ಕರಿವೇಮಲದ ವೆಂಗಳರೆಡ್ಡಿಯನ್ನು ನೋಡಬೇಕೆಂಬ ನನ್ನ ಆಸೆ ಇನ್ನೊಂದೆರಡು ತಿಂಗಳಿಗೆ ದಶಮಾನೋತ್ಸವ ಆಚರಿಸುತ್ತದೆ.
ನಾನು ಯಾವತ್ತು ಈ ಪವಿತ್ರ ಕೆಲಸಕ್ಕೆ ಸೇರಿದೆನೋ ಆವತ್ತಿನಿಂದಲೇ ಈ ಪ್ರಸಿದ್ಧ ಜಮೀನ್ದಾರರ ಬಗ್ಗೆ ತಲೆ ಕೆಡಿಸಿಕೊಂಡೆ. ನಾನು ವಾಸಕ್ಕಿದ್ದ ಮನೆಯ ಮಾಲಿಕ ಕುರುವ ಗುರಪ್ಪನಂತೂ ಪ್ರತಿನಿತ್ಯ ಒಬ್ಬರಲ್ಲಾ ಒಬ್ಬ ಜಮೀನ್ದಾರನ ಕಥೆ ಹೇಳಿದ್ದೇ ಹೇಳಿದ್ದು; ಆಸ್ಪರಿ ತಮ್ಮಾರೆಡ್ಡಿ, ತಂಗರಡೋಣಿನ ಜಮೀನ್ದಾರ ಸುಬ್ಬರಾವುನ ಧರ್ಮಪತ್ನಿಯನ್ನು ಇಟ್ಟುಕೊಂಡದ್ದು; ವೀರಾಪುರದ ವೀರಾರೆಡ್ಡಿ ತನ್ನ ಬದ್ಧ ವೈರಿ ಬಿಳೆಕಲ್ಲಿನ ಭೀಮಾರೆಡ್ಡಿಯನ್ನು ನಿಗ್ರಹಿಸಿದ್ದು; ಉರುವಕೊಂಡದ ಬಸವನಗೌಡ ಗೊನಗೊಂಡ್ಲದ ರಾಮರೆಡ್ಡಿಯ ಕೊಲೆ ಮಾಡಿ ದಕ್ಕಿಸಿಕೊಂಡದ್ದು, ಹೀಗೆ ಒಂದಲ್ಲಾ ಒಂದು ಕಥೆಯನ್ನು ಆತ ದಿನ ನಿತ್ಯ ಹೇಳಿದ್ದೇ ಹೇಳಿದ್ದು. ಗುರಪ್ಪ ತಾನು ಹೇಗೆ ಎಂಟೆಕರೆ ಗದ್ದೆಗೆ ಮಾಲಿಕನಾದೆನೆಂಬುದರ ಬಗೆಗೂ ಸ್ವಾರಸ್ಯಪೂರ್ಣ ಮಾಹಿತಿ ನೀಡುತ್ತಿದ್ದ. ಪ್ರತಿಯೊಂದನ್ನೂ ಯಾವುದೇ ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದ. ಹೇಳುವಾಗಲೂ ಅಷ್ಟೆ, ಯಾವುದೇ ಮುಚ್ಚುಮರೆ ಎಂಬುದು ಇರುತ್ತಿರಲಿಲ್ಲ. ತನ್ನ ಬಗ್ಗೆ ಹೇಳುತ್ತಿದ್ದರೂ ಭೂ ಲೋಕದ ಯಮ ದೂತರ ಬಗ್ಗೆ ಹೇಳುತ್ತಿರುವನೇನೋ ಎಂಬ ಭ್ರಮೆ ಹುಟ್ಟಿಸುತ್ತಿದ್ದ. ಆತ ನೋಡಲಿಕ್ಕೆ ಹಲವು ಮೃಗಗಳಿಂದ ಮಾಡಲ್ಪಟ್ಟಿರುವನೇನೋ ಎಂಬಂತಿದ್ದರೂ ಆತನೊಳಗೆ ಮಗುವಿನ ಹೃದಯವೊಂದು ಕೆಲಸ ಮಾಡುತ್ತಿತ್ತು. ಹೊರಗಿನ ಜನರೂ ಅವನ ಬಗ್ಗೆ ಏನೇನೋ ಕಥೆ ಕಟ್ಟಿ ಹೇಳುತ್ತಿದ್ದರು. ಕೆಲವರಂತೂ, ಅದರಲ್ಲೂ ದನ ಮಾರೋ ಲಕ್ಷ್ಮೀರೆಡ್ಡಿ “ಮೇಸ್ಟ್ರಾದ ನಾನು ಈ ವಾರ ಕೊಲೆಯಾಗಿ ಬಿಡಬಹುದು; ಮುಂದಿನ ವಾರ ಖಂಡಿತ ಕೊಲೆಯಾಗಬಹುದು” ಎಂದು ದಿನಗಳನ್ನು ಎಣಿಸುತ್ತಿದ್ದ. ನಾನು ಏಳೆಂಟು ದಿನ ಕಾಣದಿದ್ದಾಗ ನನ್ನ ಹೆಣ ಆ ಪೊದೆಯಲ್ಲಿರಬಹುದು; ಈ ವಕ್ರಾಣಿಯಲ್ಲಿರಬಹುದು ಎಂದು ಆತ ಸಹಜ ರೀತಿಯಲ್ಲಿ ಯೋಚಿಸುತ್ತಿದ್ದ. ತಾನು ಹಾಗೆ ಯೋಚಿಸುತ್ತಿದ್ದುದನ್ನು ನಿರ್ಭಿಡೆಯಿಂದ ಪ್ರಕಟಿಸಿಬಿಡುತ್ತಿದ್ದ. ದಿಢೀರನೆ ನಾನು ಕಾಣಿಸಿಕೊಂಡಾಗಂತೂ ನನ್ನ ನೋಡಿ ದಿಗ್ಭ್ರಮೆಗೊಳ್ಳುತ್ತಿದ್ದ. ‘ಅರೆ ನೀವಿನ್ನೂ ಸತ್ತೇ ಇಲ್ಲವಲ್ಲಾ’ ಎಂಬಂತೆ ನೊಡುತ್ತಿದ್ದ. ಗ್ರಾಮದ ಕೆಲವರಂತೂ ಆತನ ಆಲೋಚನೆಗಳನ್ನು ಜಾರಿಯಾಗುವಂತೆ ನೋಡಿಕೊಳ್ಳಲು ಚಾಡಿ; ಟೊಂಗು-ಟುಸುಕು, ಮೊದಲಾದ ಅಸ್ತ್ರ ಪ್ರಯೋಗಿಸುತ್ತಿದ್ದರು. ಗುರಪ್ಪನಿಗೂ ನನಗೂ ನಡುವೆ ವೈಮನಸ್ಸು ಮೂಡಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದರು. ಹಳೇಕೋಟೆ ವೀರಭದ್ರ ದೇವರೇ ಮಾನವ ವೇಷ ಧರಿಸಿ ತನ್ನ ಮನೆಯಲ್ಲಿ ವಾಸಿಸುತ್ತಿದೆ ಏನೋ ಎಂಬಂತೆ ಭಾವಿಸಿದ್ದ ಆತ ಊರವರ ಯಾವ ಅಸ್ತ್ರವನ್ನೂ ಕಿವಿ ಬಳಿಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಕೆಲವು ಚಾಡಿಕೋರರನ್ನು ಕೆಂಗಣ್ಣಿನಿಂದಲೂ, ಕೆಲವು ಚಾಡಿಕೋರರನ್ನು ಮುಗುಳು ನಗೆಯಿಂದಲೂ, ಮತ್ತೆ ಕೆಲವು ಚಾಡಿಕೋರರನ್ನು ನಾಲಿಗೆಯಿಂದಲೂ ನಿವಾರಿಸಿಬಿಡುತ್ತಿದ್ದ. ಆತಗೆ ನಾನೆಂದರೆ ಸರಿಸಾಟಿಯಿಲ್ಲದ ಗೌರವ. ನಾನು ಶೌಚಕ್ಕೆ ಹೊರಟೆನೆಂದರೆ ತಂಬಿಗೆ, ಕಂದೀಲು ಹಿಡಿದುಕೊಂಡು ಮುಂದೆ ಹೋಗುತ್ತಿದ್ದ . ನಾನು ಮಲಗುವಾಗ ಯಾವುದೇ ಹುಳು ಹುಪ್ಪಡಿ ಬಳಿ ಸುಳಿಯದ ಹಾಗೆ ಕಾವಲಿರುತ್ತಿದ್ದ. ನಾನು ನಿದ್ದೆ ಮಾಡುತ್ತಿರುವಾಗ ಬೊಗಳಿ ಸದ್ದು ಮಾಡುತ್ತಿದ್ದ ನಾಯಿಗಳನ್ನು ಓಣಿಯಿಂದ ಆಚೆ ಓಡಿಸುತ್ತಿದ್ದ. ಆತ ಯಾಕೆ ಇಷ್ಟು ಪ್ರೀತಿಸುತ್ತಿರುವನೆಂದು ನಾನು ಯೋಚಿಸಿರದೆ ಇರಲಿಲ್ಲ. ಅದು ಇಂಥದೇ ಕಾರಣವೆಂದು ಊಹಿಸುವುದು ಸಾಧ್ಯವಿರಲಿಲ್ಲ.
ಆತನ ಮಕ್ಕಳಾದ ಸಿದ್ದಪ್ಪ; ಶಿವಪ್ಪ ಇಡೀ ಶಾಲೆಗೇ ಜಾಣರಿದ್ದುದು ಇರಬಹುದು. ಅಥವಾ ಆತನನ್ನು ನಾನು ಬಹುವಚನದಿಂದ ಸಂಬೋಧಿಸುತ್ತಿದ್ದುದಿರಬಹುದು; ಅಥವಾ ಆತನಿಗೆ ಚಾವಡಿ ಕಟ್ಟೆ ಮೇಲೆ ಸಾರ್ವಜನಿಕವಾಗಿ ಕೂಡ್ರಬಹುದಾದಂಥ ಸಾಮಾಜಿಕ ಧೈರ್ಯವನ್ನು ನಾನು ತುಂಬಿದುದಿರಬಹುದು! ಆತನನ್ನು ಎದುರಿಗೆ ಕೂಡ್ರಿಸಿಕೊಂಡು ಮಾವೊ; ಸ್ಪಾರ್ಟಾಕಸ್ ಚೇ ಗುವೆರಾರೇ ಮೊದಲಾದವರ ಸಾಹಸಪೂರ್ಣ ಕಥೆಗಳನ್ನು ಹೇಳಿದುದಿರಬಹುದು; ಅಥವಾ ನಾನು ಇತರೇ ಮೇಸ್ಟ್ರುಗಳಂತೆ ಹಳ್ಳಿಯೊಳಗೆ ತುಡುಗು ದನದೋಪಾದಿಯಲ್ಲಿ ಅಲೆಯದೆ ಕೋಣೆಯೊಳಗೇ ಗೂಬೆ ತರಹ ಕುಕ್ಕುರು ಬಡಿದು ಅದು ಇದು ಓದುತ್ತ; ಇದು ಅದು ಬರೆಯುತ್ತ ಕಾಲಕ್ಷೇಪ ಮಾಡುತ್ತಿದ್ದುದಿರಬಹುದು; ಅಥವಾ ಸ್ಕೂಲೆಂದರೆ ಕೇವಲ ಮೇಲ್ವರ್ಗದವರ ಮಕ್ಕಳಿಗಷ್ಟೇ ಮೀಸಲಿದ್ದುದನ್ನು ಹೋಗಲಾಡಿಸಿ ಗ್ರಾಮದ ಎಲ್ಲ ಶೂದ್ರರ ಮಕ್ಕಳನ್ನು ಸ್ಕೂಲಿಗೆ ದಾಖಲು ಮಾಡಿಕೊಂಡುದಿರಬಹುದು. ಆತನ ಪ್ರೀತಿ ಕೇವಲ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಮೇಲ್ವರ್ಗದವರ; ಜಮೀನ್ದಾರರ ವಿರೋಧವನ್ನು ಪರೋಕ್ಷವಾಗಿ ಕಟ್ಟಿಕೊಂಡ ಮೆಲೆ ಅದನ್ನು ಲೀಲಾಜಾಲವಾಗಿ ಎದುರಿಸಲು ದೇಹವನ್ನೂ ಸಮರ್ಥವಾಗಿ ಇಟ್ಟುಕೊಳ್ಳಬೇಕೆಂದು ಹೇಳುತ್ತಿದ್ದ. ಪ್ರತಿ ಎಂಟು ದಿನಕ್ಕೊಮ್ಮೆ ನನಗೆ ಊಟಕ್ಕೆ ಯಾವುದಾದರೊಂದು ಪ್ರಾಣಿಯ ಬಾಡು ತಂದುಕೊಡುತ್ತಿದ್ದ. ದಿನ ನಿತ್ಯ ಎರಡು ತಂಬಿಗೆ ಹಾಲು ಕುಡಿಯಲು ಹೇಳುತ್ತಿದ್ದ. ಬಸ್ಕಿ ಹೊಡೆಯಲು, ಸಾಮು ಮಾಡಲು ಒತ್ತಾಯಿಸುತ್ತಿದ್ದ. ರಾಮದೇವರ ಗುಡಿ ಮುಂದೆ ಅನಾಥವಾಗಿ ಬಿದ್ದಿರೋ ಚಪ್ಪರ ಚನ್ನಪ್ಪನ ಗುಂಡು ಎತ್ತಲು ಪುಸಲಾಯಿಸುತ್ತಿದ್ದ. ಗ್ರಾಮದ ಕೆಲವು ತರುಣಿಯರು ನನ್ನ ಕಡೆ ಆಸೆಗಣ್ಣಿನಿಂದ ನೋಡುತ್ತಿದ್ದುದನ್ನು ಗಮನಿಸಿ ಒದ್ದೆ ಕಾಚ ಧರಿಸುವಂತೆ ಸಲಹ ನೀಡುತ್ತಿದ್ದ. “ಚಿಗ್ವಾಟಿ ಗುಡ್ಡದಲ್ಲಿ ಚಿರತೆ ಸೇರ್‍ಕೊಂಡು ಗ್ರಾಮದವರಿಗೆಲ್ಲ ಲುಕ್ಸಾನು ಮಾಡ್ತಿದೆಯಂತೆ, ಹೋಗಿ ಬೇಟೆ ಆಡ್ಕೊಂಡು ಬರೋಣ ಬನ್ನಿ” ಎಂದು ನನ್ನನ್ನು ಕರೆದೊಯ್ದು ಗವಿಯೊಳಗಡೆ ನನ್ನನ್ನು ಗದುಮಿ ಹೊರಗಡೆ ತಾನು ಕಾಯುತ್ತ ನಿಂತುಕೊಂಡಿದ್ದ. ಒಳಗಡೆ ಚಿರಗೆ ಎಲ್ಲೂ ಇಲ್ಲ ಅಂತ ನಾನು ವಾಪಸು ಬಂದೊಡನೆ ಶಹಭಾಷ್ ಎಂದು ಬೆನ್ನು ತಟ್ಟಿದ. ಹೀಗಾಗಿ ನಾನು ಎತ್ತರಕ್ಕೆ ಸರಿಯಾಗಿ ಮೈ ಬೆಳಸಿಕೊಂಡೆ. ನಾನು ನನಗೆ ಬೇಕಾದುದರ ಕುರಿತು ಎಂದೂ ಪ್ರಾರ್ಥಿಸಿದುದಿಲ್ಲ. ಆಜ್ಞೆ ಮಾಡುತ್ತಿದ್ದೆ…. ತೋಳಿನ ಮತ್ತು ಎದೆಯ ಮಾಂಸಖಂಡಗಳನ್ನು ಸ್ವಲ್ಪ ಮಟ್ಟಿಗೆ ಪ್ರದರ್ಶಿಸುತ್ತಿದ್ದೆ. ಅದೂ ತುಂಬ ಸಂಕೋಚದಿಂದ ಹೀಗೆ ನಾನು ಬೆಳೆದುದಕ್ಕೆ ಕಾರಣ ಗುರಪ್ಪ ಹೇಳುತ್ತಿದ್ದ ಜಮೀನ್ದಾರರ ಕಥೆಗಳೂ ಇರಬಹುದು. ಜಮೀನ್ದಾರರ ಆಶ್ರಯದಲ್ಲಿರುತ್ತಿದ್ದ ಅಕಬರು; ಹುಸೇನಿ; ಸೇಕ; ವಂಕಟರಂಥವರ ವ್ಯಕ್ತಿತ್ವ ಇರಬಹುದು.
ನಾನು ಗುರಪ್ಪನೊಂದಿಗೆ ಒಮ್ಮೆ ಪತ್ತಿಕೊಂಡಕ್ಕೆ ಹೋಗಿದ್ದೆ. ಅಲ್ಲಿ ಆತನ ಮೇಲೆ ಕೊಲೆ ಆಪಾದನೆಯ ವಿಚಾರಣೆ ಮುನಸೋಬ ಕೋರ್ಟಿನಲ್ಲಿತ್ತು. ಆತನ ವಿರುದ್ಧದ ಮಸಲತ್ತುಗಾರರೆಲ್ಲ ನನ್ನ ಕಡೆ ನೋಡಿ ಈತನಾರೋ ದೊಡ್ಡ ಜಮೀನುದಾರನಿರಬೇಕೆಂದು ನನ್ನ ಭಾವಿಸಿದರು. “ಮೇಸ್ಟ್ರೇ ನೀವು ನನ್ನ ಜೊತೇಲಿರೋದು ಅಪಾಯ…. ನನ್ ಕೊಲೆ ಮಾಡೋಕೆ ಹೋಗಿ ನಿಮ್ಮ ಕೊಲೆ ಮಾಡಿಬಿಡಬಹುದವರು. ನೀವು ಬಸ್ ಸ್ಟ್ಯಾಂಡ್ ಕಡೆ ಹೋಗಿ ಬಿಡ್ರಿ” ಎಂದರೂ ನಾನು ಕೇಳಿಲಿಲ್ಲ. ಚಿರತೆ ಗವಿಯೊಳಗೆ ಲೀಲಾಜಾಲವಾಗಿ ಹೋಗಿ ಬಂದ ನನಗೆ ಆ ಚಿಳ್ಳೆಪಿಳ್ಳೆಗಳು ಯಾವ ಲೆಕ್ಕ! ಕೊಲೆ ಮಾಡುವುದೆಂದರೇನು ಸವತೆಕಾಯಿ ಹೆಚ್ಚಿದಂತೆ ಸುಲಭವೇನು? ಅವರು ನನ್ನ ಮೈಗೊಡವೆಗೆ ಬಂದಾಗ ತಾನೆ ಅದೆಲ್ಲ! ನಾನು ಆ ಪಾಟೀದಾರರತ್ತ ಮುಗುಳುನಗೆಯನ್ನು ಕಣ್ಣುಗಳಿಗೆ ಲೇಪಿಸಿಕೊಂಡು ನೋಡುತ್ತಿದ್ದೆ. ಅದಕ್ಕೆ ಅವರು ಪ್ರತಿಯಾಗಿ ತಂತಮ್ಮ ಮುಖಗಳನ್ನು ಅಗ್ಗಿಷ್ಟಿಕೆ ಮಾಡಿಕೊಂಡು ನನ್ನ ಕಡೆ ನೋಡುತ್ತಿದ್ದರು.
ಚಲ್ಲಣದ ದೊಡ್ಡ ಜೀಬಿನ ತುಂಬ ನಾಡ ಬಾಂಬುಗಳನ್ನು ಇಟ್ಟುಕೊಂಡೇ ಗುರಪ್ಪ ಕೋರ್ಟಿನಲ್ಲಿ ಮುನಸೋಬರ ಎದುರು ವಿಚಾರಣೆ ಎದುರಿಸಿ ಹೊರ ಬಂದ. ಹೊರಗಡೆ ಬರುತ್ತಲೇ ಉಪಪತ್ನಿಯರಂತೆ ಬಂದ ಪೊಲೀಸರ ಕೈಯಲ್ಲಿ ತಲಾ ಇಷ್ಟಿಷ್ಟು ಅಂತ ಇರಿಸಿದ. ಸಬ್‌ಇನ್ಸ್‌ಪೆಕ್ಟರಿಗೆ ಒಂದು ಸಿಗರೇಟು ಪ್ಯಾಕು ಕೊಡಿಸಿ, ಎರಡು ಚೀಲ ಸೋನಾ ಮಸೂರಿ ಅಕ್ಕಿಯನ್ನು ನಾಡಿದ್ದು ಮನೆ ಮುಟ್ಟಿಸುವುದಾಗಿ ಪಿಸುನುಡಿದ. ಹೋಗುವಾಗ ನಿಂತ ಜೀಪಿನ ಕಿಟಕಿ ಮೂಲಕವೇ ತಲೆ ಹೊರಚಾಚಿದ ಸರ್ಕಲ್ ಇನ್ಸ್‌ಪೆಕ್ಟರು, “ಪರವಾಗಿಲ್ಲಯ್ಯಾ ಸರ್ತಿಗೆ ಎರಡೂವರೆ ಲೀಟರು ಹಾಲು ಕೊಡುವ ಎಮ್ಮೆಯನ್ನೇ ಕಳಿಸಿದ್ದೀಯಾ,” ಎಂದು ಮೆಚ್ಚುಗೆ ವ್ಯಕ್ತಪಸಿದರು.
ನೋಡಲಿಕ್ಕೆ ಗಿಡ್ಡಗಿದ್ದ ಗುರಪ್ಪ ಕೋಟೆಗಿಂತ ಬಲಿಷ್ಠವಾದ ಮಾಂಸಖಂಡಗಳನ್ನು ಪಡೆದಿದ್ದ. ಜಿಂಕೆಗಿಂತಲೂ ವೇಗವಾಗಿ ಓಡುವಂಥ ಚುರುಕುತನವನ್ನು ರೂಢಿಸಿಕೊಂಡಿದ್ದ. ಅವನೇ ನನ್ನ ಬಾಡಿಗಾರ್ಡನೆಂದು ನೋಡುವವರು ಅಪಾರ್ಥ ಮಾಡಿಕೊಳ್ಳುತ್ತಿದ್ದರು. ಹಾಗಿತ್ತು ನಮ್ಮ ಜೋಡಿ. ಆದ್ದರಿಂದ ಯಾರೂ ನಮ್ಮ ಮೇಲೆ ಅಷ್ಟು ಸಲೀಸಾಗಿ ಬಾಂಬು ಪ್ರಯೋಗಿಸುವುದಾಗಲೀ, ಎದುರು ಕಟ್ಟಿಕೊಳ್ಳುವುದಾಗಲೀ ಸಾಧ್ಯವಿರಲಿಲ್ಲ.
ನಾವಿಬ್ಬರು ಬಸ್ ನಿಲ್ದಾಣವೆಂಬ ಬಸ್ ನಿಲ್ದಾಣವನ್ನು ತಲುಪಿದಾಗ ಸಾಯಂಕಾಲದ ಸೂರ್ಯ ತನ್ನ ಕಸುವು ಕಳೆದುಕೊಂಡಿದ್ದ. ನಾವು ಪಯಣಿಸಬೇಕಿದ್ದ ಬಸ್ಸನ್ನು ದೇವನಕೊಂಡದಾಚೆ ತಡೆದು ದೋಚಲಾಗಿದೆ ಎಂಬ ಸುದ್ದಿ ಬಂತು. ಪೊಲೀಸರ ಪಂಚನಾಮೆಯಾದ ನಂತರವೇ ಅದು ಹೊರಟು ಬರುವುದು! ಅಲ್ಲಿವರೆಗೆ ಕಾಯದೆ ಬೇರೆ ದಾರಿ ಇರಲಿಲ್ಲ. ದೋಚಲು ಪೊಲೀಸರೇ ಕೆಲವರನ್ನು ಕಳಿಸುತ್ತಾರೆಂದೂ; ದುಡಿಯುವ ಕೈಗಳಿಗೆ ಕೆಲಸವಿರಿದ್ದಾಗ ಜನ ದೋಚದೆ ಏನು ಮಾಡುತ್ತಾರೆಂದೂ; ಏನು ಇಲ್ಲದವರು ಬಹಳ ಇರುವವರನ್ನು ದೋಚುವುದರಲ್ಲಿ ತಪ್ಪೇನು ಎಂದೂ ಜನ ನಮ್ಮ ಅಕ್ಕಪಕ್ಕ ಮಾತಾಡುತ್ತಿದ್ದುದು ತುಂಬ ಆಸಕ್ತಿದಾಯಕವಾಗಿತ್ತು. ನೋಡಲು ತುಂಬ ಮುಗ್ಧರಂತೆ ಕಾಣುತ್ತಿದ್ದ ಜನ ತಮ್ಮ ಮಾತಿನ ಕುಣಿಕೆಯನ್ನು ಮಂಡಲ ಅಧ್ಯಕ್ಷನಿಂದ ಹಿಡಿದು ರಾಜ್ಯದ ಮುಖ್ಯಮಂತಿರಿವರೆಗೆ; ದೇಶದ ಪ್ರಧಾನಮಂತ್ರಿಯಿಂದ ಹಿಡಿದು ಅಮೆರಿಕಾ ಅಧ್ಯಕ್ಷನವರೆಗೆ ಹರಿದಾಡಿಸುತ್ತಿದ್ದರು. ಅವರು ಯಾವುದೇ ಸಮಾಜಶಾಸ್ತ್ರಜ್ಞನಿಗಿಂತ ಕಡಿಮೆ ಇರದಿದ್ದುದು ಕಂಡು ನನಗೆ ಅತೀವ ಸಂತೋಷವಾಯಿತು.
ಅಷ್ಟರಲ್ಲಿ ಯಾರೋ ದೈತ್ಯನಂತೆ ಕಾಣುತ್ತಿದ್ದ ಓರ್ವ ತ್ರಿವಿಕ್ರಮನಂತೆ ನಡೆಯುತ್ತ ಬಂದು ಅಡ್ನಾಡಿ ತೆಲುಗಿನಲ್ಲಿ ಮಾತಾಡಿದನು. ಕರಿವೇಮಲ ವೆಂಗಳರೆಡ್ಡಿಯ ಪರಿಚಯ ಮಾಡಿಕೊಡ್ತೀನಿ ಬರ್‍ತೀರಾ ಎಂದು ನನ್ನನ್ನು ಕೇಳಿದನು. ಅದು ನನ್ನ ಬಹಳ ದಿನದ ಆಸೆ, ನಿರಾಕರಿಸುವೆನೇನು? ಒಪ್ಪಿಕೊಂಡು ಹಿಂದೆ ಹೊರಟೆ. ಆ ಸಂದಿಗೆ ಬಿದ್ದು ಈ ಸಂದಿಯಲ್ಲಿ ಎದ್ದು ಸುತ್ತಿ ಬಳಸಿ ಅಂತೂ ಒಂದು ಮನೆ ಮುಟ್ಟಿದೆವು. ಅದು ರೆಡ್ಡಿಯ ಹನ್ನೆರಡನೆ ಪ್ರೇಯಸಿ ಚಂದ್ರಿಯ ಮನೆ. ಅಂಗಳದಲ್ಲಿ ಜೀಪು ನಿಂತಿತ್ತು. ದೈತ್ಯರ ಅಪರಾವತಾರದಂತಿದ್ದ ಜನ ಅಲ್ಲಲ್ಲಿ ಕಡೆದ ಶಿಲ್ಪದಂತೆ ನಿಂತಿದ್ದರು. ಅವರೆಲ್ಲ ಕಣ್ಣಿಂದಲೇ ಕೊಲೆ ಮಾಡಬಲ್ಲವರಂತೆ ಪಿಳುಕೂ ಪಿಳುಕೂ ನೋಡುತ್ತಿದ್ದರು. ಅವರಿಗೆಲ್ಲ ಗುರಪ್ಪ ಚಿರಪರಿಚಿತ ನಿದ್ದ. ಆದ್ದರಿಂದ ನನ್ನ ಶೋಧ ಮಾಡಲಿಲ್ಲ. ಯಾರೋ ಒಬ್ಬ “ಮಾಮನುವ್ವ ಇಕ್ಕಡ ಉಂಡು” ಎಂದು ಹೇಳಿ ಹೋಗಿ ಬಂದ. ನಂತರವೇ ಗುರಪ್ಪನೊಂದಿಗೆ ಹೊರಟಿದ್ದು.
ಮನೆ ನಿರೀಕ್ಷೆಗಿಂತ ತುಂಬ ದೊಡ್ಡದೂ; ವಿಶಾಲವಾದುದೂ ಆಗಿತ್ತು. ನಡೆಯುತ್ತ ನಡೆಯುತ್ತ ಹೋದಂತೆ ಹಾರ್ಮೋನಿಯಮ್ಮನ್ನು ಯಾರೋ ನುಡಿಸುತ್ತಿದ್ದುದೂ ಕೇಳಿಬಂತು. ಅದು ಜೋಗ್ ರಾಗದ ಅಪಭ್ರಂಶ ರೂಪವಾಗಿತ್ತು. ಅದರೊಂದಿಗೆ ಒಂದು ಹೆಣ್ಣಿನ ಕೋಮಲ ಧ್ವನಿ ‘ಮೋರೆ ಸಾವರಿಯಾ’ ಎಂದು ಹಾಡುತ್ತಿತ್ತು. ಆ ರಾಗವೂ ನನಗೆ ಇಷ್ಟವೇ! ಆ ರಾಗವನ್ನು ರಾಯಚೂರಿನ ಮಿತ್ರ ನರಸಿಂಹಲು ವಡವಾಟಿಯವರು ತುಂಬ ಇಂಪಾಗಿ ಪರಿಣಾಮಕಾರಿಯಾಗಿ ನುಡಿಸುವುದು ನೆನಪಾಯಿತು. ಇಂಥ ಕಲ್ಲು ಗೋಡೆಗಳ ನಡುವೆ ಕಲ್ಲು ಹೃದಯಗಳ ಒಳಗಿಂದ ಸಂಗೀತ ಚಿಕ್ಕ ತೊರೆಯಾಗಿ ಹರಿಯುವುದು ಕಂಡು ನನಗೆ ತುಂಬ ಸಂತೋಷವಾಯಿತು.
ನಾವು ಸುತ್ತಿ ಬಳಸಿ ಒಂದು ಕೋಣೆ ತಲುಪಿದೆವು. ಆ ಕೋಣೆ ಇತರ ಕೋಣೆಗಿಂತ ಭಿನ್ನವಾಗಿತ್ತು. ಪರದೆ ಸರಿಸುತ್ತ ಊದುಬತ್ತಿಯ ಪರಿಮಳ ಸುಗಂಧವನ್ನು ಸವಿಯುತ್ತ ಒಳಗೆ ಪ್ರವೇಶಿಸಿದೆವು. ಎತ್ತರದ ನಿಲುವಿನ ಗೌರವರ್ಣದ ವ್ಯಕ್ತಿಯೊಬ್ಬ ನಮ್ಮನ್ನು ನೋಡುತ್ತಲೇ ಹಾರ್ಮೋನಿಯಂ ನುಡಿಸುತ್ತಿದ್ದುದನ್ನು ಬಿಟ್ಟೆದ್ದು ಸ್ವಾಗತಿಸಿದ. ಮೋರೆ ಸಾವರಿಯಾ ಎಂದು ಹಾಡುತ್ತಿದ್ದ ಹೆಂಗಸು ಎದ್ದು ಒಳಗೆ ಹೋಗಿ ಮರೆಯಾದಳು. ಸೆರಗಿನ ಮರೆಯಿಂದಾಗಿ ಆಕೆಯ ಮುಖವನ್ನು ಸಂಪೂರ್ಣ ನೋಡಲು ಆಗದಿದ್ದರೂ ಆಕೆ ಸುಂದರಿ ಎಂದು ಅರ್ಥಮಾಡಿಕೊಂಡೆ.
“ಮೇಸ್ಟ್ರೇ, ವೆಂಗಳರೆಡ್ಡಿ ದೊರೆಗಳು… ನಮಸ್ಕಾರ ಮಾಡಿ!” ಗುರಪ್ಪ ಪಿಸುಗುಟ್ಟಿದ. ನಮಸ್ಕಾರದ ಶಾಸ್ತ್ರ ಮಾಡಿದೆ. ವೆಂಗಳರೆಡ್ಡೆ ಅಂದರೆ ನಾನು ಏನೋ ಅಂದುಕೊಂಡಿದ್ದೆ. ತುಂಬ ಪ್ರಶಾಂತ ಮುಖಮುದ್ರೆಯ ವ್ಯಕ್ತಿ. ಮಧ್ಯವಯಸ್ಸಿನ ನಾಯಕ ನಟನನ್ನು ನೋಡಿದ ಅನುಭವವಾಯಿತು. ಅಲ್ಲಿಯೇ ಇದ್ದ ಕುರ್ಚಿಯ ಮೇಲೆ ಕೂತುಕೊಂಡೆ. ಗೋಡೆ ಮೇಲಿದ್ದ ಹಳೆಕಾಲದ ಗಡಿಯಾರ ಡಣ್‌ಡಣ್ ಅಂತ ಐದುಸಾರಿ ಬಡಿಯಿತು. ದಷ್ಟಪುಷ್ಟವಾಗಿದ್ದ ಶಾಮಲ ವರ್ಣದ ಬೆಕ್ಕೊಂದು ಮ್ಯವ್‌ಗುಟ್ಟುತ್ತ ಬಂದು ದೊರೆಯ ತೊಡೆ ಏರಿ ಕೂತುಕೊಂಡಿತು. ದೊರೆ ಒಂದು ಕೈಯಿಂದ ಬೆಕ್ಕಿನ ಮೈಯನ್ನೂ ಇನ್ನೊಂದು ಕೈಯಿಂದ ಗುರಪ್ಪನ ಬೆನ್ನನ್ನೂ ನೇವರಿಸುತ್ತ “ನಾಯನಾ ಬಾಗುನ್ನಾವಾ…” ಎಂದು ತೆಲುಗಿನಲ್ಲಿ ಕ್ಷೇಮಲಾಭ ವಿಚಾರಿಸುತ್ತಿದ್ದನು. ಅದಕ್ಕೆ ಗುರಪ್ಪ ನಮ್ರತಾ ಭಾವದಿಂದ ಮುದ್ದೆಯಾಗಿ ಬಿಟ್ಟಿದ್ದನು. ದೊರೆಯ ತುಪ್ಪಳದ ಕಿವಿಗಷ್ಟೇ ಕೇಳಿಸುವಂತೆ ಏನೇನೋ ಮಾತಾಡಿದ ನಂತರ ನನ್ನನ್ನು ದೊರೆಗೆ ಹಿಂಗಿಂಗೇ ಅಂತ ಪರಿಚಯಿಸಿ ಕೊಟ್ಟನು. ಕನ್ನಡದ ಲೇಖಕ ಎಂದು ತಿಳಿದು ಕೈಕುಲುಕಿದರು. ತವು ಓದಿದ್ದು ಬಳ್ಳಾರಿ ವಾರ್ಡ್‌ಲಾ ಹೈಸ್ಕೂಲಲ್ಲಿ ಮತ್ತು ಅನಂತಪುರದಲ್ಲಿ ಎಂದು ಹೇಳಿದರು. ವಾರಾಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಎಂ.ಎ.ಯ ಮೊದಲನೆಯ ವರ್ಷವಷ್ಟೇ ಮಾಡಲು ಸಾಧ್ಯವಾಯಿತೆಂದು ಹೇಳಿದರು. ಅವರ ಧ್ವನಿಯಲ್ಲಿ ಏರಿಳಿತಗಳಿರಲಿಲ್ಲ. ತಾವು ಸಾವಿರಾರು ಎಕರೆ ಜಮೀನಿಗೆ ಒಡೆಯರೆಂಬ ದರ್ಪ ಇರಲಿಲ್ಲ. ತಮ್ಮ ಸುಪರ್ದಿಯಲ್ಲಿ ಇಪ್ಪತ್ತು ಹಳ್ಳಿಗಳು ಇದ್ದರೂ ಒಂದೇ ಒಂದು ಒತ್ತಕ್ಷರದ ಮಾತು ಅವರ ಬಾಯಿಯಿಂದ ಉದುರಲಿಲ್ಲ. ತಮ್ಮ ಸಹಪಾಠಿಗಳಲ್ಲಿ ಅನೇಕರು ರಾಷ್ಟ್ರಮಟ್ಟದ ಅನೇಕ ರಂಗಗಳಲ್ಲಿ ತುಂಬ ಪ್ರಸಿದ್ಧರಾಗಿದ್ದಾರೆಂದೂ ಅವರು ಹೇಳದೆ ಇರಲಿಲ್ಲ. ಹಾಗೆ ಶಿಕ್ಷಣ ಇಲಾಖೆಯ ಸಮಸ್ಯಗಳ ಬಗ್ಗೆ ವಿವರಿಸಿದ ಅವರು, ಶಿಕ್ಷಣವನ್ನು ಸಾರ್ವತ್ರಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಜಾರಿ ಬರುವಲ್ಲಿ ಈ ದೇಶದ ಜಮೀನ್ದಾರಿ ವ್ಯವಸ್ಥೆ ಹೇಗೆ ಅಡ್ಡಿಯುಂಟು ಮಾಡುತ್ತಿದೆ ಎಂಬುದನ್ನು ನಿರ್ವಿಕಾರ ಚಿತ್ತದಿಂದ ವಿವರಿಸಿದರು. ಅದರೆ ಜೊತೆಗೆ ಶಿಕ್ಷಣ ಯಾಕೆ ಕೆಳವರ್ಗವನ್ನು ಮುಟ್ಟಬಾರದು; ದುಡಿಯುವ ವರ್ಗ ಸುಶಿಕ್ಷಿತರಾದರೆ ಎದುರಾಗುವ ಸಾಧಕ ಬಾಧಕಗಳೇನು ಎಂಬುದರ ಬಗೆಗೂ ವಿಚಿತ್ರವಾಗಿ ಮಾತಾಡಿದರು; ನಂತರ ‘ಇತ್ತೀಚೆಗೆ ಏನು ಬರೆಯುತ್ತಿರುವಿರಿ’ ಎಂದು ಕೇಳಿದರು. ಜಮೀನ್ದಾರಿ ವ್ಯವಸ್ಥೆ ಬಗ್ಗೆ ಬರೆಯಬೇಕೆಂದಿರುವೆ ಎಂದು ಹೇಳಿದೆ. ಜಮೀನ್ದಾರಿ ವ್ಯವಸ್ಥೆಯ ಒಳಗಿದ್ದು ಅರ್ಥಮಾಡಿಕೊಂಡು ಬರೆದರೆ ಚಲೋ ಅದರು. ಹಾಗಾದರೆ ಕೆಲವು ದಿನಗಳ ಮಟ್ಟಿಗೆ ನಿಮ್ಮಲ್ಲಿಗೆ ಬಂದಿರಲೇನು ಎಂದು ಕೇಳಿದೆ. ಕೆಲವು ದಿನ ಯಾಕೆ ಕೆಲವು ತಿಂಗಳಿರಿ ಎಂದರು. ತೆಲುಗಿನಲ್ಲಿ ಏನಾದರೂ ಬರೆದಿದ್ರೆ ಓದಬಹುದಿತ್ತು ಅಂದರು. ‘ಕಂಚೆ ಮರಿಯು ಪೊಲಂ’ ಅಂತ ಬಂದಿದೆ ಕೊಡ್ತೀನಿ ಅಂದೆ. ಟೈಟ್ಲು ತುಂಬ ಚೆನ್ನಾಗಿದೆ ಕೊಡಿ ಓದ್ತೀನಿ ಅಂದರು. ಒಬ್ಬ ತೇಜಸ್ವೀ ಸುಸಂಸ್ಕೃತನ ಬಳಿ ಮಾತಾಡುತ್ತಿರೋ ಅನುಭವ ಆಯಿತು.
ಒಳಗಡೆಯಿಂದ ಕೆಲಸದ ಹೆಂಗಸು ಉದ್ದನೆಯ ಗ್ಲಾಸಿನ ತುಂಬ ಕೇಸರಿ ಮಿಶ್ರಿತ ಸುವಾಸನೆಯುಕ್ತ ಹಾಲು ತಂದು ಕೊಟ್ಟಳು. ಕುಡಿದು, ನಮಸ್ಕಾರ ಹೇಳಿ ಹೊರ ನಡೆದೆವು.
ಬಸ್‌ಸ್ಟ್ಯಾಂಡ್ ಬರುವ ಮಟ ಗುರಪ್ಪ ವೆಂಗಳರೆಡ್ಡಿ ದೊರೆಗಳನ್ನು ಹೊಗಳಿದ್ದೇ ಹೊಗಳಿದ್ದು. ಊರು ಮುಟ್ಟಿದ ಕೋಡಲೆ ಇಂತ ದಿನ ಬರುವುದಾಗಿ ಕರವೇಮಲಕ್ಕೆ ಪತ್ರ ಹಾಕಿದೆ. ಆ ದಿನಕ್ಕೆ ಅಡ್ಡರಸ್ತೆ ಸಾರೋಟು ಕಳಿಸುವುದಾಗಿ ದೊರೆಗಳ ಆಪ್ತರಿಂದ ಪತ್ರ ಬಂತು.
-೨-
ಬಸ್ ಧೂಳೆಬ್ಬಿಸಿಕೊಂಡು ನಿಲ್ಲುತ್ತಲೆ ಏರ್‌ಬ್ಯಾಗನ್ನು ಬಗಲಲ್ಲಿ ಇಳಿಬಿಟ್ಟುಕೊಂಡು ಇಳಿದೆ. ವೈಕೋದರನೊಬ್ಬ ದುಡುದುಡುನೆ ಬಂದು ಬಗಲಲ್ಲಿದ್ದ ಬ್ಯಾಗನ್ನು ಇಸಿದುಕೊಂಡ. ಕರೆದುಕೊಂಡು ಹೋಗಿ ಸಾರೋಟಿನಲ್ಲಿ ಕುಳ್ಳಿರಿಸಿದ. ಅದಕ್ಕೆ ಹೂಡಿದ್ದ ಕುದುರೆ ನೋಡಲು ಬೆಳ್ಳಗೆ ಇತ್ತು. ಅದು ಓಡುತ್ತಿರುವುದೇನೋ ಎಂಬಂತೆ ನಡೆಯತೊಡಗಿತು. ಸಾರೋಟು ಗಾಳಿಯಲ್ಲಿ ತೇಲುತ್ತಿರುವುದೇನೋ ಎಂಬಂತೆ ಚಲಿಸತೊಡಗಿತು. ಅದುವರೆಗೆ ಮಹಾ ಮಳ್ಳಿಗನಂತಿದ್ದ ಅದರ ಸಾರಥಿ ಮೆಲ್ಲಗೆ ಮಾತಿನ ಗಂಟುಬಿಚ್ಚಿದ.
ಮೊದಲಿಗೆ ತನ್ನ ದೊರೆಗಳ ಪ್ರವರ ಆರಂಭಿಸಿದ. ಕುಂಪಣಿ ಸರಕಾರದ ವಿಕ್ಟೋರಿಯ ರಾಣಿ ತಮ್ಮ ದೊರೆಗಳ ಮತ್ತು ತನ್ನವರ ತೋಳಿಗೆ ವಜ್ರದ ತೋಳಬಂದಿ ತೊಡಿಸಿದ ಘಟನೆಯಿಂದ ಆರಂಭಿಸಿ ತಮ್ಮ ದೊರೆಗಳು ಕಪ್ಪಟ್ರಾಳ್ಳು ಯಂಕಯ್ಯನಾಯ್ಡು ಮತ್ತವನ ಮೂರು ಮಂದಿ ಸಹೋದರರಿಗೆ ಮರಣದಂಡನೆ ವಿಧಿಸಿ, ಮತ್ತವತ್ತು ರಾತ್ರಿಯೇ ಅದನ್ನು ಜಾರಿಗೊಳಿಸಿ, ಮತ್ತು ಮರುದಿನವೇ ಕಳೇಬರಗಳನ್ನು ಕಪ್ಪಟ್ರಾಳ್ಳಿಗೆ ಸುರಕ್ಷಿತವಾಗಿ ಮುಟ್ಟಿಸಿದ ಘಟನೆವರೆಗೆ ಸವಿವರವಾಗಿ ವರ್ಣಿಸಿದ.
ಇಂಥ ಘಟನೆಗಳನ್ನು ಈ ಹಿಂದೆಯೇ ಬೀಜ ಪ್ರಾಯವಾಗಿ ಕೇಳಿದ್ದೆನಾದರೂ ಇಷ್ಟೊಂದು ವಿವರವಾಗಿ ತಿಳಿದುಕೊಂಡದ್ದು ಇದೇ ಮೊದಲು. ಸುಬ್ಬುಲು ಎಂಬ ಹೆಸರಿನ ಸಾರಥಿ ತಾನೇ ಆ ಹೆಣಗಳನ್ನು ಹರಿದಾರಿಗಳ ದೂರದ ಕಪ್ಪಟ್ರಾಳ್ಳಿಗೆ ತಗೊಂಡೊಯ್ದು ಚಾವಡಿ ಮೇಲೆ ಮಲಗಿಸಿ ಬಂದಿದ್ದಾಗಿ ಹೇಳಿದ. ಸುತ್ತ ಐದು ಹಳ್ಳಿಗಳಲ್ಲಿ ನಾಯ್ಡು ಸಹೋದರರು ತಮ್ಮ ಕುಕೃತ್ಯಗಳಿಂದ ತಲೆನೋವಾಗಿದ್ದರೆಂದೂ; ಆ ಪ್ರಜೆಗಳು ತಮ್ಮ ದೊರೆಗಳಲ್ಲಿ ಮೊರೆ ಇಟ್ಟರೆಂದೂ; ಅವರನ್ನು ಉಪಾಯಾಂತರದಿಂದ ಕರೆವೇಮಲಕ್ಕೆ ಬರಮಾಡಿಕೊಂಡು ವಿಚಾರಣೆ ಮಾಡಿ ನಂತರವೇ ದೊರೆಗಳು ಮರಣದಂಡನೆ ವಿಧಿಸಿದ್ದೆಂದೂ ವಿವರಿಸಿದ. ಕೀಚಕ, ಶುಂಭ, ನಿಶುಂಭರಂತಿದ್ದ ಅವರೊಡನೆ ದೊರೆಗಳು ಏಕಾಕಿಯಾಗಿ ಹೋರಾಡಿ ಬಗ್ಗುಬಡಿದು ಮೆತ್ತಗೆ ಮಾಡಿ ಉರಿಕಂಬದ ಕೆಳಗೆ ಸಾಲಾಗಿ ನಿಲ್ಲಿಸಿದರೆಂದು ಹೆಮ್ಮೆಯಿಂದ ಹೇಳಿಕೊಂಡ. ಆ ಕಥನ ನನಗೆ ತುಂಬ ವಿಚಿತ್ರವೆಂಬಂತೆ ತೋರಿತು. ಬನಾರಸ್ ಹಿಂದೂ ಯುನಿವರ್ಸಿಟಿಯಲ್ಲಿ ತತ್ವಶಾಸ್ತ್ರದಲ್ಲಿ ಎಂ.ಎ. ಮಾಡಿದ ವ್ಯಕ್ತಿ; ರಾಗ್ ಜೋಗ್ ಅನ್ನು ಇಂಪಾಗಿ ನುಡಿಸುವ ವ್ಯಕ್ತಿ ಇಷ್ಟೆಲ್ಲ ಮಾಡುತ್ತಿರುವನೆಂಬುದನ್ನು ನಂಬುವುದಾದರೂ ಹೇಗೆ! ನಂಬದೆ ಇರುವುದಾದರೂ ಹೇಗೆ? ವ್ಯಕ್ತಿ ಯಾರಾದರೂ ಇರಲಿ! ಒಟ್ಟಿನಲ್ಲಿ ಒಂದು ಒಳ್ಳೆಯ ಕಾದಂಬರಿ ಬರೆಯಬಹುದೆಂದುಕೊಂಡೆ….
ಓಡುತ್ತಿದ್ದ ಸಾರೋಟಿಗೆ ಎದುರಾಗಿ ಯಾರೂ ಬರುತ್ತಿರಲಿಲ್ಲ. ಎಲ್ಲರೂ ಹಾದಿ ಬಿಟ್ಟು ತಲೆತಗ್ಗಿಸಿ ನಿಲ್ಲುತ್ತಿದ್ದರು. ತಾನು ಬರುತ್ತಿರುವುದರ ಸೂಚನೆಯನ್ನು ಅದಕ್ಕೆ ಕಟ್ಟಿದ್ದ ಗಂಟೆಗಳು ಅರ್ಧ ಕಿಲೋಮೀಟರು ದೂರದವರೆಗೆ ನೀಡುತ್ತಿದ್ದವು. ಸಾರೋಟಿನೊಳಗೆ ಕೂತಿದ್ದ ನನ್ನ ಕಡೆ ಯಾರೋ ಬಹುದೊಡ್ಡ ಜಮೀನ್ದಾರನಿರಬೇಕೆಂಬಂತೆ ಜನ ನೋಡುತ್ತಿದ್ದರು.
ಅವರು ಕಣ್ಣಿನಲ್ಲಿ ಪ್ರಕಟಿಸುತ್ತಿದ್ದ ಭಯ ವಿನಯವನ್ನು ಭರಿಸುವ ಶಕ್ತಿ ನನ್ನಲ್ಲಿರಲಿಲ್ಲ. ಅದಕ್ಕೆ ಒಂದು ವಿಧದ ಕಾಂಪ್ಲೆಕ್ಸಿನಿಂದ ನಾನು ಎರಡೂ ಪಕ್ಕದ ಫಲವತ್ತಾದ ಹೊಲಗಳ ಕಡೆ ನೋಡುತ್ತಿದ್ದೆ. ಅಲ್ಲಿ ಒಂದು ಮೊಳ ನೆಲ ಖಾಲಿ ಇರಲಿಲ್ಲ. ಭತ್ತ, ಜೋಳ ಶಕ್ತಿಮೀರಿ ಬೆಳೆದು ಕಂಗೊಳಿಸುತ್ತಿತ್ತು. ಅಲ್ಲಲ್ಲಿ ತೆಂಗಿನ ತೋಟಗಳಿದ್ದವು. ಸ್ವಲ್ಪ ದೂರದಲ್ಲಿ ದುಂಡನೆಯ ಕಲ್ಲುಗಳಿಂದಲೇ ಪೇರಿಸಿಟ್ಟಂಥ ಬೆಟ್ಟಗಳಿದ್ದವು. ಅದರ ಮೇಲ್ಗಡೆ ಹತ್ತಾರು ವಿಧದ ಸಾವಿರಾರು ಪಕ್ಷಿಗಳು ಹಾರಾಡುತ್ತಿದ್ದವು. ಒಟ್ಟಿನಲ್ಲಿ ಆ ಪ್ರದೇಶ ನೋಡಲಿಕ್ಕೆ ತುಂಬ ನಯನಮನೋಹರವಾಗಿತ್ತು. ಸುಬ್ಬುಲು ತಂಬಾಕಿನ ಒಂದು ಉಂಡೆಯನ್ನು ದವಡೆಯಲ್ಲಿಟ್ಟುಕೊಳ್ಳುತ್ತ ಎಡಗಡಡೆ ಬಲಗಡೆ; ಹಿಂದುಗಡೆ ಮುಂದುಗಡೆ ಕಾಣೋದೆಲ್ಲ ದೊರೆಗಳದೇ ಎಂದೂ ವಿವರಿಸಿದ. ಪ್ರಜೆಗಳನ್ನು ಮಕ್ಕಳ ಹಾಗೆ ನೋಡಿಕೊಳ್ತಾರೆ ಎಂದು ಹೇಳಿದಾಗ ನಾನು ಈ ದೇಶಕ್ಕೆ ಸ್ವಾತಂತ್ರ್‍ಯ ಬಂದು ಎಷ್ಟು ವರ್ಷಗಳಾದವೆಂದು ಲೆಕ್ಕ ಹಾಕುತ್ತಿದ್ದೆ. ಎಲೆಕ್ಷನ್ನೂ ಎಂದಾಗ ಎಡಗಡೆ ಉಗುಳಿದ; ಪೊಲೀಸರೂ ಎಂದಾಗ ಬಲಗಡೆ ಉಗುಳಿದ.
ಸೇತುವೆ ಬಳಿ ಸಾರೋಟು ನಿಲ್ಲಿಸಿದ. ಕೆಳಗಡೆ ಪುಟ್ಟ ಹಳ್ಳ ತುಂಬಿಕೊಂಡು ಹಲವು ವಾದ್ಯಗಳು ಏಕಕಾಲಕ್ಕೆ ನುಡಿಯುತ್ತಿವೆಯೇನೋ ಎಂಬಂತೆ ಸದ್ದು ಮಾಡುತ್ತ ಹರಿಯುತ್ತಿತ್ತು. ಸುಬ್ಬುಲು ಸೂಚನೆಯಂತೆ ನಾನು ಕೆಳಗಡೆ ಇಳಿದೆ. ‘ರಂಡಿ, ದೆವುಡಾ ರಂಡಿ’ ಎಂದು ವಿನಯದಿಂದ ಒಂದು ಹೂವಿನ ತೋಟದೊಳಗಡೆ ಕರೆದೊಯ್ದ. ಬಗಬಗೆಯ ಹೂವುಗಳು ಕಣ್ಣಿಗೆ ಹಬ್ಬ ಮಾಡುವಂತಿದ್ದವು. ನಡುವೆ ಮಂಟಪ, ಅದರೊಳಗೆ ಅಮೃತ ಶಿಲೆಯಿಂದ ಕಟ್ಟಿದ್ದ ಸಮಾಧಿ ಇತ್ತು. ನಮಸ್ಕರಿಂಚಂಡಿ ಅಂದ. ನಮಸ್ಕಾರ ಮಾಡಿದ. ಸಮಾಧಿ ಮೇಲಿದ್ದ ಒಂದು ಪುಟ್ಟ ಹೂವು ತೆಗೊಂಡು ನನ್ನ ಕಿವಿಯ ಸಂದಿಯಲ್ಲಿರಿಸಿದ. ಯಾರೋ ಮಹಾನ್ ಶರಣರ ಸಮಾಧಿ ಇರಬೇಕಿದು; ಸ್ವರ್ಶ ಮಾತ್ರದಿಂದಲೇ ಮೈ ರೋಮಾಂಚನವಾಯಿತಲ್ಲ! ಕಾಲೂರುತ್ತಲೇ ಭಕ್ತಿ ತಾನೇ ತಾನಾಗಿ ಮೈತುಂಬಿಕೊಂಡುಬಿಟ್ಟಿತು. ಈ ಪವಿತ್ರವೂ; ಪ್ರಶಾಂತವೂ ಆದ ಸ್ಥಳದಲ್ಲಿಯೇ ಕಾದಂಬರಿಯನ್ನು ಆರಂಭಿಸಬೇಕೆಂದುಕೊಳ್ಳುತ್ತ ಸಾರೋಟಿನಲ್ಲಿ ವಿರಾಜಮಾನನಾದೆ.
ಇನ್ನೇನು ಸಮಾಧಿಯ ನಯನಮನೋಹರ ದೃಶ್ಯ ಮರೆಯಾಗಲಿದೆ ಎನ್ನುವಾಗ, “ಸುಬ್ಬುಲು ಅದು ಯಾವ ಶರಣರ ಸಮಾಧಿ?” ಎಂದು ಕೇಳಿದೆ.
ಅದು ಶರಣರದ್ದಲ್ಲ ಪರಾಕ್ರಮಿಗಳದ್ದೆಂದ. ಭಜರಂಗಬಲೀದು ಅಂದ. ಸಂಗಾಲದ ರಾಜಾರೆಡ್ಡಿಯ ಬಾಡಿಗೆ ಕೊಲೆಗಾರರೊಡನೆ ಏಕಾಕಿಯಾಗಿ ಹೋರಾಡಿ ದೊಡರೆಗಳ ಪ್ರಾಣವನ್ನು ರಕ್ಷಿಸಿದ ಭಜರಂಗಬಲಿ ಎಂದು ಆತ ಹೇಳಿದ್ದು ವಿಚಿತ್ರವೆನ್ನಿಸಿತು. ಕ್ರಮೇಣ ಅರ್ಥವಾಯಿತು ಅದು ಚತುಷ್ಪಾದಿ ನಾಯಿಯೊಂದರ ಸಮಾಧಿ ಎಂದು.
ಮೈಪರಚಿಕೊಳ್ಳಬೇಕೆಂದುಕೊಂಡೆ. ಕರಿವೇಮಲಕ್ಕೆ ಮಹಾರಾಜರೇ ಬರಲಿ…. ಅವರು ಮೊಟ್ಟಮೊದಲು ಭಜರಂಗಬಲಿಯ ಸಮಾಧಿಗೆ ನಮಸ್ಕರಿಸುವುದು ಕಡ್ಡಾಯವೆಂದು ಆತ ಸೂಕ್ಷ್ಮವಾಗಿ ತಿಳಿಸಿದಾಗ ಕೋಡುಗಲ್ಲಿಗೆ ತಲೆಯನ್ನು ಡಿಕ್ಕಿ ಹೊಡೆಯಬೇಕೆಂದುಕೊಂಡೆ. ಕ್ರಮೇಣ ನನ್ನನ್ನು ನಾನೇ ಸಂತೈಸಿಕೊಂಡೆ. ಸ್ವಾಮಿನಿಷ್ಠೆಯನ್ನು ಹೆಜ್ಜೆ ಹೆಜ್ಜೆಗೂ ಪ್ರಕಟಿಸುತ್ತಿರುವ ಸುಬ್ಬುಲು ಮೇಲೂ ಸಿಟ್ಟುಮಾಡಿಕೊಳ್ಳುವಂತಿರಲಿಲ್ಲ. ಅವನಾಗಲೀ, ಅವನ ಸ್ವಾಮಿಯಾಗಲೀ ಜಮೀನ್ದಾರಿ ವ್ಯವಸ್ಥೆಯ ಭಾಗಗಳು ಮಾತ್ರ.
ನಮ್ಮ ಸಾರೋಟು ರಾವಣನ ಪುಷ್ಪಕ ವಿಮಾನವೆನೋ ಎಂಬಂತೆ ಗ್ರಾಮವನ್ನು ಪ್ರವೇಶಿಸಿತು. ಜನ ದಾರಿಬದಿಗೆ ಸರಿದು ಸಾರೋಟೆಗೆ ಭಯ ಭಕ್ತಿ ಪ್ರದರ್ಶಿಸಿದರು. ಕರೆವೇಮಲ ತನ್ನ ಅಚ್ಚುಕಟ್ಟುತನವನ್ನು ಇಂಚು ಇಂಚಿಗೆ ಪ್ರದರ್ಶಿಸುತ್ತಿತ್ತು. ನಾನು ಅಂದುಕೊಂಡಿದುದಕ್ಕಿಂತ ಕರೆವೇಮಲ ಹೆಚ್ಚು ಸುಂದರವಾಗಿತ್ತು. ಓಣಿಯ ಹಾದಿಗೆಲ್ಲ ಕಲ್ಲು ಚಪ್ಪಡಿ ಹೊದ್ದಿಸಲಾಗಿತ್ತು. ಬೆಕ್ಕಿನ ಕಣ್ಣಿನ ಗಾತ್ರದ ಕಿಟಕಿಗಳು ಕಿಂಡಿಗಳು ಪ್ರತಿ ಕಟ್ಟಡದ ತುಟ್ಟತುದಿಗೆ ಇದ್ದವು.
ದೊರೆಗಳು ಕಲೆಕ್ಟರನಿಗೂ ಸಾರೋಟು ಕಳಿಸಿದವರಲ್ಲ. ಅವರು ಅದನ್ನು ಸುಬ್ಬುಲುವಿನ ಸಾರಥ್ಯದಲ್ಲಿ ಕಳಿಸುವುದಾದರೆ ಕೇವಲ ತಮ್ಮ ಕುಟುಂಬ ಸದಸ್ಯರಿಗೆ ಮಾತ್ರ. ತಾನು ದೊರೆಗಳ ಕುಟುಂಬ ವರ್ಗಕ್ಕೆ ಸೇರಿದವನೋ ಅಲ್ಲವೋ ಎಂಬುದು ನಿರ್ಣಯವಾಗುವ ಹೊತ್ತು ದೂರವಿರಲಿಲ್ಲ.
ಸಾರೋಟು ಮೂರು ಅಂತಸ್ತಿನ ಮನೆ ಮುಂದಿದ್ದ ವಿಶಾಲವಾದ ಬಯಲಲ್ಲಿ ನಿಂತುಕೊಂಡಿತು. ಅದು ಮಾಡಿದ ಘಲ್ ಘಲ್ ಸದ್ದಿಗೆ ಅಜ್ಞಾತ ಮುಖಗಳು ಕಿಂಡಿಗಳಲ್ಲಿ ಇಣುಕಿ ಮರೆಯಾದವು. ಆಕಾಶಯಾನ ಮಾಡಿದಂಥ ಅನುಭವದೊಂದಿಗೆ ನಾನು ಕೆಳಕ್ಕಿಳಿದೆ. ಸುಬ್ಬುಲು ಗಾಡಿಯೊಳಗಿಂದ ಏರುಬ್ಯಾಗು ತೆಗೆದು ವಿಶಾಲವಾದ ಬಯಲ ನಡುವೆ ಇದ್ದ ಕಟ್ಟೆ ಮೇಲೆ ಇಟ್ಟ. ಒಳಗೆ ಹೋಗೆಂದು ಆತ ಹೇಳಲಿಲ್ಲ. ಆ ಕಟ್ಟೆ ಮೇಲೆ ಸ್ವಲ್ಪ ಹೊತ್ತು ಕೂಡುವಂತೆ ಆತ ಸಂಜ್ಞೆ ಮಾಡಿದ. ನಾನು ಬೇರೆ ದಾರಿ ಕಾಣದೆ ಆ ಚೌಕಾಕಾರದ ಕಟ್ಟೆ ಮೇಲೆ ಕೂತುಕೊಂಡೆ. ಆತ ಕುದುರೆಯೊಡನೆ ಹೋಗುವ ಮೊದಲು ನಾನು ಕೂತುಕೊಂಡಿದ್ದನ್ನು ಖಚಿತಪಡಿಸಿಕೊಳ್ಳದೆ ಇರಲಿಲ್ಲ.
ತಲೆಗೆ ಸುರಿವ ರಣರಣ ಬಿಸಿಲು. ನಾನು ಕೂತಿರುವುದು ಮಾತೆಂಬುದು ಸಮಾಧಿಯಾಗಿರುವುದೇನೋ ಎಂಬಂಥ ಕಟ್ಟಡದ ಎದುರಿನ ಕಟ್ಟಡದ ಎದುರಿನ ಕಟ್ಟೆ ಮೇಲೆ. ಆ ಕಟ್ಟೆಯ ಮಹಿಮೆ ಬಗ್ಗೆ ಗುರಪ್ಪ ತುಂಬ ಹಿಂದೆ ಹೇಳಿದ್ದು ನೆನಪಾಯಿತು. ವೆಂಗಳರೆಡ್ಡಿಯ ತಾತ ಪೆದ್ದ ವೆಂಗಳರೆಡ್ಡೆಯ ಕಾಲಕ್ಕೆ ಕಟ್ಟಿಸಿದ್ದ ಕಟ್ಟೆ ಅದಾಗಿತ್ತು.
ಗ್ರಾಮಕ್ಕೆ ಯಾರೇ ಹೊಸಬರು ಬರಲಿ; ಐದು ನಿಮಿಷ ಆ ಕಟ್ಟೆ ಮೇಲೆ ಕೂಡ್ರಬೇಕಾದ್ದೆ. ಹಾಗೆ ಕೂಡ್ರದೆ ಹೋದರೆಂದರೆ ದೊರೆಗಳ ಮನೆತನಕ್ಕೆ ಅವಮಾನ ಮಾಡಿದರೆಂದೇ ಅರ್ಥ. ಕಟ್ಟೆ ತುಂಬ ಕನ್ನಡಿಯಂಥ ಕಪ್ಪುಕಲ್ಲುಗಳನ್ನು ಹಾಸಲಾಗಿತ್ತು. ಅದರಲ್ಲಿ ನನ್ನ ಪ್ರತಿಬಿಂಬ ಸ್ಪಷ್ಟವಾಗಿ ಕಾಣುತ್ತಿತ್ತು.
ಸ್ವಲ್ಪ ಹೊತ್ತಿನಲ್ಲಿ ಭವನದ ಮುಖ್ಯ ಬಾಗಿಲಿನಿಂದ ಸುಮಾರು ಎತ್ತರವಿದ್ದ ಒಂದಿಬ್ಬರು ಹೊರ ಬಂದರು. ನೋಡಲಿಕ್ಕೆ ಕರ್‍ರಗಿದ್ದರೂ ದಷ್ಟಪುಷ್ಟವಾಗಿದ್ದರು.
ಒಬ್ಬ ಬ್ಯಾಗು ಎತ್ತಿಕೊಂಡ. ಇನ್ನೊಬ್ಬ ‘ರಂಡಿ’ ಅಂದ. ನಾನು ಹಿಂಬಾಲಿಸಿದೆ. ಎರಡು ಆನೆ ಸಲೀಸಾಗಿ ಪ್ರವೇಶ ಮಾಡುವಂತಿದ್ದ ಬಾಗಿಲಿಗೆ ಒಂದು ಬಹು ದೊಡ್ಡ ಹೊಸ್ತಿಲು ಇತ್ತು. ಅದರ ಮೇಲೆ ನೂರಾಒಂದು ಬೆಳ್ಳಿ ರೂಪಾಯಿಗಳನ್ನು ಬಡಿಯಲಾಗಿತ್ತು. ಅದನ್ನು ಮಾಮೂಲು ಮಂದಿ ಒಂದೇ ಏಟಿಗೆ ದಾಟುವುದು ಅಶಕ್ಯವಾಗಿತ್ತು. ಒಳಗಡೆ ಪ್ರವೇಶಿಸಿ ನೋಡುತ್ತೇನೆ! ಅಬ್ಬಾ ಎಷ್ಟೊಂದು ಕಂಬಗಳು! ಏನು ಕಥೆ! ಅವುಗಳ ಉದ್ದವೋ; ಅವುಗಳ ಮೇಲಿದ್ದ ಚಿತ್ತಾರವೋ! ಅದನ್ನೆಲ್ಲ ಶಬ್ದಗಳಲ್ಲಿ ಹಿಡಿದಿಡುವುದು ಸಾಧ್ಯವಿರಲಿಲ್ಲ. ನೂರಾರು ಜನ ಏಕಕಾಲಕ್ಕೆ ಅಡ್ಡಾಡಬಹುದಾದಷ್ಟು ವಿಶಾಲವಾಗಿತ್ತು ಒಳಗಡೆ. ನೋಡಿದೊಡನೆ ರೋಮಾಂಚಿತನಾದೆ. ನಾನು ಹೋಗುತ್ತಿದ್ದುದಾದರೂ ಎಲ್ಲಿಗೆ! ನನಗೇ ಗೊತ್ತಿರಲಿಲ್ಲ. ಮರಣದಂಡನೆಗೆ ಗುರಿಯಾದ ಖೈದಿಯಂತೆ ಅವರ ನಡುವೆ ನಡೆಯುತ್ತಿದ್ದೆ ಅಷ್ಟೆ. ಅವರು ನನ್ನನ್ನು ಸೀದಾ ಕರೆದೊಯ್ದದ್ದು ಒಂದು ವಿಶಾಲವಾದ ಕೋಣೆಗೆ; ಅದು ಬಚ್ಚಲು ಎಂದು ಅರ್ಥವಾಗಿದ್ದು ಅನಂತರವೇ. ಅದು ಸಾಮಾನ್ಯ ಬಚ್ಚಲಾಗಿರಲಿಲ್ಲ. ಅಲ್ಲೇ ಒಂದು ಬಾವಿಯಿತ್ತು. ಒಂದು ದೊಡ್ಡ ಹಂಡೆಯಲ್ಲಿ ನೀರು ಚಳ್ಳಮಳ್ಳ ಕುದಿಯುತ್ತಿತ್ತು. ಒಬ್ಬ ನನ್ನ ಕೈಗೆ ಒಂದು ದೊಡ್ಡ ತಂಬಿಗೆ ತುಂಬ ಉಗುರು ಬೆಚ್ಚಗಿನ ನೀರು ಕೊಟ್ಟ. ಇನ್ನೊಬ್ಬ ಸೋಪು ನೀಡಿದ. ಅವರು ಸ್ನಾನ ಮಾಡಿ ಎಂದರೂ ಕೇಳದೆ ನಾನು ಗಸಗಸ ಉಜ್ಜಿ ಮುಖ ತೊಳಿದುಕೊಂಡೆ. ಇನ್ನೊಬ್ಬ ನೀಡಿದ ಟರ್ಕಿ ಟವಲ್ಲಿನಿಂದ ಮುಖವನ್ನು ಒರೆಸಿಕೊಂಡೆ. ದೇಹದ ಆಯಾಸ ಬಹುಪಾಲು ಕಡಿಮೆಯಾಯಿತು.
ಅವರು ನನ್ನನ್ನು ಅಲ್ಲಿಂದ ಕರೆದೊಯ್ದದ್ದು ಭೋಜನ ಶಾಲೆಗೆ.
ಅದು ಅಂಥಿಂಥ ಭೋಜನ ಶಾಲೆ ಆಗಿರಲಿಲ್ಲ. ಆಗಲೇ ಹಾಕಲಾಗಿದ್ದ ಮಣೆ ಮೇಲೆ ಹೋಗಿ ಪದ್ಮಾಸನ ಹಾಕಿದೆ. ಆ ದೈತ್ಯರು ವಿನಮ್ರತೆಯಿಂದ ಬಾಗಿಲ ಆಚೆ ನಿಂತಿದ್ದರು. ಕಲ್ಗೆಜ್ಜೆಯ ಘಲ್ ಘಲ್ ಸದ್ದಿಗೆ ತಲೆಎತ್ತಿ ನೋಡಿದೆ. ಊಟ ಬಡಿಸಲೆಂದು ಇಬ್ಬರು ಮಹಿಳೆಯರು ಬರುತ್ತಿದ್ದುದು ಕಂಡಿತು. ಅವರಿಬ್ಬರು ಅದೆಷ್ಟು ಸುಂದರಿಯರಾಗಿದ್ದರೆಂದರೆ ಅವರಂಥವರು ದೇವಲೋಕದಲ್ಲೂ ಇರಲಿಕ್ಕಿಲ್ಲ. ಒಬ್ಬ ಸುಂದರಿ ಬಂದು ಪತ್ರೋಳಿ ಹಾಕಿದರೆ ಇನ್ನೊಬ್ಬಳು ಅದರ ಪಕ್ಕ ಬೆಳ್ಳಿ ತಂಬಿಗೆ; ಬೆಳ್ಳಿ ಲೋಟ ಇಟ್ಟಳು. ನೋಡು ನೋಡುವಷ್ಟರಲ್ಲಿ ಬಂಗಾರುಮುಡಿ ಅಕ್ಕಿಯ ಅನ್ನ; ಎರಡುಮೂರು ನಮೂನೆ ಚಟ್ನಿ; ಪಲ್ಯೆ; ಅನ್ನದ ಮೇಲೆ ಚಿಕ್ಕ ಈರುಳ್ಳಿ ಗಾತ್ರದಷ್ಟು ತುಪ್ಪ ಉರುಳಿಸಿದರು. ಅದು ಅದ್ಭುತವಾಗಿ ಕರಗಿ ಆವರಿಸಿತು. ಆಂಧ್ರ ಭೋಜನವೇ ಭೋಜನ. ನಿಸ್ಸಂಕೋಚದಿಂದ ಕೇಳಿ ಕೇಳಿ ನೀಡಿಸಿಕೊಂಡು ಜಠರ ಅನ್ನನಾಳವೇ ಮೊದಲಾದ ಖಾಲಿ ಜಾಗಗಳನ್ನು ತುಂಬಿ ಹೋಬ್ಬ ಎಂದು ತೇಗಿದೆ. ತೇಗಿದ ಸದ್ದು ಕೇಳಿಸಿಕೊಂಡೊಡನೆ ರೋಬಟ್‌ಗಳಂತೆ ಆ ದೈತ್ಯರೀರ್ವರು ಬಂದು ನನ್ನನ್ನು ಬೇರೊಂದು ಕೋಣೆಗೆ ಕರೆದೊಯ್ದರು. ದೊಡ್ಡದಾದ ತೂಗುಮಂಚದ ಮೇಲೆ ಕುಳ್ಳಿರಿಸಿದರು. ನನ್ನ ಮುಂದೆ ಬಗೆಬಗೆಯಾದ ಹಣ್ಣುಗಳಿಂದ ತುಂಬಿದ್ದ ಬುಟ್ಟಿಯನ್ನು ಹರಿತವಾದ ಚಾಕುವನ್ನು ಇರಿಸಿದರು. ಎರಡು ದ್ರಾಕ್ಷಿ ಹಣ್ಣುತಿಂದ ಶಾಸ್ತ್ರ ಮಾಡಿದೆ. ಇನ್ನೊಬ್ಬ ತಾಂಬೂಲದ ತಟ್ಟೆ ತಂದಿರಿಸಿದ. ಪುಷ್ಕಳವಾಗಿ ತಾಂಬೂಲ ಮೆದ್ದೆ. ನನ್ನ ಉಸಿರಿನ ಪರಿಮಳ ಕೋಣೆ ತುಂಬ ತುಂಬಿಕೊಂಡಿತು.
ನಂತರ ಅವರು ನನ್ನನ್ನು ‘ರಂಡಿ ದೇವುಡಾ’ ಅಂತ ಕರೆದರು. ಅವರ ಹಿಂದೆ ಹೆಜ್ಜೆ ಹಾಕತೊಡಗಿದೆ. ಗೋಡೆ ಮೇಲೆ ಅಲಂಕರಿಸಿದ ತೈಲ ವರ್ಣಚಿತ್ರಗಳನ್ನು; ಕತ್ತಿ ಗುರಾಣಿ; ಕೋವಿ ಇವೇ ಮೊದಲಾದ ಆಯುಧಗಳನ್ನು ನೋಡಿದೆ. ಹಾಗೆ ಪ್ರತಿ ಬಾಗಿಲ ಮೇಲೆ ವಿರಾಜಮಾನವಾಗಿದ್ದ ಕೋಣನ ತಲೆಗಳನ್ನು ನೋಡದೆ ಇರಲಿಲ್ಲ. ಈ ವೆಂಗಳರೆಡ್ಡಿ ಪೂರ್ವಜರು ನಿಸ್ಸಂದಿಗ್ಧವಾಗಿ ಈ ಹಳ್ಳಿಯನ್ನು ಆಳಿದ ಪಾಳೇಗಾರರಿರಬೇಕೆಂದುಕೊಂಡೆ. ವರ್ತುಳಾಕಾರದ ಮೆಟ್ಟಿಲುಗಳನ್ನೇರಿ ಎರಡನೆ ಅಂತಸ್ತಿನ ಮಹಡಿ ತಲುಪುವುದಕ್ಕೂ ಮಾರುದ್ದದ ಗೋಡೆ ಗಡಿಯಾರ ಢಣ್ ಢಣ್ ಅಂತ ಎರಡು ಬಾರಿಸಿದುದಕ್ಕೂ ಸರಿಹೋಯಿತು.
ವಿಶಾಲವಾದ ಕೋಣೆಯೊಳಗಡೆ ನನನ್ನು ಬಿಟ್ಟು ಆ ದೈತ್ಯರು ಹೊರಟುಹೋದರು. ಐದು ಮಂಚಿ ಪುಟ್ಟಪುಟ್ಟ ಜಮೀನ್ದಾರರೊಡನೆ ಇಸ್ಪೀಟು ಆಟುತ್ತಿದ್ದ ವೆಂಗಳರೆಡ್ಡಿಯವರು ಒಹೋ ನವಲಾರಚಯತಲು ರಂಡಿ… ರಂಡಿ ಎಂದು ಆಹ್ವಾನಿಸಿದರು. ನಮಸ್ಕಾರ ಹೇಳಿ ಕೈಕುಲುಕಿದೆ. ಅವರು ಊಟ ಪ್ರಯಾಣ ಇತ್ಯಾದಿ ವಿಚಾರಿಸಿದರು. ನಂತರ ತಮ್ಮೊಂದಿಗೆ ಇಸ್ಪೀಟು ಆಡುತ್ತಿದ್ದವರನ್ನು ಪರಿಚಯಿಸಿದರು. ಇವರು ಒರ್‍ವಕಲ್ ಸಿದ್ದಾರೆಡ್ಡಿ. ಎಂಟುನೂರು ಎಕರೆ ಜಮೀನ್ದಾರರು. ಇವರ ಹತೋಟಿಯಲ್ಲಿ ಹತ್ತು ಹಳ್ಳಿಗಳಿವೆ…. ಇವರು ನಲ್ಲಾವರಪು ರಾಮಚಂದ್ರಾರೆಡ್ಡಿ. ಒಂಬೈನೂರೆಕರೆ ಜಮೀನ್ದಾರರು…. ಎಂಟು ಹಳ್ಳಿಗಳು ಇವರ ಆಶ್ರಯದಲ್ಲಿ ಬದುಕುತ್ತಿವೆ. ಇವರು ಇಸ್ಮಾಯಿಲ್ ಸಾಹೇಬರು. ಹೈದ್ರಾಬಾದ್ ನಿಜಾಮರ ವಂಶಸ್ಥರು. ಇವರು ಸದಾಶಿವರೆಡ್ಡಿ, ಸಾವಿರ ಏಕರೆ ಸರದಾರರು, ಹೀಗೆ…. ಅವರೆಲ್ಲ ಮುಗುಳ್ನಗುತ್ತ ಕೈಕುಲುಕಿದರು. ಕನ್ನಡ ಕುವೆಂಪು ಅವರ ಪದ್ಯಗಳ ಬಗ್ಗೆ; ಕಾರಂತರ ಕಾದಂಬರಿಗಳ ಬಗ್ಗೆ ಮಾತಾಡಿದರು. ನಮ್ಮ ವಿಶ್ವನಾಥ ಸತ್ಯನಾರಾಯಣರ ಮುಂದೆ ಕನ್ನಡ, ತಮಿಳು ಲೇಖಕರು ಏನೂ ಅಲ್ಲ ಅಂದರು. ಕಮ್ಯುನಿಷ್ಟರೇ ತೆಲುಗು ಸಾಹಿತ್ಯವನ್ನು ಕುಲಗೆಡಿಸಿದರು ಎಂದು ಅವರು ವಾದಿಸಿದ್ದನ್ನು ವೆಂಗಳರೆಡ್ಡಿ ದೊರೆಗಳು ಒಪ್ಪಲಿಲ್ಲ. ಸ್ವಲ್ಪ ಹೊತ್ತು ಅವರೆಲ್ಲ ಸಾಹಿತ್ಯ; ಕಲೆ ರಾಜಕೀಯ ಕುರಿತು ಸದಭಿರುಚಿಯ ಹರಟೆ ಹೊಡೆದರು. ಆಂಧ್ರದ ಜಮೀನ್ದಾರೀ ವ್ಯವಸ್ಥೆ ಬಗ್ಗೆ ಕಾದಂಬರಿ ಬರೀರಿ; ಕನ್ನಡದಲ್ಲಿ ಇಲ್ಲೇ ಇಲ್ಲ ಅಂದರು. ಜಮೀನ್ದಾರರೂ ಮನುಷ್ಯರು ಎಂಬುದನ್ನು ಕಾದಂಬರಿಯಲ್ಲಿ ಕಾಣಿಸಿ ಅಂದರು.
ಅವರೆಲ್ಲ ಹೊರಟು ಹೋದ ಮೇಲೆ ದೊರೆಗಳು “ನೀವಿಲ್ಲಿ ಆದಷ್ಟು ಹೆಚ್ಚು ದಿನ ಇದ್ದು ಜಮೀನ್ದಾರಿ ವ್ಯವಸ್ಥೆ ಬಗ್ಗೆ ಹೆಚ್ಚು ವಿವರ ಸಂಗ್ರಹಿಸಿ. ನಮ್ಮನ್ನು ಹೊಗಳಿ ಬರೀ ಬೇಕೂಂತ ಹೇಳೊಲ್ಲ…. ನಿಮಗೆ ತೋಚಿದಂತೆ ಬರೀರಿ. ನಾನು ಬನಾರಸ್‌ನಲ್ಲಿದ್ದಾಗ ಒಬ್ಬ ಹರೆಯದ ವಿಧವೆಯನ್ನು ಪ್ರೀತಿಸಿದ್ದೆ. ಆಕೆಯನ್ನು ಮದುವೆ ಆಗಬೇಕೂಂತ ಮಾಡಿದ್ದೆ. ಆದ್ರೆ ಆಕೆ ಒಪ್ಪಲಿಲ್ಲ. ಯಾಕೆಂದರೆ ಆಕೆ ನನಗಿಂತ ಮೂರು ವರ್ಷ ಹಿರಿಯಳಿದ್ದಳು. ಆಕೆಯ ಬಗ್ಗೆ ಹಿಂದಿಯಲ್ಲಿ ಒಂದು ಪದ್ಯ ಬರೆದು ನೆನಪಿನ ಭಾರ ಕಳೆದುಕೊಂಡೆ. ವಿಲ್ಲಿ ಬ್ರಾಂಟ್, ರಾಧಕೃಷ್ಣನ್, ಹಕ್ಸಲೀ, ಚೆಕಾಫ್, ಟಾಲಸ್ಟಾಯ್, ಗೋರ್ಕಿ ಎಲ್ಲ ಓದ್ಕೊಂಡಿದೀನಿ ಮೇಸ್ಟ್ರೇ. ಆ ಕಾಲದಲ್ಲಿ ನಾನು ಕಟ್ಟಾ ಕಮ್ಯುನಿಸ್ಟ್. ಆದ್ರೆ ಏನ್ ಮಾಡೋದು ಈ ಜಮೀನ್ದಾರಿಕೆ ಬೇರೆ ಹೆಗಲೇರಿ ಕೂತಿದೆಯಲ್ಲ. ನನ್‌ಕರ್ಮ ನಿಭಾಯಿಸಬೇಕು…. ಅದೆಲ್ಲ ಆಮೇಲೆ ಮಾತಾಡೋಣ. ಮೊದಲು ವಿಶ್ರಾಂತಿ ತಗೊಳ್ಳಿ. ಇದು ನಿಮ್ಮ ಸ್ವಂತ ಮನೆ ಅಂತ ತಿಳ್ಕೊಳ್ಳಿ…. ಸಂಕೋಚ ಬೇಡ” ಎಂದು ತುಂಬ ಸೌಜನ್ಯಪೂರ್ಣವಾಗಿ ಮಾತಾಡಿದರು.
ಅವರ ಕಣ್ಸನ್ನೆಯಂತೆ ಒಬ್ಬ ಬಂದ. ವಯಸ್ಸು ಎಂಬತ್ತರ ಹತ್ತಿರ ಇರಬಹುದು. ಸೊಂಟ, ಹಲ್ಲು ಭದ್ರವಾಗಿದ್ದವು. ಹೆಸರು ತುರುಪತಯ್ಯ ಅಂತ. ನನ್ನನ್ನು ಕರೆದೊಯ್ದ. ಹೆಜ್ಜೆಗೊಂದೊಂದು ದೊರೆಗಳ ಮನೆತನದ ಬಗ್ಗೆ ಒಂದೊಂದು ಹೊಸ ವಿವರ ನೀಡುತ್ತಿದ್ದ. ವಿಕ್ಟೋರಿಯಾ ರಾಣಿಯಿಂದ ಸನ್ಮಾನಿತನಾದ ಪೆದ್ದ ವೆಂಗಳರೆಡ್ಡಿ ಬಗ್ಗೆ ಆತ ಹೇಳುತ್ತಿದ್ದುದು ತುಂಬ ಅದ್ಭುತವಾಗಿತ್ತು “ತಿರುಪತಯ್ನೋರೆ ನಿಮ್ಮನ್ನು ನೋಡಿದ್ರೆ ನಮ್ ತಾತನ ನೆನಪಾಗ್ತದೆ,” ಅಂತ ನಾನೆಂದುದಕ್ಕೆ ಆತ ಉಬ್ಬಿಹೋದ. “ನನ್ನಗೂ ಒಬ್ಬ ಮೊಮ್ಮಗ ಇದ್ದ. ಅವನು ಬದುಕಿದ್ದಿದ್ರೆ ನಿನ್ನಷ್ಟು ಇರ್‍ತಿದ್ದ. ಮೂಗು ಮುಖ ಎಲ್ಲ ನಿನ್ನಹಾಗಿತ್ತು.” ಅಂತ ಹೇಳುತ್ತ ಕಣ್ಣಲ್ಲಿ ನೀರು ತುಂಬಿಕೊಂಡ.
ಆತ ನನಗೆ ಮೀಸಲಿರಿಸಿದ್ದ ಕೋಣೆ ತೋರಿಸಿದ. ಆ ಕೋಣೆ ನಾನು ನಿರೀಕ್ಷಿಸಿದುದಕ್ಕಿಂತ ಹೆಚ್ಚು ಸುಸಜ್ಜಿತವಾಗಿತ್ತು. ಗಾಂಧಿ ಪೋಟೋದ ಒಂದು ಪಕ್ಕ ಕಾರ್ಲ್‌ಮಾರ್ಕ್ಸ್‌ನ ಫೋಟೋ, ಇನ್ನೊಂದು ಪಕ್ಕ ಪುಟ್ಟಪರ್ತಿ ಸಾಯಿಬಾಬಾನ ಫೋಟೋಗಳಿದ್ದುದು ತುಂಬ ವಿಚಿತ್ರವಾಗಿತ್ತು. ಕರಿಮತ್ತಿ ಕಟ್ಟಿಗೆಯ ಕೇಸುಗಳೊಳಗೆ ಸಾವಿರಾರು ಅಮೂಲ್ಯ ಪುಸ್ತಕಗಳನ್ನು ನೀಟಾಗಿ ಪೇರಿಸಲಾಗಿತ್ತು. ತಿರುಪತಯ್ಯ ಕೋಣೆಯ ಪ್ರತಿಯೊಂದು ವಸ್ತುವನ್ನು ಪರಿಚಯಿಸಿದ, ಹಾಗೇ ಬಚ್ಚಲು ಕಕ್ಕಸ್ಸುಗಳನ್ನೂ ಬಿಡದೆ.
“ಯಜಮಾನ್ರೇ…. ನಾನೊಮ್ಮೆ ಈ ಅದ್ಭುತವಾದ ಮನೆಯೊಳಗೆ ಸುತ್ತಾಡಬೇಕಲ್ಲ ಬರ್‍ತೀರಾ,” ಅಂದೆ.
“ಅದಕ್ಕೇನು ಬಾರಪ್ಪ” ಎಂದು ತಿರುಪತಯ್ಯ ಕರೆದೊಯ್ದ.
ಮನೆ ಒಟ್ಟು ನಾಲ್ಕೂವರೆ ಏಕರೆ ಇದೆ ಎಂದು ಹೇಳಿದ. ಮನೆ ಒಳಗಡೆ ಎಂಟು ಬಚ್ಚಲುಗಳು; ಇಪ್ಪತ್ತು ಕಕ್ಕಸ್ಸು; ಇಪ್ಪತ್ತೈದು ಶಯನಗೃಹಗಳು ಇವೆ ಎಂದು ಹೇಳಿ ಅವೆಲ್ಲವನ್ನೂ ತೋರಿಸಿದ. ನಾನು ನೋಡಲೇಬೇಕಿರೋದು ಎಲ್ಲಿದೆ ಎಂದು ಮಿಡುಕುತ್ತಿರುವಾಗಲೇ ನನ್ನನ್ನು ದೊಡ್ಡದಾದ ದೇವರ ಮನೆಗೆ ಕರೆದೊಯ್ದ. ಅಲ್ಲಿ ಭಾರತದ ಎಲ್ಲ ಪವಿತ್ರ ನದಿಗಳ ಜಲ ತುಂಬಿದ ಕೊಡಗಳಿದ್ದವು. ಸ್ಥಳೀಯ ದೇವತೆಯಾದ ಮಾಂಕಾಳಮ್ಮನಿಂದ ಹಿಡಿದು ಕಾಶಿ ವಿಶ್ವನಾಥನವರೆಗೆ ಎಲ್ಲ ದೇವಾನುದೇವತೆಗಳ ಪ್ರತಿಕೃತಿಗಳಿದ್ದವು. ಸ್ವರ್ಗ ವೈಕುಂಠಗಳೇ ಅಲ್ಲಿ ನೆಲೆಸಿವೆ ಎಂದೆನ್ನಿಸಿತು.
“ನಿನ್ನ ಮೈಮೇಲೆ ಹಲ್ಲಿ ಬಿದ್ರೆ ಇದನ್ನು ನೋಡಪ್ಪಾ…. ಕಷ್ಟಗಳೆಲ್ಲ ಪರಿಹಾರ ಆಗ್ತವೆ” ಎಂದು ಹೇಳಿದ.
“ಈ ಗಾದೆಯೊಳಗೆ ನೋಡೋದು ಎಷ್ಟೋ ಇದೆ. ಈಗ ಸದ್ಯಕ್ಕೆ ಹೋಗಿ ವಿಶ್ರಾಂತಿ ತಗೊಳ್ಳಿ” ಎಂದ.
“ಯಜಮಾನ್ರೇ ಈ ಮನೆಯೊಳಗೆ ಗಲ್ಲಿಗೇರಿಸೋ ವ್ಯವಸ್ಥೆ ಇದೆ ಅಂತಾರಲ್ಲಾ. ಅದ್ನ ತೋರಿಸ್ತೀರಾ ದಯವಿಟ್ಟು” ಎಂದು ಸಂಕೋಚದಿಂದಲೇ ಕೇಳಿದೆ.
“ಈ ಚಿಕ್ಕ ವಯಸ್ಸಿನಲ್ಲಿ ಅದನ್ಯಾಕೆ ನೋಡೋಕೆ ಇಷ್ಟಪಡ್ತೀಯಾ…. ಇನ್ನು ಮದುವೆ ಬೇರೆ ಆದಂತಿಲ್ಲ” ಅಂದ.
“ನೋಡೋದ್ರಲ್ಲಿ ತಪ್ಪೇನು” ಅಂದೆ.
“ತಪ್ಪೇನು ಇಲ್ಲ ತೋರಿಸ್ತೀನಿ ಬಾ” ಎಂದು ಕರೆದೊಯ್ದ.
ದೇವರ ಮನೆಯ ಹಿಂದಿನ ಕೋಣೆಯಲ್ಲಿ ಚಾಪೆ ಹಾಸಿದ ಕಡೆ ನೆಲದ ಮಾಳಿಗೆಗೆ ಹೋಗಲು ಪಾವಟಿಗೆಗಳಿದ್ದವು. ಅಲ್ಲಿ ನಡೆಯಲು ಕಂದಿಲೇನು ಬೇಕಿರಲಿಲ್ಲ. ಸೂರ್ಯನ ಬೇಳಕನ್ನು ಪ್ರತಿಫಲನದಿಂದ ಪಡೆಯುವ ವ್ಯವಸ್ಥೆ ಅಲ್ಲಿತ್ತು. ನಾವು ಇಳಿಯುತ್ತಿದ್ದ ಮೆಟ್ಟಿಲುಗಳು ತುಂಬ ನುಣುಪಾಗಿದ್ದವು. ತುಂಬ ಹುಷಾರಿಂದ ಇಳಿದು ಬಂದು ಹಜಾರ ತಲುಪಿದೆವು.
ಅಲ್ಲಿ ಉತ್ತರಾಭಿಮುಖವಾಗಿ ಎರಡು ಕಂಬಗಳಿಗೆ ಅಡ್ಡಲಾಗಿ ಒಂದು ತೊಲೆಯಿತ್ತು. ಒಂದಿಬ್ಬರು ಅದರ ರಿಪೇರಿ ಮಾಡುತ್ತಿದ್ದರು. ಕೀಲು; ಕೊಂಡಿಗಳಿಗೆ ಗ್ರೀಸು ಹಚ್ಚುವುದು, ಹಗ್ಗಕ್ಕೆ ಮೇಣ ಲೇಪಿಸುವುದು ಇತ್ಯಾದಿ. ಒಬ್ಬ ಇನ್ನೊಬ್ಬನ ಕೊರಳಿಗೆ ಕುಣಿಕೆ ಹಾಕಿ ಅದು ಸರಿಯಾಗಿ ಬೀಳುವುದೋ, ಇಲ್ಲವೋ ಎಂದು ಖಚಿತಪಡಿಸಿಕೊಳ್ಳುತ್ತಿದ್ದುದು ಭಯಾನಕವಾಗಿತ್ತು.
ತನ್ನ ಅರವತ್ತೈದು ವರ್ಷದ ಸೇವೆಯಲ್ಲಿ ಮೂವತ್ತೆರಡು ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದೂ; ಅದರಲ್ಲಿ ಹದಿನೇಳು ಸ್ವಾತಂತ್ರ್‍ಯ ಬಂದ ನಂತರವೆಂದೂ; ಮೂರು ವರ್ಷದ ಹಿಂದೆ ಕಟ್ಟ ಕೊನೆಯದಾಗಿ ತಾಳೂರು ಬಂಗಾರಿಗಗೆ ಮರಣದಂಡನೆ ವಿಧಿಸಲಾಯಿತೆಂದೂ; ಮುಂದಿನ ವಾರ ವೆಂಕಟಾಪುರದ ಪೋತರಾಜುಗೆ ಮರಣದಂಡನೆ ವಿಧಿಸಲಾಗಿದೆ ಎಂದೂ; ಪರುಸ; ಭದ್ರರೇ ಮೊದಲಾದ ಹತ್ತು ಮಂದಿ ಕಟ್ಟಾಳುಗಳು ಅಪರಾಧಿಯ ಹುಡುಕಾಟಕ್ಕೆ ಹೋಗಿರುವರೆಂದೂ ತಣ್ಣಗೆ ಹೇಳಿದ.
ವರ್ಷಕ್ಕೆ ಒಬ್ಬರನ್ನಾದರೂ ಗಲ್ಲಿಗೇರಿಸದಿದ್ದರೆ ಮನೆಗೆ ಒಳ್ಳೆಯದಾಗುವುದಿಲ್ಲವೆಂದು ಆತ ಹೇಳಿದಾಗ ಹಣೆ ಮೇಲೆ ಬೆವರು ಕಾಣಿಸಿಕೊಂಡಿತು.
ಪೆದ್ದ ವೆಂಗಳರೆಡ್ಡಿ ಗಲ್ಲಿಗೇರಿಸಲು ಯಾರನ್ನಾದರೂ ದುಡ್ಡುಕೊಟ್ಟು ಕೊಂಡು ತರುತ್ತಿದ್ದರೆಂದು ಆತ ಹೇಳಿದಾಗ ಎದೆಮೇಲೆ ಬೆವರು ಕಾಣಿಸಿಕೊಂಡಿತು.
ಈಗಿನ್ನ ಚಿನ್ನ ವೆಂಗಳರೆಡ್ಡಿ ದೊರೆ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಮೂರು ವರ್ಷ ತೆಗೆದುಕೊಂಡರೆಂದು ಹೇಳಿದಾಗ ಸೊಂಡದ ಸುತ್ತ ಸೆಳಕು ಕಾಣಿಸಿಕೊಂಡಿತು.
ನಾವು ಎಲ್ಲರೂ ಒತ್ತಾಯ ಮಾಡಿ ಪೋತರಾಜನ ವಿರುದ್ಧ ಮರಣದಂಡನೆ ಸಾರುವಂತೆ ಆಡಿದೆವು ಎಂದು ಹೇಳಿದಾಗ ಕಾಲ ಮೀನಖಂಡಗಳು ಕಂಪಿಸಲು ಆರಂಭಿಸಿದವು.
ಪೋತರಾಜು ಮಾಡಿರೋ ಅಪರಾಧವೇನು ಎಂದು ಕೇಳಿದೆ.
ಕೃಷಿ ಕಾರ್ಮಿಕರ ಸಂಘ ಮಾಡಿಕೊಂಡು ದೊರೆಗಳ ವಿರುದ್ಧ ಮುಗ್ಧ ಪ್ರಜೆಗಳನ್ನು ಎತ್ತಿಕಟ್ಟುತ್ತಿದ್ದಾನೆಂಬುವುದೇ ಆ ಅಪರಾಧ.
ಗ್ರಾಮದ ಹೊರಗಿನ ಉಗ್ರಾಣದ ಮನೆಯಲ್ಲಿ ಆತನನ್ನು ಬಂಧಿಸಿಡಲಾಗಿತ್ತಂತೆ. ತೀರ್ಪು ಓದಿದ ಮರುದಿನ ರಾತ್ರಿ ಆತ ಅಲ್ಲಿಂದ ತಪ್ಪಿಸಿಕೊಂಡು ಬಿಟ್ಟಿರುವನಂತೆ. ಆತ ಪೆದ್ದವೆಂಗಳರೆಡ್ಡಿಯ ಇಪ್ಪತ್ತೊಂದನೆಯ ಪ್ರೇಯಸಿ ಬಸವಮ್ಮನ ಏಕಮಾತ್ರ ಪುತ್ರನಂತೆ. ನಿರ್ವಿಕಾರ ಚಿತ್ತದಿಂದ ಮುದುಕ ಹೇಳುತ್ತಿದ್ದಂತೆ ನನ್ನ ತಲೆ ಸುತ್ತಲಾರಂಭಿಸಿತು.
ಇನ್ನೇನು ಬಿದ್ದೇಬಿಡುತ್ತೇನೆ ಎನ್ನುವಾಗ ತಿರುಪತಯ್ಯ, “ಅದ್ಕೇ ಹೇಳದ್ದು ಇಂಥ ಸಂಗತಿಗಳ ಕಡೆ ನಿಮ್ಮಂಥೋರು ಗಮನ ಕೊಡಬಾರದೂಂತ. ಇಂಥಾದ್ನೆಲ್ಲ ನೀವು ಕಾದಂಬರೀಲಿ ಬರೆದ್ರೆ ಜನ ಅದ್ನ ನಂಬೋದಿಲ್ಲ. ಸುಳ್ಳುಸುಳ್ಳೇ ಬರೆದಿದ್ದಾನೆಂದು ನಕ್ಕುಬಿಡ್ತಾರಷ್ಟೆ,” ಎಂದು ಸತ್ಯ ಹೇಳುತ್ತ ಕೈಹಿಡಿದು ಮೆಲ್ಲಗೆ ಹೊರಗಡೆ ಕರೆದೊಯ್ದ.
-೩-
ವಾಚಸ್ಪತಿ ಮಿಶ್ರನ ‘ನ್ಯಾಯಕರ್ಣಿಕಾ’ವನ್ನು ಮತ್ತು ಅದರೊಂದಿಗೆ ಜೈಮಿನಿ, ಬಾದರಾಯಣ, ಕಪಿಲ, ಪತಂಜಲಿ; ಗೋತಮ; ಕಣಾದ ಕೃತಿಗಳನ್ನು ಅರಗಿಸಿಕೊಂಡೂ ಪ್ರಫುಲ್ಲ ಮನಸ್ಸಿನ ವೆಂಗಳರೆಡ್ಡಿ ದೊರೆಗಳು ಕಾಮ್ರೇಡ್ ಪೋತರಾಜನನ್ನು ಗಲ್ಲಿಗೇರಿಸುವ ನಿರೀಕ್ಷೆಯಲ್ಲಿರುವುದರ ಕುರಿತು ಯೋಚಿಸುತ್ತಾ, ಯೋಚಿಸುತ್ತಾ ನಿದ್ದೆ ಹೋಗಿದ್ದೆನು.
ನನಗೆ ಯಾವಾಗ ನಿದ್ದೆ ಬಂತೋ ತಿಳಿಯದು. ಏನೇನೋ ಕನಸುಗಳು; ಕನವರಿಕೆಗಳು;
ದೂರ ಮಾಡುವರೇನೆ ಕೃಷ್ಣಯ್ಯನ ದೂರ ಮಾಡುವರೇನೆ ಎಂದು ಯಾವುದೋ ಕೋಮಲ ಕಂಠ ಅಲೆ ಅಲೆಯಾಗಿ ಬಂದು ಕಿವಿಗೆ ತಾಕಿತು.
ಯಾರು ಹಾಡುತ್ತಿರಬಹುದೆಂದು ಯೋಚಿಸಿದೆ. ಆಕೆ ಹಾಡುತ್ತಿರುವುದು ಅಷ್ಟೇ ಕೋಮಲವಾದ ಮಧ್ಯಮಾವತಿ ರಾಗದಲ್ಲಿ.
ಆಂಧ್ರದ ಜಮೀನ್ದಾರಿ ವ್ಯವಸ್ಥೆಯೊಳಗೂ ಕನ್ನಡದ ಪುರಂದರದಾಸರಿದ್ದಾರೆನ್ನುವುದೇ ಸಂತೋಷದ ಸಂಗತಿ.
ತುಂಬ ದೂರದಿಂದ ಕೇಳಿಬರುತ್ತಿರುವ ಧ್ವನಿ. ಈ ವಿಶಾಲವಾದ ಗಾದೆಯೊಳಗೆ ಎಲ್ಲೋ ಮೂಲೆಯಲ್ಲಿ ಹಾಡುತ್ತಿರುವುದಂತೂ ಸ್ಪಷ್ಟ. ಹೋಗಿ ನೋಡಬೇಕೆಂಬ ಆಸೆ. ಆದರೆ ಭಯ; ಆಸೆ ಹಾಗೇ ಮುಟುರಿಹೋಯಿತು. ಮಲಗಿ ಉರುಳಾಡುತ್ತಿರುವುದಾದರೂ ಎಲ್ಲಿವರೆಗೆ? ಸಮಯ ಎಷ್ಟಾಗಿರುವುದೇನೋ ನೋಡಬೇಕೆಂದರೆ ಅಪ್ಪನ ಅದ್ಭುತ ಬಳುವಳಿಯಾದ ಬಾದರಾಯಣ ಕಾಲದ ವಾಚು ಚಲಿಸದೆ ನಿನ್ನೆಗೇ ನಿಂತು ಬಿಟ್ಟಿತ್ತು. ಬೆಳಗಾಗಿರುವುದಂತೂ ನಿಜ. ಎಲ್ಲೂ ಸೂರ್ಯೋದಯದ ಎಳೆ ಬಿಸಿಲಿನ ಪತ್ತೆಯೇ ಇಲ್ಲ. ಸೂರ್ಯ ಉದಿಸುತ್ತಲೇ ಈ ಗಾದೆಯೊಳಗೆ ಎಲ್ಲೋ ಕಳೆದು ಹೋಗಿ ಬಿಡಬಹುದು; ನಾನಿರುವಾಗ ಸೂರ್ಯನಿಗ್ಯಾಕೆ ಬಂಬಲಿಸುತ್ತಿ ಬಡ್ಡಿಮಗನೇ ಎಂದು ವಿದ್ಯುದ್ದೀಪ ಅಣಕಿಸಿತು. ಕಥೆಗಾರ ಎಂದು ಸೋಗು ಹಾಕಿ ಮೃತ್ಯುಕೂಪದಂಥ ಗಾದೆಯೊಳಗೆ ತೂರಿಕೊಂಡಿರುವ ನೀನು ನಮ್ಮ ಕಡೆ ಒಮ್ಮೆ ನೋಡಬಾರದೆ ಎಂದು ಸೆಲ್ಫ್‌ನಲ್ಲಿದ್ದ ಪುಸ್ತಕಗಳ ಸಾಲು ಗೊಣಗಿ ನಿಟ್ಟುಸಿರುಬಿಟ್ಟಂತೆ ಭಾಸವಾಯಿತು. ಹೋಗಿ ತಿರುವಿ ಹಾಕತೊಡಗಿದೆ.
ವೆಂಕಟಾಚಾರ್ಯ ಕವಿಯ ಅಚಲಾತ್ಮಜಾಪರಿಣಯಮು; ತಿರುವೇಂಗಳನಾಥನ ಅಷ್ಟಮಹಿಷ ಕಲ್ಯಾಣಮು, ದೂರ್ಜಟಿ ಕವಿಯ ಇಂದುಮತೀ ಪರಿಣಯಮು; ವೇಮುಲವಾಡ ಭೀಮಕವಿಯ ಕವಿಜನಾಶ್ರಯಮು; ಶ್ರೀನಾಥುನ ಶೃಂಗಾರ ನಿಷಧಮು; ಅಲ್ಲಸಾನಿಪೆದ್ದನನ ಮನುಚರಿತ್ರ ಇವೆ ಮೊದಲಾದ ಸಾವಿರಾರು ಗ್ರಂಥಗಳಿದ್ದವು. ಮನುಚರಿತ್ರೆಯನ್ನು ಹಿಂದೆ ಎಂದೋ ತಿರುವಿ ಹಾಕಿದ ನೆನಪು. ಅದರಲ್ಲಿನ ಪ್ರವರ, ವರೂಥಿನಿ ಅಖ್ಯಾನಮು ಇನ್ನೂ ಮೆದುಳೊಳಗೆ ಅಚ್ಚೊತ್ತಿದಂತಿದೆ. ಕರ್ಣಾಟಾಂದ್ರ ಸಾರ್ವಭೌಮ ಶ್ರೀ ಕೃಷ್ಣದೇವರಾಯನ ‘ಆಮುಕ್ತ ಮಾಲ್ಯದ’ವನ್ನು ಕೈಗೆತ್ತಿಕೊಂಡೆ. ಕೆಲವು ಪುಟಗಳನ್ನು ತಿರುವಿಹಾಕಿದೆ. ಶ್ರೀ ಕೃಷ್ಣದೇವರಾಯನ ತಂದೆ ತಿಮ್ಮರಸನೋ? ನರಸನಾಯಕನೋ; ಹಾಗೆಯೇ ಈ ಕಾವ್ಯ ಬರೆದಿರುವುದು ರಾಯನೋ ಅಥವಾ ಅವನ ಪರಮಮಿತ್ರ ಅಲ್ಲಸಾನಿ ಪೆದ್ದಣನ್ನೋ! ಇಂಥದೊಂದು ಕಾವ್ಯ ಕನ್ನಡಕ್ಕೆ ಅನುವಾದ ಮಾಡಬೇಕು ಮುಂದೆ ಎಂದಾದರೂ. ನಾರಿಕೇಳ ಪಾಕದಂಥ ಪದ್ಯಗಳನ್ನು ಅರಗಿಸಿಕೊಳ್ಳುವುದೆಂದರೆ ಕಬ್ಬಿಣದ ಕಡಲೆಯನ್ನು ಜಗಿದು ನುಂಗಿದಂತೆಯೇ ಲೆಕ್ಕ. ವೇದಮು ವೆಂಕಟರಾಯಶಾಸ್ತ್ರಿಗಳಿಗೆ ಮಾತ್ರ ಅದರ ಮೇಲೆ ಪ್ರಭುತ್ವವಿರುವುದು. ತೆಲುಗಿನ ಮಾರ್ಗ ಕವಿಗಳು; ವಿವಿಧ ಕಳಾ ಪಂಡಿತರು ಎಂದೂ ಸಾಮಾನ್ಯ ಪ್ರಜೆಗಳ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಅದರಲ್ಲಿನ ಒಂದೊಂದು ಪದ್ಯವು ಒಂದೊಂದು ಕ್ವಿಂಟಲ್ ಭಾರವೆಂದೆನಿಸಿ ಆಮುಕ್ತ ಮಾಲ್ಯದವನ್ನು ಹಾಗೇ ಸ್ವಸ್ಥಾನದಲ್ಲಿರಿಸಿದೆ.
ದೇಹದ ಜಡತೆಯನ್ನು ನೀಗಿಸಲು ಯೋಗಾಸನಗಳನ್ನಾದರೂ ಹಾಕೋಣವೆಂದು ಲುಂಗಿ ಬಿಚ್ಚಿ ನೆಲದ ಮೇಲೆ ಕಡ್ಡಿ ಚಾಪೆ ಹಾಸಿದೆ. ಲಘು ವ್ಯಾಯಾಮದ ನಂತರ ಕೆಲವು ಸರಳ ಆಸನಗಳನ್ನು ಹಾಕಿದೆ. ಸಾಲಂಬ ಸರ್ವಾಂಗಾಸನ ಹಾಕಿದಾಗ ಬಾಗಿಲು ತಟ್ಟಿದ ಸದ್ದು ಕೇಳಿಸಿತು. ಲುಂಗಿ ಸುತ್ತಿಕೊಂಡು ತೆರೆದೆ.
ದೈತ್ಯನೊಬ್ಬ ನಿಂತಿದ್ದ.
ಸ್ನಾನ ಮಾಡಿ ರೆಡಿಯಾಗಬೇಕೆಂದೂ, ದೊರೆಗಳು ಕಾಯ್ತಿದಾರೆಂದೂ ಹೇಳಿದ. ಸ್ನಾನ ಮಾಡಲೆಂದು ಬಚ್ಚಲ ಮನೆಗೆ ಹೋದಾಗ ಅಲ್ಲೊಬ್ಬ ಹೆಂಗಸು ಕೈಯಲ್ಲಿ ಎಣ್ಣೆ ಬಟ್ಟಲು ಹಿಡಿದುಕೊಂಡು ನನಗಾಗಿ ಕಾಯುತ್ತಿದ್ದಳು.
“ಬಟ್ಟೆ ಬಿಚ್ಚಿ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕಾಗಿದೆ” ಅಂದಳು.
ನಾಚಿಕೆಯಿಂದ ಬೇಡ ಅಂದೆ. ಮತ್ತೆ ಒತ್ತಾಯಿಸಿದಳು. ಅತಿಥಿಗಳ ಸತ್ಕಾರದ ವಿಷಯದಲ್ಲಿ ಕರ್ತವ್ಯಲೋಪವಾಗಿ ಎಲ್ಲಿ ದೊರೆಗಳ ಕೋಪಕ್ಕೆ ತುತ್ತಾಗುವೆನೋ ಎಂಬ ಆತಂಕ ಅವಳ ಶ್ಯಾಮಲ ವರ್ಣದ ಸುಂದರ ಮುಖದಲ್ಲಿತ್ತು. ತನ್ನ ದುಂಡನೆಯ ಮೊಲೆಗಳಿಂದ ತುಂಬಿದ್ದ ಎದೆಯನ್ನು ತೀರ ಹತ್ತಿರ ತಂದು ಬನಿಯನ್‌ಗೆ ಕೈ ಹಚ್ಚಿದಳು. ಅವಳ ಉಸಿರು ನನ್ನ ಮುಖದ ತುಂಬ ಹರಿದಾಡಿತು. ಬೇರೆ ದಾರಿ ಇಲ್ಲದೆ ಬನಿಯನ್ ಬಿಚ್ಚಿದೆ. ಹಾಗೇ ಲುಂಗಿ ಉದುರಿಸದೆ ಬೇರೆ ದಾರಿಯೇ ಇರಲಿಲ್ಲ. ತನಗೆ ಬೇಕಾದ ರೀತಿಯಲ್ಲಿ ನನ್ನನ್ನು ಮಲಗಿಸಿ ಮೈತುಂಬ ಎಣ್ಣೆ ಲೇಪಿಸಿದಳು.
“ಇನ್ನೂ ಮದುವೆ ಆದಂಗಿಲ್ಲ ಅಲ್ವೇ” ಅಂದಳು. ಹೂಂ ಅಂದೆ. ಎಲ್ಲ ವಿವರ ಕೇಳಿದಳು. ಹೇಳಿದೆ. ಕೆಲವೇ ಕ್ಷಣಗಳಲ್ಲಿ ಆಕೆ ಪರಮಾಪ್ತಳಾಗಿಬಿಟ್ಟಳು. ಆಕೆಯ ಹೆಸರು ಖೂನು ಕೇಳಿದೆ. ಆಕೆ ತನ್ನ ಹೆಸರು ಲಚುಮಿ ಎಂದೂ ತಾನು ಬೋಯ ಈರನ್ನನ ನಾಲ್ಕನೆಯ ಮಗಳು ಎಂದೂ ಋತುಮತಿಯಾದಂದಿನಿಂದ ತಾನು ದೊರೆಗಳ ಸೇವೆಯಲ್ಲಿರುವುದಾಗಿಯೂ ಹೇಳಿದಳು. ಮದುವೆ ಬಗ್ಗೆ ಕೇಳಿದೆ-ನಕ್ಕಳು. ದೊರೆಗಳು ಗಂಡನಿಗಿಂತ ಹೆಚ್ಚು ಎಂದು ಹೇಳಿದಳು. ತಾನು ಒಂದು ಅರ್ಥದಲ್ಲಿ ಈಡೀ ಈ ಗಾದೆಗೇ ಹೆಂಡತಿ ಇದ್ದಂತೆ ಎಂದು ಹೇಳಿದಳು. ನೀವು ಇಷ್ಟಪಡೋದಾದ್ರೆ ರಾತ್ರಿ ನಿಮ್ಮ ಕೋಣೆಗೆ ಬರ್‍ತೀನಿ ಎಂದು ಹೇಳಿದಳು. ಮಣೆ ಮೇಲೆ ಕೂಡ್ರಿಸಿ ಅಡಿಯಿಂದ ಮುಡಿವರೆಗೆ ಬಿಸಿ ನೀರು ಸುರಿದಳು. ನನ್ನ ಮುಖವನ್ನು ಬೊಗಸೆ ತುಂಬ ಹಿಡಿದು ಒಂದು ಬೆಚ್ಚಗೆ ಮುದ್ದು ಕೊಟ್ಟಳು. ದೊರೆಗಳು ದೇವರಿದ್ದಂಗೆ ತುಂಬ ಒಳ್ಳಗೆಯವರು ಎಂದು ಹೇಳಿ ಹೊರಟು ಹೋದಳು. ನಾನು ಬಟ್ಟೆ ಉಟ್ಟುಕೊಂಡು ದೈತ್ಯನ ಹಿಂದೆ ಹೊರಟೆ.
ಆತ ನನ್ನನ್ನು ದೇವರ ಕೋಣೆಗೆ ಕರೆದೊಯ್ದ. ದೊರೆಗಳು ಭಕ್ತಿಯಿಂದ ಮಾಡಲ್ಪಟ್ಟಿರುವವರಂತೆ ಇಷ್ಟದೇವತಾ ಅರ್ಚನೆಯಲ್ಲಿ ಮಗ್ನರಾಗಿದ್ದರು. ಅವರ ಬಾಯಿಯಿಂದ ಉಪಾಸನಾ ಮಂತ್ರಗಳು ನಿರರ್ಗಳವಾಗಿ ಉದುರುತ್ತಿದ್ದವು. ಪೂಜೆ ಎಲ್ಲ ಮುಗಿದ ನಂತರ ನನಗೆ ಪ್ರಸಾದ-ತೀರ್ಥ ನೀಡಿದರು. ಸ್ವೀಕರಿಸಿದೆ.
“ಪಂತಲುಗಾರು ನಿದ್ರಭಾಗ ವಚ್ಚಿಂದಾ” ಅಂದರು.
ಹೂಂ ಅಂದೆ.
“ಪುಲಕುರ್ತಿಗೆ ಹೋಗ್ತಿದೀವಿ ಬರ್‍ತೀರಾ” ಅಂದರು.
ಹೂಂ ಅಂದೆ.
ಬನ್ನಿ ತಿಂಡಿ ತಿನ್ನೋಣವೆಂದರು.
ಹೋದೆ.
ನಾಲ್ಕು ಮಂದಿ ವಿವಿಧ ವಯಸ್ಸಿನ ಹೆಂಗಸರು ಇಡ್ಲಿ ವಡೆ, ದೋಸೆಗಳಿಮದ ತುಂಬಿದ್ದ ಪಾತ್ರೆಗಳನ್ನು ತಂದು ಟೇಬಲ್ ಮೇಲಿಟ್ಟರು. ನಿನ್ನೆ ನನಗೆ ಊಟ ಬಡಿಸಿದ್ದ ಹೆಂಗಸರೂ ಅವರಲ್ಲಿದ್ದರು. ಅವರೆಲ್ಲ ದೊರೆಗಳ ಪತ್ನಿಯರೆಂದು ನನಗೆ ತದನಂತರ ಅರ್ಥವಾಯಿತು. ಅವರು ತಿಂಡಿಗೆ ವಜ್ರದ ಉಂಗುರಗಳಿದ್ದ ಬೆರಳುಗಳನ್ನು ಹಚ್ಚಬೇಕೆನನ್ನುವಷ್ಟರಲ್ಲಿ ತಿರುಪತಯ್ಯ ತುಂಬಿದ್ದ ಬೆಳ್ಳಿ ಬಟ್ಟಲು ತಂದಿಟ್ಟ. ಲೇಹ್ಯದ ಪರಮಳ ಹರಡಿತು. ಎರಡು ಚಮಚ ಲೇಹ್ಯ ಸ್ವೀಕರಿಸಿದರು.
ಬಹುಶಃ ಅದು ಲೈಂಗಿಕ ಶಕ್ತಿ ವರ್ಧನಾ ಲೇಹ್ಯವಿರಬಹುದು.
ತಿಂಡಿ ಬಡಿಸುತ್ತಿದ್ದ ಆ ನಾಲ್ಕು ಮಂದಿ ಬಿಚ್ಚೋಲೆ ಗೌರಮ್ಮನವರು ಯಾವ ಕಾರಣಕ್ಕೂ ತಲೆ ಎತ್ತುತ್ತಿರಲಿಲ್ಲ. ಕಣ್ಣುಗಳನ್ನು ಝಳಪಿಸುತ್ತಿರಲಿಲ್ಲ. ಅವರ ಮುಖ ಬೆಳದಿಂಗಳನ್ನು ಚೆಲ್ಲುತ್ತಿತ್ತು. ಪುಷ್ಕಳವಾದ ತಿಂಡಿ ಸಮಾರಾಧನೆಯಾಯಿತು.
ಕೋಣೆಗೆ ಹೋಗಿ ಬಟ್ಟೆ ತೊಟ್ಟುಕೊಂಡು ಬಂದೆ. ಸುಬ್ಬುಲು ನನ್ನನ್ನು ಸಾರೋಟಿಗೆ ಸ್ವಾಗತಿಸಿದ. ಹತ್ತಾರು ಮಂದಿ ತಮ್ಮ ಕಷ್ಟ ನಿವೇದಿಸಿಕೊಳ್ಳಲು ದೊರೆಗಳಿಗಾಗಿ ಕಾಯುತ್ತಿದ್ದರು. ನಾನು ಸಾರೋಟಿನ ಬಳಿ ನಿಂತೆ. ದೊರೆಗಳು ಬಾಗಿಲ ಬಳಿ ಕಾಣೀಸಿಕೊಂಡೊಡನೆ ಜನರೆಲ್ಲ ಅಡ್ಡಬಿದ್ದಿದ್ದರು. ಅವರೆಲ್ಲ ತಮ್ಮ ಕಷ್ಟಗಳನ್ನು ಒಬ್ಬೊಬ್ಬರಾಗಿ ನಿವೇದಿಸಿಕೊಂಡರು. ದೊರೆಗಳು ಕೇಳುತ್ತ ತಮ್ಮ ಕೆಲವು ಸಂಜ್ಞೆಗಳಿಂದಲೇ ಪರಿಹಾರ ಸೂಚಿಸುತ್ತಿದ್ದರು. ಅವರ ನಿಗೂಢ ಸಂಜ್ಞೆಗಳನ್ನು ಕಾರ್ಯಗತ ಮಾಡಲು ಅವರ ಹತ್ತಾರು ಮಂದಿ ಆಜ್ಞಾಧಾರಕ ಬಂಟರು ಸಜ್ಜಾಗಿದ್ದರು.
ಅವರೂ ಸಾರೋಟು ಏರುವರೆಂಬ ನನ್ನ ನಿರೀಕ್ಷೆ ಸುಳ್ಳಾಯಿತು. ಅವರು ತೆರೆದ ಡೋಲಿಯೊಳಗೆ ಹೋಗಿ ಕೂತರು. ಆ ಡೋಲಿಯನ್ನು ಮುಂದೆ ನಾಲ್ಕು ಜನ ಹಿಂದೆ ನಾಲ್ಕು ಜನರಂತೆ ಹೊತ್ತುಕೊಂಡರು. ಗೆಜ್ಜೆಗಳ ಬಡಿಗೆಗಳನ್ನು ಹಿಡಿದುಕೊಂಡಿದ್ದ ಇಬ್ಬರು ಮುಂದೆ ಕುಲುಕು ಹೆಜ್ಜೆಯಲ್ಲಿ ಓಡತೊಡಗಿದರು.
‘ಗುನ್‌ಗುನಾ ಗುನ್‌ಗುನಾ ಗುನ್‌ಗುನಾರೆ ಗುನ್‌ಗುನಾ’ ಎಂದು ಡೋಲಿ ಹೊತ್ತವರು ಲಯಬದ್ಧವಾಗಿ ಗುನುಗುತ್ತಾ ಕುಲುಕು ಓಟದಲ್ಲಿ ಸಾಗಿದರು. ಡೋಲಿಯ ಎರಡೂ ಪಕ್ಕ ಚೂಪನೆಯ ಭಲ್ಲೆಗಳನ್ನು ಹಿಡಿದುಕೊಂಡಿದ್ದ ಎಂಟು ಮಂದಿ ಇದ್ದರು. ಡೋಲಿಯ ಹಿಂದೆ ಸಾರೋಟು. ಸಾರೋಟಿನ ಹಿಂದೆ ಎಂಟು ಮಂದಿ. ಅವರ ಸೊಂಟಗಳನ್ನು ಪರಶಗೊಡಲಿಗಳು ಅಲಂಕರಿಸಿದ್ದವು. ಅವೆಲ್ಲ ಸೂರ್ಯನ ಎಳೆಬಿಸಿಲಿಗೆ ಫಳಫಳ ಹೊಳೆಯುತ್ತಿದ್ದವು. ಬಡಿಗೆಗಳ ಗೆಜ್ಜೆ ಸದ್ದಿಗೆ; ಡೋಲಿ ಹೊತ್ತವರ ಹಾಡಿಗೆ ಬೀದಿಗಳು ನಿರ್ಮಾನುಷವಾಗುತ್ತಿದ್ದವು.
ಸಾರೋಟಿನ ಮುಂದುಗಡೆ ಕೂತಿದ್ದ ತಿರುಪತಯ್ಯ ತನ್ನ ತೊಡೆ ಮೇಲೆ ನೋಟುಗಳಿಂದ ತುಂಬಿದ್ದ ಪೆಟ್ಟಿಗೆಯನ್ನು ಇಟ್ಟುಕೊಂಡಿದ್ದ. ಪೆದ್ದವೆಂಗಳರೆಡ್ಡಿ ದೊರೆಗಳ ಕಾಲದ ಬಗ್ಗೆ ವಿವರಿಸುತ್ತಿದ್ದ. ದೊರೆಗಳು ಕಾರಿನಲ್ಲಿ ಹೋಗಬಹುದಲ್ಲ ಅಂದೆ. ದೊರೆಗಳು ಕಾರಿನಲ್ಲಿ ಹೋದರೆಂದ್ರೆ ವಂಶಪಾರಂಪರ್ಯವಾಗಿ ಡೋಲಿ ಹೊರೋ ಬೋಯ ಜನಾಂಗ ಬದುಕೋದು ಹೇಗೆ ಅಂದ. ಡೋಲಿ, ಪಲ್ಲಕ್ಕಿಗಳಲ್ಲಿ ಹೋಗೋದು ದೊರೆಗಳ ಗೌರವದ ಪ್ರಶ್ನೆ ಎಂದೂ, ಜನರ ಭಯಭಕ್ತಿ ಗೊತ್ತಾಗೋಕೆ ಕಾರಿನಲ್ಲಿ ಪಯಣಿಸೋದು ಅಷ್ಟು ಸೂಕ್ತ ಅಲ್ಲವೆಂದೂ ವಿವರಿಸಿದ. ಯಾವುದೇ ವಾಹನ ದೊರೆಗಳ ಡೋಲಿಗೆ ಎದುರಿನಿಂದ ಬರುವುದಾಗಲೀ; ಹಿಂದಿನಿಂದ ಬಂದು ಮುಂದೆ ಹೋಗುವುದಾಗಲೀ ಅಪರಾಧವಾಗುತ್ತದೆ ಎಂದು ಸೂಕ್ಷ್ಮವಾಗಿ ತಿಳಿಸಿದ.
ಪೋತರಾಜು ದೊರೆಗಳ ಡೋಲಿಯನ್ನು ನಿರ್ಲಕ್ಷಿಸುವಂತೆ ಜನರಿಗೆ ತಾಕೀತು ಮಾಡುತ್ತಿದ್ದನಂತೆ. ದೊರೆಗಳ ಮನೆತನಕ್ಕೆ ಗೌರವಪೂರ್ವಕವಾಗಿ ಪುಕ್ಕಟೆಯಾಗಿ ಸರಬರಾಜು ಮಾಡುವ ಕಸುಬಸ್ಥರ ಕಿವಿಯಲ್ಲಿ ಏನೇನೋ ಊದಿದ್ದನಂತೆ. ದೊರೆಗಳ ಮನ್ತನದ ಸೇವೆಗೆ ಹೆಣ್ಣುಮಕ್ಕಳನ್ನು ಕಳಿಸಬಾರದೆಂದು ಕೆಳಗೇರಿಗಳಲ್ಲಿ ಪಾಠ ಮಾಡುತ್ತಿದ್ದನಂತೆ. ಆತ ಅವಿದ್ಯಾವಂತನಲ್ಲವಂತೆ; ಕಾಕತೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿ ಪಡೆದಿರುವನಂತೆ. ಆತ ಬರೆದಿರುವ ಕೆಲವು ಕಥೆಗಳೆಂದರೆ ದೊರೆಗಳಿಗೆ ಪಂಚ ಪ್ರಾಣವಂತೆ. “ಅಯ್ಯೋ ನನ್ನ ಪ್ರೀತಿಯ ಕಥೆಗಾರ ಸಾಯುವುದನ್ನು ಹೇಗೆ ನೋಡಲಿ ತಿರುಪತಯ್ಯ” ಎಂದು ಅವರು ಮಮ್ಮಲನೆ ಮರುಗಿದರಂತೆ. ಅವರು ಸಾಯೋದ್ರಿಂದ ಪೆದ್ದವೆಂಗಳರೆಡ್ಡಿ; ಚಿನ್ನ ಓಬಳರೆಡ್ಡಿ; ಉಯ್ಯಾಲಪಾಡು ನರಸಿಂಹರೆಡ್ಡಿ ಮುಂತಾದವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ತಿರುಪತಯ್ಯ ಪರಿಪರಿಯಾಗಿ ಸಂತೈಸಿದನಂತೆ.
‘ತಿರುಪತಯ್ನೋರೆ… ಪೋತರಾಜನ್ನ ನಾನು ಒಮ್ಮೆ ನೋಡಬೇಕಲ್ಲ,” ಎಂದು ಕೇಳಿದೆ. ಅದಕ್ಕೆ ಆ ವೃದ್ಧ ನಕ್ಕ. “ಎಷ್ಟಿದ್ದರೂ ಅವನ ಮೈಯಲ್ಲಿ ಹರೀತಿರೋದು ಪೆದ್ದವೆಂಗಳರೆಡ್ಡಿ ದೊರೆಗಳ ರಕ್ತ ನೋಡು…. ನಮ್ಮ ಚಿನ್ನವೆಂಗಳರೆಡ್ಡಿ ದೊರೆಗಳನ್ನೇ ಹೋಲ್ತಾನವನು. ಆದ್ರೆ ಅವನ ಬಣ್ಣ ಮಾತ್ರ ಕಪ್ಪು” ಎಂದ.
“ಅವ್ನಿಗೆ ಕೆಲವು ನಕ್ಸಲೈಟುಗಳ ಸ್ನೇಹ ಇದೆ. ಅವ್ನು ಯಾವ ಕ್ಷಣದಲ್ಲಾದ್ರೂ ನಕ್ಸಲೈಟುಗಳೊಂದಿಗೆ ದೊರೆಗಳ ಮೇಲೆ ದಾಳಿ ಮಾಡಬಹುದು. ಅದಕ್ಕಾಗಿ ನಾವೂ ಕಾಯ್ತೀದೀವಿ ಅವರ ಹೆಣಗಳಿಗಾಗಿ” ಎಂದು ಮೂಗಿಗೆ ನಶ್ಯ ಏರಿಸಿದ.
ಸುಮಾರು ಹನ್ನೊಂದೂವರೆ ಹೊತ್ತಿಗೆ ಪುಲಕುರ್ತಿ ತಲುಪಿದೆವು. ಪುಲಕುರ್ತಿಯ ಜಮೀನ್ದಾರ ಸುಬ್ಬಾರೆಡ್ಡಿ ಮಂಗಳವಾದ್ಯಗಳೊಂದಿಗೆ ದೊರೆಗಳನ್ನು ಸ್ವಾಗತಿಸಿದ. ಜನ ದೊರೆಗಳ ಕಡೆ ಕುತೂಹಲದಿಂದ ನೋಡುತ್ತಿದ್ದರು. ಇಡೀ ಗ್ರಾಮಕ್ಕೆ ಗ್ರಾಮವೇ ಸಂಭ್ರಮದಿಂದ ಓಲಾಡುತ್ತಿತ್ತು. ಕರಗಲ್ಲಿನಿಂದ ನಡೆದು ಸುಬ್ಬಾರೆಡ್ಡಿಯವರ ಗಾದೆ ತಲುಪಲು ಸುಮಾರು ಹೊತ್ತು ಹಿಡಿಯಿತು. ಸುಬ್ಬಾರೆಡ್ಡಿಯವರ ಗಾದೆ ತಲುಪಲು ಸುಮಾರು ಹೊತ್ತು ಹಿಡಿಯಿತು. ಸುಬ್ಬಾರೆಡ್ಡಿಯವರ ಬಹುದಿನದ ಕೈಕುಲುಕುವ ಆಸೆಯನ್ನು ಈಡೇರಿಸಲು ವೆಂಗಳರೆಡ್ಡಿ ದೊರೆಗಳ ಅಂಗರಕ್ಷಕರು ಬಿಡಲಿಲ್ಲ. ದೂರದಿಂದಲೇ ಕೈಮುಗಿಯುವಂತೆ ಸೂಚಿಸಿದರು. ದೊರೆಗಳ ಕೈಕುಲುಕುವುದಕ್ಕೂ ಒಂದು ಯೋಗ್ಯತೆ ಬೇಕು. “ಕೈ ಕುಲುಕುವ ನೆಪದಲ್ಲಿ ಚೂರಿ ಹಾಕಿದರೆ ಏನು ಮಾಡುವುದು?” ಎಂಬುದು ತಿರುಪತಯ್ಯನ ಮುಂದಾಲೋಚನೆ. ಆದರೆ ನಾನು ಕಂಡಂತೆ ಸುಬ್ಬಾರೆಡ್ಡಿಯ ಮುಖದಲ್ಲಿ ಅಂತಹ ಕುತ್ಸಿತ ಭಾವನೆ ಇರಲಿಲ್ಲ. ಆತ ದೊರೆಗಳ ಸ್ನೇಹಕ್ಕಾಗಿ, ಆಸರೆಗಾಗಿ ಹಾತೊರೆಯುತ್ತಿರುವಂತೆ ಕಾಣುತ್ತಿದ್ದ.
ಆತ ಕೇವಲ ಒಂಬೈನೂರು ಎಕರೆ ಜಮೀನ್ದಾರನಾಗಿದ್ದರೂ ಬಗಬಗೆಯ ಭಕ್ಷ್ಯ ಭೋಜ್ಯಗಳನ್ನು ಕರ್ನೂಲಿನ ಕೋಮಟಿಗರಿಂದ ಮಾಡಿಸಿದ್ದ. ತಿರುಪತಯ್ಯ ದೊರೆಗಳ ಮುಂದಿಟ್ಟಿದ್ದ ತಟ್ಟೆಗಳಿಂದ ಒಂದೊಂದು ಚೂರು ಮುರಿದು ತಿಂದ. ಐದು ನಿಮಿಷದ ನಂತರ ತಾನು ಬದುಕಿರುವುದನ್ನು ಖಚಿತಪಡಿಸಿಕೊಂಡ. ನಂತರ ಸ್ವೀಕರಿಸುವಂತೆ ದೊರೆಗಳಿಗೆ ಸೂಚಿಸಿದ. ದೊರೆಗಳು ಬಾದಾಮು, ಒಣದ್ರಾಕ್ಷಿ, ಗೋಡಂಬಿ, ಉತ್ತತ್ತಿ ಮೊದಲಾದವುಗಳನ್ನು ತಿಂದಂತೆ ಶಾಸ್ತ್ರ ಮಾಡಿದರು. ಅವರಿಗೆ ಕುಡಿಯಲು ತಿರುಪತಯ್ಯ ಕರಿವೇಮಲದಿಂದ ಜೊತೆಯಲ್ಲಿ ತಂದಿದ್ದ ನೀರನ್ನು ಕೊಟ್ಟ. ವೃದ್ಧನ ಈ ಅನುಮಾನದ ವರ್ತನೆಯಿಂದ ಸುಬ್ಬಾರೆಡ್ಡಿ ತುಂಬಾ ನೊಂದುಕೊಂಡ.
ಮರೆಯಲ್ಲಿ ಕರೆದು “ತಿರುಪತಯ್ನೋರೆ, ಈಗ್ಲೂ ಅನುಮಾನವೆ?” ಎಂದು ಮುಖ ಸಪ್ಪಗೆ ಮಾಡಿಕೊಂಡ.
ಅದಕ್ಕೆ ವೃದ್ಧ, “ಇದೇನು ನಿನ್ನೆ ಮೊನ್ನೆಯದೇನು ನಿಮ್ಮ ಮುತ್ತಾತ ಬಸ್ವಿರೆಡ್ಡಿಗೂ ಚಿನ್ನವೆಂಗಳರೆಡ್ಡಿ ದೊರೆಗಳ ಮುತ್ತಾತ ಚಿನ್ನ ಓಬುಳರೆಡ್ಡಿಯವರ ಕಾಲದಿಂದಲೂ ನಡೆದು ಬಂದಿರುವ ಮನಸ್ತಾಪ. ಆ ಕಾಮ್ರೇಡ್ ಪೋತರಾಜಗೆ ನೀವು ಎರಡು ದಿನ ಆಶ್ರಯ ನೀಡಿದ್ದರಂತೆ” ಎಂದು ಕುಟುಕಿದ.
ಅದನ್ನು ಕೇಳಿ ಸುಬ್ಬಾರೆಡ್ಡಿಗೆ ಆಶ್ಚರ್ಯವಾಯಿತು. “ಅದೆಂಥ ಮಾತು ಹೇಳ್ತೀರಿ ತಿರುಪತಯ್ಯ…. ರೆಡ್ಡಿ ಕುಲದಲ್ಲಿ ಹುಟ್ಟಿರೋ ನಾನು ಆ ನಕ್ಸಲೈಟ್‌ಗೆ ಆಶ್ರಯಕೊಡ್ತೀನೆಯೇ… ರೈತು ಕೂಲಿ ಸಂಘದ ಇಬ್ಬರನ್ನೂ ಕೊಲ್ಲಿಸಿ ಆಗಸೆ ಬಾಗಿಲಿಗೆ ತೂಗು ಹಾಕಿದ್ದೆ ಎರಡು ದಿನ. ರೈತು ಕೂಲಿ ಸಂಘಕ್ಕೆ ಯಾರಾದ್ರೂ ಸೇರಿದ್ರೆ ಇದೇ ಗತಿ ಅಂತ ಬೋರ್ಡು ಕೂಡ ಹಾಕಿಸಿದ್ದೆ” ಎಂದು ವಿವರಿಸಿದ.
ದೊರೆಗಳು ಉಪ್ಪರಿಗೆ ಕೋಣೆಯಲ್ಲಿ ನಿದ್ದೆ ಹೋದರು. ಅವರನ್ನು ಎಂಟು ಮಂದಿ ಸಶಸ್ತ್ರಧಾರಿಗಳು ಕಾಯುತ್ತಿದ್ದರು. ನಾನು ಮಗುವಿನಂತೆ ನಿದ್ರೆ ಹೋಗಿದ್ದ ದೊರೆಗಳನ್ನು ನೋಡಿಕೊಂಡು ಬಂದೆ.
ಸುಬ್ಬಾರೆಡ್ಡಿ ಅದು ಇದು ಮಾತಾಡ್ತಾ “ದೊರೆಗಳು ಪರ್ಮಿಷನ್ ಕೊಟ್ರೆ ಎಂ.ಎಲ್.ಎ. ಎಲೆಕ್ಷನ್ನಿಗೆ ನಿಲ್ಬೇಕಂತ ಮಾಡೀನಿ” ಅಂತ ಹೇಳಿದ.
ಹಾಗೆ ಒಂದು ಸುತ್ತು ಹಾಕಿಕೊಂಡು ಬರಲು ಊರೊಳಗಡೆ ಹೊರಟೆ.
ದ್ಯಾವಮ್ಮ ದೇವತೆಗೆ ಕೋಣ ಕಡಿಯುವ ಸಿದ್ಧತೆಯಲ್ಲಿ ಇಡೀ ಊರಿಗೆ ಊರೇ ಇತ್ತು. ಎಲ್ಲರೂ ನನ್ನತ್ತ ತುಂಬ ವಿಚಿತ್ರ ಆತಂಕದಿಂದ ನೋಡುತ್ತಿದ್ದರು. ಕೆಲವರನ್ನು ಮಾತಾಡಿಸಲು ಪ್ರಯತ್ನಪಟ್ಟೆ. ನಾನು ಒಬ್ಬ ಜಮೀನ್ದಾರನಿರಬಹುದೆಂದು ದೂರ ಸರಿಯುತ್ತಿದ್ದರು. ಕೆಲವರು ‘ರಂಡಿ, ದೊರರಂಡಿ’ ಎಂದು ಸ್ವಾಗತಿಸುತ್ತಿದ್ದರು. ನಾನು ‘ಪಂತುಲು’ ಎಂದರೆ ಅವರಾರು ನಂಬುತ್ತಿರಲಿಲ್ಲ. ಜಮೀನ್ದಾರನಿರಬೇಕು, ದೊರೆಗಳ ಮಗಳೊಂದಿಗೆ ಸಂಬಂಧ ಬೆಳೆಸುವವರಿರಬೇಕು ಅಥವಾ ಉನ್ನತ ಅಧಿಕಾರಿಯಾಗಿರಬೇಕೆಂದು ಅವರೆಲ್ಲ ಪರಸ್ಪರ ಗೊಣಗುತ್ತಿದ್ದರು. ಕುಂತಲ್ಲಿ ಕೂಡ್ರದೆ ನಿಂತಲ್ಲಿ ನಿಲ್ಲದೆ ಹಾಗೆ ತಿರುಗಾಡುತ್ತ ಹೋದೆ.
ಸುಬ್ಬಾರೆಡ್ಡಿ ಮೀಸಲು ಮುರಿಯಬೇಕಿದ್ದ ಒಂದು ಮನೆಯ ಒಂದು ಹುಡುಗಿಯ ವಯಸ್ಸು ಹನ್ನೆರಡಿರಬಹುದು.
ಇನ್ನೊಂದು ಮನೆಯ ಇನ್ನೊಂದು ಹುಡುಗಿಯ ವಯಸ್ಸು ಹದಿಮೂರಿರಬಹುದು.
“ಯಾವ ಪಾಪಕ್ಕೆ ಆ ದ್ಯಾವ್ರು ನಮ್ಗೆ ಹೆಣ್ಮಕ್ಕಳ್ನ ಕೊಡ್ತಿದಾನೆ…. ಹುಟ್ಟುತ್ಲೆ ಇವು ಯಾವುದಾದ್ರು ರೋಗ ಬಂದು ಸಾಯಬಾರದಾಗಿತ್ತೆ,” ಎಂದೊಬ್ಬ ಹೆಂಗಸು ಅಬ್ಬರಿಸಿ ಅಳುತ್ತಿದ್ದಳು.
ಇನ್ನೊಬ್ಬಾಕೆ, “ಇದು ತಲತಲಾಂತರದಿಂದ ನಡ್ದು ಬಂದಿರೋ ಸಂಪ್ರದಾಯ. ನಾನೂ ರೆಡ್ಡೇವ್ರಿಂದ ಮೀಸಲು ಮುರಿಸಿಕೊಂಡೋಳು. ನಮ್ಮವ್ವನ ಮೀಸಲು ಮೂರ್‍ದೋರೂ ರೆಡ್ಡಿಯವ್ರೇ. ಇದ್ರಲ್ಲಿ ದುಃಖಿಸೋದೇನಿದೆ!” ಎಂದು ಬುದ್ದಿ ಹೇಳುತ್ತಿದ್ದಳು.
ಸುಬ್ಬಾರೆಡ್ಡಿಯ ಜೊತೆ ಈ ಚಿಕ್ಕ ಹುಡುಗಿಯರನ್ನು ಕಲ್ಪಿಸಿಕೊಂಡೆ. ವಿಚಿತ್ರ ಮತ್ತು ಕ್ರೂರ ಎನ್ನಿಸಿತು. ರಾಮದೇವರ ಗುಡಿಯ ಹಿಂದಿದ್ದ ದ್ಯಾವಮ್ಮನ ಗುಡಿಯ ಮುಂದೆ ಕೋಣವನ್ನು ಕಟ್ಟಿದ್ದರು. ಅದರ ನಾಲ್ಕು ಕಾಲುಗಳನ್ನು ಮುರಿಯುವ ಕೆಲಸವನ್ನು ಕೆಲವರು ಯಶಸ್ವಿಯಾಗಿ ನಡೆಸಿದ್ದರು. ಅದರ ಸೊಕ್ಕಡಗಿಸಲು ಸುಣ್ಣದ ನೀರನ್ನು ಕಲೆಸುತ್ತಿದ್ದರು. ಆದರೂ ಅದು ತನ್ನ ಕೋಣದ ಭಾಷೆಯಲ್ಲಿ ಇಡೀ ವ್ಯವಸ್ಥೆಯನ್ನು ಶಪಿಸುತ್ತಿರುವಂತೆ ಡುರುಕಿ ಹಾಕುತ್ತಿತ್ತು.
ಮಗುದೊಂದು ಕಡೆ ಉರುಮಿಗಳು; ಡೊಳ್ಳುಗಳು, ಹಲಗೆಗಳು; ಕೊಂಬು; ಕಹಳೆಗಳು ಮುಗಿಲೇ ಕಳಚಿ ಬೀಳುವಂತೆ ಹುಯಿಲಿಡುತ್ತಿದ್ದವು. ಜನ ತಲಾ ಒಂದೊಂದು ದೆವ್ವ ಹೊಕ್ಕೊಂಡವರಂತೆ ಉನ್ಮತ್ತರಾಗಿ ವರ್ತಿಸುತ್ತಿದ್ದರು. ಹಲವಾರು ಜನ ಗರಬಡಿದವರಂತೆ; ಜಡತೆಯೇ ತಾವೆಂಬಂತೆ ಅಲ್ಲಿಲ್ಲಿ ಕೂತಿದ್ದರು. ಪರಿಸ್ಥಿತಿ ಲವಲವಿಕೆಯಿಂದಲೂ; ಜಾನಪದ ಸೊಗಡಿನಿಂದಲೂ; ಭಯಾನಕತೆಯಿಂದಲೂ ಕೂಡಿತ್ತು. ನನಗೆ ಅದರ ಬಗ್ಗೆ ವ್ಯವಸ್ಥಿತವಾಗಿ ಯೋಚಿಸುವುದೇ ಅಸಾಧ್ಯವೆನಿಸಿತು. ಜಮೀನ್ದಾರಿ ವ್ಯವಸ್ಥೆಯ ಸಿಕ್ಕುಗಳು ಅರ್ಥವಾಗದೆ ಮತ್ತಷ್ಟು ಕ್ಲಿಷ್ಟವಾಗತೊಡಗಿದವು. ವೆಂಗಳರೆಡ್ಡಿ ದೊರೆಗಳ ಮತ್ತು ಸುಬ್ಬಾರೆಡ್ಡಿಯವರ ನಡುವೆ ಮನೆಯಲ್ಲಿ ಏನೇನು ಮಾತುಕತೆ ನಡೆದಿರಬಹುದೆಂದು ಯೋಚಿಸಿದೆ.
ಕರಿವೇಮಲಕ್ಕೂ ಪುಲಕುರ್ತಿಗೂ ನಡೆವೆ ಎಷ್ಟು ಅಂತರವೆಂದು ಯೋಚಿಸಿದೆ. ಬರ್ಕ್ಲೀ ಸುಡುವ ಅಪ್ಪನನ್ನೂ; ರೊಟ್ಟಿ ಬಡಿಯುವ ಅವ್ವನನ್ನೂ ನೆನೆಪಿಸಿಕೊಂಡೆ. ಹೃದಯಕ್ಕೆ ಒಂಥರಾ ಆಯಿತು. ಜಮೀನ್ದಾರಿ ವ್ಯವಸ್ಥೆಗೆ ಬೆಂಕಿ ಬೀಳ! ಎಂಥವರ ನಡುವೆ ಸಿಕ್ಕೊಂಡಿದ್ದೀನಲ್ಲ! ಆಗುಬಗೆಯಿಂದ ಗಾದೆ ಕಡೆ ಹೆಜ್ಜೆ ಹಾಕಿದೆ.
ಪೋತರಾಜುಗಾಗಿ ಜಾಲಾಟ ನಡೆದಿತ್ತು.
ಅವನ ಶೌರ್ಯ ಪರಾಕ್ರಮದ ಬಗ್ಗೆ ಗುಸುಗುಸು ಮಾತುಗಳು ಕೇಳಿ ಬರುತ್ತಿದ್ದವು. ಅವನ ಬಗ್ಗೆ ಒಂದು ರೀತಿಯ ಆರಾಧನಾ ಮನೋಭಾವ ನನ್ನಲ್ಲಿ ಬೆಳೆದಿತ್ತು. ಜಮೀನ್ದಾರಿ ವ್ಯವಸ್ಥೆ ಬಗ್ಗೆ ನನ್ನಂಥ ಡೂಪ್ಲಿಕೇಟು ಲೇಖಕ ಬರೆಯುವ ಕಥೆ, ಕಾದಂಬರಿಗಿಂತ, ಅದರ ಎಲ್ಲ ಅರಿವಿನೊಂದಿಗೆ ಅದರ ಒಡಲೊಳಗೆ ಸಿಡಿಮದ್ದಿನಂತೆ ಕೆಲಸ ಮಾಡುತ್ತಿರುವ ಪೋತರಾಜನಂಥ ಅಸಲೀ ಬರಹಗಾರ; ಹೋರಾಟಗಾರ ಬರೆಯುವ ಕಾದಂಬರಿ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದುಕೊಂಡೆ.
ಜನರ ಕ್ರೌರ್ಯ, ಮುಗ್ಧತನ; ಪಾಳ್ಳೆಗಾರಿಕೆ ಧಿಮಾಕು; ಪುರುಷ ಅಹಂಕಾರದ ಬಗ್ಗೆ ಯೋಚಿಸಿದೆ. ಪ್ರತಿಯೊಂದು ಹಳ್ಳಿಯ ಒಳಗೂ ಹೊರಗೂ ಕಾಣಿಸುವ ಕೋಡುಗಲ್ಲಿನ ಬೆಟ್ಟಗಳು; ಮರಗಿಡಗಳಿಂದ ವಂಚಿತ ದಾರುಣ ಬಯಲು, ನೀರಿಲ್ಲದ ರುಗ್ಣ ಬಾವಿಗಳು; ಒಣಗಿ ಬಿರುಕು ಬಿಟ್ಟ ಕೆರೆ ಅಂಗಳಗಳು; ಮೇಸ್ಟ್ರುಗಳಿಲ್ಲದ ಶಾಲೆಗಳು; ಪೊಲೀಸರಿಲ್ಲದ ಠಾಣೆಗಳು; ಮಿದುಳುಗಳಿಲ್ಲದ ತಲೆಗಳು; ವಿಚಿತ್ರವಾದ ಹಳ್ಳಿಗಳು; ಚಕ್ರವ್ಯೂಹಗಳಿಗಾಗಿ ಹುಡುಕಾಡುತ್ತಿರುವ ಅಭಿಮನ್ಯುಗಳಂಥ ಜನ, ಬರಹದ ಬೊಗಸೆಗೆ ಸಿಕ್ಕದಂಥ ವ್ಯವಸ್ಥೆ ಇದಾಗಿತ್ತು.
ರಾತ್ರಿ ಅಷ್ಟು ಹೆಣ ಬೀಳಬಹುದು, ಇಷ್ಟು ಹೆಣ ಬೀಳಬಹುದು ಎಂದು ಜನ ಮಾತಾಡಿಕೊಳ್ಳುತ್ತಿದ್ದುದು ಕಿವಿಗೆ ಬಿತ್ತು. ಪುಲಕುರ್ತಿ ಸುಬ್ಬಾರೆಡ್ಡಿ ಹಲಗೇರಿಯ ವೀರಾರೆಡ್ಡಿಯ ಬಲಗೈಯ ಬಂಟ ಹನುಂತನನ್ನು ಪತ್ತಿಕೊಂಡದ ಬಳಿ ಖೂನಿ ಮಾಡಿಸಿದ್ದ. ಅದರ ಸೇಡು ತೀರಿಸಿಕೊಳ್ಳಲು ವೀರಾರಡ್ಡಿಯ ಕಡೆಯ ಸುಮಾರು ಐವತ್ತು ಅರವತ್ತು ಮಂದಿ ಪುಲಕುರ್ತಿಯೊಳಗೆ ಕೈಬಾಂಬುಗಳೊಂದಿಗೆ ನುಸುಳಿದ್ದಾರೆಂಬ ಸುದ್ದಿಯನ್ನು ಕೆಲವು ಪಾರಿವಾಳಗಳು ಹೊತ್ತು ತಂದಿದ್ದವು. ಅದಕ್ಕಾಗಿ ಅನುಮಾನ ಬಂದವರನ್ನು ಪರುಗುಣಿಯಾಗಿ ಹೊಲದೊಳಗೆ ಎಳೆದೊಯ್ದು ಕಟ್ಟಿ ಹಾಕಿ ಉರುಳಿಸಿಬಿಡುವ ಕೆಲಸವನ್ನು ಕೆಲವರು ನಿರ್ವಿರಾಮವಾಗಿ ಮಾಡುತ್ತಿದ್ದರು. ಒಂಟಿಯಾಗಿ ತಿರುಗಾಡುವುದು ಯಾಕಿದ್ದೀತು ಅಂತ ನಾನು ಗಾದೆ ಕಡೆ ಹೆಜ್ಜೆ ಹಾಕಿದೆ. ಹಡಬೆನಾಯಿಯೊಂದು ಬೊವ್ ಬೊವ್ ಎಂದು ಬೊಗಳುತ್ತು ಬಿಂಬಾಲಿಸಿತು. ಅದಕ್ಕೇನು ಗೊತ್ತು ನಾನು ಕರೆವೇಮಲ ಚಿನ್ನವೆಂಗಳರೆಡ್ಡಿ ದೊರೆಗಳ ಅತಿಥಿ ಎಂದು. ಮನುಷ್ಯರ ಕೈಕಾಲಜಿಗಿಂತ ನಾಯಿಗಳ ಸೈಕಾಲಜಿಗೇ ಹೆಚ್ಚು ಒತ್ತು ಕೊಟ್ಟು ಬದುಕುತ್ತಿದ್ದ ನಾನು ಅದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ.
ಗಾದೆ ಎದುರಿಗೆ ನೂರಾರು ಜನ ಸೇರಿದ್ದರು. ನನ್ನ ಆತಂಕ ಹೆಚ್ಚಿತು. ಸುಬ್ಬಾರೆಡ್ಡಿಯ ಕೊಲೆ ಆಗಿದೆಯೋ ಅಥವಾ ವೆಂಗಳರೆಡ್ಡಿಯ ಕೊಲೆಯಾಗಿದೆಯೋ! ಎಂದು ಭಯಗೊಮಡೆ. ಆದರೆ ಅಲ್ಲಿ ನಡೆದಿರುವುದೇ ಬೇರೆಯಾಗಿತ್ತು. ದ್ಯಾಮವ್ವನ ಹಬ್ಬವನ್ನು ದೀಪವನ್ನು ಬೆಳಗಿಸುವುದರ ಮೂಲಕ ವಿಧ್ಯುಕ್ತವಾಗಿ ದೊರೆಗಳು ಉದ್ಘಾಟಿಸಿದ ಮೇಲೆ ಯಾರೋ ಒಬ್ಬ ಅವರತ್ತ ಕೈಬಾಂಬು ಎಸೆಯಲು ಪ್ರಯತ್ನಿಸಿ ಸಿಕ್ಕು ಬಿದ್ದನಂತೆ, ಅವನ ಬಲಗೈ ತುಂಡರಿಸಿದ ಮೇಲೆ ತಾನು ನಕ್ಸಲೈಟೆಂದು ಒಪ್ಪಿಕೊಂಡನಂತೆ. ಪೋತರಾಜನ ಬಗ್ಗೆ ಹೆಚ್ಚಿಎ ಮಾಹಿತಿ ಪಡೆಯಲು ಸ್ಥಳೀಯ ವೈದ್ಯರು ಅವನಿಗೆ ಚಿಕಿತ್ಸೆ ಮಾಡುತ್ತಿರುವರಂತೆ. ಅವನನ್ನು ಕರೆವೇಮಲಕ್ಕೆ ಒಯ್ಯವುದೋ ಅಥವಾ ಪುಲಕುರ್ತಿಯಲ್ಲಿ ಬಾಯಿ ಬಿಡಿಸುವುದೋ ಎಂಬ ಬಗ್ಗೆ ಚರ್ಚಿಸಲು ತಿರುಪತಯ್ಯನ ನೇತೃತ್ವದಲ್ಲಿ ಒಂದು ಸಮಿತಿ ಏರ್ಪಡಿಸಿರುವರಂತೆ.
ನಾನು ಗಾದೆಯನ್ನು ಪ್ರವೇಶ ಮಾಡಲು ಸಾಧ್ಯವಾದದ್ದು ಸುಮಾರು ಹೊತ್ತಾದ ನಂತರ. ದೊರೆಗಳು ನಿರ್ವಿಕಾರ ಚಿತ್ತದಿಂದ ತೆನ್ನಾಲಿ ರಾಮಕೃಷ್ಣ ವಿರಚಿತ ಪಾಂಡುರಂಗ ಮಹಾತ್ಮೆಯನ್ನು ಸುಬ್ಬಾರೆಡ್ಡಿ ಕುಟುಂಬ ಸದಸ್ಯರಿಗೆ ಓದಿ ವಿವರಿಸುತ್ತಯಿದ್ದರು. ಅವರು ಯಾವುದೇ ತೆಲುಗು ದಿದ್ವಾಂಸರಿಗಿಂತ ಕಡಿಮೆ ಇರಲಿಲ್ಲ. ತಮ್ಮ ವಿದ್ವತ್ತಿನಿಂದ; ಕಂಚಿನ ಕಂಠದಿಂದ ಹೇಳುತ್ತಿದ್ದುದನ್ನು ಕೇಳೂತ್ತಿದ್ದವರಲ್ಲಿ ಸುಬ್ಬಾರೆಡ್ಡಿಯ ವೃದ್ಧ ತಾಯಿ; ನಾಲ್ಕು ಮಂದಿ ಪತ್ನಿಯರು ಮಕ್ಕಳು ಮೊದಲಾದವರಿದ್ದರು. ನಾನೂ ಪರವಶನಾದೆ. ತನ್ಮಯ ಚಿತ್ತದಿಂದ ಕೇಳಿದೆ. ದ್ವಿತೀಯ ಆಶ್ವಾಸ ಮುಗಿದ ಮೇಲೆ ವೃದ್ಧ ಮಾತೆ ಹೋಗಿ ದೊರೆಗಳ ತಲೆಯನ್ನು ಪ್ರೀತಿಯಿಂದ ನೇವರಿಸಿದಳು.
“ನಿನ್ನ ನಾಲಿಗೆ ಮೇಲೆ ತೆನ್ನಾಲಿ ರಾಮಲಿಂಗನೇ ಇದ್ದಾನೆ” ಎಂದು ದೊರೆಗಳನ್ನು ಅಭಿನಂದಿಸಿದಳು. ಅದಕ್ಕೆ ಪ್ರತಿಯಾಗಿ ದೊರೆಗಳು ಆಕೆಯ ಪಾದಸ್ಫರ್ಶಿಸಿ “ಎಲ್ಲಾ ನಿಮ್ಮಂಥ ಹಿರಿಯರ ಆಶೀರ್ವಾದ” ಎಂದು ನಮ್ಸಕರಿಸಿದರು.
ಊಟದ ನಂತರ ದೊರೆಗಳು ನನ್ನನ್ನು ಮೀಸಲಿದ್ದ ಕೋಣೆಗೆ ಕರೆದೊಯ್ದರು.
ಕನ್ಯೆಯರೀರ್ವರ ಮೀಸಲು ಮುರಿದು ದ್ಯಾವಮ್ಮನ ಕೃಪೆಗೆ ಪಾತ್ರನಾಗಬೇಕಿದ್ದುದರಿಂದ ಸುಬ್ಬಾರೆಡ್ಡಿ ವಿಶೇಷವಾಗಿ ಅಲಂಕರಿಸಿಕೊಂಡು ಗಾದೆಯ ಇನ್ನೊಂದು ಪಾರ್ಶ್ವದಲ್ಲಿದ್ದರು.
ದೊರೆಗಳು ತುಂಬ ಹೊತ್ತಿನವರೆಗೆ ಆಧ್ಯಾತ್ಮ ಕುರಿತು, ನಶ್ವರವಾದ ಮಾನವನ ಬದುಕು ಕುರಿತು ಚರ್ಚಿಸಿದರು. ಎಲ್ಲ ತೊರೆದು ಕಾಶಿಗೆ ಹೋಗಿ ವಿಶ್ವನಾಥ ಲಿಂಗದ ಸೇವೆ ಮಾಡುತ್ತ ಶೇಷಾಯುಷ್ಯ ಕಳೆಯುವ ಕ್ಷಣಕ್ಕಾಗಿ ತಾವು ಕಾಯುತ್ತಿರುವುದಾಗಿ ಹೇಳಿದರು. ಅವರ ಧ್ವನಿಯಲ್ಲಿ ಆಷಾಡಭೂತಿತನವಿರಲಿಲ್ಲ. ಅವರ ಪಂಚೇಂದ್ರಿಯಗಳಲ್ಲಿ ಕೊಂಕು ಕಳಂಕವಿರಲಿಲ್ಲ. “ನಾವೂ ನಿಮ್ಮ ಹಾಗೆ ಮೇಸ್ಟ್ರಾಗಿದ್ದರೆ ಎಷ್ಟು ಚೆನ್ನಾಗಿತ್ತು. ಯಾವ ಜನ್ಮದಲ್ಲಿ ಯಾವ ಪಾಪ ಮಾಡಿದ್ದೇವೋ ಈ ಜಮೀನ್ದಾರರಾಗಲು” ಎಂದು ನನ್ನ ಬೆನ್ನು ತಡವಿ ನಿಟಟುಸಿರುಬಿಟ್ಟರು.
-೪-
ಕರಿವೇಮಲಕ್ಕೆ ಮರಳಿದಾಗಲೂ ವೆಂಗಳರೆಡ್ಡಿ ದೊರೆಗಳು ಯಥಾರ(ತಿ ಪ್ರಸನ್ನ ಚಿತ್ತರಾಗಿದ್ದರು. ಅವರು ಯಾವುದೇ ವಿಷಯದ ಬಗ್ಗೆ ತೀವ್ರವಾಗಿ ತೀಕ್ಷ್ಣವಾಗಿ ಚಿಂತಿಸುತ್ತಿರಲಿಲ್ಲ. ಆಸ್ಪರಿ ತಮ್ಮಾರೆಡ್ಡಿ ಥರ ಮೀಸೆ ಮೇಲೆ ನಿಂಬೆ ಹಣ್ಣು ಕುಣಿಸುತ್ತಿರಲಿಲ್ಲ.
ಬದನಾಂ ಯಲ್ಲಾರೆಡ್ಡಿ ಥರ ಕೆಂಗಣ್ಣಿನ ಬಸಿರು ಇಳಿಸುತ್ತಿರಲಿಲ್ಲ.
ಪುಲಿಂಟಿ ನರಸರೆಡ್ಡಿ ಕುಡಿಯುತ್ತಿರಲಿಲ್ಲ.
ಬೊಮ್ಮಲ ಪಾಡು ನಾಗಿರೆಡ್ಡಿ ಥರ ಕಣ್ಣಿಗೆ ಕಂಡ ತರುಣಿಯನ್ನು ಹಾಸಿಗೆಗೆ ಎಳೆಯುತ್ತಿರಲಿಲ್ಲ.
ಕಾವ್ಯ ಪ್ರೇಮಿಗಳಾಗಿದ್ದಂತೆ ಮನುಷ್ಯ ಪ್ರೇಮಿಯೂ ಆಗಿದ್ದರು. ಸಂಗೀತ ಪ್ರೇಮಿ ಆಗಿದ್ದಂತೆ ಕ್ರೀಡಾಪ್ರೇಮಿಯೂ ಆಗಿದ್ದರು. ಅವರ ಇಲಾಖೆಯ ಇಪ್ಪತ್ತು ಊರುಗಳಲ್ಲಿ ಭಿಕ್ಷೆ ಬೇಡುವುದು ಅಪರಾಧವಾಗಿತ್ತು. ಕಳ್ಳತನದ ಸೊಲ್ಲು ಇರಲಿಲ್ಲ. ನವರಾತ್ರಿ ಉತ್ಸವಗಳ ಒಂಬತ್ತು ದಿನಗಳ್ಲಲಿ ಮದ್ಯಪಾನ; ಮಾಂಸಭಕ್ಷಣೆಯ ನಿಷಿದ್ಧವಿತ್ತು. ದೇಹಿ ಅಂತ ಬಂದವರನ್ನು ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಅವರು ನಿಸ್ಸಂದಿಗ್ಧವಾಗಿ ತಪಸ್ಸು ಮಾಡಲು ಯೋಗ್ಯರಾಗಿದ್ದರು. ಅಷ್ಟು ಒಳ್ಳೆಯವರಾದ ಅವರ ಬಗ್ಗೆ ಜನ ಭಯ ಭೀತಿ ಉಳ್ಳವರಾಗಿದ್ದರು. ಅವರನ್ನು ಜಮೀನ್ದಾರ ವ್ಯವಸ್ಥೆಗೆ ಒಗ್ಗಿಸಿರುವುದು ತಿರುಪತಯ್ಯನೇ, ವೆಂಗಳರೆಡ್ಡಿ ದೊರೆಗಳ ಮನೆತನದ ಗೌರವ ಕಾಪಾಡಲು ಆ ವೃದ್ಧ ಮದುವೆಯನ್ನೇ ಮಾಡಿ ಕೊಂಡಿರಲಿಲ್ಲ. ಅಪಾಯದ ಸಂದರ್ಭಗಳಲ್ಲಿ ಆ ವೃದ್ಧ ತರುಣನಂತೆ ಮುನ್ನುಗ್ಗುತ್ತಿದ್ದುದು, ಕಂಟಕಗಳನ್ನು ಲೀಲಾಜಾಲವಾಗಿ ಪರಿಹರಿಸುತ್ತಿದ್ದುದು ನನಗೆ ವಿಚಿತ್ರವಾಗಿ ಕಾಣುತ್ತಿತ್ತು. ದೊರೆಗಳು ತಮಗೆ ಇಷ್ಟವಿಲ್ಲಿದ್ದರೂ ತಿರುಪತಯ್ಯನಿಗಾಗಿ ಅಂಗೀಕಾರ ಮುದ್ರೆಯೊತ್ತುತ್ತಿದ್ದರು. ‘ತಿರುಪತಯ್ಯನವರೇ ನನ್ನನ್ನು ಯಾವ ನರಕಕ್ಕೆ ತಳ್ಳಬೇಕೆಂದು ನನ್ನ ಕೈಲಿ ಇಂಥ ಕೆಲಸ ಮಾಡಿಸುತ್ತಿದ್ದೀರಿ’ ಎಂದು ಮಿಡುಕುತ್ತಿದ್ದರು. ಜಮೀನ್ದಾರಿ ವ್ಯವಸ್ಥಯ ಉಗಮ ಮತ್ತು ವಿಕಾಸದ ಬಗ್ಗೆ ಅವರಿಗೆ ಸ್ಪಷ್ಟ ತಿಳುವಳಿಕೆ ಇತ್ತು.
ಆದರೆ ಆ ವ್ಯವಸ್ಥೆಯನ್ನು ಸ್ಪಷ್ಟವಾಗಿ ತಿರಸ್ಕರಿಸುವಲ್ಲಿ ಅಸಹಾಯಕರಾಗಿದ್ದರು. ಬನಾರಸ್‌ನಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಕಡೆದು ಅದೇ ಹಿಂದೂ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ ಪದವಿ ಪಡೆದು ತಾವು ಪ್ರೀತಿಸಿದ ಬಂಗಾಳಿ ವಿಧವೆಯನ್ನೇ ಮದುವೆಯಾಗಿ ಬಿಟ್ಟಿದ್ದರೆ ಎಷ್ಟು ಸಾರ್ಥಕವಾಗುತ್ತಿತ್ತು ಎಂದು ಅವರು ನನ್ನ ಬಳಿ ಹತ್ತಾರು ಸಾರಿ ಹೇಳಿಕೊಂಡಿದ್ದುಂಟು. ಅವರು ಕರಿವೇಮಲಕ್ಕೆ ಮರಳುವುದಿಲ್ಲವೆಂದು ಅಲ್ಲೆ ಹಠಮಾಡಿ ಉಳಿದಿದ್ದರಂತೆ; ತಿರುಪತಯ್ಯನೇ ಅವರನ್ನು ಬಲವಂತದಿಂದ ಎಳೆದುತಂದು ಜಮೀನ್ದಾರಿ ವ್ಯವಸ್ಥೆಯ ಜೇಡರ ಬಲೆಯೊಳಗೆ ಸಿಕ್ಕಿಸಿದನಂತೆ. ಅವರೇ ತಮ್ಮ ತಾತ ಪೆದ್ದವೆಂಗಳರೆಡ್ಡಿಯವರ ಸಮಾಧಿಯ ಬಳಿಗೆ ನನ್ನನ್ನು ಕರೆದೊಯ್ದು ಎಷ್ಟೋ ವೈಯಕ್ತಿಕ ಸಂಗತಿಗಳನ್ನು ತಿಳಿದಿದ್ದರು. ಅವರ ತಂದೆಯ ಬಗ್ಗೆ ನಾನು ಸ್ಪಷ್ಟ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನ ಪಟ್ಟದ್ದುಂಟು. ನಿಗೂಢ ಹಸ್ತದ ವಿಷಪ್ರಾಶನದಿಂದ ಸಾವನ್ನಪ್ಪಿದ ಲಕ್ಷ್ಮೀಕಾಂತ ರೆಡ್ಡಿಯ ಬಗ್ಗೆ ಅವರು ಬಾಯಿ ತೆರೆದು ಹೇಳವರಾದರೂ ಹೇಗೆ?
ಸಾವಿರಾರು ಎಕರೆ ಜಮೀನನ್ನು ಜನರಿಗೆ ಎಲ್ಲಿ ಹರಿದು ಹಂಚಿ ಬಿಡುವರೋ ಎಂದು ಹೆದರಿ ಪೆದ್ದ ವೆಂಗಳರೆಡ್ಡಿಯ ಮಾತಿಗೆ ಕಟ್ಟು ಬಿದ್ದು ತಿರುಪತಯ್ಯನೆ ಕೇಸರಿ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿದನಂತೆ, ಮಗ ಸತ್ತ ಸುದ್ದಿಯನ್ನು ಖಚಿತಪಡಿಸಿಕೊಂಡು; ಅಷ್ಟು ಹೊತ್ತಿಗಾಗಲೇ ಪಾರ್ಶ್ವವಾಯುರೋಗ ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಪೆದ್ದ ವೆಂಗಳರೆಡ್ಡಿ ನೆಮ್ಮದಿಯಿಂದ ಕಣ್ಣು ಮುಚ್ಚಿಕೊಂಡರಂತೆ. ಅಯ್ಯೋ ಹಾಳಾದ ಸ್ವಾತಂತ್ರ್‍ಯ ಹೋರಾಟಗಾರರ ಸಹವಾಸಕ್ಕೆ ಬಿದ್ದು ದೇಶಭಕ್ತನಾಗಿರದಿದ್ದರೆಲ್ಲಿ ಹಾಗೆ ತಿರುಪತಯ್ಯನಿಗೆ ಹೇಳುತ್ತಿದ್ದೆ. ‘ಅಯ್ಯೋ ನತದೃಷ್ಟ ಮನಗೇ ಕೊನೆಗೂ ವಂದೇ ಮಾತರಂ: ಇನ್‌ಕ್ವಿಲಾಬ್ ಜಿಂದಾಬಾದ್ ಎಂದು ಹೇಳುತ್ತಲೇ ಸತ್ತೆಯಾ; ನಿನ್ನನ್ನು ಎತ್ತಿ ಆಡಿಸಿದ ನನ್ನನ್ನು ಒಮ್ಮೆಯಾದರೂ ನೆನೆಸಿದೆಯಾ’ ಎಂದು ತೊದಲುತ್ತಲೇ ಪೆದ್ದ ರೆದೊರೆಗಳು ಕಣ್ಣು ಮುಚ್ಚಿಕೊಂಡರಂತೆ. ಗ್ರಾಮದ ಹಿರಿಯರು ಈ ಬಗ್ಗೆ ಎರಡು ರೀತಿಯಲ್ಲಿ ಹೇಳಿದರು. ಅದೆಂದರೆ ಭಾರತ ಸ್ವಾತಂತ್ರ್‍ಯ ಸಂಗ್ರಾಮದಲ್ಲಿ ಲಕ್ಷ್ಮೀಕಾಂತ ರೆಡ್ಡಿ ಧುಮುಕಿದ್ದು ಅವರ ತಂದೆಗೆ ಸರಿಬರಲಿಲ್ಲ ಎಂಬುದು, ಮತ್ತೊಂದು ಅವರು ವಿವಾಹಪೂರ್ವದಲ್ಲಿಯೇ ದಲಿತ ಮಹಿಳೆಯನ್ನ ತುಂಬ ಪ್ರೀತಿಸುತ್ತಿದ್ದರೆಂಬುದು ದಲಿತ ಮಹಿಳೆ ಮನೆಯಿಂದ ನಾಪತ್ತೆಯಾದ ಮರುದಿನವೇ ತಮ್ಮ ತಂದೆ ವೆಂಗಳರೆಡ್ಡಿಯವರೊಂದಿಗೆ ವಾಗ್ವಾದ ನಡೆಸಿದರಂತೆ, ಹೆಂಡತಿಯನ್ನೂ ಮಗುವನ್ನೂ ರಾತ್ರೋ ರಾತ್ರಿ ತೊರೆದು ಹೊರಟು ಹೋದ ಅವರು ಮಾವಿನ ತೋಪಿನಲ್ಲಿ ಸಿಕ್ಕು ಬಿದ್ದರಂತೆ.
“ನಿನ್ನನ್ನು ನಿನ್ನ ತಂದೆಯಾದ ನಾನು ಕೊಲೆ ಮಾಡಿಸಲೂಬಹುದು. ನಿನ್ನ ನಿರ್ಧಾರ ಬದಲಿಸಿ ಜಮೀನ್ದಾರಿಕೆಯ ಗೌರವಕ್ಕೆ ಚ್ಯುತಿ ಬಾರದ ಹಾಗೆ ನಡೆದುಕೋ” ಎಂದು ಪೆದ್ದ ವೆಂಗಳರೆಡ್ಡಿ ಮಾತಿನೊಮದಿಗೆ ಕಣ್ಣಲ್ಲಿ ನೀರು ತಂದುಕೊಂಡು ಪರಿಪರಿಯಾಗಿ ತಿಳಿ ಹೇಳಿದರಂತೆ.
ಕೇಸರಿ ಹಾಲಿನಲ್ಲಿ ವಿಷ ಬೆರೆಸುವಂತೆ ಒಲ್ಲದ ಮನಸ್ಸಿನಿಂದ ಪೆದ್ದ ದೊರೆ ಪಿಸುಗುಟ್ಟಿದಾಗ ತಿರುಪತಯ್ಯ “ನಿಮ್ಮ ಆಜ್ಞೆಯನ್ನು ಹೇಗೆ ಕಾರ್ಯಗತ ಮಾಡಲಿ ದೊರೆಗಳೇ? ಎತ್ತಿ ಆಡಿಸಿದ ಈ ಕೈಗಳಿಂದಲೇ ವಿಷ ಉಣ್ಣಿಸುವುದೇ” ಎಂದು ಕಣ್ಣಲ್ಲಲಿ ನೀರು ತಂದುಕೊಂಡನಂತೆ. ಕೊನೆಗೂ ಅವರ ಒತ್ತಾಯಕ್ಕೆ ಕಟ್ಟು ಬಿದ್ದು ಹಾಲಿಗೆ ವಿಷ ಬೆರೆಸಿದನಂತೆ.
ಮತ್ತೊಂದು ತರ್ಕದ ಪ್ರಕಾರ ಲಕ್ಷ್ಮೀಕಾಂತರೆಡ್ಡಿಯವರೇ ಆತ್ಮಹತ್ಯೆ ಮಾಡಿಕೊಂಡರಂತೆ.
ಒಂದು ನಿಗೂಢ ಸಂಗತಿ ಎಂದರೆ ಅವರ ಹೆಸರಿನ ಸಮಾಧಿ ಕರಿವೇಮಲದ ಸುತ್ತಮುತ್ತ ಎಲ್ಲೂ ಇಲ್ಲದಿರುವುದು. ತಿಳುವಳಿಕೆ ಬಂದ ಮೇಲೆ ಚಿನ್ನವೆಂಗಳರೆಡ್ಡಿ ದೊರೆಗಳು ತಮ್ಮ ತಂದೆಯ ಸಮಾಧಿಗಾಗಿ ತಿರುಪತಯ್ಯನನ್ನು ಪೀಡಿಸುತ್ತಿದ್ದರಂತೆ. ಆದರೆ ಆ ಮುದುಕ ಪ್ರಾಣ ಬೇಕಾದರೂ ಕೊಟ್ಟೇನು ಆ ವಿಷಯ ಮಾತ್ರ ತಿಳಿಸುವುದಿಲ್ಲವೆಂದು ಖಡಾಖಂಡಿತ ಹೇಳಿದನಂತೆ. ಎತ್ತಿ ಆಡಿಸಿದ, ಜಮೀನ್ದಾರಿ ವ್ಯವಸ್ಥೆಗೆ ಬೇಕಾದ ರೀತಿ ತಿದ್ದಿದ ಆತನ ಪ್ರಾಣವನ್ನು ಬಯಸುವಷ್ಟು ಕಠೋರ ಹೃದಯಿಗಳಾಗಿರಲಿಲ್ಲ.
ನಾನು ಕೂತಲ್ಲಿ ಕೂಡದೇ, ನಿಂತಲ್ಲಿ ನಿಲ್ಲದೇ ಹುಚ್ಚನಂತೆ ಕರಿವೇಮಲದ ಒಳ ಹೊರಗು ತಿರುಗಾಡಿದೆ೩. ಊರ ಹೊರ ವಲಯದಲ್ಲಿ ಹ್ರಾಮದ ಪ್ರಾಚೀನತೆಗೆ ಸಾಕ್ಷಿಯಾಗಿ ಪಾಳುಗುಡಿ ಗುಂಡಾರಗಳಿದ್ದವು. ಹತ್ತಾರು ವೀರಗಲ್ಲುಗಳು ಮಾಸ್ತಿಗಲ್ಲುಗಳಿದ್ದವು. ಶಿಲಾಶಾಸನಗಳೂ ಇದ್ದವು. ಅವಗಳ ಆಧಾರದಿಂದ ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಆ ಗ್ರಾಮವನ್ನು ರೆಡ್ಡಿರಾಜರು ಆಳಿರಬಹುದೆಂದು ತಿಳಿದುಕೊಂಡೆ. ವರ್ತಮಾನದ ಬಗೆಗೂ ಹೆಜ್ಜೆ ಹೆಜ್ಜೆಗೆ ಅನೇಕ ವಿವರಗಳು ದೊರಕುತ್ತಿದ್ದವು. ಕೆಲವು ದೊರೆಗಳ ಕ್ರೌರ್ಯದ ಬಗ್ಗೆ ಬಹಳಷ್ಟು ದೊರೆಗಳ ಔದಾರ್ಯ ಮತ್ತು ಮಾನವ ಪ್ರೀತಿ ಬಗ್ಗೆ.
ಸಂಜೆ ಗಾದೆಗೆ ಮರಳಿದಾಗ ಕೆಲವು ಸಣ್ಣ ಹಿಡುವಳಿದಾರರು ಅಂಗಳದಲ್ಲಿ ಕುಕ್ಕುರು ಗಾಲಿನಲ್ಲಿ ಕೂತಿದ್ದರು. ಪ್ರಾಣ ಭಿಕ್ಷೆಗೆ ಆರ್ತಿಸುತ್ತಿರುವವರಂತಿದ್ದ ಅವರ ಸಮಸ್ಯೆಗಳು ಕೇವಲ ಅಸನವಸನಕ್ಕೆ ಸಂಬಂಧಿಸಿದವುಗಳಾಗಿದ್ದವು. ತಿರುಪತಯ್ಯನ ಸಹಾಯಕರಾದ ಯಾದಗಿರಿ, ಎಂಕನ್ನ ಕೈಯಲ್ಲಿ ಕೆಂಪನೆಯ ದಪ್ತರು ಹಿಡಿದು ಮೆಲುದನಿಯಲ್ಲಿ ಏನನ್ನೋ ಕೇಳುತ್ತಿದ್ದರು. ಏನನ್ನೋ ಬರೆದುಕೊಳ್ಳುತ್ತಿದ್ದರು. ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಳ್ಳುತ್ತಿದ್ದರು.
ಒಳಗಡೆಯಿಂದ ಹೆಣ್ಣಿನ ಕೋಮಲ ಕಂಠವೊಂದರ ಶಂಕರಾಭರಣಂ ರಾಗದ ಆಲಾಪನೆ ಕೇಳಿ ಬರುತ್ತಿತ್ತು. ಕ್ರಮೇಣ ಅದು ತ್ಯಾಗರಾಜರ ಕೀರ್ತನೆಯೊಂದರ ಕಡೆ ತಿರುಗಿತು. ಅದು ಪ್ರಾಯಶಃ ರಾಮಧ್ಯಾನವೇ ಗಂಗಾ ಸ್ನಾನಮು ಇರಬಹುದು.
ಅದರ ಸೀತಮ್ಮ ಮಾತಲ್ಲಿ ಶ್ರೀ ರಾಮುಡು ಮಾತಂಡ್ರಿ ಇರಬಹುದು; ಹೊಸ್ತಿಲು ದಾಟುತ್ತಿದ್ದ ನನ್ನ ಕಡೆ ತಿರುಪತಯ್ಯ ಅನುಮಾನಾಸ್ಪದ ದೃಷ್ಟಿ ಬೀರಿದ. ಎಲ್ಲಿ ಹೋಗಿದ್ದಿ? ಯಾವ ಯಾವ ವಿವರಗಳನ್ನು ಸಂಗ್ರಹಿಸಿದಿ ಎಂಬಂತೆ. ಆತನ ಪಕ್ಕ ಆರು ಮಂದಿ ಕೈಯಲ್ಲಿ ಭಲ್ಲೆಗಳನ್ನು ಹಿಡಿದುಕೊಂಡು ಕೂತಿದ್ದರು. ಮಗುವಿನ ಮುಗ್ಧತನ ಅವರ ಮುಖದ ತುಂಬ ಇತ್ತು. ಸಾಕು ನಾಯಿಗಳಿಗೂ ಅವರಿಗೂ ವ್ಯತ್ಯಾಸವಿರಲಿಲ್ಲ.
ದೊರೆಗಳ ಕುಟುಂಬ ಸದಸ್ಯರ ಪೈಕಿ ಒಬ್ಬನಾಗಿ ಬಿಟ್ಟಿದ್ದ ನನಗೆ ಅವರಾಗಲೀ; ವೃದ್ಧ ತಿರುಪತಯ್ಯನಾಗಲೀ ಗೌರವ ಕೊಡದೆ ಇರುತ್ತಿರಲಿಲ್ಲ. ಲಕ್ಷ್ಮೀಕಾಂತರೆಡ್ಡಿಯವರ ಸಮಾಧಿ ಎಲ್ಲಿ ಎಂದು ಕೇಳಿಬಿಟ್ಟರೆ ಏನು ಉತ್ತರ ಕೊಡುವುದೆಂದು ಯೋಚಿಸಿದ ತಿರುಪತಯ್ಯ “ಪಂತುಲುಗಾರು ಮೀಕಿ ಮಾ ಗ್ರಾಮಮು ನಚ್ಚಿಂದಾ” ಎಂದು ಕೇಳಿದ.
ನಾನು ‘ಬಾಗ ನಚ್ಚಿಂದಿ’ ಎಂದು ಹೇಳೀದೆ.
“ನಾಳೆ, ಗೂಳಿ ಕಾಳಗ ಇದೆ. ನೋಡೋಕೆ ಬರ್‍ತೀರಾ, ದೊರೆಗಳೂ ಉಪಸ್ಥಿತರಿರ್‍ತಾರೆ” ಎಂದು ಕೇಳಿದ.
ನಾನು ‘ಹೂ’ ಅಂದೆ.
ಗೂಳಿ ಕಾಳಗ ಕೋಳಿ ಕಾಳಗ ಇವೆಲ್ಲ ನನಗೆ ನೋಡಲು ತುಂಬ ಇಷ್ಟವೆಂದು ಹೇಗೆ ಹೇಳುವುದು! ನನ್ನ ತಂದೆಯೂ ತನ್ನ ಯೌವನವನ್ನು ಇಂಥ ಸಾಹಸದ ವಿಷಯಗಳಿಗೇ ಮೀಸಲಿಟ್ಟಿದ್ದನೆಂಬುದು ಅವರಿಗೇನು ಗೊತ್ತು! ನನ್ನ ತಂದೆ ಹೆಚ್ಚು ಕಡಿಮೆ ಚಿನ್ನ ವೆಂಗಳರೆಡ್ಡಿ ದೊರೆಗಳನ್ನು ಹೋಲುತ್ತಿದ್ದನೆಂಬುದನ್ನು ಅವರಿಗೆ ಹೇಳಲಿ ಹೇಗೆ? ಕರಿವೇಮಲದ ಇಲಾಖೆಗೆ ಸೇರಿದ ಇಪ್ಪತ್ತು ಹೋರಿಗಳ ಬಗ್ಗೆ ಊಹಿಸಿಕೊಳ್ಳುತ್ತ ರಾಗಲಾಪನೆಯ ಎಳೆ ಮೂಲಕ ಮೇಲುಪ್ಪರಿಗೆ ತಲುಪಿದೆ.
ಇಡೀ ಕೋಣೆ ನಾದಮಾಧುರ್ಯದಿಂದ ತುಂಬಿ ಹೋಗಿತ್ತು.
ಸಂಗೀತ ಮತ್ತು ಪರಾಕ್ರಮ ದೊರೆಗಳಿಗೆ ಶೋಕಿಯಾಗಿರಲಿಲ್ಲ. ಅವರಿಗೆ ಅವುಗಳಲ್ಲಿ ನಿಜವಾದ ಆಸಕ್ತಿಯಿತ್ತು. ಇಂಥ ಆಸಕ್ತಿಯೇ ಅವರನ್ನು ಮನುಷ್ಯರನ್ನಾಗಿ ಮಾಡಿತ್ತು. ರೇಶಿಮೆ ಧೋತರ ಉಟ್ಟು ಹೆಗಲ ಮೇಲ ಉತ್ತರೀಯ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬರು ತಮ್ಮ ಎದುರಿಗೆ ಮಂಡೆಯೂರಿ ಕುಳಿತಿದ್ದ ತರುಣಿಗೆ ಸ್ವರಾಪಾಲನೆ ಹೇಳಿಕೊಡುತ್ತಿದ್ದರು.
ದೊರೆಗಳು ಕೂತುಕೊಳ್ಳುವಂತೆ ಕಣ್ಣಿನಿಂದ ಸಂಜ್ಞೆ ಮಾಡಿದರು.
ಕೂತುಕೊಂಡೆ.
ನಾನು ಅಪರಿಚಿತನಾದ್ದರಿಂದ ತರುಣಿ ಒಳಹೋಗಲು ಪ್ರಯತ್ನಿಸಿದಳು. ದೊರೆಗಳು “ನಾನು ಬೆಳಿಗ್ಗೆ ಹೇಳಿದ್ದೆನಲ್ಲ…. ಅವರೇ ಇವರು. ಯಾಕೆ ನಾಚಿಕೆ, ಕೂತುಕೋ” ಎಂದು ಕೈ ಹಿಡಿದು ಕುಳ್ಳಿರಿಸಿದರು.
ತಮ್ಮ ಮಗಳು ವೀಣಾ ಎಂದು ಪರಿಚಯ ಮಾಡಿಕೊಟ್ಟರು. ಆಕೆ ನಮಸ್ತೆ ಅಂದಳು. ನಾನೂ ನಮಸ್ತೆ ಅಂದೆ. ಶಾಸ್ತ್ರಿಗಳು ತಾಳ ತೆಗೆದುಕೊಂಡರು. ದೊರೆಗಳು ವಯಲಿನ್ ತೆಗೆದುಕೊಂಡರು. ವೀಣಾ ಕೈಯಲ್ಲಿ ತಂಬೂರಿ ಹಿಡಿದು ಹಿತವಾಗಿ ಮೀಟುತ್ತ ‘ಯಾರಿಗೆ ವಧುವಾಗವೆ ಮಹಾ ಲಕುಮಿ’ ಎಂದು ಹಾಡಲು ಪ್ರಯತ್ನಿಸಿದಳು. ನರಸಿಂಹ ಇದ್ರೆ ಚೆನ್ನಾಗಿತ್ತು ಮದದಳೆ ನುಡಿಸ್ತಿದ್ದ ಅಂದರು ಶಾಸ್ತ್ರಿಗಳು. ನಾನು ನುಡಿಸಿದರಾಗಬಹುದೇ ಅಂದೆ.
ಓಹೋ ಅಗತ್ಯವಾಗಿ ಅಂದರು.
ಆಕೆ ಕಾಂಬೋಧಿ ರಾಗದಲ್ಲಿ ದಾಸರ ‘ಕಂಡು ಕಂಡು ನೀಯೆನ್ನ ಕೈ ಬಿಡುವರೇ ಪುಂಡರೀಕಾಕ್ಷ’ ಎಂದು ಅದ್ಭುತವಾಗಿ ಹಾಡಲಾರಂಭಿಸಿದಳು.
ಝಂಪೆತಾಳದಲ್ಲಿ ನಾನೂ ನನ್ನ ಯೋಗ್ಯತೆಗನುಸಾರವಾಗಿ ಮದ್ದಳೆ ನುಡಿಸಿದ.
ಆಕೆ ಹಾಡಿದ್ದನ್ನು ನಾನು ಮೆಚ್ಚಿಕೊಂಡೆ;
ನಾನು ನುಡಿಸಿದ್ದನ್ನು ಅವರೆಲ್ಲ ಮೆಚ್ಚಿಕೊಂಡರು.
ತುಂಬ ಲಯಬದ್ಧವಾಗಿ ನುಡಿಸಿದಿರಿ ಪಂತಲುಗಾರು ಎಂದು ದೊರೆಗಳು ಬೆನ್ನು ತಟ್ಟಿದರು.
ಅವರ ಸ್ಪರ್ಶದಿಂದ ಅನಿರ್ವಚನೀಯವಾದ ಆನಂದವಾಯಿತು.
“ಶಾಸ್ತ್ರಿಗಳೇ ಶಾರೀರ ಹ್ಯಾಗಿದೆಯೋ ಪರೀಕ್ಷಿಸುವಿರೇನು?” ದೊರೆಗಳು ಕಣ್ಣ ರೆಪ್ಪೆಗೆ ಅಂಟಿದ್ದ ಕಾಡಿಗೆ ಸರಿಪಡಿಸಿಕೊಳ್ಳುತ್ತಿದ್ದ ಶಾಸ್ತ್ರಿಗಳಿಗೆ ಹೇಳಿದರು.
ತಲೆ ಅಲ್ಲಾಡಿಸಿದ ಶಾಸ್ತ್ರಿಗಳು ನನ್ನತ್ತ ತಿರುಗಿ “ಪಂತುಲು ಗಾರು ದೊರೆಗಳ ಇಷ್ಟವನ್ನು ಪೂರೈಸುವಿರೇನು” ಅಂತ ಕೇಳಿದರು.
ಇದಕ್ಕಿಂತ ಸಂತೋಷ ಬೇರೆ ಏನಿದೆ ಸ್ವಮಿ; ಆದ್ರೆ, ನಿನ್ನಿಯಿಂದ ಗಂಟಲು ಕೆಟ್ಟಿದೆ ಅಲ್ಲದೆ ವೀಣಾರವರು ಪುರಂದರದಾಸರ ಕನ್ನಡದ ಕೀರ್ತನೆಯನ್ನು ಸೊಗಸಾಗಿ ಹಾಡಿದ್ದನನ್ನು ಕೇಳಿದ ಮೇಲೆ ನಾಳೆ ನಾನು ಖಂಡಿತ ತ್ಯಾಗರಾಜ ಭಗವತ್ಪಾದರ ತೆಲುಗಿನ ಒಂದು ಕೀರ್ತನೆಯನ್ನು ಹಾಡುವೆನು. ಆದರೆ ವೀಣಾರವರ ಶಿಷ್ಯನಾಗಿ ಸಂಗೀತ ಸೃಷ್ಟಿಸಿದ್ದ ಸಲಿಗೆಯಿಂದಾಗಿ ಹೇಳಿದೆ.
ಎಲ್ಲರೂ ನಕ್ಕರು. ಆಕೆಯತ್ತ ನೋಡಿದೆ. ಕೈಯಲ್ಲಿ ವೀಣೆ ಕೊಟ್ಟರೆ ಸಾಕ್ಷಾತ್ ವೀಣಾಪಾಣಿಯೇ. ಅಂಥ ಸುಂದರಮೂರ್ತಿಯನ್ನು ನಾನು ಯಾವತ್ತೂ ನೋಡಿರಲಿಲ್ಲ.
ನಾನು ಕಣ್ತುಂಬ ನೋಡುತ್ತಿದ್ದಾಗ ದೊರೆಗಳು “ಪಂತುಲುಗಾರು, ವೀಣಾ ನಮ್ಮ ಪ್ರೀತಿಯ ಮಗಳು….” ಎಂದು ಹೇಳುತ್ತ…. ಮುಂದೆ ಏನೋ ಹೇಳಲಿದ್ದ ಅವರು ಮಾತನ್ನು ಅರ್ಧದಲ್ಲಿಯೇ ತುಂಡರಿಸಿದರು. ಹಾಗೇ ಒಂದು ನಿಟ್ಟುಸಿರುಬಿಟ್ಟರು. ಅದು ನನ್ನೊಳಗೆ ಪ್ರಶ್ನಾರ್ಥಕವಾಗಿ ನಿಂತಿತು.
ಅವತ್ತು ರಾತ್ರಿ ವೀಣಾ ತನ್ನ ಕೈಯಾರೆ ನಮಗೆಲ್ಲ ಊಟ ಬಡಿಸಿದಳು.
ಊಟ ಅಮೃತಕ್ಕೆ ಸಮನಾಗಿತ೬ತು. “ನರಸಿಂಹ ಬರೋವರ್‍ಗೆ ಪಂತಲುಗಾರು ಮದ್ದಳೆ ನುಡಿಸ್ತಿದ್ರೆ ಚೆನ್ನಾಗಿರುತ್ತೆ!” ಎಂದು ಶಾಸ್ತ್ರಿಗಳು ಗೊಣಗಿದ್ದನ್ನು ದೊರೆಗಳು ಕೆಳಿಸಿಕೊಂಡರು.
ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದರು. ನಾನು ಅದಕ್ಕೆ ಏನೆಂದು ಉತ್ತರಿಸುವುದು! ವೀಣಾರವರಿಗೆ ಸಾಥ್ ಕೊಡುವುದು ಅದೃಷ್ಟದ ಸಂಗತಿಯೇ! ಆಕೆ ನನ್ನತತ ‘ಏನಂತಿಯಾ’ ಎಂಬಂತೆ ನೋಡಿದಳು.
‘ನಾನು ಪ್ರಯತ್ನಿಸ್ತೀನಿ’ ಎಂಬಂತೆ ನೋಡಿದೆ.
ಆಕೆಯ ಸುಂದರ ಮುಖದಲ್ಲಿ ನಗೆಯ ರೇಖೆ ಕಾಣಿಸಿತು.
ಸುರ್ಯೋದಯಕ್ಕೆ ಪೂರ್ವದಲ್ಲಿ ದೈತ್ಯ ಬಂದು ನನ್ನನ್ನು ಉಪ್ಪರಿಗೆ ಮೇಲ್ಗಡೆ ಕರೆದೊಯ್ದ. ರತ್ನಗಂಬಳಿ ಮೇಲೆ ವೀಣಾ ತಂಬೂರಿ ಮೀಟುತ್ತ ಅದರ ನಾದಲಹರಿಯಲ್ಲಿ ತೇಲಿ ಹೋಗಿದ್ದಳು.
ಮದ್ದಳೆ ತೆಗೊಳ್ಳಲೇನು ಅಂದೆ.
ಬೇಡ ಅಂದಳು.
ಹಾಗೆ ತೋಟದೊಳಗಡೆ ಅಡ್ಡಾಡಿಕೊಂಡು ಬರೋಣ ಬರ್‍ತೀರಾ ಅಂದಳು.
ಆಕೆಯಾಡುತ್ತಿದ್ದ ತೆಲುಗುಭಾಷ್‌ಎ ಆ ಗಾದೆಯವರಾಡುತ್ತಿದ್ದ ಭಾಷೋಚ್ಚಾರಣೆಗಿಂತ ಭಿನ್ನವಾಗಿತ್ತು ಮತ್ತು ನಾಗರಿಕವಾಗಿತ್ತು. ನಾನು ಬನ್ನಿ ಹೋಗೋಣ ಎಂದೆ.
ಆಕೆ ಎದ್ದು ತೆಳ್ಳನೆಯ ರೇಶಿಮೆ ಶಲ್ಯೆಯನ್ನು ಮೈತುಂಬ ಹೊದುಕೊಮಡಳು. ಗಾದೆಯ ನೈರುತ್ಯ ದಿಕ್ಕಿನಲ್ಲಿದ್ದ ಬಾಗಿಲು ಮೂಲಕ ಹೊರಟೆವು. ನಿಂಬೆಹಣ್ಣಿನ ತೋಟ ಪ್ರವೇಶಿಸಿದ ನಂತರವೇ ಆಕೆ ತುಟಿ ಬಿಚ್ಚಿದ್ದು.
ನನ್ನ ಬಗ್ಗೆ ಕೇಳಿದಳು, ಎಲ್ಲ ಹೇಳಿದೆ. “ಆ ನಾಲ್ಕು ಮಂದಿ ಮಹಿಳೆಯರಲ್ಲಿ ನಿಮ್ಮ ತಾಯಿ ಯಾರು ಎಂದು ಕೇಳಿದೆ?”
ಆಕೆ ನನ್ನ ಕಡೆ ಪ್ರಶ್ನೆ ನೀನು ಕೇಳಬಾರದಾಗಿತ್ತು ಎಂಬರ್ಥದ ನೋಟ ಬೀರಿದಳು. ಹತ್ತು ಹೆಜ್ಜೆ ಮುಂದೆ ನಡೆದ ಮೇಲೆ ಆಕೆಯ ದೃಷ್ಟಿ ಗಿಡದಲ್ಲಿದ್ದ ಒಂದು ಲಿಂಬೆಹಣ್ಣಿನ ಕಡೆ ಕೂತಿತು. “ನನಗೆ ಆ ಹಣ್ಣು ಬೇಕು” ಅಂದಳು.
ಹರಿದುಕೊಟ್ಟೆ. ನೀವು ನನ್ನ ತಾಯಿ ನೋಡ್ಲಿಕ್ಕೆ ಇಷ್ಟಪಡ್ತೀರಾ ಅಂತ ಕೇಳಿದಳು.
ನಮ್ಮ ತಾಯೀನ ನೋಡೋದೇ ಸಂತೋಷದ ಸಂಗತಿ ಅಂದೆ.
ಆದು ಇದು ಮಾತಾಡುತ್ತ ಜುಳು ಜುಳು ಅಂತ ಹರಿಯುತ್ತಿದ್ದ ಒಂದು ಹಳ್ಳ ತಲುಪಿದೆವು. ಆ ಹಳ್ಳದಿಂದಾಗಿ ಆ ತೋಟದ ಸೌಂದರ್ಯ ಹೆಚ್ಚಿತ್ತು. ಚಿಕ್ಕ ತೊರೆಯ ಈ ಪಕ್ಕ ಆಕೆ ಕೂತುಕೊಂಡಳೂ. ನಾನು ಆ ಪಕ್ಕ ಕೂತುಕೊಮಡೆ. ಕನ್ನಡಿಯಂಥ ನೀರಿನೊಲಗೆ ಆಕೆಯ ಪ್ರತಿಬಿಂಬ ತುಂಬ ಸುಂದರವಾಗಿ ಮೂಡಿತ್ತು.
ಅದರಿಂದ ಪರವಶಗೊಂಡು ನಾನು ‘ನಿಮ್ಮ ಪ್ರತಿಬಿಂಬ ಅದೆಷ್ಟು ಸುಂದರವಾಗಿ ಕಾಣ್ತಿದೆ’ ಅಂದೆ.
ಅದು ಕೇವಲ ನನ್ನ ಬಿಂಬ ಮಾತ್ರ ಅಂದಳು. ನಮ್ಮ ಅಪ್ಪಾಜಿ ಬಗ್ಗೆ ಏನನ್ನಿಸ್ತದೆ ಅಂತ ಕೇಳಿದಳು. ‘ಹಿತ್ತಳೆಯ ಕುಲುಬು ವ್ಯವಸ್ಥೆ ನಡುವಿರೋ ಚೊಕ್ಕ ಬಂಗಾರ ಅವರು’ ಎಂದೆ.
ನನ್ನ ಮಾತಿನಿಂದ ಆಕೆಗೆ ಸಂತೋಷವಾಯಿತು. ಹೊರಟೆವು.
ನನ್ನ ಮತ್ತು ಆಕೆಯ ನಡುವೆ ಎರಡಡಿಗಳಷ್ಟು ಅಂತರವಿತ್ತು. ಗಾದೆ ತಲುಪಿದ ಮೇಲೆ ಲಚುಮಿ ಎದುರಾದಳು. ನನ್ನ ಕಡೆ ಮುಖ ಗಂಟುಹಾಕಿ ನೋಡಿ ಹೋದಳು. “ವೀಣಾ, ನಿಮ್ಮ ತಾಯಿಯವರನ್ನು ನೋಡಬೇಕಲ್ಲ” ಅಂದೆ.
ಆ ಧೈರ್ಯ ನಿಮಗಿದೆಯಾ ಅಂದಳು.
ಯಾಕೆ ಅನುಮಾನವೇ ಅಂದೆ.
ಸರಿ ಹಾಗಾದರೆ ಬನ್ನಿ ಎಂದಳು. ಆಕೆಯ ಹಿಂದೆ ಹೊರಟೆ. ಆ ಗಾದೆಯೊಳಗೆ ಎಲ್ಲೆಲ್ಲೋ ಕರೆದೊಯ್ದಳು. ನನಗೆ ಸಾಹಿತ್ಯ ಅಂದ್ರೆ ಇಷ್ಟ ಅಂದಳು. ನನ್ನ ತಾಯಿ ಮಾತಾಡಲು ಸಾಧ್ಯವಾದರೆ ಒಂದು ಒಳ್ಳೆಯ ಕಾದಂಬರಿಯಾಗುತ್ತದೆ ಅಂದಳು. ಅಷ್ಟು ಹೊತ್ತಿಗಾಗಲೆ ನಾವು ಒಂದು ಕೋಣೆ ತಲುಪಿದ್ದೆವು.
ಆ ಕೋಣೆಯೊಳಗಿದ್ದ ಒಬ್ಬ ಇನ್ನೊಂದು ಕೋಣೆಯ ಬಾಗಿಲು ತೆರೆದ. ಮಂಕಾಗಿ ಉರಿಯುತ್ತಿದ್ದ ದೀಪದ ಬೆಳಕಿನಲ್ಲಿ ಒಂದು ಕರಿಮತ್ತಿಯಿಂದ ಮಾಡಲ್ಪಟ್ಟಿದ್ದ ಮಂಚ ಇತ್ತು. ಅದರ ಮೇಲೆ ಕೆದರಿದ್ದ ತಲೆಯ ಹೆಂಗಸೊಬ್ಬಳು ಮೊಣಕಾಲ ಚಿಪ್ಪಿನಲ್ಲಿ ಮುಖ ಹುದುಗಿಸಿಕೊಂಡು ಕೂತಿದ್ದಳು. ವೀಣಾ ‘ಅಮ್ಮಾ’ ಎಂದಾಗ ಮುಖ ಎತ್ತಿದಳು. ಬೊಗಸೆ ಗಣ್ಣುಗಳಿಂದ ಮಾಟವಾದ ಮೂಗು ತುಟಿಗಳಿಂದ ತುಂಬ ಆಕರ್ಷಕವಾಗಿದ್ದಳು.
ಒಂದು ಕ್ಷಣ ಮಂಕಾಗಿರುವಂತೆ; ಇನ್ನೊಂದು ಕ್ಷಣ ಆಗಸವೇ ತನ್ನ ತಲೆ ಮೇಲೆ ಕಳಚಿ ಬಿದ್ದಿರುವುದೇನೋ ಎಂಬಂತೆ; ಮತ್ತೊಂದು ಕ್ಷಣ ಪ್ರಪಂಚದ ಮೇಲೆ ತನು ಸೇಡು ತೀರಿಸಿಕೊಳ್ಳಲು ಹೊರಟಿರುವಂತೆ, ಬಗೆಬಗೆಯಾಗಿ ಗೋಚರಿಸಿದಳು. ಕೃಶವಾಗಿದ್ದ ಆಕೆಯನ್ನು ನೋಡಿ ನನಗೆ ಬೇಸರವಾಯಿತು. ರುಗ್ಣಶಯ್ಯೆಯಲ್ಲಿರುವ ತಾಯಿಯನ್ನು ಪಕ್ಕದಲ್ಲಿಟ್ಟುಕೊಂಡು ಸಂಗೀತದ ಬಗ್ಗೆ ಆಸಕ್ತಿವಹಿಸಿರುವ ವೀಣಾಳತ್ತ ಪ್ರಶ್ನಾರ್ಥಕವಾಗಿ ನೋಡಿದೆ. ದುಃಖ ಮರೆಸುವ ಶಕ್ತಿ ಕೇವಲ ಸಂಗೀತಕ್ಕೆಇರುವುದೆಂಬ ಉತ್ತರ ಆಕೆಯ ಮುಖದಲ್ಲಿತ್ತು. ಆ ಮುಖವನ್ನು ಸದಾ ಬೊಗಸೆಯಲ್ಲಿಟ್ಟುಕೊಂಡಿರಬೇಕೆಂಬ ಆಸೆ ಚಿಗುರಿತು. ನಾನು ಆ ನತದೃಷ್ಟ ತಾಯಿಯ ತಲೆ ನೇವರಿಸಿದೆ. ಎಷ್ಟು ಪ್ರಯತ್ನಿಸಿದರೂ ಆಕೆಯ ಬಾಯಿಯಿಂದ ಒಂದೇ ಒಂದು ಮಾತು ಉದುರಿಸಲಾಗಲಿಲ್ಲ.
ಬಾಗಿಲು ದಾಟಿದ ನಂತರ “ವೀಣಾ…. ಮತ್ತೆ ನಿಮ್ಮ ತಂದೆಯವರು ಅದೆಷ್ಟು ಲವಲವಿಕೆಯಿಂದ ಇರ್‍ತಾರಲ್ಲ” ಎಂದೆ.
ಆಕೆ ಒಂದು ನಿಡಿದಾದ ಉಸಿರುಬಿಟ್ಟಳು. “ಅವರು ನನ್ನ ತಂದೆಯವರಲ್ಲ…. ಆದ್ರೆ, ಅದಕ್ಕಿಂತ ಹೆಚ್ಚು” ಅಂದಳು.
ಅದನ್ನು ಕೇಳಿ ನನಗೆ ಆಶ್ಚರ್ಯ, ಕುತೂಹಲ ಎರಡೂ ಉಂಟಾದವು. ವಿವರ ಪಡೆಯಲು ಪ್ರಯತ್ನಿಸಿದೆ. ಆಕೆ ದುಗುಡದಿಂದಾಗಿ ಏನೂ ನುಡಿಯಲಿಲ್ಲ. ಬೀಳ್ಕೊಡುವಾಗ ಆಕೆಯ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, “ನೆನಪುಗಳನ್ನು ಕೆದಕಿ ಮನಸ್ಸಿಗೆ ನೋವು ಮಾಡಿದ್ದಕ್ಕೆ ಕ್ಷಮೆ ಇರಲಿ” ಅಂದೆ.
ಆಕೆ ಬಿಟ್ಟ ಉಸಿರು ನನ್ನ ಮುಂಗೈಗೆ ತಾಕಿತು.
ನಂತರ ಮನಸ್ಸಿನ ಸಮತೋಲನ ಕಳೆದುಕೊಂಡೆ. ಕಣ್ಣು ಮುಚ್ಚಿದರೆ ಆ ನತದೃಷ್ಟ ತಾಯಿಯ ರೂಪ ಶುಕ್ಲ ಪಟಲದ ಮೇಲೆ ಮೂಡಿ ಚಿತ್ತ ಕಲಕುತ್ತಿತ್ತು. ಕೈಯನ್ನು ಹಾಲಿನಿಂದ ತೊಳೆದುಕೊಂಡು ಮುಟ್ಟಬಹುದಾದಂಥ ವೀಣಾಳ ಕೋಮಲ ಕಾಯದೊಳಗೆ ಅವಿತಿರುವ ನೋವಿನ ನೆಲೆಗಳನ್ನು ನೆನಪಿಸಿಕೊಂಡು ನಡುಗಿದೆ.
“ವೀಣೆಯ ಶೃತಿ ಸರಿಪಡಿಸಿಕೊಳ್ಳಬೇಕಿದೆ ಮನೆಕಡೆ ಬಾರಯ್ಯ” ಅಶ್ವತ್ಥ ಕಟ್ಟೆಯ ಬಳಿ ಕೂತಿದ್ದಾಗ ಶಾಸ್ತ್ರಿಗಳು ಪ್ರದಕ್ಷಿಣೆ ಮುಗಿಸಿಕೊಂಡು ಹೋಗುವಾಗ್ಗೆ ಕರೆದರು.
ರಾಮದೇವರ ಗುಡಿ ಪಕ್ಕದಲ್ಲಿದ್ದ ಅವರ ಮನೆಗೆ ಹೋದೆ. ಅವರ ದೊಡ್ಡ ಸಂಸಾರ ಕಂಡು ಬೆರಗಾದೆ. ಅವರ ಮಗ ಕೋಸಂಬರಿ ಪಾನಕ ಕೊಟ್ಟು ಹೋದ. ಶಾಸ್ತ್ರಿಗಳು ನಂತರ ನನ್ನನ್ನು ಉಪಾಸನಾ ಕೋಣೆಗೆ ಕರೆದೊಯ್ದರು. ನನಗೆ ಮದ್ದಳೆ ಕೊಟ್ಟು ತಾವು ಕೈಗೆ ವೀಣೆ ತೆಗೆದುಕೊಂಡರು. ಹಂಸ ಧ್ವನಿ ರಾಗದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಕೃತಿಯ ಸಹಾಯದಿಂದ ಶ್ರುತಿ ಸರಿಪಡಿಸಲು ಪ್ರಯತ್ನಿಸಿದರು. ನಾನು ಝಂಪೆತಾಳದಲ್ಲಿ ಮದ್ದಳೆ ನುಡಿಸುವಲ್ಲಿ ಹಲವು ಬಾರಿ ಎಡವಿದೆ.
“ಪಂತಲುಗಾರು ಇವತ್ತು ನಿಮ್ಮ ಮನಸ್ಸು ಯಾಕೋ ಸರಿ ಇದ್ದಂತಿಲ್ಲ ಬೇಡ ಬಿಡಿ” ಅಂದರು.
ನಾನು ನನ್ನ ಮನಸ್ಸಿನ ಕ್ಲೇಶ ವಿವರಿಸಿದೆ. ಅವರು ನಿಟ್ಟುಸಿರು ಬಿಟ್ಟು ಅದೊಂದು ದೊಡ್ಡ ಕಥೆ ಅಂದರು. ಅವರಿಗೂ ಅದನ್ನೆಲ್ಲ ಹೇಳಲು ಇಷ್ಟವಿರಲಿಲ್ಲ. ಆದರೂ ವಿಧಿ ಇಲ್ಲದೆ ಹೇಳಿದರು.
ನತದೃಷ್ಟೆ ತಾಯಿ ದೊರೆಗಳ ಅತ್ತೆಯ ಮಗಳು ಕಾಮಾಕ್ಷಿಯಂತೆ. ಆಕೆ ಪೋತರಾಜನನ್ನು ಪ್ರೀತಿಸಿ ಮದುವೆಯಾದಳಂತೆ. ಒಂದು ಹೆಣ್ಣುಮಗು ಹುಟ್ಟಿದ ಹದಿನೈದನೇ ದಿನದಲ್ಲಿ ಪೋತರಾಜು ಕಾಡಿನಲ್ಲಿದ್ದಕೊಂಡೇ ರಾಷ್ಟ್ರ ವಿರೋಧಿ; ಜಮೀನ್ದಾರಿ ವಿರೋಧಿ ಚಟುವಟಿಕೆಗೆ ಸಂಪೂರ್ಣ ತೊಡಗಿಸಿಕೊಂಡನಂತೆ. ಉಳುವವನೆ ಭೂಮಿಗೆ ಒಡೆಯ ಎಂಬ ಘೋಷಣೆಯ ಪ್ರಚಾರಕ್ಕೆ ಬಂದಾಗಲೆಲ್ಲ ಹೆಂಡತಿಯನ್ನು ಮಗುವಿನೊಂದಿಗೆ ತನ್ನೊಂದಿಗೆ ಬಂದು ಬಿಡು ಎಂದು ಪೀಡಿಸುತ್ತಿದ್ದನಂತೆ. ತಿರುಪತಯ್ಯನ ಸಲಹೆ ಮೇರೆಗೆ ಚಿನ್ನವೆಂಗಳರೆಡ್ಡಿ ದೊರೆಗಳು ಕಾಮಾಕ್ಷಿಯನ್ನೂ ಆಕೆಯ ಮಗಳನ್ನೂ ಕರೆ ತಂದು ಗಾದೆಯಲ್ಲಿಟ್ಟುಕೊಂಡರಂತೆ. ದೊರೆಗಳು ವೀಣಾಳನ್ನು ಹೆತ್ತ ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳತೊಡಗಿ ಹದಿನೇಳು ವರ್ಷಗಳೇ ಸಂದಿವೆಯಂತೆ.
ಶಾಸ್ತ್ರಿಗಳು ಇನ್ನೂ ಏನೋ ಹೇಳಿಲಿದ್ದರು. ಅಸ್ತಮಾ ಬಂದು ಅವರ ಮಾತು ತಡೆಯಿತು. ಅವರ ಧರ್ಮಪತ್ನಿ ಅಲಮೇಲಮ್ಮನವರು ಒಂಉದ ತಾಸು ಮಲಗಿಕೊಂಡರೆ ಎಲ್ಲ ಸರಿ ಹೋಗ್ತದೆ ಅಂತ ಅವರನ್ನು ವಿಶ್ರಾಂತಿ ಕೋಣೆಗೆ ಕರೆದೊಯ್ದರು. ಅಲ್ಲಿಂದ ನಾನೂ ಹೊರಟುಬಂದೆ.
ಗಾದೆ ಒಳಗೆ ಬಂದಾಗ ಅಲ್ಲಿ ಪೋತರಾಜನ ಸುಳಿವಿನ ಬಗ್ಗೆ ವಿಶೇಷ ಚರ್ಚೆ ನಡೆದಿತ್ತು. ಬಿಕ್ಕಿಮರಡಿ ದಿಬ್ಬದ ಮೇಲೆ ಎಡರು ಸುತ್ತು ಗುಂಡು ಹಾರಿಸಿ ಹುತ್ತಗಳ ನಡುವೆ ತಪ್ಪಿಸಿಕೊಂಡಿದ್ದ. ಪ್ರಾಂಸರಿಗಳನ್ನು ಹರಿದು ಹಾಕಬೇಕೆಂದೂ; ಉಳುವವನಿಗೆ ಭೂಮಿ ಹಂಚಬೇಕೆಂದೂ; ಗ್ರಾಮೋಪಯೋಗಿ ಕಾರ್ಯಗಳಿಗೆ ಅನುಕೂಲವಾಗುವಂತೆ ಗಾದೆಯನ್ನು ಬಿಟ್ಟುಕೊಟ್ಟು ಪಟ್ಟ ಮನೆಯಲ್ಲಿ ವಾಸಿಸಬೇಕೆಂದೂ ಒಕ್ಕಣಿಕೆ ಬರೆದಿದ್ದ ಚೀಟಿಯೊಂದನ್ನು ದೊರೆಗಳಿಗೆ ಪೋತರಾಜ ತಲುಪಿಸಿದ್ದ. ಅದರ ಬಗ್ಗೆ ತಿರುಪತಯ್ಯನಿಗೂ, ದೊರೆಗಳಿಗೂ ನಡುವೆ ಮಾತುಕತೆ ನಡೆದಿತ್ತು.
“ತಿರುಪತಯ್ಯನವರೇ, ನನಗಿದಾವುದೂ ಬೇಡ. ನೀವು ಹೂಂ ಅಂದ್ರೆ ಕಾಶಿಗೋ, ಹೃಷಿಕೇಶಕ್ಕೋ ಹೋಗ್ತೀನಿ. ಆ ಪೋತರಾಜನ ಕಾಟ ಅತಿಯಾಗಿದೆ”, ಎಂದು ದೊರೆಗಳು ಶಂಕರ ಭಗತ್ಪಾದರ ಗ್ರಂಥದ ಮೇಲೆ ಒಂದು ಹನಿ ಕಣ್ಣೀರು ಉದುರಿಸಿದರು.
“ಅದು ಹೇಗೆ ಸಾಧ್ಯ? ದೊರೆಗಳೆ? ನಿಮಗೀ ಗಾದೆಯೇ ಕಾಳಿ, ಹೃಷಿಕೇಶ ಎಲ್ಲ. ನನ್ನೆದುರು ಇನ್ನೊಂದು ಸಾರಿ ವೈರಾಗ್ಯದ ಮಾತಾಡಬೇಡಿ. ಆ ದುಷ್ಟ ಪೋತರಾಜಗೆ ಮರಣದಂಡನೆ ನೀಡಿದ ಹೊರತು ಈ ಗಾದೆಗೆ ಶಾಂತಿ ಇಲ್ಲ” ತಿರುಪತಯ್ಯ ಮುಖ ಕೆಂಪಗೆ ಮಾಡಿಕೊಂಡ.
“ಹಾಗಾದ್ರೆ ಪೋತರಾಜು ಸಾಯಲೇಬೇಕಂತಿರಾ!” ದೊರೆಗಳು ಪ್ರಶ್ನಾರ್ಥಕವಾಗಿ ವೃದ್ಧನ ಕಡೆ ನೋಡಿದರು.
ಅಷ್ಟೊತ್ತಿಗೆ ನಾನು ಹೋದೆ. ಬಲವಂತದಿಂದ ಕುಳ್ಳಿರಿಸಿಕೊಂಡರು. ತಿರುಪತಯ್ಯನೂ ವಿವರಿಸಿದ; ದೊರೆಗಳೂ ತಮ್ಮ ಸಂಕಟ ವಿವರಿಸಿದರು. ಯಾವುದು ಸರಿ? ಯಾವುದು ತಪ್ಪು ಅಂತ ನನ್ನ ಕೇಳಿದರು.
ನಾನು ಇಕ್ಕಟ್ಟಿಗೆ ಸಿಲುಕಿಕೊಂಡೆ. ಏನು ಹೇಳುವುದಪ್ಪಾ ಶಿವನೇ ಅನ್ನಿಸಿತು.
ದೊರೆಗಳು ಚರಾಸ್ತಿ-ಸ್ಥಿರಾಸ್ತಿ ಎಲ್ಲ ದಾನ ಮಾಡುವುದು, ಕಾಶಿಗೆ ಹೋಗುವುದ ಸಮಂಜಸವಲ್ಲವೆಂದು ಹೇಳಿದೆ. ಇತರೇ ಜಮೀನ್ದಾರರಿಗಿಂತ ಜನಾನುರಾಗಿಗಳಾಗಿರುವ ದೊರೆಗಳು ಜನರಿಗಾಗಿ ದೊರೆಸ್ಥಾನದಲ್ಲಿ ಇರಬೇಕೆಂದೂ ಹೇಳಿದೆ. ಗಾದೆಯ ಕಾನೂನಿನ ಚೌಕಟ್ಟಿನೊಳಗೆ ನಕ್ಸಲೈಟ್ ಪೋತರಜಗೆ ಮರಣ ದಂಡನೆ ವಿಧಿಸಿರುವ ಮತ್ತು ಅದನ್ನು ಚಾರಿತರುವ ಕ್ರಮವನ್ನು ವಿರೋದಿಸಿ ಮಾತನಾಡಿದ್ದು ತಿರುಪತಯ್ಯಗೆ ಸರಿ ಬರಲಿಲ್ಲ.
“ಮತ್ತೇನು ಮಾಡಬೇಕೆನ್ನುವಿರಿ?” ಎಂದು ಕೇಳಿದೆ.
ಆತ ಮಾಡಿರೋ ಅಪರಾದಗಳ ಬಗ್ಗೆ ವಿಚಾರಣೆ ನಡೆಸುವ ಶಿಕ್ಷೆಕೊಡುವ ಹಕ್ಕು ಸರ್ಕಾರಕ್ಕಿದೆ ಎಂದೆ.
ತಿರುಪತಯ್ಯ ನನ್ನನ್ನು ಕಣ್ಣಿನಿಂದಲೇ ಕೊಲೆಮಾಡಲು ಪ್ರಯತ್ನಿಸಿದಂತೆ ಕಂಡುಬಂದ.
“ಪಂತುಲುಗಾರು…. ಈ ಇಪ್ಪತ್ತುಗಳಲ್ಲಿ ಕರಿವೇಮಲ ದೊರೆಗಳ ಕಾನೂನು ಮಾತ್ರ ನಡೆಯುವುದು. ತಿಳಿಯಿತೇ….. ನಮ್ಮ ಇಲಾಖೆಯಲ್ಲಿ ಭಿಕ್ಷುಕರಿಲ್ಲ; ಕಳ್ಳಕಾಕರಿಲ್ಲ; ವ್ಯಬಿಚಾರಿಗಳಿಲ್ಲ. ನಮ್ಮ ಇಲಾಖೆಯಲ್ಲಿ ಪೊಲೀಸು ಠಾಣೆಗಳಿಲ್ಲ…. ಕೋರ್ಟು ಕಚೇರಿಗಳಿಲ್ಲ.” ತಿರುಪತಯ್ಯ ತನ್ನ ಮಾತಿನ ಓಘವನ್ನು ತಾನೇ ನಿಯಂತ್ರಿಸಿಕೊಂಡು ಮುಂದುವರಿದ. “ಪೋತರಾಜುಗೆ ಮರಣದಂಡನೆ ಜಾರಿ ತರುವುದು ನಮ್ಮ ಗಾದೆಯ ಗೌರವದ ಪ್ರಶ್ನೆ…. ಅದನ್ನು ಜಾರಿಗೆ ತಂದೇ ತರ್‍ತೀನಿ,” ನನ್ನ ಕಡೆ ವಿಷಾದದಿಂದ ನೋಡಿ ವೃದ್ಧ ಹೊರಟು ಹೋದ.
“ಕೇಳಿದಿರಾ ನಮ್ಮ ತಿರುಪತಯ್ಯ ಆಡಿದ ಮಾತನ್ನು?” ದೊರೆಗಳು ಒಂದು ನಿಟ್ಟುಸಿರು ಬಿಟ್ಟರು.
“ವೀಣಾ ತುಂಬಾ ಒಳ್ಳೆಯ ಹುಡುಗಿ ಅಲ್ವೇ?” ಅಂದರು.
ಹೂಂ ಅಂದೆ.
“ತುಂಬಾ ಜೋಪಾನವಾಗಿ ಪ್ರೀತಿಯಿಂದ ಬೆಳೆಸಿದ್ದೀವಿ”, ಅಂದರು.
ಹೀಗೆ ಏನೇನೋ ಸ್ವಲ್ಪ ಹೊತ್ತು ಮಾತಾಡಿದರು. ಲೆಕ್ಕ ಪತ್ರ ವಿಭಾಗದ ಕೆಲವರು ಅವರ ಸಹಿಗಾಗಿ ಹೊರಗೆ ಕಾಯುತ್ತಿದ್ದುದರಿಂದ ನಾನು ಹೊರಟು ಬಂದೆ.
ಊಟದ ನಂತರ ನಾನು ನನ್ನ ಕೋಣೆಯಲ್ಲಿ ಕರಿವೇಮಲದ ಅನುಭವಗಳ ಬಗ್ಗೆ ಟಿಪ್ಪಣಿ ಬರೆದುಕೊಳ್ಳುತ್ತಿದ್ದಾಗ ಬಾಗಿಲ ಬಳಿ ಲಚ್ಚುಮಿ ಕಾಣಿಸಿಕೊಂಡಳು. ದುಡು ದುಡು ಒಳಗಡೆ ಬಂದಳು.
“ನನ್ನ ಒಂದು ಸಾರಿ ಕೋಣೆಗೆ ಬಾ ಅಂತ ಹೇಳ್ಲಿಲ್ಲ ನೀವು”, ಅಂದಳು.
ನಾನು ಏನೆಂದು ಉತ್ತರಿಸಲಿ?
“ವೀಣಮ್ಮನವರು ಮಾಳಿಗೆ ಮೇಲೆ ಕಾಯ್ತಿದಾರೆ ಬರ್‍ಬೇಕಂತೆ”, ಎಂದು ಹೇಳಿ ಹೊರಟಳು.
“ವೀಣಮ್ಮನವರನ್ನು ಪ್ರೀತಿಸಿದ ಮೂವ್ವರ ಕೊಲೆಯಾಗಿದೆ. ನೀವು ನಾಲ್ಕನೆಯವರಾಗ ಬೇಡಿ” ಅಂದಳು ಬೀಸು ಹೆಜ್ಜೆ ಹಾಕುತ್ತು.
ಏನು ಯಾಕೆ ಅಂತ ಅವಳನ್ನು ಹೇಗೆ ಕೇಳುವುದು?
ನಾನು ಉಪ್ಪರಿಗೆ ಏರಿದ್ದು ಅದೇ ಮೊದಲು. ಹಾಲಿನ ಕೆನೆಯಂಥ ಬೆಳದಿಂಗಳು ಉಪ್ಪರಿಗೆಯ ವಿಶಾಲವಾದ ಬಯಲಿಗೆ ಕಳೆಗಟ್ಟಿತ್ತು. ಅಲ್ಲಿದ್ದ ತೂಗು ಕುರ್ಚಿಯಲ್ಲಿ ಕೂತಿದ್ದ ವೀಣಾ ಆ ಬೆಳದಿಂಗಳಿಗೆ ಕಾವ್ಯಮಯತೆಯನ್ನು ಕಲ್ಪಿಸಿದ್ದಳು. ನಾನು ಹೋಗಿ ಆಕೆಯ ಎದುರುಗಡೆ ಇದ್ದ ಕುರ್ಚಿ ಮೇಲೆ ಕೂತುಕೊಂಡೆ. ಬೆಳದಿಂಗಳಲ್ಲಿ ತೊಯ್ದು ತಪ್ಪಟೆಯಾಗಿದ್ದ ಕರಿವೇಮಲ ಮೌನವಾಗಿ ಉಸಿರಾಡುತ್ತಿದ್ದ ವಿಷಾದ ತುಂಬ ಅರ್ಥಪೂರ್ಣವಾಗಿತ್ತು.
“ಬೆಳಿಗ್ಗೆ ನನ್ನೆರಡು ಕೈಗಳನ್ನು ಹಿಡಿದುಕೊಂಡಿದ್ದಿರಲ್ಲ ಹಾಗೆ ಮತ್ತೊಮ್ಮೆ ಹಿಡ್ಕೋಳ್ತೀರಾ” ಅಂದಳು.
ಆಕೆಯ ಬೇಡಿಕೆ ನನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿತು. ಬೆಳಿಗ್ಗೆ ನಾನು ಹಾಗೆ ಹಿಡಿದುಕೊಂಡಿದ್ದು ಅನಿರೀಕ್ಷಿವಾಗಿ. ಈಗ ಹಾಗಲ್ಲ. ವಿಚಿತ್ರವಾದ ಪರಿಸ್ಥಿತಿ. ಹೃದಯ ಬಡಿತ ಹೆಚ್ಚಿತು.
ಆಕೆ ಎದ್ದು ನಿಂತು ತನ್ನೆರಡು ಕೈಗಳನ್ನು ನನ್ನತ್ತ ಚಾಚಿದಳು. ನಖಸಿಖಾಂತ ಕಂಪಿಸುತ್ತಿದ್ದಳು. ಹಿಡಿದುಕೊಂಡೆ.
ಗಟ್ಟಿಯಾಗಿ,
ಮತ್ತಷ್ಟು ಗಟ್ಟಿಯಾಗಿ.
ನನ್ನ ಇಪ್ಪತ್ತೈದನೇ ವಯಸ್ಸಿನ ದೇಹದ ದಷ್ಟಪುಷ್ಟ ಗಿಡದಲ್ಲಿ ಹೊಚ್ಚ ಹೊಸ ಅನುಭವದ ಪುಷ್ಪ ಅರಳಿತ್ತು.
ಅದು ದೇಹದಾದ್ಯಂತ ಘಮಾಡಿಸಿತು.
ಉತ್ಕಂಠಿತಳಾದ ಆಕೆ ನನ್ನನ್ನು ಗಟ್ಟಿಯಾಗಿ ಆಲಂಗಿಸಿಕೊಂಡುಬಿಟ್ಟಳು. ಎದೆ ಮೆಲ ಮುಖವಿರಿಸಿ ಬಿಕ್ಕಿದಳು. ನನ್ನನ್ನು ಇಲ್ಲಿಂದ ಎಲ್ಲಾದರೂ ದೂರ, ಬಹುದೂರ ಕರ್‍ಕೊಂಡು ಹೋಗು ಅಂದಳು. ಎದೆಯನ್ನು ಕಣ್ಣೀರಿನಿಂದ ತೊಯ್ಸಿದಳು. ಆಕೆಯ ಸಾಮೀಪ್ಯದ ಅನುಭವ ಅವಿಸ್ಮರಣೀಯ. ಆ ಕ್ಷಣ ನಾನು ಗುಟ್ಟಾಗಿ ಪ್ರೀತಿಸುತ್ತಿದ್ದ ಅನೇಕರನ್ನು ನೆನಪಿಸಿಕೊಂಡೆ. ನನ್ನ ಕಣ್ಣುಗಳಿಂದಲೂ ನೀರು ಆಕೆಯ ತಲೆ ಮೇಲುದುರಿದವು. ಎಷ್ಟು ಹೊತ್ತು ನಾವು ಹಾಗೆ ಅಂಟಿಕೊಂಡಿದ್ದೆವೋ. ಚಂದ್ರನ ನಗೆ ನಮಗೆ ಅರ್ಥವಾಗುವಂತಿರಲಿಲ್ಲ.
ರೆಕ್ಕೆಗಳಿದ್ದಲ್ಲಿ ವೀಣಾಳನ್ನು ಅವುಚಿಕೊಂಡು ಹಾರಿಬಿಡಬಹುದಿತ್ತು. ಕೆಂಡವನ್ನು ಉಡಿಯಲ್ಲಿ ಕಟ್ಟಿಕೊಂಡು ಎಷ್ಟು ದೂರ ಚಲಿಸಲಾದೀತು? ಬಂದದ್ದು ಬರಲಿ, ಇಲ್ಲಿಂದ ಹೋದರೆ ಜೊತೆಯಾಗೇ ಹೋಗುವುದೆಂದು ನಿರ್ಧರಿಸಿದೆ. ಹಾಗೆ ಆಕೆಗೆ ಭರವಸೆ ನೀಡಿದೆ, ಸಂತೈಸಿದೆ. ಆಕೆಯ ಬಂಗಾರದಂಥ ಮುಖದ ಆನೇಕ ಭಾಗಗಳನ್ನು ಉತ್ಕಟತೆಯಿಂದ ಮುದ್ದಿಸಿ ಬೀಳ್ಕೊಟ್ಟೆ.
ಒಂದು ಹೊತ್ತಿನಲ್ಲಿ ಮತ್ತೆ ಸಾರೋಟು ಕಡೆ ನೋಡಲಿಲ ಎನ್ನುತ್ತ ಸುಬ್ಬುಲು ಬಂದ. ದೊರೆಗಳ ಊಳಿಗಕ್ಕೆ ಮೀಸಲಿಟ್ಟಿದ್ದ ವಂಶ ಅವನದು. ತನ್ನ ವಂಶದ ಹಿರಿಯರು ದೊರೆಗಳ ಸೇವೆಯಲ್ಲಿ ಯಾವಾಗ ಹೇಗೆ ಸತ್ತರೆಂಬುದನ್ನು ಸೂಚ್ಯವಾಗಿ ತಿಳಿಸಿದ. ಅಫೀಮಿನ ಉಂಡೆಯನ್ನು ದವಡೆಯಲ್ಲಿಟ್ಟುಕೊಂಡಿದ್ದ ಅವನು ತನ್ನ ಬಾಯಿಯನ್ನು ನನ್ನ ಕಿವಿಯೊಳಗಿಟ್ಟ. ಅರ್ಧ ದಾರಿಯಲ್ಲಿ ಕೈ ಬಿಡಬಾರದೆಂದ. ಲಚ್ಚುಮಿ ಎಲ್ಲ ಸಂಗತಿಯನ್ನು ಅವನಿಗೆ ಉಸುರಿದ್ದಳು. ಅದು ಆಕೆಯ ಕರ್ತವ್ಯವಾಗಿತ್‌ಉತ. ಯಾಕೆಂದರೆ ಸುಬ್ಬುಲು ಒಂದು ಅರ್ಥದಲ್ಲಿ ವೀಣಾಳ ಕ್ಷೇಮವನ್ನು ತ್ರಿಕರಣಪೂರ್ವಕವಾಗಿ ಬಯಸುವವನು. ನಮ್ಮ ವೀಣಮ್ಮನವರ ಬಗ್ಗೆ ಯಾರು ಏನು ಹೇಳಿದರೂ ಕೇಳಬೇಡಿರಿ ಎಂದೂ, ತ್ರಿಮೂರ್ತಿಗಳನ್ನೂ ಲೆಕ್ಕಿಸದೇ ಆಕೆಯನ್ನು ಜೀವನ ಸಂಗಾತಿಯನ್ನಾಗಿ ಸ್ವೀಕರಿಸಬೇಕೆಂದೂ ಹೇಳಿದ. ಹಾಗೆ ವಚನ ತೆಗೆದುಕೊಂಡ.
ಶಾಸ್ತ್ರಿಗಳ ಸಲಹೆಪಡೆದರೆ ಹೇಗೆಂತ ಹೋದಾಗ ಅವರ ಮಗ ವಿಧವೆಯನ್ನು ಮದುವೆಯಾಗುವ ಸಂಪ್ರದಾಯ ನಿಮ್ಮ ಕುಲದಲ್ಲುಂಟೋ ಎಂಬಂಥ ಪ್ರಶ್ನೆ ಹಾಕಿದ.
ಅದರಿಂದ ನಾನು ಗಲಿಬಿಗೊಂಡೆ. ಇದು ಹೇಳುವ ಮಾತಲ್ಲ ಕೇಳೂವ ಮಾತಲ್ಲ ಅನ್ನಿಸಿತು. ಅದನ್ನು ಅದೇ ತಾನೆ ಬಂದ ಶಾಸ್ತ್ರಿಗಳು “ಮುಂಡೇಗಂಡ ನೀನು ಆಡುತ್ತಿರುವ ಮಾತಿನ ಪರಿಣಾಮ ನೆನಪಿದೆಯಾ” ಎಂದು ಕೇಳಿದರು.
ಅವನು ಬಾಯಿಮುಚ್ಚಿಕೊಂಡು ಹೋದ. ವಿವರಿಸುವಂತೆ ಶಾಸ್ತ್ರಿಗಳನ್ನು ಕೇಳಿದೆ. ಅದನ್ನೆಲ್ಲ ಕೇಳಿದರೆ ಏನು ಉಪಯೋಗ ಅಂದರು. ಆ ಮರ್ಮದ ಬಗ್ಗೆ ಲಚ್ಚುಮಿಯೇ ಹೇಳಿದ್ದು. ವೀಣಾ ಒಂಭತ್ತು ವರ್ಷದವಳಿದ್ದಾಗ ಪೆನ್ನಹೋಬಳಂ ಪಾಪಿರೆಡ್ಡಿಯವರ ಎಂಟನೆ ಮಗನ ಜೊತೆ ಮದುವೆಯಾಗಿತ್ತಂತೆ. ಮಾಸನೂರು ಹುಚ್ಚಾರೆಡ್ಡಿ ಕಡೆಯ ನೂರಾರು ಮಂದಿ ನಾಡಬಾಂಬುಗಳೊಡನೆ ದಾಳಿ ಮಾಡಿದರಂತೆ. ಅದರಲ್ಲಿ ಪಾಪಿರೆಡ್ಡಿಯವರ ಸಮಸ್ತ ವಂಶ ನಾಶವಾಯಿತಂತೆ. ಆ ದುರ್ಘಟನೆ ನಡೆದ ಎರಡು ವರ್ಷದ ನಂತರ ವೀಣಾ ಋತುಮತಿಯಾದಳಂತೆ. ಇದೂ ಒಂದು ಮದುವೆಯೇ ಎಂಬ ಪ್ರಶ್ನೆಯನ್ನು ಲಚ್ಚುಮಿ ಹಾಕಿದಳು. ವೀಣಾಲ ಜೊತೆ ತಾನೂ ಹೊರಟು ಬರುವುದಾಗಿ ಹೇಳಿದಳು. ಆಗಲಿ ಎಂದೆ. ನಂತರವೇ ನನ್ನ ಮನಸ್ಸು ಹಗುರಾದದ್ದು.
ದೊರೆಗಳಿಗಿಂತ ಮುಖ್ಯವಾಗಿ ತಿರುಪತಯ್ಯನನ್ನು ಕೇಳಬೇಕೆಂದು ಸುಬ್ಬುಲು ಹೇಳಿದರೆ ಮೂಲಿಂಟಿ ಗೋವಿಂದುಡು ತಿರುಪತಯ್ಯನಿಗಿಂತ ಮುಖ್ಯವಾಗಿ ದೊರೆಗಳನ್ನು ಕೇಳಬೇಕೆಂದು ಪಿಸುಗುಟ್ಟಿದನು. ಅವರಿಬ್ಬರನ್ನು ಕೇಳುವ ಧೈರ್ಯ ನನ್ನಲ್ಲಿರಲಿಲ್ಲ. ಬೇರೆ ಬೇರೆ ಸಮಯದಲ್ಲಿ ಅವರಿಬ್ಬರನ್ನು ಕಮಡೆ. ಆದರೆ ಕೇಳುವ ಧೈರ್ಯ ಬರಲಿಲ್ಲ.
-೫-
ಪೋತರಾಜು ಸಿಕ್ಕಿಬಿದ್ದ ಎಂಬ ಸುದ್ದಿಯೊಡನೆ ಕರಿವೇಮಲದಲ್ಲಿ ಬೆಳಗಾಯಿತು.
ಸುದ್ದಿಯ ಸತ್ಯಾಂಶ ಅರಿಯಲು ಪ್ರಯತ್ನಿಸಿದೆ. ಪೋತರಾಜುನನ್ನು ಹೆಡಮುರಿಗೆ ಕಟ್ಟಿ ಗ್ರಾಮದ ಎಲ್ಲೋ ಒಂದು ಕಡೆ ಬಚ್ಚಿಟ್ಟಿರುವರೆಂದೂ, ಪೋತರಾಜುನನ್ನು ಹೋಲು ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿರುವನೆಂದೂ; ಪೋತರಾಜು ಸಿಕ್ಕೇ ಇಲ್ಲವೆಂದೂ, ಪೋತರಾಜು ದೊರೆಗಳ ಕೈಗೆ ಸಿಕ್ಕು ಎಲ್ಲಿ ಸಂಘಟನೆಯ ಗುಟ್ಟುಗಳನ್ನು ತಿಳಿಸಿ ಬಿಡುವನೋ ಎಂದು ಹೆದರಿ ಅವನ ಸಂಗಡಿಗರೇ ಅವನನ್ನು ಗುಟ್ಟಾಗಿ ಕೊಲೆ ಮಾಡಿರುವರೆಂದೂ; ಜನ ಬಗೆಬಗೆಯ ರೀತಿಯಲ್ಲಿ ಮಾತಾಡುವುದನ್ನು ಕೇಳಿಸಿಕೊಂಡೆ. ನಿಜವಾದ ವಿವರ ಕೊಡುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಪೋತರಾಜು ತನ್ನ ಮಗಳನ್ನು ಅಪಹರಿಸಿಕೊಂಡೊಯ್ದು ಭೂಗತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದಿರುವನೆಂದು ಒಬ್ಬ ಪಿಸು ಪಿಸು ನುಡಿದ. ಆತನ ಜೊಗೆ ಮಾತಾಡು ಆಸೆ ನನಗೆ ತುಂಬ ಇದ್ದುದಂತೂ ನಿಜ. ಅದು ಈಡೇರಿತು ಎಂಬುದನ್ನು ಕನಸಿನಲ್ಲಿ ಕಲ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ವೀಣಾಳಿಗೂ ಅಷ್ಟೆ.
ಇಂಥ ಗೊಂದಲದ ನಡುವೆ, ಗೂಳಿ ಕಾಳಗದ ಸಿದ್ಧತೆಯ ಕೆಲಸ ಭರದಿಂದ ಬೆಳಗಿನಿಂದಲೇ ಆರಂಭವಾಯಿತು. ಸಂಗಾಲ, ಬಿಳಿಕಲ್ಲು, ವೆಂಕಟಾಪುರ, ಹೆಬ್ಬೆಟ, ವಾಗಿಲಿ ಮೊದಲಾದ ಊರುಗಳಿಂದ ಪ್ರಜೆಗಳು ತಂತಮ್ಮ ಹೋರಿಗಳೊಡನೆ ಮಧ್ಯಾಹ್ನದ್ಹೊತ್ತಿಗೆ ಕರಿವೇಮಲ ಸೇರಿಕೊಂಡರು. ಎಲ್ಲರ ಮುಖದಲ್ಲಿ ಗೆಲುವಿನ ಉತ್ಸಾಹ. ದೊರೆಗಳಿಂದ ಬಹುಮಾನ ಸ್ವೀಕರಿಸಬೇಕು, ಶಹಬ್ಬಾಷ್‌ಗಿರಿ ಪಡೆಯಬೇಕೆಂದು ಎಲ್ಲರೂ ತುದಿಗಾಲಲ್ಲಿದ್ದರು. ಎಲ್ಲರೂ ಬಹಳ ದಿನಕ್ಕೆ ಸ್ನಾನ ಮಾಡಿದ್ದರಿಂದ ವಿಶೇಷ ಕಳೆಯಿಮದ ಮಿನುಗುತ್ತಿದ್ದರು. ಇದರಿಂದ ಕರಿವೇಮಲದಲ್ಲಿ ಹಬ್ಬದ ವಾತಾವರಣವಿತ್ತು.
ಗೂಳಿ ಕಾಳಗ ನಡೆಯುವ ಊರಮ್ಮನ ಬಯಲಿಗೆ ದೊರೆಗಳ ಕುಟುಂಬ ಸಮಸ್ತರೆಲ್ಲ ಹೊರಟರು. ತಮ್ಮೊಂದಿಗೆ ಇರುವಂತೆ ದೊರೆಗಳು ನನಗೆ ಸೂಚಿಸಿದರು. ಹೊರಟೆ. ಈ ರೀತಿಯ ಹಿಂಸೆ, ಪರಾಕ್ರಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವುದೆಂದೂ, ಆಳುವವರಿಂದ ಮೆಚ್ಚುಗೆ ಪಡೆಯಲು ದುಡಿಯುವ ವರ್ಗ ಆದಿವಾಸಿ ಕಾಲದಿಂದಲೂ ಪ್ರಯತ್ನಿಸುತ್ತಿರುವುದೆಂದೂ ಸೂಚ್ಯವಾಗಿ ವಿವರಿಸಿದರು.
ನಾವು ತಲುಪಿದೊಡನೆ ಆಗಲೆ ಸೇರಿದ್ದ ಸಾವಿರಾರು ಜನ ಎದ್ದು ನಿಂತು ದೊರೆಗಳಿಗೆ ಜಯಕಾರ ಹಾಕಿ ಗೌರವ ಸೂಚಿಸಿದರು. ದೊರೆಗಳು ಸುಖಾಸೀನರಾದ ನಂತರವೇ ಅವರೆಲ್ಲ ಕೂತದ್ದು, ಅವರ ಬಲಪಕ್ಕ ವೀಣಾ, ಅವರ ಪತ್ನಿಯರು; ಎಡಪಕ್ಕೆ ನಾನು ಅವರ ಸೂಚನೆಯಂತೆ ಕೂತುಕೊಂಡೆ. ಹಿಮದೆ ತುರುಪತಯ್ಯ ದೊರೆಗಳ ಅಂಗರಕ್ಷಕರೊಡನೆ ನಿಂತಿದ್ದ. ಎದುರುಗಡೆ ಇಪ್ಪತ್ತು ಹಳ್ಳಿಗಳಿಂದ ಬಂದಿದ ಇಪ್ಪತ್ತು ಹೋರಿಗಳು; ಹೋರಿಗಳೊಡನೆ ಕಾದಲು ಸಜ್ಜಾಗಿದ್ದ ಯುವಕರ ಪಡೆಯಿತ್ತು. ಸಾಂಪ್ರದಾಯಕವಾಗಿ ಹೋಗಿರಳಿಗೆ ಮಂಗಳಾರತಿ ಆಯಿತು. ಬಲಿಷ್ಠ ಯುವಕರಿಗೆ ಗಾದೆಯಿಂದ ತರಲಾಗಿದ್ದ ಒಣಕೊಬ್ಬರಿ; ಉತ್ತತ್ತಿ; ಕಲ್ಲುಸಕ್ಕರೆ ಕೊಡಲಾಯಿತು. ಸುಮಾರು ಮುನ್ನೂರು ವರ್ಷಗಳಷ್ಟು ಹಿಂದಿನ ದೊಡ್ಡ ಗಂಟೆಯೊಂದನ್ನು ಬಾರಿಸಿ ಕಾಳಗ ಆರಂಭವಾಯಿತೆಂದು ಸೂಚಿಸಲಾಯಿತು.
ಮೊದಲಿಗೆ ಕರಿವೇಮಲದ ಡೋಮ ತನ್ನ ಶಾಮಲವರ್ಣದ ಹೋರಿಯನ್ನು ಎರಡು ಸುತ್ತು ಹೋರಟದ ನಂತರ ಸೋಲಿಸಿ ದೊರೆಗಳಿಂದಲೂ ಜನಸ್ತೋಮದಿಂದಲೂ ಮೆಚ್ಚುಗೆ ಪಡೆದ. ಅವನ ನಂತರ ಬಿಳಿಕಲ್; ಆ ನಂತರ ಹೆಬ್ಬೆಟಂ…. ಆಮೇಲೆ ವಾಗಿಲಿ; ಸಂಗಾಲ ಹೀಗೆ ಅನೇಕ ಊರುಗಳ ಯುವಕರು ತಂತಮ್ಮ ಹೋರಿಗಳೊಡನೆ ಹೋರಾಡಿ ಪರಾಕ್ರಮ ಪ್ರದರ್ಶಿಸಿದರು. ಸಂಗಾಲ ಮತ್ತು ಚಿಪ್ಪಗಿರಿಯ ಯುವಕರು ತಮ್ಮವೇ ಆದ ಹೋರಿಗಳಿಂದ ದಾರುಣವಾದ ಸೋಲು ಅನುಭವಿಸಿದರು. ವೆಂಕಟಾಪುರದ ಹೋರಿಯಂತೂ ತುಂಬ ಬಲಿಷ್ಠವಾಗಿತ್ತು. ಅದರ ಮಾಲಿಕನೂ ಅಷ್ಟೇ ಬಲಶಾಲಿಯಾಗಿದ್ದ. ಅವನು ಅದರೊಡನೆ ಹೋರಾಡುವಾಗಂತೂ ಎಲ್ಲರೂ ಉಸಿರು ಬಿಗಿಹಿಡಿದು ನೋಡತೊಡಗಿದರು. ಯುವಕ ಅದರೊಂದಿಗೆ ಸುಮಾರು ಹೊತ್ತು ಹೋರಾಡಿದ. ತನ್ನ ಮಾಲಿಕನೆಂಬ ಕಲ್ಪನೆ ಇಲ್ಲದೆ ಅದು ಅವನನ್ನು ಎತ್ತಿ ಎತ್ತಿ ಎಸೆಯುತ್ತಿತ್ತು. ಅವನು ಅಷ್ಟೇ ವೇಗವಾಗಿ ಜಿಗಿದು ಬಂದು ಅದರ ಎರಡು ಕೋಡುಗಳನ್ನು ಹಿಡಿಯುತ್ತಿದ್ದ. ಕೊನೆಗೆ ಅವನನ್ನು ಅದು ಸುಮಾರು ಹದಿನೈದು ಅಡಿ ದೂರಕ್ಕೆ ಎಸೆದು ಡುರುಕಿ ಹಾಕಿತು. ಜನ ಅವನು ಸತ್ತೇಹೋದ ಅಂದುಕೊಂಡರು. ಕೆಲವರು ಅವನನ್ನು ಆಚೆ ಹೊತ್ತುಕೊಂಡು ಹೋದರು. ಬಾಹುಬಲಿಯಂತೆ ಅಜೇಯವಾಗಿ ನಿಂತಿದ್ದ ಹೋರಿ ಸಿಂಹಾವಲೋಕನ ಮಾಡಿತು. ಡುರುಕಿ ಹಾಕಿತು. ನೆಲಗೆದರಿತು. ದೊರೆಗಳ ಕಡೆ ದಿಟ್ಟಿಸಿ ನೋಡಿತು. ಅವರ ಹೆಗಲ ಮೇಲಿದ್ದ ಕೆಂಪುಶಲ್ಯೆ ನೋಡಿದೊಡನೆ ಅದಕ್ಕೆ ಏನನ್ನಿಸಿತೋ ಏನೋ? ಆವೇಶದಿಂದ ಚಂಡ ಮಾರುತದಂತೆ ಅವರತ್ತ ನುಗ್ಗಿದೊಡನೆ ಜನ ಕಕ್ಕಾವಿಕ್ಕಿಯಾದರು. ಇನ್ನೇನು ಆ ವೃಷಭ ದೊರೆಗಳನ್ನು ಆಪೋಶನ ತೆಗೆದುಕೊಂಡಿತು ಅನ್ನುವಷ್ಟರಲ್ಲಿ ನಾನು ಅದರ ಮುಂದೆ ಕುಪ್ಪಳಿಸಿ ಜಿಗಿದು ನಿಂತೆ. ಅದರ ಅದರ ಕೋಡುಗಳನ್ನು ಬಲವಾಗಿ ಹಿಡಿದೆ. ಸಮಸ್ತ ಬಲವನ್ನು ತೋಳಿಗೆ ತಂದುಕೊಮಡು ಅದನ್ನು ಹಿಮದಕ್ಕೆ ತಳ್ಳಿದೆ. ಅದು ನನ್ನನ್ನು ಎತ್ತಿ ಆಗಸಕ್ಕೆ ಎಸೆಯಲು ಭಗೀರಥ ಪ್ರಯತ್ನ ಮಾಡಿತು. ಆದರೆ ಅದರ ಆಟ ನನ್ನೆದುರಿಗೆ ನಡೆಯಲಿಲ್ಲ. ಅದನ್ನು ಹಿಂದಕ್ಕೆ ಅಷ್ಟು ದೂರ ತಳ್ಳುತ್ತ ಹೋದೊಡನೆ ಹತ್ತಾರು ಆಳುಗಳು ಬಂದು ಹಗ್ಗ ಹಾಕಿ ಕಟ್ಟಿ ಅದನ್ನು ಬಂಧಿಸಿದರು.
ಇಷ್ಟೊಂದು ಶಕ್ತಿ ನನ್ನಲ್ಲಿ ಹೇಗೆ ಬಂತೋ! ಜನಸ್ತೋಮ ಜಯಕಾರ ಹಾಕಿತು. ದೊರೆಯ ಅಂಗರಕ್ಷಕರು ನನ್ನನ್ನು ಹೆಗಲ ಮೇಲೆ ಎತ್ತಿಕೊಂಡು ಕುಣಿದಾಡಿದರು. ತಿರುಪತಯ್ಯ ನನ್ನ ಅಪ್ಪಿಕೊಂಡು ಅಭಿನಂದಿಸಿದ. ದೊರೆಗಳಿಗಂತೂ ಏನೊಂದೂ ಹೇಳಲು ತೋಚಲಿಲ್ಲ. ಹೆಮ್ಮೆಯಿಮದ, ಪ್ರೀತಿಯಿಂದ, ಕೃತಜ್ಞತೆಯಿಂದ ನನ್ನ ಕಡೆ ನೋಡಿದರು. ಅವರ ಕುಟುಂಬ ವರ್ಗದ ಎಲ್ಲರೂ ಅಷ್ಟೆ. ವೀಣಾ ನನ್ನ ಕಡೆ ಹೆಮ್ಮೆಯಿಂದ ನೋಡಿದಳು.
ಅಂದು ರಾತ್ರಿ ಆಕೆಯೇ ನನ್ನ ದೇಹಕ್ಕಾಗಿದ್ದ ಚಿಕ್ಕ ಪುಟ್ಟ ಗಾಯಗಳ ಚಿಕಿತ್ಸೆ; ಶುಶ್ರೂಷೆಯ ಕಾರ್ಯವಹಿಸಿಕೊಂಡಳು. ಐದು ನಿಮಿಷಕ್ಕೊಮ್ಮೆ ದೊರೆಗಳು ಅಥವಾ ತಿರುಪತಯ್ಯ; ದೊರೆಸಾನಿಸಯರು ಬಂದು ಹೋಗುತ್ತಿದ್ದುದರಿಂದ ನಾನು ಮತ್ತು ವೀಣಾ ಹೆಚ್ಚಿಗೆ ಮಾತಾಡಲಾಗಲಿಲ್ಲ. ಆದರೂ ಅದು ಇದು ಮಾತಾಡಿಕೊಂಡೆವು.
ಎರಡು ದಿನಗಳ ನಂತರ ದೊರೆಗಳು ನನ್ನನ್ನು ತಮ್ಮ ಕೋಣೆಗೆ ಕರೆಯಿಸಿಕೊಂಡರು. ಬಲವಾಗಿ ಅಪ್ಪಿಕೊಂಡರು.
ನಾನು, “ಬಂದು ತುಂಬ ದಿನಗಳಾದವು. ತಾವು ಅಪ್ಪಣೆ ಕೊಟ್ಟರೆ ನಾಳೆ ಹೊರಡ್ತೀನಿ”, ಅಂದೆ.
ಅದೇ ಹೊತ್ತಿಗೆ ತಿರುಪತಯ್ಯ ಬಂದ. “ನಮ್ಮ ದೊರೆಗಳ ಪ್ರಾಣ ಉಳಿಸೋರ್‍ನ ಬರಿಗೈಲಿ ಕಳಿಸಲಾದೀತೇನು” ಅಂದ. ಬಂಗಾರ, ಬೆಳ್ಳಿ; ಜಮೀನು ಏನು ಬೇಕಾದರೂ ಕೇಳು ಎಂದು ಒತ್ತಾಯಿಸಿದ.
ಅದಾವುದೂ ಬೇಡ ಅಂದೆ. ನೀವು ಅನ್ಯಥಾ ಭಾವಿಸದಿದ್ದರೆ ಕೇಳ್ತೀನಿ ಕೊಡ್ತೀರಾ! ಎಂದೆ. “ನಿಮ್ಮ ಮನಸ್ಸಿನಲ್ಲಿರೋದು ನಮಗೆ ಗೊತ್ತು!” ಅಂದ ತಿರುಪತಯ್ಯ, ದೊರೆಗಳ ಕಿವಿಯಲ್ಲಿ ಪಿಸುನುಡಿದ. ದೊರೆಗಳು ಅದಕ್ಕೆ ಮುಗುಳ್ನಕ್ಕರು.
ಆ ಕ್ಷಣವೇ ವೀಣಾಳನ್ನು ಕರೆಸಿಕೊಂಡರು. ಆಕೆಯ ಅಭಿಪ್ರಾಯವನ್ನು ಏಕಾಂತದಲ್ಲಿ ಕೇಳಿದರು. ಇದಕ್ಕೆ ಗಾದೆಯಲ್ಲಿ ಯಾರ ವಿರೋಧವಿಲ್ಲವೆಂಬುದನ್ನು ಖಚಿತಪಡಿಸಿಕೊಂಡರು. ನಂತರವೇ ಆಕೆಯ ಕೋಮಲ ಹಸ್ತವನ್ನು ನನ್ನ ಕೈಯಲ್ಲಿರಿಸಿದ್ದು. “ನಿಮ್ಮ ತಂದೆ ತಾಯಿಯರನ್ನು ಆದಷ್ಟು ಬೇಗ ಕಳಿಸಿ” ಎಂದು ಹೇಳಿ ಬೀಳ್ಕೊಟ್ಟರು. ಒಂದು ವಾರದೊಳಗೆ ಮತ್ತೆ ಬರುವುದಾಗಿ ವೀಣಾಳಿಗೆ ಹೇಳಿದೆ. ಆಕೆ ಕಣ್ಣೀರು ತಂದುಕೊಂಡು ಆಗಲಿ ಎಂದಲು ವಿಧಿ ಇಲ್ಲದೆ.
ಗಾದೆ ಮೇಲಿದ್ದ ಆಕೆ ಸಾರೋಟು ಗ್ರಾಮ ದಾಟುವವರೆಗೆ ಕೈ ಅಲುಗಾಡಿಸುತ್ತಲೇ ಇದ್ದಳು. ದಾರಿ ಉದ್ದಕ್ಕೂ ಸುಬ್ಬುಲು ಹೊಗಳಿದ್ದೇ ಹೊಗಳಿದ್ದು. ಕೈಮರದ ಬಳಿ ಬಸ್ಸು ಬಂದು ನಿಂತಿತು. ನಾನು ಏರಬೇಕೆಂದಿದ್ದ ಬಸ್ಸಿನಿಂದ ಗುರಪ್ಪ ಇಳಿದ. ಆತ ನನ್ನನ್ನು ಅರಸಿಕೊಂಡೇ ಬಂದಿದ. ಸುಬ್ಬುಲು ಎಲ್ಲ ವಿಷಯ ತಿಳಿಸಿದ. ಅದನ್ನು ಕೇಳಿ ಆತನಿಗೆ ಪರಮಾಶ್ಚರ್ಯವಾಯಿತು. ಕರಿವೇಮಲದ ಕಡೆ ಗುರಪ್ಪನನ್ನು ಸಾಗುಹಾಕಿ ನಾನು ಬೇರೊಂದು ಬಸ್ಸು ಏರಿದೆ.
****
ಕೀಲಿಕರಣ ದೋಶ ತಿದ್ದುಪಡಿ: ರಾಮಚಂದ್ರ
