ಅನ್ವರ್‍ಥ

ಗರಿಮುರಿ
ಹುಲ್ಲುಗರಿಕೆ
ಚೂಪಾಗಿ
ಸೀರಾಗಿ
ಪುಳಕಿಸಿ ನಿಂತಂತೇ
ನನ್ನ ಭಾವನೆಗಳಿಗೆಲ್ಲ
‘ಹಿಟ್’-ಆಗುವ
ಆಕಾರ ತುಂಬುವ-ಜಿಜ್ಞಾಸೆ
ವ್ಯರ್‍ಥ

ಕಂಡ
ಕೆಂಡಸಂಪಿಗೆಗೆಲ್ಲ
ನಿಗಿನಿಗೀ ಮುತ್ತಿಕ್ಕಿ
ತುಟಿಯ ಕುಡಿ ಸುಟ್ಟ
ಕಲ್ಪನೆಗೂ
ಅನುಭವದ ಅರ್‍ಥ

ಹೀಗೆಷ್ಟೋ
ಮಾತು, ಮನಸಿಗೂ ಮೀರಿ
ಬಾಯಿಂದ
ಫಳ್ -ಎಂದು ಜಾರುವ
ಉಸಿರಿಗೆಲ್ಲ
ಜೀವ ಅನ್ವರ್ಥ
*****