ಫಿಲಂ ಚೇಂಬರ್ಸ್‌ನಲ್ಲಿ ಹುಡುಕಿದರೆಲ್ಲರ ಹೃದಯವನು….

ಇನ್‌ಕಂಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು ದಿಢೀರ್‍ ಹಾಜರಾದರೆ ಎಲ್ಲರ ಹೃದಯ ‘ಡವ ಡವ’ ಎನ್ನುವುದು ನಿಜ. ಆ ‘ಡವ ಡವ’ ಸದ್ದು ಫಸ್ಟ್‌ಗೇರ್‌ನಲ್ಲಿದೆಯೇ, ಸೆಕೆಂಡ್ ಗೇರ್‌ನಲ್ಲಿದೆಯೇ, ಥರ್ಡ್‌ಗೇರ್‌ನಲ್ಲಿದೆಯೇ ತಿಳಿದ ತಕ್ಷಣ ಆ ಇಲಾಖೆಯವರಿಗೆ-ಬ್ಲಾಕಲ್ಲಿ ಎಷ್ಟು ತಗೊಂಡಿದಾರೆ ವೈಟಲ್ಲಿ ಎಷ್ಟು ತಗೊಂಡಿದಾರೆ ಎಂಬುದರ ಸುಳಿವಿನ ಸೂಕ್ಷ್ಮ ತಿಳಿದು ಮುಂದಿನ ಹೆಜ್ಜೆ ಇಡುತ್ತಾರೆ ಎಂಬುದೆಲ್ಲರಿಗೂ ತಿಳಿದ ವಿಷಯ.

ಆ ಕಾರಣಕ್ಕೆ ಈ ಬಾರಿ ಫಿಲಂ ಚೇಂಬರ್ಸ್ ಎಲ್ಲರ ಹೃದಯ ತಪಾಸಣೆಗೆ ತಜ್ಞ ವೈದ್ಯರನ್ನೇ ಕರೆಸುವ ನಿರ್ಧಾರ ಮಾಡಿದರೆಂದು ಕಾಣುತ್ತದೆ.

ಚಿತ್ರರಂಗದವರ ಅಂತರಾಳ ತಿಳಿದಿರಲೆಂದು ವಾರ್ತಾ ಸಚಿವ ಬಿ.ಕೆ.ಸಿ. ಹಾಗೂ ಎಂ.ಎಲ್.ಸಿ. ಆದ ಉಮಾಶ್ರೀ ಅವರನ್ನು ಆಹ್ವಾನಿಸಿದರು. ಟಿಪ್‌ಟಾಪಾಗಿ ಶೃಂಗರಿಸಿಕೊಂಡ ಸರೋಜಾದೇವಿ ಸಹಾ ಹಾಜರಾದರು ಯಾರ್‍ಯಾರ ಹೃದಯದ ಬಡಿತ ಯಾವ ಯಾವ ಹಾಡು ಕನಲುತ್ತಿದೆ ತಿಳಿಯಲು.

ಬಹುಮಂದಿ ಹೃದಯಗಳು “ಚಿತ್ರೋತ್ಸವದೊಳಗೆ ಫಿಲಂ ಚೇಂಬರ್ಸ್ ಚುನಾವಣೆ ನಡೆದು ಹೊಸ ಸಮಿತಿ ಬಂದಿಲ್ಲವೆ” ಎಂದು ಹಪಹಪಿಸುತ್ತಿತ್ತಂತೆ.

“ಯಾರೇ ಕೂಗಾಡಲಿ ಯಾರೇ ಹೋರಾಡಲಿ
ಚಿತ್ರೋತ್ಸವದ ನಂತರವೇ ಛೇಂಬರ್‍ ಚುನಾವಣೆ
ಹೇಳತ್ತೀನಿ ಕೇಳಿ ಇದು ನಮ್ಮಪ್ಪನಾಣೆ”

ಎಂದು ಕೆ.ಸಿ.ಎನ್. ಚಂದ್ರು ಹೃದಯ ರಾಗರಾಗವಾಗಿ ಹಾಡುತ್ತಿತ್ತಂತೆ.

ಕಾರ್ಗಿಲ್‌ಗೆ ‘ಸೈನಿಕ’ ಚಿತ್ರೀಕರಣಕ್ಕೆ ಅರ್ಜೆಂಟಾಗಿ ಹೊರಡಲಿದೆ ನಮ್ಮ ಯೂನಿಟ್. ಅದರಿಂದ ನನ್ ಹೃದಯ ಪರೀಕ್ಷಿಸಿ ಮುಂಚೆ ಎಂದು ಯೋಗೀಶ್ವರ್‍ ಮಲಗಿದಾಗ ಚೆಕ್ ಮಾಡಿದ ಡಾಕ್ಟರ್‍ ಬೆಚ್ಚಿದರಂತೆ “ಅರೆ! ಇದೇನಿದು ಮಹಾಸುಳ್ಳಿ ಸಾಕ್ಷಿ ಶಿವಾನಂದ್‌ನ ಜಪಿಸದೆ ಯೋಗಿಶ್ವರ್‍ ಹೃದಯ ‘ಐಶ್ವರ್ಯರೈ, ಐಶ್ವರ್ಯರೈ’ ಎಂದು ಪ್ರೇಮ ದುಂದುಭಿ ಬಾರಿಸುತ್ತಿದೆಯಲ್ಲ” ಎಂದು. ಆಗ ಬಿಂಕದ ಸಿಂಗಾರಿಯಂತೆ, ಬಂದ ಮೈ ಡೊಂಕಿನ ವೈಯ್ಯಾರಿ ಅನುಪ್ರಭಾಕರ್‍ ಬಂದಳು ಡಾಕ್ಟರ್‍ ಗಾಬರಿಯಾಗಿ ಹುಡುಕುತ್ತಾರೆ ಹೃದಯವೂ ಇಲ್ಲ ಹೃದಯ ಸಿಂಹಾಸವನವೂ ಇಲ್ಲ. ಅವರ ತಾಯಿ ಮುಖ ಸಪ್ಪಗೆ ಮಾಡಿಕೊಂಡು “ಅಲೆಮಾರಿ”ಯಂತೆ ಅಲೆದ ಪ್ರೀತಿಪಾತ್ರ ಮಗಳೆ, ಯಾರಿಗಿತ್ತೆ ಹೃದಯ ನೀನು? ಎಂದು ಕಂಪನಿ ಶೈಲಿಯಲ್ಲಿ ಹಾಡಿದಾಗ, ತಾರೆ ಜಯಂತಿ ಸಿನಿ ಶೈಲಿಯಲ್ಲಿ “ದೂರದಿಂದ ಬಂದಂತ ಸುಂದರಾಂಗ ಪಾಂಡು ಇವರ ಹಾರ್ಟು ನೋಡಿ ಈಗ ತುಂಬಾ ತುಂಬಾ ಸೌಂಡು” ಎಂದು ಹಾಡಿ-ನರ್ತಿಸಿದಾಗ, ಮಳ್ಳಿಯಂತೆ ಬಂದ ಪಾಂಡು ಹೀರೋನಂತೆ ಮಲಗಿದ. ಪರೀಕ್ಷಿಸಿದ ಡಾಕ್ಟರು ಬೆಚ್ಚಿಬಿದ್ದರು. ಏಕೆ? ಏಕೆ? ಎಂದು ಎಲ್ಲ ಕೋರಸ್‌ನಲ್ಲಿ ಅಬ್ಬರಿಸಿದಾಗ “ಎಲ್ಲರಿಗೂ ಒಂದು ಹೃದಯವಿದ್ದರೆ ಈ ಪಾಂಡುವಿಗೆ ಎರಡು ಹೃದಯವಿದೆ” ಎಂದು ಕೂಲಾಗಿ ಉತ್ತರಿಸಿದರು ಡಾಕ್ಟರು. “ಎರಡು ಹೃದಯ ಹೇಗೆ ಸಾಧ್ಯ” ಎಂಬುದು ಸರೋಜಾದೇವಿಯವರ ಪ್ರಶ್ನೆಯಾಗಿತ್ತು. ಚಿತ್ರರಂಗದ ಸೀನಿಯರ್‍ ತಾರೆ ಸರೋಜಾದೇವಿಯವರಿಗೆ ಸಿನಿ ಮುಹೂರ್ತದಲ್ಲಿ ಹೇಳುವಂತೆ ನಿರ್ದೇಶಕರು ಕಥೆ ಸಸ್ಪೆನ್ಸ್ ಎಂದು ಹೇಳುವಂತಿಲ್ಲ. ನಿಜ ಬೊಗಳಬೇಕಾದುದು ಅನಿವಾರ್ಯವಾಯಿತು ಆಗ ವಿಧಿಯಿಲ್ಲದೆ ಡಾಕ್ಟರ್‍ ಹೇಳಿದರು. “ಒಂದು ಪಾಂಡು ಹೃದಯಾ – ಮತ್ತೊಂದು ಅನು ಪ್ರಭಾಕರ್‍ ಹೃದಯ” ಎಂದು.

ತಕ್ಷಣವೇ ಮೈಕ್‌ನಿಂದ “ಮಾಂಗಲ್ಯಂ ತಂತು ನಾನೇನ” ರೆಕಾರ್ಡ್ ಹಾಕಿ ಆ ಕೇಸ್‌ಗೆ ಮಂಗಳ ಹಾಡಿದರು.

‘ಓಳಲ್ಲ ಓಳು – ಷೂರಪ್ಪ ಷೂರು ಹಂಡ್ರೆಡ್ ಡೇಸ್ ಗ್ಯಾರಂಟಿ ಸೂಪರ್‍ ಸ್ಟಾರ್‍ ಷೂರು’ ಎಂದು ವಿಚಿತ್ರ ವೇಷದಲ್ಲಿ ಉಪೇಂದ್ರ ಕುಣಿಯುತ್ತ ಬಂದಾಗ ನಾಗತಿಹಳ್ಳಿ ಚಂದ್ರಶೇಖರ್‍ ಕೋಲೇ ಬಸವನಂತೆ ತಲೆ ಆಡಿಸುತ್ತ ನಿಂತದ್ದನ್ನು ಸಾಹಿತ್ಯಮಿತ್ರರು ತದೇಕಚಿತ್ತದಿಂದ ನೋಡತೊಡಗಿದರು.

ಉಪೇಂದ್ರರ ಹೃದಯವಿರಬೇಕಾದ ಜಾಗದಲ್ಲಿ ‘ಹಂಸಲೇಖಾ’ ಕೂತಿದ್ದದ್ದು ಕಂಡು “ಅರರೆ-ಇದೇನಿದು ಸೂಪರ್‍ ಸ್ಟಾರ್‍ ಮುಹೂರ್ತದಂದು ಕಾಣಲಿಲ್ಲ. ಇಲ್ಲಿ ಕೂತಿದ್ದೀರಿ” ಎಂದು ಗಾಂಧಿನಗರಿಗರು ಒಕ್ಕೊರಲಿನಿಂದ ಅಬ್ಬರಿಸಿದಾಗ ಹಂಸಲೇಖಾ ನಗುತ್ತಾ ತಮ್ಮದೇ ಶೈಲಿಯಲ್ಲಿ ‘ನಾನಿಲ್ಲಿ ಅವಿತಿದ್ದರಿಂದಲೇ ಅಂದು ಈಚೆ ಬರಲಿಲ್ಲ. ಉಪೇಂದ್ರರದು ದಿಢೀರ್‍ ನಿರ್ಧಾಗಳೆಂದು ನನಗೆ ಗೊತ್ತು. ಯಾರನ್ನು ಯಾವಾಗ ಕಿತ್ತು ಬಿಸಾಡುತ್ತಾರೆ ಯಾರನ್ನು ಯಾವಾಗ ಬಾ ಎಂದು ಪ್ರೀತಿಯಿಂದ ಆಹ್ವಾನಿಸುತ್ತಾರೆ ಗೊತ್ತಾಗುವುದಿಲ್ಲ. ಎಲ್ಲಿ ಸಾಧು ಕೋಕಿಲಾ ಬಂದು ಕೂತು ಬಿಡುವರೋ ಎಂದು ಇಲ್ಲಿರುವೆ ಹಹಹಹ…. ಹ್ಯಾಗಿದೆ ನನ್ ಪ್ಲಾನು” ಎಂದು ಗಹಗಹಿಸಿ ನಕ್ಕಾಗ ಎಲ್ಲ ಸುಸ್ತು.

ರೆಹಮಾನ್, ಮಂಜು, ರಾಕ್‌ಲೈನ್, ಜಯಶ್ರೀದೇವಿ, ಕನಕಪುರ ಶ್ರೀನಿವಾಸ್, ಶಿಲ್ಪ ಶ್ರೀನಿವಾಸ್ ಹೃದಯಗಳು ‘ಡವ ಡವ’ ಸದ್ದೇ ಮಾಡುತ್ತಿರಲಿಲ್ಲವಂತೆ. ಕಿವಿಗೊಟ್ಟು ಆಲಿಸಿದರೆ ಎಲ್ಲರ ಹೃದಯಗಳೂ ‘ವಿಷ್ಣು ಕಾಲ್‌ಷೀಟ್ ಪ್ಲೀಸ್’ ಎಂದು ಗೋಗರೆಯುತ್ತಿರುವುದು ಮಾತ್ರ ಕೇಳಿಬರುತ್ತಿತ್ತಂತೆ.

ಡಾಕ್ಟರು ‘ಡೈರಕ್ಟರ್‍ ನಾರಾಯಣ್’ ಎಂದದ್ದೇ ತಡ ‘ಎಸ್’ ಎಂದು ನಾರಾಯಣ್ ಬಂದು ಬಿದ್ದುಕೊಂಡರು. “ಹೊಸ ಹುಡುಗರು ಬಂದ ಮೇಲೆ ಯಾರೂ ಕ್ಯಾರೆ ಅಂತಿಲ್ಲ. ಹೀರೋ ಆಗೋ ಹುಚ್ಚು ಬಿಟ್ಟು ಡೈರಕ್ಟರಾಗೋದೇ ಬೆಸ್ಟ್” ಅಂತ ಅವರ ಹೃದಯ ಹಾಡ್ತಿತ್ತಂತೆ.

ಸೆಟ್ ಮೇಲೆ ಲೇಟಾಗಿ ಬರುವಂತೆ ಚಿತ್ರದುರ್ಗದ ಎಂ.ಪಿ. ಶಶಿಕುಮಾರ್‍ ಹೃದಯ ತಪಾಸಣೆಗೂ ಲೇಟಾಗಿ ಬಂದರು. ‘ಚೆಕ್ ಮೈ ಹಾರ್‍ಟ್ ಪ್ಲೀಸ್’ ಅಂದರು. “ಹಾರ್ಟ್ ಎಲ್ರ್‍ಲೀ ಇದೆ. ಆ ಜಾಗದಲ್ಲಿ ಒಂದು ಗುಂಡುಕಲ್ಲಿದೆ” ಎಂದರು ಡಾಕ್ಟರು ಪರೀಕ್ಷಿಸಿ. “ಹಹಹ” ಎಂದು ಗಹಗಹಿಸಿ ನಕ್ಕ ಶಶಿ “ಹೇಳಿ ಆ ಮಾತನ್ನು ನನ್ನ ಮತದಾರರಿಗೆ ನನ್ನ ಹೃದಯ ನಾನು ಸಿನಿಮಾಗಾಗಿ ಗಾಂಧಿನಗರದಲ್ಲಿ ಬಚ್ಚಿಟ್ಟಿರುವೆ. ಆದರೆ ಗಂಗಾಧರ್‍ ಆಫೀಸಿನಲ್ಲಲ್ಲ ಎಲ್ಲಿ ಎನ್ನುವುದು ‘ಸಸ್ಪನ್ಸ್’ ಎನ್ನುತ್ತಾ “ಅಂಬಿ-ವೇರ್‍ ಆರ್‍ ಯು” ಎಂದು ಫೋನಿಸ ತೊಡಗಿದರು.

“ಸೆನ್ಸಾರ್‍ ಸಮಿತಿ ಸರಿ ಇಲ್ಲ. ವಯಸ್ಸಾದ ಪರಭಾಷಾ ನಟಿಯರನ್ನು ಕರೆತರೋದು ಸರಿ ಅಲ್ಲ. ಪರಭಾಷೆಯಲ್ಲಿ ಮಾರ್ಕೆಟಿಲ್ಲದ ಮುದುಕಿಯರನ್ನು ನಮ್ಮ ಕನ್ನಡದ ಹಿರೋಯಿನ್ನಗಳು ಮಾಡೋರು “ನಾನ್‌ಸೆನ್ಸ್” ಅಂಥವರು ಅಭಿನಯಿಸಿದ ಚಿತ್ರಗಳು ಕನ್ನಡದ ಜನ ಬಾಯ್ಕಾಟ್ ಮಾಡಬೇಕು ಎಂದು ಹೋರಾಟಗಾರರಂತೆ ಭಾಷಣ ಬಿಗಿದು ಬಂದ ರಾಜೇಂದ್ರಸಿಂಗ್ ಬಾಬು ಹೃದಯ ಪರೀಕ್ಷಿಸಿದರೆ ಅಲ್ಲಲ್ಲಿ ಒಂದು ಹಿಂಡು ಕುರಿಮಂದೆ ಕಂಡು ಡಾಕ್ಟರು ಬೆಪ್ಪಾದರೂ…. ‘ಬ್ಯಾ ಬ್ಯಾ’ ಎಂದು ಮಂದೆ ಅಬ್ಬರಿಸುತ್ತಿತ್ತು.

ಡಾಕ್ಟರಿಗೆ ದಿಕ್ಕು ತೋಚಲಿಲ್ಲ. ಇದೇನೋ ಸೈಕಾಲಜಿಕಲ್ ಕೇಸ್ ಇರಬೇಕೆಂದು ಡಾಕ್ಟರ್‍ ವಿಚಾರಿಸಿದರು.

“ಹೃದಯವಿರಬೇಕಾದ ಜಾಗದಲ್ಲಿ ಕುರಿಮಂದೆ ಏಕೆ ಬಿಟ್ಟುಕೊಂಡಿದ್ದೀರಿ” “ಅದು ನಾನು ಎಂ.ಎಸ್. ಸತ್ಯುಗೆ ತೋರುತ್ತಿರುವ ಗೌರವ”. ‘ಕುರಿ’ ನಾಟಕ ಡೈರಕ್ಟ್ ಮಾಡಿದ ಆ ಮಹಾನುಭಾವನ ಕೃಪೆಯಿಂದಲೇ ನಾನು ಈ ಬಾರಿ ಪ್ರಶಸ್ತಿ ವಿಜೇತನಾದದ್ದು. ಅದರಿಂದ ಕುರಿಗಳು ಸಾರ್‍-ಕುರಿಗಳು ಭಾಗ ಎರಡು ಚಿತ್ರೀಕರಿಸುವೆ. ಆಗ ಕುರಿಮಂದೆ ಆಚೆ ಹೋಗುತ್ತದೆ. ಅನಂತರ ಹೃದಯ ತನ್ನ ಜಾಗಕ್ಕೆ ಬರುತ್ತದೆ. ಆವರೆಗೆ ಹೃದಯಹೀನ “ನಾನು” ಎಂದು ದೀನರಾಗಿ ಹೇಳಿ ಇನ್ನೊಂದು ಲೇಖನ ಬರೀಬೇಕು ರೀಮೇಕ್ ಮಾಡುವವರನ್ನು ಝಾಡಿಸಿ ಎಂದು “ವಾಕಿಂಗ್ ಇನ್ ದಿ ಕ್ಲೌಡ್ಸ್” ಎಂಬಂತೆ ಕುರಿಗಳು ಸಾರ್‍ ಕುರಿಗಳು ಕಥೆ ನೀಡಿದ ತಮಿಳಿಗನನ್ನು ಹುಡುಕಿ ಹೊರಟೇಬಿಟ್ಟರು ರಾಜೇಂದ್ರಸಿಂಗ್ ಬಾಬು.

ರವಿಚಂದ್ರನ್ ನಿಮ್ಮ ಸರದಿ ಈಗ ಎಂದಾಗ “ನೀವೇನ್ರೀ ನನ್ನ ಹೃದಯ ಚೆಕ್ ಮಾಡೋದು. ನಾನು ರಾಜಕಪೂರ್‍ ಥರಾ. ಮೇರಾ ನಾಮ್ ಜೋಕರ್‍ ನೋಡಿದೀರಲ್ಲಾ ಹಾಗೆ. ನನ್ನ ಹೃದಯ ಕಿತ್ತು ‘ಹೃದಯದಿಂದ’ ಅಂತ ನಮ್ಮಪ್ಪನ ಹೆಸರಲ್ಲಿ ಸ್ಟುಡಿಯೋ ಮಾಡಿದೆ. ಆ ಸ್ಟುಡಿಯೋ ಹೃದಯ ಚೆಕ್ ಮಾಡಕ್ಕೆ ನೀವು ಯಾರಾದ್ರೂ ಬಂದ್ರಾ?…. ಇಲ್ಲ…. ಅಂದ್ಮೇಲೆ ನಾನ್ಯಾಕೆ ಬರ್‍ಲಿ. ನಂಗೀಗ ಹೃದಯ ಇಲ್ಲ. ಆ ಜಾಗದಲ್ಲೊಂದು ಸಿಂಹಾಸನ ಇಟ್ಕೊಂಡಿದೀನಿ. ರವೀನಾಗೆ, ಜೂಲಿ ಚಾವ್ಲಾಗೆ, ನಗ್ಮಾಗೆ ‘ಶಕುನಿ’ಗೆ ಪಾರ್ಟ್ ಮಾಡಕ್ಕೆ ಚಾನ್ಸ್ ಕೊಟ್ಟು ಇಷ್ಟಿಷ್ಟು ದಿನ ನೀವು ಇಲ್ಲಿ ಕೂತಿರಿ ಆಮೇಲೆ ಎದ್ದು ಹೋಗ್ತಿರಿ ಅಂತ ಹೇಳಿದ್ದೀನಿ. ಯಾವಾಗ್ಯಾವಾಗ ಯಾವ್ಯಾವ ಟಾಪ್ ಹೀರೋಯಿನ್‌ಗಳನ್ನ ಕರಸಬೇಕು ನಂಗೊತ್ತು ಒಳಗೊಂದು ಹೊರಗೊಂದು ನನ್ ಹತ್ರ ಇಲ್ಲವೇ ಇಲ್ಲ. ನನ್ನ ಮಾತೇ ಹಾಗೆ “ಏಕ್ ಮಾರ್‍ ದೋ ತುಕಡಾ” ಎಂದು ಹೇಳಿ “ಹೊಸ ಟ್ಯೂನ್ ಹೊಳೀತಾ ಇದೆ. ಹೊಸ ಸಾಹಿತ್ಯದ ಸಾಲುಗಳು ಈಚೆ ಬರಕ್ಕೆ ಒದ್ದಾಡ್ತಿದೆ. ಇನ್ನು ಇಲ್ಲಿದ್ರೆ ಟೈಮ್ ವೇಸ್ಟ್” ಎಂದು ಹೊರಟೇಬಿಟ್ಟರು ರವಿ.

ಸರೋಜಾದೇವಿಯ ಸರದಿ ಬಂತು. ಡಾಕ್ಟರು ಪರೀಕ್ಷಿಸಿದರು. ಚಿತ್ರೋತ್ಸವದ ಉದ್ಘಾಟನೆಗೆ ಕರೆದಿದ್ದಾರೆ. ಅವರು ನಕಾರ ಹೇಳಿದರೆ ಚಿತ್ರೋತ್ಸವದ ಉದ್ಘಾಟನೆಗೆ ‘ನಾನು ಸಿದ್ಧ ನಾನು ಸಿದ್ಧ, ಎಂದು ಪಿಸುಗುಟ್ಟುತ್ತಿತ್ತಂತೆ ಅದು ಯಾರಿಗೂ ಸ್ಪಷ್ಟವಾಗಿ ಕೇಳುತ್ತಿರಲಿಲ್ಲವಾಗಿ ‘ಮೈಕ್’ ತಂದು ಹೃದಯಕ್ಕೆ ಇಟ್ಟರು. ಆಗ ಮಾತುಗಳು ಸ್ಪಷ್ಟವಾದುವು. ನಟೀಮಣಿ ಬಿ.ಕೆ.ಸಿ. ಅವರತ್ತ ನೋಡಿದಾಗ ‘ಅರ್ಥವಾಯಿತು ಧರ್ಮ ಸೂಕ್ಷ್ಮ’ ಎಂಬಂತೆ ನಕ್ಕರು ಬಿ.ಕೆ.ಸಿ.

ಉಮಾಶ್ರೀ ಸರದಿ ಬಂದಾಗ ಅವರ ಹೃದಯ ‘ಥ್ಯಾಂಕ್ಸ್ ಥ್ಯಾಂಕ್ಸ್ ಥ್ಯಾಂಕ್ಸ್’ ಎನ್ನುತ್ತಿತ್ತು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ.

ಕಲಾವಿದರ ಸಂಘದ ಸದಸ್ಯರನೇಕರು ಬಂದರು. ಅವರೆಲ್ಲರ ಹೃದಯಗಳು ‘ಛಾನ್ಸ್-ಛಾನ್ಸ್-ಛಾನ್ಸ್’ ಎಂದು ಹೊಡೆದುಕೊಳ್ಳುತ್ತಿತ್ತು.

ಡಾಕ್ಟರು ಕತ್ತೆತ್ತಿದರು….. ಇನ್ನೂ ಒಂದು ಹಿಂಡು ಜನರಿದ್ದರು. ಎಲ್ಲ ಚಿತ್ರಮಂದಿರದ ಮಾಲೀಕರು. ಒಬ್ಬರಿಗಿಂತ ಒಬ್ಬರು ಶ್ರೀಮಂತರು ಎಂಬುದು ನೋಡಿದರೆ ಗೊತ್ತಾಗುತ್ತಿತ್ತು. ಎಲ್ಲರನ್ನು ಪರೀಕ್ಷಿಸಿದರು. ಗಂಭೀರವಾಗಿ ಕತ್ತೆತ್ತಿ “ಓಹೋ! ನೀವೆಲ್ಲ ಈ ವೃತ್ತಿಗಿಳಿದಾಗಲೇ ಹೃದಯ ಲಾಕರ್‍ ನಲ್ಲಿಟ್ಟಿದೀರಿ. ಅದರಿಂದಲೇ ಇಷ್ಟು ಶ್ರೀಮಂತರಾಗಿದೀರಿ” ಎಂದು ಹೇಳಿ ದುಡು ದುಡು ಹೊರಟೇಬಿಟ್ಟರು ಡಾಕ್ಟರು. ಆಗ ವಾರ್ತಾ ಸಚಿವರು ವ್ಯಂಗ್ಯ ನಗೆ ತೇಲಿಬಿಟ್ಟು ನಿಧಾನವಾಗಿ ಆಚೆ ತೆರಳಿದರು.
*****
(೧೩-೭-೨೦೦೧)