ಅಕ್ಷರಲೋಕದಲ್ಲಿ ಅಜ್ಜಿಯದೊಂದು ಹೆಜ್ಜೆ

ಥಟ್ಟನೆ ಹೊಳೆದ ಆಲೋಚನೆಯಿದು. ನಿಮಗೆ ನಾನು ಕಾಗದ ಬರೆದೇನು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಹೊಸ ಕನ್ನಡಕ ಬಂತಲ್ಲ. ಕಣ್ಣು ಡಾಕ್ಟ್ರು ಹೇಳಿದ್ರು, ಹದಿನೈದು ನಿಮಿಷ ಓದಿದ್ರೆ ಮತ್ತೆ ಹದಿನೈದು ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು, ಟಿವಿಯನ್ನು ಒಂದೇ ಸಮನೆ ನೋಡಬಾರದು ಎಂದು. ಇಷ್ಟನ್ನೂ ಒಂದೇ ಕಣ್ಣಲ್ಲಿ ಮಾಡಬೇಕು, ಇನ್ನೊಂದು ಕಣ್ಣು ಪ್ರಯೋಜನವಿಲ್ಲ. ನೀವಿದ್ದಾಗಲೇ ನನಗೆ ಒಂದು ಕಣ್ಣು ಸರಿ ಕಾತ್ತಿರಲಿಲ್ಲವಲ್ಲ. ಈಗೀಗಲಂತೂ ಏನೂ ಕಾಣುತ್ತಿರಲಿಲ್ಲ. ಕಂಡಷ್ಟಾಯಿತು ಅಂತ ಟಿವಿ ಮುಂದೆ ಕೂತಿರುತ್ತಿದ್ದೆ. ಪೇಪರೊ, ಕಥೆಯೋ ಓದೋದು ಎಂದೋ ಬಿಟ್ಟುಹೋಗಿದೆ. ಮನೆಗೆ ಯಾರು ಬಂದ್ರು ತೀರ ಹತ್ತಿರದಿಂದ ನೋಡಿದ್ರೆ ಮಾತ್ರ ಕಾಣೋದು. ಹೀಗಾಗಿ ತುಂಬಾ ಬೇಜಾರಾಗುತ್ತಿತ್ತು. ಕೈ-ಕಾಲು ಗಟ್ಟಿಯಾಗಿದ್ದು, ಕಣ್ಣು-ಕಿವಿ ಸರಿಯಾಗಿದ್ದರೆ ನಾವು ಬದುಕಬೇಕು. ಇಲ್ಲ ಹೇಳಿದ್ರೆ ಎಷ್ಟು ಕಷ್ಟ. ನೋಡಲು ಕಾಣೋದಿಲ್ಲ, ಮಾತಾಡೋಕೆ ಯಾರೂ ಇಲ್ಲ. ನಾನು ಹೇಗೆ ಬದುಕಬೇಕು ಹೇಳಿ? ಸಮಯ ಹೇಗೆ ಕಳೀತೀರಿ? ಒಂದುಸಲ ಕಣ್ಣು ಪರೀಕ್ಷೆ ಮಾಡಿಸಬೇಕು ಅಂತ ಅನುರಾಗನ (ನಮ್ಮ ಮುದ್ದಿನ ಕೊನೇ ಮಗ-ನಿಮ್ಮ ಅನು) ಹತ್ರ ಹೇಳಿದೆ. ಅನುರಾಗ ಕೂಡಲೇ ನನ್ನ ಕಣ್ಣುಡಾಕ್ಟ್ರ ಹತ್ರ ಕರೆದುಕೊಂಡು ಹೋದ. ಸುಮಾರು ಐವತ್ತು ವರ್ಷಗಳ ಹಿಂದೆ ನೀವು, ನಾನೆಲ್ಲ ಕಣ್ಣು ಪರೀಕ್ಷೆ ಮಾಡಿಸಿಕೊಂಡಿದ್ದೆವಲ್ಲ ಕಣ್ಣು ಡಾಕ್ಟ್ರು ಸಿದ್ದಪ್ಪ, ಅವರ ಮೊಮ್ಮಗ ಸುರೇಶನೂ ಈಗ ಕಣ್ಣು ಡಾಕ್ಟ್ರು. ಅವನೇ ಕಣ್ಣು ಪರೀಕ್ಷಿಸಿ ಬೆಂಗಳೂರಿಗೇ ಹೋಗಿ ಕನ್ನಡಕ ತರಬೇಕೆಂದು ಹೇಳಿದ. ಅನು ನನ್ನ ಬೆಂಗಳೂರಿಗೆ ಕರೆದುಕೊಂಡು ಹೋದ. ಅಭಿಜಿತ (ನಮ್ಮ ಎರಡನೇ ಮಗ ಅಭಿ) ಈಗ ಬೆಂಗಳೂರಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಅವನಿಗೆ ಅಲ್ಲಿ ಸ್ವಂತ ಮನೆ, ಕಾರು ಎಲ್ಲಾ ಇವೆ. ಜೇಬಲ್ಲಿ ಇಟ್ಟುಕೊಳ್ಳುವ ಫೋನೂ ಅವನ್ಹತ್ರ ಉಂಟು! ಅವನು ನಮ್ಮನ್ನು ಕಾರಲ್ಲೆ ಕರೆದುಕೊಂಡು ಹೋದ ಕನ್ನಡಕ ತೆಗೆಯಲು. ನಮ್ಮ ಇಬ್ಬರು ಮಕ್ಕಳು ಸೇರಿ ಬಹಳ ಕ್ರಯದ ಕನ್ನಡಕ ತೆಗೆದುಕೊಟ್ಟಿದ್ದಾರೆ. ಈ ಕನ್ನಡಕದಿಂದ ಎಷ್ಟು ಒಳ್ಳೇದಾಯ್ತೂ ಅಂತ! ಒಂದೇ ಕಣ್ಣಾದರೂ ಎಲ್ಲರ ಮುಖ ಸ್ಪಷ್ಟವಾಗಿ ಕಾಣುತ್ತೆ. ಟಿವಿ ನೋಡ್ತೇನೆ. ಅಷ್ಟೊ-ಇಷ್ಟೊ ಪೇಪರು, ಕಥೆ-ಕಾದಂಬರಿ ಓದುತ್ತೇನೆ.

ಹೊಸ ಕನ್ನಡಕ ತೆಗೆದುಕೊಳ್ಳುವಾಗ ನನಗೆ ಅನು ಮತ್ತು ಅವನ ಹೆಂಡತಿ (ನಮ್ಮ ಸೊಸೆ) ಸಂತೋಷಿ ಸ್ವಲ್ಪ ಒತ್ತಾಯ ಮಾಡಿ ಕರೆದುಕೊಂಡು ಹೋಗಲಿ ಅಂತ ಆಸೆಯಿತ್ತು. ಆದರೆ ಈ ಸಲ ಒತ್ತಾಯ ಮಾಡಿಸಿಕೊಳ್ಳಲು ಸ್ವಲ್ಪ ಹೆದರಿಕೆಯೂ ಆಯಿತೆನ್ನಿ. ಹಲ್ಲಿನ ಕಥೆಯಂತಾದರೆ ಅಂತ ಸುಮ್ಮನಾದೆ. ನಾಲ್ಕು ತಿಂಗಳ ಹಿಂದೆ ಬೇರೆ ಹಲ್ಲು ಸೆಟ್ಟು ಹಾಕಿಸಿಕೊ ಅಂತ ಡಿಲ್ಲಿಯಿಂದ ಗಂಡ, ಮಕ್ಕಳೊಡನೆ ಇಲ್ಲಿಗೆ ಬಂದಿದ್ದ ಮಾಲವಿಕಾ (ನಿಮ್ಮ ಮುದ್ದಿನ ಮಗಳು -ಬಣ್ಣದ ಕೊಂಬಿನ ಪುಟಾಣಿ ಜಿಂಕೆ) ಹೇಳಿದಳು. ಈ ಸೆಟ್ಟು ಹಾಕಿಸಿ ಹದಿನೈದು ವರ್ಷಗಳಾಗಿದ್ದವು. ನನಗೀಗ ಎಪ್ಪತ್ತಾರು ಅಲ್ವ. ಒಸಡು ಸುಗ್ಗಿಹೋಗಿ ಸೆಟ್ಟು ಬಾಯಲ್ಲಿ ಸರಿಯಾಗಿ ಕೂರುವುದೇ ಇಲ್ಲ. ನನಗೆ ಬಹಳ ಪ್ರಿಯವಾದ ಅಕ್ಕಿರೊಟ್ಟಿ ಹೋಗಲಿ ಮೆತ್ತಗೆ ಬೇಯಿಸಿದ ಅನ್ನವನ್ನು ತಿನ್ನುವಾಗಲೂ ಮೇಲಿನ ಸೆಟ್ಟು ಜಾರಿಹೋಗುತ್ತೆ. ಕೆಳಗಿನ ಸೆಟ್ಟು ಕುಣಿಯುತ್ತೆ. ಒಸಡಿನ ಈಗಿನ ಅಳತೆಗೇ ಹಲ್ಲು ಕಟ್ಟಿಸಿದರಾಯಿತು. ಏಳೆಂಟು ಸಾವಿರ ಆಗಬಹುದು. ಹೆಚ್ಚೇನು ಖರ್ಚು ಬೀಳುವುದಿಲ್ಲ ಅಂತ ಅನು ಹೇಳಿದ. ಸಂತೋಷಿ, ಮಾಲವಿಕಾ ಸ್ವಲ್ಪ ಒತ್ತಾಯ ಮಾಡಿ ನನ್ನ ಹಲ್ಲು ಡಾಕ್ಟ್ರ ಹತ್ರ ಕರಕೊಂಡು ಹೋಗಲಿ ಅನ್ನೋ ಆಸೆಯಿಂದ ನನಗೆಲ್ಲಾ ಇನ್ಯಾಕೆ ಹಲ್ಲು ಸೆಟ್ಟು ಅಂತ ಸ್ವಲ್ಪ ಮೊಂಡು ಹಿಡಿದು ಹೇಳಿದೆ. ಅವರೆಲ್ಲ ಸುಮ್ಮನಾದರು. ಈಗ ಸೆಟ್ಟು ಬೀಳಿಸಿಕೊಳ್ಳುತ್ತ ಊಟ ತಿಂಡಿ ಮಾಡುತ್ತೇನೆ. ಹೀಗೆ ಒತ್ತಾಯ ಮಾಡಿಸಿಕೊಳ್ಳಲು ಹೋಗಿ ಕನ್ನಡಕವೂ ಇಲ್ಲವಾದರೆ ಅನ್ನೋ ಹೆದರಿಕೆಯಿಂದ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಲು ಕೂಡಲೇ ರೆಡಿಯಾದೆ.

ಸರಿಯಪ್ಪ, ಹೊಸ ಕನ್ನಡಕ ಬಂತು. ಪೇಪರು ಕಥೆ ಓದುತ್ತೀಯ, ಟಿವಿ ನೋಡ್ತೀಯ. ಆದ್ರೆ ನನಗೆ ಕಾಗ್ದ ಬರೀಬೇಕು ಅಂತ ಹೇಗೆ ಹೊಳೆಯಿತು ಅಂತ ನೀವು ಕೇಳ್ತಿದ್ದೀರಾ! ಅದೇ ನನಗೂ ಆಶ್ಚರ್ಯ. ನಮ್ಮ ಹಿರಿ ಮಗಳು ಸಾಬ (ಸಾವಿತ್ರಿ-ಈಗ ಪಾಂಡವಪುರದಲ್ಲಿದ್ದಾಳೆ) ನನ್ನ ನೋಡಲಿಕ್ಕೆ ಅಂತ ಬಂದಿದ್ದಳು. ನಿಮಗೆ ಅವಳನ್ನ ಕಂಡರೆ ಬಹಳ ಪ್ರೀತಿಯಲ್ವಾ? ಒಂದು ದಿನ ನಾನು ಮನೆ ಹೊರಗೆ ಜಗುಲಿ ಕಟ್ಟೆಯಲ್ಲಿ ಒಬ್ಬಳೇ ಕುಳಿತ್ತಿದ್ದೆ. ಅವಳು ಹತ್ತಿರ ಬಂದು ಅಮ್ಮ, ನಿನಗೆ ಒಂಟಿತನ ಕಾಡುತ್ತಾ? ಕೇಳಿದಳು. ಹಾಗಂದ್ರೆ? ಪ್ರಶ್ನಿಸಿದೆ. ಹಾಗೆ ಹೇಳಿದ್ರೆ- ನನಗೆ ಯಾರೂ ಇಲ್ಲ, ನನ್ನ ಮಾತಾಡಿಸೋರು ಯಾರೂ ಇಲ್ಲ ಹೀಗೆ ಬೇಜಾರಾಗ್ತಾಯಿರೋದು ಅಂತ ವಿವರಿಸಿದಳು. ಅವಳನ್ನೇ ನೋಡಿದೆ. ಅವಳಿಗೀಗ ಐವತ್ತೆಂಟು. ಮೊನ್ನೆಯಷ್ಟೆ ರಿಟೈರ್‍ಡ್ ಆಗಿದ್ದಾಳೆ. ತಲೆಯಲ್ಲಿ ಬೆಳ್ಳಿ ಕೂದಲು ಮಿರುಗುತ್ತಿದೆ. ಅವಳಿಗೂ ಈಗ ನಾಲ್ಕು ಜನ ಮೊಮ್ಮಕ್ಕಳು. ಅವಳ ಮ್ಕಕ್ಕಳು (ನಿಮ್ಮ ಬಹಳ ಮುದ್ದಿನ ಮೊಮ್ಮಕ್ಕಳು ಸುಮಲತಾ, ಅವಳ ತಂಗಿ ಸ್ವರ್ಣಲತಾ) ಇಬ್ಬರೂ ಈಗ ಅಮೆರಿಕಾದಲ್ಲಿದ್ದಾರೆ ಗೊತ್ತಾ? ಅವಕ್ಕೂ ಈಗ ಮಕ್ಕಳು. ಕಾಲ ಹೇಗೆ ನಮ್ಮ ಸರದೀನ ಗಬಕ್ಕನೆ ಕಿತ್ತುಕೊಂಡು ಬೇರೆಯವರಿಗೆ ಪಾಸ್ ಮಾಡುತ್ತಾ ಓಡಿಬಿಡುತ್ತೆ. ನನ್ನ ತಲೇಲಿ ಬೆಳ್ಳಿ ಕೂದಲು ಕಾಣಿಸಿಕೊಂಡಾಗ ನಾನು ಮುದುಕಿಯಾದೇಂತ ನೀವು ಛೇಡಿಸಿದ್ದು ನೆನಪಿದೆಯಾ ನಿಮಗೆ? ಈಗ ನಿಮ್ಮ ಮಗಳ ತಲೆ ತುಂಬಾ ಬೆಳ್ಳಿಕೂದಲಿದೆಯಲ್ಲ! ಇರ್‍ಲಿ, ಹಳೆ ವಿಷಯಕ್ಕೆ ಬರುತ್ತೇನೆ. ಸಾಬನಿಗೆ ನಾನು ಹೇಳಿದೆ, ಹುಂ, ನೀನು ಹೇಳೋ ರೀತಿಯಲ್ಲಿ ನನಗೆ ಬೇಜಾರು ಆಗುತ್ತಿರುತ್ತೆ. ನಾನು ಮಾತಾಡಿದಾಗ ಯಾರೂ ಒತ್ತರ ಕೊಡದಿದ್ರೆ, ನಾನು ಹೋದಾಗ ಆಡ್ತರೋ ಮಾತನ್ನ ನಿಲ್ಲಿಸಿದ್ರೆ ಬೇಜಾರಾಗುತ್ತೆ. ಆಗೆಲ್ಲ ನನ್ನ ಕೇಳೋರೇ ಯಾರಿಲ್ಲ ಅನಿಸುತ್ತೆ ಅನು ಮಗ ಹೇಮಂತನ (ಅವನಿಗೀಗ ಎಂಟು ವರ್ಷ) ಜೊತೆ ಆಡ್ತಾ ಕಳೀತೇನೆ ಹೇಳಿದೆ. ಈ ಥರದ ಬೇಜಾರನ್ನ ನೀವೇ ನನಗೆ ಕೊಟ್ಟದ್ದು. ನಾನು ಏನೇ ಮಾತಾಡಿದ್ರು ಹಾಂ ಹುಂ ಅಂತಾದ್ರು ಉತ್ತರಿಸುತಿದ್ರಿ. ಯಾರನ್ನ ಬೈಯಲಿ, ತೆಗಳಲಿ ಸಣ್ಣಗೆ ನಕ್ಕುಬಿಡುತಿದ್ರಿ. ಈಗೆಲ್ಲ ಹೀಗೆಲ್ಲ ಯಾರೂ ಕೇಳೋದಿಲ್ಲ. ನಾನು ಮಾತಾಡಲು ಬಾಯಿಬಿಟ್ಟೆ ಅಂದ್ರೆ ಒಬ್ಬೊಬ್ಬರೆ ಜಾಗ ಖಾಲಿ ಮಾಡ್ತಾರೆ. ಎಷ್ಟು ಬೇಜಾರಾಗುತ್ತೇಂತ. ಇದೇನು ಕಾಗ್ದದಲ್ಲೂ ನಿಂದು ಪಿರಿ-ಪಿರಿ ಅಂತ ಅನಿಸುತ್ತ ನಿಮಗೆ? ಅನಿಸಲಿ ಬಿಡಿ, ಮೂವತ್ತು ವರ್ಷವೇ ಕಳೆದಿದೆ ನಿಮ್ಮ ಹತ್ರ ಮಾತಾಡದೆ.

ಸಾಬ ನನ್ನೇ ನೋಡುತ್ತಿದ್ದಳು. ಮಾತಾಡಲಿಲ್ಲ. ನಾನೇ ಹೇಳಿದೆ,: ಸಾಬ ಕಣ್ಣು ಸರಿ ಕಾಣೋದಿಲ್ಲ. ಕಿವಿ ಸ್ವಲ್ಪ ವಾಸಿ. ಬಾಯಿ ತುಂಬಾ ಮಾತಾಡೋದು ಬಿಟ್ರೆ ನಂಗೇನುಂಟು ಹೇಳು? ಯಾರಾದ್ರು ಮಾತಿಗೆ ಸಿಕ್ಕಿದ್ರೆ ನಂಗೆ ತುಂಬಾ ಸಂತೋಷವಾಗುತ್ತೆ. ಈಗಿನ ಜನಕ್ಕೆ ಮಾತು ಬೇಡ. ಯಾವಾಗ ನೋಡಿದ್ರು ಕೆಲಸಬಿಜಿ‌ಅಂತ ಹೇಳ್ತಿರ್‍ತಾರೆ ಅಮ್ಮಾ, ನೀನು ದಾಸರ ಕೀರ್ತನೆ, ಹಸೆ ಹಾಡು ರಾಗಿಬೀಸೋ ಹಾಡುಗಳನ್ನೆಲ್ಲ ಈಗಲೂ ಚೆನ್ನಾಗಿ ಹಾಡ್ತೀಯ. ನಿನ್ನ ಧ್ವನಿ ಕೇಳಿದ್ರೆ ಯಾರೂ ನಿನಗೆ ಎಪ್ಪತ್ತಾರು ಆಗಿದೆ ಹೇಳೋದಿಲ್ಲ. ಬೇಜಾರಾದಾಗಲೆಲ್ಲಾ ಹಾಡು ಹೇಳು ಹೇಳಿದಳು. ಈ ವಯಸ್ಸಲ್ಲಿ ಹಾಡಬೇಕಂತೆ! ಪ್ರೀತಿಯಿಂದ ಅವಳನ್ನು ಗದರಿದೆ. ಬೇಜಾರಾದಾಗ ಅವಳು ಹೇಳಿದಂತೆ ಹಾಡನ್ನ ಗುಣುಗುಣಿಸತೊಡಗಿದೆ. ನಿಜಕ್ಕೂ ಬೇಜಾರು ಕಡಿಮೆಯಾಯಿತು. ಎಷ್ಟು ಸಂತೋಷವಾಯಿತು ಗೊತ್ತಾ!

ನಮ್ಮ ಅನು ಹೆಂಡತಿ ಸಂತೋಷಿ ಒಂದು ಮಾತಾಡಿದ್ರೆ ಹತ್ತು ಸಲ ನಗ್ತಾಳೆ. ಅವಳಿಗಿಟ್ಟ ಹೆಸರು ಸರಿಯಾಗಿದೆ. ಈಗ ಸ್ವಲ್ಪ ದಿನದ ಹಿಂದೆ ಹೇಮು ನನ್ನ ಹತ್ರ ಬಂದು ಅಜ್ಜಿ, ಇದು ನನಗೆ ಬೇಡ. ಕಸದ ಬುಟ್ಟಿಗೆ ಎಸಿ ಅಂತ ನೋಟುಪುಸ್ತಕವನ್ನ ತಂದುಕೊಟ್ಟ. ಅಪ್ಪ ಹೋಂವರ್ಕ್ ಮಾಡಿಸ್ತಾರೇಂತ ಹೀಗೆ ಮಾಡಿದ್ದ. ನಾನು ಸೆರಗಲ್ಲಿ ಅದನ್ನ ಅಡಗಿಸಿಟ್ಟುಕೊಂಡು ನನ್ನ ಕೋಣೆ ಮೇಜಿನಲ್ಲಿಟ್ಟೆ. ಮರುದಿನ ಬೆಳಿಗ್ಗೆ ನೋಟು ಪುಸ್ತಕ ಬಿಡಿಸಿ ನೋಡ್ತೇನೆ ಎಲ್ಲಾ ಖಾಲಿ ಹಾಳೆಗಳು. ಮೇಜಿನ ಮೇಲೆ ಯಾವತ್ತೂ ಒಂದು ಪೆನ್ನು ಇಟ್ಟುಕೊಂಡಿರ್‍ತೇನೆ. ಅನುಗೆ ನಾನು ಈ ನೋಟು ಪುಸ್ತಕ ಕೊಡಲು ಹೊರಟವಳು ಎರಡು ಹೆಜ್ಜೆ ಹಿಂದೆ ಸರಿದು ಮತ್ತೆ ಮೇಜಿನ ಮೇಲಿಟ್ಟೆ. ನಿಮಗೆ ಇದರಲ್ಲಿ ಕಾಗ್ದ ಬರಿವಾ ಅಂತ ಅನಿಸಿತು. ಈಗ ಗೊತ್ತಾಯ್ತ ನಾನು ಯಾಕೆ ನಿಮಗೆ ಕಾಗ್ದ ಬರೀಲಿಕ್ಕೆ ಹೊರಟೇಂತ! ಕಾಗ್ದ ಹೇಗೆ ಶುರು ಮಾಡಲೀಂತ ಬಹಳ ಯೋಚನೆಗಿಟ್ಟುಕೊಂಡಿತು. ನೀವಿದ್ದಾಗ ನಾನು ನಿಮಗೆ ಒಂದೇ‌ಒಂದು ಕಾಗ್ದ ಬರೆದವಳಲ್ಲ. ನೀವೂ ನನಗೆ ಬರೆಯಲಿಲ್ಲ. ಆ ಮೀಟಿಂಗು, ಈ ಮೀಟಿಂಗು ಅಂತ ತಿಂಗಳು, ಹದಿನೈದು ದಿನಾಂತ ಯಾವ್ದು ಯಾವ್ದೋ ಊರಿಗೆ ಹೋಗುತ್ತಿದ್ದವರು ನಮ್ಮ ಪ್ರದೀಪನಿಗೆ (ಹಿರಿ ಮಗ) ಬರೀತಿದ್ರಿ. ಕಾಗ್ದ ಬರೆದು ಗೊತ್ತಿಲ್ಲದ ನಾನು ನಿಮಗೆ ಕಾಗದ ಬರೀತಿದ್ದೇನೆ. ಕೈ ಚುರುಕಿಲ್ಲ, ಅಕ್ಷರ ಉರುಟಿಲ್ಲ. ನಿಮ್ಮ ಕಣ್ಣಿನ ಶಕ್ತಿ ಹೇಗಿದೆಯೋ? ನಿಮಗೀಗ ಎಂಬತ್ತಾರು ಅಲ್ವಾ? ನನ್ನ ಕಾಗ್ದಾನ ನಿಧಾನಕ್ಕೆ ಓದಿ. ನಾನು ನಿಮ್ಮನ್ನ ಯಾವತ್ತೂ ಇಲ್ಲಿ ನೋಡಿ ಅಂತಾನೆ ಕರೀತಿದ್ದೆ. ಕಾಗ್ದ ಹೇಗೆ ಆರಂಭಿಸಲಿ? ಪ್ರೀತಿಯ ಇಲ್ಲಿ ನೋಡಿ ಅಂತಲೇ? ಇದು ಸರಿಯಾಗೋದಿಲ್ಲ. ಕಾಗ್ದ ಬರೆದು ಮುಗಿಸಿದ ಮೇಲೆ ಇದನ್ನ ಯೋಚಿಸಿದ್ರಾಯಿತು. ಇದಕ್ಕಾಗಿ ಒಂದಿಷ್ಟು ಜಾಗ ಬಿಟ್ಟಿರ್‍ತೇನೆ. ಇದು ನಾನು ನಿಮಗೆ ಬರೀತಿರುವ ಕಾಗ್ದ. (ನನ್ನ ಪ್ರೀತಿಯ ಇಲ್ಲಿ ನೋಡಿಗೆ ತಿಳೀತಲ್ಲ? ನಿಮ್ಮ ಸರೂ (ನೀವು ನನ್ನ ಸರೋಜಾ ಅಂತ ಪೂರ್ಣ ಹೆಸರಲ್ಲಿ ಎಂದೂ ಕರೆದವರಲ್ಲವಲ್ಲ) ನಿಮಗೆ ಬರೀತಿರುವ ಕಾಗ್ದ!

ನಮ್ಮ ಅನೂನ ಸಂತೋಷಿ ಹೇಗೆ ಕರೀತಾಳೆ ಗೊತ್ತ? ನೀವಲ್ಲವ ಅವನಿಗೆ ಪ್ರೀತಿಯಿಂದ ಇಟ್ಟ ಹೆಸರು ಅನುರಾಗ. ಅನೂ ಅಂತ ನೀವು ರಾಗ ಎಳೆದು ಕರೆದಾಗ ಅವನು ಹೇಗೆ ಪುಟು-ಪುಟು ಹೆಜ್ಜೆಯಿಟ್ಕೊಂಡು ನಿಮ್ಮನ್ನ ಬಂದು ತಬ್ಬಿಕೊಳ್ತಿದ್ದ! ಈ ಚಿತ್ರ ಈಗಲೂ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತೆ. ಸಂತೋಷಿ ಅವನನ್ನ ಕುಯ್ ಅಂತ ಕರೀತಾಳೆ. ಕುಯ್, ಊಟಕ್ಕೇಳಿಕುಯ್, ಸಂತೆಗೆ ಹೋಗಿ. ಹೀಗೆ. ಮಾಲವಿಕಾ ಬಂದಿದ್ದಾಗ ನಾನು ಅವಳಲ್ಲಿ ಇದನ್ನ ಹೇಳಿ ಗೊಣಗಿದೆ. ಅವಳು ಅವಳ ಗಂಡನ್ನ ಹೇಗಾದ್ರು ಕರೆದುಕೊಳ್ಳಲಿ, ನೀನ್ಯಾಕೆ ಚರೆಚರೆ ಮಾಡ್ತೀಯ? ಗದರಿದಳು. ನಿನ್ನ ಗಂಡ ನಿನ್ನ ಒಯ್ ಅಂತ ಕರೆದ್ರೆ ನಿಂಗೆ ಸಂತೋಷವಾಗುತ್ತ? ಕೇಳಿದೆ. ಅವಳು ಏನು ಹೇಳಿದಳು ಗೊತ್ತ? ಅವನೆಲ್ಲಿ ನನ್ನ ಹಾಗೆಲ್ಲ ಕರೀತಾನೆ. ಅವನು ನನ್ನ ಹನಿ ಅಂತಾನೇ ಕರಿಯೋದು ಅಂದಳು. ಏನು ಕುಯ್ಯೋ, ಏನು ಹನಿಯೋ? ಈ ಮಕ್ಕಳಿಗೆ ಏನು ಕರೆದ್ರೂ ಚೆಂದವೇ.

ನಿಮಗೆ ಕಾಗ್ದ ಬರೀವಾಗ ವಾರ, ತಾರೀಖು, ಸಮಯ ಒಂದೂ ಹಾಕೋದಿಲ್ಲ. ದಿನಕ್ಕೆ ಒಂದೇ ಒಂದು ಪ್ಯಾರಾ. ನನಗೇನೆಲ್ಲಾ ನೆನಪಾಗುತ್ತೊ ಅದನ್ನೆಲ್ಲಾ ಬರ್‍ಕೊಂಡು ಹೋಗ್ತೇನೆ. ಈ ಒಕ್ಕಣ್ಣಲ್ಲಿ ಅಷ್ಟೇ ಮಾಡೋಕೆ ಸಾಧ್ಯ! ಫೋನ್ ರಿಂಗ್ ಆಗ್ತಾಯಿದೆ. ಬಂದೆ ಈಗ. ಏನು, ನೀನೆ ಫೋನ್ ಎತ್ತಿಕೊಂಡೆಯಾ ಅಂತ ಕೇಳ್ತಿದ್ದೀರಾ? ಹೌದು. ನಾನೇ ಫೋನ್ ಎತ್ತಿಕೊಂಡೆ. ನಮ್ಮ ಮದ್ದುಬೈಲು ಕೋಮಲಾ ಮಾಡಿದ್ದು. ಅವಳೂ ಈಗ ಅಜ್ಜಿಯೆ. (ಆದ್ರೆ ನನ್ನಷ್ಟಲ್ಲ). ಅದೂ-ಇದೂ ಅಂತ ಅರ್ಧ ಗಂಟೆ ಮಾತಾಡಿದೆ. ಪರಿಚಯದವರು ಫೋನ್ ಮಾಡಿದ್ರೆ ನಾನು ಒಂದೆರಡು ಮಾತಾಡಿ ಫೋನ್ ಇಡೋದಿಲ್ಲ. ತುಂಬಾ ಮಾತಾಡ್ತೇನೆ. ಅವರು ಫೋನ್ ಇಡ್ತೇನೆ ಅಂತ ಹೇಳೋವರೆಗೂ ಮಾತಾಡ್ತೇನೆ. ನಿಮಗೆ ನಾನು ಇಷ್ಟೆಲ್ಲ ಹೇಗೆ ಕಲಿತೆ ಅಂತ ಆಶ್ಚರ್ಯ ಆಗುತ್ತಾ? ಈಗ ಇಲ್ಲಿ ಎಲ್ಲರ ಮನೆಗಳಲ್ಲೂ ಫೋನ್! ಫೋನ್ ರಿಂಗ್ ಆಗೋ ಶಬ್ಧ ಒಂದಲ್ಲ ಒಂದು ಮನೆಯಿಂದ ಕೇಳುತ್ತಲೇ ಇರುತ್ತೆ. ಮೊದಲು ಸಾಬ ಫೋನ್ ಹಾಕಿಸಿಕೊಂಡಳು. ಮಕ್ಕಳು ಅಮೆರಿಕಾದಲ್ಲಿದ್ದಾರಲ್ಲ ಅದಕ್ಕೆ. ಆಮೇಲೆ ನಮ್ಮ ಎರಡನೇ ಮಗಳು ಶುಭಾ ( ಮುಂಬೈನಲ್ಲಿದ್ದಾಳೆ) ಹಾಕಿಸಿಕೊಂಡಳು. ಅವಳ ಮಗ ಸಂಜಯ್ (ಹುಟ್ಟಿದ ದಿನವೇ ಅವನನ್ನ ನೋಡಿ ಮಂಗನ ಮರಿ ಹಾಗೆ ಕಾಣುತ್ತೆ. ಈ ಮಗೂನ ದೊಡ್ಡ ಮಾಡೋದು ಹೇಗೇಂತ ಕೇಳಿದ್ರಲ್ಲ) ಈಗ ಜರ್ಮನಿಯಲ್ಲಿದ್ದಾನೆ. ಅವನೊಡನೆ ದಿನಾ ಮಾತಾಡೋಕೆ ಬೇಕು ಅಂತ ಫೋನ್ ಹಾಕಿಸಿಕೊಂಡಳು. ಮೈಸೂರಲ್ಲಿದ್ದ ಪ್ರದೀಪ (ಅವನಿಗೆ ನಾನು ಅಂದ್ರೆ ಬಹಳ ಪ್ರೀತಿಯಲ್ವ) ಅಮ್ಮನ ಜತೆ ಮಾತಾಡೋಕೆ ಬೇಕು ಅಂತ ತಾನೂ ಫೋನ್ ಹಾಕಿಸಿಕೊಂಡು ಇಲ್ಲಿ ನಮಗೂ ಹಾಕಿಸಿಕೊಟ್ಟ. ಹಾಗಾಗಿ ಈಗ ಯಾರೂ ಕಾಗ್ದ ಬರೆಯೋದೆ ಇಲ್ಲ. ಎಲ್ಲರೂ ಫೋನ್‌ನಲ್ಲಿ ಒಂದೆರಡು ನಿಮಿಷ ಮಾತಾಡಿಬಿಡ್ತಾರೆ.

ನೀವು ಭಾನುವಾರ ಒಂದು ದಿನ ಬಿಟ್ಟು ಉಳಿದೆಲ್ಲಾ ದಿನ ಗೇಟ್ ಹತ್ರ ನಿಂತ್ಕೊಂಡು ಪೋಸ್ಟ್‌ಮ್ಯಾನ್‌ಗೆ ಕಾಯ್ತಿರ್‍ತಿದ್ರಲ್ಲ. ದಿನವೂ ಏನಾದ್ರೊಂದು ಕಾಗ್ದ ಇರೋದು. ನೀವೋ ಕಾರ್ಡು, ಇನ್‌ಲ್ಯಾಂಡು, ಕವರು ಅಂತ ರಾಶಿ ತಂದಿಟ್ಟುಕೊಳ್ತಿದ್ರಿ. ಈಗ ಅವೆಲ್ಲ ಏನೂ ಇಲ್ಲ. ಪೋಸ್ಟಮ್ಯಾನ್ ಕೂಡ ದಿನವೂ ನಮ್ಮ ರಸ್ತೆಯಲ್ಲಿ ಹೋಗೋದಿಲ್ಲ. ವಾರಕ್ಕೊಮ್ಮೆ ದಾಟಿದ್ರೆ ಹೆಚ್ಚು. ದಿನವೂ ಗೇಟ್ ತೆಗೆದು ಈಗ ಬರೋನು ನ್ಯೂಸ್‌ಪೇಪರ್ ಹುಡುಗ ಮಾತ್ರ!

ನಾನು ಮೊದಲ ಸಲ ಫೋನ್ ಮಾಡಿದ್ದು ನೆನಪಾಯಿತ ನಿಮಗೆ? ಸುಮಾರು ನಲವತ್ಯ್ತದು ವರ್ಷ ಆಗಿರಬೇಕಲ್ಲ? ನಾವಿಬ್ಬರು ನಮ್ಮ ಪ್ರದೀಪನ ಉಪನಯನಕ್ಕೆ ಕಾಫಿ ಪ್ಲಾಂಟರ್ ಶಿವಶಂಕರ ಅವರನ್ನು ಕರೆಯಲು ಹೋಗಿದ್ದೆವಲ್ಲ. ನಾವಿದ್ದಾಗಲೇ ಅಲ್ಲಿಗೆ ನನ್ನ ಅಣ್ಣ ಕಾಫಿಬೋರ್ಡಲ್ಲಿ ಅಧಿಕಾರಿಯಾಗಿದ್ದ ಸುಬ್ಬರಾಯಪ್ಪ (ಈಗ ಹಣ್ಣು-ಹಣ್ಣು ಮುದುಕ) ಫೋನ್ ಮಾಡಿದ್ದನಲ್ಲ. ಶಿವಶಂಕರ್ ಅವನೊಡನೆ ಮಾತಾಡಿ ನೀವೂ ಮಾತಾಡೀಂತ ನಿಮ್ಮ ಕೈಗೆ ಫೋನ್ ಕೊಟ್ಟರಲ್ಲ. ನೀವು ಎರಡು ಮಾತಾಡಿ ಅವನು ಹೇಳಿದಾಂತ ನನ್ನ ಕೈಗೆ ಫೋನ್ ಕೊಟ್ಟು ಮಾತಾಡಲು ಹೇಳಿದ್ರಿ. ನಾನು ಅದೇ ಫೋನ್ ನೋಡಿದ್ದಾಗಿತ್ತು. ನಿಮಗೆ ನೆನಪಾಗುತ್ತಾ ನನ್ನ ಕೈ ನಡುಗಿ ಕೈಯಿಂದ ಫೋನ್ ಜಾರಿದ್ದು, ಅದನ್ನು ಎತ್ತಿಕೊಂಡು ಕಿವಿ ಕಡೆ ಹಿಡಿದುಕೊಳ್ಳುವುದನ್ನು ಬಾಯಿಕಡೆಗೆ ಹಿಡಿದುಕೊಂಡಾಗ ನೀವು ಸಣ್ಣಗೆ ರೇಗಿ ಸರಿ ಹಿಡಿದುಕೊಟ್ಟದ್ದು, ಅಣ್ಣನ ಧ್ವನಿಯನ್ನ ಅದರೊಳಗಿಂದ ಕೇಳಿ ಬೆವತು ಹೋದದ್ದು, ನಾನು ಮಾತಾಡಿದರೆ ನನ್ನ ಧ್ವನಿ ಅದರೊಳಗೆ ಸಿಕ್ಕಿ ಹಾಕಿಕೊಂಡರೇಂತ ಗಾಬರಿಯಾದದ್ದು, ಅವನಿಗೆ ತಡವರಿಸಿ ತಡವರಿಸಿ ಉತ್ತರಿಸಿದ್ದು. ಅವತ್ತು ಎಷ್ಟು ಅವಾಂತರ ಮಾಡಿಕೊಂಡೆ. ಅವತ್ತು ಮನೆ ತಲುಪುವ ವರೆಗೂ ನೀವು ನನ್ನ ಮಂಕುದಿಣ್ಣೆ ಅಂತ ಬೈಯುತ್ತಲೇ ಇದ್ದದ್ದು ಎಲ್ಲಾ ನೆನಪಾಗುತ್ತ ನಿಮಗೆ? ಈಗ ಕೇಳಿ- ಫೋನ್ ಬಂದಾಗ ಹತ್ತಿರದಲ್ಲಿ ನಾನೇ ಇದ್ದರೆ ರಸೀವರ್ ಎತ್ತಿಕೊಂಡು ಹಲೋ ಎನ್ನುತ್ತೇನೆ. ಹೊಸ ಕನ್ನಡಕ ಬಂದಮೇಲೆ ನಾನೇ ಡಯಲ್ ಮಾಡ್ತೇನೆ. ನಿಮಗೂ ಫೋನ್ ಮಾಡೋಕೆ ಆಸೆ. ಆದ್ರೆ ಎಲ್ಲೀಗೇಂತ ಮಾಡಲಿ? ಫೋನ್ ಅಂತ ಹೇಳಿದಾಗ ಇನ್ನೊಂದು ವಿಷಯ ನೆನಪಾಯಿತು. ಅದನ್ನ ಹೇಳಿಬಿಡ್ತೇನೆ.

ಒಂದೆರಡು ತಿಂಗಳ ಹಿಂದೆ ವಿರಾಜಪೇಟೆಯಿಂದ ಡಾ. ನರಸಿಂಹಪ್ಪನವರ ಹೆಂಡತಿ ಪಾರ್ವತಮ್ಮ ಬಂದಿದ್ದರು. ಮನೇಲಿ ಒಬ್ಬರಿಗೇ ಬೇಜಾರಾಗುತ್ತಿತ್ತಂತೆ. ನಾಲ್ಕು ದಿನ ನನ್ನೊಡನೆ ಇದ್ದು ಹೋಗಲು ಬಂದಿದ್ದರು. ಅವರು ನನಗಿಂತ ಗಟ್ಟಿಯಾಗಿದ್ದಾರೆ. ಒಬ್ಬರೇ ಬಸ್ಸ್ಲ್ಸ್ಲೂ ಪ್ರಯಾಣ ಮಾಡ್ತಾರೆ. ಅವರನ್ನ ನೋಡಿ ನನಗೋ ಸ್ವರ್ಗಕ್ಕೆ ಮೂರೇ ಗೇಣು ಇದ್ದಹಾಗನಿಸಿತು. ಅಷ್ಟೊಂದು ಕುಷಿಯಾಯಿತು. ಅವರನ್ನ ಕರಕೊಂಡು ಒಂದು ದಿನ ಎದುರು ಮನೆ ಸುಮಿತ್ರಾ (ನಿಮ್ಮ ಸೋದರತ್ತಿಗೆ ಕೆಳಹಿತ್ಲು ಸುಬ್ಬಕ್ಕನ ಮೊಮ್ಮಗಳು) ಮನೆಗೆ, ಅಲ್ಲೆ ಪಕ್ಕದಲ್ಲೆ ಇರುವ ಗೋಪಾಲಕೃಷ್ಣ (ನಾರಾಯಣ ಪುರೋಹಿತರ ಮಗ) ಮನೆಗೆ ಹೋದೆ. ಮಧ್ಯಾಹ್ನ ಎರಡು ಗಂಟೆಗೆ ನಾವಿಬ್ಬರು ಮನೆಬಿಟ್ಟವರು ವಾಪಸು ಬಂದಾಗ ರಾತ್ರಿ ಎಂಟಾಗಿತ್ತು. ಎರಡೂ ಮನೆಗಳಲ್ಲಿ ಪಟ್ಟಾಂಗ ಹೊಡೆದದ್ದೇ ಹೊಡೆದದ್ದು! ಇನ್ನು ಏನುಂಟು ಹೇಳಿ ನಮಗೆ? ನಮ್ಮ ಆಸೆ, ಕನಸು ಎಲ್ಲಾ ಮಾತಲ್ಲೇ ಪೂರೈಸುವುದು ತಾನೆ! ಅವತ್ತೆ ಮೈಸೂರಿನಿಂದ ಪ್ರದೀಪನ ಹೆಂಡತಿ ರಮಾ ನನ್ನ ನೋಡಿಹೋಗಲೆಂದು ಬಂದಿದ್ದಳು. ಮರುದಿನ ಬೆಳಿಗ್ಗೆಯೇ ಅವಳಿಗೆ ಹೋಗಬೇಕಿತ್ತು. ನಾನು ಪಾರ್ವತಮ್ಮನನ್ನು ಕರೆದುಕೊಂಡು ಮನೆಯೊಳಗೆ ನುಗ್ಗಿದ್ದೆ. ಅವಳು ಇದೇನು ಅತ್ತೆ, ನಾನು ನಿಮ್ಮನ್ನು ನೋಡೋಕೆ ಬಂದ್ರೆ, ನೀವು ಇನ್ಯಾರದೋ ಮನೆಯಲ್ಲಿ ಹರಟೆಹೊಡ್ಕೊಂಡು ಕೂತಿರ್‍ತೀರಿ ಆಕ್ಷೇಪಿಸಿದಳು. ಏನೋ ಅಪರೂಪಕ್ಕೆ ಹೋದದ್ದು. ನೀನು ಬರೋದು ಗೊತ್ತಾಗಿದ್ರೆ ಹೋಗ್ತಿರಲಿಲ್ಲ. ದಿನಾ ಯಾರು ಹೋಗ್ತಾರೆ ಹೇಳು? ಅಪರೂಪಕ್ಕೆ ಹೋದದ್ದು. ಅದು-ಇದು ಮಾತಾಡುವಾಗ ಇಷ್ಟು ಹೊತ್ತಾಯ್ತು ಹೇಳಿದೆ. ಸಂತೋಷಿ ಹೇಳಿದಳು: ಈಗ ಯಾರೂ ಇನ್ನೊಬ್ಬರ ಮನೆಗಳಿಗೆ ಹೋಗಿ ಗಂಟೆಗಟ್ಟಲೆ ಮಾತಾಡೋದಿಲ್ಲ. ಅವರಿಗೂ ಟಿವಿಯಲ್ಲಿ ಸೀರಿಯಲ್ ನೋಡೋಕೆ ಇರೋದಿಲ್ವ? ನೀವು ಹೋದವರನ್ನ ದಾಕ್ಷಣ್ಯಕ್ಕೆ ಕೂರಿಸಿಕೊಂಡು ಮಾತಾಡಿದ್ದಾರೆ ಅಷ್ಟೆ ಅಮ್ಮಾ, ಕತ್ತಲಲ್ಲಿ ನಡೆಯುವಾಗ ಕಲ್ಲೆಡವಿ ಬಿದ್ದು ಕಾಲಿಗೇನಾದರು ಆದರೆ ನೀನೆ ನರಳಬೇಕು. ಮನೆಗೆ ಬಂದವರನ್ನು ಮಾತಾಡಿಸಿಕೊಂಡು ಕೂತಿರು. ನೀನಾಗಿ ಇನ್ನೊಬ್ಬರ ಮನೆಗೆ ಹೋಗಬೇಡ ಅನು ಸ್ವಲ್ಪ ಒರಟಾಗಿ ಹೇಳಿದ. ಅಷ್ಟಕ್ಕೂ ನಾನು ಮಾಡಿದ್ದು ರಸ್ತೆ ದಾಟಿ ಎದುರು ಮನೆಗೆ ಹೋಗಿ ಮಾತಾಡಿದ್ದು. ಮಕ್ಕಳಿಗೆ ಇದು ತಪ್ಪು. ನನಿಗೋ ಬಹಳ ಬೇಜಾರಾಯಿತು. ಪಾರ್ವತಮ್ಮನಿಗೆ ಇವರಾಡಿದ್ದೆಲ್ಲ ಕೇಳಿದರೆ ಏನಂದುಕೊಳ್ಳುತ್ತಾರೊ ಎಂಬ ಅಳುಕು ಬೇರೆ. ಪುಣ್ಯಕ್ಕೆ ಅವರಿಗೆ ಕಿವಿ ಸ್ವಲ್ಪ ಮಂದ! ಸುಮಿತ್ರಾನ ಮನೆಯಲ್ಲಿ ಹೊಸ ಗ್ರೈಂಡರ್ ತಂದಿದ್ದರು. ರಾತ್ರಿ ಊಟಕ್ಕೆ ಕೂತಾಗ ಆ ಗ್ರೈಂಡರ್ ಕಲ್ಲುಗಳು ಹೇಗಿವೆ ಎಂದೆಲ್ಲಾ ವಿವರಿಸಿದೆ. ಯಾರೊಬ್ಬರೂ ಒಂದು ಹುಂಗುಟ್ಟಲಿಲ್ಲ. ನಾನು ಮಾತಾಡೋದೇ ಸರಿಯಿಲ್ಲವೇನೋ ಅಂದುಕೊಂಡು ಸುಮ್ಮನಾದೆ. ಇದನ್ನ ಬರೀವಾಗ್ಲೂ ಸಂಕಟ ಆಗ್ತಿದೆ.

ಹರಟೆ ಹೊಡೆಯುವುದು ತಪ್ಪ? ನಮ್ಮ ಬಾಲ್ಯದ ದಿನಗಳು, ನೀವಿದ್ದಾಗ ನಾವೆಲ್ಲ ಕಳೆದ ದಿನಗಳು, ಮಕ್ಕಳನ್ನ ದೊಡ್ಡ ಮಾಡಲು ಪಟ್ಟ ಕಷ್ಟ ಇವೆಲ್ಲ ನೆನಪಾಗುತ್ತಲ್ವ. ಈಗ ಎಲ್ಲರೂ ಒಳ್ಳೆ ಸ್ಥಿತಿಯಲ್ಲಿರುವಾಗ ಹಿಂದಿನ ಕಷ್ಟಗಳನ್ನೆಲ್ಲಾ ಹೇಳಿಕೊಳ್ಳೋಕೆ ಹೆಮ್ಮೆ ಅನಿಸುತ್ತಲ್ಲವಾ? ಇವೇ ನನ್ನ ಮಾತು. ನನ್ನ ಪ್ರಪಂಚ! ಇವೆಲ್ಲ ಹರಟೆಯಾಗುವಾಗ ತುಂಬಾ ಸಂತೋಷವಾಗುತ್ತೆ. ಅದ್ರೆ ನಮ್ಮ ಮಕ್ಕಳಿಗೆ ಇದು ಕೇವಲ ಹರಟೆಯಾಗುತ್ತಲ್ಲ, ಹೇಳಿ? ಊಟವಾದ ಮೇಲೆ ಸಂತೋಷಿ ಕೋಣೆಯಲ್ಲಿ ರಮಾನಿಗೆ ಹೇಳುತ್ತಿರೋದು ನನ್ನ ಕಿವಿಗೆ ಬಿತ್ತು. ಅತ್ತೆಗೆ ಅಲ್ಲಿ-ಇಲ್ಲಿ ಸುತ್ತೋದು ಬಹಳ ಆಸೆ. ಬೇಡದ ಹರಟೆಗೆ ಕೂತರೆ ಊಟ, ತಿಂಡಿ, ನಿದ್ರೆಯೂ ಬೇಡ ಅವರಿಗೆ. ಹೇಳಿದ್ರೆ ಬಹಳ ಸಿಟ್ಟುಮಾಡಿಕೊಳ್ತಾರೆ. ಮೊನ್ನೆ ಪಾರ್ವತಮ್ಮನ ಹತ್ರ ಸುಣ್ಣದ ಗೋವಿಂದಪ್ಪನ ಮಗಳು ಅನಸೂಯಾ ರಾಮಕೃಷ್ಣ ಭಟ್ಟರ ಮಗನೊಡನೆ ಎಲ್ಲಿಗೋ ಓಡಿಹೋಗಿ ಮದುವೆಯಾದಳುಬ್ಯಾಂಕಿನ ಸುಜಾತ ಹೊಟ್ಟೆನೋವೂಂತ ಆತ್ಮಹತ್ಯೆ ಮಾಡಿಕೊಂಡದ್ದಲ್ಲ. ಅವಳಿಗೆ ಹೊಟ್ಟೆನೋವೇ ಇರಲಿಲ್ಲ. ಬೇರೆ ಏನೋ ಕಾರಣವಿತ್ತಂತೆ.. ಹೀಗೆಲ್ಲ ಹೇಳುತ್ತಿದ್ರು. ಪಾರ್ವತಮ್ಮನಿಗೆ ಅವರು ಯಾರೂಂತ ಗೊತ್ತಿಲ್ಲದಿದ್ದರೂ ಕುತೂಹಲದಿಂದ ಕೇಳುತ್ತಿದ್ರು ಸಂತೋಷಿ ಮಾತು ಕೇಳಿ ನನಗೆ ಸಿಟ್ಟು, ಬೇಜಾರು ಆಗುತ್ತಿತ್ತು. ಆದ್ರೆ ಏನ್ಮಾಡಲಿ ಹೇಳು. ಈ ವಯಸ್ಸಲ್ಲಿ ಜಗಳ ಆಡೋದು ಸರಿನಾ? ಅದಕ್ಕೆ ಸುಮ್ಮನಾದೆ. ಈ ವಿಷಯಗಳನ್ನೆಲ್ಲ ಪಕ್ಕದ ಮನೆ ಶಾಂತಾ ನನಗೆ ಫೋನ್‌ನಲ್ಲಿ ತಿಳಿಸಿದ್ದನ್ನ ನಾನು ಪಾರ್ವತಮ್ಮನಿಗೆ ಹೇಳಿದ್ದೆ ಅಷ್ಟೆ. ನಾವು ಮಾತಾಡಿಕೊಳ್ಳೋದು ಮನೆಯೊಳಗೆ ತಾನೆ. ದೂರಿದ್ರು ಮನೆಯೊಳಗೆ ತಾನೆ. ಅವರಿಗೆಲ್ಲ ಇದನ್ನ ಯಾರೂ ಹೋಗಿ ಹೇಳೋದಿಲ್ಲ. ಹಾಗಿದ್ರೆ ಮಾತಾಡೋದು ಏನು ತಪ್ಪು ಹೇಳಿ? ವಿಷಯ ಎಲ್ಲೆಲ್ಲಿಗೋ ಹೋಯ್ತಲ್ವ? ಪಾರ್ವತಮ್ಮ ವಿರಾಜಪೇಟೆಗೆ ಹೋದಮೇಲೆ ನನಗೆ ಫೋನ್ ಮಾಡಿದ್ರು. ಸುಮಿತ್ರಾ, ಗೋಪಾಲಕೃಷ್ಣನ್ನ ವಿಚಾರಿಸಿಕೊಂಡರು. ಸುಮಿತ್ರಾ ವಿಷಯ ಬಂತಲ್ಲ. ನಾನು ಪಾರ್ವತಮ್ಮನಿಗೆ ಸುಮಿತ್ರಾ ಮನೆಗೆ ಅವಳ ಅಕ್ಕ ಪೂನಾದಿಂದ ಬಂದದ್ದು, ಅಕ್ಕನಿಗೇಂತ ಶ್ಯಾವಿಗೆ ಮಾಡಲು ಅಕ್ಕಿ ರುಬ್ಬಿದ್ದು, ಮಗಚುವಾಗ ಹದ ಸಾಲದೆ ಶ್ಯಾವಿಗೆ ಒರಳು ಮಣೆಗೆ ಅಂಟಿಕೊಂಡು ಮುದ್ದೆ-ಮುದ್ದೆಯಾದದ್ದು ಎಲ್ಲಾ ಹೇಳಿ ನಕ್ಕೆ. ಪಾರ್ವತಮ್ಮನೂ ಹೊಟ್ಟೆತುಂಬಾ ನಕ್ಕರು. ಇದನ್ನೆಲ್ಲ ಕೇಳುತ್ತಿದ್ದ ಅನು, ಅಮ್ಮ, ಫೋನಲ್ಲಿ ಇದನ್ನೆಲ್ಲ ಯಾಕೆ ಹೇಳ್ತೀಯ? ಸುಮಿತ್ರಾ ಶ್ಯಾವಿಗೆ ಯಾದ್ರು ಮಾಡಲಿ ಬಿಡಲಿ ನಿನಗ್ಯಾಕೆ ಅದೆಲ್ಲ ಉಸಾಬರಿ? ಗದರಿದ. ಪಾರ್ವತಮ್ಮ ಏನು ತಿಳ್ಕೊಂಡುಬಿಡ್ತಾರೊ ಅಂತ ಏನೂ ಹೇಳದೆ ಫೋನ್ ಇಟ್ಟುಬಿಟ್ಟೆ. ಅವರು ಏನು ತಿಳ್ಕೊಂಡರೊ?

ಮನೇಲಿ ಕರೆಂಟು ಇದ್ದಾಗಲೆಲ್ಲ ಟಿವಿಯೇ ನನ್ನ ಸಂಗಾತಿ. ಶುಭಾ ಮನೆಗೆ ಬಂದವಳು ನಾನು ಟಿವಿ ಮುಂಗೆ ಕೂತೇ ಇರೋದು ನೋಡಿ, ಅಮ್ಮಾ, ಅಷ್ಟೊಂದು ಟಿವಿ ನೋಡಬೇಡ. ಕಣ್ಣಿಗೆ ಒಳ್ಳೇದಲ್ಲ. ನಿನ್ನ ದೃಷ್ಟೀನೂ ಸರಿಯಿಲ್ಲ. ನೋಡಿದ್ದೆಲ್ಲ ಅರ್ಥವಾಗುತ್ತಾ? ಕೇಳಿದ್ದಳು. ನಾನು ಹೇಗೆ ಹೊತ್ತು ಕಳೆಯಲಿ ಹೇಳಿ. ಮಾತಾಡಿದ್ರೆ ತಪ್ಪು, ಟಿವಿ ನೋಡಿದ್ರೆ ತಪ್ಪುಹಿಂದೆ ಕೆಲಸ ಮಾಡುವಾಗಲೂ ರೇಡಿಯೋ ಹಾಕೊಂಡೇ ಇರುತ್ತಿದ್ದಾಗ ನೀವು ಗೇಲಿ ಮಾಡ್ತಿದ್ರಿ ಅಲ್ವಾ? ಈಗ ರೇಡಿಯೋ ಕೇಳೋದು ಅಷ್ಟರಲ್ಲೇ ಇದೆ. ಎಲ್ರೂ ಟಿವಿ ನೋಡ್ತಾರೆ.

ನನಗೆ ನಿಮ್ಮ ಮೇಲೆ ಬಹಳ ಸಿಟ್ಟು ಬರುತ್ತೆ. ಯಾಕೆ ಹೇಳಿ? ನೀವು ನನಗೆ ಬಹಳ ನೋವು ಕೊಟ್ರಿ. ನೀವು ಹೋದಾಗ ಸಾಬ, ಶುಭಾರ ಮದುವೆಯಾಗಿ ಮೊಮ್ಮಕ್ಕಳು ಆಗಿದ್ದವು. ಪ್ರದೀಪ ಅಭಿ, ಸುಲಕ್ಷಣಾ, ಮಾಲವಿಕಾ, ಅನು ಅವರನ್ನೆಲ್ಲಾ ಓದಿಸಿ ಒಂದು ಹಂತಕ್ಕೆ ತರಲಿಕ್ಕೆ ನಾನೇ ಕಷ್ಟಪಡಬೇಕಾಯಿತಲ್ಲ, ಮಕ್ಕಳು ಜಾಣರಿದ್ರು ಕಲಿಯೋದರಲ್ಲಿ ಆಗಿಹೋಯ್ತು. ಸುಲಕ್ಷಣಾ, ಮಾಲವಿಕಾ, ಪ್ರದೀಪ ಅವರಿಗಿಷ್ಟವಾದವರನ್ನೇ ಮದುವೆಯಾದ್ರು. ಅವರ ಜಾತಿ-ಗೀತೀನೂ ನಾನು ಕೇಳಿಲ್ಲ. ಮಕ್ಕಳನ್ನ ಆ ಹಂತಕ್ಕೆ ತರೋದ್ರಲ್ಲೇ ಹಣ್ಣಾಗಿದ್ದೆ. ಅವರೆಲ್ಲ ಚೆನ್ನಾಗಿರೋದು ಮುಖ್ಯ. ಜಾತಿ ಕಟ್ಟಿಕೊಂಡು ಏನ್ಮಾಡ್ಲಿ? ಹೆಚ್ಚು ವಿದ್ಯೆಯಿಲ್ಲದ ನಾನು ನಿಮಗಿಂತ ನೋವು ತಿಂದ್ನಲ್ಲ ಹೇಳಿ! ನೀವು ಹೋದ ನೋವು ಈಗಲೂ ಮಾಸಿಲ್ಲ. ಪ್ರದೀಪ ಹಾರ್ಟ್ ಅಟೇಕ್ ಆಗಿ ಇದ್ದಕ್ಕಿದ್ದ ಹಾಗೆ ಹೋಗಿಬಿಟ್ಟ. ಸುಲಕ್ಷಣಾ ನೆಪಕ್ಕೆ ಜ್ವರ ಬಂದು ಕಣ್ಣುಮುಚ್ಚಿಕೊಂಡಳು. ಈ ನೋವೆಲ್ಲ ನಿಮಗೆ ಅರ್ಥವಾಗುತ್ತಾ, ಹೇಳಿ? ಬಡತನ ಬರಲಿ, ಕಷ್ಟ ಬರಲಿ ನಾನು ಹೇಗೂ ನಿಭಾಯಿಸಿಬಿಡ್ತೇನೆ. ಆದ್ರೆ ಸಾವು ಅಂದ್ರೆ ಎಲ್ಲವನ್ನ ಕಳ್ಕೊಂಡ ಹಾಗೆ. ಅವರ ಇರುವೇ ಇಲ್ಲ ಅಂದ್ರೆ ಎಷ್ಟೊಂದು ಸಂಕಟ ಆಗುತ್ತೆ. ನಿಮ್ದೆಲ್ಲ ಬದುಕು ಪೂರ್ತಿಯಾಯ್ತು. ಹೊರಟುಹೋದ್ರಿ. ಇರಲಿ ಬಿಡಿ, ನನ್ನ ನೋವನ್ನ ನಿಮ್ಮಲ್ಲಿ ಹೇಳಿಕೊಂಡೆ.

ಸ್ವಲ್ಪ ದಿನ ಬರೆಯದೆ ಯಾಕೆ ನಿಲ್ಲಿಸಿದ್ದೇನೆ ಅಂತ ಕೇಳ್ತಿದ್ದೀರಾ? ಊಟ ಮಾಡ್ತಿದ್ದಾಗ ನಾನು ಇದ್ದಕ್ಕಿದ್ದ ಹಾಗೆ ಬಿದ್ದುಹೋದೆ. ಎಚ್ಚರವೇ ಇರಲಿಲ್ಲ. ಸಂತೋಷಿ ಅತ್ತೆಗೆ ಏನೋ ಆಗಿದೆ ಅಂತ ಕಿರುಚಿಕೊಂಡಳಂತೆ. ಆಫೀಸಲ್ಲಿದ್ದ ಅನು ಡಾಕ್ಟ್ರನ್ನ ಕರ್‍ಕೊಂಡು ಮನೆಗೆ ಬಂದ. ನನಗೆ ಎಚ್ಚರವಾದಾಗ ಅನು ತಲೆಬುದದಲ್ಲಿ ಕೂತಿದ್ದ. ಸಂತೋಷಿ ಕಣ್ಣೊರೆಸಿಕೊಳ್ಳುತ್ತಿದ್ದಳು. ಅಮ್ಮಾ, ಏನಾಗ್ತುಂಟು? ಅನು ಕೇಳಿದ. ಏನಿಲ್ಲ. ನಂಗೇನಾಗಿತ್ತು? ಅವನನ್ನೇ ಕೇಳಿದೆ. ಏನಿಲ್ಲ, ಸ್ವಲ್ಪ ಆಯಾಸ ಆಗಿತ್ತಂತೆ ನಿನಗೆ. ರೆಸ್ಟ್ ತಗೋಬೇಕಂತೆ, ಡಾಕ್ಟ್ರು ಹೇಳಿದ್ದಾರೆ ಹೇಳಿದ. ನನಗೋ ನಗು ಬಂತು. ಯಾವತ್ತೂ ರೆಸ್ಟ್ಲ್ಟ್ಲಿರೋ ನನಗೇನು ಬಂತು ರೆಸ್ಟ್ ಅಂದುಕೊಂಡೆ. ಮರು ದಿನ ಸಂಜೆಗೆ ಮನೆ ತುಂಬಾ ಜನ. ಮಕ್ಕಳೆಲ್ಲ ಬಂದಿದ್ರು. ಅಭಿಜಿತ ಜೇಬಲ್ಲಿಟ್ಟುಕೊಳ್ತಾನಲ್ಲ ಫೋನನ್ನ ನನ್ನ ಬಾಯಿಗಿಟ್ಟು ಅಮ್ಮಾ, ಅಮೇರಿಕಾದಿಂದ ಸುಮಲತಾ ಮಾತಾಡ್ತಾಳೆ ಮಾತಾಡು ಹೇಳಿದ. ಸಂಜೆಗಾಗುವಾಗ ಮೊಮ್ಮಕ್ಕಳೆಲ್ಲಾ ನನ್ನ ವಿಚಾರಿಸಿಕೊಂಡದ್ದೇ ಕೊಂಡದ್ದು. ಮಕ್ಕಳು, ಸೊಸೆಯರದೆಲ್ಲ ಉಪಚಾರ. ಆದ್ರೆ ಅನು ಮಂಕಾಗಿಯೇ ಇದ್ದ. ಅವನ ಕಣ್ಣು ಆಗಾಗ ತುಂಬಿಕೊಳ್ತಿತ್ತು.

ಅತ್ತೆ ಈಗ ಟಿವಿವೆಲ್ಲ ಸರಿಯಾಗಿ ನೋಡೋದೆಯಿಲ್ಲ. ಕೋಣೆ ಬಾಗಿಲು ಹಾಕೊಂಡು ಕೂತಿರ್‍ತಾರೆ ಸಂತೋಷಿ ಹೇಳುತ್ತಿದ್ದಳು. ಅಮ್ಮ, ಈಗ ನಿನ್ನ ಒಂದು ಕಣ್ಣಿಗೆ ತೊಂದರೆಯಿಲ್ವಲ್ಲ. ಓವಿ ನೋಡು ಸಾಬ ಹೇಳಿದಳು. ನಾನು ಕೋಣೆ ಬಾಗಿಲು ಹಾಕೊಂಡು ನಿಮಗೆ ಕಾಗದ ಬರಿತೇನೇಂತ ಹೇಗೆ ಹೇಳಲಿ? ಕೋಟಿ ರಾಮನಾಮ ಬರೆಯೋ ಆಸೆ. ಬರೀತಾ ಕೂತಿರ್‍ತೇನೆ ಹೇಳಿದೆ. ಈ ವಯಸ್ಸಲ್ಲೂ, ಇಂಥ ಪರಿಸ್ಥಿತಿಯಲ್ಲೂ ಸುಳ್ಳಾ ಅಂತ ಕೇಳ್ತೀರಾ? ಹೌದು, ಮಕ್ಕಳು ಎಲ್ಲಾ ಸೇರಿಕೊಂಡು ಅಮ್ಮನಿಗೆ ಈಗ ಅಪ್ಪನಿಗೆ ಲವ್ ಲೆಟರ್ ಬರಿಯೋ ಆಸೆ ಅಂತ ನಕ್ಕರೆ‌ಅದಕ್ಕೆ ಸುಳ್ಳು ಹೇಳಿದೆ. ಇಲ್ಲದಿದ್ರು ಈ ನೋಟು ಪುಸ್ತಕಾನ್ನ ಅವರೆಲ್ಲಿ ತೆಗೆದು ನೋಡ್ತಾರೊ ಅಂತ ಮೇಜಿನ ಕವರ್ ಅಡಿಯಲ್ಲಿ ಅಡಗಿಸಿಟ್ಟುಕೊಳ್ಳುತ್ತೇನೆ. ನಿನ್ನೆ ಸಂಜೆ ಮೇಜಿನ ಮೇಲೆ ಎರಡು ನೋಟುಬುಕ್‌ಗಳು. ಅನು ಕೋಟಿರಾಮನಾಮ ಬರೀಲಿಕ್ಕೆ ಅಂತ ನನಗೆ ತಂದಿಟ್ಟಿದ್ದಾನೆ. ಮಕ್ಕಳ ಪ್ರೀತಿ ನೋಡಿ. ನನಗೆ ವಯಸ್ಸಾದದ್ದೇ ಮರೆತ.

ನೋಡಿ, ಎಷ್ಟೊಂದು ತಿಂಗಳುಗಳು ಉರುಳಿದ್ವು. ನಿಮಗೆ ಕಾಗ್ದ ಬರಿಯೋಕೆ ಹೊರಟ ಮೇಲೆ ಹೊತ್ತು ಹೋಗೋದೆ ಗೊತ್ತಾಗೋದಿಲ್ಲ. ಈಗ ನೀವು ದಿನಾ ನನ್ನ ಹತ್ರವೇ ಇರ್‍ತೀರಲ್ಲ. ನಿಮ್ಮ ಜತೆ ಮಾತು, ಹರಟೆ ದಿನಾ ನಡೀತಿದೆಯಲ್ಲ. ನಿಮಗೆ ಇನ್ನೆರಡು ನೋಟುಪುಸ್ತಕ ತುಂಬಾ ಪತ್ರ ಬರೆಯೋದಿದೆ. ಸದ್ಯ ಇದನ್ನ ನಿಲ್ಲಿಸಲಾ? ಇದು ಅಂತ್ಯ ಆಗ್ತಿದೆ ಅಂದ್ರೆ ಮತ್ತೊಂದು ಶುರುವಾಗುತ್ತೆ ಅನ್ನೋದನ್ನ ಮರೀಬೇಡಿ. ಏನು ಹೇಳಲಿ ನನ್ನ ಪ್ರೀತಿಯ ಇಲ್ಲಿ ನೋಡಿ? ಈಗ ನೀವೆ ನನ್ನ ಕುಯ್, ಹನಿ. ಎಲ್ಲಾ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.