ಅಲರ್‍ಜಿ

ಈ ಅಲರ್‍ಜಿ
ಯ ಮರ್‍ಜಿ
ಕಾಯುವದು ಎಷ್ಟು
ಅಯ್ಯೋ ಎಷ್ಟು ಕಷ್ಟ
ಪುಷ್ಪ ಪರಾಗ ಸೋಪು ನೊರೆ
ಹಬೆ ಹಬೆ ಉಪ್ಪಿಟ್ಟು ಹೀಗೆ
ಬಿಸಿಲು ಹಾಗೆ ಚಳಿ
ಮಳೆ ಅಂತ
ದೋಸ್ತ ದೋಸ್ತಿಯರ ಮಧ್ಯ
ನುಗ್ಗಿ ಕೊಚ್ಚುವ ದಿಕ್ಕು
ತಪ್ಪಿದ ಅಲರ್‍ಜಿಗೆ

ಅರ್‍ಜಿ ಬೇಡ.
ದುಃಖ ಸಹಿಸಲಾರೆ ಅಂದೆ ಅಂತ
ಸುಖ ಜಾಸ್ತಿ ಕೊಟ್ಟೆಯೋ
ನನ್ನ ಸೂಕ್ಷ್ಮಗಳು ಜಡ್ಡು ಹಿಡಿದು
ಜ್ವರ ಬರುತ್ತದೆ…. ಅವಳ ನೆನಪಿಗೆ
ಅನೀಮಿಯಾ – ನನ್ನ ನೆನಪಿಗೆ ಕ್ಷಯ
ಅಕ್ಷಯ

ಬದುಕು ಹೀಗೆ
ಬಾ ಹೀಗೆ ಬಾ ಮೆಲ್ಲಗೆ
ಅನ್ನುತ್ತ ಹಗೂರ ಕರೆದೊಯ್ದು
ಗಡಿಯಾರದ ಮುಳ್ಳಿನ ತುದಿಗೆ
ನಿಲ್ಲಿಸಿ
ಬಿಡುತ್ತದೆ

ಅಲ್ಲ
ಕವಿತೆ
ಯಾವ ಅಲರ್‍ಜಿಯ
ಲಕ್ಷಣ?
*****