ನಕ್ಕರೆ ಅದೇ ಸ್ವರ್ಗ

ಎಲ್ಲೆಲ್ಲೂ ಕೊಲೆ, ದರೋಡೆ, ಹಿಂಸೆ, ಕ್ರೌರ್ಯ, ಕಾಡುಗಳ್ಳ ವೀರಪ್ಪನ್‌, ಕೋರ್ಟು, ಕಛೇರಿ, ಲೋಕಾಯುಕ್ತದ ಮಾತೇ ಆಗುತ್ತಿರುವುದರಿಂದಾಗಿ ಎಲ್ಲ ಪತ್ರಿಕೆಗಳ ಫ್ರಂಟ್ ಪೇಜನ್ನೂ ಆ ಸುದ್ದಿಗಳೇ ಕಬಳಿಸುತ್ತಿವೆ. ಹೀಗಾಗಿ ಯಾರಿಗೂ ಮನೋನೆಮ್ಮದಿ ಇಲ್ಲ.

ಅದರಿಂದಾಗಿ ಇಂದಾದರೂ ಕೊಂಚ ನಗಲು ಯತ್ನಿಸೋಣ. ಏಕೆಂದರೆ ಈ ಕಾಲದಲ್ಲಿ ನಕ್ಕರೆ ಅದೇ ಸ್ವರ್ಗ ಎಂಬಂತಾಗಿದೆ. ಏಕೋ ಏನೋ ನಗುವುದನ್ನೇ ಮರೆತಿದ್ದಾರೆ ನಮ್ಮ ಮಂದಿ.

‘ಫ್ರೆಂಡ್ಸ್’ ಚಿತ್ರ ಗೆದ್ದದ್ದೇ ಸಾಕು, ಕಾಲೇಜು ಒಳಾಂಗಣದಲ್ಲಿ ಹುಡುಗಿಯರನ್ನು ಛೇಡಿಸುವುದೇ ಹಾಸ್ಯ ಪ್ರಸಂಗಗಳಾಗಿವೆ, ‘ಕುರಿಗಳು ಸಾರ್ ಕುರಿಗಳು’, ಜನಮೆಚ್ಚಿದ ನಂತರವಂತೂ ‘ಸಾರ್’ಗಳ ಹಾವಳಿ ಅತಿಯಾಯಿತು.

ಚಿತ್ರರಂಗದವರಂತೂ ಕಪಿಚೇಷ್ಟೆ ಮತ್ತು ಕಕ್ಕಸುಮನೆಗಳನ್ನೇ ಹಾಸ್ಯದ ಕೇಂದ್ರ ಬಿಂದು ಮಾಡಿಕೊಂಡು ವಾಕರಿಕೆ ಬರುವಂತೆ ಮಾಡಿಬಿಟ್ಟಿದ್ದಾರೆ.

ನಾ. ಕಸ್ತೂರಿ, ಬೀChi, ನಾಡಿಗೇರ್, ಆರ್. ನರಸಿಂಹಾಚಾರ್, ಟಿ.ಪಿ.ಕೈಲಾಸಂ, ದಾಶರಥಿ ದೀಕ್ಷತ್, ಅ.ರಾ.ಮಿತ್ರ, ವೈಎನ್‌ಕೆ ಅಂಥವರ ಸದಭಿರುಚಿಯ ಹಾಸ್ಯ ಯಾಕೆ ಮರೆತರು ಎಂಬುದಿನ್ನೂ ಅರ್ಥವಾಗುತ್ತಿಲ್ಲ.

ಇಂದಿಗೂ ಹಾಸ್ಯಮೇಳ, ಹಾಸ್ಯಜಾಗರಣೆ ಎಂದಾಗ ಜನ ಕಿಕ್ಕಿರಿದು ತುಂಬುತ್ತಾರೆ. ತಿಳಿಹಾಸ್ಯ, ವರ್ಡ್‌ಪನ್, ಹಾಸ್ಯ, ವಿಡಂಬನೆಗಳ ಜೋಕ್‌ಗಳಾದಾಗ ಹೊಟ್ಟೆತುಂಬ ನಗುತ್ತಾರೆ. ಹಳೆಯ ಕತೆಗೆ ಹೊಸ ವ್ಯಾಖ್ಯಾನ ನೀಡಿದಾಗ ಮೆಚ್ಚಿ ಸಂಭ್ರಮಿಸುತ್ತಾರೆ.

ಜೋಕ್ ಅಥವಾ ಕತೆ ಹಳೆಯದೇ ಇರಬಹುದು. ಅದನ್ನು ಇಂದಿನ ಕಾಲಕ್ಕೆ ಆಗುವಂತೆ ಹೇಗೆ ಅಳವಡಿಸಿಕೊಂಡಿರುತ್ತೇವೆ ಎಂಬುದೂ ತುಂಬಾ ಮುಖ್ಯ.

ಬಡವನೊಬ್ಬನ ಹಳ್ಳಿಯ ಕತೆ ನಿಮಗೆ ಗೊತ್ತು. ಅದರಲ್ಲಿ ಬಾವಿಗೆ ಒಂದು ಕಬ್ಬಿಣದ ಕೊಡಲಿ ಬೀಳುತ್ತದೆ. ಬಡವನ ಒದ್ದಾಟ ಕಂಡು ದೇವರು ಪ್ರತ್ಯಕ್ಷವಾಗಿ ಚಿನ್ನದ ಕೊಡಲಿ, ಬೆಳ್ಳಿ ಕೊಡಲಿ ತೋರುವ, ಬಡವ ದುರಾಸೆಯವನಾಗಿದ್ದಿದ್ದರೆ, ‘ಹಾಂ ಇದೇ ನನ್ನ ಕೊಡಲಿ’ ಎಂದು ಕೈ ಚಾಚಬಹುದಿತ್ತು. ಆದರೆ ಆದರ್ಶವ್ಯಕ್ತಿ. ಮೋಸ ಅವನ ಬದುಕಿನ ಗುರಿ ಅಲ್ಲ.

ಆದರೆ ಇಂದು ಕಾಲ ಬದಲಾಗಿದೆ. ಇಲ್ಲರಿಗೂ ದಿಢೀರ್ ಶ್ರೀಮಂತರಾಗುವ ಹುಚ್ಚು, ಬೇರೆಯವರು ಸತ್ತರೂ ಚಿಂತೆಯಿಲ್ಲ. ನಾನು ಹಾಯಾಗಿದ್ದರೆ ಸಾಕು ಎಂದು ಚಿಂತಿಸುವಂಥ ದಿನಗಳಿವು. ಇದೇ ಕಥೆ ಸ್ವಲ್ಪ ಬದಲಾಯಿಸಿ ನೋಡೋಣ.

ನಗರದ ಮಧ್ಯಮ ವರ್ಗದ ಒಬ್ಬ ವ್ಯಕ್ತಿ ಹಾಗೂ ಅವನ ಮಡದಿ ಬಾವಿಯ ಬಳಿ ಇರುತ್ತಾರೆ. ಹೆಂಡತಿ ಬಾವಿಗೆ ಕಾಲು ಜಾರಿ ಬೀಳುತ್ತಾಳೆ ಸುತ್ತ ಯಾರೂ ಇಲ್ಲ. ಇವನಿಗೆ ಈಜು ಬರುವುದಿಲ್ಲ. ಆಗ ‘ಅನ್ಯಥಾ ಶರಣಂ ನಾಸ್ತಿ’ ಎಂದು ದೇವರ ಮೊರೆ ಹೋಗುವ.

ಭಕ್ತನ ಭಕ್ತಿಗೆ ಮೆಚ್ಚಿದ ದೇವರು ಇವನ ಕಷ್ಟವರಿತು

ಇವಳಾ ನಿನ್ನ ಹೆಂಡತಿ, ಎಂದು ಕಜೋಲ್ ಎಂಬ ಬೆಡಗಿಯನ್ನು ತೋರುವ ‘ಅಲ್ಲ ಅವಳಲ್ಲ ನನ್ನ ಮಡದಿ’ ಎನ್ನುವ

ಹಾಗಾದರೆ ಇವಳಾ ಎಂದು ಡಿಂಪಲ್ ಕಪಾಡಿಯಳನ್ನ ತೋರುವ ‘ಅಲ್ಲ ಅವಳು ಅಲ್ಲ ನನ್ನ ಹೆಂಡತಿ’ ಎನ್ನುವ ‘ಹಾಗಾದರೆ ಇವಳೇ ಇರಬೇಕು ನಿನ್ನ ಹೆಂಡತಿ’ ಎಂದು ಐಶ್ವರ್ಯ ರೈನ ತೋರುವ ಆ ವ್ಯಕ್ತಿ ಮುಖ ಸಪ್ಪಗೆ ಮಾಡಿ ‘ಅವಳೂ ಅಲ್ಲ ನನ್ ಹೆಂಡತಿ’ ಎನ್ನುವ.

‘ಹಾಗಾದರೆ ಇವಳಾ ನಿನ್ನ ಹೆಂಡತಿ ಎಂದು ಅವನ ನಿಜವಾದ ಹೆಂಡತಿಯನ್ನೇ ತೋರುವ’ ಈತ ಸಂಭ್ರಮದಿಂದ ‘ಇವಳೇ ನನ್ನ ಹೆಂಡ್ತಿ’ ಎನ್ನುವ.

‘ಅಲ್ಲಾ ಎಂತೆಂಥ ಸುಂದರಿಯರನ್ನು ತೋರಿದೆ. ನೀನು ಅವರಲ್ಲ ಎಂದ ಅರಸಿಕ’ ಎಂದಾಗ ‘ಅಲ್ಲಾ ಸ್ವಾಮಿ ನೀವು ಕಜೋಲ್, ಡಿಂಪಲ್ ಕಪಾಡಿಯ, ಐಶ್ವರ್ಯ ರೈ ಅಂಥವಳನ್ನಾ ತೋರಿದಿರೇ ಹೊರತು ಕನ್ನಡ ನಟಿಯರನ್ನೇಕೆ ತೋರಲಿಲ್ಲ! “ನಿಮ್ಮ ಕನ್ನಡ ಚಿತ್ರರಂಗ ಈಗ ಪರಭಾಷಾ ನಟೀಮಣಿಯರಿಗೆ ರೆಡ್ ಕಾರ್ಪೆಟ್ ಹಾಸುತ್ತಿದೆ. ನೀನೂ ಹಿಂದೊಮ್ಮೆ ಕನ್ನಡ ಚಿತ್ರ ನಿರ್ಮಾಪಕನಾದುದರಿಂದ ನಿನ್ನ ಹೆಂಡತಿಗಿಂತ ಇವರೇ ನಿನಗೆ ಪ್ರಿಯಾವಾದರು ಎಂದು ಭಾವಿಸಿದೆ. ನಿನ್ನ ಮಡದಿಗಿಂತ ರೂಪಸಿಯರಾದ ಇವರನ್ನೇಕೆ ಬೇಡ ಎಂದೆ. ಅದು ಮುಂಚೆ ಹೇಳು’ ಎಂದ ದೇವರು.

‘ನಾನು ಹುಂ ಅಂತ ಅಂದ್ ಬಿಟ್ರೆ ಈ ನಾಲ್ಕು ಜನವನ್ನೂ ಕರೆಕೊಂಡು ಹೋಗು ಅಂತ ಎಲ್ಲಿ ಅಂದ್ ಬಿಡ್ತಿರೋ ಅಂತ ಭಯವಾಯಿತು. ಅಂತವರನ್ನ ಸುಧಾರಿಸುವುದು ತುಂಬಾ ಕಷ್ಟ ಅಂತ ನಿರ್ಮಾಪಕನಾಗಿ ನಾನು ಬಲ್ಲೆ’ ಅಂದ.

ಗಂಡನ ಹುಟ್ಟಿದ ಹಬ್ಬದಂದು ಹೆಂಡತಿ ಅನ್ನ, ಹುಳಿ, ಪಲ್ಯ, ಬಡಿಸಿ, ಎಲ್ಲದರ ಮಧ್ಯದಲ್ಲಿ ಚಿಲ್ಲರೆ ರಾಶಿ ಸುರಿದಳು.

‘ಅರೆ! ಇದೇನೇ ಚಿಲ್ರೆ ಹಾಕ್ತಿದಿ’ ಎಂದ ನಿರ್ಮಾಪಕ ಗಂಡ. ‘ಊಟದಲ್ಲಿ Change ಇರಲಿ ಅಂತಿದ್ರಿ. ಅದಕ್ಕೆ Change ಹಾಕಿದೀನಿ’ ಅಂದ್ಳು ಮಡದಿ ನಗುತ್ತಾ. ‘ಹುಂ, ಈಗ ನಟ-ನಟಿ-ನಿರ್ದೇಶಕರೆಲ್ಲ ಮೂಹೂರ್ತ ದಿನ ಕತೆ ಹೇಳೋವಾಗ, ಡಿಫರೆಂಟ್ ರೋಲ್, ತುಂಬಾ Change ಇದೆ ಅಂದದ್ದು ಕೇಳಿ ಕೇಳಿ ನಾನೂ ಊಟದಲ್ಲಿ Change ಇರಲಿ ಅಂತಿದ್ದೆ’ ಎಂದು ನಕ್ಕ.

‘ನೀನು ಯಾರನ್ನ ಮದುವೆ ಆಗ್ತಿ’ ಅಂದ ಅಪ್ಪ ಮಗಳನ್ನ. ‘ಕಂಡಕ್ಟ‌ರ್’ನ ಅಂದಳು ಮಗಳು. ‘ಹೋಗಿ ಹೋಗಿ ಕಂಡಕ್ಟರ್‌ನಾ’ ಎಂದು ಗುಡುಗಿದ ಅಪ್ಪ. ‘ನಾನು ಏನು ಕೇಳಿದ್ರೂ ‘ರೈಟ್’ ಅನ್ನೋರು ಕಂಡಕ್ಟರ್ ಅಂದಳು ಮಗಳು.

ಅದೊಂದು ಮಲಬಾರಿಗಳ ಹೋಟೆಲ್. ಆದರೆ ಬೋರ್ಡ್ ಬರೆದದ್ದು ಹೀಗೆ ಮಲ ಬಾರದವರ ಹೋಟೆಲ್.

ಡಾಕ್ಟರ್: ಕಂಗ್ರಾಚುಲೇಷನ್ಸ್ ಅವಳಿ ಜವಳಿ ಮಕ್ಕಳಾಗುವವು ನಿಮಗೆ. ತಂದ್ರೂಪು….ಹಹಹ ನೀವು ಏನು ಮಾಡ್ಕೊಂಡಿದೀರಿ.

ಆತ: ಹಹಹ… ಸಾರ್ ನಾನು ಜೆರಾಕ್ಸ್ ಅಂಗಡಿ ಇಡ್ಕೊಂಡಿದೀನಿ ಅಂದ.

ಹೀಗೆ ಆಗಾಗ ಈ ಜೋಕು ಮೆಲುಕುಹಾಕಿ ನಗುವುದು ವಾಸಿಯಲ್ಲವೆ.
*****
(೨೦-೧೨-೨೦೦೨)