ಏಕಿನಿತು ಮರುಗುತಿಹೆ?

ಏಕಿನಿತು ಮರುಗುತಿಹೆ, ಕೊರಗಿ ಸಣ್ಣಾಗುತಿಹೆ
ಬಯಕೆ-ನಂದನ ಮುಳ್ಳು ಬೇಲಿಯಾಯ್ತೆ?
ಎದೆಯ ತಿಳಿಗೊಳದಮಲ ಕಮಲ ದಲ ಹಾಸಿನಲಿ
ಅಣಕು ನುಡಿಗಳ ವಿಕಟ ನಾಟ್ಯವಾಯ್ತೆ?

ಜೀವನದಗಾಧಮಯ ಹೋರಾಟದಲ್ಲೊಂದು
ಬಾಣ ನಟ್ಟರೆ ಅದಕೆ ನರಳಬಹುದೆ?
ಇದಕಿಂತಲೂ ಘೋರ ಎಡರೆದ್ದು ಬಡಿಯಲಿವೆ
ನಡೆಯಲಿವೆ, ಅದನರಿಯದೇನು ಬಗೆದೆ?

ಒಮ್ಮೆ ತಲೆಗೊಟ್ಟಿರಲು ಹಿಂಜರಿಯದಿರು ಮನವೆ
ದೋಷ ನೂರಾರದಕೆ ಅಪ್ಪಳಿಸಲಿ;
ಗೋಡೆಗೊಗೆದಿಹ ಚೆಂಡು ಹಿನ್ನೆಗದು ಬರುವಂತೆ
ಹುಸಿಯಾಟ ಗೆಲ್ಲುವದೆ ಬಾಳಿನಲ್ಲಿ?

ನಿನ್ನ ದಾರಿಯ ನೀನು ಹುಡುಕುತಿರು ಪಯಣದಲಿ
ಹಲವು ಮನಗಳ ತಣಿಪ ಆಸೆ ಬೇಡ;
ನಿನ್ನ ಗುರಿಯದೊ ದೂರ, ಸೇರಲೆಳಸುವ ಧೀರ
ಕರ್ತವ್ಯಚ್ಯುತನಾದರಯ್ಯೊ ಕುರುಡ.

ಬಾಳು ಚಕ್ರವ್ಯೂಹ ಕೋಟೆಗಿಂತಲು ಕಠಿನ
ಜೇಡಬಲೆಯಂತ ಬಲು ಜಟಿಲಕುಟಿಲ;
ಆ ಬಲೆಗೆ ಅಂಟಿರುವ ಮಂಜುಹನಿಯೊಲು ತೊಳಗು
ನೊಣವಾಗಿ ನುಗ್ಗಿದರೆ ಜೀವ ವಿಫಲ.

ಏಳು ಮೇಲೇಳು ತಿಳಿವೆಳಕಿನೆಡೆ ಕೈ ನೀಡು
ನಿನ್ನ ಬಗೆ- ಬೊಗಸೆಯಲಿ ಒಲವು ಸುರಿದು
ಮೊಗದ ದುಗುಡದ ಮೋಡ ಮಿಂಚು ನಗೆ ತಳೆಯುವದು
ತಣಿಸುವದು ಎದೆಗುದಿಗೆ ಮಳೆಯನೆರೆದು.
*****