ಸಂಸ್ಕಾರ – ೧

ಒಣಗಿ ಮುರುಟಿದ ಭಾಗೀರಥಿಯ ಕೀಚುಗಾಯಿ ದೇಹಕ್ಕೆ ಸ್ನಾನ ಮಾಡಿಸಿ, ಮಡಿಯುಡಿಸಿ, ಯಥಾವತ್ತಾಗಿ ಪೂಜೆ ನೆವೇದ್ಯಾದಿಗಳು ಮುಗಿದಮೇಲೆ, ದೇವರ ಪ್ರಸಾದದ ಹೂ ಮುಡಿಸಿ, ತೀರ್ಥಕೊಟ್ಟು, ಅವಳಿಂದ ಕಾಲು ಮುಟ್ಟಿಸಿಕೊಂಡು, ಆಶೀರ್ವದಿಸಿ, ರವೆಗಂಜಿಯನ್ನು ಬಟ್ಟಲಲ್ಲಿ ಪ್ರಾಣೇಶಾಚಾರ್ಯರು ತಂದರು.
“ಮೊದಲು ನಿಮ್ಮ ಊಟವಾಗಲಿ”
ಎಂದಳು ಭಾಗೀರಥಿ ಕ್ಷೀಣಸ್ವರದಲ್ಲಿ.
“ಇಲ್ಲ ಮೊದಲು ನಿನ್ನ ಗಂಜಿಯಾಗಲಿ.”
ಇಪ್ಪತ್ತು ವರ್ಷಗಳಿಂದ ಒಬ್ಬರಿಗೊಬ್ಬರು ಆಡಿಕೊಂಡು ಪರಿಪಾಠವಾದ ಮಾತು. ನಸುಕಿನ ಸ್ನಾನ, ಸಂಧ್ಯಾವಂದನ, ಆಡಿಗೆ, ಹೆಂಡತಿಗೆ ಮದ್ದು, ಮತ್ತೆ ಹೊಳೆ ದಾಟಿ ಹೋಗಿ ಗುಡಿಯ ಮಾರುತಿಯ ಪೂಜೆ-ಇದು ತಪ್ಪದ ಆಚಾರ. ಊಟವಾದ ಮೇಲೆ ಒಬ್ಬೊಬ್ಬರಾಗಿ ಅಗ್ರಹಾರದ ಬ್ರಾಹ್ಮಣರು ಮನೆಯ ಚಿಟ್ಟೆಯ ಮೇಲೆ ನೆರೆಯುತ್ತಾರೆ-ದಿನದಿನಕ್ಕೂ ಪ್ರಿಯವಾಗಿ ಉಳಿದಿರುವ ತನ್ನ ಪುರಾಣ-ಪುಣ್ಯಕತೆಗಳ ವಾಚನವನ್ನು ಕೇಳಲು. ಸಂಜೆ ಮಾತ್ತೆ ಸ್ನಾನ, ಸಂಧ್ಯಾವಂದನ, ಹೆಂಡತಿಗೆ ಗಂಜಿ, ಮದ್ದು, ಅಡಿಗೆ, ಊಟ-ತಿರುಗಿ ಜಗುಲಿಯಲ್ಲಿ ಬಂದು ಕುಳಿತ ಬ್ರಾಹ್ಮಣರಿಗೆ ಪ್ರವಚನ. ಭಾಗೀರಥಿ ಆಗೊಮ್ಮೆ ಈಗೊಮ್ಮೆ ಅನ್ನುವುದುಂಟು:
“ನನ್ನನ್ನು ಕಟ್ಟಿಕೊಂಡು ನಿಮಗೇನು ಸುಖ? ಮನೆಗೊಂದು ಮಗು ಬೇಡವೇ? ಇನ್ನೊಂದು ಮದುವೆಯಾಗಿ.”
“ನನ್ನಂತಹ ವೃದ್ಧನಿಗೆ ಮದುವೆ…”
ಎಂದು ಪ್ರಾಣೇಶಾಚಾರ್ಯರು ನಗುತ್ತಾರೆ.
“ಇನ್ನೂ ನಲವತ್ತು ದಾಟಿದ ನೀವು ಎಂತಹ ವೃದ್ಧರು. ಕಾಶಿಗೆ ಹೋಗಿ ಸಂಸ್ಕೃತ ಓದಿ ಬಂದ ನಿಮಗೆ ಹೆಣ್ಣೊಂದನ್ನು ಧಾರೆ ಎರೆದುಕೊಡಲು ಯಾವ ತಂದೆಗೆ ಇಷ್ಟವಿಲ್ಲ? ಮನೆಗೊಂದು ಮಗು ಬೇಕು. ನನ್ನ ಕೆಹಿಡಿದಾಗಿನಿಂದ ನಿಮಗೆಲ್ಲಿ ಸುಖ ಸಿಕ್ಕಿದೆ…”
ಪ್ರಾಣೇಶಾಚಾರ್ಯರು ಮುಗುಳ್ನಕ್ಕು, ಎದ್ದು ಕೂರಲು ಯತ್ನಿಸುವ ಹೆಂಡತಿಯನ್ನು ಮಲಗಿಸಿ, ನಿದ್ದೆ ಮಾಡು ಎನ್ನುತ್ತಾರೆ. ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡು ಎನ್ನಲಿಲ್ಲವೇ ಭಗವಂತ? ಮುಕ್ತಿಮಾರ್ಗದಲ್ಲಿರುವ ತಮ್ಮನ್ನು ಪರೀಕ್ಷಿಸಲೆಂದೇ ಬ್ರಾಹ್ಮಣ ಜನ್ಮ ಕೊಟ್ಟು ಇಂತಹ ಸಂಸ್ಕಾರಕ್ಕೆ ನನ್ನನ್ನು ಅವ ತೊಡಗಿಸಿದ. ಪಂಚಾಮೃತದ ಸೇವನೆಯಷ್ಟು ಸುಖವಾದ ಧನ್ಯಭಾವ, ಪಶ್ಚಾತ್ತಾಪ ಹೆಂಡತಿಯ ಮೇಲೆ ಬಂದು, ಇವಳು ರೋಗಿಯಾಗಿದ್ದರಿಂದ ನಾನು ಇನ್ನಷ್ಟು ಹದವಾದೆ ಎಂದು ತಮ್ಮ ಪಾಡಿನ ಬಗ್ಗೆ ಹಿಗ್ಗುತ್ತಾರೆ.
ಊಟಕ್ಕೆ ಕೂರುವ ಮುಂಚೆ ಗೋಗ್ರಾಸವನ್ನು ಬಾಳೆಲೆಯಲ್ಲಿ ಎತ್ತಿ ಹಿತ್ತಲಿನಲ್ಲಿ ಮೇಯುತ್ತಿದ್ದ ಗೌರಿಯ ಎದುರು ಇಟ್ಟು, ಹಸುವಿನ ರೋಮಾಂಚಿತ ಮೆಯನ್ನು ಒರೆಸಿ ಕಣ್ಣಿಗೊತ್ತಿಕೊಂಡು ಒಳಗೆ ಬರುತ್ತಿದ್ದಂತೆ ’ ಆಚಾರ್ಯರೆ, ಆಚಾರ್ಯರೆ ’ ಎಂದು ಕರೆಯುವ ಹೆಣ್ಣಿನ ಸ್ವರ ಕೇಳಿಸಿತು. ಆಲಿಸಿದರೆ ನಾರಣಪ್ಪನ ಸೂಳೆ ಚಂದ್ರಿಯ ಸ್ವರದಂತಿದೆ. ಅವಳ ಹತ್ತಿರ ಮಾತನಾಡಿದರೆ ಮತ್ತೆ ಸ್ನಾನ ಮಾಡಿ ಊಟಮಾಡಬೇಕು. ಆದರೆ ಹೆಣ್ಣು ಹೆಂಗಸೊಬ್ಬಳನ್ನು ಅಂಗಳದಲ್ಲಿ ಕಾಯಿಸಿದರೆ ತುತ್ತು ಗಂಟಲಲ್ಲಿಳಿಯುವುದು ಶಕ್ಯವೇ?
ಜಗುಲಿಗೆ ಬಂದರು. ಚಂದ್ರಿ ಸರ್ರನೆ ತಲೆಮೇಲೆ ಸೆರಗೆಳೆದುಕೊಂಡು ಬಿಳಚಿ ಭಯಗ್ರಸ್ತಳಾಗಿ ನಿಂತಳು.
“ಏನಮ್ಮ ಬಂದ ವಿಷಯ?”
“ಅವರು…ಅವರು…”
ಚಂದ್ರಿ ಕಂಪಿಸುತ್ತ ಮಾತು ಹೊರಡದೆ ಕಂಬಕ್ಕೆ ಆತಳು.
“ಯಾರು? ನಾರಣಪ್ಪನೆ? ಏನಾಯಿತು?
“ಹೋದರು…”
ಚಂದ್ರಿ ಮುಖ ಮುಚ್ಚಿಕೊಂಡಳು.
“ನಾರಾಯಣ, ನಾರಾಯಣ-ಯಾವತ್ತು?”
“ಈಗ…”
“ನಾರಾಯಣ-ಏನಾಗಿತ್ತು?”
ಚಂದ್ರಿ ಬಿಕ್ಕುತ್ತ ಹೇಳಿದಳು:
“ಶಿವಮೊಗ್ಗೆಯಿಂದ ಬಂದವರೆ ಜ್ವರ ಬಂದು ಮಲಗಿದರು. ನಾಲ್ಕು ದಿನದ ಜ್ವರ-ಅಷ್ಟೆ…ಪಕ್ಕೆಯ ಹತ್ತಿರ ಗೆಡ್ಡೆಯೆದ್ದಿತ್ತು, ನೋವಿಗೆ ಬರುವ ಬಾವಿನ ಹಾಗೆ…”
“ನಾರಾಯಣ.”
ಉಟ್ಟ ಪಟ್ಟೆ ಮಡಿಯಲ್ಲೆ ಪ್ರಾಣೇಶಾಚಾರ್ಯರು ಓಡುತ್ತ ಗರುಡಾಚಾರ್‍ಯನ ಮನೆಗೆ ಹೋಗಿ ’ ಗರುಡಾ, ಗರುಡಾ ’ ಎಂದು ಕರೆಯುತ್ತ ಅಡಿಗೆ ಮನೆಗೆ ನುಗ್ಗಿದರು. ನಾರಣಪ್ಪ ಗರುಡಾಚಾರ್ಯನಿಗೆ ಐದು ತಲೆಯ ಸಂಬಂಧ. ನಾರಣಪ್ಪನ ಮುತ್ತಜ್ಜನ ಅಜ್ಜಿಯೂ ಗರುಡಾಚಾರ್ಯನ ಮುತ್ತಜ್ಜಿಯೂ ಅಕ್ಕತಂಗಿಯರು. ಕಲಸಿದ ಸಾರಿನ ತುತ್ತನ್ನು ಇನ್ನೇನು ಬಾಯಿಗೆತ್ತಬೇಕೆಂದಿದ್ದ ಗರುಡಾಚಾರ್ಯನಿಗೆ- “ನಾರಾಯಣ… ಗರುಡಾ, ಊಟಮಾಡಬೇಡ. ನಾರಣಪ್ಪ ತೀರಿಕೊಂಡನಂತೆ”
ಎಂದು ಮಧ್ಯಾಹ್ನದ ಸೆಖೆಗೆ ಬೆವರುತ್ತಿದ್ದ ಮುಖವನ್ನು ಒರೆಸಿಕೊಂಡರು. ಗರುಡಾಚಾರ್ಯ ದಂಗಾಗಿ, ತನಗೂ ನಾರಣಪ್ಪನಿಗೂ ಆಣೆಭಾಷೆಯಾಗಿ ಎಲ್ಲ ಸಂಬಂಧವೂ ಕಳಚಿಕೊಂಡಿದ್ದರೂ ಸಹ, ಕಲಸಿದ ತುತ್ತನ್ನು ಎಲೆಯ ಮೇಲೆಯೇ ಬಿಟ್ಟು, ಆಪೋಶನ ತೆಗೆದುಕೊಂಡು ಎದ್ದ. ಸಟ್ಟುಗ ಹಿಡಿದು ನಿಶ್ಚೇಷ್ಟಿತಳಾಗಿ ನಿಂತ ಹೆಂಡತಿ ಸೀತಾದೇವಿಗೆ ’ಮಕ್ಕಳಿಗೆ ಅಡ್ಡಿಯಿಲ್ಲ, ಊಟ ಮಾಡಲಿ. ಶವಸಂಸ್ಕಾರವಾಗುವ ತನಕ ನಾವು ಊಟ ಮಾಡುವಂತಿಲ್ಲ’ ಎಂದು ಪ್ರಾಣೇಶಾಚಾರ್ಯರ ಕೂಡ ಹೊರಬಂದ. ಸುದ್ದಿ ತಿಳಿಯುವುದರೊಳಗೆ ಅಕ್ಕಪಕ್ಕದವರೆಲ್ಲ ಎಲ್ಲಿ ಊಟಮಾಡಿಬಿಡುತ್ತಾರೋ ಎಂದು ಭಯದಿಂದ ಪ್ರಾಣೇಶಾಚಾರ್ಯರು ಉಡುಪಿ ಲಕ್ಷ್ಮಣಾಚಾರ್ಯರ ಮನೆಗೆ, ಗರುಡಾಚಾರ್ಯ ಅರೆಮರುಳು ಲಕ್ಷ್ಮಿದೇವಮ್ಮ, ಕೆಳೆಮನೆ ದುರ್ಗಾಭಟ್ಟರ ಮನೆಗೆ ಓಡುತ್ತೋಡುತ್ತ ಸುದ್ದಿ ಮುಟ್ಟಿಸಿದರು. ಸುದ್ದಿ ಕಿಚ್ಚಿನಂತೆ ಅಗ್ರಹಾರದ ಉಳಿದ ಹತ್ತು ಮನೆಗಳಿಗೂ ಹಬ್ಬಿತು. ಮಕ್ಕಳನ್ನು ಒಳಗೆ ಕೂಡಿಸಿ ಬಾಗಿಲು ಕಿಟಕಿ ಹಾಕಿದ್ದಾಯಿತು. ದೇವರ ದಯೆಯಿಂದ ಇನ್ನೂ ಯಾವ ಬ್ರಾಹ್ಮಣನೂ ಊಟ ಮಾಡಿರಲಿಲ್ಲ. ನಾರಣಪ್ಪನ ಸಾವನ್ನು ಕೇಳಿ ಹೆಂಗಸರು ಮಕ್ಕಳಾದಿಯಾಗಿ ಅಗ್ರಹಾರದ ಒಂದು ನರಪಿಳ್ಳೆಗೂ ವ್ಯಥೆಯಾಗದಿದ್ದರೂ ಕೂಡ ಎಲ್ಲರ ಹೃದಯದಲ್ಲೂ ಒಂದು ಅವ್ಯಕ್ತ, ಅಪರಿಚಿತ ಭೀತಿ, ಕಳವಳ ಹುಟ್ಟಿತು. ಬದುಕಿನಲ್ಲಿ ವೆರಿ, ಸತ್ತು ಅನ್ನಕಂಟಕ, ಶವವಾಗಿ ಇನ್ನೂ ಸಮಸ್ಯೆ ಎಂದು ತನ್ನ ಶಡ್ಡಕನನ್ನು ಶಪಿಸುತ್ತ ಉಡುಪಿ ಲಕ್ಷ್ಮಣಾಚಾರ್ಯ ಕೆತೊಳೆದ. ಆಚಾರ್ಯರ ಜಗುಲಿಯಲ್ಲಿ ಸೇರಲು ಹೊರಟ ಪ್ರತಿ ಗಂಡಸಿನ ಕಿವಿಯಲ್ಲೂ ಹೆಂಡತಿ ಊದಿದಳು: “ಪ್ರಾಣೇಶಾಚಾರ್ಯರು ಖುದ್ದು ತೀರ್ಮಾನಿಸದ ಹೊರತು ನೀವಾಗಿ ಅವನ ಶವಸಂಸ್ಕಾರ ಮಾಡಲು ಒಪ್ಪಬೇಡಿ. ನಾಳೆ ಗುರುಗಳು ಬಹಿಷ್ಕಾರ ಹಾಕಿದರೆ ಏನು ಗತಿ?”
ಪುರಾಣ ಕೇಳಲಿಕ್ಕೆಂದು ಕಿಕ್ಕಿರಿದು ಕೂರುವ ರೀತಿಯಲ್ಲಿ-ಆದರೆ ಇವತ್ತು ಅವ್ಯಕ್ತ ಶಂಕೆಯಲ್ಲಿ-ಜಗುಲಿಯಲ್ಲಿ ನೆರೆದಿದ್ದ ಬ್ರಾಹ್ಮಣರಿಗೆ ಪ್ರಾಣೇಶಾಚಾರ್ಯರು ತುಳಸಿಮಣಿ ಸರವನ್ನು ಕಂಠದ ಸುತ್ತ ಸುತ್ತುತ್ತ ತನಗೇ ಹಾಕಿಕೊಂಡ ಪ್ರಶ್ನೆಯ ಹಾಗೆ ಅಂದರು:
“ನಾರಣಪ್ಪನ ಶವಸಂಸ್ಕಾರವಾಗಬೇಕು: ಮೊದಲನೆಯ ಪ್ರಶ್ನೆ. ಅವನಿಗೆ ಮಕ್ಕಳಿಲ್ಲ-ಯಾರಾದರೂ ಅವನ ಬೊಜ್ಜ ಮಾಡಬೇಕು: ಎರಡನೆಯ ಪ್ರಶ್ನೆ.”
ಅಂಗಳದಲ್ಲಿ ಕಂಬಕ್ಕಾತು ನಿಂತಿದ್ದ ಚಂದ್ರಿ, ಬ್ರಾಹ್ಮಣರು ಇದಕ್ಕೇನೆನ್ನುತ್ತಾರೆಂದು ಆತಂಕದಿಂದ ಕಾದಳು. ಕುತೂಹಲ ತಡೆಯಲಾರದೆ ಹಿತ್ತಲ ಬಾಗಿಲಿನಿಂದ ಬಂದು ಪ್ರಾಣೇಶಾಚಾರ್ಯರ ನಡುಮನೆಯಲ್ಲಿ ನಿಂತು ಆಲಿಸುತ್ತಿದ್ದ ಹೆಂಗಸರು ತಮ್ಮ ಗಂಡಸರು ಎಲ್ಲಿ ದುಡುಕಿಬಿಡುತ್ತಾರೊ ಎಂದು ಶಂಕಿತರಾದರು.
ಆಚಾರ್ಯರು ಆಡಿದ ಮಾತಿಗೆಲ್ಲ ಸಾಮಾನ್ಯವಾಗಿ ಅನ್ನುವ ರೀತಿಯಲ್ಲಿ ಗರುಡಾಚಾರ್ಯ ತನ್ನ ದಷ್ಟಪುಷ್ಟ ಕಪ್ಪು ಬಾಹುಗಳನ್ನು ಸವರಿಕೊಳ್ಳುತ್ತ “ಹೌದು, ಹಾದು, ಹಾದು” ಎಂದ.
“ಶವಸಂಸ್ಕಾರವಾಗುವವರೆಗೆ ಯಾರೂ ಊಟಮಾಡುವಂತಿಲ್ಲವಲ್ಲ.”
ಗುಂಪಿನಲ್ಲಿದ್ದ ಬಡ ಬ್ರಾಹ್ಮಣನಲ್ಲಿ ಒಬ್ಬನಾದ ಬಲರಾಮನ ಗೋವಿನಂತಹ ಕೃಶ ಶರೀರದ ದಾಸಾಚಾರ್ಯ ಹೇಳಿದ.
“ನಿಜ…ನಿಜ.” ಲಕ್ಷ್ಮಣಾಚಾರ್ಯ ತನ್ನ ಹೊಟ್ಟೆಯನ್ನುಜ್ಜಿಕೊಳ್ಳುತ್ತ ಮುಖವನ್ನು ಮುಂದಕ್ಕೆ ಹಿಂದಕ್ಕೆ ಮಾಡಿ ಹೇಳಿ ರೆಪ್ಪೆಗಳನ್ನು ಬಡಿದ. ಪುಷ್ಟವಾಗಿದ್ದ ಅವನ ಏಕಮಾತ್ರ ಅಂಗವೆಂದರೆ ಜ್ವರಗಡ್ಡೆಯಿಂದ ಬಾತಿದ್ದ ಹೊಟ್ಟೆ. ಕಾರಣ-ಬಚ್ಚುಗೆನ್ನೆ, ಗುಳಿಬಿದ್ದ ಹಳದಿ ಕಣ್ಣು, ಎಲುಬು ನೆಟ್ಟ ಎದೆ, ಸೊಟ್ಟಗಾದ ಕಾಲಿನಿಂದಾಗಿ ಶರೀರದ ಸಮತೂಕ ತಪ್ಪಿ ಮುಂಭಾರವಾಗಿತ್ತು; ಕಾರಣ- ಪೃಷ್ಠವನ್ನು ಹಿಂದಕ್ಕೊಡ್ಡಿ ಅವ ನಡೆಯುವ-ಎಂದು ಪಾರಿಜಾತಪುರದ ಲೇವಡಿಯ ಪಂಚಗ್ರಾಮದವರ ಹಾಸ್ಯ.
ಯಾರಿಂದಲೂ ನೇರವಾದ ಸೂಚನೆ ಬರದಿದ್ದುದು ನೋಡಿ ಪ್ರಾಣೇಶಾಚಾರ್ಯರು-
“ಆದ್ದರಿಂದ ಈಗ ಯಾರು ಅವನ ಶವಸಂಸ್ಕಾರ ಮತ್ತು ಬೊಜ್ಜ ಮಾಡಬೇಕು ಎಂಬುದು ನಮ್ಮ ಮುಂದಿರೊ ಸಮಸ್ಯೆ. ಸಂಬಂಧಿಗಳು ತಪ್ಪಿದರೆ ಯಾವ ಬ್ರಾಹ್ಮಣನಾದರೂ ಮಾಡಬಹುದೆಂದು ಧರ್ಮಶಾಸ್ತದಲ್ಲಿದೆ.”
ಸಂಬಂಧಿಗಳು ಎನ್ನುವ ಮಾತನ್ನೆತ್ತಿದ್ದರಿಂದ ಉಳಿದ ಬ್ರಾಹ್ಮಣರು ಗರುಡಾಚಾರ್ಯ ಮತ್ತು ಲಕ್ಷ್ಮಣಾಚಾರ್ಯರ ಮುಖ ನೋಡಿದರು. ಲಕ್ಷ್ಮಣಾಚಾರ್ಯ ತನಗಲ್ಲ ಎನ್ನುವ ಹಾಗೆ ಕಣ್ಣು ಮುಚ್ಚಿಕೊಂಡ. ಆದರೆ ಕೋರ್ಟು ಕಚೇರಿ ಹತ್ತಿದ್ದ ಗರುಡಾಚಾರ್ಯ ತಾನೀಗ ಮಾತನಾಡುವುದು ಅವಶ್ಯವೆಂದು ಒಂದು ಚಿಟಿಕೆ ನಶ್ಯ ಏರಿಸಿ, ಗಂಟಲು ಕೆರೆದುಕೊಂಡ.
“ಧರ್ಮಶಾಸ್ತದ ಪ್ರಕಾರ ನಾವು ನಡೆಯೋದು ಸರಿ. ನಮ್ಮಲ್ಲೆಲ್ಲ ಮಹಾ ವಿದ್ವಾಂಸರಾದ ತಮ್ಮ ವಾಕ್ಯ ನಮಗೆ ವೇದ ವಾಕ್ಯ. ತಮ್ಮ ಅಪ್ಪಣೆಯಾದರೆ ಸೆ. ನನಗೂ ಅವನಿಗೂ ಒಂದು ತಲೆತಲಾಂತರದ ಸಂಬಂಧವಿರೋದು ನಿಜ. ಆದರೆ ತಮಗೆ ತಿಳಿದಂತೆ ನಾನೂ ಅವನಪ್ಪನೂ ಕೋರ್ಟು ಹತ್ತಿ, ಆ ತೋಟದ ಕಾರಣಕ್ಕಾಗಿ ಜಗಳವಾಡಿ, ಅವನಪ್ಪ ಸತ್ತ ಮೇಲೆ ನಾನು ಧರ್ಮಸ್ಥಳದ ನ್ಯಾಯ ತಂದರೂ ಈ ನಾರಣಪ್ಪ ದೆವಾಜ್ಞೆ ಧಿಕ್ಕರಿಸಿ-ಏನು?-ನಮಗೂ ಅವನಿಗೂ ಇನ್ನು ಮುಂದೆ ತಲತಲಾಂತರಕ್ಕೂ ಮಾತುಕತೆ, ಮದುವೆ, ಮುಂಜಿ, ಊಟ-ಉಪಚಾರ ಇತ್ಯಾದಿಗಳು ಇಲ್ಲವೆಂದು ಆಣೆಭಾಷೆ ಹಾಕಿಕೊಂಡ ಮೇಲೆ ಏನು-?”
ಗರುಡಾಚಾರ್ಯನ ನಾಸಿಕೋತ್ಪನ್ನ ವಾಗ್ಝರಿ ವಾಕ್ಯ ತಪ್ಪಿ ನಿಂತು ಇನ್ನೆರಡು ಚಿಟಿಕೆ ನಸ್ಯದಿಂದ ಸ್ಫೂರ್ತವಾಯಿತು. ಧೆರ್ಯ ತಂದು ಸುತ್ತ ನೋಡಿ, ಚಂದ್ರಿಯ ಮುಖ ಕಂಡು, ಮುಚ್ಚುಮರೆಯೇಕೆಂದು ಅಂದೇಬಿಟ್ಟ:
“ನೀವು ಹೇಳಿದ ಮಾತನ್ನು ಗುರುಗಳೂ ಒಪ್ಪುತ್ತಾರೆ. ಏನು? ನಾನು ಸಂಸ್ಕಾರ ಮಾಡಬಹುದೋ, ಬಾರದೋ ವಿಷಯ ಒತ್ತಟ್ಟಿಗಿರಲಿ. ಅವ ಬ್ರಾಹ್ಮಣ ಹೌದೊ ಅಲ್ಲವೊ ಎಂಬೋದು ನಿಜವಾದ ಪ್ರಶ್ನೆ. ಏನು?-ಶೂದ್ರಳ ಸಹವಾಸ ಮಾಡಿದವ…”
ಈ ಮಾಧ್ವರ ಆಚಾರ ಎಷ್ಟು ಆಳವಾದ್ದೆಂದು ಕುತೂಹಲದಿಂದ ನೋಡುತ್ತಿದ್ದ ಅಗ್ರಹಾರದ ಏಕಮಾತ್ರ ಸ್ಮಾರ್ತ ದುರ್ಗಾಭಟ್ಟ ಚಂದ್ರಿಯನ್ನು ವಾರೆಗಣ್ಣಿನಿಂದ ನೋಡುತ್ತ ಕಿಡಿ ಹಾರಿಸಿದ:
“ಛಿ ಛಿ ಛಿ, ದುಡುಕಬೇಡಿ ಆಚಾರ್ಯರೇ. ಶೂದ್ರಳೊಬ್ಬಳನ್ನ ಸೂಳಿಯಾಗಿಟ್ಟುಕೊಂಡಾಕ್ಷಣ ಬ್ರಾಹ್ಮಣ್ಯ ನಾಶವಾಗಲ್ಲ. ಉತ್ತರದಿಂದ ಈ ಕಡೆ ಬಂದ ನಮ್ಮ ಪೂರ್ವಿಕರು-ಬೇಕಾದರೆ ಪ್ರಾಣೇಶಾಚಾರ್ಯರನ್ನು ಕೇಳಿ- ದ್ರಾವಿಡ ಹೆಂಗಸರ ಸಹವಾಸ ಮಾಡಿದರೆಂದು ಇತಿಹಾಸದ ಪ್ರತೀತಿ. ನಾನು ಗೇಲಿಗೆ ಅನ್ನುತ್ತಿದ್ದೇನೆಂದಲ್ಲ… ಹಾಗೆ ನೋಡುತ್ತ ಹೋದರೆ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿ ಬರುವ ಲೌಕಿಕರು ಬಸರೂರು ಸೂಳೆಯರ…”
ಮಾಧ್ವರನ್ನಿವ ಕಾಲು ಕೆರೆದು ಗೇಲಿಮಾಡುತ್ತಿದ್ದಾನೆಂದು ಗರುಡಾಚಾರ್ಯನಿಗೆ ರೇಗಿತು:
“ಸ್ವಲ್ಪ, ಸ್ವಲ್ಪ ತಡೆಯಿರಿ ದುರ್ಗಾಭಟ್ಟರೆ, ಇಲ್ಲಿ ಪ್ರಶ್ನೆ ಬರಿ ಕಾಮಸಂಬಂಧದ್ದಲ್ಲ. ಅನುಲೋಮ ವಿಲೋಮದ ಬಗ್ಗೆ ಕಾಶಿಗೆ ಹೋಗಿ ವೇದಾಂತ ಓದಿ ಬಂದ ವೇದಾಂತ ಶಿರೋಮಣಿ ಪ್ರಾಣೇಶಾಚಾರ್ಯರಿಗೆ ತಾವು ಕಲಿಸಿಕೊಡಬೇಕಿಲ್ಲ. ಏನು? ನಿಮ್ಮ ಮತದ, ನಮ್ಮ ಮತದ ದಿಗ್ಗಜಪಂಡಿತರ ಜೊತೆ ವಾದಿಸಿ, ದಕ್ಷಿಣದ ಸಮಸ್ತ ಪೀಠಗಳಲ್ಲಿ ಪ್ರಶಸ್ತಿಗಳಿಸಿ, ಹದಿನೆದು ಜರಿಶಾಲುಗಳನ್ನ ಬೆಳ್ಳಿತಟ್ಟೆಗಳನ್ನ ಬಹುಮಾನವಾಗಿ ಪಡೆದ-ಏನು?-ನಮ್ಮ ಆಚಾರ್ಯರಿಗೆ-ಏನು?”
ಪ್ರಾಣೇಶಾಚಾರ್ಯರಿಗೆ ಮಾತು ಮುಖ್ಯ ಪ್ರಶ್ನೆಯಿಂದ ದೂರ ಸರಿದು ತನ್ನ ಪ್ರಶಂಸೆಗೆ ಇಳಿದಿದ್ದರಿಂದ ಸಂಕೋಚವಾಗಿ-
“ಲಕ್ಷ್ಮಣಾ, ನೀನು ಹೇಳೋದು ಏನು? ನಾರಣಪ್ಪನಿಗೆ ನಿನ್ನ ಹೆಂಡತಿಯ ತಂಗಿಯನ್ನೇ ಕೊಟ್ಟಿತ್ತಲ್ಲವೇ?”
ಲಕ್ಷ್ಮಣಾಚಾರ್ಯ ಕಣ್ಣನ್ನು ಮುಚ್ಚಿ-
“ಎಲ್ಲಾ ಒಟ್ಟು ತಮ್ಮ ಅಪ್ಪಣೆ, ತಮ್ಮ ಅನುಮತಿ. ನಮಗೆ ಏನು ಧರ್ಮಸೂಕ್ಷ್ಮ ಗೊತ್ತು? ನಾರಣಪ್ಪ-ಗರುಡ ಹೇಳೋ ಹಾಗೇ-ಕೀಳು ಜಾತಿಯ ಹೆಣ್ಣೊಂದರ ಸಂಪರ್ಕವನ್ನ…”ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿದ. ಕಣ್ಣನ್ನು ಬಿಟ್ಟು ಮೂಗನ್ನು ಅಂಗವಸ್ತದಿಂದ ತೋಡಿಕೊಳ್ಳುತ್ತ-“ಪ್ರಶ್ನೆ ತಾವು ತಿಳಿದಿರೋ ಹಾಗೆ ಅವಳು ಮಾಡಿದ ಅಡಿಗೇನೂ ಊಟ ಮಾಡ್ತಿದ್ದ ಎಂಬೋದು…”
“ಮಧ್ಯಪಾನಾನ್ನೂ ಮಡ್ತಿದ್ದ ಎಂಬೋದು…” ನಾರಣಪ್ಪನ ಎದುರು ಮನೆಯ ಪದ್ಮನಾಭಾಚಾರ್ಯ ಧ್ವನಿಗೂಡಿಸಿದ.
“ಮಧ್ಯಪಾನಾ ಇರಲಿ, ಮಾಂಸಾಹಾರಾನ್ನೂ ಮಾಡುತ್ತಿದ್ದ ಎಂಬೋದು” ಗರುಡಾಚಾರ್ಯ ದುರ್ಗಾಭಟ್ಟರ ಕಡೆ ತಿರುಗಿ ಅಂದ: “ನಿಮಗೆ ಅದೂ ಅಡ್ಡಿಯಿರಲಿಕ್ಕಿಲ್ಲ. ನಿಮ್ಮ ಮತಾಚಾರ್ಯರು ಅನುಭವಪೂರ್ಣಾ ಅಗಲಿಕ್ಕೆಂದು ಪರಕಾಯಪ್ರವೇಶ ಮಾಡಿ ರಾಣಿ ಜೊತೆ ಮೆಮರೆತರಲ್ಲವೇ?”
ಮಾತು ಹದ ಮೀರುತ್ತಿದೆಯೆಂದು ಪ್ರಾಣೇಶಾಚಾರ್ಯರು “ಗರುಡಾ, ಸ್ವಲ್ಪ ಸುಮ್ಮನಿರು” ಎಂದರು.
“ತಾಳಿ ಕಟ್ಟಿದ ಹೆಂಡತಿಯನ್ನು ಬಿಟ್ಟ. ಹೋಗಲಿ ಎಂದರೆ…”, ಕಣ್ಣು ಮುಚ್ಚಿ ಲಕ್ಷ್ಮಣಾಚಾರ್ಯ ಮತ್ತೆ ಮಾತನ್ನಾಡಲು ಪ್ರಾರಂಭಿಸಿದ: “ಯಾವಳನ್ನೊ ಕಟ್ಟಿಕೊಂಡ. ಭ್ರಾಂತಿ ಹಿಡಿದು ಸತ್ತ ನನ್ನ ಮನೆಯವಳ ತಂಗಿಯ ಸಂಸ್ಕಾರವನ್ನೂ ಮಾಡಲಿಲ್ಲ. ಅದೂ ಹೋಗಲಿ ಎಂದರೆ ಅವ ಸ್ವತಃ ಅಪ್ಪ ಅಮ್ಮನ ಶ್ರಾದ್ಧಾನ್ನೂ ಮಾಡಲಿಲ್ಲ. ನಮಗೆ ಹತ್ತಿರದವನೆಂದು ನಾನೇನು ಮುಚ್ಚಿಕೊಳ್ಳುವವನಲ್ಲ. ನನ್ನ ಹೆಂಡತಿಯ ತಾಯಿಯ ಅಣ್ಣನ ಮಗ ಅವನು. ಸ್ವಂತದವನೆಂದು ನಾವು ಮಡಿಲಲ್ಲಿ ಹಾಕಿಕೊಳ್ಳೋಷ್ಟು ಹಾಕ್ಕೊಂಡೆವು. ಹೋಗಲಿ ಎಂದರೆ, ಎಲ್ಲ ಬ್ರಾಹ್ಮಣರ ಎದುರು ಹೊಳೆಗೆ ಬಂದು, ತಲೆತಲಾಂತರದಿಂದ ಮನೆಯಲ್ಲಿ ಪೂಜೆ ಮಾಡಿದ ಆ ಸಾಲಿಗ್ರಾಮವನ್ನ ಅವ ನೀರಿಗೆ ಎಸೆದು ಥೂ ಎಂದು ಉಗಿದು ಬಿಡೋದ? ಅದೂ ಹೋಗಲಿ ಎಂದರೆ ನಮಗೆಲ್ಲಾ ಕಾಣಲಿ ಎಂದೇ ತುರುಕರನ್ನು ಕರೆದುಕೊಂಡು ಬಂದು ಅಂಗಳದಲ್ಲೆ ಅಪೇಯಪಾನ ಅಭಕ್ಷ್ಯಭೋಜನವನ್ನು ಮಾಡೋದ? ಅಯ್ಯ, ಯಾಕಯ್ಯ ಎಂದೇನಾದರು ಹಿತ ಹೇಳಹೋದರೆ ಹೀನಾಮಾನ ಬೆದು ಬಿಡುತ್ತಿದ್ದ. ಅವನಿಗೆ ಜೀವವಿರುವಷ್ಟೂ ಕಾಲ ಅವನಿಗೆ ಹೆದರಿಕೊಂಡು ಬದುಕಬೇಕಾಗಿಬಂತು.”
ತನ್ನ ಗಂಡ ಲಾಯಕ್ಕಾಗಿ ಹೇಳಿದರೆಂದು ಒಳಗಿನಿಂದ ಆಲಿಸುತ್ತಿದ್ದ ಅವರ ಹೆಂಡತಿ ಅನುಸೂಯಳಿಗೆ ಆನಂದವಾಯಿತು. ಕಂಬಕ್ಕೊರಗಿ ಕೂತಿದ್ದ ಚಂದ್ರಿ ಕಣ್ಣಿಗೆ ಬಿದ್ದು, ಮನಸಾರೆ ಶಪಿಸಿದಳು: ಅಪರಾತ್ರಿಯಲ್ಲಿ ಇವಳನ್ನು ಹುಲಿ ಮೆಟ್ಟಲಿ. ಹಾವು ಕಡಿಯಲಿ. ಈ ರಂಡೆ, ಈ ರಂಭೆ ಅವನ ತಲೆಗೆ ಮದ್ದು ಹಾಕಿಲ್ಲದಿದ್ದರೆ ತನ್ನ ಸ್ವಂತ ಸೋದರಮಾವನ ಮಗನಾದ ಅವ ಯಾಕೆ ತನ್ನ ಕುಟುಂಬದ ಹೆಣ್ಣನ್ನ ಖಾಯಿಲೆ ಹಿಡಿದಿದೇಂತ ದೂಕಿ, ಆಸ್ತೀನ ಪರಭಾರೆ ಮಾಡಿ, ಈ ಮುಂಡೆಯ ಕೊರಳಿಗೆ ಪಿತ್ರಾರ್ಜಿತ ಬಂಗಾರಾನ್ನೆಲ್ಲ ಹಾಕಿ… ಚಂದ್ರಿಯ ಕೊರಳಿನಲ್ಲಿದ್ದ ನಾಲ್ಕೆಳೆಯ ಚಿನ್ನದ ಸರ, ಕೆಯ ಕಡಗ ನೋಡಿ ಅನುಸೂಯಳಿಗೆ ದುಃಖ ತಡೆಯಲಾಗದೆ ಗೋಳೋ ಎಂದು ಅತ್ತುಬಿಟ್ಟಳು. ಈಗ ತನ್ನ ತಂಗಿ ಬದುಕಿದ್ದರೆ ಇದು ಅವಳ ಕೊರಳಿನಲ್ಲಿರಬೇಕಿತ್ತು. ತನ್ನ ರಕ್ತಸಂಬಂಧಿಯ ಶವ ಹೀಗೆ ಸಂಸ್ಕಾರವಿಲ್ಲದೆ ಕಾಯಬೇಕಾಗಿ ಬರುತ್ತಿತ್ತ? ಎಲ್ಲ ಈ ದರಿದ್ರದ ರಂಡೆಯಿಂದ ಆಯಿತಲ್ಲ, ಅವಳ ಮುಖಕ್ಕೆ ಬೆಂಕಿಯಿಡಲಿ ಎಂದು ಕುದಿದು ಕುದಿದು ಗೋಳಾಡಿದಳು.
ಬ್ರಾಹ್ಮಣಾರ್ಥದಿಂದಲೇ ಜೀವನ ನಡೆಯಬೇಕಾಗಿದ್ದ, ಭೋಜನವೆಂದರೆ ಹತ್ತು ಮೆಲಿ ಎಗ್ಗಿಲ್ಲದೆ ತಾಲಿ ಹಿಡಿದು ನಡೆದುಬಿಡುತ್ತಿದ್ದ ದಾಸಾಚಾರ್ಯ ತನ್ನ ಕಷ್ಟವನ್ನ ತೋಡಿಕೊಂಡ:
“ಅವನನ್ನು ನಮ್ಮ ಅಗ್ರಹಾರದಲ್ಲಿ ಇಟ್ಟುಕೊಂಡೀವಿ ಅಂತ-ನಿಮಗೆಲ್ಲ ತಿಳಿದಿರೋ ಹಾಗೆ ಸಂತರ್ಪಣೆ ಬ್ರಾಹ್ಮಣಾರ್ಥ ಅದು ಇದೂಂತ ಯಾವುದಕ್ಕೂ ಎರಡು ವರ್ಷ ನಮಗೆ ಕರೆ ಬರಲಿಲ್ಲ. ಈಗ ದುಡುಕಿ ನಾವೇನಾದರೂ ಅವನ ಶವಸಂಸ್ಕಾರ ಮಾಡಿದ್ದೇ ಆದ ಪಕ್ಷದಲ್ಲಿ ಬ್ರಾಹ್ಮಾಣಾರ್ಥಕ್ಕೆ ಸೊನ್ನೆಯೇ ಸರಿ. ಅಂದರೆ ಈಗ ಅವನ ಶವಾನ್ನ ಅಗ್ರಹಾರದಾಗ ಇಟ್ಟುಕೊಂಡು ಊಟ ಬಿಟ್ಟು ಉಪವಾಸ ಇರಲಿಕ್ಕೆ ಶಕ್ಯವೂ ಇಲ್ಲ. ಈ ಧರ್ಮಸಂಕಟದಲ್ಲಿ ಪ್ರಾಣೇಶಾಚಾರ್ಯರು ಧರ್ಮಸೂಕ್ಷ್ಮ ಏನೂಂತ ತಿಳಿದು ಹೇಳಬೇಕು. ಅವರು ಅಂದದ್ದಕ್ಕೆ ಎದುರು ಹೇಳೋರು ಯಾರು ನಮ್ಮ ಮತದಲ್ಲಿ…”
ಇದು ತಮಗೆ ಸೇರಿದ ಪ್ರಶ್ನೆಯಲ್ಲವೆಂದು ಉದಾಸೀನರಾದ ದುರ್ಗಾಭಟ್ಟರು ಚಂದ್ರಿಯನ್ನು ಪರೀಕ್ಷಿಸುತ್ತ ಕೂತರು. ಸಾಮಾನ್ಯ ಮನೆಯಿಂದ ಹೊರಗೆ ಹೊರಡದಿದ್ದ, ಕುಂದಾಪುರದಿಂದ ನಾರಣಪ್ಪ ಮೆಚ್ಚಿ ತಂದ ಈ ವಸ್ತು ಇಷ್ಟು ಪಕ್ಕಾಗಿ ಅವರ ರಸಿಕ ಕಣ್ಣಿಗೆ ಸಿಕ್ಕಿದ್ದು ಇವತ್ತೇ ಪ್ರಥಮ ಬಾರಿಗೆ. ಥೇಟು ವಾತ್ಸ್ಯಾಯನೋಕ್ತ ವರ್ಣನೆಯ ಚಿತ್ತಿನಿ. ಉಂಗುಷ್ಠಕ್ಕಿಂತ ಉದ್ದವಾದ ಆ ಬೆರಳು ನೋಡು. ಆ ಮೊಲೆಗಳು ನೋಡು, ಸಂಭೋಗದಲ್ಲಿವಳು ಗಂಡನ್ನು ಹೀರಿಬಿಡುತ್ತಾಳೆ. ಚಂಚಲವಾಗಿರಬೇಕಾಗಿದ್ದ ಕಣ್ಣುಗಳು ಈಗ ದುಃಖದಿಂದ ಭೀತಿಯಿಂದ ಬಾಡಿ, ಆಪ್ಯಾಯಮಾನವಾಗಿದ್ದಾಳೆ. ಅವರ ಮಲಗುವ ಕೋಣೆಯಲ್ಲಿ ತೂಗುಹಾಕಿದ್ದ ಆ ರವಿವರ್ಮನ ಪಟದ ಅಂಚಲ್ಲಿ ಬಡತನದ ಸೆರಗಿಗೆ ಮೀರಿದ ಮೊಲೆಗಳನ್ನು ಸಂಕೋಚದಿಂದ ಮುಚ್ಚಿಕೊಂಡ ಮತ್ಸ್ಯಗಂಧಿಯ ಮೂಗು, ಕಣ್ಣು, ತುಟಿ: ಇವಳಿಗೆಂದು ನಾರಣಪ್ಪ ಶಾಲಿಗ್ರಾಮವನ್ನೆಸೆದ, ಮಾಂಸ-ಮದ್ಯಾಹಾರ ಮಾಡಿದ ಎಂಬೋದು ಆಶ್ಚರ್ಯವಲ್ಲ. ಅವನ ಧೆರ್ಯ ಆಶ್ಚರ್ಯ. ಆ ಮುಸಲ್ಮಾನ ಹುಡುಗಿಯನ್ನು ಮದುವೆಯಾದ ಜಗನ್ನಾಥ ಶೃಂಗಾರಶತಕದಲ್ಲಿ ಮ್ಲೇಚ್ಛ ಕನ್ನಿಕೆಯ ಮೊಲೆಗಳನ್ನು ವರ್ಣಿಸಿದ್ದು ನೆನಪಾಗುತ್ತದ್ದೆ. ಪ್ರಾಣೇಶಾಚಾರ್ಯರು ಇಲ್ಲದಿದ್ದರೆ, ನಾರಣಪ್ಪ ಸತ್ತಿರದಿದ್ದರೆ, ಅರಸಿಕರಾದರೂ ಈ ಬ್ರಾಹ್ಮಣರಿಗೆ ಆ ಶ್ಲೋಕವನ್ನು ಹೇಳಿ ವಿವರಿಸಿಬಿಡುತ್ತಿದ್ದರು. ಕಾಮಾತುರಾಣಾಂ-ಅರ್ಥಾv ನಾರಣಪ್ಪನಂತಹವರಿಗೆ-ನ ಭಯಂ ನ ಲಜ್ಜಾ.
ಸಭೆ ಮೌನವಾಗಿದ್ದುದನ್ನು ಕಂಡು ದುರ್ಗಾಭಟ್ಟರು ಅಂದರು :
“ನಾವು ಹೇಳಬೇಕಾದ್ದೆಲ್ಲ ಹೇಳಿಯಾಯಿತಲ್ಲ. ಸತ್ತವರ ತಪ್ಪನ್ನ ಹೆಕ್ಕಿ ಏನು ಪ್ರಯೋಜನ? ಈಗ ಪ್ರಾಣೇಶಾಚಾರ್ಯರು ಹೇಳಲಿ. ನಿಮಗೆ ಹೇಗೋ ನನಗೂ ಅವರು ಗುರುಸಮಾನರು. ಗರುಡಾಚಾರ್ಯ ಅವನ ಮತಗರ್ವದಲ್ಲಿ ಏನೇ ಅನ್ನಲಿ…
ಪ್ರಾಣೇಶಾಚಾರ್ಯರು ತಮ್ಮ ಪ್ರತಿ ಮಾತನ್ನು ತೂಕ ಮಾಡುತ್ತ, ತನ್ನ ಹೆಗಲಿನ ಮೇಲೆ ಇಡಿಯ ಅಗ್ರಹಾರದ ಬ್ರಾಹ್ಮಣ್ಯದ ರಕ್ಷಣೆಯ ಹೊರೆ ಇದೆಯೆಂಬುದನ್ನರಿತು ತಡವರಿಸುತ್ತ ಹೇಳಿದರು :
“ಗರುಡಾ ಹೇಳಿದ : ಅವನಿಗೂ ತನಗೂ ಆಣೆ ಭಾಷೆ ಆಗಿದೇಂತ. ಅದಕ್ಕೆ ಧರ್ಮಶಾಸ್ತದಲ್ಲಿ ನಿವಾರಣೆ ಇದೆ. ಶಾಂತಿ ಮಾಡಿಸಿಕೊಳ್ಳಬೇಕು. ಗೋದಾನವಾಗಬೇಕು. ಪುಣ್ಯಕ್ಷೇತ್ರವೊಂದಕ್ಕೆ ಹೋಗಿಬರಬೇಕು. ಇದು ಖರ್ಚಿನ ಪ್ರಶ್ನೆ. ಈ ಖರ್ಚನ್ನ ನೀನು ಮಾಡು ಎಂಬೋದಕ್ಕೆ ನನಗೆ ಅಧಿಕಾರ ಇಲ್ಲ. ಇನ್ನು ಲಕ್ಷ್ಮಣ, ದಾಸ ಮತ್ತು ಉಳಿದವರು ಎತ್ತಿದ ಪ್ರಶ್ನೆ ನಾರಣಪ್ಪ ಸತ್ಕುಲಪ್ರಸೂತನಾದ ಬ್ರಾಹ್ಮಣ ನಡಕೊಳ್ಳೊ ಹಾಗೆ ನಡಕೊಳ್ಳಲಿಲ್ಲ; ಅಗ್ರಹಾರಕ್ಕೆ ಅಪಖ್ಯಾತಿ ತಂದ ಎಂಬೋದು. ಇದು ಗಾಢವಾದ ಪ್ರಶ್ನೆ. ಇದಕ್ಕೆ ಉತ್ತರ ನನಗೆ ಹೊಳೆಯುತ್ತಿಲ್ಲ. ಕಾರಣ, ಅವನು ಬ್ರಾಹ್ಮಣ್ಯವನ್ನು ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಡಲಿಲ್ಲ ಎಂಬೋದು. ಅವನಿಗೆ ಬಹಿಷ್ಕಾರ ಹಾಕಲಿಲ್ಲ. ಶಾಸ್ತರೀತಿಯಲ್ಲಿ ಅವನು ಬಹಿಷ್ಕೃತನಾಗದೆ ಸತ್ತದ್ದರಿಂದ ಅವನು ಬ್ರಾಹ್ಮಣನಾಗಿಯೇ ಸತ್ತಂತೆ. ಹಾಗೆ ವಿಚಾರ ಮಾಡಿದಲ್ಲಿ ಬ್ರಾಹ್ಮಣರಲ್ಲದವರಿಗೆ ಅವನ ಶವವನ್ನು ಮುಟ್ಟುವ ಅಧಿಕಾರವಿಲ್ಲ. ಮುಟ್ಟಲು ಬಿಟ್ಟರೆ ಆಗಲೂ ನಮ್ಮ ಬ್ರಾಹ್ಮಣ್ಯಕ್ಕೆ ವಂಚನೆ ಬಂದಂತೆ. ಇಷ್ಟೆಲ್ಲ ಇದ್ದೂ ಅವನು ನಡೆದುಕೊಂಡ ರೀತಿಯನ್ನು ಕಂಡು ಕೇಳಿ ನೋಡಿದ ನಿಮಗೆ ಸಂಸ್ಕಾರ ಮಾಡಿ ಎಂದ ಕಡ್ಡಾಯವಾಗಿ ಹೇಳಲಿಕ್ಕೂ ನನಗೆ ಅಂಜಿಕೆಯಾಗುತ್ತದೆ. ಏನು ಮಾಡೋದು, ಧರ್ಮಶಾಸ್ತ ಇದಕ್ಕೆ ಏನೆನ್ನುತ್ತೆ, ದೋಷಪರಿಹಾರಕ್ಕೆ ಶಾಂತಿ ಇತ್ಯಾದಿಗಳು ಪರಿಹಾರವಿದೆಯೋ…
ಬ್ರಾಹ್ಮಣರೆಲ್ಲರೂ ಬೆರಗಾದರು. ಹೆಂಗಸರು ಚಾವಡಿಗೆ ಬಂದು ನಿಂತರು. ಯಾರೂ ತಮ್ಮ ಕಣ್ಣನ್ನು ನಂಬಲಿಲ್ಲ; ಚಂದ್ರಿ ತನ್ನ ನಾಲ್ಕೆಳೆ ಬಂಗಾರದ ಸರ, ಕಡಗ ಬಳೆಗಳನ್ನು ಪ್ರಾಣೇಶಾಚಾರ್ಯರ ಎದುರಿಗಿಟ್ಟು, ಅವರ ಸಂಸ್ಕಾರದ ಖರ್ಚಿಗೆ ಎಂದು ತೊದಲಿ ತಾನು ಮೊದಲು ನಿಂತಲ್ಲಿ ಹೋಗಿ ನಿಂತಳು.
ಎರಡು ಸಾವಿರ ರೂಪಾಯಿಯ ಚಿನ್ನವಾದರೂ ಇದೆ ಅದರಲ್ಲಿ ಎಂದು ಹೆಂಗಸರು ಲೆಕ್ಕ ಹಾಕಿದರು. ಒಬ್ಬಳಾದ ಮೇಲೆ ಒಬ್ಬಳು ತನ್ನ ಗಂಡನ ಮುಖ ನೋಡಿದಳು. ಬ್ರಾಹ್ಮಣರೆಲ್ಲ ಮುಖ ತಗ್ಗಿಸಿದರು : ಅವರಿಗೆ ಭಯವಾಗಿತ್ತು. ಬಂಗಾರದ ಆಸೆಯಿಂದ ಬ್ರಾಹ್ಮಣ್ಯ ನಾಶವಾದೀತೆಂದು ದಿಗಿಲಾಯಿತು. ಆದರೆ ಕ್ಷಣಮಾತ್ರದಲ್ಲಿ ಪ್ರತಿಯೊಬ್ಬನ ಮನಸ್ಸಿನಲ್ಲೂ ಹೊಳೆದ ಪ್ರಶ್ನೆ : ನಾನಲ್ಲದೆ ಬೇರೆ ಬ್ರಾಹ್ಮಣ ನಾರಣಪ್ಪನ ಬೊಜ್ಜ ಮಾಡಿ, ಬ್ರಾಹ್ಮಣ್ಯವನ್ನು ಕಳಿದುಕೊಳ್ಳದೆ, ಬಂಗಾರವನ್ನೂ ತನ್ನ ಹೆಂಡತಿಯ ಕೊರಳಿಗೆ ಏರಿಸಿದರೆ? ಲಕ್ಷ್ಮಣಾಚಾರ್ಯ, ಗರುಡಾಚಾರ್ಯರ ನಡುವೆ ಇದ್ದ ಪರಸ್ಪರ ದ್ವೇಷ ಅಸೂಯೆ ಈ ಹೊಸ ಕಾರಣದಿಂದ ಇನ್ನಷ್ಟು ಹೊತ್ತಿ ಉರಿಯಿತು. ಇವ ಮಾನಗೆಟ್ಟು ತನಗೆ ಸೇರಬೇಕಾದ ಬಂಗಾರವನ್ನು ದೋಚಿ, ಬ್ರಾಹ್ಮಣ್ಯವನ್ನು ಕಳೆದುಕೊಳ್ಳದೆ, ಬಡ ಗೋವೊಂದನ್ನು ನೆವಕ್ಕೆ ದಾನ ಮಾಡಿ, ಇಹಪರವೆರಡನ್ನೂ ಗಟ್ಟಿ ಮಾಡಿಕೊಂಡರೆ? ದುರ್ಗಾಭಟ್ಟರೆಂದುಕೊಂಡರು : ಈ ಮಾಧ್ವರೇನಾದರೂ ನಾರಣಪ್ಪನ ಶವಸಂಸ್ಕಾರ ಮಾಡಲಿ, ನಾನು ಊರೂರು ತಿರುಗಿ ಇವರು ಎಸಗಿದ ಕೃತ್ಯವೆಂಥಾದ್ದು ಎಂದು ಬೀದಿಗೆಳೆಯುತ್ತೇನೆ. ದಾಸಾಚಾರ್ಯಾದಿ ಬಡ ಬ್ರಾಹ್ಮಣರಿಗೆ ಬಾಯಲ್ಲಿ ನೀರೂರಿ ಕಣ್ಣುಗಳು ಒದ್ದೆಯಾದುವು. ಗರುಡ, ಲಕ್ಷ್ಮಣ ಎಲ್ಲಿ ನಮಗೆ ನಾರಣಪ್ಪನ ಕರ್ಮ ಮಾಡಲು ಬಿಟ್ಟಾರು? ಪ್ರಾಣೇಶಾಚಾರ್ಯರೊಬ್ಬರು ಮಾತ್ರ-ಏನೊ ಒಳ್ಳೆಯದು ಮಾಡ ಹೋಗಿ ಈ ಚಂದ್ರಿ ಎಲ್ಲವನ್ನೂ ಹದಗೆಡಿಸಿದಳಲ್ಲ ಎಂದು ಕಳವಳಪಟ್ಟರು.
ಯಾರು ಎಲ್ಲಿ ಒಪ್ಪಿ ಬಿಡುತ್ತಾರೋ ಎಂಬ ಭಯದಿಂದ ಪ್ರತಿಯೊಬ್ಬ ಬ್ರಾಹ್ಮಣನೂ ನಾರಣಪ್ಪನಿಂದ ತಮಗಾದ ಅನ್ಯಾಯಕ್ಕಿಂತ ಇನ್ನೊಬ್ಬನಿಗಾದ ಅನ್ಯಾಯಾನ್ನ ಕಣ್ಣಿಗೆ ಕಟ್ಟುವಂತೆ ಆತುರವಾಗಿ, ಸ್ಪರ್ಧೆಯಲ್ಲಿ ವಿವರಿಸತೊಡಗಿದರು.
ಗರುಡಾಚಾರ್ಯನ ಮಗ ಮನೆ ಬಿಟ್ಟು ಓಡಿ ಹೋಗಿ ಮಿಲಿಟರಿ ಸೇರುವಂತೆ ಪ್ರೇರೇಪಿಸಿದವ ನಾರಣಪ್ಪನಲ್ಲದೆ ಯಾರು? ಅವನಿಗೆ ಪ್ರಾಣೇಶಾಚಾರ್ಯರು ವೇದ ಕಲಿಸಿಕೂಡ ಕೊನೆಗೆ ನಡೆದದ್ದು ನಾರಣಪ್ಪನ ಮಾತೇ. ನಮ್ಮ ಹುಡುಗರನ್ನೆಲ್ಲ ಕೆಡಿಸಬೇಕೆಂದು ಹಠ ತೊಟ್ಟನಲ್ಲ…
ಈಗ ಪಾಪ ಲಕ್ಷ್ಮಣಾಚಾರ್ಯರ ಅಳಿಯನನ್ನೆ ನೋಡಿ. ಪರದೇಶೀ ಹುಡುಗನನ್ನ ಸಾಕಿ ಸಲುಹಿ, ಮಗಳನ್ನು ಕೊಟ್ಟು ಮದುವೆ ಮಾಡಿದರೆ, ನಾರಣಪ್ಪ ಅವನ ಬುದ್ಧೀನ್ನೂ ಕೆಡಿಸಿದ. ತಿಂಗಳಲ್ಲಿ ಒಂದು ದಿನ ಅವನ ಮೋರೆ ಕಾಣೋದೇ ಕಷ್ಟ…

ಅದೂ ಹೋಗಲಿ ಎಂದರೆ, ಆ ಗಣಪತಿ-ಕಟ್ಟೇಲಿರೋ ಮೀನು ತಲೆತಲಾಂತರದಿಂದಲೂ ದೇವರದ್ದು. ಅದನ್ನು ಹಿಡಿದರೆ ರಕ್ತಕಾರಿ ಸಾಯುತ್ತಾರೆಂದು ಪ್ರತೀತಿ ಇದ್ದರೂ ಈ ಚಾಂಡಾಲ ಅದನ್ನು ನಿರ್ಲಕ್ಷಿಸಿ ತುರುಕರನ್ನು ಕಟ್ಟಿಕೊಂಡು ಹೋಗಿ ಸಿಡಿಮದ್ದು ಹಾಕಿ ಮೀನುಗಳನ್ನು ಕೊಂದ. ಈಗ ಶೂದ್ರಾದಿಗಳೂ ಅಲ್ಲಿ ಹೋಗಿ ಮೀನು ಹಿಡಿಯುತ್ತಾರೆ. ಬ್ರಾಹ್ಮಣರ ವರ್ಚಸ್ಸೇ ಅನ್ಯರ ಮೇಲೆ ಇರದ ಹಾಗೆ ಮಾಡಿದ ಅಧಮಾ ಅವ. ಅದೂ ಹೋಗಲಿ ಎಂದರೆ, ನಮ್ಮ ಅಗ್ರಹಾರಾನ್ನ ಹಾಳು ಮಾಡಿದ್ದು ಸಾಲದೂಂತ ಪಾರಿಜಾತಪುರದ ಹುಡುಗರಿಗೆ ನಾಟಕದ ಹುಚ್ಚು ಹತ್ತಿಸಿದ.
ಚಾಂಡಾಲನಿಗೆ ಬಹಿಷ್ಕಾರ ಹಾಕಿಸಿಬಿಡಬೇಕಿತ್ತು. ಏನು?
“ಅದೆಲ್ಲಿ ಸಾಧ್ಯವಾಗುತ್ತಿತ್ತೊ, ಗರುಡ? ಬಹಿಷ್ಕಾರ ಹಾಕಿಸಿದರೆ ನಾನು ಮುಸಲ್ಮಾನನಾಗುತ್ತೇನೆ ಎಂದು ಹೆದರಿಸಿದ. ಪ್ರಥಮ ಏಕಾದಶಿ ದಿನ ತುರುಕರನ್ನು ತಂದು ಊಟ ಹಾಕಿದ. ಬಹಿಷ್ಕಾರ ಹಾಕಿ ನೋಡಿ-ನಾನು ತುರುಕನಾಗಿ, ನಿಮ್ಮನ್ನೆಲ್ಲ ಕಂಬಕ್ಕೆ ಕಟ್ಟಿಸಿ ನಿಮ್ಮ ಬಾಯಿಗಿಷ್ಟು ಗೋಮಾಂಸ ತುರುಕಿ, ನಿಮ್ಮೆಲ್ಲರ ಬ್ರಾಹ್ಮಣ್ಯ ನಾಶಾ ಆಗೋಹಾಗೆ ಮಾಡ್ತೇನೆ ಎಂದಿದ್ದ. ಅವನು ತುರುಕಾ ಆಗಿಬಿಟ್ಟಿದ್ದರೆ ಅವನನ್ನ ಅಗ್ರಹಾರದಿಂದ ಓಡಿಸೋಕ್ಕೆ ಕಾಯಿದೆಯೂ ಇಲ್ಲ. ಏನು ಮಾಡೋದು ಹೇಳು ಇಂಥಾ ಸಂದಿಗ್ಧದಲ್ಲಿ? ಪ್ರಾಣೇಶಾಚಾರ್ಯರೂ ಕೆಕಟ್ಟಿ ಕೂರಲಿಲ್ಲವ?”
ಕಲಸಿದ ದಿಂಡುಮಾವಿನ ಗೊಜ್ಜಿನ ಅನ್ನವನ್ನು ಒಂದು ತುತ್ತೂ ತಿನ್ನಲಾರದೆ ಆಪೋಶನ ತೆಗೆದುಕೊಂಡು ಏಳಬೇಕಾಗಿ ಬಂದಿದ್ದರಿಂದ ಪ್ರಕ್ಷುಬ್ಧನಾಗಿದ್ದ ದಾಸಾಚಾರ್ಯ ತನ್ನ ಕೊನೆಯ ಮಾತು ಸೇರಿಸಿದ:
“ಅವನ ಅಪ್ಪ ಸತ್ತಮೇಲೆ ಅವನ ಹಿತ್ತಲಿನ ಹಲಸಿನ ಹಣ್ಣಿನ ಜೇನಿನಂತಹ ಒಂದು ತೊಳೆ ಒಬ್ಬ ಬ್ರಾಹ್ಮಣನ ಬಾಯಿಗೂ ದಕ್ಕಲಿಲ್ಲ…”
ಬಂಗಾರವನ್ನೆ ದುರುಗುಟ್ಟಿ ನೋಡುತ್ತಿದ್ದ ಹೆಂಗಸರಿಗೆ ತಮ್ಮ ಗಂಡಂದಿರ ಮಾತು ಕೇಳಿ ನಿರಾಶೆಯಾಯಿತು. ಗರುಡಾಚಾರ್ಯನ ಹೆಂಡತಿ ಸೀತಾದೇವಿಗೆ ತನ್ನ ಮಗ ಮಿಲಿಟರಿ ಸೇರಿದ್ದರ ಬಗ್ಗೆ ಅಧಿಕಪ್ರಸಂಗ ಮಾಡಲು ಏನು ಹಕ್ಕು ಲಕ್ಷ್ಮಣಾಚಾರ್ಯನಿಗೆ ಎಂದೂ, ಲಕ್ಷ್ಮಣಾಚಾರ್ಯನ ಹೆಂಡತಿ ಅನುಸೂಯಳಿಗೆ ತನ್ನ ಅಳಿಯನ ಮಾತನ್ನೆತ್ತಲು ಗರುಡಾಚಾರ್ಯನಿಗೆ ಏನು ಹಕ್ಕು ಎಂದೂ, ಕೋಪ ಬಂದಿತು.
ಇದೆಂತಹ ಪರೀಕ್ಷೆ ಬಂತಪ್ಪ ಎಂದು ಪ್ರಾಣೇಶಾಚಾರ್ಯ ಸ್ವಗತವೆನ್ನುವಂತೆ ಅಂದರು:
“ಈಗೇನು ಉಪಾಯ ಹಾಗಾದರೆ… ಅಗ್ರಹಾರದಲ್ಲೊಂದು ಹೆಣ ಇಟ್ಟುಕೊಂಡು ಕೆಕಟ್ಟಿ ಕೂರೋದು ಸಾಧ್ಯವ? ಸನಾತನಧರ್ಮದ ಪ್ರಕಾರ ಅಗ್ರಹಾರದಿಂದ ಹೆಣಾ ತೆಗೆದುಕೊಂಡು ಹೋಗೋವರೆಗೆ ದೇವರ ಪೂಜೆ, ಸ್ನಾನ, ಸಂಧ್ಯಾವಂದನೆ, ಊಟ, ಉಪಚಾರ ಏನೂ ನಡೆಯೋವಂತಿಲ್ಲ… ಬಹಿಷ್ಕೃತನಲ್ಲದ್ದರಿಂದ ಬ್ರಾಹ್ಮಣರಲ್ಲದೆ ಬೇರೆ ಯಾರೂ ಅವನ ಹೆಣಾ ಮುಟ್ಟುವಂತಿಲ್ಲ…”
“ಬಹಿಷ್ಕಾರ ಹಾಕದೇ ಬಂದದ್ದೆ ಸಂದಿಗ್ಧ…”
ನಾರಣಪ್ಪನಿಗೆ ಬಹಿಷ್ಕಾರ ಹಾಕಿಸಬೇಕೆಂದು ಹಿಂದಿನಿಂದ ಗಲಾಟೆ ಮಾಡುತ್ತ ಬಂದಿದ್ದ ಗರುಡಾಚಾರ್ಯ-“ನನ್ನ ಮಾತನ್ನ ನೀವು ಕೇಳಲಿಲ್ಲ” ಎಂದು ಮೂದಲಿಸುವ ಧ್ವನಿಯಲ್ಲಿ ಹೇಳಿದ.
“ಅವನು ಮುಸಲ್ಮಾನನಾಗಿ ಬಿಟ್ಟಿದ್ದರೆ ಈ ಅಗ್ರಹಾರಾನ್ನ ನಾವೇ ಬಿಡಬೇಕಾಗಿ ಬಂದುಬಿಡ್ತಿತ್ತಲ್ಲ. ನಮಗೆ ದಿಕ್ಕೇ ಇಲ್ಲದೆ ಹೋಗ್ತಿತ್ತಲ್ಲ…”
ಬ್ರಾಹ್ಮಣರೆಲ್ಲ ಒಟ್ಟಾಗಿ ವಾದಿಸಿದರು.
ಇಡೀ ದಿನ ಊಟವಿಲ್ಲದೆ ಇರುವುದರ ಸಂಕಟವನ್ನು ಕಲ್ಪಿಸಿಕೊಂಡ ದಾಸಾಚಾರ್ಯನಿಗೆ ಥಟ್ಟನೆ ಒಂದು ಸೂಚನೆ ಹೊಳೆಯಿತು. ಹರ್ಷಿತನಾಗಿ ಎದ್ದು ನಿಂತು ಹೇಳಿದ:
“ಪಾರಿಜಾತಪುರದ ಬ್ರಾಹ್ಮಣರಿಗೂ ನಾರಣಪ್ಪನಿಗೂ ಸ್ನೇಹವಿತ್ತೆಂದು ಕೇಳಿಬಲ್ಲೆ. ಪರಸ್ಪರ ಊಟ-ಉಪಚಾರವೂ ಇತ್ತಂತೆ. ಅಲ್ಲಿ ಹೋಗಿ ಕೇಳುವ. ಅವರ ಆಚಾರ ನಮ್ಮದರ ಹಾಗೆ ಬಿಗಿಯಲ್ಲವಲ್ಲ…”
ಪರಿಜಾತಪುರದವರು ಅಡ್ಡಪಂಕ್ತಿ ಬ್ರಾಹ್ಮಣರು; ಸ್ಮಾರ್ತರು. ಹಿಂದೆ ಒಂದು ಕಾಲದಲ್ಲಿ ಒಬ್ಬ ವಿಧವೆ ಬಸುರಾದ್ದನ್ನ ಅಗ್ರಹಾರದವರು ಮುಚ್ಚಿಟ್ಟುಕೊಂಡರೆಂದೂ, ಶೃಂಗೇರಿಯ ಗುರುಗಳಿಗೆ ಈ ಸುದ್ದಿ ತಲುಪಿ ಇಡೀ ಅಗ್ರಹಾರಕ್ಕೆ ಬಹಿಷ್ಕಾರ ಹಾಕಿದರೆಂದೂ ಪ್ರತೀತಿ. ಪಾರಿಜಾತಪುರದವರು ಒಟ್ಟಿನಲ್ಲಿ ಸುಖಿಗಳು; ನೇಮ ನಿಷ್ಠೆಯೆಂದು ಕುಣಿಯುವವರಲ್ಲ; ಅಡಿಕೆ ತೋಟ ಮಾಡುವುದರಲ್ಲಿ ನಿಸ್ಸೀಮರು-ಶ್ರೀಮಂತರು. ಆದಕಾರಣದಿಂದ ದುರ್ಗಾಭಟ್ಟನಿಗೆ ಅವರ ಮೇಲೆ ಪ್ರೀತಿ, ಅಲ್ಲದೆ ಎಷ್ಟೆಂದರೂ ತನ್ನ ಹಾಗೆ ಸ್ಮಾರ್ತರಲ್ಲವೆ ಎಂದು ಗುಟ್ಟಾದ ಅಭಿಮಾನ. ಗುಪ್ತವಾಗಿ ಆಗ ಈಗ ಅಲ್ಲಿ ಅವ ಅವಲಕ್ಕಿ ಉಪ್ಪಿಟ್ಟು ಕಾಫಿಯನ್ನು ಸೇವಿಸಿದ್ದೂ ಉಂಟು. ಖುದ್ದಾಗಿ ಊಟ ಮಾಡುವಷ್ಟು ಮುಂದೆ ಬಿದ್ದಿದ್ದಿಲ್ಲ-ಅಷ್ಟೆ. ವ್ಯವಹಾರದ ಹೊರತಾಗಿ ಇನ್ನೊಂದು ಅವನಿಗಿದ್ದ ಆಕರ್ಷಣೆಯೆಂದರೆ ಪಾರಿಜಾತಪುರದ ಎಲೆಯಡಿಕೆ ತಿನ್ನುವ ಸಕೇಶಿ ವಿಧವೆಯರು. ದಾಸಾಚಾರ್ಯನ ತಲೆಹರಟೆಗೆ ಕ್ರುದ್ಧನಾಗಿ ’ಈ ಮಾಧ್ವನ ಸೊಕ್ಕೆ-ಉಣ್ಣಲಿಕ್ಕೆ ಗತಿಯಿಲ್ಲದಿದ್ದರೂ’ ಎಂದು ಎದ್ದುನಿಂತು :
“ನೀನು ಆಡಿದ್ದು ಪರಮ ಅನ್ಯಾಯದ ಮಾತು. ನೀವೇನೋ ಅವರು ಅಡ್ಡಪಂಕ್ತಿ ಬ್ರಾಹ್ಮಣರೂಂತ ತಿಳಿದರೂ, ಅವರು ತಾವು ಕೀಳೆಂದು ಭಾವಿಸಿಲ್ಲವಲ್ಲ? ನಿಮ್ಮ ಮತದವನ ಹೆಣಾನ ತೆಗೆಯೋದರಿಂದ ನಿಮ್ಮ ಜಾತಿ ಹೋಗೋದಾದರೆ ಅವರದ್ದೂ ಇನ್ನಷ್ಟು ಹೋದಂತೆ ಅಲ್ಲವೆ? ನೀವು ಹೋಗಿ ಕೇಳೋ ಸಾಹಸ ಮಾಡಿ-ತಕ್ಕ ಪೂಜೆ ಮಾಡಿಸಿಕೊಂಡು ಬರ್‍ತೀರಿ ಅಷ್ಟೆ. ಪಾರಿಜಾತಪುರದ ಮಂಜಯ್ಯನ ಹತ್ತಿರ ನಿಮ್ಮನ್ನೆಲ್ಲ ಕೊಳ್ಳುವಷ್ಟು ಹಣ ಇದೆ ಗೊತ್ತುಂಟ…?”

ಪ್ರಾಣೇಶಾಚಾರ್ಯರು ದುರ್ಗಾಭಟ್ಟನ ಕೋಪವನ್ನು ಶಮನ ಮಾಡಲು ಹೇಳಿದರು.
“ನೀವು ಅನ್ನೋದು ನ್ಯಾಯ, ಭಟ್ಟರೆ. ನಾವು ಮಾಡದ್ದನ್ನು ಇನ್ನೊಬ್ಬರ ಕೆಲಿ ಮಾಡಿಸೋದು ಬ್ರಾಹ್ಮಣ್ಯ ಅಲ್ಲ. ಆದರೆ ರಕ್ತ ಸಂಬಂಧ ಹೇಗೆ ದೊಡ್ಡದೋ ಸ್ನೇಹ ಸಂಬಂಧಾನೂ ಹಾಗೆ ದೊಡ್ಡದು ತಾನೆ? ನಾರಣಪ್ಪನಿಗೂ ಅವರಿಗೂ ಸ್ನೇಹಾ ಇರೋದು ನಿಜವಾದರೆ ಅವರಿಗೆ ತಮ್ಮ ಮಿತ್ರನೊಬ್ಬ ಸತ್ತ ವಾರ್ತೆ ತಿಳಿಯೋದು ಅವಶ್ಯಾಂತ ನೀವು ಒಪ್ಪುತ್ತೀರಿ ತಾನೆ?”
ದುರ್ಗಾಭಟ್ಟರು-“ಒಪ್ಪಿದೆ, ಆಚಾರ್ಯರೆ. ನಿಮ್ಮ ಮತದವರ ಬ್ರಾಹ್ಮಣ್ಯವೆಲ್ಲ ನಿಮ್ಮ ಕೆಯಲ್ಲಿದೆ ಈಗ. ತಮ್ಮ ಜವಾಬ್ದಾರಿ ದೊಡ್ಡದು. ತಾವು ನಿರ್ಧರಿಸಿದ್ದಕ್ಕೆ ಯಾರು ಅಡ್ಡಿ ಮಾಡ್ತಾರೆ?” ಎಂದು ಸತ್ಯವಾಗಿ ಅನ್ನಿಸಿದ್ದನ್ನು ಅಂದು ಸುಮ್ಮನಾದರು.
ಮತ್ತೆ ಬಂಗಾರದ ಪ್ರಶ್ನೆ ಎದ್ದಿತು. ಪಾರಿಜಾತಪುರದವರು ಸಂಸ್ಕಾರ ಮಾಡಲು ಒಪ್ಪಿದರೆ ಅವರಿಗೆ ಬಂಗಾರ ಸೇರುವುದು ಸರಿಯೋ ತಪ್ಪೋ ? ಲಕ್ಷ್ಮಣಾಚಾರ್ಯರ ಹೆಂಡತಿ ಅನುಸೂಯಳಿಗೆ ತನ್ನ ತಂಗಿಯ ಮೆಮೇಲೆ ಇರಬೇಕಾಗಿದ್ದ ಆಭರಣ ಆ ಅಡ್ಡಪಂಕ್ತಿ ಬ್ರಾಹ್ಮಣರಿಗೆ ದಕ್ಕುವುದು ಸಹಿಸಲಿಲ್ಲ. ತಡೆದುಕೊಳ್ಳಲಾರದೆ ಅಂದುಬಿಟ್ಟಳು:
“ಯಾರ ಆಸ್ತಿಯೆಂದು ಅವಳು ಈ ಬಂಗಾರಾನ್ನ ಪರಭಾರೆ ಮಾಡ್ತಾಳಂತೆ? ಎಲ್ಲ ನೆಟ್ಟಗಿದ್ದಿದ್ದರೆ ನನ್ನ ತಂಗಿಯ ಕೊರಳಿನಲ್ಲಿರಬೇಕಾಗಿತ್ತು ಅದು” ಎಂದು ಬಿಕ್ಕಿ ಅತ್ತಳು.
ಹೆಂಡತಿಯ ಮಾತು ಲಕ್ಷ್ಮಣಾಚಾರ್ಯನಿಗೆ ಸರಿಯೆನ್ನಿಸಿದರೂ ತನ್ನ ಪತಿತ್ವಕ್ಕೆ ಚ್ಯುತಿಯಾಗದಿರಲೆಂದು,
“ಗಂಡಸರ ಕಾರುಬಾರಿನಲ್ಲಿ ನಿನ್ನದೇನು ಹರಟೆ-ಸುಮ್ಮನಿರು” ಎಂದು ಗದರಿಸಿದನು.
ಕ್ರುದ್ಧನಾದ ಗರುಡಾಚಾರ್ಯ,
“ಒಳ್ಳೆ ಮಾತಾಯಿತು. ಈ ಬಂಗಾರ ಧರ್ಮಸ್ಥಳದ ನ್ಯಾಯದ ಪ್ರಕಾರ ನನಗೆ ಸೇರಬೇಕು” ಎಂದು ಗುಡುಗಾಡಿದ.
ಬೇಸರ ಬಂದು ಪ್ರಾಣೇಶಾಚಾರ್ಯರು,
“ನೀವಷ್ಟು ತಾಳ್ಮೆಯಿಂದ ನಡೆದುಕೊಳ್ಳಿರಪ್ಪ. ನಮ್ಮ ಮುಂದಿರೋದು ಸಂಸ್ಕಾರವಾಗಬೇಕಾದ ಶವ. ಬಂಗಾರದ ವಿಷಯ ನನಗೆ ಬಿಡಿ. ಮೊದಲು ಪಾರಿಜಾತಪುರದವರಿಗೆ ಸುದ್ದಿ ಮುಟ್ಟಿಸಿ. ಅವರಾಗಿ ಸ್ವತಃ ಸಂಸ್ಕಾರ ನಡೆಸೋದಾದರೆ ನಡೆಸಲಿ…” ಎಂದು ಸಮಾಧಾನ ಹೇಳಿ, “ನೀವಿನ್ನು ಹೊರಡಿ. ನಾನಷ್ಟು ಮನುಸ್ಮೃತಿ ಇತ್ಯಾದಿ ಶಾಸ್ತಗಳನ್ನು ಹುಡುಕಿ ನೋಡ್ತೇನೆ-ಈ ಸಂದಿಗ್ಧಕ್ಕೆ ಉತ್ತರವಿದೆಯೇ ಅಂತ” ಎಂದು ಎದ್ದು ನಿಂತರು. ಚಂದ್ರಿ ತಲೆಯ ಮೇಲೆ ಸೆರಗು ಹೊದ್ದು, ಪ್ರಾಣೇಶಾಚಾರ್ಯರನ್ನು ಆರ್ತಳಾಗಿ ನೋಡಿದಳು.

ಅಧ್ಯಾಯ ಎರಡು

ಮಜ್ಜಿಗೆ-ಬೀರಿನಲ್ಲಿ ಜಿರಳೆ; ಉಗ್ರಾಣದಲ್ಲಿ ಹೆಗ್ಗಣ; ನಡುಮನೆಯಲ್ಲಿ ಹಗ್ಗದ ಮೇಲೆ ಮಡಿಸೀರೆ, ಮಡಿವಸ್ತ; ಅಂಗಳದಲ್ಲಿ ಒಣಗಲೆಂದು ಚಾಪೆಯ ಮೇಲೆ ಹಾಕಿದ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನಕಾಯಿ; ಹಿತ್ತಲಿನಲ್ಲಿ ತುಳಸಿ-ಇವು ಅಗ್ರಹಾರದ ಮನೆಮನೆಗೂ ಸಾಮಾನ್ಯ. ವಿನಾಯಿತಿ ಎಂದರೆ ಹಿತ್ತಲಲ್ಲಿ ಬೆಳೆಸಿದ ಬಗೆಬಗೆಯ ಪುಷ್ಪವೃಕ್ಷಗಳು; ಭೀಮಾಚಾರ್ಯನ ಹಿತ್ತಲಿನಲ್ಲಿ ಪಾರಿಜಾತ, ಪದ್ಮನಾಭಾಚಾರ್ಯನಲ್ಲಿ ಮಲ್ಲಿಗೆ, ಲಕ್ಷ್ಮಣಾಚಾರ್ಯನಲ್ಲಿ ಕೆಂಡಸಂಪಿಗೆ, ಗರುಡಾಚಾರ್ಯನಲ್ಲಿ ರಂಜ, ದಾಸಾಚಾರ್ಯನಲ್ಲಿ ಮಂದಾರ, ದುರ್ಗಾಭಟ್ಟನಲ್ಲಿ ಶಂಖಪುಷ್ಪ, ಬಿಲ್ವಪತ್ರೆ. ದೇವರಪೂಜೆಗೆಂದು ಪ್ರತಿನಿತ್ಯ ಪ್ರತಿಯೊಬ್ಬನ ಮನೆಯಿಂದಲೂ ಪ್ರತಿಯೊಬ್ಬನೂ ಹೂವನ್ನಾರಿಸಲು ಹೋಗುವನು; ಕುಶಲಪ್ರಶ್ನೆ ಮಾಡುವನು. ನಾರಣಪ್ಪನ ಮನೆಯಲ್ಲಿ ಬಿಟ್ಟ ಹೂ ಮಾತ್ರ ಚಂದ್ರಿಯ ತುರುಬಿಗೆ, ಮಲಗುವ ಕೋಣೆಯಲ್ಲಿದ್ದ ಹೂದಾನಿಗೆ. ಸಾಲದೆನ್ನುವುದಕ್ಕೆ ಮನೆಯ ಮುಂದೆಯೆ ಸರ್ಪಗಳಿಗೆ ಪ್ರಿಯವಾದ, ದೇವರ ಮುಡಿಗೆ ಅನರ್ಹವಾದ ತಾಮಸ ಪುಷ್ಪ- ರಾತ್ರೆರಾಣಿ. ಅದರ ಗೊಂಚಲು ಗೊಂಚಲು ಹೂವಿನ ರಾಶಿ ಕತ್ತಲಿನಲ್ಲಿ ಮದದಂತೆ ಅಡರಿ ಅದರ ನಿಶಾಚರ ವಾಸನೆಯನ್ನು ಚೆಲ್ಲುತ್ತದೆ; ಸರ್ಪಬಂಧನದಲ್ಲೆಂಬಂತೆ ಅಗ್ರಹಾರಕ್ಕೆ ಅಗ್ರಹಾರವೇ ತತ್ತರಿಸುತ್ತದೆ; ಸೂಕ್ಷ್ಮಮೂಗಿನವರು ತಲೆಬೇನೆ ಬರುತ್ತದೆಂದು ಪಂಚೆಯಿಂದ ಮೂಗು ಮುಚ್ಚಿ ನಡೆಯುತ್ತಾರೆ. ಕೂಡಿಟ್ಟ ಬಂಗಾರವನ್ನು ಕದಿಯಲು ಕಳ್ಳರು ಬರದಿರಲೆಂದು ಸರ್ಪಗಾವಲಿಗೆ ಅದನ್ನು ಬೆಳೆಸಿದ್ದಾನೆ ಎಂದು ಬುದ್ಧಿವಂತರು ಅನ್ನುವುದೂ ಉಂಟು. ಮೋಟು ಜಡೆಯ ಸೊರಗಿದ ಮೋರೆಯ ಮುತ್ತೆದೆಯರು ಮಂದಾರ ಮಲ್ಲಿಗೆ ಮುಡಿದರೆ ಕಪ್ಪು ನಾಗರದಂತಹ ಕೂದಿಲಿನ ಚಂದ್ರಿ ತುರುಬು ಹಾಕಿ ಕೆಂಡಸಂಪಿಗೆ, ಕೇದಿಗೆ ಮುಡಿಯುತ್ತಾಳೆ. ಕತ್ತಲಾದರೆ ಅಗ್ರಹಾರದ ಮೇಲೆ ರಾತ್ರೆರಾಣಿಯ ರಾಜ್ಯಭಾರವಾದರೆ, ಹಗಲು ಬ್ರಾಹ್ಮಣರು ಮೆಗೆ ಹಚ್ಚಿದ ಗಂಧದ, ಪಾರಿಜಾತ ಇತ್ಯಾದಿ ಮೃದು ಪುಷ್ಪಗಳ ಸೌಮ್ಯವಾಸನೆ. ಹೀಗೆಯೇ ಒಂದೊಂದು ಮನೆಯ ಹಿತ್ತಲಿನಲ್ಲಿ ಒಂದೊಂದು ರುಚಿಯ ಹಲಸು, ಮಾವು. ’ಹಣ್ಣನ್ನು ಹಂಚಿ ತಿನ್ನು, ಹೂವನ್ನು ಕೊಟ್ಟು ಮುಡಿ’ ಎಂಬ ನಾಣ್ನುಡಿಯ ಮೇರೆಗೆ ಫಲ ಪುಷ್ಪದ ಹಂಚಿಕೆ ನಡೆಯುತ್ತದೆ. ಲಕ್ಷ್ಮಣಾಚಾರ್ಯ ಮಾತ್ರ ಮರದಲ್ಲಿ ಬಿಟ್ಟ ಹಣ್ಣನ್ನು ಗುಪ್ತವಾಗಿ ಅರ್ಧಕ್ಕರ್ಧ ಸಾಗಿಸಿ ಅಂಗಡಿ ಕೊಂಕಣಿಯರಿಗೆ ಮಾರುತ್ತಾನೆ. ಅವನದ್ದು ಬಲು ಜಿಪುಣ ಪ್ರಾಣ. ಹೆಂಡತಿಯ ತವರಿನ ಕಡೆಯವರು ಬಂದಾಗ ಹದ್ದಿನ ಕಣ್ಣಿನಿಂದ ಹೆಂಡತಿಯ ಕೆಯನ್ನು ಕಾಯುತ್ತಾನೆ; ಎಲ್ಲಿ ಏನನ್ನು ತವರಿಗೆ ಕದ್ದುಕೊಡುತ್ತಾಳೋ ಎಂದು. ಚೆತ್ರ ವೆಶಾಖದಲ್ಲಿ ಪ್ರತಿ ಮನೆಯಲ್ಲೂ ಕೋಸುಂಬರಿ ಪಾನಕದ ದಾನ ನಡೆಯುತ್ತದೆ; ಕಾರ್ತಿಕದಲ್ಲಿ ದೀಪಾರತಿಗೆ ಪರಸ್ಪರ ಕರೆಯುತ್ತಾರೆ. ನಾರಣಪ್ಪನೊಬ್ಬ ಇವಕ್ಕೆಲ್ಲ ವಿನಾಯಿತಿ. ಅಗ್ರಹಾರದ ಬೀದಿಯ ಎರಡು ಪಕ್ಕಕ್ಕೂ ಒಟ್ಟು ಹತ್ತು ಮನೆಗಳು. ಎಲ್ಲದಕ್ಕಿಂತ ದೊಡ್ಡ ಮನೆ ನಾರಣಪ್ಪನದು-ಒಂದು ತುದಿಯಲ್ಲಿ. ಒಂದು ಪಕ್ಕದವರ ಮನೆಯವರ ಹಿತ್ತಲಿಗೆ ಹತ್ತಿಕೊಂಡ ತುಂಗೆ. ನದಿಗೆ ಇಳಿಯಲು ಹಿಂದಿನ ಪುಣ್ಯಾತ್ಮರು ಕಟ್ಟಿಸಿದ ಮೆಟ್ಟಲುಗಳು. ಶ್ರಾವಣದಲ್ಲಿ ತುಂಗೆ ಏರಿ, ಅಗ್ರಹಾರಕ್ಕೆ ನುಗ್ಗಿಬಿಡುವವಳಂತೆ ಮೂರು ನಾಲ್ಕು ದಿನ ಅಬ್ಬರಿಸಿ, ಮಕ್ಕಳ ಕಣ್ಣಿಗೆ ಕಿವಿಗೆ ಗೌಜಿನ ಹಬ್ಬವಾಗಿ, ಮತ್ತೆ ಇಳಿದು, ನಡುಬೇಸಗೆಯಲ್ಲಿ ಮೂರು ಸೀಳಿನ ಜಳಜಳ ಹೊಳೆಯಾಗುತ್ತಾಳೆ. ಆಗ ಬ್ರಾಹ್ಮಣರು ಮರಳಿನಲ್ಲಿ ಬಣ್ಣದ ಸೌತೆ, ಕಲ್ಲಂಗಡಿ ಹಣ್ಣನ್ನು ಬೆಳೆದು ಮಳೆಗಾಲಕ್ಕಷ್ಟು ತರಕಾರಿ ಮಾಡಿಕೊಳ್ಳುತ್ತಾರೆ. ವರ್ಷದಲ್ಲಿ ಹನ್ನೆರಡು ತಿಂಗಳ ಕಾಲವೂ ಬಾಳೆಹಗ್ಗದಲ್ಲಿ ಈ ಬಣ್ಣದ ಸೌತೆಕಾಯಿಗಳು ಮಾಡಿಗೆ ತೂಗುಬಿದ್ದಿರುತ್ತವೆ. ಮಳೆಗಾಲದಲ್ಲಿ ಅದರದ್ದೆ ಪಲ್ಯ, ಹುಳಿ, ಗೊಜ್ಜು, ಅದರ ಬೀಜದ ಸಾರು; ಬಸುರಿಯರಂತೆ ಬ್ರಾಹ್ಮಣರು ಹುಳಿಮಾವಿನ ಗೊಜ್ಜು ಸಾರಿಗೆ ಹಾತೊರೆಯುತ್ತಾರೆ. ಹನ್ನೆರಡು ತಿಂಗಳೂ ವ್ರತ, ಬ್ರಾಹ್ಮಣಾರ್ಥ, ಮದುವೆ, ಮುಂಜಿ, ಶ್ರಾದ್ಧದ ಕರೆಗಳು. ಆರಾಧನೆ, ಟೀಕಾಚಾರ್ಯರ ಪುಣ್ಯದಿನ ಇತ್ಯಾದಿ ದೊಡ್ಡ ಹಬ್ಬಗಳಿಗೆ ಮೂವತ್ತು ಮೆಲಿ ದೂರದಲ್ಲಿದ್ದ ಮಠದಲ್ಲಿ ಊಟ-ಹೀಗೆ ಬ್ರಾಹ್ಮಣರ ಜೀವನ ಸಾಂಗವಾಗಿ ಸಾಗುತ್ತದೆ.

ಈ ಅಗ್ರಹಾರದ ಹೆಸರು ದೂರ್ವಾಸಪುರ. ಅದರ ಹಿಂದೊಂದು ಸ್ಥಳಪುರಾಣವುಂಟು. ಹರಿಯುವ ತುಂಗಾನದಿಯ ಮಧ್ಯದಲ್ಲಿ ಪುಟ್ಟ ದ್ವೀಪದೋಪಾದಿಯಲ್ಲಿ ವೃಕ್ಷಗಳಿಂದ ಕಗ್ಗಂಟಾದ ಒಂದು ಗುಡ್ಡವಿದೆ. ಅಲ್ಲಿ ದೂರ್ವಾಸರು ತಪಸ್ಸು ಮಾಡುತ್ತಿದ್ದರೆಂದು ಪ್ರತೀತಿ. ದ್ವಾಪರಯುಗದಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಇಲ್ಲಿಂದ ಹತ್ತು ಮೆಲಿ ದೂರದಲ್ಲಿರುವ ಕೆಮರದಲ್ಲಿ ಪಂಚಪಾಂಡವರು ಅರಣ್ಯವಾಸ ಮಡುತ್ತಿದ್ದರಂತೆ-ಸ್ವಲ್ಪ ಕಾಲ. ಒಮ್ಮೆ ದ್ರೌಪದಿದೇವಿಗೆ ನೀರಿನಲ್ಲಿ ಈಜಬೇಕೆಂದು ಮನಸ್ಸಾಯಿತಂತೆ. ಕೆಹಿಡಿದವಳ ಸರ್ವ ಆಸೆಯನ್ನೂ ಈಡೇರಿಸುವ ಭೀಮಸೇನ ತುಂಗಾನದಿಗೆ ಕಟ್ಟುಹಾಕಿದ. ಇತ್ತ ಬೆಳಿಗ್ಗೆ ದೂರ್ವಾಸ ಮುನಿಗಳು ಸ್ನಾನ ಸಂಧ್ಯಾವಂದನಾದಿ ಕಾರ್ಯಗಳಿಗೆಂದು ಎದ್ದು ನೋಡುತ್ತಾರೆ!-ತುಂಗೆಯಲ್ಲಿ ನೀರೇ ಇಲ್ಲ. ಕುಪಿತರಾದರು. ಧರ್ಮಜನಿಗೆ ಇದು ತಕ್ಷಣ ದಿವ್ಯದೃಷ್ಟಿಯಿಂದ ಹೊಳೆದು ಭೀಮಸೇನನಿಗೆ ಬುದ್ಧಿ ಹೇಳಿದ. ಸರ್ವದಾ ಅಣ್ಣನ ಮಾತಿಗೆ ಬದ್ಧನಾದ ವಾಯುಪುತ್ರ ತಾನು ಹಾಕಿದ ಕಟ್ಟೆಯನ್ನು ಮೂರು ಕಡೆ ಒಡೆದು ನೀರು ಬಿಟ್ಟ. ಈಗಲೂ ಕೆಮರದಲ್ಲಿ ಕಟ್ಟೆಯಿಂದ ಮೂರು ಸೀಳಾಗಿ ನದಿ ಹರಿಯುತ್ತದೆ. ದೂರ್ವಾಸಪುರದ ಬ್ರಾಹ್ಮಣರು ಅಕ್ಕಪಕ್ಕದ ಅಗ್ರಹಾರಗಳ ಬ್ರಾಹ್ಮಣರಿಗೆ ಹೇಳುವುದುಂಟು: ದ್ವಾದಶಿಯ ದಿನ ಪ್ರಾತಃಕಾಲ ಪುಣ್ಯಾತ್ಮರಿಗೆ ದೂರ್ವಾಸ ವನದಿಂದ ಶಂಖಧ್ವನಿ ಕೇಳಿಸುವುದೆಂಬ ಪ್ರತೀತಿ ಇದೆ-ಅಂತ. ಆದರೆ ಅಗ್ರಹಾರದ ಬ್ರಾಹ್ಮಣರು ಯಾರೂ ತಾವದನ್ನು ಕೇಳಿದ್ದೇವೆ ಎನ್ನುವ ಅವಿನಯ ತೋರಿಸುವುದಿಲ್ಲ.

ಹೀಗೆ ಸ್ಥಳಪುರಾಣದಿಂದ; ಮಹಾತಪಸ್ವಿ, ಜ್ಞಾನಿ, ವೇದಾಂತ ಶಿರೋಮಣಿ ಪ್ರಾಣೇಶಾಚಾರ್ಯರು ಬಂದು ನೆಲಸಿದ್ದರಿಂದ; ಚಾಂಡಾಲ ನಾರಣಪ್ಪನ ದೆಸೆಯಿಂದ, ದಶದಿಕ್ಕುಗಳಲ್ಲೂ ಅಗ್ರಹಾರ ಪ್ರಖ್ಯಾತವಾಗಿತ್ತು. ಆಚಾರ್ಯರ ಪುರಾಣ ಕೇಳಲೆಂದಂತೂ ಅಕ್ಕಪಕ್ಕದ ಅಗ್ರಹಾರದವರು ರಾಮನವಮಿ ಇತ್ಯಾದಿ ದಿನಗಳಲ್ಲಿ ಕಿಕ್ಕಿರಿಯುತ್ತಾರೆ. ಪ್ರಾಣೇಶಾಚಾರ್ಯರಿಗೆ ನಾರಣಪ್ಪ ದೊಡ್ಡದೊಂದು ಸಮಸ್ಯೆ. ದೇವರ ದಯಾನ್ನ ಸಮರ್ಥಿಸಬೇಕೆಂದು ರೋಗಿಯಾದ ಹೆಂಡತಿಯ ಸೇವೆಯನ್ನು ಮಾಡುತ್ತ, ನಾರಣಪ್ಪನ ದುರ್ನಡತೆಯನ್ನು ತಾಳ್ಮೆಯಿಂದ ಹೊಟ್ಟೆಯಲ್ಲಿ ಹಾಕಿಕೊಳ್ಳುತ್ತ, ಅರ್ಥ ಗೊತ್ತಿರದ ಮಂತ್ರಗಳಿಂದ ತುಂಬಿದ ಬ್ರಾಹ್ಮಣರ ತಲೆಯ ಕತ್ತಲನ್ನು ಮಂತ್ರಗಳನ್ನು ವಿವರಿಸುವುದರ ಮೂಲಕ ತುಸುತುಸುವೇ ದೂಡುತ್ತ, ಅವರ ಗೃಹಸ್ಥಧರ್ಮದ ಗಂಧ ತೇಯುತ್ತದೆ…
ಇತ್ತ ಬ್ರಾಹ್ಮಣರು ಬತ್ತ ಉದುರಿದರೆ ಅರಳಾಗುವಷ್ಟು ಕಾದ ಅಗ್ರಹಾರದ ಬೀದಿಯಲ್ಲಿ ತಲೆಯನ್ನು ಅಂಗವಸ್ತದಿಂದ ಮುಚ್ಚಿ ಹೊಟ್ಟೆಯ ಹಸಿವಿಗೆ ನಿತ್ರಾಣರಾಗಿ ನಡೆದು, ಮೂರು ಸೀಳಾದ ತುಂಗಾ ನದಿಯನ್ನು ದಾಟಿ ತಂಪಾದ ಕಾಡು ಹೊಕ್ಕು ಒಂದು ಗಂಟೆ ಕಾಲೆಳೆದು ಪಾರಿಜಾತಪುರ ತಲ್ಪಿದರು. ಬಿಸಿಲಿಗೆ ನೆಲದ ತಂಪನ್ನು ಎತ್ತಿ ಹಿಡಿದ ಅಡಿಕೆತೋಟದ ಹಸಿರು ಗಾಳಿಯಿಲ್ಲದೆ ತೂಗಲಿಲ್ಲ. ಸುಡುವ ಧೂಳಿನಲ್ಲಿ ಬ್ರಾಹ್ಮಣರ ಬರಿಗಾಲು ಚುರುಚುರು ಸುಟ್ಟಿತು. ನಾರಾಯಣ ಸ್ಮರಣೆ ಮಾಡುತ್ತ ಬ್ರಾಹ್ಮಣರು ತಾವೆಂದೂ ಕಾಲಿಡದ ಸಾಹುಕಾರ ಮಂಜಯ್ಯನ ಮನೆಯೊಳಕ್ಕೆ ಬಂದರು. ಜಮಾಖರ್ಚು ಬರೆಯುತ್ತ ಕೂತಿದ್ದ ವ್ಯವಹಾರ ಕುಶಲ ಸಾಹುಕಾರರು: “ಓಹೋಹೋ ಏನು ಬ್ರಾಹ್ಮಣರ ಗುಂಪಿಗೆ ಗುಂಪೇ ಇತ್ತ ಕಾಲುಬೆಳೆಸಿತಲ್ಲ, ಓಹೋಹೋ ಬರೋಣವಾಗಲಿ, ಕೂರೋಣವಾಗಲಿ, ಆಯಾಸಪರಿಹಾರ ಮಾಡಿಕೊಳ್ಳೋಣಾಗಲಿ, ಕಾಲುತೋಳೆಯುತ್ತೀರ. ಇವಳೇ ಒಂದಿಷ್ಟು ಬಾಳೆಹಣ್ಣನ್ನು ತನ್ನೇ…” ಎಂದು ಸಾಂಗವಾಗಿ ಉಪಚಾರ ಹೇಳಿದರು. ಅವರ ಮಡದಿ ತಟ್ಟೆಯಲ್ಲಿ ಹಣ್ಣನ್ನು ತಂದು ’ಬಂದಿರಾ’ ಎಂದು ಹೇಳಿ ಒಳಗೆ ಹೋದಳು. ಗರುಡಾಚಾರ್ಯ ಉಸ್ಸೆಂದು ಕೂತು ನಾರಣಪ್ಪ ಸತ್ತ ವಿಷಯವನ್ನು ತಿಳಿಸಿದ. “ಅಯ್ಯೋ ಭಗವಂತ-ಆತನಿಗೇನಾಗಿತ್ತಪ್ಪ? ಎಂಟು ಹತ್ತು ದಿನಗಳ ಕೆಳಗೆ ವ್ಯವಹಾರಕ್ಕೆಂದು ಇತ್ತ ಬಂದಿದ್ದ, ಶಿವಮೊಗ್ಗೆಗೆ ಹೋಗಿ ಬರುತ್ತೇನೆಂದ. ನಿಮ್ಮದೇನಾದರೂ ಕೆಲಸವಿದೆಯೇ ಎಂದು ಕೇಳಿದ. ಮಂಡಿಯಲ್ಲಿ ಅಡಿಕೆ ಮಾರಾಟವಾಯಿತೆ ತಿಳಿದು ಬಾ ಎಂದಿದ್ದೆ. ಶಿವ ಶಿವಾ… ಬೃಹಸ್ಪತಿವಾರ ಹಿಂದಕ್ಕೆ ಬರುತ್ತೇನೆಂದಿದ್ದ… ಏನು ಕಾಯಿಲಿಯಂತೆ?” “ನಾಲ್ಕು ದಿನದ ಜ್ವರ ಅಷ್ಟೆ-ಬಾವು ಎದ್ದಿತ್ತಂತೆ” ಎಂದು ಹೇಳಿದ ದಾಸಾಚಾರ್ಯ. “ಶಿವ ಶಿವಾ” ಎಂದು ಮಂಜಯ್ಯ ಕಣ್ಣುಮುಚ್ಚಿ ಬೀಸಣಿಗೆಯಿಂದ ಗಾಳಿ ಹಾಕಿಕೊಂಡರು. ಶಿವಮೊಗ್ಗೆಗೆ ಆಗಾಗ್ಗೆ ಹೋಗಿಬರುತ್ತಿದ್ದ ಅವರಿಗೆ ಎರಡಕ್ಷರದ ಭಯಂಕರ ರೋಗದ ಹೆಸರು ಮನಸ್ಸಿಗೆ ಬಂದು ಅದನ್ನು ತನಗೆ ಸ್ಪಷ್ಟವಾಗಿ ಹೇಳಿಕೊಳ್ಳಲೂ ಭೀತಿಯಾಗಿ-’ಶಿವ ಶಿವಾ’ ಎಂದರು. ಕ್ಷಣಮಾತ್ರದಲ್ಲಿ ಪಾರಿಜಾತಪುರದ ಅಡ್ಡಪಂಕ್ತಿ ಬ್ರಾಹ್ಮಣರೆಲ್ಲ ಕಟ್ಟೆಯ ಮೇಲೆ ಕೂಡಿದರು. “ನಿಮಗೆಲ್ಲ ಗೊತ್ತುಂಟಲ್ಲ-” ವ್ಯವಹಾರದಲ್ಲಿ ಗಟ್ಟಿಗನಾದ ಗರುಡಾಚಾರ್ಯ ಹೇಳಿದ “ಅಗ್ರಹಾರದ ನಮಗೂ ಅವನಿಗೂ ಜಗಳವಾಗಿ ಅನ್ನನೀರು ಇರಲಿಲ್ಲ. ನೀವೆಲ್ಲ ಅವನ ಮಿತ್ರರಾಗಿದ್ದಿರಲ್ಲ ಎಂದು, ಏನು. ಈಗ ಅವನ ಶವಸಂಸ್ಕಾರದ ಪ್ರಶ್ನೆ ಎದ್ದಿದ್ದರಿಂದ, ಏನು…?” ಪಾರಿಜಾತಪುರದವರಿಗೆ ಮಿತ್ರವಿಯೋಗದಿಂದ ವ್ಯಥೆಯಾಯಿತು; ಮೇಲು ಜಾತಿಯ ಬ್ರಾಹ್ಮಣನೊಬ್ಬನ ಶವಸಂಸ್ಕಾರದ ಸಂದರ್ಭದೊರೆತಿತೆಂದು ಸಂತೋಷವೂ ಆಯಿತು. ನಾರಣಪ್ಪ ತಮ್ಮಗಳ ಮನೆಯಲ್ಲಿ ಎಗ್ಗಿಲ್ಲದೆ ಊಟಮಾಡುತ್ತಾನಲ್ಲ ಎಂಬುದೇ ಅವರಿಗೆ ಅವನ ಮೇಲೆ ಇದ್ದ ಪ್ರೀತಿಗೆ ಅರ್ಧ ಕಾರಣ. ಪಾರಿಜಾತಪುರದ ಬ್ರಾಹ್ಮಣರಿಗೆ ಪುರೋಹಿತರಾದ ಶಂಕರಯ್ಯನವರು ಹೇಳಿದರು: “ಬ್ರಾಹಣಧರ್ಮದ ಪ್ರಕಾರ ಸರ್ಪವೂ ದ್ವಿಜ ಎಂದಿದೆ. ಅರ್ಥಾv ಸರ್ಪದ ಹೆಣ ಕಣ್ಣಿಗೆ ಬಿದ್ದರೆ ಅದಕ್ಕೆ ಯಥೋಚಿತ ಸಂಸ್ಕಾರ ಮಾಡಬೇಕು, ಇಲ್ಲವೆ ಊಟ ಮಾಡುವಂತಿಲ್ಲ ಎಂಬ ವಿಧಿಯಿದೆ. ಇಂತಹ ಪ್ರಸಂಗದಲ್ಲಿ ಬ್ರಾಹ್ಮಣನೊಬ್ಬ ದೆವಾಧೀನನಾದಾಗ ನಾವು ಕೆಕಟ್ಟಿ ಕೂರುವುದು ಏನಕೇನ ಸರಿಯಲ್ಲ. ಏನೂಂತೀರಿ?” ಎಂದವರು ತಮಗೂ ಶಾಸ್ತಗೊತ್ತಿದೆ, ನಿಮಗಿಂತ ನಾವು ಕೀಳಲ್ಲ ಎಂದು ಮಾಧ್ವರ ಗರ್ವ ಇಳಿಸಲು ಹೇಳಿದರು. ಇದರಿಂದ ದುರ್ಗಾಭಟ್ಟರಿಗೆ ಅತೀವ ಕಳವಳವಾಯಿತು. ಈ ಭೋಳೇ ಬ್ರಾಹ್ಮಣ ದುಡುಕಿಬಿಟ್ಟು ಸ್ಮಾರ್ತರಿಗೇ ಅಪಕೀರ್ತಿ ಬರುವಂತೆ ಮಾಡಿಬಿಟ್ಟನಲ್ಲ ಎಂದು ವಕ್ರವಾಗಿ ಮಾತನ್ನಾಡಿದ : “ಸರಿ ಸರಿ ಒಪ್ಪಿದೆ. ಪ್ರಾಣೇಶಾಚಾರ್ಯರೂ ಇದೇ ಹೇಳೋದು. ಆದರೆ ನಮಗೆ ಬಂದಿರೋ ಸಂದಿಗ್ಧ ಮದ್ಯ ಮಾಂಸಾದಿಗಳನ್ನು ಮಾಡಿ ಸಾಲಿಗ್ರಾಮವನ್ನು ನೀರಿಗೆಸೆದ ನಾರಣಪ್ಪ ಬ್ರಾಹ್ಮಣ ಹೌದೆ ಅಲ್ಲವೆ ಎಂಬುದು. ಜಾತಿ ಕೆಡಲಿಕ್ಕೆ ಯಾರು ತಯ್ಯಾರು ಹೇಳಿ? ಆದರೆ ಬ್ರಾಹ್ಮಣನೊಬ್ಬನ ಶವಾನ್ನ ತೆಗೆಯದಿರೋದು ಅಧರ್ಮ ಎಂಬೋದನ್ನ ನಾನು ಸಂಪೂರ್ಣ ಒಪ್ಪುತ್ತೇನೆ.” ಶಂಕರಯ್ಯನಿಗೆ ಎದೆ ಜಗ್ಗೆಂದು ಭೀತಿಯಾಯಿತು. ಮೊದಲೇ ಕೀಳೆಂದು ಜರಿಸಿಕೊಂಡ ತಮ್ಮವರು ಈ ಕೃತ್ಯದಿಂದ ಇನ್ನಷ್ಟು ಅಪಖ್ಯಾತರಾಗುವುದು ಅವರ ಮನಸ್ಸಿಗೆ ಸರಿಬರದೆ : “ಹಾಗಿದ್ದಲ್ಲಿ, ಛಿ-ಛಿ-ಛಿ ನಾವು ದುಡುಕುವುದಿಲ್ಲಪ್ಪ. ನಿಮ್ಮಲ್ಲಿ ದಕ್ಷಿಣಕ್ಕೆ ಖ್ಯಾತರಾದ ಪ್ರಾಣೇಶಾಚಾರ್ಯರು ಇದ್ದಾರಲ್ಲ. ಅವರು ಆಪದ್ಧರ್ಮವೇನು, ಧರ್ಮಸೂಕ್ಷ್ಮವೇನು ಎಂಬೋದನ್ನ ತಿಳಿದು ಹೇಳಲಿ. ನಾವು ಖಂಡಿತ ನಾರಣಪ್ಪನ ಶವಸಂಸ್ಕಾರ, ವೆಕುಂಠ ಸಮಾರಾಧನೆಯನ್ನು ನಡೆಸೋಕೆ ಸಿದ್ಧರಿದ್ದೇವೆ” ಎಂದರು. ಮಂಜಯ್ಯ-“ಖರ್ಚಿನ ಚಿಂತೆಯೇನೂ ಬೇಡ. ನನ್ನ ಮಿತ್ರನಲ್ಲವೆ ಅವ? ನಾನೇ ಸ್ವತಃ ದಾನ ಇತ್ಯಾದಿಗಳನ್ನು ಮಾಡುತ್ತೇನೆ” ಎಂದು ಜಿಪುಣ ಮಾಧ್ವರಿಗೆ ಚುಚ್ಚಲೆಂದು ಹೇಳಿದರು.
*****
ಮುಂದುವರೆಯುವುದು…

ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.