ನೆನಹು-ನಲ್ಗನಸು

ಏಕೊ ಏಕಾಂತದಲಿ ಏಕಾಕಿಯಾಗಿರಲು
ಮೂಕ ಶೋಕದ ಚಿತ್ರ ಕಣ್ಣ ತಾಗಿ,
ಮನದ ನೀರವ ಬಾನ ನಡುವೆ ಬಣ್ಣದ ಮೋಡ
ಸುಳಿದು ನುಸುಳುವದಯ್ಯ ದೀನವಾಗಿ.

ನೆಲದ ಸುಂಟರಗಾಳಿ ತುಂಟತನದಲಿ ದಾಳಿ-
ಯಿಡಲು ಚದುರಿದ ಮೋಡ ದಿಕ್ಕುಪಾಲು!
ಒಳಗಣ್ಣ ತಿಳಿನೋಟ ಮಸಳಿ ಕಸವಿಸಿಗೊಳಲು
ಹೊರಗಣ್ಣಿನಂಚಿನಲಿ ಕಂಬನಿಗಳು.

ಜೇನುಹನಿ ಹನಿಯಾಗಿ ಹರಿವುದೊಲವು
ನೆನಹಿನಲಿ ಜೀವನವು ಮಧುರತರವು;
ಮನವನಿಮ್ಮೈಗೊಂಡು ರಂಜಿಪಂತೆ
ನೆನಹು ನಲ್ಗನಸಲ್ತೆ? ಅಂತೆ, ಉಂತೆ.
*****