ಚೆಂಗುಲಾಬಿ

ಚೆಂಗುಲಾಬಿಯ ಮೊಗ್ಗೆ ಅರುಣನೆಡೆ ಮೊಗವಿರಿಸಿ
ಚೆಂದುಟಿಯನರೆತೆರೆದು ನೋಂಪಿಯಲ್ಲಿ-
ಸಕ್ಕರೆಯ ನಿದ್ದೆಯಲಿ ಸವಿಗನಸ ಕಾಣುತಿದೆ
ಚದುರನೈತಹನೆಂಬ ಹಂಬಲದಲಿ!

ನವುರಾದ ಪಕಳೆಯಲಿ ಕುಂಕುಮ ಪರಾಗವಿದೆ
ಎದೆಯಲ್ಲಿ ಸೌರಭದ ಸೂಸುಗಿಂಡಿ,
ಮೈತುಂಬ ಒಳುಗುಂದದಮಲ ಸುರುಚಿರ ಕಾಂತಿ
ಚೆನ್ನೆಯರ ಕೆನ್ನೆಗಳ ರಾಗಬಂದಿ!

ಮೆಲ್ಲಲರು ಮೈದಡವಿ ಗಲಿಸಿ ಗಲ್ಲವ ಸವರಿ
ಸಾಗುತಿರೆ ನಸುನಾಚಿ ಹಿಂದಿನಿಂದ
ರಸಿಕ ಭೃಂಗವು ಬಂದು ಕಿವಿಮಾತನುಸುರುತಿರೆ
ಸವಿ ಹಾಡಿಗೊಲಿಯುತಿಹ ಮಧುರ ಬಂಧ.

ಜೇನುಂಡ ಕಾದಲನು ಬಳಸಿ ಬಳಿಯಲಿ ಸುಳಿದು
ಅಡಿ ಹಾರಾಡುತಿರೆ ಹೂವ ರಮಿಸಿ,
ಒಲಿದ ಮನಕೊಲಿದ ಎದೆ ಎರಡು ಒಂದಾಗಿರಲು
ಹಾಡುತಿದೆ ಗಾಳಿಗೂ ಗುಂಗು ಹಿಡಿಸಿ!

ಅಲ್ಲಲ್ಲಿ ಬಳುಕುತಿಹ ಬಳ್ಳಿಗಳ ಗೊಂಚಲಲಿ
ಹೂಗಳೆನಿತರಳಿಹವು, ಆದರೇನು
ಈ ಗುಲಾಬಿಯ ಬಣ್ಣ, ಕಣ್ಣ ತಣ್ಣನೆ ಬಿಂಬ
ಕೋಮಲತೆ ಒಲುಮೆಗಿದು ತವರು ಜೇನು!

ಹೂವಿನಂತಹ ಹುಡುಗಿ ಈ ಹೂವ ಮುಡಿಯುವಳೆ-
ಹೂವು ಪಡೆದಿಹುದೇನು ಅಂಥ ಭಾಗ್ಯ?
ಕಾಮುಕರ ಕಣ್ಣೆಂಜಲಾಗದಿಹ ಮೀಸಲದ
ಹೂವವಳ ಮುಡಿಯಲ್ಲಿ ಇಹುದೆ ಯೋಗ್ಯ.
*****