ಎಂದಿನ ಹಾಗೆಯೇ ದೂರ, ಪೂರ್ವ ದಿಕ್ಕಿನಲ್ಲಿ, ಮುರ್ಕುಂಡಿ ದೇವಸ್ಥಾನವನ್ನು ಹೊತ್ತುನಿಂತ ಗುಡ್ಡದಾಚೆಯ ಆಕಾಶ ಕೆಂಪೇರುವ ಮೊದಲೇ ಭರತನು ಎದ್ದ. ಪ್ರಾತರ್ವಿಧಿಗಳನ್ನು ಮುಗಿಸಿ, ರಸ್ತೆಯಂಚಿನ ದೊಡ್ಡ ಅಶ್ವತ್ಥಕ್ಕೆ, ಅಂಗಳದಲ್ಲಿಯ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಹಿತ್ತಲ ಗಿಡಗಳಿಂದ ಹೂವುಗಳನ್ನು ಕಿತ್ತುತಂದ. ಕೊರೆಯುವ ಚಳಿಯಲ್ಲೂ ಬಾವೀಕಟ್ಟೆಯ ಮೇಲೆ ತಣ್ಣೀರು ಸ್ನಾನ ಮಾಡಿ, ಮಡಿ ಪಂಚೆಯುಟ್ಟು, ನಾಮ ಮುದ್ರೆ, ಪ್ರಾತಃ ವಂದನೆಗಳನ್ನು ಮುಗಿಸಿ ದೇವರ ಪೂಜೆ ಮಾಡಿದ. ಜಗಲಿಯ ಮೇಲೆ ತನ್ನ ಹಾದಿ ಕಾಯುತ್ತಿದ್ದ ತಾಯಿಗೆ ತೀರ್ಥ ಪ್ರಸಾದಗಳನ್ನು ಕೊಟ್ಟು, ಕೈಮುಗಿದು, ಅವಳ ಆಶೀರ್ವಾದ ಪಡೆದು ಅವಳೆದುರು ಚಕ್ಕಳಬಕ್ಕಳ ಕುಳಿತುಕೊಂಡ. ಹಾಗೂ ನಮ್ರತೆಯೇ ಹೆಪ್ಪುಗಟ್ಟಿತೇನೋ ಎಂಬಂಥ ತಣ್ಣಗಿನ ನಿರ್ಧಾರದಿಂದ ಕೇಳಿದ:
“ಇವತ್ತು ನಾನು ಕೇಳುವ ಪ್ರಶ್ನೆಗೆ ನೀನು ಉತ್ತರ ಕೊಡಲೇಬೇಕು. ನಿನ್ನ ಉತ್ತರವನ್ನು ಕೇಳುವ ಧೈರ್ಯ ನನಗಿದೆ. ನಾನೀಗ ಸಣ್ಣವನಲ್ಲ. ನನಗೀಗ ಹದಿಮೂರು ವರ್ಷ ವಯಸ್ಸು. ಹೇಳಮ್ಮ, ನಾನು ನಿಜಕ್ಕೂ ಯಾರು? ಎಲ್ಲಿಂದ ಬಂದವನು? ಇಲ್ಲಿಗೆ ಹೇಗೆ ಬಂದೆ? ಹೇಳುತ್ತೇನೆಂದು ಭರವಸೆ ಕೊಟ್ಟ ಹೊರತು ಇಲ್ಲಿಂದ ಕದಲಲಾರೆ” ಹುಡುಗ ಹಠ ಹಿಡಿದ.
ತಾಯಿಯೂ ಇದನ್ನು ನಿರೀಕ್ಷಿಸಿದ ಹಾಗಿತ್ತು. ಎಳ್ಳಷ್ಟೂ ವಿಚಲಿತಳಾಗದೇ ಸೌಮ್ಯ ದನಿಯಲ್ಲಿ ಉತ್ತರಕೊಟ್ಟಳು:
“ಹೌದು ಮಗೂ ನೀನೀಗ ದೊಡ್ಡವನಾಗಿದ್ದೀ, ಒಂದು ದಿವಸ ನಿನಗೆ ಹೇಳುವವಳೇ ಇದ್ದೆ, ಇವತ್ತು ಮುಹೂರ್ತ ಬಂದಂತಿದೆ. ಈಗ ಸಾಲೆಗೆ ಹೋಗು. ಮಧ್ಯಾಹ್ನದ ಊಟ, ಸಾಲೆಯ ಅಭ್ಯಾಸ ಮುಗಿದ ಮೇಲೆ ನಿತ್ಯದಂತೆ ಸಣ್ಣ ನಿದ್ದೆ ಮಾಡಿ ಏಳು. ಆಮೇಲೆ ನಿನ್ನನ್ನು ಕಾಡುತ್ತಿದ್ದ ನಿನ್ನ ಜನ್ಮದ ಕಥೆಯನ್ನು ಹೇಳುತ್ತೇನೆ.”
ಹುಡುಗ ತಾಯಿಯ ಮಾತನ್ನು ನಂಬಿದ. ಅವಳನ್ನು ಕಾಲು ಮುಟ್ಟಿ ನಮಸ್ಕರಿಸಿ ಕುಳಿತಲ್ಲಿಂದ ಎದ್ದು ಸಾಲೆಗೆ ಹೋಗುವ ತಯಾರಿಗೆ ತೊಡಗಿದ.
ಅಪರಾಹ್ನ, ಮಗನಿಗೆ ಕೊಟ್ಟ ಮಾತನ್ನು ಮರೆತಿರದ ತಾಯಿ, ದೇವರ ಕೋಣೆಗೆ ಹೋಗಿ ಹೊರಗೆ ಬಂದವಳೇ ಜಗಲಿಯ ಮೇಲೆ ತನ್ನ ಹಾದಿ ಕಾಯುತ್ತಿದ್ದ ಮಗನಿಗೆ, “ಬಾ. ಇಲ್ಲಿ ಬೇಡ. ಈ ಮನೆಯ ಬಾಗಿಲು, ಕಿಡಕಿಗಳು, ಗೋಡೆಗಳು, ನೆಲ ಮಾಡುಗಳು ಎಲ್ಲ ಮನುಷ್ಯ ನಿರ್ಮಿಸಿದವುಗಳು. ನಿನ್ನ ಹುಟ್ಟಿನ ಕಥೆ ಕೇಳಲು ಲಾಯಕ್ ಆದವುಗಳಲ್ಲ. ಹಿತ್ತಲಿಗೆ ಹೋಗೋಣ, ಬಾವೀಕಟ್ಟೆಯ ಬಳಿಯ ಹಲಸಿನ ಮರದ ನೆರಳಲ್ಲಿ ಕುಳಿತು ಮಾತನಾಡೋಣ, ಆಗಲೇ ಅಲ್ಲಿ ಹುಲ್ಲಿನ ಮೇಲೆ, ಬಾವಿನೀರಿನಿಂದ ಚೆನ್ನಾಗಿ ತೊಳೆದು ಬಿಸಿಲಲ್ಲಿ ಒಣಗಿಸಿದ ಚಾಪೆಯನ್ನು ಹಾಸಿ ಬಂದಿದ್ದೇನೆ” ಎಂದಳು.
ಭರತನು ತನ್ನ ತಾಯಿಯನ್ನು ಹಿಂಬಾಲಿಸಿದ. ಹಿತ್ತಿಲಲ್ಲಾಗ ಎಲ್ಲೆಲ್ಲೂ ನಿಶ್ಯಬ್ದ ನೆಲೆಸಿತ್ತು. ದೂರದ ಗುಡ್ಡಗಳಾಚೆಯಿಂದ ತೂರಿ ಬರುತ್ತಿದ್ದ, ಅಸ್ತಕ್ಕೆ ಸಾಗಿದ ಸೂರ್ಯನ, ಹೊಂಬಣ್ಣದ ಬೆಳಕಿನಲ್ಲಿ ಆಕಾಶದೆತ್ತರದ ಗಿಡಗಳ ತುದಿಗಳಷ್ಟೇ ಬೆಳಗಿಕೊ೦ಡಿದ್ದು ತಾಯಿ-ಮಗನ ನಡುವೆ ನಡೆಯಲಿದ್ದ ಸಂವಾದಕ್ಕೆ ಸಾಕ್ಷಿಯಾದವುಗಳ ಭಂಗಿಯಲ್ಲಿ ಕೈಕಟ್ಟಿ ನಿಂತಿದ್ದುವು. ಚಾಪೆಯ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತವರಿಬ್ಬರೂ ಮೌನವಾಗಿ ಸುತ್ತಲಿನ ಎಲ್ಲದಕ್ಕೂ ಪರಾಙ್ಞುಖರಾಗ ತೊಡಗಿದರು. ಯಾವಗಳಿಗೆಯಲ್ಲೂ ತನ್ನ ಬಾಯಿಂದ ಹೊರಬೀಳಬಹುದಾದ ಮೊದಲ ಶಬ್ದದ ಬಗ್ಗೆ ಅದನ್ನು ಆಡಲಿದ್ದವಳೇ ದಿಗಿಲು ಗೊ೦ಡ೦ತಿತ್ತು.
ಹಾಗೆ ನೋಡಿದರೆ ಅವನ ಜನ್ಮದ ಕಥೆಯನ್ನು ಅವಳು ಎಲ್ಲಿಂದಲೂ ಆರಂಭಿಸಬಹುದಿತ್ತು. ಆದರೇಕೋ ಅವನ ತಾಯಿಗೆ ಕತೆ ಆರಂಭವಾಗುವ ಮೊದಲ ಶಬ್ದವೇ ಅದರ ಯಥಾರ್ಥತೆಯನ್ನು ನಿಶ್ಚಯಿಸುತ್ತದೆ ಅನ್ನಿಸಿತು. ಯಾಕೆ ಹಾಗೆ ಅನ್ನಿಸಿತೋ. ಕಥೆಯೇನು ಅವಳು ಹುಟ್ಟಿಸಿ ಹೇಳಹೊರಟಿದ್ದೇ? ಕೇಳುವವನು ಹದಿಮೂರು ವರುಷದ ಬಾಲಕನೆಂದು ಆ ಶಬ್ದದ ಬದಲು ಈ ಶಬ್ದ ಬಳಸಿದ ಮಾತ್ರಕ್ಕೆ ಕಥೆ ತನ್ನ ಸತ್ಯವನ್ನು ಕಳೆದುಕೊಳ್ಳುತ್ತದೆಯೆ? ನಿನ್ನಪ್ಪ ಬಹಳ ಒಳ್ಳೆಯವರೇ, ಆದರೆ ನಾವಿಬ್ಬರೂ ಮದುವೆಯಿಂದ ಗಂಡ ಹೆಂಡಿರಲ್ಲ. ಅಂದರೆ ಚಪ್ಪರ ಹಾಕಿರಲಿಲ್ಲ, ಮಂಟಪ ಕಟ್ಟಿರಲಿಲ್ಲ, ಬಾಜಾ ಬಜಂತ್ರಿಯಿರಲಿಲ್ಲ, ಭಟ್ಟರನ್ನು ಕರೆದಿರಲಿಲ್ಲ, ಮಾಲೆ ಹಾಕಿದ್ದನ್ನು ನೋಡಲು, ಮಂತ್ರಾಕ್ಷತೆ ಹಾಕಲು ಜನರನ್ನು ಆಮಂತ್ರಿಸಿರಲಿಲ್ಲ. ಇವರು ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡ ವಿಧುರರು. ನನ್ನವರಾಗುವ ಹೊತ್ತಿಗೆ ಅವರಿಗೆ ಐವತ್ತು ದಾಟಿತ್ತು. ನನಗೆ ಮುವ್ವತ್ತು. ಹೆಂಡತಿ ಹೇಗೆ ಸತ್ತಳು, ಮರು ಮದುವೆ ಏಕೆ ಆಗಲಿಲ್ಲ-ನಾನು ವಿವರ ಕೇಳಲಿಲ್ಲ. ಯಾರೂ ಹೇಳಲಿಲ್ಲ. ಐದು ವರ್ಷಗಳ ದೊಡ್ಡ ಯೋಜನೆ ಹಾಕಿಕೊಂಡು ಅಮೇರಿಕೆಗೆ ಹೊರಟುನಿಂತ ಗಳಿಗೆಯಲ್ಲಿ ನನಗದೇನಾಯಿತೋ: ನೀವು ಈ ಒಂದು ದಿನದ ರಾತ್ರಿಯ ಮಟ್ಟಿಗೆ ನನಗೆ ಬೇಕು ಎಂದೆ. ಕಾಣಲು ಚೆಂದ ಇದ್ದರು, ಅಗದಿ ನಿನ್ನ ಹಾಗೆ. ವಿಜ್ಞಾನದಲ್ಲಿ ಬಹು ದೊಡ್ಡ ಹೆಸರು ಮಾಡಿದವರು. ಮುಂಬಯಿಯ ಕಾಲೇಜ್ ಒಂದರಲ್ಲಿ ಕಲಿಸುತ್ತಿದ್ದರು. ಅವರ ಈ ಪ್ರಾಜೆಕ್ಟ್ ಕೆಲಸದ ಸಲುವಾಗಿಯೇ ಆರು ತಿಂಗಳ ಟೈಪಿಂಗ್ ಕೆಲಸದ ಸಲುವಾಗಿ ನನ್ನನ್ನು ನೇಮಿಸಿಕೊಂಡಿದ್ದರು. ನಾವಿದ್ದ ಕಟ್ಟಡದಲ್ಲೇ ಅವರ ಮನೆ. ನಮ್ಮದು ಮೊದಲ ಮಜಲೆಯ ಮೇಲಾದರೆ ಅವರದು ಆರನೇ, ಮಜಲೆಯ ಮೇಲೆ. ಮನೆಯಲ್ಲಿ ಅವರೊಬ್ಬರೇ. ಬೆಳಿಗ್ಗೆ, ಸಂಜೆಗೆ ಅಡಿಗೆ ಮಾಡಲು ಒಬ್ಬ ಅಡಿಗೆಯವನು ಬರುತ್ತಿದ್ದ. ಕಸ ಮುಸುರೆಯ ಕೆಲಸಕ್ಕೆ ಕೆಲಸದ ಹೆಣ್ಣು ಬರುತ್ತಿದ್ದಳು. ನಮ್ಮ ಕಟ್ಟಡದ ಜನ ಅಲ್ಲಿ ಹೆಚ್ಚು ಹೋಗುತ್ತಿದ್ದಿಲ್ಲ. ಆದರೂ ಕಟ್ಟಡದ ಹದಿನೆಂಟೂ ಮನೆಗಳಿಗೆ ಪರಿಚಿತರು. ಬಹಳ ಓದಿಕೊಂಡವರು, ಒಂದೆರಡು ಪುಸ್ತಕಗಳನ್ನೂ ಬರೆದವರು ಎಂದು ಪ್ರಸಿದ್ಧರು. ನಮ್ಮ ಮನೆಯಲ್ಲಿ ನಾವು ಮೂವರೇ- ನಾನು, ಅಮ್ಮ ಹಾಗೂ ಅಪ್ಪ. ಅಪ್ಪ ಒಂದು ದೊಡ್ಡ ಕಂಪನಿಯಲ್ಲಿ ಕೆಲಸಕ್ಕಿದ್ದವರು ಸದ್ಯವೇ ನಿವೃತ್ತರಾಗಿದ್ದರು. ಅಪ್ಪ-ಅಮ್ಮರ ಅಚ್ಛೆಯವಳಾಗಿಯೂ ನನಗೆ ಮದುವೆಯಾಗಿರಲಿಲ್ಲ. ಅಪ್ಪ, ಅಮ್ಮರಿಗೆ ನಾವು ಮೂರು ಮಂದಿ ಹೆಣ್ಣು ಮಕ್ಕಳೇ. ನಾನು ನಡುವಿನವಳು. ಅಕ್ಕ, ತಂಗಿ ಮದುವೆಯಾಗಿ ಒಬ್ಬಳು ಕಲ್ಕತ್ತಾದಲ್ಲೂ ಇನ್ನೂಬಳು ಬರೋಡಾದಲ್ಲೂ ನೆಲೆಸಿದ್ದಾರೆ. ಇಬ್ಬರ ಗಂಡಂದಿರೂ ಸರಕಾರಿ ನೌಕರರು, ಮಕ್ಕಳಾಗಿವೆ. ಅಪ್ಪನ ಜೊತೆ ಇವರಿಗೆ ಸಲುಗೆ ಇತ್ತು. ಆಗೊಮ್ಮೆ ಈಗೊಮ್ಮೆ ನಮ್ಮ ಮನೆಗೆ ಬರುತ್ತಿದ್ದರು. ನನ್ನನ್ನು ನೋಡಿದಾಗ ಮುಗುಳ್ನಗುತ್ತಿದ್ದರು. ನನ್ನ ಮೋರೆಯ ಅಂದವನ್ನು ಈ ಹಾಳು ಕರಿಮಚ್ಚೆಯೊಂದು ಕೆಡಿಸಿರದಿದ್ದರೆ ನಾನೂ ಮದುವೆಯಾಗುತ್ತಿದ್ದೆ. ಸಂಸಾರ ಹೂಡುತ್ತಿದ್ದೆ. ಕಲಿಯಲು ಹುಷಾರಾಗಿದ್ದೆ. ಬಿ.ಎ.ಗೆ ಇಂಗ್ಲಿಷ್ ಸಾಹಿತ್ಯ ತೆಗೆದುಕೊಂಡು ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದೆ. ಕಾಲೇಜಿನಲ್ಲಿ ಲೆಕ್ಚರರ್ ಆಗುವ ಮನಸ್ಸಿತ್ತು. ಏನಾದರೂ ಮಾಡಬೇಕೆಂದು ಟೈಪಿಂಗ್ ಕಲಿತೆ. ಕಲಿಯುವುದಕ್ಕೆ ಕಲಿತ ಆದರೆ ಉದ್ದೇಶ ಸಾಧಿಸಲಿಲ್ಲ. ಯಾವ ಆಫೀಸಿನಲ್ಲೂ ಕೆಲಸ ಮಾಡುವುದುಳಿಯಲಿ. ಇಂಟರ್ವ್ಯೂ ಕೊಡುವುದಕ್ಕೂ ಧೈರ್ಯವಾಗಲಿಲ್ಲ. ಆರ್ಥಿಕ ದೃಷ್ಟಿಯಿಂದ ಕೆಲಸ ಮಾಡಲೇಬೇಕು ಎನ್ನುವ ಒತ್ತಾಯವಿರಲಿಲ್ಲ. ಆದರೆ ಇದು ಅಪ್ಪ, ಅಮ್ಮ ಬದುಕಿರುವವರೆಗೆ ಮಾತ್ರ. ಆಮೇಲೆ? ಮೋರೆಯ ಮೇಲೆ ಈ ಸುಟ್ಟ ಸಾಡೇಸಾತಿಯೊಂದು ಅರ್ಧಕ್ಕೂ ಹೆಚ್ಚು ವ್ಯಾಪಿಸಿ ಕೊಂಡಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೆಯೆ? ಹಾಗೆ ನೋಡಿದರೆ ಕಲಿಯುವಾಗ ಸಾಲೆ ಕಾಲೇಜುಗಳಲ್ಲಿ ಎಲ್ಲರಿಗೂ ಬೇಕಾದವಳೇ, ಶಿಕ್ಷಕರಿಗೆ ಕೂಡ. ಈ ಕಟ್ಟಡದಲ್ಲೇ ಒಂದಿಬ್ಬರನ್ನು ಬಿಟ್ಟರೆ ಎಲ್ಲರೂ ನನ್ನನ್ನು ಸಹಾನುಭೂತಿಯಿಂದ ನೋಡುವವರೇ. ಸಹಾನುಭೂತಿಯೋ ಅನುಕಂಪವೋ ಯಾರು ಬಲ್ಲರು? ಇನ್ನೊಬ್ಬರ ಭಾವನೆಗಳನ್ನು ಅರಿಯುವ ಅಧಿಕಾರವನ್ನೇ ಕಳಕೊಂಡಂತೆ ಅನ್ನಿಸುತ್ತಿತ್ತು. ಇನ್ನೊಬ್ಬರ ಭಾವನೆಗಳ ಮಾತೇಕೆ ಸ್ವತಃ ನನ್ನ ಭಾವನೆಗಳೂ ನನಗೆ ತಮ್ಮ ಪರಿಚಯ ಹೇಳದಾದುವು. ಆದರೂ ನಾನು ಅಪ್ಪ-ಅಮ್ಮರ ಸಲುವಾಗಿ ಹೊರಗೆ ಹಾಗೆ ತೋರಿಸಿಕೊಳ್ಳುತ್ತಿರಲಿಲ್ಲವೇನೋ. ನನಗೆ ಗೊತ್ತಿಲ್ಲ. ದೇಹದ ಎಲ್ಲ ಸಂವೇದನೆಗಳೂ ಜೀವಂತವಿದ್ದೂ ಎಲ್ಲವನ್ನೂ ಸಹಿಸಬಲ್ಲೆ ಎಂದು ತೋರಿಸಿಕೊಳ್ಳುವುದು ಸಾಧ್ಯವಿತ್ತೇ? ಆರೋಗ್ಯ ಚೆನ್ನಾಗಿತ್ತು. ಮೈಕಟ್ಟು ಕಟ್ಟುಮಸ್ತಾಗಿತ್ತು. ದೇಹದ ಪ್ರತಿಯೊಂದು ರಂಧ್ರದಿಂದ ‘ಬೇಕು’ ಎಂದು ಚೀರುತ್ತಿದ್ದ ಉಮೇದು, ಉತ್ಸಾಹಗಳಿದ್ದುವು. ಏನು ಪ್ರಯೋಜನ? ಎಲ್ಲದರ ತೃಪ್ತಿ ಸಾಧ್ಯವಿದ್ದೂ ನಿಗ್ರಹಿಸುವುದು ಒಂದು ಮಾತು. ತೃಪ್ತಿಪಡಿಸುವುದೇ ಸಾಧ್ಯವಿಲ್ಲದಾಗ ನಿಗ್ರಹಕ್ಕೆ ಏನು ಬೆಲೆ? ನಮ್ಮ ಮನೆಯಿದ್ದ ಕಟ್ಟಡದಲ್ಲೇ ಇದ್ದ ಇಬ್ಬರು ಮುಠ್ಠಾಳರಿಗೆ ನನ್ನ ಮೇಲೆ ಕಣ್ಣು ಬಿದ್ದಾಗ ಅವರು ನನ್ನ ರೂಪವನ್ನು ಬಣ್ಣಿಸಿದ ರೀತಿ ನೋಡಬೇಕಿತ್ತು! ಪರಸ್ಪರ ಮಾತನಾಡಿಕೊಂಡವರ ಹಾಗೆ ಇಬ್ಬರ ಬಾಯಿಂದಲೂ ಅವೇ ಶಬ್ದಗಳು, ಅವೇ ಹಾವ ಭಾವಗಳು. ಬೇಸತ್ತು ಒಂದು ದಿನ ಅವರಲ್ಲೊಬ್ಬನನ್ನು ಕೈರಟ್ಟೆ ಹಿಡಿದು ನಿಲ್ಲಿಸಿದ ಹಾಗೆ ನಿಲ್ಲಿಸಿ, ‘ಮದುವೆ ಆಗ್ತಿಯಾ?’ ಎಂದು ಕೇಳಿ ಬಿಟ್ಟೆ. `ಆಗ್ತಿದ್ರೆ ಅಪ್ಪ-ಅಮ್ಮರನ್ನು ಬಂದು ನೋಡು. ಅಷ್ಟಕ್ಕೂ ನೀರಿಲ್ಲದವನಾದರೆ ನಿನ್ನ ಅಪ್ಪ-ಅಮ್ಮರನ್ನು ಕಳಿಸು,’ ಎಂದೆ. ಅಲ್ಲಿ ನಿಂತನೆ? ಮತ್ತೆ ನನ್ನ ಕಡೆಗೆ ಮೋರೆ ತಿರುವಿ ನೋಡಲಿಲ್ಲ. ಇವನಿಗಾದ ಮಂಗಳಾರತಿ ಇನ್ನೊಬ್ಬನಿಗೆ ಗೊತ್ತಾಗಿರಬೇಕು. ಅವನೂ ನನ್ನ ತಂಟೆಗೆ ಬರುವುದನ್ನು ಬಿಟ್ಟುಕೊಟ್ಟ. ಬಿಟ್ಟುಕೊಟ್ಟರೇನಂತೆ, ಅವರು ಆಡಿದ ಆ ಹಲ್ಕಟ್ ಮಾತುಗಳು-ಮೋರೆಯ ಮೇಲೆ ಕಲೆ ಇದ್ದರೇನಂತೆ? ಹಾಗೆ ಇದ್ದವರು ಇಲ್ಲವೆ? ಬಾಕಿ ಎಲ್ಲ ಸರಿ ಇದ್ದರಾಯಿತು-ಅವು ಏನು ಹಾಗೇ ಗಾಳಿಯಲ್ಲಿ ಹಾರಿಹೋಗುವಂತಹವೆ? ಎಲ್ಲ ಭೌತಿಕ ಸಂಗತಿಗಳ ಹಾಗೆ ಒಮ್ಮೆ ಹುಟ್ಟಿ ಬಂದುವೆಂದರೆ ಕಾಯಂ ಉಳಿಯುವವೇ. ತಮ್ಮ ಕೆಟ್ಟ ಕೆಲಸವನ್ನು ಮಾಡುತ್ತ ಇರುವಂತಹವೇ. ನೆನಪಿಗೆ ಬಂದ ಪ್ರತಿಸಾರೆ ಖಿನ್ನಳಾಗುತ್ತೇನೆ- ಈಗಲೂ ಸಿಟ್ಟಿನಿಂದ ಕುದಿಯುತ್ತೇನೆ ಎನ್ನಬೇಕು. ಏನು ಪ್ರಯೋಜನ? ನೌಕರಿ ಮಾಡುತ್ತಿದ್ದ ಆರು ತಿಂಗಳು ಮಾತ್ರ ನನ್ನ ಬದುಕಿನ ಅತ್ಯಂತ ನೆಮ್ಮದಿಯ ದಿನಗಳಾದುವು. ಕೆಲಸದ ಕೋಣೆಯಲ್ಲಿ ನಾವಿಬ್ಬರೇ ಇದ್ದಾಗ ಏನೇನೋ ವಿಚಾರಗಳು. ಒಳ್ಳೆಯವು, ಕೆಟ್ಟವು. ಕೆಟ್ಟವು ಎಂದು ಹೇಗೆ ಹೇಳಲಿ? ಕೆಲವು ವಿಚಾರಗಳಿಂದ ಮೈ ಜುಮ್ ಎನ್ನುತ್ತಿದ್ದದ್ದು ನಿಜ. ಮೈಯ ಕಿತಾಪತಿಗೆ ಮನಸ್ಸು ಛಡಿ ಹಿಡಿದಾಗ ಇದೆಲ್ಲ ಸರಿಯಲ್ಲ ಅನ್ನಿಸುತ್ತಿದ್ದದ್ದೂ ನಿಜ. ಮೋರೆಯ ಮೇಲಿನ ಈ ದರಿದ್ರದಿಂದಾಗಿ ಅಲ್ಲವೆ ಇಷ್ಟೊಂದು ಆಪತ್ತು? ಇಲ್ಲವಾದರೆ? ಬೇರೆ ಯಾರಿಗೂ ಇಲ್ಲದ ಈ ದ್ವಂದ್ವ ನನಗೇ ಏಕೆ? ಹಲವೊಮ್ಮೆ ನನ್ನ ವಿಚಾರಗಳ ಗುಂಗಿನಲ್ಲೇ ಮಗ್ನಳಾದಾಗ ನನಗಾದರೂ ಇಂಥ ದ್ವಂದ್ವಗಳು ಇದ್ದದ್ದು ನಿಜವೆ? ಎಂದು ಕೇಳಿ ಕೊಂಡದ್ದುಂಟು. ಹಾಗೆ ಕೇಳಿಕೊಂಡ ಆ ದಿನ ಮಾತ್ರ, ಅದು ನಡೆದು ಹೋಯಿತು. ನಡೆದು ಹೋದದ್ದೇ ತಿಳಿಯಲಿಲ್ಲ. ಅಷ್ಟೊಂದು ಸಹಜವಾಗಿ, ಸರಕ್ಕನೆ, ಶೀಘ್ರವಾಗಿ, ಇಷ್ಟೊಂದಕ್ಕೇ ಇಷ್ಟೆಲ್ಲ ನಖರಾ ಏಕೆ ಬೇಕಿತ್ತೋ, ಎನ್ನಿಸುವ ಹಾಗೆ, ಅದೇ ಗಳಿಗೆಯಲ್ಲಿ, ಅಷ್ಟೇ ಸಹಜ ಮಾಯೆಯಿಂದ ನೀನು ಹುಟ್ಟಿದ್ದೆ. ಹುಟ್ಟಿದ್ದು ನನಗೆ ಗೊತ್ತಾಗಿತ್ತು-ತಕ್ಷಣ ನನ್ನ ವಿಶ್ವದ ತಂತುವೊಂದು ಮೆಲ್ಲನೆ ಝಲ್ ಎಂದು ಸದ್ದು ಮಾಡಿದ್ದು ಕೇಳಿಸಿತ್ತು. ಬಹುಶಃ ವಿಶ್ವದಲ್ಲಿ ಸಂಗೀತ ಹುಟ್ಟಿದ್ದು ಹೀಗೇ ಇರಬೇಕು. ಸತ್ಯವಾದದ್ದು. ಸುಂದರವಾದದ್ದು ಹುಟ್ಟಿದ್ದು ಕೂಡ, ಮಾರನೇ ದಿನ ಬೆಳಗಿಗೇ ಇವರು ಅಮೇರಿಕೆಗೆ ಹೊರಟಿರಬೇಕು. ಅತಿ ನಸುಕಿನಲ್ಲಿ ವಿಮಾನದ ಉಡ್ಡಾಣವಿತ್ತು. ನಾನು ಮತ್ತೆ ಅವರನ್ನು ಭೇಟಿಯಾಗಲು ಹೋಗಲಿಲ್ಲ. ಮುಹೂರ್ತದಗಳಿಗೆ ದಾಟಿದ್ದೇ ಮನೆಗೆ ಬಂದುಬಿಟ್ಟಿದ್ದೆ. ಹೊಸ ಹುಟ್ಟಿನ ಒಳಿತಿನಲ್ಲಿ ವಿಶ್ವಾಸವಿದ್ದಂತಿದ್ದ ಜಗತ್ತು ಏನನ್ನೂ ಪ್ರಶ್ನಿಸಲಿಲ್ಲ. ನಿನ್ನ ಬೀಜಾರೋಪಣವಾದದ್ದೇ ನೆಪವೆಂಬಂತೆ ಒಂದು ದಿನ ಅಪ್ಪ-ಅಮ್ಮ ನನ್ನ ಮೇಲೆ ಮುದ್ದಿನ ಮಳೆಗರೆಯುತ್ತ ತಮ್ಮ ತೀರ್ಥ ಯಾತ್ರೆಯ ಯೋಜನೆಯನ್ನು ಮುಂದಿಟ್ಟರು. ಅಕ್ಕ ತಂಗಿ ಇಬ್ಬರೂ ತಮ್ಮ ಗಂಡಂದಿರೊಂದಿಗೆ ಬಂದಿದ್ದರು. ಎಲ್ಲರಿಗೂ ಗೊತ್ತಿತ್ತು, ನನಗೊಬ್ಬಳಿಗೇ ಗೊತ್ತಿರಲಿಲ್ಲವೆ? ನನಗೆ ಕೆಡುಕೆನ್ನಿಸಲಿಲ್ಲ. ನನಗೆ ಇಂಥದ್ದರಲ್ಲಿ ಆಸೆಯೇ ಇರಲಿಲ್ಲ. ನಾನು ಏನೂ ಕೇಳದ್ದಕ್ಕೆ ಅವರಿಗೇ ಕೆಡುಕೆನ್ನಿಸಿತೋ ತಿಳಿಯಲಿಲ್ಲ. ಅಪ್ಪ ನನ್ನ ಬಗ್ಗೆ ಮಾಡಿದ ಹಣದ ವ್ಯವಸ್ಥೆಯ ಅಸ್ಪಷ್ಟ ಕಲ್ಪನೆಯಿತ್ತು. ಮುಂಬಯಿಯಿಂದ ನಾನೂರು ಮೈಲು ದೂರದ ಹಳ್ಳಿಯಲ್ಲಿ ಹಳ್ಳಿಯಾಗಿದ್ದ ಈ ಊರಲ್ಲಿಯ ಈ ಮನೆಯ ಬಗ್ಗೆ ಕೇಳಿ ಗೊತ್ತಿತ್ತು; ನೋಡಿರಲಿಲ್ಲ. ಈ ಕತೆ ನಡೆದ ಹೊತ್ತಿಗೆ ನಮ್ಮ ದಾಯಾದಿಗಳಾದ ಹಳೇ ಮುದುಕ-ಮುದುಕಿ ಈ ಮನೆಯಲ್ಲಿದ್ದು ಅದರ ದೇಖರೇಖಿ ಮಾಡುತ್ತಿದ್ದರು. ಅಪ್ಪ ಯಾತ್ರೆಗೆ ಹೊರಡುವ ಮೊದಲೇ ಏನೋ ಮುಂಗಂಡವರಂತೆ ಈ ದಂಪತಿಗಳ ಬಗ್ಗೆ ಹೇಳುತ್ತ, “ಕಷ್ಟ ಬಂದರೆ ಅಲ್ಲಿಗೇ ಹೋಗು. ಮುದುಕರಾದರೂ ಕೈಕಾಲುಗಳಿಂದ ಗಟ್ಟಿಯಾದವರೇ, ನಿನ್ನ ಬಗ್ಗೆ ಗೊತ್ತಿದೆ. ನಮ್ಮ ಕುಟುಂಬದ ಬಗ್ಗೆ, ಊರಿನ ಜನರ ಬಗ್ಗೆ ತಿಳಿದವರು. ಮಾರ್ಗದರ್ಶನ ಮಾಡಲು ನನಗಿಂತ ಅವರೇ ಯೋಗ್ಯರು. ಇಬ್ಬರು ಗಂಡು ಮಕ್ಕಳಿದ್ದಾರೆ. ಏನು ಪ್ರಯೋಜನ? ಇಬ್ಬರೂ ಪೋಲಿಗಳ ಸಹವಾಸ ಮಾಡಿ ಕೆಟ್ಟರು. ಈಗ ಎಲ್ಲಿದ್ದಾರೆ ಎನ್ನುವುದು ಕೂಡ ಗೊತ್ತಿಲ್ಲ. ಅಲ್ಲಿಗೇ ಹೋಗುವುದು ನಿನಗೆ ಸಾಧ್ಯವಾದರೆ ಅವರಿಗೂ ನಿನ್ನ ಆಸರೆ ದೊರಕೀತು,” ಎಂದರು. ಕಷ್ಟಕಾಲ ಬರಲು ತಡವಾಗಲಿಲ್ಲ. ಅಪ್ಪ-ಅಮ್ಮ ಕಾಶಿ ತಲುಪಿದ್ದೇ ಪತ್ರ ಬರೆಯುತ್ತೇನೆ ಎಂದಿದ್ದರು. ಆ ಪತ್ರ ಬರಲೇ ಇಲ್ಲ. ಅವರು ಪತ್ರ ಬರೆಯುವ ಬಗ್ಗೆ ನನಗೆ ವಿಶ್ವಾಸವೇ ಇರಲಿಲ್ಲ. ಬರೆದರೆ ನನಗಾಗಿ ಬರೆಯಬೇಕಾಗಿತ್ತು. ಯಾವ ಒಂದು ನಿಲುಗಡೆಗೆ ಬರುವ ಭರವಸೆಯೇ ಕಾಣದ ನನ್ನ ಪ್ರಶ್ನೆಯಿಂದ ಸೋತುಹೋದ ಇಬ್ಬರೂ ಪತ್ರ ಬರೆಯುವುದುಳಿಯಲಿ ತಿರುಗಿಬರುತ್ತಾರೆ ಎನ್ನುವ ಬಗೆಗೇ ನನಗೆ ಖಾತ್ರಿಯಾಗದಾಯಿತು. ನನ್ನ ಪರಿಸ್ಥಿತಿಯನ್ನು ನನ್ನ ಅಪ್ಪ-ಅಮ್ಮರೇ ನನಗಿಂತ ಹೆಚ್ಚು ಮನಸ್ಸಿಗೆ ಹಚ್ಚಿಕೊಂಡು ಕೊರಗಿದಂತಿತ್ತು. ಆತ್ಮಹತ್ಯೆಯ ವಿಚಾರ ನನ್ನ ಮನಸ್ಸಿನಲ್ಲಿ ಹಲವು ಸಾರ ಸುಳಿದದ್ದಿದೆ. ಆದರೆ ಎಂದೂ ಅದರಲ್ಲಿ ಕಾರ್ಯಕ್ಕಿಳಿಯುವ ದಮ್ಮು ಇರಲಿಲ್ಲ. ಬದುಕಲೆಂದೇ ಹುಟ್ಟಿ ಬಂದ ದೇಹಕ್ಕೆ, ಐನು ತಾರುಣ್ಯ ತುಂಬಿದ ಹಂಗಾಮಿನಲ್ಲಿ, ಸಾಯುವ ಕಲ್ಪನೆ ಹೇಗೆ ಸಹಿಸೀತು? ಸಹಿಸಲಿಲ್ಲ. ಆದರೆ ಸಾವು ಎಷ್ಟೆಲ್ಲ ರೂಪಗಳಲ್ಲಿ ಅವತರಿಸೀತು, ಯಾರು ಬಲ್ಲರು? ನಾನು ಸಾವಿಗೆ ಎ೦ದೂ ಹೆದರಿರಲಿಲ್ಲ. ಆದರೆ ಆ ದಿನ ಅದು ಪ್ರಕಟಿಸಿದ ರೂಪಕ್ಕೆ ಚಿಟ್ಟನೆ ಚೀರಿದೆ.
ಇದು ಸಾವು ಎನ್ನುವುದು ಕೂಡ ತಟ್ಟನೆ ಹೊಳೆಯಲಿಲ್ಲ. ಹೊಳೆದಾಗ ಇಂತಹ ರೂಪದಲ್ಲಿ ಬರ ಬೇಕಿತ್ತೇ ದೇವರೆ? ಎಂದುಕೊಂಡೆ. ಬಂದದ್ದು ಭಾವನ ರೂಪದಲ್ಲಿ – ನನ್ನ ಹಿರಿಯಕ್ಕನ ಗಂಡನ ವೇಷದಲ್ಲಿ, ಅಪ್ಪ-ಅಮ್ಮ ಯಾತ್ರೆಗೆ ಹೊರಟು ಹೋದ ಹನ್ನೊಂದನೇ ದಿನ. ಮನೆಯಲ್ಲಿ ನಾನೊಬ್ಬಳೇ, ಉಳಿದವರೆಲ್ಲ ಯಾವುದೋ ಸಿನೇಮಾಕ್ಕೆ ಹೋಗಿದ್ದರು. ೨-೩೦ರ ಆಟಕ್ಕೆ, ಇವರೂ ಹೋಗಿದ್ದಾರೆಂದು ಬಗೆದಿದ್ದೆ. ನಾನು ಗೆಳತಿಯೊಬ್ಬಳ ಮನೆಯಿಂದ ವಾಪಸ್ಸಾಗಿ ಮನೆ ಹೊಕ್ಕು ಒಂದು ಕಪ್ಪು ಚಹ ಮಾಡಿ ಕುಡಿಯುವ ವಿಚಾರ ಮಾಡುತ್ತ ದಿವಾಣಖಾನೆಯ ಸೋಫಾದಲ್ಲಿ ಒರಗಿದ ಅರ್ಧ ನಿಮಿಷದಲ್ಲಿ ಕದ ಬಡೆದ ಸದ್ದಾಯಿತು. ಯಾಕೋ ತೀರಾ ಅನಿರೀಕ್ಷಿತವಾಗಿ ಹುಟ್ಟಿದ ಈ ಸದ್ದು ಪರಿಚಯದ ಜಗತ್ತಿನದಲ್ಲ ಅನ್ನಿಸಿಹೋಯಿತು. ಆ ಜಗತ್ತಿಗೆ ಹೆಸರು ಕೊಡಬೇಕು ಎಂದುಕೊಳ್ಳುವಷ್ಟರಲ್ಲಿ ಕದದ ಮೇಲೆ ಇನ್ನೊಮ್ಮೆ ಬಡೆದ ಸದ್ದು. ಕದದ ಕಳ್ಳಗಿಂಡಿಯೊಳಗಿಂದ ನೋಡಿದಾಗ ಪ್ರಕಟಗೊಂಡಿತ್ತು:
“ಅಯ್ಯೋ, ಇದು ಸಾವು! ಇದೆಂಥ ಆಕರಾ ವಿಕರಾಳ ವೇಷ ಹಾಕಿದ್ದೀಯಾ? ಹೋಗ ಹೋಗು. ಮುಂದೆ ಹೋಗು” ಎಂದು ಒಂದ ಸಮನೆ ಚೀರಿದೆ. ‘ನಾನು ಸಾವಲ್ಲ. ಕದ ತೆಗೆ ನಾನು ನಿನ್ನ ಭಾವ. ನಿನಗಾಗಿಯೇ ಸಿನೇಮಾ ಹೋಗದೆ ಬಂದಿದ್ದೇನೆ’ ಎಂದ. ಇದು ಖಂಡಿತ ಭಾವನ ದನಿಯಲ್ಲ-ಎಂದಿನ ಭಾವನ ದನಿಯಲ್ಲ, ಭಾವನ ದನಿ ಎಂದೂ ಹೀಗಾಗುವುದು ಶಕ್ಯವಿಲ್ಲ. ಬೇಗ ಹೊರಟು ಹೋಗು. ಇಲ್ಲವಾದರೆ ದೊಡ್ಡಕ್ಕೆ ಬೊಬ್ಬೆ ಹಾಕುತ್ತೇನೆ. ಎಲೈ ದರಿದ್ರ ಮಾರಿಯೇ ಭಾವನ ರೂಪ ಹಾಕಿಕೊಂಡು ಬ೦ದು ಮೋಸ ಮಾಡುತ್ತೀಯಾ? ತಡೆ ಬದಿಯ ಮನೆಯವರಿಗೆ ಫೋನ್ ಮಾಡಿ ಕರೆಯುತ್ತೇನೆ. ಇದೆಂತ ವಿಚಾರವಾಗಿತ್ತೋ. ಮನೆಯವರಲ್ಲಿ ಫೋನೇ ಇರಲಿಲ್ಲ! ಅವನು ಹೊರಟು ಹೋದ ಸದ್ದು ಕೇಳಿಸಿತು. ನಿಜಕ್ಕೂ ಕೇಳಿಸಿತೆ? ಬರೀ ನನ್ನ ಭ್ರಮೆಯೆ? ಏನೇ ಆಗ ಜಪ್ಪಯ್ಯ ಅಂದರೂ ಕದ ತೆರೆಯಲಾರೆ. ಕದಕ್ಕಿದ್ದ ಇನ್ನೆರಡು ಅಗಳಿಗಳನ್ನೂ ಹಾಕಿದೆ. ಸಿನೇಮಾ ಹೋದವರು ಯಾವಾಗೊಮ್ಮೆ ಬಂದಾರೋ ಎಂದು ಆಗಿ ಹೋದವಳಂತೆ ಕಾದೆ. ಬಂದ ಮೇಲೆ ಅಕ್ಕ, ತಂಗಿ ಇಬ್ಬರನ್ನೂ ಗುಟ್ಟಿನಲ್ಲಿ ಸಂಧಿಸಿ ಇನ್ನೆಷ್ಟು ದಿನ? ಎಂದು ಕೇಳಿದೆ. ಆ ಪ್ರಶ್ನೆಯನ್ನು ನಾನು ಕೇಳುವ ಮೊದಲೇ ಅರಿತವರ ಹಾಗೆ ಇಬ್ಬರೂ ಒಂದೇ ಕಾಲಕ್ಕೆ ‘ನಾಳೆ’ ಎಂದರು ಇಲ್ಲಿಗೆ ಬರುವಾಗಲೇ ಹಿಂತಿರುಗಿ ಹೋಗುವ ಟಿಕೆಟ್ ಬುಕ್ ಮಾಡಿಯೇ ಬಂದದ್ದಂತೆ. ಮಕ್ಕಳನ್ನು ಅಜ್ಜ-ಅಜ್ಜಿಯರ ತಾಬೆಗೆ ಕೊಟ್ಟು ಬಂದಿದ್ದೇವೆ ಅಂದರು. ಇವರು ಇಷ್ಟೊಂದು ಭಂಡರಾಗುತ್ತಾರೆಂದು ಎಣಿಸಿರಲಿಲ್ಲವಂತೆ, ಮರು ದಿನವೇ ಅವರೆಲ್ಲ ಹೊರಟುಹೋದರು. ಅಪ್ಪ-ಅಮ್ಮರ ಮನೆ ತೊಳೆಯುವ ಕಠೋರ ನಿರ್ಧಾರಕ್ಕೆ ಏನು ಕಾರಣವಾಯಿತು, ತಿಳಿಯಲಿಲ್ಲ.
ಆದರೆ ಅಲ್ಲೆಲ್ಲೋ ನಾನಿದ್ದೆ ಅದು ನಿಃಸಂಶಯ. ಜಗತ್ತಿನಲ್ಲಿ ಇಂದು ನಡೆಯುತ್ತಿದ್ದ ಎಷ್ಟೆಲ್ಲ ಆಟಾ ಟೋಪಗಳ ಹಿ೦ದಿನ ಕಾರಣ ಶಕ್ತಿಯೆ ನಾನೇನೋ ಅನ್ನಿಸಿತು. ನೀನು ನನ್ನಲ್ಲಿ ಇಳಿದು ಬರುತ್ತಿದ್ದ ಅಮೃತಗಳಿಗೆಯಲ್ಲೇ ಅಪ್ಪ-ಅಮ್ಮ ಇಂಥ ಕಠೋರ ನಿರ್ಧಾರಕ್ಕೆ ಬಂದಿರ ಬೇಕು. ಮುಂದಾಗುವುದನ್ನು ಎದುರಿಸುವ ಧೈರ್ಯ ಅವರಲ್ಲಿರಲಾರದು, ಆದರೆ ಅದು ನನ್ನಲ್ಲಿದೆಯೆಂದು ಯಾಕೆ ತಿಳಿದರೋ! ಮುಂದಿನ ಎರಡು ವಾರಗಳವರೆಗೂ ಅವರಿಂದ ಸುದ್ದಿ ಇಲ್ಲವಾದ ಮೇಲೆ ನನ್ನ ಮೊದಲಿನ ಸ೦ಶಯವೇ. ನಿಜವಾಗುವ ಭಯವಾಯಿತು. ಸರಕ್ಕನೆ, ಯಾತ್ರೆಗೆ ಹೊರಡುವ ಒಂದು ದಿನ ಮೊದಲು ಯಾವ ಸಂದರ್ಭವೂ ಇಲ್ಲದೆ ಅಪ್ಪ ಹೇಳಿದ ಮಾತು ನೆನಪಿಗೆ ಬರಹತ್ತಿತು: ‘ನಿನ್ನ ಮೇಜಿನ ಖಣದಲ್ಲಿ ನಿನ್ನ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಕೆಲವು ಕಾಗದ ಪತ್ರಗಳನ್ನಿರಿಸಿದ್ದೇನೆ. ನಿನ್ನ ಬ್ಯಾಂಕ್ ಮ್ಯಾನೇಜರ್ ನನ್ನು ಕಂಡು ನಿನ್ನ ಖಾತೆಗೆ ಹಣ ತುಂಬಿದ್ದೇನೆ. ಹೊಸ ಚೆಕ್ ಬುಕ್ ಇರಿಸಿದ್ದೇನೆ. ಸವಡು ಆದಾಗ ಒಂದು ದಿನ ನೀನೇ ತೆರೆದು ನೋಡು.’ ಆಗ ಅರ್ಥವಾಗಿರಲಿಲ್ಲ. ಈಗ ಮೂಡಿದ ಗುಮಾನಿಯ ಆಘಾತಕ್ಕೆ ಎದ್ದು ಹೋಗಿ ನೋಡಿದರೆ ಪಾಸ್ ಬುಕ್, ಚೆಕ್ ಬುಕ್ ಎರಡೂ ಇದ್ದುವು. ಅವುಗಳ ಜೊತೆಗೆ, ಎಲ್ಲಕ್ಕೂ ಕೆಳಗೆ, ಬಾಯಿ ಮುಚ್ಚಿದ ಲಕ್ಕೋಟೆ, ಲಕ್ಕೋಟೆಯ ಮೇಲೆ ಅಕ್ಷರಗಳಿರಲಿಲ್ಲ. ಅದರ ಒಳಗೆ ಏನಿತ್ತು ಎಂಬುದರ ಕಲ್ಪನೆ ಇತ್ತು. ಲಕ್ಕೋಟೆಯ ಸ್ವಚ್ಛ – ಬಿಳಿಯ ಪೃಷ್ಠ ನೋಡುತ್ತ ಅತ್ತುಬಿಟ್ಟೆ. ತೆರೆಯುವ ಧೈರ್ಯವಿದ್ದೂ ಅದನ್ನು ಮುಟ್ಟಲಿಲ್ಲ ಕೂಡ. ತೆರೆಯುವ ಕುತೂಹಲ ಕೂಡಲೇ ಆಗಲಿಲ್ಲ. ಅದರೊಳಗಿನ ಚೀಟಿಯಲ್ಲಿ ಅಪ್ಪ ತನ್ನ ಮುತ್ತಿನಂತಹ ಸಣ್ಣ ಅಕ್ಷರಗಳಲ್ಲಿ ಬರೆದದ್ದನ್ನು ಲಕೋಟೆ ತೆರೆಯದೆಯೂ ಓದಬಲ್ಲವಳಾಗಿದ್ದೆ. ‘ಬ್ಯಾಂಕಿನಲ್ಲಿ ನಿನ್ನ ಹೆಸರಿನಲ್ಲಿ ಹಣ ಇರಿಸಿದ್ದೇನೆ,
ನಾವು ಹಿಂತಿರುಗಿ ಬರುವ ತನಕ ಇದು ನಿನಗೆ ಸಾಲಬಹುದು. ನಿನ್ನ ಕಾಳಜಿ ತೆಗೆದುಕೋ.’ ಇತ್ಯಾದಿ ಇತ್ಯಾದಿ, ಅಂದು ಮಧ್ಯಾಹ್ನದ ಊಟ ಮುಗಿಸಿ ಹಾಸಿಗೆಯಲ್ಲಿ ಅಡ್ಡವಾದಲ್ಲೇ ಲಕೋಟೆಯಲ್ಲಿ ಇದ್ದದ್ದು ಪತ್ರವಲ್ಲ, ಬೇರೆಯ ಇನ್ನೇನೋ ಎಂದು ನಿಷ್ಕಾರಣವಾಗಿ ಹೊಳೆದದ್ದೇ ಭಡಕ್ಕನೆ ಎದ್ದು ಮೇಜಿನ ಖಣದಿಂದ ಮೊದಲು ಪಾಸ್ ಬುಕ್’ ಎಳೆದು ತೆರೆದು ನೋಡಿದೆ. ಕಣ್ಣು ನಂಬದಾದೆ. ಇಷ್ಟೊಂದು ಹಣ! ದೇವರೇ ಇದು ಯಾವ ಲೆಕ್ಕಕ್ಕಾಗಿ? ಯಾರಿಗಾಗಿ? ಯಾತಕ್ಕಾಗಿ? ಲಗುಬಗೆಯಿಂದ ಲಕೋಟೆ ತೆರೆದೆ. ಚೀಟಿ ಹೊರತೆಗೆದು ಓದಿದೆ, ಓದಿದ್ದು ಅರ್ಥವಾಗುತ್ತಿರಲಿಲ್ಲ. ಹತ್ತು ಹತ್ತು ಸಾರೆ ಓದಿದರೂ ಶಬ್ದಾರ್ಥ ಹೊಳೆಯುತ್ತಿತ್ತೇ ಹೊರತು ಮಜಕೂರು ತಿಳಿಯುತ್ತಿರಲಿಲ್ಲ. ಹೀಗೇಕೆ ಮಾಡಿದಿರಿ ಎಂದು ಕೇಳುವ ಮನಸ್ಸಾಗಿಯೂ ಕೇಳದಾದೆ. ಯಾರು ಜತೆಗಿದ್ದರೆ ಅದನ್ನೆಲ್ಲ ಧೈರ್ಯದಿಂದ ಎದುರಿಸುತ್ತಿದ್ದನೋ ಅವರೇ ಮನೆಯಿಂದ ಏಕಾಏಕೀ ಹೊರಟು ಹೋದ ಮೇಲೆ ಅದೆಲ್ಲವೂ ನಿರರ್ಥಕವೆಂದು ತೋರುತ್ತಿದ್ದಂತೆಯೇ ಮನಸ್ಸು ಮತ್ತೆ ಗಟ್ಟಿಯಾಗಹತ್ತಿತು. ಹನ್ನೊಂದನೆಯ ಸಾರೆ ಒಂದೊಂದೇ ಅಕ್ಷರದ ಮೇಲೆ ಬೆರಳಿಟ್ಟು ಎನ್ನುವಂತೆ ಸಾವಾಕಾಶ ಓದಿದೆ: ‘ಮಗೂ, ನೀನು ಉಳಿದ ಅಕ್ಕತಂಗಿಯರ ಹಾಗೇ ಮದುವೆಯಾಗಿ ಬದುಕಿನಲ್ಲಿ ನೆಲೆನಿಂತ ಮೇಲೇ ಹೀಗೆ ಹೋಗುವ ಮನಸ್ಸಿತ್ತು. ಹೋಗುತ್ತಿದ್ದೆವೋ ಇಲ್ಲವೋ ಈಗ ಹೇಳುವುದು ಕಷ್ಟ. ಈಗ ಹೊರಟುನಿಂತದ್ದಂತೂ ಖರೆ, ತಿರುಗಿ ಬರುತ್ತೇವೆ ಎನ್ನುವ ಖಾತರಿ ಇಲ್ಲ. ಬಹುಶಃ ಬರುವುದಿಲ್ಲ. ಮನಸ್ಸಿನ ಹೊಯ್ದಾಟದ ಭಾಷೆ ಇದು, ಅಲ್ಲವೆ? ಹೋಗಬೇಕು ಎನ್ನುವುದಕ್ಕೆ ಬಲವಾದ ಕಾರಣವಿಲ್ಲ. ನಿನ್ನೆ ರಾತ್ರಿ ನಡೆದದ್ದು ಅದು ನಡೆಯುತ್ತಿದ್ದ ಗಳಿಗೆಯಲ್ಲೇ ನಮ್ಮಿಬ್ಬರಿಗೂ ಗೊತ್ತಾಗಿತ್ತು. ತಪ್ಪೆಂದು ತಿಳಿಯಲಿಲ್ಲ. ಗಂಡು ಮಗುವೇ ಹುಟ್ಟುತ್ತದೆ. ನಿನ್ನ ಮನಸ್ಸಿಗೆ ಒಪ್ಪುವ ಹೆಸರಿನ ಜೊತೆಗೆ ಭರತ ಎನ್ನುವ ಹೆಸರನ್ನೂ ಇಡು. ಅಜ್ಜ-ಅಜ್ಜಿಯರ ನೆನಪಿಗೆ ಆಯಿತು. ನಿಮಗೆ ಕಲ್ಯಾಣವಾಗಲಿ! ಬೇಕು ಎನ್ನಿಸಿದರೆ ಹಳ್ಳಿಯ ಮನೆಗೇ ಹೋಗಿರಿ, ನಿನ್ನ ಮಗ ಕಾಲೇಜಿಗೆ ಹೋಗುವ ವಯಸ್ಸಿಗೆ ಬಂದ ಮೇಲೆ ಬೇಕಾದರೆ ಇಲ್ಲಿಗೆ ಬ೦ದರಾಯಿತು. ಮನೆಯನ್ನು ನಿನ್ನ ಹೆಸರಿಗೆ ಮಾಡಿದ್ದೇನೆ. ನಿನ್ನ ಅಕ್ಕ ತಂಗಿಯರಿಗೆ ಗೊತ್ತಿದೆ. ನಿನ್ನ ಭಾವಂದಿರು ತಂಟೆಗೆ ಬರಲಾರರು. ಅಂಥ ವ್ಯವಸ್ಥೆಯನ್ನು ವಕೀಲರೇ ಮಾಡಿದ್ದಾರೆ!’
ಮರುದಿನವೇ ನಾನು ಹಳ್ಳಿಗೆ ಹೋಗಲೆಂದು ಗಂಟುಮೂಟೆ ಕಟ್ಟಿದೆ. ಆಗಲೇ ನನಗೆ ಎರಡು ತಿಂಗಳು. ಮತ್ತೆ ಹೊಯ್ದಾಟ ಬೇಡ, ಹಳ್ಳಿಯ ಮನೆಯ ವೃದ್ಧರಿಬ್ಬರಿಗೂ ನನ್ನ ಬಗ್ಗೆ ಗೊತ್ತಿದೆ. ನನ್ನನ್ನು ನೋಡಿಲ್ಲ, ಅಷ್ಟೇ. ಪರಿಚಯ ಮಾಡಿ ಕೊಂಡರಾಯಿತು ಎಂದುಕೊಳ್ಳುವಷ್ಟರಲ್ಲಿ ಅಪ್ಪನ ಪತ್ರ. ಬೇರೆಯ ಅರ್ಥ ಪಡೆದು ಮೋರೆಯ ಮುಂದೆ ನಿಂತಂತಾಯಿತು. ನನಗೆ ನೀನು ಹುಟ್ಟಿದ ಕ್ಷಣ ಭಾವಗೋಚರವಾದಂತೆಯೆ ಅಪ್ಪ-ಅಮ್ಮರಿಗೂ ಆಗಿತ್ತು! ಹೇಗೆ ಎಂದು ಈಗ ಕೇಳಿಕೊಂಡೆ ಉತ್ತರ ಹೊಳೆಯಲಿಲ್ಲ. ಮೈತುಂಬ ನವಿರೆದ್ದಿತು ನನ್ನ ಮೋರೆಯನ್ನು ಅಂದಗೆಡಿಸಿದ ಮಚ್ಚೆಗೆ ಏನು ಅರ್ಥ? ನನ್ನ ಯಾತನೆಗೆ ಏನು ಅರ್ಥ? ಅಪ್ಪ- ಅಮ್ಮರ ಆಶೀರ್ವಾದ ಇದೆಯಲ್ಲ- ಸಾಕು! ಸಮಧಾನ ತಂದುಕೊಳ್ಳಲು ಪ್ರಯತ್ನಿಸಿದಷ್ಟೂ ಸಮಾಧಾನವಾಗದಾಯಿತು. ಮೋರೆಯ ಮೇಲಿನ ಕಲೆ, ನಿನ್ನ ಹುಟ್ಟು, ಅಪ್ಪನ ವಿಚಿತ್ರ, ಊಹೆ ಒಂದಕ್ಕೊಂದ ಗಂಟು ಹಾಕಿಕೊಂಡವುಗಳೆ? ತಿಳಿಯದೆ ಕಂಗೆಟ್ಟಿ ಹಾಗೆ ನೋಡಿದರೆ ಈ ಜಗತ್ತಿನೊಳಗಿನ ಎಷ್ಟೇ ಸಂಗತಿಗಳು ನಮಗೆ ಅರ್ಥವಾಗಿವೆಯೆಂದಾಗ ಬೇಡವೆ? ಅರ್ಥವಾಗಿವೆಯೆಂದು ನಂಬಲು ನಿಗೂಢಗಳನ್ನು ಅಲ್ಲಗಳೆಯುತ್ತೇವೆಯೆ? ಆದರೆ ಈ ನಿಗೂಢ ಅಂಥದ್ದಲ್ಲ. ನನ್ನ ಭಾವನಿಗೆ ಸ್ವಲ್ಪವಾದರೂ ಆಧಾರವಿತ್ತು. ಅಪ್ಪನ ಊಹೆಗೆ?
ನಾನು ಹಳ್ಳಿಯಲ್ಲಿ ಕಾಲಿರಿಸುವ ಹೊತ್ತಿಗೆ ಮುಸ್ಸಂಜೆಯ ಮಬ್ಬುಗತ್ತಲೆ ಹರಡಿತ್ತು. ಅವರಿವರನ್ನು ಕೇಳುತ್ತ ಸಾಂತಯ್ಯ ಬಾಪ್ಪಾನ ಮನೆಯನ್ನು ತಲುಪಿದೆ. ಮುದುಕ-ಮುದುಕಿ ಇಬ್ಬರೂ ಮನೆಯಲ್ಲಿದ್ದರು. ಜೀವಕ್ಕೆ ಹಾಯೆನ್ನಿಸಿತು. ಬದುಕಿನ ಒಂದು ಐನು ಜಾಗದಲ್ಲಿ ದಾರಿತಪ್ಪಿಸಿ, ಕಂಗೆಡಿಸಿ, ನನ್ನ ದೈವ ಉಳಿದ ಕಡೆಗಳಲ್ಲಿ ನನ್ನನ್ನು ಕೈಹಿಡಿದು ಕಾಪಾಡುತ್ತಿದ್ದಂತಿತ್ತು. ಎಲ್ಲವೂ ಸುರಳೀತ ಸಾಗುತ್ತದೆಯೆಂದು ಮುಂಬಯಿಯಿಂದ ಹೊರಡು ವಾಗಲೇ ಅನ್ನಿಸಿತ್ತು. ಮುದಿ ಜೀವಗಳು ತುಂಬಾ ಅಕ್ಕರೆಯಿಂದ ಬರಮಾಡಿಕೊಂಡವು. ಮುಜುಗರ ಹುಟ್ಟಿಸುವಂಥ ಯಾವ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಅಪ್ಪ-ಅಮ್ಮರ ತೀರ್ಥಯಾತ್ರೆಯ ಬಗ್ಗೆ ತಿಳಿಸಿದಾಗ, ವಿಚಿತ್ರ ರೀತಿಯಲ್ಲಿ ಮುಗುಳ್ನಗುತ್ತ, “ಯಾತ್ರೆಯೆಂದು ಹೇಳಿದರೆ? ನಮ್ಮ ಮನೆತನದಲ್ಲಿ ಇಂಥದ್ದು ನಡೆದದ್ದು ಇದುವೇ ಮೊದಲ ಸಾರೆ ಅಲ್ಲವಲ್ಲ. ಹೆದರಬೇಡ, ಅವರು ತಿರುಗಿ ಬರುವುದಿಲ್ಲ. ನಾವಿದ್ದೇವಲ್ಲ. ಕಾಣಲು ಹೀಗಿದ್ದರೂ ಒಳಗೆ ಗಟ್ಟಿಮುಟ್ಟಿಯಾಗಿದ್ದೇವೆ. ಇದು ನಿಮ್ಮದೇ ಮನೆ, ನಾವು ನೋಡಿ ಕೊಂಡಿದ್ದೇವೆ, ಬೇಕಾದರೆ ನೀನು ಇಲ್ಲೇ ಇರಬಹುದು ಬೇಕಾದಷ್ಟು ದಿನ. ನನಗೆಲ್ಲ ಗೊತ್ತಿದೆ ಮಗೂ ನಿನ್ನ ಬಗ್ಗೆ, ನಿನ್ನ ಮೋರೆಯ ರೂಪ ಕೆಡಿಸಿದ ಮಚ್ಚೆಗೆ ಯಾರನ್ನು ಜವಾಬ್ದಾರ ಹಿಡಿಯುತ್ತೀಯಾ? ದೇವರನ್ನು? ಹೋದ ಜನ್ಮದ ಕರ್ಮವನ್ನು? ಎರಡು ತಿಂಗಳ ಹಿಂದೆ ನಡೆದದ್ದಕ್ಕೆ ಮಾತ್ರ ನೀನು ಜವಾಬ್ದಾರಳೆ? ಖುಶಿಯಾಗಿದ್ದೀಯಲ್ಲ? ಉಳಿದದ್ದನ್ನೆಲ್ಲ ಮರೆತು ಬಿಡು. ಅವತರಿಸಿ ಬರಲಿದ್ದವನ ಹಾದಿ ಕಾಯಿ. ಅವನೇ ಉತ್ತರಕೊಡುತ್ತಾನೆ, ನಿನ್ನ ಎಲ್ಲ ಪ್ರಶ್ನೆಗಳಿಗೆ ಈ ಮನೆ, ಹಿತ್ತಲು, ಅದಕ್ಕೆ ತಾಗಿದ ಆ ಗದ್ದೆ ಎಲ್ಲವನ್ನೂ ನಮ್ಮ ಹೆಸರಿನಲ್ಲಿ ಮಾಡಲು ಹೊರಟಿದ್ದ ನಿನ್ನಪ್ಪ. ಅವನೊಬ್ಬ ಮಳ್ಳ ಹನುಮ. ಈ ವಯಸ್ಸಿನಲ್ಲಿ ನಮ್ಮ ಹೆಸರಿಗೆ ಮಾಡಿದರೇನು ಅವನ ಹೆಸರಿಗೇ ಉಳಿದರೇನು? ನಾಳೆ ನನ್ನ ಮಕ್ಕಳಲ್ಲಿ ಕುರುಕ್ಷೇತ್ರವಾಗುವುದು ಬೇಡ. ಬಾಕಿ ಯಾವುದಕ್ಕೆ ಕಡಿಮೆಯಾದರೂ ಇಂಥದ್ದರಲ್ಲಿ ಹಿಂದೆ ಬೀಳಲಾರರು. ಇಲ್ಲಿಂದ ಓಡಿ ಹೋಗಿ ಎಷ್ಟು ವರ್ಷಗಳಾದುವೋ, ಒಮ್ಮೆ ಓಡಿ ಹೋದವರು ತಿರುಗಿ ಇತ್ತ ಕಡೆಗೆ ಮೋರೆ ತೋರಿಸಿಲ್ಲ. ಇಷ್ಟಕ್ಕೂ ಆಗಲಿದ್ದುದನ್ನು ಮುಂಗಂಡವರು ಯಾರು? ತಪ್ಪಿಸಿದವರು ಯಾರು? ಇಲ್ಲಿಂದ, ಓ ಅಲ್ಲಿ, ಕಾಣಿಸುತ್ತದಲ್ಲ ಗುಡಿಸಲಿನಂಥದು? ಅದು ಒಂದು ಕಾಲಕ್ಕೆ ನಮ್ಮ ಮನೆಯಾಗಿತ್ತು. ಸದ್ಯವೇ ಅಲ್ಲೊಂದು ಹಾವಿನ ಹುತ್ತ ಎದ್ದು ಬಂದಿದೆ. ಅಲ್ಲೀಗ ಯಾರೂ ಕಾಲಿಡುವುದಿಲ್ಲ. ನಾವೂ ಇಟ್ಟಿಲ್ಲ. ಬೇಕಾದರೆ ಒಂದು ದಿನ ಹೋಗಿ ಹಾಲಿಟ್ಟು ದೂರದಿಂದಲೇ ಕೈ ಮುಗಿದು ಬರೋಣ. ಮನೆಯ ರಕ್ಷಣೆಗಿದ್ದ ನಾಗ ಮನೆಯ ಜನರಿಗೆ ಹಾನಿ ಮಾಡುವುದಿಲ್ಲವಂತೆ. ನನಗೆ ಮುದುಕನ ಮಾತಿನ ಮೇಲೆ ಲಕ್ಷ್ಯವೇ ಇರಲಿಲ್ಲ. ಲಕ್ಷ್ಯವೆಲ್ಲ ಅವನ ಹಾವಭಾವದ ಮೇಲೆ. ಎಷ್ಟು ಚೆಂದ ಕಾಣುತ್ತಿದ್ದರಂತೀ! ಮುದುಕಿ, ನಮ್ಮೆಲ್ಲರ ಸಲುವಾಗಿ ಕಷಾಯ ಮಾಡಿ ಯಾವಾಗ ನಮ್ಮನ್ನು ಕೇಳಿದ್ದಳು, ಯಾವಾಗ ಎದ್ದು ಹೋಗಿದ್ದಳು, ಗೊತ್ತಾಗಲೇ ಇಲ್ಲ. ಸ್ನಾನವಾಗಬೇಕೇನೋ, ಹಂಡೆಗೆ ಬೆಂಕಿಹಾಕಿ ಬಂದಿದ್ದೇನೆ ಎಂದ ಮುದುಕಿ ನನ್ನ ಮನಸ್ಸನ್ನು ಓದಿಕೊಂಡವಳ ಹಾಗೆ, “ಹೆದರಬೇಡ, ಅದು ಇಲ್ಲಿ ಬರಲಾರದು. ಸದ್ಯವೇ ಈ ಹಳ್ಳಿಗೂ ಕರೆಂಟು ಬಂದಿದೆ. ಬಚ್ಚಲ ಮನೆಗೂ ದೀಪ ಹಾಕಿಸಿದ್ದೇವೆ. ನೀನು ಸ್ನಾನ ಮಾಡು, ನಾನು ಬಾಗಿಲ ಹೊರಗೇ ನಿಂತಿರುತ್ತೇನೆ” ಎಂದಳು. ನನ್ನ ಭಯ ಕಡಿಮೆಯಾಗುವ ಬದಲು ಹೆಚ್ಚೇ ಆಯಿತು. ತೋರಿಸಿಕೊಳ್ಳಲಿಲ್ಲ. ಪಟ್ಟಣದ ಹುಡುಗಿ ತಾನೇ! ಸ್ನಾನ ಮಾಡಿ ಮಡಿ ನೈಟಿ ತೊಟ್ಟುಕೊಂಡು ಹೊರಗೆ ಬಂದಾಗ ನಾನು ತೀರ ಬೇರೆಯವಳೇ ಆಗಿದ್ದೆ. ತುಂಬಾ ತುಂಬಾ ಉಲ್ಲಸಿತಳಾಗಿದ್ದೆ.
ಮುದುಕ-ಮುದುಕಿಯರನ್ನು ಇದೀಗ ಮೊದಲ ಬಾರಿಗೇ ಭೇಟಿ ಯಾಗುತ್ತಿದ್ದವಳ ಹಾಗೆ ನನಗಾದದ್ದು, ಆಗಲಿದ್ದುದ್ದು ಎಲ್ಲವನ್ನೂ ಸಮಚಿತ್ತಳಾಗಿ ಹೇಳಿದೆ. ಮುದಿ ಜೀವಗಳಿಗೆ ಎಲ್ಲವೂ ಗೊತ್ತಿದ್ದ ಹಾಗಿತ್ತು. ಮುದುಕ ಆಗ ಹಾಗಂದು ಜಂಭಕೊಚ್ಚಿ ಕೊಂಡಿರಲಿಲ್ಲವೆ? ಈಗ, ಜಗಲಿಯ ಮೇಲಿನ ಇಲೆಕ್ಟ್ರಿಕ್ ದೀಪದ ಮಂದ ಬೆಳಕಿನಲ್ಲಿ ನನ್ನ ಕತೆ ಕೇಳುತ್ತಿದ್ದವರ ಮೋರೆಗಳ ಮೇಲಿನ ಕ್ಷಣಕ್ಷಣಕ್ಕೆ ಬದಲಾಗುತ್ತಿದ್ದ ಭಾವಕ್ಕೆ ಕತೆ ಹೇಳುತ್ತಿದ್ದ ನಾನೇ ದಂಗುಬಡಿದೆ. ಯಾರು ಯಾರಿಗೆ ವರದಿ ಒಪ್ಪಿಸುತ್ತಿದ್ದಾರೆ ಎನ್ನುವ ಬಗೆಗೇ ದಿಗ್ಭ್ರಮೆಯಾಗ ತೊಡಗಿತು. ಎರಡು ತಿಂಗಳ ಹಿಂದಿನ ಘಟನೆಗೆ ಬಂದಾಗಲಂತೂ ಮುದುಕಿಯ ಮೋರೆಯ ಮೇಲೆ ತುಂಟತನದ ಮುಗುಳ್ನಗೆ ಹರಡಿತು. ನಾನು ಹೇಳಿ ಮುಗಿಸಿದ್ದೇ ಖುಷಿಯಿಂದ ನನ್ನನ್ನು ತಬ್ಬಿಕೊಂಡುಬಿಟ್ಟಳು. ‘ಯಾವುದೇ ದುರಾಸೆಯಿಂದ ಮಾಡಿದ ಕೆಲಸ ಅಲ್ಲವದು, ಮಗೂ, ನಾನಿದ್ದೇನೆ ನಿನ್ನ ಧೈರ್ಯಕ್ಕೆ. ಹೆದರಬೇಡ, ಸಾಗರ ದಾಟಿ ಹೋದವನು ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ. ತನ್ನ ಮಗನನ್ನು ಗುರುತಿಸಿ ತಲೆಯ ಮೇಲೆ ಕೈಯಿಟ್ಟು ಹರಸಿಯೇ ಹರಸುತ್ತಾನೆ. ನಿನಗೆ ಇನ್ನೇನು ಬೇಕು?’ ಎಂದಳು. ನನಗೆ ನಾನು ಯಾವ ಜಗತ್ತಿನಲ್ಲಿದ್ದೇನೆ, ಕೂಡಲೇ ತಿಳಿಯಲಿಲ್ಲ. ಇಷ್ಟೊಂದು ಸುಂದರವಾದ ಇನ್ನೊಬ್ಬಳು ಮುದುಕಿಯ ನೋಡಿಯೇ ಇರಲಿಲ್ಲ. ಒಂದು ಬಗೆಯ ಧನ್ಯತೆಯ ಭಾವ ಒಳಜೀವದಿಂದ ಪುಟಿದೆದ್ದು ಬಂದಂತಾಗಿ ಇಬ್ಬರೂ ವೃದ್ಧರ ಪಾದಗಳನ್ನು ಮುಟ್ಟಿ ಮುಟ್ಟಿ ಕೃತಜ್ಞತೆಯನ್ನು ಅರ್ಪಿಸಿದೆ. ಶಬ್ದಗಳಲ್ಲಿ ಹೇಳೋಣವೆಂದರೆ ಶಬ್ದಗಳೇ ಮೂಡದಾದುವು. ಇಬ್ಬರೂ ಹಿರಿಯರು ವಾತ್ಸಲ್ಯದಿಂದ ನನ್ನ ಬೆನ್ನ ಮೇಲೆ ಕೈಯಾಡಿಸಿದರು. ಏಳು ತಿಂಗಳ ಮೇಲೆ ನೀನು ಬಂದೆ.
“ಮಗೂ, ನಿನ್ನಪ್ಪ ಬಹಳ ಒಳ್ಳೆಯ ಜನ” ಮಗನಿಗೆ ಅವನ ಜನ್ಮದ ಕತೆಯನ್ನು ಹೇಳಲು ಶಬ್ದ ಹುಡುಕುತ್ತ ಮೌನಳಾಗಿಬಿಟ್ಟ ತಾಯಿ ಕೊನೆಗೊಮ್ಮೆ ಬಾಯಿ ಬಿಟ್ಟಳು.
ಆಗಿನಿ೦ದಲೂ ತಾಯ ಬಾಯಿಂದ ತನ್ನ ಜನ್ಮಗಾಥೆಯನ್ನು ಕೇಳಲು ಉತ್ಸುಕನಾಗಿ ಕುಳಿತಿದ್ದ ಬಾಲಕ ತಾಯ ತುಟಿಗಳಿಂದ ಈ ಶಬ್ದಗಳನ್ನು ಕೇಳಿದ್ದೇ, “ಸಾಕಮ್ಮಾ ಸಾಕು, ಮತ್ತೇನೂ ಹೇಳುವುದು ಬೇಡ, ನನಗೆಲ್ಲ ಗೊತ್ತಮ್ಮಾ, ನಿನಗಿಂತ ಮೊದಲೇ ಗೊತ್ತು. ಅಪ್ಪ ಬಂದಿದ್ದರು ನಿನ್ನೆ ಸಾಲೆಗೆ” ಮಧ್ಯದ ಬಿಡುವಿನಲ್ಲಿ ಕ್ಲಾಸಿನಿಂದ ಹೊರಗೆ ಬಂದ ನಮ್ಮ ಟೋಳಿಯ ನಡುವೆ ನಿಂತು ನಮ್ಮನ್ನು ಒಬ್ಬೊಬ್ಬರನ್ನೇ, ತಲೆಯ ಮೇಲೆ ಕೈಯಿಟ್ಟು, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, ನನ್ನ ಸರದಿ ಬರುತ್ತಲೇ ‘ನೀನು!’ ಎಂದವರು, ‘ಹೌದಲ್ಲವೋ?’ ಎನ್ನುವ ಭಾವದಲ್ಲಿ ನಿರುಕಿಸುತ್ತ, ‘ಶಕುಂತಲೆಯ ಮಗನಲ್ಲವೆ?’ ಎಂದು ಕೇಳಿದರು. ಮುಗುಳ್ನಕ್ಕರು. ನಾನು ಹೌದೆಂದು ತಲೆ ಹಾಕಿದಾಗ ‘ನಾನು ನಿನ್ನಪ್ಪ ಮಗ! ನೋಡಿದ ನೆನಪಿದೆಯೆ?’ ಎಂದು ಕೇಳಿದರು. ನಾನೂ ಎಂಥ ಮಳ್ಳ, ವಿಚಾರ ಮಾಡುವ ಮೊದಲೇ ‘ಹೌದು’ ಎಂದುಬಿಟ್ಟೆ. ಆ ಗಳಿಗೆಯಲ್ಲಿ ಹಾಗೇ ಅನ್ನಿಸಿಬಿಟ್ಟಿತಮ್ಮ. ಈ ಜನ್ಮದಲ್ಲಿ ಮಾತ್ರವಲ್ಲ. ಎಷ್ಟೊಂದು ಜನ್ಮಗಳಲ್ಲಿ! ಹೋಗುವಾಗ ಇದೊಂದನ್ನು ನನ್ನ ಕೈಯಲ್ಲಿಟ್ಟು ‘ಇದನ್ನು ಅಮ್ಮನಿಗೆ ಕೊಡು, ಕಳಕೊಳ್ಳಬೇಡವೆಂದು ಹೇಳು ಎಂದರು. ಎಷ್ಟು ಚೆಂದವಾಗಿ ನಕ್ಕರಂತಿ! ನಿನ್ನೆ ರಾತ್ರಿಯಿಡೀ ಈ ಉಂಗುರ ನನ್ನ ಕೈಯಲ್ಲಿತ್ತು. ನನ್ನ ಅಪ್ಪ ನಿಜಕ್ಕೂ ಒಳ್ಳೆಯವನಿದ್ದ ಎಂದು ನಿನ್ನ ಬಾಯಿಂದಲೇ ಕೇಳಿದ ಮೇಲೇ ಇದನ್ನು ನಿನಗೆ ತೋರಿಸುವುದೆಂದು ನಿಶ್ಚಯಿಸಿದ್ದೆ. ಇಗೋ! ಇದೀಗ ನಿನ್ನ ನಿಧಿ. ನಿಮ್ಮ ಎಂಥ ರಹಸ್ಯ ಇದರಲ್ಲಡಗಿದೆಯೋ ನನಗೆ ಹೇಳಬೇಕೆಂದಿಲ್ಲ. ‘ಅಪ್ಪ ಬಹಳ ಒಳ್ಳೆಯ ಜನ’ ಎಂದು ಹೇಳಲು ಅರ್ಧಗಂಟೆಯ ಸಮಯ ತೆಗೆದುಕೊಂಡೆ. ಎಂದ ಮೇಲೆ ಅವರ ಒಳ್ಳೆತನದ ಕತೆ ಹೇಳಲು ಎಷ್ಟು ಹೊತ್ತು ತೆಗೆದುಕೊಳ್ಳುತ್ತೀಯೋ, ಕೂಡಲೇ ಹೇಳುವುದು ಬೇಡ. ಇಡೀ ಆಯುಷ್ಯವುಂಟಲ್ಲ ಹೇಳುವುದಕ್ಕೆ, ಕೇಳುವುದಕ್ಕೆ, ನೀನಾಗಿ ಹೇಳಿಲ್ಲವೆಂದ ಮೇಲೆ ಹಳ್ಳಿಗೆ ಬಂದಾಗ, ಹಳ್ಳಿ ಬಿಡುವಾಗ ಅವರು ಇಲ್ಲಿ ಬಂದಿರಲಾರರು. ನಾನೂ ಕೇಳಲಾರೆ” ಎಂದವನೇ ಬಯಲಾಟದೊಳಗಿನ ಬಾಲವೇಷಧಾರಿಯಂತೆ, ತಾಯ ಸುತ್ತಲೂ ಆವೇಷದಿಂದ ಧಿಮಿಕಿಟ ಕುಣಿಯಹತ್ತಿದ.
*****
ಭಾವನಾ ಏಪ್ರಿಲ್ ೨೦೦೦
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.