ಮೌನಭಾರ

ತುದಿಬೆರಳಲೆನ್ನ ಗಲ್ಲವ ಪಿಡಿದು ಮುದ್ದಿನಲಿ
‘ಮುದ್ದು, ಚಿನ್ನಾ’ ಎಂದು ಕರೆಯುವವರು,
ಕುರುಳ ತಿದ್ದುತ ಹೆರಳಮಾಲೆಯನ್ನು ನೇರ್‍ಪಡಿಸಿ
‘ಮಲ್ಲಿಗೆಯೆ ಮಾತಾಡು’ ಎನ್ನುವವರು.

ಕಂಕಣದ ಕಿಂಕಿಣಿಯ ದನಿಯನಾಲಿಸಿ ಬಂದು
ಸಪ್ಪಳಿಲ್ಲದೆ ಎದೆಯನಪ್ಪುವವರು,
ಜೇನು ಹಾಡಿಗೆ ಮನವ ಮಾರುಗೊಂಡೈತಂದು
ಮುತ್ತು-ಸವಿಗೆಂದಿಗೂ ತಪ್ಪದವರು.

ನಕ್ಕು ನಗಿಸುತ ಮನೆಯ ತುಂಬಿ ತುಳುಕಿಸುವವರು
ಅಕ್ಕರೆಯ ಸಂತೋಷ ಲಹರಿಯವರು;
ಒಂದೆ ಕಂಬನಿಯಲ್ಲಿ ಕರಗಿ ನೀರಾಗುವರು
ನವಿರು ನವಿರೊಳು ನಲ್ಮೆ ಚಿಮ್ಮುವವರು, –

ಇಂದಾವ ಬೇಸರವು ಎದೆಯನಾವರಿಸಿಹುದು
ನಿಮ್ಮ ಪಾಲಿಗೆ ಮೌನ ಬಂದುದೇಕೆ?
ಗಿರಿಯ ಗಂಭೀರತೆಗೆ ಮನೆಯ ಬಿಮ್ಮೆಂದಿಹುದು-
ನವಿಲು ಮರೆತಂತಿಹುದು ತನ್ನ ಕೇಕೆ.

ಸರಸ ಸಲ್ಲಾಪಗಳ ಸರಸಿ ಬತ್ತುತಲಿರಲು
ಈ ಸರೋಜಕೆ ಬೇರೆ ಜೀವವಿಹುದೆ?
ಒಪ್ಪವಾಗಿದ್ದವರು ಸಪ್ಪೆಮುಖ ಮಾಡಿರಲು-
ಎಳೆದು ತಂದಿಹ ನಗೆಯು ಚಂದವಹುದೆ?

ನೀವು ಮರುಗಿದರೆನ್ನ ಜೀವಕ್ಕೆ ತಂಪಿಹುದೆ?
ನಸುಮುನಿಸಿಗೂ ನೆಲಕೆ ಇಳಿದುಬಿಡುವೆ-
ಬಂದುದೆಲ್ಲವು ಬರಲಿ, ನಗೆಯು ಚಿರವಾಗಿರಲಿ
ಇಂದ್ರಲೋಕವನಿಲ್ಲಿಗಳೆದು ತರುವೆ!

ಬಾನ ಬೀದಿಯೊಳಲ್ಲಿ, ಹುಣ್ಣಿಮೆಯ ರಥದಲ್ಲಿ
ಚಂದ್ರನೊಸಗೆಯು ಬಾರ ಬಾ ಚಕೋರ,
ಕಣ್ಣು ಕಾತರಿಸಿಹವು, ಎದೆಯು ಹಾರೈಸಿಹುದು
ತಾಳಲಾರೆನು ಇನ್ನು ಮೌನಭಾರ!
*****