ಮರ ನುಂಗುವ ಪಕ್ಷಿ

ರಾಗ — ಕಾಂಬೋದಿ
ತಾಳ — ಅಟ್ಟ

ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರ |
ಕುರುಹ ಪೇಳಿ ಕುಳೀತಿದ್ದ ಜನರು ||ಪ||

ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ |
ಗಂಟಲು ಮೂರುಂಟು ಮೂಗಿಲ್ಲವು ||
ಕುಂಟಮನುಜನಂತೆ ಕುಳಿತಿಹುದು ಮನೆಯೊಳಗೆ |
ಎಂಟುಹತ್ತರ ಅನ್ನವನು ಭಕ್ಷಿಸುವುದು ||೧||

ನುಡಿಯುತಲುಂಬುದು ನಡುನೆತ್ತಿಯಲಿ ಬಾಯಿ |
ಕಡುನಾದದ ಗಾಯನ ಮಾಡುತಿಹುದು ||
ಅಡವಿಯೊಲು ಹುಟ್ಟುವುದು ಅಗಲಿ ಎರಡಾಗುವುದು |
ಬಡತನವು ಬಂದರೆ ಬಹಳ ರಕ್ಷಿಪುದು ||೨||

ಕಂಜವದನೆಯರ ಕರದಿ ನಲಿದಾಡುವುದು |
ಎಂಜಲು ತಿನಿಸುವುದು ಮೂಜಗಕೆ ||
ರಂಜಿಪ ಮಣಿಯ ಸಿಂಹಾಸನದ ಮೇಲಿಪ್ಪ |
ಕುಂಜರವರದಾದಿಕೇಶವ ತಾ ಬಲ್ಲ ||೩||


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.