“ಏಯ್…ನಿಲ್ಲೋ, ನಿಲ್ಲೋ ಸಾವ್ಕಾರ!”-
ಕಾರಿನ ವಿರುದ್ಧ ದಿಕ್ಕಿನಲ್ಲಿ ಅತಿ ಸಮೀಪದಿಂದಲೇ ಭರ್‍ರೆಂದು ಓಡಿ ರಸ್ತೆ ಬದಿಯಲ್ಲಿ ನಿಂತ ನೀಲಿ ಸ್ಕೂಟರಿನ ವ್ಯಕ್ತಿಯನ್ನು ನೋಡಿ ಕಾರು ಹಿಂದೋಡಿತು. ಸ್ಕೂಟರಿನ ಪಕ್ಕ ನಿಂತಿತು.
“ಏನಯ್ಯ, ನಡು ಬೀದಿಯಲ್ಲಿ ನಿಲ್ಲಿಸುವಷ್ಟು ಮಹಾ ಕೆಲಸ!”-ಕಿಟಕಿಯಿಂದಲೇ ಇಣಿಕಿ ಕೇಳಿದ ಪ್ರಶ್ನೆಗೆ ಹತ್ತಿರ ಬಂದು ಬಿರುಸಾಗಿಯೇ ಬೆನ್ನಿಗೆ ಹೊಡಿದು ಗಟ್ಟಿಯಾಗಿ ನುಡಿದ ಆತ.
“ಏನೋ, ಮದುವೆ ರಿಸೆಪ್ಷನ್ನಿನಲ್ಲಿ ಮಾಡಿಸಿದ ಪರಿಚಯವಷ್ಟೇ ಸಾಕೇನು ನಮಗೆ? ಭಾಮೆಯಂತೂ ಬಹಳ ರೇಗಿದ್ದಾಳೆ ನಿನ್ನ ಮೇಲೆ ‘ಮದುವೆಯಾದ ಮೇಲೆ ಒಮ್ಮೆಯೂ ಮುಖ ಹಾಕಿಲ್ಲ. ಇವರು ಇಷ್ಟು ಜಂಬದವರಂತೆ ತಿಳಿದಿರಲಿಲ್ಲ’ ಎಂದೆಲ್ಲ ನನ್ನ ಕಿವಿ ಕಚ್ಚುತ್ತಿರುತ್ತಾಳೆ. ಹೀಗಾ ಮಾಡೋದು? ಈಗ ಮನೆಗೆ ನಡಿ. ಫಸ್ಟ್ ಕ್ಲಾಸ್ ಬಾದಾಮಿ ಹಾಲು, ಚಕ್ಕುಲಿ ಕೊಡುತ್ತೇನೆ. ತಿಂದು-ಬಿಟ್ಟು ಉಪಕಾರ ಮಾಡು. ಪಕ್ಕಕ್ಕೇನು ನೋಡುತ್ತೀ? ಈ ಒಂದು ವರ್ಷವಿಡೀ ಇದೇ ನಿನ್ನ ಪಾಲಿಗೆ. ಬರುವ ವರ್ಷ ಎಲ್ಲದಕ್ಕೂ ಅವರ ಮುಖ ನೋಡುವಿಯಂತೆ!”-
ಡಬ್ಬಿ ಬಡಿದಂತೆ ಮಾತನಾಡುತ್ತಿದ್ದ ಅವನನ್ನೇ ನೋಡುತ್ತ ಕುಳಿತ ನಾನು ಮಾತು ಮುಗಿಸುತ್ತಲೇ ಅವನ ಬೆನ್ನು ತಟ್ಟಿ ಎಂದೆ, “ತಡಿಯಪ್ಪಾ, ಬರುತ್ತೇವೆ. ಆದರೆ ಈಗಲ್ಲ. ಇನ್ನೊಮ್ಮೆ.”
“ಯಾಕೆ ಇನ್ನೊಮ್ಮೆ? ಈಗಲೇ ಯಾಕಾಗಬಾರದು?”
“ಇವತ್ತು….” ನನ್ನವಳು ಸಂಕೋಚದಿಂದ ಉಸಿರೆತ್ತುವಾಗಲೇ ಥಟ್ಟೆಂದು ಬ್ರೇಕು ಹಾಕಿದ ಶಿವು.
“ಇವತ್ತು ಅದೇನೇ ಇರಲಿ. ಬಂದೇ ತೀರಬೇಕು ಎಂದೆನಲ್ಲ! ಇವನು ಹೇಳಿದನಲ್ಲ ಎಂತ ನೀವೂ ಹಿಂದೇಟು ಹೊಡೆಯಬೇಡಿ. ನಿಮಗಿನ್ನೂ ಅವನ ಪೂರ್ಣ ಪರಿಚಯವಾಗಿಲ್ಲ. ನಂಬಿ ಕೆಟ್ಟೀರಿ, ಲೋ ಸಾವ್ಕಾರ! ಪರವಾಗಿಲ್ಲ ಕಣೋ, ನಿಮ್ಮವರು ನೀನು ಹೇಳಿದ ಹಾಗೆ. ಲಕೀ ಬಾಯ್!!”
ನಿರ್ವಾಹವಿಲ್ಲದೆ ಅವನ ಮನೆಯತ್ತ ಗತಿ ಬದಲಿಸಿತು ಕಾರು. ಹಿಂದೆಯೇ ಕಾಣುತ್ತಿತ್ತು ಅವನ ಸ್ಕೂಟರ್. ಕೊಂಚ ಹೊತ್ತಿನಲ್ಲಿಯೇ ನಮ್ಮನ್ನು ದಾಟಿ ಮುಂದೋಡಿತು.
“ಶಿವು ಹೆಂಡತಿ ಬಹಳ ಜಾಣೆ. ಯಾವಾಗಲೂ ಉಲ್ಲಾಸದಿಂದ ನಗುತ್ತಿರುತ್ತಾರೆ. ಅದೇನು ಚುರುಕೋ, ಕಾಲು ಗಂಟೆಯೊಳಗೆಲ್ಲ ತಟ್ಟೆಯಲ್ಲಿ ಬಿಸಿಬಿಸಿ ತಿಂಡಿ, ಸೊಗಸಾದ ಕಾಫಿ….” ರಸ್ತೆಯ ಮೇಲಿನ ದೃಷ್ಟಿ ತೆಗೆದು ಇವಳತ್ತ ನೋಡಿದೆ. ಹೂಂ ಇಲ್ಲ, ಹಾಂ ಇಲ್ಲ. ನೀರವ ದೃಷ್ಟಿ, ರಸ್ತೆಯ ಯಾವ ತುದಿಯಲ್ಲಿಯೋ ನೆಟ್ಟಿತ್ತು!
“ಹೂಂ…..ಮುಂದೆ”-ಒಣ ಪ್ರಶ್ನೆ.
ಛೆ! ಛೆ! ಎಂತಹ ಕೆಲಸ ಮಾಡಿದೆ! ಹೆಣ್ಣಿನ ಎದುರು ಮತ್ತೊಬ್ಬ ಹೆಣ್ಣನ್ನು ಹೊಗಳಲೇ ಬಾರದು. ಅದರಲ್ಲಿಯೂ ಕೈ ಹಿಡಿದವಳ ಎದುರಿಗೆ ಅಕ್ಷಮ್ಯ. ಮದುವೆಯಾದ ಹೊಸತರಲ್ಲಿಯಂತೂ…ಪರಿಣಾಮ ಘೋರ! ಎಲ್ಲ ತಿಳಿದೂ ಮಾಡಿದ ತಪ್ಪು!
“ಅವರಿಗೆ ಮಕ್ಕಳಿವೆಯೇ?”
ಜೋರಾಗಿ ನಗಬೇಕೆನಿಸಿತು. ಖಂಡಿತ ಬರೀ ಪುಕ್ಕಲು. ಮಕ್ಕಳಿದ್ದರೆ ಹೆಚ್ಚು ಕ್ಷೇಮವೆಂದಿರಬೇಕು. ಯಾರಿಗೆ ಗೊತ್ತು, ಇನ್ನು ಇವಳ ಮನಸ್ಸಿನ ವೈಶಾಲ್ಯ ಎಷ್ಟು ಎಂತ. ನಾನಂತಹವನಲ್ಲ ಕಣೇ ಎಂತ ಕೂಗಿ ಹೇಳಲೆ? ಆದರೆ ಹಾಗೆಲ್ಲ ಕೂಗಿ ತಿಳಿಸುವ ಮಾತಲ್ಲ ಅದು.
ರಂಜುವಿನ ನೆನಪು ಬಂತು.
“ಹೂಂ ಇದ್ದಾನೆ, ಒಬ್ಬ. ತುಂಟ”-ತಡಬಡಿಸಿದೆ.
ಅವನ ಸ್ವಭಾವ ಕೇಳಿದಳೆ ಅವಳು? ಹೂಂ, ಇದ್ದಾನೆ ಎಂದಿದ್ದರೆ ಸಾಕಿತ್ತು. ವ್ಯರ್ಥವರ್ಣನೆ. ನನ್ನ ತಡೆಬಡೆ ಅರ್ಥವಾಗಿದೆಯೋ ಏನೋ ಕರವಸ್ತ್ರದ ಮರೆಯಲ್ಲಿ ನಕ್ಕಳು ಉಮೆ. ಮನಸ್ಸು ಹಗುರಾಯಿತು. ಅಷ್ಟರೊಳಗೆ ಮನೆಯೂ ಬಂದಿತು.
ಬಾಗಿಲಲ್ಲಿ ಎಣ್ಣೆ ಮೊಗದಲ್ಲಿ ನಿಂತು ಸ್ವಾಗತಿಸಿದಳು ಶಿವೂ ಹೆಂಡತಿ. ಶಿವೂ ಎಲ್ಲಿ ಎಂದುಕೊಳ್ಳುತ್ತಿರುವಾಗಲೇ ಗಹಗಹಿಸಿ ನಗುತ್ತ ಒಳಗಿನಿಂದ ಬಂದ. ಬಂದವನೆ ಸುರುಮಾಡಿದ.
“ಅಲ್ವೋ ಸಾವ್ಕಾರ! ಮೊದಲ ಸಲ ಬರುತ್ತೀರಿ ದಂಪತಿಗಳು. ಫಸ್ಟ್ ಕ್ಲಾಸ್ ಟಿಫಿನ್ ಮಾಡಿಸುವ ಎಂದರೆ ಇವಳು ಕೈಕೊಡುವುದೆ? ಈ ಹೆಂಗಸರನ್ನು ನಂಬಿದವರು ಕೆಟ್ಟರು ನೋಡು!”-ಎಂದ. ಕಣ್ಣಲ್ಲೆಲ್ಲ ನಗು. ಹೆಂಡತಿಯತ್ತ ತಿರುಗುತ್ತ “ನೀನು ಇವರನ್ನೆಲ್ಲ ನೋಡಿಕೋ. ಒಲೆಯ ಮೇಲಿದ್ದುದಕ್ಕೆ ಗತಿಗಾಣಿಸಿ ಬರುತ್ತೇನೆ”-ಎಂದು ಒಳಗೆ ಹೋದ.
ಕಿಲಕಿಲನೆ ನಗುತ್ತಿದ್ದಳು ಶಿವೂ ಹೆಂಡತಿ.
“ಪ್ರತಿಸಲವೂ ಹೀಗೇ. ಸಮಯ ನೋಡಿ ಕರೆತಂದಂತೆ ಯಾರನ್ನಾದರೂ ಕರೆಯುತ್ತಾರೆ…”
ಒಳಗಿನಿಂದಲೇ ಕೂಗಿದ ಶಿವೂ.
“ಏನು ಮಾಡಲಿ ಹೇಳು. ನನ್ನ ಗ್ರಹಚಾರ. ಹೊಸ ಜನದೆದುರು ನಾನು ಒಲೆಯ ಮುಂದೆ ಕುಳಿತುಕೊಳ್ಳುವಂತಾಯಿತು. ಒಂದು ದಿನ ತಡೆದಿದ್ದರೆ ಏನಾಗುತ್ತಿತ್ತು ನಿನಗೆ?”-ಎಂದವನೇ ಮತ್ತೆ ಗೊಣಗಿದ.
“ಬೇಡಪ್ಪಾ ಬೇಡ. ನೀನು ಇವತ್ತೇ ಆಗಿದ್ದು ಒಳ್ಳೆಯದಾಯಿತು. ಮಾರಾಯ, ಇವಳಿಗೆ ಒಂದೆರಡು ದಿನ ಮುಂದೆ ಹೋಗಬೇಕು ನೋಡು. ನಾನೆಂದರೆ ಶತವೈರಿಯಾಗಿ ಬಿಡುತ್ತೇನೆ. ಒಂದು ಲೋಟ ಕಾಫಿ ಬೇಕೆಂದರೂ ಹೋಟೆಲಿಗೇ…..” ಇನ್ನು ಏನೆಲ್ಲ ಹೇಳುತ್ತಿದ್ದನೋ ಶಿವೂ. ಕೆಂಪೇರಿದ ಮುಖದಿಂದ ಲಜ್ಜೆ ದನಿಯಲ್ಲಿಯೂ ಗಡಸು ತುಂಬಿ ನುಡಿದಳು ಭಾಮೆ.
“ಸುಮ್ಮನಿರುತ್ತೀರಾ ಸ್ವಲ್ಪ? ಯಾರಿದ್ದಾರೆ, ಯಾರಿಲ್ಲ ಅಂತಿಲ್ಲ. ಕಾಫಿಯಾದರೆ ತನ್ನಿ ಬೇಗ.”
“ನೋಡಿದೆಯೇನಪ್ಪಾ? ಅದಕ್ಕೇ ನಾನು ನಿನ್ನನ್ನು ಲಕೀ ಬಾಯ್ ಎಂದದ್ದು. ಇಂತಹವಳು ಸಿಗಬೇಕಿತ್ತು. ಆಗ ನೋಡುತ್ತಿದ್ದೆ ನಿನ್ನ ಆಟ!”-ಎನ್ನುತ್ತಾ ಟ್ರೇನಲ್ಲಿ ಕಾಫಿ ಲೋಟ ಇರಿಸಿಕೊಂಡು ಬೆವರಿಳಿಸಿಕೊಲ್ಳುತ್ತಾ ಬಂದ ಶಿವೂ. ಬಾಯಿಗೆ ಸೆರಗು ಅಡ್ಡ ಹಿಡಿದು ನಗುತ್ತಿದ್ದಳು ಅವನ ಕಾಂತೆ.
“ತೆಗೆದುಕೊಳ್ಳಿ ಮಿಸೆಸ್ ರಘು. ನಾನೇ ಮಾಡಿದ್ದು! ಚೆನ್ನಾಗಿದ್ದರೆ ಹೇಳಿ ಸಾಕು. ಇಲ್ಲವಾದರೆ ಮೌನವಿದ್ದುಬಿಡಿ. ನಾನು ಊಹಿಸಿಕೊಳ್ಳಬಲ್ಲೆ”-ಎನ್ನುತ್ತಾ ಹೆಂಡತಿಗೂ ಒಂದು ಲೋಟ ಕೊಟ್ಟ. “ನಿನ್ನ ಯೋಗ್ಯತೆ ಹೇಳು! ಕೂತಲ್ಲೇ ಮಾಡಿಸಿದೆಯಲ್ಲ. ನೀನಿನ್ನು ಅಭಿಪ್ರಾಯ ಹೇಳಬೇಕಾಗಿಲ್ಲ. ಬಾಯಿ ಮುಚ್ಚಿ ಕುಳಿತರೆ ದೊಡ್ಡ ಉಪಕಾರ!” ಎಂದ ಶಿವೂ ನನಗೂ ಕೊಟ್ಟು ತಾನೂ ತೆಗೆದುಕೊಂಡ.
“ಬಾದಾಮಿ ಹಾಲು ಎಂದು ಕೆಟ್ಟ ಕಾಫಿ ಕೊಡುತ್ತಿದ್ದಾನೆ ಎಂದು ಬೈಯ್ಯ ಬೇಡಪ್ಪ. ಬಾದಾಮಿ ಹಾಲಿಗೇನು? ನಾಳೆ ಕುಡಿಯೋಣ. ನಾನೇ ಬಿಡುವು ಮಾಡಿಕೊಂಡು ನಿಮ್ಮ ಮನೆಗೆ ಬರುತ್ತೇನೆ” ಎಂದು ಕಾಫಿಯಂಚನ್ನು ತುಟಿಗೆ ತಾಗಿಸುವಷ್ಟರಲ್ಲಿ ಮೂಲೆಯಿಂದ ಪಿಚ್ಚೆನ್ನುವ ದನಿ.
“ಸಕ್ಕರೆ ಹಾಕಿಯೇ ಇಲ್ಲವಲ್ಲ ರೀ….”
“ಹ್ಞಾಂ!… ಇಲ್ಲವಾ? ಹಾಕಿದ್ದೇನೆಂತಲೇ ಅಂದುಕೊಂಡಿದ್ದೆ. ಆದರೂ…. ಚೆನ್ನಾಗಿದೆ. ಸ್ವಲ್ಪ ಸಕ್ಕರೆ ಬಿದ್ದುಬಿಟ್ಟಿದ್ದರೆ ಇನ್ನಷ್ಟು ಢಿಂಗಾಗುತ್ತಿತ್ತು, ಅಲ್ಲವೆ?… ಅದೇನು ಮಹಾ? ಇವಳೂ ಆಗಾಗ ಮರೆಯುತ್ತಾಳೆ. ಏನೋ ಸಾವ್ಕಾರ! ಇದೆಲ್ಲ ಪ್ರಯೋಗ ಕಣೋ. ನಿಂಗೂ ಇದೆ ಮುಂದೆ ತಾಳು. ಸಕ್ಕರೆ ತರುತ್ತೇನೆ”-ಒಳಗೋಡಿದ ಶಿವೂ. ಕ್ಷಣದಲ್ಲಿ ಸಕ್ಕರೆ ಡಬ್ಬ ತಂದ, ಬೆರೆಸಿಕೊಟ್ಟ. ನೂರು ಬಾರಿ ‘ಸಾರಿ’ ಎಂದ, ನನಗಲ್ಲ, ನನ್ನವಳಿಗೆ. ನಗುವುಕ್ಕಿ ಬಂದರೂ ಒಳಗೊಳಗೇ ತಳ್ಳುತ್ತಿದ್ದಳು ಉಮೆ. ಆ ದಂಪತಿಗಳ ಮಾತಿನಲ್ಲಿ ಜಗಳದಲ್ಲಿ ನಾವು ತುಟಿ ತೆರೆಯುವುದೇ ಅನವಶ್ಯಕವಾಗಿತ್ತು.
ಫಕ್ಕನೆ ಚಕ್ಕುಲಿಯ ನೆನಪಾಯಿತೆಂದು ಕಾಣುತ್ತದೆ. “ಅಂದ ಹಾಗೇ ಚಕ್ಕುಲಿ ಮರತೇಬಿಟ್ಟೆನಲ್ಲ!”
“ಬೇಡವೋ ಮಹಾರಾಯ! ನಾವು ತಿನ್ನಲಿಕ್ಕೇ ಬಂದದ್ದು ಎಂಬಂತೆ ಮಾಡುತ್ತೀಯಲ್ಲ. ಸ್ವಲ್ಪ ಹೊತ್ತು ಕುಳಿತುಕೋ, ಮಾತನಾಡೋಣ”-ಎಂದೆ.
“ಇಷ್ಟಕ್ಕೂ ಚಕ್ಕುಲಿ ಎಲ್ಲಿದೆ ಈಗ? ಅದು ಮಾಡಿದ್ದು ಯಾವಾಗಲೋ, ಮುಗಿದದ್ದು ಯಾವಾಗಲೋ. ಇವರ ಕತೆ!”-ಇವಳೊಡನೆ ನಗುವಿನ ಮಧ್ಯೆ ಮಾತು ಬೆಳೆಸಿದಳೂ ಶಿವೂ ಹೆಂಡತಿ.
“ಹೀಗೋ ವಿಷಯ? ನನಗೇನು ಗೊತ್ತು-ಮಾಡಿದ ದಿನ ಕೈಮೇಲೆರಡು ಹಾಕುತ್ತಾಳೆ. ಆ ಮೇಲೆ ಕೇಳಿದರೆ ತಾರತಮ್ಯ. ತಾಯಿ ಮಗ ಒಟ್ಟು ಸೇರಿ ಡಬ್ಬಿ ಖಾಲಿ ಮಾಡುವುದೇ ಕೆಲಸ. ಅಂದ ಹಾಗೇ ರಂಜು ಎದ್ದಿಲ್ಲವೇ ಇನ್ನೂ…”-ಅವನು ಕೇಳುವುದಕ್ಕೆ ಸರಿಯಾಗಿ ರೈಲ್ವೆ ಶಿಳ್ಳಿನಂತಹ ಕೀರಲು ಸ್ವರ ಕೇಳಿಸಿತು.
ಎದ್ದ ಶಿವೂ. ಏಪ್ರನ್ನಂತೆ ಟವಲು ಬಿಗಿದುಕೊಳ್ಳುತ್ತ.
“ಬಂದೆ ರಘು, ಅವನು ಎದ್ದೇ ಬಿಟ್ಟ. ಸಂಜೆ ಎದ್ದೊಡನೆ ಗುಟುಕು ಹೀರದಿದ್ದರೆ ಅವನು ಎದುರಿಗಿದ್ದವರನ್ನು ಸಿಗಿದರೂ ಸಿಗಿದನೆ. ಪಾಪ, ಅವನ ಸಿಟ್ಟಿಗೆ ನೀವೇಕೆ ಬಲಿಯಾಗಬೇಕು?” ಎನ್ನುತ್ತ ಒಳಗೆ ಓಡಿದ. ಸ್ಟೌ ಹಚ್ಚಲು ಕಡ್ಡಿ ಗೀರಿದ ಸದ್ದು ಕೇಳಿಸಿತು. “ಇನ್ನೊಮ್ಮೆ ಖಂಡಿತ ಬರುತ್ತೇವೆ” ಎಂದು ಮಾತುಕೊಟ್ಟು ನಾವಿಬ್ಬರೂ ಹೊರಬಿದ್ದೆವು, ಶಿವೂ ಒಳಗಿನಿಂದಲೇ ಕೂಗಿದ. “ಬರುವ ಸಲ ಖಂಡಿತ ಬಾದಾಮಿ ಹಾಲು ಕಣೋ, ಈ ತಾರೀಖು ತಪ್ಪಿಸಿ ಬನ್ನಿ ಮಾತ್ರ.”
“ನಿಮ್ಮ ಫ್ರೆಂಡ್ನ ತಮಾಷೆ ತುಂಬಾ ಅತಿಯಾಯ್ತು. ಇಸ್ಸಿಸ್ಸಿ. ನಾವೇನು ಇವನ ಬಾದಾಮಿ ಹಾಲಿಗೆ ಬಾಯಿ ಬಿಟ್ಟುಕೊಂಡು ಹೋದೆವೆ?” ಬರುತ್ತ ಉಮೆ ಸಿಡುಕಿದಳು.
ಒಂದೇ ಬೆಂಚಿನಲ್ಲಿ ಅಕ್ಕಪಕ್ಕದಲ್ಲಿ ಕುಳಿತು, ಕಲಿತು, ಸಿಂಬಳ ಸುರಿಯುವ ವಯಸ್ಸಿನಿಂದ ಅವನನ್ನು ಅರಿತಿರುವ ನಾನು ಅಷ್ಟು ಬೇಗ ಇವಳ ಕಣ್ಣ ಮಿಂಚಿಗೆ ಬಗ್ಗಿ ‘ಹೌದು-ಹೌದು’ ಎಂದು ಗೋಣು ಅಲ್ಲಾಡಿಸಿಯೇನೆ?
ಅವನ ಅತಿಗೂ ಒಂದು ಮಿತಿಯಿದೆ ಎಂಬುದನ್ನು ಯಾವಾಗಲೋ ತಿಳಿದ ನಾನು ಉತ್ತರಿಸಲಿಲ್ಲ. ಉತ್ತರ ಕೊಟ್ಟು ವಿರೋಧಿಸುವದಕ್ಕಿಂತ ಮೌನದಿಂದ ನನ್ನ ಉತ್ತರವನ್ನು ಮೀಸಲಿಡುವುದು ಒಳ್ಳೆಯದೆನಿಸಿತು.
ನಾನು ಉತ್ತರ ಕೊಡದೇ ಇದ್ದದ್ದು ನೋಡಿ ಅವಳಿಗೂ ಕೊಂಚ ಗಲಿಬಿಲಿಯಾಗಿರಬೇಕು. ಇಷ್ಟು ಬೇಗ ತಾನು ಯಾಕಪ್ಪ ಇವರ ದೋಸ್ತಿಯ ವಿಚಾರದಲ್ಲಿ ಅಭಿಪ್ರಾಯ ಕೊಡಬೇಕಿತ್ತು? ಎಂದು ಪಶ್ಚಾತ್ತಾಪವೂ ಆಗಿದ್ದಿರಬಹುದು. ಅವಳು ಕೊಂಚವೇ ಬಾಡಿದ ಮುಖದಿಂದ ಕಿಟಕಿಯತ್ತ ತಿರುಗಿ ರಸ್ತೆಯ ಮೇಲಿನ ಜನರನ್ನು ನೋಡತೊಡಗಿದಳು.
ನಾನು ಮೆಲ್ಲನುಸುರಿದೆ.
“ನಗಲು ಅವನ ಬಳಿ ಕಲಿಯಬೇಕು ಕಣೇ. ಎಂತಹ ನಗು ಅವನದು! ಅವನನ್ನು ಮದುವೆಯಾದವಳಿಗೆ ಅಂಟಿದ ಸಹವಾಸದ ಪ್ರಭಾವ ಅವನ ಅಪ್ರತಿಮ ನಗೆಯೊಂದೇ. ಅವನ ಗೆಳೆಯರಿಗೂ ಅವನೊಡನಿರುವಾಗ ಸಿಗುವ ಲಾಭ ಅದೊಂದೇ. ನಗೆಯೆಂದರೆ ಹಾಗಿರಬೇಕಲ್ಲ?… ಹೂಂ…?”
ನನ್ನತ್ತ ತಿಗುರಿದಳು ಉಮೆ, ನಸುನಕ್ಕಳು, ನಾನೂ ನಕ್ಕೆ. ತುಸುವೇ ದೊಡ್ಡದಾಗುತ್ತ ಆ ನಗು ಸುರುಳಿಸುರುಳಿಯಾಗಿ ಹರಡಿ ಅವಳ ಬಾಡಿದ ಮೊಗವನ್ನು ಅರಳಿಸಿತು.
****
ಒಂದು ಸಂಜೆ, ಗಂಟೆ ಏಳಾಗಿರಬಹುದು.
ಫೋನು ಚಿಲಿಪಿಲಿಗುಟ್ಟಿತು.
ಗೆಳೆಯ ಶೇಖರನದು. “ರಘು, ಹರಿ ಅಪ್. ಶಿವೂ ನಿನ್ನನ್ನು ಗಾಜನೂರಿನ ತಿರುವಿನಲ್ಲಿ ಕಾಯುತ್ತಿದ್ದಾನೆ. ನಿನ್ನ ಕುಟುಂಬ ಸಮೇತ ಹೊಡಬೇಕಂತೆ. ಊರು ಸೇರಿದೊಡನೆ ನಿನಗೆ ರಿಂಗ್ ಮಾಡಲು ಹೇಳಿದ. ಮಾಡಿದ್ದೇನಪ್ಪ. ಇನ್ನು ಬೇಗ ಓಡುವುದು ನಿನ್ನ ಕೆಲಸ.”
ನಗೆಯಲ್ಲಿ ಶಬ್ದ ತೂರಿಸಿ ಮಾತನಾಡಿದಂತಿತ್ತು, ಶೇಖರ್ ಹೇಳಿದ ವೈಖರಿ.
“ಯಾಕಪ್ಪಾ, ಅಷ್ಟು ಅವಸರ?”
“ಸಿಗುತ್ತೇನೆ ಕಣೋ, ನಾಳೆ ಬೆಳಿಗ್ಗೆಯೇ”-ಎಂದ.
ತಲೆ ಕೆರೆದು ಯೋಚಿಸಿದೆ. ಶಿವೂ ನಮ್ಮನ್ನು ಕಾಯುವುದೇ, ಅದೂ ಅಣೆಕಟ್ಟಿನ ಬಳಿ ಅಲ್ಲ, ರಸ್ತೆಯ ತಿರುವಿನಲ್ಲಿ. ಸುಳ್ಳೇ? ಸುಳ್ಳಾದರೇನಾಯಿತಂತೆ ಅಣೆಕಟ್ಟಿನ ಬಳಿ ಹೋದರಾಯಿತು. ನಮ್ಮ ಪುಣ್ಯಕ್ಕೆ ಬೆಳದಿಂಗಳಿದೆ. ನಾಳೆ ಶೇಖರ್ ಸಿಕ್ಕಿದರೆ ಆಕಾಶ ಭೂಮಿ ಒಂದು ಮಾಡಿ ನಾವು ಹೋಗಲೇ ಇಲ್ಲವೆಂದರಾಯಿತು. ಅಂತೂ ಈಗ ಹೊರಡುವುದು ಎಂದು ತೀರ್ಮಾನಿಸಿ, ಉಮೆಯನ್ನು ಅವಸರಿಸಿದೆ.
ಕಾರಣ ಕೇಳಿ ಪುಕ್ಕಲು ಉಮೆ ತುಸು ನಡುಗಿದಳು. “ಕಾಲ ಒಳ್ಳೆಯದಲ್ಲ ಯಾವ ಪುಂಡನೋ ಮಣ್ಣೋ, ಶೇಖರನ ಹೆಸರಿನಲ್ಲಿ ಫೋನು ಮಾಡಿರಲಾರನೇಕೆ? ಗೋಗುವುದು ಬೇಡ. ಒಂದು ವೇಳೆ ಸತ್ಯವೇ ಇದ್ದರೂ ಅವರು ಏನಾದರೂ ಮಾಡಿ ಕೊಳ್ಳಲಿ ಬಿಡಿ. ನನಗೇನೋ ಅನ್ನಿಸುತ್ತದೆ. ನಿಮ್ಮ ಶಿವೂ ಇಷ್ಟು ಹೊತ್ತಿಗೆಲ್ಲ ಅಲ್ಲಿಗೆ ಕರೆಯುವವರಲ್ಲ ಎಂತ.”
“ಆದರೆ ನನಗನ್ನಿಸುತ್ತದೆ. ನಮ್ಮ ಶಿವೂ ಯಾವ ಹೊತ್ತಿನಲ್ಲಿಯಾದರೂ ಎಲ್ಲಿಗಾದರೂ ಕರೆದಾನು ಎಂತ. ನಡೆನಡೆ ಏನು ಹೆದರಿಕೆಯಪ್ಪ ನಿಂಗೆ!”
‘ಹೆದರಿಕೆ’ ಎಂಬ ಶಬ್ದ ಪ್ರಯೋಗಿಸಿದ್ದು ಕೆಣಕಿದಂತಾಗಿರಬೇಕು ಅವಳಿಗೆ. ಆ ಶಬ್ದದ ಸುಳಿವು ತನ್ನ ಬಳಿ ಇಲ್ಲವೆಂಬಂತೆ ಮುಖಭಾವವನ್ನು ಕ್ಷಣದಲ್ಲಿ ಬದಲಿಸಿ ರೆಡಿಯಾಗಿ ಹೊರ ಬಂದಳು ಉಮೆ.
ಬೆಳದಿಂಗಳು ನೊರೆನೊರೆಯಾಗಿ ಧರೆಗಿಳಿದಂತಿತ್ತು. ದೂರದಲ್ಲಿ ಮೌನವಾಗಿ ನಿಂತಿದ್ದ ಸ್ಕೂಟರು ಕಾಣಿಸಿತು. ಪಕ್ಕದಲ್ಲೇ ರಸ್ತೆ ಬದಿಯ ಬಂಡೆಯ ಮೇಲೆ ಗಲ್ಲಕ್ಕೆ ಕೈಕೊಟ್ಟು ಯೋಚನಾ ಮಗ್ನಳಾಗಿ ಕುಳಿತ ಶ್ವೇತಾಂಬರಿ, ಹಿಂದುಗಡೆಯೇ ಒಂದು ಲಾರಿ, ಇಬ್ಬರು ಆಸಾಮಿಗಳು ಸ್ಕೂಟರ್‍ನೊಡನೆ ಸರ್ಕಸ್ ಮಾಡುತ್ತಿದ್ದರು. ಕ್ಷಣದಲ್ಲಿ ಊಹಿಸಿದೆ ವಿಷಯ,
“ಉಮೆ, ಒಂದು ಕತೆ ಕೇಳಿದ್ದೀಯಾ?”
“ಯಾವ ಕತೆ?”
“ಕತೆಯಲ್ಲ. ಅದು ಒಗಟು ಎಂದರೂ ಸರಿಯೆ.”
“ಏನೆಂತ ನೇರವಾಗಿ ಹೇಳಬಾರದೆ?”
ನಗು ಸುತ್ತಿ ಸುತ್ತಿ ಬರುತ್ತಿತ್ತು ನನಗೆ.
“ಒಬ್ಬ ಬ್ರಾಹ್ಮಣ-ಒಂದು ಹೊರೆ ಹುಲ್ಲು, ಒಂದು ದನ ಮತ್ತು ಒಂದು ಹುಲಿಯನ್ನು ಹೇಗೆ ಹೊಳೆ ದಾಟಿಸಿ ಈಚೆ ದಡಕ್ಕೆ ತಂದ ಎಂಬ ಒಗಟು?”
“ಅದು ಯಾಕೀಗ ನೆನಪು ಬಂತು ನಿಮಗೆ? ಅದಕ್ಕೆ ಇಷ್ಟು ನಗುವೇಕೆ? ನನಗೊಂದೂ ಅರ್ಥವಾಗುವುದಿಲ್ಲ.”
“ಸ್ವಲ್ಪ ತಾಳು. ನಿನಗೇ ತಿಳಿಯುತ್ತದೆ ಈಗ.”
ದೂರದಿಂದಲೇ ಕಾರು ನಂಬರು ನೋಡಿ ಧಡಕ್ಕೆಂದು ಎದ್ದು ನಿಂತಳು ಶಿವೂ ಹೆಂಡತಿ. ಆ ರುಮು ರುಮು ಬೀಸುವ ಶೀತಮಾರುತದ ನಡುವೆಯೂ ಮೈಯೆಲ್ಲ ಬೆವರಿ ನಿಂತ ಶಿವೂ ಕೈಯೆತ್ತಿ ಸ್ವಾಗತಿಸಿದ.
“ಅಂತೂ ಬಂದೆಯಲ್ಲ ಸಾವ್ಕಾರ! ನಿಮ್ಮವರೂ ಬಂದಿದ್ದಾರೆಯೇ? ಮತ್ತೂ ಒಲ್ಳೆಯದಾಯಿತು. ಇವಳನ್ನು ಸ್ವಲ್ಪ ಮನೆ ಮುಟ್ಟಿಸಿಬಿಡಪ್ಪ. ನಿನ್ನುಪಕಾರ ಬೇಗ ಮರೆಯಲಾರೆ.”
“ಏನಾಗಿದೆಯೋ ಸ್ಕೂಟರಿಗೆ? ಸರಿಯಾದ ಮೇಲೆ ಹೋಗೋಣವಂತೆ.”
“ಬೇಡ. ಸ್ಕೂಟರ್ ರಿಪೇರಿಯಾಗುವಾಗ ಎಷ್ಟು ಹೊತ್ತಾಗುವುದೋ. ನೀವೆಲ್ಲ ಹೋಗಿ. ರಂಜು ಪಕ್ಕದ ಮನೆಯಲ್ಲಿದ್ದಾನೆ ಕಣೋ. ಅಪರೂಪಕ್ಕೆ ಒಂದು ದಿನ ಪಕ್ಕದ ಮನೆಯಲ್ಲಿ ಬಿಟ್ಟು ಕಣ್ಣು ತಪ್ಪಿಸಿ ಬಂದದಕ್ಕೆ ಈ ಶಿಕ್ಷೆ ನಮಗೆ. ಇವಳು ಇನ್ನು ಒಂದು ಗಳಿಗೆ ಇಲ್ಲಿದ್ದರೆ ಜೀವ ಇಟ್ಟುಕೊಳ್ಳುವ ಭರವಸೆ ನನಗಿಲ್ಲ.”
ಆಗಲೇ ಶಿವೂ ಹೆಂಡತಿ ಕಾರು ಹತ್ತಿ ಕುಳಿತು ಉಮೆಯೊಡನೆ ಮನೆಮುಟ್ಟುವ ತರಾತುರಿಯನ್ನು ಉದ್ವೇಗದುಂಬಿ ವ್ಯಕ್ತಪಸಿದ್ದಳು.
ಶಿವೂನ ಮಾತು ಮುಗಿಯುತ್ತಲೇ.
“ರೀ ಮಿ|| ರಘು, ಹೋಗೋಣ. ಅವರು ಎಷ್ಟು ಹೊತ್ತಿಗೇ ಬರಲಿ, ನಾನೊಮ್ಮೆ ಮನೆ ಮುಟ್ಟಿದರೆ ಸಾಕು. ರಂಜು ಎಷ್ಟು ಅಳುತ್ತಾನೋ. ಪಕ್ಕದ ಮನೆಯವರು ಇನ್ನು ಅವನನ್ನು ಇಟ್ಟುಕೊಲ್ಳುವುದಿಲ್ಲವೆಂತ ಶಪಥಮಾಡಿದರೂ ಮಾಡಿದರೇ”
“ನೋಡಿದೆಯಾ ರಘು! ಇವರಿಗೋಸ್ಕರ ನಾವು ಪ್ರಾಣ ತೆರುವವರೆಗೂ ಸರಿಯೇ. ಇವರೋ (ಹೆಣ್ಣು ದನಿಯಲ್ಲಿ) ಎಷ್ಟು ಹೊತ್ತಿಗೇ ಬರಲಿ-ಎಂತ ಜಾರಿಸಿ ಹೊರಡುವರು. ಎಲ್ಲ ಇಷ್ಟೇ. ಬರೆದಿಟ್ಟುಕೋ”-ಎಂದವನು ತಪ್ಪು ಮಾಡದವರಂತೆ “ಅಲ್ಲಲ್ಲ. ಎಲ್ಲರೂ ಹೀಗಿರುವುದಿಲ್ಲ ಎಂತ ತಿಳುಕೋ” ಎಂದು ಇವಳತ್ತ ನೋಡಿ ಪೆಚ್ಚು ಪೆಚ್ಚಾಗಿ ನಕ್ಕ.
ಅವನ ಪೆಚ್ಚಿಗೆ ಭಾಮೆ ಕೊಟ್ಟದ್ದು ದೊಡ್ಡದೊಂದು ನಗೆಯ ಉತ್ತರ. ಆ ನಗು ಕವಲೊಡೆದು ಸಾಂಕ್ರಾಮಿಕವಾಗಿ ಉಳಿದ ಮೂವರಿಗೂ ಹರಡಿ ವಿಜೃಂಭಿಸಿತು.
ಶಿವೂ “ರ್…ರ್…ರ್…ರೈ…ಟ್” ಎಂದ.
ಮನೆಗೆ ಬಂದ ಉಮೆಯ ಮುಖ ತುಂಬ ನಗೆ ಹರಡಿಕೊಂಡಿತ್ತು. ತಟ್ಟೆ ಇಟ್ಟು ಬಡಿಸುವಾಗಲೂ ಏನೋ ನೆನೆದು ನಗುವಂತಿತ್ತು.
“ಏನು ಅಮ್ಮಾವ್ರು ಬಹಳ ಸಂತೋಷಗೊಂಡಂತಿದೆ”-ಎಂದರೆ ನಗುನಗುತ್ತಲೇ ತಲೆ ಅಲ್ಲಾಡಿಸಿ ‘ಏನಿಲ್ಲಪ್ಪ’ ಎಂದಳು.
“ಏನಿಲ್ಲದೆ ಇಷ್ಟು ನಗುವೆ? ಅದೂ ನಿನ್ನಿಂದ? ಅಸಾಧ್ಯ!” ಎಂದಾಗ ಅಷ್ಟರವರೆಗೆ ಹಿಡಿತದಲ್ಲಿದ್ದ ನಗು ಕಟ್ಟೆಯೊಡೆಯಿತು.
“ಅಲ್ಲಾಂದ್ರೆ ಭಾಮೆ ಹೇಳಿದ್ದು ನೆನಸಿ ನೆನಸಿ ನಗು ಬರುತ್ತದೆ. ಅವತ್ತು ‘ಸೀತಾ ಔರ್ ಗೀತಾ’ ಬಂದಿತ್ತಲ್ಲ? ಎಡರು ತಿಂಗಳಾದರೂ ಭಾರಿ ರಷ್ ಇತ್ತು ಅದಕ್ಕೆ- ನೆನಪಿದೆಯಾ?”
“ಹೂಂ”
“ಅದು ಬಂದ ದಿನ ಒತ್ತಾಯ ಮಾಡಿ ಭಾಮೆಯನ್ನು ಹೊರಡಿಸಿದರಂತೆ ಶಿವೂ. ನೋಡಿದರೆ ಟಾಕೀಸಿನ ಒಳಗಿದ್ದ ಮೂರರಷ್ಟು ಜನ ಹೊರಗೆ. ಟಿಕೇಟು ಸಿಗುವ ಭರವಸೆ ಚೂರೂ ಉಳಿಯದೆ ಪುನಃ ಸ್ಕೂಟರ್ ಹತ್ತಿ ಭಾಮೆಯನ್ನು ಕರೆಯಲೂ ಮರೆತು ಹೊರಟದ್ದೇ ಅಂತೆ! ಹಾಗಾದರೆ ಹಿಂದಿನ ಸೀಟು ಖಾಲಿಯಿರುವುದೂ ತಿಳಿಯುವುದಿಲ್ಲವೆ?”
“ಏನು ಮಾಡಿದರಂತೆ ಶಿವೂ ಹೆಂಡತಿ?”
“ಕೇಳಿ ಪೂರ. ಇವರು ನಾಚಿಕೆಯಿಂದ ಏನು ಮಾಡಲೂ ತಿಳಿಯದೆ ತಬ್ಬಿಬ್ಬಾದಾಗ ಜನ ಕೈ ತಟ್ಟಿ ತಮಾಷೆ ಮಾಡಲು ಆರಂಭಿಸಿಯೂ ಆಯಿತಂತೆ! ಆ ಗಲಾಟೆಗೆ ಏನೋ ಟಿಕೇಟಿಹಾಗಿ ಜಗಳವಾಗುತ್ತಿರಬಹುದು ಎಂತ ಶಿವೂ ಅತ್ತ ನೋಡಿದರೆ ಕಣ್ಣಿಗೆ ಬಿದ್ದದ್ದು ಧಾಪುಗಾಲಿನಲ್ಲಿ ಬರುತ್ತಿರುವ ಭಾಮೆ. ಥಟ್ಟಂತ ನಿಲ್ಲಿಸಿ, ಅಷ್ಟರೊಳಗೆ ಓಡಿಬಂದು ಹತ್ತಿ ಕುಳಿತ ಭಾಮೆ ಜೊತೆಗೆ ಎದ್ದೆನೋ ಬಿದ್ದೆನೋ ಎಂಬಷ್ಟು ವೇಗದಲ್ಲಿ ಆ ಜಾಗ ಬಿಟ್ಟರಂತೆ. ಎಂತಹ ಮನುಷ್ಯರಪ್ಪ. ನಾನಾಗಿದ್ದರೆ ಮೂರು ದಿನವಿಡೀ ಮಾತು ಬಿಡುತ್ತಿದ್ದೆ ನಿಮ್ಮ ಬಳಿ. ಭಾಮೆ ಬರೀ ಪಾಪದವರು. ಇದನ್ನು ಹೇಳುವಾಗಲೂ ತಮ್ಮವರ ಏನೋ ಒಂದು ಸಾಹಸ ವರ್ಣಿಸುವವರಂತೆ ವರ್ಣಿಸಿದರು. ನನಗೆ ಆಶ್ಚರ್ಯ!”
“ಹೂಂ. ನೋಡಿದೆಯಾ? ನಾನು ಅವತ್ತೇ ಹೇಳಿದೆನಲ್ಲ? ಶಿವೂ ಹೆಂಡತಿ….”
“ಹೂಂ, ಹೂಂ, ಸಾಕು. ನಾನು ಹೊಗಳಿದೆ ಎಂತ ನೀವೂ ಹೊಗಳಿದರೆ ಸಹಿಸುವುದಿಲ್ಲ. ಅದೇನೋ, ನನ್ನ ಬಾಯಿಯಲ್ಲಿ ಬಂದರೆ ನನಗೇನೂ ಅನ್ನಿಸುವುದಿಲ್ಲ. ಆದರೆ ಅದನ್ನೇ ನೇವೆಂದರೆ ಹೊಟ್ಟೆಯಲ್ಲಿ ಕತ್ತರಿಯಾಡಿಸಿದಂತಾಗುತ್ತದೆ. ಅದಕ್ಕೆ ಸ್ವಾರ್ಥವೆನ್ನಿ, ಹೊಟ್ಟೆಕಿಚ್ಚೆನ್ನೆ, ಏನೇ ಅನ್ನಿ, ಅದು ನನಗಿದೆ. ಒಪ್ಪಿಕೊಂಡೆ”-ತಾನೇ ಶರಣಾಗುತ್ತ ಬಡಿಸಿದಳು ಉಮೆ.
ಬೆಳಿಗ್ಗೆ ಒಂಬತ್ತು ಗಂಟೆಗೆ ಆಫೀಸಿಗೆ ಹೊರಟ ಶೇಖರ್ ನಮ್ಮ ಮನೆಗೆ ಬಂದ.
“ಲೋ ರಘು! ಏನಾಯಿತು ನಮ್ಮ ಶಿವೂ ಕತೆ ನಿನ್ನೆ? ಮಾರಾಯ. ನನ್ನೊಡನೆ ಸ್ಕೂಟರಿನಲ್ಲಿ ಒಬ್ಬನೇ ಬರಲಾರ. ಹೆಂಡತಿಯನ್ನೇನು ಮಾಡಲಿ ಎಂಬ ಪ್ರಶ್ನೆ. ಹೆಂಡತಿಯನ್ನಂತೂ ನನ್ನೊಡನೆ ಕಳಿಸಲೂ ಆರ. ಇಬ್ಬರೂ ಲಾರಿ ಗೀರಿ ಹತ್ತಿ ಬನ್ನಿರೆಂದರೆ ಸ್ಕೂಟರನ್ನು ಅಲ್ಲಿ ಬೆಡಲಾರ. ಆ ಸ್ಕೂಟರೋ ಜಪ್ಪಯ್ಯ ಎನ್ನುತ್ತಿರಲಿಲ್ಲ”-ಅದನ್ನೆ ಬ್ರಾಹ್ಮಣನ ಕಥೆ ಎಂದಿದ್ದೆ ನಿನ್ನೆ ನಾನು…ಎಂತ ನಾನೆನ್ನುವುದರೊಳಗೆ ಪೋನಿನ ಕರೆ.
“ಯಾರು ಸಾವ್ಕಾರಾನಾ ಮಾತಾಡುವುದು? ಬಮದುಬಿಟ್ಟೆ ಕಣಯ್ಯ ರಾತ್ರಿ ಹತ್ತು ಗಂಟೆಗೆ ನಿನಗೆ ಥ್ಯಾಂಕ್ಸ್ ಹೇಳಬೇಕಾ? ಬೇಕಿದ್ದರೆ ತಕೋ. ತುಂಬ ಥ್ಯಾಂಕ್ಸ್, ತುಂಬ ಎನ್ನುವುದೇನೂ ಬೇಕಿರಲಿಲ್ಲವೆನ್ನು. ನೀನು ಬರದಿದ್ದರೆ ಆ ಹತ್ತು ಗಂಟೆಯ ರಾತ್ರಿಯಲ್ಲಿ, ರಸ್ತೆ ಬದಿಯ ಚಳಿಯಲ್ಲಿ, ಬೆಳದಿಂಗಳಲ್ಲಿ ತಣ್ಣನೆಯ ಹನಿಮೂನಾಗುತ್ತಿತ್ತು. ಅದಕ್ಕೂ ಕಲ್ಲೂ ಹಾಕಿದೆ. ಇಷ್ಟೂ ಆಗಿ ಅವಳು ಬೇಗ ಹೋಗದಿದ್ದರೆ ಏನೂ ಮುಳುಗಿ ಹೋಗುತ್ತಿರಲಿಲ್ಲ. ರಂಜು ಅತ್ತೂ ಅತ್ತೂ ನಿದ್ದೆ ಮಾಡಿ ಬಿಟ್ಟಿದ್ದನಂತೆ. ನಾನು ಬರುವವರೆಗೂ ಏಳದವನು ಬಂದೊಡನೆ ಕಣ್ಣೊಡೆಯಬೇಕೆ? ಸರಿ. ಅವನ ಶಿಳ್ಳಿನಲ್ಲಿ ಬೆಚ್ಚನೆ ಮಲಗಲಿಕ್ಕಾದರೂ ಉಂಟೆ? ಅಂತೂ ಬರೀ ಗೋಳಿನ ಕತೆಯಾಯಿತು. ಬರೀ ಹೂಂ, ಹ್ಹ, ಹ್ಹ ಎನ್ನುತ್ತೀಯಲ್ಲ. ಏನೂ ಮಾತಿಲ್ಲವೇ ನಿನ್ನ ಬಳಿ? ಸರಿಯಪ್ಪ, ಸಂಜೆ ಸಿಗುವ.”
ಒಂದು ಮಾತನಾಡಲೂ ಅವಕಾಶವಿಲ್ಲದಂತೆ ಮಾತನಾಡಿದ ಶಿವೂ, ಪೋನಿನ ಹತ್ತಿರ ತಾನೂ ಕಿವಿ ಹಚ್ಚಿ ಕುಳಿತು ಎಲ್ಲವನ್ನೂ ಕೇಳಿದ ಶೇಖರ್ ನಗುತ್ತಲೇ ಹೊರಟು ಹೋದ.
ರಾತ್ರಿ ಒಂಬತ್ತು. ಪುನಃ ಶಿವೂನ ಕರೆ.
“ಹಲೋ, ನಿದ್ದೆ ಬಂತಾ? ಬಂದಿದ್ದರೆ ಅಡ್ಡಿಯಿಲ್ಲ. ‘ನಾಗರಹಾವು’ ಬಂದಿದೆ. ನೋಡಲೇಬೇಕು. ಆದರೆ ಹೊರಗೆ ಹಾಳು ಚಳಿ ಮಾರಾಯ. ಯಾರು ಈ ಚಳಿಗೆ ಮೈಯೊಡ್ಡಿ ಸ್ಕೂಟರಿನಲ್ಲಿ ಹೋಗುತ್ತಾರೆ ಹೇಳು. ಅದಕ್ಕೇ ನಿನ್ನ ನೆನಪಾಯಿತು.
“ಸರಿ, ಸರಿ. ಬರುತ್ತೇನೆ.”
“ನೋಡು, ನಮ್ಮ ದೆಸೆಯಿಂದ ನಿಮಗೂ ಒಂದು ಸಿನಿಮಾ. ಛಾನ್ಸು ಎಂದರೆ ಹೀಗಿರಬೇಕು.”
ನನಗೇ ಅರಿಯದಂತೆ ಮೂಡಿದ ನಗುವಿನ ರೇಖೆಗಳನ್ನು ಕಂಡೇ ಊಹಿಸಿದಳು ಉಮೆ, ಮಾತಾನಡಿದ್ದು ಶಿವೂ ಎಂತ. ನಾಗರಹಾವಿಗೆ ಹೋಗಲಿಕ್ಕಾಗಿ ಎಂದು ತಿಳಿದ ಮೇಲಂತೂ ಬಹಳ ಖುಷಿ. “ನೋಡಿ, ನಾನು ಎಷ್ಟು ಬಾರಿ ಹೇಳಿದರೂ ಮಂಜೂರಾಗದೇ ಇದ್ದದ್ದು, ಶಿವೂ ಹೇಳಿದ ಕೂಡಲೇ ಆಯಿತು. ಏನೇ ಇರಲಿ, ಸಿನಿಮಾ ಸಿಕ್ಕಿತಲ್ಲ!”-ಐದೇ ನಿಮಿಷದಲ್ಲಿ ರೆಡಿಯಾಗಿ, ಇಷ್ಟು ಬೇಗ ಯಾಕೆ ಎಂದು ಪೇಪರು ಓದುತ್ತ ಕುಳಿತ ನನ್ನ ಕೈಯಿಂದ ಪೇಪರು ಕಸಿದು ಅವಸರಿಸಿದಳು.
“ಇನ್ನು ಇಲ್ಲಿಂದ ಅವರ ಮನೆಗೆ ಹೋಗಬೇಕು. ಅಷ್ಟರೊಳಗೆ ಅವರು ಹೊರಟಿದ್ದರೆ ಆಯಿತು. ಇಲ್ಲವಾದರೆ ಹೊರಡಿಸಿ, ಟಾಕೀಸ್ ತಲುಪುವ ವೇಳೆಗೆ ಸರಿಯಾಗುತ್ತದೆ. ನ್ಯೂಸ್ರೀಲ್ ತಪ್ಪಿ ಹೋಗಬಾರದಲ್ಲ!” -ಸ್ವಗತವೆನ್ನುವಂತೆ ಮಾತನಾಡುತ್ತ, ಅಡಿಗೆ ಮನೆ, ಹಿಂಬಾಗಿಲು ಎಲ್ಲ ಭದ್ರಮಾಡಿ ಬಂದಳು ಉಮೆ.
ಸಿನಿಮಾ ಶುರುವಾಯಿತು. “ಅದೇನು? ಇದೇನು? ಆ ಹುಡುಗಿ ಚೆಂದ ಇದೆ ಅಲ್ಲ ಅಪ್ಪಾ?”-ಎಂದೆಲ್ಲ ಕೇಳಿದ ರಂಜು, “ನೋಡಿದೆಯಾ, ನನ್ನ ಮಗ ಈಗಿನಿಂದಲೇ ಎಷ್ಟು ಸೊಗಸಾಗಿ ತಯಾರಾಗುತ್ತಿದ್ದಾನೆ!”-ಎಂದು ಹುಬ್ಬು ಹಾರಿಸಿದ ಶಿವೂ.
ಕಾಲು ಗಂಟೆಯೊಳಗೆಲ್ಲ ತೂಕಡಿಸಲಾರಂಭಿಸಿದ ರಂಜು. ಕೈಯಲ್ಲಿ ಹಿಡಿದಿದ್ದ ಸ್ವೆಟರಿನ ಕೆಳಗೆ ಅವಿತುಕೊಂಡ ಬೆಡ್ಶೀಟ್ ಸದ್ದಿಲ್ಲದೆ ಹೊರಬಂತು. ಗೋಡೆ ಬದಿಯಲ್ಲಿರುವ ಜಾಗದಲ್ಲಿ ಹಾಸಿ ಏನೂ ಮುಜುಗರವಿಲ್ಲದೆ ರಂಜುವನ್ನು ಮಲಗಿಸಿ ‘ಹಾಯಾಗಿ’ ಸಿನಿಮಾ ನೋಡತೊಡಗಿದರು ಶಿವೂ ದಂಪತಿಗಳು.
“ಇದೇನಿದು ನಿನ್ನದು?”-ಎಂದರೆ.
“ಅದು ಅದೇ. ಮತ್ತೇನು ಮಾಡಲಿ? ಸಿನಿಮಾ ನೋಡಬೇಕು, ಮನೆಯಲ್ಲಿ ಬಿಟ್ಟು ಬರುವಷ್ಟು ದೊಡವನಲ್ಲ. ಮೈಮೇಲೆ ಕೂಡಿಸಿಕೊಂಡೇ ನೋಡುವಷ್ಟು ಸಣ್ಣವನಲ್ಲ. ನಿದ್ರೆ ಮಾಡದರಂತೂ ಹೊತ್ತು ಕುಳಿತುಕೊಳ್ಳುವುದು ಆಗದ ಮಾತು. ಅದಕ್ಕೇ ಈ ಉಪಾಯ. ಇದಕ್ಕೆ ಇಬ್ಬರ ತಲೆಯೂ ಸೇರಿದೆ. ಏನನ್ನುತ್ತೀ ಭಾಮೆ?-
“ಮಾತನಾಡಿಸಬೇಡಿ, ಸಿನಿಮಾ ನೋಡುತ್ತಿದ್ದೇನೆ”-ಹಿಂಬಾಲಸಿ ಬಂತು ಸುರುಳಿ ನಗು.
“ಈಗನೋಡು, ಝಂ ಎಂತ ಸಿನಿಮಾ ನೋಡಬಹುದು. ಎಂತಲೇ ನಾವು ಸಿನಿಮಾಕ್ಕೆ ಬಂದಾಗೆಲ್ಲಾ ಗೋಡೆಯ ಬದಿಯ ಸೀಟನ್ನೇ, ಕೊಟ್ಟ ಕೊನೆಯ ಸಾಲನ್ನೇ ಆರಿಸುವುದು. ನೀನೂ ಇದನ್ನೇ ಮಾಡು ಮುಂದೆ. ಆದರೆ ಕಾಪಿರೈಟ್….
“ಅಯ್ಯಽ, ಬರೀ ಮಾತು. ಸಿನಿಮಾ ನೋಡುವುದಕ್ಕೂ ಬಿಡುವುದಿಲ್ಲ. ತಾನು ನೋಡುವುದೂ ಇಲ್ಲ. ನಾಳೆ ನೋಡಿ, ಯಾರಾದರೂ ಸಿನಿಮಾ ಹೇಗಿತ್ತು ಎಂದರೆ ‘ತುಂಬಾ ಚೆನ್ನಾಗಿತ್ತು’ ಎಂದು ಠೀಕಾಗಿ ಹೇಳುತ್ತಾರೆ.”
“ನೋಡು, ನೋಡು. ಹೆಂಗಸರು ಇಷ್ಟು ಕೆಟ್ಟು ಹೋದರೆ ಯಾಕಾಗುತ್ತದೆ?” ಎಂದು ನಗೆಗಣ್ಣುಗಳಿಂದ ನೋಡಿದ ಶಿವೂ.
“ಅವರು ಹೇಳಿದಂತೆ ಮಾಡು ಸಧ್ಯ. ನಿನಗೆ ಒಳ್ಳೆಯದಾಗುತ್ತದೆ” ಎಂದೆ.
ಉಮೆ ಜೋರಾಗಿ ನಗುತ್ತಿದ್ದಳು.
ಒಂದು ಬೆಳಿಗ್ಗೆ ಸರ್‍ರಂತ ಬಂದಿಳಿದ ಶಿವೂ, ಉಮೆ ಒಳಗಿದ್ದಳು. ಉದ್ವೇಗವನ್ನು ಆದಷ್ಟು ಒತ್ತಿ ಹಿಡಿದವರಂತೆ.
“ಏಯ್ ರಘು, ನಾನು ಬೆಂಗಳೂರಿಗೆ ಹೊರಟಿದ್ದೇನೆ. ಬರುವುದು ಸ್ವಲ್ಪ ದಿನಗಳೇ ಆಗಬಹುದು. ಹೇಳಿ ಹೋಗೋಣವೆಂದು ಬಂದೆ”-ಎಂದ.
ಕಣ್ಣು ನೀರಿನ ತೆಳು ಪರದೆಯಿಂದ ಸೂಕ್ಷ್ಮವಾಗಿ ಹೊಳೆಯುವಂತಿತ್ತು.
“ಏನು ವಿಷಯ?”
ವಿವರಿಸಿದ. “ಊರಿಗೆ-ಎಂದರೆ ಅಪ್ಪನಿಗೆ ಟೆಲಿಗ್ರಾಂ ಕೊಟ್ಟಿದ್ದೇನೆ. ಹೋಗುತ್ತಿದ್ದೇನೆ ಎಂತ. ಏನಾದರೂ ಹೇಳುವುದಿದ್ದರೆ ಅಲ್ಲಿಂದ ಟ್ರಂಕ್ಕಾಲ್ ಮಾಡುತ್ತೇನೆ ನಿಂಗೆ. ಅವರಿಗೆ ತಿಳಿಸುತ್ತಿರು ಆಯಿತಾ?”
ಮಾತು ಕೇಳಿ ಉಮೆ ಹೊರಬಂದಳು. “ಓ! ನೀವಾ? ಇದೇನು ಇಷ್ಟು ಹೊತ್ತಿಗೆ? ಕುಳಿತುಕೊಳ್ಳಿ”-ಎಂದಳು.
ಆಗಲೇ ನನಗೂ ನೆನಪಾದದ್ದು. ಅವನು ನಿಂತೇ ಇದ್ದಾನೆ ಎಂತ. ಹತ್ತಿರದಲ್ಲಿದ್ದ ಕುರ್ಚಿಯಲ್ಲಿ ಕುಳಿತುಕೊಂಡು.
“ಒಳಗೆ ಹೋಗಬೇಡಿ ಮಿಸೆಸ್ ರಘು. ಏನೂ ಬೇಡ ಈಗ. ಈಗತಾನೇ ಭಾಮೆ ತಯಾರಿಸಿದ ಅಮೃತದಂತಹ ಕಾಫಿ ಕುಡಿದು ಬಂದೆ. ಸವಿ ಇನ್ನೂ ನಾಲಿಗೆಯಿಂದ ಮಾಸಿಲ್ಲ. ಏನು ರಘು! ಹೊಸ ಸಮಾಚಾರವಂತಲ್ಲ! ಕಂಗ್ರಾಚುಲೇಷನ್ಸ್ ನಿನಗಲ್ಲ, ನಿಮ್ಮವರಿಗೆ. ನಾಳೆ ನಮ್ಮ ರಂಜುವನ್ನು ಸರಿಯಾಗಿ ನೋಡಿಕೊಳ್ಳಬೇಕಲ್ಲಪ್ಪ ಅವನತ್ತೆ. ರೀ, ಈಗಲೇ ಬುಕ್ಕಾಗಿದೆ ನಿಮ್ಮ ಚೊಚ್ಚಲು ಮಗು ನಮ್ಮ ರಂಜೂವಿಗೆ. ನೆನಪಿರಲಿ.”
ಕೆಂಪೇರಿದ ಉಮೆ “ಥೂ, ನೀವೊಬ್ಬರು. ಈಗ ಬಂದೆ. ಒಂದು ನಿಮಿಷ” ಎಂದು ಒಳ ಹೋಗುವುದರೊಳಗೆ.
“ಏನೂ ಬೇಡ ಎಂದೆನಲ್ಲ, ಹೊರಟೆ ನಾನು. ಏಯ್ ಯಾಕೆ ಮಂಕನಂತೆ ಕುಳಿತಿದ್ದಿ? ಏಳು ಏಳು ಆಗಲೇ ಬೇಳಗಾಗಿದೆ. ಏನ್ರೀ, ರಾತ್ರಿ ಸರಿಯಾಗಿ ನಿದ್ರೆ ಮಾಡಲು ಬಿಡಲಿಲ್ಲವಾ ನೀವು ನಮ್ಮ ಹುಡುಗನಿಗೆ?”-ಮಾತನಾಡುತ್ತಾ, ಆಡುತ್ತಾ ಮೆಟ್ಟಿಲಿಳಿದು ಸ್ಕೂಟರ್ ಸ್ಟಾರ್ಟ್ ಮಾಡಿ ಕೈಯಾಡಿಸಿದ ಶಿವೂ.
ಅವನು ಹೋದ ಎರಡು ನಿಮಿಷದವರೆಗೂ ಏನೋ ಮೆಲ್ಲುವಂತಿದ್ದ ಉಮೆಯ ಮುಖದಲ್ಲಿ ಸುಳಿನಗು ಸುತ್ತುತ್ತಲೇ ಇತ್ತು, ಯಾವುದೋ ಕನಸಿನಲ್ಲೆಂಬಂತೆ ಸೀದಾ ನಾನು ಕುಳಿತ ಕುರ್ಚಿಯ ಕೈ ಮೇಲೇ ಕುಳಿತು “ರೀ, ಏನು ನಗು ನಿಮ್ಮ ಶಿವೂದು, ಅವರು ಬಂದಾಗೆಲ್ಲ ನಗೆಯೇ ರೂಪ ತಳೆದು ಬಂದಂತಾಗುತ್ತದೆ, ಅಲ್ಲವೆ?”-ಎಂದಳು.
ಇದು ಯಾರು? ಉಮೆಯೆ ಹೀಗೆ ಹೇಳುತ್ತಿರುವುದು? ಎಂತ ನೋಡಿದರೆ. ಹೌದು ಅವಳೇ.
“ಎಲ್ಲ ಸರಿ. ಆದರೆ ನಮ್ಮ ಚೊಚ್ಚಲು ಮಗು ಅವರ ರಂಜೂವಿಗೆ ಎಂದರಲ್ಲ! ಥೂ. ನನಗೆ ಸರಿಬರಲಿಲ್ಲವಪ್ಪ. ಹೆಣ್ಣು ಹುಟ್ಟಲಿ ಎಂದು ಪರೋಕ್ಷವಾಗಿ ಹೇಳಿದಂತಾಗಲಿಲ್ಲವೆ ಅದು? ಮಾತನಾಡುವಾಗ ಒಂದಿಷ್ಟೂ ವಿಚಾರವನ್ನೇ ಮಾಡುವುದಿಲ್ಲ.”
ಒಡೆಯಿತು ಗುಟ್ಟು. ಎಲ್ಲ ಹೆಂಗಸರೂ ಹೀಗೇ ಎಂದ ಮೇಲೆ ನನ್ನ ಉಮೆ ಬೇರೆಯಾದಾಳೇ? ಚೊಚ್ಚಲು ಬಸುರಿಯರು ಅಭಿನಂದನೆಯನ್ನು ಎಷ್ಟು ಚಂದದಿಂದ ಸುಖಿಸುತ್ತಾರೆ! ಹಾಗೇ ಗಂಡು ಹುಟ್ಟಲಿ ಎಂತ ತೀವ್ರವಾಗಿ ಬಯಸುತ್ತಾರೆ!
ಆದರೆ ಪಾಪ ಶಿವೂ, ಅಷ್ಟಾದರೂ ಹೇಳಲು ಅವನಿಗೆ ಶಕ್ತಿ ಎಲ್ಲಿತ್ತೋ.
“ಏನು, ಒಂದೂ ಮಾತನಾಡುವುದಿಲ್ಲವಪ್ಪ ನೀವು, ನಿಮಗೆ ಅವರು ಹಾಗೆ ಹೇಳಿದ್ದು ಸರಿಯೆನಿಸಿತಾ?” ಅಲುಗಾಡಿಸಿ ಕೇಳಿದಳು ಉಮೆ.
“ಅವನು ಏನೇ ಹೇಳಲಿ, ಅಷ್ಟು ಹೇಳಲಾದರೂ ಅವನಿಗೆ ಸಾಧ್ಯವಾದುದು ಹೇಗೆ ಎಂದು ನನಗೆ ಆಶ್ಚರ್ಯ!”
“ಯಾಕೆ? ಏನಾಗಿದೆ ಅವರಿಗೆ?”
“ಆಗಿದ್ದು ಅವನಿಗಲ್ಲ, ಅವನ ಮಗನಿಗೆ. ಐದಾರು ದಿನಗಳಿಂದ ಜ್ವರ ಜ್ವರ ಅಂತಿದ್ದನಲ್ಲ, ಈಗ ಪೋಲಿಯೋ ಅಟ್ಯಾಕ್ ಆಗಿದೆಯಂತೆ. ಮಗನನ್ನು ಕರೆದುಕೊಂಡು ಇಬ್ಬರೂ ಬೆಂಗಳೂರಿಗೆ ಹೊರಟಿದ್ದಾರೆ.”
ಬೆಪ್ಪಾಗಿ ಕುಸಿದು ಕುಳಿತಳು ಉಮೆ.
*****
