ಕೊನೆಯ ನಿಲ್ದಾಣ

ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ
ಮಂದಿ ಗಿಜಿಗಿಟ್ಟಿರುವ ನಿಲ್ದಾಣ;
ಯಾವುದೋ ಊರು,
ಎಲ್ಲಿಯೋ ಏತಕೋ ಅವಸರದ ಕೆಲಸ,
ಮನದ ಕೊನೆಯಂಚಿನಲಿ ಮತ್ತಾವುದೋ ಸರಸ ವಿರಸ;
ನಿಂತಲ್ಲಿಯೆ
ಕುಳಿತಲ್ಲಿಯೆ
ಎದೆಯ ಮಗ್ಗದಲಿ ಮಿಂಚಿನ ಲಾಳಿ ಓಡಾಡಿದೆ!
ಕೈಯ ಗಡಿಯಾರದಲಿ ಕಾಲದ ನಾಡಿ ಮಿಡಿಯುತಿದೆ-
ಅಲ್ಲಿಗೂ ಇಲ್ಲಿಗೂ ಎಲ್ಲಿಗೋ ಎಳೆಯನೆಳೆದಾಡುತಿದೆ ಜೀವಜೇಡ!

ದೂರ ತಾರಸ್ವರದಿ ಕೂಗಿಕೊಂಡಿತು ಗಾಡಿ
(ಮುಗಿಲ ಭೇದಿಸಿ ಬರುವ ಅಶರೀರವಾಣಿ!)
ಅಡಪು ಹತ್ತಿದ ಮೈಯ ತುರಿಸಿಕೊಳ್ಳುತ ನಾಯಿ
ಎದ್ದು ಕಿವಿ ಝಾಡಿಸಿದೆ
ಧಡ್…ಧಡ್…ಧಡ್…ಧಡ್
ಕಂಪಿಸಿದವೆರಡೂ ಕಂಬಿ
ನೂರು ಗಾಲಿಗಳುರುಳಿ ದಡ್ಡು ಬಿದ್ದಿರುವದೆಯು
ಹೊಡೆದುಕೊಂಡಿದೆ ಮತ್ತೆ ಧಡ ಧಡಿಸಿ-
ಓ ಬಂತು!. . . . . ಬಂದು ನುಗ್ಗಿತು ಗಾಡಿ
ಬಂದಂತ ಕೊನೆಗೊಮ್ಮೆ ಬೇರು ಕಿತ್ತು!
(’ಬಂದಿತೆಂದರು ಇದ್ದುದಿದ್ದೆ ಇತ್ತು.’)

ಸಾಮಾನು ಸಟ್ಟು, ಎಲ್ಲಾ ಒಳಗಿಟ್ಟು ಕುಳಿತೆಯಾ?
ಇಲ್ಲವೋ ಇಲ್ಲಿ ಜಾಗ, ಡಬ್ಬಿ ಭರ್‍ತಿ.
ಮೋಟಾರು ಬಸ್ಸೊ, ಸಿನಿಮ ಸರ್‍ಕಸ್ಸೊ, ಎಲ್ಲಿ ಹೋದರೂ
ಇದೇ ಫಜೀತಿ!
ಎಂಥ ಹುಚ್ಚನೋ ನೀನು!
ಸುಮ್ಮನೆ ದಂಗು ಬಡಿದಕೆ ನಿಂತಿ?
ಹೂಂ ಹತ್ತು, ಜೋರಾಗಿ ಆ ಕಡೆ ಒತ್ತು, ಈಗ ನಿನ್ನ ಸರತಿ.
‘ಮಹಾಜನೋಯೇನ ಗತಸ್ಸಪಂಥಾ’
ಯಾರಾದರೇನು, ತಮಗಿಷ್ಟು ಆರಾಮು ಜಾಗ ಸಿಕ್ಕರೆ ಸಾಕು-
ಸಾಕಪ್ಪ ಸಾಕು, ಕುತ್ತಿಗೆ ಹಿಡಿದು ದಬ್ಬುವುದೊಂದೆ ಬಾಕಿ!
ಎಲಾ ಅವಿವೇಕಿ,
ಗುಂಪಿನಲ್ಲೂ ನೀನು ಮಾತ್ರ ಏಕಾಕಿ!
* * *

ಇದು ಹೊರಟಿದ್ದೆ ಲೇಟು
ಬಂದು ಮುಟ್ಟಿದ್ದು ಇನ್ನೂ ಲೇಟು;
ಸುಮ್ಮನೆ ಹೊಗೆ ಬಿಡುತ್ತಿದೆ ಸಾಹೇಬರ ಬಾಯ ಚಿರೂಟು;
ಫುಸ್ಸ್….ಫುಸ್ಸ್….ಫುಸ್ಸ್….
ಉಶ್‍ಶ್….ಎಲ್ಲಿ ಸತ್ತಿತೋ ಗಾಳಿ
ಒಂದೇ ಸವನೆ ಸೆಖೆ ಕುಚ್ಚುತಿದೆ
ಬಂದ ಬೆವರೆಲ್ಲ ಇಂಗಿ ಒಳ ಅಂಗಿ ಒಣಗಿ ಒತ್ತುಗರಡಾಗಿದೆ!
‘ಸೋಡಾ ಲೆಮನ್ ಆರೇಂಜ್……’
‘ಗರಮಾ ಗರಂ ಚಹಾ…’
‘ಒಂದಾಣೆ ದಿನ ಪತ್ರಿಕೆ’
ಅರೆ, ಎಲ್ಲಿ ಹೋಯಿತು ಕೋಟಿನೊಳಗಿಟ್ಟ ಪಾಕೀಟು!
ಅದರ ಜೊತೆಗೇ ಇತ್ತು ಈಗ ತೆಗೆಸಿದ ತಿಕೀಟು,
ಐದರದೊಂದು ನೋಟು!
ನನ್ನ ಪಾಲಿಗೇ ಬರಬೇಕೆ ಇಂಥ ಪಡಿಪಾಟು!
ಅಪರೂಪಕ್ಕೆ ಭಟ್ಟಿಯಾಗಿದ್ದ ಗೆಳೆಯರಿಗೆ
ಚಹ ಕುಡಿಸಲೊಂದಾಣೆ ಉಳಿಯಲಿಲ್ಲ,
ಅವರಾದರೂ ನನ್ನ ಕರೆಯಲಿಲ್ಲ;
ಯಾವ ಡಬ್ಬಿಯನೇರಿ ಯಾರ ಡುಬ್ಬದ ಮೇಲೆ ಕುಳಿತರೋ ಯಾವ ಬಲ್ಲ!
ಕಿಟಕಿಯೊಳಗಿಂದಲೇ ಒಳಗೆ ತುರುಕಿರಬೇಕು ಅವರ ಹಮಾಲ.
ಬೆನ್ನ ಹಿಂದೆಯೆ ಬೆಕ್ಕಿನೊಲು ಬಂದು ನಿಲ್ಲುವನೀಗ ಚೆಕ್ಕರು.
ಇದ್ದುದನು ಹೇಳಿದರೆ ನಂಬಬಹುದೇ ಅವನು?
ಹಾಗು ಹೀಗೂ ಜಡಿದು ವಸೂಲು ಮಾಡದೆ ಬಿಡನು.
ಇಲ್ಲಿ ಗದ್ದಲದಲ್ಲಿ ಕಣ್ಣು ತಪ್ಪಿಸಿ ನುಸುಳಿ ಪಾರಾಗಬಹುದು-
ಅಲ್ಲಿ ಏನೋ ಎಂತೊ
ನಾನಿಳಿವ

ಕೊನೆಯ ನಿಲ್ದಾಣದಲ್ಲಿ!
(ಜಪ್ತು ಮಾಡಿದರೆ ಮಾಡಲಿ, ನನ್ನ ಕಿಸೆಯಲ್ಲ ಖಾಲಿ.)

* * *

ಇದು ದೊಡ್ಡ ನಿಲ್ದಾಣ ಕೂಟ
ಇಲ್ಲಿಂದಲೇ ಹೊರಟು ಇಲ್ಲಿಗೇ ಬಂದು ಕೂಡುವವೆಲ್ಲ ಕಡೆಯ ಗಾಡಿ;
ದೇಹಾದ್ಯಂತ ಸಂಚರಿಸಿ ಪುಪ್ಪಸಕೆ ಹರಿವಂತೆ ರಕ್ತನಾಡಿ.
ನಮ್ಮ ಗಾಡಿಗೆ ಏನು ಬಂತೊ ಧಾಡಿ-
ನಿಂತು ನಿಂತಲ್ಲಿಯೇ ಗೊರಕೆ ಹೊಡೆಯುತ ಮಲಗಿಬಿಡುವ ರೂಢಿ.
ಎಲ್ಲಿ ಹೋದನೋ ಪುಣ್ಯಾತ್ಮ ಗಾರ್‍ಡ
ತ್ರಿಶಂಕುವಿನಂತೆ ನಮ್ಮಲ್ಲಿಯೆ ಬಿಟ್ಟು; ಕೈಯಲ್ಲಿ ತಾಳಕೊಟ್ಟು
ಕುಣಿಯ ಹಚ್ಚಿದನಲ್ಲ, ಇವನೊಬ್ಬ ದೊಡ್ಡ ಕೀರ್‍ತನಕಾರನೇ ಥೇಟು!
ಆಕಳಿಸಿ, ತೂಕಡಿಸಿ, ಓಕರಿಸಿ ಸಾಕಾಯ್ತು ಮೂಗು ತಿಕ್ಕಿ!
ಒಬ್ಬರ ಮೇಲೊಬ್ಬರು ಹತ್ತಿ ಹತ್ತಿಕ್ಕಿ ಹತ್ತಿಯಂಡಿಗೆಯಂತೆ
ತುಳಿಯುತ್ತಿಹರು-
ಹೊಡೆಯಬಾರದೆ ಗಂಟೆ
ಊದಬಾರದೆ ಸೀಟಿ!
ಊರುಳಬಾರದೆ ಒಮ್ಮೆಲೇ ನೂರು ಗಾಲಿ!
“ಉಧೋ ಉಧೋ ಒಳಗಿದ್ದ ಬೆಳಕೆ ಬೆಳಕೇ
ಉಧೋ ಉಧೋ ಹೊರಗೆ ಬಾ ಏಕೆ ಬಳಕೆ!”

ಧಡಗ್…ಗಡಗ್…ಧಡಗ್…ಗಡಗ್…
ಇದ್ದ ಶಕ್ತಿಯನೆಲ್ಲ ಒಟ್ಟುಗೂಡಿಸಿ ಮುಂದಕೆಳೆಯಿತೆಂಜಿನ್ನು
ಒಂದೊಂದೆ ಸುತ್ತು ಎಣಿಸುತ್ತ ಉರುಳಿದವು ಗಾಲಿ,
ಉಸಿರಾಡಿಸಿತು ಗಾಳಿ.
ಸಾಗಿದವು ಡಬ್ಬಿ ಹೊಯ್ದಾಡುತ್ತ ಒಂದರ ಹಿಂದೆ ಒಂದು…
ದೊಡ್ಡ ಸಂಸಾರಕ್ಕೆ ಒಬ್ಬನೇ ದುಡಿಯುವವ
ಹಬ್ಬಿ ಬೆಳೆದಿದೆ ಬಳಗ ತೂಗು ತೊಟ್ಟಿಲವಾಗಿ, ಬೆಳ್ಳಿ ಬಟ್ಟಲವಾಗಿ
ಒಂದಕ್ಕೆ ಹತ್ತಾಗಿ ಹತ್ತು ನೂರಾಗಿ!
ವರುಷ ವರುಷಗಳೆಷ್ಟೊ ಗತಿಸಿದವು ಹೀಗೆಯೇ ಹಳಿಗುಂಟ ಸಾಗಿ.
ಜಗ್ ಜಗ್ ಝುಕು ಝುಕು
ಜಗ್ ಜಗ್ ಝುಕು ಝುಕು ಜಗ್ ಜಗ್….
ಓಹೋ! ಕುಣಿಯಲೂ ಬಲ್ಲುದೀ ಗಾಡಿ ಒಮ್ಮೊಮ್ಮೆ ಉನ್ಮಾದಗೂಡಿ.
ಒಳ್ಳೆ ಪ್ರಾಯದ ಮೋಡಿ;
ಹತ್ತಿದಿಬ್ಬವ, ಸಿಳ್ಳು ಹೊಡೆದು, ಹುಬ್ಬನು ಕುಣಿಸಿ
ಹಸಿರ ಸೆರಗನು ಜಗ್ಗಿ ಸರಸವಾಡಿ
ಸೇತುವೆಯನೊತ್ತಿ ಮುತ್ತಿಟ್ಟು ಆಲಿಂಗಿಸುತ
ಕಣಿವೆ ಕಂದರಗಳಲ್ಲಿ ಕಟ್ಟಾಡಿಸಿ-
ಜಗ್…ಜಗ್…ಝುಕು…ಝುಕು
ಜಗ್…ಜಗ್…
ಕೊಂಚ ಮುಗ್ಗರಿಸಿತ್ತು ಗಾಡಿ, ಬಿತ್ತು ಬ್ರೇಕು!
ಅಂತು ಇಂತೂ ಕೊನೆಗೆ ಬಂದು ಮುಟ್ಟಿತು ಇನ್ನೂ ಬಂತು ನಿಲ್ದಾಣ;
ನಿಟ್ಟುಸಿರುಗರೆದು ನಿಂತಿತೋ ಆಗಿ ನಿತ್ರಾಣ;
ಹತ್ತುವರು ಇಳಿಯುವರು ಮುತ್ತಿ ಮುಗಿ ಬೀಳುವರು
ಮತ್ತೆ ನಿನ್ನಂಥವರು ಎಷ್ಟೋ ಜನ!
ಎಡಬಲದ ಗಿಡಮರಗಳೋಡಿ ಡಿಕ್ಕಿಯ ಹೊಡೆದು,
ಗಿರಿದರಿಗಳೆಲ್ಲ ಗರ ಗರ ತಿರುಗಿ, ಎಲ್ಲಿಗೋ ಬೀಸಿ ಒಗೆದು,
ಗಕ್ಕನೆ ಜೇನು ಜಗ್ಗಿ ನಿಲ್ಲಿಸಿದಂತೆ ಬಹುದೂರ ನೆನಪು-
ಇಡಿಯ ಹಾಡಿನಲಿ ಎದೆಯ ಮಿಡಿದಂತೆ ಯಾವುದೋ ಒಂದು ಚರಣ,
ಇರಲಿ; ಹೊತ್ತಾಯ್ತು ಮತ್ತೇಕೆ ಆ ಎಲ್ಲ ಹಳೆ ಪುರಾಣ?
ಹೂರು ನಿನ್ನ ಹೋಲ್ಡಾಲು
ಹಿಡಿದುಕೋ ಕೈ ಚೀಲ
ಇಳಿದು ಬಿಡು ಸಾವಧಾನ.
ಜಗ್…ಜಗ್…ಜಗ್…ಜಗ್…
ಚಲಿಸುತ್ತಿವೆ ಗಾಲಿ,
ಮತ್ತೆ ಎಲ್ಲಿಂದಲೋ ಬಂತು ತ್ರಾಣ
ಎಲ್ಲಿಹುದೊ, ಈ ಇದರ ಕೊನೆಯ ನಿಲ್ದಾಣ?!
*****