೇ ಆ ನಾಟಕವನ್ನು ಸೂಚಿಸಿದೆ ಎಂದುಕೊಳ್ಳಬೇಡ. ಕಾರಣ ಅದು ಆಕಾರ ಕಳೆದುಕೊಂಡು ಪೇಲವ ನೆನಪಾಗಿ ಮಾತ್ರ ಉಳಿದುಕೊಂಡಿತ್ತು. ರಮಾಬಾಯಿ ಅಜ್ಜಿ ಆ ನಾಟಕವನ್ನು ಪ್ರಸ್ತಾಪಿಸುತ್ತಲೇ ನನ್ನ ಮೈ ಜುಂ ಎಂದಿತು. ಪಾತ್ರ ಹಂಚಿಕೆಯಾಗುವಾಗ ಸಂಗ್ಯಾನ ಪಾತ್ರವನ್ನು ನಾನೇ ವಹಿಸಬೇಕೆಂದು ಅಜ್ಜಿಯೇ ಸೂಚಿಸಿದ್ದ. ನನ್ನ ಅಂತರಾಳದಿಂದ ನೆಲಮುಗಿಲಿಗೇಕಾಗಿ ಚಕಚಕ ಬೆಳೆದು ನಿಂತ ಸಂಗ್ಯಾ “ಎಲ್ಲಿ ನಿನ್ನ ಗಂಗಿ? ಜಾತ್ರೆಯಲ್ಲಿ ನನ್ನ ಮನವನ್ನು ಸೂರೆಗೊಂಡ ಗಂಗಿ ಎಲ್ಲಿ?” ಎಂದು ಕಣ್ಣು ಹಿಗ್ಗಲಿಸಿ ಹುಡುಕಾಡತೊಡಗಿದ. ಆ ಪಾತ್ರದ ಚುಂಬಕ ಶಕ್ತಿಗೆ ಈಡಾಗಿದ್ದ ನಾನು ಒಂದೇ ಮಾತಿಗೆ ಒಪ್ಪಿಕೊಂಡೆ.
ಹುಚ್ಚು ಹಿಡಿದು ಮೆಚ್ಚಿ ಬಂದೆ ನಿನ್ನಾ ರೂಪಕೆ
ಜರತಾರ ಸೆಲ್ಲೆ ಹಾಸಲೇನು ನಿನ್ನ ಪಾದಕೆ… ಆಳದಿಂದ ದೀರ್ಘ ನಿದ್ದೆಯಿಂದ ಆಕಳಿಸುತ್ತ; ಮೈಮುರಿಯುತ್ತ ಎದ್ದ ಅಕ್ಷರಗಳು ಒಂದರ ಪಕ್ಕ ಒಂದರಂತೆ (ಶಾಲಾ ಮಕ್ಕಳು ಪ್ರಭಾತಫೇರಿಗೆ ಹೊರಡಲು ನಿಲ್ಲುತ್ತಾರಲ್ಲ ಹಾಗೆ) ನಿಂತು ಕೊಂಬು, ವಟ್ರುಸುಳಿ, ದೀರ್ಘ, ಗುಡಿಸಿ ಮುಡಿದುಕೊಂಡು ಹಾಡಾಗಿ ತಳೆದು ನಾಲಿಗೆ ಕಡೆ ನಡೆಯತೊಡಗಿದವು.
ಸಂಗ್ಯಾ ನಿನ್ನ ಜರತಾರಿ ಸಲ್ಲೇವು ಹಾಸಲೆತ್ನಿಸಿದ ಆ ಪಾದಗಳನ್ನು ನೆನೆಸಿಕೊಂಡು ರೋಮಾಂಚನಗೊಂಡೆ… ಸಂಗ್ಯಾನ ಮನಪರವಶಗೊಳಿಸಿದ್ದು ಗಂಗಿಯ ಪಾದಗಳೇ ಹೊರತು ಆಕೆಯ ಮುಖವಲ್ಲವೆಂದು ನನ್ನ ಅನಿಸಿಕೆ…
ನಾನು ಉದ್ರೇಕಗೊಳ್ಳುತ್ತಿದ್ದುದು ನನಗೆ ಮೋಡಿ ಮಾಡುತ್ತಿದ್ದುದು ಯಾವುದೇ ಹೆಣ್ಣಿನ ಸುಂದರ ಪಾದಗಳು ಮಾತ್ರ… ತಲೆ ತಗ್ಗಿಸಿ ಮಹಾಮಳ್ಳಿಗನಂತೆ
ನಡೆಯುತ್ತಿದ್ದ ನಾನು ಕದ್ದು ಮುಚ್ಚಿ ನೋಡುತ್ತಿದ್ದುದು ಹೆಣ್ಣುಗಳ ಪಾದ ಮಾತ್ರ ಎಂದರೆ ನಿನಗೆ ಆಶ್ಚರ್ಯವಾಗಬಹುದು!

ನನ್ನಂಥ ವ್ಯಕ್ತಿಯ ಸೂಕ್ಷ್ಮವೂ ಹಾಸ್ಯಾಸ್ಪದವೂ ಆದ ಲೈಂಗಿಕ ತೆವಲುಗಳು ನಿನಗೆ ವಿಚಿತ್ರವೆಂಬಂತೆ ಕಾಣಬಹುದು. ಆಕೆಯ ವ್ಯಭಿಚಾರಕಾಗಿ ನನ್ನ ತಂದೆಯ ಚಿತ್ರವನ್ನು ತಾಯಿಗೆ ತೋರಿಸಿವ ಹ್ಯಾಮ್ಲೆಟ್‌ಗೆ ನನ್ನನ್ನು ನೀನು ಹೋಲಿಸಲೂಬಹುದು. ಹೋಲಿಸು, ಪರವಾ ಇಲ್ಲ… ಮತ್ತೊಮ್ಮೆ ಹೇಳುತ್ತೇನೆ ನನ್ನ ಮನವನ್ನು ಸೂರೆಗೊಳ್ಳುತ್ತಿದ್ದುದು, ಉದ್ರೇಕಿಸುತ್ತಿದ್ದುದು ಹೆಂಗಸರ ಸುಂದರ ಪಾದಗಳು ಮಾತ್ರ. ತನ್ನ ಮುವ್ವತ್ತೆರಡನೆ ವಯಸ್ಸಿನ ಏರು ಯೌವನದ ಕಾಲದಲ್ಲಿ‌ಇಹಲೋಕ ತ್ಯಜಿಸಿದ ಆಚಾರ್ಯ ತ್ರಯರಲ್ಲೊಬ್ಬರಾದ ಶಂಕರರು ಮೋಹಿಸಿದ್ದು ಪರಶಕ್ತಿಯ ಮೋಹಕ ರೂಪವನ್ನು, ಬೋದಿಲೇರನ ಕಥೆ ನಿನಗೆ ಗೊತ್ತೇ ಇದೆ. ಮೀರಾ ಅಕ್ಕ ಮಹಾದೇವಿಯರ ಬದುಕನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ ಪುರುಷರೂಪ ಯಾವುದು ಅಂತ ನಿನಗೆ ಗೊತ್ತೇ ಇದೆ… ಗಂಡಸನ್ನು ಸ್ಪಂದಿಸುವ, ಮೀಟುವ ಶಕ್ತಿ ಒಂದೊಂದು ಹೆಣ್ಣಿನ ಒಂದೊಂದು ಅಂಗಗಳಲ್ಲಿರುತ್ತದೆ. ಒಬ್ಬ ಜಡೆಯನ್ನೋ, ಇನ್ನೊಬ್ಬ ಕುತ್ತಿಗೆಯನ್ನೋ; ಮಗದೊಬ್ಬ ಕಾಲಮೀನ ಖಂಡವನ್ನೋ; ಮಗದೊಬ್ಬ ವಕ್ಷವನ್ನೋ, ಕಿಪ್ಪೊಟ್ಟೆಯನ್ನೋ; ನಿತಂಬವನ್ನೋ ಮತ್ತಾವ ಅಂಗವನ್ನೋ.. ನನ್ನ ಗೆಳೆಯ ಶುಕೂರ್ ಎಂಬುವವನಿದ್ದ; ಅವನು ತಾನು ನೋಡಲೆಂದು ಹೋದ ಸುಂದರ ಹುಡುಗಿಯ ವಿಧವಾ ತಾಯಿಯನ್ನು ಮೋಹಿಸಿ ಪ್ರೀತಿಸಿ ಮದುವೆಯಾದ! ಅವನನ್ನು ಆಕರ್ಷಿಸಿದ್ದು, ಹುಚ್ಚು ಹಿಡಿಸಿದ್ದು ಆ ವಿಧವೆಯ ಕಿಪ್ಪೊಟ್ಟೆ ಮೇಲಿದ್ದ ತಾಯ್ತನದ ಗೆರೆಗಳು ಎಂದರೆ ನೀನು ನಂಬಲಿಕ್ಕಿಲ್ಲ… ಇನ್ನೊಬ್ಬ ತನಗಿಂತ ಹೆಚ್ಚು ವಯಸ್ಸಾಗಿರುವವಳನ್ನು ಇಷ್ಟಪಡುತ್ತಾನೆ. ಸುರಸುಂದರ ಹೆಂಡತಿ ಇದ್ದೂ ಚಾರ್ಲ್ಸ್‌ಡಿಕನ್ಸ್‌ನಂಥಾ ಮಹಾನ್ ಲೇಖಕ ಕುರೂಪಿಯೂ, ರೋಗಿಷ್ಟೆಯೂ ಆದ ವೇಶ್ಯೆಯನ್ನು ಸಂಭೋಗಿಸಿ ಗೋನೋರಿಯಾ, ಸಿಫಿಲಿಸ್ಗಳಂಥ ಸುಖವ್ಯಾದಿಗಳಿಗೆ ತುತ್ತಾಗುತ್ತಾನೆ. ಲಿಯೋನಾರ್ಡೋ ಡಾವಿಂಚಿಯಂಥ ಕಲಾವಿದ ತನ್ನನ್ನು ತಾನು ಮೋಹಿಸಿಕೊಳ್ಳುತ್ತಾನೆ… ನೀನು ಹೆಣ್ಣಿನ

ಯಾವ ಭಾಗವನ್ನು ಇಷ್ಟಪಡುತ್ತಿರುವಿಯೋ ನಿನಗೇ ಗೊತ್ತು? ನೀನು ಯೋನಿಯನ್ನು ಅಂದರೆ ನಿನ್ನ ಬಗ್ಗೆ ನನಗೆ ತಿರಸ್ಕಾರ ಹುಟ್ಟುತ್ತದೆ. ಇರಲಿ… ನಿನ್ನದು ನಿನಗೆ; ನನ್ನದು ನನಗೆ;
ಸಂಗ್ಯಾ ಬಾಳ್ಯಾ ನಾಟಕದ ಬಗೆಗಾಗಲೀ; ಆ ನಾಟಕದಲ್ಲಿ ನಾನು ಸಂಗ್ಯಾನ ಪಾತ್ರವನ್ನು ನಿಭಾಯಿಸಲಿರುವುದರ ಬಗೆಗಾಗಲೀ ನನ್ನ ಹೆಂಡತಿ ವರಲಕ್ಷ್ಮಿಗೆ ಹೇಳುವ ಗೋಜಿಗೆ ಹೋಗಲಿಲ್ಲ. ಲಿಯನಾರ್ಡೋ ಡಾವಿಂಚಿಯಂತೆ ಅತ್ಮರತಿ ಮಾಡಿಕೊಳ್ಳುತ್ತಿದ್ದ ನನ್ನ ಸೃಜನ ಶೀಲ ಪಠ್ಯೇತರ ಚಟುವಟಿಕೆಗಳ ಬಗ್ಗೆ; ನನ್ನ ಖಾಸಗಿ ಬದುಕಿನ ವಿದ್ಯಮಾನಗಳ ಬಗ್ಗೆ ಯಾವ ಆಸಕ್ತಿ ಕುತೋಹಲವಿರಲಿಲ್ಲ… ಹೇಳಿದರೆ ಹ್ಹಾ! ಹ್ಹೂ ಎನ್ನುತ್ತಿದ್ದಳು.
“ಪಶುಪತಿ ಎಂಬ ನಿಮ್ಮ ಗೆಳೆಯ… ಸತ್ನಲ್ಲ ಕಂಡಕ್ಟ್ರು… ಆತ್ನ ಹೆಂಡತಿಯ ಒಡವೇನೆಲ್ಲ ದೋಚಿಕೊಂಡು ಹೊಗ್ಯಾನ್ಂತೆ ನೋಡ್ರೀ” ಎಂಬೋದು ಅತಿರಿಕ್ತ ಮಾತನ್ನು ಹೇಳಲು ಆಕೆಗೆ ಸಾಧ್ಯವಾಯಿತು. ಯಾರೋ ಮಾತಾಡುತ್ತಿದ್ದುದು ಆ ಕ್ಷಣ ನಿಜವೆನ್ನಿಸಿ ಗಾಬರಿಗೊಂಡೆ.
ನಾನು ಅದಕ್ಕೆ ಪ್ರತಿಕ್ರಿಯಿಸಲಿಲ್ಲ.

ತಾಯಿಯ ಅಪೇಕ್ಷೆ ಮೇರೆಗೋ; ಗೃಹ ಬಂಧನಕ್ಕೆ ರೋಸಿಯೋ ಗರ್ಭಿಣಿ ವರಲಕ್ಷ್ಮಿಯನ್ನು ಕರೆದೊಯ್ದು ಕೊಟ್ಟುರಿನಲ್ಲಿ ಬಿಟ್ಟೆ. ಒಂದಿಷ್ಟು ಹಣದ ಕೊಂತೆಯನ್ನು ವ್ಯಾಸಪೀಠದ ಸಂದಿಯಲ್ಲಿರಿಸಿದೆ. ನನ್ನ ತಾಯಿ ನನ್ನನ್ನು ಸಮಕ್ಷಮ ನಿಲ್ಲಿಸಿಕೊಂಡು ಅಪಾದಮಸ್ತಕ ನೋಡಿ ಆ ಶಾಮನೇ ಬೇರೆ; ಈ ಶಾಮನೇ ಬೇರೆ ಎಂದು ಗೊಣಗಿದಳು… ಸಂಧ್ಯಾವಂದನೆ ವ್ರತ ನಿಯಮಗಳಿಗೆಲ್ಲ ಈ ಮುಠ್ಠಾಳ ತಿಲಾಂಜಲಿಕೊಟ್ಟಿರುವನೆಂದು ಆಕೆ ಅರ್ಥ ಮಾಡಿಕೊಂಡಳು. ತನ್ನ ಗಂಡನಂತೆ ಇವನೂ ದುರಾಭ್ಯಾಸಗಳಿಗೆ ದಾಸನಾಗದಂತೆ ತಡೆಯುವಾ ಭಗವಂತನೇ ಎಂದು ಮುಚ್ಚಿಕೊಂಡ ಕಣ್ಣಂಚಿನಲ್ಲಿ ಒಂದು ಹನಿ ಶ್ರೇಷ್ಠ ಜಾತಿಯ ಮುತ್ತಿನಂತೆ ಗೋಚರಿಸಿತು.

ತಲೆ ಆವರಿಸಿದ್ದ ಸಂಗ್ಯಾನಾಗಲೀ; ಬಾಳ್ಯಾನಾಗಲೀ ನನ್ನನ್ನಲ್ಲಿರಲಿಕ್ಕೆ ಬಿಡಲಿಲ್ಲ… ಗಂಗಿಯ ಪಾತ್ರ ಇಥ್ಯರ್ಥವಾಗುವ ದಿನವೇ ಅದಾಗಿತ್ತು. ದ್ರೌಪದಿ, ಸೀತೆ, ಮಂಡೋದರಿಗಳಂಥ ಪಾತ್ರಗಳನ್ನು ವಹಿಸಿದಷ್ಟು ಸುಲಭವಲ್ಲ ಗಂಗಿಯ ಪಾತ್ರ ವಹಿಸುವುದು! ಪಾತಿವ್ರತ್ಯದ ಪಂಜರದ ಬೀಗ ತೆರೆಯುವ ಮೊದಲು, ಪಂಜರಸ್ಥ ಅರಗಿಣಿಯಲ್ಲಿ ಪಂಜರದ ನಿಕೃಷ್ಟತೆ ಮತ್ತು ನಿಸ್ಸಾರತೆಗಳನ್ನು ಹುಟ್ಟಿಸುವ ಕೆಲಸವನ್ನು ಮಾಡುತ್ತಾನೆ ಸಂಗ್ಯಾ. ಇದಕ್ಕೆ ಕುಂಟಲಗಿತ್ತಿ ಮುದುಕಿ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸುಂದರವಾದ ಪತಿಪುರುಷ ಕ್ರಮೇಣ ಕುರೂಪಿಯಾಗಿ, ನಿಸ್ಸಾರವಾಗಿ ಕಾಣ ತೊಡಗುತಾನೆ… ಆಕೆಯ ಸಾತ್ವಿಕ ಮನಸ್ಸು ಹಾದರಕ್ಕಾಗಿ ಹಾತೊರೆಯತೊಡಗುತ್ತದೆ. ಚಾಪಡಿಸತೊಡಗುತ್ತದೆ. ಬೆವರಿನ‌ಒಂದೊಂದು ಹನಿ ಮೂಲಕ ಪಾತಿವ್ರತ್ಯ ಗರತಿತನ ನೀರಾಗಿ ಹರಿಯತೊಡಗುತ್ತದೆ… ಪಂಜರ ಅಂದರೆ ಪಾತಿವ್ರತ್ಯದ ಕಳಚುತ್ತಲೆ ಆಕೆ ಹಾದರದ ತೆಕ್ಕೆಗೆ ಬೀಳುತ್ತಾಳೆ… ತಿಳಿದು ಮಾಡೋ ಹಾದರ… ನೇಪಥ್ಯದ ಹಾಡು ಧ್ವನಿಸುತ್ತಿರುವಾಗಲೆ ನಾಟಕ ಮುಗಿಯುತ್ತದೆ.

ಪತಿವ್ರತೆಯೊಳಗೆ ಹಾದರ ಹುಟ್ಟಿಸುವ ನಿನಗೆ ದಿಗ್ಭ್ರಮೆ ಹುಟ್ಟಿಸಲಾರದು. ನೀನು ಅಥವಾ ನಿನ್ನಂಥೋರು ಪಾತಿವ್ರತ್ಯ ಎಂಬ ಕಲ್ಪನೆಯನ್ನೇ ಕಪ್ಪು ಬಿಳುಪಾಗಿ ನೋಡಬಲ್ಲಿರಿ. ಮಹಾತತ್ವಜ್ಞಾನಿಗಳಂತೆ, ಪಾತಿವ್ರತ್ಯದ ಏಕಮಾತ್ರ ವಾರಸುದಾರರಂತೆ ಮಿಸ್ ಇಂಟರ್ ಪ್ರಿಟೇಷನ್ ಮಾಡ್ಟೀದಿ… ಮಹಾಭಾರತದಲ್ಲಿ ಜಂಬೂ ನೇರಳೆ ಹಣ್ಣಿನ ಪ್ರಸಂಗದ ಮೂಲಕ ಮಹಾಪತಿವ್ರತೆಯಾದ ದ್ರೌಪದಿಯ ಎದೆಯೊಳಗೆ… (ದ್ರೌಪದಿ ಸಾಮಾನ್ಯಳಲ್ಲ… ಮೂರು ಲೋಕದ ಗಂಡರೈವರಿಗೆ ಹೆಂಡತಿಯಾಗಿದ್ದವಳು. ಮೂರು ಲೋಕಕ್ಕೆ ಗಂಡರಾದವರಿಗೆ ಸಾಮಾನ್ಯ ಸ್ರೀಯಳೋರ್ವಳ ಹೃದಯಕ್ಕೆ ಸ್ಪಂದಿಸುವುದು ಗೊತ್ತಿಲ್ಲ… ಎಂದೂ ಸ್ಪಂದಿಸಲಿಲ್ಲ. ವಸ್ತ್ರಾಪಹರಣದ ಸಂಬಂಧದಲ್ಲಿ ಇಂದುಮುಖಿಯಾದ ಆಕೆಯ ಬಾಯಿಯಿಂದ ಗಂಡರೋ ನೀವು ಷಂಡರೋ ಎಂಬ ಮಾತನ್ನು ಕುಮಾರವ್ಯಾಸ ಧ್ವನಿಪೂರ್ಣವಾಗಿ ಹೊರಡಿಸುತ್ತಾನೆ…) ಧಗಧಗ ನೆಲದ ಮರೆಯ ನಿಧಾನದಂತೆ ಧಗಧಗ ಉರಿಯುತ್ತಿದ್ದ ಹಾದರದ ಕಿಚ್ಚಿನ ಸೂಕ್ಷ್ಮವನ್ನು ಆಕೆಯ ಬಾಯಿಂದಲೇ ಹೊರಗೆಡಹಿ ಕೆಳಬಿದ್ದ ಹಣ್ಣ ಮೂಲದ ತೊಟ್ಟಿಗೆ ಸೇರಿಸುವ ಕೆಲಸವನ್ನು ಆಕೆಯ ಅಣ್ಣನಾದ ಶ್ರೀಕೃಷ್ಣಪರಮಾತ್ಮನೇ ಮಾಡುತ್ತಾನೆ… ಇದರ ಬಗ್ಗೆ ನೀನು ಏನು ಹೇಳುವಿಯೋ ತಿಳಿಯದು.
ಯಶೋಧರನಂಥ ಅರಸರ ಪತ್ನಿಯಾಗಿದ್ದು ಸುಖ ಸಾಮ್ರಾಜ್ಯದ ಒಡತಿಯಾಗಿದ್ದು ಅಮೃತಮತಿ ಅಷ್ಟಾವಂತನಂಥ ಕುರೂಪಿ ಮಾಹುತನನ್ನು ಮೋಹಿಸುವುದಾದರೂ ನಿನಗೆ ಗೊತ್ತಿರಬೇಕಲ್ಲ… ಯಾವ ಶಕ್ತಿ ಆಕೆಯಲ್ಲಿ ಹಾದರದ ಭಾವನೆಯನ್ನು ಉದ್ದೀಪಿಸಿತು ಪ್ರೇರೇಪಿಸಿತು! ಹೇಳಬಲ್ಲೆಯಾ?
ನಾನು ಯಾವುದೇ ಹೆಣ್ಣನ್ನು ಅರ್ಥ ಮಾಡಿಕೊಳ್ಳುವ ಬಗೆಯೇ ಹೀಗೆ…

ಆ ದಿನ ಸಂಸ್ಕೃತಿಕ ಸಮಿತಿಯ ಅಧ್ಯಕ್ಷನಾಗಿದ್ದ ನಾನು ಲಗುಬಗೆಯಿಂದ ಹೊರಟು ಸೇರಿದೆ… ವೃದ್ಧೆ ರಮಾಬಾಯಿಯವರ ಸಲಹೆ ಮೇರೆಗೆ ಯಾರು? ಯಾರು? ಯಾವ್ಯಾವ ಪಾತ್ರಗಳಿಗೆ ಸರಿ ಹೊಂದಬಹುದೆಂದು ಲೆಕ್ಕ ಹಾಕಿದೆವು. ನಾನು ಮೊದಲೇ ಸಾಹುಕಾರ ಸಂಗ್ಯಾನ ಪಾತ್ರಕ್ಕೆ ಗೊತ್ತಾಗಿದ್ದೆನಲ್ಲ!… ಬಾಳ್ಯಾನ ಪಾತ್ರಕ್ಕೆ ಓಬಳೇಶ ಗೊತ್ತಾದರೆ, ಗಂಗಿಯ ಗಂಡ ಈರ್‍ಯಾನ ಪಾತ್ರಕ್ಕೆ ಚಂಬಸ್ಯಯ್ಯ ಎಂದು ಗೊತ್ತಾದರು. ಈರ್‍ಯಾನ ತಮ್ಮಂದಿರ ಪೈಕಿ ಬಸವನ ಪಾತ್ರವನ್ನು ಇಸುಮಾಯಿಲೂ, ಇರುಪಾಕ್ಷಿಯ ಪಾತ್ರವನ್ನು ಹೆಬ್ರಿ ಮಾಡುವುದೆಂದು ನಿರ್ಧಾರವಾಯಿತು. ಸಂಗ್ಯಾನನ್ನು ಹಿಡಿದು ಕೊಲೆ ಮಾಡುವ ಪಾತ್ರಗಳಾದ ಅವನ್ನು ಅವರು ಸ್ವಸಂತೋಶದಿಂದಲೇ ಒಪ್ಪಿಕೊಂಡರು. ನನ್ನತ್ತ ಅವರು ಆ ಕ್ಷಣ ಕೆಕ್ಕರಿಸಿ ನೋಡುವುದನ್ನು ಮರೆಯಲಿಲ್ಲ. ಕುಂಟಲಗಿತ್ತಿ ಮುದುಕಿ ಪಾತ್ರ ಮಾಡಿ ಹೆಸರಾಗಿರುವ ಫಕೀರವ್ವ ಈಗಿದ್ದರೆ ಚೆನ್ನಾಗಿತ್ತು. ಆಕೆ ಇಲ್ಲ. ಸನ್ಯಾಸಿನಿಯಾಗಿರುವಳೆಂದು ಒಬ್ಬರು ಹೇಳಿದರೆ, ಚಲುವಯ್ಯನಂಥ ಇಂಜಿನಿಯರ್ ಅಳಿಯಂದರು ಆಕೆ ಆತ್ಮಹತ್ಯ ಮಾಡಿಕೊಂಡಿರುವಳೆಂದು ಹೇಳುವರು. ಈಗ ಸೋಮವಾರ ಪೇಟೆಯಲ್ಲಿ ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವವಳೆಂದರೆ ಕಾವಲಿ ಹನುಮಕ್ಕ ಎಂಬ ಮುದುಕಿ. ಆಕೆಯನ್ನು ಕರೆಯಿಸಿ ಒಪ್ಪಿಸಿದ್ದಾಯಿತು. “ಈ ಜಲುಮದುದ್ದಕ್ಕೂ ಬರೀ ಇಂಥ ಪಾತರ ಮಾಡೋದೇ ಆಯ್ತಲ್ಲಪ್ಪಾ… ಆ ಬ್ರೆಮ್ಮ ನನ್ನ ಹಣ್ಯಾಗ ಕುಂತಲಗಿತ್ತಿ ಪಾತರ ಮಾಡ್ತಿರು ಎಂದು ಬರೆದಾನೋ ಏನೋ… ಬಾಳದಿನಗಳಾದುವ್ರಪ್ಪಾ… ಇಂಥ ಪಾತುರ ಮಾಡ್ದೆ… ನಾಲ್ಗಿ ಚುಟು ಚುಟು ಅಂತಿತ್ತು…” ಎಂದು ಗೊಣಗಿ ಒಪ್ಪಿಕೊಂಡಿತು.

ಇನ್ನು ಗಂಗಿ ಪಾತ್ರವನ್ನು ಯಾರಿಂದ ನಿಭಾಯಿಸುವುದೆಂದು ಯಕ್ಷ ಪ್ರಶ್ನೆಯಾಗಿ ಉಳಿಯಿತು. ಸುಂದರಾಂಗಳೂ; ಚಂಚಲನೇತ್ರೆಯೂ; ಕಾಮಾಗ್ನಿಯನ್ನೂ, ಪಾತಿವ್ರತ್ಯವನ್ನೂ ಅಂಗಾಂಗಗಳ ಅಭಿನಯದ ಮೂಲಕ ಪ್ರಕಟಿಸುವಂಥವಳೇ ಬೇಕು. ಆಕೆ ಪಾತಿವ್ರತ್ಯ ಮತ್ತು ಹಾದರದ ಪ್ರತಿನಿಧಿ!
ಆ ಪಾತ್ರ ಮಾಡೋರೆ ಈ ಸೂಕ್ಷ್ಮ ಕಾಲದಲ್ಲಿ ಅಪರೂಪ. ಸಮಾಜ ಸಂಗ್ಯಾಬಾಳ್ಯಾ ನಾಟಕ ಅಶ್ಲೀಲವೆಂಬ ಕಾರಣ ಸೂಚಿಸಿ ನೇಪಥ್ಯಕ್ಕೆ ತಳ್ಳಿಬಿಟ್ಟಿರುವುದರಿಂದ ಯಾರೂ ಬಹಳ ದಿನಗಳಿಂದ ಈ ಪಾತ್ರ ವಹಿಸಿಲ್ಲ. ಇಂಥ ಪಾತ್ರ ವಹಿಸೋದು ಸೋಮವಾರ ಪೇಟೆಯಲ್ಲಿ ಸಾಕಷ್ಟು ಇರುವರು! ಅಂಥವರ ಪೈಕಿ ಚವುಡವ್ವನನ್ನು ಕರೆಸಿ ಕೇಳಿದರೆ “ಇಲ್ರಪ್ಪಾ… ಹೇಮರೆಡ್ಡಿ ಮಲ್ಲಮ್ಮನ ಪಾರ್ಟ್ ಮಾಡೀ ಮಾಡೀ ಗಂಗೀ ಪಾರ್ಟ್ ಮರೆತೇ ಹೋಗೈತೆ!” ಎಂದು ದೂರ ಸರಿದುಕೊಂಡಳು. ಅಮ್ಮನಕೇರಿ ಬಸವ್ವನನ್ನು ಕೇಳಿದರೆ ತಾನು ಮಂಡೋದರಿ ಪಾತ್ರಕ್ಕಷ್ಟೆ ಲಾಯಕ್ಕಾಗಿ ಬಿಟ್ಟಿದ್ದೀನಿ ಎಂದಳು. ಕುಪ್ಪಿನಕೇರಿ ಕಾಳವ್ವ; ಗೋಪ್ಪಲಾಪುರದ ಗೋಣೆವ್ವ; ಹಲಕಂದಿ ಅಂಬುಜಾ ಮುಂತಾದವರನ್ನೆಲ್ಲ ಕರೆಸಿ ನಿರಾಸೆ ಪಟ್ಟಿದ್ದಾಯ್ತು. ಅವರು ತಮ್ಮ ಅಂಗಾಂಗಗಳಿಗೆ ಹಾದರವನ್ನು ಸಮರ್ಥವಾಗಿ ಪ್ರತಿಬಿಂಬಿಸೋದು ಸಾಧ್ಯವಿಲ್ಲವೆಂದು ಪ್ರಮಾಣಿಕವಾಗಿ ಹೇಳಿದರು. ಅವರನ್ನೆಲ್ಲ ಸಮಾಜ ಗುರುತಿಸಿರೋದು ವೇಶ್ಯೆಯರೆಂದೇ ಎಂಬುದನ್ನು ನೆನಪಿಟ್ಟುಕೋ…
ರಮಾಬಾಯಜ್ಜಿ ಇದ್ದಕ್ಕಿದ್ದಂತೆ ಓಬಳೇಶನ ಕಡೆ ತಿರುಗಿ “ದಪ್ಪಿನ ದ್ಯಾಮವ್ವನ ಮಗ್ಳು ಅನಸೂವಿ ಊರಾಗದಾಳ!” ಎಂದು ಕೇಳಿತು. ನನಗೆ ಇದ್ದಕ್ಕಿದ್ದಂತೆ ಬೆಂಗಳೂರಲ್ಲಿರೋ ಅನಸೂಯಳ ನೆನಪಾಗಿ ದೇಹದ ತುಂಬ ಅರ್ಥವಾಗದ ಭಾವನೆಗಳ ಮಹಾಪೂರ ತುಳುಕಾಡಿತು.
“ಇಲ್ಲೆವ್ವೋ… ಆಯಕ್ಕ ರಕ್ತ ರಾತ್ರಿ ಆಡಲಾಕಂತ ನೈಜಾಮಕಡೀಕ ಹೋದಾಕಿ ಬಂದಂಗಿಲ್ಲ” ಎಂದು ಓಬಳೇಶ ಹೇಳಿದ.
ಯಾವತ್ತು ಹೋದಳು? ಯಾವೂರಿಗೆ ಹೋದಳು? ಯಾವಾಗ ಬರುತ್ತಾಳೆ? ಎಂಬಿತ್ಯಾದಿ ವಿವರ ಒಪ್ಪಿಸಲು ಅವೆಲ್ಲ ಓಬಳೇಶಗೆ ಗೊತ್ತಿಲ್ಲ…. ರಾಖೇಶಗೆ ಗೊತ್ತಿರಬಹುದೆಂದು ಹೇಳಿದೆ. ಅವನು ಅವನನ್ನು ಕರೆತರಲೆಂದು ಬಸ್‌ಸ್ಟಾಂಡ್ ಕಡೆ ಹೋದ.

ನಾನೂ ಅವನ ವ್ಯಕ್ತಿತ್ವವನ್ನು ನೆನೆಸಿಕೊಂಡೆ. ಕೊತ್ತಲಗಿ ಎಂದರೆ ರಾಖೇಶ; ರಾಖೇಶ ಎಂದರೆ ಕೊತ್ತಲಗಿ. ದೂರ ದೂರದಿಂದ ಬರುವ ದೊಡ್ಡ ದೊಡ್ಡ ಪ್ರತಿಷ್ಠಿತರು ಕೊತ್ತಲಗಿಯಲ್ಲಿ ಇಳಿದೊಡನೆ ಕೇಳುವ ಪ್ರಶ್ನೆ ಒಂದೆ – “ಇಲ್ಲಿ ರಾಖೇಶ ಎಂಭೋರು ಎಲ್ಲಿರ್ತಾರೆ?” ಅಂತ. ನಾಯಿ ಕೂಡ ಬೊಟ್ಟು ಮಾಡಿ ತೋರಿಸುತ್ತದೆ. ಅಷ್ಟು ಜನಪ್ರಿಯ ವ್ಯಕ್ತಿ ಅವನು. ಕೇಳಿದೊಡನೆ ನಾನೇ ಸ್ವಾಮಿ ಎನ್ನುತ್ತಾನೆ. ಅವನ ಗೈರುಹಾಜರಿಯಲ್ಲಿ ಅಪಾರಿ, ಸೆಂಡ್ರ, ಕೊಬ್ರಿಯಂಥೊರು ರಾಖೇಶ ಎಂದು ಅಪರಿಚಿತರಿಂದ ಲಾಭ ಪಡೆಯುತ್ತಾರೆ. ಕೆಲವು ಗಿರಾಕಿ ಅವನು ಬರುವ ಮಟಕಾಯುವರು. ಚತುರ್ ಭಾಷಾ ಕೋವಿದನಾದ ಅವನ ಜನಪ್ರಿಯತೆಯನ್ನು ಲೆಕ್ಕಹಾಕಿ ಗುಲಾಂನಬಿ ಹಿಂದೊಮ್ಮೆ ಅವನನ್ನು ಎಮ್ಮೆಲ್ಲೆ ಚುನಾವಣೆಯಲ್ಲಿ ಮಾಜಿಮಂತ್ರಿ ಜಯಾನಂದರ ವಿರುದ್ಧ ನಿಲ್ಲಿಸುವ ಪ್ರಯತ್ನ ಮಾಡಿದ್ದುಂಟು “ಯಾರ್‍ನ ಯಾರ್‍ಗೋ ಅಡ್ಡ ಹಾಕೋ ನಮ್ಮಥೋರಿಗ್ಯಾಕ್ರಿ ಎಲೆಕ್ಷನ್ನು” ಎಂದು ನಕ್ಕು ನಿರಾಕರಿಸಿದ್ದನಂತೆ. ಗುಲಾಂನಬಿಯೂ ಕೂಡ ತನ್ನ ಪೂರ್ವಾಶ್ರಮದಲ್ಲಿ ಅದೇ ಕೆಲಸ ಮಾಡುತ್ತಿದ್ದುದು. ಆ ಕೆಲಸ ಮಾಡೇ ಮೇಲಕ್ಕೆ ಬಂದಿರುವುದು. ಆಗ ಮಾಡುತ್ತಿದ್ದುದು ಅದನ್ನೆ, ಈಗ ಮಾಡುತ್ತಿರುವುದು ಅದನ್ನೆ… ಆದರೆ ಕ್ಲಾಸ್ ಮಾತ್ರ ಬದಲಾಗಿದೆ ಅಷ್ಟೆ. ನಾನು ಕೊತ್ತಲಗಿಗೆ ಬಂದ ಪ್ರಥಮದಲ್ಲಿ… ಆ ನೆಲದ ಗುಣವೊ ಎಂಬಂತೆ ಕೇಳಿದ್ದು ಅವನನ್ನೇ. “ಏನ್ರೀ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಕಳಾದ ನೀವು ಕೂಡ…” ಎಂದಿದ್ದರು ಕೆಲವರು… ಒಂದೊಂದು ಗಳಿಗೆಯಲ್ಲಿ ಒಂದೊಂದು ಇಂಗ್ಲೀಷ್ ವರ್ಣಮಾಲೆಯ ಅಕ್ಷರವನ್ನು ನೆನಪಿಸುವಂಥ ವ್ಯಕ್ತಿತ್ವದ ಅವನನ್ನು ನಾನು ದುರದಿಂದ ನೋಡಿದ್ದೆನಾದರೂ ಮಾತಾಡಿಸುವ ಪರಿಚಯ ಮಾಡಿಕೊಳ್ಳುವ ಉಸಾಬರಿಗೆ ಹೋಗಿರಲಿಲ್ಲ. ಬಾಲಕ ಮೂಕಿ ಟಾಕಿ ಸಿನಿಮಾ ನೋಡುವಂತೆ ದುರದಿಮ್ದ ಅವನನ್ನು ನೋಡಿ ಕುತೋಹಲ ತಣಿಸಿಕೊಳ್ಳುತ್ತಿದ್ದೆ.
ಸ್ವಲ್ಪ ಹೊತ್ತಿನ ನಂತರ ಓಬಳೇಶ, ರಾಖೇಶ ರಾಹುಕೇತುಗಳೇ ತಾವು ಎಂಬಂತೆ ಒಳಪ್ರವೇಶಿಸಿದರು.

ರಮಾಬಾಯಿಯವರನ್ನು ನೋಡುತ್ತಲೆ ರಾಖೇಶ “ಏನಬೇ ನಿನ್ನೌನ… ನಾನ್ ನಿಂಗೆ ಎಲ್ಲೆಲ್ಲೋ ಹುಡುಕಾಡಲಾಕ ಹತ್ತಿದ್ದೆ… ಬಸ್‌ಸ್ಟಾಂಡಿನಾಗ ಕತ್ರಿಗೆ ನಿತ್ಕಂಡಿದ್ದ ಒಬ್ಬ ರಮಾಭಾಯಿ ಮನೆ ಯಲ್ಲೈತಂತ ಕೇಳ್ತಿದ್ದ! ನಿನ್ನೋಡಿದ್ರೆ ಇಲ್ಲಿದ್ದೀ” ಎಂದು ಗಂಟೆ ಹೊಡೆದಂತೆ ಮಾತಾಡಿದ.
“ಏನ್ಲೋ ನನ್ನಾಟಗಳ್ಳ (ಬೇಸರಿಸಬೇಡ… ಇದೇ ಇಲ್ಲಿ ಅಧಿಕೃತ ನಾಗರೀಕ ಭಾಷೆ) ಯಾರೋ ಅದು ನನ್ನುಕಾಡ್ಕಂತ ಬಂದಿರೋದು… ಹೋಗಿ ಹೋಗಿ ಈ ಮುದ್ಕೀನೆ ಬೇಕಾಗಿತ್ತೇನೋ ಅವ್ನೀಗೆ… ಯಾರವ್ರು ಹೇಳು! ಇಲ್ಲಾಂದ್ರೆ ನಿನ್ತಲಿ ಸಾವಿರ ಹೋಳು” ಎಂದು ನಕ್ಕೋತ ನಾಟಕೀಯವಾಗಿ ನುಡಿಯಿತು.
“ಈ ವಯಸ್ಸಿನಾಗಿರೋ ನಿನ್ನ ಯಾರುಡುಕಾಡ್ಕಂತ ಬರಭೋದು ಹೇಳು ಮತ್ತೆ… ಅದೇ ಕಣಭೇ ಯಮಧರ್ಮರಾಜ…” ಎಂದವನಂದೊಡನೆ ಮುದುಕಿಯೇ ಮೊದಲಾಗಿ ಎಲ್ರು ಗೊಳ್ಳನೆ ನಕ್ಕರು.
ಕೂಕ್ಕೊಳ್ಳುವುದಕ್ಕಿಂತ ಮೊದಲು ಏನು ಮಾಮ್ಮೋ ಅಂತ ಚಂಬಸ್ಯಯ್ಯನನ್ನೂ; ಕ್ಯಾ ಮಾಮೂ ಅಂತ ಇಸ್ಮಾಯಿಲನನ್ನೂ; ಎಂಥದು ಮಾಮಾವ್ರೆ ಅಂತ ಹೆಬ್ರಿಯನ್ನೂ ಮಾತಾಡಿಸಿದ.
ಕಳ್ಳರ ಮನಸ್ಸು ಹುಳ್ಳುಹುಳ್ಳಗೆ ಎಂಬಂತೆ ಅವರು ತಲೆ ತಗ್ಗಿಸಿದರು. ಅವನು ಅಲ್ಲಿಂದ ಸರನೆ ಹೋಗಿ ರಮಾಬಾಯಿಯವರ ಎರಡೂ ಗಲ್ಲಗಳಿರಡೆರಡು ಮುದ್ದು ಕೊಟ್ಟು – ನನ್ನನ್ನು ಕರೆಸಿಕೊಂಡ ಕಾರಣವೇನು ಕಾಂತೆ ಅತಿಗುಣವಂತೆ” ಎಂದು ನಾಟಕೀಯ ಗತ್ತಿನಿಂದ ಕೇಳಿ ರಂಜಿಸಿದನು.
ಯಾರಿಗಾದರು ವಯಸ್ಸಾದರೆ ತನಗಾದಂತೆ ಆಗಬೆಕು ಎಂಬಂತಿದ್ದ ರಮಾಬಾಯಿ ಎಂಥ ಅದ್ಬುತ ವೃದ್ಧೆ ಎಂದು ನನಗಾಗ ಅರ್ಥವಾಯಿತು. ಆ ಮುದುಕಿ ಎದ್ದು ನಿಂತು ಟೇಬಲ್ ಮೇಲಿದ್ದ ಹೂದಾನಿಯನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯನ್ನು ತೊಂಕದ ಮೇಲಿಟ್ಟುಕೊಂಡು –
“ಎಲವೋ ಕಾಂತಾ… ನಾನು ಧಾರೆಂದರೆ… ಬಂಡೀ ಸೀನಪ್ಪಸೆಟ್ಟಿಯು ವಯ್ಯರದಿಂದ ಬಂದು ತಪೋನಿರತಳಾಗಿದ್ದ ಹರಲಾಪುರದ ಹುಸೇನಮ್ಮನ ತಪೋಭಂಗಮಂ ಮಾಡಲಾಗಿ ಅವರಿಬ್ಬರ ಸಮಾಗಮನವಾಯಿತು. ಆ ಅವರ ರತಿಕ್ರೀಡಾ ಷೀಲ್ಲ್ಡೇ ಮುಂದೊಂದು ದಿನ ರಮಾಬಾಯಿ ಎಂಬ ನಾಮಾಂಕಿತಮಂ ಧರಿಸಿ ಅಂಗ, ವಂಗ ಕಳಿಂಗವೇ ಮೊದಲಾದ ಛಪ್ಪಾನಾರು ದೇಸವಿದೇಸಗಳಲ್ಲಿ ವಿಕ್ಯಾತವಾಯಿತು. ಆಕೆಯೇ ನಾನೆಂದು ತಿಳಿಯಲೌ ಮೂರ್ಖ ಶಿಖಾಮಣಿ… ಜೋಗಮ್ಮನ ಕೊಳ್ಳಾಗಿನ ಕರಿಮಣಿ…” ಎಂದು ನುಡಿಯುತ್ತಲೆ ನಾವೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗಾಡಿದೆವು.
ಮುದುಕಿಯೂ ಬಾಯಿ ತುಂಬ ನಕ್ಕಾದ ಮೇಲೆ –
“ಏನೋ ಭಾಡ್ಖಾವ್… ನನ್ನಂಥ ಮುದುಕೀನು ಬುಡುವಲ್ಲೆಲ್ಲ ನೀನು… ಇನ್ನು ಹರೇದ ಹುಡ್ಗೀರ್‍ನ ಹೆಂಗೆ ಬುಡುತ್ತೀಯೋ” ಎಂದು ತಮಾಷೆ ಮಾಡಿತು.
ನಂತರ ಅವರು ತಂತಮ್ಮ ಸ್ವಭಾವ ಕಳಚಿ ನಾಗರಿಕ ಸ್ಥಿತಿಗೆ ಮರಳಿದರು. ಮುದುಕಿ ಎಲ್ಲ ಹೇಳಿದ್ದನ್ನು ಕೇಳಿಯಾದ ಮೇಲೆ ರಾಖೇಸ ಅನಸೂವಮ್ಮ ಇರುವ ಸುಳಿವನ್ನು ನೀದಿದನು.

ಈಗ್ಗೆ ಐದೂವರೆ ತಿಂಗಳ ಹಿಂದೆ ನೈಜಾಂ ಕಡೀಕಿರೋ ಸಿರವಾರದಲ್ಲಿ‌ಇನ್ನೂರೆಕರೆ ವತನದಾರರಾದ ಶಿವಾಜಿರಾವ್ ದೇಶಮುಖ್ ತಮ್ಮ ಖಾಸಾಮಿತ್ರ ಒಂದು ಹೆಣ್ಣಿನ ವರ್ಣನೆ ಮಾಡಿದ್ದಕ್ಕೆ ಮನಸೋತು ತಾನೂ ಸಂಗ್ಯಾಬಾಳ್ಯಾ ನಾಟಕ ಆಡಿಸಿ ಅದರಲ್ಲಿ ತಾನು ಸಂಗ್ಯಾನ ಪಾತ್ರ ಮಾಡುವುದೆಂದು ನಿರ್ಧರಿಸಿದನು. ಕುಂತಳನಾಡಿನ ಗಂಗೀ ಎಂದೇ ಹೆಸರಾಗಿರುವ ಅನಸೂಯಾನ್ನು ಕರೆತರಲು ಖಾಸಾ ಮಿತ್ರನೂ, ತಲೆ ಹಿಡುಕನೂ ಆಗಿದ್ದ ಬೂದೆಪ್ಪನನ್ನು ಕೊತ್ತಲಗಿಗೆ ಅಟ್ಟಿದನು. ಇಂಥದ್ದರಲ್ಲಿ ನಿಸ್ಸೀಮನಾದ ಬೂದೆಪ್ಪ… ರಾಖೇಶನ ಕೈಬೆಚ್ಚಗೆ ಮಾಡಿ ಅನಸೂವಮ್ಮಳನ್ನು ಕಂಡು ಒಂದು ನೋಟಿನ ಕಟ್ಟನ್ನು ಮುಂಗಡವಾಗಿ ಕೊಟ್ಟುತಾನು ತಂದಿದ್ದ ಜೀಪಿನಲ್ಲಿ ಕುಂಡ್ರಿಸಿಕೊಂಡು ಸಿರಿವಾರಕ್ಕೆ ಕರೆದುಕೊಂಡು ಹೋದನು. ದೇಶ್‌ಮುಖ್ ಆಕೆಯ ರೂಪರಾಶಿಗೆ ಮಾರು ಹೋದನು. ಆಕೆ ತನ್ನ ಅಭಿನಯದ ಮೂಲಕ ಸುತ್ತು ಹತ್ತು ಹಳ್ಳಿಗಳ ಮಂದಿಯನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಟ್ಟಳು. ಆರು ತಿಂಗಳು ಉಪಪತ್ನಿಯಾಗಿರಲಿಕ್ಕೆ ಎರಡೆಕರೆ ಗದ್ದೆ ರಿಜಿಸ್ಟರ್ ಮಾಡಿಸಿಕೊಂಡು ಆಕೆ ಉಟ್ಟಬಟ್ಟೆಯೊಡನೆ ಅಲ್ಲೆ ಎಂದರೆ ತೋಟದ ಮನೆಯಲ್ಲಿ ಉಳಿದುಕೊಂಡು ಬಿಟ್ಟಳು.

ಇನ್ನೆನು ಕರಾರು ಹದಿನೈದು ದಿನಗಳಲ್ಲಿ ಮುಗಿಯಲಿದೆ ಎಮ್ದಾಗ ಗುತ್ತಿಗೆರೆಯ ಗೌಡ ಜಾಲಿಹಾಳ್ ಜಮೀನ್ದಾರ ನಾನು ಅಷ್ಟು ಕೋಡ್ತೀನಿ ಎಂದು ಸ್ಪರ್ಧೆಗಿಳ್ದು ಬಿಟ್ಟಿದ್ದರು. ಗದ್ದೆಗೆ ಆಸೆಪಟ್ಟ್ರೆ ನಂದು ಹರಕೊಂಡೋಗ್ತದೆ ಎಂದು ನಿರಾಕರಿಸಿದಳು ಆ ಲಲನೆ.

ಅದೇ ಸಂದರ್ಭದಲ್ಲಿ ನಾವು ರಾಖೇಶನನ್ನು ಅಲ್ಲಿಗೆ ಕಳಿಸಿದ್ದು. ತ್ರಿಮೂತಿಗಳಾದ ಬ್ರಹ್ಮ, ವಿಷ್ಣು, ಪರಮೇಶ್ವರ ಮಾತು ಮೀರಬಹುದು, ಆದರೆ ರಮಾಬಾಯಿಯು ಹಾಕಿದ ಗೆರೆಯನ್ನು ಮಾತ್ರ ದಾಟಲಾರಳು. ಇನ್ನೇನು ಟ್ರಂಕು ತೆಗೆದುಕೊಂಡು ಹೊರಡಲಿದ್ದಾಳೆ ಎನ್ನುವಾಗ ಆಕೆಯನ್ನು ಅಪರಿಸುವ ಯತ್ನವೂ ನಡೆಯಿತು. ‘ಬರ್ರೆಲೋ ಒಬ್ಬೊಬ್ರನ ಕಡ್ಡು ಸರಗಾ ಚೆಲ್ತೀನಿ’ ಎಂದು ಕತ್ತಿ ಹಿಡಿದು ಆಕೆ ನಿಲ್ಲಲು ಹೇಮಾಹೇಮಿ ಜಮೀನ್ದಾರರೆಲ್ಲ ದಿಕ್ಕಾಪಾಲಾಗಿ ಓಡಿಬಿಟ್ಟರು ಎಲ್ಲಿಂದರಲ್ಲಿ ದೋತರ ಉದುರಿಸುತ್ತ. ಇಡೀ ಆಸ್ತಿ ಪಾಸ್ತಿನೆಲ್ಲ ನಿನ್ನೆಸ್ರಿಗೆ ಮಾಡಿಸಿಕೊಡ್ತೀನಿ… ಇದ್ದು ಬಿಡು ಮುಂತಾಗಿ ಗೋಗರೆದ ದೇಶಮುಖನಿಗೆ ‘ಹೋಗೋ ಹೋಗು… ನಿನ್ನ ಸಿರಿವಂತಿಕೆಗೆ ಆಸೆಪಟ್ಟು ಇರೋಕೆ ನಾನೇನು ಪತಿವ್ರತಾ ಸಿರೋಮಣಿ ಅಲ್ಲ. ನಾನು ಹೇಳಿ ಕೇಳಿ ಕವಡೆ ಕಾಸಿನ ಸೂಳೆ… ಎಲ್ಲ ಹೆಂಗಸರತ್ರ ಇರೋದೆ ನನ್ನತ್ರಾನೂ ಇರೋದು… ನಂದೇನು ಬಂಗಾರದಲ್ಲ… ಬೆಳ್ಳೀದಲ್ಲ… ಇದಕ್ಯಾಕ ಹಿರೇರು ಮಾಡಿಟ್ಟ ಆಸ್ತಿ ಕಳಿತಿ… ಮಾಡ್ಕೊಂಡ ಹೆಂಡತಿ ಇನ್ನೊಬ್ರತ್ರ ಮಲಿಕ್ಕಂಡ್ರೆ ಸುಮಕಿರ್‍ತೀ ಏನು? ನನ್ ಮೇಲೆ ತೋರಿಸ್ತಿರೋ ಪ್ರೀತಿಯನ್ನೇ ನಿನ್ನ ಹೆಂಡ್ತಿ ಮ್ಯಾಲ ತೋರಿಸು… ಸಂಗ್ಯಾಬಾಳ್ಯಾ ಆಟ ಆಡಿದ್ರು ನಿಂಗೆ ಬುದ್ದಿ ಬರ್ಲಿಲ್ಲ” ಎಂದು ಮಿಖಕ್ಕೆ ಹೊಡೆದಂತೆ ಹೇಳಿದಳು.
ದೇಶಮುಖನ ಹೆಂಡತಿ ‘ಗೋದಮ್ಮಾ ನೀನು ಸಾಮಾನ್ಯಕಿ ಅಲ್ಲವ್ವಾ… ನನ್ ಸವುಭಾಗ್ಯ ಉಳಿಸಿದೆ’ ಎಂಉ ಸೀರೆ ಕುಪ್ಪಸ ಕೊಟ್ಟು ಉಡಿತುಂಬಿ ಅನಸೂವಿಯನ್ನು ರಾಖೇಶನೊಂದಿಗೆ ತುಂಬು ಹೃದಯದಿಂದ ಬೀಳ್ಕೊಟ್ಟಳು.
ಎಂದು ಮುಂತಾಗಿ ಹೇಳಿ ಶಾಮಣ್ಣ ಪಾತ್ರವು ಒಂದು ಕ್ಷಣ ಮೌನವಹಿಸಿ ನಂತರ ಹೇಳಿತು,

ನನ್ನ ಅನಸೂಯ ಎಂಥವಳು ಅಂಥ ಈಗಲಾದ್ರು ನಿನಗರ್ಥವಾಗಿರಬೇಕಲ್ಲ ಕುಂವೀ… ಅಂಥವಳು ಹುಟ್ಟುವುದು ಸಾವಿರಕ್ಕೊಬ್ಬಳೋ ಲಕ್ಷಕ್ಕೊಬ್ಬಳೋ… ಆಕರಣೆ, ನಿರಾಕರಣೆಯಲ್ಲಿಯೇ ಹೆಂಗಸರ ದೊಡ್ಡಸ್ತಿಕೆ ಇರುತ್ತದೆ ನೋಡು… ಆಕೆಯೂ ಎಲ್ಲರಂತೆ ಮಾಂಸ ಮಜ್ಜೆಯಿಂದ ಮಾಡಲ್ಪಟ್ಟವಳೇ! ಆದರೆ ಮಾಂತ್ರಿಕ ಶಕ್ತಿ ಇರುವುದು ಅಂಥವರ ಸ್ಪರ್ಶದಲ್ಲಿ; ಸ್ಪಂದನದಲ್ಲಿ… ಅಂಥವರ ದೈಹಿಕ, ಮಾನಸಿಕ ಸೌಂದರ್ಯವನ್ನು ಅಳೆಯುವ ಶಕ್ತಿ ಈ ನಶ್ವರ ಪ್ರಪಂಚದ ಯಾವ ಮಾಪನಕ್ಕೂ ಇಲ. ಶಂಕರಾಚಾರ್ಯರು ತಮ್ಮ ಸೌಂದರ್ಯ ಲಹರಿ; ಲಲಿತಾಷ್ಟಕಗಳಲ್ಲಿ ಯಾವ ದೇವಿಯನ್ನು ಉಪಾಸನೆ ಮಾಡಿದ್ದಾರೋ ಅದೇ ದೇವಿಯೇ ಈಕೆ ನೋಡು” ಎಂದು ನನ್ನನ್ನು ದಿಟ್ಟಿಸಿತು.
ಅದರ ಮಾತು ಕೇಳಿ ನನಗೆ ಅಚ್ಚರಿಯಾಯಿತು. ನಾನು ಆಕೆಯನ್ನು ನೋಡಿ ಮಾತಾಡಿ ಬಂದಿರೋನು ತಾನೆ? ಆಕೆ ಸುಂದರಿ ಎಂಬುದು ನಿಜ. ಆದರೆ ಯಾರಿಗೂ ಹುಚ್ಚುಹಿಡಿಸುವಷ್ಟು ಸೌಂದರ್ಯವತಿಯಂತು ಖಂಡಿತ ಅಲ್ಲ… ಆಕೆಯ ಕಣ್ಣುಗಳಲ್ಲಿ ಆಯಸ್ಕಾಂತದ ಶಕ್ತಿ ಇರುವುದನ್ನು ನಶ್ಯೆಪುಡಿ ಉಜ್ಜಿ ಕರೆಗಟ್ಟಿದ ಹಲ್ಲುಗಳನ್ನು ನೋಡಿದ್ದೆ.

“ಎಲವೋ ಮೂರ್ಖ ನೀನು ಏನಾಲೋಚಿಸ್ತಿದ್ದೀ ಅಂತ ಗೊತ್ತು. ಆಕೆಯ ಸೌಂದರ್ಯವನ್ನು ಸಂದೇಹಿಸುತ್ತಿರುವ ನಿನ್ನನ್ನು ಯಾವ ಶಬ್ದಗಳಿಂದ ಬಯ್ಯಬೇಕೋ ಅರ್ಥಾಗ್ತಾ ಇಲ್ಲ. ಒಳಗಿನ ಕಣ್ಣು ತೆರೆದು ನೋಡಿದರೆ ಮಾತ್ರ ಅಂಥ ಸೌಂದರ್ಯದ ವಿರಾಟ್ ಶಕ್ತಿ ಅರ್ಥ ಆಗೋದು… ನಿನ್ನಂಥ ಕುರುಡನಿಗೇನು ಕಾಣಿಸೀತು ಬೆಳಕಿನ ಪವಾಡ… ನಾನು ಉತ್ಪ್ರೇಕ್ಷೆ ಮಾಡ್ತಿರಬಹುದಂತ ನೀನು ತಿಳ್ಕೊಂಡಿದ್ರೆ; ನಾನು ಸುಳ್ಳು ಹೇಳ್ತಿರಬಹುದಂತ ನೀನು ತಿಳ್ಕೊಂದಿದ್ರೆ ಸಿರಿವಾರಕ್ಕೆ ಹೋಗು, ಹುಚ್ಚು ಹಿಡಿದು ಆಂಜನೇಯ ಗುಡಿಯೊಳಗೆ ಕೂತಿರೋ ದೇಶಮುಖನನ್ನು ಮಾತಾಡ್ಸು… ಆಗಾದ್ರು ಅರ್ತಾದೀತು… ಸಿರಿವಾರ ಏನು ದಕ್ಷಿಣ ಅಮೆರಿಕದ ಅಮೆಜಾನ್ ನದಿ ತೀರದಲ್ಲಿಲ್ಲ… ತುಂಗಭದ್ರೆ ದಾಟಿದ್ರೆ ಬರುವ ಯಡದೊರೆನಾಡಿನಲ್ಲೆ ಅದೀರೋದು!” ಎಂದು ಹೇಳಿತು.

‘ನಾನು ಅನುಮಾನಿಸ್ತಿರೋ ಸ್ವಾತಂತ್ರ್ಯಕ್ಕೆ ಯಾಕೆ ಅಡ್ಡಿ ಮಾಡ್ತೀ… ಒಂದೊಂದು ಬಣ್ಣದ ಗಾಜಿನ ಮೂಲಕ ನೋಡಿದಾಗ ಒಂದೊಂದು ರೀತಿಯಲ್ಲಿ ಸೌಂದರ್ಯ ಕಾಣಿಸ್ತದೆ… ಸೌಂದರ್ಯದ ಸ್ಥಿತಿ ಹೀಗೇ ಅಂತ ನಿಖರವಾಗಿ ಹೇಳಲು ಹೇಗೆ ಸಾಧ್ಯ?… ಒಂದೊಂದು ವಸ್ತು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸೌಂದರ್ಯಾನುಭವ ನೀಡ್ತದೆ. ಸೌಂದರ್ಯ ಎನ್ನುವುದು ನೋಡುವವನ ಮನಸ್ಸಿನ ಪ್ರವೃತ್ತಿ, ಸಂಸ್ಕಾರ, ಪ್ರಜ್ಞೆಗೆ ಸಂಬಂಧಿಸಿದ್ದು. ಕೆಲವರಿಗೆ ಸೌಂದರ್ಯಾನುಭವ ನೋಡುವುದರಿಂದಾಗಬಹುದು. ಕೆಲವರಿಗೆ ಸ್ಪರ್ಶದ ಮೂಲಕ ಆಗಬಹುದು. ನನಗೆ ಕಣ್ಣಿನಿಂದಲೂ ಆಗಿರದ ಸೌಂದರ್ಯಾನುಭವ ನಿನಗೆ ಸ್ಪರ್ಶದ ಮೂಲಕ ಆಗಿರಬಹುದಷ್ಟೆ… ಅದಕ್ಯಾಕೆ ಇಷ್ಟು ತಲೆ ಕೆಡೆಸಿಕೊಳ್ಳುತ್ತೀ ಅಂತ”

“ನಿನ್ನಂಥ ಅರಸಿಕ ಮಾತ್ರ ಹೀಗೆ ಮಾತಾಡಲು ಸಾಧ್ಯ ನೋಡು. ಸೌಂದರ್ಯ ಎನ್ನುವುದು ಪ್ರಮಾಣ ಬದ್ಧವಾದ ಸಮರೂಪದ ಸಂಯೋಜನೆ ಮತ್ತು ವಿವಿಧ ಅಂಗಗಳ ಜೀವಂತ ವಿನ್ಯಾಸ ಕ್ರಮ, ಪಂಚೇಂದ್ರಿಯಗಳಿಗೆ ಸಮಪ್ರಮಾಣದಲ್ಲಿ ನಿಲುಕವಂಥದ್ದು ಕಣೋ ಬೆಪ್ಪೆ. ಇಂದ್ರಿಯಗಳಿಗೆ ನಿಲುಕಿ ದೈಹಿಕ ತೃಪ್ತಿ ಕರುಣಿಸುವಂಥ ಅನುಭೂತಿ ಅದು. ನಾದವಿನ್ಯಾಸ, ದೈಹಿಕ ಚಲನೆ ಮೂಲಕ ನಾನು ಅನಸೂಯಳಲ್ಲಿ ಅನುರಕ್ತನಾದೆ…ತಿಳಿತಾ”

“ಹೋಗ್ಲಿ ಬಿಡಪ್ಪಾ… ಸೌಂದರ್ಯ ವ್ಯಕ್ತಿಯಿಂದ ವ್ಯಕ್ತಿಗ್; ಕಾಲದಿಂದ ಕಾಲಕ್ಕೆ; ಸಮಾಜದಿಂದ ಸಮಾಜಕ್ಕೆ ಬದಲಾಗುತ್ತ ಹೋಗುತ್ತದೆ. ನಿಗ್ರೋಗಳಿಗೆ ಸುಂದರವಾಗಿ ಕಂಡದ್ದು ಜಪಾನಿಯರಿಗೂ ಹಾಗೆಯೇ ಕಾಣಬೇಕೆಂದರೆ ಹೇಗೆ ಸಾಧ್ಯ? ನನ್ನ ದೃಷ್ಟಿಯಲ್ಲಿ ಸೌಂದರ್ಯ ಬೌದ್ಧಿಕ ಕ್ರಮವಾಗಿರಬಹುದು. ನಿನ್ನಂಥೋರಿಗೆ ಅದು ದೈಹಿಕ ಕ್ರಮವಾಗಿರಬಹುದು… ಇವೆರಡಕ್ಕೂ ಮಾನಸಿಕ ಸಂಸಿದ್ಧತೆ ಬೇಕು… ಅದು ನಿನ್ನಲ್ಲಿತ್ತು ಅಂತ ತಿಳ್ಕೊಂಡಿದ್ದೀನಿ. ಆಯ್ತಾ… ಮುಂದಿನದು ಹೇಳು… ನೀನು ಈಗ ಎಡ್ವರ್ಡ್ ಬುಲ್ಲೋನಥರ ಮಾತಾಡಬೇಡ… ಸಾಮಾನ್ಯ ಮನುಷ್ಯನೊಂದಿಗೆ ಸಂವಾದಿಸುತ್ತಿರುವ ಮನುಷ್ಯನ ಥರ ಮಾತಾಡು…”
“ಅಂತೂ ದಾರಿಗೆ ಬಂದೆಯಲ್ಲ… ನಾನು ಆಕೆ ಕುರಿತು ಮಾತಾಡುವಾಗ, ಆಲೋಚಿಸುವಾಗ ತುಂಬ ಭಾವುಕನಾಗ್ತೀನಿ… ಅದನ್ನು ನೀನು ಮಿಸ್‌ಇಂಟರ್‌ಪ್ರಿಟ್ ಮಾಡಬೇಡ. ನಾನು ಆಕೆಯನ್ನು ಪ್ರಪ್ರಥಮವಾಗಿ ರಮಾಬಾಯಿ ಮತ್ತಿತರ ಸಮಕ್ಷಮದಲ್ಲಿ ನೋಡಿದೊಡನೆ ಅಭಿನವ ಗುಪ್ತನ ತಂತ್ರಾಲೋಕದ ಒಂದು ಶ್ಲೋಕ ನೆನಪಾಯ್ತು.
ತಥಾಪಿ ಮಧುರೇ ಗೀತೇ ಸ್ಪರ್ಶೇವಾ ಚಂದನಾದಿಕೇ
ಮಾಧ್ಯಸ್ಥ್ಯ ವಿಗಮೇ ಯಾಸು ಹೃದಯೇ ಸ್ಪಂದಮಾನತಾ…
ಇಂಪಾದ ಸಂಗೀತದಿಂದ ಶ್ರವಣೇಂದ್ರಿಯ ಪುಳಕಗೊಳ್ಳುವಂತೆ. ಚಂದನಾದಿ ಸುವಾಸನೆಗಳಿಂದ ಘ್ರಾಣೇಂದ್ರಿಯವಾದ ಮೂಗು ಅರಳುವಂತೆ… ನನ್ನ ಇಡೀ ಸಮಸ್ತ ದೇಹವು ಸ್ಪಂದಿಸಿ ಉಕ್ಕೇರಿತು. ಇದು ನನ್ನಲ್ಲಿನ ಆನಂದದ ಶಕ್ತಿಗೆ ನಿದರ್ಶನ. ಸ್ಪಂದನಗಳ ವೈವಿಧ್ಯಮ ಸೃಷ್ಟಿಯ ಸಮಸ್ತ ರೂಪವೇ ಆಕೆಯಾಗಿದ್ದಳು…

(ಅಯ್ಯೋ… ಅಯ್ಯೋ… ಒಂದಿಷ್ಟಾದ್ರು ಮಾನ ಮರ್ಯಾದೆ ಇಲ್ವಲ್ಲ ಇವ್ರೀಗೆ… ಎಷ್ಟು ಲಜ್ಜೆ ಗೆಟ್ಟು ಆ ಕತ್ತೆ ಸೂಳೆಯನ್ನು ವರ್ಣಿಸುತ್ತಿದ್ದಾರಲ್ಲ ಇವ್ರು… ಅಷ್ಟೊಂದು ಸೌಂದರ್ಯ ಪ್ರಜ್ಞೆ ಇದ್ದೋರು ಅಂಥಾಕಿಯನ್ನು ಕಟ್ಕೊಳ್ಳೋದು ಬಿಟ್ಟು ನನ್ನನ್ಯಾಕೆ ಮದುವೆಯಾಗಿ ಜೀವನಾನ ಹಾಳು ಮಾಡಬೇಕಿತ್ತು ಅಂತೀನಿ…)
ಆದರೆ ಆಕೆ ತನ್ನ ಬಗ್ಗೆ ತಾನು ನಿರ್ಭಾವುಕವಾಗಿದ್ದಳು. ಒಂದು ರೀತಿಯ ಸ್ಥಿತಪ್ರಜ್ಞೆ ಎನ್ನಬಹುದು. ಪಾರಿಜಾತ ಪುಷ್ಪದ ಸೌಂದರ್ಯ ಆವಿರ್ಭವಿಸುವುದು ಬೇರೊಂದು ನಯನೇಂದ್ರಿಯದಲ್ಲಿ, ಪಾರಿಜಾತಪುಷ್ಪದ ಪರಿಮಳ ಅವಿರ್ಭವಿಸುವುದು ಬೇರೊಂದು ಘ್ರಾಣೇಂದ್ರಿಯದಲ್ಲಿ; ಪಾರಿಜಾತ ಸೌಂದರ್ಯವಿಡೀ ನೆಲೆಗೊಳ್ಳುವುದು ಬೇರೊಂದು ಹೃದಯದಲ್ಲಿ. ತಾನು ತನ್ನ ಕಾಂತಿ, ತೇಜಸ್ಸು ಪರಿಮಳದಿಂದ ನೋಡುಗನ ಮನಸ್ಸನ್ನು ಆಕರ್ಷಿಸಿ ಆದ್ರಗೊಳಿಸುವೆನೆಂದು ಆ ಪಾರಿಜಾತಕ್ಕೇನು ಗೊತ್ತು?

ಅಲ್ಲಿದ್ದ ಎಲ್ಲರಿಗಿಂತ ಸೌಂದರ್ಯಾಸ್ವಾದನಾ ವಿಷಯದಲ್ಲಿ ನಾನು ಹೆಚ್ಚು ಸಕ್ರಿಯನಾಗಿದ್ದೆ. ಕೆಟ್ಟದಾಗಿ ಹಸಿದವ ಆಹಾರವೇ ಸೌಂದರ್ಯ; ಸೌಂದರ್ಯವೇ ಆಹಾರವೆಂದು ಅದು ಹೇಗೆ ಭಾವಿಸುವನೋ ಹಾಗೆ ಹಸುವಿನ ನಿರಂತರತೆಯಿಂದ ಬಳಲಿ ಬೆಂಡಾಗಿದ್ದ ನನ್ನ ಕಣ್ಣಿಗೆ ಅನಸೂಯ ಸೌಂದರ್ಯದಿಂದ ಮಾಡಲ್ಪಟ್ಟಿರುವವಳಂತೆ ಗೋಚರಿಸಿದಳು. ಇರಲಿ. ಈ ವಿವೇಚನೆಯನ್ನು ಒತ್ತಟ್ಟಿಗಿಟ್ಟು ಸಂಗ್ಯಾಬಾಳ್ಯಾದ ಬಗ್ಗೆ ಆಕೆ ತೋರಿದ ಆಸಕ್ತಿ ನಿರಾಸಕ್ತಿ ಪ್ರತಿಕ್ರಿಯೆಯ ಕಡೆ ಗಮನ ಹರಿಸೋಣ.

ಅನಸೂಯ ಬಂದೊಡನೆ ರಮಾಬಾಯಿಯ ಪಾದಕುದ್ದೋಕೆ ಬಿದ್ದು “ಯ್ಯೋನಭೇ ಮುದುಕೀ… ಅದ್ಯಾಕಂಗ ತಟ್ಟರಸ್ಲಾರ್‍ದ ಕರಸ್ಕಂಡಿ. ಒಂದೀಟು ತಡಕಾನಾಗಿತ್ತಭೇ ನಿಂಗೆ… ಸಿರಿವಾರದ ಆಟಾನ ಯಾಕಾರ ಒಪ್ಪ್ಕಂಡಂತನ್ನಿಸಿ ಬುಟ್ತು ನ್ವಾಡು… ಅವೇನು ಮಂದ್ಯಭೇ? ಒಂದೊಂದು ದನ ಇದ್ದಂಗದಾವ ನೋಡು… ಗೂಳಿ ತನ್ನೊಟ್ಟಿ ತುಂಬುಸ್ಕನ್ನದಕಿಂತ ಬಣವೇನೆಂಗಾಳ್ಮಾಡ್ತದೋ ಹಂಗ್ಮಾಡ್ತಾವ ನೋಡು… ಹೋದುದ್ಕೂ ನಾನೇನು ಬರಿಕೈಲಿ ಬರ್‍ನಿಲ್ಲ…” ಎಂದು ಹೇಳುತ್ತ ಸೊಂಟದ ಬಾಳೆಕಾಯಿಯಿಂದ ಚಿನ್ನದ ಡಬ್ಬಿಯಿಂದ ನಸ್ಸೆಪುಡಿ ತೆಗೆದು ಅಗ್ನಿ ಸಾಕ್ಷಿಯಾಗಿ ಗಸಗಸ ತಿಕ್ಕಿ ಮುಂದುವರಿದು “ಹೇಳ್ಬಿಡಬೇ ಹೇಳ್ಬಿಡು. ಅದೇನಂತ ಜರೂರಿತ್ತು ಲಗೂನ ಹೇಳ್ಳಿಲ್ಲಂದ್ರೆ
ನೀನು ಹತ್ತದಿನೈದು ವರುಸಾದ್ರು ಸಾಯಕ್ಕಿಲ್ಲ ನೋಡು” ಎಂದಳು.
ಮಾತಿನಲ್ಲೇನು ರಮಾಬಾಯಿ ಹಿಂದಕ್ಕೆ ಬೀಳಲಿಲ್ಲ.
“ಆಟ ಆಡಿ ಬರ್ತೀನಂತ ಹ್ವಾದಾಕಿ ಆಟ ಆಡಿ ಬಣ್ಣ ತೊಳಕಂಡು ಬರಬೇಕವ್ವ ಅದು ಬಿಟ್ಟು”.
“ಏನು ಮಾಡ್ಲೆಭೇ ನೈಜಾಮುಕಡೆ ಮಂದಿ ಹಂಗದಾವು”.
“ಇರ್‍ಲಿ… ಈಗ ನಮ್ ಬ್ಯಾಂಕಿನ್ಮಂದಿ ಬಾಳ್ಯಾ ಸಂಗ್ಯಾರಾಟಾನ ಆಡಬೇಕಂತ ಮಾಡ್ಯಾವ… ನೀನದರಾಕ ಗಂಗಿ ಪಾತರ ಮಾಡಲೇಬೇಕಂತ ಹುಕುಮ ಮಾಡ್ತಿದೀನಿ ನೋಡಲೈ ಮೋಹನಾಂಗಿ..”
ಅದನ್ನು ಕೇಳಿ ಅನಸೂಯ ಬಲಗೈ ತಗಂಡು ಗದ್ದದ ಮೇಲಿಟ್ಟುಕೊಂಡು ಎಲ್ಲರ ಮೂತಿಗಳನ್ನು ನೋಡಿ ಪರೀಕ್ಷಿಸಿ –
ಈ ವಯಸ್ಸಿನಾಗ ನೀನ್ಯಕಿಂಗ ಯೋಚ್ನೆ ಮಾಡ್ಡೀಂತ? ಇವರೊಬ್ಬೊಬ್ರ ಮೂತಿ ಯಾಪಾಟಿ ಅದಾವ ನೋಡು. ಇವ್ನ ಕಟ್ಕೊಂಡು ಯಂಗಾಡಿಸ್ತೀಯಭೇ ಯವ್ವ! ಒಬ್ಬಬ್ರು ಹುಣಸಣ್ ಹೊಡ್ಯೋ ಜೋಟಿಕೋಲಿದ್ದಂಗದಾವ… ಯಿಂಥೋವ್ರ ಸಂಗಾಟ ನಾನು ಗಂಗಿ ಪಾರುಟು ಮಾಡಿ ಹೆಸ್ರು ಖರಾಬು ಮಾಡ್ಕಳ್ಯಾಕ ನಾನ್ತಯಾರಿಲ್ಲಭೇ… ನೀನು ಸಾಪಕೊಡು ಬೇಕಾದ್ರ!” ಎಂದು ಚಟ್ಟನೆ ಸಿಡಿದು ನಿಂತುಬಿಟ್ಟಳು.
ಆಗ ನೀನು ನೋಡಬೇಕಿತ್ತು ನಮ್ಮ ಮುಖಗಳನ್ನು. ಚಿವಿಟಿದರು ರಕ್ತ ಕಾಣಿಸಿಕೊಳ್ಳುತ್ತಿರಲಿಲ್ಲ. ನಾವೆಲ್ಲರು ಅಪರಾಧಿಗಳಂತೆ ಮುಖ ತಗ್ಗಿಸಿ ಕೂತುಬಿಟ್ಟೆವು.
ನಮ್ಮ ಪರವಾಗಿ ಓಬಳೇಶನೇ –
“ನೀನೇ ಹಿಂಗಂದ್ರ ನಾನು ಸುಮ್ಕಿರಲ್ಲ ನೋಡು… ಹೋಗಿ ಉರುಲಾಕ್ಕಂತೀನಿ. ಅದೆಂಗಾಡ ಬೇಕೆಂಬೋದ್ನ ಹೇಳ್ಕೊಡು… ಅದು ಬಿಟ್ಟು ಹೊಳ್ಯಾಗ ಹುಂಚಿ ಹಣ್ ತೊಳ್ದಂಗಾಡಬ್ಯಾಡ ಎಂದು ಮಾತಾಡಿಸಿದನು.
ಅಷ್ಟರಲ್ಲಿ ರಮಾಬಾಯಿಯೇ –
“ಹ್ಹಾ… ಹ್ಹಾ… ಘನಸ್ತಿ… ಯ್ಯೋನಾಗ್ಯಾರಭೇ ನಮ್ಮುಡ್ಗುರು… ಮರುವಾದೆಯಿಂದ ವಪ್ಕೊಂಡು ಮುಂದಿನ ಕೆಲ್ಸ ಸುಸೂತ್ರವಾಗಿ ನಡೆಯೋ ಹಂಗ ಮಾಡೇ”- ಎಂದು ಆರ್ಡರು ಮಾಡಿದಳು.
ಅದಕ್ಕೆ ಅನಸೂಯ ಒಪ್ಪಿಕೊಳ್ಳದೆ ವಿಧಿ ಇರಲಿಲ್ಲ –

ನನ್ನಲ್ಲಿ ಸೌಂದರ್ಯ ದೃಷ್ಟಿಯನ್ನು ರೂಪಿಸಲು ಕಾರಣವಾದ ಶಕ್ತಿ ಧಿಮ್ಮಗೆ ಮುಖ ಬಿಗಿದು ಕೂತುಕೋಡಿತು. ಆಕೆ ಗಂಗಿ ಪಾತ್ರ ವಹಿಸಲು ಒಪ್ಪಿದ್ದರಿಂದ ಸಂತೋಷವೂ ಭಯವು ಏಕಕಾಲಕ್ಕೆ ಉಂಟಾದವು. ಸಂತೋಷ ಯಾಕಾಯ್ತಪಾ ಅಂದರೆ ಬಾಳ್ಯಾ ಸಂಗ್ಯಾನಾಟದಲ್ಲಿ ಆಕೆ ಗಂಗಿ ಪಾತ್ರ ವಹಿಸುವುದನ್ನು ನೋಡಲು ಸುತ್ತಾನ್ನಾಕಡೆಯಿಂದ ಸಾವಿರಾರು ಜನ ಪ್ರವಾಹೋಪಾದಿಯಾಲಿ ಹರಿದು ಬರುತ್ತಾರೆ ಎಂಬುದು. ಬ್ಯಾಳಿ ವಿಜಯಕುಮಾರ ಎಂಬುವನ ಆಕೆ ಬಗ್ಗೆ ಬರೆದ ಲೇಖನದಲ್ಲಿ ಗರತಿಯೋರ್ವಳು ಹಾದರಕ್ಕಿಳಿಯುವ ಒಳತೋಟಿಯನ್ನು ಅನಸೂಯಾಳಷ್ಟು ಸಮರ್ಥವಾಗಿ ಯಾರೂ ಪ್ರಕಟಿಸ್ಲಾರರು ಎಂದಿತ್ತು. ಬೆಂಗಳೂರಿನ ನಟರಂಗ ತಂಡದವರಿಂದ ಬಂದಿದ್ದ ಆಮಂತ್ರಣವನ್ನಾಗಲೀ, ಸಿನಿಮಾದವರಿಂದ ಬಂದಿದ್ದ ಆಮಿಷವನ್ನಾಗಲೀ ಒಪ್ಪಿಕೊಳ್ಳದೆ ಆಕೆ ಗ್ರಾಮಾಂತರ ರಂಗಭೂಮಿಗಷ್ಟೆ ಮೀಸಲಾಗಿ ಉಳಿದಿದ್ದಳು. ಸಹಪಾತ್ರಗಳಿಗೆ ಜೀವ ತುಂಬಿ ಬೆಳಗಾಗುವ ಮಟ ನಾಟಕವನ್ನು ರಂಜನೀಯವಾಗಿಸಬಲ್ಲಳು. ನಾಟಕ ಮುಗಿಯುವವರೆಗೆ ಪ್ರೇಕ್ಷಕರು ಮಿಸುಕಾಡದೆ ಕೂತಿದ್ದು ನೋಡುತ್ತಾರೆ…

ಎರಡನೆಯದಾಗಿ ಭಯ ಯಾತಕಾಯಿತೆಂದರೆ ಗಂಗಿಯ ಪಾತ್ರವನ್ನು ಆವಹಿಸಿಕೊಂಡು ವೇದಿಕೆ ಮೇಲೆ ಝಝಗಿಸುವ ಅನಸೂಯಳೆದುರು ಪಾತ್ರವಹಿಸಲು ಎಂಟೆದೆ ಬೇಕು. ಮೊದಲೇ ಅದು ಡಪ್ಪಿನಾಟವಾದರಿಂದ ನಡುಗೆಯ ಲಯ ತಪ್ಪಿದಲ್ಲಿ ಸಂಭಾಷಣೆಯ ಏರಿಳಿತದಲ್ಲಿ ವ್ಯತ್ಯಾಸವಾದ್ದಲ್ಲಿ ಅಂಥ ನಟನನ್ನು ಪ್ರೇಕ್ಷಕರೆದುರೇ ವಾಚಾಮಗೋಚರವಾಗಿ ತರಾಟೆ ತೆಗೆದುಕೊಳ್ಳಲು ಆಕೆ ಹಿಂಜರಿಯುವುದಿಲ್ಲವೆಂಬ ಗಾಳಿ ಮಾತು ಆದರೂ ಪ್ರತಿಯೋರ್ವ ಪುರುಷನೂ ಆಕೆಯೊಂದಿಗೆ ಪಾತ್ರ ಮಾಡಲು ನಾಮುಂದು ತಾಮುಂದು ಅಂತ ಮುನ್ನುಗ್ಗುತ್ತಿರುವಾಗ ನಾವಾದರು ಹಿಂದೇಟು ಹಾಕಲು ಹೇಗೆ ಸಾಧ್ಯ?
ಆಕೆ ಮೌನಮುರಿದು –

“ಸರೆ ಯಪ್ಪಾ ಸರೆ… ವಪ್ಕೊಂತೀನಿ… ನಾನೆಂದಾರ ನಿನ್ನುಗುಳುದಾರಿರೋದುಂಟಾ…ನನಗೊಂದು ಬದುಕೋ ದಾರಿ ತೋರಿಸಿದ ಮಾತಾಯಿಯಾದ ನಿನ್ನ ಮಾತ್ನ ನಾನೆಂದಾರ ಮೀರಿದ್ದೀನಾ?… ಇದರಾಗ ಯಾರ್ಯಾರು? ಯಾವ್ಯಾವ ಪಾರುಟು ಮಾಡುತಾರೆ,,, ಟೇಜಿನ ಮ್ಯಕ ಬಂದು ಏನೇನು ಕಿಸೀತಾರ ಎಂಬುದು ನೋಡದು ಬ್ಯಾಡೇನು? ಅದ್ನ ಒಬ್ಬಬ್ಬರನ ಇಚಾರಿಸ್ಕಂಬಲಕೆ ಪರವಾನಿಗಿ ಕೊಡು” ಎಂದಳು.

ರಮಾಬಾಯಿ “ಯಾಕಾಗಬಾರದೇ” ಎಂದು ಪರವಾನಿಗಿ ಕೊಟ್ಟಳಲ್ಲದೆ… ಯಾರು ಯಾರು! ಯಾವ ಯಾವ ಪಾತರ ಮಾಡುತ್ತಾರೆ ಎಂಬುದನ್ನು ವಿವರಿಸಿ ಹೇಳಿದಳು. ಚೂಟಿಯಾಗಿ, ನಾಕು ಮಾತಿನಲ್ಲಿ ಸಂಗ್ಯಾನ ಪಾತ್ರಕ್ಕೆ ಆಯ್ಕೆಯಾಗಿದ್ದ ನನ್ನ ಕಡೆ ಒಮ್ಮೆ ದುರುಗುಟ್ಟಿ ನೋಡಿದೊಡನೆ ನನ್ನ ಬಾಯಿ ಒಣಗಿತು. ಆಕೆಯ ನೋಟದಲ್ಲಿ ಸಂಗ್ಯಾನ ಪಾತ್ರವಹಿಸುವ ಕಿಂಚತ್ತು ಯೋಗ್ಯತೆ ನಿನಗಿಲ್ಲವೆಂಬ ದಾರ್ಷ್ಟ್ರ ಇತ್ತು.

“ಯೇನಪ್ಪಾ… ನೀನು ಸಂಗ್ಯಾನ ಪಾರುಟು ಮಾಡುತೀಯಾ. ಎಂದಾರ ಯವ್ದಾರ ನಾಟಕದಾಗ ಮಾಡೀ ಏನೋ ಶಾಸ್ತ್ರೀ…” ಅಂದಳು. ನಾನು ಇಲ್ಲ ಅಂದೆ. ಆಪಾದಮಸ್ತಕ ನೋಡಿ ‘ಹ್ಹೂಂ’ ಎಂದಳು. ನಂತರ ಇಸ್ಮಾಯಿಲನ ಬಳಿಗೆ ಹೋಗಿ ಕೆಳಗಿನಿಂದ ಮೆಲಿನವರೆಗೆ ನೋಡಿ ’ಬಸ್ಯಪಾರ್ಟ್‌ನ ನೀನು ಮಾಡ್ತಿಯೋ” ಎಂದಳು. ನಂತರ ಚಂಬಸ್ಯಯ್ಯನ ಎದುರಿಗೆ ನಿಂತು “ಏನ್ಸಾಮೀ… ನೀನು ಇರಪಾಕ್ಸಿ ಪಾರ್ಟ್ ಮಾಡ್ತಿದ್ದೀಯೋ” ಎಂದಳು. ನಂತರ ಹೆಬ್ರಿ ಮುಂದೆ ನಿಂತು ಆಕೆ ನುಡಿದಿದ್ದು ಆಕೆ ಹಾಗೆಯೇ. ಹೀಗೆ ಪ್ರತಿಯೊಬ್ಬರನ್ನು ತನ್ನ ಕಣ್ಣಿನ ಒರೆಗಲ್ಲಿನಿಂದ ತಿಕ್ಕಿ ತಿಕ್ಕಿ ನೋಡಿ ಯೋಗ್ಯತೆ ಅಳೆದಳು.
“ಭೇ ಸೂತ್ರಧಾರಿಣೀ… ನೀನು ಕುಂತಲಗಿತ್ತಿ ಪಾರ್ಟು ಮಾಡಲಕಬೇಕವ್ವಾ…” ಎಂದು ಪಟ್ಟು ಹಿಡಿದ ಅನಸೂಯ ಕೊನೆಗೂ ರಮಾಬಾಯಿಯನ್ನು ಒಪ್ಪಿಸುವಲ್ಲಿ ಯಶ್ಸ್ವಿಯಾದಳು. ಇದ್ದಕ್ಕಿದ್ದಂತೆ ಏನೋ ನೆನಪು ಮಾಡಿಕೊಂಡು …
“ಭೇ ಯವ್ವಾ… ನಿನ್ನ ಮಾಯಿ ಅಂದಿಗುಂಟು ಇಂದಿಗಿಲ್ಲ ಎನ್ನುವವರಿಗೆ ಕಡೆ… ಖಡೆ… ಅದಿರ್ಲಿ ಒಂದು ಮಾತದು ಮಾತ್ರ ಮರೆತು ಬಿಟ್ಟಿದ್ದೆನು… ಅದಾವುದೆಂದರೆ ಬಾಳ್ಯಾನ ಪಾತುರ ಮಾಡಲಿಕ ಯಾರ್‍ನ ಗೊತ್ತು ಮಾಡಿದಿಯಭೇ” ಎಂದು ಕೇಳಿದಳು.
ಅದುವರೆಗೆ ತನ್ನ ಸರ್ದಿ ಬರಲಿಲ್ಲವೆಂದು ಕಾಯುತ್ತಿದ್ದ ಓಬಳೇಶನು –
“ಯಕ್ಕಾ… ಸಂಗ್ಯಾನ ಪರಮಾಪತಮ ಮಿತ್ತಾರನ ಪಾತರವಾದ ಬಾಳೇಹಣ್ಣಿನ ಪಾತರವನ್ನು ಈ ನಿನ್ನ ತಮ್ಮನಾದ ಓಬಳೇಸನು ಮಾಡಲಿರುವನೆಂದು ಜಾಗ್ಗರತೆಯಿಂದ ತಿಳಿಯುವಂಥವಳಾಗೆಲೈ ಯಕ್ಕಾ… ಇಲ್ಲಾಂದ್ರೆ ಹಾರಲಾರದು ನೋಡು ಗುಬ್ಬಕ್ಕ” ಎಂದು ಧಿತ್ತೋ ದತ್ತ ದಿತ್ತೋ ಎಂದು ಕುಣಿದು ಹೇಳಲು ನಾವೆಲ್ಲ ಘೊಳ್ಳೆಂದು ನಕ್ಕೆವು.
ಆದರೆ ಅನಸೂಯ ಅವನ ಕಿವಿ ಹಿಂದುತ್ತ ಜಗ್ಗಾಡುತ್ತ –
“ಸೆವ್ಗೇಡಿ… ನಾದ ಸೆವ್ಗೇಡಿ. ಕುಂಡ್ಯಾಗರ ಪಾವು ಮಾವುಸವು ಇಲ್ಲ… ನೀನು ಬಾಳ್ಯಾನ ಪಾರುಟು ಮಾಡುತಿಯ್ಯೋನಲ್ಲೋ … ಇವೇನು ದೊಡ್ ಸಂಬ್ಳ ತಗೊಂಭಾವು… ಮಾಕತವ… ನಿಂಗ್ಯಾಕ ಇದರ ಉಸಾಬರಿ ಅಂತೀನಿ… ಪಾತರದೋರ ಕುಲದಗ ಹುಟ್ಟಿದ್ದೆ ಹುಟ್ಟಿದ್ದು ಯಾವತ್ತರ ಮಾರಿಗೆ ಬಣ್ಣ ಹಚ್ಕೊಂಡಿದೀಯಾ… ಹೋಗ್ಲಿ… ಅಡ್ಡ ಹಾಕೋ ಕಸುಬನ್ನಾರ ಮಾಡಿದ್ದೀಯಾ… ಮರುವಾದಿಯಿಂದ ದೂರ ಸರಿದ್ರೆ ಸರಿ, ಇಲ್ಲಾಂದ್ರ ನೀನು ಏಳ್ಕೋಳ್ದಾಗ ಉಳ್ಳಾಡಂಗ ಮಾಡ್ತೀನಿ…” ಎಂದು ತಮಾಷೆ ಮಾಡಿದಳು.

ಅವನು ಕೊಸರಿಕೊಳ್ಳುತ್ತಿರುವನಂತೆ ನಟಿಸುತ್ತ –
“ಗಂಗೀನೇ ಬಾಳ್ಯಾನ ಮಧ್ಯಸ್ತಿಕೇನ ಬಿಲ್‌ಕುಲ್ ಬ್ಯಾಡಾಂದ ಮ್ಯಾಲ … ನಾನು ನಿನ್ನ ಮತ್ತು ಸಂಗ್ಯಾನ ನಡುವೆ ಯಾಕೆ ಬರ್ಲಿ… ಬ್ಯಾಡವೇ ಬ್ಯಾಡ ನಾನು ನೇಪಥ್ಯಕ್ಕೆ ಸರೊದು ಹಿಮ್ಮೇಲವನ್ನು ಸೇರಿಕೊಳ್ಳುವೆನು” ಎಂದು ಲಯಬದ್ಧವಾಗಿ ನರ್ತಿಸುತ್ತ ಬಂದು ಸ್ವಸ್ಥಾನದಲ್ಲಿ ಸೇರಿದನು.
ನಂತರ ನಡೆದ ಚರ್ಚೆಯಲ್ಲಿ ಅನಸೂಯಳ ಸಲಹೆ ಮೇರೆಗೆ ಅಕ್ಕಾಪುರದಿಂದ ಆರು ಬೊಟ್ಟಿ ಕಾಳಪ್ಪ ಮಾಸ್ತರನ್ನು; ಬಳ್ಳಾರಿಯಿಂದ ದಾರದ ಮಿಲ್ ಪೊಂಪಣ್ಣನನ್ನು ಮಾರ್‍ಲಾಮಡಕಿಯಿಂದ ಯರ್ರಯ್ಯನನ್ನು ಕರೆಸುವುದೆಂದು ತೀರ್ಮಾನವಾಯಿತು. ಅಷ್ಟರಲ್ಲಿ ಕಾಫಿ ತರಲು ಹೋಗಿದ್ದ ರಾಖೇಶನನ್ನು ನೋಡುತ್ತಲೆ ಅನಸೂಯ :ಲೋ ರಾಖೇಸ ನೀನೇ ನಿಜವಾದ ಬಾಳ್ಯನಾಗಬೇಕು… ಇವತ್ತಿನಿಂದ ನೀನೂ ಸಂಗ್ಯಾನ ಪಾತ್ರಧಾರಿ ಶಾಸ್ತ್ರೀನೂ ದೋಸ್ತಿ ಮಾಡ್ಕಳ್ರೀ” ಎಂದು ಘೋಷಿಸಿಬಿಟ್ಟಳು.

ರಾಖೇಶನೇ ನಿಜವಾದ ಬಾಳ್ಯ ಎಂದು ಗಂಗಿ ಪಾತ್ರಧಾರಿ ಅನಸೂಯಾ ಅಧಿಕೃತವಾಗಿ ಘೋಷಿಸಿದ ಮೇಲೆ ಅವನೂ, ನಾನೂ ನಿಜ ಜೀವನದಲ್ಲೂ ಉತ್ತಮ ಗೆಳೆಯರಾದೆವು… ಅಬ್ಬಾ! ಅವನಿಗಿರುವ ಪ್ರಪಂಚ ಜ್ಞಾನವನ್ನು ನೆನೆಪಿಸಿಕೊಂಡರೆ ನನಗೆ ಈಗಲೂ ರೋಮಾಂಚನವಾಗುತ್ತದೆ. ನೀನು ನಿನ್ನ ಕಥಾನಕದೊಳಗೆ ಚಿತ್ರಿಸಿರುವಂತೆ ಅವನಿಲ್ಲ… ಕಲೆಕ್ಷನ್ ಕಾಳಪ್ಪ ಪಾತ್ರ ಮಾಡಿರೋ ಮುಸುರಿ ಕೃಷ್ಣಮೂರ್ತಿಯಿಂದ ಪ್ರಭಾವಿತನಾಗಿ ನೀನವನ ಪಾತ್ರವನ್ನು ಚಿತ್ರಿಸಿರುವಿ ಎಂದು ಕಾಣುತ್ತದೆ. ನಿಮ್ಮಂಥ ಲೇಖಕರೇ ಒಂದು ರೀತಿ ಖದೀಮರು, ಯಾರ್ಯಾರ ಜೀವನದಿಂದ ಏನೇನೋ ಕದಿಯುತ್ತೀರಿ. ಓದುಗರ ಮೈ ಜುಮ್ಮೆನ್ನಿಸುವ ದೃಷ್ಟಿಯಿಂದ ರಂಜನೀಯವಾಗಿ ಬರೆಯುತ್ತೀರಿ. ಕಾಸು ಮಾಡಿಕೊಳ್ಳುವಿರಿ. ಇದೊಂದು ರೀತಿ ಅಕ್ಷಮ್ಯ ಅಪರಾಧ. ಇದಕ್ಕೆ ಐಪಿಸಿಯಲ್ಲಿ ಶಿಕ್ಷೆ ಇಲ್ಲ. ಬಚಾವಾಗೋಕೆ ನಿಮಗೆ ಒಳಹಾದಿಗಳು ಸಾಕಷ್ಟು ಗೊತ್ತಿವೆ. ಆದ್ದರಿಂದ ಮಾನವೀಯ ಗುಣಗಳಿರೋ ರಾಖೇಶನಂಥವರು ನಿಮ್ಮ ದೃಷ್ಟಿಯಲ್ಲಿ ಅಪ್ಪಟ ವಿಲನ್‌ಗಳಂತೆ ಗೋಚರಿಸುತ್ತಾರೆ… ಇರಲಿ… ಅದು ನೀವು ನಿಪ್ಪಾಪಿ ಓದುಗರ ಮೇಲೇರುತ್ತಿರುವ ಕರ್ಮ.

ಅವನ ಹೆಸರು ಬೇರೆ! ಅರನಿರೋದೆ ಬೇರೆ ಥರ… ಅವನಿಗೊಂದು ಒಳ್ಳೆಯ ಹೆಸರಿಟ್ಟುರುವಿ… ಅದು ಅಣಕ ಅಂತಾನೂ ಗೊತ್ತು. ಅವನು ಓದಿಲ್ಲ… ವಿದ್ಯಾವಂತ ನೀ ಬರೆದಿರುವಿ… ಶಿಕ್ಷಣ ವ್ಯವಸ್ಥೆಯನ್ನು ಲೆವಡಿ ಮಾಡಬೇಕೆಂಬುದೇ ನಿನ್ನ ಉದ್ದೇಶ … ಹಾಗೆ ಯಾಕೆ ಮಾಡಿದ್ಯೋ ಕುಂವೀ ಬರೆಯೋಕಾಗಲಿ ಓದೋಕಾಗಲಿ ಗೊತ್ತಿದ್ದಿದ್ದರೆ ಅವನು ನಮ್ಮೆಲ್ಲಗಿಂತ ಉತ್ತಮ ಲೇಖಕನಾಗಿರುತ್ತಿದ್ದ. ಅವನೆಂಥೋನು ಅಂತ ಅವನೊಂದಿಗೆ ವರ್ಷಾನುಗಟ್ಟಲೆ ಸಂಬಂಧ ಇಟ್ಟುಕೊಂಡಿದ್ದ ನನಗೆ ಗೊತ್ತು! ನಿನಗೇನು ಗೊತ್ತು?

ಅವನು ಒಂದೊಂದು ಮಗ್ಗುಲಿಂದ ನೋಡಿದರೆ ಒಂದೊಂದು ರೀತಿಯಲ್ಲಿ ಕಾಣಿಸುತ್ತಿದ್ದ. ಅವನು ಅತ್ಯುತ್ತಮ ಮನಶ್ಶಾಸ್ತ್ರಜ್ಞನಾಗಿದ್ದ… ನೆಲದ ಸೂಕ್ಷ್ಮ ತರಂಗಗಳ ಮೂಲಕ ಎದುರಾಗುತ್ತಿರುವ ಅಪಾಯವನ್ನು ಗ್ರಹಿಸಿತನ್ನನ್ನು ತಾನು ರಕ್ಷಿಸಿಕೊಳ್ಳುವ ಸರ್ಪದ ಜಾಯಮಾನದವನಾಗಿದ್ದ. ಮುಖ ಚಹರೆ ಮೂಲಕ ವ್ಯಕ್ತಿಯೋರ್ವನ ತ್ರಿಕಾಲ ಗ್ರಹಿಸಿ ಬಿಡುತ್ತಿದ್ದ. ಅವನು ಯಾವುದೇ ಜ್ಯೋತಿಷಿಗಿಂತ, ಪ್ಯಾರಾ ಸೈಕಾಲಜಿಸ್ಟನಿಗಿಂತ ಏನೂ ಕಡಿಮೆ ಇರಲಿಲ್ಲ. ಬಡತನ-ಶ್ರೀಮಂತಿಕೆ, ಒಳ್ಳೆಯವರು-ಕೆಟ್ಟವರು, ಸ್ರೀಪುರುಷ ಇತ್ಯಾದಿಗಳ ಬಗ್ಗೆ ಖಚಿತವಾಗಿ ಗ್ರಹಿಸಿ ತನ್ನದೇ ಆದ ಧಾಟಿಯಲ್ಲಿ ವಿಶ್ಲೇಶಿಸುತ್ತಿದ್ದ ಅವನು ಕಾರ್ಲ್‌ಮಾರ್ಕ್ಸ್, ಮಾವೋರಿಗಿಂತ ಕಡಿಮೆ ಇರಲಿಲ್ಲ. ದೇವರು ದಿಂಡರುಗಳ ಬಗ್ಗೆ; ಅರ್ಚಕರ ಬಗ್ಗೆ, ಪುರೋಹಿತ ವೈದಿಕರ ಬಗ್ಗೆ, ಅವರ ನಿರರ್ಥಕ ಮತ್ತು ನರಕಸದೃಶ ಬದುಕಿನ ಬಗ್ಗೆ ಖಡಾ ಖಂಡಿತವಾದಿಯಾಗಿದ್ದ ಅವನು ಯಾವ ಚಾರ್ವಾಕನಿಗಿಂತ ಕಡಿಮೆ ಇರಲಿಲ್ಲ. ಅವನು ಒಳಗೊಳಗೆ ಸೌಂದರ್ಯಾರಾಧಕನಾಗಿದ್ದ… ಯಾವ ಯಾವ ವಸ್ತುವಿನಲ್ಲಿ ಯಾವ ರೀತಿ ಸೌಂದರ್ಯ ಅಡಗಿರುತ್ತದೆ? ಅದನ್ನು ಯಾವ ಇಂದ್ರಿಯದ ಮೂಲಕ ಗ್ರಹಿಸಬೇಕು? ಎಂದು ಮುಂತಾಗಿ ಅವನು ಹೇಳುತ್ತಿದ್ದುದು ಯಾರ ಗಮನವನ್ನೂ ಸೆಳೆದಿಲ್ಲ. ಲೋಕಾನುಭವದಿಂದ ಮಾತ್ರ ಆನಂದಾನುಭವವಾಗುವುದೆಂದು ಅವನು ಹೇಳುತ್ತಿದ್ದುದನ್ನು ಮರೆಯಲು ಹೇಗೆ ಸಾಧ್ಯ? ಮುಖ್ಯವಾಗಿ ಲೌಕಿಕ ಪ್ರಕ್ರಿಯೆಗಳಲ್ಲಿ ಅಗಾಧವಾಗಿ ಪಳಗಿದ್ದ ಅವನನ್ನು ಕೇವಲ ತಲೆಹಿಡುಕನೆಂದು ಹೇಗೆ ಅರ್ಥ ಮಾಡಿಕೊಳ್ಳಲಿ ಹೇಳು?

ಇದೆಲ್ಲ ನನಗೆ ಅರ್ಥವಾಗಿದ್ದು, ಇಷ್ಟವಾಗಿದ್ದು ಅವನು ಬಾಳ್ಯಾನ ಪಾತ್ರಧಾರಿಯಾದ ನಂತರವೇ. ಲೀಲಾಜಾಲವಾಗಿ ಮೂರು ನಾಲ್ಕು ಭಾಷೆಗಳಲ್ಲಿ ಮಾತಾಡುತಿದ್ದ: ಅವರ ಅಂತರಂಗದ ಭಾವನೆಗಳಿಗೆ ಮಾತಿನ ರೂಪಕೊಟ್ಟು ಗ್ರಹಿಸುತ್ತ; ಗ್ರಹಿಸಿ ಅವರ ಮೈಚಳಿ, ಸಂಕೋಚಗಳನ್ನು ಕಳಚುತ್ತ, ಕಳಚಿ ನಗ್ನರಾದ ಅವರನ್ನು ತೆರೆದ ಬಾಗಿಲೊಳಗೆ ಬಿಟ್ಟು ಲೈಂಗಿಕ ಸುಖಾನುಭವಕ್ಕೆ ಈಡುಮಾಡುತ್ತ, ಈಡಾದವರ ಅನುಭವಗಳನ್ನು ಭಾಜಕ ಮತ್ತು ಭಾಜ್ಯಗಳಿಂದ ಸಂಗ್ರಹಿಸುತ್ತ ಉತ್ತರೋತ್ತರ ಅವಧೂತ ಸ್ಥಾನವನ್ನಲಂಕರಿಸಿದ ಅವನು ತುಂಬ ನಿಘೂಡ ವ್ಯಕ್ತಿ ಮಹರಾಯಾ, ಕೆಲವು ನಿರ್ದಿಷ್ಟ ಸುಳ್ಳುಗಳ ಕವಚಗಳೊಳಗೆ ಸದಾ ಅಡಗಿಕೊಂಡಿರುತ್ತಿದ್ದನಾದ್ದರಿಂದ ಒಂದೆರಡು ದಿನಗಳಲ್ಲಿ ನಿನ್ನಂಥವರಿಗೆ ಸಾಧ್ಯವಿಲ್ಲ. ಅವನಿಂದ ನನ್ನನ್ನು; ನನ್ನಿಂದ ಅವನನ್ನು ಬೇರ್ಪಡಿಸಿ ಮಾತಾಡುವುದು ಅರ್ಥ ಮಾಡಿಕೊಳ್ಳುವುದು ಆಗದ ಮಾತು. ಅಂಥ ಗೆಳೆಯನ, ಅಭಿಜಾತ ಕಲಾವಿದನ ಸಾಂಗತ್ಯದಿಂದಾಗಿ ನಾನು ಸಂಗ್ಯಾನ ಪಾತ್ರದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಳ್ಳುವುದು ಸಾಧ್ಯವಾಯ್ತಪ್ಪಾ. ಅದೇನು ಮಹಾಶಾಸ್ತ್ರೀ! ಅದೇನು ಮಹಾದೊಡ್ಡದು ಸ್ವಾಮಿ ಎಂದು ನನ್ನನ್ನು ಪುಸಲಾಯಿಸಿ ಪಳಗಿಸಿ ನನ್ನಿಂದ ದೊಡ್ಡ ದೊಡ್ಡ ಅಗಾಧವಾದ ಕೆಲಸಗಳನ್ನು ಮಾಡಿಸಿದ. ಮಾಡಿ ಪೆಟ್ಟು ತಿಂದು ದುಃಖದಲ್ಲಿದ್ದಾಗ ಅದಕ್ಯಾಕೆ ಹಂಗ್ ಚಿಂತೆ ಮಾಡ್ತೀರಿ… ಯಾರೂ ಮಾಡಬಾರದ ಕೆಲಸವನ್ನೇನೂ ನೀವು ಮಾಡಿಲ್ವಲ್ಲ ಎಂಥೆಂಥ ಸಮಾಜ ಬಾಹಿರ ಕೆಲಸ ಮಾಡ್ದೋರೆಲ್ಲ ಎಷ್ಟೊಂದು ಸುಖವಾಗಿದ್ದಾರೆ ನೋಡ್ರಿ. ಅವರೆಂದು ಅನುಭವಿಸಿರದ ದುಃಖವನ್ನು ನೀವ್ಯಾಕೆ ಅನುಭವಿಸೋದು? ಯಾವ ಕೆಲಸ ಮಾಡಬೇಕು? ಯಾವ ಕೆಲಸ ಮಾಡಬಾರದು? ಅಂತ ಮಾಡಿರೋರಾದರು ಯಾರು? ನಮ್ಮಂಥೋರು, ನಿಮ್ಮಂಥೋರು ತಾನೆ! ಅದಕ್ಯಾಕೆ ಹೆದರೋದು? ತಪ್ಪು ಎಂಬ ಶಬ್ದಕ್ಕೆ ಬೆಲೆ ಬರೋದು ಅದನ್ನು ಮಾಡಿದಾಗಲೇ… ಎಂದು ಮುಂತಾಗಿ ಹೇಳಿ ನನ್ನ ವ್ಯಕ್ತಿತ್ವದ ಕಾಮಗಾರಿ ಮಾಡುತ್ತಿದ್ದ. ಸವಕಲು ತಡೆಯುತ್ತಿದ್ದ. ಅವನಿಗೆ ನಾನು ನನ್ನ ಹೃದಯದಲ್ಲಿ ಶಾಶ್ವತ ಸ್ಥಾನ ಕಲ್ಪಿಸಿಕೊಂಡಿದ್ದೆ. ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ನನ್ನ ಬಳಿಗೆ ಕುಲುಕುಲು ನಗುತ್ತ ಬಂದು “ಏನು ಶಾಸ್ತ್ರಿ… ಸಾಯೋದಕ್ಯಾಕೆ ಇಷ್ಟೊಂದು ಯೋಚ್ನೆ ಮಾಡ್ತೀಯಾ! ಈ ಪ್ರಪಂಚದಲ್ಲಿ ಯಾರೂ ಸತ್ತೇ ಇಲ್ಲ ಅಂದ್ಕೊಂಡಿರುವಿ ಏನು? ಬೇಗ ಕೊನೆ ಉಸಿರು ಬಿಟ್ಟು ಸಾವಿಗೆ ಗೌರವ ಕೊಡು… ಹಿಂದು ಮುಂದು ನೋಡಬೇಡ ಅಷ್ಟೆ! ಎಂದು ಆಜ್ಞೆ ಮಾಡಿದ. ಪ್ರೀತಿಯಿಂದ ಒಮ್ಮೆ ಲಘು ಏಟು ನೀಡಿದ… ನಾನು ಕೂಡಲೆ ಪ್ರಾಣ ಬಿಟ್ಟು ಎಲ್ಲ ಗೋಜಲುಗಳಿಂದ ಈರ್ಷೆ ಅಸೂಯೆಗಳಿಂದ ಮುಕ್ತವಾದ ಪ್ರಪಂಚವನ್ನು ಪ್ರವೇಶಿಸಿಬಿಟ್ಟೆ. ಅಂಥ ಅಪರೂಪದ ವ್ಯಕ್ತಿ ಕಣೋ ಅವನು! ಅವನು ಹೀಗೆ ಅಂತ ಹೇಳುವುದು ಕಷ್ಟ. ಪ್ರಪಂಚದ ಆರ್ಳು ನೂರು ಕೋಟಿ ಜನರ ಪೈಕಿ ಸುಖವಾಗಿರುವುದ ಏಕ ಮಾತ್ರ ವ್ಯಕ್ತಿ ಎಂದರೆ ಅವನೇ ನೋಡು. ಸಾಯೋವರೆಗೂ ಬದುಕಿರುವ ಅವನೊಂದಿಗೆ ಸಂಪಾದಿಸಲಾಗುತ್ತಿಲ್ಲವೆಂಬ ಪ್ರೇತ ಸಂಕಟ ನನ್ನನ್ನು ಕಾಡ್ತಾ ಇದೆ.,,” ಎಂದು ಭಾವುಕಗೊಂಡು ನುಡಿಯಿತು ಶಾಮಣ್ಣ ಪಾತ್ರ.

ಅದರ ವಿತಂಡವಾದಕ್ಕೆ ಬೆರಗಾದೆ…. ಬದುಕಿನುದ್ದಕ್ಕೂ ವಿಲಕ್ಷಣತೆಯನ್ನು ಪಡೆಯುತ್ತಲೇ ಹೋದ ಶಾಮಣ್ಣ ಮರಣೋತ್ತರವಾಗಿ ಅದೇ ಜಾಡಿನಲ್ಲಿ ಮುಂದುವರೆದಿರುವುದು ವಿಚಿತ್ರ ಎಂದುಕೊಂಡೆ. ಅವನ ಮಾತುಗಳು ಮೇಲ್ನೋಟಕ್ಕೆ ಅಪಭ್ರಂಶಗೊಂಡಿರುವ ಮಾದರಿ ಎನ್ನಿಸಿದರೂ ಆಂತರ್ಯದಲ್ಲಿ ನಿಘೂಡ ಸತ್ಯಗಳನ್ನು ತುಂಬಿಸಿಕೊಂಡಿರುವವೆಂದು ಭಾಸವಾಯಿತು.

“ಶಾಮಣ್ಣಾ… ನೀನು ಮಾತಾಡ್ತಿರೋದೆ ವಿಚಿತ್ರ… ಅವುಗಳು ಈ ಜನ್ಮದಲ್ಲಿ ನನಗೆ ಅರ್ಥ ಆಗುವುದು ಸಾಧ್ಯವಿಲ್ಲ… ಅರ್ಥ ಮಾಡಿಕೊಳ್ಳೋದು, ಬಿಡೋದು ಓದುಗರಿಗೆ ಸೇರಿದ್ದು. ಅದರ ಬಗ್ಗೆ ನಾವು ವಿಶಾದದಿಂದ ಮಾತಾಡ್ತಾ ಕೂಡ್ರೋದು ಬೇಡ… ಅನಸೂಯ ನಿನ್ನ ಬದುಕಿನಲ್ಲಿ ತನ್ನದೇ ವೈಶಿಷ್ಯದಿಂದ, ವೈಲಕ್ಷಣ್ಯದಿಂದ ಪ್ರವೇಶಿಸಿದಳು. ಇದು ಕಾದಂಬರಿಯ ಒಂದು ಹಂತದಲ್ಲಿ ಸಮಾಧಾನಕರ ಸಂಗತಿ… ಸಾಮಾನ್ಯವಾಗಿ ಕದ್ದುಮುಚ್ಚಿ ಎಲ್ಲ ಮಹಿಳೆಯರ ಸುಂದರ ಪಾದಗಳನ್ನು ಗಮನಿಸುತ್ತಿದ್ದವನಾದ ನೀನು ಅಷ್ಟೊತ್ತು ಆಕೆಯೊಂದಿಗಿದ್ದರೂ ಆಕೆಯ ಪಾದಗಳನ್ನು ಯಾಕೆ ಗಮನಿಸಿಲ್ಲವೆಂಬುದೇ ನಿಘೂಡ ಸಂಗತಿ? ಯಾವ ಸೌಂದರ್ಯಾಣುಭವದ ರಹಸ್ಯ ಆಕೆಯ ಪಾದಗಳಲ್ಲಡಗಿತ್ತು ಎಂಬುದನ್ನು ತಿಳಿದುಕೊಳ್ಳಲು ನಾನು ಕುತೋಹಲಿಯಾಗಿರುವೆ. ಆದರೆ ಯಾಕೋ ಆಕೆ ಮಾತಾಡೋ ಶೈಲಿ ನನಗಿಷ್ಟವಾಗ್ಲಿಲ್ಲಪ್ಪ.. ಜನಪ್ರಿಯ ರಂಗನಟಿಯಾದವಳು ಅಷ್ಟೊಂದು ಜವಾರಿ ರೀತಿಯಲ್ಲಿ ವರ್ತಿಸಿದ್ದು ನನಗ್ಯಾಕೋ ಇಷ್ಟವಾಗಲಿಲ್ಲ… ಯಾಕಂದ್ರೆ ನಾನೀಗಾಗ್ಲೆ ಮಾತ ಅಡಿ ಬಂದಿದ್ದೀನಿ… ನೀನು ನಿನ್ನ ಮಾತಿನಲ್ಲಿ ವರ್ಣಿಸಿದಷ್ಟು ಜವಾರಿ ಥರ ಕಾಣಲಿಲ್ಲ. ಅದ್ಕೆ ಕೇಳಿದ್ದು… ‘ಏನಪ್ಪಾ ಇವ್ನು ನನ್ನ ಪ್ರಿಯತಮೆಯನ್ನು ತಪ್ಪಾಗಿ ಗ್ರಹಿಸಿದ್ದ’ ಎಂದು ತಪ್ಪು ತಿಳಿಯಬೇಡ…” ಎಂದು ನಾನು ನನ್ನಲ್ಲಿ ಕಾಣಿಸಿಕೊಂಡ ಅನುಮಾನವನ್ನು ನಿಸ್ಸಂಕೋಚವಾಗಿ ಎದುರಿಗಿಟ್ಟೆ.

ನನ್ನ ಮಾತಿಗೆ ಶಾಮಣ್ಣ ನಕ್ಕಿತು. –
“ಕಲ್ಚರ್ ಇಜ್ ನಥಿಂಗ್ ಬಟ್ ವರ್‍ಷಿಪ್ ದ ಬ್ಯೂಟಿ ಅಂತ ಬಲ್ಲೋರು ಹೇಳಿದ್ದಾರೆ. ಸೌಂದರ್ಯ ಸೃಷ್ಟಿ ಎಂಬುದು ನಮ್ಮ ನಮ್ಮ ಮನೋ ಧರ್ಮಕ್ಕೆ ತಕ್ಕದಾಗಿರುತ್ತದೆ…ಮಹಾತ್ಮಾ ಗಾಂಧಿಯ ವಿಗ್ರಹ ನೋಡಿ ಮೆಚ್ಚುವುದಕ್ಕೂ, ಜನಪ್ರಿಯ ನಟಿಯೋರ್ವಳ ಸುಂದರ ವಿಗ್ರಹ ನೋಡುವುದಕ್ಕೂ ವ್ಯತ್ಯಾಸವಿದೆ… ದೈಹಿಕ ಪ್ರಮಾಣ ಬದ್ಧತೆಯ ದೃಷ್ಟಿಯಿಂದ ಮಹಾತ್ಮರ ವಿಗ್ರಹದಲ್ಲಿ ಏಕಾಗ್ರತೆಯನ್ನು ಕಾಣಬಹುದು. ಆದರೆ ಆ ಮಹಾಮಹಿಮನ ಬದುಕಿನ ಸಾಧನೆಯ ಪರಿಚಯವಿರುವರಿಗೆ ಅದೊಂದು ಅಪಾರವಾದ ಸೌಂದರ್ಯ ಮೂರ್ತಿಯಾಗಿ ಕಾಣಿಸುತ್ತದೆ. ಆದರೆ ಅದೇ ಅನುಭೂತಿ ಸಿನಿಮಾ ನಟಿಯ ಸುಂದರ ವಿಗ್ರಹ ನೋಡಿದಾಗ ಆಗುವುದಿಲ್ಲ ಎಂಬುದನ್ನು ನೀನೂ ಒಪ್ಪುವಿ ತಾನೆ? ಬದುಕನ್ನು ಗ್ರಹಿಸಿದವರ ಅರ್ಥಮಾಡಿಕೊಂಡವರ ಕಣ್ಣುಗಳಿಗೆ ಮಾತ್ರ ಗಾಂಧೀಜಿಯವರ ವಿಗ್ರಹ ಅಲೌಕಿಕವಾದ, ಆಧ್ಯಾತ್ಮ ಸದೃಶವಾದ ಅನಂದಾನುಭೂತಿ ನೀಡಲು ಸಾಧ್ಯ. ಅಂದರೆ ಯಾವುದನ್ನಾದರೂ ಅರ್ಥಮಾಡಿಕೊಳ್ಳಬೇಕಾದರೆ ಮಾನಸಿಕವಾದ ಒಂದು ಸಿದ್ಧತೆಬೇಕು. ಅದರಂತೆ ಆನಂದದ ದೃಷ್ಟಿ ಬೆಳೆಸಿಕೊಳ್ಳಬೇಕು. ಸುಖದ ಕಲ್ಪನೆ ಉನ್ನತವಾಗಿಸಿಕೊಳ್ಳಬೇಕು.

ಆಗ ಮಾತ್ರ ಸೌಂದರ್ಯ ಪ್ರಜ್ಞೆ ಉದಾತ್ತವಾಗಲು ಸಾಧ್ಯ. ಇದು ಕೇವಲ ಯಾವುದೇ ಇಂದ್ರಿಯದ ಗ್ರಹಿಕೆಗೆ ಸಂಬಂಧಿದ್ದಲ್ಲ. ಅಪ್ರಬುದ್ಧ ಮನಸ್ಸು ಸೌಂದರ್ಯಾನುಭವದ ವಿವಿದ ತರಂಗಗಳನ್ನು ಗ್ರಹಿಸಲಾರದು… ವಸ್ತುವೊಂದರಿಂದ ನಿಶ್ಶಬ್ದವಾಗಿ ಹೊರಡುವ ಭಾವನೆಗಳನ್ನು ಅರಗಿಸಿಕೊಳ್ಳುವ ಶಕ್ತಿ ಹೀಚುಗಾಯಿಯಂತ ಮನಸ್ಸಿಗೆ ಇರುವುದಿಲ್ಲ. ಅದೇ ನಿನ್ನಲ್ಲಿ ನಾನು ಕಂಡುಕೊಂಡಿರುವ ಪ್ರಮುಖ ಸಮಸ್ಯೆ. ಅನಸೂಯಳಲ್ಲಿ ಜವಾರಿತನ ಗುರುತಿಸುವ ನಿನಗೂ; ಮಹಾತ್ಮಾ ಗಂಧಿ ವಿಗ್ರಹದಲ್ಲಿ ಕುರೂಪವನ್ನು ಗ್ರಹಿಸುವ ವ್ಯಕ್ತಿಗೂ ನಡುವೆ ವ್ಯತ್ಯಾಸವೇ ಇಲ್ಲ… ಶುಷ್ಕ ಅಧುನಿಕತೆಯಿಂದಾಗಿ ಮರಗಟ್ಟಿರುವ ನಿನ್ನ ಯಾವ ಇಂದ್ರಿಯಕ್ಕೂ ಆಕೆಯ ಸೌಂದರ್ಯ ನಿಲುಕುವುದು ಸಾಧ್ಯವಿಲ್ಲ. ಅದನ್ನು ಎಟಕುವಂತೆ ಮಾಡುವುದೇ ನನ್ನ ನಿರೂಪಣೆಯ ಪ್ರಮುಖ ಗುರಿ… ಮಹಾಕಾವ್ಯ ಅರ್ಥ ಮಾಡಿಕೊಳ್ಳುವುದಕ್ಕೆ: ಅದರ ಧ್ವನಿ ಪ್ರಪಂಚದಿಂದ ವಿಸ್ಮಯಗೊಳ್ಳುವುದಕ್ಕೆ ಅಲಂಕಾರ, ಛಂದಸ್ಸು ವ್ಯಾಕರಣಗಳ ಅಗತ್ಯ ಬೇಕಾದಂತೆ ಅನಸೂಯಳಲ್ಲಿ ಸೌಂದರ್ಯ ಗುರುತಿಸುವ ಮೊದಲು ಆಕೆಯ ಬದುಕನ್ನು ಅರ್ಥ ಮಾ‌ಇಕೊಳ್ಳಬೇಕು…” ಎಂದು ಅವನು ಹೇಳುತ್ತಿದ್ದುದು ಕೇಳಿ ನಾನು ಮೂಕವಿಸ್ಮಿತನಾದೆ… ತನ್ನ ಬದುಕನ್ನು ತಾನು ನಿರೂಪಿಸುವ ಶಕ್ತಿ ಅವನಲ್ಲಿ ಮುಪ್ಪರಿಗೊಂಡಿರುವುದೆಂದು ಅರ್ಥ ಮಾಡಿಕೊಂಡೆ.

ಓದುಗರಲ್ಲಿ ಇದನ್ನು ಶುಷ್ಕ ಚರ್ಚೆ ಎಂದು ಕೊಳ್ಳುವುದೋ ಎಮ್ಬ ಆತಂಕ ಕಾಡತೊಡಗಿತು. “ಆಯ್ತು ಶಾಮಣ್ಣ… ನಾನು ‘ಜವಾರಿತನ” ಎಂಬ ಪದ ಉಚ್ಚರಿಸಿದ್ದರಿಂದಲ್ಲವೆ ನಿನಗೆ ಇಷ್ಟೆಲ್ಲ ಹೇಳಲಿಕ್ಕೆ ಸಾಧ್ಯವಾಯಿತು. ನಿನ್ನ ಮಾತುಗಳು ನನ್ನ ಬೆಳವಣಿಗೆಗೆ ಸಹಾಯಕವಾದವು… ಕಾದಂಬರಿಯ ಪಾತ್ರವೊಂದು ಅದರ ಕತೃವಿನ ಉನ್ನತಿಗೆ ಶ್ರಮಿಸುತ್ತಿರುವುದೆಂದು ತಿಳಿದು ಓದುಗರು ನಿನ್ನ ಬಗ್ಗೆ ಹೆಮ್ಮೆ ಪಡುತ್ತಾರೆ… ನೀನು ಬ್ಯಾಂಕು ನೌಕರಿಯಲ್ಲಿದ್ದಾಗ ಒಂದು ನಾಟಕ ಆಡಿದ್ದಿ ಎಂದು ಅವರಿವರಿಂದ ಕೇಳಿ ತಿಳಿದುಕೊಂಡಿದ್ದೆ. ಅದು ರಕ್ತರಾತ್ರಿಯಂಥ ಪೌರಾಣಿಕವಾಗಿರಬಹುದು; ಬಂಜೆ ತೊಟ್ಟಿಲು, ಗೌಡ್ರಗದ್ದಲದಂಥ ಸಾಮಾಜಿಕವಾಗಿರಬಹುದು, ಕಿತ್ತೂರು ಚೆನ್ನಮ್ಮ; ಎಚ್ಚೆಂ ನಾಯಕ, ಸಂಗೊಳ್ಳಿ ರಾಯಣ್ಣದಂಥ ಐತಿಹಾಸಿಕ ನಾಟಕವಿದ್ದಿರಬಹುದೆಂದು ಊಹಿಸಿದ್ದೆ. ಆದರೆ ಅದು ಸಂಗ್ಯಾಬಾಳ್ಯಾದಂಥ… ಜಾನಪದ ಡಪ್ಪಿನಾಟ ಆಡಿರಬಹುದೆಂದುಕೊಂಡಿರಲಿಲ್ಲ… ನಾನು ತಿಳಿದ ಮಟ್ಟಿಗೆ ಆ ಡಪ್ಪಿನಾಟ ಸಂಪ್ರದಾಯವಾದಿಗಳಿಂದ ತಿರಸ್ಕರಿಸಲ್ಪಟ್ಟು ಇರುವುವಂಥಾದ್ದು. ಮೇಲ್ಜಾತಿಯವರಾಗಲೀ, ಸುಶಿಕ್ಷಿತರಾಗಲೀ ಯಾರೂ ಅದನ್ನು ಆಡಿ ಇಲ್ಲದ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ… ಅದೇನಿದ್ರೂ ಕೆಳವರ್ಗದ ಮಂದಿ ತಂತಮ್ಮ ಕೇರಿಗಳಲ್ಲಿ ಆಡಿಕೊಳ್ತಿರ್‍ತಾರೆ… ಅದು ಅಲ್ಲದೆ ಕುಣಿತ ಮತ್ತು ಹಾಡು ಪ್ರಧಾನವಾಗಿರುವ ಅದನ್ನು ಆಡುವುದು ಅಷ್ಟು ಸುಲಭವಲ್ಲ. ಅಂಥಾದ್ರಲ್ಲಿ ಕುಣಿತ, ಹಾಡು, ಅನುಭವ ಇಲ್ಲದ ಸುಶಿಕ್ಷಿತರಾದ (ನಾನಂದುಕೊಂಡಿರುವುದು) ನೀವು ಕಲಿತದ್ದಾಗ್ಲೀ, ಆಡಿದ್ದಾಗ್ಲೀ ಯಶಸ್ವಿ ಆಯ್ತಾ ಎಂದು ಅನುಮಾನ ಕಾಡ್ತಿದೆ… ನಿನ್ನ ಕುಣಿತ ಅಭಿನಯಾನ ಪ್ರೇಕ್ಷಕರು ಮೆಚ್ಚಿಕೊಂಡಿದ್ದರೆ ಅಷ್ಟೇ ಸಾಕು” ಎಂದೆ.

ನನ್ನ ಮಾತು ಕೇಳಿ ಶಾಮಣ್ಣ ಪಾತ್ರಕ್ಕೆ ತುಂಬ ಸಂತೋಷವಾಯಿತು. ಆರೋಗ್ಯವಾಗಿ ಬದುಕಿದ್ದಿದ್ದಲ್ಲಿ ತಾನು ದೊಡ್ಡ ರಂಗನಟ ಆಗಬೇಕು ಅಂತ ಅಂದುಕೊಂಡಿತ್ತೋ ಏನೋ!.

“ಸಂಗ್ಯಾಬಾಳ್ಯಾ ನಾಟಕವನ್ನು ನಾವು ಯಶಸ್ವಿಯಾಗಿ ಆಡಿದ್ದು; ಪ್ರೇಕ್ಷಕರಿಂದ (ಆದರೆ ಒಂದೇ ಒಂದು ಕಂಟಕದ ಹೊರತಾಗಿ) ಮೆಚ್ಚಿಗೆ ಪಡೆದಿದ್ದೂ… ಆ ನಾಟಕ ಅಭಿನಯಿಸಿದ ನಮ್ಮ ಬದುಕಿನ ಮೇಲೂ ಪ್ರಭಾವ ಬೀರಿದ್ದು.. ಅದೆಲ್ಲ ಒಂದು ದೊಡ್ಡ ಕಥೆ ಮಹಾರಾಯ… ಅದನ್ನೆಲ್ಲ ಆಮೂಲಾಗ್ರವಾಗಿ ಹೇಳ್ತಾ ಕೂತ್ರೆ ಹಗಲು ರಾತ್ರಿ ಆಗಿದ್ದಾಗಲೀ; ರಾತ್ರಿ ಹಗಲಾಗಿದ್ದಾಗಲೀ ಗೊತ್ತೇ ಆಗುವುದಿಲ್ಲ… ಅದಕ್ಕೆ ಸಂಕ್ಷಿಪ್ತವಾಗಿ… ಎಹ್ಟು ಬೇಕೋ ಅಷ್ಟು ಹೇಳ್ತೀನಿ… ವಿವರವಾಗಿ ಹೇಳ್ಲಿಲ್ಲಾಂತ ಬೇಸರ ಮಾಡ್ಕೋ ಬೇಡ… ಅದಕ್ಕಿಂತ ಮೊದಲು ನೀನು ಅಡಿಗೆ ಮನೆ ಹೊಕ್ಕು, ಏನಾದ್ರೊಂಚೂರು ಹೊಟ್ಟೆಗೆ ಹಾಕ್ಕೊಂಡು, ಹಾಗೇ ಹೆಂಡತಿಯನ್ನು ಮಾತಾಡಿಸಿಕೊಂಡು ಬಂದು ಕೂಡು. ಹೊಟ್ಟೆಯಲ್ಲಿ ಕೂಳು ಬಿದ್ದಿದ್ದರೆ ಮಾತ್ರ ನಾನು ಹೇಳೋದು ಅರ್ಥ ಆಗ್ತದೆ ಇಲ್ಲಾಂದ್ರೆ ಇಲ್ಲ… ಹಸಿವೆ ಹೆಚ್ಚಿದಷ್ಟು ಆಹಾರದ ರುಚಿಯೂ ಹೆಚ್ಚುತ್ತದೆ… ಅದರಂತೆ ಕುತೂಹಲ, ಪ್ರೀತಿ ಹೆಚ್ಚಿದಾಗ ಮಾತ್ರ ನಾನು ಹೇಳ್ತಿರೋದು ಅರ್ಥವಾಗುತ್ತದೆ ಸಹ್ಯವಾಗ್ತದೆ… ತೆವಲಿಗೆ, ಮುಲಾಜಿಗೆ ಕೂತುಕೊಂಡ್ರೆ ಉಪಯೋಗವಿಲ್ಲ… ಹೋಗಿಬಾ”ರೆಂದು ಹೇಳಿ ‘ಕ್ಷ’ ಎಂಬ ಅಕ್ಷರಕ್ಕೆ ಬೆನ್ನು ಕೊಟ್ಟು ವ್ಯಂಜನ, ಅನುಸ್ವಾರದ ಮೇಲೆ ಉದ್ದೋಕಿ ಕಾಲು ಚಾಚಿ ಕೂತುಕೊಂಡಿತು.

ಅದೇನು ತಿನ್ನುವ ಸ್ಥಿತಿಯಲ್ಲೂ ಇಲ್ಲ, ಕುಡಿಯುವ ಸ್ಥಿತಿಯಲ್ಲೂ ಇಲ್ಲ,
ಅದನ್ನು ಅದರ ಪಾಡಿಗೆ ಬಿಟು ನಾನೊಬ್ಬನೆ ಹೋಗಿ ಕೂಳುಬಾಕನಂತೆ ತಿಂದು ತೇಗುವುದು ಹೇಗೆ ಸಾಧ್ಯ!
ಅದು ತುಂಬ ಸೆಂಟಿಮೆಂಟಲ್ಲು ಮತ್ತು ಸೆಮಿಕ್ರಾಕು. ಮಾತಿಗೆ ಮನ್ನಣೆ ಕೊಟು ಹೋಗಿ ಬರದಿದ್ದರೆ ಅಪಾರ್ಥ ಮಾಡಿಕೊಳ್ಳುತ್ತದೆ ಎಂದುಕೊಂಡು ನಾನು ಅಡುಗೆ ಮನೆಗೆ ಹೋಗಿ ಮರಳಿ ಬಂದು ಕೂತೆ.
*
*
*
ಮನುಷ್ಯ ಸಮೂಹದ ಮನಸ್ಸು ಅದೇಷ್ಟು ವಿಚಿತ್ರ. ಕೋಳಿ ಚಿನ್ನದ ಉಂಗುರವನ್ನು ಗುಳುಮ್ಮನೆ ನುಂಗಿ ಕೂಡಲೆ ಅರಗಿಸಿಕೊಳ್ಳುವಂತೆ ಮನುಷ್ಯ ಗುಂಪಿನಿಂದ ಹೊರಡುವ ಕಚ್ಚಾ ಸುದ್ದಿಗಳನ್ನು ಸಮಾಜವೆಂಬ ಅಕ್ಕಸಾಲಿಗನು ಅದನ್ನು ಪುಟಕ್ಕಿರಿಸಿ, ಕರಗಿಸಿ, ಅಚ್ಚಿಗೆರೆದು ತನ್ನ ಇಚ್ಛೆಯಂತೆ ಆಕಾರ ಬದಲಿಸಿ ಅದಕ್ಕೆ ವಿವಿಧ ಬಣ್ಣ ಲೇಪಿಸಿ ಶೋಕೇಸ್‌ನಲ್ಲಿ ಇಡುತ್ತಾನೆ. ಅದು ಹೇಳಿ, ಕೇಳಿ ಮುದುಕಿಯೂ ಅಲ್ಲದ ಹುಡುಗಿಯಲ್ಲದ ಮಧ್ಯ ವಯಸ್ಕಳಂತ ಊರು. ಚಿಕ್ಕದೂ ಅಲ್ಲದ, ದೊಡ್ಡದೂ ಅಲ್ಲ, ಮಧ್ಯಂತರದ್ದು. ಒಂದೊಂದು ಕೇರಿಯ ಅವಿದ್ಯಾವಂತ ವಿದ್ವಾಂಸರು ಅದರ ಚರಿತ್ರೆಯನ್ನು ಹಳೇ ಕಾಲದ ಶಿಲಾಯುಗದಿಂದ ಆರಂಭಿಸಿ ಜರಿಮಲೆಯ ಪಾಳೆಗಾರ ಹನುಮಣ್ಣ ನಾಯಕ ದೊರೆ ಎಂಬ ಪಾಳ್ಳೆಗಾರ ತನ್ನ ಕುಟುಂಬದ ಎರಡನೆ ಊಟಕ್ಕಾಗಿ ಕೋರ್ಟಿನ ಬಳಿ ವಕೀಲರನ್ನು ಹುಡುಕಿಕೊಂಡು ಅಲೆಯುತ್ತಿರುವನೆಂಬ ಸಂಗತಿವರೆಗೆ ತಂದು ನಿಲ್ಲಿಸುತ್ತಾರೆ. ಆಂಧ್ರಪ್ರದೇಶದ ಮೂಲೆಯಿಂದ ವಲಸೆ ಬಂದ ಈಡಿಗರ ಕುಟುಂಬ ಅಲ್ಲಿ ನೆಲೆಸಿ ಶ್ರೀಮಂತರ ಪೈಕಿ ಶ್ರೀಮಂತವಾಯಿತು. ಅವರ ಅಹರ್ನಿಶಿ ಶ್ರಮದಿಂದ ಕೊತ್ತಲಿಗಿ ಮಾದರಿ ಗ್ರಾಮವೆಂದು ಹೆಸರಾಯಿತು. ನಾಗರೀಕತೆಯ ಎಲ್ಲ ಸೌಲಭ್ಯಗಳನ್ನು ಅವರು ಜನತೆಗೆ ಒದಗಿಸಲು ಪ್ರಯತ್ನಿಸಿದರು. ಬೆಂಗಳೂರಿನ ಮುನಿರೆಡ್ಡಿಪಾಳ್ಯದಲ್ಲಿ ಕಾರ್ಯಾರಂಭ ಮಾಡಬೇಕಿದ್ದ ಬ್ಯಾಂಕನ್ನು ಸದರಿ ಗ್ರಾಮಕ್ಕೆ ತಂದವರು ಅವರೇ. ಊರಿನ ಮೇಲ್ಮೈ ಲಕ್ಷಣ ಬದಲಾಯಿಸಿತೇ ಹೊರತು ಜನರ ಸ್ವಭಾವ ಬದಲಾಗಲಿಲ್ಲ. ಆಧುನಿಕವೆಂದು ಕಾಣಿಸಿಕೊಳ್ಳುವ ಮನುಷ್ಯ ಒಳಗೊಳಗೇ ಆದಿವಾಸಿ ಮನಸು ಪೋಶಿಸಿಕೊಂಡು ಬಂದ. ಮೊಟ್ಟೆ ಕವಚ ಭೇದಿಸಿ ಮರಿ ಹೊರ ಬರಲು ಹೇಗೆ ಪ್ರಯತ್ನಿಸುವುದೋ ಹಾಗೆಯೇ ಆದಿವಾಸಿ ಮನಸ್ಸು ಹೊರಬರಲು ಪ್ರಯತ್ನಿಸುವುದು. ಅಂಥದಕ್ಕೊಂದು ಗ್ರಾಸವಾಗಿದ್ದ ನಾವು ಮತ್ತು ನಾವು ಅಭಿನಯಿಸಬೇಕಿದ್ದ ಬಾಳ್ಯಾ ಸಂಗ್ಯಾನ ಜಾನಪದ ನಾಟಕವು. ಅಲ್ಲದೆ ಮೇಲ್ಜಾತಿಯವರ ಸಂಪ್ರದಾಯದ ಸಂಚಿನಿಂದಾಗಿ ಈ ಜಾನಪದ ನಾಟಕ ಗ್ರಾಮದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಬಹಿಷ್ಕರಿಸಲ್ಪಟ್ಟಿತ್ತು. ಆಡಬೇಕೆಂದವರಿಗೆ ಒಂದಲ್ಲಾ ಒಂದು ವಿಘ್ನಗಳು ಒದಗಿ ಆಡದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದವು. ಆ ನಾಟಕವನ್ನು ಆಡಿದ ಪಕ್ಷದಲ್ಲಿ ಗಂಡ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ, ಹೆಂಡತಿ ಗಂಡನ್ನು ಕಳೆದುಕೊಳ್ಳುತ್ತಾಳೆ… ಅಥವಾ ತಲೆ ಕೆಟ್ಟು ದೇಶಾಂತರ ಹೋಗುತ್ತಾರೆ… ಇತ್ಯಾದಿ. ಇಂಥವಕ್ಕೆಲ್ಲ ಹೆದರದೆ ಆಗೊಮ್ಮೆ ಈಗೊಮ್ಮೆ ಆಡುತ್ತಿದ್ದವರೆಂದರೆ ಕಪ್ಪು ಜನರು… ಅವರಿಗೆ ಮಾತ್ರ ಆ ನಾಟಕದಿಂದ ಒಳ್ಳೆಯುವುದಾಗುವುದಂತೆ. ಆಡಿದ ಅವರಿಗೆ ಅಗಲಿದ ಗಂಡನನ್ನು ಹೆಂಡತಿಯು ಕೂಡಿಕೊಳ್ಳುತ್ತಾಳೆ; ಅಗಲಿದ ಹೆಂಡತಿಯನ್ನು ಕೂಡಿಕೊಳ್ಳುತ್ತಾನೆ… ತಮ್ಮ ಪುರುಷತ್ವದ ಬಗ್ಗೆ ಅನುಮಾನವಿದ್ದವರು ಆಡಿ ಮರಳಿ ಸಧೃಡವಾದ ಪುರುಷತ್ವವನ್ನು ದೇದೀಪ್ಯಮಾನವಾಗಿ ಪ್ರಕಟಿಸುತ್ತಿರುವುದುಂಟು… ಇತ್ಯಾದಿ… ಮೇಲ್ವರ್ಗದವರು ಸಂಗ್ಯಾ ಬಾಳ್ಯಾ ಎಂದು ಕರೆಯುತ್ತಿದ್ದ ಅದೇ ನಾಟಕವು, ಕೆಳಜಾತಿಯವರು ಬಾಳ್ಯಾ ಸಂಗ್ಯಾನ ಆಟವು ಎಂದು ಕರೆಯುತ್ತಿದ್ದ ವ್ಯಭಿಚಾರ ಪ್ರಧಾನ ಅದೇ ನಾಟಕವು ಒಬ್ಬರ ಕಣ್ಣಿನಲ್ಲಿ ಸುಣ್ಣವನ್ನೂ; ಇನ್ನೊಬ್ಬರ ಕಣ್ಣಲ್ಲಿ ಬೆಣ್ಣೆಯನ್ನೂ ಯಾಕಿಡುತ್ತದೆ ಎಂಬುದು ಅರ್ಥವಾಗದ ಸಂಗತಿಯಾಗಿರುವುದು? ಸಹಜವಾಗಿ ನಾವಿಂಥಾದ್ದೊಂದು ನಾಟಕವನ್ನು ಆಡುತ್ತಿರುವುದು ತಿಳಿದಾಗ ಆ ಗ್ರಾಮದ ಸಮಾಜ ವಿಚಿತ್ರವಾಗಿ ಪ್ರತಿಕ್ರಿಯಲಾರಂಭಿಸಿತು. ಮೇಲ್ವರ್ಗದವರು ಈ ಬ್ಯಾಂಕಿನವರಿಗೆ ಬುದ್ಧಿ ಇರುವುದೋ ಇಲ್ಲವೋ?… ಆಡಿ ತಾವು ಕೆಡುವುದಲ್ಲದೆ ಊರನ್ನೂ ಹಾಳು ಮಾಡಬೇಕೆಂದು ನಿರ್ಧರಿಸಿರುವಂತೆ ಕಾಣುತ್ತದೆ… ಎಂದು ಪ್ರತಿಕ್ರಿಯಿಸತೊಡಗಿದರೆ, ಗ್ರಾಮದ ನಿಮ್ನ ಜಾತಿಯವರು ವಾಸಿಸುವ ಕೇರಿಗಳು ಅಂತೂ ಈಗಲಾದರೂ ಮೇಲ್ಜಾತಿಯವರಿಗೆ ತಾವೂ ಬಾಳ್ಯಾ ಸಂಗ್ಯಾನ ಆಡುವಂಥ ಬುದ್ಧಿಯನ್ನು ದೇವರು ಕೊಟ್ಟನಲ್ಲ… ಯಾರು? ಯಾರನ್ನು ಬಿಟ್ಟು ತಲೆ ಕೆಟ್ಟು ಓಡಿಹೋಗುತ್ತಾರೆಂಬುದನ್ನು ಇವರಾದರೂ ಆಡಿ ಸುಳ್ಳು ಮಾಡಲಿರುವರಲ್ಲ… ಇದೇ ದೊಡ್ಡ ಸಂಗತಿ… ಇವರಿಗೆ ಕಂಟಕಗಳು. ವಿಘ್ನಗಳು ಒದಗದಂತೆ ಸರಸೋತಿಯು, ಗಣಪನಾಯಕನು ಮೈ ಚಳಿ ಬಿಟ್ತು ಆಶೀರ್ವಾದ ಮಾಡಬೇಕು… ಅದು ಆಯಾ ದೇವತೆಗಳ ನೈತಿಕ ಜವಾಬ್ದಾರಿ ಮುಂತಾಗಿ ಆಡಿಕೊಂಡರು.

ಆದರೆ ಈ ಪರ ವಿರೋಧಿ ಪ್ರತಿಕ್ರಿಯೆಗಳು ನಮ್ಮನ್ನು ಎಡತಾಕುವುದು ಅಷ್ಟು ಸುಲಭ ಸಾಧ್ಯ ಸಂಗತಿಯಾಗಿರಲಿಲ್ಲ… ಆರ್ಥೋಡಾಕ್ಸ್, ಈರಸೈವರು ಈರ್ಯಾನ ಪಾತ್ರಧಾರಿ ಚಂಬಸ್ಯಯ್ಯನನ್ನು ಅಲ್ಲಲ್ಲಿ; ಆಯಕಟ್ಟಾದ ಜಾಗದಲ್ಲಿ ತರುಬುತ್ತಿದ್ದುದೂ; “ನಿಮ್ಮಂಥೋರೆ ಹಿಂಗ ಮಾಡಿದ್ರೆ ಹೆಂಗ ಸ್ವಾಮಿ… ಮಾನವ ಧರುಮಕ್ಕೆ ಜಯವಾಗಲಿ ಎಂದು ಹೇಳೋ ಜಾತಿಯವರಾದ ನೀವೇ ಸಂಗ್ಯಾನ ಕೊಲೆ ಮಾಡೋ ಹೀನ ಪಾತ್ರವನ್ನು ಮಾಡೋದಂದ್ರೇನು? ನಿಮ್ಮ ಪಾತ್ರ ನಮಗ್ಯಾಕೋ ಸಜ್ಜು ಕಾಣವಲ್ದು” ಎಂದು ಪ್ರತಿಕ್ರಿಯಿಸುತ್ತಿದ್ದುದೂ ಎಲ್ಲಾ ತಿಳಿದು ಹೋಗಿತ್ತು.

ಆರ್ಥೋಡಾಕ್ಸು ಮುಸ್ಲಿಮರು ಬಸ್ಯಾನ ಪಾತ್ರಧಾರಿ ತಮ್ಮ ಇಸುಮಾಯಿಲನು ಅಲ್ಲಲ್ಲಿ ಅಲ್ಲಲ್ಲಿ ಆಯಕಟ್ಟಾದ ಜಾಗದಲ್ಲಿ “ಅಸ್ಸಲಾಂ ಆಲೈಕುಂ” ಎಂದು ತರುಬಿ “ಅರೆ ಅಲ್ಲಾ..” “ನೀವು ಆ ಕಾಫಿರ್ ಬಸ್ಯಾನ ಪಾತ್ರ ಮಾಡುವುದೆಂದರೇನು ಭ್ಯಾ… ಅದೂ ಕಾಫಿರರ ಜೊತೆ ಸೇರ್‍ಕಂಡು ಕಾಫಿರನ ಹೆಸರಿಟ್ಟುಕೊಂಡು, ಕಾಫಿರನನ್ನು ಕೊಲೆ ಮಾಡೋದೆಂದರೇನು! ನೀವು ಬಸ್ಯಾನ ಹೆಸರಿನ ಬದಲಿಗೆ ಫ್ರಕ್ರುದ್ದೀನಂತ ಹೆಸರಿಟ್ಟುಕೊಂಡಿದ್ರೆ ನಮ್ದೇನು ತಕರಾರ್‍ಲಿಲ್ಲ… ಇದು ಏನಾದ್ರು ಜನಾಬ್ ಹಾಜೀ ಮಸ್ತಾನ್ರಿಗೆ, ಜನಾಬ್ ಯುಸುಫ್ ಸಾಹೇಬ್ರಿಗೆ ಗೊತ್ತಾದ್ರೆ ಅವರು ಜಮಾತೆಗೆ ಸೂಟ್‌ಕೇಸ್ ಕಳಿಸ್ತಾರೆಯೇ… ಜರಾ ಸೋಚೋ ಭ್ಯಾ” ಎಂದು ಪ್ರತಿಕ್ರಿಯಿಸುತ್ತಿದ್ದುದೆಲ್ಲವೂ ತಿಳಿದು ಬರುತ್ತಿತ್ತು! ಆರ್ಥೋಡಾಕ್ಸ್ ಬ್ರಾಹ್ಮಣರು ತಮ್ಮ ಜಾತಿವಂದಿಗರಾದ ಇರುಪಾಕ್ಷಿ ಪಾತ್ರಧಾರಿಯಾದ ಹೆಬ್ರಿಯವರನ್ನು ಅಲ್ಲಲ್ಲಿ ಆಯಕಟ್ಟಾದ ಜಾಗಗಳಲ್ಲಿ “ದೀರ್ಘಾಯುಷ್ಮಾನ್ ಭವ” ಎಂದು ಆಶೀರ್ವಾದ ಮಾಡಿ ತರುಬಿ “ಎಂಥದು ಮಾರಾಯ್ರೆ ಇನ್ನೂ ಎರಡು ಬೃಂದಾವನ ಕಟ್ಟಿಸಬೇಕಾಗಿರೋ ನೀವೆ ಆ ಶೂದ್ರ ಮುಂಡೇ ಪಾತ್ರವಾದ ಇರುಪಾಕ್ಷಿ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿರುವುದೆಂದರೇನು? ಹೋಗಿ ಹೋಗಿ ಅದು ಬ್ಲಡಿ ಲಿಂಗೈತನ ಕೋಮಿನ ಹೆಸರು… ಲಕ್ಷ್ಮಣಾಚಾರ್ಯ ಎಂದು ಹೆಸರಿಟ್ಟುಕೊಂಡು ಸಂಗ್ಯಾನ ಕೊಲೆ ಮಾಡಿದ್ರೆ ನಮ್ದೇನು ಅಭ್ಯಂತರ ಇರುತ್ತಿರಲಿಲ್ಲ. ಇದೇನಾದ್ರು ನಮ್ಮೂರಾರೆಸೆಸ್ಸೆಸ್ನ ಪ್ರಧಾನ ದಂಡನಾಯಕರಾದ ದೇವರಸ್ಸೀಗೆ ಗೊತ್ತಾದ್ರೆ ಅವ್ರ ಮನಸ್ಸಿಗೆ ಎಷ್ಟು ನೋವು ಮಾಡಿಕೊಳ್ಳುವರು ನೀವೇ ಯೋಚಿಸಿ” ಎಂದು ಪ್ರತಿಕ್ರಿಯಿಸುತ್ತಿದ್ದುದೆಲ್ಲವೂ ತಿಳಿದು ಬರುತ್ತಿತ್ತು.

ಅದೆ ಆರ್ಥೋಡಾಕ್ಸ್ ಸ್ಮಾರ್ಥ ಬ್ರಾಹ್ಮಣರು ಸಂಗ್ಯಾನ ಪಾತ್ರಧಾರಿಯಾದ ನನ್ನನ್ನು ಅಲ್ಲಲ್ಲಿ ಆಯಕಟ್ಟಾದ ಜಾಗದಲ್ಲಿ ‘ಅಹಂ ಬ್ರಹ್ಮಾಸ್ಮಿ’ ಎಂದು ತರುಬಿ “ಅಲ್ರೀ ಶಾಸ್ತ್ರೀ ಪಂಡಿತ ಪರಮೇಶ್ವರ ಶಾಸ್ತ್ರಿಗಳಾದ್ರು ಎಂಥವರು, ಏನ್ಕಥೆ? ಅಂಥವರ ಮೊಮ್ಮಕ್ಕಳಾದ ನೀವು ಗಂಗೀ ಅಂಥ ಪರ ಪತ್ನಿಯನ್ನು ವ್ಯಭಿಚಾರಕ್ಕೆ ಉದ್ದೀಪಿಸಿ, ಸಂಭೋಗಿಸಿ ರೌರವ ನರಕಕ್ಕೆ ಪಾತ್ರವಾಗುವಂಥ ಸಂಗ್ಯಾನ ಪಾತ್ರ ಮಾಡುವುದೇನು? ನಮಗೆ ಸರಿಕಾಣ್ತಾ ಇಲ್ಲ… ನಮ್ಮ ಕಣ್ಣೆದುರಿಗೆ ಆ ಇಸುಮಾಯಿಲೂ; ಚಂಬಸ್ಯಯ್ಯ ನಿಮ್ಮನ್ನು ಬೆಂಬತ್ತಿ ಕೊಲೆ ಮಾಡೊದೆಂದರೇನು! ಅಭಿನಯ ಆದರೇನಾಯ್ತು? ಕೊಲೆ ಕೊಲೇನೆ ತಾನೆ? ಇನ್ನೆನಾದ್ರು ನಿಮ್ಮ ತಾತನವರ ಆತ್ಮಕ್ಕೆ ಗೊತ್ತಾದರೆ ಅವರ ಮನಸ್ಸಿಗೆ ಎಷ್ಟು ನೋವಾಗಬೇಡ! ಅದು ಅಲ್ಲದೆ ನೀವು ಬಾಲ್ಯದಲ್ಲಿ ಕಂಚಿ ಕಾಮಕೋಟಿಯ ಶ್ರೀಗಳಿಂದ ಅಕ್ಷರಾಭ್ಯಾಸಕ್ಕೆ ಶ್ರೀಕಾರ ಹಾಕಿಸಿಕೊಂಡೋರಂತ ಕೇಳಿ ತಿಳಿದುಕೊಂಡಿದ್ದೇವೆ. ತಮ್ಮ ಶಾಖಾ ಶಿಷ್ಯನಾದ ಶಾಮಾಶಾಸ್ತ್ರಿಯೇ ಇಂಥ ಪಾಪಿಷ್ಟ ಪಾತ್ರ ಮಾಡಲಿರುವನೆಂದೇನಾದ್ರು ಶೃಂಗೇರಿ ಶ್ರೀಗಳಗೇನಾದ್ರು ಗೊತ್ತಾದ್ರೆ ಅವರ ಪವಿತ್ರ ಮನಸ್ಸಿಗೆ ಅದೆಷ್ಟು ಖತಿಯಾಗಬೇಡ… ಸ್ವಲ್ಪ ಯೋಚಿಸಿ, ನಿರ್ಧಾರದಿಂದ ನಿರ್ಗಮಿಸಿ” ಎಂದು ಮುಂತಾಗಿ ಪ್ರತಿಕ್ರಿಯಿಸುತ್ತಿದ್ದುದೂ ಉಂಟು.

ಆಯಾ ವರ್ಗದಲ್ಲಿ ಬೆಳೆದಂಥ ಇನ್ನೊಂದು ಅಭಿಪ್ರಾಯವೇನೆಂದರೆ ತಮ್ಮ ಕೋಮಿನ ಇಸುಮಾಯಿಲನು ಕಾಫಿರನ ಪಾತ್ರದಲ್ಲಾದ್ರೂ ಕಾಫಿರನೋರ್ವನ ಕೊಲೆ ಮಾಡ್ತಾನಲ್ಲ ಎಂದು ಮುಸ್ಲೀಂ ಕೋಮಿನ ಕೆಲವರು, ತಮ್ಮ ಚಂಬಸ್ಯಾಯ್ಯನೋರು ಈರ್‍ಯಾನ ಪಾತ್ರದಲ್ಲಾದ್ರು ಒಬ್ಬ ಸ್ಮಾರ್ತನನ್ನು ಕೊಲೆ ಮಾಡ್ತಾನಲ್ಲ ಎಂದು ವೀರ ಶೈವರ ಪೈಕಿ ಕೆಲವರೂ; ತಮ್ಮ ಹೆಬ್ರಿ ಇರೂಪಾಕ್ಷಿ ಪಾತ್ರದಲ್ಲಾದ್ರೂ ಒಬ್ಬ ಸ್ಮಾರ್ತನನ್ನು ಕೊಲೆ ಮಾಡ್ತಾನಲ್ಲ ಎಂದು ಮಾಧ್ವ ಬ್ರಾಹ್ಮಣರ ಪೈಕಿ ಕೆಲವರೂ, ತಮ್ಮ ಶಾಸ್ತ್ರೀ ಸಂಗ್ಯಾನ ಪಾತ್ರದಲ್ಲಾದ್ರು ವೀರಶೈವ ಕೋಮಿಗೆ ಸೇರಿದ ಹೆಣ್ಣಿನ ಪಾತಿವ್ರತ್ಯ ಭಂಗ ಮಾಡ್ತಾನಲ್ಲ ಎಂಬ ಸ್ಮಾರ್ತ ಬ್ರಾಹ್ಮಣರ ಪೈಕಿ ಕೆಲವರೂ ಸಮಾಧಾನಪಟ್ಟುಕೊಳ್ಳುತ್ತಿದ್ದುದೂ ಸೋಜಿಗದ ಸಂಗತಿಯಾಗಿತ್ತು.

ತಂತಮ್ಮ ಕೋಮುಗಳ ಕ್ರಿಯೆ-ಪ್ರತಿಕ್ರಿಯೆಗಳ ಒತ್ತಡಗಳಿಗೆ ಸಿಲುಕಿ ತ್ರಿಮೂರ್ತಿಗಳು ತಂತಮ್ಮ ಪಾತ್ರಗಳನ್ನು ತಂತಮ್ಮ ಹೃದಯದಿಂದ ಹೊಡೆದು ಓಡಿಸಬಲ್ಲವರಂಥ ಸಮರ್ಥರೇ. ಆದರೆ ತಾವಿಷ್ಟು ವರ್ಷ ಸರವೀಸು ಮಾಡ್ತಿದ್ರೂ ಮೊನ್ನೆ ಮೊನ್ನೆ ಬಂದ ಶಾಸ್ತ್ರಿ ರಾಷ್ರ ಮಟ್ಟದಲ್ಲಿ ಅತ್ಯುತ್ತಮ ಸೇವಾ ಪದಕ ಗಿಟ್ಟಿಸಿಕೊಳ್ಳುವುದೆಂದರೇನು! ಶ್ರೀಮತಿ ಶಾಂತಿಯನ್ನು ದೂಷಿಸುವಂತಿಲ್ಲ. ಆಕೆ ಸ್ಲೀವ್ ಲೆಸ್ ಬ್ಲೌಜು ತೊಟ್ಟು ಬರದಿದ್ದಲ್ಲಿ, ಹೊಕ್ಕಳು ಕಾಣಿಸುವಂತೆ ಸೀರೆ ಉಟ್ಟುಕೊಂಡು ಬರದಿದ್ದಲ್ಲಿ ಅಷ್ಟೊಂದು ಡಿಪಾಜಿಟ್ ಸಂಗ್ರಹಿಸಲಾಗುತ್ತಿರಲಿಲ್ಲವೆಂಬುದು ಸರ್ವವೇದ್ಯ ಸಂಗತಿ. ಶಾಸ್ತ್ರಿಯ ಸಂಸ್ಕೃತವಾಗಲೀ, ಪಾಂಡಿತ್ಯವಾಗಲೀ ಬ್ಯಾಂಕಿನ ವಾಣಿಜ್ಯಾಭಿವೃದ್ಧಿಗೆ ಯಾವ ರೀತಿ ಸಹಾಯಕವಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಗುಮ್ಮನಗುಸುಗನಾದ ಅವನು ಒಳಗೊಳಗೆ ಮೇಲ್ಮಟ್ಟದಲ್ಲಿ ಏನೋ ಕರಾಮತ್ತು ನಡೆಸಿಕೊಂಡಿದ್ದಾನೆ- ಇದಕ್ಕೆ ತಮ್ಮ ಬಳಿ ಪುರಾವೆಗಳಿವೇ? ಆಡಳಿತ ವರ್ಗದ ಉಚ್ಚಮಟ್ಟದವರ ಪ್ರೀತಿ ಸಂಪಾದಿಸಿರುವ ಅವನ ಮೇಲೆ ಬಹಿರಂಗವಾಗಿ ಹಲ್ಲೆ ಮಾಡುವಂತಿಲ್ಲ. ಪಶುಪತಿಯು ನಾಯಿಗಿಂತಲೂ ನಂಬಿಕಸ್ಥ ಎಂಬ ಭಾವನೆ ಹುಟ್ತಿಸಿ, ಕೆಲವು ತಾಂತ್ರಿಕ ತೊಂದರೆಗಳಿದ್ದರೂ ಸರಿಪಡಿಸಿ ಪುಸಲಾಯಿಸಿ ಅವನ ಸಾಲಕ್ಕೆ ಶಾಸ್ತ್ರಿಯಿಂದ ಸೆಕ್ಯುರಿಟಿಗೆ ಸಹಿ ಹಾಕಿಸಿದ್ದು ಕೂಡ ಒಂದು ಹಲ್ಲೆಯೇ. ಹಾಗೆಯೇ ಬೇರೆಯವರ ಅಂದರೆ ವೃದ್ಧೆ ಅಮಾಯಕ ರಮಾಬಾಯಿಯವರ ವಕೀಲಿಯಿಂದ ಅನಸೂಯಾಳ ಮೂಲಕ ದುರ್ಗುಣಗಳ ಹರಿಕಾರ ಪ್ರಸಾರಕನಂತಿರುವ ರಾಖೇಶನಿಗೆ ತಲೆ ಹಿಡುಕ ಬಾಳ್ಯಾನ ಪಾತ್ರ ಕೊಡಿಸಿದ್ದೂ ಅಲ್ಲದೆ ಖಾಸಗೀ ಜೀವನದಲ್ಲೂ ಅವರಿಬ್ಬರು ಜೀವನ ಗೆಳೆಯರಾಗಿರುವಂತೆ ಮಾಡಿರುವುದು ಕೂಡ ಒಂದು ರೀತಿಯ ಹಲ್ಲೆಯೇ. ಬೆಣ್ಣೆ ಹೃದಯದ ಶಾಸ್ತ್ರಿಗೆ ಜೂಜು ಮತ್ತು ಕುಡಿತ ಕಲಿಸಲೋಸುಗ ಕೆಲವು ಪರಿಣಿತರನ್ನು ಈಗಾಗಲೇ ಕಾರ್ಯಪ್ರವೃತ್ತರಾಗುವಂತೆ ಮಾಡಿರುವುದು ಕೂಡಾ ಒಂದು ನಮೂನೆಯ ಮಾರಣಾಂತಿಕ ಹಲ್ಲೆಯೇ. ಯಾವುದೇ ವಿಟಪುರುಷನ ಚರಾಸ್ತಿ, ಸ್ಥಿರಾಸ್ತಿ, ಸ್ವಯಾರ್ಜಿತ ಆಸ್ತಿ ಜೊತೆಗೇನೆ ಅವನ ಸಾಧನೆ ವ್ಯಕ್ತಿತ್ವವನ್ನು ಹಿಂಡಿ ಹೀರೆ ಹಿಪ್ಪಿ ಮಾಡಿ ಕಸದ ಬುಟ್ಟಿಗೆ ಎಸೆಯಬಲ್ಲ ಅನಸೂಯಳು ಗಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದೂ… ಕ್ರಮೇಣ ಅವರೀರ್ವರ ನಡುವೆ ಅನೈತಿಕ ಸಂಮಂಧವೇರ್ಪಡುವಂತೆ ನಾವು ಮುವ್ವರು ಗುಟ್ಟಾಗಿ ಕೆಲವು ಹುನ್ನಾರಗಳನ್ನು ರೂಪಿಸಿರುವುದು ಕೂಡ ಹಲ್ಲೆಗಿಂತ ಕಡಿಮೆ ಏನಿಲ್ಲ. ಇನ್ನೊಂದು ನಡೆಯಲಿರುವ ಪ್ರಮುಖ ಹಲ್ಲೆ ಎಂದರೆ ಈರ್‍ಯಾ, ಬಸ್ಯಾ, ಇರುಪಾಕ್ಷಿ ಪಾತ್ರವಹಿಸುವ ಮೂಲಕ ಸಂಗ್ಯಾ ಪಾತ್ರಧಾರಿಯಾದ ಶಾಸ್ತ್ರಿಯನ್ನು ಕೊಚ್ಚಿ ಕೊಚ್ಚಿ ಕೊಲೆ ಮಾಡಲಿರುವುದು. ನಟನೆಯಾದರೇನಂತೆ… ಇದೂ ಕೂಡ ಒಂದು ರೀತಿ ಕೊಲೆ ತಾನೆ! ಸಂಗ್ಯಾನ ಪಾತ್ರಧಾರಿ ಶಾಸ್ತ್ರಿಯನ್ನೋ, ಶಾಸ್ತ್ರೀ ಪಾತ್ರಧಾರಿ ಸಂಗ್ಯಾನನ್ನೂ ತಾವು ಕೊಲೆ ಮಾಡಲಿರುವುದನ್ನು ಪ್ರೇಕ್ಷಕರು ಕಣ್ಣು ತುಂಬ ನೋಡಿ ಸಂತೋಷ ಪಡದೆ ಇರಲಾರರು… ಇದೂ ಕೂಡ ತಮ್ಮ ಒಂದು ಸಾಧನೆಯೇ… ಇಂಥ ಚತುರ್ದಶ ಸಂಚುಮಿಶ್ರಿತ ಆಲೋಚನೆಗಳನ್ನು ಒಳಗೆ ತುಂಬಿಕೊಂಡಿದ್ದೂ ಮೇಲ್ನೋಟಕ್ಕೆ ವಾತ್ಸಲ್ಯದ ಮೊಟ್ಟೆಗಳಂತೆ ವರ್ತಿಸುತ್ತಿದ್ದ ಅವರ ನೈಜ ನಟನೆ ಬೆರಗುಗೊಳಿಸುವಂಥಾದ್ದು ಆಗಿತ್ತು. ಇದನ್ನು ನಾನು ನಂಬದೆ ಇರಲು ಸಾಧ್ಯವಿರಲಿಲ್ಲ. ನನ್ನ ಪಾಲಿನ ಪ್ರಮುಖ ಗೂಢಚಾರನಾದ ಬಾಳ್ಯಾ ಪಾತ್ರಧಾರಿ ರಾಖೇಶನಿಗೆ ಅವರ ಎಲ್ಲ ವಿದ್ಯಮಾನಗಳು ಗೊತ್ತಿಲ್ಲದಿರಲಿಲ್ಲ… ಒಬ್ಬ ಮನುಷ್ಯ, ಇನ್ನೊಬ್ಬ ಮನುಷ್ಯನನ್ನು ಕೆಡೆಸುವುದೆಂದರೇನು! ಮಕ್ಕಳು ಮರಳಿನಿಂದ ಮನೆ ಕಟ್ಟಿ ಆಡಿ ಮತ್ತೆ ಅದನ್ನು ಕೆಡಿಸುತ್ತಾರಲ್ಲ… ಅದರಷ್ಟು ಸುಲಭವ್ನೇನು? ಕೆಡುವ ಮನುಷ್ಯ ಕೆಡುತ್ತಲೇ ಹೋಗುತ್ತಾನೆ… ಹಲವು ಕೆಡಕುಗಳ ಚಂಡಮಾರುತವನ್ನು ತೂರಿಬಿಡಬೇಕು. ಅಷ್ಟೆ ಗಟ್ಟಿ ಇದ್ದರೆ ಬಚಾವಾಗುತಾನೆ. ಇಲ್ಲವಾದರೆ ನಿರ್ನಾಮವಾಗುತ್ತಾನೆ… ನಿರ್ನಾಮವಾಗುವ ತರಗೆಲೆಗಳಂಥ ಮನುಷ್ಯರಿದ್ದು ಸಮಾಜವನ್ನು ಉದ್ಧಾರ ಮಾಡೋದು ಅಷ್ಟರಲ್ಲೇ ಇದೆ… ಎಂದು ಮುಂತಾಗಿ ವಿಲಕ್ಷಣವಾಗಿ, ಗುಟ್ಟಾಗಿ ಆಲೋಚಿಸಬಲ್ಲವನಾಗಿದ್ದ ರಾಖೇಶ… “ಯಾರೇನು ಸ್ಯಾಟ ಹರ್‍ಕೋತಾರೆ ಬಿಡ್ರಿ ಸಾರೂ… ಚಳಿ ಗಾಳಿ ಭಯ ದಡದ ಮೇಲಿರೋರ್‍ನ ಕಾಡ್ತವೇ ವಿನಃ ನೀರಿನಲ್ಲಿ ಮುಳುಗಿದೋರ್‍ನ ಕಾಡೊದಿಲ್ಲ… ಆದ್ದರಿಂದ ದುಡುಮ್ಮಂತ ನೀರಿಗೆ ಧುಮುಕಬೇಕು ಅಷ್ಟೆ” ಎಂದು ಅವನು ಮಾತಾಡುತ್ತಿದ್ದರಲ್ಲಿ ನನಗೆ ಸತ್ಯ ಗೋಚರಿಸಿತು.

ಇದೆಲ್ಲಕ್ಕಿಂತ ಮುಖ್ಯವಾಗಿ ನಾನು ಅವನ ಮೂಲಕ ನನ್ನ ಹೃದಯದಲ್ಲಿ ರಮ್ಯ ಕನಸು ಕಾಣುವ ಅವಿವಾಹಿತ ತರುಣಿಯರಂತೆ ಉಳಿದಿದ್ದ ದ್ವಿದಳ ಧಾನ್ಯದ ಕಾಳುಗಳಿಗೆ ಮೊಳೆಯುವ ಆಶ್ರಯಕ್ಕಾಗಿ ಹುಡುಕಾಟ ನಡೆಸಿದ್ದೆ. ಅವು ಒಂದೇ ಜಾತಿಯ ಕಾಳುಗಳಾಗಿರಲಿಲ್ಲ… ಐದಾರು ವಿಧದ, ನೂರಾರು ತಹತಹಗಳಿಂದ ಕೂಡಿದವುಗಳಾಗಿದ್ದವು. ಅವುಗಳನ್ನು ಎದೆಯಲ್ಲಿ ಹಿಡಿದುಕೊಂಡು ಫಲವತ್ತಾದ ಮಣ್ಣಿಗಾಗಿ ನಿರರ್ಥಕ ಅನ್ವೇಷಣೆಗೆ ತೊಡಗಿದ್ದ ನನ್ನ ದೃಷ್ಟಿಯಲ್ಲಿ ಮಣ್ಣಿನ ಬಗ್ಗೆ ನಿರರ್ಗಳವಾಗಿ ಮಾತಾಡಬಲ್ಲವನಾಗಿದ್ದ ರಾಖೇಶ… ಭೂಲೋಕದ ಸಮಸ್ತ ಮೃತ್ತಿಕೆಯೇ ತನ್ನ ಮುಷ್ಟಿಯಲ್ಲಿದೆ ಎಂಬಂತೆ ಅವನು ಮಾತಾಡುತ್ತಿದ್ದ. ಇಲ್ಲಿ ಅದನ್ನು ಕಲ್ಪಿಸುವೆನು! ಅಲ್ಲಿ ಇದನ್ನು ಕಲ್ಪಿಸುವೆನು ಎಂದು ಪಾದರಸದಂತೆ ನಡೆಯುತ್ತಿದ್ದಾವನಿಗೆ ನೆರಳಾಗಿ ನಡೆಯುತ್ತಿದ್ದೆನು. ಎಷ್ಟೋ ಸಾರಿ! ಕೆಲವು ಹೊಸ ಗಿರಾಕಿಗಳು ನನ್ನನ್ನು ತಲೆಹಿಡುಕನೆಂದು ಗುರುತಿಸಿ ಒಂದೊಳ್ಳೆ ಹುಡುಗಿ ಮನೆಗೆ ಕರ್ಕೊಂಡೋಗ್ತೀಯಾ? ಐವತ್ತು ರುಪಾಯಿ ಕೊಡ್ತೀವಿ ಎಂದು ಕೇಳುತ್ತಿದ್ದರು. ಆ ಅಂಥ ಸಂದರ್ಭದಲ್ಲಿ “ಇಲ್ರಿ ನೀವು ತಲೆಹಿಡುಕ ಅಂತ ಯಾರನ್ನು ತಿಳಿದುಕೊಂಡುವಿರೇಂದ್ರೆನಾದ್ರು ಗೊತ್ತಾದ್ರೆ ನಿಮ್ಮ ಮನಸ್ಸಿನ ಮೇಲೆ ಎಂಥ ಪರಿಣಾಮಾಗ್ತದೆ ಗೊತ್ತಾ? ಪಂಡಿತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಕಣ್ರೀ ನಾನು… ಶಾಮಾಶಾಸ್ತ್ರಿ” ಎಂದು ಹೇಳಲಿಕ್ಕೆ ಸಾಧ್ಯವೇ? ‘ಸಾರಿ’ ಅನ್ನಲಿಕ್ಕಾದೀತೆ?… ನೋಡ್ರಿ ತಾತ… ಈಗ ನಿಮ್ಮ ಮೊಮ್ಮಗನಾದ ನಾನು ಇರುಳಲ್ಲಿ ತಲೆ ಹಿಡುಕನ ಥರ ಕಾಣಿಸ್ತಿದೀನಂತ ಕೂಗಿ ಹೇಳಬೇಕೆನ್ನಿಸಿತು. ನನ್ನ ಪರಮ ಮಿತ್ರನ ಪವಿತ್ರ ಕೆಲಸವನ್ನು ಅವನ ಗೈರುಹಾಜರಿಯಲ್ಲಿ ನಾನು ಮಾಡುವುದರ ಮೂಲಕ ಸ್ನೇಹ ಎಂಬ ಪದಕ್ಕೆ ಗೌರವ ಕೊಡುವುದೆಂದು ನಿರ್ಧರಿಸಿ ಅವರನ್ನು ಸೋಮವಾರಪೇಟೆಗೆ ಕರೆದೊಯ್ದು ದೂರದಿಂದ ಯಾವುದೋ ಒಂದು ಮನೆಯನ್ನು ತೋರಿಸಿ ಅವರಿಂದ ಪಡೆದ ಹಣವನ್ನು ಗೆಳೆಯನಿಗೆ ಕೊಡುತ್ತಿದ್ದೆ. ಆಗ ಅವನು ‘ಶಬ್ಬಾಷ್” ಎಂದು ಉದ್ಗರಿಸುತ್ತಿದ್ದ. ನಾವು ಯಾವ ಕೆಲಸ ಮಾಡ್ತಿದ್ದೀವಿ; ಅದರಲ್ಲಿ ಉತ್ಕೃಷ್ಟ ಯಾವುದು? ನಿಕೃಷ್ಟ ಯಾವುದು ಅಂತ ಯೋಚಿಸೋದ್ರಲ್ಲಿ ಅರ್ಥವಿಲ್ಲ… ಅದರಿಂದ ಪ್ರಾಪ್ತವಾಗುವ ಅನುಭವ ಮುಖ್ಯ… ಪಡೆದ ಅನುಭವ, ಪಡೆದ ತೃಪ್ತಿಯ ಮೂಲಕ ಕೆಲಸದ ಜಾಯಮಾನ ತಿಳಿಯಬೇಕೆಂಬರ್ಥದ ಜವಾರಿ ಮಾತುಗಳನ್ನಡುತ್ತಿದ್ದ ಎದೆಯಲ್ಲಿ ಬೀಜ ಹಿಡಿದುಕೊಂಡಿರುವವನ ನಗೆ; ಕೈಯಲ್ಲಿ ಮೃತ್ತಿಕೆ ಹಿಡಿದುಕೊಡಿರುವ ಅವನು ಪ್ಲೇಟೋನ ಥರ ಕಾಣಿಸುತ್ತಿದ್ದ.

ಅವನೇನಾದರು ಕಣ್ಣಿಗೆ ಬೀಳಲಿಲ್ಲವೆಂದರೆ ನಾನು ಆಗ ವಿಚಿತ್ರವಾಗಿ ವರ್ತಿಸುತ್ತಿದ್ದೆ. ಹಂಬಲಿಸುತ್ತಿದ್ದೆ. ಅವರಿವರ ಕೈ ಬೆಚ್ಚಗೆ ಮಾಡಿ ಅವನನ್ನು ಕರೆ ಕಳಿಸುತ್ತಿದ್ದೆ. ಅವನು ಕಂಡೊಡನೆ “ಎಲ್ಲಿಗೋಗಿದ್ಯೋ” ಎಂದು ಗದರಿಸುತಿದ್ದೆ. ಅವನು ಒಮ್ಮೊಮ್ಮೆ ನನ್ನನ್ನು ಹುಡುಕಿಕೊಂಡು ಬ್ಯಾಂಕಿಗೇ ಬಂದುಬಿಡುತ್ತಿದ್ದ. ಆಗ ನಾನು ಹೆಬ್ರಿ ಬಳಿ ಹೋಗಿ “ಸಾರ್ ನನ್ ಫ್ರೆಂಡ್ ರಾಖೇಶ ಕಾಯ್ತಿದ್ದಾನೆ… ಹೋಗಿ ಬರ್‍ತೀನಿ” ಎಂದು ಕೇಳುತ್ತಿದ್ದೆ. ಆಗ ಆತ ನಸು ನಕ್ಕು “ಓಹೋ ಅಗತ್ಯವಾಗಿ ಹೋಗಿ ಬರ್ರಿ… ಶಾಸ್ತ್ರಿ… ಅರ್ಧ ಗಂಟೆ ಯಾಕೆ ಒಂದು ಗಂಟೆ ಹೋಗ್ರಿ… ಸ್ನೇಹವೆಂಬ ಶಬ್ದಕ್ಕೆ ನೀವಿಬ್ರು ಆದರ್ಶಪ್ರಾಯರಾಗಿದ್ದೀರಿ” ಎಂದು ಪೂಸಿ ಹೊಡೆದು ಕಳಿಸುತ್ತಿದ್ದರ ಮರ್ಮ ನನಗೆ ಅರ್ಥವಾಗುತ್ತಿರಲಿಲ್ಲ. ತಾನು ಮಾಡಬೇಕೆಂದಿದ್ದ ಪಾತ್ರವನ್ನು ಕಸಿದುಕೊಂಡವನ ಗೊಡವೆ ಯಾಕೆ ಅಂತ ಓಬಳೇಶನೂ ನನ್ನ ನಡುವಳಿಕೆಗೆ ಅಣೆಕಟ್ಟು ಕಟ್ಟುವ ಕೆಲಸ ಮಾಡುತ್ತಿರಲಿಲ್ಲ… ಶ್ರೀಮತಿ ಎನಿಸಿಕೊಂಡಿರುವ ಶಾಂತಿ ಬೇರೆ ಲಾಂಗ್ ಲೀವ್ ಹಾಕಿ ಗಂಡನೊಂದಿಗೆ ಕುಪ್ಪಿನಕೇರಿಯಲ್ಲಿ ನಿಂತು ಲಿಂಗಾಂಜನೇಯ ಸ್ವಾಮಿ ದೇವಸ್ತಾನದ ಜೀರ್ಣೊದ್ಧಾರ ಕಾರ್ಯಕ್ಕೆ ನಿಂತಿದ್ದಳು. ಗುಟ್ಟಾಗಿ ಧೀರ್ಘಕಾಲದಿಂದ ಅಕ್ಷರ ಪ್ರೇಮ ನಡೆಸಿದ್ದ ಅವರು ಹಾಗೆ ಬೇಡಿಕೊಂಡಿದ್ದರಂತೆ. ಆದ್ದರಿಂದ ಆಮುವ್ವರು ನನ್ನಿಂದ ತಪ್ಪು ಮಾಡಿಸಲು; ವ್ಯಕ್ತಿತ್ವವನ್ನು ಅಪಮೌಲ್ಯಗಳಿಸಲು ಏನೇನು ಸಾಧ್ಯವೋ ಅದನ್ನೆಲ್ಲ ಮುಗುನಗೆಯಿಂದಲೇ ಮಾಡಿಸುತ್ತಿದ್ದರು. ಸಂಚುಗಾರರು ಮಾತ್ರ ತಮ್ಮ ವಿರುದ್ಧ ಅನ್ಯರು ಸಂಚು ಮಾಡುತ್ತಾರೆ ಎಂದು ಊಹಿಸಲು ಸಾಧ್ಯವೆಂದೂ, ಸಾಧ್ಯವಾದಷ್ಟು ಸಂಚಿನ ಅನುಭವಕ್ಕೆ ತುತ್ತಾಗಿ ‘ಓಹ್ ಇಷ್ಟೇನಾ’ ಎಂದು ಉದ್ಗರಿಸುವಂತಾಗಬೇಕೆಂದೂ ರಾಖೇಶ ಹೇಳುವ ಪ್ರಯತ್ನ ಮಾಡುತ್ತಿದ್ದ. ಆದ್ದರಿಂದ ನಿರ್ವಿಕಲ್ಪ ಚಿತ್ತದಿಂದ ಎಲ್ಲ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದು ನನ್ನಿಂದ ಸಾಧ್ಯವಾಯಿತು, ಮಿತ್ರಮಾ… ಒಂದೊಂದು ವಿಧದ ರೋಮಾಂಚನವನ್ನು ಒಂದೊಂದು ವಿಧದ ಅಪಾಯಗಳನ್ನು ಸ್ವೈಚ್ಛೆಯಿಂದ ಎಳೆದುಕೊಳ್ಳುವ ಮೂಲಕ ಪಡೆದುಕೊಳ್ಳಬಹುದು ಎನ್ನುವುದಕ್ಕೆ ನನ್ನಲ್ಲಿ ಸಾಕಹ್ಟು ಉದಾಹರಣೆಗಳಿವೆ. ಅವನ್ನೆಲ್ಲ ಹಾಗೆ ಎದುರಿಸಿ ವೃದ್ಧಾಪ್ಯದಲ್ಲಿ ದುಕ್ಕುವ ಅನುಭವವನ್ನು ನನ್ನ ಪ್ರೌಡವಯಸ್ಸಿಗೇನೆ ಪಡೆದುಕೊಂಡೆ ಎನ್ನುವುದು ನನಗೆ ಹೆಮ್ಮೆಯ ವಿಷಯ… ಅಪಾಪೋಲಿಯಾಗಿದ್ದವನು ತಲೆಹಿಡುಕನಾಗುವುದು, ತಲೆಹಿಡುಕನಾಗಿದ್ದವನು ನಾಟಕವೊಂದರಲ್ಲಿ ತಲೆ ಹಿಡುಕಪಾತ್ರಧಾರಿಯಾಗುವುದು, ಆ ನಟನೋರ್ವ ಇನ್ನೋರ್ವ ನಟನಾದ ನನಗೆ ಪರಿಚಯವಾಗುವುದು, ಹಾಗೆ ಪರಿಚಯಗೊಂಡವನು ಗೆಳೆಯನಾಗುವುದು, ಗೆಳೆಯನಾದವನು ಪರಮಾಪ್ತನಾಗುವುದು; ಪರಮಾಪ್ತನಾದವನು ಕ್ರಮೇಣ ಗುರುಸ್ಥಾನ ತಲುಪುವುದು, ಗುರುಸ್ಥಾನ ತಲುಪಿದವನು ಅವಧೂತನಂತೆ ಕಂಗೊಳಿಸತೊಡಗುವುದು… ಅವಧೂತನೆಂದರೆ ಸಾಮಾನ್ಯವೇ! ಅದೊಂದು ನಿರ್ವಿಕಲ್ಪ; ನಿರಂಜನ ಮೂರ್ತಿತ್ವದ ಜಾಗರಣಾ ಸ್ಥಳ… ಆ ಸ್ಥಾನವನ್ನು ರಾಖೇಶ ಆಕ್ರಮಿಸಿದನೋ! ನಾನೇ ಅವನಾರೋಹಣಕ್ಕನುಕೂಲ ವಾಗುವಂತೆ ನನ್ನ ವ್ಯಕ್ತಿತ್ವವನ್ನೇ ನಿಚ್ಚಣಿಕೆಯಾಗಿ ಇಟ್ಟೆನೋ ನನಗೊಂದು ತಿಳಿಯದು… ಕಾಲ ಬದಲಾದಂತೆ ತನ್ನ ಉಡಿಗೆ ತೊಡುಗೆ ವಸ್ತ್ರ ವಿಲಾಸವನ್ನು ನನಗೆ ನೀಡಿ… ತಾನು ಬಾಹುಬಲಿಯಾಗಿ, ಮಹಾಬಲೆಶ್ವರ ಮೂರ್ತಿಯಾಗಿ ಶೂನ್ಯ ಸಿಂಹಾಸನದ ಮೇಲೆ ಆರೂಢನಾದ. ನಾನು ನನ್ನ ಹೃದಯದಲ್ಲಿ ಮೊಳೆಯಲು ಹಾತೊರೆಯುತ್ತಿದ್ದ ಆರು ವಿಧದ ದ್ವಿದಳ ಧಾನ್ಯಗಳನ್ನು ಹಿಡಿದುಕೊಂಡು ಮಾಡಲೇಬೇಕಿರುವ ತಪ್ಪುಗಳ; ಎದುರಿಸಲೇಬೇಕಾದಂಥ ಅಪಾಯಗಳ ಒಂದು ಸುಧೀರ್ಘ ಪಟ್ಟಿ ತಯಾರಿಸುತ್ತ ಮೃತ್ತಿಕೆಯ ಪಾತಳಿಗಾಗಿ ಅವನತ್ತ ದೈನ್ಯತೆಯಿಂದ ದೃಷ್ಟಿ ಬೀರುತ್ತಿದ್ದೆ.

ಅವನು ನನ್ನ ಮೇಲೆ ಬೀರಿದ ಪ್ರಭಾವ ಏಳು ಸುತ್ತಿನ ಕೋಟೆ ಸ್ವರೂಪದ್ದು…. ಅವನ ವೇಶ ಭೂಶಣ, ಮಾತು-ಕಥೆ ನಡೆ-ನುಡಿ, ಎಲ್ಲವೂ ನನ್ನ ಮೇಲೆ ಒಂದೊಂದಾಗಿ ಪ್ರಭಾವ ಬೀರುತ್ತಾ ಹೋದವು. ತಾಲೀಮು ಶುರುವಾಗಿರುವಾಗಲೇ ಇಷ್ಟಾದರೆ, ಇನ್ನು ನಾಟಕ ಮುಗಿಯುವ ಹೊತ್ತಿಗೆ ಅಥವಾ ಮುಗಿದ ನಂತರ ಬಾಳ್ಯಾ ಪಾತ್ರವೇ ಸಂಗ್ಯಾನ ಪಾತ್ರವಾಗುವುದೋ; ಸಂಗ್ಯಾನ ಪಾತ್ರವೇ ಬಾಳ್ಯಾನ ಪಾತ್ರವಾಗುವುದೋ! ಅದೊಂದು ನಿಘೂಡ ಸಂಗತಿ…

ನಮ್ಮ ತಾಲೀಮು ಶುರುವಾಗಿದ್ದು ಊರ ಹೊರಗೆ ಪೂರ್ವಾಭಿಮುಖವಾಗಿದ್ದ ಕೊಟ್ರಮ್ಮನ ಗುಡಿಯಲ್ಲಿ… ಅದು ಸಾತವಾಹನನ ಕಾಲದ್ದು. ಜೈನರ ಕೊಟ್ಟವ್ವೆ ಎಂಬ ಯಕ್ಷಿಯ ದೇವಾಲಯವಾಗಿತ್ತೆಂಸು ತುಂಬ ಹಿಂದೆ ಇಲ್ಲಿಗೆ ಬಂದಿದ್ದ ಶಿವರಾಮಕಾರಂತರು ಹೇಳಿರುವರಂತೆ. ಅದೊಂದು ನಿರ್ಮಾನುಷ ಸ್ಥಳ, ಅಲ್ಲಿ ಶವಕಪಾಲಿನೋರ್ವ ಮಾತ್ರ ಇರುತ್ತಿದ್ದ. ಅವನುದಿನದ ಮೂರು ಹೊತ್ತಿನಲ್ಲಿ ಮೂರು ವಿಧದ ಭಂಗಿಯಲ್ಲಿ ಕೂತು ತಾಂತ್ರಿಕೋಪಾಸನೆ ಮಾಡುತ್ತಿದ್ದ. ಅವನು ಜರ್ಮನಿಯ ತಂದೆಗೂ; ಆಂಧ್ರದ ಗೊಂಡಾ ಜಾತಿಯ ತಾಯಿಗೂ ಹುಟ್ಟಿದಂತೆ. ಕೊಟ್ಟವ್ವೆ ದೇವಾಲಯ ಶಕ್ತಿ ಸ್ಥಳವೆಂದು ಭಾವಿಸಿ ಅಲ್ಲಿ ಉಪಾಸನೆ ಮಾಡುತ್ತಿದ್ದನಂತೆ.

ತಾಲೀಮು ಶುರುವಾದ ಹೊಸದರಲ್ಲಿಟ್ಟುಕೊಂಡಿದ್ದ ಕುತೋಹಲ ಕ್ರಮೇಣ ಕರಗಿಹೋಗಿ ಅವನೂ ನಮ್ಮವರಲ್ಲೊಬ್ಬನಾಗಿಬಿಟ್ಟ. ಪೆಟ್ಟಿಗೆ ಮಾಸ್ತರು ಕಾಳಪ್ಪ ಶಿಸ್ತಿನ ಸಿಪಾಯಿಯಾಗಿದ್ದ. ತ್ರಿಮೂರ್ತಿಗಳು ಹೆದರಿ ತತ್ತಿ ಹಾಕುವಂತೆ ಅನಸೂಯಾ ಬರುತ್ತಿದ್ದುದು ನೋಡಲಿಕ್ಕೆ ತುಂಬ ಸೊಗಸಾಗಿರುತ್ತಿತ್ತು. ಆಕೆ ಏನು ನಾಜಿ ಕ್ಯಾಪ್ಟನ್ ಥರ ಇರುತ್ತಿರಲಿಲ್ಲ. ಆಕೆಯನ್ನು ನೋಡಿದೊಡನೆ ನನಗೆ
ಬಡತನಮುಂ ಮಾಂದ್ಯಮುಮಿ
ಟ್ಟೆಡೆಯುಂ ಚಪಲತೆಯುಮಧಿಕತರ ಕುಟಿಲತೆಯುಂ
ಮಡದಿಯ ನಡು ನಡೆ ಮೊಲೆ ಕ
ಣ್ಗಡೆ ಕುರುಳೊಳ್ಪೋರ್ಕುಮಲ್ಲಿ ತಲೆತೋರುಗದು

…ಎಂಬ ಷಡಕ್ಷರದೇವನ ರಾಜಶೇಖರ ವಿಳಾಸದ ಒಂದು ಕಂದಪದ್ಯ ನೆನಪು ಮಾಡಿ ಗೊಣಗಿಕೊಳ್ಳುತ್ತಿದ್ದೆ. ಒಂದೆರಡು ಬಾರಿ ಆಕೆ ಕೇಳಿಸಿಕೊಂಡದ್ದೂ ಉಂಟು. ರಾಖೇಶ “ಯಕ್ಕೋ! ಶಾಸ್ತ್ರೀಗೆ ನೀವೀಟೊಂದು ಸಡ್ಲ ಕೊಡಬಾರ್ದಕ್ಕೋ, ಕೊಡಬಾರ್ದೂ” ಎಂದು ಆಕೆಯ ಕಿವಿಯಲ್ಲಿ ಚುಚ್ಚಿದ. ಆಕೆ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಿದ್ದ ನನ್ನ ಕಡೆಗೆ ತಿರುಗಿ (ಅವತ್ತು ನಾಟ್ಯಗತಿಯನ್ನು ಹಾಡಿಗೆ ಪೂರಕವಾಗಿ ಹೇಳಿಕೊಳ್ಳುವುದಿತ್ತು) ಭಯಂಕರಮುಖಿಯಾಗಿ ನನ್ನ ಕಡೆ ವಾರೆಗಣ್ಣಿನಿಂದ ನೋಡಿದಳು. ಆ ನೋಟದಿಂದ ಪುಳಕಗೊಂಡೆ. ಹಸಾನ್ಮುಖಿಯಾಗಿ ನೋಟ ಸ್ವೀಕರಿಸಿ “ಏನ್ ಶಾಸ್ತ್ರೀ… ಯೇನ್ಸಮಾಚಾರ! ನನ್ನ ಮೇಲೆ ಕಂದಪದ್ಯ ಗೊಣಗ್ತೀಂತೆ, ಮೈಲಿ ಹೆಂಗೈತೆ? ಎಂದು ಆಕೆ ನನ್ನ ಕೇಳುವ ಬದಲು ತ್ರಿಮೂರ್ತಿಗಳ ಪೈಕಿ ಯಾರನ್ನಾದರೂ ಕೇಳಿದ್ದರೆ ಅವರ ಡ್ರಾಯರೊಳಗೆ ಏರ್‌ಕೂಲ್ಡ್ ಆಗದೆ ಇರುತ್ತಿರಲಿಲ್ಲ. ಕಾರಣ ಆಕೆ ಬಗ್ಗೆ ಎಲ್ಲರಿಗಿಂಥ ಅರ್ಥವಾಗದ ಭಯ ಗೌರವ ಇತ್ತು. ಅಲ್ಲದೆ ಆಕೆ ಜರಿಮಲೆ ಪಾಳೆಗಾರರ ವಂಶ ಸಂಜಾತೆ ಎಂಬ ಗುಸುಗುಸು ಕೂಡ… ಖಾಲಿ ಬೊಗುಣಿಯಂಥ ಪಾಳುಗೋಡೆ ನಡುವೆ ಯಾರಾದರೂ ಎಷ್ಟು ದಿನಾಂತ ಹೊಟ್ಟೆ ಬೋರಲು ಹಾಕಿಕೊಂಡು ಮಲುಗಲು ಸಾಧ್ಯ? ಒಬ್ಬೊಬ್ಬರು ಒಂದೊಂದು ದಾರಿ ಹಿಡಿದುಹೋದಂತೆ… ಅನುಸೂಯಳ ಮುತ್ತಜ್ಜಿಯೂ ಅಂಥದೊಂದು ದಾರಿಗುಂಟ ನಡೆದು ಕೊತ್ತಲಗಿ ತಲುಪಿದ್ದಳು… ಇತಿಹಾಸದ ಎಳೆ ಹಿಡಿದು ಹೊರಟರೆ ಅನಸೂಯಳ ಮೂಲ ಒನಕೆ ಓಬವ್ವನನ್ನು ತಲುಪುತ್ತದೆ…. ಬಾಲ್ಯದಲ್ಲಿ ಆಕೆಯನ್ನು ಕರೆಯುತ್ತಿದ್ದುದು ಹಾಗೆಯೇ. ಮುಕಮುಲಾಜು ನೋಡದೆ ದಡಬಡ ಮಾತಾಡುವುದನ್ನೂ; ಸಮಯ ಬಂದರೆ ಫೈಟಿಂಗ್ ಮಾಡುವುದನ್ನೂ ಪ್ರಯೋಗಿಸುತ್ತಿದ್ದ ಆಕೆ ಎದುರು ಎಂಥವರೂ ತಲೆ ಎತ್ತಿ ನಿಲ್ಲುತ್ತಿರಲಿಲ್ಲ. ಆದರೆ ಆಕೆಯ ಹೃದಯ, ಮನಸ್ಸು ತುಂಬ ಮೃದುವಾಗಿದ್ದವು. ಆಕೆ ಕರಗುತ್ತಿದ್ದಳು… ಸ್ರವಿಸುತ್ತಿದ್ದಳು… ಧಾರಾಳವಾಗುತ್ತಿದ್ದಳು. ಆದ್ದರಿಂದ ಗಂಡಸರು ಅನ್ಯ ದಾರಿ ಕಾಣದೆ ಹೆದರಿ ಮುಖ ತಗ್ಗಿಸುತ್ತಿದ್ದರು. ಸ್ವಲ್ಪ ಹೊತ್ತು ಆಕೆಯ ಚಂಚಲ ನೇತ್ರಗಳನ್ನು ಎದುರಿಸಿದ ಅನುಭವನ್ನು ವರ್ಣಿಸಲು ಸಾಧ್ಯವಿಲ್ಲ. ಆಕೆಯ ಒತ್ತಾಯದ ಮೇರೆಗೆ ನಾನು ಆ ಪದ್ಯವನ್ನು ಗಮಕ ಶೈಲಿಯಲ್ಲಿ ಹೇಳುತ್ತಲೆ ಆಕೆಯ ಬಟ್ಟಲು ಗಣ್ಣುಗಳು ಪಟಪಟ ಬಡಿದುಕೊಂಡವು. ಮುಖ ಅರಳಿತು. ಚೆಂದುಟಿಗಳ ನಡುವೆ ನಗೆ ರಂಗೋಲಿ ಇಟ್ಟಿತು.

“ಅಡ್‌ಗ್ವಾಡೀ ಮ್ಯಾಲ ದೀಪಾ ಇಟ್ಟಂಗ ಹೇಳಿದ್ರೆಂಗರ್ತಾದೀತೋ ಶಾಸ್ತ್ರೀ… ಶಬುದಕ ಶಬುದ ಬುಡಿಸಿ ಅರ್ಥಾ ಒಡೆದು ಹೇಳಲ್ಲ…” ಎಂದು ಕೇಳಿದಳು.
ಆಕೆ ಹೀಗೆ ಮಾತಾಡೋದನ್ನು ನೋಡಿ ನೀನು ಜವಾರಿ ಅಂದಕೋಬ್ಯಾಡ… ನಮ್ಮಪ್ಪ ನಿಮ್ಮಪ್ಪ ಎಲ್ಲರಪ್ಪಗಳಿಗಿಂತ ಆಕೆ ಚೆನ್ನಾಗಿ ಗ್ರಾಂಥಿಕ ಭಾಷೆ ಮಾತಾಡಬಲ್ಲಳು. ಆದರೆ ಅದನ್ನು ಆಕೆ ತೋರಗೊಡುವುದಿಲ್ಲ ಅಷ್ಟೆ.
ನಾನು ಹೆಂಗಪ್ಪಾ ಹೇಳೂದಂತ ಬಾಳ್ಯಾನ ಕಡೆ ನೋಡ್ದೆ… ಬಾಳ್ಯಾ ಆಕೆಗೆ-
“ಇಕ್ಕಡ ಸೆಪ್ಪಂಟೆ ಎಲಾ ಸೆಪ್ತಾಡಕ್ಕಾ… ಇಂಟಿಕಿ ಪಿಲಿಚಿ ಅಡಗಿತೆ ಸೆಪ್ತಾಡು” ಎಂದ ತೆಲುಗಿನಲ್ಲಿ.

ಅವನ ಒಡನಾಟದಲ್ಲಿದ್ದವನಾದ್ದರಿಂದ ನನಗೆ ಅರ್ಥವಾಯಿತು. ಉಳಿದವರಿಗೆ ಅರ್ಥವಾಗಲಿಲ್ಲ. ಆದರೆ ಅವರು ಅವರಿವರನ್ನು ಕೇಳಿ ಅರ್ಥಮಾಡಿಕೊಂಡಿರಲಾರರು ಎಂದುಕೊಂಡೆ.
ಅಂದಿನ ತಾಲೀಮಿನಲ್ಲಿ… ನನ್ನ ಹಾಡು ಕುಣಿತ ಆಕೆಗೆ ತುಂಬ ಇಷ್ಟವಾಯಿತು. “ನಿಜವಾದ ಸಂಗ್ಯಾ ಅಂದ್ರ ನೀನೇ ನೋಡ ಶಾಸ್ತ್ರೀ. ಹಿಂಗೆ ಕುಣಿಯೋರ್‍ನ ನನ್ ಸರ್‌ವೀಸಿನಾಗೀಂದೂ ನೋಡಿಲ್ಲ” ಎಂದು ಅನಸೂಯ ಹೊಗಳಿದಳು… ನಂತರ ಬಂದ ರಮಾಬಾಯಿಗೂ ಇಷ್ಟವಾಯಿತು. ನಮ್ಮಿಬ್ಬರನ್ನು ಒಬ್ಬರ ಎದುರಿಗೆ ನಿಲ್ಲಿಸಿ ನೋಡಿ ಸಮಾಧಾನದ ಉಸಿರುಬಿಟ್ಟಳು…

“ಏನೇ ಅನಸೂವಿ… ನಮ್ಮ ಶಾಸ್ತ್ರಿ ಅಂದ್ರ ಏನಂದ್ಕೊಂಡೀಯೇ… ಇವ್ನೀಗೆ ಬಂಗಾರದ ಪದಕ ಬಂದೈತಲೇ ಬಂಗಾರದ ಪದ್ಕ… ಎಷ್ಟು ಚಂದ ಆಡ್ತಾನೆ ಹಾಡ್ತಾನೆ?… ಅಂತೂ ನಮ್ ಗಂಗೀಗೆ ಸರಿಸಾಟಿಯಾಗೋ ನಿಲ್ಲೋ ಸಂಗ್ಯಾ… ಶಾಸ್ತ್ರೀ ರೂಪದಾಗೆ ಹುಟ್ಟಿ ಬಂದಾನ್ನೋಡು… ನಮ್ಮ ಗಂಗಿ ಸಾಕ್ಷಾತ್ ಗಂಗಮ್ತಾಯಿ ಕಣಪ್ಪಾ ಶಾಸ್ತ್ರೀ… ಆಕೆ ಮಾತು ಬಿಗುವು. ಆದ್ರೆ ಮನಸು ತನುವೆಪ್ಪಾ… ಮುಂದಿನ ದಿನದಾಗ ಗಂಗಿ ಸಂಗ್ಯಾನ್ನಾರ ಉಳಿಸ್ಕೊಳ್ಳಿ, ಸಂಗ್ಯಾ ಗಂಗಿ ಆರ ಉಳಿಸ್ಕಳ್ಳಿ” ಎಂದು ನನ್ನ ಮುಖವನ್ನು ಬೊಗಸೆ ಹಿಡಿದು ಕಣ್ತುಂಬ ನೋಡಿ ರಮಾಬಾಯಿ ಲಟ್ಟಿಗೆ ತೆಗೆದಿ ಹಾರೈಸಿದಳು.
ಅದಕ್ಕೆ ಪ್ರತಿಯಾಗಿ ಅನಸೂಯಾ

“ಶಾಸ್ತ್ರಿ ಖಾಲಿ ಪುಳಿಚಾರೂ ಅಂದ್ಕೊಂಡಿದ್ದೆ. ಒಳ ಒಳಗದಾನವ್ವೋ… ಹೊರಾಗನಿಂದ ಒಳಗಾ ತಗಂಡೋಗಲಾಕ; ಒಳಗಿನಿಂದ ಹೊರಗ ತಗೊಂಡು ಬರಲಾಕ ಅಸಲಿ ಬಾಳ್ಯಾನ್ನೇ ಶಾಸ್ತ್ರೀ ಬಗಲೀಗೆ ತೂಗು ಬಿಟ್ಟಿದ್ದೀನೆವ್ವಾ…” ಎಂದು ನನ್ನ ಕಡೆ ನಿಟ್ಟಿಸಿ ನೋಡಿದಳು.

ನನ್ನ ಜೀವನದ ಅಪರೂಪದ ಗಳಿಗೆ ಎಂದು ಆ ಸಂದರ್ಭವನ್ನು ವರ್ಣಿಸಬಯಸುತ್ತಿರುವೆನು. ಅಷ್ಟೊಂದು ಅಗಲದ, ಬೆಳಕು ತುಂಬಿರುವ, ಅಕ್ಷಯ ಪಾತ್ರೆಯಿಂಥ ಕಣ್ಣ ಗುಡ್ಡೆಗಳುಳ್ಳ ಆಪ್ಯಾಯಮಾನ ನೋಟ ಬೀರುವ ಕಣ್ಣುಗಳನ್ನು ನಾನು ಎಂದೂ ನೋಡಿರಲಿಲ್ಲ… ಅಂಥ ಕಿಕ್ಕಿರಿದ ಜಾತ್ರೆಯಲ್ಲಿ ಸಾವಿರಾರು ಸುಂದರ ಹೆಣ್ಣುಗಳಿದ್ದರೂ ಸಹುಕಾರ ಸಂಗ್ಯಾನ ಚಿತ್ರವನ್ನು ಒಂದೇ ಏಟಿಗೆ ಅಪಹರಿಸಿದ್ದು ಗಂಗಿ ಅಲ್ಲ… ಆಕೆಯ ಕಣ್ಣುಗಳ ನೋಟ… ಆ ಗಂಗಿ ಪಾತ್ರಕ್ಕೆ ನ್ಯಾಯ ದೊರಕುವುದು ಅನಸೂಯಾ ಅಭಿನಯದಿಂದ ಮಾತ್ರ. ಆಕೆಗೆ ಸರಿಜೋಡಿಯಾಗಿ ನಾನು ಸಂಗ್ಯಾನ ಪಾತ್ರದಲ್ಲಿ ಕಾಣಿಸಿಕೊಳ್ಳುವೆನೆಂದು ತಿಳಿದಾಕ್ಷಣ ಇದು ಎಷ್ಟೋ ಜನುಮಗಳ ಆಸೆ ಈ ಜನುಮದಲ್ಲಿ ಈಡೇರ್‍ತದೆ ಎಂದುಕೊಂಡೆ. ಜನುಮಜನುಮದ ಸಂಬಂಧಿಯಾದ ಅನಸೂಯಾಳನ್ನು ಕಂಡರೆ ಎಲ್ಲರೂ ಹೆದರುತ್ತಾರೆಂದು ನಾನ್ಯಾಕೆ ಹೆದರುವುದು? ನಾನು ಆಕೆಯ ಹಕ್ಕು; ಆಕೆ ನನ್ನ ಹಕ್ಕು. ಈ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದುಕೊಂಡೆ. ಪಾದ ಮುಚ್ಚುವಂತೆ ನಡೆಯುತ್ತಿದ್ದ; ಪಾದ ಮುಚ್ಚುವಂತೆ ಕೂಡುತ್ತಿದ್ದ, ಹರಟುತ್ತಿದ್ದ ಅನಸೂಯಾ ಕಾಲಿಗೆ ಗೆಜ್ಜೆ ಕಟ್ಟುವುದು ಎಂದೋ ಏನೋ! ಆಕೆಯ ಕಣ್ಣುಗಳನ್ನು ತಪ್ಪಿಸಿ ಆಕೆಯ ಪಾದಗಳನ್ನು ನೋಡುವುದು ಸಾಧ್ಯವಿರಲಿಲ್ಲ. ಯಾವ! ಯಾವ! ಗಂಡುಸು! ತನ್ನ ದೇಹದ ಯಾವ ಯಾವ ಭಾಗವನ್ನು ಗಮನಿಸುತ್ತಿರುವನೆಂದು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಆಕೆಗಿತ್ತು. ಅರೆ ಸೆಕೆಂಡಿನಲ್ಲಿ ಪತ್ತೆ ಹಚ್ಚಿ ಆಕೆ ನೋಡಿಬಿಟ್ಟಳೆಂದರೆ ನೋಡಿಸಿಕೊಂಡವರ ಪುರುಷ ಶಕ್ತಿ ರೆಕ್ಕೆ ಮುರಿದು ಪಾತಾಳ ಸೇರಬೇಕು ಅಷ್ಟೆ, ಆಕೆಯ ಪ್ರೇಮ ನೋಟಕ್ಕೆ ತದ್ವಿರುದ್ಧವಾದ ಶಕ್ತಿ ಇತ್ತು. ಆಕೆ ನೋಟ ಮಾತ್ರದಿಂದ ಕೊರಡನ್ನು ಕೊನರಿಸ ಬಲ್ಲವಳಾಗಿದ್ದಳು. ಅಂಥ ಅನಸೂಯಳ ಕೃಪೆಗೆ ಪಾತ್ರನಾದದ್ದು ನನ್ನ ಜೀವನದ ಮಹತ್ವದ ಘಟನೆ ಎಂದು ಹೇಳಬಹುದು. ಇದೊಂದು ಬಹು ದೊಡ್ಡ ಸಾಧನೆ ಎಂದು ಯಾರೊಬ್ಬರೂ ಗುರುತಿಸಲಿಲ್ಲ. ಅಭಿನಂದಿಸಲಿಲ್ಲ. ಅಭಿನಂದಿಸಿದ ಏಕಮಾತ್ರ ವ್ಯಕ್ತಿ ಎಂದರೆ ಬಾಳ್ಯಾ ಪಾತ್ರಧಾರಿ ರಾಖೇಶ ಮಾತ್ರ. ಇಡೀ ದಿನ ಅನಸೂಯಾಳ್ ದೇಹಸಿರಿ ಮತ್ತು ಆಕೆಯ ಪ್ರಣಯ ವ್ಯವಹಾರಗಳನ್ನು ನಿರ್ಭಿಡೆಯಿಂದ ವರ್ಣಿಸಿದ. ವರ್ತಕ ತನ್ನ ಅಂಗಡಿಯ ಸರಕುಗಳನ್ನು ನಿರ್ಭಿಡೆಯಿಂದ ವರ್ಣಿಸುತ್ತಾನಲ್ಲ ಹಾಗೆ! ಚಿತ್ರಕಾರ ತಾನು ಮಾಡಿದ ಬೊಂಬೆಯ ಸೌಂದರ್ಯವನ್ನು ವರ್ಣಿಸುತ್ತಾನಲ್ಲ ಹಾಗೆ! ದೇಶಭಕ್ತ ತನ್ನ ಮಾತೃದೇಶದ ಬಗ್ಗೆ ಭಾವಪರವಶನಾಗಿ ಮಾತಾಡುತ್ತಾನಲ್ಲ ಹಾಗೆ! ತಾನು ಯಾರನ್ನು ಅಕ್ಕ ಎಂದು ಸಂಭೋದಿಸುತ್ತಿರುವನೋ ಆಕೆ ಅವನ ದೃಷ್ಟಿಯಲ್ಲಿ ಸೋಮವಾರಪೇಟೆ ಎಂಬ ಅಂಗಡಿಯ ಒಂದು ಸರಕು ಮಾತ್ರವಾಗಿದ್ದಳು. ಉದಾತ್ತ ಭಾವನೆಯಿಂದ ಅವನು ಯಾರನ್ನೂ ಕಂಡುದುದಿಲ್ಲ… ಮಾತಾಡುವುದಿಲ್ಲ. ನದಿಯೊಂದು ತಗ್ಗಿನತ್ತ ಪ್ರವಹಿಸುವ ರೀತಿಯಲ್ಲಿಯೇ ಅವನು ಸ್ವಾಭಾವಿಕವಾಗಿ ಮಾತಾಡುವುದು ಫ್ಯಾನ್ ಎಂಬ ಯಂತ್ರ ಸೃಷ್ಟಿಸುವ ಗಾಳಿಗೂ, ಮೆಲ್ಲನೆ ಬೀಸುವ ತಂಗಾಳಿಗೂ ವ್ಯತ್ಯಾಸ ಇರುತ್ತದಲ್ಲ; ಹಾಗೆ. ಅವನದು ಸ್ಫಟಿಕ ಜಲದಂಥ ಮನಸ್ಸು. ಅವನ ಮನಸ್ಸೆಂಬುದು ಪಾರದರ್ಶಕ ಗಾಜಿನ ಕೊಳವೆ… ಅಲ್ಲಿ ಒಬ್ಬೊಬ್ಬರು ಸಾವಿರ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ… ಅರಿಷ್ಡ್ವರ್ಗಗಳಿಗೆ ಪಠ್ಯ ಮತ್ತು ಪಠ್ಯೇತರ ಸಂಗತಿಹಳನ್ನು ಭೋದಿಸಿ ಗಟ್ಟಿಗೊಳಿಸುವ ನಾಡೋಜ ಅವನೆ.. ಪಂಪ, ರನ್ನ , ಕುಮಾರವ್ಯಾಸ, ಷಡಕ್ಷರದೇವ, ಲಕ್ಷ್ಮೀಶ ಮೊದಲಾದ ಮಾರ್ಗ ಕವಿಗಳೇನಾದರು ಬದುಕಿದ್ದರೆ ಖಂಡಿತ ಅವನ ಮುಂದೆ ಸೋಲೊಪ್ಪಿಕೊಳ್ಳದೆ ಇರುತ್ತಿರಲಿಲ್ಲ… ಅಂಥದ್ದು ಅವನ ಸುಷ್ಟಿಶೀಲ ವ್ಯಕ್ತಿತ್ವ… ಸೃಜನಶೀಲ ಮನಸ್ಸು…

ಹೆಂಡತಿ ತನ್ನತ್ತೆಯೊಂದಿಗೆ ತಾಯ್ತನದ ಕನಸು ಕಾಣುತ್ತ ಕೊಟ್ಟೂರಿನಲ್ಲಿರುವಾಗ ನಾನೋರ್ವನೆ ಚಲುವಯ್ಯ ಕಟ್ಟಿಸಿದ್ದ ಸುಂದರ ಮನೆಯಲ್ಲಿ ಮೊಳೆಯುವ ಅವಸರದ ಬೀಜಗಳನ್ನು ಎದೆ ಮಡಕೆಯೊಳಗೆ ಧರಿಸಿಕೊಂಡು ಇದ್ದೆನಲ್ಲ. ಆಗ ಅವನನ್ನು ಹೆಚ್ಚು ಜೊತೆ ಮಾಡಿಕೊಂಡೆ. ಅವನು ಇದ್ದಕಿದ್ದಂತೆ ನಾಪತ್ತೆಯಾಗುತ್ತಿದ್ದ, ಇದ್ದಕಿದ್ದಂತೆ ಪ್ರತ್ಯಕ್ಷವಾಗಿಬಿಡುತ್ತಿದ್ದ.

ಅಡಚಣೆ ಎಂಬ ಪದದ ಜೀವಂತ ವ್ಯಾಖ್ಯಾನವಾಗಿದ್ದ. ಪೂರ್ಣಾಂಕ ಸ್ಥಾನದಲ್ಲಿದ್ದಾಗಲೂ ಅಷ್ಟೇ ಖುಷಿಯಿಂದ ಇರುತ್ತಿದ್ದ. ದಶಮಾಂಶ ಸ್ಥಾನದಲ್ಲಿದ್ದಾಗಲೂ ಅಷ್ಟೇ ಖುಷಿಯಿಂದ ಇರುತ್ತಿದ್ದ. ಶೂನ್ಯ ಸ್ಥಾನದಲ್ಲಿದ್ದಾಗಂತೂ ಅವನೇ ‘ಸಕಲಕಲಾವಲ್ಲಭನ್’ ನಾನು ಅಡಚಣೆ ಎಂಬ ಮಾರಕಾಸ್ತ್ರದ ಧಾಳಿಗೆ ತುತ್ತಾಗಿದ್ದಾಗ ಎಲ್ಲಿಂದಲೋ ವಕ್ಕರಿಸುತ್ತಿದ್ದ, ನಿಶ್ಶಬ್ದವಾಗಿ ಜೇಬಿನಲ್ಲಿಟ್ಟುಬಿದುತ್ತಿದ್ದ. ತಾನೂ ಕೂಡ ಅಷ್ಟೆ… ನನಗೆ ಹೇಳದೆ ಕೇಳದೆ ಜೀಬಿನಿಂದ ಲಪಟಾಯಿಸುತ್ತಿದ್ದ. ಹಣವನ್ನೆಂದೂ ಎಣಿಸಿಕೊಳ್ಳುತ್ತಿರಲಿಲ್ಲ… ಮನೆಯಲ್ಲಿ ಕೈಗೆ ಸಿಕ್ಕ ವಸ್ತು ಒಯ್ದು ಬಿಡುವುದು ಬೆಲೆಬಾಳುವುದಾಗಿದ್ದರೆ ಎಲ್ಲಿಯಾದರೂ ಒತ್ತೆ ಇಟ್ಟು ದುಡ್ಡು ಇದ್ದಾಗ ತಾನೇ ಬಿಡಿಸಿಕೊಂಡು ತಂದು ಮನೆಯಲ್ಲಿಡುತ್ತಿದ್ದ. ಇಂಥವನು ಅವನು. ಕೇಳಿದರೆ ನಿನ್ನನ್ಯಾಕೆ ಕೇಳಬೇಕು? ಎಂದು ಗದರಿಸುತ್ತಿದ್ದ.
‘ಅಂಥವನು ಬಂದ… ಅಲ್ಲೇ ಶೌಚಕ್ಕೆ ಹೋಗುವಿಯಂತೆ ಹೊರಡು’ ಎಂದ. ಹೊರಟೆ. ಆಗ ಅವನು ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟದ್ದು ಅನಸೂಯಳ ಮನೆಯಲ್ಲಿ. ಮನೆಯಲ್ಲಿ ತಾನೊಬ್ಬಳೆ ಇದ್ದಳು. ರಾಖೇಶ ಕದ ಮುಚ್ಚಿಕೊಂಡು ಹೋದೊದನೆ ನನ್ನೆದೆ ಡವಡವ ಅಂತ ಬಡಿದುಕೊಳ್ಳತೊಡಗಿತು. ನಡುಗುತ್ತ; ತೊದಲುತ್ತ; ವರ್ತಮಾನದ ಅಸ್ಪಷ್ಟ ಕಲ್ಪನೆಯ ಸೊಗಸಿಗೆ ಬೆರಗಾಗಿ ನಿಂತಿದ್ದ ನನ್ನನ್ನು ಕೂಡ್ರಲು ಹೇಳಿದಳು.
“ಶಾಸ್ತ್ರೀ… ಅದ್ಯಾವುದೋ ಪದ್ಯ ಹೇಳ್ದಿಯಲ್ಲ. ಅದರರ್ಥ ಹೇಳು” ಎಂದಳು. ಆಜ್ಞೆ ಧಾಟಿಯಲ್ಲಿ! ನನ್ನಲ್ಲಿ ಬುದಬುದನೆ ಹುಟ್ಟಿಕೊಂಡ ಭಾವನೆಗಳನ್ನು ಅಳೆಯಲು ಸಾಧ್ಯವೆ?
ಅನಸೂಯಮ್ಮೋರೆಽಽ… ಎಂದು ನಾನು ಹೇಳುತ್ತಿರುವಲ್ಲಿ
“ಥೂ… ನಿನ ಬಾಯಾಗ ನನ ಹಾಟುಯ್ಲಿ!… ಒಳ್ಳೆ ಮಿಂಡನ್ತರ ನೋಡ್ತಿದ್ದೀ… ಏನೆ ತಾನೆ ಅಂತ ಅನ್ನೋಕೇನಾಗೈತೆ ದಾಡಿ. ಶಾಸ್ತ್ರಿ… ಇವತ್ತು ಮಲಿಕ್ಕನ್ನಂಗಿದ್ರೆ ಮಲಿಕ್ಕವಂತೀ… ಅದ್ಯಾಕೋ ನಿನಮ್ಯಾಲ ನಂಗೂ ಮನಸಾಗೈತೆ… ನಿಂಗೂ ನನ್ಮ್ಯಾಲ ಮನಸೈತಿ. ಅಂದ ಮ್ಯಾಲ್ಯಾಕೆ ಅಮ್ಮೋರೆ ಗಿಮ್ಮೋರೆ ಕತ್ತೆ ಸ್ಯಾಟಾ…” ಎಂದು ಏಕ್‌ಧಮ್ ಗದರಿಸಿಬಿತಳು.

ಆಕೆಯ ನೇರ ಮಾತಿಗೆ ಜಲಜಲ ಬೆವತು ಬಿಟ್ಟೆ. ಹತ್ತಿರ ಬರುವಂತೆ ಸಂಜ್ಞೆ ಮಾಡಿದಳು. ಮಾಂತ್ರಿಕ ಶಕ್ತಿಗೆ ವಶವಾದ ಗೊಂಬೆಯಂತೆ ಹತ್ತಿರ ಹೋದೆ. ಸೊಂಟದ ಸುತ್ತ ಕೈ ಹಾಕಿ ಅಮುಕಿದಳು. ನಾನುಹ್ಹಾ ಎಂದು ನರಳಿದೆ. ಭಾಳ ಹಸ್ಕೊಂಡಂಗಿದ್ದೀ ಅಲ್ಲಾ ಎಂದಳು. ನಾನು ‘ಹ್ಹೂಂ’ ಅಂದೆ. ನನ್ನ ಬಗ್ಗೆ; ನನ್ನ ವಂಶದ ಬಗ್ಗೆ; ನನ್ನ ತಾತನವರ ಬಗ್ಗೆನನ್ನ ಸೃಜನಶೀಲ ಅಭಿರುಚಿಗಳ ಬಗ್ಗೆ; ನನ್ನ ವೈವಾಹಿಕ ಸಂಬಂಧದ ಬಗ್ಗೆ; ನಾನು ತನಗಾಗಿ ಹಪಹಪಿಸುತ್ತಿದ್ದುದರ ಬಗ್ಗೆ; ಎಲ್ಲ ವಿಷಯ ಸಂಗ್ರಹಿಸಿದ ನಂತರವೇ ಕರೆಸಿಕೊಂಡಿರುವುದಾಗಿ ಹೇಳಿದಳು. ಈಗ ಈ ದೇಹ ನಿನ್ನದು… ಈ ದೇಹದ ಪ್ರತಿಯೊಂದು ಅಂಗಗಳು ನಿನ್ನವು… ಇವನ್ನೆಲ್ಲ ಮುಟ್ಟುತ್ತ, ತಟ್ಟುತ್ತ ಒಳಹೊಕ್ಕು ಹೃದಯ ತುಂಬಿ ಜೀಕುವ ಕೆಲಸ ಕೆಲಸ ಮಾಡುವಂತೆ ಸೂಚಿಸಿದಳು. “ಅನಸೂವಿ… ಅನಸೂವಿ” ಎಂದು ಉದ್ಗರಿಸುತ್ತ ಆಕೆಯ ದೇಹದ ಉಬ್ಬುತಗ್ಗುಗಳ ತುಂಬ ಸ್ಪರ್ಶದ ಬಿತ್ತನೆ ಮಾಡಿದೆ. “ಅನಸೂವಿ, ಆ ಕಂದಪದ್ಯದ ಅರ್ಥ ಹೇಳ್ಲಾ” ಅಂದೆ. ಮಾಡೋದು ಮಾಡ್ಕೊಳ್ಳೋ ಅಂದ್ರೆ ಅರ್ಥ ಹೇಳ್ತಾನಂತೆ ಅರ್ಥ” ಎಂದು ಗದರಿಸಿದಳು. “ನೀನೆ ಯಾಕೆ ಹೇಳ್ಬೇಕು ನಾನೇ ಹೇಳ್ತೀನಿ ನೋಡು. ಆ ನಾಡಿನಲ್ಲಿ ಬಡತನವೆಂಬುದು ಅಲ್ಲಿನ ಸ್ತ್ರೀಯರ ಬಡ ನಡುವಿನಲ್ಲಿ, ಸೋಮಾರಿತನವೆಂಬುದು ಅವರ ನಿಧಾನ ನಡುಗೆಯಲ್ಲಿ, ಇರಕಟ್ಟೆಂಬೋದು ಅವರ ದೊಡ್ಡ ಮೊಲೆಗಳಲ್ಲಿ, ಚಂಚಲತೆ ಎಂಬುದು ಅವರ ಕುಡಿಗಣ್ಣಿನ ನೋಟದಲ್ಲಿ, ಕುಟಿಲತೆ ಎಂಬೋದು ಅವರ ಮುಂಗುರುಳುಗಳಲ್ಲಿದ್ವೂ ಅಂತ ಷಡಕ್ಷರ ಬರ್‍ಕೊಂಡಿದ್ದಾನೆ… ಇಷ್ಟೇ ಅಲ್ಲೇನು!” ಎಂದು ವಿವರಿಸಿ ಹೇಳಿದೊಡನೆ ಆಕೆಯ ಕಾವ್ಯ ಸಹೃದಯ ಶಕ್ತಿ ಕಂಡು ಮಂತ್ರಮುಗ್ಧನಾದೆ.

ಇಂಥ ನನ್ನ ಅನಸೂಯಾ ಜವಾರಿ ಹೇಗಾದಾಳು! ಹೇಳು? ಇಲ್ಲಿ ರೋಮ್ಯಾಂಟಕ್ಕಾಗಿ, ಎರೋಟಕ್ಕಾಗಿ ವರ್ಣನೆ ಮಾಡ್ಲಿಕ್ಕೆ ನನ್ನಿಂದ ಸಾಧ್ಯವಿಲ್ಲ ಮಾರಾಯ. ಶತ ಶತಮಾನದಿಂದ ಲೈಂಗಿಕ ಸುಖದಿಂದ ವಂಚಿತಗೊಂಡಿರುವ ಮನುಷ್ಯ ಸುಂದರ ಸ್ತ್ರೀಯೊಂದಿಗೆ ಏಕಾಂತದಲ್ಲಿ ಏನು ಮಾಡಿರುವುದು ಸಾಧ್ಯವೋ… ಅದನ್ನೇ ನಾನು ಮಾಡಿದ್ದು… ಲೈಂಗಿಕ ಸಂತೃಪ್ತಿ ಎಂಬುದು ಕೇವಲ ಎರಡು ದೇಹಗಳಿಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಅರ್ಥಮಾಡಿಕೊಂಡೆ. ಅದೊಂದು ವರ್ಣನೆಗಳಿಗೆ ಅಕ್ಷರಗಳಿಗೆ ಪಂಚೇಂದ್ರಿಯಗಳಿಗೆ ನಿಲುಕದ ಒಂದು ಅಪೂರ್ವ ಸಮಾಗಮ. ಪಾಮರನಾದ ನಾನು ಶಿಖಿರ ತಲುಪಿದ ಸುಖ ಇಂಥದ್ದಕ್ಕೆ ಸಂಬಂಧಿಸಿದ್ದೆಂದು ಹೇಳಿ ಆಕೆಗಾಗಲೀ; ಆಕೆ ದಯಪಾಲಿಸಿದ ಸುಖಕ್ಕಾಗಲೀ ಅಪಚಾರ ಮಾಡಲಾರೆ. ಕುತಜ್ಞತಾಪೂರ್ವಕವಾಗಿ ಆಕೆಯ ದೇಹದ ಸಮಸ್ತ ಒಳಹೊರ ಸೌಂದರ್ಯವನ್ನು ಪಂಚೇಂದ್ರಿಯಗಳವಧರಿಸಿ ಬಂದ ನಂತರ ಎಷ್ಟೋ ದಿನಗಳವರೆಗೆ ಈಡಾಪಿಂಗಳ ಸುಷುಮ್ನ ನಾಳಮಧ್ಯೆ ನಿದ್ದೆ ಹೋಗಿದ್ದೆ… ಅಂದರೆ ಆ ಸುಖದ ಪರಿಮಾಣ ಮತ್ತು ಪ್ರಮಾಣಗಳನು ನೀನೇ ಊಹಿಸು. ಸಂಭೋಗದ ಅತಿಶಯಾನಂದದಿಂದ ಒಳಪ್ರವೇಶಿಸಿ ನೆಲೆಗೊಂಡ ಅನಸೂಯಾ ನನ್ನೆಲ್ಲ ಇಚ್ಛಾಶಕ್ತಿಯಾದಳು. ಮತ್ತೆ ಮತ್ತೆ ನೆನಪಾಗುತ್ತಿದ್ದುದು ಈಕೆಯೇ ಹೊರತು ಹೊರಗಿನ ಉತ್ಸವ ಮೂರ್ತಿ ಅನಸೂಯಳಲ್ಲ. ನಾನು ಕೂಗಿದೊಡನೆ ಅಂತರಂಗದಲ್ಲಿ ದೇವತಾಮೂರ್ತಿ ಅನಸೂಯ ‘ಹೋ’ ಎನ್ನುತ್ತಿದ್ದಳು. ಒಂದೊಂದು ಇಂದ್ರಿಯಕ್ಕೆ ಒಂದೊಂದು ರೂಪ ಕಾಣಿಸಿಕೊಳ್ಳುತ್ತಿದ್ದಳು. ಸುಖ ಕರುಣಿಸುತ್ತಿದ್ದಳು… ರಿಪೇರಿ ಮಾಡುತ್ತಿದ್ದಳು… ಅಥವಾ ಸುಸ್ಥಿತಿಯಲ್ಲಿರುವುದನ್ನು ಕೆಡಿಸುತ್ತಿದ್ದಳು. ನಿಜಕ್ಕೂ ಆಕೆ ಲೀಲಾವಿನೋದಿನಿಯಾಗಿದ್ದಳು ಕಣಪ್ಪಾ… ಈ ನೆನಪಿನಲ್ಲಿದ್ದ ನಾನು ಬಹಳ ದಿನಗಳಿಂದ ಕೊಟ್ಟೂರಿಗೆ ಹೋಗಿರಲಿಲ್ಲ. ಹೆಂಡತಿಯ ತುಂಬುಗರ್ಭವನ್ನು ನೇವರಿಸಿರಲಿಲ್ಲ. ವೃದ್ಧ ಮಾತೆಯ ಆರ್ದ್ರ ಹೃದಯಕ್ಕೆ ಸ್ಪಂದಿಸಿರಲಿಲ್ಲ. ಅಲೌಕಿಕ ಅನುಭೂತಿಯ ಶೃಂಗವನ್ನಲಂಕರಿಸಿದ್ದ ನಾನು ಸ್ವಯಂ ಕೃತಾಪರಾಧಗಳ ಪಟ್ಟಿ ಕಡೆಹೇಗೆ ಕಣ್ಣು ಹರಿಸಲು ಸಾಧ್ಯವಾದೀತು ಅಲ್ಲವೇ? ಈ ಶಾಮ ಪ್ರತಿದಿನ ಅನಸೂಯಳ ಪಲ್ಲಂಗದ ಮೇಲೆ ಬಿದ್ದಿರಬಹುದೆಂದು ಯೋಚಿಸಬೇಡ… ನನಗಾಗಲೀ, ಆಕೆಗಾಗಲೀ ಬೇರೆ ಕೆಲಸವಿರಲಿಲ್ಲವೆಂದು ತಿಳಿದುಕೊಂಡಿರುವಿ ಏನು! ನಾನು ಆಗೊಮ್ಮೆ ಈಗೊಮ್ಮೆ ಆಕೆಯ ಮನೆಗೆ ಹೋಗುತ್ತಿದ್ದುದುಂಟು. ಕಾರಣ ಕಾರಣ ಆಕೆ ಎಲ್ಲಿಂದಲೋ ತಂದು ಸಾಕಿಕೊಂಡಿದ್ದ ಕಾಂಚನಾ ಎಂಬ ಬಾಲಕಿಯ ಅಗತ್ಯಗಳನ್ನು ಪೂರೈಸಲೆಂದು. ಅಲ್ಲದೆ ಆ ಬಾಲಕಿಗೆ ಆಗಾಗ್ಗೆ ಹೋಗಿ ಕರ್ನಾಟಕ ಸಂಗೀತದ ಪಾಠ ಹೇಳಿಕೊಡುತ್ತಿದ್ದೆ. ಅಪರೂಪಕ್ಕೊಮ್ಮೆ ಅನಸೂಯ ದೇಹದ ಸಾಂಗತ್ಯ ಬಯಸಿ ಹೋಗುತ್ತಿದ್ದುದೂ ಉಂಟು. ಒಳಗಡೆ ಯಾರೊಂದಿಗೋ ಮಲಗಿರುವುದು ತಿಳಿದು ವಾಪಸಾಗುತ್ತಿದ್ದುದೂ ಉಂಟು. ಅದನ್ನು ಹೇಳಿದಾಗ “ಕೂಗ್ಲಿಕ್ಕೇನಾಗಿತ್ತು ರೋಗ… ಅವನ್ನ ಕಳಿಸಿ ನಿನ್ನ ಕರ್‍ಕೊಳ್ತಿದ್ನಲ್ಲಾ” ಎಂದು ಹೇಳಿಬಿಡುತ್ತಿದ್ದಳು. ನನ್ನೊಂದಿಗೆ ಆಕೆ ತನ್ನ ಖಾಸಗಿ ಬದುಕಿನ ಬಗ್ಗೆ ಚರ್ಚಿಸುತ್ತಿದ್ದಳು. ನಾನು ಕೂಡ ಅಷ್ಟೆ-ಶಾಲಾ ಬಾಲಕನಂತೆ ಬದುಕಿನ ವರದಿ ಒಪ್ಪಿಸುತ್ತಿದ್ದೆನು. ನಮ್ಮ ಸಂಬಂಧ ವೈವಾಹಿಕ ಚೌಕಟ್ಟಿನೊಳಗೆ ಬರುವುದೋ? ವಿವಾಹೇತರವೋ? ಅನೈತಿಕವೋ?! ನಮ್ಮೀರ್ವರಿಗೂ ತಿಳಿಯದು. ಆದರೆ ಈ ನಮ್ಮ ಸಂಬಂಧದ ಬಗ್ಗೆ ಕೊತ್ತಲಗಿ ಗ್ರಾಮ ಜನತೆ ತಲೆಕೆಡಿಸಿಕೊಂಡದ್ದು; ಅದು ಪ್ರಕಟವಾಗಿದ್ದು ಸಂಗ್ಯಾಬಾಳ್ಯಾ ನಾಟಕ ಪ್ರದರ್ಶನದ ದಿನ. ಅದಕ್ಕೂ ಮೊದಲು ಅವರಿವರು, ನನ್ನ ಸಹೋದ್ಯೋಗಿಗಳು ಕೇಳಿದಾಗ ಹೌದೆಂದು ಕೇಳಿದಾಗ ಹೌದೆಂದು ಹೇಳಿ ಬಾಯಿಮುಚ್ಚಿಸಿಬಿಟ್ಟಿದ್ದೆ.

ಎಲ್ಲರಿಗೂ ಹೇಳಿಕೊಂಡು ಅಡ್ಡಡುತ್ತಿದ್ದವನೆಂದರೆ ರಾಖೇಶ. ಎಂಥೆಂಥ ಹೇಮಾಹೇಮಿಗಳಿಗೂ ದೊರಕದ ಅನಸೂಯಾ ಶಾಸ್ರಿ ಕಡ್ಡಿ ಪೈಲ್ವಾನ ಶಾಸ್ತ್ರಿಗೆ ಹೇಗೆ ವಶವಾದಳು? ಅವನೇನಾದರೂ ಆಕೆಗೆ ಮಾಟ ಮಂತ್ರ ಮಾಡಿಸಿರಬಹುದೋ! ಎಂದು ಮುಂತಾಗಿ ಮಾತಾಡಿಕೊಳ್ಳುತ್ತಿದ್ದರು. ಸಂಗ್ಯಾ ಬಾಳ್ಯಾ ನಾಟಕ ಶುರುವಾಗುವಾಗ ಗುಲಾಂನಬಿ ಊರಲ್ಲಿದ್ದಿದ್ದರೆ ಅನಸೂಯಾಳೆದರಿಗೆ ತಾನೇ ಸಂಗ್ಯಾನ ಪಾತ್ರ ಮಾಡುವುದಾಗಿ ಪಟ್ಟುಹಿಡಿದು ಕೂಡ್ರದೆ ಬಿಡುತ್ತಿರಲಿಲ್ಲ. ಶ್ರೀಮತಿ ಹೆಗಡೆಯವರ ಬುಲಾವ್ ಮತ್ತು ಅಪ್ಪಣೆ ಮೇರೆಗೆ ಜಯಮಹಲ್ ಬಡಾವಣೆಯ ಮನೆಯ ಕಿಚನ್ ವಿಭಾಗಕ್ಕೆ ಫರ್ನಿಷಿಂಗ್ ಮಾಡಲು ಹೋಗಿದ್ದನು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಲು ಪೈಪೋಟಿ ನಡೆಸಿದ್ದ ಭುವನೇಶ್ವರಿ ಪ್ರಯತ್ನಕ್ಕೆ ಉಪಮುಖ್ಯಮಂತ್ರಿ ಜಟ್ಟಿ ಜಗನ್ನಥಯ್ಯನವರ ಕೈಯಿಂದ ಕಲ್ಲು ಹಾಕಿಸಿ ಕೊತ್ತಲಿಗಿ ಸೇರಿಕೊಂಡಿದ್ದ. ರಾತ್ರಿ ಬೆಡ್ರೂಮಿಗೆ ಪ್ರವೇಶಿಸುತ್ತಿದ್ದಂತೆ ವಿಷಯ ಎಲ್ಲ ಗೊತ್ತಾಗಿ ಕೈಬೆರಳು, ಕಾಲುಬೆರಳು ಮುರಿದುಕೊಂಡ. ಗಂಜಾಂ ನಾಗಪ್ಪನ ವಜ್ರದಂಗಡಿಯೊಳಗೆ ಕಳುಹಿಸುವುದಾಗಿ ಆಸೆ ತೋರಿಸಿದರೂ ಮಾಜಿ ಮಂತ್ರಿ ಪ್ರಮಾಧೀನೇಂದ್ರ ಹೆಗ್ಗಡೆಯವರೊಂದಿಗೆ ಹೌರಾ ಬ್ರಿಡ್ಜ್ ಮೇಲೆ ವಾಕಿಂಗ್ ಮಾಡದ ಇಷ್ಟ ಪಡದ ಅನಸೂಯಾ ಆ ಪುಳಿಚಾರ್ ಶಾಸ್ರಿಯಲ್ಲಿ ಅದೇನು ಕಂಡಳು? ಅವಳೊಂದಿಗೆ ಸಂಗ್ಯಾನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬುದು ತನ್ನ ಬಹುದಿನದ ಆಸೆ. ಪ್ರಸ್ತಾಪಿಸಿದಾಗ ಆಕೆ, “ಏಯ್… ಸಂಗ್ಯಾನ ಪಾತ್ರ ಅಂದ್ರೆ ಮೀಸಿಗೆ ಬಣ್ಣ ಹಚ್ಕಂಡಷ್ಟು ಸಲಭಾಂತ ತಿಳ್ಕೊಂಡೀ ಏನೋ ಸಾಬಣ್ಣ… ನನ್ ಜತಿ ಬಣ್ಣ ಹಚ್ಚಿಕಳಕಂದ್ರ ಮುಂದಿನ ಜನುಮದಾಗ ಹುಟ್ಟಿ ಬರ್ಬೇಕು…” ಎಂದು ಬಾಯಿಗೆ ಬಂದಂಗ ಮಾತಾಡಿದ್ರೂ ನಬಿ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಅವನಿಗೆ ಸಿಟ್ಟು ಹುಟ್ಟಿದ್ದು ಸಂಗ್ಯಾನ ಪಾತ್ರಧಾರಿ ಶಾಸ್ತ್ರಿ ಮೇಲೆ. ಅದೂ ಅಲ್ಲದೆ ಅವನು ಅನಸೂಯಳೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿರುವನೆಂಬುದಾಗಿ ಖುದ್ಧ ರಾಖೇಶನೇ ಬಂದು ಹೇಳಿ ಸಾಬನ ಕೋಪವನ್ನು ದ್ವಿಗುಣಗೋಲಿಸಿದ್ದ. “ನಬೀಗೆ ನಿನ್ ಮೇಲೆ ಸಿಟ್ಟು ಬರೋಹಂಗ ಮಾಡಿದ್ದೀನಿ… ನೀನೆಂಗಂದ್ನ ಎದುರಿಸ್ಟೀಯೋ ಎದುರ್‍ಸು”

– ಎಂದು ಮುಂತಾಗಿ ಹೇಳಿ ನನ್ನನ್ನು ಆತಂಕದ ಸ್ಥಿತಿಯಲ್ಲಿ ಇಟ್ಟವನೂ ಅವನೆ. ಇದನ್ನೆಲ್ಲ ಸಹಿಸಬಹುದು… ಆದರೆ ರಾಂಪುರಕ್ಕೆ ಹೋಗುವುದಾಗಿ ನನ್ನಿಂದ ಐವತ್ತು ರೂಪಾಯಿ ಪಡೆದು ಅವನು ಗುಟ್ಟಾಗಿ ಹೊರಟದ್ದು ಕೊಟ್ಟೂರಿಗೆ. ಯಾವುದೋ ಸೂತಕ ಸುದ್ದಿ ಹೊತ್ತು ತಂದಿರುವವನಂತೆ ಮುಖ ಮಾಡಿಕೊಂಡು “ಅಮ್ಮೋ” ಎಂದು ಕೂಗಿದ್ದನ್ನು ಕೇಳಿಸಿಕೊಂಡು ಅತ್ತೆ ಸೊಸೆಯರೀರ್ವರೂ ಹೌಹಾರಿಬಿಟ್ಟರು. ಅಲ್ಲಿ ನನ್ನ ಪರಮಾಪ್ತ ಗೆಳೆಯನಿಂದ, ನಿಮ್ಮ ಮಗನು ಬಾಯಾ ಸಂಗ್ಯಾನ ಆಟದಲ್ಲಿ ಸಂಗ್ಯಾನ ಪಾರ್ಟುಕಟ್ಟಿರುವನೆಂದೂ, ಸೋಮವಾರಪೇಟೆಯ ಐದಾರು ಮಂದಿ ವೇಶ್ಯೆಯರೊಂದಿಗೆ ಸಂಬಂಧ ಇಟ್ಟುಕೊಂಡಿರುವನೆಂದೂ ಹೇಳಿ ವಾಪಸಾದನು. ಇದು ನನಗೆ ಗೊತ್ತಗಲಿಲ್ಲ. ನಾಳ್ಯೋ ನಾಡಿದ್ದೋ ನಿನ್ಗೆ ಗ್ರಾಚಾರ ವಕರಸತೈತಿ… ಎಸುರಿಸೋಕೆ ಸಜ್ಜಾಗಿರು ಅಂದ. ಗಾಬರಿಗೊಂಡೆ. ಸಿಟ್ಟಿಗೇಳಲಿಲ್ಲ. ನನ್ನನ್ನು ಏನೆಲ್ಲ ತೊಂದರೆಗೀಡುಮಾಡುವ ಸಮಸ್ತ ಅಧಿಕಾರವನ್ನು ಅವನಿಗೆ ಧಾರೆ ಎರೆದುಬಿಟ್ಟಿದ್ದೆ. ಪ್ರತಿಭಟಿಸುವಂತಿರಲಿಲ್ಲ. ಸಿಟ್ಟಿಗೇಳುವಂತಿರಲಿಲ್ಲ. ಹಾಗೇನಾದರೂ ಮಾಡಿದರೆ ಠೂ ಬಿಡುವುದಾಗಿ ಹೆದರಿಸಿದ್ದ.

ತುಂಬು ಗರ್ಭಿಣಿ ಸೊಸೆಯೊಂದಿಗೆ ವೃದ್ಧೆ ಅಲುಮೇಲಮ್ಮನವರು ಮರುದಿನ ಕೊತ್ತಲಗಿಗೆ ಇಳಿದು ಕೊಟ್ರಮ್ಮನ ಗುಡಿಗೆ ಬಂದು “ಅಯ್ಯೋ ನಮ್ಮ ಬ್ರಾಹ್ಮಣ್ಯವೇ” ಎಂದು ಅಬ್ಬರಿಸತೊಡಗಿದಾಗಲೇ ಬಾಳ್ಯಾನ ಕುತಂತ್ರ ನನಗೆ ಅರ್ಥವಾದದ್ದು. ನನ್ನ ಸಹಾಯಕ್ಕೆ ಎಲ್ಲರೂ ಬಂದರಾದರೂ ಬಾಳ್ಯಾ ವೇಷಧಾರಿ ಮಾತ್ರ ಅತ್ತೆ ಸೊಸೆ ಪಕ್ಷ ವಹಿಸಿದನು.

“ಸಂಗ್ಯಾ ಬಾಳ್ಯಾನ ನಾಟ್ಕಾ ಆಡ್ಲಿಕ್ಕೆ ಶಾಸ್ತ್ರಿಗಳ ಪವಿತ್ರ ವಂಶದಲ್ಲಿ ಹುಟ್ಟಿದ ನಿನಗೆ ಅದೆಷ್ಟು ಧೈರ್ಯ ಬಂತೋ ಶಾಮಾ… ಅಮೇಧ್ಯಕ್ಕೆ, ಮದ್ಯಕ್ಕೆ ಹಲ್ಲು ಹತ್ತಿರೋದಲ್ದೆ ಈ ಹೊಲೇರಾಡೋ ನಾಟಕಾನ ಬೇರೆ ಆಡ್ಟೀಯಾ… ಮರ್ಯಾದೆಯಿಂದ ಹೊರಟು ಬರ್‍ತೀಯೋ ಇಲ್ವೋ?” ಎಂದು ಮುಂತಾಗಿ ಅಬ್ಬರದ ಮಾತುಗಳನ್ನಾಡುತ್ತಿರುವ ತಾಯಿಯೂ-

“ರಾಮ ರಾಮಾ… ಎಂಥ ಕೆಲ್ಸ ಮಾಡ್ತಿದೀರಲ್ರಿ ನೀವು… ಇಂಥ ಕೆಟ್ಟ ಗುಣಗಳು ಹೇಗೆ ಬಂದ್ವಂತೀನಿ! ಶೂದ್ರರಾಗಿ ಬಿಟ್ಟಿದ್ದೀರಲ್ಲ ನೀವು… ನಿಮ್ಮ ಮೈಮೇಲೆ ಪವಿತ್ರ ಯಜ್ಞೋಪವೀತ ಮೇರೆ ಕಾಣಿಸ್ತಿಲ್ವಲ್ಲ… ಎಲ್ಲ ದುಷ್ಟರ ಸಾವಾಸ… ನಮ್ಮೆಜಮಾನ್ರಿಗೆ ದುಷ್ಚಟಗಳನ್ನು ಕಲಿಸ್ದೋರ ವಂಶ ನಿರ್ವಂಶ ಅಗದಂತಿರ್‍ತದೇನು! ಪತಿವ್ರತೆಯಾದ ನಾನು ನಿಟ್ಟುಸಿರುಬಿಟ್ಟ್ರೆ ಅವರಿಗೆ ಒಳ್ಳೇದಾಗೊಲ್ಲ… ನೌಕ್ರೀನು ಬೇಡ… ದರಿದ್ರ ಕೊತ್ತಲಗೀನೂ ಬೇಡ… ಹೊರಟು ಬಂದುಬಿಡಿ… ಬದುಕೋಕೆ ವೈದಿಕ ಇದ್ದೇ ಇದೆ” ಎಂದು ರೋಧನ ಮಾಡುತ್ತಿರುವ ತುಂಬ ಗರ್ಭಿಣಿ ಪತ್ನಿಯೂ…
ಅವರ ಯಾವ ಮಾತುಗಳಿಂದಲೂ ನಾನು ಎಳ್ಳಷ್ಟು ವಿಚಲಿತನಾಗಲಿಲ್ಲ. ಅವರ ಗುರಿಯಾದ ಶಾಮ ನಾನಾಗಿರಲಿಲ್ಲ… ಅವರಿವರು ಸಮಾಧಾನ ಹೇಳಿದರೂ ಪ್ರಯೋಜನವಾಗಲಿಲ್ಲ… ಮಾತಿಗೆ ಮಾತು ಸೇರಿ ಹುಟ್ಟಿದ ಕಿಚ್ಚು ವ್ಯಭಿಚಾರದ ಕಡೆಗೆ ತಿರುಗಿತು.
ವರಲಕ್ಷ್ಮಿಗೆ ಇದ್ದಕ್ಕಿದ್ದಂತೆ ಏನೋ ತೋಚಿದಂತಾಗಿ ಕುಪ್ಪಳಿಸಿ ಜಿಗಿದು ಅನಸೂಯಳ ತುರುಬು ಹಿಡಿದುಕೊಂಡು –
“ಏನೇ ಹಾದರಗಿತ್ತಿ – ನನ್ನ ಗಂಡನ್ನ ಇಟ್ಕೋಡಿದ್ದೀಯಂತಲ್ಲಾ… ಇನ್ನೂ ತಾಳಿ ಕಟ್ಟಿಸಿಕೊಂಡಿರೋ ನಾನಿನ್ನೂ ಜೀವಂತವಾಗಿದ್ದೀನಿ ಕಣೇ…” ಎಂದು ಅಬ್ಬರಿಸಿ ಇತಿಹಾಸ ಸೃಷ್ಟಿಸಿದಳು.
“ಹ್ಹೋ ಹ್ಹೋ ಗರತಿ ಅಂತೆ ಗರತಿ… ಇನ್ನು ಮುಂದೆ ನಾನು ನಿನ್ಗಂಡನ್ನ ಪರಮೆಂಟಾಗೇ ಇಟ್ಕೊಂಡ್‌ಬಿಡ್ತೀನಿ… ಅದೇನ್ ಮಾಡ್ತೀಯೋ ಮಾಡ್ಕೋ” ಎಂದು ಘೋಷಿಸಿ ಅನಸೂಯಾ ನನ್ನ ಕೈ ಹಿಡಿದು ದರದರ ಎಳೆದುಕೊಂಡು ಸೋಮವಾರಪೇಟೆ ಕಡೆ ಹೋಗಿಬಿಟ್ಟಳು.
ನನ್ನನ್ನು ತನ್ನ ಮನೆಗೆ ಎಳೆದೊಯ್ದು ನನ್ನ ಕೆನ್ನೆಗೆ ಪಟಪಟ ಬಾರಿಸಿದಳು!
ಇನ್ನು ಮುಂದೆ ನೀನು ನಮ್ಮನ್ಯಲ್ಲೆ ಇರಬೇಕೆಂದು ಆಜ್ಞೆ ಮಾಡಿದಳು!
ಆಕೆ ಹಾಗೆ ಅಂದಲೆಂದಾಕ್ಷಣ ನಾನು ಆಕೆಯಲ್ಲಿ ಠಿಕಾಣಿ ಹೂಡುವುದು ಹೇಗಾದೀತು?

ಯಾರ ಯಾರ ಮಾತುಗಳು ನನ್ನ ಮನಸ್ಸಿನ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿರಲಿಲ್ಲ. ಬಾಳ್ಯಾನ ಪಾತ್ರಧಾರಿ ರಾಖೇಶನ ಅನಿರ್ಬಂದಿತ ಸಹವಾಸದಿಂದಾಗಿ ನನ್ನ ವ್ಯಕ್ತಿತ್ವ ಬಂಡೆಗಲ್ಲಿನಂತೆ ದಡ್ಡು ಬಿದ್ದು ಹೋಗಿತ್ತು. ಯಾರಾದರೂ ಅಷ್ಟೆ ಯಾಕೆ? ಚಿಕ್ಕ ಮಗುವೂ ಕೂಡ ನನ್ನ ಮೇಲೆ ಸುಲಭವಾಗಿ ಹಲ್ಲೆ ಮಾಡಬಹುದಿತ್ತು. ಕಾಲಕ್ಷೇಪಕ್ಕೋ ಆತ್ಮಾನಂದಕ್ಕೋ… ನಾನು ಅನೇಕ ಸಮಾಜಬಾಹಿರ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೆನು… ಸಮಾಜದಲ್ಲಿ ಮತ್ತು ನನ್ನ ಕೌಟುಬಿಕ ವ್ಯವಸ್ಥೆಯಲ್ಲಿ ಅಪಮೌಲ್ಯಗೊಳ್ಳತೊಡಗಿದ್ದ ನನ್ನನ್ನು ನೋಡಿ ನನ್ನ ಸಹೋದ್ಯೋಗಿಗಳು ಒಳಗೊಳಗೇ ಆನಂದಿಸತೊಡಗಿದ್ದರು. ಅವರ ಆನಂದಕ್ಕೂ ನನ್ನಲ್ಲಿ ಯಾವುದೇ ಪ್ರತಿಕ್ರಿಯೆ ಉಳಿದಿರಲಿಲ್ಲ. ಶಾಸ್ತ್ರಕ್ಕೆ ಆಗೊಮ್ಮೆ ಈಗೊಮ್ಮೆ ಕೊಟ್ಟೂರಿಗೆ ಬರುತ್ತಿದ್ದೆನಾದರೂ ಅಲ್ಲೂ ಯಾವುದೇ ಉಲ್ಲಾಸ ಕೊಡುಕೊಳ್ಳುವುದು ಸಾಧ್ಯವಿರಲಿಲ್ಲ. ನಿಜ ಹೇಳಬೇಕೆಂದ್ರೆ ಹುಟ್ಟಲಿರುವ ಮಗುವಿನ ಬಗೆಗೂ ನನಗೆ ಆಸಕ್ತಿ ಇರಲಿಲ್ಲ.

ನನ್ನ ವ್ಯಕ್ತಿತ್ವದೊಳಗೆ ನಿರ್ವಾತವೇರ್ಪಡಲಾರಂಭಿಸಿರುವಾಗಲೇ ಬ್ಯಾಂಕಿನ ಸುವರ್ಣ ಮಹೋತ್ಸವದ ಮಹಾಧಿವೇಶನದ ಕಾರ್ಯಕ್ರಮಗಳು ಮೂರುದಿನಗಳ ಪರ್ಯಂತ ನಡೆದವು. ನಮ್ಮ ನಾಟಕವು ಮಾತ್ರ ಮಹಾಧಿವೇಶನಕ್ಕೆ ಕಳಸವಿಟ್ಟಂತಿತ್ತು.
ಗಂಗಿ ಈರ್ಯನ ಹೆಂಡತಿಯಾಗಿರಲಿಲ್ಲ… ಜಾತ್ರೆಯಲ್ಲಿ ನೋಡಿದ ಕ್ಷಣದಿಂದ ಆಕೆ ಸಂಗ್ಯಾನ ವ್ಯಕ್ತಿತ್ವದ ಸಿಂಹಭಾಗವೇ ಆಗಿಬಿಟ್ಟಿದ್ದಳು.
ಹುಚ್ಚು ಹಿಡಿದು ಮೆಚ್ಚಿ ಬಂದೆ ನಿನ್ನಾ ರೂಪಕೆ ಜರತಾರಸೆಲ್ಲೆ ಹಾಸಲೇನು ನಿನ್ನ ಪಾದ ಬುಡಕೆ… ಎಂದು ಕುಣಿದು ಹಾಡುವಾಗಲಂತೂ ನಾನು ಗಂಗಿಯ ನಿಜವಾದ ಪ್ರೇಮಿ ಸಂಗ್ಯಾ ಆಗಿ ಸಾವಿರಾರು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರನಾದೆ… ಶಾಸ್ತ್ರೀ ಹಂಗ ಸಂಗ್ಯಾನ ಪಾರ್ಟು ಮಾಡೋರು ಹಿಂದೂ ಹುಟ್ಟಿಲ್ಲ, ಇಂದು ಹುಟ್ಟಿಲ್ಲ, ಮುಂದೂ ಹುಟ್ಟೋದಿಲ್ಲವೆಂದು ಸರ್ವರೂ ಹೃದಯ ತುಂಬಿ ಕೊಂಡಾಡಿದರು. ಈರ್ಯನ ಸಲಹೆಯಂತೆ ಕಡಿಯಲು ಬಂದ ಬಸ್ಯಾ ಇರುಪಾಕ್ಷಿಯರೆದುರು ಸಂಗ್ಯಾನ ಪಾತ್ರದಲ್ಲಿ ನಾನು ನೋಡುಗರ ಕರುಳು ಕತ್ತರಿಸುವಂತೆ ಅಭಿನಯಿಸಿದೆ. ನನ್ನ ಅಭಿನಯಕ್ಕೆ ಮಾರು ಹೋಗಿ ಗಂಗಿ ಪಾತ್ರದಲ್ಲಿದ್ದ ಅನಸೂಯ ಓಡಿ ಬಂದು ನನ್ನನ್ನಪ್ಪಿಕೊಂಡು “ಶಾಸ್ತ್ರೀ… ನನ್ನ ಶಾಸ್ತ್ರೀ” ಎಂದು ಉದ್ಗರಿಸಿ ಹತ್ತಾರು ಬಾರಿ ಚುಂಬಿಸಿದಳು.

ಮಾರನೆ ದಿನ ಆಡಳಿತವರ್ಗದ ಮೇಲಧಿಕಾರಿಗಳು, ರಾಜ್ಯ ಸರಕಾರದ ಉಚ್ಚ ಪ್ರತಿನಿಧಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಸನ್ಮಾನ್ಯ ರಿಜರ್ವ್‌ಬ್ಯಾಂಕ್ ಗವರ್ನರರು ನನಗೆ ಪ್ರಶಸ್ತಿ ಪ್ರದಾನಮಾಡುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನಸೂಯಾ ಆನಂದಬಾಷ್ಪ ಸುರಿಸಿದಳು. ಕೆಲವು ಗೆಳೆಯರ ಒತ್ತಾಯದಿಂದ ನಾನು ಸುಶ್ರಾವ್ಯವಾಗಿ ದೀಕ್ಷಿತರ “ರಾಮಕೋಟಿ ನಿಲಯೇ” ಕೃತಿಯನ್ನು ಹಾಡಿ ರ್ಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿಬಿಟ್ಟೆ. ಮುಖ್ಯವಾಗಿ ನನ್ನ ಅನಸೂಯಳಲ್ಲಿ ಆದ ಬಹು ದೊಡ್ಡ ಬದಲಾವಣೆ ಎಂದರೆ ಆಕೆ ಮುಂದೆಂದೂ ಏಕವಚನದಿಂದ ಸಂಬೋಧಿಸಲಿಲ್ಲ ಎಂಬುದು.

ನೋಡಿದಿಯಾ… ನನ್ನ ಬದುಕಿನ ವಿಶಾದಪೂರ್ಣ ಗಳಿಗೆಗಳನ್ನು… ಇದಕ್ಕೆ ಕಾರಣಗಳೇ ಇರಲಿಲ್ಲ… ಬೇಕೆಂದೇ ಸೃಷ್ಟಿಸಿಕೊಂಡಿದ್ದು. ಬೇಕೆಂದೇ ಅನುಭವಿಸಿದ್ದು ಅಷ್ಟೆ. ನಾನು ನಾಯಕನೂ ಆಗಿರಲಿಲ್ಲ… ನಾನು ಖಳನಾಯಕನೂ ಆಗಿರಲಿಲ್ಲ… ಬಫೂನು ಆಗಿರಲಿಲ್ಲ… ಏನೂ ಆಗಿರಲಿಲ್ಲ… ಆದರೆ ಎಲ್ಲಾ ಆಗಿದ್ದೆ. ನೋಡುವವರ ಕಣ್ಣುಗಲಿಗಡ್ಡವಿದ್ದ ಮಸೂರಗಳ ಬಣ್ಣಗಳಂತೆ ನಾನು ಗೋಚರಿಸುತ್ತಿದ್ದೆ. ಸಂಗ್ಯಾನ ಪಾತ್ರದಲ್ಲಿ ನಾನು ಅದ್ಭುತವಾಗಿ ನಟಿಸುತ್ತಿದ್ದಾತ… ದೂರದಲ್ಲೆಲ್ಲೋ ನನ್ನ ಹೆಂಡತಿ ಮತ್ತು ತಾಯಿ ಗಲಾಟೆ ಮಾಡಿ ಪ್ರತಿಭಟಿಸಿ ಹೋಗಿದ್ದರು.

“ಲೋ ಮಗನೇ… ಶಾಮಾ… ಅಂತೂ ಬಣ್ಣ ಹಚ್ಕೊಂಡೆಣ್ಣ… ನಿನ್ ಹಠಾನೇ ಸಾಧಿಸ್ದೀ ಅಲ್ಲಾ… ಈಗ ನೀನು ಬೇಕೆಂದ್ರೆ ಬಣ್ಣ ತೊಳ್ಕೊಂಡು ಅಮ್ಮಾ ಅಂತ ಬಾರೋ… ಹೆಂಡತಿ ವರಲಕ್ಷ್ಮಿ ಇಂದೋ ನಾಳೆಯೋ ಹುಟ್ಟಲಿರುವ ಮಗು ಬೇಕೆಂದ್ರೆ ತೊಳ್ಕೋಳ್ಳೋ ಬಣ್ಣಾನ…” ಎಂದು ತಾಯಿ ಗೇಟಿನಿಂದಾಚೆ ಕೂಗುತ್ತಿದ್ದುದೂ; ಬಾಯಿ ಬಾಯಿ ಬಡಿದುಕೊಳ್ಳುತ್ತಿದೆಲ್ಲವೂ…
ಅವ್ವ ಅವ್ವ ಅಂತಿದ್ದೀ ಹಗಲೆಲ್ಲ
ಅವ್ವನ ಮೊಮ್ಮಗನೇ
ಅದೇನು ಸುದ್ದಿ ಹೇಳು

ನನ ಕಂದಮ್ಮನೇ… ಎಂದು ಅದ್ಭುತವಾಗಿ ಹಾಡುತ್ತ ಕುಣಿಯುತ್ತ ನನಗೆ ಮೋಡಿ ಮಾಡಿದ್ದ ಎಂಬತ್ತೆಂಟು ವರ್ಷ ವಯಸ್ಸಿನ ಕುಂಟಲಗಿತ್ತಿ ಪಾತ್ರಧಾರಿ ರಮಾಬಾಯಿಯ ಪ್ರಭಾವ ವಲಯದಲ್ಲಿದ್ದ ನನಗೆ ಕೇಳಿಸದೇ ಇರಲಿಲ್ಲ.
ಕ್ರಮೇಣ ಅವರು ತಿಲಾಂಜಲಿ ಎಂಬ ಸವರ್ಣಸಂಧಿ ಪ್ರಕರಣಗಳಾಗಿ ಅಲ್ಲಿಂದ ಹೊರಟು ಹೋದರು. ವೇದಿಕೆ ಮೇಲೆ ಗಂಗಿಯ ಜಾತ್ರಾ ಪ್ರಪಂಚದಲ್ಲಿ ಬೆಂಡು ಬತಾಸು ಚೀಪುತ್ತ ಹೆಜ್ಜೆಹೆಜ್ಜೆಗೂ ವಿಸ್ಮಯ ಪ್ರಕಟಿಸುತ್ತ ಆಕೆಯ ದೇಹದ ಒಂದೊಂದು ಅಂಗಕ್ಕೂ ಒಂದೊಂದು ಕಾವ್ಯದ ಆಭರಣ ತೊಡಿಸುತ್ತಿದ್ದ ನನ್ನ ದೃಷ್ಟಿಯಲ್ಲಿ ತಾಯಿ ಹೆಂಡತಿ ಇವರೆಲ್ಲ ಬೆನ್ನ ಗಂಟಿದ ಪ್ರಾರಬ್ಧ ಅಂದುಕೊಂಡೆ. ಯಾವ ಇಲಾಜಿಗೂ ಬಗ್ಗದ ಹುಣ್ಣು ಬೆನ್ನ ಮೇಲಿದ್ದರೆ ಯಾರು ತಾನೆ ಏನು ಮಾಡಬಹುದೋ ಅದನ್ನೇ ನಾನು ಮಾಡತೊಡಗಿದ್ದೆನು! ಇದು ಸರಿಯೆ? ಇದು ತಪ್ಪೆ? ಅವರು ಹೋಗಿದ್ದರೋ! ಅಲ್ಲೇ ಇದ್ದರೋ! ಇಂಥ ಮಗ ಇದ್ದರೆಷ್ಟು ಸತ್ತರೆಷ್ಟು? ಇಂಥ ಮೊಮ್ಮಗ ಅಂಥ ಈಗ ಗೊತ್ತಾಗಿದ್ದಿದ್ದರೆ ದಿ.ಪಂ.ಪ ಶಾಸ್ತ್ರಿಗಳು ಎಂದೋ ಇವನ ನೆನಪುಗಳ ಮೆದೆಗೆ ಬೆಂಕಿ ಹಚ್ಚುತ್ತಿದ್ದರು. ಪಾಪ, ಪಂಚ ಮಹಾಪತಿವ್ರತೆಯರನ್ನು ನೆನಪಿಸುವಂಥ ಧರ್ಮಪತ್ನಿ ವರಲಕ್ಷ್ಮೀ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾನಲ್ಲಾ! ಹುಟ್ಟೋ ಮಗುವಿನ ಬಗ್ಗೆ ಪ್ರೀತಿ ಇರದ ಇವನು ನರರೂಪದ ರಾಕ್ಷಸ… ಶ್ರೋತ್ರಿಗಳ ಸಹವಂದಿಗನಾಗಿರಬೇಕಾದವನು ಹಲಾಲುಕೋರ ರಾಖೇಶನ ಜೀವದ ಗೆಳೆಯನಾಗಿದ್ದಾನಲ್ಲಾ! ಇವನ ತಲೇಲಿರುವ ವೇದಾಧ್ಯಾನಕ್ಕೆ ಬೆಂಕಿ ಹಚ್ಚಬೇಕು… ಹೀಗೆ… ಇಂಥ… ಒಂದೇ… ಎರಡೇ… ಮೂರೇ… ನೂರಾರು ಕುರ್ದಸಿಗಳು… ಯಾರೂ ನನ್ನನ್ನು ಕೂಪದಿಂದ ಮೆಲೆತ್ತುವ ಕೆಲಸ ಮಾಡಲಿಲ್ಲ… ಅಂಥದೊಂದು ಚಿಕ್ಕ ಪ್ರಯತ್ನವನ್ನಾದರೂ…” ಎಂದು ನಿಟ್ಟುಸಿರು ಬಿಟ್ಟು ಒಂದು ಕ್ಷಣ ಮೌನ ವಹಿಸಿತು ಶಾಮಣ್ಣ ಪಾತ್ರವು.

ಗಂಡನ ಮಾತು ಕೇಳಿ ಶ್ರೀಮತಿ ವರಲಕ್ಷ್ಮಿ ಪಾತ್ರ ಸ್ವಾಭಿಮಾನದಿಂದಲೂ; ದುಃಖದಿಂದಲೂ; ಹತಾಶೆಯಿಂದಲೂ ಉರಿಯತೊಡಗಿತು.

“ರ್ರೀ… ನಿಮ್ ಸ್ನೇಹಿತರು ಆಡ್ತಿರೋ ಮಾತು ಕೇಳ್ತಿದ್ದಿರಾ? ನನಗಂತೂ ಕಿವಿಗೆ ಸೀಸದ ದ್ರಾವಕ ಸುರಿದಂತೆ ಆಗ್ತಾ ಇದೇರಿ… ಇವರು ಕೆಟ್ಟು ಅಧ್ವಾನ್ನಾಗೋಕೆ ಇವರೇ ಕಾರಣ ಅಲ್ರೀ… ಅಂಥೋರಲ್ಲ ನಮ್ಮ ಯಜಮಾನ್ರು . ನಾನು ಅಷ್ಟು ವರ್ಷ ಸಂಸಾರ ಮಾಡಿ ನೋಡಿದೆನಲ್ಲ… ಒಂದು ಕೆಟ್ಟ ಕೃತ್ಯ ಮಾಡೊರಲ್ಲ… ಕೆಟ್ಟ ಮಾತು ನುಡ್ದೋರಲ್ಲ… ಒಂದು ಕೆಟ್ಟ ದೃಶ್ಯ ನೋಡ್ದೋರಲ್ಲ… ಹಾಗಿದ್ದೋರು ಪುಂಡು ಪೋಕರಿಗಳನ್ನು ಕಳಿಸಿ ನಾಟಕದ ಥೇಟರ್ ಮುಂದಿದ್ದ ನಮ್ಮನ್ನು ಬಯ್ಯಿಸಿ ಓಡಿಸಿಬಿಟ್ರು. ಮುಂದೊಂದಿನ ಮದ್ಯ ಸೇವಿಸಿದ್ರೋ ಏನೋ… ಕೊಟ್ಟೂರಿನ ಅಗ್ರಹಾರದ ಬೀದಿಗಳಲ್ಲಿ ಲೋ ತ್ರಂಭ್ಯಕ… ಲೋ ಶಂಕರಾ… ಎಂದು ಕೂಗಾಡಿದ್ದೂ ಅಲ್ಲದೆ… ಮನೆಗೆ ಬಂದು ನನ್ನ ತುರುಬು ಹಿಡಿದು ತಾಯಿ ಆದ ಮೇಲೆ ನಿಂಗೆ ಮೀಸೆ ಬಂದುಬಿಟ್ಟಿದ್ದವಲ್ಲೇ ಎಂದು ಎಳೆದು ರೇಗಾಡಿದರು. ಗಂಡ ಬಯ್ದರೆ ಹೊಡೆದರೆ ಪತ್ನಿ ಆದ ನಾನು ಅಶೀರ್ವಾದ ಅಂದ್ಕೊಳ್ತೀನಿ… ಆದರೆ ತಮ್ಮ ಹೆತ್ತ ತಾಯಿಯನ್ನೇ ಲೇ ಮುದ್ಕಿ… ನೋಡ್ತಿದ್ದೀ ತಾನೆ… ಪಂಡಿತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗನ ಅವಸ್ಥೇನ ಎಂದು ಕೂಗಾಡಿ ಬಿಡೋದೆನು? ಇವರು ಉರದದ್ದು ಒಂದಲ್ಲಾ… ಎರಡಲ್ಲ… ಅವರು ತಳ್ಳಿದ್ರೂ ಅಂತ ದೂರ ಇರಲಿಕ್ಕೆ ಆಗ್ತದೆಯೇ… ಮಗು ಇಸಿ ಮಾಡಿದ ಜಾಗವನ್ನು ತೊಡೆಯಿಂದ ಬೇರ್ಪಡಿಸುವುದು ಯಾವ ತಾಯಿಗೆ ತಾನೆ ಇಷ್ಟವಾದೀತು… “ಮಗೂ

ವರಲಕ್ಷ್ಮೀ… ಅವ್ನು ಶೂದ್ರರ ಸಹವಾಸದಿಂದ ಚೂರಿಗಿಂತಲೂ ಅಪಾಯಕಾರಿ ಆಗಿದ್ದಾನೆ. ಅಂಥವನೊಂದಿಗೆ ಬಾಳುವೆ ಮಾಡ್ತೀನಂದ್ರೆ ನಾನು ಏನು ತಾನೆ ಹೇಳಲಿ” ಎಂದು ಅತೆಯವರು ಏಷ್ಟು ಹೇಳಿದರೂ ನಾನು ಕೇಳಲಿಲ್ಲ… ಎಂಥೆಂಥ ಋಷಿ ಪತ್ನಿಯರೇ ಅನುಭವಿಸಬಾರದ್ದನ್ನೆಲ್ಲ ಅನುಭವಿಸಿದ್ದಾರೆ… ಕಷ್ಟ ಕೋಟಲೆ ನೀಗಿದ್ದಾರೆ. ನಂದೇನು ಮಹಾ! ಸಪ್ತರ್ಷಿಗಳಿಗಿಂತ ಗುಣ ಸ್ವಭಾವ ವಾಕ್ ಸಿದ್ಧಿಯಲ್ಲಿ ನನ್ನ ಗಂಡನೇ ಮೇಲು; ಹೆಂಡತಿಯಾದ ನಾನು ದೂರ ಇದ್ದರೆ ಆತ ಮತ್ತಷ್ಟು ಕೆಡುತ್ತಾನೆ… ಗುರುಸ್ಥಾನ ದಲ್ಲಿದ್ದುಕೊಂಡು, ಮಾತೃಸ್ಥಾನದಲ್ಲಿದ್ದುಕೊಂಡು, ಶುಶ್ರೂಷಕಿ ಸ್ಥಾನದಲ್ಲಿದ್ದುಕೊಂಡು ಗಂಡನ ಸೇವೆ ಮಾಡಬೇಕು ಎಂದು ನಿರ್ಧರಿಸಿಯೇ ನಾನು ಮಗು ಕಟ್ಕೊಂಡು ಕೊತ್ತಲಗಿಗೆ ಹೋದೆ… ಗಂಡಸಿನ ಥರ ಅಡ್ಡಾಡಿ ಅವರಿವರ ಸಹಾಯ ಪಡೆದು ಎಲ್ಲೋ ಒಂದು ಮನೆ ಹುಡುಕಿದೆ ಕಣ್ರೀ… ಪುಣ್ಯಾತ್ಮ ಆ ಅಪ್ಪೇನಳ್ಳಿ ಶಾನುಭೋಗರ್‍ನ ನೆನೆಸಬೇಕು… ಆ ಮನೆಗೆ ಅವರು ಬಂದರೆ ಬರ್‍ತಿದ್ರು… ಇಲ್ಲಾಂದ್ರೆ ಇಲ್ಲ… ಒಂದೆರಡು ಬಾರಿ ಮಗನನ್ನು ಎತ್ತಿ ಆಡಿಸಿದ್ದುಂಟು. ಅವರು ಬ್ಯಾಂಕಿನಿಂದ ಹೊರಟ್ರೂ ಅಂದ್ರೆ ಸೀದ ಆ ಹಾದರಗಿತ್ತಿ ಮನೆಗೆ ಇಲ್ಲಾಂದ್ರೆ ಆ ರಾಖೇಶನ ಅರಿಷಡ್ವರ್ಗಗಳ ಮೂಟೆ ಹುಡುಕ್ಕೊಂಡು ಹೋಗುತ್ತಿದ್ದರು. ರಾಖೇಶನಂತ ದುಷ್ಟ ಈ ಪ್ರಪಂಚದಲ್ಲಿ ಎಲ್ಲೂ ಇರಲಿಕ್ಕಿಲ್ಲ ನೋಡಿ… ಮಾನ ಮರ್ಯಾದೆ ಇಲ್ದೋನಂದ್ರೆ ಅವನು ಮಾತ್ರ.
ಒಂದು ದಿನ ಅವನು ವ್ಯಕ್ತಿಯೋರ್ವನೊಂದಿಗೆ ಬಂದ. ಅವರಿಲ್ಲ ಹೋಗು ಅಂದೆ… ಅವರಿಬ್ರೂ ಸೀದ ಒಳಗಡೆ ಬಂದರು… ನಮ್ಮ ಮನೆಗೆ ಬರೋಕೆ ಯಾರಪ್ಪಣೆ ಯಾಕ ಬೇಕು ಅಂದ್ರು. ನಾನು ಕಾರಣ ಹೇಳಿ ಹೊರಡಿ ಅಂದೆ. ಅದಕಿದ್ದು ಆ ರಾಖೇಶ… (ಅವನಾಡಿದಮಾತು ಕರ್ಣ ಕಠೋರವಾಗಿತ್ತು) ಏಯ್ ವರಲಕ್ಷ್ಮಿ… ಇವ್ರು ಮೈಸೂರು ಕಡೆಯಿಂದ ಬಂದಾರ… ದೊಡ್ ಸ್ರೀಮಂತ್ರು… ಬೇರೆ ಎಲ್ಲೂ ಜಾಗ ಖಾಲಿ ಇರ್‍ಲಿಲ್ಲ… ಅದ್ಕೆ ಕರ್ಕೊಂಡು ಬಂದಿದ್ದೀನಿ… ಇವತ್ತು ರಾತ್ರಿ ನಿನ್ ಜೊತೆ ಮಲಿಕ್ಕೊಂಡಿದ್ದು ನಸುಕ್ನಾಗೆದ್ದು ಹೋಗ್ತಾರೆ; ಎಂದು ನಿರ್ಲಜ್ಜನಾಗಿ ಹೇಳಿದ ಗೊತ್ತೆ! ನಾನು ಪಾದರಕ್ಷೆಯಿಂದ ಹೊಡೆದೂ ಬಡಿದೂ ಅವರೀರ್ವರನ್ನು ಅಲ್ಲಿಂದ ಓಡಿಸಿದೆ. ಆ ನಂತ ಬಂದ ಅವರಿಗೂ ಹೇಳಿದೆ. (ಒಂದು ವಿಚಿತ್ರ ಅಂದರೆ ರಾಖೇಶನೆ ಅವರಿಗೆ ವಿವರಿಸಿ ಹೇಳಿದ್ದ) ಅವರು “ಅವನು ಮಾಡಿದ್ರಲ್ಲಿ ತಪ್ಪೇನಿದೆ? ಅದ್ರಿಂದ ನಿನ್ ಪಾತಿವ್ರತ್ಯ ಹಾಳಾಗ್ತಿತ್ತಾ?… ಎಂದುಬಿಟ್ಟರು. ಇಂಥ ಗಂಡನೊಂದಿಗೆ ಬಾಳುವೆ ಮಾಡುವುದೆಂದರೆ ದಿನಂಪ್ರತಿ ಆತ್ಮಹತ್ಯೆ ಮಾಡಿಕೊಳ್ಳುತ್ತ ಬದುಕುವುದೆಂದೇ ಅರ್ಥ. ಇದೊಂದೆ ಘಟನೆ ಅಲ್ರೀ… ಇಂಥವು ಇದಕ್ಕಿಂಥ ಮಿಗಿಲಾದ ನೂರಾರು ಸಾವಿರಾರು ಘಟನೆಗಳು ಎದೇನ ತುಂಬ್ಕೊಂಡಿವೆ. ಅವನ್ನೆಲ್ಲ ಪರಪುರುಷರಾದ ಅವರ ಗೆಳೆಯರಾದ ನಿಮ್ಮೆದುರಿಗೆ;

ಲೇಖಕರಾದ ನಿಮ್ಮೆದುರಿಗೆ; ಯೋಗ್ಯ ಪತಿ; ಯೋಗ್ಯ ತಂದೆಯಾಗಿರುವ ನಿಮ್ಮೆದುರಿಗೆ; ಹೇಳಲಿಕ್ಕೆ ನಾನು ಸಿದ್ಧಳಿಲ್ಲ. ಇದರಿಂದ ನಿಮ್ಮ ಮನಸ್ಸಿಗೆ ಅಸಹ್ಯವಾಗುತ್ತದೆ… ದುಷ್ಟರೂ, ಒಳ್ಳೆಯವರೂ ಅಂತ ಗುರುತಿಸಲು ಸಾಧ್ಯವೇ ಇಲ್ಲದಂಥ ವ್ಯಕ್ತಿಗಳು ಈ ಭೂಮಿ ಮೇಲೆ ಇರುವರೆಂದು ನಿಮಗೆ ಅರ್ಥ ಅಗುವುದೇ ಇಲ್ಲ. ಹೇಳಿಕೊಂಡರೆ ಹೋಗೋದು ನಮ್ಮ ಯಜಮಾನರ ಗೌರವ ತಾನೆ… ಎಂದು ಮುಂತಾಗಿ ಆ ತಾಯಿ ಹೇಳಿದ್ದು ಕೇಳಿ ನನಗೊಂಥರಾ ಆಯಿತು. ಆಕೆಯ ಮಾತುಗಳನ್ನು ಯಾವ ರೀತಿ ಪರಿಗ್ರಹಿಸಬೇಕೋ ಅರ್ಥವಾಗಲಿಲ್ಲ.
ತನ್ನ ವಿಧವಾ ಪತ್ನಿಯ ಮಾತು ಕೇಳಿ ಶಾಮಣ್ಣ ಪಾತ್ರವು ಅದ್ಭುತವಾಗಿ ನಕ್ಕಿತು.

“ಹುಚ್ಚಿ… ಹುಚ್ಚೀ… ನಿನ್ನ ಪಾತಿವ್ರತ್ಯದ ಸೋಗನ್ನು ಮುಖವಾಡವನ್ನು ಸಮರ್ಥಿಸಲು ಏನೇನು ಮಾತಾಡ್ದಿಯೇ ಮಾರಾಯ್ತಿ… ಮಹಾ ಪತಿವ್ರತೆಯಾಗಿ ನವೆದವಳಾದ ನೀನೀ ಜುಜುಬಿ ಕಾದಂಬರಿಯೊಳಗೆ ಆಚಂದ್ರಾರ್ಕವಾಗಿ ಉಳಿಯಬೇಕೆಂದು ಹುನ್ನಾರ ಮಾಡಿರುವಿ. ನೀನೊಂದು ರೀತಿಯ ನ್ಯಗ್ರೋಧ ಕಣೇ. ರಾಖೇಶ ಮಾಡಿದ್ರಲ್ಲಿ ತಪ್ಪೇನಿದೆ? ಮಾಡಿಕೊಂಡ ಗಂಡನಿಂದ ಲೈಂಗಿಕ ಸುಖ ಅನುಭವಿಸದಿದ್ದ ನನ್ನ ಗೆಳೆಯನ ಹೆಂಡತಿ ಸಾಕಷ್ಟು ಸುಖ ಪಡೆಯಲಿ ಅಂತ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದರಲ್ಲಿ ತಪ್ಪೇನಿದೆ? ‘ಬಿಟ್ಕೋ ಹೋಗು’ ಅಂತ ನಾನೇ ಕಳಿಸಿದ್ದು. (ನೀನು ಗಿರಾಕಿಯನ್ನು ನೋಡಿ ಒಳಗೊಳಗೆ ಇಷ್ಟಪಟ್ಟಿದ್ದಿರಬಹುದು) ಅವತ್ತು ರಾತ್ರಿ ನೀನಾ ವ್ಯಕ್ತಿಯಿಂದ ಲೈಂಗಿಕ ಸುಖ ಅನುಭವಿಸಿದ್ದಲ್ಲಿ – ನಿನಗೆ ವೈವಾಹಿಕ ಬದುಕು ಅರ್ಥವಾಗುತ್ತಿತ್ತು. ನಿನ್ನ ಗಂಡ ಅರ್ಥ ಆಗುತ್ತಿದ್ದ. ಅನಸೂಯ ಅರ್ಥ ಆಗುತ್ತಿದ್ದಳು. ಮಾನಸಿಕವಾಗಿ ಯಾವ ಸಂಧರ್ಭದಲ್ಲೂ ಪರಪುರಷ ಕೊಡಮಾಡುವ ಲೈಂಗಿಕ ಸುಖದ ಬಗ್ಗೆ ಕಿಂಚಿತ್ತಾದರೂ ಯೋಚಿಸಿಯೇ ಇಲ್ಲವೆಂದು ಹೇಳು ನೋಡೋಣ! ದೇವತಾ ಸ್ತೀಯರು ರಾಕ್ಷಸ ಕುಲದ ಪುರುಷರನ್ನು ಇಷ್ಟಪಟ್ಟಿದ್ದಾರೆ. ರಾಕ್ಷಸ ಸ್ತ್ರೀಯರು ದೇವಲೋಕದ ಪುರುಷರನ್ನು ಇಷ್ಟಪಟ್ಟಿದ್ದಾರೆ. ಅಹಲ್ಯೆ ತನ್ನ ಋಷಿಪತಿಯಿಂದ ದೊರೆಯದಿದ್ದ ಸುಖವನ್ನು ಪತಿವೇಶದ ದೇವೇಂದ್ರನಿಂದ ಪಡೆದಳು. ಹೀಗೆ ನೀನು ಯಾರನ್ನು ಉದಾಹರಣೆ ತಗೋ ಪಾತಿವ್ರತ್ಯವೆಂಬ ಪದ ಯಾವುದೇ ವ್ಯಾಖ್ಯಾನಕ್ಕೆ ನಿಲುಕುವಂಥಾದ್ದಲ್ಲ ಆ ಪದದ ಮೂಲೆಯಲ್ಲೊಂದು ಕಡೆ ಸಾಮರಸ್ಯದ; ಪ್ರೇಮದ ಸಂದೇಶವಿದೆ. ಇವೆರಡು ಇಲ್ಲಾಂದ್ರೆ ವಿವಾಹಿತ ಹೆಣ್ಣೊರ್ವಳು ತನ್ನ ಗಂಡನ ಮೇಲೆ ಪಾತಿವ್ರತ್ಯವೆಂಬ ಅಸ್ತ್ರದಿಂದ ಹಲ್ಲೆ ಮಾಡುತ್ತಾಳೆ ಎಂದೇ ಅರ್ಥ. ನಿಮ್ಮಂಥವರಿಗೆ ತೇಲಲೀಯದ ಮುಳಗಲೀಯದ ಸ್ಥಿತಿ ಅದು ಅನಸೂಯಳ ಬಗ್ಗೆ ವಿಷಕಾರಿದ್ದೀಯಾ ಎಷ್ಟೋ ಸಾರಿ ನೀನು ಬಂದು ಆಕೆ ಮನೆ ಬಾಗಿಲಿಗೆ ಮಣ್ಣು ತೂರಿ ಸರ್ವನಾಶ ಕೋರಿದ್ದುಂಟು. ಆಕೆಯೇ ನನ್ನನ್ನು ಬಯ್ದು ನಿನ್ನೊಂದಿಗೆ ಜೀವಿಸುವಂತೆ ಮಾಡಿದ್ದು. ಆಕೆಯೇ ಏನೇನು ಬೇಕೇನೋ ಅದನ್ನೆಲ್ಲ ಕಳಿಸುತ್ತಿದ್ದುದು. ನಿನಗೆ ಸೀರೆ ಕುಪ್ಪಸ, ನಿನ್ನ ಮಗನಿಗೆ ಬೆಳ್ಳಿ ಉಡುದಾರ, ಕೊರಳಿಗೆ ಚೈನೂ; ಬೆರಳಿಗೆ ಉಂಗುರ, ಮಲಗಿಸಲು ತೂಗಲು ತೇಗದಿಂದ ಮಾಡಲ್ಪಟ್ಟಂಥ ತೊಟ್ಟಿಲು ಎಲ್ಲವನ್ನು ಕಳಿಸಿದ್ದು ಆಕೆಯೇ. ನಿನಗೆ ಎಷ್ಟೋ ಸಂಗತಿಗಳು ಗೊತ್ತಿಲ್ಲ. ವೇತನ ಸ್ತಂಬಿತವಾಗಿ ಅಡಚಣೆಯಿಂದ ನಾನು ಒದ್ದಾಡಿತ್ತಿದ್ದಾಗ ಸಹಾಯ ಮಾಡುತ್ತಿದ್ದವನು ರಾಖೇಶ, ನಾನು ನಿನ್ನನ್ನು ಕೇಳಿದೆ. ನೀನು ಅರ್ಧ ತೊಲೆ ಚಿನ್ನವನ್ನು ಕೊಡಲೂ ಒಪ್ಪಲಿಲ್ಲ. ಆದರೆ ಅದು ಹೇಗೋ ಗೊತ್ತಾಗಿ ಅನಸೂಯಾ ತನ್ನ ಕೊರಳಲ್ಲಿದ್ದ (ಆ ಸಂದರ್ಭದಲ್ಲಿ ಆಕೆಗೂ ಅಡಚಣೆ) ಕಾಸಿನ ಸರವನ್ನು ಕಳಿಸಿಕೊಟ್ಟಳು ನೀನು ನಿನ್ನ ಸೌಭಾಗ್ಯದ ಕುರುಹೆಂದು ಭಾವಿಸುವ ನನ್ನನ್ನು ಮುಂದೆ ಹೇಗೆ ಕಂಡೆ ಅಂತ ನಿನಗೆ ಗೊತ್ತು ತರ್ಕದಿಂದ ಉಪಯೋಗವಿಲ್ಲ ಎಂದು ಶಾಮಣ್ಣ ಪಾತ್ರವು ತಣ್ಣಗೆ ಮಾತಾಡಿತು.

ಆದರ ಮಾತು ಕೇಳಿ ವರಲಕ್ಶ್ಮಿ ಪಾತ್ರವು ನಿಟ್ಟುಸಿರುಬಿಟ್ಟಿತು. ಮೌನವನ್ನವಧರಿಸಿತು. ನಾನು ಯಾರನ್ನೂ ಸಮರ್ಥಿಸುವ ಸ್ಥಿತಿಯಲ್ಲಿರಲಿಲ್ಲ. ಸಂಕಟದ ದೃಷ್ಟಿಯಿಂದ ನಾನು ಉಭಯಚರ ಜೀವಿಯಾಗಿದ್ದೆ.

ಶಾಮಾ ಹೋಗ್ಲಿ ಬಿಡಪ್ಪಾ ಅನುಭವಿಸುತ್ತಿರುವ ವೈಧವ್ಯಕ್ಕೆ ತುಪ್ಪ ಸುರಿಯುವಂಥ ಮಾತುಗಳನ್ನು ಆಡಬೇಡ. ಅದರಿಂದ ಯಾರಿಗೂ ಉಪಯೋಗವಿಲ್ಲ ರಾಖೇಶ ಮಾಡುತ್ತಿದ್ದುದು ತಪ್ಪು. ಅಕ್ಷಮ್ಯ ಅಪರಾಧ ಅವನ ಪ್ರತಿಯೊಂದು ನಡವಳಿಕೆಯನ್ನು ನೀನು ಸಮರ್ಥಿಸುತ್ತ ಒಪ್ಪುತ್ತ ಹೋಗಿದ್ದರಿಂದಲೇ ಅವನು ಇನ್ನೊಬ್ಬರನ್ನು ಕೆಡಿಸುತ್ತ ಹೋದದ್ದು. ಕೆಟ್ಟಿರುವ ಮನುಷ್ಯ ಕೆಡಿಸುತ್ತಲೇ ಹೋಗುತ್ತಾನೆ. ಕಿಲುಬನ್ನು ಗೌರವಿಸುವ ಕೆಲಸ ಮಾಡಬಾರದಿತ್ತು. ನೀನು ಹೇಳಿದ್ದು ಕೇಳಿದ ಮೇಲೆಯೇ ನನಗೆ ಅವನ ಬಗ್ಗೆ ಅಸಹ್ಯ ಹುಟ್ಟಿದ್ದು ಆ॒ ಕೊಳಕನ ಬಗ್ಗೆ ಯಾಕೆ ಅಷ್ಟೊಂದು ಭಾವುಕನಾಗಿ ಮಾತಾಡ್ತೀಯೋ ಅರ್ಥಾಗ್ತಿಲ್ಲ ಅಗತ್ಯಕ್ಕಿಂತ ಹೆಚ್ಚು ಪ್ರಸ್ತಾಪಿಸಿದೀ ಅವನ ಬಗ್ಗೆ ಎಂದು ಹೇಳಿದೆ. ಗೊನೋರಿಯಾನ ಇಲಾಜು ಮಾಡಿಕೊಳ್ಳುವುದರಲ್ಲಿ; ಅನುಭವಿಸುವುದರಲ್ಲಿರೋ ಸುಖ ಯಾವ ಅಧ್ಯಾತ್ಮದಲ್ಲಾಗಲೀ; ಯಾವ ಉಪಾಸನೆಯಲ್ಲಾಗಲೀ ಇಲ್ಲವೆಂದು ಅವನು ಹೇಳಿದ್ದು ನೆನಪಾಗಿ ಅಸಹ್ಯ ಹುಟ್ಟಿತು.

“ಕುಂವೀ… ಅವನ ಬಗ್ಗೆ ಹೇಳಬೇಡವೆಂಬ ನಿರ್ಬಂಧ ವಿಧಿಸಿದರೆ ಇನ್ನು ನನ್ನ ಬಗ್ಗೆ ಹೇಳಿಕೊಳ್ಳಲಿಕ್ಕೇನು ಉಳಿದಿರ್‍ತದೆ… ಆಮ್ಲಜನಕ ನಿರ್ಗಮಿಸಿದರೆ ಎಷ್ಟೇ ಪ್ರಮಾಣದಲ್ಲಿದ್ದರು ಜಲಜನಕದಿಂದ ಉದಕವಾಗುವುದಿಲ್ಲ. ಕರ್ಷಣ-ವಿಕರ್ಷಣ, ಕ್ರಿಯೆ-ಪ್ರತಿ-ಕ್ರಿಯೆ, ಘಟನೆ-ಪ್ರತಿಘಟನೆ ಇವೆಲ್ಲೆ ಒಂದಕ್ಕೊಂದು ಪೂರಕ… ಒಂದು ಬಿಟ್ಟರೆ ಇನ್ನೊಂದು ಬರುವುದೇ ಇಲ್ಲ. ಆದ್ದರಿಂದ ರಾಖೇಶನನ್ನು ಹೊರತುಪಡಿಸಿದರೆ ನನ್ನ ಪಾತ್ರದಲ್ಲಿ ಶೂನ್ಯ ಆವರಿಸುತ್ತದೆ. ತಂತಿ ಇಲ್ಲದ ವೀಣೆಯನ್ನು ಎಂಥ ವೈಣಿಕನಿಗೂ ನುಡಿಸಲು ಸಾಧ್ಯವಿಲ್ಲ. ನಿಮ್ಮಂತ ಸಾಮಾಜಿಕ ಮಂದಿ ಪ್ಲಸ್ ಅಂತ ತಿಳ್ಕೊಂಡಿರೋದನ್ನ ನಾನು ಮೈನಸ್ ಅಂತ ತಿಳ್ಕೋಳ್ತೀನಿ… ನೀವು ಮೈನಸ್ ಅಂತ ತಿಳ್ಕೊಂಡಿರೋದನ್ನ ನಾನು ಪ್ಲಸ್ ಅಂತ ತಿಳ್ಕೋಳ್ತೀನಿ… ಅಷ್ಟೇ ನಿಮ್ಗೂ, ನನಗೂ ಇರೋ ವ್ಯತ್ಯಾಸ.
ಸಂಕಲನ, ವ್ಯವಕಲನ ಮೇಲ್ನೋಟಕ್ಕೆ ಭಿನ್ನವೆನ್ನಿಸಬಹುದು… ಅವೆರಡು ಕ್ರಿಯೆಗಳು ಪರಸ್ಪರ ಸರಿದೂಗಿಸಲು ಸಮರ್ಥಿಸಲು ಒಂದೊಕ್ಕೊಂದು ಬೇಕೇ ಬೇಕು… ಆದ್ದರಿಂದ ರಾಕೇಶನೆಂಬ ಬೈನಾಕ್ಯುಲರ್ ಮೂಲಕ ನೋಡಿದಾಗ ಮಾತ್ರ ನಾನು ಗೋಚರಿಸುತ್ತೇನೆ.”

“ಆಯ್ತು ಮಾರಾಯ… ಮುಂದಿನದು ಹೇಳಿಬಿಡು ಹೊತ್ತಾಗ್ತಿದೆ. ಮಾಡ್ಲಿಕ್ಕೆ ಸಾಹಿತ್ಯವಲ್ಲದ ಬೇರೆ ಕೆಲಸಗಳು ನೂರಾರಿವೆ. ಕಾದಂಬರಿ ಪ್ರಕಾರಕ್ಕೆ ಒಂದಂಶವಾದರೂ ಬಳಸಬಹುದಾದಂಥ ವಸ್ತು ವಿಶೇಷಣವೇ ನಿನ್ನ ಬದುಕಿನಲ್ಲಿಲ್ಲಪ್ಪಾ… ಬದುಕಿನ ನಿರ್ದಿಷ್ಟ ಸೂತ್ರಗಳೇ ತಲೆಕೆಳಗಾಗುತ್ತಿವೆ… ಯಾರು ಹೀರೋ! ಯಾರು ವಿಲನ್ನೋ? ಒಂದೂ ತಿಳೀವಲ್ದು”.

“ಕಾದಂಬರಿಯ ಕೇಂದ್ರ ವಸ್ತುವಾಗಿರುವ ನಾನಾಗಲೀ ನನ್ನ ಬದುಕಾಗಲಿ ನಾಯಕ ಸ್ಥಾನಕ್ಕೆ ಏರಲಾರದು… ಕಾದಂಬರಿ ನಾಯಕ ಗುಣಗಳು ಪ್ರಕಟಗೊಳಿಸಬಹುದಾದ ಪಾತ್ರಗಳೆಂದರೆ ಒಂದು ರಾಖೇಶ… ಇನ್ನೊಂದು ಅನಸೂಯ… ನೀನು, ನಿನ್ನಂಥವರು ತಿಳಿದುಕೊಂಡಷ್ಟು ಸರಳವಲ್ಲ ಆ ಪಾತ್ರ. ಕಾದಂಬರಿಯೊಳು ಪೆರರಾರುಮನ್ ನೆನೆಯದಿರು ನೆನೆವೊಡೆ… ರಾಖೇಶನಂ ನೆನೆ; ರಾಖೇಶನ ಕಡುನನ್ನಿ; ರಾಖೇಶನ ಚಾಗ, ರಾಖೇಶನ ಭೋಗ… ರಾಖೇಶನ ರಸಾಯನದಿಂದಮಲ್ತೆ ಶಾಮಣ್ಣ ಕಾದಂಬರಿಯಂ ಎಂದು ಹೇಳಬಹುದು… (ನೀನು ಅನಸೂಯಳ ಬಾಯಿಯಿಂದ ಪಂಪಭಾರತ ಕೇಳಬೇಕು… ಹ್ಹಾಹ್ಹಾ… ಅದೊಂದು ಅದ್ಭುತ ಅನುಭವ) ನಾಯಕನಲ್ಲಿ ಪ್ರಕಟವಾಗಬೇಕಾದ ಉದಾತ್ತ ಗುಣಗಳು ರಾಖೇಶನಲ್ಲಿ ಎಲ್ಲಿ ಪ್ರಕಟವಾಗಿವೆ ಎಂದು ನೀನು ಈಗಾಗಲೇ ಗುರುತಿಸಿರಬಹುದು. ಯಾವ ಟೀಕಾ ಭಾಷ್ಯಾ… ವ್ಯಾಖ್ಯಾನಗಳಿಗೆ ನಿಲುಕದ ವ್ಯಕ್ತಿತ್ವ ಪಡೆದಿರುವ ಅನಸೂಯಳಲ್ಲೂ ನೀನು ನಾಯಕಿಯ ಗುಣಗಳನ್ನು ಪತ್ತೆ ಹಚ್ಚಿರಬಹುದು. ಈಗಾಗಲೇ ಗುರುತಿಸಿರಬಹುದು. ನನ್ನ ಮೂಲಕ ಅವರೀರ್ವರನ್ನು ನೋಡುವ (ದರ್ಶಿಸುವ) ಪ್ರಯತ್ನ ಮಾಡು… ಯಾರು ಯಾರಲ್ಲಿ ಪ್ರಕಟವಾಗುವುದೋ ಯಾರಿಗೂ ತಿಳಿಯದು! ಆಲದ ಮರದ ಸುಳಿಯಿಂದ ಬೇವಿನ ಮರ ಚಿಗುರೊಡೆದು ಬೆಳೆಯಬಹುದು. ಬೇವಿನ ಮರದೊಳಗೆ ಮತ್ತಾವುದೋ ಒಂದು ಮರ… ನೆಲದಡಿ ಹರಿದು ಕೊನೆಗೆ ದೂರದಲ್ಲೆಲ್ಲೋ ಕೊನರುವ ಹಸಿರಂತೆ… ಮನುಷ್ಯ ಸರ್ವನ್ನೊಂದು ಪ್ರಾಣಿಗಳ ಮೇಲೋಗರವಲ್ಲವೆ… ಆದ್ದರಿಂದ ಯಾರನ್ನೇ ಆದರೂ ನಿರ್ದಿಷ್ಟ ಪ್ರಕಾರದ ಷೋಕೇಸ್‌ನಲ್ಲಿಟ್ಟು ನೋಡುವುದು ಸರಿಕಾಣದು ಎಂದು ಭಾವಿಸುತ್ತಿರುವೆ. ಕಾದಂಬರಿಯ ನಾನಲ್ಲ, ಬರೆಯುವ ನೀನು ಖಂಡಿತ ಅಲ್ಲ… ಎಂದು ಶಾಮಣ್ಣ ಪಾತ್ರವುಲೆಖಕನಾದ ನನ್ನನ್ನು ನೆನೆಗುದಿಗೆ ಸಿಲುಕಿಸಿತು.

ನನ್ನ ಪರಮ ಮಿತ್ರನಾದ ಶಾಮಂಣನಿಗೆ ಕಥಾನಾಯಕನ ಸ್ಥಾನ ಕೊಟ್ಟು ಕಾದಂಬರಿಯೊಂದನ್ನು ಬರೆಯಬೆಕೆಂದು ನಿರ್ಧರಿಸಿದ್ದು, ಆ ದಿಸೆಯಲ್ಲಿ ತೊಡಗಿದೆ ಕೂಡ. “ಕಾದಂಬರಿ ಬರೆಸಿಕೊಳ್ಳುವಂಥಾದ್ದಾದ್ರು ಅವನ ಬದುಕಿನಲ್ಲೇನೈತಿ? ಅಂಥವನು ಎಂದೆಂದೂ ಯಾರ ಹೊಟ್ಟೆಯಲ್ಲಿ ಹುಟ್ಟಬಾರ್ದು… ಮುಂದೆ ಆ ಶಾಮಾ ಶಾಸ್ತ್ರಿಯಂಗೇನಾದ್ರೂ ಆದಿಗೀದೀಯಾ ಎಂಬೊಂದು ನಾಣ್ಣುಡಿಯನ್ನೇ ಹುಟುಹಾಕುವಂಥ ಮನುಷ್ಯನವನು” ಎಂದು ಮುಂತಾಗಿ ಅವರಿವರು ಬರವಣಿಗೆ ಮೇಲೆ ಕಲ್ಲು ಹಾಕಲು ಪ್ರಯತ್ನಿಸಿದ್ದುಂಟು. ಯಾರ ಬದುಕಿನಲ್ಲಿರದ ವಿಶೇಷಗಳು ನಮ್ಮ ಶಾಮನ ಬದುಕಿನಲ್ಲಿವೆ ಎಂದೆನಿಸಿತ್ತು. ನಾಯಕನ ಗುಣಗಳೊಂದಿಗೆ ಪ್ರತಿನಾಯಕನ ಗುಣಗಳನ್ನೂ ಹಲವು ಸುಳ್ಳುಗಳ ಸಹಾಯದಿಂದ ಬೆರೆಸಿ ರಸವತ್ತಾಗಿ ಹೇಳುವನೆಂದುಕೊಂದಿದ್ದೆ. ಜನಪ್ರಿಯ ಕಾದಂಬರಿಯಲ್ಲಿ ಬರುವ ಒಳ್ಳೆಯವರು, ಕೆಟ್ಟವರು, ಸೂಳೆಗಾರಿಕೆ, ಕಳ್ಳತನ ವಿಲ್ವಾರಿ, ಸಾವು, ಬದುಕು, ಮೊದಲಾದ ರಂಜನೀಯಾಂಶಗಳು ಅವನ ಬದುಕಲ್ಲೂ ಇರುವುದರಿಂದ, ಜೊತೆಗೆ ಅವನೇ ಅಮಿತಭ್ ಬಚ್ಚನ್ ಶೈಲಿಯಲ್ಲಿ ನಿರೂಪಿಸಲಿರುವುದರಿಂದ ಕಾದಂಬರಿ ಬಿಸಿಬಿಸಿ ಮಸಾಲೆ ಥರ ಝಮಾಡಿಸಬಹುದೆಂದುಕೊಂಡಿದ್ದೆ. ಆದರೆ ಅವನು ಹೇಳಿದ್ದಾರೂ ಏನು? ನಾನು ಬರೆದಿದ್ದಾರೂ ಏನು? ಏನೋ ಒಂದು ಸಪ್ಪನೆ ಬೇಳೆಯನ್ನೇ ನಾಯಕನೆಂದು ಓದುಗರು ಭಾವಿಸಿಕೊಂಡು ಹಾಳಾಗಿಹೋಗಲಿಎಂದು ನಿರ್ಧರಿಸುವಷ್ಟರಲ್ಲಿ, “ರಾಖೇಶನನ್ನು; ಅನಸೂಯಳನ್ನು ನಾಯಕ ಕೂಡ್ರಲಿಕ್ಕರೋ ಕುರ್ಚಿಯಲ್ಲಿ ಕೂಡ್ರಿಸು” ಎಂದು ಬೇರೆ ವಕಾಲತ್ತು ಮಾದುತ್ತಿರುವನು. ಇದನ್ನು ಉಗುಳುವಂತಿಲ್ಲ… ನುಂಗುವಂತಿಲ್ಲ… ಫಜೀತಿಗಿಟ್ತುಕೊಂಡಿತು. ನನಗೆ –

“ಆಯ್ತು ಮಾರಾಯಾ… ಕಾದಂಬರಿಕಾರನೇ ನಾಯಕನೆಂದ್ಕೊಂಡು ಯಾವ ನರಕಕ್ಕೆ ಹೋಗ್ಲಿ… ನಿನ್ನಿಂದಾಗಿ ಇಡೀ ಕಾದಂಬರಿಯ ಗೇರೇ ಬದಲಾಯಿಸಿತು. ಅಂತೂ, ಇಂತೂ ಕಾದಂಬರಿಯ ಕೊನೆಯ ಘಟ್ಟಕ್ಕೆ ಬಂದಂತಾಯಿತು. ಏನಾದ್ರು ಫೈಟಿಂಗೋ, ಕ್ಲೈಮಾಕ್ಸೋ ಬರಿದೆಯಾ ನಿನ್ನ ಜೀವನದಲ್ಲಿ… ಅವೆರಡಿದ್ರೆ ನೋಡಪ್ಪಾ… ಕಾದಂಬರಿ ಸೂಪರ್ ಹಿಟ್… ಸಿನಿಮಾ ಮಾಡಿದ್ರೆ ನಿನ್ನ ಪಾತ್ರವನ್ನು ಅನಂತ್‌ನಾಗ್ ಮಾಡಬೌದು… ಅಷ್ಟೊತ್ತಿಗೆ ಅವ್ರೂ ರಾಜಕೀಯದಿಂದ ಬೇಸತ್ತುಕೊಂಡು ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಫ್ರೀಯಾಗಿರ್‍ತಾರೆ… ಮೈಚಳಿ ಬಿಟ್ಟು ನಿನ್ನ ಪಾತ್ರದಲ್ಲಿ ಅಭಿನಯಿಸಬೌದು… ಆಗ ತ್ರಿಶಂಕು ಸ್ಥಿತಿಯಲ್ಲಿರೋ ನೀನೂ ಸಿನಿಮಾ ನೋಡಿ ಸಂತೋಷಪಡ್ತೀಯಾ, ತಿಕಕ್ಕೆ ಗೆದ್ದಲು ಹತ್ತಿಸಿಕೊಂಡು ಬರೆದಿರೋ ನಾನು ಆರಾಮಶೀರು ಫ್ಯಾನ್ ಗಾಳಿಗೆ ತಲೆ ಬಿಟ್ಕೊಂಡು ಕೂತಿರ್‍ತೀನಿ… ಇದ್ಕೆ ಸರಿಯಾಗಿ ಒಂದೆರಡು ಫೈಟ್ ಇರೋ ಕ್ಲೈಮಾಕ್ಸ್ ಹೇಳಿ ಪುಣ್ಯ ಕಟ್ಕೋ… ನೀನು ಮಾಡಿರದಿದ್ರು ಸುಳ್ಳು ಹೇಳು ಪರವಾಗಿಲ್ಲ… ಹುಸಿ ಬದುಕನ್ನು ಬದುಕ್ತಿರೋ ವರ್ತಮಾನಕ್ಕೆ ಇದ್ರಿಂದ ರೋಮಾಂಚನವಾಗಬೌದು! ಏನಂತೀಯಾ?” ಎಂದು ಪೂಸಿ ಹೊಡೆದೆ.

ಅದಕ್ಕೆ ಶಾಮಣ್ಣ ಪಾತ್ರವು ಎಲಾ ದುಷ್ಟಾ ಎಲ್ಲಿಂದೆಲ್ಲಿಗೆ ನಿಚ್ಚಣಿಕೆ ಹಾಕಿದ್ದೀಯಲ್ಲೋ?” ಎಂದು ಪಕಪಕ ನಗಾಡಿತು.

“ನಿನ್ನ ಸಿನಿಮಾ ಕಲ್ಪನೆಗಿಷ್ಟು ಬೆಂಕಿ ಬೀಳ್ಲಿ… ಹಾಗೆನಾದ್ರು ಹೇಳಿದ್ರೆ ನಿನ್ಗೂ ನನ್ಗೂ ಛೀ! ಥೂ! ಅಂತ ಮಂದಿ ಉಗೀತಾರಷ್ಟೇ… ಸತ್ತ ಮೇಲಾದ್ರೂ ನಾನು ತಲೆ ಎತ್ಕೊಂಡು ತಿರುಗಾಡಬಾರ್ದೇನೋ! ನಾನು ಹೆಳ್ತಿರೋದೇನಾದ್ರು ತಿರುಚಿ ಬರ್ದೀಯಾ ಹುಷಾರಣ್ಣ…” ಎಂದು ಎಚ್ಚರಿಸಿತು.

ಪ್ರವರ ಅಲಿಯಾಸ್ ನಿರ್ವಾಣ ಅಂಬೆಗಾಲಿಕ್ಕುತ್ತ ನನ್ನ ಕಡೆಗೆ ಬರುತ್ತಿದ್ದ. ಅವರ ನರಕಕ್ಕೆ ತೊಂದ್ರೆ ಕೊಡಬೇಡ ಬಾರೋ ‘ಮುಠ್ಥಾಳ’ ಎಂದು ಕೂಗುತ್ತ ಬಂದು ಅನ್ನಪೂರ್ಣ ಅವನನ್ನು ಎತ್ತಿಕೊಂಡು ಹಿತ್ತಿಲು ಕಡೆ ಹೋದಳು.
*
*
*
ನನ್ನ ಕಥೆ ಎಲ್ಲಿವರೆಗೆ ಬಂತಪ್ಪಾ ಮಹನುಭಾವ.

ಈಗಾಗಲೆ ರಾಖೇಶ ತನ್ನ ಉಪದ್ವಾಪಿತನದೊಂದಿಗೆ ತನ್ನ ಜೀವನದ ಗೆಳೆಯನಾದದ್ದಾಯಿತು. ಅನಸೂಯ ಪರಿಚಯ ಆದದ್ದಾಯಿತು. ಪರಿಚಯ ಪ್ರಣಯಕ್ಕೆ ತಿರಿಗಿಕೊಂಡದ್ದಾಯಿತು. ಮಹಾಧಿವೇಶನದ ಕಾರ್ಯಕ್ರಮಗಳು ನಡೆದು ನಾನು ಸುವರ್ಣಪದಕ ಸ್ವೀಕರಿಸಿದ್ದಾಯಿತು, (ಸುವರ್ಣ ಪದಕ ಅಂದರೆ ಸುವರ್ಣ ಪದಕ ಅಲ್ವೋ ಅದು; ಸುವರ್ಣ ಲೇಪನದ ಅಲ್ಯೂಮಿನಿಯಂ ತಗಡದು! ಒಂದಿನ ಕಾಸು ಇಲ್ಲದೆ ಪರದಾಡುತ್ತಿದ್ದ ನಾನು ಅದನ್ನು ಗಿರವೀ ಇಡಲೆಂದೋ; ಮಾರಲೆಂದೋ ಪ್ರಸಿದ್ಧ ಲೇವಾದೇವಿಗಾರ ಪೊಬ್ಬತ್ತಿ ವೆಂಕಣ್ಣ ಶೆಟ್ಟಿಯವರ ಬಳಿಗೊಯ್ದು ತೋರಿಸಿದ್ದೆ. ಶೆಟ್ರು ಅದನ್ನು ತಿಕ್ಕಿ ನೋಡಿ… ಇದು ಐದು ರುಪಾಯಿಗೂ ಬೆಲೆಬಾಳುವುದಿಲ್ಲವೆಂದು ಹೇಳಿ ಅಂಗಳಕ್ಕೆ ಎಸೆದಿದ್ದರು. ಅದನ್ನು ಬಿಳಿ ಜೋಳದ ರೊಟ್ಟಿ ಚೂರೆಂದು ಭಾವಿಸಿ ಆಸೆಯಿಂದ ಓಡಿಬಂದ ಬೀದಿ ನಾಯಿ ಅದನ್ನು ಮೂಸಿ ಮುಖ ಸಿಂಡರಿಸಿಕೊಂಡು ವಾಪಸು ಹೋಯಿತು) ಯಶಸ್ವಿಯಾಗಿ ಸಂಗ್ಯಾಬಾಳ್ಯಾ ನಾಟಕವನ್ನು ಆಡಿ ಸೈ ಎನ್ನಿಸಿಕೊಂಡದ್ದಾಯಿತು. ನಾನು ಬಹುಪಾಲು ಸಂಕೋಚ, ಲಜ್ಜೆ, ಸ್ವಾಭಿಮಾನ ಮತ್ತೆಲ್ಲವನ್ನು ದೂರ ಸರಿಸಲಾರಂಭಿಸಿದ್ದೆ. ನನ್ನ ನಾಲಿಗೆ ಅಮೇಧ್ಯ ತಿನ್ನಲು ಹಾತೊರೆಯುತ್ತಿತ್ತು. ಮದ್ಯ ಸೇವನೆ ಮಾಡಲು ನಾಲಿಗೆ ಕುಣಿಯುತ್ತಿತ್ತು. ಇವೆಲ್ಲವುಗಳ ಜೊತೆಗೆ ಇಸಿಪೀಟು, ಮಟಕಾ ಆಡತೊಡಗಿದ್ದೆ. ನಾಯಿ ನೆರಳಾಗಿದ್ದ ರಾಖೇಶ ನನಗೆ ದಿನಕ್ಕೊಂದಾದರೂ ದುರಭ್ಯಾಸ ಕಲಿಸಲು ಪಣತೊಟ್ಟಿರುವವನಂತೆ ವರ್ತಿಸತೊಡಗಿದ್ದ. ಅವನಾಡುತ್ತಿದ್ದ ಪ್ರತಿಯೊಂದು ಮಾತು ಅಲಿಖಿತ ವೇದಗಳಿಂದ ಆರಿಸಿಕೊಂಡಿರುವಂತಿದ್ದುವು ಎಂದು ಭಾವಿಸಿ ಗೌರವಿಸಿ ಅದನ್ನು ಚಾಚೂ ತಪ್ಪದೆ ಪಾಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೆ. ಅಷ್ಟೊತ್ತಿಗೆ ಗೌರವ ಪೂರ್ವಕವಾಗಿ (ಧರ್ಮಪತ್ನಿಯಂತೆ ದೇಹ ಒಪ್ಪಿಸುತ್ತಿದ್ದ) ಒಪ್ಪಿಸುತ್ತಿದ್ದ ಅನಸೂಯಾಳ ಸುಂದರ ದೇಹದ ಬಗ್ಗೆ ಆಸಕ್ತಿಯ ಒಂದು ಭಾಗ ಕಡಿಮೆಯಾಗಿತ್ತು. ಅಚ್ಚುಕಟ್ಟಾಗಿ ಸ್ಪಂದಿಸುತ್ತಿದ್ದರೆ ಅಂಥವರ ಬಗ್ಗೆ ಕುತೋಹಲ ಉಳಿಯುವುದಾದರೂ ಹೇಗೆ? ಒಂದೇ ಪಟ್ಟು ಕಲಿತ ಯಾವೊಬ್ಬ ಪೈಲ್ವಾನನೂ ಯಶಸ್ವಿ ಕುಸ್ತಿಪಟು ಆಗಲಾರನೆಂದೂ, ವಿವಿಧ ಪಟ್ಟುಗಳನ್ನು ಕಲಿತಾಗಲೇ ಮಾತ್ರ ಅವನು ಪರಿಶೆ ಪೈಕಿ ಪೈಲ್ವಾನನೆಂದೆನಿಸಿಕೊಳ್ಳುವನೆಂದೂ ವರ್ಣನ ಮಾಡಿ ಹೇಳುತ್ತಿದ್ದ ರಾಖೇಶ ನನ್ನನ್ನು ವಿವಿಧ ವಯೋಮಾನದ, ವಿವಿಧ ಮನೋಮಾನದ ವೇಶ್ಯೆಯರ ಬಳಿಗೊಯ್ದು ಬಿಟ್ಟು ಖುಷಿಪಡುತ್ತಿದ್ದ. ಆಗ ನಾನು ಕೊಟ್ಟದ್ದು ಅವರು ಇಸಿದುಕೊಂಡಷ್ಟು. ಅದರ ಫಲವಾಗಿ ನಾನು ಅನೇಕ ಸುಖವ್ಯಾಧಿಗಳಿಗೆ ಆಶ್ರಯದಾತನಾದೆ. (ಮುಂದೆ ದುಡ್ಡಿರದಿದ್ದಾಗ ಅವರವರ ಚಿತ್ರ ಬರೆದೋ, ಅವರವರ ಇಚ್ಛೆಗೆ ತಕ್ಕಂತೆ ಪದ ಹಾಡಿಯೋ; ಅವರವರ ಇಚ್ಛೆಗೆ ತಕ್ಕಂತೆ ಚೌಪದಿಗಳನ್ನು ಬರೆದೋ ದೇಹದ ತೀಟೆ ತಣಿಸಿಕೊಳ್ಳುತ್ತಿದ್ದುದೂ ಉಂಟು.) ಒಳ್ಳೆಯ ಆರೆಂಪಿ ಏಳೆಂಪಿ ವೈದ್ಯರನ್ನು ಹುಡುಕಿಕೊಂಡು ಹೋಗಿ ಇಲಾಜು ಮಾಡಿಸಿಕೊಳ್ಳುತ್ತಿದ್ದೆ. ಧರ್ಮ ವ್ಯಾಧನಿಗೂ, ಸುಖವ್ಯಾಧನಿಗೂ ನಡುವೆ ವ್ಯತ್ಯಾಸವಿಲ್ಲವೆಂದುಕೊಂಡೆ. ಅಳುಕಿನಿಂದ (ಪತ್ನಿಯನ್ನೂ; ಅನಸೂಯಳನ್ನೂ ಬಲವಂತ ಸಂಭೋಗ ಮಾಡಿ ರೋಗಗಳನ್ನು ಹರಡು ಎಂದು ರಾಖೇಶ ಪುಸಲಾಯಿಸುತ್ತಿದ್ದುದನ್ನೂ ಲೆಕ್ಕಿಸದೆ) ನಾನು ಹೆಂಡತಿಯೊಂದಿಗಾಗಲೀ, ಅನುಸೂಯಳೊಂದಿಗಾಗಲೀ ದೈಹಿಕ ಸಂಬಂಧ ಇಟ್ಟುಕೊಳ್ಳದೆ ದೂರ ಉಳಿಯುವ ಪ್ರಯತ್ನ ಮಾಡುತ್ತಿದ್ದೆ. ಕಾಮ ತಣಿಸಿಕೊಳ್ಳಲು; ವರ್ತಮಾನದ ಬೇಗುದಿ ಮರೆಯಲು ಹೆಣಗಾಡುತ್ತಿದ್ದ ನನ್ನನ್ನು ಲಚುಮವ್ವನ ತೋಪಿಗೆ ಕರೆದೊಯ್ದು ರಾಖೇಶ ಹಲವು ಮಂದಿ ಸಾಧೂ ಮಹರಾಜಾಧಿರಾಜರನ್ನು ಪರಿಚಯಿಸಿದ್ದ. ಅವರೂ ನನ್ನ ಹಾಗೆ ಏನೆಲ್ಲ ಕಲಿತು ಹಾಳಾಗಿ ಸಾಧು ಪಟ್ಟ ಕಟ್ಟಿಕೊಂಡಂಥವರೇ. ಅವರು ನನಗೆ ಗುಡುಗುಡಿ ಸೇದುವುದು ಕಲಿಸಿದರು. ಎಷ್ಟೊಂದು ಚಟಗಳು? ಎಷ್ಟೊಂದು ಅನುಭವಗಳು! ಅವುಗಳ ಮೊಣಕಾಲಿಗೂ ನನ್ನ ಪಗಾರ ಸಾಲದಾಯಿತು. ಅವನು ಪರಿಚಯಿಸಿದ ಲೇವಾದೇವಿ ಮಹಾತ್ಮರಿಂದ ವಾರದ ಬಡ್ಡಿ ಸಾಲ ಮಾಡತೊಡಗಿದೆ. ಅವರಿಂದ ತಲೆಮರೆಸಿಕೊಳ್ಳತೊಡಗಿದೆ… ಎರಡನೆ ಬಾರಿಗೆ ಗರ್ಭಿಣಿಯಾಗಿ ಹೆಂಡತಿ ವರಲಕ್ಷ್ಮಿ ಹಾಲು ಹೈನವಿಲ್ಲದೆ ಸಪ್ಪನೆ ಕೂಳು ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದಳು. ಅವಳು ನನ್ನೊಂದಿಗೆ ಮಾಡುತ್ತಿದ್ದ ಜಗಳ ಅರಣ್ಯರೋದನವಾಗಿತ್ತು. ಈ ಎಲ್ಲ ಸುಖಕಾರ್ಪಣ್ಯಗಳಿಂದ ಮುಕ್ತಿಯ ಶಾಂಪಲ್ ನೋಡಲು ರಾಖೇಶನ ಸಲಹೆಯ ಮೇರೆಗೆ ಬ್ಯಾಂಕಿನಲ್ಲಿ ಲೆಕ್ಕ ಹೆಚ್ಚು ಕಡಿಮೆ ಮಾಡಿ ನೂರೋ ಇನ್ನೂರೋ ಕದಿಯ ತೊಡಗಿದೆ… ಇವಿಷ್ಟು ಅನಂತರದಲ್ಲಾಗಿದ್ದ ಕೆಲವು ಪ್ರಮುಖ ಬದಲಾವಣೆಗಳು… ಊಹೆ ನಿರೀಕ್ಷೆಗೂ ಮೀರಿ ನಾನು ಸಮಾಜದ ಉಪೇಕ್ಷ್ರೆ ತುತ್ತಾಗಿದ್ದೆ. ಮತ್ತು ಹೆಚ್ಚಿನ ತಿರಸ್ಕಾರ , ಥೂ, ಹಲ್ಲೆಗಳಿಗೆ ತುತ್ತಾಗಬೇಕಾದರೆ ಯಾವ ಯಾವ ತಪ್ಪುಗಳನ್ನು, ಅಪರಾಧಗಳನ್ನು ಮಾಡಬೇಕೆಂದು ಯೋಚಿಸುತ್ತಿದ್ದೆ. ಇಂಥದೊಂದು ಆಲೋಚನೆಗಳಿಗೆ ಅಡಿಕ್ಟ್ ಆಗಿದ್ದ ನಾನು, ಆ ಕುರಿತು ರಾಖೇಶನ ಬಳಿ ಅಂಗಲಾಚುತ್ತಿದ್ದೆ ಮಗುವಿನಂತೆ. ಆಗ ಅವನು ಧ್ಯಾನಸ್ಠ ಮುಖಮುದ್ರೆ ಮಾಡಿಕೊಳ್ಳುತ್ತಿದ್ದ. ಹೇಳುವ ಗಳಿಗೆ ಮುಂದೂಡಿ ಗೋಳಾಡಿಸುತ್ತಿದ್ದ. ಆದರೂ ವರ ಕೊಟ್ಟಂತೆ ಕೊನೆಗೂ ಹೇಳುತ್ತಿದ್ದ. ಅದನ್ನು ಯಶಸ್ವಿಯಾಗಿ ಆಚರಣೆಗೆ ತರಲು ಎಟಕುವ, ಎಟುಕದ ಎಲ್ಲಾ ಮಾರ್ಗಗಳನ್ನು ಅವಲಂಬಿಸುತ್ತಿದ್ದೆ.

ಪಶುಪತಿ ಎಂಬ ಕಾಂರೇಡನ ಐವತ್ತು ಸಾವಿರ ರೂಪಾಯಿ ಸಾಲಕ್ಕೆ ನಾನು ಸ್ಯೂರಿಟಿ ನೀಡಿದ್ದುದು ನಿನಗೆ ನೆನಪಿರಬೇಕಲ್ಲವೆ? ಕೊಟ್ಟೋನು ಕೋರಭದ್ರ ಇಸಿದುಕೊಂಡೋನು ಈರಭದ್ರ ಅಂತಾರಲ್ಲ… ಹಾಗೆ! ಯಾವ ಉದ್ದೇಶಕ್ಕೆ ಸಾಲ ಪಡೆದಿದ್ದನೋ, ಅವರವರಿಗೆ ಟೋಪಿ ಹಾಕಿ ಹಣ ಸಂಗ್ರಹಿಸಿದ್ದನೋ ಆ ಉದ್ದೇಶಕ್ಕೆ ಅದನ್ನು ಬಳಸದೆ ಅವನು ಬೆಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿ ತನಗಾಗಿ ಕಾಯುತ್ತ ನಿಂತಿದ್ದ ಸೋಫಿಯಾ ಎಂಬ ತರುಣಿಯೊಂದಿಗೆ ಚಕ್ ಬುಕ್ ಚಕ್ ಬುಕ್ ಏರಿ ಬೊಂಬೈ ಸೇರಿಕೊಂಡು ಬಿಟ್ಟಿದ್ದ. ಮಸೀದಿಗಳ ವಿರುದ್ಧ ಹೋರಾಡುವ ಮುಸ್ಲಿಮರ ವಿರುದ್ಧ ಮಾತಾಡುತ್ತ ಆಚಾರ್ಯ ಹಾಜಿ ಮಸ್ತಾನರನ್ನೂ; ರಾಮಜನ್ಮಭೂಮಿ ವಿರುದ್ಧ ಮಾತಾಡುವ ಬ್ರಾಹ್ಮಣರ ವಿರುದ್ಧ ಮಾತಾಡುತ್ತ ಜನಾಬ್ ಬಾಳಾಠಾಕ್ರೆಯವರನ್ನು ಏಕಕಾಲಕ್ಕೆ ಪರಿಚಯ ಮಾಡಿಕೊಂಡ. ನಾಯಕರ ಬೋಳುದಲೆಗಳ ಮೇಲೆ ಕೈ ಆಡಿಸುತ್ತ ಒಂದಿಷ್ಟು ಕಾಸು ಮಾಡಿಕೊಂಡ. ಜೊತೆಯಲ್ಲಿ ಸಹಾಯಕಳಂತಿದ್ದ ಮಾದಕ ಕಣ್ಣುಗಳುಳ್ಳ ಸೋಫಿಯಾಳನ್ನು ಪ್ರಸಿದ್ಧ ನಿರ್ಮಾಪಕ ಸುಖಾಡಿಯಾರ ಬೆಂಜ್ ಕಾರಿಗೆ ತೂರಿಸಿ ತಾನೂ ಒಂದು ಸೆವೆಂಟ್ ಮಾಡೆಲ್ ಫೀಯೆಟ್ ತಗೊಂಡ. ಬೆಳೆಗ್ಗೆ ದಾದರ್‌ನಲ್ಲಿದ್ದರೆ ಮಧ್ಯಾಹ್ನ ಇರುತ್ತಿದ್ದುದು ಕಲ್ಯಾಣದಲ್ಲಿ; ಸಾಯಂಕಾಲ ಜುಹುದಲ್ಲಿದ್ದರೆ, ರಾತ್ರಿ ಬೊರಿವಿಲಿಯಲ್ಲಿರುತ್ತಿದ್ದ. ಅವನು ಬ್ಯಾಂಕಿನ ಲೀಗಲ್ ಅಡ್ವೈಸರ್ ಖರಬಂಡಾರಿಂದ ತಿಂಗಳಿಗೊಂದಾವರ್ತಿಯಂತೆ ವಾಯು ಪ್ರಯಾಣದ ಮೂಲಕ ಹೋಗುತ್ತಿದ್ದ ನೋಟೀಸುಗಳನ್ನು ಹೇಗೆ ಪಡೆದಾನು! ತಾಷ್ಕೆಂಟಿನಿಂದ ಹೊರಟ ಬೋಯಿಂಗ್ ಪೂರ್ವಾಚಲಗಳಿಗೆ ಬಡಿದುನಡೆದ ಅಪಘಾತದಲ್ಲಿ ಸತ್ತ ಐವತ್ತೇಳು ಮಂದಿ ಪೈಕಿ ಪಶುಪತಿ ಎಂಬ ಸಚ್ಚಿದಾನಂದ ಸ್ವರೂಪಿಯಾದ ಕಾಮ್ರೇಡೋರ್ವ ಇದ್ದ ಎಂಬ ಲಕೋಟೆ ಬಂತು. ಪರೋಪಕಾರರ್ಥಮಿದಂ ಶರೀರಂ ಅಂತ ಬಗುಳೆ ಬಿಡ್ತಿದ್ದೀಯಲ್ಲ… ಕಟ್ಟಲೆ ನನ ಮಗ್ನೇ ಎಂದದು ನನ್ನ ಕೊರಳು ಸುತ್ತಿಕೊಂಡಿತು. ನನ್ನ ಪಗಾರದ ಮುಕ್ಕಾಲು ಭಾಗ ಅದರ ಕಂತಿಗೇ ಹೋಗತೊಡಗಿತು. ನಾನೀ ಸಂದರ್ಭದಲ್ಲಿ ಒಣ‌ಒಣ ಭಣಭಣ ಆಗಿರುವಾಗಲೇ ಗರ್ಭಿಣಿ ವರಲಕ್ಷ್ಮಿ ‘ಥೂ ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕ’ ಎಂದು ತುಟಿ ಜಾರಿ ಅಂದು ಬಿಟ್ಟಳು. ನಂತರ ನನ್ನ ಮಾತಿನ ಅರ್ಧ ದುರಭ್ಯಾಸಗಳಿಗೆ ಬೆಂಕಿ ಬೀಳಲಿ ಎಂಬುದಾಗಿತ್ತು ಅಂಥ ಸಮರ್ಥಿಸಿಕೊಂಡಳು. ದುಶ್ಚಟಗಳ ಪಾದ್ಧೂಳೊಳಗೆ ಹೊರಳಾಡುತ್ತಿರುವ ನಮ್ಮವನಲ್ಲದ ಶಾಮನಿಗೇ ಬೆಂಕಿ ಬಿದ್ದದ್ದರಿಂದಾಗುವ ನಷ್ಟವೇನು ಎಂದು ಮುಂತಾಗಿ ಹಿಂದಿನ ದಿನ ಬಂದಿದ್ದ ತಾಯಿ ಕೆಕ್ಕರಿಸಿ ಮಾತಾಡಿದಳು… ಅದಕ್ಕೆ ಪೆಟ್ರೋಲು ಸುರಿಯುವವನಂತೆ ಬಂದ ರಾಖೇಶ “ಅನಸೂಯಮ್ಮಗೆ ನೀನು ಈಗಿಂದೀಗ್ಲೆ ನೀನು ಬೇಕೇ ಬೇಕಂತೆ ಹೊರಡು” ಎಂದು ಹೇಳಿದ. ಅತ್ತೆ ಸೊಸೆಯರೀರ್ವರು ಗುಡುಗು ಸಿಡಿಲುಗಳಾಗಿ ಇಡೀ ಊರಿಗೆ ಕೇಳಿಸುವಂತೆ ಬಯ್ದಾಡಿದರು. ಸ್ವಲ್ಪ ಹೊತ್ತಿನ ಹಿಂದೆ ಗುಡುಗುಡಿ ಹೊಡೆದು ಮಂಪರೈಭೋಗದಲ್ಲಿದ್ದ ನನಗೆ ಅವರು ಚಿದಾನಂದಾವಧೂತವಿರಚಿತ ವೇದಾಂತ ಶಿಖಾಮಣಿಯ ಪಂಚಮ ಪರಿಶ್ಚೇದವನ್ನು ಪಠಣ ಮಾಡುತ್ತಿರುವಂತೆ ಅವರ ಮಾತುಗಳು ಕೇಳಿಸುತ್ತಿದ್ದವು. ಅದೇ ಹೊತ್ತಿಗೆ ಬೋಟಿ ವ್ಯಾಪಾರಿ ಭರಮವ್ವ ಬಂದು ಭೋಟ್ ತಿಂದ್ ಡೇಗಿದ ರೊಕ್ಕ ಕೊಡಲ್ಲೇನು? ಎಂದು ಪ್ರಶ್ನೆ ಹಾಕಿ ಹೋದಳು. ಹೆಂಡ ಕುಡಿದಿದ್ದ ಬಾಕಿ ಕೊಡದಿದ್ರೆ! ಎಂದು ಎಚ್ಚರಿಕೆ ನೀಡಿ ಈಡೆಗರ ಇರೂಪಾಕ್ಸಿ ಹೋದ… ಹಾಗೆ ಸಾರಾಯಿ ಅಂಗಡಿಯ ದೊಡ್ಡಿಯೇ ಮೊದಲಾದವರು, ಇದೆಲ್ಲ ಅನುಕೂಲವಾಗಿ ಪರಿಣಮಿಸುತ್ತಿರುವಂತೆ ಅತ್ತೆ ಸೊಸೆಯರೀರ್ವರೂ ಗಂಟು ಮೂಟೆ ಕಟ್ಟಿಕೊಂಡು ಹೊರಡಲನುವಾದರು. “ಈಗ ಅರ್ಜೆಂಟ್ ಹಣ ಬೇಕಾಗಿದೆ ಆ ಒಂಚೂರು ಬಂಗಾರವನ್ನಾದ್ರೂ ಕೊಡು” ಎಂದು ತಣ್ಣಗೆ ಕೇಳಿದೆ… ಅವರಿಬ್ಬರು ಅದಕ್ಕೂ ನಾಲ್ಕು ಸುಡುಸುಡುವ ಮಾತಾನಾಡಿ ಹೋದರು. (ಮುಂದೊಂದಿನ ಅವರು ಮಗುವನ್ನು ಎತ್ತಿಕೊಳ್ಳಲಿಕ್ಕೆ ಅವಕಾಶ ಮಾಡಲಿಲ್ಲ) ನಾನು ಸಮಾಧಾನದ ಉಸಿರು ಬಿಟ್ಟೆ. ಎಲ್ಲ ಶೃಂಖಲೆಗಳು ಚದುರಿದವೆಂದು ಸಂತೋಷಪಟ್ಟೆ… ನನ್ನ ಆ ಸಂತೋಷ ಚದುರಿಸಿ ಓಡಿಸಲು ಹಲವರು ಅನೇಕ ಪ್ರಯತ್ನಗಳನ್ನು ಮಾಡಿದರು. ಅಡಚಣೆ ಮತ್ತು ಲಜ್ಜೆಗೇನೆ ಹೆದರದಿದ್ದ ನಾನು ಅವಕ್ಕೆಲ್ಲ ಹೆದರುವುದು ಸಾಧ್ಯವೇನು?

ನಾನು ಹೆಚ್ಚು ಕಡಿಮೆ ನಿರಾಕರಣ ಸ್ಥಿತಿ ತಲುಪಿದ್ದೆ. ಅದೊಂದು ಥರದ ನಿರುಪದ್ರವದ ಹಂತ ಎಂದು ಹೇಗೆ ಹೇಳಬೇಕೆಂದರೆ ಆಗಲೆ ಗಡ್ಡ ಮೀಸೆ ಬಿಟ್ಟು, ಸ್ರಕ್ಚಂದನಗಳಿತ್ಯಾದಿ ಧರಿಸಿ ಭಾಜಪದ ರೈತ ಶಾಖೆಯ ಹೋಬಳಿ ಅಧ್ಯಕ್ಷನಾಗಿದ್ದ ಗುಮುಸಿ ಗೌಡ ಬಂದೊಡನೆ ಪಶುಪತಿಯನ್ನು ನೂರಕ್ಕೆ ನೂರರಷ್ಟು ಹೋಲುವ ವ್ಯಕ್ತಿಯೋರ್ವ ಬಂದಿರುವನೆಂದೂ, ಅವನನು ತಾವಿಬ್ಬರೂ ಕಂಭಕ್ಕೆ ಕಟ್ಟಿ ಹಾಕಿ ಅವನ ಕಾರನ್ನು ಹರಾಜು ಹಾಕಿ ಸಾಲ ಕಟ್ಟಿಕೊಳ್ಳೋಣವೆಂದೂ ಹೇಳಿದ. ನಾನು ನಗುತ್ತ ಬರೋಲ್ಲ ಎಂದು ಕಳಿಸಿಬಿಟ್ಟೆ… ಆ ಹೊತ್ತಿಗೆ ನನಗೆ ಸಮಯ ಪ್ರಜ್ಞೆ ಎಂಬುದೇ ಇರಲಿಲ್ಲ… ತೊಡೆ ಸಂಧಿಯ ನವೆಯ ಅಧ್ಯಾತ್ಮದ ದಾಹ ತುರಿಸಿ ತಣಿಸುವುದಕ್ಕೆ ಪುರುಸೊತ್ತಿರದಿದ್ದ ನಾನು ಬ್ಯಾಂಕಿಗೆ ಹೊತ್ತಿಗೆ ಸರಿಯಾಗಿ ಹೋಗುತ್ತಿರಲಿಲ್ಲ… ಅಥವಾ ಹೋಗುತ್ತಲೇ ಇರಲಿಲ್ಲ… ಹೋದರೂ ತಪ್ಪುಗಳನ್ನು ಮಾಡುತ್ತಿದ್ದೆ. ತಪ್ಪುಗಳು ಗುರುತರ ಅಪರಾಧಗಳಾಗಿದ್ದವು… ಎಲ್ಲರೂ ಅಪಾದನೆ ಮಾಡಲು ತುದಿಗಾಲ ಮೇಲೆ ನಿಂತಿದ್ದರು – ಅದರ ಪರಿಣಾಮವಾಗಿ ವಿಚಾರಣೆ ನನ್ನನ್ನು ಸಸ್ಪೆಂಡ್ ಅಂತಾರಲ್ಲ… ಅದನ್ನು ಮಾಡಲಾಯಿತು. ಅದಕ್ಕೆ ಪ್ರತಿಕ್ರಿಯಾ ರೂಪದಲ್ಲಿ ನಾನು ನಗು ನಗುತ್ತಾ ನಾನು ಹೊರ ಬಂದೆ. ಅಂತೂ ಇದ್ದೊಂದು ಶೃಂಖಲೆ ಕಳಚುವ ಸೂಚನೆ ನೀಡುತ್ತಿದೆ… ಎಂಥಾ ಸಂತೋಶದ ಸಂಗತಿ! ನಾನು ನೌಕರಿಯಿಂದ ಸಸ್ಪೆಂಡಾಗಿದ್ದೆನೇ ಹೊರತು ಚಟಗಳಿಂದ ಸಸ್ಪೆಂಡಾಗಿರಲಿಲ್ಲ… ಮೊದಲು ಅರೆಕಾಲಿಕ ಉಪನ್ಯಾಸಕರಂತೆ ಕೆಲಸ ಮಾಡುತ್ತಿದ್ದ ದುಶ್ಚಟಗಳು ನಾನು ಸಸ್ಪೆಂಡಾದ ದಿನದಿಂದ ಪೂರ್ಣಾವಧಿಗೆ ನೇಮಕಗೊಂಡು ಚುರುಕಾಗಿ ಕೆಲಸ ಮಾಡತೊಡಗಿದವು. ಅವುಗಳ ಪೈಕಿ ಒಂದನ್ನು ಹಚ್ಚಿಕೊಳ್ಳುವುದು ತುಸುತ್ರಾಸದಾಯಕ… ದೀಕ್ಷೆ ಕೊಡಲಿಕ್ಕೆ ಗುರುಸ್ಥಾನದಲ್ಲಿರುವವರು ಹೇಗೆ ಬೇಕೋ ಹಾಗೆಯೇ ಚಟವೊಂದರ ದೀಕ್ಷೆಕೊಡಲು ರಾಖೇಶ ಎಂಬ ಪಿರಮೆಡ್‌ನ ಸಹಾಯ ಬೇಕೇ ಬೇಕು… ಸ್ವರಗಳನ್ನು ಕಲಿತವರಿಗೆ ವ್ಯಂಜನಗಳನ್ನು ಕಲಿಯುವುದು ಎಷ್ಟು ಸುಲಭವೋ ಅಷ್ಟೇ ಸುಲಭ ಒಂದು ಚಟ ಕಲಿತವರಿಗೆ ಇನ್ನೊಂದು ಚಟ ಕಲಿಯುವುದು. ಅವು ಒಂದಲ್ಲಾ, ಎರಡಲ್ಲ, ಹತ್ತಲ್ಲ, ಇಪ್ಪತ್ತಲ್ಲ, ನೂರಾರುಗಳಿದ್ದವು. ಕಾಗೆಯೊಂದಗುಳ ಕಂಡರೆ ಕರೆಯದ ತನ್ನ ಬಳಗವನ್ನು ಎಂದು ಬಸವಣ್ಣ ಹೇಳಿದ್ದಾನಲ್ಲ… ಹಾಗೆ… ತಾನು ನೆಲೆ ಪಡೆದಿರುವ ಎಡೆಕ್ಡೆ ಚಟವೊಂದು ಕೈ ಬೀಸಿ ಕರೆದು ಸಹಬಾಳುವೆ ನಡೆಸುವುದು. ಒಂದು ಚಟಕ್ಕೇನಾದರು ಧಕ್ಕೆ ಬಂದರೆ ಎಲ್ಲ ಚಟಗಳು ಒಕ್ಕೊರಲಿನಿಂದ ಪ್ರತಿಭಟಿಸುತ್ತವೆ. ಚಳುವಳಿ ಮಾಡುತ್ತವೆ. ಘೇರಾವ್ ಮಾಡುತ್ತವೆ, ಲಾಕ್ ಔಟ್ ತೆರೆ ಎಂದು ಒತ್ತಾಯಿಸುತ್ತವೆ. ಕೊನೆಗೂ ಅವು ಯಶಸ್ವಿಯಾಗುತ್ತವೆ. ಇವು ಗಾಂಧಾರಿ ಸಂತಾನವಿದ್ದಂತೆ… ಇವುಗಳ ಮಹಿಮೆ ಗೊತ್ತಾಗಬೇಕಾದರೆ ನೀನು ಒಂದು ಚಟ ಕಲಿಯಬೇಕು… ಸಿಗರೇಟ್ ಕಲಿತಿ ಅಂದ್ರೆ ಅಡಿಕೆಚೀಟಿ; ಅದಕ್ಕೆ ಡ್ರಿಂಕ್ಸ್… ಅದಕ್ಕೆ ಅಮೇಧ್ಯ; ಜೂಜು, ವ್ಯಭಿಚಾರ… ಹೀಗೆ ಲಿಂಕ್ ಬೆಳೀತಾ ಹೋಗುತ್ತದೆ… ಇದಕ್ಕೆ ಮುಖ್ಯವಾಗಿ ರಾಖೇಶನನ್ನು ದೋಸ್ತಿ ಮಾಡ್ಕೋ ಬೇಕು… (ಖಂಡಿತ ನೀನು ಈ ಕಾದಂಬರಿ ಮುಗಿದೊಡನೆ ಕೊತ್ತಲಗಿಗೆ ಹೋಗಿ ರಾಖೇಶಾನ್ವೇಷಣೆ ನಡೆಸುತ್ತೀ)

ಇರಲಿ… ಅಡಚಣೆ ದತ್ತು ಮಗನಾಗಿದ್ದ ನಾನು (ಅಥವಾ ನಾನೇ ಅಡಚಣೆ ಪುತ್ರ ಪೌತ್ರಸ್ಯ ಪಟ್ಟ ಕಟ್ಟಿದ್ದೆನೋ) ಒಂದಾದರು ಚಟ ಎಲ್ಲಾದ್ರು ಹೋಗು ಯಾರ್ನಾದ್ರು ಆಶ್ರಯಿಸಿಕೋ… ನಿನ್ನ ಪೋಷಿಸೋ ಶಕ್ತಿ ನನಗಿಲ್ಲ ಎಂದು ‘ಬುಜ್ಜುಗಿಂತಲು’ ಮಾಡಿ ಹೇಳಿದೆ. ಮಾಡ್ಕೊಂಡ ಗಂಡನ್ನ ಬಿಟ್ಟು ಇನ್ನೊಬ್ರನ್ನ ಸೇರ್‍ಕೊಂಡು ಜೀವಿಸಿದ್ರೆ ದೇವ್ರು ಮೆಚ್ತಾನೆಯೇ. ಇಷ್ಟಿದ್ದ ನನ್ನ ಇಷ್ಟೆತ್ತರ ಮಾಡಿರುವ ನಿನ್ನೊಂದಿಗೆ ನನ್ನ ಸಂಸ್ಕಾರವೂ ಆಗಬೇಕೆಂದು ಪಟ್ಟು ಹಿಡಿಯಿತು. ಏನಾದರು ಮಾಡು… ಪೋಷಿಸು ಎಂದು ಗೋಗರೆಯಿತು. ಆ ಚಟವನ್ನು ಉಳಿದ ಚಟಗಳೆಲ್ಲ ಬೆಂಬಲಿಸಿದವು… ಹೀಗೆ ಅಣಬೆಗಳಂತೆ ಸಾಮೂಹಿಕವಾಗಿ ಅವು ಗುಳೇ ಹೊರಡಲು ನಿರಾಕರಿಸಿ ಉಳಿದುಕೊಳ್ಳಲು ನಾನು ಚಿಂತಾಕ್ರಾಂತನಾದೆ… ಹೆಂಗಪ್ಪಾ ಇದಕ್ಕೆಲ್ಲ ಜೋಡಿಸುವುದಂತ – ನಾನು ಕೈಚೆಲ್ಲಿ ಕೂಡ್ರದಂತೆ ನೋಡಿಕೊಳ್ಳಲೆಂದೇ ಕೃಷ್ಣ ಪ್ರತಿನಿಧಿಯಾದ ರಾಖೇಶ ಹೇಗೋ ಜೊತೆಯಲ್ಲಿದ್ದ… ಹೆದರಬೇಡ, ಎದೆಗುಂದ ಬೇಡ ಎಂದು ಧೈರ್ಯ ಹೇಳುತ್ತಿದ್ದ. ಮುಚ್ಚಿದ್ದ ದಾರಿಗಳಿಗೆ ರಹದಾರಿ ನೀಡುತ್ತಿದ್ದ. ಅನಸೂಯ ನನ್ನನ್ನು ಕರೆಕಳಿಸುವಂತೆ ಮಾಡುತ್ತಿದ್ದ. ನನ್ನ ವಿಷಾದ ಪೂರ್ಣ ದುಸ್ಥಿತಿ ನೋಡಿ ಅಳುತ್ತಾ ಬರಸೆಳೆದು ಅಪ್ಪಿಕೊಳ್ಳಲು ಧಾವಿಸುತ್ತಿದ್ದಳು. ನನ್ನಲ್ಲಿರೋ ಸುಖ ವ್ಯಾಧಿಗಳ ಕುರಿತು ಇಬ್ಬರಿಗೂ ಎಚ್ಚರಿಕೆ ನೀಡಿ ದೂರ ಮಾಡುತ್ತಿದ್ದ ಮಗನಂತೆ… ಗಂಡನಂತೆ… ತಿಳಿದು ಆಕೆ ಬಯ್ಯುತ್ತಿರುವಾಗ ನಾನು ತಲೆ ತಗ್ಗಿಸಿ ನಿಂತಿರುತ್ತಿದ್ದೆ. ಊಟ ಮುಗಿಸಿ ಕೈಯಲ್ಲಿಂದಿಷ್ಟು ದುಡ್ಡು ಕೊಡುತ್ತಿದ್ದಳು ಕಾಂಚನಾ ಅಂಕಲ್ ಬಿಲಹರಿ ರಾಗ ಹೇಳಿಕೊಡು ಎಂದು ಕೇಳಿಬಿಡುವುದೋ ಎಂದು ಹೆದರಿ ನಾನು ಅಲ್ಲಿಂದ ಜಾರಿಕೊಂಡು ಬಿಡುತ್ತಿದ್ದೆ. ಇದು ದಿನಾಲು ಆಗೋ ಕೆಲಸವಾಗಿರಲಿಲ್ಲ. ಅನಸೂಯಾಳ ಮನೆ ಸನಿಹಕ್ಕೆ ಹೋಗದೆ ತಲೆಮರೆಯಿಸಿಕೊಂಡು ಅಡ್ಡಾಡುತ್ತಿದ್ದೆ. ಮೊದಮೊದಲು ನನ್ನ ಜೊತೆ ರಾಖೇಶ ಇರುತಿದ್ದನಲ್ಲ… ಈಗ ನಾನೇ ಅಣ್ಣ, ತಮ್ಮಾ, ಗುರೂ, ಅಂತ ಅವನ ಜೊತೆಯಲ್ಲಿರತೊಡಗಿದೆ. ಅವನು ಸಾಧ್ಯವಾದಷ್ಟು ನನ್ನನ್ನು ಪೋಷಿಸುವ ಕೆಲಸ ಮಾಡುತ್ತಿದ್ದ. ಕುಡಿದ ಅಮಲಿನಲ್ಲೋ, ಗಾಂಜಾದಮಲಿನಲ್ಲೋ ತಾನು ಅಂಥವನೆಂದು ಇಂಥವನೆಂದೂ ತನ್ನ ತಾಯಿ ನಾರಾಯಣರಾವ್ ಎಂಬ ಸರ್ಕಿಲ್ ಇನ್ಸ್‌ಪೆಕ್ತರ್ ಇಟ್ಟುಕೊಂಡು ಮೋಸ ಮಾಡಿದನೆಂದೂ ಒಮ್ಮೆ ಹೇಳುತ್ತಿದ್ದರೆ, ಇನ್ನೊಮ್ಮೆ ರುದ್ರನಾಯಕನ ಹತ್ತಿರ ಸಂಬಂಧಿ ಎಂದೂ ಹೇಳಿಕೊಳ್ಳುತ್ತಿದ್ದ; ಇನ್ನೊಮ್ಮೆ ನನ್ನ ತಂಗಿ ಶಾಲಿನಿ ಬೆಂಗಳೂರಲ್ಲಿ ರಘುರಾಮನ ಕಂಪನಿಯಲ್ಲಿ ಸ್ಟೆನೋ ಆಗಿ ಕೆಲಸ ಮಾಡುತ್ತಿರುವಳೆಂದೂ ಹೇಳುತ್ತಿದ್ದ, ಮಗದೊಮ್ಮೆ ರಘುರಾಮನ ಮಾತು ಕಟ್ಕೊಂಡು ನಾನು ನಿನ್ಗೆ ದುಶ್ಚಟಗಳನ್ನು ಕಲಿಸಬೇಕಾಯ್ತು ಎಂದು ಹೇಳುತಿದ್ದ… ಇದನ್ನೆಲ್ಲ ತಮಾಷೆಗೆ ಹೇಳಿದೆ, ನಂಬಬೇಡ? ಎಂದು ಜೋರಾಗಿ ನಗುತ್ತಿದ್ದ. ನನಗೇ ಒಂದೂ ಅರ್ಥವಾಗುತ್ತಿರಲಿಲ್ಲ. ನನಗೆ ಒಂದು ಮೊಳ ಉದ್ದದ ಮೊನಚಾದ, ಥಳ ಥಳ ಹೊಳೆಯುತಿದ್ದ ಕತ್ತಿಯೊಂದನ್ನು ತಂದುಕೊಡುತ್ತ “ನೋಡು… ಭರಮಣ್ಣ ನಾಯಕರಿಗೆ ಬಿಚ್ಚುಗತ್ತಿ ಎಂಬ ಬಿರುದು ಬಂದಿದ್ದು ಇದರಿಂದಲೇ! ಪರಮೇಶ್ವರ ಪ್ರತ್ಯಕ್ಷನಾಗಿ ಮುರುಘಾಸ್ವಾಮಿಗಳಿಗೆ ಕೊಟ್ಟನಂತೆ, ಸ್ವಾಮಿಗಳು ನಾಯಕರಿಗೆ ಕೊಟ್ಟು ಬಿರುದು ನೀಡಿದರಂತೆ. ಭರಮಣ್ಣ ಜರಿಮಲೆಯ ಡಂಪಣ್ಣನಿಗೆ ಕೊಟ್ಟನಂತೆ… ಡಂಪಣ್ಣನ ಮರಿಮರಿಮರಿ ಗಿರಿಗಿರಿಗಿರಿ ಮೊಮ್ಮಗ ಬಿಚ್ಚುಗತ್ತಿ ಎಂಬುವವನ ಏಳುಸುತ್ತಿನ ಕೋಟೆ ಪೈಕಿ ಹಿಸ್ಸೆಯಾಗಿ ಇದನ್ನ ಇಟ್ತುಕೋ ಎಂದು ತನ್ನ ಕಝಿನ್ ಸಿಸ್ಟರ್ ಅನಸೂಯಾಳಿಗೆ ಕೊಟ್ಟು ತಾನು ನವಲಗುಂದಕ್ಕೆ ಹೋಗಿ ನಾಗಲಿಂಗ ಸ್ವಾಮಿಗಳ ಸೇವೆ ಮಾಡಿಕೊಂಡಿದ್ದು ಬಿಟ್ಟಿರುವನಂತೆ. ಅನಸೂಯಾ “ಲೋ ರಾಕ್ಯಾ… ಇದ್ಯಾಕೋ ಮನ್ಯಾಗಿರೋದು ಸಜ್ಜು ಕಾಣವಲ್ದು… ಒಯ್ದು ಕರದಂಟಿಗೆ ಹಾಕಿ ಬಿಡು’ ಎಂದುಹೇಳಿ ತನಗೆ ಕೊಟ್ಟಳು. ಎಂದು ಮುಂತಾಗಿ ಹೇಳಿ ಅವನು ಅದನ್ನು ನನಗೆ ಕೊಟ್ಟನು… ಶಾಮಾ… ನನ್ನ ಕೊಲೆಮಾಡಬೇಕೆನಿಸಿದಾಗ ತಪ್ಪದೆ ಇದೇ ಕತ್ತಿಯಿಂದ ಕೊಲೆ ಮಾಡಪ್ಪಾ… ನಿನ್ಗೆ ಆತ್ಮಹತ್ಯೆ ಮಾಡಿಕೊಳ್ಳೋ ಆಲೋಚನೆ ಬಂದಾಗಲೂ ಅಷ್ಟೆ…” ಇದನ್ನು ಸೀರಿಯಸ್ಸಾಗೇ ಹೇಳಿದ್ದ. (ಯಾಕಿದ್ದೀತು ಅಂತ ಅದನ್ನು ನಾನು ಒಯ್ದು ವೀರಭದ್ರ ದೇವರ ಗುಡಿಯಲ್ಲಿಟ್ಟು ಬಂದುಬಿಟ್ಟೆ ಅದು ನೀಡುತ್ತಿದ್ದ ಹಿಂಸೆ ತಾಳಲಾರದೆ… ಮುಂದೊಂದಿನ)

ಅಂಥವನು ನನ್ನ ರಾಖೇಶ… ನನಗೆ ಮತ್ತು ಬರಿಸಲು ಭಟ್ಟಿ ಸಾರಾಯಿ ತರುತ್ತಿದ್ದ. ಅಡಚಣೆಯಿಂದಾಗಿ ಪೋರ್ಕೋ, ಬೀಫೂ ತಂದು ತಿನ್ನಿಸುತ್ತಿದ್ದ. ಯಾವಾಗ್ನೋಡಿದ್ರು ದುಡ್ಡಿಲಾಂತ ಸಾಯ್ತೀಯಲ್ಲೋ… ಈಗಿಲ್ಲಿ ನಿಂತ್ಕೋ… ನಾನು ಮಾಡೊ ಕೆಲಸಾನ ನೀನು ಮಾಡು. ನೀನೇನು ದೊಡ್ಡ ಗವರ್‍ನರನ ಮೊಮ್ಮಗ ಏನು? ಎಂದು ಗದರಿಸಿ ಬಸ್‌ಸ್ಟಾಂಡ್‌ನ ಹೆಲೋಜೆನ್ ದೀಪದ ಬುಡದಲ್ಲಿ ನಿಲ್ಲಿಸುತ್ತಿದ್ದ. (ಅಲ್ಲಿ ನಿಂತಿದ್ದಾರೆ ಪಿಂಪೇ ಇರಬೇಕು. ಆ ಪಿಂಪ್ ಸಾಮಾನ್ಯವಾಗಿ ರಾಖೇಶನೇ ಆಗಿರುತ್ತಾನೆ…) ಹೋಗಿ ಹೋಗಿ ನನ್ ಹೆಸರು ಹೇಳಿದ್ಕೆ ತಲೆ ಹಾಕಿ ನನ್ ಮರ್‍ವಾದಿ ಕಳೀಬ್ಯಾಡ್ವೋ… ಪಂಡಿತ ಪರಮೇಶ್ವರ ಮೊಮ್ಮಗ… ಗ್ರಾಂಡ್‌ಸನ್…ಪೋತೆ ಮನಮಡು… ಶಾಮಾಶಾಸ್ತ್ರಿ ಅಂತ ಹೇಳಿಬಿಡು. ಇದ್ರಲ್ಲಿ ನಾಚ್ಕೋಳ್ಳೋದೇನಿದೆ… ನಾಚಿಕೆಗೆ ನೀನು ಪಾಠ ಹೇಳಿಕೊಡುವಂತಾಗಬೇಕು. ಎಂದು ಹೇಳುತ್ತಿದ್ದ… ಹೀಗೆ ಹೇಳಬಲ್ಲವರು ದಶಲಕ್ಷ್ಕ್ಕೊಬ್ಬರೋ! ಕೋಟಿಗೊಬ್ಬರೋ!

ನಾನು ಹಾಗೆ ನಿರ್ಭಿಡೆಯಿಂದ ಹೇಳುತ್ತಿದ್ದೆ. ಅಂಥೋರ ವಂಶದಲ್ಲಿ ಹುಟ್ಟಿ ನೀವಿಂಥ ಕೆಲಸ ಮಾಡೋದಂದ್ರೇನು! ಎಂದು ಉದ್ಗರಿಸುತ್ತಿದ್ದರು. ನಾಯಿ ತಿಂದು ಬ್ರಹ್ಮರ್ಷಿಯೋರ್ವ ತನ್ನ ಹಸಿವೆ ತೀರಿಸಿಕೊಳ್ಳುವುದು ಸಾಧ್ಯವಿರುವಾಗ ನಾನು ಅದೇ ಅಗತ್ಯ ತೀರಿಸಿಕೊಳ್ಳಲು ಪಿಂಪ್ ಆಗಿ ಕೆಲಸ ಮಾಡುತ್ತಿದ್ದರೆ ತಪ್ಪೇನು? ಹೇಳುವೆನೆಂದಿಟ್ಟುಕೋ… ಆದರೆ ಕೇಳುವವರಿಗೆ ಕೆಲವು ಅರ್ಹತೆಗಳಿಗೆ… ಅವು ಲೇಖಕನಾದ ನಿನ್ನಲ್ಲಿಲ್ಲ… ಇರಲಿ… ಮುಂದೇನಾಯಿತಪ್ಪಾ ಅಂದರೆ… ಈ ಸ್ಥಿತಿಯಲ್ಲಿ ಒಬ್ಬ ಮನುಷ್ಯನಿಗೂ; ಸಮಾಜಕ್ಕೂ ಮುಖಾಮುಖಿಯಾದಾ‌ಅ, ಘರ್ಷಣೆ ಆದಾಗ ಹೇಗಿರುತ್ತದೆ… ಎಂದು ಆಲೋಚಿಸು… ಎಲ್ಲೋ ಕುಡಿದು! ಎಲ್ಲೋ ಬಿದ್ದಿರುತ್ತಿದ್ದ ನನ್ನನ್ನು ಕಂದೀಲು ಹಿಡಿದುಕೊಂಡು ಹುಡುಕುತ್ತ ಬರುತ್ತಿದ್ದಾಕಿ ಸಾಕ್ಷಾತ್ ಅನಸೂಯಾ ಆಗಿರುತ್ತಿದ್ದಳು. ನನ್ನನ್ನು ಹೊರಿಸಿಕೊಂಡೊಯ್ದು ಸ್ನಾನ ಮಾಡಿಸಿ ಹೊಸಬಟ್ಟೆ ಉಡಿಸಿ, ಬಲವಂತ ಉಣ್ಣಿಸಿ ಮಲಗಿಸಿ, ನನಗರಿವಿಲ್ಲದಂತೆ ಜೇಬಿನಲ್ಲಿ ನೂರೋ ಇನ್ನೂರೋ ಇಡುತ್ತಿದ್ದಾಕಿ ಸಾಕ್ಷಾತ್ ಅನಸೂಯ ಆಗಿರುತ್ತಿದ್ದಳು.

ನಾನು ಕೆಟ್ಟೆ, ಕೆಡುತ್ತ ಹೋದೆ. ಕೊಳೆತೆ. ಕೊಳೆಯುತ್ತ ಹೋದೆ… ಕೆಡುವ ಕೊಳೆವ ಸ್ಥಿತಿಯಿಂದ ನನ್ನನ್ನು ಮೇಲೆತ್ತುವ ಕಿರು ಪ್ರಯತ್ನವನ್ನು ಹೆಂಡತಿ ವರಲಕ್ಷ್ಮಿ ಮಾಡಿದ್ದರೆ ನಾನು ಶಹಬ್ಬಾಷ್ ಎನ್ನುತ್ತಿದ್ದೆ… ಅತ್ತೆಯೊಂದಿಗಿದ್ದ ಆಕೆ ಮತ್ತೊಂದು ಗಂಡು ಮಗುವಿಗೆ ಜನ್ಮಕೊಟ್ಟು ಕೊಟ್ಟೂರಲ್ಲಿ ಒಂದಿತ್ತು; ಒಂದಿಲ್ಲ ಎನ್ನುವಂತೆ ಬದುಕುತ್ತ ಸುಖವಾಗಿದ್ದಳು… ತನಗೊಂದು ಮೊಮ್ಮಗನನ್ನು ನೀಡಿದಾದ ಮೇಲೆ ಮಗನಿಗೆ ಒಂದು ಇಡಿಗಂಟನ್ನು ಕೊಟ್ಟು ಜವಾಬ್ದಾರಿ ಕೊಟು ಗೌರವಿಸಬೇಕೆಂದು ನನ್ನ ತಾಯಿ ಹಿಂದೆ ಆಲೋಚಿಸಿದ್ದಳಂತೆ. ಐದು ದಶಕಗಳ ಕಾಲ ಅಹರ್ನಿಶಿ ಶ್ರಮಿಸಿ ನಗನಾಣ್ಯದಿಂದ ಕೂಡಿದ ಗಂಟಾಗಿರುವುದಂತೆ ಅದು. ಎಷ್ಟಿದ್ದರೂ ಅಕಾಲ ಮರಣಕ್ಕೆ ತುತ್ತಾದ ಸೈನಿಕನೋರ್ವನ ಹೆಂಡತಿಯಾಗಿದ್ದವಳು. ಕುಂತಳನಾಡಿನಲ್ಲಿ ಮನೆಮನೆ ಮಾತಾಗಿದ್ದ ಪರಮೇಶ್ವರ ಶಾಸ್ತ್ರಿಗಳ ಸೊಸೆ ಆಗಿದ್ದವಳು. ಅಂಥಾಕಿ ಮಾಡಿದ್ದರೂ ಮಾಡಿರಬಹುದು. ಇದನ್ನು ಹೇಳಿ ನಂಬಿಸಿದವನೂ ರಾಖೇಶನೆ. ಅವನು ಪೂಸಿ ಹೊಡೆದಂತೆ ನಾನು ಶ್ರವಣನಿಗಿಂತ ಮಿಗಿಲಾದ ಸುತನೆಂದು ತಾಯಿಯನ್ನು ನಂಬಿಸುವ, ಶ್ರೀರಾಮ ಚಂದ್ರನಿಗಿಂತ ಮಿಗಿಲಾದ ಪತಿ ಎಂದು ಹೆಂಡತಿಯನ್ನು ನಂಬಿಸುವ ನಾಟಕವನ್ನಾಡುವುದು ನನ್ನಿಂದ ಬಿಲ್ಕುಲ್ ಸಾಧ್ಯವಿರಲಿಲ್ಲ. ಅವನ ಒತ್ತಾಯಕ್ಕೋ ಅಥವಾ ಮತ್ತಾವ ಸೆಳೆವಿಗೋ ಹೋಗಿದ್ದು ನೆನಪಿದೆ. “ಹೇಗಿದ್ದ ಶಾಮಣ್ಣ ಹೇಗಾಗಿ ಬಿಟ್ಟಿದ್ದಾನಲ್ಲ” ಎನ್ನುವ ಜನರ ನಡುವೆ ನಾನು ಹೋಗಿದ್ದು ಎಂಬುದನ್ನು ನೆನಪಿನಲ್ಲಿಟ್ಟುಕೋ! ಹೋದೊಡನೆ ಗುರುತಿಸಲಿಲ್ಲ… ಬ್ರಾಹ್ಮಣ್ಯದ ಕುರುಹುಗಳಿಗಾಗಿ ಹುಡುಕಾಡಿದರು. ಅತ್ತರು ಕರೆದರು ಶಪಿಸಿದರು. ದೇವರ ಕೋಣೆ ಅಡುಗೆಮನೆಯಲ್ಲಿ ಹೆಜ್ಜೆ ಇರಿಸದಂತೆ ಮಕ್ಕಳನ್ನು ಎತ್ತಿಕೊಳ್ಳದಂತೆ ತಡೆದರು. “ಅಮ್ಮಾ ಹಣ ಬೆಕಾಗಿದೆ ತುರ್ತಾಗಿ” ಅಂದ್ರ್. “ಯಾಕೆ” ಎಂದಳು. ಕುಡಿಲಿಕ್ಕೆ ಜೂಡಾಡ್ಲಿಕ್ಕೆ ಅಮೇಧ್ಯ ತಿನ್ಲಿಕ್ಕೆ… ಅಂದೆ… (ಜುಜುಬಿ ಹಣಕ್ಕಾಗಿ ನಾನು ಅಪಥ್ಯ ಆಡಬೇಕಿತ್ತೆ?)… ಅಷ್ಟಕ್ಕೆ ದೊಡ್ಡ ರಂಪಾಟ ಮಾಡಿದರು. ಮಗ ಇಲ್ಲಾಂತ ತಿಳ್ಕೊಂಡು ಎಳ್ಳು ನೀರು ಬಿಟ್ಟು ಶ್ರಾದ್ಧಾ ಮಾಡೋದೊಂದಿದೆ ಬಾಕಿ ಎಂದು ತಾಯಿ; ಪೂರ್ತಿ ವಿಧವೆ ಆಗ್ಲಿಕ್ಕೆ ಯಾವಾಗ ಅವಕಾಶ ಕೊಡ್ತೀರಂತ ಕಾಯ್ತಿದೇನಿ ಎಂದು ಧರ್ಮಪತ್ನಿ ಅಂದಳು.

(ಅಯ್ಯೋ! ಅಯ್ಯೋ! ಎಂಥ ಮಾತಾಡ್ತಿದ್ದಾರಲ್ಲ ರಾಮ ರಾಮ… ಲೇಖಕರೆ ದಯವಿಟ್ಟು ಅವರ ಮಾತುಗಳನ್ನು ಕಾದಂಬರಿಯ ಕಡತದಿಂದ ತೆಗೆದುಬಿಡಿ… ಯಾವ ತಾಯಿ, ಯಾವ ಹೆಂಡತಿ ಹಾಗೆ ವರ್ತಿಸುವುದು ಸಾಧ್ಯ; ಇದು ಹೇಳೋ ಮಾತಲ್ಲ! ಕೇಳೋ ಮಾತಲ್ಲ!)
ಇದ್ದೊಂದು ಮನೆ ಆಕೆ ಹೆಸರಿನಲ್ಲಿರುವುದು. “ಆ ಮುಂಡೆ ಮನೆಯಲ್ಲೇ ಬಿದ್ದು ಹೊರಳಾಡಿ ಸಾಯಿ” ಎಂದು ಮಾತ್ರ ಅವರು ಆಶೀರ್ವಾದ ಮಾಡಿದ್ದು. ಯಾರ ಅಸಹ್ಯ; ಯಾರ ಕೋಪಕ್ಕೂ ನನ್ನ ಭಾವನೆಗಳಲ್ಲಿ ಏರಿಳಿತ ಮಾಡುವುದು ಸಾಧ್ಯವಿರಲಿಲ್ಲ… ಆ ಅವಧಿಯಲ್ಲಿ ನನ್ನನ್ನು ನೌಕರಿಯಿಂದ ಓಡಿಸಿರುವುದಾಗಲೀ; ನನ್ನ ಮೇಲೆ ಖಟ್ಲೆ ಹೂಡಿರುವುದಾಗಲೀ; ನಾನು ಸಾರಿ ಕಟಕಟೆಯಲ್ಲಿ ನಿಂತಿದ್ದಾಗಲೀ; ಅನಸೂಯಾ ನನ್ನ ಪರವಾಗಿ ವಾದಿಸಲು ವಕೀಲರೊಬ್ಬರನ್ನು ನೇಮಿಸಿರುವುದಾಗಲೀ ನನಗೆ ಗೊತ್ತೇ ಇರಲಿಲ್ಲ.

ಅವತ್ತು ಅನಸೂಯ ನನಗೆ ತಾನೆ ಖುದ್ದು ನಿಂತು ಸ್ನಾನ ಮಾಡಿಸಿ ಬಟ್ಟೆ ತೊಡಿಸಿ ತುತ್ತುಣುಸಿ ಸೆರಗಿನಿಂದ ಬಾಯಿ ಒರೆಸಿದ್ದಳು… ಕಣ್ತುಂಬ ನೋಡಿದಳು. ಆಕೆಯ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನು ಗುರುತಿಸಲು ನನಗಾಗಲೇ ಇಲ್ಲ. ಪ್ರತಿಯೊಂದು ಕಣ್ಣು ಆರೋಗ್ಯದಿಂದ ಇರಬೇಕಾದರೆ ಅಶ್ರು ಎಂಬ ಪವಿತ್ರೋದಕದ ಅಗತ್ಯವಿದೆ ಎಂಬ ವೈಜ್ಞಾನಿಕ ಸತ್ಯವನ್ನೆ ನಾನು ಮರೆತು ಬಿಟ್ಟಿದ್ದೆ ಎಂದರೆ ನಿನಗೆ ಆಶ್ಚರ್ಯವಾಗಬಹುದು

“ಅನೂ” ಎಂದೆ ಮಗುವಿನಂತೆ. “ಏನೋ” ಎಂದಳು. ನಿನ್ ತೊಡೆ ಮೇಲೆ ತಲೆ ಇಟ್ಟು ಚಾವತುಮಲಗಿಕ್ಕೊಳ್ಲಾ!” ಎಂದು ಆರ್ತತೆಯಿಂದ ಕೇಳಿದೆ… ಅಯ್ಯೋ ಮಲಗೋ… ನನ್ ಶಾಮಾ… ನನ್ ರಾಜಾ! ಎಂದಳು… ತೊಡೆ ಮತ್ತು ಕಿಬ್ಬೊಟ್ತೆ ಸಂದಿಯಲ್ಲಿ ತಲೆ ಇರಿಸಿ ಮಲಗಿಕೊಂಡೆ. ನನ್ನನ್ನು ಮಗುವೆಂದು ಭಾವಿಸಿ ತಟ್ಟುತಿದ್ದಳು. ಹನಿ ಉದುರಿಸುತ್ತಿದ್ದಳು. ನಿಟ್ಟುಸಿರು ಬಿ‌ಉತ್ತಿದ್ದಳು. ತ್ರಿಕಾಲಕ್ಕಾತೀತನಂತಿದ್ದ ನಾನು ಬೆಚ್ಚಗೆ ಗೂಡಿಸಿಕೊಂಡು ಮಲಗಿ ನಿದ್ದೆ ಹೋಗಿದ್ದೆ.

ಆಗ ಕುವೆಂಪು ವಿರಚಿತ ರಾಮಾಯಣ ದರ್ಶನದಲ್ಲಿ ಸೀತೆ ಕನಸು ಕಾಣುತ್ತಾಳಲ್ಲ… ಅಂಥದೊಂದು ಕನಸು ನಾನು ಕಂಡೆ. ಅನಸೂಯ ನಗ್ನಳಾಗಿ ಹಿಂದಕ್ಕೆ ಕೈಯೂರಿ ಕುಳಿತಿದ್ದಾಳೆ… ಆಕೆಯ ಎರಡೂ ಮೊಲೆಗಳ ತೊಟ್ಟುಗಳಿಂದ ಎದೆ ಹಾಲು ಕ್ರಮೇಣ ಧಾರೆ ಧಾರೆಯಾಗಿ ಸ್ರವಿಸ ತೊಡಗಿತು. (ಕುಮಾರವ್ಯಾಸನ ಭಾರತದಲ್ಲಿ ಕೃಷ್ಣ ವಿದುರನ ಮನೆಯಲ್ಲಿ ಕುಡಿವಾಗ ಚೆಲ್ಲಿದ ಹಾಲು) ಹಳ್ಳ ಹೊಳೆಯಾಗಿ ಹರಿಯತೊಡಗಿತು. ಮನೆ ಮಠ ಕೋಟೆ ಕೊತ್ತಾಗಳೆಲ್ಲ ಆ ಹಾಲೊಳಗೆ ಮುಳುಗಿ ಹೋಗ ತೊಡಗಿದವು… ಮಗುವೊಂದು ಆ ಕ್ಷೀರ ಕೋಟಲೆಯೊಳಗೆ ಕೈಕಾಲು ಬಡಿದು ಈಜುತ್ತ ತಾಯಿಗಾಗಿ ಹಂಬಲಿಸುತ್ತಿರುವುದು. ಅನಸೂಯ ಬಾಗಿ ಆ ಮಗುವನ್ನೆತ್ತಿಕೊಂಡು ಮೊಲೆಗಮುಚಿಕೊಳ್ಳುತ್ತಾಳೆ…
ಏಂಥ ಕನಸು, ತಾಯ್ತನದ ಹೊಂಗನಸು
ವಾತ್ಸಲ್ಯ ಪ್ರೇಮವನು ನನಗೆ ನೀ ಉಣಿಸು
ದೇಶ ಕೋಶ ಪ್ರೇಮಪಾಶಕ್ಕೆಲ್ಲ ನೀನು ಮಿಗಿಲು
ನನ್ನ ಬದುಕಿನ ಇರುಳಲ್ಲಿ ನೀನೊಂದೆ ಹಗಲು…
ಎಂದೊಂದು ಚೌಪದಿಯನ್ನು ಮನಸ್ಸಿನಲ್ಲಿ ಸರಿಹೊಂದಿಸಿಕೊಳ್ಳುತ್ತಿದ್ದೆ.

“ಬರ್ರೀ… ನಾನವ್ರ್ನ ಎಲ್ಲಿದ್ದಾನಂತ ತೋರಿಸಿದ್ರೆ ನೀವು ನಂಗೊಂದು ಬ್ರಿಸ್ಟಾಲ್ ಕೊಡಿಸ್ತೀರಲ್ಲ” ಎಂದು ಕರಾರು ಮಾಡಿಕೊಂಡು ಬಂದಿದ್ದ ರಾಖೇಶ ಪೋಲೀಸರನ್ನು ಬಾಗಿಲು ತಟ್ಟಲು ಬಿಟ್ಟು ಮೆಲ್ಲಗೆ ಹಿಂದು ಸರಿದು ಕಾಣೆಯಾಗಿದ್ದು ನನಗೆ ತಾನೆ ಹೇಗೆ ಸಾಧ್ಯ?…
ತೀರ್ಪು ಮೊದಲೆ ಗೊತ್ತಿತ್ತೋ ಏನೋ ಆಕೆಗೆ! ತಟ್ಟುವ ಶಬ್ದ ಹೆಚ್ಚಾದಂತೆ ನನ್ನನ್ನು ಬಿಗಿಯಾಗಿ ಅವುಚಿಕೊಳ್ಳ ತೊಡಗಿದಳು. ನನಗೊಂದೂ ಅರ್ಥವಾಗಲಿಲ್ಲ… ನಾನೇ ಬಿಡಿಸಿಕೊಂಡೆದ್ದು ಹೋಗಿ ಬಾಗಿಲು ತೆರೆದೆ, ಓಹ್… ಪೋಲೀಸರು… ಅರಕ್ಷಕರು… ಗೆಳೆಯರು? ಸಹೋದರರು? ಅವರು ನನ್ನ ಕೈಗೆ ಕೊಳ ತೊಡಿಸಿದರು. ಅನಸೂಯ ಗದ್ಗದಿಸಿ ನನ್ನ ಮುಖಕ್ಕೆ ಅಸಂಖ್ಯಾತ ಮುತ್ತುಗಳನ್ನು ಕೊಟ್ಟಳು. ಪೋಲೀಸರು ನನ್ನನ್ನು ಎಲ್ಲಿಗೆ ಕರೆದುಕೊಂಡು?ಹೋದರು ಗೊತ್ತೆ! ಬಳ್ಳಾರಿಯಲ್ಲಿರುವ ಸೆಂಟ್ರಲ್ ಜೈಲ್‌ಗೆ… ಸೆಂಟ್ರಲ್ ಜೈಲ್‌ಗೆ… ಸೆಂಟ್ರಲ್ ಜೈಲು ಒಳಗೆಲ್ಲ ತಿರುಗಾಡಬೇಕೆಂಬುದು ನನ್ನ ಭಾಳ ವರ್ಷಗಳ ಕನಸು ಅಂದು ನನಸಾಗಿತ್ತು… ದೇವರು ದೊಡ್ಡವನು… ಅಂತೂ ಕೆಲಕಾಲ ಜೈಲೊಳಗೆ ನೆಲಸುವಂತೆ ಮಾಡಿದ. ದೇವರು ದೊಡ್ಡವನು… ಹಲವಾರು ಖೈದಿಗಳ ಪರಿಚಯ ಮಾಡಿಕೊಟ್ಟ… ದೇವರು ದೊಡ್ಡವನು. ಮತ್ತೊಮ್ಮೆ ನನ್ನ ಭಾವಚಿತ್ರ ಮತ್ತಿತರ ವಿವರಗಳು ಎಲ್ಲಾ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ಮಾಡಿದ. ದೇವರು ದೊಡ್ಡವನು. ಆತ್ಮೀಯರ ಗುಣಸ್ವಭಾವವಗಳನ್ನು ಕಪ್ಪು ಬಿಳುಪುಗಳನ್ನಾಗಿ ವಿಂಗಡಿಸಿದ.

ತುರಂಗವಾಸ ಕೊಟ್ಟಂಥ ಅನಂದಾನುಭೂತಿ; ಪ್ರಪಂಚ ಜ್ಞಾನವನ್ನು ಪ್ರಪಂಚದ ಯಾವ ಸ್ಥಾನವೂ ಕೊಡಲು ಸಾಧ್ಯವಿಲ್ಲ ನೋಡು? ನೀನೂ ಕೂಡ ಮುಂದೆಂದಾದರೊಮ್ಮೆ; ಕೇವಲ ಮೂರು ತಿಂಗಳ ಮಟ್ಟಿಗಾದರೂ ಸರಿಯೇ… ತುರಂಗ ವಾಸ ಅನುಭವಿಸು… ಇದಕ್ಕೆ ಸಹಾಯಕವಾಗುವಂಥ ನೂರಾರು ವಿವರಗಳನ್ನು ಪವಿತ್ರ ಗಂಥವಾದ ‘ಭಾದಂಸಂ’ ನೀಡುತ್ತದೆ. ಅದರಿಂದ ಮಾರ್ಗದರ್ಶನ ಪಡೆ…. ನಾನು ಪರಿಪೂರ್ಣ ಮಾನವನಾಗುವ ದಿಸೆಯಲ್ಲಿ ಒಂದು ಚಿಕ್ಕ ಪ್ರಯತ್ನ ಮಾಡುವುದು ನನಗಲ್ಲಿ ಸಾಧ್ಯವಾಯಿತು. ನನ್ನಲ್ಲಿದ್ದ ಕಲೆ ಸಾಹಿತ್ಯ ಸಂಗೀತದ ತಿಳುವಳಿಕೆಗಳು; ವೇದೋಪನಿಷತ್ತುಗಳ ಬಗೆಗಿದ್ದ ಆರ್ಷೇಯ ಜ್ಞಾನ ನನ್ನನ್ನು ಎಲ್ಲರಿಗೂ ಪ್ರಿಯವಾಗುವಂತೆ ಮಾಡಿದವು… ಅಲ್ಲಿದ್ದ ಕೆಲ ಖೈದಿಗಳು… “ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಸೇರಿಕೊಂಡು ಕೇಂದ್ರಕಾರಾಗೃಹದ ಗೌರವ ಪ್ರತಿಷ್ಠೆಯನ್ನು ಹೆಚ್ಚಿಸಿದ. ದೇವರು ದೊಡ್ಡವನು” – ಜೈಲ್ ಸೂಪರಿಂಟೆಂಡೆಂಟ್ ಜವರೇಗೌಡರು ದೇವರಿಗೆ ಕೈ ಎತ್ತಿ ಮುಗಿದರು.

ನಾನಾ ಜೈಲಿನಲ್ಲಿ ಮೂರು ವರ್ಷದ ಅನುಭವವನ್ನು ನಿನಗೆ ಹೇಳಿದರೆ ನೀನು ನಂಬುವುದಿಲ್ಲ… ಎಂಥ ಸಜ್ಜನರಂತೀಯ ಖೈದಿಗಳು! ಎಂಥ ತತ್ವಜ್ಞಾನಿಗಳಂತೀಯಾ ಖೈದಿಗಳು; ಎಂಥ ಅಂತಃಕರಣಿಗಳಂತೀಯಾ ಖೈದಿಗಳು! ಜೈಲು ವಾಸ ಅನುಭವಿಸಲೆಂಬ ಏಕೈಕ ಉದ್ದೇಶದಿಂದಲೇ ಅಪರಾಧಗಳನ್ನು ಮಾಡಿದೆನೇನೋ! ಅಲ್ಲಿನ ಅನುಭವಗಳನ್ನು ಸವಿವರವಾಗಿ ಹೇಳಲು ಇಲ್ಲಿ ಸಾಧ್ಯವಾಗ್ತಾ ಇಲ್ಲ. ಅದನ್ನೆಲ್ಲ ಹೆಳಿಕೊಳ್ತಾ ಕೂತುಕೊಂಡ್ರೆ ಅದೆ ಒಂದು ದೊಡ್ಡ ನಾವೆಲ್ಲಾಗುತ್ತೆ ಅಷ್ಟೆ! ಕಾಂಕ್ರೀಟ್ ಜಂಗಲ್ ಸಿನೆಮಾ ನೋಡಿರಬಹುದಾದ ನೀನು ಹೋಮೋ ಸೆಕ್ಸುಯಲ್ ರೌಡಿಯಿಜಂ, ಫೈಟಿಂಗ್ ಇತ್ಯಾದಿ ಕುರಿತು ಲೆಕ್ಕ ಹಾಕುತ್ತಿರಬಹುದು. ಹೊರ ಪ್ರಪಂಚದಲ್ಲಿಯೇ ಸಭ್ಯಸ್ಥ ಪ್ರಜೆಗಳಿಗಿಂತ ಪರಿಶುಭ್ರವಾದ ಜೈಲೊಳಗಿರೋ ಖೈದಿಗಳೇ ಹೆಚ್ಚು ಸುಖವಾಗಿದ್ದಾರೆ. ಇಂಥೋನು ಅಲ್ಲಿಗೆ ಹೇಗೆ ಬಂದ? ಅಂಥೋನು ಇಲ್ಲಿಗೆ ಹೇಗೆ ಬಂದ? ಅಂಥ ಲೆಕ್ಕ ಹಾಕುವುದರಲ್ಲಿಯೇ ದಿನಗಳು ಹೋಗಿಬಿಡ್ತವೆ ಅಲ್ಲಿ… ಇದು ಸ್ವಯಂ ಕೃತಾನುಭವದಿಂದ ಮಾತ್ರ ದಕ್ಕುವಂತಾದ್ದು; ಓದಿದ್ರೆ ಕೇಳಿದ್ರಷ್ಟೆ ಸಾಕಾಗದು…” ಎಂದು ಹೇಳಿ ಶಾಮಣ್ಣ ಪಾತ್ರವು ಯೋಗಿಯಂತೆ ಕಂಗೊಳಿಸಿತು.

ಅಪರಾಧೀ ಪ್ರಪಂಚವನ್ನು ಸಮರ್ಥಿಸುತ್ತಿರುವಂತೆ ಮಾತಾಡುತ್ತಿರುವ ಶಾಮಣ್ಣ ಪಾತ್ರವನ್ನು ನೋಡಿ ನಾನು ಗಾಬರಿಗೊಂಡೆ. ‘ಭಾದಂಸಂ’ಯನ್ನು ಲೇವಡಿ ಮಾಡುವುದೇನು ಸಣ್ಣ ಅಪರಾಧವಲ್ಲ! ಫ್ಯಾಸಿಜಂ ಆಡಳಿತವಿರುವ ರಾಷ್ಟ್ರಗಳಲ್ಲೇನಾದರೂ ಈ ರೀತಿ ಮಾತಾಡುವ ಶಾಮಣ್ಣನ ಆತ್ಮವನ್ನೂ; ಅವನನ್ನು ಯಥಾವತ್ತಾಗಿ ಬರೆಯುತ್ತಿರುವ ಲೇಖಕನಾದ ನನ್ನನ್ನೂ, ಇದೆಲ್ಲ ಅಡಕಗೊಂಡಿರುವ ಕಾದಂಬರಿಯನ್ನೂ ಎಳೆದೊಯ್ದು ಮರಣದಂಡನೆಗೊಳಗಾದ ಖೈದಿಗಳು ವಾಸಿಸುವ ಗೂಡೊಳಗೆ ಎಸೆದು ಬಿಡುತ್ತಿದ್ದರೆಂದುಕೊಂಡೆ. ಎಷ್ಟಿದ್ದರೂ ನಮ್ಮದು ಪವಿತ್ರ ಭಾರತ ದೇಶ… ಇಲ್ಲಿನ ಡೆಮಾಕ್ರಸಿ ಪ್ರಪಂಚದಲ್ಲೆಲ್ಲ ಪ್ರಸಿದ್ಧವಾದುದು. ಈ ದೇಶದಲ್ಲಿ ‘ಊಮಾಹೇ’ಯಿಂದ ಮೊದಲಾಗಿ ಪ್ರತಿಯೊಂದೂ ಡೆಮಾಕ್ರಟಿಕ್ಟಾಗಿಯೇ ನಡೆಯುತ್ತಿರುವುದರಿಂದ ಸೆರೆಮನೆಗಳನ್ನು ವೈಭವೀಕರಿಸುವ ಮನೋಭಾವವನ್ನು ಅಪರಾಧವೆಂದು ಪರಿಗಣಿಸುವುದು ಸಾಧ್ಯವಿಲ್ಲ. ಇದೊಂದೆ ಸಮಾಧಾನದ ಸಂಗತಿ.

…ಬೇಸರದ ಇನ್ನೊಂದು ಸಂಗತಿ ಎಂದರೆ ಶಾಮಣ್ಣನಂಥ ಒಬ್ಬ ಕ್ರಿಯೇಟಿವ್ ಮನೋಭಾವದ ವ್ಯಕ್ತಿ ಸೆರೆಮನೆಯಲ್ಲಿ ಮೂರು ವರ್ಷಕಾಲ ಇದ್ದರೂ ಥ್ರಿಲ್ಲಾಗಿ ಯೋಚಿಸುವುದನ್ನು ಕಲಿಯದಿದ್ದುದುದು… ತನ್ನ ಜೀವನಕ್ಕೆ ತಾನು ಒಂಚೂರು ಗರಂ ಮಸಾಲೆಯನ್ನಾದರೂ ಸವರುವುದು ಬೇಡವೆ? ಜೀವನ ತಾಳಿಕೆ ಬರುವುದರ ಬಗ್ಗೆ ಯೋಚಿಸರಾದೀತೇನು? ಅದು ಜನರಿಗೆ ರುಚಿಸುವುದು ಬೇಡವೆ? ಮಾಮೂಲು ಸೆರೆಮನೆಯಲ್ಲಿದ್ದರೆ ನಾನು ಯೋಚಿಸುತ್ತಿರಲಿಲ್ಲ. ಎರಡು ವರ್ಷ ಬಳ್ಳಾರಿ ಜೈಲಿನಲ್ಲಿದ್ದು ಇನ್ನೊಂದು ವರ್ಷವನ್ನು ಕಳೆದದ್ದು ಯರವಾಡ ಜೈಲಿನಲ್ಲಿ. ಬಳ್ಳಾರಿ ಜೈಲು ದೇಶದ ಪ್ರಮುಖ ಜೈಲುಗಳಲ್ಲಿ ಒಂದು… ದೇಶದ ಸುಪ್ರಸಿದ್ಧ, ಕುಪ್ರಸಿದ್ಧರೆಲ್ಲರೂ ಇದೇ ಜೈಲಿನಲ್ಲಿದ್ದು ಹೋಗಿರುವವರೇ! ರೌಡಿ ಜಯರಾಮನ ಆತ್ಮರಕ್ಷಣೆ ದೃಷ್ಟಿಯಿಂದ ಅವನನ್ನು ದೂರದ ಬಳ್ಳರಿಯಲ್ಲಿರಿಸಿದ್ದು. ಅನಂತರ ಶಿವಮೊಗ್ಗೆಯಲ್ಲಿ ತರಬೇತಿ ಪಡೆದು ಬೆಂಗಳೂರಲ್ಲಿ ದುಃಸ್ವಪ್ನಗಳನ್ನು ನಿರ್ಮಿಸಿ ಮಾರುತ್ತಿರುವ ಕೆಲವು ರೌಡಿಗಳು ಪೋಲೀಸರಿಗೆ ಬೇಕೆಂದೇ ಸಿಕ್ಕು ಶಾಂತಿಭದ್ರತೆ ದೃಷ್ಟಿಯಿಂದ ಬಳ್ಳರಿ ಜೈಳಿಗೆ ವರ್ಗಾಯಿಸುವಂತೆ ಪ್ರಯತ್ನಿಸಿ ಸಫಲರಾದರೆಂದೂ, ಅವರು ಮಾರಣಾಯುಧಗಳಿಂದ ರೌಡಿ ಜಯರಾಂ ಕಂಗಾಲಾಗಿ ಬಾಯಿ ಬಾಯಿ ಬಡೆದುಕೊಂಡನೆಂದೂ; ಆಗ ಸಣಕಲು ದೇಹದ ಬ್ರಾಹ್ಮಣ ತರುಣೋರ್ವ ಮಿಂಚಿನಂತೆ ಮಧ್ಯೆ ಪ್ರವೇಶಿಸಿ ರೌಡಿಯನ್ನು ಸಮರ್ಥವಾಗಿ ಎದುರಿಸಿ, ಜಯರಾಂನ ಪ್ರಾಣ ಕಾಪಾಡಿದನೆಂದು ವದಂತಿ ಹಬ್ಬಿತು. ಪತ್ರಿಕೆಯೊಂದರಲ್ಲಿ ‘ವಿಚಿತ್ರ ಆದರೂ ಸತ್ಯ’ ಎಂಬ ಕಾಲಂನಲ್ಲೂ ಇದು ಪ್ರಕಟವಾಗಿತ್ತು.

ಅವರ ಮುಂದೆ ಕಂಸಗಳ ನಡುವೆ ಕದಂಬ ಮಯೂರ ಶರ್ಮರನ್ನು ಹೋಲುವ ಬಡಕಲು ದೇಹದ ಆ ತರುಣ ತನ್ನ ನಿಜ ನಾಮಧೇಯವನ್ನು ಪ್ರಕಟಿಸಲು ಒಪ್ಪಿಲ್ಲ! ಎಂಬುದು.
ಆ ಬ್ರಾಹ್ಮಣ ತರುಣ ಬೇರೆಯಾರಿರಲು ಸಾಧ್ಯ ನಮ್ಮ ಶಾಮಣ್ಣನಲ್ಲದೇ? ಅದರ ಬಗ್ಗೆ ರಂಜಕವವಾಗಿ ಹೇಳದಿದ್ದರೆ ಕ್ಯಾಪ್ಟನ್ ತಂದೆಯ ಗಂಟೇನು ಹೋಗುತ್ತಿತ್ತು.
“ಅಲ್ಲಾ ಶಾಮೂ… ರೌಡಿಗಳ ಜಗಳದ ಬಗ್ಗೆ ಒಂಚೂರು ಕ್ಲೂ…” ಎಂದು ನಾನು ಹೇಳುತ್ತಿದ್ದಂತೆ ಶಾಮನ ಪಾತ್ರವು “ಖಬರ್ಧಾರ್… ಆ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿದೀ ಅಂದ್ರೆ ನಿನ್ನ ಕಾದಂಬರಿ ತ್ರಿಶಂಕು ಆಗಿಬಿಡತ್ತೆ…” ಎಂದಿತು.
” ಆ ರೌಡಿ ಜಯರಾಂಗೆ ನೀನು ಕೆಲವು ಅರಣ್ಯಕಗಳನ್ನು ಭೋದಿಸಿದಿಯಂತಲ್ಲ… ಅದರ ಬಗೆಗಾದರೂ… ಎನ್ನುತ್ತಿದ್ದಂತೆ ಅದು ಮತ್ತೆ “ಖಬರ್ಧಾರ್!” ಎಂದು ಎಚ್ಚರಿಸಿತು. ’ಅದು ತುಂಬ ಗೋಪ್ಯ ಕಣಪ್ಪಾ…ಕೇಳ್ದೋರ ತಲೆ ಉಳಿಯೊದಿಲ್ಲ” ಎಂದು ಪೂರ್ಣ ವಿರಾಮ ಹಾಕಿತು.
ಕೆಲಕಾಲ ಬರಹ ಸ್ಥಗಿತ ಗೊಂಡಿತು. ಸ್ವಲ್ಪ ಹೊತ್ತು ಹೇಳುವವನ, ಕೇಳುವವನ ನಡುವೆ ಮೌನ ನೆಲೆಸಿತು. ಶಾಮಣ್ಣನ ಕಥೆ ಒಂದೆರಡು ಉಪ ಭಾಗಗಳೊಂದಿಗೆ ಮುಗಿಯಲಿರುವ ಸಂಗತಿ ನೆನಪಾಗಿ ಬೇಸರ ಆವರಿಸಿತು.
ಸುಮ್ಮನೆ ಕೂತುಕೊಂಡರೆ ನನ್ನ ಆಲೋಚನೆ ತರಗೆಲೆಯಂತೆ ದಿಕ್ಕು ದೆಸೆ ಇಲ್ಲದೆ ಹಾರಾಡಿ ಬರಹ ತಲೆಕೆಳಗಾಗಬಹುದೆಂದುಕೊಂಡೆ….
“ಶಾಮಾ… ನಿನ್ನ ಕಥೆ ದುರಂತಮಯವಾದುದು ಹಾಗೆ ಹೀಗೆ ಅಂತ ಹೇಳಲು ನನಗೆ ಇಷ್ಟವಿಲ್ಲ ಕಣಪ್ಪಾ… ಜೈಲಿನಲ್ಲಿ; ಜೈಲಿನ ನಂತರ; ಮತ್ತೆ ಇತ್ಯಾದಿ ವಿಶಯಗಳ ಬಗ್ಗೆ ಈಗಾಗಲೇ ಓದುಗರಿಗೆ ಒಂದು ಐಡಿಯಾ ಕೊಟ್ಟಾಗಿದೆ… ಈಗೇನಿದ್ರು ನಿಂದು ಫಿಲ್ ಅಪ್ ದಿ ಬ್ಲಾಂಕ್ಸ್ ಕೆಲಸ… ಅಷ್ಟು ಮಾಡ್ತೀಯಾ ತಂದೆಯೇ!” ಎಂದೆ.
“ಆಯತಪ್ಪಾ… ನನ್ಗೂ ಸುಸ್ತಾಗಿದೆ… ಹೇಳೋದು ಹೇಳಿ ನನ್ನ ಪಾಡಿಗೆ ನಾನು ನಿರ್ಗಮಿಸುತ್ತೇನೆ… ಮುಂದೆ ಹೇಳೋದು ಒಂದು ರೀತಿ ಸೆಕೆಂಡ್ ಪೇಪರ್ ಎದ್ದಂತಿರೋದ್ರಿಂದ ನಾನು ವರ್ಣನಾ ತಂತ್ರ ಬಳಸುವುದಿಲ್ಲ. ನೀನೂ ಈ ತರಲೆ ಕೆಲಸ ಮಾಡಬೇಡ. ರೌಡಿ ಜಯರಾಮನಿಗೆ ನಾನು ಭೋದಿಸಿದ ಅರಣ್ಯಕಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ… ತಿಳೀತಾ” ಅಂದ.
“ಆಗ್ಲಪ್ಪ… ಅರಣ್ಯಕಗಳನ್ನು ಕಟ್ಕೊಂಡು ನಾನೇನು ಮಾಡ್ಲಿ? ಕಡ್ಲೆಹೊಡ್ದು ಗಪ್ಪಂತ ಬಾಯಿಗೆ ಹಾಕ್ಕೋಂಡಂತೆ ಸೂಚ್ಯವಾಗಿ ಹೇಳಿಬಿಡು ಅಷ್ಟೆ… ಈಗಾಗ್ಲೆ ಪ್ರಕಾಶಕ ಮಿತ್ರ ಚನ್ನಬಸವಣ್ಣ ಕಾದಂಬರಿಯ ಲೆಂಗ್ತ್ ಬಗ್ಗೆ ತಲೆ ನೋವು ಮಾಡ್ಕೊಂಡಿದ್ದಾನೆ… ಇದ್ರ ಮುನ್ನೂರೈವತ್ತು ಪುಟಗಳಷ್ಟು ಡಿಟಿಪಿ ಕೆಲಸ ಮುಗ್ದು ಪ್ರೂಫ್‌ಗಂತ ಬಂದಾಗಿದೆ. ಚುನಾವಣೆ ಕೆಲಸಕ್ಕೆ ಹೋಗಬೇಕೆಂದಿರೋದ್ರಿಂದ ಅದನ್ನೆಲ್ಲ ನೋಡ್ಲಿಕ್ಕೆ ನನಗೂ ಪುರಸೊತ್ತಿಲ್ಲ. ಪ್ರೂಫ್ ನೋಡ್ಲಿಕ್ಕೇ ಅಂತ ‘ಅನಾಥ ಪಕ್ಷಿಕಲರವ’ ಖ್ಯಾತಿಯ ಕಥೆಗಾರ ವೀರಭದ್ರರವರಿಗೆ ಈಗಾಗ್ಲೆ ಕಳಿಸಿರಲೂಬಹುದು… ಹೇಳೋದು ಹೇಳಿಬಿಟ್ರೆ ಬರೆಯೋದು ಬರೆದು ಪ್ರಕಾಶಕನಿಗೆ ಮುಟ್ಟಿಸಿ ನಾಳೆ ದಿನ ಎಣ್ಣೆಸ್ನಾನ ಮಾಡಬೇಕೆಂದುಕೊಂಡಿದ್ದೇನಿ… ಏನಂತೀಯಾ?… ಎಂದು ಇರೋ ವಿಷಯ ಅರಿಕೆ ಮಾಡಿಕೊಂಡೆ.
“ಮುಲಾಜಿಗೆ ಬಸುರಾಗಿ ಹಡೆಯೋದ್ಕೆ ಮೂಲೆ ಮೂಲೆ ಹುಡುಕಾಡುವ ಹೆಣ್ಣಿಗೂ, ನಿನಗೂ ಯಾವ ವ್ಯತ್ಯಾಸವಿಲ್ಲ. ಮುಂದಿನದ್ಕೆಲ್ಲ ನನ್ನ ಜವಾಬ್ದಾರನನ್ನಾಗಿ ಮಾಡಬೇಡ… ಮುಂದಿಂದು ಹೇಳ್ತೀನಿ ಬರಕೋ” ಎಂದು ಶಾಮಣ್ಣ ಪಾತ್ರವು ಹೇಳಲು ಶುರು ಮಾಡಿತು.
*
*
*
ನೂರಕ್ಕೇರದೆ ಆರಕ್ಕಿಳಿಯದೆ ನಾನು ಜೈಲಿನಲ್ಲಿದ್ದೇ ಅಂತ ಹೇಳಿದೆನಲ್ಲ… ಅದೊಂದು ನಮೂನೆಯ ಅನಾಥ ಪಕ್ಷಿಯ ಕಲರವ ಆಗಬಹುದಿತ್ತೇನೋ? ಜೈಲು ಸ್ವಂತ ಮನೆಗಿಂತಹೆಚ್ಚು ಆಪ್ಯಾಯಮಾನವಾಗಿತ್ತು. ಅಲ್ಲಿರುವ ಖೈದಿಗಳು ಅದಾವ ಜನುಮದ ಸಂಬಂಧೀಕರೋ ಎಂಬಂತೆ ಹೆಚ್ಚು ಅಂತಃಕರಣವುಳವರಾಗಿದ್ದರು. ಬೇಡ ಎಂದರೂ ಕೇಳದೆ ನನ್ನ ಪಾಲಿನ ಕೆಲಸವನ್ನು ಅವ‌ಏ ಮಾಡಿಮುಗಿಸುತ್ತಿದ್ದರು. ತಮ್ಮ ಪಾಲಿನ ಆಹಾರವನ್ನು ನನಗೆ ಕೊಟ್ತು ನಾನು ತಿನ್ನುವುದನ್ನು ನೋಡಿ ಹರ್ಷಿಸುತ್ತಿದ್ದರು. ಅದಕ್ಕಿಂತ ದೊಡ್ಡ ಮಾನವೀಯ ಗುಣ ಬೇಕೇನು? ಬರೋರು ಬರುತ್ತಿದ್ದರು ಹೋಗೋರು ಹೋಗುತ್ತಿದ್ದರು. ಬೀಗರ ಮನೆಗಿಂತಲೂ; ತವರು ಮನೆಗಿಂತಲೂ ಅಷ್ಟೆ ಏಕೆ ಒಂದು ದೇವಾಲಯಕ್ಕಿಂತಲೂ ಹೆಚ್ಚು ಆತ್ಮೀಯವಾಗಿದ್ದ ಜೈಲಿನಲ್ಲಿ ನಾನೊಂದು ಆತ್ಮಕಥೆ ಬರೆಯುತ್ತಿದ್ದೆ. ವರ್ಗಾವಣೆ ಕಾಲದಲ್ಲಿ ಅದು ಅಲ್ಲೆಲ್ಲೋ ಮಿಸ್‌ಪ್ಲೇಸ್ ಆಯ್ತು. ಬೇಕಾದರೆ ನೀನು ಹೋಗಿ ಹುಡುಕಿಕೋ…

ಚಟಗಳ ಬಗ್ಗೆ ಹೇಳುತ್ತಿದ್ದೆನಲ್ಲ? ಜೈಲಿನಲ್ಲಿ ನಮ್ಮ ಶಾಮ ದುಶ್ಚಟಗಳಿಂದ ಮುಕ್ತನಾಗಬಹುದೆಂದು‌ಊ, ಹೆಚ್ಚು ಆರೋಗ್ಯದ ಕಾಂತಿಯಿಂದ ಹೊಳೆಯುತ್ತ ಮೈಕೈ ತುಂಬಿಕೊಂಡಿರಬಹುದೆಂದೂ ನೀನು ಈಗಾಗಲೇ ಆಲೋಚಿಸಿದ್ದಿರಬಹುದು. ಹಾಗೆ ಅಲೋಚಿಸಿದರೆ ನಿನ್ನಂಥ ಮೂರ್ಖ ಬೇರೆ ಯಾರೂ ಇರಲಿಕ್ಕಿರಲಿಲ್ಲವೆಂದು ಹೇಳುವೆ. ಜೈಲೆಂದರೆ ಅದೇನು ನಿರ್ವಾತ ಪ್ರದೇಶ ಅಂದುಕೊಂದಿರುವಿಯಾ! ಆಧ್ಯಾತ್ಮವಾದಿಗಳಿಗೆ, ಸನಾತನಿಗಳಿಗೆ ಬೇಕಾದ ಆಧ್ಯಾತ್ಮಿಕ ಪರಿಕರಗಳು ಸಿಗುವ ವ್ಯವಸ್ಥೆ ಅಲ್ಲಿರುವುದೆಂದ ಮೇಲೆ ದುಶ್ಚಟಗಳ ತೀಟೆ ಪೂರೈಸುವ ವಸ್ತುಗಳು ಸಿಗದೆ ಇರಲಿಕ್ಕೆ ಸಾಧ್ಯ್?ವೇ? ಅಲ್ಲಿರೋ ಪೋಲೀಸರೂ ಅವರೆಲ್ಲ ಎಷ್ಟು ಒಳ್ಳೆಯವರೆಂದರೆ ಅವರ ಖಾಕಿ ದಿರಿಸುಗಳ ಒಳ ಜೋಬುಗಳಲ್ಲಿ ಸಿಗರೇಟು, ಬೀಡಿ, ಗಾಂಜಾ, ಬ್ರಾಂದಿ, ವಿಸ್ಕಿ ಸಾರಾಯಿ ಎಲ್ಲ ಇರುತ್ತಿದ್ದವು ನೋಡು. ಅಲ್ಲದೆ ಖೈದಿಗಳು ನನ್ನ ಮೇಲೆ ಬಿದ್ದು ಸಾಯುತ್ತಿದ್ದುದಕ್ಕೆ ನಾನು ಚಟಗಳ ದಾಸನಾಗಿದ್ದುದು ಕೂಡ ಒಂದು ಕಾರಣ. ಎಲ್ಲವನ್ನೂ ನಾವು ಹಂಚಿಕೊಂಡು ಸುಖಿಸುತ್ತಿದ್ದೆವು. ಅಲ್ಲದೆ ನನ್ನ ಜೇಬಿನಲ್ಲಿ ಇನ್ನೊಂದು ಹತ್ತು ಮಂದಿಗೆ ಸಪಲ್ಯಾ ಮಾಡುವಷ್ಟು ಚಟಾತೀರಿಸೋ ಸಾಮಾನುಗಳಿರುತ್ತಿದ್ದವು. ಆಗಾಗ್ಗೆ ಮಾತಾಡಿಸಲೆಂದೋ, ಹೊರಗಿನ ಪ್ರಪಂಚ ಸೇಡು ತೀರಿಸಿಕೊಳ್ಳಲು ಶಾಮನ ಬಿಡುಗಡೆಯ ದಿನಕ್ಕಾಗಿ ಎದುರು ನೋಡುತ್ತಿದೆ ಎಂದು ಹೇಳಲಿಕ್ಕೆ ಬರುತ್ತಿದ್ದ ರಾಖೇಶ್ ನನ್ನಿಂದ ಅಂಥ ಕೆಲವು ವಸ್ತುಗಳನ್ನು ಗುಟ್ಟಾಗಿ ಪಡೆದುಕೊಂಡು ಹೋಗುತ್ತಿದ್ದ, ಕೊಟ್ಟದ್ದು ಪರರಿಗೆ, ಬಚ್ಚಿಟ್ಟಿದ್ದು ಪರರಿಗೆ ಪರರಿಗೆ ಕೊಟ್ಟದ್ದು ಕೆಟ್ಟದ್ದು ಎನಬೇಡ! – ಎಂಥ ಅದ್ಭುತವಾದ ಮಾತು, ಯಾವ ಕಾರ್ಲ್‌ಮಾರ್ಕ್ಸ್‌ಗೂ ಇಷ್ಟು ಸಿಂಪಲ್ಲಾಗಿ ಮೀನಿಂಗ್‌ಫುಲ್ಲಾಗಿ ಹೇಳಲು ಸಾಧ್ಯವಿಲ್ಲ!…

ನಾನು ಒಳಗಿದ್ದಾಗ ನನ್ನನ್ನು ನೋಡಿಕೊಂಡು ತಾಯಿ ಮತ್ತು ಹೆಂಡತಿ ಎಳೆಯಮಕ್ಕಳೊಂದಿಗೆ ಬಂದು ಹೋಗಿದ್ದು ಉಂಟು. ಅವರು ಬರುತ್ತಿದ್ದುದು ಕೆಲವು ಶಾಸ್ತ್ರಕರ್ಮಗಳಿಗೆ ಅಂತ ಆಮೇಲೆ ಅರ್ಥವಾಯಿತು. “ಜೈಲಿನಲ್ಲಾದ್ರು ಸಂಧ್ಯಾವಂದನೆ, ಧ್ಯಾನ, ಉಪಾಸನೆ ಮಾಡಿ ಸದ್ಗತಿ ಕುರಿತು ಆಲೋಚಿಸು” ಎಂದು ಬುದ್ಧಿ ಹೇಳುತ್ತಿದ್ದ ಆ ವೃದ್ಧೆಗೇನು ಗೊತ್ತು ಜೈಲಿನೊಳಗೆ ಉದಯಾಸ್ತ ಮಾನಗಳಿರುವುದಿಲ್ಲ ಅಂತ? ಈ ನೆಪದಿಂದಲಾದರೂ ನಾನು ಅನಸೂಯಳಿಂದ ದೂರವಿದ್ದುದರ ಬಗೆ ಅವರು ಒಳಗೊಳಗೆ ಸಂತೋಷಪಡುತ್ತಿದ್ದರು. ಅನಸೂಯ ತಿಂಗಳಿಗೊಮ್ಮೆಯಾದರೂ ಬಂದು ಏನೆಲ್ಲ ಕೊಟ್ಟು ಮಾತಾಡಿಸಿಕೊಂಡು ಹೋಗುತ್ತಿದ್ದ ಆಕೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿರಲಿಲ್ಲ. ತಾನು ಸಂಪಾದಿಸಿಟ್ಟಿದ್ದೆಲ್ಲವನ್ನೂ ಬ್ಯಾಂಕಿಗೆ ಕಟ್ಟಲೆಂದೋ; ಕೋರ್ಟು ಕಛೇರಿಗೆಂದೋ ಖರ್ಚು ಮಾಡಿ ಬಿಟ್ಟಿದ್ದಳು. ಕೊನೆಗೆ ಉಳಿದಿರೋದೊಂದು ದೇಹವನ್ನೇ ನಗದಾಗಿ ಪರಿವರ್ತಿಸಿ ಪೋಲೀಸ್ ಅಧಿಕಾರಿಗಳ ಬಳಿ; ಬ್ಯಾಂಕ್ ಅಧಿಕಾರಿಗಳ ಬಳಿ; ವಕೀಲರ ಬಳಿ, ಶಿರಸ್ತೇದಾರರ ಬಳಿ ದಟ್ಟಂಡಿ ದಾರಂಡಿ ಅಲೆದಾಡಿ , ಅದನ್ನೇ ಫೀಜಿನ ರೂಪದಲ್ಲಿ ಕಟ್ಟುತ್ತ ನನ್ನ ಬಿಡುಗಡೆಗಾಗಿ ಅಹರ್ನಿಶಿ ಶ್ರಮಿಸುತ್ತಿದ್ದಳು. ಇದು ಯಾವ ಗರತಿಯೂ ತನ್ನ ಗಂಡನ ಕ್ಷೇಮಕ್ಕಾಗಿ ಮಾಡಲು ಸಾಧ್ಯವಿಲ್ಲದ ಕೆಲಸ. ಅನಸೂಯ ತನ್ನ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಳು ಕೂಡ, ಆದರೆ ಆಕೆಯ ಪ್ರಯತ್ನ ನನಗೆ ಬೇಸರ ತರಿಸಿತ್ತು. ಜೈಲಿನ ತತ್ವ ಶುದ್ಧ ವಾತಾವರಣದಲ್ಲಿಯೇ ಕೊನೆ ಉಸಿರು ಬಿಡಲು ನಿರ್ಧರಿಸಿದ್ದ ನಾನು ಆಕೆ ಬಂದಾಗಲೆಲ್ಲ ಬೇಡಾಂದ್ರೆ ಬೇಡ ಎಂದು ಖಡಾಖಂಡಿತವಾಗಿ ಹೇಳದೆ ಇರುತ್ತಿರಲಿಲ್ಲ ನಾನು. ನನ್ನ ವಿಧೇಯತೆಗೆ ಮೆಚ್ಚಿ ಜೈಲಿನ ವಾತಾವರಣ ಎರಡು ಅತ್ಯುತ್ತಮ ಬಹುಮಾನಗಳನ್ನು – ದಯಪಾಲಿಸಿತ್ತು. ಒಂದೆ ಎಂದರೆ ಹೊಟ್ಟೆ ಹುಣ್ಣು, ಎರಡು ಅಂದರೆ ಕ್ಷಯ, ಇಂಗ್ಲೀಷಿನಲ್ಲಿ ಟೀಬಿ ಅಂತಾರಲ್ಲ ಅದು. ಇವೆರಡಕ್ಕೂ ದೇಹ ಮೇಯಲು ಎಲ್ಲ ಅವಕಾಶ ಮಾಡಿಕೊಟ್ಟು ನನ್ನ ದೇಹವೆಂಬ ಆಡುಂಬೊಲ ನೋಡುತ್ತ ನಾನು ದೂರದಲ್ಲಿ ಕೂತಿದ್ದು ಬಿಡುತ್ತಿದ್ದೆ. ಅವು ಮೇಯ್ದು ದಷ್ಟಪುಷ್ಟವಾಗುತ್ತಿದ್ದುದರ ಸುಳಿವನ್ನು ನಾನು ಯಾರಿಗೂ ಕೊಡಲಿಲ್ಲ. ಕೊನೆಗೂ ಯರವಾಡ ಜೈಲಿನಲ್ಲಿ ಕೆಲಕಾಲ ಇದ್ದು ಕೆಲ ಕಾಲದನಂತರ ಅನಸೂಯ ನನ್ನನ್ನು ವಕೀಲರ ಮೂಲಕ ಬಿಡುಗಡೆ ಮಾಡಿಸಿಕೊಂಡು ಕೊತ್ತಲಗಿಗೆ ಕರೆದೊಯ್ದಳು. ನನ್ನ ಬಿಡುಗಡೆಯಿಂದಾಗಲೀ; ಆಗಮನದಿಂದಾಗಲೀ ಕೊತ್ತಲಗಿಯ ಮಂದಿ ಸಂಭ್ರಮಿಸಲಿಲ್ಲ. ಶವವನ್ನು ಹೂತಿಡಲ್ಪಟ್ಟಂಥ ಗುದ್ದಿನ ಕಡೆ ನೋಡುವಂತೆ ನನ್ನ ಕಡೆ ನೋಡುತ್ತಿದ್ದರು. ಅನಸೂಯ ನನ್ನ ದೇಹ ಕೃಶಿಸುತ್ತಿರುವುದನ್ನು ತಡೆಯಲು ದೊಡ್ಡ ದೊಡ್ಡ ಊರುಗಳಿಗೆ ಕರೆದುಕೊಂದೊಯ್ದು ಇಲಾಜು ಮಾಡಿಸುವ ಪ್ರಯತ್ನ ಮಾಡಿಸಿದಳು. ರೋಗಿಯೇ ಸಹಕಾರ ಕೊಡಲಿಲ್ಲವೆಂದ ಮೇಲೆ ವೈದ್ಯರಾದರೂ ಏನು ಮಾಡುವರು? ಅವರು ಕುಡಿಯುವುದು ಬೇಡವೆಂದು ಹೇಳಿದ ನಂತರವೇ ನಾನು ಹೆಚ್ಚು ಹೆಚ್ಚು ಕುಡಿಯಲಾರಂಭಿಸಿದ್ದು. ಅನಸೂಯಾ ಯಾವ ಅಂಗಡಿಯಿಂದ ಔಷಧಿ ಕೊಡಿಸುತ್ತಿದ್ದಳೋ ಅದೇ ಔಷದಿಯನ್ನು ಆಕೆಯ ಕಣ್ಣು ತಪ್ಪಿಸಿ ಅದೇ ಅಂಗಡಿಯವರಿಗೆ ಕಡಿಮೆ ದರಕ್ಕೆ ಮಾರಿ ಅದರಿಂದ ಬಂದ ಹಣದಿಂದ ಎರಡು ಪಾಕೆಟ್ಟಾದರೂ ಸಾರಾಯಿ ಕೊಂಡು ಕುಡಿಯುತ್ತಿದ್ದೆ.‘ನೀನು ನನಗಾಗಿ ಬದುಕಬೇಕೋ ಶಾಮಾ’ ಎಂದು ಆಕೆಯೂ!, ನಾನು ನಿನಗಾಗಿ ಸತ್ತು ಬದುಕುವೆನೆಂದು ನಾನೂ ಜಗಳ ಆಡುತ್ತಿದ್ದೆವು. ಬದುಕಿಸುವಳೆಂಬ ಭಯದಿಂದ ನಾನು ರಾಖೇಶನ ಆಸರೆ ತಪ್ಪಿಸಿಕೊಂಡು ಹೋಗಿ ಗ್ರಾಮದ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆನು. ಕೆಲವರು “ಸಂಗ್ಯಾ ಬಂದ, ಸಂಗ್ಯಾ” ಎಂದು ತಮಾಷೆ ಮಾಡುತ್ತಿದ್ದರು. ಇನ್ನು ಕೆಲವರು “ಏನ್ರೀ ಶಾಮಾಶಾಸ್ತ್ರಿಗಳೇ ತಮ್ಮ ಆಗಮನ ಈ ಕಡೆ ಬರೋಣವಾಯ್ತು” ಎಂದು ವ್ಯಂಗವಾಗಿ ಸಂಭೋದಿಸುತ್ತಿದ್ದರು. ನನ್ನ ಮೇಲೆ ಆ ಥರದ, ಈ ಥರದ ಯಾವ ಮಾತುಗಳೂ ಪರಿಣಾಮವನ್ನುಂಟು ಮಾಡುತ್ತಿರಲಿಲ್ಲ. ಅವರೆಲ್ಲ ಅಂದುಕೊಂಡಿದ್ದಕ್ಕಿಂತ ನಾನು ನನ್ನ ಊರುಗೋಲಾದ ರಾಖೇಶನ ಸಹಾಯದಿಂದ ಒಂದು ಹೆಜ್ಜೆ ಮುಂದೆಹೋಗುತ್ತಿದ್ದೆ. ಮೇಲ್ಜಾತಿಯವರು ರೂಪಾಯಿಗೆ ಹದಿರಾಣೆಯಷ್ಟು ನನ್ನನ್ನು ತಿರಸ್ಕರಿಸಿದ್ದರಿಂದ ನಾನು ಸಹಜವಾಗಿ ಕಾಟಗರ, ಕಪ್ಪು ಪ್ರೀತಿಗೆ ಪಾತ್ರನಾದೆ. ಅವರ ದೃಷ್ಟಿಯಲ್ಲಿ ನಾನು ಶಾಮಾ ಶಾಸ್ತ್ರಿಯಾಗಿರಲಿಲ್ಲ. ಕೇವಲ ಶಾಮನಾಗಿದ್ದೆ; ಶಾಮಣ್ಣನಾಗಿದ್ದೆ. ತಮ್ಮ ಕೇರಿಗಳಲ್ಲಿ ನಾಮಕರಣದಿಂದ ಹಿಡಿದು ಮರಣದವರೆಗೆ ಯಾವುದೇ ಮಂಗಳ, ಸೂತಕ ಕಾರ್ಯಕ್ರಮಗಳಿರಲಿ ನನ್ನ ಬಿಟ್ಟು ಮಾಡುತ್ತಿರಲಿಲ್ಲ. ವೇದಶಾಸ್ತ್ರ ಪಾರಾಯಣನೋರ್ವ ತಮ್ಮ ಸಹ ಬಾಂಧವನೆಂಬಂತೆ ಅವರು ನನ್ನನ್ನು ಗೌರವಿಸುತ್ತಿದ್ದರು. ಅವರು ತಮ್ಮ ಕಷ್ಟ ಸುಖಗಳನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು. ನಾನದಕ್ಕೆ ಏನೋ ಹೇಳುತ್ತಿದ್ದೆ. ಕಾಕತಾಳೀಯವಾಗಿ ಒಮ್ಮೊಮ್ಮೆ ಅದು ನಿಜವಾಗಿ ಬಿಡುತ್ತಿತ್ತು. ಆಗ ಅವರು ಯಾವುದೋ ಒಂದು ದೈವಿಕ ಶಕ್ತಿ ನನ್ನ ನಾಲಿಗೆ ಮೇಲೆ ನೆಲೆಸಿ ಹೇಳಿಸಿತೆಂದು ಭಾವಿಸುತ್ತಿದ್ದರು.

ಕನ್ನಕೊರೆಯುವುದರಲ್ಲಿ ನಿಸ್ಸೀಮನಾದ ಬಿತ್ತನಳ್ಳಿ ರಾಮನಾಗಲೀ; ಎಂಥ ಬೀಗವನ್ನೂ ಸಲೀಸಾಗಿ ತೆಗೆಯಬಲ್ಲ ಕೊರಚರಟ್ಟಿ ಉಜ್ಜನಾಗಲೀ; ಹಲ್ಲಿಯಂತೆ ತೊಲೆ ಜಂತಿಗುಂಟ ಸಾಗಿ ತಿಜೋರಿ ಇರುವ ಜಾಗವನ್ನು ಸಲೀಸಾಗಿ ತಲುಪುವಲ್ಲಿ ನಿಷ್ಣಾತನಾಗಿರುವ ಜೋಗೇರ ಚೌಡನಾಗಲೀ; ಮಿಂಚಿನಂತೆ ಜೇಬುಕತ್ತರಿಸುವ ಜಾತನಾಗಲೀ, ನನ್ನ ಆಶೀರ್ವಾದ ಪಡೆಯದೆ ಕಾರ್ಯಪ್ರವೃತ್ತರಾಗುತ್ತಿರಲಿಲ. ಅಷ್ಟೇ ಅಲ್ಲ ಕುಸ್ತಿ ಆಡಲಿಕ್ಕೆ ಹೋಗುವ ಗೋಣಿ, ಕೋಲ, ಸಾಂತರಂಥವರೂ, ಗುಂಡು ಎತ್ತಲಿಕ್ಕೆಂದು ಊರೂರಲೆಯುವ ಮುಕುಡಿ, ಸೊಚ್ಚ ಮೈಲಿಗ ಮುಂತಾದವರೂ… ಅಷ್ಟೇ ಅಲ್ಲದೆ ಚೊಚ್ಚಲು ಹೆರಿಗೆಗೆಂದು ನೋವು ತಿನ್ನುವವರು, ಅನಧಿಕೃತ ಕಳ್ಳ ಬಸಿರಾದವರು ಇತ್ಯಾದಿ ಎಲ್ಲರೂ… ಅವರ ಸಮಸ್ಯೆಗಳಿಗೆಲ್ಲ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಸ್ಪಷ್ಟವಾಗಿ ನಾಡು ನುಡಿಯುತ್ತಿದ್ದುದೇ ಅವರಿಗೆ ವರದಾನವಾಗಿ ಪ್ರಿಣಮಿಸತೊಡಗಿತು. ನುಣುಚಿಕೊಳ್ಳಬೇಕೆಂದು ನಾನು ಮತ್ತಷ್ಟು ಅಸ್ಪಷ್ಟವಾಗಿ ಸಾಂಕೇತಿಕವಾಗಿ ಮಾತಾಡತೊಡಗಿದೆ. ಉದಾಹರಣೆಗೆ ಒಬ್ಬ ತಾತಾ… “ಓಪನ್ನಾವುದು ಬರ್‍ತದೆ ಓಪನ್ನಾವುದು ಬರ್‍ತದೆ” (ನಲವತ್ತು ದಾಟಿದ್ದ ನಾನವರ ಪಾಲಿಗಾಗಲೇ ತಾತ, ಅಜ್ಜಿ ಆಗಿಬಿಟ್ತಿದ್ದೆ. ಶಾಮಣ್ತಾತೋ; ಶಾಮಣೆಜ್ಜೋ ಎಂದು ಕೂಗುತ್ತಿದ್ದರು. ಇದೊಂದು ರೀತಿ ಗೌರವ ಮೊತ್ತದ ಸಂಭೋಧನೆಯಾಗಿ) ಎಂದು ಕೇಳಿದರೆಂದಿಟ್ಟುಕೋ! ಆಗ ನಾನು “ನಾಕ್ನಾಕ್ಸಾಲಿಗೆ ನವಣೆ ಬಿತ್ತು ಎಂಟೆಂಟು ಸಾಲಿಗೆ ತೊಗರಿ ಬಿತ್ತು ಅಂತಲೋ ನಾಕೆಮ್ಮಿ ತಪ್ಪಿಸ್ಕಂಡ್ವು ಐದೆಮ್ಮೆ ಮನೀಗೆ ಬಂದ್ವು ಅಂತಲೋ; ಅರು ಹಡದೋಕಿ ಮುಂದೆ ಮೂರು ಹಡ್ದಾಕಿ ಗೆಬರಾಡಿ ಹೇಳ್ತಿದ್ಲಂತೆ ಎಂದೋ ಒಗಟು ರೀತಿಯಲ್ಲಿ ಹೇಳಿಬಿಡುತ್ತಿದ್ದೆ. ಅದಕ್ಕವರು ಕಾಣಿಕೆ ರೂಪದಲ್ಲಿ ತಂಬಾಕನ್ನೋ; ಪಾಕೆಟ್ಟನ್ನೋ, ಗಾಂಜಾವನ್ನೋ ಮುಂದಿಟ್ಟು “ಅಜ್ಜೋ… ನಿನ್ ಬಲ ಜಗ ಬಲ… ಆಶರವಾದಿರ್ಲಿ” ಎಂದು ನಮಸ್ಕಾರ ಮಾಡಿ ಹೋಗುತ್ತಿದ್ದರು. ಹೋದವರು ನನ್ನ ತರಾತಿಗಡಿ ಸಂಕೇತ ಭಾಷೆಯ ಶವ ಪರೀಕ್ಷೆ ನಡೆಸಿ ಜೂಜಾಡುತ್ತಿದ್ದರು. ಅವರ ಪೈಕಿ ಅನೇಕರು ಯಶಸ್ವಿಯಾಗುತ್ತಿರುವುದು ಕಂಡು ತಲೆಮರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. “ಲೋ ಶಾಮಾ! ನಿನ್ಗೆ ತಲೆ ಇದ್ರೆ ತಾನೆ ಅದ್ನ ಮರೆಸಿಕೊಳ್ಳೋದು” ಎಂದು ಕೂಗಾಡುತ್ತಿದ್ದ ರಾಖೇಶ ಮತ್ತೆ ನನ್ನನ್ನ ಸಾರ್ವಜನಿಕರ ಕಡೆ ಎಳೆದಾಡುತ್ತಿದ್ದ. ಅಷ್ಟೊತ್ತಿಗೆ ನನಗೆ ಸಾರ್ವಜನಿಕ ಬದುಕಿನಲ್ಲಿ ಗಾಡ್‌ಮನ್ ಅಂಥಾರಲ್ಲ… ಅಂಥದೊಂದು ಪಟ್ಟ ಲಭ್ಯವಾಗಿತ್ತು. ನನ್ನ ವಿಲಕ್ಷಣ ವರ್ತನೆ, ನಿರಭ್ರಮುಖಚಹರೆ, ಒಗಟಿನಂಥ ಮಾತುಕಥೆ; ಅಸಹಜವಾಗಿ ಊಟ ಪಾನ ಮಾಡುತ್ತಿದ್ದುದು ಈ ಎಲ್ಲ ಅಬ್ಸಿರ್ಡಿಟಿಯೇ ಜನರನ್ನು ಆಕರ್ಷಿಸುವ ಕೆಲಸ – ಜನರು ನನ್ನ ಬಗ್ಗೆ ಅಸಹ್ಯಪಟ್ಟುಕೊಳ್ಳಲೆಂದೇ ನಾನು ಈ ರೀತಿ ವರ್ತಿಸ ತೊಡಗಿದ್ದು. ಆದರೆ ಅಂಥ ಅಸಹಜ ನಡೆ ನುಡಿಯೇ ನನ್ನನ್ನು ಗೌರವಯುತ ಸ್ಥಾನದಲ್ಲಿ ಕುಳ್ಳಿರಿಸಿ ಬಿಟ್ಟಿತು. ನನ್ನ ಮೇಲೆ ಜನರಿಟ್ಟಿದ್ದ ಕುರುಡು ನಂಬಿಕೆಯಿಂದ ರಾಖೇಶ ಲಾಭ ಪಡೆಯ ತೊಡಗಿದ್ದ. ನನ್ನನ್ನೂ ಇನ್ನೂ ವಿಲಕ್ಷಣವಾಗಿ ವರ್ತಿಸುವಂತೆ ಪ್ರೇರೇಪಿಸ ತೊಡಗಿದ. ನೆಲದ ಮೇಲೆ ಊಟಮಾಡುವುದು; ಎಂಜಲನ್ನು ಜನರ ಮುಖಕ್ಕೆ ಎಸೆಯುವುದು. ಥೂ ಛೀ ಎಂದು ಉಗುಳುವುದು ಇತ್ಯಾದಿ… ಇದು ತಪ್ಪು ಹಾಗೂ ಶುದ್ಧ ಮೂರ್ಖತನದ್ದು ಎಂದು ನನಗೂ ಗೊತ್ತು. ಸಾರ್ವಜನಿಕ ಜೀವನದಿಂದ ಸಂಪುರ್ಣ ನಗಣ್ಯಗೊಳ್ಳುವ ಇರಾದೆ ಇಟ್ಟುಕೊಂಡೇ ನನು ಅಸಹ್ಯಾತಿ ಅಸಹ್ಯವಾಗಿ ವರ್ತಿಸತೊಡಗಿದೆ. ನಾನು ದೂರ ಹೋದಷ್ಟೂ ಜನ ಹತ್ತಿರ ಬರತೊಡಗಿದರು. ಮನಸಾಲಿ ಸಣ್ಣೀರಜ್ಜ ಎಂಬ ಧಣಿ ನನ್ನನ್ನುದ್ದೇಶಿಸಿ “ಲೇ ಮುದ್ಯಾ ನಾಳೀ ಹೊತ್ಗೆ ನಾನೆಲ್ಲಿರ್‍ತೀನೇಳು?” ಎಂದು ಕೇಳಿದ. ನನಗೇನು ಗೊತ್ತು ಆತ ತನ್ನ ಎಪ್ಪರಡನೇ ವಯಸ್ಸಿನಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ಹೊರಟಿರುವುದು! ಅದು ಅಲ್ಲದೆ ಆತ ನನ್ನ ಮೇಲೆ ವಿನಾ ಕಾರಣ ಹಗೆ ಸಾಧಿಸುತ್ತಿದ್ದ ಎಂದು ನಾನೂ ಗುಮಾನಿಸಿದ್ದೆ… ಅದಕ್ಕಿದ್ದು ನಾನು “ಇನ್ನೆಲ್ಲಿರ್‍ತೀ… ಕೆಂಪಾನು ಕೆಂಪು ಕುದುರೆ ಮೇಲೆ ಕೂತ್ಕೊಂಡು ಹಾರಿ ಹೋಗಿರ್‍ತಿ” ಅಂದು ಬಿಟ್ಟೆ. ನನ್ನಲ್ಲಿದ್ದ ಪೊಯಿಟ್ರಿ ಶ್ರಮ ಜ್ಞಾನ ಒಂದಲ್ಲಾ ಒಂದು ರೀತಿ ವ್ಯಕ್ತವಾಗುತ್ತಿತ್ತು. ಮರು ದಿನ ಚರಾಸ್ತಿ ಹಂಚಿಕೊಳ್ಳುವ ವಿಷಯದಲ್ಲಿ ಸದ್ಯ ಅಣ್ಣನ ಮಕ್ಕಳೈವರು ಜಗಳ ಆಡಿ ಚಿಕ್ಕಪ್ಪನಾದ ಆತನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಬಿಟ್ಟರು. ಈ ಘಟನೆ ನನಗೆ ಪವಾಡಪುರುಷನ ಸ್ಥಾನವನ್ನು ಕಟ್ಟಿತು… ನಾನು ಹೇಳದಿದ್ದರೂ ಹೇಳಿರುವನೆಂದು ಸುದ್ದಿ ಹಬ್ಬಿಸತೊಡಗಿದರು… ನನ್ನ ಬಗ್ಗೆ ಹತ್ತಾರು ದಂತ ಕಥೆಗಳನ್ನು ಕಟ್ಟಿ ಹೇಳಿಕೊಳ್ಳತೊಡಗಿದರು. ನಾನೊಂದು ಹಳೇ ಗೋಣೀತಟ್ಟನ್ನು ಬೀಸಿ ಆಕಾಶದ ಕಡೆ ಎಸೆದನೆಂದೂ; ಅದು ಅಕಾಶ ಸೇರಿ ನೂರಾರು ಮೈಲಗಲ ಬೆಳೆದು ಕಾರ್ಮೋಡವಾಯಿತೆಂದೂ; ಅದು ಹಾಗೆ ತೇಲುತ್ತಾ, ತೇಲುತ್ತಾ ಹೋಗಿ ನಡುಬಾನಳ್ಳಿ ತಲೆ ಮೇಲೆ ನಿಂತು ಧಾರಾಕಾರವಾಗಿ ಮಳೆ ಸುರಿಸಿತೆಂದೂ ಮಾತಾಡಿಕೊಂಡರೆಂದು ನನಗೆ ಗೊತ್ತಾಗಿದ್ದು ನಡಬಾನಹಳ್ಳಿ ಪಟೇಲ, ಗೌಡ, ಕುಲಕರ್ಣಿ ಮುಂತಾದ ಮುಖಂಡರು ಬಂದು ದಕ್ಷಿಣೆ ಇತ್ತು ಉದ್ದೋಕ ಅಡ್ಡ ಬಿದ್ದ ಮೇಲೆಯೇ! ಮುಂದೊಂದುದಿನ ಉಪ್ಪಲದಿನ್ನಿ ಎಂಬ ತಾಶೀಲ್ದಾರ “ಅಜ್ಜೋರೆ ಅಜ್ಜೊರೆ” ಅಂತ ಓಡಿ ಬಂದು, “ನೀವು ಇಹಲೋಕ ತ್ಯಜಿಸಕ್ಮುಂಚೆ ನನಗದ ತಿಥಿ ದಿನ ತಿಂಗಳು ತಿಳಿಸಬೇಕು”. ಎಂದ, ಯಾಕಪ್ಪ! ಎಂದು ಕೇಳಿದೆ”ಯಾಕೂ ಇಲ್ಲ.. ನಿಮ್ಗೊಂದು ಅಮೃತಶಿಲಾದ ಸಮಾಧಿ ಕಟ್ಟಿಸಿ ನಾಕು ಮಂದಿ ಭಕ್ತರು ಪೂಜೆ ಮಾಡೋಹಂಗ ಮಾಡ್ತೀನಂತ ಹರಕೆ ಹೊತ್ತೀನಿ!” ಎಂದ. ಇದನ್ನು ಕೇಳಿ ನಾನು ಹುಚ್ಚ ಎಂದು ಕಾಲಿನಿಂದ ಜಾಡಿಸಿದೆ. ಅದನ್ನು ಗಪ್ಪಂತ ಹಿಡಿದುಕೊಂಡು ಚುಂಬಿಸಿದ. ಹೌದು ಅಂತ ಹೇಳುವಂತೆ ಬಾಯಿ ತುಂಬ ಹುಣ್ಣಾಗಿ ಫೀಡಿಂಗ್ ಬಾಟಲಿನಿಂದ ಹಾಲು ಕುಡಿದಿದ್ದು ನಿಜ. ಕುಡಿದಾದ ಮೇಲೆ ಅದನ್ನು ತಿಪ್ಪೆಗೆ ಎಸೆದಿದ್ದೂ ನಿಜ. ಆದರೆ ರಾಖೇಶ್ ಅದನ್ನು ತೆಗೆದುಕೊಂಡು ಹೋಗಿ ಹದಿನೈದು ನೂರು ರುಪಾಯಿಗೆ ಹರಾಜು ಹಾಕಿದ್ದಾಗಲೀ, ಅದನ್ನು ಕೊಂಡೊಯ್ದು ಉಪ್ಪಲದಿನ್ನಿ ಸಾಹೇಬ ಗೊಡ್ಡಿ ಎಂದು ಹೆಸರಾಗಿದ್ದ ತನ್ನ ಹೆಂಡತಿ ರಾಜಮ್ಮಗೆ ‘ಇದರಲ್ಲಿ ಹಾಲು ತುಂಬಿಸಿಕೊಂಡು ಕುಡಿ ಮಕ್ಕಳಾಗ್ತವಂತೆ’ ಎಂದು ಹೇಳಿಕೊಟ್ಟದ್ದಾಗಲೀ; ಆಕೆ ಅದರಲ್ಲಿ ಮೇಕೆ ಹಾಲು ತುಂಬಿಸಿ ಕುಡಿದಿದ್ದಾಗಲೀ; ಆಕೆ ಮುಟ್ಟು ನಿಂತು ಬಸಿರಾದದ್ದಾಗಲೀ; ಇನ್ನೂರಾ ಎಂಬತ್ತೇಳನೇ ದಿನಕ್ಕೆ ಗಂಡು ಮಗುವಿನ ಜನ್ಮ ನೀಡಿದ್ದಾಗಳೀ ನನಗೆ ಗೊತ್ತೇ ಇರಲಿಲ್ಲ!

ನಾನಿಂಥ ದಿನವೇ ಸಾಯ್ತೀನಿ ಅಂತ ಹೇಗೆ ಹೇಳುವುದು? ರಾಖೇಶನೇ ಆತನ ಹೆಗಲ ಮೇಲೆ ಕೈ ಹಾಕಿ ಬಸ್‌ಸ್ಟಾಂಡ್ ಕಡೆ ಕರೆದೊಯ್ದು… ನೀವೆಂದು ಸಾಯ್ತೀರಿ? ಎಂದು ಆತ ಕೇಳಿದ ಪ್ರಶ್ನೆ ಮಾತ್ರ ನನ್ನಲ್ಲಿ ತಳಮಳವನ್ನು; ಅಪೂರ್ವವಾದ ತಿಳುವಳಿಕೆಯನ್ನು ಹುಟ್ಟಿಸಿತು. ಸಮಾಜದ ಈ ಆಸ್ತಿಕ ಮುಖವಾಡವೇ ಅಪಾಯಕಾರಿ ಎನ್ನಿಸಿತು. ನಾನು ಜನರ ಕಣ್ಣಿಗೆ ಕಾಣಿಸುತ್ತಿರುವುದರಿಂದಾಗಿಯೇ ಇಷ್ಟೆಲ್ಲ ಸಮಸ್ಯೆ! ನಾನ್ ಕಣ್ಮರೆಯಾಗಿ ಬಿಟ್ಟರೆ! ಎಂದು ಯೋಚಿಸಿದೆ. ಅನಸುಯಾ ನೆಮ್ಮದಿಯಿಂದ ಬದುಕುವಂತಾಗಲೆಂಬ ದೃಷ್ಟಿಯಿಂದಲೇ ನಾನು ಬೀದಿ ಬೀದಿ ಸುತ್ತ ತೊಡಗಿದ್ದು; ಮೇಲ್ವರ್ಗದ ಮಂದಿ ನನ್ನನ್ನು ಮತ್ತಷ್ಟು ನಿಕೃಷ್ಟವಾಗಿ ಕಾಣಬೇಕೆಂದೇ ನಾನು ಕೆಳಗೇರಿಯ ಮಂದಿ ಜೊತೆಗೆ ಇರಲಾರಂಭಿಸಿದ್ದು. ಅವರು ಅಸಹ್ಯಪಡಲೆಂದೇ ನಾನು ಶವದ ಶಿರದಕ್ಕಿಯನ್ನು ಭುಂಜಿಸಿದ್ದು. ನಡುಗುವ ಕೈ ಬೆರಳುಗಳಿಂದಾಗಿ ಚೌಪದಿಗೆ ಅರ್ಹವಾದ ಮಾತುಗಳನ್ನು ಅವರಿವರ ಬಳಿ ಹೇಳಿಕೊಂಡಿದ್ದು… ಆದರೆ ಇವೆಲ್ಲ ಸಮಾಜದ ಎಲ್ಲ ವರ್ಗದ ಮಂದಿಗೆ ಸಹ್ಯವಾಗಬಹುದೆಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ.

ಸಮಾಜದ ಆಸ್ತಿಕ ಭಾವನೆಯೇ ನನ್ನ ಕೊರಳಿಗೆ ಉರುಳಾಗಿ ಪರಿಣಮಿಸಿಬಿಟ್ಟಾಗ ನನಗೆ ಅಲ್ಲಿಂದ ತಪ್ಪಿಸಿಕೊಳ್ಳಬೇಕೆಂದೆನಿಸಿತು. ಅಂಥ ಯೋಚನೆಯ ಪರಿಣಾಮವಾಗಿಯೇ ನಾನು ಅಲಬೂರು, ಕೋಗಳಿ, ಉಜ್ಜಿನಿ ಮೂಲಕ ನಡೆದುಕೊಂಡೇ ಹೋಗಿ ಕೊಟ್ಟೂರು ಪ್ರವೇಶಿಸಿದೆ. ತಾಯಿ, ಹೆಂಡತಿ-ಮಕ್ಕಳು… ನೆನಪಾದರು. ಅಮ್ಮನನ್ನು ಅಮ್ಮಾ… ನಾನು ನಿನ್ನ ಶಾಮಾ. ನೀನು ಸ್ನಾನ ಮಾಡುವಾಗ ಬೆನ್ನು ಉಜ್ಜಲೆಂದೇ ಬಂದಿದ್ದೇನೆ ಎಂದು ತಾಯಿಗೆ ಹೇಳಬೇಕೇಂದೆನಿಸಿ; ನಿನ್ನ ನಿರಿಕ್ಷೆಗಳನ್ನು ನಾನು ಹುಸಿಗೊಳ್ಳಿಸಿಲ್ಲವೆಂಬುದಕ್ಕೆ ನನ್ನ ದೇಹವೇ ಜೀವಂತ ಸಾಕ್ಷಿಯಾಗಿದೆ ನೋಡು ವರಲಕ್ಷ್ಮೀ… ಕೊನೆಯದಾಗಿ ನಿನ್ನಿಂದ ಒಂದು ಮುದ್ದು ಬಯಸಿ ಬಂದಿರುವೆನಮ್ಮಾ ಎಂದು ಹೆಂಡತಿಯನ್ನು ಕೇಳಬೇಕೆಂದೆನ್ನಿಸಿ ನಿಮ್ಮನ್ನು ಹೆತ್ತವರಾದ ನಾನು ಬಂದಿರುವೆ ಮಕ್ಕಳೇ… ಹಸಿದ ನನಗೆ ಒಂದೆರಡು ತುತ್ತು ಮೊಸರನ್ನ ಉಣ್ಣಿಸಿ ತಂದೆಯಾಗುವಿರಾ ಎಂದು ಮಕ್ಕಳನ್ನು ಅಭ್ಯರ್ಥಿಸಲು ಬಯಸಿ ನಾನು ಬೀದಿಗುಂಟ ನಡೆಯತೊಡಗಿದೆ. ಎಷ್ಟೊಂದು ಬದಲಾಗಿದೆ ನನ್ನ ಕೊಟ್ಟೂರು… ನನ್ನ ಅಸಂಖ್ಯಾತ ಪಾದಮುದ್ರೆಗಳ ಪೈಕಿ ಒಂದೂ ಕಾಣಿಸುತ್ತಿಲ್ಲವಲ್ಲ… ಇಷ್ಟೊಂದು ರಸ್ತೆಗಳು ಕ್ರೂರವಾಗಬಹುದೆಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ರಸ್ತೆಗಳೆ ಹಾಗೆ, ನಪಾಸಾದ ಹಳೆ ವಿದ್ಯಾರ್ಥಿಗಳಂತೆ… ಹೋಗುವವರಿಗೆ ತಮ್ಮಂದಿರು ಬರುವವರಿಗೆ ಅಣ್ಣಂದಿರು, ದೇವರು ದೊಡ್ಡವನು, ಯಾರೂ ಗುರುತಿಸದಹ್ಟು ನನ್ನನ್ನು ದೈಹಿಕವಾಗಿ ಬದಲಾಯಿಸಿದ್ದಾನೆ. ಕಾಮಕೋಟಿನಿಲಯೇ… ಎಂಬ ದೀಕ್ಷಿತರ ಕೃತಿ ಕತ್ತು ಹಿಚುಕಿ ಎದೆಯೊಳಗೆ ಅದರ ಕಳೇಬರವನ್ನು ಬಚ್ಚಿಟ್ಟಿದ್ದಾನೆ… ನಿಜವಾಗಿಯೂ ದೇವರು ದಯಾಮಯ, ಅವನ ಮಹಿಮೆ ಅನಂತ, ಅಪಾರ… ಅದಕ್ಕಾಗಿ ಸಾಕ್ಷಿಯಾಗಿ ನಾನು ಅಪರಿಚಿತನಂತೆ ಚಿರಪರಿಚಿತ ಚಿರಬಾಂಧವ್ಯದ ದಿಕ್ಕಿನ ಕಡೆಗೆ ನಡೆಯುತ್ತಿರುವೆ… ಈ ನಲವತ್ತೂ ಚಿಲ್ಲರೆ ವಯಸ್ಸಿನಲ್ಲಿ‌ಎಷ್ಟೊಂದು ಅವಸ್ಥಾಂತರಗಳನ್ನು ಸೃಷ್ಟಿಸಿದ, ಅನುಭವಿಸುವಂತೆ ಮಾಡಿದ. ಚಿರಬಾಂಧವ್ಯ ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು, ರಾಖೇಶನೆಂಬಧೂತ ದುತ್ತನೆ ವಕ್ಕರಿಸುವ ಮೊದಲು; ಕಳ್ಳ ನಮ್ಮನ್ನೆಲ್ಲ ಬಿಟ್ಟುಕೊಟ್ಟು ಚಿರಬಾಂಧವ್ಯದ ಉಳವಿಯ ಜಾರ್‍ಗಲ್ಲಿನ ಪೊಟರೆಯೊಳಗೆ ಅವಿತುಕೊಳ್ಳಲೆಂದು ದಾಪುಗಾಲು ಹಾಕುತ್ತಿದ್ದೀಯಾ? ನೀನು ನಿನ್ನ ಮರೆ ಮಾಚಿಕೊಂಡರೆ ಯಾವ ಇಕ್ಕಳದಿಂದ ಚಿಮುಟಿಗೆಯಿಂದ ಹೊರತೆಗೆಯುವುದು ಸಾಧ್ಯವಿಲ್ಲವೆಂದು ಅಟಕಾಯಿಸಿ ಎಳೆದೊಯ್ಯುವ ಮೊದಲು ನನ್ನವರು ತನ್ನವರನ್ನು ತಲುಪಲೇಬೇಕು. ಅಂತೂ ಇಂತೂ ನಾನು, ನಾನು ಉಂಡಾಡಿ ಬೆಳೆದ ಮನೆಯ ಸನಿಹ ಸೇರಿದೆ. “ಶಾಮೂ… ಪುರುಷಸೂಕ್ತದ ಗೋಪ್ಯವನ್ನು ಹೇಳ್ಕೊಡ್ತೀನಿ ಬಾರೋ” ಎಂದು ತಾತನವರು ಕೂಗುತ್ತಿರುವಂತೆ ಭಾಸವಾಯಿತು. ಶ್ರೀ ಶಂಕರರ ನೇರ ಶಿಷ್ಯರಾದ ಪದ್ಮಪಾದರು ವಿರಚಿತ ಪಂಚ ಪಾದಿಕ ಕೃತಿ ಕುರಿತು ವಿವರಿಸುತ್ತೇನೆ ಬಾರೋ ಶಾಮಾ ಎಂದು ಕೂಗುತ್ತಿರುವರೆಂದುಕೊಂಡೆ. ಅದು ಬೇಡಿ ತಾತ ವಿದ್ಯಾರಣ್ಯರ ಜೀವನ್ಮುಕ್ತಿ ವಿವೇಕದ ಬಗ್ಗೆ ಪಾಠಮಾಡಿ ಎಂದು ಕೂಗಿಹೇಳಬೇಕೆನ್ನಿಸಿತು. ಪ್ರೇಕ್ಷಕ ಸ್ಥಾನದಲ್ಲಿರುವ ಬ್ರಹ್ಮನ ಬಗ್ಗೆ; ಪ್ರೇಕ್ಷಿತ ಸ್ತಾನದಲ್ಲಿರುವ ಮಾಯೆಯ ಬಗ್ಗೆ ತಾತನವರ ಬಾಯಿಯಿಂದ ತಿಳಿದುಕೊಳ್ಳಬೇಕೆಂಬ ತಹತಹಿಕೆ ಹುಟ್ತಿತು. ನಾಸತೋ ವಿದ್ಯತೇ ಭಾವಃ! ನಾಭಾವೋ ವಿದ್ಯತೇ ಸತಃ… ಅಹ್ಹಾ! ಗೀತಾಚಾರ್ಯನೇ ನಿನಗೆ ನಮೋಮಮಃ ಎಂದು ಕೈ ಎತ್ತಿ ಮುಗಿದ ನನ್ನೆದುರಿಗೆ… ಅಕ್ಷೋಹಿಣಿ, ಅಕ್ಷೋಹಿಣಿ, ಭಾವನೆಗಳನ್ನು ಮುಖಾಮುಖಿಯಾಗಿ ಅವರ ಕಣ್ಣುಗಳಿಂದ ನೀರಾಗಿ ಹರಿದವು. ಸನ್ಯಾಸ ಸ್ವೀಕರಿಸಿದ ಓರ್ವನು ಯಾವ ರೀತಿ ತಾನು, ತನ್ನದನ್ನು ನಿಭಾಯಿಸುವನೋ ಹಾಗೆಯೇ ಆ ಸಂದರ್ಭವನ್ನು ನಾನು ನಿಭಾಯಿಸಿದೆನು. ಗತಕಾಲದ ಸ್ಮೃತಿಗಳನ್ನು ಕಿತ್ತು ಕಿತ್ತು ಮೆತ್ತಿ ನನ್ನ ವಸ್ತು ಸ್ಥಿತಿಯನ್ನು ವಿರೂಪಗೊಳಿಸತೊಡಗಿದರು. ಅಪರಕರ್ಮ, ಶ್ರದ್ಧಾಕರ್ಮಗಳಿಗೆ ಅಗತ್ಯವಾದ ಪರಿಕರಗಳನ್ನು ಅಷ್ಟೊತ್ತಿಗಾಗಲೇ ಜೋಡಿಸಿಕೊಂಡಿರುವವರಂತೆ ಗೋಚರಿಸಿದರು. ತಾಯಿ ನನ್ನಲ್ಲಿ ತನ್ನ ಮಗನನ್ನು ಗುರುತಿಸಲಿಲ್ಲ, ನಾನೂ ಆಕೆಯಲ್ಲಿ ತಾಯ್ತನವನ್ನು ಗುರುತಿಸಲಿಲ್ಲ. ಹೆಂಡತಿ ನನ್ನಲ್ಲಿ ತನ್ನ ಗಂಡನನ್ನು ಗುರುತಿಸಲಿಲ್ಲ. ನಾನೂ ಆಕೆಯಲ್ಲಿ ನನ್ನ ಹೆಂಡತಿಯನ್ನು ಗುರುತಿಸಲಿಲ್ಲ. ಮಕ್ಕಳು ನನ್ನಲ್ಲಿ ತಮ್ಮ ತಂದೆಯನ್ನು ಗುರುತಿಸಲಿಲ್ಲ, ನಾನೂ ಅವರಲ್ಲಿ ನನ್ನ ಮಕ್ಕಳನ್ನು ಗುರುತಿಸಲಿಲ್ಲ… ನಾನು ಮನೆಯೊಳಗೆಲ್ಲ ಹುಚ್ಚುಹಿಡಿದವನಂತೆ ಅಡ್ಡಾಡುತ್ತಿರುವಾಗ ಏನಾದರೂ ಲಪಟಾಯಿಸಲು ಹಡುಕುದ್ದಿದ್ದಾನೆಂದೇ ಭಾವಿಸಿದರು. ಆರೋಹಣ ಹಂತದಲ್ಲಿದ್ದ ನಾನು ಏನು ಮುಟ್ಟುವುದು ಸಾಧ್ಯ?… ನಾನು ಒಯ್ಯಬಹುದಾದ; ಆರೋಹಕ ಸ್ಥಿತಿಗೆ ಪೂರಕವಾದ ವಸ್ತು ಅಲ್ಲಿದ್ದರೆ ತಾನೆ! ಸ್ಥಿತಿಸ್ಥಾಪಕ ಶಕ್ತಿ ಕಳೆದುಕೊಂಡ ಉರಗವೊಂದು ಹುತ್ತ ಪ್ರವೇಶಿಸಿ ಹೊರಬಂದಂತೆ ನಾನು ಆ ಮನೆಯನ್ನು ಪ್ರವೇಶಿಸಿ ಹೊರಬಂದು ಬೀದಿ ಗುಂಟ ನಡೆಯತೊಡಗಿದೆ. ಎಷ್ಟು ಪ್ರಯತ್ನಿಸಿದರೂ ನನ್ನ ಕೈಲಿ ಸಭ್ಯ ವ್ಯಕ್ತಿ ಥರ ನಡೆಯಲಿಕ್ಕಾಗಲ್ಲಿಲ್ಲ. ನನ್ನ ಬಗ್ಗೆ ಮಾತಾಡಿ ಸಾಕು ಮಾಡಿಕೊಂಡಿದ್ದ ಜನರಲ್ಲಿ ನನ್ನ ಬಗ್ಗೆ ಯಾವುದೇ ರೀತಿಯ ಕುತೋಹಲವಾಗಲೀ; ರೋಮಾಂಚನವಾಗಲೀ ಇರಲಿಲ್ಲ. ಅವರ ಪಟ್ಟಿಯಲ್ಲಿ ನನ್ನ ಹೆಸರು ಅಷ್ಟುಹೊತ್ತಿಗಾಗಲೇ ಮಾಸಲಾಗಿತ್ತು. ‘ದೇವರು ದೊಡ್ಡವನು… ಅವನಿನ್ನೂ ಬದುಕಿದ್ದಾನೆ’ ಎಂದು ಮಾತ್ರ ಅಂದುಕೊಳ್ಳುತ್ತಿರಬೇಕೆಂದುಕೊಂಡೆ… ಒಂದು ವಿಚಿತ್ರ, ಆದರೂ ಪ್ರಸ್ತಾಪಿಸಲೇ ಬೇಕಾದ ಸಂಗತಿ ಎಂದರೆ ಕೊಟ್ಟುರಿನಲ್ಲಿ ಮತ್ತು ಕೊತ್ತಲಿಗಿಯಲ್ಲಿ ಅಥವಾ ಆಸುಪಾಸಿನಲ್ಲಿ ಯಾವುದಾದರೊಂದು ಅನಾಥ ಶವ ಕಂಡುಬಂದರೆ ಅದು ನನ್ನದೇ ಇರಬೇಕೆಂದು ಮುಗಿಬಿದ್ದು ನೋಡುತ್ತಿದ್ದರು… ಆ ರೀತಿಯ ಕಳೇಬರಗಳ ಮತ್ತು ನನ್ನ ಮುಖಚಹರೆ ಒಂದೇ ಆಗಿರುತ್ತಿದ್ದುದರಿಂದ ಇಂಥ ಪರಪಾಟು ಅನುಭವಿಸುವುದು ಅವರಿಗೆ ಅನಿವಾರ್ಯವಾಗಿತ್ತು.

ಉದಾಹರಣೆ ಎಂದರೆ ನೀನೂ ಅಂಥ ಕುತೋಹಲಿಗಳಲ್ಲಿ ಒಬ್ಬನಾಗಿದ್ದಿ. ಕೊತ್ತಲಗಿ ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಅನಾಥ ಕಳೇಬರ ನನ್ನದೆಂದೇ ನೀನು ಭಾವಿಸಿದಿ, ಎದುರಾದ ನನ್ನನ್ನು ನೀನು ಗುರುತಿಸಿದಿ. ಆದರೆ ಮಾತಾಡಿಸಲಿಲ್ಲ… ಯಾಕೆಂದರೆ ನೀನು ಸಭ್ಯ ನಾಗರಿಕನ ಮುಖವಾಡ ಧರಿಸಿದ್ದಿ. ಅಲ್ಲವೆ? ಇರಲಿ! ಅಲ್ಲಿಂದ ಹೊರಟ ನಾನು ಕೊಟೂರಿನ ಹಲವು ಮುಖ್ಯ ಬೀದಿಗಳಲ್ಲಿ ವಿಳಾಸ ರಹಿತ ವ್ಯಕ್ತಿ ಥರ ತಿರುಗಾಡಿ ಕೊನೆಗೆ ಬಸ್‌ನಿಲ್ದಾಣ ಸೇರಿ ಬಸ್ ಹತ್ತಿ ಕೂತುಕೊಂಡೆ. ನನಗೆ ಕೂಡ್ರಲು ಜಾಗ ಕೊಟ್ಟ ವ್ಯಕ್ತಿ ನನ್ನ ಮಗ್ಗುಲು ಕೂಡ್ರಲು ಅಸಹ್ಯಪಟ್ಟು ಎದ್ದು ನಿಂತುಕೊಂಡು ‘ಪರವಾ ಇಲ್ಲ’ ಎಂದ, ಕೊತ್ತಲಗಿ ಸಮೀಪಿಸುತ್ತಿದ್ದಂತೆ ಕೆಲವು ಪ್ರಯಾಣಿಕರು “ಶಾಮಣ್ತಾತ… ಶಾಮಣ್ಣಜ್ಜ” ಎಂದು ಗುರುತಿಸಿದರು. ನಲವತ್ತಕ್ಕೆ ಎಂಭತ್ತು ವರ್ಷದ ಹಣ್ಣು ಹಣ್ಣು ಮುದುಕನಂತೆ ಕಾಣಿಸುತ್ತಿದ್ದ ನಾನು ಅಂಥ ಮಾತುಗಳಿಮ್ದ ಬೇಸರಿಸಿಕೊಳುತ್ತಿರಲಿಲ್ಲ. ಅಲ್ಲದೆ ನನ್ನ ದೇಹದ ಸಂದುಗೊಂದುಗಳಿಂದ ಸುಖವ್ಯಾಧಿಗಳ ಪರಿಮಳದೊಂದಿಗೆ ದೈವೀಶಕ್ತಿಯ ಕಮರು ವಾಸನೆಕೂಡ ಬರುತ್ತಿತ್ತು. ಇಂಥ ವಾಸನೆಗಳಿಗೊಂದು ಸುಂದ ಸಮಾಧಿಕಟ್ಟಿಸಲೆಂದು ಹರಕೆ ಹೊತ್ತಿರುವ ಉಪ್ಪಲದಿನ್ನಿಯ ನೆನಪಾಯಿತು. ಅವನು ಹುಟ್ಟಿರುವ ಪುಟ್ಟಮಗುವಿಗೆ ಈಗಾಗಲೆ ‘ಶಾಮಣ್ಣ’ ಶಾಮಸುಂದರ… ಎಂದು ನಾಮಕರಣ ಮಾಡಿರಬಹುದೆಂಬ ಭಯ ಆವರಿಸಿತು. ತನ್ನ ಬದುಕಿನ ಪ್ರಮುಖ ಸರಕೇ ತಲೆ ಮರೆಸಿಕೊಂಡಿರುವುದಲ್ಲಾ ಎಂಬ ಖೇದದಿಂದ ತಿರುಗಾಡುತ್ತಿರುವ ರಾಖೇಶ ಎಂಬ ಅದ್ಭುತ ಮಾನವನ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಬೇಕು ಎಂದುಕೊಂಡೆ.

ಇದು ನನ್ನ ಬದುಕಿನ ಅತ್ಯಂತ ಕ್ರೂರ ಸಂದರ್ಭ ಮಿತ್ರಾ… ಯಾವುದೇ ಶತ್ರು ಅನುಭವಿಸಬಾರದ ವರ್ತಮಾನವನ್ನು ನಮ್ಮ ಶಾಮ ಅನುಭವಿಸುತ್ತಿದ್ದನಲ್ಲಾ ಎಂದು ನೀನು ಅಂದುಕೊಳ್ಳಬಹುದು. ಅಂಥ ಅನುಕಂಪದ ಅಗತ್ಯ ನನಗಿಲ್ಲ. ನನಗೆ ತೊಂದರೆ, ತೊಂದರೆಯಾಗಿರಲಿಲ್ಲ. ನಾನು ಅವುಗಳ ಅರ್ಥವನ್ನೇ ಬದಲಾಯಿಸಿದೆ. ಅವುಗಳಿಗೆ ಹೊಸ ವ್ಯಾಖ್ಯಾನ ಬರೆದೆ. ಇನ್ನೂ ಕೆಲ ಕಾಲ ಬದುಕಿದ್ದರೆ ಮಾನವ ಪ್ರಪಂಚದ ರೂಢಿ ಮೂಲ ಭಾಷೆಯನ್ನೇ ಬದಲಾಯಿಸಿ ಬಿಡುತ್ತಿದ್ದೆ. ಕರ್ತೃ, ಕರ್ಮ, ಕ್ರಿಯಾ ಪದಗಳನ್ನೇ ಬದಲಿಸಿ ನನ್ನದೇ ಆದಂಥ ಒಂದು ಹೊಚ್ಚಹೊಸ ನಿಘಂಟನ್ನೇ ತಯಾರಿಸಬೇಕೆಂದಿದ್ದೆ. ಉದಾಹರ್ಣೆಗೆ ನಿದ್ದೆ ಎಂಬ ಪದಕ್ಕೆ ಉಣ್ಣು ಎಂದೋ; ಉಣ್ಣು ಎಂಬ ಪದಕ್ಕೆ ಆಡು ಎಂದೋ, ಕೂತುಕೋ ಎಂಬ ಪದಕ್ಕೆ ಕುಡಿದುಕೋ ಎಂದೋ… ಹೀಗೆ… ಇಂಥ ನಿಘಂಟಿನ ಕಲ್ಪನೆಯನ್ನು ನೆನೆಸಿಕೊಂಡರೆ ಈಗಲೂ ಮೈಜುಮ್ಮೆನ್ನುತ್ತದೆ ಮಾರಾಯಾ… ಆದಿ ಮಾನವನ ಕಲ್ಪನೆಯ ಮುಂದುವರಿದ ಭಾಗ ಮಾತ್ರ ಆಧುನಿಕ ಮನುಷ್ಯನ ವರ್ತಮಾನದ ಬದುಕು. ಆ ಸವಕಲನ್ನೇ ನಾವು ಎಲ್ಲಿಯವರೆಗೆ ಮುಂದುವರಿಸುವುದು? ನಮ್ಮದು ಬರೀ ತೇಪೆ ಹಚ್ಚುವ ಕೆಲಸವೇ ಆಯಿತಲ್ಲ. ನಮ್ಮ ಸ್ವಂತದ್ದೆನ್ನುವ ಬದುಕನ್ನು ಬದುಕುತ್ತಿರುವೆವೇನು? ಬದುಕು ಒಂದು ಪಳೆಯುಳಿಕೆ, ಒಂದು ಸವಕಲು ಬಳುವಳಿ… ಅಂಥ ಸವಕಲನ್ನು, ಪಳೆಯುಳಿಕೆಯನ್ನು ನನ್ನ ಮೇಲೆ ಬಲವಂತವಾಗಿ ಹೇರಲಾಗಿದೆ ಎಂದೇ ನನ್ನ ಭಾವನೆ. ಅದನ್ನು ಉಲ್ಲಂಘಿಸುವ ಕೆಲಸನ್ನು ಅಂತಃಕರಣದಿಂದ, ಮುತುವರ್ಜಿಯಿಂದ ಮಾಡಿದೆ. ಒಡಲ ಲೋಳೆಯನ್ನು, ಪಾಕವನ್ನು ಬಾಯಿ ಮೂಲಕ ಸ್ರವಿಸಿ ನನ್ನ ಸುತ್ತ ನಾನೇ ಒಂದು ಬಲಿಷ್ಟವಾದ, ನನ್ನಿಂದಲೂ ಭೇದಿಸಲಿಕ್ಕಾಗದ ಗೂಡನ್ನು ನಿರ್ಮಿಸಿಕೊಂಡೆ. ಅಸಹಾಯಕತೆಯ ಕೋಡಿ ಬಿದ್ದಾಗ ನನಗೆ ಅರಿವಾಯಿತು ಅಂತ್ಯ ಸಂಸ್ಕಾರದ ಜಟಿಲತೆ. ನಿಸ್ಸಹಾಯಕತೆಯ ಮುಖಮುದ್ರೆಯಿಂದ ಕನಸು ಕಾಣತೊಡಗಿದೆ… “ಮಣಿಕರ್ಣಿಕಾ ಚಕ್ರಪುಷ್ಕರಣಿ…” ಎಂದು ಮುಂದೇನೂ ಹೇಳಲಾಗದೆ ಶಾಮಣ್ಣ ಪಾತ್ರವು ದೀರ್ಘವಾದ ಉಸಿರು ಚೆಲ್ಲಿತು.

ಅದರ ಮುಖದ ತುಂಬ ರಾಚಿದಂಥ ವಿಷಾದ, ನಿರಾಸೆ, ನಿಸ್ಪೃಹತೆಗಳು ನನಗೆ ಹೊಸತೆಂಬಂತೆ ಕಂಡವು. ಅವನು ಅಸ್ವಾಭಾವಿಕವಾಗಿ ಬದುಕಿದ ಎಂಬ ಸಂಗತಿಯನ್ನು ಮಾತ್ರ ನಾನು ಶೋದಿಸಿದ್ದೆ. ಆ ಸ್ವಾಭಾವಿಕತೆಯ ಒಳಗೆ ಸಾರ್ವಜನಿಕರು ಅತೀಂದ್ರಿಯ ಶಕ್ತಿಯನ್ನೋ ದೈವೀಶಕ್ತಿಯನ್ನೋ ಗುರುತಿಸಿ ಗೌರವಿಸುತ್ತಿದ್ದರು ಎಂಬ ಸಂಗತಿಮಾತ್ರ ತಿಳಿದು ಬಂದಿರಲಿಲ್ಲ. ಹಿಂದೊಮ್ಮೆ ನಾನೂ, ಅವನೂ ಅಬ್ರಹಾಂ ಕೋವೂರರ ಭಾಷಣ ಕೇಳಲಿಕ್ಕೆ ಹೊಸಪೇಟೆಗೆ ಓಡಿ ಹೋಗಿದ್ದವರೇ. ಅಲ್ಲಿಂದ ಬಂದ ಮೇಲೆ ನಮ್ಮ ಊರ ಸುತ್ತಮುತ್ತ ನಡೆಯುತ್ತಿದ್ದ ಸಣ್ಣಪುಟ್ಟ ಪವಾಡ ಪುರುಷರ ನೈಜ ಬಣ್ಣವನ್ನು ಹೊರಗೆಡಹಿದವರೇ; ಮೂಢ ನಂಬಿಕೆಗಳನ್ನು ಖಂಡಿಸಿದವರೇ; ಇವರ ವಿರುದ್ಧ ಹೋರಾಡಿ ತಕ್ಕಮಟ್ಟಿಗೆ ಯಶಸ್ವಿ ಆದೆವು ಎಂದುಕೊಂಡ ಬೆನ್ನ ಹಿಂದೆಯೇ ಪವಾಡಗಳ, ಮೂಢ ನಂಬಿಕೆಗಳ ಆಸರೆಯಿಂದ ಬದುಕುತ್ತಿದ್ದವರ ಬಗ್ಗೆ; ಮೂಢ ನಂಬಿಕೆಗಳನ್ನೇ ಬಂಡವಾಳವಾಗಿರಿಸಿಕೊಂಡು ಬದುಕುತ್ತಿದ್ದವರ ಬಗ್ಗೆ ಯೋಚಿಸಿ ನಿಟ್ಟುಸಿರು ಇಟ್ಟಿದ್ದೆವು. ಅವರ ದೇಹಕ್ಕೆ ಮನಸ್ಸಿಗೆ ಪುನರ್ವಸತಿ ಕಲ್ಪಿಸಲಾರದ ನಾವು ಎಲ್ಲಿವರೆಗೆ ಆತ್ಮವಂಚನೆ ಮಾಡಿಕೊಳ್ಳುತ್ತ ಹೋರಾಡುತ್ತ ಸಾಗುವುದು? ಹೀಗೆ ಯೋಚನೆಗೆ ಕಟ್ಟುಬಿದ್ದು ನಾನು ಹಿಂಜರಿದಿದ್ದರೂ ಶಾಮ ಮಾತ್ರ ಬಹಳ ಕಾಲದವರೆಗೆ ಹಿಂಜರಿರಿದಿರಲಿಲ್ಲ. ಅಂಥವನು ತನ್ನ ಬದುಕಿನ ತ್ರಯೋದಶ ವರ್ಷದಲ್ಲಿ ದೇವಮಾನವನೆಂದು ಪರಿಗಣಿಸಲ್ಪಟ್ಟ ಎಂದರೆ ನಂಬುವುದಾದರೂ ಹೇಗೆ?… ಅವನ ಮಾತುಗಳಲ್ಲಿ ಸತ್ಯಾಂಶ ಇಲ್ಲದಿಲ್ಲ. ಕುತೋಹಲಕಾರಕ ಸಂದಿಗ್ಧತೆಯನ್ನು ಎದುರಿಸಿರುವ ಶಾಮನನ್ನು ಅಭಿನಂದಿಸಬೇಕಾದ್ದೇ! ಸ್ಥಾವರವಾದ ಶಿಲೆಗಳೂ ಮನುಶ್ಯ ಸಾಮೀಪ್ಯದಲ್ಲಿ ಕ್ರಮೇಣ ಜೀವಂತವಾಗಿ ಸ್ಪಂದಿಸದೆ ಇರಲಾರವು ಎಂಬಂಥ ಒಂದು ಮಾತನ್ನು ವಾಲ್ಮೀಕಿ ಮಂಥರೆಯ ಬಾಯಿಯಿಂದ ಕೈಕೆಗೆ ಹೇಳಿಸುತ್ತಾನೆ… ರಾಖೇಶನ ಸಾಮೀಪ್ಯವೇ ಶಾಮಣ್ಣನ ಬದುಕಿನ ಪತನ ಹಾಡಿತು. ರಾಖೇಶನ ವ್ಯಕ್ತಿತ್ವದ ಕ್ಷುದ್ರತೆ ಕ್ರಮೇಣ ಶಾಮಣ್ಣನ ವ್ಯಕ್ತಿತ್ವವನ್ನು ಪ್ರವೇಶಿಸಿತು. ಏಕಮೇವ ಅದ್ವಿತೀಯಂ ಬ್ರಹ್ಮ ತತ್ವಕ್ಕೆ ಸಮೀಪದಲ್ಲಿದ್ದ ಶಾಮ, ರಾಖೇಶನ ಗೆಳೆತನದಿಂದಾಗಿ ಋಣಂ ಕೃತ್ವಾಘೃತಂ ಪಿಬೇತ್ ಎಂಬ ಪಾತಳಿಗೆ ಜಾರಿಬಿಟ್ಟ. ಕಿಣ್ವ ಎಂಬ ಬೀಜಗಳ ಸಾಯುಜ್ಯದಿಂದ ಎಂಥ ಪವಿತ್ರೋದಕವೂ ಸಾರಾಯಿಯಾಗಿ ಬಿಡುವುದೋ ಹಾಗೆಯೇ ರಾಖೇಶನ ಸಂಸರ್ಗದಿಂದ ಶಾಮ ಸಾರ್ವಜನಿಕ ಪಿಕದಾನಿಯಲ್ಲಿ ತಾಂಬೂಲದ ಉಂಡೆಯಾಗಿ ಬಿಟ್ಟ.

ಯಾಕಿಷ್ಟು ದುರ್ಬಲಗೊಂಡ ನಮ್ಮ ಶಾಮ! ಅವನು ಸಮಾಜದ ಯಾವ ನಂಬಿಕೆಗಳಿಗೂ ಬೆಲೆಕೊಡಲಿಲ್ಲ. ಪ್ರತಿಕ್ಷಣ ಪತನಗೊಳ್ಳುತ್ತಲೇ ಹೋದ ಬೇವಕೂಫ… ಅವನ್ಯಾಕೆ ಕೊಟ್ಟೂರಿಗೆ ಹೋಗಿ ತನ್ನ ಮನೆ ಬಾಗಿಲು ತಟ್ಟಬೇಕಿತ್ತು! ತನ್ನ ದೈನ್ಯಾವಸ್ಥೆಯನ್ನು ವೈಭವೀಕರಿಸಲೆಂದು ತಾನೆ! ಹೆತ್ತ ಹೊಟ್ಟೆಯೊಳಗೆ, ಅರ್ಧಾಂಗಿನಿಯ ದೇಹದೊಳಗೆ, ಮಕ್ಕಳ ಮಮತೆಯೊಳಗೆ ಕಿಚ್ಚು ಹಚ್ಚಲೆಂದು ತಾನೆ! ನೋಡ್ರೆ ನಿನ್ನ ಮಗ, ನಿನ್ನ ಗಂಡ, ನಿನ್ನ ಮಕ್ಕಳ ತಂದೆಯಾದ ನಾನು ಹೇಗಿದೀನಿ! ಎಂದು ತೋರಿಸುವುದರ ಮೂಲಕ ಜೋಬದ್ರ ಚಹರೆಯನ್ನು ಆಚಂದ್ರಾರ್ಕವಾಗಿ ಪ್ರತಿಷ್ಠಾಪಿಸಲೆಂದು ತಾನೆ! ಬದುಕಿರುವವರು ಸಾಯುವ ಕ್ಷಣದವರೆಗೆ ನರಳಿ ನರಳಿ ಸಾಯಬೇಕು… ಇಂಥವರು ತಾವು ಸ್ಥಿತಪ್ರಜ್ಞ, ನಿರ್ಮೋಹಿ ಎಂದು ಹೇಲಿಕೊಳ್ಳುವುದೂ ಒಂದೆ, ಕತ್ತೆ ಕಾಯುವುದೂ ಒಂದೆ; ಎಂಥ ಕೆಲಸ ಮಾಡಿದೆಯೋ ಪುಣ್ಯಾತ್ಮ ಎಂದು ಪ್ರತಿಕ್ರಿಯಿಸುವುದೂ ಕಷ್ಟ; ಅದಕ್ಕೂ ಲಂಗುಲಗಾಮಿಲ್ಲದ ವ್ಯಾಖ್ಯಾನ ಮಾಡಿ ಬಾಯಿಮುಚ್ಚಿಸಿ ಬಿಡುತ್ತಾನೆ… ಅಥವಾ ಬರಹಕ್ಕೆ ಕಲ್ಲು ಹಾಕುತ್ತಾನೆ… ಯಾಕಿದ್ದೀತು ಅಂತ ಸುಮ್ಮನೆ ಇದ್ದು ಬಿಟ್ಟೆ.

ನನ್ನ ಮುಖವನ್ನು ಅವನೂ, ಅವನ ಮುಖವನ್ನು ನಾನೂ ಮಿಕ ಮಿಕ ನೋಡುತ್ತ ಕಾಲ ಕಳೆದೆವು. ಬತ್ತಿಯೊಳಗಿನ ತೈಲವನ್ನೇ ಇಂಧನವಾಗಿ ಬಳಸಿಕೊಂಡು ಮಿಣಕೂ, ಮಿಣಕೂ ಅಂಥ ಕ್ಷೀಣವಾಗಿ ಉರಿಯುವ ಹಣತೆಯಂತಾಗಿ ಬಿಟ್ಟಿದ್ದ. ಒಂದು ಸಾಲು ಹೇಳುವಷ್ಟು ಕಸುವೂ ತನ್ನಲ್ಲಿ‌ಉಳಿದಿಲ್ಲ ಎಂದು ಬೆನ್ನು ಮಾಡಿಬಿಟ್ಟರೆ ಏನು ಮಾಡುವುದೆಂಬ ಚಿಂತೆ ಆವರಿಸಿತು.

ಕೊಟ್ಟೂರಿಂದ ಮರಳಿ ಬಂದಮೇಲೆ ನಾಯಿಗೆರೆ ಕಾಲಿನ ರಾಖೇಶನ ಕೈಗೆ ಸಿಕ್ಕನೇ?
ತಹಶೀಲ್ದಾರ ಉಪ್ಪಲದಿನ್ನಿಹೊತ್ತಿರುವ ಹರಕೆಸಲುವಾಗಿಯಾದರೂ ಬೇಗನೆ ಸಾಯಬೇಕೆಂದು ನಿರ್ದರಿಸಿದನೆ!
ಅವನು ಸಾಯುವ ದಿಸೆಯಲ್ಲಿ ಮಾಡಿದ ಪ್ರಯತ್ನಗಳಾವುವು?
ಅವನನ್ನು ಉಳಿಸಿಕೊಳ್ಳಲು ಅನಸೂಯಾ ಮಾಡಿದ ಪ್ರಯತ್ನಗಳಾವುವು?
ಹೀಗೆ ಅಣಬೆಯಂತೆ ಹುಟ್ಟಿಕೊಳ್ಳುವ ಸಮಸ್ಯೆಗಳಿಗೆ ಉತ್ತರಿಸಿ ಮುಂದೆ ಹೆಜ್ಜೆ ಇಡು ಎಂದು ಓದುಗರು ನನ್ನ ಕೊರಳುಪಟ್ಟಿ ಹಿಡಿದು ಜಗ್ಗಿದರೆ ನಾನೇನು ಹೇಳುವುದು!
“ಶಾಮಾ…” ಅಂದೆ, ಮುಂದೇನೋ ಹೇಳಬೇಕೆಂದಿದ್ದೆ. ಆದರೆ ಮಾತುಗಳು ಹೊರಡಲಿಲ್ಲ.
ಅವನು ನನ್ನ ಮನದಾಳದ ಇಂಗಿತವನ್ನು; ತುಮುಲವನ್ನು ಅರ್ಥ ಮಾಡಿಕೊಂಡಂತೆ ಕಂಡಿತು.
“ಕುಂವೀ… ಯಾಕೋ ನನ್ನಿಂದ ಮುಂದಿನದನ್ನು ಹೇಳ್ಲಿಕ್ಕೆ ಆಗ್ತಿಲ್ಲ ಕಣೋ! ಆ ದಿನಗಳೆಲ್ಲ ಮಂಜೊಳಗೆ ಮರೆಯಾಗಿ ಬಿಟ್ಟಿವೆ… ಬಿಳಿ ತೆರೆಸರಿಸಿ ನೋಡಲಿಕ್ಕಾಗ್ತಿಲ್ಲ. ಆಕಡೆ ಪ್ರವೇಶಿಸಲಿಕ್ಕೆ ಆಗ್ತಾ ಇಲ್ಲ… ನೀನೆ ನಿನಗೆ ತೋಚಿದ ಹಾಗೆ ಬರೆದು ಮುಗಿಸಿಬಿಡು. ನೀನು ಏನೆ ಬರೆದ್ರೂ… ಅದ್ಕೆ ನನ್ನ ಅಭ್ಯಂತರವಿಲ್ಲಪ್ಪಾ… ದಯವಿಟ್ಟು ಒತ್ತಾಯಿಸಬೇಡ…” ಎಂದು ಮೊದಮೊದಲು ಹಿಂದೇಟು ಹಾಕಿದ್ದ ಶಾಮಣ್ಣ ತನ್ನ ಪರ್ಯವಸಾನವನ್ನು ಸಂಕ್ಷಿಪ್ತವಾಗಿ ಹೇಳಲು ಕೊನೆಗೂ ಒಪ್ಪಿಕೊಂಡ…
ಎಷ್ಟೋ ಸಂಗತಿಗಳನ್ನು ಮರೆಮಾಚಿದ್ದ ಶಾಮಣ್ಣ ಮುಂದಿನ ಪರಮನಿರ್ವಾಣ ಪ್ರಹಸನದಲ್ಲಿ ಮತ್ತೆಷ್ಟು ಸಂಗತಿಗಳನ್ನು ಮರೆಮಾಚಲಿರುವನೋ… ಅವನು ಹೇಳೊದನ್ನಷ್ಟೆ ಬರೆದು ಕೊಂಡರಾಯಿತು. ಇದರಲ್ಲಿ ನನ್ನ ಗಂಟೇನು ಹೋಗುವುದು!.
*
*
*
ಹೌದು ಕಣಪ್ಪಾ… ನೀನು ಹೇಳ್ತಿರೋದು ನಿಜ. ನನ್ನ ಗೈರು ಹಾಜರಿಯಲ್ಲಿ ರಾಖೇಶನಿಗೆ ಹುಚ್ಚೇ ಹಿಡಿದುಬಿಟ್ಟಿತ್ತು ನೋಡು. ನನ್ನ ಬಗ್ಗೆ ಭ್ರಮೆಗಳನ್ನು ಸೃಷ್ಟಿಸಿ ಜನರನ್ನು ಬಾನಾಮತಿ ಅಂತಾರಲ್ಲ… ಅಂಥದೊಂದು ಮಂಪರಿನಲ್ಲಿಟ್ಟು ತಾನೋರ್ವ ಪಾಖಂಡೀ ಪ್ರಪಂಚದ ವಾರಸುದಾರ ಎಂದೇ ತಿಳಿದುಕೊಂಡಿದ್ದ. ಅವನ ಕಣ್ಣಿಗೆ ಬಿದ್ದರೆ ಉಪ್ಪಲದಿನ್ನಿಯ ಆಶಯ ನೆರವೇರುವುದಿಲ್ಲವೆಂದು ಭಾವಿಸಿದೆ. ಕೊತ್ತಲಗಿ ಗ್ರಾಮದ ಗತಿಸಿದ ಹಿರಿಯರ ಆತ್ಮಗಳೊಂದಿಗೆ ಮಾತಾಡಲು ನಾನು ನನ್ನ ದೇಹ ಸಹಿತ ನರಕ ಸ್ವರ್ಗ ಸುತ್ತು ಹಾಕಿಕೊಂಡು ಬರಲು ಹೋಗಿರುವುದಾಗಿ ಸುದ್ದಿ ಹಬ್ಬಿಸಿದ್ದ. ನಾನೇನಾದರೂ ಅವನ ಮಾತು ಕಟ್ಟಿಕೊಂಡು ತಲೆಯ ಮತ್ತು ಮುಖದ ಕೂದಲುಗಳನ್ನು ಬೋಳಿಸಿಕೊಂಡಿದ್ದರೆ ದೊದ್ದದೊಂದು ಅಚಾತುರ್ಯ ಸಂಭವಿಸುತಿತ್ತು. ನನ್ನ ಕೂದಲುಗಳುಳ್ಳ ಸಾವಿರಾರು ತಾಯಿತಗಳನ್ನು ನಿರ್ಮಿಸಿ ಸಂತೆಗಳಲ್ಲಿ ಜಾತ್ರೆಗಳಲ್ಲಿ ವಿಘ್ನನಿವಾರಕ ಯಂತ್ರಗಳೆಂದು ಕೂಗಿ ಮಾರಿ ಸಾವಿರಾರು ರುಪಾಯಿ ಸಂಗ್ರಹಿಸಲು ಹಿಂಜರಿಯದವನಾಗಿದ್ದ. ಆದ್ದರಿಂದ ನಾನು ಬಸ್ಸಿನಿಂದ ಇಳಿದಾಕ್ಷಣ ನಿರ್ಮಾನುಷ ಜಾಗ ಕುರಿತು ಯೋಚಿಸಿದೆ. ಸದರೀ ಗ್ರಾಮದ ಮಸಣವೇ ಅಂಥದೊಂದು ನಿರ್ಮಾನುಷ ಸ್ಥಳವೆಂದು ಹೊಳೆಯಿತು. ತೊಟ್ಟಿದ್ದ ಸಪ್ತವರ್ಣದ ಲುಂಗಿಯನ್ನೇ ತಲೆತುಂಬ ಹೊದ್ದುಕೊಂಡು ಕಳ್ಳಹಾದಿ ಗುಂಟ ಸುರಸುಂದರವಾದ ಮಸಣವನು ತಲುಪಿದೆನು. ದೈತಾದ್ವೈತ ವಿಶಿಷ್ತಾದ್ವೈತಗಳೆಲ್ಲವೂ ಮುಪ್ಪರಿಗೊಂಡು ನಿರ್ಮಿತವಾದಂತಿರುವ ರುದ್ರಭೂಮಿಯದು. ನರಪಾಲ, ಭೂಪಾಲರಿಗೆ ಶವದ ಶಿರದಕ್ಕಿಯನ್ನು ತಿನ್ನಿಸಿ ಅವರನ್ನು ಲೋಕೋತ್ತರ ನಾಯಕರನ್ನಾಗಿ ಮಾಡಿದಂಥ ರುದ್ರಭೂಮಿ ಇದು. ವಿವಿಧಾಕಾರದ ಸುಂದರ ಸಮಾಧಿಗಳಡಿ ನೆಮ್ಮದಿಯಿಂದ ಮಲಗಿ ನಿದ್ದೆ ಹೋಗಿರುವವರಿಗೆ ಅರಿಷಡ್ವರ್ಗಗಳ ಕಾಟವಿಲ್ಲ. ಇಂಥ ಸೌಖ್ಯಪೂರ್ಣ ವಿಷಾದದ ತವರೆನಿಸಿರುವ ಈ ಸದರೀ ಜಾಗವೇ ತಲೆ ಮರೆಸಿಕೊಳ್ಳಲು ಸೂಕ್ತವೆಂದು ಬಗೆದೆ. ಎದುರಾಳಿಯ ನಾಡಿ ಹಿಡಿದು ದೌರ್ಬಲ್ಯ ಗುರುತಿಸಿ ಅದನ್ನೇ ಮೂಲ ಬಂಡವಾಳವನ್ನಾಗಿ; ಗಾಳವನ್ನಾಗಿ ಮಾಡಿಕೊಂಡು… ನಿರಂತರವಾಗಿ ಆಟ ಆಡಿಸಿ ವೈಯಕ್ತಿಕ ಬದುಕನ್ನು ಹಸನು ಮಾಡಿಕೊಂಡು ಉತ್ತರಾಯಣ ಪರ್ವಕಾಲದಲ್ಲಿ ಸತ್ತ ವೆಂಕಟಗಿರಿ ರೆದ್ದಿಯವರ ಸಮಾಧಿ ರಾಜನಂತಿತ್ತು. ಕೈಬೀಸಿ ಕರೆಯಿತು.. ಹೋಗಿ ಅದರ ಮೇಲೆ ಉದ್ದೋಕ ಮೈಚಲ್ಲಿ ಮಲಗಿಕೊಂಡೆ.

ನಾನು ಅಲ್ಲಿ ಹಾಗೆ ಸುಖ ನಿದ್ರೆ ಸವಿಯುತ್ತಿರುವುದನ್ನು ರಾಖೇಶ ತನ್ನ ಖಾಸಗೀ ಪತ್ತೆದಾರರ ಮೂಲಕ ಹೇಗೋ ತಿಳಿದುಕೊಂಡ. ಅವನೆಂಥ ವ್ಯಾವಹಾ‌ಇಕ ನಿಪುಣನೆಂದರೆ ಅವನು ಸರ ಸರ ಹೆಜ್ಜೆ ಹಾಕುತ್ತ ನಡೆದದ್ದು ಎರಡನೇ ವಾರ್ಡಿನಲ್ಲಿರುವ ಇಪ್ಪತ್ತೆಂಟನೆ ಸಂಖ್ಯೆಯ ‘ಅನುಗ್ರಹ’ ಎಂಬ ಹೆಸರಿನ ಮನೆಗೆ (ಎರಡನೇ ವಾರ್ಡ್ ಎಂದರೆ ಬೆಂಗಳೂರಿನ ಡಾಲರ್ಸ್ ಕಾಲನಿ ಇದ್ದಂತೆ) ಹೋದ. ಅಲ್ಲಿ ದಿ.ವೆಂ.ಗಿ. ರೆಡ್ಡಿಯ ಹೆಂಡತಿ, ಮಕ್ಕಳು ಸೊಸೆಯಂದಿರನ್ನೆಲ್ಲ ಕರೆದು ‘ಶಾಮಣ್ತಾತೋರು ನಿಮ್ ಯಜಮಾನ್ರೊಂದಿಗೆ ಗುಟ್ಟಾಗಿ ಮಾತಾಡಿ ವಿಷಯ ಸಂಗ್ರಹಿಸುತ್ತಿರುರೆಂದು ಹೇಳಿ ಆತಂಕ ಹೆಚ್ಚಿಸಿದ. ದಿ.ವೆಂ.ಗಿ. ರೆಡ್ಡಿಯವರು ಜಾರಿಗೊಳಿಸಿದ್ದ ನೀತಿ ಸಂಹಿತೆಯನ್ನು ಆತನ ಕುಟುಂಬ ಸದಸ್ಯರು ಧೂಳೀಪಟ ಮಾಡಿದ್ದರು. ಅದೂ ಅಲ್ಲದೆ ಗಂಗಾಜಲ ಹಾಕಿದ ಎಷ್ಟೋ ಹೊತ್ತಿಗೆ ಅವರು ಪ್ರಾಣಬಿಟ್ಟಿದ್ದು. ಬಾಯಿಗೆ, ಕೈ ಕಾಲುಗಳಿಗೆ ಲಕ್ವ ಹೊಡೆದಿದ್ದರಿಂದ ಅವರು ಎಷ್ಟೋ ವಿಷಯಗಳನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡೇ ಪ್ರಾಣ ಬಿಟ್ಟಿದ್ದರು. ಅವುಗಳನ್ನು ಅವರು ಈಗಾಗಲೇ ಪವಿತ್ರ ಜೀವವಾದ ಶಾಮಣ್ತಾತಗೆ ಹೇಳಿರಬಹುದೆಂದು ಬಗೆದರು. ಅಲ್ಲದೆ ದೂರದ ಅಲಹಾಬಾದಿನಿಂದ ಸಕಾಲಕ್ಕೆ ಬಂದು ತಂದೆಯವರ ಬಾಯಿಗೆ ಎರಡು ಚಮಚ ಗಂಗಾಜಲವನ್ನು ಹಾಕುವುದರಿಂದ ವಂಚಿತಳಾಗಿದ್ದ ಸುಲೋಚನಾಳಂತೂ ಅಂತೂ ಈ ಮೂಲಕ ನೀರು ಬಿಡುವುದು ಸಾಧ್ಯವಾದರೆ ಎಂದು ಪುಲಕಿತಳಾದಳು… ಅವರದೇ ಆದ ಗುಂಪು ಕಟ್ಟಿಕೊಂಡು ರಾಖೇಶ ಮಸಣ ತಲುಪಿದನು. ಕಳೆದ ವಾರವಷ್ಟೆ ನೀಟಾಗಿ ಕಟ್ಟಿಸಿರುವ ಸಮಾಧಿಯನ್ನು ಗುರುತಿಸುವುದು ಅವರಿಗೆ ಕಷ್ತವಾಗಲಿಲ್ಲ. ಅದರ ಮೇಲೆ ಗ್ರಾನೈಟ್ ಶಿಲಾಫಲಕದಲ್ಲಿ ರೆಡ್ಡಿಯವರ ಜನನ ಮರಣದ ವಿವರಗಳಿದ್ದು ಅವರ ದಾರಿ ತೋರಿದವು.

ನಾನು ಶತಮಾನದ ನಿದ್ದೆಯನ್ನೇ ಯೋಗ ಮಾಡಿಕೊಂಡು ಹೊಡೆಯುತ್ತಿದ್ದ ಗೊರಕೆಯನ್ನೆ ಅವರು ಶವದೊಂದಿಗೆ ಸಂವಾದಿಸುತ್ತಿರುವ ಸಾಂಕೇತಿಕ ಭಾಷೆ ಎಂದು ಪರಿಗಣಿಸಿದರು. ಅವರು ನಮಸ್ಕರಿಸಿದ್ದಾಗಲೀ, ದೂರ ನಿಂತು ಗಮನಿಸುತ್ತಿದ್ದುದಾಗಲೀ ನನ್ನ ಗಮನಕ್ಕೆ ಬರಲಿಲ್ಲ. ಕೊನೆಗೆ ರೋಸಿ ರಾಖೇಹನೇ ದಪದಪ ಬೆನ್ನಿಗೆ ಬಡಿದು ಎಚ್ಚರಿಸಿದ. ಎದ್ದು ಕಣ್ಣುಬಿಟ್ಟು ಅವರನ್ನೆಲ್ಲ ನೋಡಿ ನನಗೆ ಏನ್ರಪ್ಪಾ… ಯಾಕ್ರಪ್ಪಾ ಎಂಬಂತೆ ಅವರ ಕಡೆ ನೋಡಿದೆ.
“ನಮ್ಮಪ್ಪ ಏನು ಹೇಳ್ದ ತಾತಾ” ಎಂದು ಮಕ್ಕಳೂ
“ನನ್ನ ಗಂಡ ಏನು ಹೇಳ್ದ ತಾತಾ” ಎಂದು ಹೆಂಡತಿಯೂ,
“ನಮ್ಮ ಮಾವ ಏನು ಹೇಳ್ದ ತಾತಾ” ಎಂದು ಸೊಸೆಯಂದಿರೂ,
“ನಮ್ಮ ಅಜ್ಜ ಏನು ಹೇಳ್ದ ತಾತಾ” ಎಂದು ಮೊಮ್ಮಕ್ಕಳು…
ಅವರ ಮಾತುಕಥೆಯೊಂದೂ ನನಗೆ ಅರ್ಥವಾಗಲಿಲ್ಲ… ಅವರ ಯಾವ ಪ್ರಯತ್ನಕ್ಕೂ ನಾನು ಮೌನದ ಸಮಾಧಿಯಿಂದ ಎದ್ದು ಬರಲಿಲ್ಲ… ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲವಲ್ಲ ಎಂಬ ಖೇದದಿಂದ ರಾಖೇಶ ಎಲ್ಲರಿಗಿಂತ ಮುಂದೆ ಜಿಗಿದು ನಿಂತು –

“ಲೇ ಶಾಸ್ತ್ರೀ… ನಿನೆ ಬಡಿವಾರಾನ ನನ್ ಹತ್ರ ತೋರಿಸಬ್ಯಾಡ… ಮರ್ಯಾದೆಯಿಂದ ಸಾಹ್ಕಾರ್ರು ನಿನ್ನತ್ರ ಏನೇನು ಹೇಳಿದ್ರು ಅಂತ ಹೇಳಿಬಿಡು. ಇಲ್ಲಾಂದ್ರ ನಾನು ಸುಮ್ಕಿರೋಲ್ಲ್…” ಎಂದು ಹತಾಶೆಯಿಂದ ಕೂಗಾಡ ತೊಡಗಿದ… ಅದೇ ಹೊತ್ತಿಗೆ ಆ ಕಡೆಯಿಂದ ಕೆಲವರು ಬಂದು “ಸತ್ತಿರೋ ನಮ್ಮವರತ್ರಾನು ಮಾತಾಡಿ ಪುಣ್ಯಕಟ್ಕೋ ತಾತ” ಎಂದು ಮುಗಿ ಬಿದ್ದರು . ಅವರ ಅಂಥ ಒತ್ತಡಗಳಿಂದ ನಾನು ಒಂಚೂರೂ ವಿಚಲಿತನಾಗದೆ ಕೇವಲ ಪಿಳಿಪಿಳಿಕಣ್ಣು ಬಿಟ್ಟು ನೋಡುತ್ತಿದ್ದೆನು. ಆ ಸಮಯಕ್ಕೆ ಸರಿಯಾಗಿ ಉಪ್ಪಲದಿನ್ನಿ ಒಂದು ಕಾಲು ಹಿಡಿದುಕೊಂಡು “ಒಳ್ಳೆ ಅಮೃತ ಶಿಲೆಗೆ ಆರ್ಡರ್ ಕೊಟ್ಟಿದ್ದೀನಿ… ತಾತ… ನಾಡಿದ್ದು ಗುಡ್ಸಿಗೆ ಬರಬೌದು…” ಎಂದು ಏನೇನೋ ಬಡಬಡಿಸ ತೊಡಗಿದನು.

ಆತ್ಮನ್ನ್ಯೆವರ್ತನಾ ತುಷ್ಯಃ ಸ್ಥಿತ ಪ್ರಜ್ಞಸ್ತದೋಚ್ಯತೇ… ಎಂಬಂಥ ಸ್ತಿಥ ಪ್ರಜ್ಞಸ್ಥ ಸ್ಥಿತಿ ತಲುಪಿದ್ದ ನನ್ನ ಮೌನ ಭೇದಿಸಲು ಅವರು ನಿರಂತರ ಪ್ರಯತ್ನ ಮಾಡತೊಡಗಿದರು. ಅದಕ್ಕೆ ಸರಿಯಾಗಿ ನನ್ನಲ್ಲಿ ವಾಸನೆ ಎಂಬುದು ಕ್ಷಯಿಸಲ್ಪಟ್ಟಿತ್ತು. ಮನೋನಾಕವಾಗಿತ್ತು. ಐಂದ್ರಿಕ ವಾಂಛೆಗಳನ್ನೆಲ್ಲ ನಾಯಿ ಗದುಮುವಂತೆ ಗದುಮಿ ಓಡಿಸಿಬಿಟ್ಟಿದ್ದೆ. ನಾನು ಸತ್ತಿರುವೆನೋ, ಬದುಕಿರುವೆನೋ ಎಂದು ಯೋಚಿಸುತ್ತ ಅವರೆಲ್ಲರು ಗೊಂದಲಕ್ಕೆ ಬಿದ್ದರು. ನನ್ನ ಮೌನ ಅವರಿಗೆ ಅರ್ಥವಾಗದ ಕಗ್ಗಂಟಾಗಿತ್ತು. ಶ್ರವಣೇಂದ್ರಿಯದಿಂದ ಎಲ್ಲ ತಂತುಗಳು ಲಾಕ್‌ಔಟ್ ಘೋಷಿಸಿದ್ದುದರಿಂದ ಅವರ ಯಾವ ಮಾತುಗಳೂ ನನಗೆ ತಲುಪುತ್ತಿರಲಿಲ್ಲ… ಅವರ ರೂಪಗಳು ಅರ್ಧ ದಾರಿಗೆ ಬಂದು ಅಂತರ್ಧಾನವಾಗುತ್ತಿದ್ದವು… ಬದುಕಿರುವ ಲಕ್ಷಣಗಳಾಗಲೀ, ಸತ್ತಿರುವ ಲಕ್ಷಣಗಳಾಗಲೀ ನನ್ನ ದೇಹದಿಂದ ಪ್ರಕಟವಾಗುತ್ತಿರಲಿಲ್ಲ.

ವರ್ತಮಾನ ಡೋಲಾಯಮಾನಗೊಂಡಿದ್ದಂಥ ಸಂದರ್ಭದಲ್ಲಿ ಅನಸೂಯಾ… ಶಾಮಾ… ನನ್ನ ಶಾಮ… ಎಂದು ಅಬ್ಬರಿಸುತ್ತ ಬಂದಳು. ಅವರೋಧಕ, ನಿರೋಧಕ, ಪ್ರತಿರೋದಕಗಳೊಂದೂ ಇಲ್ಲದೆ ಕೂತಿದ್ದ ನನ್ನನ್ನು ತಬ್ಬಿಕೊಂಡಳು. ಇದ್ದಕ್ಕಿದ್ದಂತೆ ಆಕೆಯ ಮೈಯಲ್ಲಿ ಅದಾವ ಶಕ್ತಿ ತುಂಬಿಕೊಂಡಿತೋ… ಕಾಲಲ್ಲಿದ್ದ ಚಪ್ಪಲಿ ತೆಗೆದುಕೊಂಡು ರಾಖೇಶನ ಜುಟ್ಟು ಹಿಡಿದು “ಲೋ ಭಾಡ್ಕಾವ್… ಸಾಡೇ ಸಾತ್ ಸಣಿಹಂಗ ನಂ ಶಾಮನ ಜೀವ ತಿಂಬ್ತಿದೀಯಲ್ಲೋ” ಎಂದು ರಪ್ಪರಪ್ಪ ಭಾರಿಸತೊಡಗಿದಳು… ತಾನು ತಾಶೀಲ್ದಾರ ಎಂಬ ಅಹಮ್ಮಿನಿಂದ ನಿಂತಿದ್ದ ಉಪ್ಪಲ ದಿನ್ನಿಯನ್ನೂ ಬಾರಿಸದೆ ಬಿಡಲಿಲ್ಲ. ಅವರೆಲ್ಲ ಈ ಪ್ರಕಾರವಾಗಿ ಅಂಡಾರವ ಆದಮೇಲೆ ಆಕೆ ನನ್ನನ್ನು ತಾಯಿಯಂತೆ ಎತ್ತಿಕೊಂಡು ಮನೆಗೆ ಒಯ್ದಳು.

ಆಕೆ ನನಗೆ ಸ್ನಾನ ಮಾಡಿಸಿದ್ದಾಗಲೀ ಮಡಿ ಉಡುಪು ಉಡಿಸಿದಾಗಲೀ, ಗೋದಿಗಂಜಿ ಕುಡಿಸಿದ್ದಾಗಲೀ, ಮಂಚದಮೇಲೆ ಮಲಗಿಸಿದ್ದಾಗಲೀನನಗೆ ನೆನಪಿರುವುದೆಂದರೆ ಇರುವುದು ಇಲ್ಲವೆಂದರೆ ಇಲ್ಲ… ಒಂದು ವಸ್ತುವಿಗಿರಬೇಕಾದ ಪ್ರತ್ಯೇಕ ಗುಣಗಳೆಲ್ಲವನ್ನು ಕಳೆದುಕೊಂಡಿದ್ದ ನನಗೆ ಅವೆಲ್ಲ ನೆನಪಿರುವುದು ಹೇಗೆ ಸಾಧ್ಯ? ನಿರ್ವಾಣೊನ್ಮುಖ ಸ್ಥಿತಿಯಲ್ಲಿದ್ದೂ ಅನಿರ್ವಚನೀಯ ಆನಂದ ಮತ್ತು ಸ್ಥಿತಿಯನ್ನು ಅನುಭವಿಸುತ್ತಿದ್ದ ನನಗೆ ಅವೆಲ್ಲ ನೆನಪಿಲ್ಲದೆ ಇರುವುದು ಹೇಗೆ ಸಾಧ್ಯ? ಗ್ರಹಣ ಮತ್ತು ನಿಗ್ರಹಣ ಸ್ಥಿತಿಯ ದ್ವಂದ್ವಗಳನ್ನು ಮಾತಿನ ಮೂಲಕ ಹೇಳುವುದು ನಿರ್ವಾಣ ಸ್ಥಿತಿಗೆ ಅವಮಾನ ಮಾಡಿದಂತೆಯೇ ಎಂದು ನನ್ನ ಅನಿಸಿಕೆ… ರಕ್ತ, ಶುಕ್ಲ, ಕೃಷ್ಣವರ್ಣಗಳ, ಜಗತ್ತಿನ ನಾಮರೂಪ?ಅಳು ಪ್ರಕೃತಿ, ಪುರುಷ, ವಿವೇಕಗಳ, ಪ್ರಶ್ನೋಪನಿಷತ್ತಿನಲ್ಲಿ ವರ್ಣಿಸಲ್ಪಟ್ಟ ಪುರುಷ ಸಂಬಂಧೀ ಹದಿನಾರು ಕಲೆಗಳ… ಎಲ್ಲವನ್ನೂ ಒಂದೊಂದಾಗಿ ತ್ಯಜಿಸುತ್ತ ಅರೋಹಣದ ಕೊನೆ ಮೆಟ್ಟಲಲ್ಲಿ ಪಾದ ಊರಿದ್ದ ನಾನು ಕೇಳುತ್ತಿದ್ದೆ ಆದರೆ ಕೇಳುತ್ತಿರಲಿಲ್ಲ. ನೋಡುತ್ತಿದ್ದೆ ಆದರೆ ನೋಡುತ್ತಿರಲಿಲ್ಲ, ಮಾತಾಡುತ್ತಿದ್ದೆ ಆದರೆ ಮಾತಾಡುತ್ತಿರಲಿಲ್ಲ. ಚಲುಸುತ್ತಿದ್ದೆ, ಆದರೆ ಚಲಿಸುತ್ತಿರಲಿಲ್ಲ… ಯಾಕೆಂದರೆ ನಾನು ನನ್ನ ದೇಹದಿಂದ ಎರಡು ಮಾರು ದೂರ ನಿಂತು ನನ್ನ ದೇಹ ಸಂಬಂಧೀ ವಿದ್ಯಮಾನಗಳನ್ನು ಕ್ಲುಪ್ತವಾಗಿ ಗಮನಿಸುತ್ತಿದ್ದೆ. ನಾನು ನನ್ನ ದೇಹದ ಆಂಗಿಕ ಚಲನೆಗಳಿಗೆ ಪೂರ್ಣ ವಿರಾಮ ಕೊಡುವ ಪ್ರಯತ್ನ ನಡೆಸತೊಡಗಿದೆ. ನನ್ನ ದೇಹ ನಿಶ್ಚಲವಾಗುವ ಪವಿತ್ರ ಮತ್ತು ಆನಂದ ದಾಯಕ ಕ್ಷಣದಲ್ಲಿ ಪಾಲ್ಗೊಂಡಿದ್ದವರು… ಅಬ್ಬಾ! ಎಷ್ಟೊಂದು ಮಂದಿ… ಎಷ್ಟೊಂದು ಐಶ್ವರ್ಯಾರ್ಥಿಗಳು? ಎಷ್ಟೊಂದು ಕೈವಲ್ಯಾರ್ಥಿಗಳು! ಅವರೆಲ್ಲರ ಮುಖಗಳಲ್ಲಿ ವಾತ್ಸಲ್ಯಾಸಕ್ತಿ! ಅವರೆಲ್ಲರ ಮುಖಗಳಲ್ಲಿ ಆತ್ಮ ನಿವೇದನಾಸಕ್ತಿ; ಅವರೆಲ್ಲರ ಮುಖಗಳಲ್ಲಿ ತನ್ಮಯತೆ! ಅವರೆಲ್ಲರು ಸ್ವರೂಪ, ನಿರೂಪಕ ಧರ್ಮಗಳ ಪ್ರತಿನಿಧಿಗಳು; ಅವರೆಲ್ಲರಲ್ಲಿ ನಿರೂಪಿತ ಸ್ವರೂಪ ವಿಷೇಶಣಗಳು.

ಅಬ್ಬಾ… ಅದೊಂದು ಅದ್ಭುತವಾದ ಅನುಭವ! ಒಂದೊಂದು ನೋಟಕ್ಕೆ ಒಂದೊಂದು ಥರ, ಒಂದೊಂದು ಕೋನದಿಂದ ಒಂದೊಂದು ಥರ ಕಾಣಿಸುತ್ತಿರುವ ನನ್ನ ದೇಹದಿಂದ ನನ್ನ ಹೇಗಪ್ಪ ಬೇರ್ಪಡಿಸುವುದೆಂಬ ಚಿಂತೆ ಕಾಡತೊಡಗಿತು. ಅಷ್ಟೊಂದು ಪಂಚೇಂದ್ರಿಯಗಳು! ಹೃದಯಗಳು ಮಿಡಿಯದಿದ್ದಲ್ಲಿ ನಾನು ನನ್ನ ದೇಹ ಕುರಿತು ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪ್ರಾಣೋತ್ಕ್ರಮಣ ಸಂದರ್ಭದಲ್ಲಿಯೇ ಪ್ರತಿಯೊಬ್ಬರಿಗೂ ತಮ್ಮ ತಮ್ಮ ದೇಹಗಳ ಬಗ್ಗೆ ಮೋಹಪರವಶರಾಗುತ್ತಾರೆಂದು ನನ್ನ ಭಾವನೆ. ಪಂಚೇಂದ್ರಿಯಗಳು ನಿಷ್ಕ್ರಿಯಗೊಂಡ ಸಂದರ್ಭದಲ್ಲಿಯೇ ಪ್ರತಿಯೊಬ್ಬ ಅನುಭಾವಿಯಂತೆ, ಅವಧೂತನಂತೆ, ಪಾಪ ನಿವೇದಕನಂತೆ ಮಾತಾಡಲು ಶುರು ಮಾಡುತ್ತಾನೆಂದೇ ನನ್ನ ಭಾವನೆ. ಆ ಸಂದರ್ಭದಲ್ಲಿ ನನ್ನದೂ ಹಾಗೇ ಆಗಿತ್ತು. ಶ್ರೋತ್ರಿಗಳ ವಂಶದಲ್ಲಿ ಎಷ್ಟೊಂದು ಅದ್ಭುತವಾಗಿ ಜನಿಸಿದವನಾದ ನಾನು, ಪರಮಪೂಜ್ಯ ಕಂಚಿಕಾಮಕೋಟಿಶ್ರೀಗಳ ಅಮೃತಹಸ್ತದಿಂದ ಶಿಕ್ಷಣಕ್ಕೆ ಶ್ರೀಕಾರ ಹಾಕಿಸಿಕೊಂಡವನಾದ ನಾನು; ವೇದೋಪನಿಷತ್ತುಗಾ ಪೈಕಿ ಮುಖ್ಯವಾಗಿ ಪ್ರಶ್ನೋಪನಿಷತ್ತನ್ನು ಆಳವಾಗಿ ಅಭ್ಯಾಸ್ಸ ಮಾಡಿದವನಾದ ನಾನು, ಕುಟುಂಬದ ಉತ್ತಮ ಸದಸ್ಯನಾಗಬೇಕಿದ್ದ ನಾನು, ಒಂದೊಂದು ಕ್ಷಣ ಲಕ್ಷ್ಮಣ ರೇಖೆಗಳನ್ನು ಉಲ್ಲಂಘಿಸುತ್ತ ಬಂದವನಾದ ನಾನು; ಅನೇಕ ರೋಗಗಳಿಗೆ ದೇಹದಲ್ಲಿ ಆಶ್ರಯಕೊಟ್ಟವನಾದ ನಾನು; ಸಮಾಜದ ತಿರಸ್ಕಾರ, ಅವಹೇಳನಗಳಿಗೆ ಗುರಿಯಾದವ ನಾನು, ಸಮಾಜಿಕರಲ್ಲಿ ಕೆಲವು ಭ್ರಮೆಗಳನ್ನು ಸೃಷ್ಟಿಸಿದವನಾದ ನಾನು; ನನ್ನ ದೇಹದಿಂದ ಹೊರಬರಲು ಎಷ್ಟೊಂದು ಒದ್ದಾಡಿದೆ ಗೊತ್ತೆ? ಇಂತಿಷ್ಟು ವರ್ಶಾಂತ ವಾಸಿಸಲಿಕ್ಕೆ ಬಾಡಿಗೆ ಪಡೆದಿರುವ ದೇಹ ಎಂದೂ ಅದರೊಳಗೆ ವಾಸಿಸುವನ ಚರಾಸ್ತಿಯಾಗಲೀ ಸ್ಥಿರಾಸ್ತಿಯಾಗಲೀ ಆಗಲಾರದು, ಎರಡು ದೇಹಗಳ ತೀಟೆಯಿಂದಾಗಿ ಒಂದು ರೂಪದಲ್ಲಿ, ವಿನ್ಯಾಸ ಅರಳುವ ಬೆಳೆಯುವ ಅದು ಸ್ವಾಯಾರ್ಜಿತವೂ ಅಲ್ಲ… ಅದರ ಮಾಲಿಕ ಬಿಡು ಅಂದಾಗ ಬಿಡಬೇಕು… ಇಲ್ಲವೆ ಗಡುವು ಪಡೆದಾದರೂ ಬಿಡಬೇಕು ಅಷ್ಟೆ… ಇದರಲ್ಲಿ ಹೇಳುವುದಾಗಲೀ ಕೇಳುವುದಾಗಲೀ ಏನೂ ಇರುವುದಿಲ್ಲ… ಕೆಲವು ಮನೆಗಳಂತೂ ವಾಸಕ್ಕಿರುವ ಮೇಲೆ ದೊಪ್ಪನೆ ಬಿದ್ದು ಲೆಕ್ಕ ಚುಕ್ತಾಮಾಡಿಕೊಲ್ಲುತ್ತವೆ. ಅಂಥ ಮನೆಗಳ ಪೈಕಿ ನನ್ನ ದೇಹವೂ ಒಂದಾಗಿತ್ತು. ನನ್ನ ಕುತ್ತಿಗೆ ಹಿಡಿದು ತಳ್ಳಲು ಸಜ್ಜಾಗಿ ಅದಾಗಲೇ ಏದುಸಿರು ಬಿಡತೊಡಗಿತ್ತು.

ಡಾಕ್ಟರ್ ಸೋಮಣ್ಣ ಎರಡು ಗಳಿಗೆಗೊಮ್ಮೆ ನನ್ನ ದೇಹದ ಎದೆ ಮೆಲೆ ಸ್ಟೆತಾಸ್ಕೋಪು ಹರಿದಾಡಿಸುತ್ತಿದ್ದ; ಮುಂಗೈ ಹಿಡಿದು ನಾಡಿ ಬಡಿತ ಪರೀಕ್ಷಿಸುತ್ತಿದ್ದ, ಅನಸೂಯಾ ಒತ್ತಾಸೆಗೆ ಬಣ್ಣದ ಸೂಜಿ ಮಾಡುತ್ತಿದ್ದ… ನಾನು ಆಗೊಮ್ಮೆ, ಈಗೊಮ್ಮೆ, ಕೆಳಗಣ್ಣು, ಮೇಲ್ಗಣ್ಣು ಮಾಡಿ ಆತಂಕ ಹುಟ್ಟಿಸುತ್ತಿದ್ದೆ, ನನ್ನ ಬಾಯೊಳಗೆ ನಾಲಿಗೆ ಬಾಲ ಕಳೆದುಕೊಂಡಂತ ಹಲ್ಲಿಯಂತೆ ಹಿಂದಕೂ, ಮುಂದಕೂ ಮಿಸುಕಾಡಿಸುತ್ತಿತ್ತು. ತಲೆದಿಂಬಿಗೆ ಕೂತು ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದ ಅನಸೂಯ ಚಮಚದಿಂದ ನೀರು ಹಾಕುತ್ತಿದ್ದಳು. ನೀರು ಅನ್ನನಾಳಕ್ಕೆ ಬಲು ಪ್ರಯಾಸ ಪಟ್ಟು ಹೋಗುವಾಗ ಗೊರಗೊರ ಸದ್ದು ಮಾಡುತ್ತಿತ್ತು. “ಅವ್ರು ಬಂದ್ರಾ… ಇನ್ನೂ ಬರ್‍ಲಿಲ್ಲಿಲ್ಲಾ ಶಿವ್ನೇ” ಎಂದು ಗೊಣಗುತ್ತ ಆಕೆ ಅಳುತ್ತಿದ್ದುದು ನನಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಷ್ಟು ದೂರದಲ್ಲಿದ್ದ ಗುಂಪು ನನ್ನ ಶವ ಸಂಸ್ಕಾರ ಕುರಿತಂತೆ ಚರ್ಚಿಸುತ್ತಿತ್ತು… ನಾನು ಅವರೆಲ್ಲರ ನಿರೀಕ್ಷೆಯಂತೆ ಪ್ರಾಣೊತ್ಕ್ರಮಣ ಮಾಡದೆ ಸತಾಯಿಸುತ್ತಲೇ ಇದ್ದೆ. ರಾಖೇಶ ಎಲ್ಲಿಂದಲೋ ಬಂದವನೆ ಇನ್ನೂ ಪ್ರಾಣ ಬಿಟ್ಟಿಲ್ಲೇನು… ಹಿಂಗ್ಯಾಕ ಮಿಜಿ ಮಾಡ್ತಾನಂತೀನಿ” ಎಂದು ಒಂದೇ ಸಮನೆ ರೇಗಾಡತೊಡಗಿದ! ‘ಅದೂ ಕಾಲ ಕೂಡಿ ಬರ್ಬೇಕಪ್ಪ… ಸಾಯೋದಂದ್ರೆ ಅದೇನು ಕಡ್ಲೇನ ಬಾಯ್ಗೆ ಹೊಕ್ಕೊಂಡಂಗೇನು!’ ಎಂದೊಬ್ಬರೂ “ಹಾಗಂದ್ರೆಂಗಪ್ಪಾ… ಮೂರ್‍ನಾಕು ದಿನಾದ್ವು… ಬಾಯಾಗೊಂದ್ಕಾಳು ನೀರಾಕ್ಕೊಂಡಿಲ್ಲ… ವದಕನ ಹಂಗ ಬಿದ್ದವೆ…” ಎಂದು ಇನ್ನೊಬ್ಬರೂ; “ಈತ್ನೇನು ನಂ ನಿಮ್ಮಂಗೆ ದಡ್ಮೂಳಲ್ಲ… ವೇದಾಗೀದಾ ಓದ್ಕೊಂಡಾತ… ಯಾವಾಗ ಪಿರಾಣ ಬಿಡ್ಬೇಕು… ಯಾವಾಗ ಬಿಡಬಾರ್ದೂಂತ ಗೊತ್ತು. ಅದ್ಕ ಆ ವ್ಯಾಳ್ಳೇಕ್ಕ ಕಾಯ್ತಿಂದ್ದಂಗದಾನ…” ಎಂದು ಮಗದೊಬ್ಬರು ಮಾತಾಡಿಕೊಳ್ಳುತ್ತಿರುವುದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕೊನೆ ಉಸಿರು ಬಿಡದಂತೆ ನಾನು ಬಿಗಿ ಹಿಡಿದುಕೊಂಡಿದ್ದರೂ ಪಂಚರಂಧ್ರಗಳು ಒಂದೊಂದಾಗಿ ಮುಚ್ಚಿಕೊಳ್ಳತೊಡಗಿದ್ದವು… ಪಂಚ ಪ್ರಾಣಗಳ ಪೈಕಿ ಮುಕ್ಕಾಲುವಾಸಿ ಒಂದೊಂದು ರಂಧ್ರದ ಮೂಲಕ ಹೊರ ಹೋಗಿಯಾಗಿತ್ತು. ಉಳಿದಿದ್ದ ಇನ್ನೊಂದೆರಡನ್ನು ಹಾಗೆ ಗಟ್ಟಿಯಾಗಿ ಹಿಡಿದುಕೊಂಡು ಹೆತ್ತ ತಾಯಿಯ ಆಗಮನಕ್ಕಾಗಿ; ಧರ್ಮಪತ್ನಿಯ ಆಗಮನಕ್ಕಾಗಿ; ರಿಣದ ಬಿಂದಿಗೆ ಹೊತ್ತು ಚಿತೆಗೆ ಅಗ್ನಿಸ್ಪರ್ಶ ಮಾಡಬೇಕಿದ್ದ ಮಕ್ಕಳಾದ ಅಶ್ವತ್ಥ, ಶಿವರಾಮರಿಗಾಗಿ ನಾನು ಎದುರು ನೋಡುತ್ತಿದ್ದೆ… ಇನ್ನು ನನ್ನಿಂದ ಬದುಕಲು ಸಾಧ್ಯವಿಲ್ಲವೆಂದುಕೊಂಡೆ.
ಹೊರಗಡೆ ಅಂಗಳದಲ್ಲಿ ಗುಂಪೊಂದು ‘ಹೋಗುತಿಹುದೋ ಕಾಯ ವ್ಯರ್ಥ” ಎಂದೂ…

‘ದೇಹದೊಳಗನುದಿನವಿದ್ದು…” ಎಂದೂ ಒಂದರ ಮೇಲೊಂದಂತೆ ಭಜನೆ ಮಾಡತೊಡಗಿದ್ದುದು ಸ್ಪಷ್ಟವಾಗಿ ಕೇಳಿ ಬರುತ್ತಿತ್ತು. ಗುಂಪಿನಲ್ಲಿ ದಿಮ್ಮಡಿ ಡಕ್ಕಿ ಭಾರಿಸುತ್ತಿದ್ದ ರಾಖೇಶ ಬಿರುಗಾಳಿಯಂತೆ ನನ್ನ ದೇಹವಿದ್ದ ಕಟ್ಟೆ ಕಡೆ ಬಂದವನೆ, “ಏಯ್ ಶಾಮಾ… ಮರುವಾದಿಯಿಂದ ಪಿರಾಣ ಬಿಡ್ತೀಯೋ ಇಲ್ಲ… ಆಟು ಹೇಳು… ಇಲ್ಲಾಂದ್ರೆ ಕುತ್ತಿಗೆ ಹಿಚುಗಿ ಕೊಂದು ಬಿಡ್ತೀನಿ… ಬಂದ ಪಾಪ ಬರ್‍ಲಿ ನೀನೇನೋ ದೊಡಮನುಸ್ಯಾ ಅಂದ್ಕಂಡಿದ್ದೆ…” ಎಂದು ಕೂಗಾಡ ತೊಡಾಗಿದ. “ಅಯ್ಯೋ…ಹ್ಹಾ..ಹ್ಹಾ… ನನ್ನ ಪ್ರಾಣ ಮಿತ್ರನೇ … ಇನ್ನೊಂದೈದು ನಿಮಿಷ ಬದುಕಲಿಕ್ಕೆ ಅವಕಾಶ ಕೊಡಲಾರೆ ಏನೋ?” ಎಂದು ಅರ್ಥ ಬರುವಂತೆ ಕಣ್ಣಾಲಿಗಳು ಹಿಂದಕ್ಕೂ, ಮುಂದಕ್ಕೂ ಸರಿದಾಡಿದವು… ಕಣ್ಣಲ್ಲಿ ಕಣ್ಣಿಟ್ಟು … “ಶಾಮಾ ನೀನೀಟೊಂದು ಅಂಜುಪುರಕಾ ಅಂತ ಮೊದ್ಲೇ ಗೊತ್ತಿದ್ದಿದ್ರೆ ನಾನು ಬಾಳ್ಯಾನ ಪಾರುಟೇ ಮಾಡ್ತಿರ್‍ಲಿಲ್ಲ ನೋಡು… ಸಾವೆಂಗಿರ್ತೈತಿ ಅಂಬೋದು ಬದುಕಿದ್ರೆ ಹೆಂಗೊ ತಿಳೀತೈತಿ… ಸಾಯೋ ಹಂಗಿದ್ರೀ ನಾಕು ಮಂದಿ ಸೈ ಸೈ ಅನ್ನಂಗೆ ಗಪ್ಪಂತ ಸತ್ತು ಬಿಡಬೇಕಪ್ಪಾ… ಇಲ್ಲಾಂದ್ರೆ ಎದ್ದು ಬಂದು ಬಿಡು… ಹಂಗೆ ಅಡ್ಡಾಡ್ಕೊಂಡು ಬರಾಣು…” ಎಂದು ಚೀರಾಡತೊಡಗಿದ… “ಬದುಕು ಹೇಗಿರ್‍ತದೆ ಎಂಬುದನ್ನು ಬದುಕಿ ನೋಡಿದ್ದಾಯ್ತು… ಇನ್ನು ಸತ್ತು ಸಾವಿನ ರುಚಿ ನೋಡೋದು ಬೇಡವೇನು!”… “ಆಗ್ಲಿ ಮಾರಾಯಾ… ನಿನ್ನ ಇಷ್ಟದಂತೇ ಆಗ್ಲಿ…” ಎಲ್ಲಿದ್ದಾಳೆ ನನ್ನ ಅನಸೂಯಾ… ನನ್ನ ಕಣ್ಣುಗಳು ಸುತ್ತ ಹರಿದಾಡಿದವು… ಅರೆ ಪಕ್ಕದಲ್ಲೇ ಇದ್ದಾಳಲ್ಲ… ಗರಬಡಿದವಳಂತೆ… ದುಃಖದ ಬೆಟ್ಟ ಹೊತ್ತು ಕಂಪಿಸುತ್ತಿರುವಳಲಲ್ಲಾ… ನನ್ನ ದೇಹದ ಸಮಸ್ತ ಶಕ್ತಿಯನ್ನು ಕ್ರೋಡೀಕರಿಸಿ ಮೆಲ್ಲಗೆ ಚಲಿಸತೊಡಗಿದೆ… ಹಾಗೆ ಚಲಿಸಿ ತಲೆಯನ್ನು ಆಕೆಯ ತೊಡೆ ಮೇಲಿರಿಸಿದೆ… ನಿಧಾನವಾಗಿ ಕೈಗಳನ್ನು ಮೇಲೆತ್ತಿ ಆಕೆಯ ಮುಖವನ್ನು ಸವರಿದೆ… ಆಕೆಯ ದುಃಖದ ಕೆರೆಯ ವಡ್ಡಿನಲ್ಲಿ ಬಿರುಕು ಕಾಣಿಸಿಕೊಂಡಿತು. ಅದು ಛಿದ್ರವಾಗುವ ಮೊದಲೆ ನಶ್ವರ ದೇಹವನ್ನು ತ್ಯಜಿಸಬೇಕೆಂದು ನಿರ್ಧರಿಸಿದೆ. ನಿರ್ಧರಿಸಿದ ಅರೆಗಳಿಗೆಯಲ್ಲಿ ಕೊನೆ ಉಸಿರನ್ನು ಬಿಟ್ಟುಬಿಟ್ಟೆ! ನಲವತ್ತಾರು ವರ್ಹಗಳ ಕಾಲ ನನ್ನ ಜೀವಾತ್ಮನಿಗೆ ಆಶ್ರಯ ನೀಡಿದ್ದ ದೇಹವನ್ನು ಶಾಶ್ವತವಾಗಿ ತ್ಯಜಿಸಿ ಬಿಟ್ಟೆ…” ತನ್ನ ಸಾವಿನ ಬಗ್ಗೆ ತಾನೇ ವೇದಾಂತಿಯಂತೆ ಮಾತಾಡುವುದನ್ನು ಮಾತಾಡಿದ ನಂತರ ಶಾಮಣ್ಣ ಪಾತ್ರವು ‘ಇಂಥದೊಂದು ಸಾರ್ಥಕ ಸಾವು ಸಾಯುವುದು ತನ್ನಿಂದ ಮಾತ್ರ ಸಾಧ್ಯವಾಯಿತು’ ಎಂಬಂತೆ ಮುಖ ಮಾಡಿತು.

ಶಾಮ ತನ್ನ ಸಾವನ್ನು ಕುರಿತು ಸೋಜಿಗದ ರೀತಿಯಲ್ಲಿ ಮಾತಾಡಿದ… ತನ್ನ ಮಾತಿನ ನಡುವೆ ಯಾವು ಯಾವುವೋ ಶ್ಲೋಕದ ಸಾಲನ್ನು ಉದ್ಧರಿಸಿದ… ರಸಾಯನಿಕ ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಪ್ರಯೋಗ ಮಾಡಿದಾಗ ಎಷ್ಟು ಸಂತೋಷವಾಗುವುದೋ ಅಷ್ಟೇ ಸಂತೋಷವಾಯಿತು ಅವನ ಮಾತು ಕೇಳಿ… ಇದರಲ್ಲಿ ಎಷ್ಟು ಸುಳ್ಳೋ? ಎಷ್ಟು ನಿಜವೋ?… ಆದರೆ ಕೆಲವು ಮುಖ್ಯ ಸಂಗತಿಗಳು ನೇಪಥ್ಯದಲ್ಲಿ ಉಳಿದುಕೊಂಡು ಬಿಟ್ಟವು. ಶ್ರೋತ್ರಿವಂಶೋದ್ಭವನಾದವನ ಶವ ಸಂಸ್ಕಾರದ ಪ್ರಶ್ನೆ! ಇದನ್ನು ಅನಸೂಯಮ್ಮ ಎಷ್ಟರ ಮಟ್ಟಿಗೆ ಪರಿಹರಿಸಿದಳು! ತಾಯಿ ಅಲುಮೇಲಮ್ಮಾಗಲೀ; ಹೆಂಡತಿ ವರಲಕ್ಷ್ಮಿಯಾಗಲೀ ಮಕ್ಕಳಾದ ಅಶ್ವತ್ಥೂ, ಶಿವರಾಮನಾಗಲೀ… ಇವರೆಲ್ಲರ ಪೈಕಿ ಒಂದಂಶವಾಗಲೀ; ಒಟ್ಟಿಗಾಗಲೀ ಬಂದು ನಾಲ್ಕು ಹನಿ ಕಣ್ಣೀರುದುರಿಸಿ, ತಲಾ ಒಂದೊಂದು ಚಮಚ ಗಂಗಾಜಲ (ಗಂಗಾಜಲ ಎಲ್ಲಿ ಬಂತು ಮಣ್ಣು! ಹುಲುಲಿ ಹಳ್ಳಕ್ಕಂಟಿಕೊಂಡಂತೆ ಶಿವಪೂಜೆ ಕೊಟ್ರಗೌಡರು ಶವಸಂಸ್ಕಾರಾರ್ಥಿಗಳ ಆಯಾಸ ಪರಿಹಾರಾರ್ಥವಾಗಿ ಕಟ್ಟಿಸಿರುವ ಬಾವಿಯ ಶಾಮಲ ವರ್ಣದ ಮತ್ತು ಹೆಚ್ಚು ಲವಣಾಂಶವಿರುವ ಉದಕವನ್ನು) ಬಿಡಬಹುದಿತ್ತು. ಶಾಸ್ತ್ರೋಕ್ತವಾಗಿ ಸಂಸ್ಕಾರವನ್ನು ನಡೆಸಿಕೊಡಲಿಕ್ಕ್ನು ಕೊತ್ತಲಗಿಯಲ್ಲಿ ಬ್ರಾಹ್ಹಣರಿಗೆ ಬರವಿಲ್ಲ… ಮಕ್ಕಳಿಂದ ತಂದೆಯ ಚಿತೆ ಸ್ಪರ್ಶ ಮಾಡಿಸಿದ್ದರೆ ಯಾವ ಸಮಸ್ಯೆಯೂ ಉದ್ಭವಿಸುತ್ತಿರಲಿಲ್ಲ. ಅಂತೂ ಆ ಮುದ್ದಾದ ಮಕ್ಕಳೀರ್ವರು ಬದುಕಿನುದ್ದಕ್ಕೂ ಪಿತೃ‌ಋಣದಲ್ಲೆ ನವೆಯಬೇಕಾಗಿರುವುದೊಂದು ದೊಡ್ಡ ಕರ್ಮ. ಎಷ್ಟೇ ಕರ್ಮಠರಿದ್ದರೂ ಹೀಗೆ ವರ್ತಿಸಲಾರರು… ಇದರ ಬಗ್ಗೆ ಸರಿಯಾದ ವಿವರ ಕೊಡದಿದ್ದರೆ ಶಾಮಣ್ಣ ಆತ್ಮ ವಂಚನೆ ಮಾಡಿಕೊಂಡನೆಂದೇ ಓದುಗರು ಭಾವಿಸುತ್ತಾರೆ! ಅದೂ ಅಲ್ಲದೆ ಕಾದಂಬರಿಯೂ ಅಪೂರ್ಣವಾಗಿ ಉಳಿಯುತ್ತದೆ… ಮುಂದಿನಂದೋ ಚೂರನ್ನು ಶಾಮನೇ ಹೇಳಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿ –

“ಶಾಮಾ… ನಾನು ಕೃತಜ್ಞತೆಗಳನ್ನು ಹೇಳುತ್ತಿರುವೆ. ಹಾಗೆಯೇ ಈ ಕಾದಂಬರಿ ಪರವಾಗಿ ಕಾದಂಬರಿಯ ಓದುಗರ ಪರವಾಗಿ; ತೆಗಳುವವರ ಪರವಾಗಿ, ಸಹೃದಯರ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತಿರುವೆ. ದಯವಿಟ್ಟು ಸ್ವಲ್ಪ ಸಹಕರಿಸು. ಕುಕುಲಾರ್ಕನುಮಸ್ತಮೆಯ್ದಿದರ್ ಎಂದು ರನ್ನ ದುರ್ಯೋಧನನ ಪರ್ಯಾವಸಾನವನ್ನು ವರ್ಣಿಸಿದ್ದು ನೆನಪಾಯಿತು. ಎಷ್ಟು ಅದ್ಭುತವಾಗಿ ನೀನು ನಿನ್ನ ದೇಹದಿಂದ ನಿರ್ಗಮಿಸಿದೆಯಲ್ಲ… ಆಗಮನ ಅಚಾನಕ್, ನಿರ್ಗಮನ ಖತರ್ನಾಕ್ ಎಂದು ಹೇಳಬಹುದೇನೋ? ನಿನ್ನ ಹಾಗೆ ಸಾವಿನಲ್ಲಿ ಥ್ರಿಲ್ ಅನುಭವಿಸುವವರು ಶತಮಾನಕ್ಕೊಬ್ಬರು… ನಿನ್ನ ಬದುಕು ಮತ್ತು ಸಾವು ಅಕ್ಷರಗ್ರಹಿಕೆಗೆ ದಕ್ಕುವುದು ಸುಲಭ ಆಧ್ಯವಿಲ್ಲ. ಒಂದು ರೀತಿಯ ಗೋಜಲು ಗೋಜಲು… ಅದಿರಲಿ… ಬದುಕಿನ ಅಂತಿಮ ಕ್ಷಣದವರೆಗೆ ಸುಶ್ರಾವ್ಯವಾಗಿ ವರ್‍ಣನ ಮಾಡಿದಿ… ಪತ್ತೆದಾರಿಕೆಯ ತರದೂದಿನ ಮೂಲಕ ನಾನು ಸಂಗ್ರಹಿಸಿರುವ ಮಾಹಿತಿಗೂ, ನಿನ್ನ ಹೇಳಿಕೆಗೂ ತಾಳೆ ಆಗ್ತಾ ಇಲ್ಲ. ರಾಖೇಶನ ನಡುವಳಿಕೆ ಬಗ್ಗೆ ಉತ್ಪ್ರೇಕ್ಷೆ ಮಾಡಿ ಹೇಳಿರುವಿ ಎಂದು ಭಾವಿಸುವೆ… ಅನಸೂಯಳೊಂದಿಗೆ ನೀನು ಲೈಂಗಿಕ ಸಂಬಂಧಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದೆ ಎಂದು ತಿಳಿಯಿತು. ಡಾ.ಶೋಭಾ ಎಂಬುವರಲ್ಲಿಗೆ ರಾಖೇಶ ನಿನ್ನನ್ನು ಕರೆದುಕೊಂಡು ಹೋಗಿ ನೀನು ನರಳುತ್ತಿದ್ದ ಗೊನೇರಿಯಾಕ್ಕೆ ಇಲಾಜು ಮಾಡಿಸಲು ಪ್ರಯತ್ನಿಸಿದನೆಂದು ಮಾಹಿತಿ ದೊರಕಿತ್ತೇ ಹೊರತು ಉಳಿದ ವ್ಯಾಧಿಗಳ ಇಲಾಜಿಗೆ ಎಲ್ಲೆಲ್ಲಿಗೆ ಕರೆದುಕೊಂಡು ಹೋಗಿದ್ದ ಎಂಬ ಮಾಹಿತಿ ಮಾತ್ರ ದೊರಕಲಿಲ್ಲ. ಕೊತ್ತಲಗಿಗೂ ಮತ್ತು ಏಯ್ಡ್ಸ್‌ಗೂ ನಡುವೆ ಮಾತುಕತೆ ನಡೆಸಿ ರಾಜಿ ಮಾಡಿಸಿದಿ ಎಂದೂ; ನೀನೇ ಆ ರೋಗದ ಬೋಣಿಗಿ ಮಾಡಿದಿ ಎಂದೂ ಇತ್ತೀಚೆಗೆ ಆ ಗ್ರಾಮಕ್ಕೆ ಸರಕಾರದಿಂದ ನೇಮಕಗೊಂಡಿರುವ ಆದರ್ಶ ವೈದ್ಯ ಡಾ.ಎಲ್ಲಪ್ಪ ಆಕಾಶವಾಣಿಗೆ ಕಳೆದವಾರ ನೀಡಿದ ಸಂದರ್ಶನದಲ್ಲಿ ಪ್ರಕಟಿಸಿದರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು.

ಅವರು ನಿನ್ನ ದೇಹದಿಂದ ಐದಾರು ಸೀಸಿ ರಕ್ತವನ್ನು ಸಿರಂಜಿ ಮೂಲಕ ಯಾವಾಗ ಪಡೆದುಕೊಂಡರೆಂಬುದೇ ನಿಘೂಡ ಸಂಗತಿ. ಯಾವತ್ತಾದರೂ ನೀನು ಯಾರಿಗಾದರೂ ರಕ್ತದಾನ ಮಾಡಿದ್ದುಂಟಾ ಎಂಬುದೂ ನಿಘೂಢವೇ. ನೀನು ಹಲವು ರೋಗಗಳ ಹರಿಕಾರನಾಗಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀ… ಅದನ್ನು ನೀನು ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿರುವಿ. ಆದರೆ ಏಯ್ಡ್ಸ್ ಬಗ್ಗೆ ಮಾತ್ರ ಮುಚ್ಚಿಟ್ಟುಕೊಂಡಿರುವಿ. ಮುಂಬೈ ಪ್ರಾಂತದ ಕಾಮಾಟಿಪುರಂ ಮೇಲೆ ಪೋಲೀಸರು ಕಾರ್ಯಾಚರಣೆ ನಡೆಸಿ ಬಿಡುಗಡೆಗೊಳಿಸ್ದ ನೂರೆಂಟು ಮಂದಿ ಕರ್ನಾಟಕದ ವೇಶ್ಯೆರ ಪೈಕಿ ಚವುಡವ್ವ ಅಲಿಯಾಸ್ ರಂಜಿತಾ ಎಂಬ ತರುಣಿ ಕೊತ್ತಲಗಿ ಬಂದೊಡನೆ ರಾಖೇಶನ ಮೂಲಕ ಪರಿಟಯ ಮಾಡಿಕೊಂಡು ಮಲಗಿದ್ದು ನೆನಪಿದೆ ತಾನೆ? ಆ ಬಗ್ಗೆ ನೀನು ಪ್ರಸ್ತಾಪಿಸಲಿಲ್ಲ… ಇಂಥ ಎಷ್ಟೋ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಳ್ಳುತ್ತಿವೆ. ಈ ಬಗ್ಗೆ ನೀನೇನದರು ಹೇಳುವುದುಂಟಾ! ಎಂದು ನಾನು ಯಾವ ಮುಲಾಜಿಲ್ಲದೆ ಕೇಳಿದೆನು.

ಅದಕ್ಕೆ ಶಾಮಣ್ಣ ಪಾತ್ರವು ಬದ್ಧಭ್ರುಕುಟಿಯಾಯಿತು.

“ಎಲವೋ ದುಷ್ಟಾ… ನೀನು ನನ್ನನ್ನು ಏನು ಮಾಡಬೇಕೆಂದು ಮಾಡಿರುವಿಯಲೋ? ಮಸ್ಕಾ ಹಚ್ಚಿಕೊಂಡು ಕೇಳೋದನ್ನೆಲ್ಲ ಕೇಳಿ ಕೊನೆಗೆ ಇಂಥಾ ಆಪಾದನೆ ಮಾಡುತ್ತಿರುವಿಯಾ… ನಿನಗೂ ನಿನ್ನ ಕಾದಂಬರಿಗೂ ಬೆಂಕಿ ಹಾಕ್ಲಿ… ಪಾಪ ಎಳೆನಿಂಬೆಕಾಯಿಯಂಥ ಹುಡುಗಿ ಚವುಡಿಗೆ ಅಂಥ ಭಯಾನಕ ರೋಗ ಇತ್ತೂ ಅಂತ ಹೇಳ್ತೀದ್ದೀಯಲ್ಲೋ ಬೇಕೂಫಾ… ನಿನ್ನಂಥೋನ ಕೈಗೆ ಸಿಕ್ಕೊಂಡೆ ನೋಡು… ನನ್ಗೆ ನಾನೇ ಎಕ್ಕಡದಿಂದ ಹೊಡ್ಕೋಬೇಕು ಅಷ್ಟೆ. ನಿನ್ನ ಸಹವಾಸ ಸಾಕು… ನಾನು ಒಂದು ಕ್ಷಣ ನಿನ್ನ ಹಸ್ತಪ್ರತಿಯಲ್ಲಿ ವಾಸಿಸಲಾರೆ… ಹೊರಟು ಹೋಗ್ತೀನಿ” ಎಂದು ಶಾಮಣ್ಣ ಪಾತ್ರವು ದಡಬಡಾ ಎದ್ದು ಹೋಗ ತೊಡಗಿತು.
ಅದರ ಆ ವರ್ತನೆ ನೋಡಿ ನನಗೆ ಹೆಗಲುಮುಟ್ಟಿ ನೋಡಿಕೊಳ್ಳುವ ಕುಂಬಳಕಾಯಿ ಕಳ್ಳ ನೆನಪಾದ. ನಾನು ಅವನ ಕೈಹಿಡಿದು ಕ್ಷಮೆ ಕೇಳಿ ತಡೆದು ಕೂಡ್ರಿಸಿದೆ.. ಅವನ ವರ್ತನೆ ತುಸು ಕಠಿಣ ಎನ್ನಿಸಿದರೂ ಅವನ ಹೃದಯ ಮಾತ್ರ ಬೆಣ್ಣೆಗಿಂತ ಮೃದು ಎಂಬುದು ನನಗೆ ಗೊತ್ತು.
“ಕ್ಷಮಿಸು ಮಹಾರಾಯ… ನೀನೇ ಹೀಗೆ ಕೋಪಿಸಿಕೊಂಡು ಹೊರಟು ಹೋದರೆ ನನ್ನ ಕಾದಂಬರಿಯ ಗತಿ ಏನಾಗಬೇಕು! ನಿನ್ನ ಮರಣೋತ್ತರ ಘಟನೆಗಳ ಬಗ್ಗೆ ಹೇಳಿ ಉಪಸಂಹಾರದ ಚರಮ ಗೀತೆ ಹಾಡು. ದಯವಿಟ್ಟು…” ಎಂದು ಅಂಗಲಾಚಿದೆ.
ಯಾವನಾದಾರಂಭ ದೆಸೆಯಲ್ಲಿ ಎಷ್ಟೋ ಕನಸುಗಳನ್ನು ಕಾಣುತ್ತಿದ್ದ ಮತ್ತು ಕಂಡದ್ದನ್ನು ನಿಸ್ಸಂಕೋಚವಾಗಿ ಹೇಳಿಕೊಂಡಿದ್ದ ಆ ಶಾಮಾಶಾಸ್ತ್ರಿ ಇವನೇ ಏನು?! ಎಂಬ ಅನುಮಾನ ಬಂತು.

ಅವನು ಕನಸುಗಳಲ್ಲಿ ಸಾರ್ವಜನಿಕವಾಗಿ ಮಲವಿಸರ್ಜಿಸುತ್ತಿದ್ದನಂತೆ. ಮಲದೊಡನೆ ಆಟ ಆಡುತ್ತಿದ್ದನಂತೆ, ಎಲ್ಲಿ ನೋಡಿದರಲ್ಲಿ ಮಲಕುಪ್ಪೆ ಕುಪ್ಪೆಯಾಗಿ ಕಾಣಿಸುತ್ತಿತ್ತಂತೆ ಅವನಿಗೆ ಅಂಥ ಕನಸುಗಾರನೋರ್ವನಿಗೆ ಕೋಪ ಬಂದರೆ ವಸ್ತು ಸ್ಥಿತಿ ಏರುಪೇರಾಗದೆ ಇರಲು ಹೇಗೆ ಸಾಧ್ಯ?
“ನಿನಗೆ ನಾಚಿಕೆ ಎಂಬುದಿಲ್ಲ… ಸತ್ತು ಹೋದೆ ಅಂತ ಹೇಳ್ತಿದೀನಿ… ಸತ್ತನಂತ ಮುಂದೇನಾಯ್ತು ಅಂತ ಕೇಳ್ತಿದ್ದೀಯಾ… ನಿನ್ನ ಮೂರ್ಖತ್ವಕ್ಕೆ ಏನು ಹೇಳಲಿ?… ಅದ್ನೆಲ್ಲ ನಾನೇ ಹೇಳೊದು ಅಷ್ಟು ಸರಿಯಲ್ಲ… ನನ್ನ ಬಿಟ್ಟು ಬಿಡು… ಮಹರಾಯಾ… ಬಿಟ್ಟು ಬಿಡು” ಎಂದು ಶಾಮಂಣ ಪಾತ್ರವು ಪರಿಪರಿಯಾಗಿ ಬೇಡಿಕೊಂಡಿತು.

ಅದು ಹೇಳೋದು ಸರಿಯೆಂದು ಕಂಡು ಬಂದಿತು. ಹೌದು! ಸತ್ತಿರುವ ವ್ಯಕ್ತಿ ತನ್ನ ಮರಣೋತ್ತರ ಬದುಕಿಗೆ ವ್ಯಾಖ್ಯಾನಕ್ಕೆ ಸರಿಯಾದ ನ್ಯಾಯ ಒದಗಿಸಲಾರ… ಹಾಗೆ ಪೀಡಿಸುವುದೂ ಸರಿಯಲ್ಲ… ಈ ಬಗ್ಗೆ ಯಾರಿಂದ ವಿವರ ಪಡೆಯುವುದು!…
ನಾನು ಪರ ಪರ ತಲೆ ಕೆದರುಕೊಳ್ಳುತ್ತಿರುವುದನ್ನು ನೋಡಲಾರದೆ ಶಾಮಣ್ಣ ಪಾತ್ರವೇ ಅನಸೂಯ ಎಂಬ ಪೋಶಕ ಪಾತ್ರಕ್ಕೆ –
“ಅನಸೂಯಾ… ಏನ್ಮಾಡ್ತಿದ್ದೀಯೇ… ಎದ್ದೇಳೇ ಎದ್ದೇಳು… ನಾನು ಸತ್ತ ಮೇಲೆ ಏನಾಯ್ತೂಂತ ಕಾದಂಬರಿಖೋರ ತಲೆಕೆಡೆಸಿಕೊಂಡಿದ್ದಾನೆ… ನೀನೇ ಮುಂದಿನದೆಲ್ಲ ಹೇಳಿ ಸರಿದೂಗಿಸು… ನನ್ನೋರು ತನ್ನೋರೆಂಬುವರ ಕೈಲಿ ಅಕ್ಷತೆಯನ್ನು ಬಾಯಿಗೆ ಹಾಕಿಸುಕೊಳ್ಳದೆ ಸತ್ತಿರೋ ನನಗೆ ಮರಣೊತ್ತರವಾಗಿ ಏನಾದರು ಬರೆದು ಮಸಿ ಬಳಿದಾನು. ನೀನೇ ವಿವರಿಸಿ ಮನಸ್ಸು ಹಗುರ ಮಾಡಿಕೋ” ಎಂದು ವಶೀಲಿ ಮಾಡಿದನು.
ಅದನ್ನು ಕೇಳಿ ಅನಸೂಯಮ್ಮ ಎಂಬ ಪಾತ್ರ ಶಿವ ಶಿವಾ ಎಂದು ಕೈಯಿಂದ ಕಿವಿ ಮುಚ್ಚಿಕೊಂಡಿತು. “ಅಯ್ಯೋ ವಿಧಿ ವಿಲಾಸವೇ… ನಿನ್ನ ಮಹಿಮೆಯು ಅಪರಂಪಾರವೆಂದು ಸನಕಾದಿ ಸಜ್ಜನರು ಹೇಳಿವುರುವುದು ಮಿಥ್ಯೆಯಲ್ಲವು…” ಎಂದು ಗೊಣಗುತ್ತ ಕ್ರಮೇಣ ಒಂದು ತಹಬಂದಿಗೆ ಬಂದು “ಯಪ್ಯೋ ನಾನೇನು ಕರುಮಾ ಮಾಡಿದ್ನೋ… ಯಪ್ಪಾ… ಅದ್ನೆಲ್ಲ ಗ್ನಪ್ತೀಕ ತಂದ್ಕಂಡ್ರೆ ಎದ್ಯಾಗ ಉರಿ ಬಿದ್ದಂಗಾಗತೈತೋ… ವ್ಯೋನು ಕರುಮಾ ಮಾಡಿದ್ಯೋ ಶಾಮಾ… ಹಂಗ ಸಾಯಲಕ… ಒಂದೊಳ್ಳೇದು ಉಂಬ್ಲಿಲ್ಲ… ಒಂದೊಳ್ಳೇದು ಉಡಲಿಲ್ಲ… ನೀಚಿ ನೀಚಿ ಸತ್ತೆಲ್ಲೋ… ನನ್ನೋರೆಂಬರು ಕಯ್ಯಲ್ಲಿ ಬಿಡಿಸ್ಗಂಬ್ಲಿಲ್ಲ… ತನ್ನೋರೆಂಬರು ಕಯ್ಯಲಿ ಬಾಯಾಗ ಅಕ್ಕಿಕಾಳು ಹಾಕಿಸ್ಕಂಬ್ಲಿಲ್ಲ… ಬದುಕಬೇಕಂಬ್ಲಿಲ್ಲ… ಬಾಳುವೆ ಮಾಡಬೇಕಂಬ್ಲಿಲ್ಲ… ನಿಸೂರಾಗ ಮಲಿಕ್ಕೊಂಡು ನಿಸೂರಾಗೇ ಹೊಂಟು ಹ್ವಾದಿ… ಸೊನ್ನೀಗೆ ಸೊನ್ನಿಕೂಡ್ದಿ… ಸೊನ್ಯಾಗ ಸೊನ್ನಿ ಕಳ್ದು ನಾಕುಮಂದಿ ಕೂಡಿ ಅವುದು ಅನ್ನಿಸ್ಕಂಬದೆ; ಅಲ್ಲಾ ಅನ್ನಿಸ್ಕಂಬದೆ ನಲವತ್ತಕ್ಕೆ ಮುದುಕನಂಗೆ ಬದುಕಿದಿ… ಮುದುಕನಂಗೆ ಸತ್ತಿ… ನೀನುಂಡ ಸಾವನ್ನೆಂಗ ವರಣನ ಮಾಡ್ಲೋ… ಶಿವ… ಶಿವಾ … ಹೇಳಕ ಮದ್ಲೆ ನಾಲಗ್ಯಾರ ಬಿದ್ದು ಹೋಗಬಾರ್ದೇನು?” ಎಂದು ಕೆಳಗಿನ ವಾಕ್ಯಕು ಮೇಲಿನ ವಾಕ್ಯಕು ಬಡಿ ಬಡಿದತ್ತು ಹೇಳತೊಡಗಿ ಅನಸೂಯಮ್ಮ ಪಾತ್ರವು ತಲೆ ಚಿಟ್ಟು ಮಾಡಿತು.
ನನಗಿಂತ ಮುಖ್ಯವಾಗಿ ಶಾಮನ ಪಾತ್ರವು… ಆ ಸ್ತ್ರೀ ಪಾತ್ರದ ಮುಖವನ್ನು ಎದೆಗವುಚಿಕೊಂಡು ಪರಿಪರಿಯಾಗಿ ರಮಿಸತೊಡಗಿತು.

“ಅನೂ… ಅನುಸೂವಿ… ನೀನತ್ರೆ ನನ್ ಎದೆ ಹೊಡ್ದು ಹೋಗ್ತದೇ… ನೀನೆಷ್ಟು ಅತ್ರೇನುಪಯೋಗ… ನಾನೇನು ಬದುಕಿ ಬಂದೇನ… ನನ್ ಸಂತಿ ಅವತ್ತಿಗೆ ಮುಗೀತು… ಮುಗಿಸಿಕೊಂಡು ಹೊಂಟು ಹೋಗಿ ಬಿಟ್ಟೆ ಅಷ್ಟೆ… ಅದಕ್ಕೆ ನೀನ್ಯಾಕೆ ಇಷ್ಟೊಂದು ದುಃಖಮಾಡ್ತೀ… ನಾನು ಬದುಕಿರೋವರ್ಗೂ ನಿನಗೆ ದುಃಖ ಕೊಟ್ಟೆನೇ ಹೊರತು ಸುಖವನ್ನು ಕೊಡಲಿಲ್ಲ… ಎಷ್ಟೋ ಸಾರಿ ನಿನ್ನನ್ನೇ ಹಿರ್ಕೊಂಡು ತಿಂದು ಬದುಕಿದೆ… ಆ ಹುಡುಗಿ ಕಂಚನಾಳಿಗಾಗ್ಯಾದರೂ ನೀನು ಬದುಕಿರಬೇಕು… ನೀನೂ ಸಂತೋಷವಾಗಿರಬೇಕು… ಎಲ್ರೂನೂ ಸಂತೋಷವಾಗಿಡಬೇಕು…” ಎಂದು ಅದು ಸಮಾಧಾನದ ಮಾತುಗಳನ್ನು ಆಡಿತು.
ನಾನೂ ಆ ಸ್ತ್ರೀ ಪಾತ್ರವನ್ನು ಸಂತೈಸಿದೆ. ಕ್ರಮೇಣ ಅದು ಒದ್ದೆಗಣ್ಣು ಒರೆಸಿಕೊಂಡುಸಹಜ ಸ್ಥಿತ್ಗೆ ಮರಳಿತು. ಬಿಕ್ಕುತ್ತಿತ್ತು.

“ಹೇಳಮ್ಮಾ… ನಿನ್ನ ಮನಸ್ಸಿಗೆ ಆಗಿರೋ ಗಾಯ ನನಗೆ ಅರ್ಥವಾಗುತ್ತದೆ. ಆದರೆ ಅದನ್ನು ಗುಣಪಡಿಸುವ ಶಕ್ತಿ ನನಗಿಲ್ಲ… ಯಾರಿಗೂ ಇಲ್ಲ… ಇಂಥ ಉದಾತ್ತಗುಣದ ಮಹಿಳೆಯರು ಇದ್ದಾರೆಯೇ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕು. ಹಾಗೆ ಹೇಳಮ್ಮಾ… ಎಂದು ಉತ್ಸಾಹ ತುಂಬಿದೆ.

ಮಧ್ಯೆ ಮಧ್ಯೆ ಬಾಯಿ ಹಾಕಿ ತೊಂದರೆ ಕೊಡುವ ಛಾನ್ಸ್ ಇರ್‍ತದೇ ಅಂತ ತಾತ್ಕಾಲಿಕವಾಗಿಜಾಗ ಖಾಲಿ ಮಾಡಲು ಶಾಮಣ್ಣ ಪಾತ್ರಕ್ಕೆ ಸೂಚಿಸಿದೆ. ಪಾಪ ಅದು ಒಂದೇ ಮಾತಿಗೆ ಅಲ್ಲಿಂದ ಹೊರಟು ಹೋಗಿ ಕಥೆಯೊಳಗೆ ನಾನು ಸೃಷ್ಟಿಸಿದ ಅಶ್ವಥ್‌ಕಟ್ಟೆಯ ಮೇಲೆ ಕಾಲು ಚಾಚಿ… ಆರ್ ಏ ಬ್ರಾಂಡಿನ ಖಾಲಿ ಕವರುಗಳನ್ನು ಹಿಡಿದು ಆಡತೊಡಗಿದ ಮಕ್ಕಳನ್ನು ನೋಡುತ್ತ ಕೂತುಕೊಂಡಿತು. ನಾವು ಅದಕ್ಕೆ ಕಾಣಿಸುತ್ತಿದ್ದೆವೇ ಹೊರತು ನಮ್ಮ ಯಾವ ಮಾತೂ ಅದಕ್ಕೆ ಕೇಳಿಸುವಂತಿರಲಿಲ್ಲ. ಆತನ ಮತ್ತು ನಮ್ಮ ನಡುವೆ ಭಾಷೆ ಬೇಯುತ್ತಿರುವ ಕಿಮುಟು ವಾಸನೆ ಮಾತ್ರ ತಾನೇ ತಾನಾಗಿ ಸುಳಿದಾಡುತ್ತಿತ್ತು.

ಅನಸೂಯಮ್ಮ ಪಾತ್ರವು ಹೇಳತೊಡಗಿತು. ಅದರ ಮೌಖಿಕ ಭಾಷೆಯನ್ನು ಸಂಸ್ಕರಿಸಿ ಬರೆಯತೊಡಗಿದೆ.
*
*
*
ನಾನು ಎಂಥೆಂಥೋರ ಸಹವಾಸ ಮಾಡಿದ್ದೀನಿ… ಆದರೆ ಶಾಮಾ ಶಾಸ್ತ್ರಿಯಂಥವರ ಸಹವಾಸ ಮಾಡಿರಲಿಲ್ಲ… ನಾನು ಅವನಲ್ಲಿ ಏನು ಕಂಡು ಮೋಹಿಸಿದೆನೋ ದೇವರಿಗೇ ಗೊತ್ತು. ಅವನೇನು ಅಂಥ ರೂಪಸ್ಥನಲ್ಲ, ಧನವಂತನಲ್ಲ… ಲೈಂಗಿಕ ಸುಖದ ಪರಾಕಾಷ್ಟೆ ತಲುಪಿಸುವಂಥ ಕುಶಲಕಲೆಗಾರನೂ ಅಲ್ಲ… ಅವನ ಮತ್ತು ನನ್ನ ನಡುವೆ ಸಂಬಂಧ ಕುದುರಿಸಲು ರಮಾಬಾಯಿ ‘ಅನೇಕರೀತಿಯಲ್ಲಿ ಪ್ರಯತ್ನಿಸಿದಳು ಮುಕುಳಿಯಲ್ಲಿ ಅರೆಪಾವಿ ಮಾಂವುಸವಿಲ್ಲದ ಅವನ ಸಂಗಾಟ ಹೆಂಗ ಮಲಿಕ್ಕೊಳ್ಳಿ ಹೋಗಬೇ’ ಎಂದು ನಾನು ಗದರಿಸುತ್ತಿದ್ದುದೂ ಉಂಟು. ನನ್ನನ್ನು ಯಾಕೆ ಅವನೊಂದಿಗೆ ಹೊಂದಿಕೆ ಮಾಡಲು ಪ್ರಯತ್ನಿಸುವುದೆಂಬ ಖಬರು ಸ್ವತಃ ತನಗೂ ಇರಲಿಲ್ಲ… ಇದರ ಬಗ್ಗೆ ಶಾಮನಿಗೂ ನಿರ್ದಿಷ್ಟವಾದ ಖಚಿತವಾದ ಯೋಜನೆಯೂ ಇರಲಿಲ್ಲ… ಅವನ ವ್ಯಕ್ತಿತ್ವಕ್ಕೆ ಸಂಬಂಧಸಿದಂತಾಗಲೀ ನಾನ್ನ ವ್ಯಕ್ತಿತ್ವಕ್ಕೆ ಸಂಬಂಧಸಿದಂತಾಗಲೀ ಪರಸ್ಪರ ಆಕರ್ಷಿಸತಕ್ಕಂಥ ವದಂತಿಗಳು ಇರಲಿಲ್ಲ… ಅವನ ಬಗ್ಗೆ ನಾನು ಅಲ್ಲಲ್ಲಿ ಕೇಳಿ ತಿಳಿದುಕೊಂಡಿದ್ದೆ. ಅದರಂತೆ ಕುಕ್ಕುಟ ಸ್ವಭಾವದ ಅವನೂ ಕೇಳಿ ತಿಳಿದುಕೊಂಡಿದ್ದ. ಯಾರ ಆದರೂ ಗುಟ್ಟಾಗಿ ಏಕಮುಖವಾಗಿ ಪ್ರೀತಿಸುವ ಸ್ವಭಾವದವನಾಗಿದ್ದ ಅವನು ನನ್ನನ್ನೂ ಒಳಗೊಳಗೆ ಪ್ರೀತಿಸಿದ್ದಿರಬಹುದು. ಸಂಗ್ಯಾ ಬಾಳ್ಯಾ ನಾಟಕ ಆಡದಿದ್ದಲ್ಲಿ ನಾವ್ಯಾರೂ ಪರಸ್ಪರ ಕೈಗಳಿಗೆ ಎಟಕುತ್ತಲೇ ಇರಲಿಲ್ಲ… ಬಾಳ್ಯಾ ಸೂತ್ರಧಾರಿ ರಾಖೇಶನೆಂಬ ಸಿದುಗನ ಸಹವಾಸ ಒದಗದಿದ್ದಲ್ಲಿ ನಮ್ಮ ಶಾಮನೂ ಕೊತ್ತಲಗಿಯ ಎರಡನೇ ವಾರ್ಡಿನಲ್ಲಿ ವಾಸಿಸುತ್ತಿರುವವರ ಸಜ್ಜನರ ಪೈಕಿ ತಾನೂ ಒಬ್ಬನಾಗಿ ಏನು ಸುಖಿಯೋ ತಾನು ಹುಟ್ಟಿನಲ್ಲಿ ಕಲಿಕೆಯಲ್ಲಿ ಎಂಬಂತೆ ಇದ್ದುಬಿಡುತ್ತಿದ್ದ. ನಮ್ಮ ನಿಮ್ಮೆಲ್ಲರಂತೆ ವಯಸ್ಸಿನ ಅವಸ್ಥೆಗಳನ್ನು ದಾಟಿ ವೃದ್ಧಾಪ್ಯ ತಲುಪಿ ಭಗವನ್ನಾಮಸ್ಮರಣೆ ಮಾಡುತ್ತ ಸತ್ತು ನಾಲ್ಕು ಮಂದಿ ಕೂಡ ಸೈ ಅನ್ನಿಸಿಕೊಳ್ಳುತ್ತಿದ್ದನೇನೋ! ಆದರೆ ಅವನು ಹಾಗೆ ಬದುಕಲಿಲ್ಲ… ಅಜ್ಜ ನೆಟ್ಟಾಲದ ಮರಕ್ಕೆ ನೇಣು ಹಾಕಿಕೊಳ್ಳದವನಾಗಿದ್ದ… ಅಂಥವರ ವಿರುದ್ಧ ಮಾತಾಡಬಲ್ಲವನಾಗಿದ್ದ. ಸನಾತನಿಗಳನ್ನು ಬೆಚ್ಚಿ ಬೀಳಿಸಲು ಯಾವ ರೇಖೆಗಳನ್ನಾದರೂ ಉಲ್ಲಂಘಿಸಬಲ್ಲವನಾಗಿದ್ದ. ಬಹುಶಹಃ ಅವನಲ್ಲಿದ್ದ ಈ ಗುಣಗಳನ್ನೇ ನಾನು ಗಾಢವಾಗಿ ಮೆಚ್ಚಿದ್ದು ಎಂದುಕೊಳ್ಳುತ್ತೇನೆ. ಅವನು ಅಪರೂಪಕ್ಕೊಮ್ಮೆ ಬರುತ್ತಿದ್ದುದುಂತು ಹೋಗುತ್ತಿದ್ದುದುಂಟು. ನಾನು ಅನ್ಯರೊಂದಿಗೆ ಮಲಗಿದ್ದಾಗ ಅವನು ಬಂದು ನನಗಾಗಿ ಕಾದು ಕಾದು ಹೋಗಿರುವ ಉದಾಹರಣೆಗಳುಂಟು.

ಒಮ್ಮೊಮ್ಮೆ ಯಾರೊಂದಿಗೋ ಮಲಗಿರುತ್ತಿದ್ದ ಅವನನ್ನು ನಾನೇ ಹುಡುಕಿ ಕರೆಸಿಕೊಂಡು ಅವನಿಗೆ ಗೊತ್ತಿರದ ಅನೇಕ ಪಟ್ಟುಗಳನ್ನು ಕಲಿಸುತ್ತಿದೆ. ಆ ಪಟ್ಟುಗಳ ಪ್ರಯೋಗಕ್ಕೆ ಗುರಿಯಾಗಿ ನಾನು ಸುಖವಾಗಿ ನರಳುತ್ತಿದ್ದೆ. ಅವನ ಬಗ್ಗೆ ನಾನಾಗಲೀ, ನನ್ನ ಬಗ್ಗೆ ಅವನಾಗಲೀ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಅವನ ನೌಕರಿಯನ್ನು ಅದೊಂದು ನೌಕರಿ ಎಂದು ಹೇಗೆ ತಿಳಿದುಕೊಂಡಿದ್ದನೋ ಅವನೂ ಅಷ್ಟೆ. ನಾನು ನಟಿಸುತ್ತಿದ್ದುದನ್ನು, ವಿಟರೊಂದಿಗೆ ಮಲಗುತ್ತಿದ್ದುದನ್ನು ಒಂದು ನೌಕರಿ ಎಂದೇ ಭಾವಿಸಿದ್ದ, ಗೌರವಿಸುತ್ತಿದ್ದ. ನನ್ನೊಂದಿಗೆ ಮಲಗಿದವರಿಗೂ ಗೌರವಕೊಡುತ್ತಿದ್ದ. ಕಂಚಿಯ ದೇವಾಲಯದಲ್ಲಿದ್ದ ಚಿನ್ನದ ಹುಲಿಯನ್ನು ನೋಡಿಬಂದವರನ್ನು ನೋಡುವುದರ ಮೂಲಕ ಹಲ್ಲಿ ಸ್ಪರ್ಶದ ದೋಷವನ್ನು ಪರಿಹರಿಸಿಕೊಳ್ಳುತ್ತಾರಲ್ಲ ಹಾಗೆ! ಅವನಲ್ಲಿದ್ದ ಈ ಗುಣವನ್ನ ನಾನು ಇಷ್ಟಪಟ್ಟಿದ್ದು. ಅವನನ್ನು ನಾನು ಘಾಡವಾಗಿ ಹಚ್ಚಿಕೊಂಡಿದ್ದಕ್ಕೆ ಅವನ ಹೆಂಡತಿ ವರಲಕ್ಷ್ಮಿಯ ಕಂದಾಚಾರದ ಹಠಮಾರಿತನವೂ ಕಾರಣವೇ. ಅಂಥ ಗೃಹಿಣಿಯರ ಪಾತಿವ್ರತ್ಯ ಕಂಡರೆ ನನಗೆ ಮೈಪರಚಿಕೊಳ್ಳುವಷ್ಟು ಸಿಟ್ಟು ಬರುತ್ತದೆ. ಅದೊಂದು ರೀತಿ ಸೋಗು ಎಂದೇ ನನ್ನ ಭಾವನೆ. ಗಂಡನ ಪಕ್ಕದಲ್ಲಿ ಮಲಗುವಾಗ ವೇಶ್ಯೆ ಥರ ವರ್ತಿಸದ ಪಾತಿವ್ರತ್ಯಕ್ಕೆ ಬೆಂಕಿ ಹಾಕಬೇಕು. ಗಂಡನಿಗೆ ಊಟ ಬಡಿಸುವಾಗ ತಾಯಿಯಂತೆ ವರ್ತಿಸದ ಪಾತಿವ್ರತ್ಯಕ್ಕೆ ಕಿಚ್ಚಿಡಬೇಕು. ಗಂಡನಿಗೆ ಕ್ಲಿಷ್ಟ ಸಂದರ್ಭದಲ್ಲಿ ಸಮಯೋಚಿತವಾಗಿ ಕಾರ್ಯದರ್ಶಿಯಂತೆ ಸಲಹೆ ನೀಡದ ಪಾತಿವ್ರತ್ಯದ ಬೇರಿಗೆ ಬಿಸಿನೀರುಕಾಯಿಸಬೇಕು… ಯಾವ ಹೆಂಡಂದಿರು ತಮ್ಮ ಗಂಡಂದಿರಿಗೆ ಮಾಡದ ಕೆಲಸವನ್ನು; ತೋರಿರದ ಉತ್ಕಟೆಯನ್ನು ನಾವು ನಮ್ಮ ಜೊತೆ ಮಲಗುವ ವಿಟರಿಗೆ ತೋರಿಸುತ್ತೇವೆ. ನಮ್ಮ ಸಲಹೆಯಿಂದ ಎಷ್ಟೋ ಮಂದಿ ಪರಸ್ತ್ರೀ ವ್ಯಾಮೋಹಿಗಳು ಉತ್ತಮ ಗಂಡಂದಿರಾಗಿದ್ದಾರೆ. ಅದಕ್ಕೆಲ್ಲ ವಿವರವಾಗಿ ಹೇಳಬೇಕೆಂದರೆ ಸಂಕೋಚ ಅಡ್ಡಿಬರುತ್ತದೆ. ವರಲಕ್ಷ್ಮಿಯ ಕಠೋರ ಪಾತಿವ್ರತ್ಯ ನೋಡಿ ಅಸಹ್ಯ ಪಟ್ಟುಕೊಂಡೇ ನಾನು ಶಾಮನೊಂದಿಗೆ ಮಲಗಿದ್ದು ಎಲ್ಲ. ನಾನು ಎಷ್ಟು ಪ್ರಯತ್ನಿಸಿದರೂ ಆಕೆ ಅವನನ್ನು ಪ್ರೀತಿಸಲಿಲ್ಲ, ಗೌರವಿಸಲಿಲ್ಲ. ಹೀಗಾಗಿ ಅವನು ಸಾರ್ವಜನಿಕರೆದುರು ಪತನಗೊಂಡ. ಅಪಮೌಲ್ಯಗೊಂಡ. ತಿರಸ್ಕಾರಕ್ಕೆ ಮತ್ತೊಂದು ಅತ್ಯುತ್ತಮ ಮಾದರಿ ಎನ್ನಿಸಿಕೊಂಡ. ಅಷ್ಟೊಂದು ರೂಪಸಿಯಾಗಿರದಿದ್ದ ನಾನು ಅವನನ್ನು ಪತಿತ ಸ್ಥಾನದಿಂದ ಮೇಲೆತ್ತುವ ಕೆಲಸ ಮಾಡಲೇ ಇಲ್ಲ… ಅವನು ಆಗೊಮ್ಮೆ, ಈಗೊಮ್ಮೆ ಬಂದು ತನ್ನ ಅಪ್ಯಾಯಮಾನವಾದ ವರ್ತನೆಯಿಂದ ನನ್ನ ಹೃದಯ ಕಲಕಿ ಬಿಡುಟ್ಟಿದ್ದ. ಅವನು ಪ್ರತಿಯೊಂದು ಮಾತುಕಥೆ ನಡೆನುಡಿ ಅತ್ಯಂತ ಸಹಜವಾಗಿರುತ್ತಿದ್ದವು. ಕೃತಕತೆ ಎಂಬುದಿರುತ್ತಿರಲಿಲ್ಲ. ಅವನು ಬದುಕಿರುವಷ್ಟು ಕಾಲ ಬದುಕಿರುತ್ತಾನೆ ಎಂದು ಭಾವಿಸಿದ್ದೆ. ಹಾಗೆ ನನ್ನನ್ನು ದೀರ್ಘಾಯುಷಿ ಅವನಲ್ಲವೆಂದುಕೊಂಡೆ. ಅವನನ್ನು ಯಾರಾದರೂ ಸುಲಭವಾಗಿ ಮೋಸ ಮಾಡಬಹುದಿತ್ತೇ ಹೊರತು ದ್ವೇಷಿಸುವುದಂತು ಸಾಧ್ಯವಿರಲಿಲ್ಲ. ಆದ್ದರಿಂದ ಅವನಿಗೆ ಮೋಸ ಮಾಡಿ ಪಶುಪತಿ ಸಾಲ ಪಡೆಯುವುದು ಸುಲಭವಾಯಿತು. ಇಂಥ ಎಷ್ಟೋ ಬೆಸ್ತು ಬಿದ್ದ ಘಟನೆಗಳಿವೆ.

ಅವನು ಸಸ್ಪೆಂಡಾದಾಗ ಸಹಾಯ ಯಾಚಿಸಿ ನನ್ನ ಬಳಿಗೆ ಬರಲೇ ಇಲ್ಲ.. ನನ್ನ ಕಣ್ಣು ತಪ್ಪಿಸಿ ಅಡ್ಡಾಡತೊಡಗಿದಂತೆ ಅವನ ಬಗ್ಗೆ ನನ್ನಲ್ಲಿ ವಾತ್ಸಲ್ಯ ಬೆಳೆಯಿತು. ಒಮ್ಮೊಮ್ಮೆ ನಾನೇ ಅವನನ್ನು ಹುಡುಕಿ ಕರೆತಂದು ಎಲ್ಲತನವನ್ನು ನಾನೇ ಪ್ರಕಟಿಸಿ ಅತ್ಮತೃಪ್ತಿಪಡುತ್ತಿದ್ದೆ. ಆರೋಪದಿಂದ ಅವನನ್ನು ಮುಕ್ತ ಮಾಡಲು ನಾನು ಪಟ್ಟ ಶ್ರಮ ಹೇಳತೀರದು! ಅದಕ್ಕಾಗಿ ನಗ ನಾಣ್ಯ ಎಲ್ಲವನ್ನೂ ಕಳೆದುಕೊಂಡೆ… ದೈಹಿಕವಾಗಿಯೂ ಪೌರುಷದ ಶೋಶಣೆಗೆ ಒಳಗಾದೆ… ಏನೆಲ್ಲ ಮಾಡಿದರೂ ನನ್ನ ಶಾಮನೈಗೆ ಜೈಲುಶಿಕ್ಷೆ ಆಯಿತು. ಅವನಿಗೆ ವಿಧಿಸಿದ ಶಿಕ್ಷೆ ಕಡಿಮೆ ಮಾಡುವ ಸಲುವಾಗಿ ಸ್ವಯಾರ್ಜಿತ ಆಸ್ತಿಯನ್ನೆಲ್ಲ ಕಳೆದುಕೊಡೆ… ಅಂತು ಬಿಡುಗಡೆಯಾದ. ಜಠರದ ಹುಣ್ಣು ಮತ್ತು ಕ್ಷಯ ರೋಗಗಳಿಂದ ಅವನು ನರಳುತ್ತಿದ್ದುದು ನನಗೆ ಕೂಡಲೆ ತಿಳಿಯಲಿಲ್ಲ. ಹೆಂಡತಿಯೊಂದಿಗೆ ಜಗಳ ಆಡಿದಂತೆ ತಾನೆಂದೂ ರೋಗಗಳೊಂದಿಗೆ ಜಗಳಾಡಲಿಲ್ಲ. ವಿರೋಧಿಸಲಿಲ್ಲ… ಅವುಗಳನ್ನು ದೇಹದಿಂದ ಮೂಲೋತ್ಛಾಟನೆ ಮಾಡಲೇ ಇಲ್ಲ… ನಾನು ಕರೆದೊಯ್ದು ತೋರಿಸಿದ ಡಾಕ್ಟರುಗಳಿಗೆಲ್ಲ ಒಗಟಾದ. ಬಳ್ಳಾರಿಯ ದೊಡ್ಡಮಲ್ಲಪ್ಪ ಎಂಬ ಡಾಕ್ಟರ್ “ನೀನವನನ್ನು ಅವನ ಪಾಡಿಗೆ ಸಾಯ್ಲಿಕ್ಕೆ ಬಿಡುವುದೇ ಒಳ್ಳೆಯದು” ಎಂದು ಹೇಳಿದರು. ನನ್ನ ಕಣ್ತಪ್ಪಿಸಿ ದೂರ ದೂರ ಹೋಗಿನಿಡುತ್ತಿದ್ದ ಅವನನ್ನು ಹಿಡಿದು ಏಕರಿಕೆ ದೇಖರಿಕೆ ಮಾಡುವುದು ನನ್ನಿಂದ ಸಾಧ್ಯವಾಗಲೇ ಇಲ್ಲ. ಅವನನ್ನು ಅಂಥ ದುರ್ಭರ ಸ್ಥಿತಿಯಲ್ಲಿ ಕೊಟ್ಟೂರಿಗೆ ಹೋಗಲು ಬಿಡುತ್ತಿರಲಿಲ್ಲ. ಹೋದ… ಅವನೇ ಅವಮಾನ ಮಾಡಿದನೋ! ಅವರೇ ಮಾಡಿದರೋ! ನನಗೊಂದೂ ತಿಳಿಯದು, ದೇಹತ್ಯಾಗ ಮಾಡುವುದಕ್ಕೆ ಗೋಕರ್ಣಕ್ಕೆ ಹೋಗುವುದಾಗಿ ಅವನೇ ಸುದ್ದಿ ಹಬ್ಬಿಸಿದನೋ ಅಥವಾ ಅವನ ಪರವಾಗಿ ರಾಖೇಶನೇ ಹಬ್ಬಿಸಿದನೋ ನನಗೊಂದೂ ತಿಳಿಯದು. ಶಾಮಣ್ತಾತನವ್ರು ಮಹಾಬಲೇಶ್ವರನ ದರ್ಶನ ಮಾಡಿಕೊಂಡು ಬರಲು ಗೋಕರ್ನಕ್ಕೆ ಹೋಗುತ್ತಿರುವರೆಂದೂ; ಅಲ್ಲಿಂದ ಚತುರ್ದಶಿಯಂದು ಮರಳಿದ ನಂತರ ಅವರು ಕೊತ್ತಲಗಿಯ ಪವಿತ್ರ ಕಡದರಳ್ಳದ ದಂಡೆಯಲ್ಲಿ ಸಜೀವ ಸಮಾಧಿ ಹೋಗುವರೆಂದೂ ಸುದ್ದಿ ಹಬ್ಬಿಸಿ ಹಣ ಸಂಗ್ರಹಿಸತೊಡಗಿದ್ದ ಅದೇ ರಾಖೇಶ ಯಾವ ಮಾದಿಯಿಂದಲೋ ಕೊಟ್ಟೂರಿಗೆ ಹೋಗಿ ಶಾಮ ಗೋಮಾಂಸಭಕ್ಷಣೆ ಮಾಡುತ್ತಿರುವನೆಂಬ ಸುದ್ದಿಯನ್ನು ಅವರ ಮನೆಯಲ್ಲಿ ಹೇಳಿ ಬಂದಿದ್ದನು ಆ ಸಂದರ್ಭದಲ್ಲಿ ಸರ್ವೋದಯ ನೇತಾರ ವಿನೋಬಾಜಿಯವರು ಗೋಹತ್ಯೆ ವಿರುದ್ಧ ಚಳುವಳಿ ನಡೆಸಿದ್ದರು. ಇನ್ನೊಂದು ಕಡೆ ವಿಚಾರವಾದಿಗಳು ಗೋಮಾಂಸ ಭಕ್ಷಿಸುವುದರ ಮೂಲಕ ಮೂಲಕ ಪ್ರತಿಭಟಣಾ ಚಳುವಳಿಯನ್ನು ಆರಂಭಿಸಿದ್ದರು. ಸನಾತನಿಗಳ ಎದೆಯಲ್ಲಿ ಇದರಿಂದ ಆತಂಕ ಹುಟ್ಟಿತು. ರಾಖೇಶನ ಈ ತೆರೆಮರೆಯ ಕೃತ್ಯವನ್ನು ಬಹಿರಂಗವಾಗಿ ಖಂಡಿಸುವುದು ನನ್ನಿಂದಾಗಲಿಲ್ಲ. ಅವನೊಂದು ಅಪಾಯಕಾರಿ ಶಕ್ತಿಯಾಗಿ ಬೆಳೆದುಬಿಟ್ಟಿದ್ದ. ಮನುಷ್ಯನೊಳಗಿನ ನಾಗರಿಕ, ಸಜ್ಜನಿತವಾದ, ಸಾತ್ವಿಕವಾದ ಭಾವನೆಗಳನ್ನು ನಿರ್ದಯವಾಗಿ ಕೊಲ್ಲುತ್ತಿದ್ದ. ಸೋಮವಾರಪೇಟೆಗೆ ಕೆಟ್ಟ ಹೆಸರು ಬಂದುದು ಅವನಿಂದಲೇ. ಆದರೆ ಅವನು ನಮ್ಮ ಪೇಟೆಗೆಲ್ಲ ಅನಿವಾರ್ಯವಾಗಿದ್ದ. ಅಂಥವನನ್ನು ಎದುರು ಹಾಕಿಕೊಳ್ಳುವುದು ಒಂದು ಕಲ್ಲಿನೊಡನೆ ಗುದ್ದಾಡುವುದು ಒಂದೇ ಆಗಿತ್ತು.

ಶಾಮಣ್ಣನನ್ನು ಹುಡುಕಿಕೊಂಡು ನಾನು ಗೋಕರ್ಣಕ್ಕೆ ಹೋಗಲು ಆಗಲೇ ಸಜ್ಜಾಗಿದ್ದೆ. ಅದಕ್ಕೆಂದು ರುದ್ರಮುನಿ ಎಂಬ ಮಧ್ಯವಯಸ್ಕ ಸಾಹುಕಾರನೋರ್ವನನ್ನೂ ಗೊತ್ತು ಮಡಿಟ್ಟುಕೊಂಡಿದ್ದೆ. ಅಷ್ಟರಲ್ಲಿ ಶಾಮಾಶಾಸ್ತ್ರಿ ವೆಂಕಟಗಿರಿರೆದ್ದಿಯ ಹಾಲುಗಲ್ಲಿನ ಸಮಾಧಿ ಮೇಲೆ ಮಲಗಿ ಕಳೇಬರದೊಂದಿಗೆ ಸಂಭಾಷಿಸುತ್ತಿರುವನೆಂಬ ಸುದ್ದಿ ತಿಳಿದು ಬಂತು. ಅದೇ ತಾನೆ ನಾನು ಸೌಚ ಸ್ನಾನ ಮುಗಿಸಿ ಊಟ ಮಾಡಲಿಕ್ಕೆಂದು ಅಡುಗೆ ಮನೆ ಪ್ರವೇಶಿಸಿ ತಟ್ಟೆ ಮುಂದೆ ಕೂತುಕೊಳ್ಳುತ್ತಿದ್ದೆ. ಸುದ್ದಿ ಕಿವಿಗೆ ಬಿದ್ದೊಡನೆ ಮಸಣದ ಕಡೆ ಓಡಿದೆ. ಅದೇ ದಿನ ಋತುಮತಿಯಾಗಿದ್ದ ಕಾಂಚನಾ ಅರ್ಧ ದಾರಿಗೆ ಬಂದು ದಾರಿ ಪರಪಾಟಾಗಿ ಹಿಂದಕ್ಕೆ ಹೋದಳು. ಥಳಥಳ ಹೊಳೆಯುತ್ತಿದ್ದ ಸಮಾಧಿ ಮೇಲೆ ವೇಷ ಮರೆಸಿಕೊಂಡೋರ್ವ ಅನಾಥ ರಾಜ್ಯದ ರಾಜಕುಮಾರನಂತೆ ಪಿಳಿಪಿಳಿ ಕಣ್ಣು ಬಿಡುತ ಕೂತಿದ್ದ ಶಾಮನನ್ನು ನೋಡಿದೊಡನೆ ನನ್ನ ಕರುಳು ಕತ್ತರಿಸಿಹೋಯಿತು. ಅವರೆಲ್ಲ ಬೆದರಿಸಿ ಓಡಿಸಿ ಅವನನ್ನು ಎತ್ತಿಕೊಂಡು ಮನೆಗೆ ಕರೆ ತಂದೆ. ಅವನನ್ನು ಶಾಶ್ವತವಾಗಿ ಬದುಕಿಸಿಕೊಳ್ಳುವ ಬಯಕೆ ಹೆಮ್ಮರವಾಗಿ ಬೆಳೆಯಿತು. ಊರಲ್ಲಿನ ಎಲ್ಲಾ ಹಿರಿಕಿರಿಯ ಡಾಕ್ಟರುಗಳನ್ನೆಲ್ಲ ಕರೆದುಕೊಂಡು ಬಂದು ತೋರಿಸಿದೆ. ಅವರೆಲ್ಲರೂ ಹೇಳುತ್ತಿದ್ದುದು ಒಂದೇ ಮಾತು – ಶಾಮನಿಗೆ ಯಾವ ಖಾಯಿಲೆಯೂ ಇಲ್ಲ, ಇದ್ರೂ ಅವನ ದೇಹ ಸರಿಯಾಗಿ ಪ್ರಕಟಿಸ್ತಾ ಇಲ್ಲ… ನಾಡಿ ಬಡಿತ ಕ್ಷೀಣಿಸ್ತಾ ಇದೆ… ಬದುಕಿದ್ರೆ ಒಂದೋ ಎರಡೋ ದಿನ ಬದುಕಿರಬೌದು… ಮೂರನೆದಿನ ಖಂಡಿತ ಬದುಕಿರಲಾರ… ಅವನ ನೆಂಟರಿಷ್ಟರು ಯಾರಾದರೂ ಇದ್ದರೆ ಹೇಳಿ ಕಳಿಸೋದು ಒಳ್ಳೆಯದು… ಎಂದು ಮುಂತಾಗಿ ಸಲಹೆ ನೀಡುತ್ತಿದ್ದರು. ಅವರ ಮಾತು ಕೇಳಿ ಬಂಡೆಗಲ್ಲಡಿ ಸಿಲುಕಿದ ಮೊಲದಂತೆ ಒದ್ದಾಡಿದೆ. ಅವನನ್ನು ದೈವಿಕ ಶಕ್ತಿಗಳಿಂದಲಾದರೂ ಬದುಕಿಸಿಕೊಳ್ಳಬೇಕೆಂದು ನಿರ್ಧರಿಸಿ ಗೊತ್ತಿರುವ ಎಲ್ಲಾ ದೇವಾನು ದೇವತೆಗಳಿಗೆ ಹರಕೆ ಹೊತ್ತೆ. ಕಾರು ಮಾಡಿಕೊಂಡು ಅವನನ್ನು ಕೊಟ್ಟುರಿಗೆ ಕರೆದುಕೊಂಡು ಹೋಗದೆ ಇರುತ್ತಿರಲಿಲ್ಲ ನಾನು. ಅದಕ್ಕೂ ಮೊದಲು ಅವನು ಹಾಗೆ ಮಾಡಬಾರದೆಂದೂ… ನಿನ್ನ ಮನೆಯಲ್ಲೇ ಕೊನೆಯುಸಿರು ಬಿಡುವುದಕ್ಕೆ ಅವಕಾಶಕೊಡು ಎಂದು ಕೇಳಿಕೊಂಡಿದ್ದ. ಆದ್ದರಿಂದ ಅವನ ತಾಯಿ, ಹೆಂಡತಿ, ಮಕ್ಕಳನ್ನು ಕರೆತರಲೆಂದು ನಾನು ಹಿರಿಯರಾದ ಒಂಟೆಮಲ್ಲಯ್ಯ ಎಂಬುವರನ್ನು ಕೊಟ್ಟೂರಿಗೆ ಕಳುಹಿಸಿದೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬಂದರು. ನಂತರ ಬ್ರಾಹ್ಮಣರು ಬ್ರಾಹ್ಮಣರ ಮಾತಿಗೆ ಬೆಲೆಕೊಟ್ಟು ಬರಬಹುದೆಂದು ನಿವೃತ್ತ ಸಮಾಜ ಶಿಕ್ಷಕರಾದ ಹುಲಿಕುಂಟೇರಾಯರನ್ನು ಕಳುಹಿಸಿಕೊಟ್ಟೆ. ಅವರು ಕೂಡ ಅವಮಾನಿತರಾಗಿ ಬಂದರು. ಇನ್ನು ಹೋಗಿ ಕಾಡಿ ಬೇಡಿ ಕರತರಬೇಕೆಂದು ನಿರ್ಧರಿಸಿದ ನಾನು ಎಂದೆಂದೂ ಮಕ್ಕಳಾಗದ ಗೊಡ್ಡಿ. ನಮ್ಮ ಹಿರಿಯರು ಜರಿಮಲೆಯ ಪಾಳ್ಳೇಗಾರರಾಗಿದ್ದ ಕಾಲದಿಂದಲೂ ಮಕ್ಕಳಿಗಾಗಿ ಹಲುಬುವ ಪರಿಪಾಟ ಬಳುವಳಿಯಾಗಿ ಬಂದಿದೆ. ಬ್ರಿಟೀಷರು ಈ ದೇಶವನ್ನು ಬಿಟ್ಟು ಹೋಗುವ ಮೊದಲೇ ನಮ್ಮ ಪಾಳೇಗಾರಿಕೆ ಚೂರುಚೂರುಗೊಂಡು ಹಾಳಾಗಿ ಹೋಗಿತ್ತು. ಹರಪನಹಳ್ಳಿ ಪಾಳ್ಳೇಗಾರರ ವಿರುದ್ಧ ಕತ್ತಿ ಹಿರಿದು ಪರಾಕ್ರಮದಿಂದ ಹೋರಾಡಿ ನೂರಾರು ಶತ್ರುಗಳ ರುಂಡಗಳನ್ನು ಧರೆಗುರುಳಿಸುತ್ತಿದ್ದ ನಮ್ಮವರು ತರಗೆಲೆಗಳಂತಾಗಿ ಬಿಸಿ ಉಸಿರಿಗೇ ಚದುರಿ ಬಿಡತೊಡಗಿದರು. ವರ್ಷಕ್ಕೆ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದ ನಮ್ಮ ರಾಜರು ಶ್ರಾದ್ಧಾಕೂಳು ಹುಡುಕಿಕೊಂಡು ನಿಂತಲ್ಲಿ ನಿಲ್ಲದೆ ಊರುಂದೂರಿಗೆ ಅಲೆದಾಡತೊಡಗಿದರು. ಪರನಾರಿ ಸೋದರರೆಂದು ಬಿರುದು ಧರಿಸಿದಂಥ ನಮ್ಮ ರಾಜರು ತಂತಮ್ಮ ಅಂತಃಪುರದ ಹೆಂಗಸರ ಶೀಲ ಕಾಪಾಡದಾದರು… ಈಗಲೂ ನೀವು ಜರಿಮಲೆಯ ಸುತ್ತ ಮುತ್ತ ಹೋಗಿ ಹುಡುಕಿದರೆ ಎರಡು ಮೂರು ರುಪಾಯಿಗೆ ಕೂಲಿನಾಲಿ ಮಾಡಿ ದಿನನೂಕುವ ರಾಜರು, ದೊರೆಗಳು ದೊರಕುತ್ತಾರೆ… ಯಾವ ಪಾಪ ಮಾಡಿದ್ದಕ್ಕೆ ಅಂಥ ರಾಜ ವಂಶದಿಂದ ಬಂದಿರುವ ನನ್ನಂಥವರು ಮೈಮಾರಿ ಜೀವನ ನಡೆಸುತ್ತಿದ್ದೇವೆ? ಶಾಮನಂಥ ಸತ್ಕುಲ ಪ್ರಸೂತರದೂ ಇದೇ ಗತಿಯಾದರೆ ಲೋಕ ಉಳಿದೀತೆ? ಛೇ… ಛೇ… ಅಂತಿಮ ಕ್ಷಣದಲಾದರೂ ಗಂಡ ಹೆಂಡತಿ, ತಾಯಿ ಮಕ್ಕಳನ್ನು ಒಂದು ಮಾಡಿ ಪುಣ್ಯ ಭಾಜನಕ್ಕೆ ಪಾತ್ರಳಾಗಬೇಕೆಂದು ನಿರ್ಧರಿಸಿದೆನು… ಗೋಕರ್ಣಕ್ಕೆ ಹೋಗಲೆಂದು ಗೊತ್ತು ಮಾಡಿದ್ದ ಕಾರು ಕೊಟ್ಟು ರುದ್ರಮುನಿ ನನ್ನನ್ನು ಕಳುಹಿಸಿದನು.

ನಾನು ಹೋಗಿ ಅವರ ಮನೆ ಮುಂದೆ ನಿಂತಿದ್ದೇ ಒಂದು ತಪ್ಪಾಯಿತು ನೋಡಿ… ಅವರಾರು ನನ್ನನ್ನು ಕೂಡ್ರು ಅನ್ನಲಿಲ್ಲ, ನಿಲ್ಲು ಅನ್ನಲಿಲ್ಲ… ಅತ್ತೆ ಸೊಸೆಯರಿಬರೂ ಕೂಡಿಕೊಂಡು ಚಿನಾಲಿ, ಮುಂಡೆ, ಬೋಸೂಡಿ, ಕತ್ತೆ ಸೂಳೆ ಅಂತ ಬಾಯಿಗೆ ಬಂದಂಗೆ ಮಾತಾಡಿದರು… ಛೇ ಛೇ… ಹೇಳಲಿಕ್ಕೆ, ಕೇಳಲಿಕ್ಕೆ ಅವು ಒಂದು ಮಾತಲ್ಲ… ಒಂದು ಕಥೆಯಲ್ಲ. “ನೋಡ್ರಮ್ಮಾ… ನೀವು ಯಾವ ಶಿಕ್ಷೆ ಕೊಟ್ರೂ ಅನುಭೊಸ್ತೀನಿ… ಕುತ್ತಿಗೆ ಹಿಚುಕಿ ಸಾಯಿಸ್ರಿ ಅದ್ಕೂ ಸಿದ್ದಳಿದ್ದೇನೆ… ಆದ್ರೆ ನಿಮಗಾಗಿ ಒಂದು ಗುಟುಕು ಜೀವ ಹಿಡ್ಕೊಂಡಿರೋ ಶಾಮಾಶಾಸ್ತ್ರಿಯವರ ಬಾಯಿಗೆ ಗಂಗಾಜಲ ಹಾಕಿ ಬಿಡ್ರಿ… ನೆಮ್ಮದಿಯಿಂದ ಪ್ರಾಣ ಬಿಡ್ತಾರೆ…. ನೀವು ನಿಂತಿದ್ದು ಶವಸಂಸ್ಕಾರ ನಡೆಸಿ ಪುಣ್ಯ ಕಕೋಳ್ರಮ್ಮಾ” ಎಂದು ಬಗೆಬಗೆಯಾಗಿ ಬೇಡಿಕೊಂಡೆ… ಅವರ ಕಾಲಿಗೂ ಬಿದ್ದೆ… ಆದರೆ ಅವರ ಹೃದಯ ಒಂಚೂರು ಕರಗಲಿಲ್ಲ. ಓಣಿ ಜನರ ಪೈಕಿ ಕೆಲವರು ಅವರ ಪರ ನಿಂತು, ಕೆಲವರು ನನ್ನ ಪರನಿಂತು ವಾದ ಮಾಡಿದರೂ ಪ್ರಯೋಜನವಾಗಲಿಲ್ಲ. ಬೆಂಕಿ ಹಚ್ಚಲಿಕ್ಕೆ ಅವರ ಮಗನನ್ನಾದ್ರು ಕಳಿಸಿಕೊಡ್ರಿ ಅಂತ ಬೇಡಿಕೊಂಡಿದ್ದೂ ಪ್ರಯೊಜನವಾಗಲಿಲ್ಲ. ಅವರ ಕ್ರೂರ ವರ್ತನೆಯಿಂದ ನಾನು ನನ್ನ ಮನಸ್ಸನ್ನು ಕಲ್ಲು ಮಾಡಿಕೊಂಡು ಬಿಟ್ಟೆ. ನಿಮ್ಮಂಥ ಕರ್ಮಠರ ಹೊಟ್ಟೆಯಲ್ಲಿ ಹುಟ್ಟುವುದಕ್ಕಿಂಥ ನಮ್ಮಂಥ ಸೂಳೆಯರ ಶಾಮ ಹುಟ್ಟಿದ್ದರೆ ಅವನೆಷ್ಟೋ ಸುಖವಾಗಿ ಬಾಳುತ್ತಿದ್ದ., ಬದುಕುತ್ತಿದ್ದ… ಈ ಅವಸ್ಠೆಯಲ್ಲಿ ಅವನನ್ನು ಕ್ರೂರಾತಿ ಕ್ರೂರವಾಗಿ ದೂರ ಮಾಡುತ್ತಿರುವ ನಿಮ್ಮನ್ನೆಂದೂ ಆ ದೇವರು ಸುಖವಾಗಿಡುವುದಿಲ್ಲ… ಎಂದು ಗೊಣಗುತ್ತ ನಾನು ವಾಪಸಾದೆನು.

ನನ್ನ ಪುಣ್ಯಕ್ಕೆ ಶಾಮ ಇನ್ನೂ ಪ್ರಾಣ ಬಿಟ್ಟಿರಲಿಲ್ಲ. ಹೋಗಬೇಡಾಂದರೂ ಹೋಗಿ ಅನುಭವಿಸಬಾರದ್ದನ್ನು ಅನುಭವಿಸಿದಿಯಲ್ಲಾ… ಎಂಬಂತೆ ಮುಖ ಮಾಡಿ ನೋಡಿದ ನನ್ನತ್ತ. “ನನ್ನನ್ನೇ ನಿನ್ನ ಹೆಂಡತಿ ಅಂತ ತಿಳ್ಕೊಂಡು ನೆಮ್ಮದಿಯಿಂದ ಪ್ರಾಣ ಬಿಡೋ” ಅಂತ ಕೇಳಿಕೊಂಡೆ… “ನನ್ನನ್ನೇ ನಿನ್ನ ಹೆತ್ತ ತಾಯಿ ಅಂತ ತಿಳ್ಕೊಂಡು ನೆಮ್ಮದಿಯಿಂದ ಪ್ರಾಣ ಬಿಡೋ” ಅಂತ ಕೇಳಿಕೊಂಡೆ… “ನಮ್ಮನ್ನೇಲ್ಲ ನಿನ್ನ ನೆಂಟರಿಷ್ಟರೆಂದು ತಿಳ್ಕೊಂಡು ನೆಮ್ಮದಿಯಿಂದ ಪ್ರಾಣ ಬಿಡೋ” ಅಂತ ಪರಿಪರಿಯಾಗಿ ಕೇಳಿಕೊಂಡೆ… ಹೂವಿನ ಪಕಳೆ ಉದುರುವಾಗ ಕಂಪಿಸುತ್ತದಲ್ಲಾ… ಹಾಗೆ ಅವನ ಕೆಳದುಟಿ ಕಂಪಿಸಿತು. ಜನ ಹೋ ಎನ್ನುತ್ತಿದ್ದರು… ಮನೆ
ಒಳಗೆ ಹೊರಗೆ ಕಿಕ್ಕಿರಿದು ಸೇರಿದ್ದ ನೂರಾರು ಮಂದಿ “ನಮ್ಮ ಶಾಮಾ… ನಮ್ಮ ಶಾಮಾ…” ಎಂದು ಗದ್ಗರಿಸುತ್ತಿದ್ದರು.

ನಾಟ್ಯಗಾತಿಯ ಕಾಲಿನಿಂದ ಗೆಜ್ಜೆ ಕಳಚಿದಂತೆ, ಕುಪ್ಪುಸದ ಗುಂಡಿ ಹರಿದುದುರಿದಂತೆ ನಮ್ಮ ಶಾಮ ದೀರ್ಘವಾಗಿ ಕೊನೆಯುಸಿರೆಳೆದು ಪ್ರಾಣ ಬಿಟ್ಟುಬಿಟ್ಟ… “ಹೋ ನಮ್ಮ ಶಾಮಣ್ಣ ಸತ್ತ, ಜೀವ ಹೋಯ್ತು…” ಎಂದು ಜನ ಕೂಗಿದರು. ದುಃಖದ ಪರಿಚಯವಿಲ್ಲದವರೂ ದುಃಖಿಸತೊಡಗಿದರು. ಅತ್ತು ಕರೆದು ಗೊತ್ತಿಲ್ಲದವರು ಗೊಳೋ ಎಂದು ಅಳತೊಡಗಿದರು. ಅವನು ಬದುಕಿದ್ದಾಗ, ಬಯ್ದವರು ತಿರಸ್ಕರಿಸಿದವರೆಲ್ಲ ಬಂದು ಬಂದು ಅಶ್ರುತರ್ಪಣ ಮಾಡಿ ಹೋಗತೊಡಗಿದರು. ತಾನು ಸತ್ತ ಮೇಲೆ ಜನ ಹೀಗೆ ವರ್ತಿಸಬಹುದೆಂದವನಿಗೆ ಮೊದಲೇ ಗೊತ್ತಿದ್ದಲ್ಲಿ ಶಾಮ ಖಂಡಿತ ಅಷ್ಟು ಬೇಗ ಸಾಯುತ್ತಿರಲಿಲ್ಲ… ನಾವೆಲ್ಲ ಬದುಕಿ ಸತ್ತಿದ್ದೆವು… ಶಾಮ ಸತ್ತು ಬದುಕಿದ್ದ.

ನಾವೇನು ಹೇಳಿಕಳಿಸದಿದ್ದರೂ ಅಕ್ಕಾಪುರದಿಂದ ಪೆಟ್ಟಿಗೆ ಮಾಸ್ತರ ಕಾಳಪ್ಪ ಕಾಳಿ ಹಿಡಿಯುವವರ ದಂಡಿನೊಂದಿಗೆ ಬಂದು “ಲೋ ಸಂಗ್ಯಾ ನೀನು ನಿಜವಾಗ್ಲು ಸತ್ತುಬಿಟ್ಟೆಯಲ್ಲೋ… ಇನ್ನು ಸಂಗ್ಯಾ ಬಾಳ್ಯಾ ಡಪ್ಪಿನಾಟ ಅನಾಥವಾಯಿತೆ”ಂದು ದುಃಖಿಸಿದ. ಕಾಳಾಪುರದಿಂದ ಡೊಳ್ಳಿನವರು ಬಂದರು.

ಉತ್ತಂಗಿಯಿಂದ ಸಮಾಳದವರು ಬಂದರು, ಕೊಟ್ಟೂರಿನಿಂದ ಹಲಗೆಯವರು ಬಂದರು, ಕೊತ್ತಲಗಿಯ ಕೆಳಗೇರಿಯಿಂದ ತಮ್ಮಟೆಯವರು ಬಂದರು. ಹ್ಯಾಳ್ಯಾದಿಂದ ಸೋನಯಿಯವರು ಬಂದರು… ಎಲ್ಲರೂ ಬಂದರು… ಬರದೇ ಇದ್ದವರೇ ಪಾಪಿಗಳೆನ್ನಬಹುದು. ನಿಲುವಂಜಿ ನಿಂಗವ್ವ ತನ್ನ ನೂರುಮಂದಿ ಸಂಗಡಿಗರೊಂದಿಗೆ ಬಂದು ಕೂತು ಸದರೀ ಸನ್ನಿವೇಶವನ್ನೇ ಹಾಡು ಮಾಡಿ ಹಾಡತೊಡಗಿದಳು. ಶಾಮ ಬದುಕಿದ್ದಾಗ ಇಷ್ಟೊಂದು ಜನರ ಪ್ರೀತಿ, ಕಕ್ಕುಲಾತಿ
ಸೂರೆಹೊಡೆದಿದ್ದಿರಬಹುದೆಂದು ಕನಸು ಮನಸಲ್ಲೂ ಯೋಚಿಸಿರದಿದ್ದ ನಾನು ಹೆಮ್ಮೆಪಟ್ಟೆ, ದುಃಖಿಸಿದೆ, ಅತ್ತು ಕರೆದೆ.

“ಹೇಣಾನ ಮುಂದಿಟ್ಕೊಂಡು ಅಲ್ಲಿವರ್ಗೂ ಹಿಂಗ ಅತ್ತಗಂತ ಕೂಡ್ರುವುದೇ ಅನಸೂವಿ… ಅದಕ್ಕೊಂದು ಗತಿ ಕಾಣಿಸಲಕೇನಾದರೊಂದು ಏರುಪಾಡು ಮಾಡಬಾರದೇ ನಮ್ಮವ್ವಾ..” ಎಂದು ಜಾಲಗಾರ ಅಂಬವ್ವ ಹೇಳಿದ ಮೆಲೆಯೇ ನನಗೆ ವಸ್ತುಸ್ಥಿತಿಯ ಅರಿವಾದದ್ದು. ಆಗಲೇ ಹೆಣದಿಂದ ಒಂದು ನಮೂನೆಯ ವಾಸನೆ ಬರತೊಡಗಿತ್ತು. ಅದರೊಳಗೆ ಸಾವಿರ ಸಾವಿರ ಹುಳಗಳು ಮರುಹುಟ್ಟುಪಡೆಯುವುದಕ್ಕೂ ಮೊದಲೇ ಸಂಸ್ಕಾರದ ಗತಿ ಕಾಣಿಸಬೆಕೆಂದು ನಿರ್ಧರಿಸಿದೆ. ನಮ್ಮಂಥ ಬಿಕನಾಸಿ ಶೂದ್ರರ ಹೆಣವಾಗಿದ್ದರೆ ತಗೊಂಡು ಒಯ್ದು ಮಣ್ಣಲ್ಲಿಟ್ಟು ಬರಬಹುದು… ಆದರೆ ಶಾಮ ಬ್ರಾಹ್ಮಣರ ಕುಲದಲ್ಲಿ ಹುಟ್ಟಿರುವಾತ, ಸ್ಮಾರ್ತರವನೋ, ಮಾಧ್ವರವನೋ ನಮಗೊಂದೂ ತಿಳಿಯದು! ಯಾರಾದರೊಬ್ಬ ಬ್ರಾಹ್ಮಣರನ್ನು ಕರೆತರಲು ರುದ್ರಮುನಿ, ಇಕಬಾಲು, ಮೊದಲಾದವರು ಬ್ರಾಹ್ಮಣರೋಣಿಗೆ ಹೋಗಿ ವಸ್ತು ಸ್ಥಿತಿ ವಿವರಿಸಿ ಬಯ್ಯಿಸಿಕೊಂಡು ಬಂದರು. ಅವರಾರೂ ಸೋಮವಾರಪೇಟೆ ಕಡೆ ಮುಖ ಮಾಡುವುದೂ ಸಾಧ್ಯವಿರಲಿಲ್ಲ.
ಶಾಮಣ್ಣ ಬ್ರಾಹ್ಮಣ ಕುಲದಲ್ಲಿ ಹುಟ್ಟಿರಬಹುದು… ಆದರೆ ಅವನು ಬ್ರಾಹ್ಮಣರ ಥರ ಬದುಕಿದನೇ! ಬಾಳಿದನೇ! ಶೂದ್ರಾತಿ ಶೂದ್ರರಿಗಿಂತ ಕಡೆಯಾಗಿ ಮದ್ಯ ಮಾಂಸ ಭಕ್ಷಿಸಿ ಬದುಕು ನವೆದ. ಇಂಥವನ ಶವ ಸಂಸ್ಕಾರಕ್ಕೆ ಬ್ರಾಹ್ಮಣರನ್ನು ಹುಡುಕುತ್ತ ಕೂಡ್ರುವುದು ಎಷ್ಟರ ಮಟ್ಟಿಗೆ ಸರಿ?… ಎಂಬ ತರ್ಕ, ವ್ಯಾಖ್ಯೆ ಶುರುವಾಯಿತು.

ನಮ್ಮವನಾಗಿ ಬದುಕಿದವನು ನಮ್ಮವನಾಗಿ ಸತ್ತವನು, ನಮ್ಮವರಂತೆಯೇ ಶವಸಂಸ್ಕಾರ ಮಾಡಿಸಿಕೊಳ್ಳಬಾರದೇಕೆ!

ಮಾದಿಗರು ತಮ್ಮಷ್ಟಕ್ಕೆ ತಾವೆ ಮಸಣಕ್ಕೆ ಹೋಗಿ ಇಷ್ಟುದ್ದ ಅಷ್ಟಗಲದ ಗೋರಿ ತೋಡಿ ಬಂದರು. ಯಾರೋ ಕಟ್ಟಿ ಸಿಂಗರಿಸಿದರು. ಯಾರೋ ಕಳೇಬರಕ್ಕೆ ಸ್ನಾನ ಮಾಡಿಸಿ, ಯಾರೋ ತಂದಿದ್ದ ಮಸಲೈಜು ದೊತರ ಉಡಿಸಿದರು. ನೋಡು ನೋಡುವಷ್ಟರಲ್ಲಿ ನಮ್ಮ ಶಾಮಣ್ಣ ಹೂಮಾಲೆಯಲ್ಲಿ ಹುದುಗಿಕೊಂಡುಬಿಟ್ಟ. ಹಿಡಿ ಹಿಡಿ ಊದುಬತ್ತಿ ಹೊಗೆ ಕಳೆಬರವನ್ನು ಮರೆಮಾಚತೊಡಗಿತು… ಆದರೆ ಅದು ಸಂಸ್ಕಾರದ ಅದ್ವೈರ್ಯಿಯ ಸಮಸ್ಯೆಯನ್ನು ಮರೆಮಾಚಲಾಗಲಿಲ್ಲ. ಯಾರನ್ನು ಕೇಳಿದರೂ! ನಾನು ಒಲ್ಲೆ ನಾನು ಒಲ್ಲೆ ಎಂಬುವವರೇ! ಅವರೆಲ್ಲರಿಗೆ ಅವರವೇ ಆದ ಸಮಸ್ಯೆಗಳಿದ್ದವು. ಒಂದು ರೀತಿಯ ಧರ್ಮ ಸಂಕಟವನ್ನು ಅವರೆಲ್ಲರು ಅನುಭವಿಸುತ್ತಿದ್ದರು. ಆದ್ದರಿಂದ ಯಾರ ಮೇಲೂ ಒತ್ತಡ ಹೇರುವಂತಿರಲಿಲ್ಲ. ಇದರ ಬಗ್ಗೆ ಹೀಗೆ ಯೋಚಿಸುತ್ತ ಕಾಲ ತಳ್ಳುವಂತಿರಲಿಲ್ಲ. ಒಳ್ಳೆಯ ಬದುಕನ್ನೂ ಪಡೆದು ಬಂದವನಲ್ಲ ಶಾಮ, ಒಳ್ಳೆಯ ಸಂಸ್ಕಾರವನ್ನೂ ಪಡೆದು ಬಂದವನಲ್ಲ… ಅವನ ಹಣೆಯಲ್ಲಿ ಬರೆದಂತೆ ಆಗುತ್ತದೆ… ಎಲ್ಲ ಪರಿಣಾಮವನ್ನು ದೇವರ ಮೆಲೆ ಹಾಕಿ ಒಂದು ಇತ್ತು ಒಂದು ಇಲ್ಲ ಎನ್ನುವಂತೆ ಸಂಸ್ಕಾರ ಮುಗಿಸಿ ಬಿಟ್ಟರಾಯಿತು ಎಂದು ಎಲ್ಲರು ನಿರ್ಧರಿಸುತ್ತಿರುವಂತೆ ವಾದ್ಯ ಸಮೂಹವು ಅಶುಭ ಸೂಚಕವಾದ ರಾಗಾಲಾಪನೆ ಮಾಡಲಾರಂಭಿಸಿತು.

ಯಾರು ಕೈಬಿಟ್ಟರೂ ದೇವರು ಕೈಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಬ್ರಾಹ್ಮಣ ಮುದುಕನೋರ್ವ ಲಗುಬಗೆಯಿಂದ ಬಂದ. ತಾನು ಕೊಟ್ಟೂರಿನ ಅಗ್ರಹಾರ ವರದಾಚಾರ್ಯನೆಂದೂ ಕೀ.ಶೇ. ಪರಮೇಶ್ವರ ಶಾಸ್ತ್ರಿಗಳಿಗೂ ಅವರ ಮೊಮ್ಮಗ ಶಾಮಾಶಾಸ್ತ್ರಿಗೂ ತುಂಬ ಬೇಕಾದವನೆಂದೂ ಹೇಳಿ ನಮ್ಮನ್ನೆಲ್ಲ ಅಚ್ಚರಿ ಪಡಿಸಿದ. ರುಗ್ಣ ಶಯ್ಯೆ ಮೇಲೆ ಮೇಲೆ ಮಲಗಿದ್ದ ಆತ ಶಾಮ ತೀರಿಕೊಂಡ ಸುದ್ದಿ ತಿಳಿಯುತ್ತಲೆ ಎದ್ದು ಹೊರಟು ಬಂದಿದ್ದ. ನಾಳೆಯೋ ನಾಡಿದ್ದೋ ಸಾಯಲಿರುವ ತಾನು ಶುಭಾಶುಭಗಳ ಬಗ್ಗೆ ಯಾಕೆ ಯೋಚಿಸಬೇಕು! ಸಂಸ್ಕಾರ ಮಾಡೋದರಿಂದ ಬರುವ ಪುಣ್ಯ ದೊಡ್ಡದು ಎಂದು ಭಾವಿಸಿ ಬಂದಿದ್ದನಾತ… ಆತ ನಮ್ಮನ್ನೆಲ್ಲೆ ಸ್ವಲ್ಪ ದೂರ ಕಳಿಸಿದ. ಉತ್ತರೀಯವನ್ನು ತೊಂಕಕ್ಕೆ ಬಿಗಿದ. ಧರ್ಮ ಪತ್ನಿ ಯಾರಾದ್ರು ಆಗಬೇಕಲ್ಲ ಎಂದು ಕೇಳಿದ. ಆಗ ನಾನು ನಾನಾಗ್ತೀನಿ ಎಂದು ಮುಂದೆ ಬಂದೆ… ‘ಮಗ ಯಾರಾದ್ರು ಆಗಬೇಕಲ್ಲ’ ಎಂದು ಆತ ಕೇಳಿದಾಗಲೇ ನಿಜವಾದ ಸಮಸ್ಯೆ ಹುಟ್ಟಿಕೊಂಡಿತು. “ನಿನ್ನಿಂದ ಒಂದು ಮಗು ಆಗಬೇಕೋ ಶಾಮಾ” ಎಂದು ನಾನು ಅವನಿಗೆ ಗೊಗರೆದಿದ್ದೆಲ್ಲ ವ್ಯರ್ಥವಾಗಿತ್ತು. ಅವನಿಂದ ನನ್ನ ಹೊಟ್ಟೆಯಲ್ಲೊಂದು ಮಗ ಹುಟ್ಟಿದ್ದಿದ್ರೆ ಚಿತೆಗೆ ಅಗ್ನಿಸ್ಪರ್ಶ ಮಾಡಿಸಬಹುದಿತ್ತು. ಹಾಳಾದೋನು ಅದಕ್ಕೆ ಶಿಸ್ತಿನಿಂದ ವರ್ತಿಸಲೇ ಇಲ್ಲ. ಈಗ ನಿಜವಾದ ಆ ಸಮಸ್ಯೆಯ ನಿಜವಾದ ಬಣ್ಣ ಈಗ ಕೋರೈಸುತ್ತಿರುವುದು.

ಯಾರು ಮಗ ಆಗಲಿಕ್ಕೆ ಸಾಧ್ಯ! ಎಲ್ಲರೂ ಪರಸ್ಪರ ಮುಖ ನೋಡಿಕೊಳ್ಳ ತೊದಗಿದರು… ಅಷ್ಟರಲ್ಲಿ ಕಂಠಪೂರ್ತಿ ಕುಡಿದು ನಿಟಾರನೆ ನಿಂತಿದ್ದ ರಾಖೇಶ ಅದ್ಭುತವಾಗಿ ನಡೆದು ಬಂದು ಆಚಾರ್ಯರ ಮುಂದೆ ನಿಂತ. ಮಂತ್ರೋಚ್ಚರಣೆ ಮಾಡುತ್ತಿದ್ದ ಅವರು ಆತನನ್ನು ನಖಶಿಖಾಂತ ನೋಡಿದರು. ಆದಿಶಂಕರರಿಗೆ ಎದುರಾದ ಚಂಡಾಲನ ಅವತಾರವೇ ಇವನೆಂದುಕೊಂಡರು.

“ಯಾಕ್ಸಾಮೀ… ನಾನವ್ನ ಮಗನ್ಗಿಂತ ಯಾತರಾಗ ಕಡ್ಮೆ ಅದೀನ್ರಪ್ಪೋ… ನಿಮ್ಮಂಥೋರಿಂದ ಏನೇನು ಬೋಧ ಕೊಡ್ಲಿಕ್ಕೆ ಸಾಧ್ಯ ಇಲ್ವೋ ಅದ್ನೆಲ್ಲ ಬೋಧ ಕೊಟ್ಟೋನು ನಾನೆ ಕಣ್ರಪ್ಪೋ… ಹಂಗಿದ್ದೋನ್ನ ಹಿಂಗ ಮಾಡ್ದೋನು; ಹಿಂಗಿದ್ದೋನ್ನ ಹಂಗ ಮಾಡಿದ್ದು ಎಲ್ಲಾವು ನಾನೆ… ಅವನೆಂಜ್ಲು ನಾನುಂಡೀನಿ… ನನ್ನೆಂಜ್ಲು ಅವನುಂಡಾನ… ನಾನವ್ನೀಗೆ ತಂದೆಯಾಗಿದ್ದೆ… ಅವ್ನು ನಂಗೆ ಮಗನಂಗಿದ್ದ… ನಾನವ್ನೊಗೆ ಮಗನಂಗಿದ್ದೆ… ಅವ್ನು ನಂಗೆ ತಂದಿಯಾಗಿದ್ದ… ತಂದಿಗೆ ಮಗ ಅಂದ್ರೂ ಒಂದೆ… ಮಗ್ನೀಗೆ ತಂದೆ ಆದ್ರೂ ಒಂದೆ… ತಂದಿ ಮಗ ಅಂಭೋವೆಲ್ಲ ದೇಹದ ಎರಡಂಸ ತಾನೆ! ನನ್ಗೂ ಶಾಮಂಗೂ, ವ್ಯತ್ವಾಸಾನೆ ಇಲ್ಲ… ಸ್ವಾಮಿ… ನನ್ನೇ ಅವ್ನ ಮಗ ಅಂದ್ಕೊಂಡು ಮುಂದಿನ ಕಾರ್‍ಯೇವ್ನ ನಡೆಸ್ಕೊಟ್ಟು ಬುಡ್ರಿಯಪ್ಪಾ…” ಎಂದು ಅವರ ಕಾಲುಹಿಡಿದುಕೊಂಡು ಬಿಟ್ಟ.
ತಾನು ಶಾಮಾನ ಮಗನಿಗಿಂತ ಯಾವುದರಲ್ಲಿ ಕಡಿಮೆ ಏನಿಲ್ಲ ಎಂಬ ಭಾವನೆ ಬಂದದ್ದೇ ಚಿಕ್ಕ ಮಗುವಿನಂತೆ ಉರುಳಾಡತೊಡಗಿದ. ತಪ್ಪು ಒಪ್ಪುಗಳನ್ನೆಲ್ಲ ಇಡೀ ಒಂದು ತಾಸು ನಿವೇದಿಸಿಕೊಂಡು ಕ್ರಮೇಣ ಹಗುರಾದ.

ವರದಾಚಾರ್ಯರು ಅವನಿಗೆ ಮಂತ್ರೋಚ್ಚರಣೆ ಸಹಿತ ಅವನಿಗೆ ಕೇಶ ಮುಂಡನ ಮಾಡಿಸಿ ಜುಟ್ಟು ಬಿಡಿಸಿದರು. ಸ್ನಾನ ಮಾಡಿ ಹೊಸಬಟ್ಟೆ ತೊಡಿಸಿದರು. ಒಂದು ದಾರವನ್ನು ಮಂತ್ರಿಸಿ ಯಜ್ಞೋಪವೀತವನ್ನಾಗಿ ಪರಿವರ್ತಿಸಿ ಅವನ ಕೊರಳಿಗೆ ಹಾಕಿದರು. ನೋಡು ನೋಡುವಷ್ಟರಲ್ಲಿ ಶೂದ್ರಾತಿ ಶೂದ್ರನಾಗಿದ್ದ ರಾಖೇಶ ಬ್ರಾಹ್ಮಣ ವಟುವಿನಂತಾಗಿ ಬಿಟ್ಟ. ಅವನಿಗೆ ಶಿವರಾಮಶಾಸ್ತ್ರೀ ಎಂದು ಪುನರ್‍ನಾಮಕರಣ ಮಾಡಿದರು. ಶಿವರಾಮಶಾಸ್ತ್ರಿ ಎಂದು ಅವರು ಕೂಗಿದೊಡನೆ ಅವನು ‘ಪುಜ್ಯರೇ’ ಎಂದು ಪ್ರತಿಕ್ರಿಯಿಸತೊಡಗಿದನು… ಅವನ ದೇಹದ ಅಣು ಅಣುವು ಶಾಮನ ಉತ್ತರಾಧಿಕಾರತ್ವದ ಪ್ರತಿಧ್ವನಿಸತೊಡಗಿತು.

ಚಟ್ಟದ ಮೆಲೆ ಶಾಮನ ಕಳೇಬರ ಮಲಗಿಸಿದೊಡನೆ ಜನಸ್ತೋಮವು ‘ಚಾಂಗು ಭಲರೇ… ಚಾಂಗು ಚಾಂಗು ಚಾಂಗು ಭಲರೇ’ ಎಂದು ಕೂಗಿತು. ನೂರಾರು ಜನರ ನಡುವೆ ಶವ ಯಾತ್ರೆ ಸಾಗಿತು. ಮುಂದೆ ಒಂದು ಕೈಯಿಂದ ಹೆಗಲ ಮೆಲಿದ್ದ ರಿಣದ ಬಿಂದಿಗೆಯನ್ನೂ ಇನ್ನೊಂದು ಕೈಯಲ್ಲಿ ಬೆಂಕಿಯ ಕುಂಡವನ್ನೂ ಹಿಡಿದುಕೊಂದಿದ್ದ ರಾಖೇಶ ಅಲಿಯಾಸ್ ಶಿವರಾಮ ಶಾಸ್ತ್ರಿ ನದೆಯುತ್ತಿದ್ದನು… ಗ್ರಾಮದ ಮಂದಿ ಸಾಲು ಗಟ್ಟಿ ಈ ಸೋಜಿಗವನ್ನು ನೋಡಿ ಗದ್ಗಿದಿತ ವಾಯಿತು.

ವಿಧವೆಯ ಸ್ಥಾನವನ್ನಲಂಕರಿಸಿದ್ದ ನನಗೆ ಅಲ್ಲಿಗೆ ಹೋಗಲು ಆಗಲೇ ಇಲ್ಲ. ಕಡದರಹಳ್ಳದ ಪಕ್ಕ ಶಾಸ್ತ್ರೋಕ್ತವಾಗಿ ಶಾಮನ ದಹನ ಸಂಸ್ಕಾರವನ್ನು ಮಾಡಲಾಯಿತು…. ಶವ ಸಂಸ್ಕಾರದ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ನಮ್ಮ ಮನೆಗೆ ಬಂದು ಹೆಣಮಲಗಿಸಿದ ಬಳಿಕ ಜಾಗದಲ್ಲಿ ಮಣ್ಣಿನ ಪಾತ್ರೆಯಲ್ಲಿಟ್ಟಿದ್ದ ನೀರಿನಲ್ಲಿ ತಂತಮ್ಮ ಎಡಪಾದದ ಹೆಬ್ಬೆರಳನ್ನು ಅದ್ದಿ ತಂತಮ್ಮ ಮನೆಗೆ ಹೊರಟು ಹೋದರು.
ಮುಂದೊಂದು ದಿನ ಶಿವರಾಮ ಶಾಸ್ತ್ರಿಯ ಸ್ಥಾನದಲ್ಲಿದ್ದ ರಾಖೆಶನು ಶಾಮನ ದೇಹದ ಅಸ್ಥಿಗಳನ್ನು ಆಯ್ದು ಚೀಲದಲ್ಲಿ ತುಂಬಿಕೊಂಡು ಬಂದು “ಅಮ್ಮಾ… ಅಪ್ಪಾಜಿಯ ದೇಹದ ಅಸ್ಥಿಗಲನ್ನು ಚಿತಾಭಸ್ಮವನ್ನು ಎಲ್ಲಿಡಲಿ ತಾಯೇ” ಎಂದು ಕೇಳಿದ. ಓಹ್… ಕಾಖೇಶ್… ನನ್ನ ಮಗ! ಅವನನ್ನು ಅಪ್ಪಿಕೊಂಡೆ.. ಅತ್ತೆ ಅವನೂ ಅತ್ತ…

ಶಾಮನ ಶ್ರಾದ್ಧ ನಿಗದಿತ ಸಮಯದಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಯಾರೋ ಮಾಡಿದರು… ನೂರಾರು ಜನ ಊಟ ಮಾಡಿದರು….
ಅಸ್ಥಿಮಜ್ಜನ ಮಾಡಲೆಂದು ಇಂಥ ದಿನ ಬರುವುದಾಗಿ ಹೇಳಿ ಹೋದ ವರದಾಚಾರ್ಯರು ಆ ದಿನ ಬರಲೇ ಇಲ್ಲ. ಆ ದಿನ ಬಂದದ್ದು ಅವರ ಮರಣದ ವಾರ್ತೆ… ವರದಾ ಚಾರ್ಯರಂಥ ವ್ಯಕ್ತಿ ಮತ್ತೆ ಹುಟ್ಟಿ ಬರಬಹುದೇ!?
ಶಾಮ ಹೇಳುತ್ತಲೇ ಇದ್ದ ಕಾಶೀಕ್ಷೇತ್ರದ ಬಗ್ಗೆ; ಗಂಗಾನದಿಯ ಬಗ್ಗೆ; ಮಣಿಕರ್ಣಿಕಾ ಪುಷ್ಕರಿಣಿ ಬಗ್ಗೆ… ಅದು ಬಹುಶಃ ತನ್ನ ಕಾಲಾ ನಂತರ ತನ್ನ ಅಸ್ಥಿ ಮತ್ತು ಚಿತಾಭಸ್ಮದ ನಿಮಜ್ಜಕಾರ್ಯವನ್ನು ಅಲ್ಲಿಯೇ ಮಾಡಬೇಕು. ಎಂದಾಗಿರಬಹುದೆಂದುಕೊಂಡೆ. ವಿಧಿಯ ಆಟ ಎಷ್ಟೊಂದು ಕೌಶಲಪೂರ್ಣವೆಂದರೆ ಅವನ ತಾತಂದಿರಾದ ಪರಮೇಶ್ವರ ಶಾಸ್ತ್ರಿಗಳ ದೇಹದ ಅಸ್ಥಿಯ ಮೂಟೆ ಮಣಿಕರ್ಣಿಕಾ ಸಂಯೊಗಕ್ಕಾಗಿ ಅಲ್ಲಿ ಅವರ ಮನೆಯಲ್ಲಿ… ಅವರೊಂದಿಗೆ ಇನ್ನೂ ಕಾಯುತ್ತಲೇ ಇರುವುದು…” ಹೇಳು ಹೇಳುತ್ತಿದ್ದಂತೆ ಅನಸೂಯಮ್ಮಳ ಪಾತ್ರವು ಕಂಠಕಟ್ಟಿ ಬಾಯಿ ಮೇಲೆ ನಾರುಮಡಿಯ ಸೆರಗು ಇಟ್ಟುಕೊಂಡು ಬಿಕ್ಕಿಬಿಕ್ಕಿ ಬಿಕ್ಕಳಿಸತೊಡಗಿದಳು.
ಆ ವೃತ್ತಾಂತವನ್ನೆಲ್ಲ ಕೇಳಿ ನಾನೂ ಗದ್ಗಿತನಾದೆ. ನಾನು ಕಂದಿದ್ದಾಗ ರಾಖೇಶ ತಾನು ಶಿವರಾಮ ಶಾಸ್ತ್ರಿಯಾಗಿದ್ದಾಗಲೀ, ಪುತ್ರ ಸ್ಥಾನದಲ್ಲಿ ನಿಂತು ಶಾಮನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾಗಲೀ ಹೇಳಲೇ ಇಲ್ಲ… ಅಷ್ಟೊತ್ತಿಗಾಗಲೇ ಅವನು ಶಾಸ್ತ್ರಿಯ ವೇಶ ಕಳಚಿಟ್ಟು ತನ್ನ ಮೂಲ ಬದುಕಿಗೆ, ಮೂಲ ವೇಶಕ್ಕೆ ಮರಳಿದ್ದಿದಬೇಕು.
ಊಹೆಗೂ ನಿಲಕದ ಸಂಗತಿಗಳನ್ನು ಕೇಳಿ ನಾನು ದಿಗ್ಭ್ರಮೆಗೊಂಡೆ. ಬೆರಗುಗೊಂಡೆ. ಹೀಗೂ ನಡೆಯುವುದುಂಟಾ ಎಂದು ಆಶ್ಚರ್ಯಪಟ್ಟೆ.
“ಅಮ್ಮಾ… ನೀನು ನನ್ನ ಗೆಳೆಯನ ಕಳೇಬರಕ್ಕೆ ಸಂಸ್ಕಾರದ ಸದ್ಗತಿ ಒದಗಿಸಿದ ಆದಿಶಕ್ತಿ… ಅವನ ಪರವಾಗಿ ನಾನು ನಿನಗೆ ಕೃತಜ್ಞತೆಗಳನ್ನು ಅರ್ಪಿಸಿತ್ತಿದ್ದೇನೆ. ಅವನ ಧರ್ಮ ಪತ್ನಿ ವರಲಕ್ಷ್ಮೀ, ತಾಯಿ ಅಲುಮೇಲಮ್ಮ ಇವರೆಲ್ಲ ಬಂದು ಹೋಗಲಿಲ್ಲ ಎಂಬ ಕೊರತೆಯನ್ನು ನೀನು ತುಂಬಿದಿ… ಅವರೆಲ್ಲ ಶಾಮನ ನೆನಪಿನಿಂದ ಶಾಶ್ವತವಾಗಿ ದೂರ ಉಳಿಯದಿದ್ದುದೇ ಒಂದು ಸೋಜಿಗದ ಸಂಗತಿ ನೋಡಿ” ಎಂದು ಕೇಳಿದೆ.
ಅನಸೂಯಮ್ಮ ಪಾತ್ರವು ನಿಟುಸಿರು ಬಿಟ್ಟು ಹೇಳಿತು –
“ಅದಾದ ಮ್ಯಾಲ… ನಾನು ಅನುಭೋಗಿಸಿದ್ದು ಒಂದಲ್ಲಾ… ಎರಡಲ್ಲಾ… ನೂರಾರು ಕಷ್ಟಕೋಟಳೆ ಅನುಭೋಗಿಸಿದೆ. ಈಗಲೂ ಶಾಮ ಸತ್ತ ದಿನ ನಾನು ರಂಡೆಮುಂಡೆ ಆಗ್ತೀನಿ… ಎಲ್ಲಿದ್ರು ಓಡಿಬಂದು ರಾಖೇಶ ಶಿವರಾಮ ಶಾಸ್ತ್ರಿ ಆಗ್ತಾನೆ… ನಂದು ಎಷ್ಟೇ ತಾಪತ್ರಯ ಇದ್ರೂ ಶಮನ ತಿಥೀನ ಮಾತ್ರ ಶಾಸ್ತ್ರೋಕ್ತವಾಗಿ ಮಾಡ್ತಾ ಬಂದೀವಿ… ಈ ಘಟ ಬದುಕಿರೋವರ್‍ಗೂ ಮಾಡ್ತೀವಿ… ಆಮೇಲೆ…”
ಅಂಥದೊಂದು ದಿನ ಶಾಮನ ತಿಥಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ನಿರ್ಧರಿಸಿದೆ.
“ಅಮ್ಮಾ… ವರಲಕ್ಷ್ಮೀ ಮತ್ತವರ ಅತ್ತೆ ಕಡೆಯಿಂದ ಏನಾದರೂ ?…” ಎಂದು ಸಂದೇಹ ವ್ಯಕ್ತಪಡಿಸುತ್ತಿದ್ದಂತೆಯೇ ಅನಸೂಯಮ್ಮ ಪಾತ್ರವು ನಡುವೆ ಬಾಯಿ ಹಾಕಿತು….
“ಅಯ್ಯೋ… ಅಂಥವ್ರೂ ಈ ಭೂಮಿ ಮ್ಯಾಲ ಅದಾರಂದ್ರ ನಂಬಲಿಕ ಶಕ್ಯವಿಲ್ಲ ನೋಡ್ರಿ… ವಾರಕ್ಕೊಮ್ಮೆ, ಪಕ್ಷಕ್ಕೊಮ್ಮೆ ಅವರೋ ಅವರ ಪೈಕಿ ಇನ್ನಾರೋ ಬರೋದು… ಬಾಕಲ ಮುಂದೆ ನಿಂತ್ಗಂಡು ಏನೋ ಭೋಸೂಡಿ… ನಮ್ಮ ಶಾಮಾ ಶಾಸ್ತ್ರೀನ ನುಂಗಿ ನೀರು ಕುಡಿದ್ಯಾ… ಈಗ ಅವ್ನ ಆಸ್ತೀನ ಮನೇಲಿ ಬಚ್ಚಿಟ್ಕೊಂಡು ತೇದ್ಕೊಂಡು ಕುಡೀತಿದ್ದಿ ಏನೇ? ಥೂ ನಿನ್ನ ಬಾಳುವೆಗೆ ಬೆಂಕಿ ಹಾಕಾ…” ಎಂದಿತ್ಯಾದಿ ಸಾಪಳಿಸಿ ಹೋಗುತ್ತಿದ್ದರು… ಆಗ ನಾನು ಬಾಯಿ ಮುಚ್ಕೊಂಡು ತೆಪ್ಪಗಿದ್ದು ಬೈಸಿಕೊಂಡು ಬಿಡುತ್ತಿದ್ದೆ. ಇಂಥದೊಂದು ತಾಳ್ಮೆಯನ್ನು ಶಾಮ ನನಗೆ, ನಮ್ಮೆಲ್ಲರಿಗೆ ಕಲಿಸಿ ಕೊಟ್ಟಿದ್ದ. ಅದೇ ನಮ್ಮನ್ನು ಈಗಲೂ ಕಾಪಾಡುತ್ತಿರುವುದು” ಎಂದು ಹೇಳಿದಳು.

ವರಲಕ್ಷ್ಮಿಯಾಗಲೀ, ಅವರ ಅತ್ತೆ ಅಲಮೇಲಮ್ಮ ಆಗಲೀ ಹೀಗೆ ಮಾತಾಡಿರಬಹುದೆಂದೂ, ವರ್ತಿಸಿರಬಹುದೆಂದೂ ನಂಬಲಿಕ್ಕೆ ಆಗಲಿಲ್ಲ… ಆದರೆ ನಂಬುವುದೀಗ ಅನಿವಾರ್ಯ, ಅದಕ್ಕೆ ಸಾಕಷ್ಟು ಪುರಾವೆಗಳನ್ನು ಅನಸೂಯಮ್ಮ ನನಗೆ ನೀಡಿದ್ದಾಳೆ. ಆದ್ದರಿಂದ ನಂಬದೆ ಹೇಗೆ ಇರುವುದು?
ಇದರ ಬಗ್ಗೆ ಒಂಚೂರು ಹೇಳಲಿಕ್ಕೆ ಸಾಧ್ಯವೇನಮ್ಮಾ ಎಂದು ಕೇಳಿದೆ… ಆಕೆ ಅದಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಳು…
*
*
*
ಅಂಥ ಅನುವಾದ ವ್ಯಕ್ತಿಯನ್ನೇ ಕಳೆದುಕೊಂಡು ಬದುಕುತ್ತಿರುವವಳು ನಾನು… ಏನೂ ಇರದಿದ್ದ ಅಥವಾ ಎಲ್ಲವೂ ಇದ್ದ ಅನನಗೆ ಏನು ಕೊಟ್ಟಿರಲು ಸಾಧ್ಯ!… ಅವನು ನನ್ನಲ್ಲಿ ತನ್ನ ನೆನಪುಗಳನ್ನು ರಾಶಿರಾಶಿಯಾಗಿ ಬಿಟ್ಟುಕೊಟ್ಟಿದ್ದ. ಅವನು ಸತ್ತ ಕ್ಷಣವೇ ನನ್ನಿಂದ ಎಲ್ಲ ಸುಖ ವೈಭೋಗ, ಸೌಭಾಗ್ಯಗಳನ್ನೆಲ್ಲ ಕಿತ್ತುಕೊಂಡು ಬಿಟ್ಟಿದ್ದ. ನಾನು ಆ ಕ್ಷಣದಿಂದ ನನ್ನ ಕಸುನಿನಿಂದ ದೂರ ಸರಿದು ಬಿಟ್ಟೆ. ಎಷ್ಟೇ ಕೊಡುತ್ತೇವೆಂದರೂ ಬರುತ್ತಿದ್ದವರು ನನ್ನ ವಿಷಣ್ಣಾವಸ್ಠೆಯನ್ನು ನೋಡಿದೊಡನೆ ಮುಖ ಸಪ್ಪಗೆ ಮಾಡಿಕೊಂಡು ಹೋಗಿಬಿಡುತ್ತಿದ್ದರು… ಅವರಲ್ಲಿ ಕಾಮಾಸಕ್ತಿಯನ್ನು ಹುಟ್ಟಿಸುವಂಥ ಲಕ್ಷಣವಾಗಲೀ, ಸ್ಪಂದನವಾಗಲೀ ನನ್ನಲ್ಲಿರಲಿಲ್ಲ… ಇದ್ದರೂ ನಾನು ಪ್ರಕಟಿಸುತ್ತಿರಲಿಲ್ಲ. ಅರ್ಥವಾಗದ ವೈರಾಗ್ಯ; ನಿರಾಸಕ್ತಿ ನನ್ನನ್ನು ಆವರಿಸಿಬಿಟ್ಟಿತ್ತು. “ಹಿಂಗಿದ್ರೆ ಹೆಂಗಕ್ಕಾ… ಮನೀ ಮಂದ್ಯೆಲ್ಲಾ ಉಪಾಸ ವನ್ವಾಸ ಅನುಭೋಗಿಸಬೇಕಾಗತೈತೆ. ಅಷ್ಟೆ…” ’ಆದದಾಯ್ತು… ಏನು ಮಾಡಿದ್ರು… ಆ ಸತ್ತೋನು ಎದ್ದು ಬಂದಾನ…? ಅವನು ಬದುಕಿದ್ದಗಿಲ್ಲದ ವೈರಾಗ್ಯ ಅವನು ಸತ್ತ ಮ್ಯಾಲೆ ಬರಬೇಕಂತೀನಿ… ಕೊಪ್ಪಳದ ಕಡ್ಯೋರು ಸಂಗ್ಯಾ ಬಾಳ್ಯಾ ಆಡ್ತಾರಂತೆ… ಅದ್ರಲ್ಲಿ ನೀನು ಗಂಗೀ ಪಾರ್‍ಟು ಮಾಡ್ಬೇಕಂತೆ… ಸುಮ್ನೆ ಒಪ್ಕೊಂಡು ಅಡ್ವಾನ್ಸು ತಗಂಬಿಡು” ಎಂದು ರಾಖೇಶ ಪರಿಪರಿಯಾಗಿ ಹೇಳಿದ… ನನ್ನ ನಿಜವಾದ ಸಂಗ್ಯಾನೇ ಹೊರಟು ಹೋಗಿರುವಾಗ ಇನ್ನೊಬ್ಬ ಪಾತ್ರಧಾರಿಯನ್ನು ಸಂಗ್ಯಾ ಎಂದು ಹೇಗೆ ಒಪ್ಪಿಕೊಳ್ಳುವುದು? ಸಂಗ್ಯಾನ ಕೊಲೆ ಆದ ಮೆಲೆ ಗಂಗಿಯ ಬದುಕು ಒಂದು ಬದುಕೇ! ನಾನು ಯಾರು ಎಷ್ಟು ಹೇಳಿದರೂ ಒಪ್ಪಿಕೊಳ್ಳುತ್ತಿರಲಿಲ್ಲ… ನಮ್ಮ ಮುದುಕಿಯೂ ನನ್ನನ್ನೂ; ನನ್ನ ವೈಧವ್ಯವನ್ನು ಗೌರವಿಸುವಂಥ ಸಾಹುಕಾರ ವ್ಯಕ್ತಿಯನ್ನು ನೋಡಿರುವುದಾಗಿಯೂ; ಅವನೊಂದಿಗೆ ಸುಖವಾಗಿರು ಎಂದೂ ಪೀಡಿಸತೊಡಗಿತು. ಅದರ ಮಾತಿಗೂ ಸೊಪ್ಪು ಹಾಕದೆ ಇದ್ದುಬಿಟ್ಟೆ, ಎರಡು ಮನೆಗಳ ಬಾಡಿಗೆ ಬರುತ್ತಿದ್ದರಿಂದ ಎರಡು ಹೊತ್ತಿನ ಊಟಕ್ಕೆ ತೊಂದರೆ ಇರಲಿಲ್ಲ. ಬೇಸರವಾದಾಗಲೆಲ್ಲ ಯಾವುದೋ ಒಂದು ಪುಸ್ತಕ ಇಟ್ಟುಕೊಂಡು ಒಂಟಿಯಾಗಿ ಕೂತು ಬಿಡುವುದನ್ನು ಅಭ್ಯಾಸ ಮಾಡಿಕೊಂಡೆ ಆದರೆ ನನ್ನ ಧ್ಯಾನ ಸ್ಥಿತಿಗೆ ಭಂಗ ಬರುತ್ತಿದ್ದುದು ಶಾಮನ ಸಂಬಂಧೀಕರಿಂದ. ನಾನಿರುವ ಮನೆ ಮತ್ತು ಬಾಡಿಗೆ ಕೊಟ್ಟಿರುವ ಮನೆಗಳು ಶಾಮನಿಗೆ ಸೇರಿದವು ಎಂದು ಗಲಾಟೆ ಮಾಡುತ್ತಿದ್ದವರು ನಿಜಾಂಶ ತಿಳಿದು ಅದನ್ನು ಬಿಟ್ಟುಬಿಟ್ಟರು. ಒಮ್ಮೆ ನಗಗಳನ್ನು ಕುರಿತಂತೆ, ಇನ್ನೊಮ್ಮೆ ನಾಣ್ಯಗಳನ್ನು ಕುರಿತಂತೆ ಬಂದು ಏರುದನಿಯಲ್ಲಿ ಮಾತಾಡಿ ತಲೆ ತಿಂದು ಹೋಗುತ್ತಿದ್ದರು. ನಾನು ಅವರ ಯಾವ ಮಾತಿಗೂ ಕಿಮಕ್ ಎನ್ನುವಂತಿರಲಿಲ್ಲ. ನಾನು ಒಂದು ಮಾತು ಹೇಳಿದರೆ ಅವರೆಲ್ಲ ಬಾಯಿಗಳನ್ನು ಶಾಶ್ವತವಾಗಿ ಮುಚ್ಚಿಸಬಲ್ಲವಂಥವರು ನನ್ನ ಆಸುಪಾಸಿನಲ್ಲಿದ್ದರು. ಅವರ ಸಹಾಯದಿಂದ ನಾನು ಅನೇಕ ಹೇಮಾಹೇಮಿಗಳ ಬಾಯಿ ಮುಚ್ಚಿಸಿರುವ ಉದಾಹರಣೆಗಳುಂಟು. ಆದರೆ ಆ ದಿನದಿಂದ ಅವರನ್ನು ನಾನು ದೂರ ಇಟ್ಟಿದ್ದೆ. ಅವರ ಚುಟುಚುಟುಗುಟ್ಟುತ್ತಿದ್ದ ಕೈಗಳಿಗೆ ಆಹಾರ ಒದಗಿಸುವುದು ನನ್ನಿಂದ ಶಕ್ಯವಿರಲಿಲ್ಲ. ಇಂಥವರಿಗೆ ಅಂಥವರನ್ನು ಆಹಾರವಾಗಿ ಕೊಡಲಿಕ್ಕೆ ಹೇಗೆ ಸಾಧ್ಯ? ಎಷ್ಟೇ ಬಯ್ದರೂ; ಎಷ್ಟೇ ಅವಮಾನಿಸಿದರೂ ಅವರ ಬಗ್ಗೆ ನನಗೆ ಎಳ್ಳಷ್ಟು ಬೇಸರವಾಗಲೀ, ಕೋಪವಾಗಲೀ ಇರಲಿಲ್ಲ. ಎಲ್ಲ ಗಂಡಂದಿರಂತೆ ಶಾಮನೂ ತನ್ನವರೊಂದಿಗಿದ್ದಿದ್ದಲ್ಲಿ ಅವರ ಕಾಲಾನುಕಾಲದ ಅಗತ್ಯಗಳನ್ನು ಪೂರೈಸಿದ್ದಲ್ಲಿ ಅವರ್‍ಯಾಕೆ ಅವನ ಮರಣೋತ್ತರವಾಗಿ ನನ್ನ ಮೇಲೆ ಹರಿಹಾಯುತ್ತಿದ್ದರು! ಇರೋದೊಂದು ಮನೆ ಬಿಟ್ಟರೆ ಬೇರೆ ಆಸ್ತಿಯಾದರೂ ಏನಿದೆ? ವರಲಕ್ಷ್ಮಿಯು ನನ್ನಂತೆ ನಿರುಮ್ಮಳತೆಯಿಂದ ಬದುಕಲು, ತನ್ನವರನ್ನು ಬದುಕಿಸಲು ಹೇಗೆ ಸಾಧ್ಯ? ಗಂಡ ಶಾಮ ಸತ್ತ ಕ್ಷಣವೇ ಶೃಂಗೇರಿಗೆ ಹೋಗಿ ಕೇಶ ಮುಂಡನ ಮಾಡಿಸಿಕೊಂಡು ನಾರುಮಡಿಯುತ್ತು ವಿಧವಾ ಪಟ್ಟ ಕಟ್ಟಿಸಿಕೊಂಡು ಬಂದು ಬಿಟ್ಟಳಂತೆ. ವೈಧವ್ಯದಲ್ಲೂ ಪಾತಿವ್ರತ್ಯದ ವಾಸನೆ ಘಮ್ಮಂತ ಹರಡುತ್ತಿರಬೇಕು ಎಂಬ ಗುಣದ ಹೆಣ್ಣು. ಅಂಥ ಕರ್ಮಠ ಮಹಿಳೆ ತನ್ನನ್ನು ನಂಬಿಕೊಂಡಿರುವ ವೃದ್ಧ ಅತ್ತೆಯನ್ನಾಗಲೀ, ಎಳೆಯ ಮಕ್ಕಳನ್ನು ಹೇಗೆ ಪಾಲನೆ, ಪೋಷಣೆ ಮಾಡಿಯಾಳು! ತಾನಾದರೆ ಪಾತಿವ್ರತ್ಯವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡೇ ರಾಜಾರೋಷವಾಗಿ ಬದುಕಬಹುದು. ಆದರೆ ಅದು ಆಕೆಗೆ ಸಾಧ್ಯವಿಲ್ಲ! ಆರ್ಥಿಕ ಅಸಹಾಯಕತೆಯಿಂದಾಗಿಯೇ ಆಕೆ ನನ್ನಂಥವರ ಮೇಲೆ ಹರಿಹಾಯುತ್ತಿರುವುದು. ತಾಯ್ತನದ ಹಕ್ಕಿನ ಒಂದು ಅಂಶವನ್ನು ನನಗೆ ಕೊಟ್ಟರೆ ಈಗಿರುವ ಎರಡು ಮನೆಗಳನ್ನು ಮಾರಿ ಆ ಮಕ್ಕಳ ಹೆಸರಿನಲ್ಲಿ ಠೇವಣಿ ಇದಬಹುದು! ಆದರೆ ಅವರು ಆ ಎಳೆಯ ಮಕ್ಕಳ ಸುತ್ತ ಏಳು ಸುತ್ತಿನ ಕೋಟೆಯಂತೆ ನಿಂತಿರುವರಲ್ಲ! ಅವರನ್ನು ಭೇದಿಸಿಕೊಂಡು ಮಕ್ಕಳನ್ನು ತಲುಪುವುದು ಅಷ್ಟು ಸುಲಭ ಸಂಗತಿಯಾಗಿರಲಿಲ್ಲ. ಆದ್ದರಿಂದ ಆ ಯೋಚನೆಯನ್ನು ಅಲ್ಲಿಗೆ ಬಿಟ್ಟುಕೊಟ್ಟಿದ್ದೆ.

ಆದರೆ ಮುಂದೊಂದು ದಿನ ಪವಾಡ ರೀತಿಯ ಒಂದು ಘಟನೆ ನಡೆಯಿತು. ಶಾಮ ಎಷ್ಟೊಂದು ಮೂರ್ಖನಿದ್ದ; ಹುಚ್ಚನಿದ್ದ ಎಂಬುದನ್ನು ಈ ಘಟನೆಯಿಂದ ಸಾಬೀತಾಯಿತು. ಅವನು ಹೀಗೆ ಮಾಡಿರಬಹುದೆಂದು ನಾನೆಂದೂ ಊಹಿಸಿರಲಿಲ್ಲ… ಅದೆಂದರೆ ಅವನು ತನ್ನ ಸೇವಾ ಸೌಲಭ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಭಾಗಗಳಲ್ಲಿ ನನ್ನ ಹೆಸರನ್ನು ನಾಮ ನಿರ್ದೇಶನ ಮಾಡಿಬಿಟ್ಟಿದ್ದ. ಪಿಂಚಣಿ ಕೂಡ. ಬ್ಯಾಂಕಿನ ಅಧಿಕಾರಿಗಳು ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗಿ ಸಹಿ ಮಾಡಿಸಿಕೊಂಡು ಚೆಕ್ ಕೊಟ್ಟರು. ಅದರಲ್ಲಿದ್ದ ಒಂದು ಲಕ್ಷದಾ ಮೂವತ್ತು ಸಾವಿರ ರೂಪಾಯಿಯ ಮೊತ್ತ ನೋಡಿ ನನಗೆ ಗಾಬರಿಯಾಯಿತು. ಶಾಮನ ಹೃದಯ ವೈಶಾಲ್ಯಕ್ಕೆ ಮಾರು ಹೋಗಿ, ತತ್ತರಿಸಿ ಗಳಗಳನೆ ಅತ್ತುಬಿಟೆ. ಲಗುನಗೆಯಿಂದ ಬ್ಯಾಂಕಿನಲ್ಲಿ ಮುರಿಸಿ ಹಂಡೇ ಚೀಲದಲ್ಲಿ ಅದನ್ನೆಲ್ಲ ತುಂಬಿಕೊಂಡು ಹೊರಬಿದ್ದೆ. ಇದೆಲ್ಲ ಗೊತ್ತಾಗಿ ಮುದುಕಿ, ರಾಖೇಶ ಧಾವಿಸಿ ನನ್ನೆದುರಿಗೆ ಬಂದರು. ನಾನು ಅದನ್ನೆಲ್ಲ ತೆಗೆದುಕೊಂಡು ಕೊಟ್ಟೂರಿಗೆ ಹೊರಟಿದ್ದ ಬಸ್ಸು ಹತ್ತುತ್ತಿರಿರುವದು ಕಂಡು ಗಾಬರಿಯಾದರು, ತಡೆಯಲೆತ್ನಿಸಿದರು. ಆದರೆ ಅವರ ಮಾತುಗಳನ್ನು ನಾನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೇಗಾದರೂ ಮಾಡಿ ಶಾಮ ಮಾಡಿರುವ ತಪ್ಪನ್ನು ಆದಷ್ಟು ಬೇಗನೆ ಸರಿಪಡಿಸಬೇಕೆಂಬುದೇ ನನ್ನ ಅಚಲ ನಿಲುವಾಗಿತ್ತು.

ನಾನು ಹೊರಟಿರುವುದು ತಲುಪಲಿರುವುದು ಅವರಿಗೆ ಹೇಗೆ ಮುಂಚಿತವಾಗಿ ತಿಳಿಯಿತೋ ಏನೋ! ದೇವರಿಗೇ ಗೊತ್ತು! ನಾನು ಅಲ್ಲಿಗೆ ಸಮೀಪಿಸುತ್ತಿರುವ ಹೊಟ್ಟಿಗಾಲೇ ಹತ್ತಾರು ಮಂದಿ ಗುಂಪುಗೂಡಿ ಉರಿವ ಕಣ್ಣುಗಳನ್ನು ಬಿಡುತ್ತ ನನಗೆ ಸ್ವಾಗತ ಕೋರಿದರು.

“ಏನೇ… ಕತ್ತೆ ಸೂಳೆ… ನನ್ನ ಮಗನನ್ನು ಬಲಿತೆಗೆದುಕೊಂಡವಳಾದ ನೀನು ಇಲ್ಲಿಗೆ ಬರಲಿಕ್ಕೆ ಎಷ್ಟು ಧೈರ್ಯವೇ! ಈ ಭೂಮಿ ಮೇಲೆ ನೀನಿರಬೇಕೊಂದು, ಇಲ್ಲ ನಾವಿರಬೇಕು ಒಂದು… ಬಂದ ಪಾಪ ಬರಲಿ…” ಎಂದು ಅಲುಮೇಲಮ್ಮ ತಾನು ವೃದ್ಧೆ ಎಂಬುದನ್ನು ಮರೆತು ಕೈಲಿದ್ದ ಕೋಲನ್ನು ಝಳಪಿಸಿತು.

“ಅಯ್ಯಯ್ಯೋ ನನ್ನ ಸೌಭಾಗ್ಯವನ್ನು ಕಸಿದುಕೊಂಡವಳೇ ಇಲ್ಲಿಗೆ ಬಂದ್‌ಬಿಟ್ಟಳಲ್ಲ. ಹೆಣ್ಣೋ! ಪೂತನಿಯೋ ಇಲ್ಲಾ… ಇಲ್ಲಾ… ನಿನ್ನನ್ನು ಬಲಿತೆಗೆದುಕೊಂಡು ನನ್ನ ಗಂಡನ ಆತ್ಮಕ್ಕೆ ಶಾಂತಿ ಒದಗಿಸದೇ ಬಿಡುವುದಿಲ್ಲ… ನನ್ನ ಮಕ್ಕಳೂ ಅನಾಥವಾದರೂ ಚಿಂತೆ ಇಲ್ಲ…” ಎಂದು
ವರಲಕ್ಷ್ಮಿಯು ಯಾವುದೋ ಒಂದು ಬಡಿಗೆಯನ್ನು ಕೈಯಲ್ಲಿ ಹಿಡಿದುಕೊಂದು ಕುಪ್ಪಳಿಸಿ ನಿಂತಳು.
ಎಡಗಡೆ ವೃದ್ಧೆ ಅಲುಮೇಲಮ್ಮನೂ
ಬಲಗಡೆ ವಿಧವೆ ವರಲಕ್ಷ್ಮಿಯೂ
ತಲೆಬಾಗಿಲ ಬಳಿ ಹೋ ಎಂದು ಅಳುತ್ತಿರುವ ಎಳೆಕಂದಮ್ಮಗಳು…
ಅವುಗಳನ್ನು ನೋಡಿ ನನ್ನ ಕಂಠ ಕಟ್ಟಿಬಿಟ್ತಿತು.
ನಾನು ಏನೋ ಮಾತಾಡಲೆಂದು ಬಾಯಿ ತೆರೆಯುವಷ್ಟರಲ್ಲಿ ಗುಂಪಿನಲ್ಲಿ ಇದ್ದ ಒಬ್ಬ –
“ನಾಚ್ಕೆ, ಹೇಸಿಗೆ, ಭಯ ಭೀತಿ… ಒಂದೂ ಇದ್ದಂಗಿಲ್ಲ ಬಿಡವ್ವ ನಿಂಗೆ… ಸಂಸಾರಸ್ಥರೋಣಿಯೊಳಗೆ ಬರೋಕೆ ನಿನಗೆಷ್ಟು ಧೈರ್ಯಭೇ… ನಿನ್ನೌವ್ನ… ಇನ್ನೊಂದು ಸ್ವಲ್ಪ ಹೊತ್ನಲ್ಲಿ ನಿನ್ಗೆ ಬುದ್ಧಿ ಕಲಿಸ್ತೀವಿ ತಡಿ… ಗತಿ ಗಣಪತಿ ಆಗತೈತಿ” ಎಂದು ಹಲ್ಲು ಕಡಿದ…
ಬೀಡಿ ಸೇದುತ್ತಿದ್ದ ಇನ್ನೊಬ್ಬ –
“ಅದಕೇನ್ನಂಗೆ ಬುದ್ಧಿ ಹೇಳ್ತಿ ಮಾವಾ… ಸೊಂಟದಾಕಿಟ್ಟುಕೊಂಡಿರೋದ್ನ ತಗೊಂಡು ಒಂದೇ ಏಟಿಗೆ ಕಚಕ್ಕನ್ನಂಗೆ ಹಾಕಿ ಬಿಡು…. ಪೋಲಿಸರ್ನ ನಾನು ಸರಿ ಮಾಡ್ತೀನಿ…” ಎಂದು ಬುಸುಬುಸು ಹೊಗೆ ಬಿಡತೊಡಗಿದ್.
ಕಟ್ಟಿಗೆ ಕೊಡಲಿ ಮಸೆಯುತ್ತಿದ್ದ ಮತ್ತೊಬ್ಬ –
” ಆ ಕತ್ತೆ ಲೌಡಿ… ಚೀಲದಾಗೇನೋ ಬಾಂಬು ಗೀಂಬು ಇಟ್ಕೊಂಡು ಬಂದಂಗದಾಳ ಕಣ್ರಣ್ಣೋ ಹುಷಾರಿ… ನೀವು ಮುಂದಿಂದ ಬಂದು ಹಾಕ್ರಿ… ನಾನು ಹಿಂದಿನಿಂದ ಬಂದು ಹಾಕ್ತೀನಿ ಏನ್ರಮ್ಮೋ…ನೀವು ಒಳಾಕ ನಡೀರಿ… ರಕ್ತ ನೋಡೀದ್ರೆ ಒಬ್ಬೊಬ್ಬ್ರಿಗೆ ಹೆದರಿಕೆ ಆಗತೈತಿ” ಎಂದು ಕೂಗಿ ಮೊನಚು ಪರೀಕ್ಷಿಸಿದ.
ಅಷ್ಟೊತ್ತಿಗಾಗಲೆ ನನ್ನ ಕೊಲೆ ಬೃಂದಾವನದ ಕಟ್ಟೆ ಬಳಿ ನಡೆಯಲಿರುವುದನ್ನು ಕಣ್ತುಂಬ ನೋಡಿ ಆನಂದಿಸಲು ಹೊರಗಡೆ ಕಟ್ಟೆ ಮೇಲೆ, ಕಿಟಕಿ, ಬಾಗಿಲುಗಳಲ್ಲಿ ಮಾಳಿಗೆ ಮೇಲೆ ಎಲ್ಲಿ ಬೇಕೆಂದರಲ್ಲಿ ಜನ ಸೇರಿ ನಿಂತಿದ್ದರು..
ಒಬ್ಬ ಚೂರಿ ಹಿಡಿದುಕೊಂಡು ತೋರಿಸುತ್ತ, ಝಳಪಿಸುತ್ತ ಹಾತ್ತಿರ ಬಂದು –
“ಏಯ್… ಆ ಚೀಲದಾಗ ಏನಿಟ್ಕಂಡೀ… ಬಾಂಬು ಗೀಂಬು ಇಟ್ಕೊಂಡಿದ್ರೆ ಮರ್ಯಾದೆಯಿಂದ ತೋರಿಸಿಬಿಡು. ಇಲ್ಲಾಂದ್ರೆ ಕಚಕ್ ಅಂತ ಕೊಲೆ ಮಾಡ್ಬಿದ್ತೀನಿ” ಎಂದು ಗದರಿಸಿದ…
ಜನ ಹೌದೂ… ಹೌದೂ… ಎಂದು ಕೂಗಿದರು.
ವರಲಕ್ಷ್ಮೀ… ಅಲುಮೆಲಮ್ಮ ಕೂಡ ಹಾಕೂ… ಹಾಕೂ… ಅಂದರು.
ಅವರೆಲ್ಲರ ವರ್ತನೆ ನೋಡಿ ನಾನು ರೋಸಿಬಿಟ್ಟೆ. ತಡೆದುಕೊಳ್ಳಲಾಗಲಿಲ್ಲ. ಕೋಪ ಹೊಕ್ಕಳು ದಾರದಿಂದ ಪುಟಿದು ಬಂತು…

“ಏನಲೋ ಭಡ್ಕಾವ್… ಏನೋ ತಲೆಕೆಟ್ಟೋವಂತ ಸುಮ್ಕಿದ್ರೆ ಬಾಯೀಗ್ ಬಂದಂಗ ಮಾತಾಡ್ತೀರಾ… ಭಾಡ್ಯಾರ… ನೀವೊಂದು ಗಂಡಸ್ರು… ನನ್ನೇನು ಕೈಲಾಗದೋಳಂದ್ಕಿಂಡೀರೇನು? ಐದಾರು ಖೂನಿ ಮಾಡಿ ದಕ್ಕಿಸಿಕೊಂಡಾಕಿ ನಾನು… ನನಗ್ಯಾರು ಹಿಂದಿಲ್ಲ ಮುಂದಿಲ್ಲ ಅಂದ್ಕೊಂಡಿರೇನು? ನಿಮ್ಮನ್ನೆಲ್ಲ ಕಡಿಸಿ ಪುಟ್ಟಿಗೆ ತುಂಕೊಂಡು ಹೋಗಿ ಕರಗಲ್ಲಿಗೆ ಹೆಡೆ ಹಿಡ್ದೇನು ಹುಷಾರ್…” ಎಂದು ನಾನು ಕತ್ತಿಗೆ ಕೈಹಚ್ಚಿ ತಳ್ಳಲು ಅವನು ಅಯ್ಯಾಯ್ಯೋ ಎಂದರಚುತ್ತ ಅಷ್ಟು ದೂರ ಹೋಗಿ ಬಿದ್ದನು.

ಈಕೇನು ಮನುಸ್ಯೋಳೋ ರಾಕ್ಷಸಿಯೋ ಎಂದು ಉಳಿದವರು ಹೆದರಿ ಹಿಂದೆ ಸರಿದರು. ಅತ್ತೆ ಸೊಸೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಗದಗದ ನಡುಗತೊಡಗಿದರು.
ಅವರ ಸ್ಥಿತಿ ಕಂಡು ನನ್ನ ಕರುಳು ಕರಗಿತು.
“ಏನವ್ವೋ… ನನ್ ಸವತಿ… ಬಾ ಇಲ್ಲಿ” ಎಂದು ಕರೆದೆ.
“ಏನೇ ಹಾದಗಿತ್ತಿ… ನನ್ಗೇ ಸವತಿ ಅಂತೀ‌ಏನೆ? ಎಂದು ಅಲ್ಲಿಂದಲೇ ಪ್ರತಿಭಟಿಸಿದಳು.
“ನಿನ್ನ ಸವತಿ ಅಂದೆ ಮತ್ತೇನು ಕರಿಲಭೇ… ನಿನ್ನಂಗ ನಾನೂ ಶಾಮನ ಕೂಡೆ ಬಾಳುವೆ ಮಾಡಿದಾಕಿ ಅದೀನಿ… ನೀನು ನಂಗೆ ತಂಗಿ ಆಗಬೇಕೋ; ಅಕ್ಕ ಆಗಬೇಕೋ ನಂಗೊತ್ತಿಲ್ಲ… ಕಷ್ಟದ ಕಾಲ್ದಾಗ ನೀನು ನಿನ್ನ ಗಂಡನ್ನ ನೋಡ್ಕೊಲಿಲ್ಲಬೇ… ಅವ್ನಲ್ಲಿ ಉಪಾಸ ವನ್ವಾಸ ಮಾಡ್ತಿದ್ದಾಗ ನೀನಿಲ್ಲಿ ಕೈಲಿ ತಾಳಿ ಬೊಟ್ಟೆಡಕೊಂಡು ಸತ್ನಾರಾಣನ ಪೂಜೆ ಮಾಡ್ತಿದ್ದೀ…” ಎಂದು ನಾನು ಹೇಳುತ್ತಿದ್ದಾಗ ಅಲುಮೇಲಮ್ಮ ಒಂದು ಕೈಯನ್ನು ಸೊಂಟದ ಮೇಲಿಟ್ಟುಕೊಂಡು ಇನ್ನೊಂದು ಕೈಯನ್ನು ಗಾಳಿಯಲ್ಲಿ ಎತ್ತಿ ತಿರುವುತ್ತ ಬಂದು ಅಡ್ಡ ಬಾಯಿ ಹಾಕಿತು.
“ಏನೇ ಶೂದ್ರ ಮುಂಡೇದೆ… ನನ್ ಸೊಸೀನ ಬಾಯಿಗೆ ಬಂದಂಗ ಅನ್ತಾ ಇದ್ದೀ. ನಿನ್ನ ನಾಲಿಗೆ ತುಂಬ ಉದ್ದ ಆಗಿದೆಯಲ್ಲಾ…”
“ಬೇ ಮುದ್ಯೇದೇ.,.. ನಮ್ಮ ಅನಸೂವಕ್ಕನ ಬಾಯಿಗೆ ಬಂದಂಗ ಅಂದ್ರ ನಾಲಗೇನ ಕಿತ್ತು ಕೈಯಾಗ ಕೊಡ್ತೀವಿ ನೋಡು… ಶಾಮನ್ನ ಕಳ್ಕೊಂಡು ನಾವು ಅನುಭವಿಸ್ತಿರೋದು ಆ ಪರಮಾತ್ಮನಿಗೇ ಗೊಟ್ತು… ನೀವು ತಾಯಾಗಿ, ಹೆಂಡ್ತಿಯಾಗಿ ಅದ್ರೊಂಚೂರು ದುಕ್ಕನಾದ್ರು ಅನುಭೋಗಿಸ್ತಿದ್ದೀರಾ? ನಿಮ್ಗೆ ನಿಮ್ ಜಾತೀನೆ ಹೆಚ್ಚಯ್ತು ಹೊರ್ತು ಅವನು ಹೆಚ್ಚಗ್ಲಿಲ್ಲ… ಹೆಂಗದೀರಿ ನೋಡ್ರಿ ಒಬ್ಬೊಬ್ಬ್ರು…” ಎಂದು ತಾನೆ ಗುಂಪು ಕಟ್ಟಿಕೊಂಡು ಬಂದ ರಾಖೇಶ್ ಅಸಲೀ ಮಾತಾಡಿದ.
ನಾನು ಅವನ ಕಡೆ ದುರುಗುಟ್ಟಿ ನೋಡುತ್ತ –
“ಲೋ ನಾವತ್ತೆಸೊಸ್ತ್ರು ಹೆಂಗಾರ ಜಗಳ ಆಡ್ಕೊಂತೀವಿ… ನಿನ್ಯಾವೊನೋ ಅಡ್ಡ ಬಂದು ಹೇಳ್ಲಾಕ…” ಎಂದೆ.
ಅದಕ್ಕಿದ್ದು ಅವನು –
“ನನ್ನೆ ಯಾರು ಅಂತಿ ಏನಭೇ ಯವಾ… ಶಾಮನ ಹೆಣಕೆ ಬೆಂಕಿ ಹಚ್ಚೋನಾಗ್ಲೆ ಮರ್ತುಬಿಟ್ರೇನು… ನಾನು ಶಾಮನ ಮಗ ಶಿವರಾಮ ಶಾಸ್ತ್ರಿ… ನೋಡು ಇನ್ನೂ ಮೈಮೆಲೆ ಉಳಕೊಂಡವೆ” ಎಂದು ಜುಟ್ಟವನ್ನು; ಅಂಗಿ ಎತ್ತಿ ಜನಿವಾರವನ್ನು ತೋರಿಸಿದ.
ಶಾಮನ ಪ್ರಥಮ ಪುಣ್ಯ ತಿಥಿ ಮಾಡಿ ಎರಡೇ ದಿನಗಳಾಗಿದ್ದರಿಂದ ಇನ್ನು ಅವೆಲ್ಲ ಮೈಮೇಲೆ ಉಳಿದುಕೊಂದಿದ್ದವು.
ರಾಖೇಶ ತೋರಿಸುತ್ತಲೆ ಎಲ್ಲರು ಗೊಳ್ಳನೆ ನಗಾಡಿದರು…
ಓಹ್… ಶಾಮಾಶಾಸ್ತ್ರಿ ಮಗ ತಂದೆಗಿಂತ್ಲೂ ದೊಡ್ಡೋನದಾನೆ… ದೊಡ್ಡ ವಯಸ್ಸಿನ ಮಗ್ನೀಗೆ ಚಿಕ್ಕ ವಯಸ್ಸಿನ ತಂದೆ… ವಂಡರ್ಫುಲ್… ಜನ ಗಟ್ಟಿಯಾಗಿ ಗೊಣಗಿಕೊಂಡರು.
“ಓಹೋಹೋ… ಅವನೊಬ್ಬ ಮಗ್ನಂತೆ! ಇವಳೊಬ್ಬ ಗರತಿಯಂತೆ… “ಮುಂಗೈ ತಿರುವುತ್ತ ಮುಂದೆ ಬಂದು ಅಲುಮೇಲಮ್ಮ ಮುಂದುವರಿದು ಹೇಳಿದಳು – “ಪತಿವ್ರತೆ ಅಂದ್ರೆ ಸಾಮಾನ್ಯ ಮನುಷ್ಯಳಲ್ಲಿ ಕಣೇ… ಕನಸು ಮನಸಿನಲ್ಲೂ ಪಂಚೇಂದ್ರಿಯಗಳಲ್ಲೂ ಪತಿ ಪರಮಾತ್ಮನನ್ನು ಇಟ್ಟುಕೊಂಡು ಅವನ ನೆನಪಿನಲ್ಲಿ ದೇಹ ಸವೆಸೋಳು. ಇದೆಲ್ಲ ನಿನ್ನಂಥ ಶೂದ್ರಳಿಗೆ ಹ್ಯಾಂಗ ಗೊತ್ತಾಗಬೇಕು?”
ಆ ಸನ್ನಿವೇಶ ಕೋರ್ಟಿನಂತಾಗಿ ಬಿಟ್ಟಿತ್ತು. ಪಾತಿವ್ರತ್ಯವನ್ನೇ ಕಟಕಟೆಯಲ್ಲಿ ನಿಲ್ಲಿಸಿ, ಅದರ ಪರ ತನ್ನ ಮೂಗಿನ ನೇರಕ್ಕೆ ವಾದ ಮಂಡಿಸುತ್ತಿರುವ ಆ ಮುದುಕಿಯನ್ನು ನೋಡಿ ನನ್ನ ಮನಸ್ಸಿಗೆ ಅಯ್ಯೋ ಎನ್ನಿಸಿತು.
“ಅತ್ತೇ… ಚಲೋ ಮಾತಾಡ್ತೀಯಮ್ಮಾ… ಗಂಡೆಂಭೋನು ಸಾಯುವಾಗ ಬಂದು ಅವನ ಬಾಯಾಗ ಒಂದ್ ಚಮಚೆ ನೀರು ಹಾಕಲಾಗ್ಲಿಲ್ಲಲ್ವಲ್ಲ ಈ ನಿಮ್ಮ ಸೊಸೆ; ಅವನು ಬದುಕಿದ್ದಾಗ ಜಾತಿ, ಕುಲ, ಮತ ಅಂತ ಉರಿಸಿಕೊಂಡು ತಿಂದ್ಲಲ್ಲಾ ಈ ನಿಮ್ ಸೊಸೆ; ಅವನು ಸತ್ತಮ್ಯಾಕೆ ಸುಂಗೇರಿಗೆ ಹೋಗಿ ತಲೆ ಬೋಳಿಸಿಕೊಂಡು ಬಂದಿದ್ದಾಳಲ್ಲ ಈ ನಿಂ ಸೊಸೆ, ಈಕೆ ಮಾತ್ರ ಪತಿವ್ರತೆ ನಾವೆಲ್ಲ ಸೂಳೇರೇನು! ಈಕೆ ತನ್ನ ಗಂಡನ್ನ ಸರಿಯಾಗಿ ಪ್ರೀತಿಸಿದ್ದಿದ್ರೆ ಅವನ್ಯಾಕೆ ನಮ್ಮಂಥ ಸೂಳೆರ ಸೆರಗಿಗೆ ಬೀಳ್ತಿದ್ದ… ನಿಮ್ ಪಾತಿವ್ರತ್ಯಾನ ಒಯ್ದು ಬಟ್ಟೆ ಅಂಗಡಿ ಮುಂದೆ ಗೊಂಬಿ ಮಾಡಿ ನಿಲ್ಲಿಸ್ರೀ…” ಎಂದು ಮುಂತಾಗಿ ಸಿಟ್ಟು ತಾಳಲಾರದೆ ಅಂದುಬಿಟ್ಟೆ.
ಆಗ ನಿಂಗಮ್ಮಜ್ಜಿ ಎಂಬ ಮುದುಕಿ (ಆಕಿ ನಿಮ್ಮ ಖಾಸಾ ಅಜ್ಜಿ ಅಂತ ಆಮೇಲೆ ನನಗೆ ಗೊತ್ತಾಯಿತು) ಮುಂದೆ ಕುಪ್ಪಳಿಸಿ ನಿಂತು –
“ಸರ್ಯಾಗಿ ಹೇಳ್ದೇ ನಮ್ಮವ್ವಾ… ಶಬ್ಬಾಷ್… ನೀನು ಇವ್ರಿಗೆ ಬಲು ಬಲು ಹೇಳ್ದೆ… ಅವನಾಗ್ಲೆ ನಮ್ ಪಾಲಿಗೆ ಸತ್ತಾನೆ ಹೋಗ ಬೇ ಅಂದು ಬಿಟ್ರು… ಆಗಿದ್ದಾಗಿ ಹೋಯ್ತು… ಅವರವ್ರು ಅವರವ್ರ ಕರುಮಾನ ಅನುಭೋಗಿಸ್ತಾರೆ ಬಿಡು… ಅದಿರ್ಲಿ ನೀನು ಬಂದ ಕಾರಣ ಏನೆಂಬುದ್ನ ಬಿಡಿಸಿ ಹೇಳಿ ಬಿಡವ್ವಾ…” ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿತು.
ಸುತ್ತಮುತ್ತ ನಿಂತಿದ್ದವರೂ, ಕೈಯಲ್ಲಿ ತಲಾ ಒಂದೊಂದು ಮಾರಕಾಯುಧಗಳನ್ನು ಹಿಡಿದುಕೊಂಡಿದ್ದವರೆಲ್ಲರೂ ಮುಂದೆ ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಎಂಬಂಥ ಮಾತುಗಳನ್ನೇ ಆಡಿದರು.
“ಆಯ್ತುರವ್ವಾ… ಆಯ್ತು… ನಾನೇನು ಇದ್ರ ಕುಟಾಗೆ ಕಾಲು ಕೆದ್ರಿ ಜಗಳಾಡಲಕೆ ಬಂದಿಲ್ಲ…” ಎಂದು ಹೇಳಿ ವರಲಕ್ಷ್ಮಿ ಕಡೆ ತಿರುಗಿ “ಏನವ್ವಾ ತಂಗಿ ವರಲಕ್ಷ್ಮೀ?… ಮಾಡಿದ ಪಾಪ, ಕರುಮಕ್ಕೆ ಮನವೇ ಸಾಕ್ಷೀ… ತೋಡಿದ ಬಾವಿಗೆ ಜಲವೇ ಸಾಕ್ಷೀ ಅಂತ ಹಿರೇರು ಹೇಳ್ಯಾರು… ನೀನೇ ಮಾ ಪತಿವ್ರತೆ ಆಗಿರು… ಅದ್ಕೆ ನಂದೇನು ತಕರಾರಿಲ್ಲ… ಮನಸ್ನ ಕಂಟ್ರೋಲು ಮಾಡ್ಕೊಂಡು ರವ್ವೋಟು ಮುಂದಕ ಬಾ…” ಎಂದು ಕರೆದೆ.
ಮುದುಕಿ ಸೊಸೆ ಕಡೆ ತಿರುಗಿ –
“ಏಯ್… ವರಲಕ್ಷ್ಮೀ… ಇವತ್ತು ಮಾರ್ಗಶಿರ ಶುದ್ಧ ಚತುರ್ದಶಿ ಮಂಗಳವಾರ, ಪುಷ್ಯ ನಕ್ಷತ್ರ ಎಂಬುದನ್ನು ಮರೆತು ಮುಂದಕ ಹೋಗಬೇಡ… ಇವತ್ತು ನಿನ್ನ ಜಾತಕದಲ್ಲಿ ಮರಣಯೋಗ ಅದೆ… ಆ ಶೂದ್ರ ಹೆಂಗಸು ಕುತ್ತಿಗಿ ಹಿಚುಕಿ ಕೊಂದ್ರೂ, ಕೊಂದಾಳು…” ಎಂದು ವಿಚಿತ್ರವಾಗಿ ಮಾತಾಡಿತು.
ಅದರ ಮಾತಿಗೆ ನಗಬೇಕೋ ಅಳಬೇಕೋ… ಒಂದೂ ನನಗೆ ಅರ್ಥವಾಗಲಿಲ್ಲ.
“ಏಯ್… ಅತ್ತೆಮ್ಮ… ನಾನೇನ್ ನಿನ್ ಸೊಸೀನ ಕೊಲ್ಲಾಕೆ ಬಂದಿಲ್ಲವ್ವೋ… ಬಿಡುಬಿಡು” ಅಂದೆ ಒಳ್ಳೆ ಮಾತಿನಿಂದ ಹೇಳ್ತಿದೀನಿ ನೋಡು… ನಮ್ಮ ಆತೆಯವರ್‍ನ ನೀನತ್ತೆ ಅಂದ್ರೆ ನಾನು ಸುಮ್ನಿರಾಕಿಲ್ಲ… ಅವರ್‍ನ ನುಂಗಿ ನೀರು ಕುಡ್ದು ನಮ್ಮನ್ನೆಲ್ಲ ಕಣ್ಣೀರಲ್ಲಿ ಕೈತೊಳೆದು ಬದುಕುವಂತೆ ಮಾಡಿರುವಿ. ಇದು ಸಾಲದೆ… ಈಗ ಮನೆ ಮುಂದೆ ನಿಂತ್ಕೊಂಡು ವಂಶದ ಗೌರವ ಕಳೀತಾ ಇದ್ದೀ… ಇಲ್ಲಿಂದ ಹೊರಟುಹೋಗಿ ಬಿಡು… ನಮ್ಮ ನಿಟ್ಟುಸಿರು ತಾಕಿದ್ರೆ ನಿಂಗೆ ಒಳ್ಳೇದಾಗೋದಿಲ್ಲ…” ಎಂದು ನಿಂತಲ್ಲಿಂದಲೇ ವರಲಕ್ಷ್ಮಿ ಮಾತಾಡಿದಳು.
ಮುಂದಕ್ಕೆ ಬಾ ಅಂತ ನಾನು; ಬರೋದಿಲ್ಲ ಅಂತ ಆಕೆಯೂ ಸ್ವಲ್ಪ ಹೊತ್ತು ವಾದ ಮಾಡಿದೆವು… ಹಾವು ಸಾಯದು… ಕೋಲು ಮುರಿಯದು… ಎಂಬಂಥ ಲೆಕ್ಕಾಚಾರ ಮುಂದುವರಿಯಿತು.
ನಿಂಗಮ್ಮಜ್ಜಿ ಮಧ್ಯಸ್ತಿಕೆ ವಹಿಸದಿದ್ದಲ್ಲಿ ನಮ್ಮ ವಾದ ಹಾಗೇ ಮುಂದುವರೆಯುತ್ತಿತ್ತೊ ಏನೋ!
“ನಿಮ್ಮ ಮಡಿಗಿಷ್ಟು ಬೆಂಕಿ ಹಾಕ್ತು… ಬಾರಬೇ ಬಾ… ಆಕಿ ಏನು ಮಾಡ್ತಾಳೊ ನಾನು ನೋಡ್ತೀನಿ” ಎಂದು ನಿಂಗಮ್ಮಜ್ಜಿ ಮುನ್ನುಗ್ಗಿ ವರಲಕ್ಷ್ಮಿಯನ್ನು ನನ್ನ ಮುಂದಕ್ಕೆ ಎಳೆದುಕೊಂಡು ತಂದಿತು.
“ನನ್ ಸೊಸೆಯನ್ನು ಕಾಪಾಡ್ರಿ ಯಾರಾದ್ರು?… ನನ್ ಮೊಮ್ಮಕ್ಕಳ ಗತಿ ಹೇಗೆ?” ಎಂದು ಮುದುಕಿ ಅಲುಮೇಲಮ್ಮ ಬಾಯಿ ಬಡಿದು ಅಬ್ಬರಿಸತೊಡಗಿದಳು.
ಮಕ್ಕಳು ಕಿಟಾರನೆ ಕಿರುಚಿ ಅಳತೊಡಗಿದವು.
ಮುಂದೆ ನಿಂತು ಜಲಜಲ ಬೆವೆಯತೊಡಗಿದ ವರಲಕ್ಷ್ಮಿಯ ಮೈತುಂಬ ಅಲಂಕರಿಸಿಕೊಂಡಿದ್ದ ವೈಧವ್ಯವನ್ನು ನೋಡಿ ನನ್ನ ಕರುಳು ಕಿತ್ತು ಬಂತು. “ತಂಗೀ” ಎಂದು ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು ತಡೆಯಲಾರದೆ ಕಣ್ಣೀರು ಸುರಿಸಿದೆ. ಜನ ಹೋ ಎಂದು ಕೂಗಿದರು.
“ನನ್ನ ಸೊಸೇನ ಕೊಲೆ ಮಾಡ್ತಿದಾಳೆ ಇವ್ಳೂ…” ಮುದುಕಿ ಬಾಯಿ ಬಡಿದುಕೊಂಡಿತು.
ಒಂದು ವಿಚಿತ್ರವೆಂದರೆ, ವರಲಕ್ಷ್ಮಿಯ ಕಣ್ಣೀರಿಂದ ನನ್ನ ವಕ್ಷಸ್ಥಳ ಒದ್ದೆ ಆಯಿತು.
ಆಮೇಲೆ ತೆಕ್ಕೆ ಸಡಲಿಸಿ ಎರಡು ರಟ್ಟೆಗಳನ್ನು ಹಿಡಿದುಕೊಂಡು –

“ವರಲಕ್ಷ್ಮೀ ನೀವೆಲ್ರು ತಿಳಿಕೊಂಡಿರಂಗೆ ನಾನೇನು ರಾಕ್ಷಸಿ ಅಲ್ಲ… ನಿನ್ನ ಸಂಕಟ ನಂಗೂ… ಅರ್ಥಾಗ್ತದೆ… ಅದರಂಗೆ ನನ್ ಸಂಕಟಾನು ನಿಮ್ಗೆ ಅರ್ಥಾಗಬೇಕು… ಅರ್ಥ ಆಗದಿದ್ರೂ ಅಷ್ಟೇ ಹೋಯ್ತು… ಅದರ ಬಗ್ಗೆ ನಂಗೇನು ಚಿಂತೆ ಇಲ್ಲ, ನೀನು ನಿನ್ನತ್ತೆ, ಮಕ್ಕಳನ್ನ ಕಟ್ಕೊಂಡು ಮುಂದೆ ಸುಖವಾಗಿರಬೇಕಂತಾನೆ ನಾನಿಲ್ಲಿಗೆ ಬಂದಿರೋದು… ತಗಾ..” ಎಂದು ಆಕೆಗೆ ಹಂಡೆ ಚೀಲವನ್ನು ಕೊಡಲು ಪ್ರತ್ನಿಸಿದೆ.
ಇದು ಯಾರಿಗೂ ಗೊತ್ತಗಬಾರದೆಂಬ ಕಾರಣದಿಂದಲೇ ನಾನು ಹಾಗೆ ಗುಟ್ಟು ‘ಹೊಡೆಬಡಿಯದೆ’ ಗುಟ್ಟಾಗಿ ಕೊಡುವ ಪ್ರಯತ್ನ ಮಾಡಿದ್ದು. ಅದರಲ್ಲಿ ಅಪಾಯಕಾರಿಯಾದ ವಸ್ತುಗಳಿವೆ ಎಂದು ತಪ್ಪಾಗಿ ಭಾವಿಸಿ ಆಕೆಯಾಗಲೀ, ಆಕೆಯ ಅತ್ತೆಯಾಗಲೀ ಸನಿಹಕ್ಕೆ ಬಾರದೆ ದೂರ ಸರಿದು ನಿಂತರು. ನಿಂಗಮ್ಮಜ್ಜಿ ಎಷ್ಟು ಹೇಳಿದರೂ ಅವರು ಅದನ್ನು ಮುಟ್ಟಲಿಲ್ಲ…

ಆಗ ನಾನು… ಹಂಡೇ ಚೀಲವನ್ನು ಬಕಬೋರಲು ಮಾಡಿ ಸುರಿದೆ… ನೆಲದ ಮೇಲೆ ಪುತುಪುತು ಅಂತ ಕಂತೆ ಕಂತೆ ನೋಟುಗಳು ಬೀಳುತ್ತಲೆ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಆ ಹೊತ್ತಿಗಾಗಲೇ ಬದುಕಲು ಕೆಲವು ಗೌರವಾನ್ವಿತ ಉಪಕಸುಬುಗಳ ಹುಡುಕಾಟದಲ್ಲಿದ್ದ ಅವರಿಗೆ ಆ ಅಪಾರ ಹಣ ನೋಡಿ ಆಶ್ಚರ್ಯವಾಯಿತಾದರೂ ಅದನ್ನು ತೆಗೆದುಕೊಳ್ಳಲು ಹಿಂಜರಿದರು. ಇದು ನನ್ನ ಸ್ವಂತದ್ದಲ್ಲವೆಂದೂ, ನಿನ್ನ ಗಂಡನ ಗಳಿಕೆ ಎಂದೂ ಪರಿಪರಿಯಾಗಿ ಹೇಳಿದರೂ ಅವರು ಮುಟ್ಟಲಿಲ್ಲ. ತಮಗಿದರ ಅಗತ್ಯವಿಲ್ಲವೆಂದೂ ತಾವು ಸುಖವಾಗಿರುವೆವೆಂದೂ… ನೀನೇ ತೆಗೆದುಕೊಂಡು ಹೋಗಿ ತಿಂದುಂಡು ಸುಖವಾಗಿರು ಎಂದೂ ಅವರ ವಾದಿಸತೊಡಗಿದರು. ಅವರ ಈ ವರ್ತನೆಯಿಂದ ಬೇಸತ್ತು ರಾಖೇಶ “ಏಯ್ ಅವರಿಗೆ ಬೇಡಂದ್ಮೇಲೆ ಯಾಕ ಕೊಡ್ತೀ… ತಗಂಡು ಬಂದುಬಿಡು… ಅದೇ ರೊಕ್ಕದಾಗ ಶಾಮನ ಹೆಸರಿನಲ್ಲಿ ಸಾಲಿಗುಡಿ ಕಟ್ಟಿಸಿದ್ರಾಯ್ತು” ಎಂದು ಅಡ್ಡಬಾಯಿ ಹಾಕಿದ.
ಅವನದೂ ಒಳ್ಳೆ ಆಲೋಚನೆಯೇ. ಆದರೆ ಹಾಗೆ ವೆಚ್ಚ ಮಾಡಲು ನನಗ್ಯಾವ ಹಕ್ಕಿದೆ ಎಂದು ಯೋಚಿಸಿದೆ. ಯಾವ ನೆಲೆ ಇಲ್ಲದೆ ಶಾಮನ ತಾಯಿ, ಹೆಂಡತಿ, ಮಕ್ಕಳು ಮರಿ ಮುಂದೆ ಜೀವನ ಸಾಗಿಸುವುದಾದರೂ ಹೇಗೆ?
ಆಗಲೆ ತುಸು ಕರಗಿದ್ದ ವರಲಕ್ಷ್ಮಿಗೆ –

“ನೋಡಮ್ಮ ತಂಗಿ… ನನ್ನ ಮಾತು ಕೇಳಿ ಸುಮ್ಮನೆ ತಗೋ… ನಾನು ನೀನಂದ್ಕೊಂಡಂಥೋಳಾಗಿದ್ರೆ ನಾನಿದ್ನೆಲ್ಲ ತಗಂಡಿಲ್ಲಿಗೆ ಯಾಕ ಬರ್‍ತಿದ್ದೆ ಹೇಳು… ನನ್ಗೆ ಬದುಕೋಕೆ ನೂರೆಂಟು ಹಾದಿಗಳು ಗೊತ್ತದಾವೆ… ನಾನು ಹೇಳಿ ಕೇಳಿ ವೇಶ್ಯೆ…ಯಾರತ್ರಾರ ಮಲಿಕ್ಕೊಂಡ್ರೆ ಸಾಕು ಸಾವ್ರಾರ್ರುಪಾ‌ಐ ಪಾದದ ಬುಡಕೆ ಬಂದು ಬೀಳ್ತಾವೆ… ಆದರೆ ನೀನಾಗಲೀ, ನಿನ್ನ ಬದುಕಾಗ್ಲಿ ಹಾಗಲ್ಲ… ನೀನು ಹೇಳಿ ಕೇಳಿ ವಿಧವೆ… ಪರಪುರುಷನ ಕಡೆ ನೋಡಿದ್ರೆ ಪಾಪ ಬರ್ತದೆ ಎಂದು ತಿಳಿದುಕೊಂಡು ಬದುಕುತ್ತಿರುವಾಕಿ… ಇಂಥ ನೀನು ಈ ದುಬಾರಿ ಪ್ರಪಂಚದಾಗ ಸಂಸಾರಾನ ಹೆಂಗೆ ನಿಭಾಯಿಸ್ತಿ ಹೇಳು?… ಅದ್ಕೆ ಹೇಳ್ತಿದೀನಿ ತಗೋ… ಈ ರೊಕ್ಕದ ಮೇಲೆ ನನಗ್ಯಾವ ಹಕ್ಕು ಅಧಿಕಾರ ಇಲ್ಲ… ಅವನ ಕೈಯಿಂದ ತಾಳಿ ಕಟ್ಟಿಸಿಕೊಂಡು ಒಂದು ಇತ್ತು ಒಂದು ಇಲ್ಲವೆಂಬಂತೆ ಬದುಕಿದ ನಿನಗೇ ಇದರ ಹಕ್ಕು ಇರುವುದು… ಎಂದು ಆಕೆಗಷ್ಟೆ ಕೇಳಿಸುವಂತೆ ಪಿಸುಪಿಸು ಮಾತಾಡಿದೆ.

ಆಷ್ಟೊತ್ತಿಗಾಗಲೇ ಪಾತಾಳಕ್ಕಿಳಿದು ಕರಗಿ ಹೋಗಿದ್ದ ಓಣಿ ಮಂದಿ ಮೂಕರಾಗಿಬಿಟ್ಟಿದ್ದರು. ನನ್ನ ಕಡೆ ಮೆಚ್ಚುಗೆ ಅಭಿಮಾನ ಹೆಮ್ಮೆಯಿಂದ ನೋಡುತ್ತಿದ್ದರು.
ನಿಂಗಮ್ಮಜ್ಜಿ ಕಣ್ಣೀರು ಒರೆಸಿಕೊಳ್ಳುತ್ತ ತೆಗೆದುಕೊಂಡು ಒಳ್ಗೆ ಹೋಗುವಂತೆ ಒತ್ತಾಯಿಸಿತು. ಆತ್ತೆ ಸೊಸೆಯರಿಬ್ಬರು ಹಣವನ್ನು ತಂತಮ್ಮ ಸೆರಗಿನಲ್ಲಿ ತುಂಬಿಕೊಳ್ಳುತ್ತಿರುವಾಗ ನಾನು ಓಡಿಹೋಗಿ ಮಕ್ಕಳಿಬ್ಬರನ್ನು ಅಪ್ಪಿಕೊಂಡೆ… ಕೊಸರುತ್ತಿದ್ದ ಅವಕ್ಕೆ ಮುದ್ದು ಕೊಟ್ಟೆ… ಎತ್ತಿಕೊಂಡೆ… ಹೆಣ್ಣಿನ ಸ್ವಭಾವ ಒಮ್ಮೊಮ್ಮೆ ಎಷ್ಟೊಂದು ಕಠೋರವಾಗಿ ವರ್ತಿಸುತ್ತದೆ ಎಂಬುದಕ್ಕೆ ನಿದರ್ಶನವಾಗಿ ಅವರು ನನ್ನಿಂದ ಮಕ್ಕಳನ್ನು ಕಸಿದುಕೊಂಡು ಒಳಗೆ ಹೊರಟುಹೋದರು. ಆವರಿಂದ ಯಾವುದೇ ಸತ್ಕಾರ ನಿರೀಕ್ಷಿಸುವುದು ಸಾಧ್ಯವಿರಲಿಲ್ಲ.
ಮೂಕ ವಿಸ್ಮಿತರಾಗಿ ನೋಡುತ್ತಿದ್ದ ಓಣಿ ಜನರ ಕಡೆ ಕೈಮುಗಿದು ಅಲ್ಲಿಂದ ಹೊರಟೆ.
ಮಾಜಿ ಕೌನ್ಸಿಲರ್ ನಿಂಗಮ್ಮಜ್ಜಿ ನಮ್ಮನ್ನೆಲ್ಲ ಮನೆಗೆ ಕರೆದುಕೊಂಡು ಹೋಗಿ ನವಣಕ್ಕಿ ಅನ್ನ, ಕಡ್ಲೆ ಬಜ್ಜಿ, ಕಟಂಬ್ಲಿ, ಮಜ್ಜಿಗೆ, ಕರಿದ ಮೆಣಸಿನಕಾಯಿ… ಎಲ್ಲವನ್ನು ಊಟಕ್ಕಿಟ್ಟು ಸಂತೋಷಪಟ್ಟಿತು.
ನಾನು ಅಲ್ಲಿಂದ ಕೊತ್ತಲಗಿಗೆ ಮರಳಿ ಬಂದೆ… ಯಥಾ ರೀತಿ ಜೀವನ ನಡೆಸುತ್ತಿರುವ ಆಗೊಮ್ಮೆ, ಈಗೊಮ್ಮೆ ಮಕ್ಕಳನ್ನು ನೋಡಲೋಸುಗ ಅನಂತಪುರಕ್ಕೆ ಹೋಗುತ್ತಿರುತ್ತೇನೆ… ಅಷ್ಟೆ… ಅವರ ಕೊಟ್ಟೂರಿನ ಮನೆಯನ್ನು ನಾನೇ ಕೊಳ್ಳಬೇಕೆಂದು ಪ್ರಯತ್ನಿಸಿದೆ… ಅಷ್ಟರಲ್ಲಿ ನಿಮ್ಮ ತಂದೆಯೇ ಕೊಂಡರೆಂದು ತಿಳಿಯಿತು.
ಹೀಗೆ ಹೇಳ್ತಾ ಹೋದ್ರೆ ರಾಮಾಯಣ ಆಗ್ತದೆ…. ಎಂದು ಗದ್ಗದಿತಗೊಂಡು ಆ ಸ್ತ್ರೀಪಾತ್ರವು ಮ್ಲಾನವದನವಾಯಿತು. ಅದು ಹೇಳಿದ್ದು ಕೇಳಿ ನಾನು ಮೂತ್ರದಲ್ಲಿ ಮೀನು ಹುಡುಕುವಂಥವರೇ ತುಂಬಿಕೊಂಡಿರುವ ಸದ್ಯದ ಪ್ರಪಂಚದಲ್ಲಿ ಇಂಥವರು ಇರುವುದು ಅಪರೂಪ ಅಂದುಕೊಂಡೆ. ಲೇಖಕನಾಗಿ ನನ್ನಲ್ಲಿ ಅನಸೂಯಮ್ಮನ ಬಗ್ಗೆ ತುಂಬ ಗೌರವ ಮೂಡಿತು.

“ಮೇಷ್ಟ್ರೇ… ನಾನಿನ್ನು ಹೋಗ್ಲಾ… ಇನ್ನು ಮೇಲಾದ್ರು ಬಣ್ಣ ಹಚ್ಚಿಕೊಂಡು ಜನರ ಮುಂದೆ ಕಾಣಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೀನಿ… ಎಲ್ಲಿವರ್ಗೂ ನಾನಿಂಗ ಶಾಮನ ಫೋಟೋನ ಎದುರಿಟ್ಟುಕೊಂಡು ಕೂಡ್ರಲಿ? ಫೋಟೋ ಏನು ಸುಮ್ಮನೆ ಮಂದಿಗೆಲ್ಲ ಅನ್ನ ಕೊಟ್ತೀತಾ; ಬಟ್ಟೆ ಕೊಟ್ತೀತಾ… ಇರೋರೆಲ್ಲ ಸುಖವಾಗಿದ್ದಾರೆ… ನಾವು ಮಾತ್ರ ಒಂದಕ್ಕಿದ್ರೆ ಒಂದಕ್ಕಿಲ್ಲೆಂಬಂತಿರೋದು. ಈ ಕಾದಂಬರಿ ಓದಿದ ಮೇಲೂ ಮಂದಿ ಈಕೆ ಏನು ಘನಸ್ಥಳು ಎಂದಾಡಿಕೊಳ್ದಿರಾರ… ಅಷ್ಟೊಂದು ಇಡಿಗಂಟ್ನ ತಗಂಡ ಆ ಅಲುಮೇಲಮ್ಮ, ವರಲಕ್ಷ್ಮಿಯವರು ಅರ್ಧ ತಿಂದು ಅರ್ಧ ತಂದ್ಕೊಟ್ಟಾಳಂತ ಬಾಯಿಗೆ ಬಂದಂಗ ಮಾತಾಡಿದ್ರು… ಇನ್ನು ಉಳಿದವರ ಪಾಡೇನಂತೀನಿ! ಇಂಥ ಅಪವಾದಗಳು ಇಂದಿಗೂ ತಪ್ಪಿಲ್ರೀ… ಅಂಥ ಸೀತೆ ದ್ರೋಪದಿಯಂಥೋರೆ ಜನ್ರ ಬಾಯಾಗ ಬಿದ್ದು ವಿಲವಿಲಾಂತ ಒದ್ದಾಡಿದ್ರು… ಇನ್ನು ನಮ್ಮಂಥೋರ ಪಾಡೇನ್ರಿ… ಒಂದೊಂದು ನಾಟಕದಾ ಒಂದೊಂದು ಪಾರ್ಟು ಮಾಡಿ ನಾವು ಸುಖವಾಗಿರ್‍ತೀವಿ ಬಿಡ್ರಿ… ಆದರೆ ಸದಾ ಕಾಲ ಮಹಾಪತಿವ್ರತೆ ಥರ ಇದ್ಕೊಂಡೆ ರಂಡೆಮುಂಡೆ ಪಾತ್ರ ಮಾಡ್ತಿರಬೇಕಲ್ಲ ಆ ವರಲಕ್ಷ್ಮಿ… ಅಂಥೋರ ಗತಿ ಏನ್ರಿ? ಮೊನ್ನಂದಿನ ನಾನು ಹೋದಾಗ ವರಲಕ್ಷ್ಮಿಯೂ ಶ್ರೀವಲ್ಲಭನ ಹೆಂಡತಿಯೂ ಜಗಳ ಆಡ್ತಿದ್ರು… ಅದ್ನ ಕೇಳಿ ನಾನಂಗೇ ಅನಂತಪುರದಿಂದ ಬಂದುಬಿಟ್ಟೆ. ಅದೆಂಗ ಯೌವನದ ಕಿಚ್ಚನ್ನು ಎದೆಯೊಳಗೆ ಬಚ್ಚಿಟ್ಟುಕೊಂಡು ಅನ್ಯರ ಮನೇಲಿ ಕಾಲ ಹಾಕ್ತಿದ್ದಾಳೊ ದೇವ್ರೀಗೆ ಗೊತ್ತು? ಇರ್‍ಲಿ ಬಿಡ್ರಿ… ಹುಳ್ಳ ಬೆಳ್ಳಕಿದ್ದೋರು ಏನು ಮಾಡಿದ್ರು ಸಮಾಜ ರೈಟ್ ಅಂತ ಟಿಕ್ ಹಾಕ್ತದೆ… ನಮ್ಮಂಥೋರ ಮನೇಲಿ ಇಲಿ ಹೋದ್ರೆ ಹುಲಿ ಅಂತೈತೀ ಪ್ರಪಂಚ. ನಿಮ್ಗೆ ಹೇಳೋದು ಹೇಳಿದ್ಮೇಲೆ ಮನಸ್ಸಿಗೆಷ್ಟೋ ಹಗುರಾಯಿತ್ರೀ… ಮುಂದೇನಾದ್ರು ಕೊತ್ಲಿಗೀಗೆ ಬಂದ್ರೆ ಮನೀಗೆ ಬಂದು ಚಾಪಾನ ಮಾಡ್ಕೊಂಡೋಗ್ರಿ… ನಮ್ಮ ಕಾಂಚನಾಳ ಮದುವಿ ಲಗ್ನಪತ್ರಿಕೆ ಕಳುಸ್ತೀನಿ…
ಬರಬೇಕ್ರ ಮತ್ತ… ತಪ್ಪಿಸ್ಕೋಬಾರ್‍ದು…” ಎಂದು ಆಪ್ಯಾಯಮಾನವಾಗಿ ಮಾತಾಡಿ ಅನಸೂಯಮ್ಮನ ಪಾತ್ರವು ಅಲ್ಲಿಂದ ಹೊರಟುಹೋಯಿತು.

ಇನ್ನೇನು ಸಧ್ಯಕ್ಕೆ ಕಥೆ ಮುಗಿದಹಾಗಾಯ್ತು ಎಂದುಕೊಂಡೆ. ಮದುವೆ ಮುಗಿದೊಡನೆ ಬೀಗರು ಬಿಜ್ಜರು ಎಲ್ಲರೂ ತಂತಮ್ಮ ಊರಿಗೆ ಹೊರಟು ಹೋಗಲು ಮನೆ ಹೇಗೆ ಒಣ ಒಣ ಭಣ ಭಣ ಅಂತಿರ್‍ತದೋ ಹಾಗೆ ನೂರಾರು ಪಾತ್ರಗಳು ಹೇಳೋದನ್ನು ಹೇಳಿ, ಕೇಳೋದನ್ನು ಕೇಳಿ ಅಲ್ಲಿಂದ ಹೊರಟು ಹೋಗುತ್ತಲೆ ನನ್ನ ಮನದ ಶಾಮಿಯಾನ ಬಿಕೋ ಎನ್ನತೊಡಗಿತು. ಪ್ರತಿಯೊಂದು ಪಾತ್ರವು ನನ್ನ ಕುರಿತೇ ಮಾತಾಡಿತು ಎಂಬ ಅನುಮಾನ ಬಂತು. ಹಾಗೆಯೇ ನನ್ನ ಮನದ ಒಂದೊಂದು ಭಾವನೆಯೂ ಒಂದೊಂದು ವೇಷ ತೊಟ್ಟು ಹತ್ತಾರು ನಮೂನಿ ಬಣ್ಣ ಹಚ್ಚಿಕೊಂಡು ಒಂದೊಂದು ಪಾತ್ರದ ರೂಪ ಧರಿಸಿ ಮಾತಾಡಿದವೆಂಬ ಅನುಮಾನವೂ ಬಂತು. ನಾನು ಹೋಗುತ್ತಿದ್ದ ಒಂದೊಂದು ಊರಲ್ಲಿ… ಮಾತಾಡುತ್ತಿದ್ದ; ಗಮನಿಸುತ್ತಿದ್ದ್ದ ಪ್ರತಿಯೊಬ್ಬರಲ್ಲಿ ಶಾಮನ್ನ ದುತ್ತನೆ ಕಾಣಿಸಿಕೊಳ್ಳುತ್ತಿದ್ದ. ನನ್ನ ಹೃದಯ ಕನ್ನಡಿಯಲ್ಲಿ ಮುಖ ನೋಡುಕೊಳುತ್ತಿದ್ದ, ಮೇಕಪ್ ಮಾಡಿಲೊಳ್ಳುತ್ತಿದ್ದ: ಕ್ರಾಪು ತೀಡಿಕೊಳ್ಳುತ್ತಿದ್ದ. ಆಧುನಿಕ ಕ್ರಾಪೊಳಗೆ ಸನಾತನತೆಯ ಸಂಕೇತವನ್ನು ಮರೆಮಾಚಿಕೊಳ್ಳುತ್ತಿದ್ದ. ದೇಶಾವರಿ ನಗೆಯನ್ನು ಅಪಾಯಕಾರಿಯಾಗಿ ಪ್ರಯೋಗಿಸುತ್ತಿದ್ದ.. ನಮ್ಮ ಶಾಮನೇ ಅಂಥವನು… ತನಗೆ ತಾನೆ ಮಿತ್ರನಾದವನು, ತನಗೆ ತಾನೆ ಶತ್ರುವಾದವನು. ನಾನು “ನಿಮ್ಮೆಲ್ಲರೊಳಗಿದ್ದೀನಯ್ಯಾ” ಎಂದು ರಾಜಾರೊಷವಾಗಿ ಹೇಳುತ್ತಿದ್ದವನು. ಅವನಿಗೆ ಎಲ್ಲರ ಪರಿಚಯ ಉಂಟು, ಎಲ್ಲರ ಪರಿಚಯ ಅವನಿಗೂ ಉಂಟು. ಮೆಲ್ಲಗೆ ಓಳಹೊಕ್ಕು ಅರಿಷಡ್ವರ್ಗ, ಮಮಕಾರಗಳಿತ್ಯಾದಿ ತೃಣಮೂಲಗಳನ್ನು ಮೀಟಿ ಆಟವಾಡಿಸುತ್ತಿದ್ದಂಥ ಮಹಾನುಭಾವ… ಅವನು ಗೋಳ್ಹೊಯ್ದುಕೊಳ್ಳದ ಜನರೇ ಇಲ್ಲ… ಅವನನ್ನು ಗೋಳ್ಹೊಯ್ದುಕೊಳ್ಳದ ಜನರೇ ಇಲ್ಲ… ಮಾನವ ಸಹಜ ನೂರೊಂದು ಭಾವನೆಗಳ ಮೇಲೋಗರವಾಗಿದ್ದ ಶಾಮಣ್ಣನನ್ನು ನಾನು ತೀರ ನಿಕಟವಾಗಿ ಗುರುತಿಸಿದ್ದು ಕಾಶಿಯಲ್ಲಿ. ನಾನು ಇಳಿದುಕೊಂಡಿದ್ದ ಲಕ್ಸಾ ರಸ್ತೆಯಲ್ಲಿರುವ ಶಿವಾಶ್ರಮದ ಲಾಡ್ಗಿನ ಇನ್ನೂರಾ ಇಪ್ಪತ್ತೆರಡನೆಯ ರೂಮಿನಲ್ಲಿ… ಆರು ರುಪಾಯಿಗೆ ಎರಡು ತಂಬಿಗೆ ಬಿಸಿ ನೀರಿನೊಡನೆ ಬಂದ ಸೇವಕನೊಡನೆ ಆತ ಇದ್ದ. ತಾನುಶಾಮಾಶಾಸ್ತ್ರಿ ಚತುರ್ವೇದಿ ಎಂದು ಪರಿಚಯಿಸಿಕೊಂಡ. ವೇದೋಪನಿಷತ್ಪುರಾಣ ಕಾಲದ ಕಾಶೀ ಕ್ಷೇತ್ರವನ್ನು ಶ್ಲೋಕಗಳನ್ನು ನಿರರ್ಗಳವಾಗಿ ಉದ್ಧರಿಸುತ್ತ ಪರಿಚಯಿಸಿದ. ದಕ್ಷಿಣ ಭಾರತದ ಕರ್ನಾಟಕದ ಕಡೆಯಿಂದ ಪಂಡಿತ ಶಾಮಾಶಾಸ್ತ್ರಿಗಳ ಕಳೇಬರ ಅಂಬಾಸ್ಯಡರ್ ಕಾರಿನಲ್ಲಿ ಮೊನ್ನೆಯೇ ಹೊರಟಿರುವುದೆಂದೂ, ಅದರ ಬಗ್ಗೆ ನಿಮಗೇನಾದರೂ ತಿಳಿದಿದೆಯೇ ಎಂದು ಕೇಳಿದ. ಬರಲಿರುವುದು ಮತ್ತು ಅದಕ್ಕಾಗಿ ಕಾಯುತ್ತಿರುವವನೂ ಒಂದೇ ಹೆಸರಿನವರು.

ಆ ಒಂದು ಕ್ಷಣ ಹತ್ತಾರು ಮಂದಿ ಶಾಮ, ಶಾಮಣ್ಣ, ಶಾಮಾಶಾಸ್ತ್ರಿ ಎಂಬುವರನ್ನು ನೆನಪಿಸಿಕೊಂಡೆ. ನಾನು ಕಂಡಂತೆ ಅವರಾರಿಗೂ ಸಾಯುವ ವಯಸ್ಸಂತೂ ಖಂಡಿತ ಆಗಿರದಿದ್ದರೂ ಶಾಮಸುಂದರ ಶಾಸ್ತ್ರೀ ಎಂಬುವರು ಮಾತ್ರ ಮೂವತ್ತೈದಕ್ಕೆ ಪ್ರೌಢರಂತೆ ಕಾಣುತ್ತಿದ್ದುದನ್ನು ನೆನಪಿಸಿಕೊಂಡೆ. ಅವರೇನು ನನಗಷ್ಟು ಪರಿಚಯವಿಲ್ಲದಿದ್ದರೂ ಬೆಂಗಳೂರಿನ ಪಂಪಮಹಾಕವಿ ರಸ್ತೆಯ ಕೊನೆ ತುದಿಯಲ್ಲಿ ಕಂಡು ‘ನಾನ್ಯಾರೂಂತ ಗುರುತಿಸಿ’ ಎಂದು ಇದ್ದಕ್ಕಿದ್ದಂತೆ ಕೇಳಿದರು. ಅವರ್‍ಯಾರೂಂತ ಗುರುತಿಸಲಿ? ಅವರನ್ನು ಗುರುತಿಸುವುದರಿಂದ ನನಗೇನು ಲಾಭ? ತನ್ನ ಪಾಡಿಗೆ ತಾನು ಹೋಗುವುದು ಬಿಟ್ಟು, ನನ್ನ ಅಪರಿಚಿತನನ್ನು ತರುಬಿ ಇಂಥ ಪ್ರಶ್ನೆ ಕೇಳುವುದು ಹುಚ್ಚರು ಮತ್ತು ಮೂರ್ಖರಿಗೆ ಮಾತ್ರ ಸಾಧ್ಯ? ನಾನು ಕೆಳಗು, ಮೇಲು ನೋಡಿದೆ. ಯಾವುದೀ ಒಂದು ತಿಳಿಗೆಂಪು ಮಿಶ್ರಿತ ಕೈಮಗ್ಗದ ಲುಂಗಿ; ಬಿಳಿ ಬಣ್ಣದ ಮೊಂಡು ತೋಳಿನ ಅಂಗಿ, ತೊಟ್ಟಿದ್ದ ಆಧುನಿಕವಾಗಿ ತಲೆಕೂದಲು ಬಿಟ್ಟೆದ್ದ… ಹಿಂದೆಲೆಯ ಸುಳಿಯಲ್ಲಿದ್ದ ಜುಟ್ಟಿಗೆ ಐದಾರು ಗಂಟುಗಳನ್ನು ಹಾಕಿದ್ದ. ದಟ್ಟಗೂದಲುಗಳ ನಡುವೀದ್ದು ಕಾಣದಿದ್ದರೂ ನಡೆವಾಗ ಒಂದೊಂದು ಹೆಜ್ಜೆಗೆ ಅದು ಎದ್ದೆದ್ದು ಬೀಳುತ್ತಿದ್ದುದು ಸೋಜಿಗವಾಗಿತ್ತು. ಹಣೆ ಮೇಲೆ ವಿಭೂತಿ ಪಟ್ತೆಗಳೊಂದಿಗೆ ಕುಮ್ಕುಮಬೊಟ್ಟನ್ನೂ ಇಟ್ಟಿದ್ದ. ಒಂದೇ ಅಳತೆಯ ಗಡ್ಡ ಮೀಸೆ ಅಂಗಲವಾಗಿ ಬಿಟ್ತಿದ್ದ. ಕೈಯಲ್ಲಿ ನೃಸಿಂಹತಾಪಾನೀಯ ಭಾಷ್ಯ ಗ್ರಂಥದೊಂದಿಗೆ ‘ಸಿವಿಲ್‌ವಾರ್ ಎಗೆನೆಸ್ಟ್ ಫ್ಯೂಡಲಿಜಂ’ ಎಂಬ ಗ್ರಂಥವನ್ನು ಜಂಟಿಯಾಗಿ ಹಿಡಿದುಕೊಂಡಿದ್ದ.

ನಾನು ಎಷ್ಟು ಪ್ರಯತ್ನಿಸಿದರೂ ಆತ ಇಂಥವನೇ ಎಂದು ಗುರುತಿಸಲು ನನ್ನಿಂದಾಗಲಿಲ್ಲ. ಆ ಥರದ ಗೆಳೆಯರಾರೂ ನನಗೆ ಇರಲಿಲ್ಲ. ಆ ರೀತಿ ಕಾಣಿಸುತ್ತಿದ್ದ ವ್ಯಕ್ತಿ ಎಂದರೆ ಪೂರ್ವಾಶ್ರಮದಲ್ಲಿ ಮಲ್ಲೇಪುರಂ ವೆಂಕಟೇಶ್ ಮಾತ್ರ. ಆತ ನನಗೆ ಗುರುತಿಸಲಿಕ್ಕೆ ಸಹಕಾರಿಯಾಗಲು ಕೆಲವುಕ್ಲೂ ಕೊಡುವುದಾಗಿ ಹೇಳಿ ಒಂದು ಗ್ಲಾಸ್ ಬಿಯರ್ ಕುಡಿಸಿದ. ತಾನೂ ಕುಡಿದ. ಆತ ಕೊಡತೊಡಗಿದ ಒಂದೊಂದು ಕ್ಲು ನನ್ನಲ್ಲಿ ಒಂದೊಂದು ಆತಂಕ ಹುಟ್ಟಿಸಿದವು. ಯಾಕೆಂದರೆ ಅವೆಲ್ಲ ನನ್ನ ಬಾಲ್ಯಕ್ಕೆ ಸಂಬಂಧಿಸಿದುವುಗಳಾಗಿದ್ದವು. ಅಷ್ಟಾದರೂ ನನಗೆ ಅವನನ್ನು ಗುರುತಿಸಲಾಗಲೇ ಇಲ್ಲ. ಕೊನೆಗೆ ತಾನೇ ಹೇಳಿಬಿಟ್ಟ, ಪಂಡಿತ ಓಂಕಾರನಾಥ ಶಾಸ್ತ್ರಿಗಳ ಮೊಮ್ಮಗನೆಂದು. ಅದನ್ನು ಕೇಳಿದೊಡನೆ ಪಾತಾಳಕ್ಕಿಳಿದು ಬಿಟ್ಟು ಇಡೀ ಬಾಲ್ಯವೇ ಒಂದು ಮೂಲೆಯಿಂದ ಮರುಕಳಿಸಿಬಿಟ್ಟಿತು. ಆತನ ಪರಿಚಯ ಘಾಡವಾಯಿತು. ಆತ ಬೆಂಗಳೂರಿನ ವಿಚ್ಟೋರಿಯ ಅಪಾರ್ಟ್‌ಮೆಂಟ್ನಲ್ಲಿ ಆಫೀಸಿಟ್ಟಿದ್ದ. ಬೆಂಗಳೂರಿನ ಪ್ರತಿಷ್ಟಿತರಲ್ಲಿ ಆಧುನಿಕರಲ್ಲಿ ಒಳ್ಳೆಯ ಡಿಜೈನರನೆಂದೂ; ಇಂಟೀರಿಯರ್ ಮತ್ತು ಎಕ್ಸ್‌ಟ್ರೀರಿಯರ್ ಡೆಕೋರೇಟರ್ ಎಂದು ಹೆಸರಾಗಿದ್ದ. ಒಳ್ಳೆ ವಿಸ್ಕಿ ಕುಡಿಯುತ್ತಿದ್ದ. ಒಳ್ಳೆ ಚಿಕನ್ ಐಟಂಸ್ ತಿನ್ನುತ್ತಿದ್ದ. ಮಾಡರ್‍ನ್ ಹುಡುಗಿಯರೊಂದಿಗೆ ಮಲಗುತ್ತಿದ್ದ… ಸಂಸ್ಕೃತ ಮತ್ತು ಇಂಗ್ಲೀಷಿನಲ್ಲಿ ಪರಿಣಿತಿ ಪಡೆದಿದ್ದ… ಆದರೆ ಅವನು ಜನ್ಮದಿನದಂದು ಕ್ಷೌರ ಮಾಡಿಸುತ್ತಿರಲಿಲ್ಲ. ಅಮೃತಗಳಿಗೆ ವಿಷಗಳಿಗೆ ನೋಡಿಕೊಂಡೇ ಕೆಲಸ ಮಾಡುತ್ತಿದ್ದ. ಗ್ರಹಣ ಸಮಯದಂದು ಹರಿದ ನೀರಿನಲ್ಲಿ ಮೂಗು ಮುಚ್ಚಿಕೊಂಡು ಮುಳುಗು ಹಾಕುತ್ತಿದ್ದ… ಹೊರಗಡೆ, ಸಮಾಜದಲ್ಲಿ ಅತ್ಯುತ್ತಮ ಡಿಜೈನರ್, ಡೆಕೋರೇಟರ್ ಎಂದು ಪ್ರಸಿದ್ಧನಾಗಿದ್ದ ಆತ ತನ್ನ ದೇಹದ ಒಳ ಹೊರಗೆ ಕರ್ಮಠ ಸನಾತನಿಯಾಗಿದ್ದ. ಮುಂದೊಂದಿನ ಅವನು ಹದಿನಾರು ಮೊಳ ಸೀರೆ ಉಡುವ ಸದಾ ಅವನತ ಮುಖಿಯಾಗಿ ಅಡ್ಡಾಡುವ ಸುಂದರ ಮಹಿಳೆಯೋರ್ವಳನ್ನು ಮದುವೆಯಾದ. ಇಂಥ ಅವನನ್ನು ನಾನು ಬಹಳ ದಿನಗಳಿಂದ ನೋಡಲಾಗಲಿಲ್ಲ… ಅವನೇನಾದರೂ ಆಗಿರಬಹುದೆ ಎಂಬ ಸಂದೇಹ ಕಾಡತೊಡಾಗಿತು. ಶಾ.ಶಾ. ಚತುರ್ವೇದಿ ಎಂಥ ಸೂಕ್ಷ್ಮ ಮತ್ತು ಅಪಾಯಕಾರಿಯಾದ ಪಂಡಾ ಎಂದರೆ ಮುಖ ನೋಡಿ, ನಾಲ್ಕು ಮಾತಾಡಿ ಎದುಗಿರುವ ವ್ಯಕ್ತಿಯ ದೌರ್ಬಲ್ಯವನ್ನು ಪತ್ತೆ ಹಚ್ಚಿ ಗಪ್ ಅಂತ ಹಿಡಿದುಕೊಂಡು ಬಿಡುತ್ತಿದ್ದ. ನಿರರ್ಗಳವಾಗಿ ಸ್ವಪ್ನಸ್ಖಲನ, ಶೀಗ್ರಸ್ಖಲನ, ಗತಿಸಿದ ಯಾವ ಯಾವ ಹಿರಿಯರು ಆಕಾಶದ ಯಾವ ಯಾವ ಮಾರ್ಗದಲ್ಲಿ, ಯಾವ? ಯಾವ? ಶೋಕದ ರಾಗಗಳನ್ನು ಹಾಡುತ್ತಿದ್ದರೆಂದೂ ಹೇಳಿ ಗಲಿಬಿಲಿ ಹುಟ್ಟಿಸಿಬಿಡುತ್ತಿದ್ದ. ಕಾಶಿಯಲ್ಲಿ ನಾನಿದ್ದ ಐದು ದಿನಗಳವರೆಗೆ ಮಿತ್ರನಂತೆ, ಶನಿಯಂತೆ, ಬಂಧುವಿನಂತೆ ಕಾಡಿದ. ಅವನ ವಾಗ್ ನೈಪುಣ್ಯಕ್ಕೆ ಹೆದರಿಯೇ ಎರಡು ದಿನ ಮುಂಚಿತವಾಗಿ ಕಾಶಿ ಖಾಲಿ ಮಾಡಿಕೊಂಡು ಅಲಹಾಬಾದಿಗೆ ಹೊರಟು ಬಂದುಬಿಟ್ಟಿದ್ದೆನು.

ಶಾಮವೆಂಬುದು ಒಂದು ವರ್ಣವಾಗಿ, ಶಾಮ ಎಂಬುದು ಒಂದು ನಾಮಪದವಾಗಿ; ಶಾಮವೆಂಬುದು ಒಂದು ಕ್ರಿಯಾಪದವಾಗಿ, ಶಾಮ ಎಂಬುದು ಒಂದು ಕರ್ತೃವಾಗಿ ಶಾಮ ಎಂಬುದು ಒಂದು ಅಂತರಂಗವಾಗಿ, ಶಾಮ ಎಂಬುದು ಒಂದು ಬಹಿರಂಗವಾಗಿ, ಶಾಮ ಎಂಬುದು ಒಂದು ವಾತಾವರಣವಾಗಿ ಕಾಡತೊಡಗಿತು. ಅದೊಂದು ಅವರ್ಣೀಯವಾದ ತಲ್ಲಣ. ಹೇಗಪ್ಪಾ ಈ ತಲ್ಲಣಕ್ಕೆ ಅಭಿವ್ಯಕ್ತಿ ಕೊಡಬೇಕೆಂದು ಯೋಚಿಸುತ್ತಿದ್ದರೆ, ದೊಡ್ಡ ಬಾರೆ ಹಣ್ಣಿನ ಮರದ ಮನೆಯ ಬಾಲ್ಯ ಸಖನೋರ್ವ ನೆನಪಾದ. ಅವನು ಥೇಟ್ ನೂರು ಮಂದಿ ಶಾಮಣ್ಣರಿಗಿಂದ ಮಾಡಲ್ಪಟ್ಟಂತಿದ್ದ. ಇವನು ನನ್ನ ಮೇಲೆ ಕಥೆ ಬರೆಯುತ್ತಾನೆಂದು ಅವನೇ ಊಹಿಸಿಕೊಂಡ. ಆ ಕುರಿತು ಒಂದು ದಿನ ಕೇಳಿಯೇಬಿಟ್ಟ. ಕಥೆ ಬರೆಯಿಸಿಕೊಳ್ಳುವಂಥ ವಿಶೇಷವೇನಾದ್ರು ನಿನ್ನ ಬದುಕಿನಲ್ಲಿದ್ರೆ ಕಥೆ ಬರೆಯಬೌದೆಂದೆ. ನನ್ನ ಮಾತು ಅವನ ಮೇಲೆ ಅಷ್ಟು ಪರಿಣಾಮ ಬೀರಿರಬಹುದೆಂದು ನಾನು ಊಹಿಸಿರಲಿಲ್ಲ. ಹ್ಯಾಪ್ ಮೋರೆಯ ಮತ್ತು ಬದುಕಿನ ವ್ಯಕ್ತಿಯಾದ ಅವನು ನಿರ್ವಿರಾಮವಾಗಿ ನನ್ನ ಬದುಕಿನ ಮೇಲೆ ಮುರುಕಟ್ಟಿನಲ್ಲಿ ಯಾವ ಯಾವ ವಿಶೇಷಗಳು ಎಷ್ಟೆಷ್ಟು ಧೂಳು ಹಿಡಿದು ಕೂತಿವೆ? ಎಂದು ಹೂಡುಕಿಕೊಂಡ. ವಿಚಿತ್ರವೆಂದರೆ ಒಂದೇ ಒಂದು ಪುಟ್ಟ ವಿಷೇಶವು ಅವನಿಗೆ ದೊರಕಲಿಲ್ಲ. ಆದ್ದರಿಂದ ಅವನು ನಿರಾಶನಾಗಲಿಲ್ಲ. ವಿಶೇಷಗಳನ್ನವಲಂಬಿಸಿ ಕಥೇನ ಎಲ್ರೂ ಬರೀತಾರೆ… ಆದ್ರೆ ವಿಶೇಷಗಳೇ ಇಲ್ಲದ ನನ್ನಂಥೋರ ಬಗ್ಗೆ ಕಥೆ ಬರೆದಾಗಲೇ ಶಹಬ್ಬಾಷ ಎನ್ನಬಹುದೆಂದು ಮುಖಕ್ಕೆ ಬಡಿದಂತೆ ಕೇಳಿಯೇಬಿಟ್ಟ. ಅವನು ಕೇಳಿದ್ದು ಹೇಳಿದ್ದು ನನಗೆ ಸರಿ ಎನ್ನಿಸಿತು. ಅವನನ್ನು ಎದುರಿಗೆ ಕೂಡ್ರಿಸಿಕೊಂಡು ಇಡೀ ಎರಡು ಹಗಲು ನೂರಾರು ಪ್ರಶ್ನೆಗಳನ್ನು ಹಾಕಿದೆ. ಕಥೆಗೆ ಪೂರಕವಾಗುವಂಥ ಒಂದೇ ಒಂದು ಎಳೆಯೂ ದೊರಕಲಿಲ್ಲ. ನಿನ್ನನ್ನು ನೀನು ಸುಳ್ಳು ತಾರಾತಿಗಡಿಗಳಿಂದ ಮರೆಮಾಚಿಕೊಂಡಾದರೂ ಹೇಳು ಎಂದೆ. ಅವನು ಬಿಲ್ಕುಲ್ ಇಲ್ಲ ಅಂದ… ನನ್ನ ಒದ್ದಾಟ ನೋಡಲಾರದೆ… “ನನ್ನಲ್ಲಿ ಯಾರಲ್ಲೂ ಇಲ್ಲದ ಒಂದು ಗುಣ ಇದೆ” ಎಂದು ಹೇಳಿದ. ಅದು ಯಾವುದು ಎಂದು ಕೇಳಿದೆ ಅವನು ಹೇಳಿದುವುಗಳನು ಹೀಗೆ ಪಟ್ಟಿ ಮಾಡಬಹುದು.

೧. ಯಾರೂ ಮಾಡಿರದ ಕೆಟ್ಟ ಕೆಲಸವನ್ನು ಮಾಡಬೇಕೆಂದಾಸೆ.
೨. ತಾಯಿಯ ಜೊತೆ ಬತ್ತಲೆಯಾಗಿ ಮಲಗಬೇಕೆಂಬಾಸೆ.
೩. ಯಾರನಾದರೂ ತಾನು; ತನ್ನನ್ನು ಯಾರಾದರೂ ರೇಪ್ ಮಾಡಬಾರದೆ ಎಂಬ ನಿರೀಕ್ಷೆ.
೪. ಯಾರನಾದರು ಯಾಕೆ? ತನ್ನನ್ನು ತಾನು ಸದಾ ಗುಮಾನಿಯಿಂದ ನೋಡಿಕೊಳ್ಳುವುದು.
೫. ಹಿರಿಯರು ಯಾವುದು ಮಾಡಕೂಡದು ಎಂದು ಹೇಳುವರೋ ಅದನ್ನು ತಾನು ಗುಟ್ಟಾಗಿ ಉಲ್ಲಂಘಿಸುವುದು ಮಾಡುವುದು.
೬. ಅಪರಿಚಿತ ಸ್ಥಳಕ್ಕೆ ಹೋಗಿ ಗೆಳೆಯರ ಹೆಸರಿಟ್ಟುಕೊಂಡು ಅವರ ಹೆಸರನ್ನು ಬದ್ನಾಂ ಮಾಡಬೇಕೆಂಬಾಸೆ.
೭. ರಸ್ತೆಗಳಿರದ ಕಡೆ ರಸ್ತೆ ಮಾಡಿಕೊಂಡು ತಿರುಗಾಡುವ ಆಸೆ.
೮. ಕೆಟ್ಟದಾಗಿ ಬದುಕಬೇಕೆಂಬ ಮತ್ತು ಕೆಟ್ಟದಾಗಿ ಸಾಯಬೇಕೆಂಬಾಸೆ.
೯. ತನ್ನ ಹೆಂಡತಿಯನ್ನು ಪರಪುರುಷರು ಮೋಹಿಸುವಂಥ ಸಂಚು ಹೂಡಬೇಕೆಂದಾಸೆ

ಹೀಗೆ ಪಟ್ಟಿ ಮಾಡುತ್ತ ಹೊದರೆ ಅದು ಆಂಜನೇಯನ ಬಾಲದಂತೆ ಬೆಳೆಯುತ್ತದೆ. ವಿಚಾರಣೆಯಿಂದ ತಿಳಿದಿದ್ದೇನೆಂದರೆ ಅವುಗಳ ಪೈಕಿ ಒಂದನ್ನೂ ಅವನು ಆಚರಣೆಗೆ ತಂದಿರಲಿಲ್ಲ ಎಂಬುದು… ಅಂಥ ಪ್ರಯತ್ನ ಮಾಡಿ ಮುಖಭಂಗ ಅನುಭವಿಸಿರುವನಂತೆ… ತಾನು ಅಂದುಕೊಂಡಂತೆ ಬದುಕುತ್ತಿಲ್ಲವೆಂಬ ಖೇದ ಅವನನ್ನಾವರಿಸಿರುವುದು ಸ್ಪಷ್ಟವಾಯಿತು. ಆದರೆ ಅವನು ಛಲದಂಕ ಮಲ್ಲನಂತೆ ಹಾಗೆ ಬದುಕುತ್ತ ಸಮಾಜದ ಅವಕೃಪೆಗೆ ಪಾತ್ರನಾಗಿರುವನು.

ಅವನೊಂದಿಗೆ ನಡೆದ ಮಾತುಕಥೆ ನನ್ನನ್ನು ಬೇತಾಳದಂತೆ ಬೆಂಬತ್ತಿ ಕಾಡತೊಡಗಿತು. ಕೆಲ ದಿನಗಳ ನಂತರ ಅದಕ್ಕೆ ತದ್ವಿರುದ್ಧವಾಗಿ ಬದುಕುತ್ತಿರುವ ವ್ಯಕ್ತಿಯೊಂದು ಸಾಹಿತ್ಯದ ನೆಪದಿಂದ ಪರಿಚಯವಾಯಿತು. ಆ ವ್ಯಕ್ತಿ ಪ್ರತಿಭಾವಂತ ಓದುಗ, ಬರಹಗಾರ, ಚಿಂತಕ ಮತ್ತೆಲ್ಲ. ಅದರ ಕೆಲಸವೇನೆಂದರೆ ಸಜ್ಜನರಂತೆ ಬದುಕುವುವರನ್ನು ಕಂಡರೆ ಸಿಡಿಮಿಡಿಗುಟ್ಟುವುದು. ಸಂಭಾವಿತರನ್ನು ಗುಟ್ಟಾಗಿ ಸೂಳೇಯರ ಮನೆಗೆ ಕರೆದೊಯ್ದುಬಿಡುವುದು… ಮನಸ್ಸಿನ ಭ್ರಮೆಯಿಂದ ರೋಗಗಳು ಅಂಟುವುವೇ ಹೊರತು ಸಂಸರ್ಗದಿಂದಲ್ಲ ಎಂದು ವಾದಿಸುವುದು… ಕುಡಿ, ಸೇದು, ಮಜಾ ಮಾಡು… ಎಂದು ಒತ್ತಡ ಹೇರುವುದು… ಇತ್ಯಾದಿ ಪ್ರಚಂಡ ಗುಣ ಶೇಖರ ಆತನಾಗಿದ್ದ. ಇಂಥ ಎಷ್ಟೋ ಪಾತ್ರಗಳನ್ನು ಮಡಗಿಕೊಂಡು ಉದ್ದೇಶವೈಲ್ಲದೆ, ಯಾವುದೇ ಒಂದು ಪರಂಪರಾಗತ ಚೌಕಟ್ಟು ಇಲ್ಲದೆ… ಕಾದಂಬರಿ ಬರೆಯಬೇಕೆಂದು ಕೂತೊಡನೆ ಒಂದೊಂದು ವ್ಯಕ್ತಿ ಒಂದೊಂದು ಪಾತ್ರವಾಗಿ ನುಗ್ಗಿ ಬಂದು ನಾನು ಹೀಗೆ… ಹಾಗೆ ಎಂದು ಪೀಡಿಸತೊಡಗಿದವು… ಹೌದು ಅಂದರೆ ಹೌದು! ಇಲ್ಲ ಎಂದರೆ ಇಲ್ಲ ಎಂಬಂಥ ಸಮಷ್ಟಿ ಬದುಕು ಒಡಮೂಡತೊಡಗಿತು… ನನ್ನನ್ನು ಅನ್ವೇಶಣೆಗೆ, ವಿಶ್ಲೇಷಣೆಗೆ ಹಚ್ಚಿತು… ಕಾದಂಬರಿ ಒಂದು ಹಂತಕ್ಕೆ ಬರುತ್ತಿದ್ದಂತೆ ನಾನು ಸ್ವಕಲ್ಪಿತವೆಂದೋ, ಕಪೋಲಲಲ್ಪಿತವೆಂದೋ ಭಾವಿಸಿದ್ದ ಪಾತ್ರಗಳು ನಾವಿಂಥಿಂಥ ಕಡೆ ಜೀವಂತವಾಗಿದ್ದೇವೆ ಕಣಯ್ಯಾ… ಎಂದು ತಂತಮ್ಮ ವಿಳಾಸ ನೀಡತೊಡಗಿದವು… ಅದರ ಬಗ್ಗೆ ಇದು ಚಾಡಿ ಹೇಳುವುದು; ಇದರಬಗ್ಗೆ ಅದು ಚಾಡಿ ಹೇಳುವುದು… ಮುಂದುವರಿದಂತೆ ಅವೆಲ್ಲ ನನ್ನ ವಿರುದ್ಧವೇ ಮಸಲತ್ತು ಮಾಡತೊಡಗಿದ್ದು ಸ್ಪಷ್ಟವಾಯಿತು. ಆಯಾ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಆಯಾ ಘಟನೆಗಳನ್ನು; ಆಯಾ ಘಟನೆಗಳಿಗೆ ಸಂಬಂಧಿಸಿದಂತೆ ಆಯಾ ಊರುಗಳನ್ನು; ಆಯಾ ಊರುಗಳಿಗೆ ಸಂಬಂಧಿಸಿದಂತೆ ಆಯಾ ಕೇರಿಗಳನ್ನು ವಿನಾ ಕಾರಣವೋ, ಸಕಾರಣವೋ ಹುಡುಕಿಕೊಂಡು ಅಲೆದಾಡತೊಡಗಿದೆ… ಅಲ್ಲೆಲ್ಲ ಜೀವಂತವಿದ್ದ ಅವರೆಲ್ಲ ಖುದ್ದ ಗುರುತಿಸಿ ಬೆಟ್ಟಿಯಾಗಿ ಅಭಿವ್ಯಕ್ತಿ ಕ್ರಮದೊಳಗೆ ತಾವು ಎಲ್ಲೆಲ್ಲಿಗೆ ಬಂದಿದ್ದೇವಯ್ಯಾ ಎಂದು ಕೇಳತೊಡಗಿದರು. ಅರೆ! ಅವರು ಇವರಾಗಿ ಇಲ್ಲೆಲ್ಲ ಇದ್ದಾರಲ್ಲ ಎಂದು ಅಚ್ಚರಿಗೊಂಡೆ… ಆಯಾ ಪಾತ್ರ ಹೇಳುವುದನ್ನು ಕೇಳಿಯಾಯಿತು… ಬರೆದಿಟ್ಟಾಯಿತು. ಇನ್ನು ಮುಗಿಯಿತು ಎಂದು ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ… ಬರೆಯೋದು ಬರೆಯಿಸಿಕೊಂಡು ಒಟ್ಟಂದದಿಂದ ನೇಪಥ್ಯಕ್ಕೆ ಸರಿದಿದ್ದ ಕೆಲ ಪಾತ್ರಗಳು ಬಂದು ಇಡೀ ಕಾದಂಬರಿಯ ರಿಕಾಲ್ ಮಾಡತೊಡಾಗಿದವು. ಉದಾಹರಣೆಗೆ ಪವಿತ್ರ ಕಾಶೀ ಕ್ಷೇತ್ರದಲ್ಲಿ ಅಂತಿಮ ಕ್ಷಣಗಳನ್ನು ಎಣಿಸುತ್ತಿರುವ ವೃದ್ಧೆ ಅಲುಮೇಲಮ್ಮ ತನ್ನ ಮಗ ಶಾಮನ ಚಿತಾಭಸ್ಮ ಹೊತ್ತ ಕರಂಡಕವಿನ್ನೂ ಮಣಿಕರ್ಣಿಕ ತಲುಪಲಿಲ್ಲವೆಂದು ಪರಿತಪಿಸುತಿದ್ದುದು… ಆ ಹಾದರಗಿತ್ತಿ… ಶೂದ್ರ ಮುಂಡೆ ಅನಸೂಯ ಹೇಳಿದ್ದೆಲ್ಲ ಸುಳ್ಳು ಕಣಪ್ಪಾ… ಆಕೆಯನ್ನು ಪುನರ್ ವಿಚಾರಣೆಗೊಳಪಡಿಸು… ನನ್ಗೂ ಆಕೆಯನ್ನು ಪಾಟಿಸವಾಲಿಗೊಳಪಡಿಸಲು ಅವಕಾಶಕೊಡು” ಎಂದು ಪೀಡಿಸತೊಡಗಿದ್ದು ಹಸ್ತಪ್ರತಿಯೊಳಗಿಂದ ತಲೆಮೇಲೆ ಸೆರಗು ಸರಿಪಡಿಸಿಕೊಳ್ಳುತ್ತ ಬಂದ ವರಲಕ್ಷ್ಮಿಯದೂ ಅದೇ ಹಾಡು…

ರಾಖೇಶ ಕಾದಂಬರಿಕಾರನಾದ ನಿನ್ನನ್ನು ಸ್ವಲ್ಪ ವಿಚಾರಿಸಿಕೊಳ್ಳಬೇಕಿತ್ತು ಸ್ವಲ್ಪ ಕೊತ್ತಲಗಿಯ ಸೋಮವಾರಪೇಟೆ ಕಡೆ ಬರ್ತೀಯಾ… ಎಂದು ಕೇಳಲು ಹಿಂಜರಿಯಲಿಲ್ಲ…. ಬೆಂಗಳೂರಲ್ಲಿ ವೈಭವೋಪೇತ ಬಂಗಲೆಯಲ್ಲಿ ನೆಲೆಸಿರುವ ಮಾತು ಈ ಐತಿಹಾಸಿಕ ಚುನಾವಣೆ ನಂತರ ಲೋಕಸಭೆಗೆ ನಾಮಕರಣ ಆಗಲಿರುವ ಶ್ರೀಮತಿ ಅನಸೂಯಾ ರಘುರಾಂ ಆಮೇಲೆ ನಿನ್ನ ವಿಚಾರಿಸಿಕೊಳ್ಳುವುದಾಗಿ ತಂತಿ ಸಂದೇಶ ಕೊಟ್ಟಿದ್ದಳೆ… ಕಾರ್ಲ್‌ಮಾರ್ಕ್ಸ್‌ಗಿಂತ ಏರು ದನಿಯಲ್ಲಿ ಮಾತಾಡುತ್ತಿರುವ ಬಾಳಠಾಕ್ರೆ ಎಷ್ಟೋ ಮೇಲು ಅಂತಲೂ… ತಾನು ತಲುಪಿಸಿದ್ದ ಹಣವನ್ನು ರಾಖೇಶ ಮಂಗಮಾಯ ಮಾಡಿರುವನೆಂದೂ ಪಶುಪತಿ ಮುಂಬಯಿಯಿಂದ ಬರೆದಿದ್ದ ಇನ್‌ಲ್ಯಾಂಡ್ ಲೆಟರಿನಲ್ಲಿ ವಿವರಿಸಿರುವನು. ಹೀಗೆ ಪ್ರತಿಯೋಂದು ಪಾತ್ರವು ಮೌಖಿಕವಾಗಿ ಖಟ್ಲೆ ಹೂಡುತ್ತಿರುವುದು. ಈ ಗೊಂದಲದಲ್ಲಿ ತಪ್ಪು ಒಪ್ಪುಗಳ ತುಲನೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲ ಪಾತ್ರಗಳ ತರಲೆಯೊಂದಿಗೆ ಎರಂಗ್ಳಿ ಶಿವಣ್ಣನವರು ಬೇರೆ ‘ನಾಟ್ಕ ಬರೆದಿರಾ’… ಅಜ್ಜೋರು ಕಾಯ್ತಿದ್ದಾರೆ… ನಿಮ್ಮ ಕೈಯಿಂದ್ಲೇ ಶಾಮಣ್ಣನ ಪಾತ್ರ ಮಾಡಿಸ್ಲಿಕ್ಕೆ ಅವರು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ… ಎಷ್ಟೇ ಕೆಲಸವಿದ್ದರೂ ನಾಟಕದ ಸ್ಕ್ರಿಪ್ಟ್ ತಗೊಂಡು ಹುಬ್ಳಿ ಪ್ಯಾಸೆಂಜರ್ ಗಾಡಿ ಹತ್ತಿ ಗದಗು ಸ್ಟೇಷನ್ನಿನಲ್ಲಿ ಇಳಿದುಬಿಡಿ. ವೀರೇಶ್ವರ ಪುಣ್ಯಾಶ್ರಮದ ಪತಾದ ಬಗ್ಗೆ ಅಲ್ಲಿ ಯಾರ್ನು ಕೇಳಿದ್ರೂ ಹೇಳ್ತಾರೆ… ಜಟಕಾದೋರ್‍ಗೆ ಮೂರೋ ನಾಲ್ಕೋ ಕೊಟ್ರೆ ಸೀದ ತಂದು ತಲುಪಿಸ್ತಾರೆ… ಮುಖ್ಯ ಎಚ್ಚರಿಕೆ ಎಂದರೆ ಯಾವ ಕಾರಣಕ್ಕೂ ನಿಮ್ಮ ಪತ್ನಿಯವರಿಗೆ ಮಾತ್ರ ಹೇಳಬೇಡಿ … ಅನಸೂಯಮ್ಮನ ಪಾತ್ರದ ಬಗ್ಗೆ ನಾನೂ; ವರಲಕ್ಷ್ಮಿ ಪಾತ್ರದ ಬಗ್ಗೆ ಮಠಪತಯ್ಯನವರೂ ಅಂದಾಜಿನ ಮೇಲೆ ತಾಲೀಮು ನಡೆಸಿದ್ದೇವೆ… ಆದರೆ ಅಲುಮೇಲಮ್ಮಜ್ಜಿಯ ಪಾತ್ರ ವಹಿಸಲಿರುವ ಬೂದಯ್ಯನವರು ಬಿ. ಆರ್. ಪೋಲೀಸ್ ಪಾಟೀಲರ ಒತ್ತಾಯದ ಮೇರೆಗೆ ಸನ್ಮಾನ ಮಾಡಿಸಿಕೊಳ್ಲಲು ನಿನ್ನೆ ತಾನೆ ಬನಹಟ್ಟಿಗೆ ಹೋಗಿದ್ದರೆ. ಅಲ್ಲಿ ಅವರು ನಾಳೆ ಸಂಜೆಗೆ ಏಡ್ಸ್ ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ನಾಡಿದ್ದು ಎಷ್ಟು ಹೊತ್ತಿದ್ದರೂ ಗದಗಿಗೆ ವಾಪಸಾಗುತ್ತಾರೆ… ನಮ್ಮ ಯಾರ ಬಗೆಗೂ ನೀವು ಆಲೋಚಿಸದೆ ಎಲ್ಲ ಬಿಟ್ಟು ಹೊರಟು ಬರುವುದು… ತಿಳಿಯಿರಿ… ಎಂದು ವಿವರವಾಗಿ ಪತ್ರ ಬರೆದಿರುವರು… ನನ್ನ ಪುಣ್ಯಕ್ಕೆ ಆ ಪತ್ರ ಹೆಂಡತಿ ಅನ್ನಪೂರ್ಣಳ ಕೈಯಲ್ಲಿ ಸಿಕ್ಕಲಿಲ್ಲ… ಆದರೆ ಆಕೆ ಬೆಳಗಿನಿಂದ ಯಾವ್ದೋ ಒಂದು ಪತ್ರ ಬಂದಂಗಾಯ್ತಲ್ಲ… ಯಾರಿಂದ ಬಂತು ಏನ್ಕಥೆ! ಎಂದು ಹುಡುಕಾಡುತ್ತಿರುವಳು. ಅದನ್ನು ನಾನಾಗಲೇ ಹಳೆಬಟ್ಟೆ ಗಂಟೊಳಗೆ ತೂರಿಸಿಬಿಟ್ಟಿರುವೆನು…

ಆಕೆಯ ಧ್ಯಾನವನ್ನು ಬೇರೆ ಕಡೆಗೆ ತಿರುಗಸಲೋಸುಗ –
“ಅನ್ನಪೂರ್ಣಾ… ಅಂತೂ ಕದಂಬರಿ ಬರೆಯೋದು ಮುಗಿದು ಬಿಟ್ತು ಕಣೆ… ಹಾಳಾದ್ದು ನನ್ನ ದೇಹದ ಅರ್ಧಭಾಗವನ್ನು ತಿಂದುಬಿಡ್ತು… ನೀನೊಮ್ಮೆ ಇದ್ರ ಮೇಲೆ ಕಣ್ಣಾಡಿಸಿ ಬಿಟ್ಟಿ ಅಂದ್ರೆ ತಗೊಂಡೊಯ್ದು ಮಿತ್ರ ಚನ್ನಬಸವಣ್ಣಗೆ ಮುಟ್ಟಿಸಿ ಬಂದುಬಿಡ್ತೀನಿ…” ಎಂದು ಕುರ್ಚಿಯ ಹಿಂದಕ್ಕೆ ಬಾಗಿ ಮೈಮುರಿದು ಆಕಳಿಸಿದೆ…
“ಓಹೋಹೋ… ಬರೆದೀರಿ ಬರೆದೀರಿ… ನೀವೇನು ಬರೆದೀರಂತ ನಂಗೆ ಚೆನ್ನಾಗಿ ಗೊತ್ತು ಕಣ್ರೀ. ವ್ಯಭಿಚಾರವನ್ನು ಹೈಲೈಟ್ ಮಾಡಿದ್ದೀರಿ ತಾನೆ?… ಆ ಸಾಧ್ವಿ ವರಲಕ್ಷ್ಮಿಗಿಂತ ಆ ಹಾದ್ರಗಿತ್ತಿ ಅನಸೂಯಮ್ಮ ಅಂಥೋಳು? ಇಂಥೋಳಂಥ ಕೊಂಡಾಡಿದ್ದೀರಿ ತಾನೆ…” ಎಂದು ಕೃತಕ ಮುನಿಸು ಪ್ರಕಟಿಸಿದಳು…

“ನಾನ್ಯಾಕೆ ಸುಳ್ಳು ಬರೀಲಿ ಕಣೇ?… ಅಯಾ ಪಾತ್ರಗಳು ಏನೇನು ಹೇಳಿದ್ವೋ ಅದ್ರಂತೆ ಬರಿದೀನಿ ಕಣಮ್ಮಾ… ಇದ್ರಲ್ಲಿ ನನ್ನ ಕೈವಾಡ ಒಂಚೂರು ಇಲ್ಲ… ಬೇಕಿದ್ರೆ ನೀನೆ ಓದಿ ನೋಡು… ನಿಂಗೇ ತಿಳಿಯುತ್ತೆ” ಎಂದು ಮಹಾಮಳ್ಳಿಗನಂತೆ ಹೇಳಿದೆ.

ಆಕೆ ತನ್ನ ಕಣ್ಣಿನ ಕ್ಷಕಿರಣಗಳನ್ನು ಬಿಟ್ಟು ನನ್ನ ಕಡೆ ನೋಡಿದಳು. ಕುಂಬಳಕಾಯಿ ಕಳ್ಳನಂತೆ ನಾನು ಅಲ್ಲಾಡಿ ಹೋದೆ… “ಓಹೋ! ಹಾಗೋ” ಎಂದು ಸೂಚ್ಯವಾಗಿ ಉದ್ಗರಿಸಿದಳು.

“ನಾನೋದೋವರ್‍ಗೂ ತಗೊಂಡೊಯ್ದು ಪ್ರಕಾಶಕರಿಗೆ ಕೊಡಬಾರ್‍ದು ಮತ್ತೆ… ಸುಣ್ಣ ಹಚ್ಚಿ ನೆಲ ಸಾರಿಸಿ ಅಂಗಳದಲ್ಲಿ ರಂಗೋಲಿ ಹಾಕಿ ಕಸಮುಸುರಿ ಮುಗಿಸಿ ಓದ್ಲಿಕ್ಕೆ ತಗೋತೀನಿ… ಹಸ್ತ ಪ್ರತೀನ ನನ್ ಕೈಗೆ ಎಟಕುವಂತಿಡಿ” ಎಂದು ಸುಣ್ಣದ ಕಲ್ಲುಗಳಿಂದ ಗಡಿಗೆಗೆ ಒಂದು ತಪ್ಪಲೆ ಬಿಸಿನೀರು ಸುರಿದಳು…

“ಹಾಗಂದ್ರೆ ಹೆಂಗೆ ಕಣೇ… ಈಗ್ಲೆ ಹಸ್ತ ಪ್ರತಿ ತಲಿಪಿಸೋದು ಸಾಕಷ್ಟು ಲೇಟಾಗಿದೆ… ಇನ್ನು ಎರಡು ಮೂರುದಿನ ಲೇಟು ಮಾಡಿದ್ರೆ ಹೇಗೆ? ಈ ಕೆಲಸಾನೆಲ್ಲ ಆಮೇಲೆ ಮಾಡ್ಕೊಡ್ರಾಯ್ತು. ಮೊದ್ಲು ಇದ್ನ ಓದಿ ಮುಗಿಸಿ ಬಿಡೆ ಪುಣ್ಯ ಬರುತ್ತೆ” ಎಂದು ರಮಿಸುವ ಮಾತುಗಳನ್ನಾಡಿದೆ.

“ನಾನದರ ಪ್ರಥಮ ವಾಚಕಿ ಆಗಬೇಕೆಂಭೋದು ನಿಮಗಿಷ್ಟವಿದ್ರೆ ಒಂದೆರಡು ದಿನ ಕಾಯ್ರಿ ಅಷ್ಟೆ… ಇಲ್ಲಾಂದ್ರೆ ತಗೊಂಡೊಯ್ದು ಬಿಸಾಕಿ ಬನ್ನಿ…” ಎಂದು ಸಿಟ್ಟು ಮಾಡಿದಳು.

ನನ್ನ ಪ್ರತಿಯೊಂದು ಬರಹದ ಪ್ರಥಮ ವಾಚಕಿಯಾಗಿರುವ ಆಕೆಯ ಮಾತನ್ನು ತಿರಸ್ಕರಿಸಲು ನನಗೆ ಮನಸ್ಸು ಬರಲಿಲ್ಲ. ಅಂದೇ ರಾತ್ರಿ ಓದಿ ಮುಗಿಸುವಂತೆ ಹೇಳಿ ಒಪ್ಪಿಸುವಲ್ಲಿ ಸಫಲೀಕೃತನಾದೆ.
ರಾತ್ರಿ ಎಲ್ಲ ಕೆಲಸ ಮುಗಿಸಿದ ಮೇಲೆ ಆಕೆ ಸ್ಟೈಲಾಗಿ ಕುರ್ಚಿಯನ್ನಲಂಕರಿಸಿ ಟೇಬಲ್ ಲ್ಯಾಂಪ್ ಬೆಳಕಿನಲ್ಲಿ ಹಸ್ತಪ್ರತಿ ಹರಡಿಕೊಂಡು ಓದತೊಡಗಿದಳು… ಬ್ರಹ್ಮನು ನರನ ಹಣೆಬರಹವನ್ನು ಓದುವಂತೆ. ನಾನು ಎದುರಿಗೆ ಕುರ್ಚಿ ಮೇಲೆ ಅಪಾದಿತನಂತೆ ಕೂತು ಆಕೆಯ ಮುಖದ ಭಾವನೆಗಳ ಏರಿಳಿತವನ್ನು ಗಮನಿಸತೊಡಗಿದೆ… ತೀರ್ಪನ್ನು ಓದುತ್ತಿರುವ ನ್ಯಾಯಾಧೀಶರನ್ನು ನೋಡುತ್ತಿರುವ, ಕೇಳುತ್ತಿರುವ ಅಪರಾಧಿಯಂತೆ ಕೂತುಕೊಂಡೆ. ಹಾಗೆ ಕೂಡ್ರುವುದರಲ್ಲೆ ಒಂದು ರೀತಿಯ ಸಂತೋಷ.

ನನ್ನ ಹಸ್ತಾಕ್ಷರಗಳನ್ನು ಬಿಟ್ಟರೆ ಬೇರೆ ಯಾರ ಹಸ್ತಾಕ್ಷರವನ್ನು ಆಕೆ ಸರಾಗವಾಗಿ ಓದಲಾರಳು. ನಾನು ಅಕ್ಷರಗಳನ್ನು ದುಂಡಗೆ ಬರೆಯಲು ಕಲಿತಿದ್ದೆ ಆಕೆಗೆ ಪ್ರೇಮಪತ್ರಗಳನ್ನು ಬರೆಯುವುದರ ಮೂಲಕ. ನನ್ನ ಅಂಕುಡೊಂಕುಗಳನ್ನು (ಇರದಿದ್ದರೆ ಸೃಷ್ಟಿಸಿಕೊಂಡು ) ತಿದ್ದುವ ಸಂಪೂರ್ಣ ಹಕ್ಕು ಕೊಟ್ಟಿರುವೆನು.

ಆಕೆ ಓದತೊಡಗಿದಂತೆ, ಪುಟ ಮಗುಚ ತೊಡಗಿದಂತೆ; ಆಗಾಗ್ಗೆ ತಲೆ ಎತ್ತಿ ದುರುಗುಟ್ಟಿ ನನ್ನ ಕಡೆ ನೋಡತೊಡಗಿದಂತೆ; ಓಹೋ… ಹ್ಹಾ…ಹ್ಹಾ… ಎಂದು ಬಿಗುಮಾನದಿಂದ ಉದ್ಗರಿಸತೊಡಗಿದಂತೆ… ನನ್ನ ಎದೆ ಡವಗುಟ್ಟಿ ಬಡಿದುಕೊಳ್ಳತೊಡಗಿತು. ನನ್ನ ಬಾಯಿ ಒಣಗತೊಡಾಗಿತು, ನನ್ನ ಕಣ್ಣಿನ ಕಾಂತಿ ಮಂಕಾಗತೊಡಗಿತು.

ಅಂತೂ ಇಂತೂ ಆಕೆ ಓದಿ ಮುಗಿಸುವ ಹೊತ್ತಿಗೆ ಗಂಟೆ ಹನ್ನೆರಡೂ ಕಾಲಾಯಿತು. ಅಶುಭ ಸೂಚಕವಾಗಿ ದೂರದಲ್ಲೆಲ್ಲೋ ನರಿಗಳು ಊಳಿಡುತ್ತಿರುವುದು ಕೇಳಿಸಿತು.

ನ್ನ ಕಡೆ ನೋಡಿದಳು. ಆಕೆಯ ಒಂದೊಂದು ಕಣ್ಣು ಸಾವಿರ ಕ್ಯಾಂಡಲ್ ಬಲ್ಬು ಎಂದರೂ ಸರಿಯೇ.

“ಏನ್ರೀ… ನಾನಂದುಕೊಂಡಿದ್ದಂತೆಯೇ ಬರೆದುಬಿಟ್ಟಿರುವಿರಿ… ಹಠ ಅಂದ್ರೆ ಹೀಗಿರಬೇಕು ನೋಡ್ರಿ… ಅಪಾಪೋಲೀನ, ದುಷ್ಟನ್ನ, ಕುಡುಕನ್ನ, ಕೆಡುಕನ್ನ ದೊಡ್ ಮನುಷ್ಯ ಎಂಬಂತೆ ಚಿತ್ರಿಸಿದ್ದೀರಲ್ರೀ… ವೈದವ್ಯಾನ ಸರ್‍ಯಾಗಿ ಪಾಲಿಸ್ಕೊಂಡು ಹೋಗ್ತಿರೋ ವರಲಕ್ಷ್ನಿ ನಿಮ್ಮ ಕಣ್ಣಿಗೆ ಆದರ್ಶ ಮಹಿಳೆ, ಗರತಿ ಆಗಿ ಕಾಣಿಸ್ಲಿಲ್ಲ… ಆದ್ರೆ ಆ ಯಕಃಶ್ಚಿತ್ ಹೆಂಗಸು ಅನಸೂಯಾ ಉದಾತ್ತ ಮಹಿಳೆ ಥರ ಕಂಡ್ಳು… ಸರಿಯಾಗಿದೆ ನಿಮ್ಮ ಲೆಕ್ಕಾಚಾರ… ನೀವು ಶಾಮಣ್ಣಂಥೋರ ಕಡೆ, ರಾಖೇಶನಂಥೋರ ಕಡೆ. ಶಾಮಣ್ಣನಂಥ ಲಫಂಗರ ಪರ; ರಾಖೇಶನಂಥ (ಹ್ಹಾ… ಹ್ಹಾ… ನೀವಿಟ್ಟಿರುವ ಮುದ್ದಾದ ಹೆಸರೇ) ತಲೆ ಹಿಡುಕನ ಪರ, ಅನಸೂಯಳಂಥ (ಹ್ಹಾ… ಹ್ಹಾ… ಎಂಥ ಪತಿವ್ರತೆಯ ಹೆಸರಿಟ್ಟುಕೊಂಡಿದ್ದೀಯಲ್ಲೇ! ಅಥವಾ ಇವರೇ ಇಟ್ಟಿರಬಹುದೇ) ಹಾದರಗಿತ್ತಿ ಪರ ನೀವು ವಾದಿಸ್ತಿರೋದನ್ನ ನೋಡಿದ್ರೆ, ಬರೆದಿರೋದ್ನ ನೋಡಿದ್ರೆ ನನಗ್ಯಾಕೋ ಅನುಮಾನ ಶುರುವಾಗುತ್ತೆ… ಅದೂ ಅಲ್ದೆ ಇತ್ತೀಚೆಗೆ ನಿಮ್ಮ ನಡುವಳಿಕೇನೂ ಛೇಂಜಾಗಿದೆ. ನಾನೂ ನಿಮ್ಮನ್ನು ಗಮನಿಸ್ತಾನೇ ಇದ್ದೀನಿ… ನಡೆಸ್ರೀ… ಎಷ್ಟು ದಿನ ನಡೆಸ್ತೀರೋ ನಡೆಸ್ರೀ…” ಎಂದು ಮುಖ ಬಿಗಿದು ರೋಪು ಹಾಕತೊಡಗಿದಳು.

ಆಕೆಯ ಮಾತುಗಳನ್ನು ಕೇಳಿ ನಾನು ಪಾತಾಳಕ್ಕಿಳಿದು ಹೋದೆ.

“ಏನ್ ಅನ್ನೂ… ನೀನೇ ಹಿಂಗ ಮಾತಾಡ್ತಿದ್ರೆ ನನ್ ಗತಿ ಹೆಂಗೇ? ಕಾದಂಬರಿ ಓದಿದ ಮಾತ್ರಕ್ಕೆ ನಾನವ್ರಂತೆ ಅಂತ ಅಪಾರ್ಥ ಮಾಡ್ಕೋಬೇಡ ಕಣೇ” ಎಂದು ಅಂಗಲಾಚಿದೆ.

ಆಕೆ ಹಸ್ತಪ್ರತಿಯನ್ನು ತಳ್ಳುತ್ತ “ತಗೊಂಡೊಯ್ದು ನಿಮ್ಮ ಪ್ರಕಾಶಕ ಮಿತ್ರಗೆ ಕೊಡ್ರಿ… ನಾಳೆ ನಾನು ತಗೊಳ್ಳಲಿರೋ ಕ್ಲಾಸಿಗೆ ಅಟೆಂಡ್‌ಮಾಡಿ… ನೀವೂ ಅವ್ರ ಜಾಡಿನಲ್ಲಿದ್ದೀರಿ ಎಂಬುದರ ಬಗ್ಗೆ ಕೆಲವು ಪುರಾವೆಗಳನ್ನು ಸಂಗ್ರಹಿಸಿಟ್ಟಿದ್ದೀನಿ… ಹುಷಾರಾಗಿರ್ರಿ…” ಎಂದು ಉಚ್ಚರಿಸಿದಳು.

ಆ ರಾತ್ರಿ ಪಾಪ ಪ್ರಜ್ಞೆಯಿಂದ ನನಗೆ ನಿದ್ದೆಯೇ ಬರಲಿಲ್ಲ. ಆಕೆಯ ಕಠೋರ ಪ್ರತಿಕ್ರಿಯೆಯಿಂದಾಗಿ ನನ್ನ ಕಾದಂಬರಿಯ ಹಸ್ತಪ್ರತಿ ಪುಟ್ಟ ಕಳೇಬರದಂತಾಗಿ ಬಿಟ್ಟಿತ್ತು.

ಮರುದಿನ ಎದ್ದು ಪ್ರತಃವಿಧಿಗಳನ್ನು ತೀರಿಸಿಕೊಂಡು ಹಸ್ತಪ್ರತಿಯೊಡನೆ ಬಳ್ಳಾರಿಗೆ ಹೊರಟೆ… ಆಕೆ ‘ಹೋಗ್ರೀ… ಹೋಗ್ರೀ… ಬಂದ ಮೇಲೆ ನಿಮ್ಮ ಕಥಿ ಇದ್ದೇ ಇದೆ’ ಎಂದು ಬೀಳ್ಕೊಟ್ಟಳು…
ಇರುವ ನನ್ನ ಕಥೆಯಾದರೂ ಯಾವುದು?

ಶಾಮಣ್ಣಗೆ ತಾಳೆ ಆಗುವಂಥ ಯಾವ ಯಾವ ಪುರಾವೆಗಳನ್ನು ಸಂಗ್ರಹಿಸಿಟ್ತಿರುವಳೋ; ನನ್ನ ದೇವರೇ ಕಾಪಾಡಬೇಕು… ಎಂದು ಒಳಗೊಳಗೆ ಕುಲುಕುಲು ನಗತೊಡಗಿದೆ.

ಆ ನಗೆ ಶಾಮಣ್ಣನ ಆತ್ಮಕಷ್ಟೇ ಕೇಳಿಸಿತು… ಎಂಬಲ್ಲಿಗೆ ಕುಂ.ವೀ> ಎಂಬ ನರ ಮಾನವನು ಬರೆಯುತ್ತಿದ್ದ ಶಾಮಣ್ಣ ಕಥಾನಕವು ಸಮಾಪ್ತಿಯಾದುದು.

ಜಯಮಂಗಳಂ ನಿತ್ಯ ಶುಭಮಂಗಳಂ
*****
ಮುಗಿಯಿತು

ಕೀಲಿಕರಣ: ಎಂ ಎನ್ ಎಸ್ ರಾವ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.