ಉನ್ಮತ್ತ ಹಾಗೂ ಸ್ವಸ್ಥ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಲೋಕದ ತುಂಬ ಮುಳ್ಳಿದ್ದರೂ ಸರಿ
ಪ್ರೇಮಿಯ ಹೃದಯ ಮಾತ್ರ ಸದಾ ಹೂವೇ

ಸ್ವರ್ಗದಗಿರಣಿ ಸದಾ ಸೋಮಾರಿ
ಪ್ರೇಮಲೋಕ ಸದಾ ಕಾರ್ಯಶೀಲವೇ ಸರಿ

ಮುಳುಗಲಿ ಉಳಿದವರು ದುಃಖದಲ್ಲಿ
ಹಾರಾಡಲಿ ಪ್ರೇಮದಾತ್ಮ ಸಂತೋಷದಲ್ಲಿ

ದೀಪಗಳು ಕರಕಾಗಿ ಕಗ್ಗತ್ತಲಲ್ಲೇ ಪ್ರೇಮದ ಗೂಡು
ನಲ್ಲನೇ ಸ್ವತಃ ಸಾವಿರ ಸೂರ್ಯರ ಬೀಡು

ಎದೆಯ ಬಟ್ಟಲಿಂದ ಉಕ್ಕಿತು ಪ್ರೇಮ ಮದ್ಯದ ನೊರೆ
ರಹಸ್ಯದೊಳಗಿನ ರಹಸ್ಯಗಳ ಪ್ರೇಮದ ಜತೆಗಾರರೆ?

ನೂರು ಮಾತು ಕೊಟ್ಟರೂ ಸದಾ ಅತೃಪ್ತ ಈ ಸಖ
ಚಿತ್ತಚೋರರ ಚಾಲಾಕಿಗೆ ಸಾವಿರ ಮುಖ

ಜಡ್ಡಾಗಿ ಹಿಡಿದಾಯ್ತ ಹಾಸಿಗೆ, ನಲ್ಲ ಕೊರಗಿ ಕೊರಗಿ
ಕೊರಗಿ ಕರಗಿದವನ ಬಳಿ ಬಾರಳೆ ಚಂದ್ರಮುಖಿ

ಪ್ರೇಮದಶ್ವಾರೋಹಿಗೆ ದಾರಿಯ ಭಯಬೇಡ
ಈ ಅದ್ಭುತ ಕುದುರೆಗಿದೆ ನಾಗಾಲೋಟದ ವೇಗ

ದಾರಿ ತುಂಬ ಹಳ್ಳ ಕೊಳ್ಳಗಳುಂಟು
ಈ ಕುದುರೆ ನಿನ್ನ ಒಂದು ಕ್ಷಣಕ್ಕೆ ಗುರಿ ಮುಟ್ಟಿಸುವುದೇ ಸರಿ

ಮೇವೆ ಬೇಡ ಪ್ರೇಮಿಯ ಆತ್ಮಕ್ಕೆ
ಹೃದಯದ ಮಧುವೇ ಸಾಕು ನಲ್ಲರ ಜೀವಕ್ಕೆ

ಶಂಸ್‌ನ ಹೃದಯ ಸದಾ ಕುಡಿದು ಉನ್ನತ್ತ
ಶಂಸ್‌ನ ಹೃದಯ ಶಾಶ್ವತವಾಗಿ ಸ್ವಸ್ಥ
*****