ಎಂದೊ ಗುಡುಗಿದ ಧ್ವನಿಯನಿಂದಿಗೂ ಹಿಡಿದಿಟ್ಟು
ಅಂಬರ ಮೃದಂಗವನು ನುಡಿಸಲೊಡರಿಸಿದಂತೆ
ಧಿಮಿಧಿಮಿಕು ಧುಮುಕು ತತ್ಹೊಂಗ ದುಂಧುಮ್ಮೆಂದು
ಬಾನತುಂಬೆಲ್ಲ ನಿಶ್ಯಬ್ದ ಶಬ್ದಾಂಬೋಧಿ;
ಥಳಥಳಿಪ ಸೂರ್‍ಯಚಂದ್ರರು ತಾಳದೋಪಾದಿ!
ಗೆಜ್ಜೆಗೊಂಚಲು ಜಲಕ್ಕನೆ ಜಗುಳಿ ಸೂರೆಯಾ-
ದೊಲು ಪಳಚ್ಚನೆ ಮಿಂಚಿ ಚಿಕ್ಕ ನಡುನಡುಗುತಿರೆ
ಟಿಂವಕ್ಕಿ ಟೀಟಿಟಿಂವ್ ದಿಗ್ದಿಗಂತಕೆ ಹಬ್ಬಿ
ಎಲ್ಲೊ ಮರೆಯಾಗುತಿರೆ, ಕಂಕಣದ ಕಿಂಕಿಣೀ-
ಝಂಕೃತವನೊಡವೆರಸಿ ಸಣ್ಣನೆಯ ಸೇವಿಗೆಯ
ಎಳೆಯ ಹೊಸೆ ಹೊಸೆದಂತೆ, ಬಿದಿರ ಮಳೆಯಲಿ
ಗಾಳಿ ಕೊಳಲ ಬಾರಿಸಿದಂತೆ ಹೃದ್ವೀಣೆಯಲ್ಲಿ ಯಾರೊ
ಬೆರಳನಾಡಿಸುತಿಹರು! ಬೆಳದಿಂಗಳಲ್ಲಿ ಕರಗಿ
ಒಗುಮಿಗುವ ತಮ್ಮ ಗಾನವ ತಾನೆ ಕುಡಿದಿಹರು.
*****