ಮೊನ್ನೆ ರಜದಲ್ಲಿ ಕುತೂಹಲಕ್ಕೆಂದೇ
ಮಲೆನಾಡ ಮೂಲೆಯ ಒಬ್ಬಂಟಿ
ಅಜ್ಜಿಮನೆಗೆ ಹೋಗಿದ್ದೆ
ಸುತ್ತಲೂ
ಒಸರುವ ತೇವ ಹಸಿರು ಹೊಗೆ ಜಿಗಣೆ
ತನ್ಮಧ್ಯೆ ಅಜ್ಜಿ ಸುಟ್ಟ ಹಲಸಿನ ಹಪ್ಪಳ ಹದಾ
ಮೆಲ್ಲುತ್ತಿರುವಾಗ
ಮೆತ್ತಗೆ ಕೇಳಿದಳು-
ಏನೋ ಮರೀ
ಈಗಿತ್ತಲಾಗೆ ಬರೀ
ಕವಿತಾ ಬರೀ
ತೀಯಂತಲ್ಲೋ
ಹುತಾತ್ಮನಂತೆ ಹೌದಂದೆ
ಹೌದೋ ಪಗಾರು ಎಷ್ಟು ಕೊಡ್ತಾರೋ
ಹೊಟ್ಟೆಗೆ ಸಾಕೋ-ಎಂದಳು
ಎಂದಿದ್ದಕ್ಕೇ ಹಹ್ಹಾ ಉಚ್ಚನಗೆ ನಕ್ಕು
ಅಜ್ಜಿಯ ಪೆಚ್ಚು ಅಜ್ಜಿತನಕ್ಕೆ
ತಮಾಷೆ ತೊಡಿಸಿ
ಯುವ ನಾಯಕ ಆದೆ
ನಾಚದೆ ಸಿಟ್ಟಾಗದೆ ಕಟ್ಟಾ ನಿರ್‍ವಿಕಾರ ಅಜ್ಜಿ
ನನ್ನ ನನ್ನವರ ನೆರೆಕೆರೆಯ ಕ್ಷೇಮ ವಿಚಾರಿಸಿದಳು
ಸತ್ತವರ ಸುದ್ದಿಗೆ ಬಿಕ್ಕಿದಳು
ಇದ್ದವರ ಅಕ್ಕರೆ ಓಲೈಸಿ
ನನ್ನ ಉತ್ಕರ್‍ಷಕ್ಕೆ ಆಹಾ ಎಂದಳು
ನಿನ್ನ ದಿಗ್ವಿಜಯ ನೋಡಲು ಅವರಿರಬೇಕಿತ್ತು
ಇವರಿರಬೇಕಿತ್ತು ಎಂದು
ಹಳೆಮನೆಯ ನೆನಪು ಗೂಡುಗಳ ಗದ್ಗದಿಸಿ
ಧಳ ಧಳಾ ಅತ್ತಳು
ಈ ಮಳೆಗಾಲ ತಾನು ಕಳೆಯಲಿಕ್ಕಿಲ್ಲವೇನೋ
ಎನ್ನುತ್ತ ಹಳೆಮರದ ಹಲಸಿನ ಹಳದಿ
ಒಂದೊಂದೇ ತೊಳೆ ತಿನಿಸಿ
ನಿನ್ನ ಅಪ್ಪ ಅಮ್ಮ ಮೊದಲು ಸುಖ ಕಂಡೋರಲ್ಲ
ಅವರನ್ನು ಸಿಟ್ಟಾಗದೆ ಅನಂದದಲ್ಲಿಡು-
ಎಂದು ಪದೇ ಪದೇ ಅಂದಳು
ಕಟ್ಟಕಡೆ ಹೊರಟು ನಿಂತ ದಿನ
ಆ ದೋಡ್ಡ ಮನೆಯ ನನ್ನ ಒಂಟಿ ಅಜ್ಜಿ
ನಿನ್ನ ಅಜ್ಜನೇ ನೀನಾಗಿ ಬಂದಿದ್ದೀಯೋ
ಎಂದು ಬೊಚ್ಚ ಕೈತುಂಬ ತಲೆ ಮೈ ಸವರಿ
ಮತ್ತೆ ಮತ್ತೆ ಅನ್ನ ಇಕ್ಕಿ
ಬೀಳ್ಕೊಟ್ಟಳು.
*****