ದೀಪಧಾರಿ


ಒಂದು…. ಎರಡು… ಮೂರು
ಒಂದೊಂದು ಹೂ ಹಗುರು
ಮಗುವಿಡುವ ಮೊಟ್ಟ ಮೊದಲಿನ ಪುಟ್ಟ ಹೆಜ್ಜೆಗಳನೆಣಿಸಿದನು
ಸೃಷ್ಟಿ ಕರ್ತ !
ದಟ್ಟಡಿಯನಿಡುತಲಿವ ನಡೆಗಲಿತುದೇ ಒಂದು
ಶುಭ ಮುಹೂರ್‍ತ.

ಭೂಮಂಡಲವ ನೆತ್ತಿಯಲ್ಲಿ ಹೊತ್ತು ಮೇಲೆತ್ತುವೊಲು
ಏಳುವನನಾಮತ್ತು
ಜೋಲಿ ಹೊಡೆಯುತ ತಂತಿ ಮೇಲೆ ಓಡುವ ನಡೆವ
ವಿವಿಧ ಕಸರತ್ತು;
ಅದರ ಗತ್ತುಗಳೆಲ್ಲ ಇವನಿಗೂ ಗೊತ್ತು !
ಬಂದು ನೋಡಿರಿ ಒಮ್ಮೆ, ಗರ್ದಿಗಮ್ಮತ್ತು.


ಪದವಿಟ್ಟುದೇ ಭಂಗಿ
ನಡೆದದ್ದೆ ದಾರಿ,
ಕಣ್ಣು ತಪ್ಪಿದರಿವನು ವಿಶ್ವಸಂಚಾರಿ !
ಹಿಡಿದದ್ದೆ ಹಟ
ಇವನು ನುಡಿದದ್ದೆ ವೇದ,
ತಳಕಿತ್ತು ಓಡುವವು ಎಲ್ಲ ವಾಗ್ವಾದ
ಎದ್ದನೊ,-
ತೊತ್ತಳಂದುಳಿವ ಯಜ್ಞದ ಕುದುರೆ !
ಬಿದ್ದನೋ,-
ಇವಗಿಲ್ಲ ಅದರ ಪರಿವೆ,
ಎದ್ದೆದ್ದು ಬಿದ್ದು ಮುನ್ನುಗ್ಗಿ ನಡೆಯುವ ಹಿಗ್ಗು
ಸಾಹಸದ ದಂಡಯಾತ್ರೆ!
ನಡೆಯುತಿದೆ ಈಗಿನಿಂದಲೆ ಮುಂದಿನಾವ ಹೋರಾಟಕ್ಕೊ ಈ ಸಿದ್ಧತೆ!


ಇವನ ಅಧ್ಯಕ್ಷತೆಯ ಒಳಗೆ ಜರುಗಲು ಬೇಕು
ಈ ಮನೆಯ ಪ್ರತಿಯೊಂದು ಕೆಲಸ ಕಾರ್‍ಯ !
ತಪ್ಪಿತೋ,-
ಹಿಂದು ಮುಂದೂ ನೋಡದಿವನು ಊದಿಯೆ ಬಿಡುವ
ಸಮರ ತೂರ್‍ಯ!
ನಮಗಿಲ್ಲ ಇವನೆದುರು ನಿಂತು ನುಡಿಯುವ ಧೈರ್‍ಯ
ಬೆಳಗಿನಿಂದಲು ಸಂಜೆವರೆಗು ಒಂದೇ ಸವನೆ ಉರಿವ ಸೂರ್‍ಯ !
ಆಡಿದರೆ ಆಡಿಯೇ ಆಡುವನು ; ಮನಸುಖರಾಯ
(ನಮೋ ವಿಚ್ಚೇಶ್ವರಾಯ)
ಕಲ್ಲೊ ಮುಳ್ಳೊ -ಇವನು ಒಂದನೂ ಲೆಕ್ಕಿಸನು
ವಜ್ರಕಾಯ !
(ಇತ್ತೀಚೆ ಬೇರೆ ಕಲಿತಿಹನು
ಕಣ್ಣಿನಲಿ ನೀರಿಲ್ಲದೆಯೆ ಆಳುವ ಹೊಸ ಉಪಾಯ)
ಮರುಗಳಿಗೆ- ಶುಭಗಳಿಗೆ- ಏನು ಹೊಳೆವುದೊ ಏನೊ
ಏನಿಳಿವುದೇ ಚಂದ್ರಲೋಕದಿಂದ
ಇಷ್ಟಗಲ ಅರಳುವದು ದುಂಡು ಮಲ್ಲಿಗೆ ನಗೆಯು
ಹೊಮ್ಮಿದೊಲು ಈ ಬಾಳಿನೆಲ್ಲ ಚೆಂದ !


ಎತ್ತಲೋ ಹತ್ತು ದಿಕ್ಕಿಗು ಕೈಯನೆತ್ತುವನು
ಕಾಣದುದ ಕೈಮಾಡಿ ಕರೆಯುತಿಹನು ;
ಇವನ ಕಪ್ಪನೆ ಕಣ್ಣಿಗಿದಿರು ಕುಣಿಯುವ ನವಿಲು
ಯಾವುದೊ ಬೆರಳೆತ್ತಿ ತೋರಿಸುವನು !

ಬಾನ ಮರೆಗಿರುವ ಚಂದ್ರನ ಹುಡುಕಿ ತೆಗೆಯುವನು
ಒಂದೆ ನೋಟಕೆ ಚಿಕ್ಕೆ ಜಾಲಾಡಿಸುವನು;
ಹೂವ ಕಂಡರೆ ಹಿಗ್ಗಿ ಮೂಸುವನು ಈ ರಸಿಕ-
ಬಾನುಲಿಗೆ ತಾನೆ ಹೊಸ ಹಾಡು ಕಲಿಸುವನು !

ಬಿಸಿಲ ಕೋಲನು ಹಿಡಿದು ಮೇಲೇರ ಬಯಸುವನು
ಮಣ್ಣಿನಲಿ ಹೊನ್ನ ಕಣವಾರಿಸುವನು;
ಮೇಲೆ ಹಾರುವ ಹಕ್ಕಿ ಪುಚ್ಚಗಳನೆಣಿಸುವನು
ಮೌನಗಾಳಿಯ ಜಡಿದು ಮಾತಾಡಿಸುವನು !

ಹಗಲು ಸತತೋದ್ಯೋಗಿ ಇರುಳು ಕಿಂದರಿಜೋಗಿ
ನಿದ್ದೆ ಎಲ್ಲೊ ಯಕ್ಷಲೋಕ ಸಂಚಾರಿ
ಇವನೆಳೆಯ ಕಂಗಳಲಿ ಹೊಳೆವ ತಿಂಗಳ ಬೆಳಕು-
ದಿನದ ದಾರಿಯೊಳಮಗೆ ದೀಪಧಾರಿ !
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.