ನೀನು ಕರ್ತಾರನ ಕಮ್ಮಟದ ಗುಟ್ಟು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಪ್ರೇಮಜ್ಞಾನದಲ್ಲಿಲ್ಲ, ವಿಜ್ಞಾನದಲ್ಲಿಲ್ಲ
ಪಂಡಿತರ ತಾಳೆಗರಿ ಹಾಳೆಗಳಲ್ಲಿಲ್ಲ

ಕಾಡು ಹರಟೆಯಲ್ಲಂತೂ ಖಂಡಿತಾ ಇಲ್ಲ
ಇವೆಲ್ಲ ನಲ್ಮೆಯ ನಿವಾಸವಲ್ಲ

ಕಾಲ ಪೂರ್ವದ ಕಾಂಡದಾಚೆಗೆ ಪ್ರೇಮದ ಕೊಂಬೆ ರೆಂಬೆ
ಬೇರುಗಳೆಲ್ಲ ಕಾಲೋತ್ತರದಂಚಿನಾಚೆ

ಈ ಮರದ ಎಲೆ ಧರೆಯಲ್ಲಿಲ್ಲ. ದೇವಲೋಕದಲ್ಲಿಲ್ಲ
ಇಲ್ಲಿ ಬರಿಯ ಕಾಲ್ಗಳಲ್ಲದೆ ಬೇರೆ ಇನ್ನೇನಿಲ್ಲ

ವಿಚಾರವಸ್ತ್ರ ಬಿಚ್ಚಿ ಎಸೆದಾಯ್ತು, ಅನುರಾಗವಿಲೀನ
ತರ್ಕದ ರೂಢಿಯಾಚೆಗೆ ಪ್ರೇಮದ ದಿವ್ಯ ಘನತೆಯ ಯಾನ

ಬಯಕೆ ನಿನ್ನಲ್ಲಿ ತುಂಬಿರುವ ತನಕ
ಆ ಆಸೆಗೆ ಮೂರ್ತಿಯಾಗಿ ಬರುವ ತನಕ

ನಲ್ಲ ನಲ್ಲೆಯರ ಭಿನ್ನ ಸ್ಥಿತಿಯಳಿದಾಗ
ಬಯಕೆ ಬೇರಾಗಿ ಇರುವುದೇ ಇಲ್ಲ

ಭಯ ಭರವಸೆಗಳ ಅಟ್ಟದ ಮೇಲೆ ನಾವಿಕನ ಸ್ಥಾನ
ನಾವಿಕನ ನಿರ್ನಾಮ, ಸಂತರ ಜಲಸಮಾಧಿ ಯಾನ

ಶಂಸ್, ನೀನೇ ಕಡಲು, ಕಡಲಾಳದ ಮುತ್ತು
ಈ ನಿನ್ನ ಭಾವ, ಜೀವ

ಕರ್ತಾರನ ಕಮ್ಮಟದ ದೊಡ್ಡ
ಗುಟ್ಟಲ್ಲದೆ ನೀನು ಬೇರೆ ನಲ್ಲ ಶಂಸ್
*****