ಮತದಾನ: ಒಂದು ವಿಶ್ಲೇಷಣೆ

ಯಾವ ಪಠ್ಯವೂ – ಅದು ಸಾಹಿತ್ಯ, ಸಿನೆಮಾ, ಪ್ರೌಢ ಪ್ರಬಂಧ ಅಥವಾ ಇನ್ನೇನೆ ಆಗಿರಲಿ – ತನ್ನ ಸಂದರ್ಭದಿಂದ (ಕಾಂಟೆಕ್ಸ್ಟ್) ಹೊರತಾಗಿರುವುದಿಲ್ಲ. ಅದು ತನ್ನ ಸಂದರ್ಭದ ಜೊತೆಗಿನ ಒಡನಾಟದಿಂದಲೇ, ಆ ಸಂದರ್ಭದಲ್ಲಿರುವ ಕಾರಣದಿಂದಲೇ ಅರ್ಥಗಳನ್ನು ಕಂಡುಕೊಳ್ಳುತ್ತದೆ. ಈ ಒಡನಾಟ ಇಮ್ಮುಖದ್ದು. ಪಠ್ಯವು ಸಂದರ್ಭದಿಂದ ಅರ್ಥಪೂರ್ಣವಾದಂತೆ ತಾನೂ ತನ್ನ ಸಂದರ್ಭಕ್ಕೆ ಅರ್ಥಗಳನ್ನು ಹುಟ್ಟುಹಾಕುತ್ತದೆ, ಆ ಸಂದರ್ಭದ ಅಜೆಂಡಾಗಳನ್ನು ನಿರ್ಧರಿಸಲು ಪ್ರಯತ್ನಿಸುತ್ತದೆ. ಹೀಗಾಗಿ ಯಾವುದೇ ಪಠ್ಯದ ವಿಶ್ಲೇಷಣೆ ಅದು ತನ್ನ ಸಂದರ್ಭದ ಜೊತೆ ಹೊಂದಿರುವ ಈ ಬಗೆಯ ಡೈನಮಿಕ್ ಆದಂತಹ ಸಂಬಂಧವನ್ನು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಇದು ಮತದಾನ ಚಲನಚಿತ್ರದ ಈ ನನ್ನ ವಿಮರ್ಶೆಯ ಸೈದ್ಧಾಂತಿಕ ಚೌಕಟ್ಟು. ಇದರಿಂದಾಗಿ ಸಿನೆಮಾದಲ್ಲಿ ಅಭಿನಯ ಚೆನ್ನಾಗಿತ್ತು, ಸಂಗೀತ ಕೆಟ್ಟದಾಗಿತ್ತು, ಛಾಯಾಗ್ರಹಣ ಅಷ್ಟಕ್ಕಷ್ಟೆ”ಈ ತರಹದ ವಿಮರ್ಶೆಗಿಂತ ಭಿನ್ನವಾದ ರೀತಿಯಲ್ಲಿ ಸಾಗಬಯಸುತ್ತದೆ.

ಕನ್ನಡ ಸಾಹಿತ್ಯದಲ್ಲಿ ಬ್ರಾಹ್ಮಣೇತರರ, ಅದರಲ್ಲೂ ದಲಿತ-ಬಹುಜನರ, ಹಾಗೂ ಮಹಿಳೆಯರ ಪ್ರವೇಶ ಹೆಚ್ಚಾಗುತ್ತಿದ್ದಂತೆಯೇ ಸಾಹಿತ್ಯವನ್ನು ನಿರ್ವಚಿಸುವ, ಅದನ್ನು ಅರ್ಥೈಸುವ ಪರಿಯಲ್ಲೂ ಅನೇಕ ಬದಲಾವಣೆಗಳಾದವು. ಯಾರು, ಎಲ್ಲಿಂದ, ಏತಕ್ಕಾಗಿ ಸಾಹಿತ್ಯ ನಿರ್ಮಾಣ ಮಾಡುತ್ತಾರೆ, ಆ ಸಾಹಿತ್ಯದ ಸಾಂದರ್ಭಿಕ ಒತ್ತಡಗಳೇನು, ಆ ಸಾಹಿತ್ಯ ಎಂತಹ ವಾಸ್ತವವನ್ನು ನಿರ್ಮಿಸುತ್ತದೆ
– ಸೈದ್ಧಾಂತಿಕ ನೆಲೆಯಿಂದಲ್ಲದಿದ್ದರೂ ಅನುಭವಾತ್ಮಕವಾಗಿಯಾದರೂ – ಈ ಬಗೆಯ ಪ್ರಶ್ನೆಗಳು ಆರಂಭಗೊಂಡಿತು. ಈ ದಿಸೆಯಲ್ಲಿಯೇ, ಬೈರಪ್ಪನವರು ಸತ್ತುಹೋಗುತ್ತಿರುವ ಬ್ರಾಹ್ಮಣಿಕೆಯ ಪುನರುತ್ಥಾನವನ್ನು ಅವರ ಕೃತಿಗಳಲ್ಲಿ ಮಾಡುತ್ತಾರೆಂದೂ, ಅವರ ಯಾವ – ಅದರಲ್ಲೂ ಹೆಣ್ಣು – ಪಾತ್ರವು ಬ್ರಾಹ್ಮಣ/ಹಿಂದೂ ಊಳಿಗಮಾನ್ಯ, ಪುರುಷಪ್ರಧಾನ ಚೌಕಟ್ಟನ್ನು ಪ್ರಶ್ನಿಸಿ ಹೊರನಡೆದಾಗ, ಸನ್ನಿವೇಶವನ್ನು, ಪಾತ್ರಗಳನ್ನು ದುರಂತದೆಡೆಗೆ ಸಾಗುವಂತೆ ಮಾಡುವ ಪ್ರತಿಗಾಮಿತನವನ್ನು ಭೈರಪ್ಪನವರು ತಮ್ಮ ಪಾತ್ರಗಳ ಮೂಲಕ ಪ್ರದರ್ಶಿಸುತ್ತಾರೆಂದೂ ಅನೇಕರು ಗುರುತಿಸಿದ್ದಾರೆ.

ಈ ಪ್ರತಿಗಾಮಿತನದ ದೋರಣೆಯ ಚೌಕಟ್ಟಿನಲ್ಲಿ ಉರುತಿಸಲ್ಪಟ್ಟಿದ್ದ ಭೈರಪ್ಪನವರ, ಅಷ್ಟೇನು ಜನಪ್ರಿಯವಲ್ಲದ ಮತದಾನ ಕಾದಂಬರಿಯನ್ನು ತಮ್ಮ ಮಾಯಾಮೃಗ ಧಾರಾವಾಹಿಯ ಅಪೂರ್ವ ಯಶಸ್ಸಿನ ಬೆನ್ನಲ್ಲೇ ಟಿ. ಎನ್. ಸೀತಾರಾಮ್ ರು ಚಿತ್ರೀಕರಿಸಹೊರಟಿದ್ದು ಸಾಕಷ್ಟು ಸುದ್ದಿಗೂ ವಿವಾದಗಳಿಗೂ ಸಿಲುಕಿತ್ತು. ೧೯೬೫ ರಲ್ಲಿ ಬರೆದ, ಇತ್ತೀಚಿನ ದಿನಗಳಲ್ಲಿ ಮಾತುಕತೆಯಲ್ಲಾಗಲೀ ವಿಮರ್ಶೆಗಳಲ್ಲಾಗಲೀ ಚಲಾವಣೆಯಲ್ಲಿಲ್ಲದ ಕೃತಿಯೊಂದನ್ನು ಇಂದಿನ ಸಂದರ್ಭದಲ್ಲಿ ಚಿತ್ರವಾಗಿಸಹೊರಡುವುದು ಅನೇಕ ಸೈದ್ಧಾಂತಿಕ ಹಾಗೂ ರಾಜಕೀಯ ಸ್ವರೂಪದ ಆದಂತಹ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ.

ಈಗ ಮೊದಲಿಗೆ ಚಿತ್ರದ ಕಥೆಯನ್ನು ಸಂಕ್ಷಿಪ್ತವಾಗಿ ಬಣ್ಣಿಸಿ ನಂತರ ಪ್ರಸ್ತುತ ಸಾಮಾಜಿಕ-ರಾಜಕೀಯ ಸಂದರ್ಭದಲ್ಲಿ ಈ ಚಿತ್ರ ನಮಗೇನು ಹೇಳಬಯಸುತ್ತಿದೆ, ಎಲ್ಲಿ ಯಾರ ಸ್ಥಾನದಲ್ಲಿ ನಿಂತು ತನ್ನ ಅಜೆಂಡಾವನ್ನು ನಮಗೆ ನೀಡುತ್ತಿದೆ ಎಂಬುದನ್ನು, ಮೂಲ ಕಾದಂಬರಿಯನ್ನು ಜೊತೆಗಿಟ್ಟುಕೊಂಡು ನೋಡೋಣ.

೧೯೬೦ರ ದಶಕದ ಕೊನೆಯ ವರ್ಷಗಳಿಂದ ಆರಂಭಿಸಿ ಸುಮಾರು ಐದು ವರ್ಷಗಳು ಈ ಚಿತ್ರದ ಕಾಲಸಂದರ್ಭ. ತೀರ್ಥಹಳ್ಳಿ ತಾಲ್ಲೂಕಿನ ರಾಜಕೀಯ ವಿದ್ಯಮಾನಗಳ ಬಣ್ಣನೆಯನ್ನು ಕೇಂದ್ರವಾಗಿರಿಸಿಕೊಂಡು ಆ ಪಗಡೆಯಾಟದಲ್ಲಿ ಹೇಗೆ ಮುಗ್ಧರು ದಾಳಗಳಾಗಿ ಬಳಸಲ್ಪಡುತ್ತಾರೆ ಎನ್ನುವುದನ್ನು ಚಿತ್ರಿಸುವುದು ಚಿತ್ರದ ಗುರಿ. ರಾಮಲಿಂಗೇಗೌಡ ಒಬ್ಬ ಪಿಡಬ್ಲ್ಯುಡಿ ಕಂಟ್ರಾಕ್ಟರ್. ಪ್ರಾಮಾಣಿಕನೆಂದು ಹೆಸರು ಪಡೆದ ಈತ ಸುತ್ತಲಿನ ೪೦ ಹಳ್ಳಿಗಳ ಜನರ ಮೇಲೆ ಯಾರೂ ಪ್ರಶ್ನಿಸಲೀಕ್ಕಾಗದಂತಹ ಪ್ರಭಾವವನ್ನು ಹೊಂದಿರುತ್ತಾನೆ. ಇದರಿಂದಾಗಿ ಆ ಭಾಗದ ಎಂಎಲ್‌ಎ, ಮಂತ್ರಿ ಪುಟ್ಟೇಗೌಡನಿಗೆ ಬಹಳ ಬೇಕಾದವನು. ೪೦ ಹಳ್ಳಿಗಳ ವೋಟು ಈ ಸೌಹಾರ್ದಯುತ ಸಂಬಂಧಕ್ಕೆ ರಾಮಲಿಂಗೇಗೌಡನ ಕಾಣಿಕೆಯಾದರೆ ಆ ಸುತ್ತಲಿನ ಕಂಟ್ರಾಕ್ಟ್ ಗಿರಿ ಉಟ್ಟೇಗೌಡನ ಕಾಣಿಕೆ. ಕಾಂತರಾಜ್ ರನ್ನು ಮುಖ್ಯಮಂತ್ರಿಯಾಗುಳ್ಳ ಪುಟ್ಟೇಗೌಡನಿರುವ ಮಂತ್ರಿಮಂಡಳ ಹಿಂದುಳಿದವರ ಪರ ಎಂದು ಅಪ/ಖ್ಯಾತಿ ಪಡೆದಿದೆ. ಪುಟ್ಟೇಗೌಡ ಒಬ್ಬ ಪ್ರಾಮಾಣಿಕ ಮಂತ್ರಿಯೆಂದು ಹೆಸರು ಮಾಡಿದ್ದಾನೆ. ರಾಮಲಿಂಗೇಗೌಡ-ಪುಟ್ಟೇಗೌಡರ ಈ ಅಭೇದ್ಯ ಮೈತ್ರಿಯನ್ನು ಮುರಿಯಲು ಅದೇ ಪ್ರಾಂತ್ಯದ ಒಬ್ಬ ಅಯಶಸ್ವೀ ರಾಜಕಾರಣಿ ಮಾರ್ಕಂಡೇಗೌಡ ಹಲವು ಕಾಲದಿಂದ ಪ್ರಯತ್ನಿಸುತ್ತಿದ್ದಾನೆ, ಫಲಕಾರಿಯಾಗಿ‌ಅಲ್ಲ. ಆದರ್ಶಗಳ ಬೆನ್ನು ಹತ್ತಿದ ಯುವ ಡಾಕ್ಟರ್ ಶಿವಪ್ಪ ಹಳ್ಳಿಯವರ ಸೇವೆ ಮಾಡಲೆಂದು ನಿಸ್ವಾರ್ಥನಾಗಿ ಕೆಲಸ ಮಾಡುತ್ತಿದ್ದಾನೆ; ಸುತ್ತಮುತ್ತಲಿನ ಹಳ್ಳಿಗಳಲ್ಲಿ ತುಂಬಾ ಹೆಸರುಗಳಿಸಿದ್ದಾನೆ. ಇದು ಮತದಾನ ನಡೆಯಲು ಸಿದ್ಧಗೊಂಡ ಭೂಮಿಕೆ.

ರಾಮಲಿಂಗೇಗೌಡನನ್ನು ತನ್ನೆಡೆಗೆ ಸೆಳೆಯಲು ಮಾರ್ಕಂಡೇಗೌಡ ಮೊದಲು ಹಣದಿಂದ ಪ್ರಯತ್ನಿಸಿ ಯಶಸ್ವಿಯಾಗದೆ ಮದುವೆ ರಾಜಕಾರಣದ ಮಾರ್ಗ ಹಿಡಿಯುತ್ತಾನೆ. ತನ್ನ ಮಗನನ್ನು ರಾಮಲಿಂಗೇಗೌಡರ ಮಗಳಿಗೆ ಕೊಟ್ಟು ಮದುವೆ ಮಾಡುವ ಪ್ರಸ್ತಾಪ ಇಟ್ಟಾಗ ಮಂತ್ರಿ ಪುಟ್ಟೇಗೌಡ ಇದರಿಂದ ತನ್ನ ಭವಿಷ್ಯಕ್ಕೆ ಕುತ್ತು ಬರುವುದನ್ನು ಕಂಡು ಮಾರ್ಕಂಡೇಗೌಡನ ಮಗನ ನಡತೆ ಸರಿಯಿಲ್ಲ ಎಂದು ಸಾಬೀತುಪಡಿಸುವ ಪೋಲಿಸ್ ವರದಿಯನ್ನು ತೋರಿಸುವ ಮೂಲಕ ಮದುವೆ ಪ್ರಸ್ತಾಪ ಮುರಿದುಬೀಳುವಂತೆ ಮಾಡುತ್ತಾನೆ. ಮುಂದಿನ ಚುನಾವಣೆಯ ವೇಳೆಗೆ ಅನೇಕ ರಾಜಕೀಯ ಒತ್ತಡಗಳಿಗೆ ಸಿಲುಕಿ ರಾಮಲಿಂಗೇಗೌಡ ಒಬ್ಬ ಲಂಚಕೋರ ಕಂಟ್ರಾಕ್ಟರನಾಗಿ ಮಾರ್ಪಟ್ಟಿರುತ್ತಾನೆ. ಆದರ್ಶವಾದಿ ಡಾಕ್ಟರನಿಗೂ ರಾಮಲಿಂಗೇಗೌಡನ ಮಗಳ ಮದುವೆ ಪ್ರಸ್ತಾಪ ಬಂದು ಎಲ್ಲರೂ ಒಪ್ಪಿದ ನಂತರ ಮಾರ್ಕಂಡೇಗೌಡನ ಕಿವಿಯೂದುವಿಕೆಯಿಂದಲೂ ಡಾಕ್ಟರು ತನ್ನ ಆದರ್ಶಗಳ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳಲು ರಾಜಿಯಾಗದಿದ್ದುದರಿಂದಲೂ ಆ ಪ್ರಸ್ತಾಪವೂ ಮುರಿದುಬೀಳುತ್ತದೆ. ಆಕೆಯನ್ನು ರಾಮಲಿಂಗೇಗೌಡರ ಮೊದಲ ಮಗಳ ಗಂಡನೇ ಒತ್ತಾಯದಿಂದ ಮದುವೆಯಾಗುತ್ತಾನೆ. ಈ ಎಲ್ಲದರ ಹಿನ್ನೆಲೆಯಲ್ಲಿ ಚಿತ್ರದ ಕ್ಲೈಮಾಕ್ಸ್ ನಡೆಯುತ್ತದೆ. ಚುನಾವಣೆಯ ಪ್ರಕ್ರಿಯೆ ಆರಂಭವಾಗಲು ಬಹಳ ದಿನ ಉಳಿದಿಲ್ಲ. ಡಾಕ್ಟರ್ ಬಳಿ ಸರ್ವೋದಯ ಚಳುವಳಿಗಾರ ರಾಮರಾಯ ಬಂದು ಪ್ರಾಮಾಣಿಕನಾದ ಆತ ಚುನಾವಣೆಗೆ ನಿಂತು ಲಂಚಕೋರ, ತತ್ವರಹಿತರಾದಂತಹ ಮಾರ್ಕಂಡೇಗೌಡ, ಪುಟ್ಟೇಗೌಡ/ರಾಮಲಿಂಗೇಗೌಡ ಇಬ್ಬರನ್ನೂ ಸೋಲಿಸಿ ಜನಪ್ರತಿನಿಧಿಯಾಗಿ ತನ್ಮೂಲಕ ಜನಸೇವೆ ಮುಂದುವರಿಸಬೇಕೆಂದು ಮನವೊಲಿಸುತ್ತಾನೆ. ಡಾಕ್ಟರ್ ಇದಕ್ಕೊಪ್ಪಿ ಮತಯಾಚನೆಗೆ ಹೊರಡುತ್ತಾನಾದರೂ ತಾನು ಷಡ್ಯಂತ್ರವೊಂದರಲ್ಲಿ ದಾಳವಾಗಿ ಬಳಸಲ್ಪಡುತ್ತಿರುವುದು ಅವನಿಗೆ ತಿಳಿಯುವುದಿಲ್ಲ. ತನ್ನನ್ನು ಅಭ್ಯರ್ಥಿಯಾಗಿಸಿದವರು ಮಾರ್ಕಂಡೇಗೌಡನ ಕಡೆಯವರೆಂದೂ ತನ್ನ ಪಾತ್ರ ಮಂತ್ರಿ ಪುಟ್ಟೇಗೌಡನ ವೋಟ್‌ಬ್ಯಾಂಕನ್ನು ಒಡೆಯುವುದಕ್ಕೆ ಸೀಮಿತವೆಂದೂ ತಿಳಿಯುವಷ್ಟರಲ್ಲಿ ಚುನಾವಣೆಯ ಸೋಲು-ಗೆಲುವು ನಿರ್ಧಾರವಾಗಿಬಿಟ್ಟಿದ್ದು ಪರೋಕ್ಷವಾಗಿ ತಾನೇ ಮಾರ್ಕಂಡೇಗೌಡನ ಗೆಲುವಿಗೆ ಕಾರಣನಾಗಿಬಿಟ್ಟಿರುತ್ತಾನೆ. ಅತ್ತ ಮಂತ್ರಿಯನ್ನು ಗೆಲ್ಲಿಸುವ ಆಟದಲ್ಲಿ ತಾನೂ ಒಂದು ದಾಳವಾಗಿ ರಾಮಲಿಂಗೇಗೌಡ ಸಾಲಗಳಲ್ಲಿ ಬಂಧಿಯಾಗಿ, ಸಾರ್ವಜನಿಕ ಹಣ ದುರ್ವಿನಿಯೋಗದ ಕೇಸುಗಳಲ್ಲಿ ಆರೋಪಿಯಾಗಿ ತನ್ನ ಯಾವ ಆಪ್ತರಿಂದಲೂ, ಅದರಲ್ಲೂ ಸೋತ ಮಂತ್ರಿ ಪುಟ್ಟೇಗೌಡನ ಕಡೆಯಿಂದಲೂ, ಸಹಾಯ ದೊರಕದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನ ಮಗಳು ಇಷ್ಟವಿಲ್ಲದ ಮದುವೆಯಿಂದ ಹೊರನಡೆದು ಡಾಕ್ಟರನನ್ನು ಮದುವೆಯಾಗಿ ರಾಜಕೀಯದಿಂದ ವಿಮುಖರಾಗಿ, ರಾಜಕೀಯರಹಿತವಾದಂತಹ ಸಮಾಜಸೇವೆಯೆಡೆಗೆ ನಡೆಯುವಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ.

ಈ ಚಿತ್ರವನ್ನು ವಿಶ್ಲೇಷಣೆಗೊಳಪಡಿಸುವುದು ನಮ್ಮ ಇಂದಿನ ಸಂದರ್ಭದಲ್ಲಿ ಬಹು ಜರೂರಿನ ವಿಷಯ. ಬುದ್ಧಿಜೀವಿಗಳು ಹಲವು ಕಾರಣಗಳಿಗಾಗಿ ಈ ಚಿತ್ರವನ್ನು ಮೆಚ್ಚಿಕೊಂಡು, ಕನ್ನಡದ ಸದಭಿರುಚಿಯಚಿತ್ರಗಳ ಆಶಾಕಿರಣ ಇದಾಗಿದೆ ಎಂದಿದ್ದಾರೆ. ಬಹು ಮುಖ್ಯವಾಗಿ ಕೇಳಿ ಬಂದ ಮಾತೆಂದರೆ, ಈ ಚಿತ್ರವು ತೀರಾ ಪ್ರಜ್ಞಾಪೂರ್ವಕವಾಗಿಯೇ ನಮ್ಮಲ್ಲಿ ಕಳೆದೆರಡು ದಶಕಗಳಲ್ಲಿ ಅಸಂಖ್ಯವಾಗಿ ಬಂದಂತಹ ಚಿತ್ರಗಳಿಗಿಂತ ಬಿನ್ನದೆಸೆಯಲ್ಲಿ ಸಾಗುವ ಪ್ರಯತ್ನ ಮಾಡುತ್ತದೆ ಎಂಬುದು. ರಾಜಕಾರಣಿಗಳನ್ನು, ಆ ಮೂಲಕ ರಾಜಕಾರಣವನ್ನು, ಜೋಕರ್ ಗಳೆಂದೊ, ಪಶುಗಳೆಂದೊ, ಅಮಾನುಷರೆಂದೊ ತೋರಿಸುವ ಸೂತ್ರಬದ್ಧ ಚಿತ್ರಗಳು ನಮ್ಮಲ್ಲಿ ಸಾಕಷ್ಟು ಬಂದು ಹೋಗಿವೆ. ಅಂತಹ ಸಿದ್ಧಮಾದರಿಗಳಿಗೆ ಜೋತು ಬೀಳದೆ ವ್ಯವಸ್ಥೆಯ ಅನೇಕ ಮಜಲುಗಳನ್ನು ಅರ್ಥೈಸುವ, ವ್ಯಕ್ತಿಗಳ ಸಾರ್ವಜನಿಕ-ವೈಯಕ್ತಿಕ ಜೀವನಗಳು ಒಂದರಲ್ಲೊಂದು ಹೇಗೆ ಬೆರೆತುಹೋಗಿವೆ ಎಂಬುದನ್ನು ಅತ್ಯಂತ ಸಮರ್ಥವಾಗಿ ಈ ಚಿತ್ರ ಹೇಳುತ್ತದೆ ಎಂಬುದು ಅನೇಕರ ಅಭಿಪ್ರಾಯ. ಇದರೊಡನೆ ಶಕ್ತಿಯುತ ನಟನೆ, ಬಿಗಿಯಾದ ನಿರೂಪಣೆ, ಮಾಧ್ಯಮದ ಮೇಲಿನ ಹಿಡಿತ – ಇವೆಲ್ಲವೂ ಪ್ರೇಕ್ಷಕರೊಡನೆ ಒಂದು ದಟ್ಟವಾದ ಸಂಬಂಧವನ್ನು ಬೆಳೆಸುತ್ತದೆ. ಆದರೆ ಈ ಸದಭಿರುಚಿ, ಕಲಾತ್ಮಕತೆ, ಮನೆಯ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ ಮೊದಲಾದಂತಹ ಭಾಷೆಯ ಹಿಂದಿನ ರಾಜಕೀಯ ಏನು ಎಂಬುದನ್ನು ಗಮನಿಸಿದಲ್ಲಿ ಹೆಚ್ಚಾಗಿ ಅದು ಒಂದು ಮೇಲ್ಜಾತಿಯ, ಮಧ್ಯಮ ವರ್ಗದ ಗುಣಾತಿಶಯಗಳನ್ನು ವಿವರಿಸುವ, ವ್ಯಾಖ್ಯಾನ ಆಗಿರುತ್ತದಷ್ಟೆ. ಉದಾಹರಣೆಗೆ ಹೆಣ್ಣು-ಗಂಡುಗಳ ನಡುವಿನ ಅಸಮಾನತೆಯನ್ನು ಪ್ರಶ್ನಿಸದೆ, ಅಂತಹ ತಾರತಮ್ಯವನ್ನು ಸನಾತನ ಕುಟುಂಬದ ಶ್ರೇಷ್ಠತೆಯ ಮಾಪನವನ್ನಾಗಿ ಬಳಸಿಕೊಳ್ಳುವುದು, ಹಿಂದೂ ಕೋಮುವಾದವನ್ನು, ಊಳಿಗಮಾನ್ಯ ಸಂಸ್ಕೃತಿಯನ್ನು, ಮೇಲ್ಜಾತಿ ಸಮುದಾಯಗಳ ಅಜೆಂಡಾಗಳನ್ನು ನಮ್ಮ ನಾಡಿನ, ದೇಶದ ಅಮೂಲ್ಯ ಸಂಸ್ಕೃತಿಯೆಂದೊ, ದೇಶದ ಸ್ಥಿತಿಯ ಬಗ್ಗೆ ಚಿಂತನೆಯೆಂದೊ ಬಣ್ಣಿಸುವುದು, ಇತ್ಯಾದಿ. ಇಂತಹ ಒಂದು ಅಜೆಂಡಾವನ್ನು ಮತದಾನ ಕೂಡ ಇರಿಸಿಕೊಂಡಿದೆ. ಮತದಾನವು ಹಳಸಲು ಸೂತ್ರಗಳನ್ನು ಬಿಟ್ಟು ವಾಸ್ತವವನ್ನು ನಮ್ಮ ಮುಂದಿರಿಸುತ್ತಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಆ ಜಾಣ್ಮೆ ಒಂದು ನೂತನ ಪ್ರತಿಗಾಮಿತನವನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂಬುದೇ ಪ್ರಸ್ತುತ ವಿಶ್ಲೇಷಣೆಯ ಜರೂರತ್ತಾಗಿ ಕೆಲಸ ಮಾಡುತ್ತಿದೆ. ಅದು ಹೇಗೆ ಎಂದು ಹೇಳುವುದರ ಮುನ್ನ ನಮ್ಮ ಇಂದಿನ ಸಾಮಾಜಿಕ-ರಾಜಕೀಯ ಸಂದರ್ಭ ಏನು ಎಂಬುದನ್ನು ನೋಡೋಣ.

ಮಂಡಲ್ ವರದಿ ವಿರೊಧೀ ಚಳುವಳಿ, ರಾಮಜನ್ಮಭೂಮಿ ಅಭಿಯಾನ ಹಾಗೂ ಜಾಗತೀಕರಣದ ಪ್ರಕ್ರಿಯೆಗಳು ನಮ್ಮ ಇಂದಿನ ಸಾಮಾಜಿಕ-ರಾಜಕೀಯ-ಆರ್ಥಿಕ ಬದುಕನ್ನು ರೂಪಿಸುತ್ತಿವೆ. ಪ್ರಜಾತಾಂತ್ರಿಕತೆ ಮತ್ತು ಆ ಮೌಲ್ಯಗಳ ಸುತ್ತ ಬೆಳೆದ ಸಂಸ್ಥೆಗಳು ವಸಾಹತುಶಾಹಿಯ ಬೆನ್ನಲ್ಲೇ ಬಂದರೂ ನಮ್ಮ ಸಮಾಜದ ದಲಿತ ಹಾಗೂ ಇತರ ಹಿಂದುಳಿದ ಜಾತಿಗಳ, ಮತ್ತು ಮಹಿಳೆಯರ ಬದುಕಿನಲ್ಲಿ ಸಮಾನತೆಯ ಆಶಯವನ್ನು ಬಿತ್ತಿ ಅವರ ಬದುಕಿಗೆ ಕ್ರಾಂತಿಕಾರೀ ತಿರುವನ್ನು ತಂದುಕೊಟ್ಟಿತು. ಪ್ರಜಾತಾಂತ್ರಿಕ ವ್ಯವಸ್ಥೆಯು ಬಹುಮಟ್ಟಿಗೆ ಸಂಖ್ಯೆಯನ್ನು ಆಧರಿಸಿರುವುದರಿಂದ ಈ ಬಹುಸಂಖ್ಯಾತ ಸಮುದಾಯಗಳು ಸಂಘಟಿತರಾಗಿ ತಮ್ಮ ಅಕ್ಕುಗಳಿಗಾಗಿ ಹೋರಾಡಲಾರಂಭಿಸಿದರು. ಈ ಸುಮಾರು ೧೦೦ ವರ್ಷಗಳ ನಿರಂತರ ಹೋರಾಟ ಫಲ ನೀಡಲಾರಂಭಿಸಿದೆ ಎಂಬುದು, ಒಂದು ಉದಾಹರಣೆಗಾಗಿ, ನಮ್ಮ ಪ್ರಸ್ತುತ ರಾಜಕೀಯವನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ದಲಿತ ಸಮುದಾಯಗಳು ಇಂದಿನ ರಾಜಕಾರಣದಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಹೊರ ಬರುತ್ತಿದ್ದಾರೆ ಎಂಬುದು ವಿವಿಧ ರಾಜಕೀಯ ಪಕ್ಷಗಳ ಸಂರಚನಾಂಶಗಳನ್ನು ಅನ್ನು ಗಮನಿಸಿದಲ್ಲಿ ಸ್ಪಷ್ಟವಾಗುತ್ತದೆ.

ಆದರೆ ೯೦ರ ದಶಕದ ಮೂರು ಮೂಲಭೂತ ಪ್ರಕ್ರಿಯೆಗಳಾದ ಮಂಡಲ್ ವರದಿ ವಿರೊಧಿ ಚಳುವಳಿ, ರಾಮಜನ್ಮಭೂಮಿ ಅಭಿಯಾನ ಹಾಗೂ ಜಾಗತೀಕರಣಗಳು ಈ ಮುನ್ನಡೆಯನ್ನು ಹತ್ತಿಕ್ಕುವ ಪ್ರೇರಣೆಯುಳ್ಳದ್ದಾಗಿವೆ. ಈ ಪ್ರಕ್ರಿಯೆಗಳು ಮೇಲ್ಜಾತಿ, ವರ್ಗಗಳ ಅಜೆಂಡಾಗಳನ್ನು ಸಾಕಾರಗೊಳಿಸುವಂತಹ ಯೋಜನೆಯ ಮೂಲಭೂತ ಪಾಲುದಾರರು. ಈ ಪ್ರಕ್ರಿಯೆಗಳು ಸಾಧ್ಯವಾಗಿಸಿದ ಪ್ರತಿಭೆ, ದಕ್ಷತೆ, ಹಿಂದೂತ್ವ – ಈ ರೀತಿಯ ಹಲವಾರು ಅಸ್ತಗಳನ್ನು ತಮ್ಮ ಬತ್ತಳಿಕೆಯಲ್ಲಿರಿಸಿಕೊಂಡು ಮೇಲ್ಜಾತಿ, ವರ್ಗಗಳು ದಲಿತ, ಬಹುಜನ, ಅಲ್ಪಸಂಖ್ಯಾತರ ಮೇಲೆ ಹಿಂದೆ ಕಂಡಿರದ ಹುರುಪಿನೊಂದಿಗೆ ಸಮರ ಸಾರಿವೆ. ಸಮಾನತೆಯ ತತ್ವದ ಆಧಾರದ ಮೇಲೆ ತನ್ನ ನೈತಿಕತೆಯನ್ನು ಸಮರ್ಥಿಸಿಕೊಳ್ಳುವ ಪ್ರಜಾತಾಂತ್ರಿಕ ವ್ಯವಸ್ಥೆಯ ಬಗ್ಗೆ ಅಪಾರ ತಿರಸ್ಕಾರ ಹಾಗೂ ಕೋಪವನ್ನು ಹೊಂದಿರುವ ಈ ಪ್ರಕ್ರಿಯೆಗಳು ಹಿಂದುಳಿದ ಸಮುದಾಯಗಳ ಎಲ್ಲ ಸಣ್ಣ ಪುಟ್ಟ ಗೆಲುವುಗಳನ್ನು, ಆತ್ಮವಿಶ್ವಾಸವನ್ನು ಬೇರುಸಹಿತ ಕಿತ್ತೊಗೆಯುವ ಕೆಲಸವನ್ನು ಕಳೆದ ದಶಕದಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿ ಮಾಡಿವೆ. ಇದು ನಮ್ಮ ಪ್ರಸ್ತುತವನ್ನು ಸ್ಥೂಲವಾಗಿ ವಿವರಿಸಬಹುದಾದ ಪರಿ.

ಮತದಾನ ಚಲನಚಿತ್ರ ಈ ಮೇಲಿನ ಅಜೆಂಡಾವನ್ನು ಪ್ರಶ್ನಿಸುವುದಂತಿರಲಿ, ಬದಲಾಗಿ ತಾನೂ ಅದನ್ನೇ ಹೆಚ್ಚು ಜಾಣ್ಮೆಯಿಂದ, ಸದಭಿರುಚಿಯ ಸೂತ್ರಗಳಿಗೆ ತಕ್ಕ ರೀತಿಯಲ್ಲಿ ಮಾಡುತ್ತದೆ. ರಾಜಕಾರಣದ, ಆ ಮೂಲಕ, ಪ್ರಜಾತಾಂತ್ರಿಕ ವ್ಯವಸ್ಥೆಯ ಬಗೆಗೆ ತೋರುವ ಸಿನಿಕತನ ಹಾಗೂ ತಿರಸ್ಕಾರ ಈ ಚಿತ್ರದ ಜೀವಾಳ. ಈ ತಿರಸ್ಕಾರ ನಮ್ಮ ಪ್ರಸ್ತುತ ಸಂದರ್ಭದಲ್ಲಿ ಕೇವಲ ಮೇಲ್ಜಾತಿ, ವರ್ಗಗಳ ಅಭಿಪ್ರಾಯವನ್ನು ಬಿಂಬಿಸುತ್ತಿದ್ದರೂ, ಸೀತಾರಾಮ್ ರ ಹೆಸರಿನ ಸುತ್ತ ಬೆಳೆದಿರುವ ಅಭಿಪ್ರಾಯಗಳು (ಲೋಹಿಯಾವಾದಿಯೆಂದೊ, ಎಡಪಂಥೀಯ ಚಿಂತಕನೆಂದೊ, ಬುದ್ಧಿವಂತ ನಿರ್ದೇಶಕನೆಂದೊ, ಸೆನ್ಸಿಟಿವ್ ಎಂದೋ )ಸದಭಿರುಚಿ ಚಿತ್ರಗಳು ಹೆಚ್ಚು ಯೋಚನಾಪರವೆಂಬ ಸುಳ್ಳು, ಭ್ರಮೆಗಳು – ಇತ್ಯಾದಿಗಳು ನಮ್ಮನ್ನು ಆ ತಿರಸ್ಕಾರ ಹಾಗೂ ಸಿನಿಕತನಗಳೇ ನಮ್ಮೆಲ್ಲರ – ಅಂದರೆ ವಿದ್ಯಾವಂತ, ಮಧ್ಯಮವರ್ಗೀಯ, ಜಾಗೃತ ನಾಗರೀಕರ – ಪ್ರತಿಕ್ರಿಯೆ ಆಗಿರಬೇಕೇನೊ ಎಂಬ ಭ್ರಮೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತದೆ. ಒಂದು ಐಡಿಯಾಲಜಿ ಯಶಸ್ವಿ ಎಂಬುದು ಅದು ತನ್ನ ನಿರ್ದಿಷ್ಟ ಜಾತಿ-ವರ್ಗ-ಲಿಂಗ ಲಕ್ಷಣಗಳನ್ನು ಎಷ್ಟು ಚೆನ್ನಾಗಿ ಮರೆ ಮಾಡಿ ತಾನು ಎಲ್ಲರ ಒಳಿತಿಗಾಗಿ, ಎಲ್ಲರ ನ್ಯಾಯಯುತ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಈ ಕೆಲಸವನ್ನು ಮತದಾನ ಯಶಸ್ವಿಯಾಗಿ ಮಾಡುತ್ತದೆ.

ಈಗ ಮತದಾನ ಕಾದಂಬರಿಯನ್ನು ಜೊತೆಗಿರಿಸಿಕೊಂಡು ಈ ಚಿತ್ರವನ್ನು ಗಮನಿಸೋಣ. ಈ ಕಾದಂಬರಿ ೧೯೬೫ರಲ್ಲಿ ಬರೆಯಲ್ಪಟ್ಟಿದ್ದು ತುಮಕೂರಿನ ಸುತ್ತಮುತ್ತ ನಡೆಯುವಂಥದ್ದು. ಆದಂಬರಿಯಲ್ಲಿನ ಮಂತ್ರಿ ಪ್ರಾಮಾಣಿಕನೆಂದೂ ಹೆಸರು ಮಾಡಿಲ್ಲ, ಅವನ ಸರ್ಕಾರ ಹಿಂದುಳಿದವರ ಪರ ಯೋಜನೆಗಳನ್ನು ಜಾರಿಗೂ ತಂದಿಲ್ಲ. ಕಾದಂಬರಿಯಲ್ಲಿ ಮುಖ್ಯಮಂತ್ರಿ ಬರುವುದೇ ಇಲ್ಲ. ಆದರೆ ಚಿತ್ರದ ಕಾಲಘಟ್ಟ ೬೦ರ ದಶಕದ ಕೊನೆಯ ವರ್ಷಗಳಿಂದ ಸುಮಾರು ಐದು ವರ್ಷಗಳು. ಇಲ್ಲಿನ ಮಂತ್ರಿ ಪ್ರಾಮಾಣಿಕ. ಆತನ ಸರ್ಕಾರ ಹಿಂದುಳಿದವರ ಪರ ಅನೇಕ ಕಾಯಿದೆಗಳನ್ನು ಜಾರಿಗೆ ತಂದಿದೆ. ಮತ್ತು ಇಲ್ಲಿ ಮುಖ್ಯಮಂತ್ರಿಯ ಪ್ರವೇಶ ಇದೆ – ಆತನ ಹೆಸರು ಕಾಂತರಾಜ್. ಇದನ್ನೆಲ್ಲಾ ಹೇಳುವ, ಪಟ್ಟಿ ಮಾಡುವ ಕಾರಣ ಸಿನಿಮಾ ಕಾದಂಬರಿಗೆ ಇಷ್ಠವಾಗಿರಬೇಕೆಂದಾಗಲೀ ಅನುವಾದ ಮೂಲಕ್ಕೆ ಧಕ್ಕೆ ತರಬಾರದೆಂದಾಗಲೀ ಕ್ಯಾತೆ ತೆಗೆಯುವುದಕ್ಕಲ್ಲ. ಬದಲಾಗಿ ತೋರಿಕೆಗೆ ಅಮುಖ್ಯವೆನಿಸಬಹುದಾದ ಇಂತಹ ಸಣ್ಣ ಬದಲಾವಣೆಗಳು ಈ ಸಿನಿಮಾದ ವಸ್ತುವಿನ ಮೇಲೆ, ಅದು ಏನು ಹೇಳಹೊರಟಿದೆ ಎಂಬುದರ ಮೇಲೆ ಯಾವ ಅರ್ಥಗಳನ್ನು,ಒತ್ತಾಯಗಳನ್ನು ಹೇರುತ್ತವೆ ಎಂಬುದನ್ನು ವಿಶ್ಲೇಷಿಸಲು. ಸಿನಿಮಾ ಹಾಕಿಕೊಂಡಿರುವ ಈ ಕಾಲಚೌಕಟ್ಟು ಕರ್ನಾಟಕ ಕಂಡ ಅತ್ಯಂತ ಕ್ರಾಂತಿಕಾರೀ, ಪ್ರಗತಿಪರ ಕಾಲಾವಧಿ. ಲೋಹಿಯಾವಾದದಿಂದ ಪ್ರೇರಿತರಾದ ಗೋಪಾಲಗೌಡ ನೇತೃತ್ವದ ಚಳುವಳಿಯ ಪ್ರಗತಿಪರ ಆಶಯಗಳ ಬೆನ್ನಲ್ಲೇ ಬಂದ ದೇವರಾಜ ಅರಸರ ಸರ್ಕಾರ ತಂದಂತಹ ಅನೇಕ ಕಾಯಿದೆಗಳು – ಉದಾಹರಣೆಗೆ, ಉಳುವವನಿಗೇ ಭೂಮಿ, ಜೀತನಿರ್ಮೂಲನ ಕಾಯಿದೆ ಇತ್ಯಾದಿ – ಹಿಂದುಳಿದ ಸಮುದಾಯಗಳ ಜನತೆಯ ಬದುಕಿನಲ್ಲಿ ಅತ್ಯಂತ ಪರಿಣಾಮಕಾರಿ ಬದಲಾವಣೆಗಳನ್ನು ತಂದವು. ಸ್ವಾತಂತ್ರ್ಯಾನಂತರದ ಕರ್ನಾಟಕದ ಇತಿಹಾಸದಲ್ಲಿ ವ್ಯವಸ್ಥೆಯನ್ನು ಹಿಂದುಳಿದ ವರ್ಗಗಳ ಎಡೆಗೆ ತಿರುಗಿಸಯತ್ನಿಸಿದ ಬಹು ಪ್ರಮುಖ ಘಟ್ಟ ಅದಾಗಿತ್ತು. ಹಾಗೂ ಇದೇ ಘಟ್ಟದಲ್ಲಿಯೇ ಮೊದಲ ಬಾರಿಗೆ ದಲಿತ ಸಮುದಾಯಗಳು ಸಾರ್ವಜನಿಕ ರಂಗದಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಮೂಡಿಬಂದರು. ಸಿನಿಮಾದ ಕಾಂತರಾಜ್ ದೇವರಾಜ ಅರಸ್ ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಸೀತಾರಾಮ್ ಕಾದಂಬರಿಯ ಕಾಲವನ್ನು ಬದಲಿಸಿ ಅರಸರ ಕಾಲವನ್ನು ಆರಿಸಿದ ಆಯ್ಕೆ ಈ ಚಿತ್ರದ ಹಿಂದೆ ಕೆಲಸ ಮಾಡುತ್ತಿರುವ ಐಡಿಯಾಲಜಿ ಎಂತಹುದ್ದು ಎಂಬುದರ ಸ್ಪಷ್ಟ ಚಿತ್ರಣ ನೀಡುತ್ತದೆ. ನಮ್ಮ ಇಂದಿನ ರಾಜಕಾರಣದ ಬಗ್ಗೆ ಬರೀ ಒಂದು ‘ಹೇಳಿಕೆ’ ನೀಡುವುದು ಚಿತ್ರದ ಉದ್ದೇಶವಾಗಿದ್ದಲ್ಲಿ ಬೇರೆ ಯಾವುದೇ ಕಾಲವನ್ನು ಇರಿಸಿಕೊಳ್ಳಬಹುದಾಗಿತ್ತು ಅಥವಾ ಕಾದಂಬರಿಯ ಕಾಲಘಟ್ಟವನ್ನೇ ಇರಿಸಿಕೊಳ್ಳಬಹುದಾಗಿತ್ತು. ಅದೂ ಸಾಲದಿದ್ದಲ್ಲಿ ಯಾವುದೇ ನಿರ್ದಿಷ್ಟ ಕಾಲದಲ್ಲಿ ಚಿತ್ರವನ್ನು ಪ್ಲೇಸ್ ಮಾಡಬೇಕಾಗಿಯೇ ಇರಲಿಲ್ಲ. ರಾಜಕಾರಣದ ಬಗ್ಗೆ ಬರುತ್ತಿರುವ ಅಸಂಖ್ಯಾತ ಚಿತ್ರಗಳು ತಮ್ಮನ್ನು ತಾವು ಒಂದು ನಿರ್ದಿಷ್ಟ ಚಾರಿತ್ರಿಕ ಘಟ್ಟದಲ್ಲಿ ಇರಿಸಿಕೊಂಡು ಸಂವಹಿಸುವುದಿಲ್ಲ; ಅವು ಹೆಚ್ಚೆಂದರೆ ಎಲ್ಲಾ ಕಾಲದಲ್ಲೂ ದೇಶದಲ್ಲೂ ರಾಜಕೀಯವೆಂದರೆ ಹೊಲಸೇ ಎಂಬಂತಹ ಮಾದರಿಯನ್ನಿರಿಸಿಕೊಂಡಿರುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಮತದಾನ ಚಲನಚಿತ್ರ ಹೆಚ್ಚು ಅಪಾಯಕಾರಿ ಎನಿಸುತ್ತದೆ. ಇತ್ತೀಚಿನ ಕರ್ನಾಟಕ ಇತಿಹಾಸದ ಪ್ರಾಥಮಿಕ ಪರಿಚಯ ಇರುವ ಯಾರೂ ಕಾದಂಬರಿಯಿಂದ ಮತದಾನವನ್ನು ಸಿನಿಮಾ ಮಾಡುವಲ್ಲಿ ಸೀತಾರಾಮ್ ತೋರುವ ಕೈಚಳಕದ ಹಿಂದಿನ ತಾತ್ವಿಕ ನೆಲೆಗಟ್ಟನ್ನು ಅರಿಯದೇ ಇರಲಾರರು. ಈ ಬದಲಾವಣೆಗಳು ಅತೀ ಸೂಕ್ಷ್ಮ. ಆದರೆ ಹಿಂದುಳಿದ ವರ್ಗಗಳ ‘ಪಾಲಿಟಿಕ್ಸ್’ ಅನ್ನು ಹೀಗಳೆಯುವಲ್ಲಿ ಅತ್ಯಂತ ಪರಿಣಾಮಕಾರಿ. ಏಕೆಂದರೆ ನಮ್ಮ ರಾಜಕೀಯ ವ್ಯವಸ್ಥೆ ಹಾಳು ಆಗಲು ಆರಂಭಿಸಿದ್ದೇ ಆ ಘಟ್ಟದಿಂದ ಎಂಬಂತಹ ಕಾಮನ್ ಸೆನ್ಸನ್ನು ಅದು ನೀಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಮತದಾನ ‘ನಿರ್ದಿಷ್ಟ’ವಾಗಿ ಹಿಂದುಳಿದ ವರ್ಗಗಳ ರಾಜಕೀಯದ ಬಗ್ಗೆ ಒಂದು ‘ಹೇಳಿಕೆಯಾಗಿ’ ನಮ್ಮ ತಲೆಯಲ್ಲಿ ಉಳಿಯುತ್ತದೆಯೇ ಹೊರತು ಉಳಿದ ಚಿತ್ರಗಳಂತೆ ಒಟ್ಟಾರೆಯ ಒಂದು ಹೇಳಿಕೆಯಾಗಿ ಅಲ್ಲ ಎಂಬುದು ಸೀತಾರಾಮ್ ಯಾರ ಅಜೆಂಡಾ ಕಾರ್ಯಸಾಧನೆಗೆ ಹೊರಟಿದ್ದಾರೆ ಎಂಬುದನ್ನು ಬಯಲು ಮಾಡಿಬಿಡುತ್ತದೆ. ಈವತ್ತಿಗೂ ಬಹುತೇಕ ಬ್ರಾಹ್ಮಣ ಕುಟುಂಬಗಳಲ್ಲಿ ಅರಸುರವರ ಬಗ್ಗೆ, ಅವರ ಸರ್ಕಾರದ ಯೋಜನೆಗಳ ಬಗ್ಗೆ ಕ್ರೋಧವಿರುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ.

ಕೊನೆಯದಾಗಿ ಕೆಲವು ಟಿಪ್ಪಣಿಗಳು:
೧) ಚಿತ್ರ ರಾಜಕೀಯಕ್ಕೆ, ಪ್ರಜಾತಾಂತ್ರಿಕ ವ್ಯವಸ್ಥೆಗೆ ಪರ್ಯಾಯವೆಂದು ಬಣ್ಣಿಸುವುದು ಡಾಕ್ಟರ್ ಶಿವಪ್ಪನ
ಜನ/ಸಮಾಜಸೇವೆ; ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಎನ್‌ಜಿ‌ಒ ಚೌಕಟ್ಟು. ಈ ಸಿವಿಲ್ ಸೊಸೈಟಿಯ ಚೌಕಟ್ಟು ಯಾವ ನಿಯಮ, ನಿಬಂಧನೆಗಳಿಗೂ ಒಳಪಟ್ಟಿದ್ದಲ್ಲ. ಅದಕ್ಕೆ ಆಧುನಿಕ ಸಮಾಜಕ್ಕಿರುವಂತಹ ಸಮಾನತೆಯ ತತ್ವದ ಹಂಗೂ ಇಲ್ಲ. ಜಾಗತೀಕರಣದ ನಮ್ಮ ಇಂದಿನ ಸಂದರ್ಭದಲ್ಲಿ ಇಂತಹ ಯಾವುದೇ ಆಧುನಿಕತಾವಿರೋಧಿವಾದ ದಲಿತ, ಹಿಂದುಳಿದ ವರ್ಗಗಳ ವಿರೋಧಿಯೂ ತಾನೆ ತಾನಾಗಿ ಮಾರ್ಪಟ್ಟುಬಿಟ್ಟಿರುತ್ತದೆ. ಏಕೆಂದರೆ ಕಾನೂನು ಪರಿಧಿಯ ಚೌಕಟ್ಟನ್ನು ಮೀರಿದಾಗ ಉಳಿಯುವುದು – ಊಳಿಗಮಾನ್ಯ ವಿಚಾರಧಾರೆ ಹಾಗೂ ಜಾಗತಿಕ ಬಂಡವಾಳಶಾಹಿಗಳ ಒಂದು ವಿಚಿತ್ರ ಆದರೆ ಪ್ರಾಣಾಂತಕ ಕಾಕ್‌ಟೈಲ್ (ಮಿಶ್ರಣ).

೨) ಚಿತ್ರದಲ್ಲಿ ಬರುವ ದಲಿತದಂಪತಿಗಳು ಪ್ರಾಸಂಗಿಕವೆಂದು ಕಂಡರೂ ಅವರ ಮೂಲಕ ಸೀತಾರಾಮ್ ಮತ್ತೊಂದು ಮೂಲಭೂತ ಸಂದೇಶವನ್ನು ನೀಡಲೆತ್ನಿಸಿದ್ದಾರೆ. ಅದೆಂದರೆ, ರಾಜಕಾರಣವು ದಲಿತವಿರೋಧಿ ಎಂದು. ಈ ಭೂಮಿಕೆ ಈ ಚಿತ್ರದಲ್ಲಿ ಸೀತಾರಾಮ್ ಗೆ ರಾಜಕಾರಣವನ್ನು ಡಿಲೆಜಿಟಿಮೈಸ್ ಮಾಡಲು ಒಂದು ಮಾರಲ್ ಜಸ್ಟಿಫಿಕೇಶನ್ ಆಗಿ ಕೆಲಸ ಮಾಡುತ್ತದೆ. ಆದರೆ ದೆಹಲಿಯ ಸಂಶೋಧನಾ ಸಂಸ್ಥೆಯೊಂದು ಕೈಗೊಂಡ ಚುನಾವಣಾ ಪ್ರಕ್ರಿಯೆಯ ಬಗೆಗಿನ ವಿಶ್ಲೇಷಣೆಯ ಪ್ರಕಾರ ಕಳೆದೆರಡು ಮೂರು ದಶಕಗಳಿಂದ ಈ ಸಮುದಾಯಗಳೇ ರಾಜಕೀಯದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ. ಇದು ಸೀತಾರಾಮ್ ರ ಸಮರ್ಥನೆಯನ್ನು ಅಶಕ್ತಗೊಳಿಸುತ್ತದೆ.

೩) ಕೊನೆಯದಾಗಿ, ಚಿತ್ರದಲ್ಲಿ ರಾಜಕೀಯವನ್ನು ಯಾರ ಎಣಿಕೆಗೂ ನಿಲುಕದ ಯಾರೂ ಬದಲಾಯಿಸಲೀಕ್ಕಾಗದಂತಹ ಯಾರೇ ಬಂದರೂ ಅದರ ತರ್ಕಕ್ಕೇ ಶರಣಾಗಿಸುವಂತಹ ಬಲವುಳ್ಳಂಥ ಒಂದು ವ್ಯವಸ್ಥೆಯನ್ನಾಗಿ ಬಣ್ಣಿಸಿರುವುದು. ಇಲ್ಲಿ ಎಲ್ಲರೂ ಅದರ ಅಂಕೆಯಲ್ಲಿಯೇ ಇರುವಂಥ ಕೀಲು ಗೊಂಬೆಗಳಷ್ಟೆ. ಇದು ಸನಾತನ ಸಂಸ್ಕೃತಿಯ ಕರ್ಮಸಿದ್ಧಾಂತ ಪ್ರತಿಪಾದಿಸುವಂಥ ವಿಧಿಲಿಖಿತದ ಆಧುನಿಕ ಪ್ಯಾರಲಲ್ ಇರಬಹುದೇನೋ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.