ಖಾಲಿ ಸೈಟುಗಳು

  • ೧ –

ಹೊಸ ಮದುಮಗಳ ನಾಚಿಕೆಯ
ಬಡಾವಣೆಗಳಲ್ಲಿ
ಒಮ್ಮೆ ಬಡಾವಣೆಗಳೆನಿಸಿ, ಈಗ ಗರತಿಗಳಾಗಿ
ಪಳಗಿರುವ ಮೊಹಲ್ಲಗಳಲ್ಲಿ
ಮಾಟಾದ ಸೌಧಗಳ
ನೋಟದಾಮೋದಗಳ
ನೀಟು ದಂತಾವಳಿಯ ನಡುವೆ
ಕಣ್ಣನಿರಿಯುತ್ತವೆ ಧುತ್ತೆಂದು
-ಅಲ್ಲೊಂದು ಇಲ್ಲೊಂದು ಹಲ್ಲಿರದ ಸಂದು;
ಪಾರ್ಥೇನಿಯಮ್ಮಿನ ದಟ್ಟ ತೋಟಗಳು
ಬಾಡಿಗೆವಾಸಿಗಳ ಕಣ್ಣಿನ ಕಾಲಕೂಟಗಳು
ಸೆಟ್ಟರ, ಸೇಟುಗಳ,
ನರಾಕೃತಿವೆತ್ತ ನೋಟುಗಳ,
ಸುಲಭ ಕಮಾಯಿಯ ಬತ್ತದೂಟೆಗಳು;
ದಿನೇ ದಿನೇ ದಿವಕ್ಕೇರಿರುವ ರೇಟುಗಳು;
-ಖಾಲಿ ಸೈಟುಗಳು!

ಇದ್ದಲ್ಲೆ ಇದ್ದರೂ
ಕದಲದೆ ಬಿದ್ದಿದ್ದರೂ
ಪತ್ರಗಳ ದ್ವಾರಾ ಕಛೇರಿಗಳನಲೆದು
ಹತ್ತು ಕೈಗಳ ಬದಲಿ,
ಕೊನೆಗೆ ಯಾರದೋ ತೊತ್ತು;
ಜಂಬದ ಮೂಗಿನ, ಸಿರಿವಂತಿಕೆಯ ನತ್ತಿನ
ತೋರಿಕೆಯ ಮುತ್ತು.

  • ೨ –

ತೇಪಿನಳತೆಯ ಈ ಕರಾರುವಾಕ್ಕು ಉದ್ದಗಲಗಳು,
ನೆಲದಸಂಖ್ಯಾತ ಒಂದೆತನದ ಹೋಳುಗಳಲ್ಲಿ
ನೆಟ್ಟ ಕಲ್ಲಿನ
ಕಪ್ಪು ನಂಬರಿನ
ಏಕಮೇವ ಗುರುತುಗಳು-
ಕೆಲವೊಮ್ಮೆ ಚೌರ ಮಾಡಿಸಿದಂತೆ
ಸಸ್ಯ ಸಂತತಿಯೆಲ್ಲ ತೋಪಾಗಿ
ತಿಟ್ಟು ತೆವರು ತೋಪಡ ಹೊಡೆಸಿಕೊಂಡು ಸಾಫಾಗಿ
ಅಲಂಕರಣದಂಕಣಗಳಾಗುತ್ತವೆ;
ಚೆಳ್ಳೆಪಿಳ್ಳೆಗಳ ಕ್ರಿಕೆಟ್ ಆಟ,
ದನ ಕರುಗಳ ಗೂಟ,
ನೆರೆಮನೆಯ ಒಗೆದರಿವೆಗಳ ತೂಗಾಟ,
ನಾಯಿಗಳ ಕೂಟಗಳಿಗೆ;
ಹಾಗೆಯೇ,
ಸಂಜೆ ಮಗ್ಗಲು ಮನೆಗಳೆಲ್ಲ ದೀಪ್ತಿಯ ಧರಿಸಿ
ಹೊರಗೆಸೆವ ನೆರಳುಗಳ ಪಟ್ಟೆಗಳಿಗೆ,
ತಮದ ಬೆಳ್ಳಟ್ಟೆಗಳಿಗೆ.

ನಿವಾಸ ನಾಮೆಯ ಕಣ್ತುಂಬುವ ಸೊಗಸುಗಳ
ನಿಗುರಿಸಿಕೊಂಡ ಸಹ ನಿವೇಶನಗಳೊಡನೆ, ಹಿಂದೊಮ್ಮೆ
ಮಸಿ ಹಿಡಿದ ಮೊಗದ ಈ ಅ-ಪಾಯಗಳು ಕೂಡ,
ಬಡ ಆರಂಬಗಾರನ ಹೊಟ್ಟೆಪಾಡ
ನೇಗಿಲಿನ ಹಂಬಲ,
ತಲತಲಾಂತರದ ಬೆಂಬಲ.
ಬಟಾಬಯಲ ಈ ಖುಷ್ಕಿ ತುಂಡುಗಳು,
ನಗರ ಒತ್ತರಿಸಿ
ಹಳ್ಳಿ ಆಸುಪಾಸೆಲ್ಲ ತತ್ತರಿಸಿ
ಸೈಜುವಾರಿ ಕತ್ತರಿಸಿ ಹಂಚಿಕೆಗೊಂಡು
-ಈಗ ಸಿಕ್ಕಿದವರ ಸೀರುಂಡೆಗಳು;
ಹಣದಾಹಿಯ ಬುಂಡೆಗಳು.

  • ೩ –

ಕೆಲವು ಸೈಟು,
ಮದುವೆ ಲೇಟಾದ ಕನ್ಯೆಯದೆ ಥೇಟು.
ವಾರಿಗೆಯ ಪ್ರಿಯಂವದೆಯರೆಲ್ಲ ಸಂಸಾರವೊಂದಿಗರಾಗಿ
ಉಪ್ಪರಿಗೆ ಮೇಲುಪ್ಪರಿಗೆಯ ಕರುಳ ತೆನೆಗಳ ತೂಗಿ
ಬೀಗಿದ್ದರೂ, ಇವು ಮಾತ್ರ ಸೊರಗಿ-
ಪ್ರಾಧಿಕಾರದ ಮಲ ತಾಯ
ತಹಬಂದಿಯಲ್ಲಿ ಬಂದಿಗಳಾಗಿ,
ದಫ್ತರಿನ ಅಂಕಿ ಅಂಶದ ಇಂಕಿನ ಚಕ್ಕುಬಂದಿಗಳಾಗಿ,
ಅಲಾಟಾಗದುಳಿದ ನೆಲದಾಕಾರದ ನೋಟುಗಳು.
ಸದ್ಯಕ್ಕೆ ಈ ತೆರೆಮರೆಯ ವಹಿವಾಟುಗಳು
ಕುಲಗೆಟ್ಟ ಓಟುಗಳು;
ಮುಂದೊಮ್ಮೆ ಹಿಗ್ಗಬಹುದು
ವಧು ದಕ್ಷಿಣೆಯ ಮೇರೆ;
ಆ ಮಾತು ಬೇರೆ!

ಸೈಟುಗಳ ಪಾಲಿಗೆ,
ಒಂದನ್ನೇ ತೂಗಿಸಿಕೊಂಡು
ಹೋಗಲಾಗದಸಹಾಯಕತೆಗೆ,
ಅನೇಕರು,
ಏಕಪತ್ನೀವ್ರತಸ್ಥರು,
ಏಕದೇಹ ರತಸ್ಥರು,
ಒಂದೆ ಕೆರೆಯ ಬೆಸ್ತರು.
ಕೆಲವರೋ ದೇಹವಿಡಿ ಧನೇಂದ್ರಿಯರಾದ
ಭೂಲೋಕದಿಂದ್ರರು.
ಅವರಿಗೆ ಹತ್ತಾರು ತ್ತೆವಲಿನೈಲು,
ದುಡ್ಡಸ್ತಿಕೆಯ ದಾಸಯ್ಯತನದ ಡೌಲು.
ಎಂದೇ, ಅಂಥ ಸ್ತ್ರೀಮಂತರು ಬಹುಪತ್ನೀಕ;
ಆಗಬೇಕವರಿಗೆ ಹಲವಾರು ಅನಧಿಕೃತ ನಿಕಾ!

– ೪ –

ನಮ್ಮಂತರಾಳಗಳ ಲೇ‌ಔಟುಗಳಲ್ಲು ಇವೆ
ಖಾಲಿ ಸೈಟುಗಳು;
ಅಲ್ಲಿ ಅಕ್ರಮವಾಗಿ ತಳವೂರಿವೆ;
ಅಟ್ಟಲಾಗದ ಕಠೋರ ನೆನಹುಗಳು
ಗಿಜಿಗುಡುವ ಬಡ ಕುಟೀರಗಳು,
ಹಳೆ ಹತಾಶೆಗಳ ಗಟಾರದಂಚಿನ ನಾರುವ ವಠಾರಗಳು;
ವಿಷಾದದ ಆಗುಹೋಗುಗಳು;
ಮಾ ನಿಷಾದದ ವ್ಯರ್ಥ ಕೂಗುಗಳು.


ಕೀಲಿಕರಣ: ಶ್ರೀನಿವಾಸ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.