ಕನ್ನಡ ಚಿತ್ರರಂಗದಲ್ಲಿ ‘ಎಲ್ಲಿ ಹೋದವು ಆ ದಿನ’

ಕನ್ನಡ ಚಿತ್ರರಂಗ ಇಂದು ಕೋಟಿ ಕೋಟಿ ವೆಚ್ಚಿಸುವ ದಿನ ತಲುಪಿದೆ. ಕಾಲ ಬದಲಾದಂತೆ ಅಭಿರುಚಿಗಳೂ ಬದಲಾಗಿ ಹಿಂಸೆ, ಕ್ರೌರ್ಯ, ಅಶ್ಲೀಲತೆ, ರೇಪ್‌ಗಳನ್ನು ವಿಜೃಂಭಿಸುವ ಸತತ ಪ್ರಯತ್ನಗಳಾಗುತ್ತಿವೆ. ಟಿ.ವಿ. ಚಾನೆಲ್‌ಗಳ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿಯ ಬೇರುಗಳು ಅಲ್ಲಾಡ ತೊಡಗಿವೆ. ಚಲನಚಿತ್ರ ಮಾಧ್ಯಮಕ್ಕೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂಬುದನ್ನು ಮರೆತು ತಾಂತ್ರಿಕ ಪ್ರಗತಿಯನ್ನು ಮೂಢನಂಬಿಕೆಗಳನ್ನು ಬಿತ್ತಲು ಬಳಸಿಕೊಳ್ಳಲಾಗುತ್ತಿದೆ.

ಇಂಥ ವೇಳೆ ಕಣಗಾಲ್ ಪುಟ್ಟಣ್ಣ ಹಾಗೂ ಎನ್. ಲಕ್ಷ್ಮೀನಾರಾಯಣ್ ಅಂಥವರು ನೆನಪಾಗುತ್ತಾರೆ. ಈ ಇಬ್ಬರಿಗೂ ಕನ್ನಡ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಅಪಾರ ಒಲವಿತ್ತು. ಕಥೆ, ಕಾದಂಬರಿಗಳನ್ನು ಅವರು ಚಿತ್ರ ಮಾಡುವ ಮನ ಮಾಡಿದಾಗ ಸಾರಸ್ವತ ಲೋಕದ ಮಂದಿಯೊಂದಿಗೆ ಚರ್ಚೆ, ವಾಗ್ವಾದ, ಸಂವಾದ ನಡೆಸಿ ಚಿತ್ರಕಥೆಗೊಂದು ರೂಪ ಕೊಡುತ್ತಿದ್ದರು ಅವರು. ಪರಭಾಷಾ ನಟ-ನಟಿಯರಿಗೆ ನಿರ್ದೇಶಕರಿಗೆ ಕಣಗಾಲರು ಮಾದರಿ ಎನ್ನುವಂತಹ ದಿನಗಳು ಅವು.

ಕು.ರಾ.ಸೀ., ಕಣಗಾಲ್ ಪ್ರಭಾಕರಶಾಸ್ತ್ರಿ, ವಿಜಯ ನಾರಸಿಂಹ, ಉದಯಶಂಕರ್‍ ಮುಂತಾದವರು ಚಿತ್ರಗೀತೆಗಳನ್ನು ಬರೆಯತೊಡಗಿದಾಗ ಆ ಸಾಲುಗಳಲ್ಲಿ ಲಿರಿಕಲ್ ಕ್ವಾಲಿಟೀಸ್ ಕಾಣಬಹುದಿತ್ತು. ಆದರೀಗ ಕನ್ನಡದ ಅ-ಆ-ಇ-ಈ ಓದಲೂ ಬಾರದ ಮಂದಿ ಸಾಹಿತ್ಯದ ರಚನೆಗಿಳಿಯುವ ದಿನ ಬಂದಿದೆ. ಹಾಕಿದ್ದೇ ಮಟ್ಟು-ಹಾಡಿದ್ದೇ ರಾಗ ಎಂದಾದ ಮೇಲಂತೂ ಪ್ರಾಸದ ಸಲುವಾಗಿ ಎಲ್ಲ ಭಾಷೆಗಳ ಸಾಲುಗಳನ್ನು ಹಾಡುಗಳಿಗೆ ಅಟಕಾಯಿಸಿ ಆಗ ಕೇಳಿ ಅಲ್ಲೇ ಮರೆಯಬಹುದಾದಂಥ ಗೀತೆಗಳನ್ನು ಹೇರಲಾಗುತ್ತಿದೆ. ಕನ್ನಡ ಚಿತ್ರರಂಗದ ಉದ್ಧಾರದ ಹೆಸರಿನಲ್ಲಿ ಕನ್ನಡದ ಕಗ್ಗೊಲೆ ನಡೆಯುತ್ತಿದೆ.

ಕಣಗಾಲರ ‘ಗೆಜ್ಜೆಪೂಜೆ’ ಎಂ.ಕೆ. ಇಂದಿರಾ ಅವರ ಕೃತಿಯಾಧಾರಿತ ಚಿತ್ರ. ಅಂಥ ವಸ್ತು ಈಗಿನ ನಿರ್ದೇಶಕರ ತೆಕ್ಕೆಗೆ ಬಂದಲ್ಲಿ ಅದೊಂದು ಸೆಕ್ಸ್ ಚಿತ್ರವಾಗುವುದರಲ್ಲಿ ಅನುಮಾನವೇ ಇಲ್ಲ. ಸೂಕ್ಷಜ್ಞತೆ, ನವಿರು ಭಾವನೆಗಳಿಗೆ ಕಣಗಾಲ್, ಎನ್ನೆಲ್ ಮುಂತಾದವರು ಹೆಚ್ಚು ಮಹತ್ವವಿತ್ತರು ಗೀತಪ್ರಿಯ, ಎಂ.ಆರ್‍.ವಿಠಲ್, ಆರ್‍. ನಾಗೇಂದ್ರರಾವ್, ಸಿದ್ದಲಿಂಗಯ್ಯ ಮುಂತಾದವರು. ಅಂಥ ಟ್ರೆಂಡ್ ಮುಂದುವರೆಸಿ ಚಿತ್ರದ ಮೂಲಕ ಜನಜಾಗೃತಿಗೂ ನೆರವಾಗುತ್ತಿದ್ದರು. ಈಗ ಎಲ್ಲಿ ನೋಡಿದರೂ ಅಂಥ ಭಾವನೆಗಳಿಗೆ ಎಳ್ಳುನೀರು ಬಿಟ್ಟವರೇ ಕಾಣುತ್ತಿದ್ದಾರೆ. ಎಲ್ಲೋ ಅಲ್ಲೊಬ್ಬ-ಇಲ್ಲೊಬ್ಬ ಸುನಿಲ್‌ಕುಮಾರ್‍ ದೇಸಾಯಿಯಂಥವರನ್ನು ಕಾಣಬಹುದಷ್ಟೆ.

ಕೊಂಚ ಕಾಮಿಡಿ ಸೆನ್ಸ್ ಇರುವ ಎಸ್. ನಾರಾಯಣ್ ಅಂಥ ನಿರ್ದೇಶಕರು ಹಣ ಬಾಚಿಕೊಳ್ಳುವುದೇ ಗುರಿಯಾದಾಗ ರೀಮೇಕ್ ರಾಜನೆಂದು ಹೆಸರಾಗ ಹೊರಟರು. ಒಂದೆರಡು ಚಿತ್ರಗಳಲ್ಲಿ ಜನ ತಮ್ಮ ಡೈಲಾಗ್‌ಗೆ ಚಪ್ಪಾಳೆ ತಟ್ಟಿ-ಶಿಳ್ಳೆ ಹಾಕಿದಾಗ ನಾಯಕನಾಗ ಹೊರಟು ಬಿಡುವು ಸಿಕ್ಕಾಗ ಮೆಗಾ ಟೀವಿ ಧಾರಾವಾಹಿ ಮಾಡುವೆ ಎನ್ನುತ್ತ-ಟೆಲಿಫೋನ್ ಮೂಲಕ ಡೈಲಾಗ್ ಡಿಕ್ಟೇಟ್ ಮಾಡುತ್ತ ತಮ್ಮ ಜವಾಬ್ದಾರಿ ಮರೆತರು. ಕೋಡ್ಲು ರಾಮಕೃಷ್ಣರೂ ರೀಮೇಕ್‌ಗೆ ಅಡಿಕ್ಟಾಗಿ ತನ್ನತನ ಸಂಪೂರ್ಣ ಕೈಬಿಟ್ಟರು.

ನಾಗಾಭರಣರಿಗೆ ಒಳ್ಳೆ ಕಾನ್‌ಸೆಪ್ಟ್‌ಗಳ ಸಲುವಾಗಿ ಲೇಖಕರ ಬಳಗ ಬೇಕು. ಅಂತಿಮವಾಗಿ ಅದೊಂದು ರೂಪು ಪಡೆಯುತ್ತ ಹೋದಾಗ ‘ಯಾರು ಬೇಕಿಲ್ಲ’ ಎಂಬಂತಾಗಿ ಕೂತಿರುವುದು ಒಂದು ದುರ್ದೈವ. ಇಂಥ ವೇಳೆ ಯಾವ ಗುಂಪಿಗೂ ಸೇರದೆ ತಮ್ಮದೇ ಧಾಟಿಯಲ್ಲಿ ಚಿಂತಿಸುವ ಗಿರೀಶ್ ಕಾಸರವಳ್ಳಿ ಒಂದು ದ್ವೀಪವಾಗಿ ಹೋಗಿದ್ದಾರೆ. ಒಂದು ರೀತಿ ಹಾಗಾಗಿರುವುದೇ ಒಳಿತೇನೋ ಅನಿಸುತ್ತದೆ. ತಮ್ಮ ಮನಸ್ಸಿಗೊಪ್ಪುವ ವಿಭಿನ್ನ ಕಥಾನಕವನ್ನಾಯ್ದು – ಸೃಜನಶೀಲತೆಗೆ ಹೆಚ್ಚು ಒತ್ತು ನೀಡುವ ಅವರ ಪ್ರಯತ್ನದಲ್ಲಿ ‘ಹೋಮ ವರ್ಕ್’ಗೆ ಹೆಚ್ಚು ಪ್ರಾಧಾನ್ಯ ಇದೆ. ಹಣ ಹಾಕುವವರೊಬ್ಬರು ಸಿಕ್ಕಿದರೆಂದು ‘ದಿಢೀರ್‍’ ಚಿತ್ರ ನಿರ್ಮಾಣಕ್ಕೆಂದೂ ಅವರು ಇಳಿಯುವುದಿಲ್ಲ. ಪಾತ್ರಗಳ ಆಯ್ಕೆಗೆ ಅವರು ಹೆಚ್ಚು ಗಮನ ನೀಡುವುದರಿಂದಾಗಿ ಹೊಸ ಪ್ರತಿಭೆಗಳು ಬೆಳಕಿಗೆ ಬರುವುದು ಸಾಧ್ಯ.

ಎಂ.ಎಸ್. ರಾಜಶೇಖರ್‌ಗೆ ಸದಭಿರುಚಿಯ ಚಿತ್ರ ತೆರೆಗೀಯುವ ಹಂಬಲವಿದೆ. ಅಂಥ ಪ್ರಯತ್ನಗಳನ್ನೂ ಅವರು ಮಾಡಿದ್ದಾರೆ. ಆದರೆ ರೀಮೇಕ್ ಪ್ರವಾಹ ಎದುರಾದಾಗ ತನ್ನ ಕಾಲಮೇಲೆ ತಾನು ನಿಂತು ಎದುರು ಈಜು ಹೊಡೆಯಲು ಹಿಂತೆಗೆದು ಪ್ರವಾಹದೊಂದಿಗೆ ಈಜ ತೊಡಗಿದ್ದಾರೆ.

ಹಿಂದೆ ಕಾರ್ನಾಡ್, ಕಾರಂತ್, ಎಂ.ಎಸ್. ಸತ್ಯು, ಜಿ.ವಿ. ಅಯ್ಯರ್‍, ವಿ.ಆರ್‍.ಕೆ. ಪ್ರಸಾದ್, ಕಂಬಾರ, ಲಂಕೇಶ್, ಪಟ್ಟಾಭಿರಾಮ ರೆಡ್ಡಿ ಮುಂತಾದವರು ಚಿತ್ರ ತೆಗೆಯುತ್ತಾರೆ ಎಂದರೆ ಅದರಲ್ಲಿ ಭಾಗವಹಿಸುವ ಆಕಾಂಕ್ಷೆ ಕಲಾವಿದರಲ್ಲಿ ಅತಿಯಾಗಿರುತ್ತಿತ್ತು. ಅದೇ ರೀತಿ, ಕಣಗಾಲ್, ಎನ್ನೆಲ್ ಅವರ ಚಿತ್ರಗಳಲ್ಲಿ ಭಾಗವಹಿಸಲು ಕಲಾವಿದರು ಮುಂದಾಗುತ್ತಿದ್ದರು. ‘ಕಾಡು’ ಚಿತ್ರದಲ್ಲಿ ಭಾಗವಹಿಸಬೇಕೆಂದು ಕಾರ್ನಾಡ್ ನನ್ನನ್ನೊಮ್ಮೆ ಕೇಳಿದರು. ಆಗ ನಾನು ಆಕಾಶವಾಣಿ ಕಲಾವಿದನಾಗಿದ್ದೆ. ಆಕಾಶವಾಣಿ ನಿರ್ದೇಶಕರ ಅನುಮತಿ ಬೇಕೆಂದಾಗ ಕಾರ್ನಾಡರೇ ಬಂದು ಪರವಾನಿಗೆ ಪಡೆದರು. ಅಲ್ಲಿ ಹಣ ಮುಖ್ಯವಾಗಿರಲಿಲ್ಲ. ಆ ಬ್ಯಾನರ್‌ನಲ್ಲಿ ಅಭಿನಯಿಸುವುದೊಂದು ಹೆಮ್ಮೆ ಎನಿಸಿತ್ತು ನನಗೂ. ಅದೇ ವೇಳೆ ‘ಎನ್ನೆಲ್’ ತಮ್ಮ ಚಿತ್ರದಲ್ಲೂ ಒಂದು ಪಾತ್ರವಿದೆ ಎಂದರು. ಎರಡೂ ಕ್ಲ್ಯಾಶ್ ಆದುದರಿಂದ ನಾನು ಎನ್ನೆಲ್ ಚಿತ್ರದಲ್ಲಿ ಮಾಡಲಾಗಿಲಿಲ್ಲ. ಆದರೂ ಅವರು ಇರುವವರೆಗೆ ನಮ್ಮೆಲ್ಲ ಕಾರ್‍ಯಕ್ರಮಕ್ಕೆ ಬರುತ್ತಿದ್ದರು. ಪ್ರೀತಿ, ವಿಶ್ವಾಶ ಉಳಿಸಿಕೊಂಡರು. ಕಣಗಾಲರು, ವೀರಾಸ್ವಾಮಿ ಮುಂತಾದವರು ತೋರಿದ ಪ್ರೀತಿ ನಾನು ಇಂದಿಗೂ ಮರೆಯಲಾರೆ. ಬಂಗಾರದ ಮನುಷ್ಯ ಶತದಿನೋತ್ಸವವಾದಾಗ ಆಕಾಶವಾಣಿ ಈರಣ್ಣನಾನೇ ಮಾತನಾಡಬೇಕೆಂಬ ಪ್ರೀತಿ ತೋರಿದರು ಕೆ.ಸಿ.ಎನ್. ಗೌಡರು. ಅದೇ ಪ್ರೀತಿ ತೋರಿದವರು ಎನ್. ವೀರಾಸ್ವಾಮಿ. ನಾನೊಬ್ಬ ನರೇಟರ್‍ ಆಗಿ ರೂಪುಗೊಂಡದ್ದೇ ಅವರ ಪ್ರೀತಿಯಿಂದ.

ಈಗ ಪ್ರೀತಿಯ ಸರೋವರ ಬಗ್ಗಡವಾಗಿದೆ. ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಫಿಲಂ ಚೇಂಬರ್ಸ್ ಎಲ್ಲೆಡೆ ಹಮ್ಮು-ಬಿಮ್ಮುಗಳು ಅತಿಯಾಗಿ ‘ಅಹಂ’ – ಎಗೋ ಎಲ್ಲರನ್ನೂ ಕಾಡುತ್ತಿದೆ. ಪ್ರಜಾಪ್ರಭುತ್ವ ಮಾಯವಾಗಿ ಡಿಕ್ಟೇಟರ್‌ಷಿಪ್ ತಲೆ ಎತ್ತುತ್ತಿದೆ.

ಈಗ ಚಿತ್ರರಂಗದ ಉದ್ಧಾರ ಯಾರಿಗೂ ಬೇಕಿಲ್ಲ.

‘ನಾನುದ್ಧಾರವಾದರೆ ಸಾಕು’ ಎಂಬಂಶವೇ ಪ್ರಧಾನವಾಗಿ ಒಬ್ಬರನ್ನೊಬ್ಬರು ತುಳಿಯುವ ನಯವಂಚಕತನ ಎಲ್ಲೆಲ್ಲೂ ತಲೆಯೆತ್ತಿದೆ. ಪರಭಾಷಾ ನಟೀಮಣಿಯರಿಗೆ ಮೊದಲ ಮನ್ನಣೆ ನೀಡುವ ನಿರ್ಮಾಪಕ-ನಿರ್ದೇಶಕರು ಅತಿಯಾಗಿದ್ದಾರೆ. ಕಣಗಾಲರಂತೆ ನಮ್ಮಲ್ಲಿಯೂ ಪ್ರತಿಭೆಗಳನ್ನು ಕೆತ್ತಿ ಸುಂದರ ಶಿಲ್ಪಿ ಕಡೆಯಬಲ್ಲ ನಿರ್ದೇಶಕರ ಅಭಾವ ಅತಿಯಾಗಿದೆ.

ಹಣವೊಂದೇ ಪ್ರಧಾನ ಎಂಬ ದಿನ ಹೋಗಿ – ಒಳ್ಳೆ ಚಿತ್ರ ಮಾಡಬಯಸುವವರನ್ನು ದುರ್ಬೀನು ಹಾಕಿ ಹುಡುಕಬೇಕಿದೆ.

ಮುಂಚಿನ ಪಾರ್ಟಿಗಳಿಗೂ ಈಗಿನ ಪಾರ್ಟಿಗಳಿಗೂ ಸಂಬಂಧವೇ ಇಲ್ಲ. ಈಗೆಲ್ಲಾ ಮೆಕಾನಿಕಲ್, ಮೆಚ್ಚಿದರೆ ಸಂತೋಷ. ಇಲ್ಲವಾದಲ್ಲಿ ‘ದಂಡಂ ದಶಗುಣಂ ಭವೇತ್’ ಎನ್ನುವಂಥ ದಿನ. ಇಂಥ ಸಂದರ್ಭ ಕುರಿತು ಚಿಂತಿಸುವಾಗ ‘ಎಲ್ಲಿ ಹೋದವು ಈ ದಿನ’ ಎನಿಸುತ್ತದೆ. ಮತ್ತೆ ಅಂಥ ದಿನ ಬಂದೀತೆ….?
*****
(೧೭-೮-೨೦೦೧)