ಗಾಂಧೀಯುಗ!

ನುಡಿಗೆ ನುಡಿಗೆ ಅಡಿಗಡಿಗೆ ಗಾಂಧಿ ಹೆಸರೆದ್ದು ನಿಲ್ಲುತಿಹುದು
ವಿಶ್ವಬಂಧು ವಿಶ್ವಾತ್ಮನೆಂದು ಜನಕೋಟಿ ನಮಿಸುತಿಹುದು;
ಲೋಕದೀಚೆ ಮುಗಿಲಂಚಿನಾಚೆ ಅವನಾತ್ಮ ತುಳುಕುತಿಹುದು
ನೇಸರುದಿಸಿ ಹೂಗಾಳಿ ಸೂಸಿ ಸಂದೇಶ ಬೀರುತಿಹವು!

ಯೇಸುಕ್ರಿಸ್ತನುತ್ಪ್ರೇಮಹಸ್ತ ಸುಸ್ತೇಜವಾಂತು ಬಂತು,
ಬುದ್ಧನೆದೆಯ ಉದ್ಭುದ್ಧನೀತಿ ಹಿಂಸೆಯನ್ನು ತಳ್ಳಿ ನಿಂತು,
ಬಸವ ನಡೆದ ನುಡಿ ದಯವೆ ಧರ್‍ಮಗುಡಿಗಳಸವಾಗಲಿಂತು
ಗಾಂಧಿರೂಪ ಅಪರೂಪ ದೀಪ ಭಾರತವ ಬೆಳಗಿತಿಂತು!

ಜಾತಿ ಕುಲಕೆ ದುರ್‍ನೀತಿ ಬಲಕೆ ನೆಲೆಯಿಲ್ಲವೆಂದು ಸಾರಿ,
ದೇವಸುತನು- ನಮ್ಮಾತ್ಮಕವನು ತನ್ನಂತರಂಗ ತೋರಿ,
ದೀನದಲಿತರುದ್ಧರಣ- ಹರಣ ಮುಡಿಪಿಟ್ಟ ದೇಹಕರಗಿ
ಯೋಗಿ ತ್ಯಾಗಿ!- ಮನಬುದ್ಧಿಮಾಗಿ ಪದಯುಗ್ಮ ಕೆರಗಿ ಬಾಗಿ.

‘ಅವನೆ ಇಲ್ಲ ಇನ್ನುಳಿದುದಿಲ್ಲ’ ವೀ ಮಾತು ನಮಗೆ ಹೊಲ್ಲ;
ಅಳಿದುದಿಲ್ಲ, ಅವನಿತ್ತ ಸೊಲ್ಲ ಜಗಜೀವಿ ಜೀವಿ ಬಲ್ಲ!
ಕರುಣೆಯೊಡಲು ಹೆಗ್ಗಡಲು ತುಂಬಿದೆದೆಯಲ್ಲು ತೇಲುತಿಹನು,
ಚಿನ್ನವಾಗಿ ಮನ ಘನ್ನವಾಗಿ ಬಾಳೆಂದು ಹರಸುತಿಹನು.

ಯಾವ ಕೈಯು ಗುಂಡಿಕ್ಕಿ ಕೊಂದನನ್ನುವದು ತೆರೆದು ತೋರು
ಅದಕೆ ಕೈಯ ಮುಗಿದಿತ್ತು ಮೈಯನೆಡೆಗೊಟ್ಟ ಪಾಪಭೀರು!
ಇದ್ದರೇನೊ ಇನ್ನಿರುವರೇನೊ ಇಂತಿಂತು ಬಾಳಿದವರು?
ಆ ಕಣ್ಣ ಕಾಂತಿ ನಗೆಮೊಗದ ಶಾಂತಿ ನಿಸ್ಸೀಮ ಪುರುಷರಿವರು!

ಕಣ್ಣೀರ ಕಣವನೊಡೆದೊಡೆದು ನೋಡು ಅಲ್ಲಲ್ಲಿ ಅವನ ನಿಲುವು,
ನಿಟ್ಟುಸಿರ ತೆರೆಯ ಮರೆಯಲ್ಲಿ ನಿಂತ ಆ ಮೊಗದ ಬಲವೆ ಬಲವು!
ಜಡದ ತಿರೆಯ ಹರ್‍ಷಾಂತ ಝರಿಯ ನಾದದಲಿ ಅವನ ಗೆಲವು,
ನಮ್ಮ ಪಾಡು-ಬಿಡುಗಡೆಯ ಹಾಡು ಅವನಾತ್ಮ ತಳೆದ ಛಲವು!

ದಾಸ್ಯನೊಗವ ಕಿತ್ತೊಗೆದ ಯುಗವ ನಿರ್‍ಮಿಸಿದ ಸಹ ಬಲ್ಪು,
ಹಗೆಯ ತಿದ್ದಿ ಜನಮನವ ಮಿದ್ದಿ ನವಸೃಷ್ಟಿಗೈದ ಬಾಪು!
ಹೊಸತು ಯುಗವು ಜಯ ಗಾಂಧಿ ಯುಗವು! ಇನ್ನಾವುದಿದಕೆ ಸೊಗವು
ಭರತಮಾತೆ ಹೆಸರಿಡುವಳಿದಕೆ ಯುಗವಿದುವ ಗಾಂಧಿ ಯುಗವು!
*****