ಸಿನಿಮಾ ಕಟೌಟ್‌ಗಳಿಗೆ ಕ್ಷೀರಾಭಿಷೇಕ

ಕನ್ನಡ ಚಿತ್ರರಂಗದಲ್ಲಿ ‘ಸ್ಟಾರ್‌ಡಂ’ನ ಬಿರುಗಾಳಿ ಬೀಸಿದಾಗ ಎಲ್ಲ ನಟರಿಗೂ ಒಂದೊಂದು ಅಭಿಮಾನಿ ಸಂಘಗಳಾಗುತ್ತಾ ಬಂದಿರುವುದು ಇಂದು ಇತಿಹಾಸದ ಒಂದು ಅಧ್ಯಾಯವೇ ಆಗಿದೆ.

ರಾಜಕೀಯ ಮತ್ತು ಸಿನಿಮಾರಂಗಕ್ಕೂ ಒಂದು ವಿಚಿತ್ರ ನಂಟಿರುವುದರಿಂದ ಇಲ್ಲಿ ಕಟೌಟ್ ಕಾಂಪಿಟೇಶನ್, ಕಟ್ ಥ್ರೋಟ್ ಕಾಂಪಿಟೇಷನ್ ನಂತಾಗಿರುವುದನ್ನು ಕಂಡೇ ಇದ್ದೀರಿ.

ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಂದು ಸ್ಟಾರ್ ಕಟ್ಟುವುದು, ಬಲೂನ್ ಹಾರಿ ಬಿಡುವುದು, ಸ್ಟಾರ್ ಮೆರವಣಿಗೆ, ಅತಿ ಎತ್ತರದ ಕಟೌಟ್ ನಿಲ್ಲಿಸಿ ಸಂಭ್ರಮಿಸುವುದು ಅವರ ಸಡಗರದ ಸಂಕೇತ ಎಂಬುದನ್ನು ಒಪ್ಪಬಹುದು.

ಆದರೆ, ಆ ಕಟೌಟ್‌ಗಳಿಗೆ ಹಂಡೆ ಹಂಡೆ ಹಾಲು ಸುರಿಯುವುದು ಯಾವ ಪುರುಷಾರ್ಥಕ್ಕೆ? ಇತ್ತೀಚೆಗೆ ‘ಮುತ್ತು’ ಬಿಡುಗಡೆಯಾದಾಗ ಅಂಬಿ ಅಭಿಮಾನಿಗಳು ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡುವ ಭಾರಿ ಭಾರಿ ಜಾಹೀರಾತು ನೀಡಿದ್ದನ್ನು ನೋಡಿದಾಗ ಬಹು ಹಿಂದೆ ಅಭಿನಯಿಸಿದ್ದ ಒಂದೇ ಒಂದು ನಾಟಕ ನೆನಪಾಯಿತು. ಅ.ನ.ಸು. ಬರೆದ ಕಿರುನಾಟಕ ಅದು.

ಆ ನಾಟಕವೇ ಬಿ.ವಿ.ಕಾರಂತರು ಬೆಂಗಳೂರಿನಲ್ಲಿ ಅಭಿನಯಿಸಿದ ಮೊದಲ ನಾಟಕ. ಅದರಲ್ಲಿ ನಾನು ಡಾಕ್ಟರ್, ಬಿ.ವಿ. ಕಾರಂತ್ ರೈತ. ನಮ್ಮ ಚಿತ್ರಾ ಬಳಗಕ್ಕೆ ಅಂದು ಕಾರಂತರನ್ನು ಕರೆತಂದು ಪರಿಚಯಿಸಿದವರು ಹಿರಿಯ ಪತ್ರಕರ್ತ ಎಂ.ಬಿ. ಸಿಂಗ್. ಕಥಾ ಹಂದರ ಇಷ್ಟೆ. ಬಡ ಮಂದಿಯ ಕಷ್ಟಕ್ಕೆ ಮರುಗುವ ಡಾಕ್ಟರ್-ತಾನು ಉಪವಾಸವಿದ್ದರೂ ರೋಗಿಗಳ ಚಿಂತಾಜನಕ ಪರಿಸ್ಥಿತಿ ಅರಿತು ಮಫತ್ತಾಗಿ ಔಷಧಿ ನೀಡುತ್ತಿರುತ್ತಾನೆ ಹಳ್ಳಿಯಲ್ಲಿ. ಇದು ಮನೆಯಲ್ಲಿ ನಿತ್ಯ ಕುರುಕ್ಷೇತ್ರಕ್ಕೆ ನಾಂದಿಯಾಗಿರುತ್ತದೆ ಮಡದಿಯೊಂದಿಗೆ ಅವರಿಗಿರುವುದು ಒಂದೇ ಮಗು. ‘ಹೀಗೆ ನೀವು ಸಾರ್ವಜನಿಕ ಸೇವೆ ಮಾಡುತ್ತ ಪರೋಪಕಾರಿ ಪಾಪಣ್ಣ ಎನಿಸಿಕೊಂಡರೆ ಮನೆ ನಡೆಯುವುದಾದರೂ ಎಂತು? ಆ ಮಗುವಿಗೆ ಹಾಲು ನೀಡಲೂ ನಾವು ಶಕ್ತರಾಗಿಲ್ಲ. ದಯಮಾಡಿ ಇನ್ನು ಮುಂದೆ ಯಾವುದೇ ರೋಗಿ ಬಂದರೂ-ಹಣ ವಸೂಲಿ ಮಾಡೇ ಔಷಧಿ ನೀಡಿ” ಎಂದು ಒತ್ತಾಯಿಸುವಳು. ವಾಸ್ತವ ಸ್ಥಿತಿ ಅರಿತ ಡಾಕ್ಟರ್ ಮನಸಿಲ್ಲದ ಮನಸ್ಸಿನಿಂದ ಅಂಥ ನಿರ್ಧಾರಕ್ಕೆ ಒಪ್ಪುವ.

ಆದರೆ, ಅಂಥ ವಿಷಮ ಗಳಿಗೆಯಲ್ಲೇ ಒಬ್ಬ ಬಡರೈತ-ತನಗಿರುವ ಏಕೈಕ ಮಗುವಿಗೆ ಸಖತ್ ಖಾಯಿಲೆ ಎಂದು ಅಳುತ್ತಾ ಬರುವ. ಡಾಕ್ಟರ್ ‘ಖಂಡತುಂಡವಾಗಿ ಹಣ ತಂದಲ್ಲಿ ಮಾತ್ರ ಔಷಧಿ ನೀಡುವೆ-ಮಗುವನ್ನು ಉಳಿಸುವೆ’ ಎನ್ನುವ. ರೈತ ಬರಗಾಲದ ಬವಣೆ ಬಣ್ಣಿಸಿ, ಬಗೆಬಗೆಯಾಗಿ ವಿನಂತಿಸುವ, ತನಗಿರುವುದು ಒಂದೇ ಮಗು ಎಂದು ಗೋಗರೆವ. ಆಗ ಡಾಕ್ಟರ್ “ನನಗಿರುವುದೂ ಒಂದೇ ಮಗು, ಅದೂ ಸಾಯುವ ಸ್ಥಿತಿಯಲ್ಲಿದೆ. ಅದರಿಂದಾಗಿ ಒಂದು ಒಳಲೆ ಹಾಲು ತಂದುಕೊಡು. ರೈತ ಪಡಬಾರದ ಪಾಡುಪಟ್ಟು – ತುಂಬ ತಡವಾಗಿ ಒಂದೆ ಒಳಲೆ ಹಾಲು ತರುವ. ಆಗ ವೈದ್ಯ ರೈತನ ಮಗುವನ್ನು ಪರಿಶೀಲಿಸುವ ಮನ ಮಾಡುವ ರೈತ ಕಾತರದಿಂದ ನೋಡುತ್ತಿದ್ದಾನೆ. ಡಾಕ್ಟರ್ ಸಪ್ಪೆ ಮುಖ ಹಾಕಿ” ಇಲ್ಲ ಮಹರಾಯ. ಈ ಮಗುವನ್ನು ಉಳಿಸಲು ನಾನೀಗ ಶಕ್ತನಲ್ಲ. ‘ಮಗು ತೀರಿಕೊಂಡಿದೆ’ ಎನ್ನುವ. ರೈತ ಕಣ್ಣೀರಿಟ್ಟು ಹೊರಡಲನುವಾದಾಗ ಡಾಕ್ಟರ್ ‘ಅಯ್ಯಾ ರೈತ, ನೀನು ತಂದ ಒಂದು ಒಳಲೆ ಹಾಲು ತೆಗೆದುಕೊಂಡು ಹೋಗು-ನಾನಿದನ್ನು ಸಂಪಾದಿಸಿಲ್ಲ, ತೆಗೆದುಕೊಳ್ಳಲಾರೆ’ ಎಂದಾಗ ರೈತ ಅಬ್ಬರಿಸಿ ‘ಡಾಕ್ಟರೇ, ನನ್ನ ಮಗೂನ ನೀವು ಉಳಿಸಿಕೊಡಲಾಗಲಿಲ್ಲ ಅನ್ನೋ ಕಾರಣಕ್ಕೆ ನಿಮ್ಮ ಮಗೂನ ಕೊಲ್ಲೋ ಹಕ್ಕು ನಿಮಗಿಲ್ಲ. ತಗೊಳ್ಳಿ ಹಾಲು’ ಎಂದು ಹೇಳಿ ತೆರಳುವ.

ಆ ಒಂದು ‘ಒಳಲೆ ಹಾಲು’ ಹಳ್ಳಿಯವನ ಬಡತನವನ್ನ ವೈದ್ಯನ ಮಗುವಿನ ಬಗ್ಗೆ ರೈತನ ಪ್ರೀತಿಯನ್ನ ತೋರುತ್ತದೆ. ರೈತಾಪಿ ಜನರ ಕಷ್ಟ ಇಂದೂ ಅದಕ್ಕಿಂತ ವಿಭಿನ್ನವಾಗೇನಿಲ್ಲ. ಅಂಥ ವೇಳೆ ಹಂಡೆಗಟ್ಟಲೆ ಹಾಲನ್ನು ನಟರ ಕಟೌಟ್‌ಗೆ ಸುರಿಯುವುದು ‘ವೇಸ್ಟ್’ ಎಂಬ ಮಾತನ್ನು ಕೊಡುಗೈ ದೊರೆ ಅಂಬಿ ಅಂಥವರು ತಮ್ಮ ಅಭಿಮಾನಿಗಳಿಗೆ ತಿಳಿಯ ಹೇಳುವುದು ಅವಶ್ಯಕ ಅಲ್ಲವೇ?

‘ಮುತ್ತು’ ಚಿತ್ರಕ್ಕೆ ಇದೊಂದು ರೀತಿ ಪ್ರಚಾರ ಎಂದು ಭಾವಿಸಿ ಜಾಹೀರಾತು ನೀಡುತ್ತಾ ಹೋದರೆ ಜಿಲ್ಲೆ ಜಿಲ್ಲೆಗಳಲ್ಲೂ ಕ್ಷೀರಾಭಿಷೇಕ ಒಂದು ಫ್ಯಾಷನ್ ಆಗುತ್ತದೆ.

‘ದಾನಕ್ಕಿಂತ ದೇವರಿಲ್ಲ’ ಎಂಬ ಹಾಡಿಗೆ ಕಾಸಿನ ಸುರಿಮಳೆ ಎಂದು ಜಾಹೀರಾತಿನ ಪ್ರಚಾರ ಮಾಡುವುದರಿಂದ ಅಭಿಮಾನಿ ಸಂಘಗಳವರು ಬಿಳಿಯ ಪರದೆಗೆ ಕಾಸೆಸೆದು ತೃಪ್ತರಾಗುತ್ತಾರೆ. ಇದರಿಂದ ಯಾರಿಗೇನು ಲಾಭ? ಅದರ ಬದಲಿಗೆ ಅಭಿಮಾನಿ ಸಂಘಗಳವರು ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕೊಳೆಗೇರಿಗಳಲ್ಲಿ ಅನಾಥಾಶ್ರಮದಲ್ಲಿ ಅಂಬಿ ಹೆಸರಿನಲ್ಲಿ ಹಾಲು ಹಣ್ಣು ನೀಡಬಹುದಲ್ಲವೇ? ಹಾಡಿಗೆ ಎಸೆವ ಕಾಸನ್ನು ಬೀದಿ ಅಂಚಿನ ಬಡ ವಿದ್ಯಾರ್ಥಿಗಳಿಗೆ ನೀಡಬಹುದಲ್ಲವೆ?

ಅಕ್ಷರ ಜ್ಞಾನ ತುಂಬ ಮುಖ್ಯ ಎಂಬ ಅಂಶ ಸಾರುವ ‘ಮುತ್ತು’ ಚಿತ್ರದಲ್ಲಿ ರೌಡಿಗಳಿಂದ ಟ್ರಾಫಿಕ್ ಜಾಂ ಆದ ಪ್ರಸಂಗವೊಂದು ಬರುತ್ತದೆ. ಅಲ್ಲಿ ಒಂದು ಮಗು ಸಾವು ಬದುಕಿನೊಡನೆ ಹೋರಾಡತೊಡಗಿದಾಗ ತಾಯಿ ಕಣ್ಣೀರಿಡುತ್ತಾಳೆ. ಅಟೋದವ ಆಸ್ಪತ್ರೆಗೆ ಬೇಗ ಹೋಗಲು ಹೋರಾಟಕ್ಕಿಳಿಯುವ ಪ್ರಸಂಗವೂ ಬರುತ್ತದೆ. ಸೆಂಟಿಮೆಂಟಿಗೆ ಒತ್ತು ನೀಡುವ ಇಂಥ ದೃಶ್ಯಗಳನ್ನು ಚಿತ್ರದಲ್ಲಿ ತೋರಿ-ನಿಜ ಬದುಕಿನಲ್ಲಿ ಅಭಿಮಾನಿಗಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡದಿದ್ದಲ್ಲಿ ಪ್ರಯೋಜನವಾದರೂ ಏನು?

ಅಂಬಿ ದಾನ ಧರ್ಮಕ್ಕೆ ಎತ್ತಿದ ಕೈ ಎನ್ನವುದು ನಿಜ. ಆದರೆ, ಅವರೆಂದೂ ಎಲ್ಲೂ ‘ನನ್ನ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ-ಮೊಸರಿನ ಅಭಿಷೇಕ ಮಾಡಿ’ ಎಂದು ಹೇಳಿಲ್ಲ. ಟಿವಿ ಬಂದಿರುವ ಈ ದಿನಗಳಲ್ಲಿ ಇಂಥ ಕ್ಷೀರಾಭಿಷೇಕಗಳು ಮೀಡಿಯಾದಲ್ಲಿ ಬರಲಾರಂಭಿಸಿದರೆ ಅದು ತಪ್ಪಾಗುವುದಿಲ್ಲವೇ? ಅನಕ್ಷರಸ್ಥರೇ ತುಂಬಿ ತುಳುಕಿರುವ ಈ ನಾಡಿನಲ್ಲಿ ಶ್ರೀಸಾಮಾನ್ಯರ ಅರಿವಿನ ಮಟ್ಟ ಹೆಚ್ಚಿಸುವ ಹಾದಿಯಲ್ಲಿ ಮುನ್ನಡೆಯುವುದು ಲೇಸೇ ಹೊರತು ನಮ್ಮ ಫಾಯಿದೆಗೆ ಅವರ ಅಜ್ಞಾನ ಬಳಸಿಕೊಳ್ಳಬಾರದಲ್ಲವೆ? ಯೋಚಿಸಿ
*****
(೨೨-೦೨-೨೦೦೨)