ಕ್ಷಣಬಂಧುರ

‘ಸೋ’ ಎಂದು ಸುರಿವ ಮಳೆ
ಉನ್ಮಾದಗೊಂಡ ಇಳೆ!
ಸೀಯೆನೆ ಸೊದೆಯನೀಂಟಿ ಓಲಾಡುತಿರುವ ಬೆಳೆ
ತೋರ ಮುತ್ತಿನ ಹನಿಯ ಝಲ್ಲರಿಯ ಮಾಲೆ.

ತರುಮರಾದಿಗಳಲ್ಲಿ ಗಾಳಿ ನಿಶ್ಯಬ್ದ,
ಮನೆಮಾರು ಗಿರಿದರಿಗಳಲ್ಲಲ್ಲೆ ಸ್ತಬ್ಧ,
ಎಲ್ಲವೂ ಬಿರುಮಳೆಯ ಮಂತ್ರದಲ್ಲಿ ಮುಗ್ಧ.

ಕೊಳೆಯನಲ್ಲವ ಕೊಚ್ಚಿ ತೇಲಿಸಿದೆ ಹೊನಲು
ಗಾಳಿಯೂ ಕರಕರಗಿ ನೀರಾಯಿತೆನಲು
ದಂಡತ್ತಿ ಬರುತಿರುವ ಮೋಡಗಳ ಸಾಲು
ಸೋತವರ ಸೊತ್ತೆಲ್ಲ ಗೆದ್ದವರ ಪಾಲು!

ಒಂದ ಚಣ:
ಮಾಯೆ ಬೀಸಿದುದತ್ತ ಇಂದ್ರಜಾಲ!
ಬಾನಿಳೆಯ ಉನ್ಮತ್ತ ಬೆಸುಗೆ ಹಿಲ್ಲೋಲದಲಿ
ಜನಮನವು ಸ್ವಪ್ನಲೋಲ.

ಮತ್ತೊಂದೆ ಚಣ:
ಮಳೆಯು ನಿಂದತ್ತು
ಸಡಿಲಿತ್ತು ನೆಲ ಜಲದ ಗಾಢಮಿಲನ!

ಮೂಡಿತ್ತು ತಿಳಿನಗೆಯು ಆಗಸದ ಮೊಗದಿ
ಮಾತಿರದ ಮೃದು ಮಧುರ ಮೌನಾವಲೋಕನದಿ
ಸೃಷ್ಟಿಯಲಿ ಹೊಮ್ಮಿತ್ತು ಚಿಮ್ಮುಗಾಲ!

ವರ್ಷ ಋತು
ಹರ್ಷ ಋತು
ಮನುಜ ದುಃಖದಿ ಬೆರೆತು
ತೇಲಿತ್ತು ಮುಳುಗಿತ್ತು ಅನಂತಕಾಲ.
*****