ಪ್ರಕೃತಿಯ ಮಡಿಲಲ್ಲಿ

“Earth has not anything to show more fair!”

– Wordsworth
(ಕರ್ನಾಟಕ ಕಾಲೇಜಿನ ಅಟ್ಟದಿಂದ ಕಾಣುವ ನಾಲ್ಕೂ ಹೊತ್ತಿನ ನೋಟ)

ಮೂಡಣದ ಬಾನಿನಲಿ
ಮುಗಿಲು ನೆಲ ಮಿಲನದಲ
ಕ್ಷಿತಿಜ ಕಂಕಣದಲ್ಲಿ
ಉಷೆಯ ನಸುನಗೆಯಂತೆ
ಬಣ್ಣ ಬಣ್ಣದ ಸಂತೆ
ಬಾಂದಳವ ಸಿಂಗರಿಸಿ
ಬಗೆಯಲ್ಲಿ ಬಿತ್ತರಿಸಿ
ಚೆಲುವು ಮೈದೋರುತಿರೆ
ಎದೆ ಹಿಗ್ಗಿ ತರೆಯುತಿರೆ
ದುಂಡಾಗಿ ಚೆಂಡಾಗಿ
ಕುಂಕುಮಾಂಕಿತನಾಗಿ
ಸುಕುಮಾರ ಸುಂದರನು
ಮೂಡಿದನದೊ!

ಗಿಡಮರದ ಸಂದಿಯಲಿ
ಹಸುರಿಡಿದ ತೋಪಿನಲಿ
ಹೊಂಗಿರಣ ನುಗ್ಗಿ ಬರೆ
ಸುಳಿಗಾಳಿ ತೇಲಿಸಿರೆ,
ಹುಲ್ಲಿನಸಳುಗಳಲ್ಲಿ
ಮಂಜುಹನಿ ಮುತ್ತಿನಲಿ
ಕೆತ್ತನೆಯ ನಿರ್‍ಮಿಸಿರೆ,
“ಕುಹೂ ಕುಹೂ ಹಾ ಹೂ
ಚಿಂವ್ ಚುಕ್ ಚುಕ್ ಟಿವೂ”
ನೂರಾರು ಹಕ್ಕಿಗಳ
ಸ್ವಚ್ಛಂದ ರಾಗಗಳ
ತಾಳ ಹಿಮ್ಮೇಳದಲಿ,
ಬಂಚರದ ಇಂಚರದ
ಗಾನ ಮಧುಪಾನದಲಿ
ವಿದ್ಯಾಲಯದ ಬಯಲು
ತುಂಬಿ ತುಳುಕಾಡಿರಲು
ಕಿವಿದೆರೆದು ಮೌನದಲಿ
ಆಲಿಸಿಲ್ಲಿ!

ಬಳ್ಳಿಗಳ ಗೊಂಚಲಲಿ
ದಾಂಗುಡಿಯ ಜೋಕಾಲಿ,
ಹುಲುಗಲದ ಟೊಂಗೆಯಲಿ
ಕೊನರಿರುವ ಹೊಂಗೆಯಲಿ
ಚಂದಳಿರ ಮಾವಿನಲಿ
ಚಿಗುರೊಡದ ಹುಣಿಸೆಯಲಿ
ರಾಜಿಸಿರೆ ಹೂಜಲ್ಲಿ
ಸೂಸಿರುವ ನೆಲದಲ್ಲಿ
ತುಂಬಿಗಳ ಝೇಂಕಾರ-
ಬನದೆದೆಯ ಓಂಕಾರ!
ಹಾರುತಿದೆ ಮಮಕಾರ
ಸೌಂದರ್‍ಯ ಸಾಕಾರ-
ಗೊಂಡು ಕಂಗೊಳಿಸಿಹುದು
ಕಂಡು ಕಂಗಳ ಬರವು
ಹಿಂಗುತಿಹುದು!

ಇದರಾಚೆ ನೋಡಲ್ಲಿ!
ಹೆಬ್ಬಾವಿನಂದದಲಿ
ಹಬ್ಬಿರುವ ನಗರದಲಿ
ಪೊಗೆದಳೆದ ಮಬ್ಬಿನಲಿ
ನಿದ್ದೆಯಲಿ ಮುಸುಕಿನಲಿ
ಇಂತಿರುವ ನಸುಕಿನಲಿ
ನೀರವದ ಬೀದಿಯಲಿ
ನಿಚ್ಚಳದ ಹಾದಿಯಲಿ,
ಒಂದರೆಡು ಮೂರಾಗಿ
ಹತ್ತಾಗಿ ಹಲವಾಗಿ
ಜನವೆದ್ದು ನಡೆದಿಹುದು,
ವಾಹನವು ಓಡಿಹುದು;
ಎದ್ದಿರುವ ಧೂಳಿಯಲಿ
ಗದ್ದಲದ ಹೋಳಿಯಲಿ
ಶಾಂತಿ ಕಾಲ್ದೆಗೆಯುತಿದೆ
ನೆಮ್ಮದಿಯು ಕದಡುತಿದೆ
ನಿತ್ಯ ವ್ಯವಹಾರದಲಿ
ನಗರದಲ್ಲಿ.

ಹೊತ್ತು ನಡುನೆತ್ತಿಯಲಿ
ಕೆಂಡವನು ಕಾರುತಿರೆ
ನಿಟ್ಟುಸಿರು ಜಾರುತಿರೆ
ಮೈಬೆವರು ಹನಿಯುತಿರೆ,
ನೀಲಗಣಿ ಬಾನಿನಲಿ
ಗಾಜು ಕೊಪ್ಪರಿಗೆಯಲಿ
ತುಂಡು ಮೋಡದ ದಂಡು
ಉಂಡಾಡಿಗರ ಹಿಂಡು
ಅತ್ತಿತ್ತ ಸರಿದಾಡೆ
ತಿಳ್ಳಿಯಾಟವನಾಡೆ,-
ಮೇಣಿಲ್ಲಿ ತಿರೆಯಲ್ಲಿ
ಬಿತ್ತರದ ಬಯಲಿನಲಿ
ಬಿಸಿಲುಗುದುರೆಯನೇರಿ
ಕಣ್ಣಿಟ್ಟಿ ಹೌಹಾರಿ
ಹಗಲು ದಿಗಿಲಾಗಿಹುದು!
ಗಾಳಿ ಮಾತಾಡಿಸದೆ
ಎಲೆಯನಲುಗಾಡಿಸದೆ
ಮರದ ತಣ್ಣೆಳಲಲ್ಲಿ
ನಿರ್‍ವಿಣ್ಣ ಮೌನದಲಿ
ವಿಶ್ರಾಂತಿ ಪಡೆಯುತ್ತಿದೆ
ಸದ್ದಿಲ್ಲದೆ!

ದೂರ ಕಾನನದಲ್ಲಿ
ಏಳೆ ಸುಂಟರಗಾಳಿ
ಮುಗಿಲುದ್ದ ಕೆಂಧೂಳಿ-
ಯಲ್ಲಿ ತರಗೆಲೆ ತೇಲಿ
ಎಳೆ ಹರಿದ ಪಟದಂತೆ
ವಿಚ್ಛಿನ್ನ ಮನದಂತೆ
ಮರವಟ್ಟು ಸುತ್ತುತಿದೆ
ಗಿರಗಿರನೆ ತಿರುಗುತಿದೆ
ಭೂವ್ಯೋಮ ಮಧ್ಯದಲಿ
ಶೂನ್ಯದಲ್ಲಿ!

ಗಾಡಿ ಸಿಳ್ಳನು ಹೊಡೆದು
ಮೌನ ಮುದ್ರೆಯನೊಡೆದು,
ಗಿರಿಯ ಕಿಬ್ಬದಿಯಿಂದ
ಕಂದರದ ಮರೆಯಿಂದ
ಧೀಂಕಿಟ್ಟು ಹೊರಬಂದು
ವಿಧವಿಧದ ಪಯಣಿಗರ
ಹೊತ್ತು ಮನ ಬೇಸತ್ತು
ಚೀರಿ ಬುಸುಗುಟ್ಟುತ್ತ
ಕರ್‍ಬೊಗೆಯ ಕಾರುತ್ತ
ಧಾವಿಸಿದೆ ರಭಸದಲಿ
ಕಾರ್‍ಯ ಮುಗಿತಾಯಕ್ಕೆ
ನಿಲ್ದಾಣಕ್ಕೆ!

ಪಡುವಣದ ಮಡಿಲಲ್ಲಿ
ರವಿ ನಿದ್ದೆಗೈವಂದು,
ಹೊಂಗಿರಣಗಳ ಚಾಚಿ
ಬಾಂದೇವಿ ತಲೆಬಾಚಿ
ಬಣ್ಣದೆಣ್ಣೆಯ ಪೂಸಿ
ತೊಟ್ಟಿಲಲಿ ಪಟ್ಟಿರಿಸಿ
ಬಾನಲ್ಲಿ ಬುವಿಯಲ್ಲಿ
ಬನದಲ್ಲಿ ಬಯಲಲ್ಲಿ
ಗುಡಿ ಚರ್‍ಚು ಗೋಪುರದಿ
ಕಾಲೇಜಿನಂಗಳದಿ
ಹೊಂಬೆಳಕು ಹರಡುತಿರೆ
ಕವಿಗಾಳಿ ತೀಡುತಿರೆ
ಕಲಕಂಠನುಲಿಯುತಿರೆ
ಗಿಳಿವಿಂಡು ಹಾರುತಿರೆ
ಬೆಳ್ಳಕ್ಕಿ ಬಳಿವಿಡಿದು
ಬಿಳಿಚುಕ್ಕಿ ಗರಿಯೊಡೆದು
ಬಾಂದಳವನಲೆವಂತೆ
ಉಡ್ಡಾಣಗೈಯುತಿರೆ
ದನಕರದ ಕೊರಳಿಂದ
ಗಂಟೆಗಳ ಟಿಂಟಿಣಿಯು
ಕೊಳಲಿಂದ ಇನಿದನಿಯು
ಮಂದ ಮಂದಾನಿಲನ
ಬೆನ್ನೇರಿ ಬಳಿಸಾರೆ,
ಲಾಲಿ ಕಿವಿ ತಟ್ಟುತಿರೆ
ಚಿನ್ಮಯಾನಂದದಲಿ
‘ನಾನು’ ಬಯಲಾಗುತ್ತಿರೆ
‘ನೀನು’ ಮೈದುಂಬುತಿರೆ
ರೋಮ ರೋಮಂಗಳಲಿ
ನಾದದುನ್ಮಾದದಲಿ
ಚೈತನ್ಯ ಹರಿಯುತಿರೆ
ಮಾನಸ ಸರೋವರವು
ತೊಳೆದ ಕನ್ನಡಿಯಾಗೆ
ಹೃದ್ರಂಗದಲಿ ಭಾವ
ಚಿಲುಮೆ ಪುಟಿದೇಳುತಿರೆ
ಜೇನ್ನೊಣದ ಹುಟ್ಟಿನಲಿ
ಗಜೆಬಜೆಯು ಹುಟ್ಟುತಿರೆ
ಜೇಂಬನಿಯು ಜಗಳುತಿರೆ,
ಮುಚ್ಚಂಜೆ ಮುಸುಗಿನಲಿ
ಹೊಂಬಣ್ಣ ಮಾಸುತಿರೆ
ಇಳೆಯು ಸೆರೆಯಾಗುತಿರೆ
ಮೆಲ್ಲಮೆಲ್ಲನೆ ಇರುಳು
ಇಳಿಯುತಿಹುದು.

ಕತ್ತಲೆಯ ಮೊತ್ತದಲಿ
ಬಡಿದು ಮಲಗಿಸಿದಂತೆ
ಪಟ್ಟಣವು ನಿದ್ರಿಸಿರೆ
ನಿಶ್ಯಬ್ದ ಮುದ್ರಿಸಿರೆ
ಗಿಡಗಂಟಿ ಬೇಲಿಯಲಿ
ಕೀಟ ಜಿಂಯ್‌ಗುಟ್ಟುತಿರೆ,
ಚಿಕ್ಕೆಗಳು ಗಗನದಲಿ
ಕಣ್ಣುಮುಚ್ಚಾಲೆಯಲಿ
ಚಂದಿರನ ಹುಡುಕುತಿರೆ
ಚೆಲ್ವೆಳಕ ಸಿಡಿಸುತಿರೆ
ನಾ ನಿಂತ ಕಟ್ಟಡವು
ತಲೆಯೆತ್ತಿ ನಿಂತಿಹುದು
ಪರ್‍ವತಪ್ರಾಯದಲಿ
ಧ್ಯಾನದಲ್ಲಿ!

ರುದ್ರ, ಭೀಷಣದಲ್ಲಿ
ಗಾಳಿ ತುಸು ಮೊರೆಯುತಿರೆ,
ನೆನೆನೆನೆಸಿ ಅತ್ತಂತೆ
ಎಲೆ, ರವುದೆ ನಲುಗುತಿರೆ
ಟಿಂವಕ್ಕಿ ಟಂಕಾರ
ದಿಗ್ದಿಗಂತಕೆ ಹಬ್ಬಿ
ಗಿರಿಸಾನುಗಳ ತಬ್ಬಿ
ಕತ್ತಲಲಿ ಕರಗುತಿದೆ!
ಅರರೆ! ಹೊನ್ನಿಯ ಹುಳವು
ಧರೆಯ ಜಂಗಮ ತಾರೆ
ಮಿಂಚು ಹುಡಿಯಾದಂತೆ
ರೆಕ್ಕೆಯಿಹ ಕಿಡಿಯಂತೆ
ಕತ್ತಲೆಯ ಕಣ್ಣಿನೊಲು
ಮುಚ್ಚುತಿದೆ ತೆರೆಯುತಿದೆ
ಕುಳಿತೆದ್ದು ಹಾರುತಿದೆ
ಅತ್ತಿತ್ತ ಸಾರುತಿದೆ
ಕಂಡು ಮರೆಯಾಗುತಿದೆ
ಬೆಳಕು ಹನಿಯಾದಂತೆ
ತಿರೆಯುತ್ತಮಾಂಗದಲಿ
ಕತ್ತಿರುವ ಮಣಿಯಂತೆ
ಕತ್ತಲೆಯ ಕಡಲಿನಲಿ
ಮುತ್ತಿನಂತೆ!
*****