ಗುಮ್ಮನ ಕರೆಯದಿರೆ ಅಮ್ಮ ನೀನು

ತೋಡಿ-ಚಾಪು

ಗುಮ್ಮನ ಕರೆಯದಿರೆ ಅಮ್ಮ ನೀನು ಪ
ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ

ಹೆಣ್ಣುಗಳಿರುವಲ್ಲಿ ಪೋಗಿ ಅವರ
ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೆನು, ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ ೧

ಬಾವಿಗೆ ಪೋಗೆ ಕಾಣೆ ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಲಿ ಕೂಡುವೆ ೨

ಮಗನ ಮಾತನು ಕೇಳುತ ಗೋಪಿ
ಮುಗುಳು ನಗೆ ನಗುತ
ಜಗದೊಡೆಯ ಶ್ರೀ ಪುರಂದರ ವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.