ಲಾಗ

ಲಾಗ ಹೊಡಿಯಲೊ ಮಂಗ, ಲಾಗ ಹೊಡಿಯಲೊ ಮಂಗ
ಬಗ್ಗಿ ದಣಿಯರ ಮುಂದೆ ಲಾಗ ಹೊಡಿಯೊ;
ಹಾಕು ಅಂತರ್‍ಲಾಗ, ಹಾಕು ಜಂತರ್‍ಲಾಗ-
ನೆರೆದ ಮಹನೀಯರಿಗೆ ಶರಣು ಹೊಡಿಯೋ!

ಇಸ್ತ್ರಿ ಮಾಡಿದ ಪ್ಯಾಂಟು, ಕ್ರಾಪು ತಲೆ, ಬುಶ್ ಕೋಟು-
ತೊಗಲ ಚೀಲವ ಹಿಡಿದುಕೊಂಡು ಮಗನೆ!
ಅತ್ತಿತ್ತ ಹಣಿಕಿದರೆ ಲತ್ತೆ ಬಿದ್ದಾವು ಬಾ,
ಕುತ್ತಿಗೆಯ ಹಗ್ಗವನ್ನು ಜಗ್ಗಿದೊಡನೆ!

ಬಡಿವಾರ ಮಾಡುತ್ತ ಬಸನಿಂಗಿ ಬಂದಾಗ
ಓಡಿ ಹೋಗುವರೇನೊ ಬಡೇಮಿಯಾ?
ಲಾಗ ಹೊಡೆಯುತ ಬಂದು ಗಜಮು ನಿಂತರೆ ನಿನಗೆ
ದೊಡ್ಡ ಕೋಲಿನ ಪದವಿ, ನಿಸ್ಸಂಶಯ.

ಕಂಡ ಕಂಡವರೆದುರು ಹಲ್ಲು ಕಿರಿ, ಪರವಿಲ್ಲ;
ಕೆಲಸ ತೀರುವವರೆಗು ಮುಜುರೆ ಮಾಡು;
ತೊಲೆಯ ಸಂದಿಯ ನಡುವೆ ಬಾಲ ಜೋತಾಡಿಸುತ
ಕೀಲು ಹಿರಿದರೆ ಮಾತ್ರ ನಿನಗೆ ಕೇಡು!

ನೀ ಕೊಟ್ಟ ಹಣ್ಣು ರುಚಿ, ಹೃದಯವಿನ್ನೆಷ್ಟು ಸವಿ!
ಕಡಲ ತಳದಲಿ ಮೊಸಳೆ ತೆರೆದ ಬಾಯಿ-
ಮರದಲ್ಲಿ ಹೃದಯವನು ಬಿಟ್ಟ ಸೋಜಿಗವ ನುಡಿ,
ಬದುಕಿಕೊಳ್ಳಲು ಇದೇ ತಕ್ಕ ದಾರಿ.

ಬೆಕ್ಕು-ಬೆಣ್ಣೆಯ ಜಗಳದಲ್ಲಿ ತಕ್ಕಡಿ ತೂಗಿ
ನ್ಯಾಯದಾನವ ಗೈದ ನಿನ್ನ ಬುದ್ಧಿ-
ರಾಜಕಾರಣಿಗಳನು ತಲೆದೂಗಿಸಿಹುದಿಲ್ಲಿ
ನಿನಗಿಂತ ಅವರಿಗೇ ಹೆಚ್ಚು ಸಿದ್ಧಿ!

ಗುಲಗಂಜಿಯನು ಬೆಂಕಿ ಕಿಡಿಯಂದು ಊದಿದರೆ
ನಿನಗಂಜಿ ಚಳಿ ಹೋಯ್ತು, -ಬರೋಽಬರಿ;
ಸೂಚೀಮುಖನು ಪಟ್ಟಪಾಡು ಯಾರಿಗೆ ಬೇಕು
ಲಾಗ ಹೊಡಿಯೋ ರಾಜ, ನಿಂದೇ ಸರಿ!

ಪ್ರತಿ ವರುಷ ನಿನಗೆಂದೆ ವನಮಹೋತ್ಸವವುಂಟು
ಮೋರೆ ಒಣಗಿಸಿಕೊಂಡರೇನು ಬಂತು?
ಬೇರೆ ದೇಶಗಳಿಂದ ನಿನಗು ಬೇಡಿಕೆಯುಂಟು-
ಸೇತು ಬಂಧವ ಬಿಟ್ಟು, ಹಡಗ ಹತ್ತು.

ಲಾಗ ಹೊಡಿಯಲೊ ಮಂಗ, ಲಾಗ ಹೊಡಿಯಲೊ ಮಂಗ
ಲಾಗ ಹೊಡೆದರೆ ಬೇರೆ ತ್ಯಾಗ ಬೇಡ!
ಹಾಕು ಅಂತರ್‍ಲಾಗ, ಹಾಕು ಜಂತರ್‍ಲಾಗ-
ಡೋಲು ಬಡಿಸುವುದಕ್ಕೆ ಮರೆಯಬೇಡ.
*****