ಪ್ರಳಯದ ಅಲೆಯ ಮೇಲೆ ನಾನು ಹೊರಟೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ
ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ
ಹಿಡಿದೆಳೆದು ಒಂಟೆಗಳ ಸಾಲಿಗೆ
ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ”
ಅವನು ರಕ್ತ ತೆಗೆದು ವೀರ್ಯವಾಗಿಸುತ್ತಾನೆ, ವೀರ್ಯದಿಂದ
ಜೀವ ಸೃಷ್ಟಿಸುತ್ತಾನೆ, ಜೀವದ ಬಂಧ
ಹಿಡಿದು ಕತ್ತರಿಸಿ ತರ್ಕ ಹುಟ್ಟಿಸುತ್ತಾನೆ
ಪುನರುತ್ಥಾನದ ಹಿರಿಮೆ ಮೊಳಗಿಸುತ್ತಾನೆ
ಕೋಲು ಹಿಡಿದು ಪಾರಿವಾಳ ಅಟ್ಟಿದಂತೆ
ಅಟ್ಟುತ್ತಾನೆ ನನ್ನ, ಲಕ್ಷ ರೀತಿಗಳಿಂದ
ಒಲಿಸಿ, ಪರಿಪರಿಯಾಗಿ ಹಂಬಲಿಸಿ
ತನ್ನ ಸನ್ನಿಧಿಗೆ ಹಾಜರಾಗಿಸಿ

ಸಮುದ್ರಯಾನಕ್ಕೆ ನನ್ನ ನಾವೆಯಾಗಿಸುತ್ತಾನೆ
ಹಿಡಿದು ಹಡಗಿನ ಕಂಭಕ್ಕೆ ಕಟ್ಟುತ್ತಾನೆ

ನಿರ್ಮಲತೆ ಶೋಧಕರಿಗೆ ನಾನು ಶುದ್ಧಜಲ
ಅದೃಷ್ಟಹೀನರ ದಾರಿಗೂ ಬರಿ ಗೊಬ್ಬಳಿ ಮುಳ್ಳು
ಅಷ್ಟ ಸ್ವರ್ಗಗಳ ಸೇರುವುದು ದೊರೆಯ ಗುರಿಯಲ್ಲ
ನಾನೆ ದೊರೆಯ ಗುರಿ, ಎಂಥಾ ಸೌಭಾಗ್ಯಶಾಲಿ!

ದೊರೆಯ ದಳಕ್ಕೆ ಸೇರಿದವರು ಸಾವಿನಿಂದ ಪಾರು
ದೊರೆಯ ಕೈಯ ಖಡ್ಗ ನೋಡಿ, ಮಾಡಿದ ಗುರಾಣಿ ಚೂರು
ಅಸಂಖ್ಯ ಹಗಲು ರಾತ್ರಿಗಳ ಆತ್ಮದ ಮುತ್ತಿಗೆಗೆ ನಾನು ಪಹರೆ
ಮುತ್ತುಗಳ ಮೊರೆವ ಕಡಲಲ್ಲೀಗ ಅದು ನನ್ನಿಂದ ಮರೆ
ಅವನ ಸೊಬಗನ್ನು ಎಷ್ಟೆಂದು ಬಣ್ಣಿಸುತ್ತಿ
ಅವನು ಉಪಮಾತೀತ, ಇಲ್ಲಿಗೆ ಸಾಕು.

ಪ್ರಳಯದ ಅಲೆಯು ಮೇಲೆ ನಾನು ಹೊರಟೆ
*****