ಚೆಂದ ಕಂಡಿದ್ದೆಲ್ಲ ತನಗೇ ಬೇಕು ಎಂದು ರಚ್ಚೆ ಹಿಡಿಯುವುದು ಮಕ್ಕಳು ಮಾತ್ರ ಎಂದು ಹೇಳಿದರೆ ತಪ್ಪಾದೀತು. ಕಂಡಿದ್ದೆಲ್ಲ ಬೇಕು ಎನ್ನವುದು ಎಲ್ಲ ಮನುಷ್ಯರ ಸ್ವಭಾವವೂ ಹೌದು. ‘ಮಂಗನಿಂದ ಮಾನವ’ ಎಂಬ ಡಾರ್ವಿನ್ ಥಿಯರಿ ಎಷ್ಟು ಸತ್ಯವೋ, ‘ಮನವೆಂಬ ಮರ್ಕಟ’ ಎಂಬ ಗಾದೆಮಾತು ಅಷ್ಟೇ ಸತ್ಯ.
ಆಸೆಗೆಂದೂ ಕೊನೆ ಮೊದಲಿಲ್ಲ. ಮೊದಲು ಒಂದು ಸಣ್ಣ ಮನೆಯಾದರೆ ಸಾಕು ಎಂದು ಕನಸುವವ, ಅದು ದಕ್ಕಿದಾಗ ಬಂಗಲೆ ಬಯಸುವ. ಅದು ನನಸಾದಾಗ ಅರಮನೆಯೊಂದಿದ್ದರೆ ಚೆನ್ನ ಎಂದುಕೊಳ್ಳುವ. ಅದೂ ನಿಜವಾದಲ್ಲಿ ಇಡೀ ಸಾಮ್ರಾಜ್ಯವೇ ಬೇಕು ಎಂದು ಕೈಚಾಚುವ.
ಯಾವುದೇ ರಂಗ ತೆಗೆದುಕೊಳ್ಳಿ, ಬೇಕುಗಳಿಗಿಲ್ಲ ಬ್ರೇಕು. ಚಿತ್ರರಂಗವನ್ನೇ ಗಮನಿಸಿ. ಮುಖ ತೋರಿಸುವ ಬಯಕೆ ನಟ-ನಟಿಯರಾಗ ಬಯಸುವವರಿಗೆ. ಚಿಕ್ಕ ಪಾತ್ರದಲ್ಲಿ ಮಿಂಚಿದ ನಂತರ, ದೊಡ್ಡ ಪಾತ್ರ ಬೇಕು ಎನಿಸುತ್ತದೆ. ಅದೂ ಕೈಗೆಟುಕಿದಲ್ಲಿ ಹೀರೋ ಆಗುವ ಹಂಬಲ. ಹೀರೋ ಆದನಂತರ ತಾನೇ ನಿರ್ಮಾಪಕನೂ ಆಗಿ ಕೋಟಿ ಕೋಟಿ ಬೇಕೆಂಬ ಹಗಲು ಗನಸು. ಕೋಟಿಗಟ್ಟಲೆ ಲಾಭ ಬಂದಾಕ್ಷಣ ವ್ಯಕ್ತಿ ತೃಪ್ತನಾಗುತ್ತಾನೆಯೇ. ಇಲ್ಲ. ರಾಮೋಜಿರಾವ್ ರೀತಿ ತಾನೂ ಫಿಲಂ ಸಿಟಿ ಓನರ್ ಆಗ ‘ಬೇಕು’ ಎಂಬ ಹೆಬ್ಬಯಕೆ ಹೆಡೆಯಾಡತೊಡಗುತ್ತದೆ. ಯಾರಿಗೂ ಇಲ್ಲದ ಸೌಲಭ್ಯಗಳು ನನಗೆ ಬೇಕು.
ಇಡೀ ಜಗತ್ತೇ ನನದಾಗಬೇಕು. ಎಂಥ ಫಲಾತನ್ ವ್ಯಕ್ತಿಯೂ ನಾನು ಕೂರು ಎಂದರೆ ಕೂರಬೇಕು, ನಿಲ್ಲು ಎಂದರೆ ನಿಲ್ಲಬೇಕು ಒಟ್ಟಿನಲ್ಲಿ ತಾನೊಬ್ಬ ಮರಿ ಹಿಟ್ಲರ್ ಆಗಬೇಕು.
ಆ ಕನಸೂ ಕೈಗೂಡಿತೆನ್ನಿ.
ಆಗಲಾದರೂ ಆತನಿಗೆ ತೃಪ್ತಿ, ಸಮಾಧಾನಗಳು ದೊರಕೀತೆ. ಇಲ್ಲ. ತಾನು ಹೇಳಿದಂತೆ ಎಲ್ಲ ಕೇಳಬೇಕು ಹುಚ್ಚು ಆಸೆ ಮೊದಲಾಗುತ್ತದೆ. ನಾನು ಮೆಚ್ಚಿದವರನ್ನೇ ಎಲ್ಲ ಮೆಚ್ಚಬೇಕು. ನಾನು ದ್ವೇಷಿಸಿದವರನ್ನು ಎಲ್ಲ ದ್ವೇಷಿಸಬೇಕು.
ನನಗಾಗದವರನ್ನು ಯಾರೂ ಕ್ಯಾರೆ ಎಂದೂ ಎನ್ನಬಾರದು. ಕಾಗೆ ಬೆಳ್ಳಗಿದೆ ಎಂದರೆ ಎಲ್ಲ ಕೋರಸ್‌ನಲ್ಲು ಹೌದೆಂದು ಹಾಡಬೇಕು. ಮಂಚಕ್ಕೆ ಮೂರೇ ಕಾಲು ಎಂದಲ್ಲಿ ಹೌದಣ್ಣ ಮಂಚಕ್ಕೆ ಮೂರೇ ಕಾಲಣ್ಣ, ಎಂದು ತಮಟೆ ಬಾರಿಸಿಕೊಂಡು ಕುಣಿಯಬೇಕು.
‘ಬೇಕು’ ಎಂಬ ಆಸೆ, ದುರಾಸೆಯಾಗಿ ಧಿಮಿಧಿಮಿ ನರ್ತನ ಪ್ರಾರಂಭಿಸುವುದು ಆಗಲೇ. ರಾಜಕಾರಣಿ ಮಾತಿಗೆ ಬನ್ನಿ.
ಮುಂಚೆ ಪಕ್ಷದ ಸದಸ್ಯತ್ವ, ಆನಂತರ ಕಮಿಟಿ ಮೆಂಬರು, ಮೆಂಬರಾದರೆ ಅಧ್ಯಕ್ಷ ಪದವಿ ಬೇಕು ಎಂದು ಮನಸು ಕೈ ಚಾಚುತ್ತದೆ.
ಆನಂತರ ಕಾರ್ಪೊರೇಟರು, ಕಾರ್ಪೊರೇಟರ್ ಆದನಂತರ ಮೇಯರ್ ಹುದ್ದೆ ಬೇಕು ಎಂಬ ಹಂಬಲ. ಎಲ್ಲಿದೆ ಫುಲ್ ಸ್ಟಾಪ್ ಬ್ರೇಕಿಗೆ.
ಎಂಎಲ್‌ಎ, ಎಂಎಲ್‌ಸಿ, ಮುಖ್ಯಮಂತ್ರಿ, ಅನಂತರ ಪ್ರಧಾನಿ ಪಟ್ಟಬೇಕೆಂಬ ಬಯಕೇ.
ಶ್ರೀಸಾಮಾನ್ಯನೂ ಇದಕ್ಕೆ ಹೊರತಲ್ಲ. ಲಾಟ್ರಿ ಹಣದಲ್ಲಿ ಕೋಟಿ ಬಂತು ಎಂದುಕೊಳ್ಳಿ. ಆಹಾ, ನಾನಿನ್ನೂ ಸಂತೃಪ್ತ. ಇನ್ನೇನೂ ಬೇಕಿಲ್ಲ ಎಂದು ಯಾರೂ ಹೇಳುವುದಿಲ್ಲ. ವೀರಪ್ಪನ್‌ನ ಪತ್ತೆ ಪಚ್ಚಿಕೊಟ್ಟವರಿಗೆ ೧ ಕೋಟಿ ಬಹುಮಾನ ಎಂದು ಮರುಘಳಿಗೆ ಅವನನ್ನು ಪತ್ತೆ ಹಚ್ಚಲು ಮೀಸೆ ಬಿಟ್ಟವರನ್ನೆಲ್ಲ ಗುಮಾನಿಯಿಂದ ಕಂಡು ಆ ಕೋಟಿಯನ್ನು ಲಪಟಾಯಿಸುವ ಆಸೆ ಚಿಗುರುತ್ತದೆ.
ಹದಿಹರೆಯದ ಪ್ರೇಮಿ ತಾನೆ ಜಗತ್ತಿನ ಅತ್ಯಂತ ಶ್ರೇಷ್ಠ ಸುರಸುಂದರಾಂಗ, ತನ್ನಂಥ ರೋಮಿಯೋ ಇನ್ನೊಬ್ಬನಿಲ್ಲ ಎಂದುಕೊಂಡಾಗ, ತಾನು ಬಯಸಿದ ಜೂಲಿಯಟ್ ಸಿಕ್ಕರೂ ಮಗದೊಬ್ಬ ಸುಂದರಿ ಕಣ್ಣಿಗೆ ಬಿದ್ದಾಗ ಅವಳೂ ನನ್ನವಳಾಗಬೇಕು ಎಂದು ಬಯಸುವ. ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಜಗತ್ತಿನ ಬೆಡಗಿಯರ ಬೆರಗು ಬಿನ್ನಾಣ ಹಾಗೂ ಬೆತ್ತಲೆ ಸುಂದರಿಯರ ಅಂಗಸೌಷ್ಠವ ಕಣ್ಣಿಗೆ ಹಬ್ಬವಾದಾಗ ‘ಆಹಾ! ಇವರೆಲ್ಲ ನನ್ನವರಾಗಬೇಕು ನಾನೆ ಇವರನ್ನಾಳಬೇಕು ಜಗವೆಲ್ಲ ನನ್ನ ನೋಡಬೇಕು ಎಂದು ‘ಬೇಕು’ ಹುಚ್ಚೆದ್ದು ಕುಣಿಯುತ್ತದೆ.
‘ಹೆಂಡತಿಯೊಬ್ಬಳು ಪಕ್ಕದಲಿದ್ದರೆ ನಾನೂ ಒಬ್ಬ ಸಿಪಾಯಿ’ ಎಂದು ಕೆ.ಎಸ್.ನ. ಅಂತ ಕವಿ ಹೇಳಬಹುದಷ್ಟೆ, ಆದರೆ ಅತಿ ಆಸೆಯ ವ್ಯಕ್ತಿ ಕಂಡ ಕಂಡ ಸುಂದರಿಯರೆಲ್ಲ ತನ್ನ ಭೋಗದ ವಸ್ತುವಾಗಬೇಕೆಂದೇ ಬಯಸುವ.
ಮನೆ, ಬಂಗಲೆ, ಕಾರು, ಆಸ್ತಿ, ಅರಮನೆ, ಸುಂದರಿಯರ ಹಿಂಡು ಎಲ್ಲ ಅವನದಾದರೂ ಒಂದಲ್ಲ ಒಂದು ದಿನ ಆತ ಇಹಲೋಕವ ಬಿಟ್ಟು ತೆರಳಲೇಬೇಕು. ಆಗ ಇವನು ಬಯಸಿ ಬಯಸಿ ಪಡೆದ ಯಾವುದೇ ವಸ್ತು, ವ್ಯಕ್ತಿ, ಸಂಸ್ಥೆ ಅವನ ಹಿಂದೆ ಹೋಗುವುದಿಲ್ಲ.
ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂದು ತಿಳಿದೂ ಮನುಷ್ಯ ಏಕೆ ‘ಬೇಕು’ಗಳಿಗೆ ಹೀಗೆ ಹಪಹಪಿಸುತ್ತಾನೆ ಎಂಬುದನ್ನು ಈವರೆಗೂ ಯಾರೂ ಪತ್ತೆ ಹಚ್ಚಿಲ್ಲ. ಎಲ್ಲ ಜೀವನದ ಜರ್ನಿಯಲ್ಲೂ ಕೊನೆಯ ಸ್ಟೇಷನ್ ಒಂದು ಇದ್ದೇ ಇರುತ್ತದೆ. ಆ ಸ್ಟೇಷನ್ ಎಂದು ಬರುತ್ತದೋ, ಹೇಗೆ ಬರುತ್ತದೋ, ಏಕೆ ಬರುತ್ತದೋ ಹೇಳುವುದೂ ಕಷ್ಟ, ಆದರೂ ಬದುಕಿನ ಕೊನೆಯುಸಿರಿರುವವರೆಗೂ ನಾವಂತೂ ‘ಬೇಕು-ಬೇಕು’ ಎಂದು ಬಾಯ್ ಬಾಯ್ ಬಿಡುತ್ತಿರುತ್ತೇವೆ. ನಾವು ‘ಸಾಕು-ಸಾಕು’ ಎನ್ನುವುದು ಒಂದೇ ಬಾರಿ. ಅದು ಊಟಕ್ಕೆ ಕುಳಿತಾಗ ಮಾತ್ರ. ‘ಇನ್ನು ಸ್ವಲ್ಪ ಅನ್ನ’ ಸಾಕು ಸಾಕು. ‘ಇನ್ನೊಂದು ಹೋಳಿಗೆ’ ಸಾಕು ಸಾಕು.
ಇಂಥ ‘ಸಾಕು’ ಬದುಕಿನಲ್ಲೂ ಹೇಳುವುದು ಕಲಿತಲ್ಲಿ ಎಷ್ಟು ಚೆನ್ನ.
*****
(೧೩-೧೨-೨೦೦೨)
