ಹುಟ್ಟುವಾಗಲೇ ಅವರಿಗೇನೂ ಮಾತು ಬರುತ್ತಿರಲಿಲ್ಲ. ಅಥವಾ ಅವರ ಮಾತುಗಳಿಗೆ ಶಬ್ದಗಳು ಬೇಕಿರಲಿಲ್ಲ. ಸನ್ನೆ ಸದ್ದುಗಳೇ ಸಾಕಾಗುತ್ತಿದ್ದವು. ಆದರೆ ದೊಡ್ಡವರಾಗುತ್ತ ಬಂದಂತೆ ಭಾಷೆ ಅವರನ್ನು ಆಕ್ರಮಿಸಿತು. ಶಾಬ್ದಿಕ ಭಾಷೆ ಇಲ್ಲದೆ ಏನನ್ನು ಹೇಳಲೂ ಅಸಾಧ್ಯವೆಂಬ ನಂಬಿಕೆಯಲ್ಲಿ ಅವರು ಅವಶ್ಯವಿದ್ದಲ್ಲಿ ಇಲ್ಲದಲ್ಲಿ ಎಲ್ಲ ಕಡೆಯೂ ಶಾಬ್ದಿಕ ಭಾಷೆಗೇ ಜೋತು ಬಿದ್ದರು. ಮತ್ತು ಭಾಷೆಯೆಂದರೆ ಕೇವಲ ಮಾತಿನ ಭಾಷೆಯೆಂದೇ ಅವರು ನಂಬಿಕೊಂಡರು. ಹಾಗಾಗಿ ಮಾತು ಅವರಿಗೆ ಅನಿವಾರ್ಯವಾಯಿತು.
ಅವರಿಬ್ಬರ ಮದುವೆಯಾದದ್ದೂ ಲೋಕದ ಎಲ್ಲ “ಮದುವೆ ನಾಟಕ” ಗಳಂತೆಯೇ. ಹೆಣ್ಣು ಗೋತ್ರ ಕಡಿದುಕೊಂಡು ಇನ್ನೊಂದು ಗೋತ್ರಕ್ಕೆ ಹೋಗುವ ನಾಟಕವಷ್ಟೆ ಅದು? (ಹೆಂಗಸರ ಮಟ್ಟಿಗೆ ಗೋತ್ರ ನೆನಪಾಗುವುದೇ ದೇವರ ದಯದಿಂದ ಈ ಸಂದರ್ಭದಲ್ಲಿ ಮಾತ್ರ!) ಇದೇ ಹೀಗೇ ಮಾತಿನ ಆಧಾರದಲ್ಲಿಯೇ, ಇಂಥವರ ಪ್ರಪೌತ್ರಿ, ಇಂಥವರ ಪೌತ್ರಿ, ಇಂಥವರ ಪುತ್ರಿಯಾದ ಇಂಥಾ ಹೆಸರಿನ ಶ್ರೀ ರೂಪೀ ವಧುವನ್ನು, ಅಂಥವರ ಪ್ರಪೌತ್ರನಾದ, ಅಂಥವರ ಪೌತ್ರನಾದ, ಅಂಥವರ ಪುತ್ರನಾದ ಅಂಥಾ ಹೆಸರಿನ ಶ್ರೀಧರರೂಪೀ ವರನಿಗೆ…… (ವೃಣೀಧ್ವಂ, ವೃಣೀಮಹೇ ಎಂದು ಗೌಜಿನಲ್ಲಿ ಹೇಳುತ್ತ) ಕೊಡುತ್ತೇವೆ, ಸ್ವೀಕರಿಸುತ್ತೇವೆ.
ಈ ಮಾತಿನ ಮೂಲಕ ಹತ್ತು ಸಮಸ್ತರೆದುರು “ನಂಬುಗೆ” ನಡೆಸುವ ಮೂಲಕ. ಮತ್ತೂ ಗಡದ್ದಾಗಿ ಹೇಳಬೇಕೆಂದರೆ “ನಿಶ್ಚಯ ತಾಂಬೂಲ”ದ ಮೂಲಕ! ಇದಾದಮೇಲೆಯೇ ಶ್ರೀರೂಪೀ ವಧು ಪಾದದ ಹೆಬ್ಬೆಟ್ಟಿನ ಮೇಲೆ ದೃಷ್ಟಿ ಇಟ್ಟು ಮಾತೇ ಬಾರದ ಮೂಕಸುಂದರಿಯಂತೆ ಮಂಟಪಕ್ಕೆ ಬರುವ ನಾಟಕ, ಶ್ರೀಧರ ರೂಪೀ ವರ ಪರದೆಯ ಹಿಂದೆ ತಲೆ ಎತ್ತಿ ಮೌನ ನಿಂತು ನೋಡುವ ನಾಟಕ. ಅವೇ ಮಾತು ಮಂತ್ರ ಸುಲಗ್ನಾ ಸಾವಧಾನ, ಸುಮುಹೂರ್ತೇ ಸಾವಧಾನ…… ಹೋಮ, ಅಡುಗೆ, ಅಲಂಕಾರ, ವೇಷಭೂಷಣ, ಈ ನಾಟಕವನ್ನು ಬೇಕಾದರೆ ನಾವು ಎಷ್ಟು ಸಲವೂ ನೋಡುತ್ತೇವೆ. ಯಾವ ಬೇಸರ ಇಲ್ಲದೆ ಸ್ವತಃ ನಾವೇ ಪಾತ್ರಧಾರಿಗಳೂ ಪ್ರೇಕ್ಷಕರೂ ಎರಡೂ ಆಗಿ! ಬಹುಶಃ ನಾಟಕ ಇಲ್ಲಿಗೆ ಮುಗಿಯದೆ ಅವರವರ ಮನೆಗಳಲ್ಲಿ ನಿರಂತರವಾಗಿ ಚಿತ್ರವಿಚಿತ್ರ ರೀತಿಯಲ್ಲಿ ಮುಂದುವರಿಯುತ್ತಾ ಎಂದು ಯಾವಾಗ ಹೇಗೆ ಮುಗಿಯುತ್ತದೆ ಎಂಬ ಸುಳಿವೇ ಕೊಡದೆ ಮುಗಿಯುತ್ತದೆ ಎಂತಲೇ? ಏನೇ ಇರಲಿ. ನಾಟಕದ ಆದಿ ಮಾತ್ರ ಸಿಂಧುರ, ಬಂಧುರ…… ಗಿರಿಧರ ಬ್ರಿಜಧರ ಮುರಲಿ ಅಧರ ಧರ ವಧುವರ ಸುಂದರ……
*
*
*
ಹೀಗಿರುತ್ತ ಅವರೂ ಮನೆ ಮಾಡಿದರು. ಸಣ್ಣ ಮನೆ, ಸಣ್ಣ ತೋಟ, ಸಣ್ಣ ಅಂಗಳ, ಮತ್ತು ಸಣ್ಣ ಸಣ್ಣ ಮುಗುಳು ನಗೆಗಳೊಂದಿಗೆ ಬದುಕು ಆರಂಭವಾಯಿತು. ಈಗ ಮಾತು ಎಷ್ಟು ಅವಶ್ಯಕವಾಗಿ ಕಂಡಿತು! ಆತ ಮಾತಾಡುತ್ತಿದ್ದರೆ ಆಕೆ ಕೇಳುತ್ತ ಇರುತ್ತಿದ್ದಳು. ಹಾಗೆ ಕೇಳುತ್ತ ಕೂಡುವುದೇ ಶ್ರೇಯಸ್ಕರವೆಂಬ ನಂಬಿಕೆಯಲ್ಲಿ. ಆದರೆ ಆದದ್ದು ಬೇರೆಯೇ. ಮಾತನ್ನು ಮೌನ ಕುಳಿತು ಕೇಳುತ್ತಿರುವಂತೆಯೇ ಆತ ಅವಳಿಗೆ ಬೇರೆಯೇ ರೀತಿಯಲ್ಲಿ ಕಾಣತೊಡಗಿದ! ಮಾತನಾಡದಿದ್ದಾಗ ಕಾಣಿಸದ ಆತ ಮತ್ತು ಈತ! ಅವಳಿಗೆ ಈ ಅಚ್ಚರಿಯನ್ನು ಗೆಲ್ಲಲು ನೆರವಾದದ್ದೂ ಮಾತೇ.
ನಿಧಾನವಾಗಿ ಅವಳೂ ಒಂದೊಂದೇ ಶಬ್ದಗಳಿಂದ ವಾಕ್ಯಗಳನ್ನು ಕಟ್ಟಿ ಮಾತಾಡಲು ತೊಡಗಿದಾಗ ಆತನಿಗೆ ಮನೆಯಲ್ಲಿ ಮಾಣಿಕ್ಯವೇ ಸುರಿಯುತ್ತಿದೆ ಅಂತನಿಸಿ ರೊಮಾಂಚವಾಯಿತು. ಸ್ವತಃ ಮಾತಾಡುವುದನ್ನು ಮರೆತು ಆತ ಆಕೆಯನ್ನು ಕೇಳುತ್ತ ಕುಳಿತ! ಆಗೆಲ್ಲ ಅವಳು “ಅ” ಎಂದರೆ ಅದರರ್ಥ “ಅ” ಆಗಿಯೇ ಇರುತ್ತಿತ್ತು. “ಇ” ಎಂದರೆ “ಇ”. ಆಕೆ “ಕ” ಬೇಕು ಎಂದರೆ ಆತ ಕ ಖ ಘ ಗಳನ್ನು ತರುತ್ತಿದ್ದ ಮತ್ತು “ಊ” ಬೇಕು ಎಂದರೆ ಸಾಕು “ಅಂ ಅಹಃ” ದ ವರೆಗೂ ತಂದುಹಾಕುತ್ತಿದ್ದ.
ಹೀಗೆ ಸಂಸಾರ ಸಾಗರದಲ್ಲಿ ಪುಟ್ಟ ದೋಣಿಯೇರಿ ಅವರು ಸಾಗುತ್ತಿದ್ದಾಗ ಮಾತು ಮೌನಗಳು ತಮ್ಮ ಎಂದಿನ ಹುಡುಗಾಟಿಕೆ ಆರಂಭಿಸಿದುವು. ಪರಿಣಾಮವಾಗಿ ಸೂರ್ಯೋದಯ ಸೂರ್ಯಾಸ್ತವಾಗುತ್ತಿದ್ದಂತೆ ದಿನಗಳ ಹಾಳೆ ಹಾರಿ ಹಾರಿ ಹೋಗುತ್ತಿದ್ದಂತೆ, ಹೊಸ ಹೊಸ ಅಲೆಗಳು ಸಂಸಾರ ಸಾಗರ ತೀರಕ್ಕೆ ಹೊಡೆದು ಮತ್ತೆ ಹೊಸದಾಗಿ ಹುಟ್ಟಿ ಅಪ್ಪಳಿಸಲು ಒತ್ತರಿಸಿ ಬಂದಂತೆ, ಆತ ಅವಳ ಮಾತು ಕೇಳುತ್ತ ಕುಳಿತಂತೆ ಆಕೆ ಆತನಿಗೆ ಅಪರಿಚಿತಳಾಗುತ್ತ ಹೋದಳು. ಮಾತನಾಡದ ಆಕೆ ಎಲ್ಲಿಗೆ ಹೋದಳು?
ಆತ ಅರಸತೊಡಗಿದ – ಮಾತಿನ ಮೂಲಕವೇ. ಆಕೆಯೂ ಆತನನ್ನು ಅರಸತೊಡಗಿದಳು. ಮಾತಿನ ಮೂಲಕವೇ.
ಅರಸಾಟ ಸಾಗುತ್ತಿದ್ದಂತೆ “ಅ” ಎಂದದ್ದು “ಗ” ಆಗಿ, “ಮ” ಎಂದರೆ ಮತ್ತೊಂದಾಗಿ ಗಾಳಿಗನುಸಾರವಾಗಿ ಕೇಳಲಾರಂಭಿಸಿದುವು. ಆಗ ಅವರು ನಿಜಕ್ಕೂ ತಬ್ಬಿಬ್ಬಾದರು. ಮಾತು ತಲುಪಿಸುವ ಹೆಣಗಾಟದಲ್ಲಿ ಒಮ್ಮೊಮ್ಮೆ ಅವರ ಮನಸ್ಸಿನಲ್ಲಿ “ಬ” ಎನ್ನಬೇಕೆಂತ ಇದ್ದಿದ್ದರೂ ಅದು ಹೊರಬರುವಾಗ “ಡ” ಆಗಿರುತ್ತಿತ್ತು! ಮತ್ತು ದುರದೃಷ್ಟವಶಾತ್ ತಮ್ಮ ಮನಸ್ಸಿನಲ್ಲಿ ಇದ್ದದ್ದು “ಡ” ಎಂತಲೇ ಅವರು ಸಾಧಿಸಿಕೊಳ್ಳಬೇಕಾಗಿ ಬರುತ್ತಿತ್ತು. ಒಮ್ಮೊಮ್ಮೆ ತಮಗೇ ತಾವು ಸಮರ್ಥಿಸಿಕೊಳ್ಳಬೇಕಾಗುತ್ತಿತ್ತು. ಇದೇ ಅಭ್ಯಾಸವಾಗುತ್ತ ಕೊನೆಗೆ ಮನಸ್ಸಿನಲ್ಲಿ ನಿಜವಾಗಿಯೂ ಇದ್ದದ್ದೇನು ಎಂದು ಹಣಿಕಿ ನೋಡುವ ಕಿಂಡಿಯೂ ಉಪಯೋಗಿಸುವವರಿಲ್ಲದೆ ಮುಚ್ಚಿಹೋಯಿತು. ಹೀಗೆ ಅವರು ಸ್ವತಃ ಅಪರಿಚಿತರಾಗುತ್ತ ಹೋದರು. ಒಮ್ಮೊಮ್ಮೆ ಗಾಳಿ ಸ್ತಬ್ದವಾದಾಗಲಂತೂ ಒಬ್ಬರು ಮಾತಾಡಿದ್ದು ಮತ್ತೊಬ್ಬರಿಗೆ ಏನೊಂಚೂರೂ ಕೇಳಿಸದೆ ಅಲಕ್ಷಿಸುವಂತಾಯಿತು. ರೇಗುವಂತಾಯಿತು. ಪ್ರಶ್ನೆ ಉತ್ತರಗಳೇ ತಿರುಗಮುರುಗ ಆಗ ಹತ್ತಿದುವು.
ಆಕೆ ಮಾತನಾಡದ ಆ ಶ್ರೀಧರರೂಪೀ ವರನನ್ನು ಹುಡುಕುತ್ತಿದ್ದಂತೆ, ಆತ ಮಾತನಾಡದ ಆ ಶ್ರೀರೂಪೀ ವಧುವನ್ನು ಹುಡುಕುತ್ತಿದ್ದಂತೆ ಇಬ್ಬರೂ ತಮ್ಮನ್ನೇ ಹುಡುಕಿಕೊಳ್ಳತೊಡಗಿದರು…… ಮಾತಿನ ಮೂಲಕವೇ. ಹುಡುಕಾಟ ಮುಂದರಿದಂತೆಲ್ಲ ಸಣ್ಣಪುಟ್ಟ ಕಾರಣಕ್ಕೆಲ್ಲ ಸಣ್ಣ ಟೀ ಕಪ್ಪಿನಲ್ಲಿಯೂ ಬಿರುಗಾಳಿ ಏಳತೊಡಗಿ ಅದು ಚಂಡಮಾರುತವಾಗತೊಡಗಿತು. ಪುಟ ದೋಣಿಯೋ, ಸಾಗುವುದಕ್ಕಿಂತ ಬೀಳದಿರುವತ್ತವೇ ಹೆಚ್ಚು ಧ್ಯಾನ ಹರಿಸಬೇಕಾಯಿತು.
*****
