ತಂಗಿಯ ಓಲೆಯನ್ನೋದಿ….

“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು”
ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು.
ಓದುತೋದುತಲಿರಲು ಕಣ್ಣು ಹನಿಗೂಡಿತ್ತು;
ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು;
ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ
ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು.

ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು
ಕೃತಕತೆಯ ಕಟ್ಟಳೆಯ ಮೀರಿ ಮಮತೆಯ ತೋರಿ
ಎನ್ನದೆಯನಾವರಿಸಿ ಕರುಣೆ ಹೂ ತಳೆದಿತ್ತು;
ತಿಳಿಯೊಲವು ನರುಗಂಪ ಸೂಸಿತ್ತು; ಪೂಸಿತ್ತು.

ಬಾಳಕೊಳಗುಳದಲ್ಲಿ ನೋವಿನೆಳೆದಾಟದಲಿ
ಆಶೆಯಾಕಾಂಕ್ಷೆಗಳು ಹುಡಿಗೂಡುವನಿತರಲಿ
ಗಾಸಿಗೊಂಡಿಳೆಗೊರಗಿ ಕಣ್ಣಿವೆಯು ಜಡಮಾಗಿ
ಬದುಕಿರುವ ಜೀವಿಗಿಹುದದುವೆ ತಣ್ಣೆಳಲಾಗಿ.
*****