೧
ಬೆಳಗಾಯಿತು-
ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ
ಹೊಂಬಿಸಲು ಸೂಸಿ ಹೂಗಾಳಿ ಹರಿದಾಡಿತು.
ನೀಲಿಯಾಗಸದ ತೊಳೆದ ಪಾಟಿಯ ಮೇಲೆ
ಹಕ್ಕಿ ಧ್ವನಿ ತೀಡಿತು ಹೊಸದೊಂದು ವರ್‍ಣಮಾಲೆ!
ಕೆಂಪು ಕೋಟೆಯ ಭುಜಕೆ ಧರ್‍ಮಚಕ್ರ ಧ್ವಜವನಿರಿಸಿ
ತಾಜಮಹಲಿನ ಹಾಲುಗಲ್ಲಿನಲಿ ಪ್ರೀತಿ ಪ್ರತಿಬಿಂಬಿಸಿ
ಸದಾಸಿದ್ಧ ಗೊಮ್ಮಟೇಶ್ವರನ ಮಂದಸ್ಮಿತವ ಬಳಸಿ
ಗಂಗೆ, ಗೋದಾವರಿ, ಕೃಷ್ಣೆ, ತುಂಗಭದ್ರೆ, ಕಾವೇರಿಯರ
ತೆರೆ ಪರಂಪರೆಯಲ್ಲಿ ತಂಗಾಳಿ ಸೂಸಿ-
ಹಳ್ಳಿ ಹಳ್ಳಿಯ ಬದುಕ ಬೆಳ್ಳಿ ಚಿಕ್ಕಗೆ ಉಜ್ಜಿ
ದನಕರದ ಕೊರಳಿನಲಿ ಕಟ್ಟಿ ಹುರಿಗೆಜ್ಜಿ,
ಗುಡಿಸಲಿನ ಗೂಡಿಂದ ಹೊರಬಂದ ಹುಂಜ ಕೊರಳೆತ್ತಿ ಕೂಗಿ
ಬೆಳಗಾಯಿತು.
ಗಿರಣಿ ಬಂಬಿನ ಹುತ್ತದಿಂದ ಹೊಗೆಯೆದ್ದು
ಹಾವು ಹಡೆ ಬಿಚ್ಚಿತು!
ಬೀದಿಯೀ ತುದಿಯಿಂದ ಆ ತುದಿಯವರೆಗೆ
ರಬ್ಬರು ಗಾಲಿಯುರುಳಿ, ಎಬ್ಬಿಸಿತು ಧೂಳಿ.
ನಳದಲ್ಲಿ ನೀರು ಗೊರಗೊರ ಸದ್ದು ಮಾಡಿ
ಹಂಡೆ ಕೊಡಗಳ ಜೊತೆಗೆ ತೋಡಿಕೊಂಡಿತು ತನ್ನ ಸುಖ ದುಃಖ.
ಆಕಾಶವಾಣಿಯಲಿ ತಕ್ಕ ದೇವರ ನಾಮ.
ಹೊರ ಬಾಗಿಲಿಗೆ ಬಂದು ಹಾಲು ಅಳದನು ಗೌಳಿ;
ಸುದ್ದಿಯಲಿ ಅದ್ದಿ ತೆಗೆದಿರುವ ಪತ್ರಿಕೆ ಬಂದು ಬಿತ್ತು
ಜೊತೆಗೆ ಚಹವೂ ಬಂತು-
ಮತ್ತೇನು ಸುದ್ದಿ?
೨
ನಿನ್ನೆ ಮೊನ್ನೆಯದು, ತಿಂಗಳು ವರುಷದಾಚೆಯದು
ಇಂದಿಹುದೆ? ಇಹುದು-ಇಲ್ಲ;
ನಾಳೆ ನಾಡಿದ್ದು ದೇವರೇ ಬಲ್ಲ.
ಯುಗ ಯುಗಗಳನು ಸೆಳೆದು ತುಳಿದು ತಳಹದಿ ಮಾಡಿ ಮೇಲೆ ನಿಂತು
ಮುಗಿಯ ಬಂದಿಹುದೇನೂ ಮೊದಲ ಹಂತ-
ನಡೆದಷ್ಟು ದೂರ ಸಾರುವದು ದೂರದ ದಿಗಂತ.
“ಅಡಿಯ ಮುಂದಿಡೆ ಸ್ವರ್‍ಗ
ಅಡಿಯ ಹಿಂದಿಡೆ ನರಕ
ಅಡಿಗಶ್ವಮೇಧ ಫಲ”- ಸಾಗಿಹುದು ಪಾದಯಾತ್ರೆ;
ಯಾರು ಬಲ್ಲರು, ನಾಳೆ ಈ ಗುಡಿಯ ಮುಂದೆಯೇ
ನೆರೆದೀತು ದೊಡ್ಡ ಜಾತ್ರೆ.
ಕಣ್ಣೆದುರು ಬಣ್ಣದಲಿ ಹೊಳಹುಗೊಂಡೇಳುತಿಹ
ದೇಶದುದ್ದೇಶಗಳ ಹೊಸತು ನಕ್ಷೆ,
ಲಕ್ಷ ಲಕ್ಷದ ಜನದ ಆಶೆಯಾಕಾಂಕ್ಷೆಗಳ ಭರವಸೆಯ ಬೆಳ್ಳಿ ರೇಖೆ!
ಒಂದೊಂದೆ ಇಟ್ಟಂಗಿ, ಒಂದು ಕಬ್ಬಿಣ ಬುಟ್ಟಿ ಗಚ್ಚುಗಾರೆ
ಕೋಟಿ ಕೈಗಳ ದಾಟಿ, ಕೋಟಿ ಹೃದಯವ ಮೀಟಿ
ಜಾತಿ, ಕುಲ, ಪಂಥ; ಊರು, ತಾಲೂಕು, ಜಿಲ್ಲೆ, ಪ್ರಾಂತ-
ಮೀರಿ ಅಂಥಿಂಥ ಸಂಕುಚಿತ ಮೇರೆ
ಸಮರ್‍ಪಿಸಿದೆ ಕೋಟಿ ತಾರೆಯ ಬೆಳಕಿನೆಲ್ಲ ಧಾರೆ.
ನಿಲ್ಲಿ ನದಿಗಳೆ ಇಲ್ಲಿ, ನಿಮಗೆಲ್ಲಿ ವಿಶ್ರಾಂತಿ? ನಿಂತು
ಸಾಗರವಾಗಿ, ವಿದ್ಯುದಾಗರವಾಗಿ ಮುಂದೆ ಸಾಗಿ;
ನೂರು ಯೋಜನ ನೆಲವನೆಲ್ಲ ಹಚ್ಚಗೆ ನಗಿಸಿ ತೆನೆತೆನೆಯ ತಲೆದೂಗಿಸಿ
ನಿಮ್ಮ ಹೊನಲಿನ ಶಕ್ತಿಯುಕ್ತಿಯಲಿ ಆಗಸಕೆ ತಂತಿ ಬೀಸಿ
ಮನೆ-ಮಹಡಿ, ಗುಡಿ-ಜೋಪಡಿ, ಬೀದಿಯಿಕ್ಕಟ್ಟಿನಲಿ ಬೆಳಕು ಸೂಸಿ.
ಹಳ್ಳಿ ಪಟ್ಟಣ ನಗರ, ಗುಡ್ಡ ಕೊರಕಲು ಕಂಟಿ
ಎಲ್ಲೆಂದರಲ್ಲಿ ಶ್ರಮದಾನಕ್ಕೆ ಶುಭದ ಹಾದಿ.
‘ಮೆಲ್ಲೆಲರಿಂ ಪೂತ ಕೊಳಂಗಳಿಂ ಕೆರೆಗಳಿಂ ಕಾಲೂರ್‍ಗಳಿಂ ಕೆಯ್ಗಳಿಂ’
ತುಂಬಿ ತೂಗಿ,
‘ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪು
ಗಳ್ಗಾಗರ ಮಾಗಿ’
ಹೊಸ ರೂಪ ರಚನೆಯಲಿ ಕಂಗೊಳಿಸಿ ಕಸುವಾಗಲಿದೆ ನಾಡು
ಅದಕಿದೇ ಮೊದಲ ನಾಂದಿ.
ಬರಿಯ ಹಾರೈಕೆಗಳನುಂಡು ಸೊರಗಿದ ದೇಹದಲ್ಲಿ ಬಿಸಿನೆತ್ತರಿನ
ಸಂಚಾರ-
ನೀರು ಗೊಬ್ಬರವುಂಡು, ಭೂಮಿಯಾಳಕೆ ನೂರು ನಾಲಗೆಯ ಚಾಚಿ
ಹೊಸಬಾಳ ಚಿಗುರು ಹೂ ಹಣ್ಣುಗಳ ಬಸಿರಲ್ಲಿ ಹೊತ್ತಿರುವ
ಜೀವಯಜ್ಞ.
೩
ವರುಷ ವರುಷಕೆ ನಮಗು ನಿಮಗೂ ಬೇವು ಬೆಲ್ಲದ ಯುಗಾದಿ.
ಬಿಡುಗಡೆಯ ಪಡೆದ ಈ ನಾಡು ಹುಡುಕುತಿದೆ ಸರ್‍ವೋದಯದ
ಸುಖದ ಹಾದಿ.
ಐದೈದು ವರುಷಗಳ ಸೋಪಾನವನ್ನೇರಿ ಆಪಾದಮಸ್ತಕವ ನೋಡಿಕೊಂಡು ನವಯುಗಾರಂಭದಲಿ ಅಂಬೆಗಾಲಿಟ್ಟ ಶಿಶು ಆಗಲೇ ಬೆಳೆದು ನಿಂತು
ಹಾಲಿನ ಬಾಟ್ಲಿ ಬಿಟ್ಟು, ಬಟ್ಟಲನ್ನವ ತೊರೆದು ತನ್ನಿಚ್ಛೆಯಲಿ ತಾನೆ
ಉಣ್ಣುತಿದೆ ಐದೈದು ಬೆರಳ ತುತ್ತು…..
‘ಸರ್‍ವೇಜನಾ ಸುಖಿನೋಭವಂತು’
ಕೆಡುಗಾಳಿ ಬಿಟ್ಟಾಗ ಈ ಮಗುವಿಗೊಂದಿಷ್ಟು ನೆಗಡಿ ಕೆಮ್ಮು;
ಜ್ವರದಲ್ಲಿ ಬಡಬಡಿಸಿ, ಒಮ್ಮೊಮ್ಮೆ ಹೆದರಿಸಿಬಿಡುವುದೂ ಉಂಟು.
ಆದರೂ ನೆರಹೊರೆಯು ಬೆರಗು ಬಡುವಂತಿಹುದು ಇದರ ಬೆಳವಣಿಗೆ;
ವರ್‍ಣಮಾಲೆಯ ಕಲಿತು, ಗುಣಿತಾಕ್ಷರವ ನೀಡಿ, ಅಂಕಿಮಗ್ಗಿಯ ಮುಗಿಸಿ
ವರ್‍ಗದಲಿ ಎಲ್ಲರಿಗೂ ಮುಂದಾಯಿತು.
ಮುಂದಿನದು ಬರೆದಂತೆ ಹಿಂದಿನದು ಮರಯುತ್ತ ಹೊರಟರೇ ಸ್ವಲ್ಪ ಕಷ್ಟ,
ಅದಕಾಗಿ ಆಗೀಗ ಆಗಬೇಕಿವಗೆ ‘ಅಜ್ಜಯ್ಯನಭಂಜನ’
ಗಾಂಧಿ ಗಾಂಧಿ ಗಾಂಧಿ
ಹೆಜ್ಜೆಹೆಜ್ಜೆಗೆ ಮನಸಿನಲ್ಲಿ ಕಡೆಯುತ್ತಿಹುದು
ಅವನ ಮನದಲಿ ಮೂಡಿ ಕೈ ಮೇಲೆ ಆಡಿ
ಹೆಗಲೇರಿ ಬೆಳೆದಂಥ ದಿವ್ಯ ಕನಸು.
ಹೊತ್ತು ಮುಳುಗಿತು ಎಂದು ಮತ್ತೆ ಹರಿದಾಡುತಿವೆ
ಸಿಕ್ಕ ಸಿಕ್ಕಡೆಗಳಲಿ ಹಾವು, ಚೇಳು;
ಕಾಡಿನಲಿ ಬೀಡು ಬಿಟ್ಟಿದ್ದ ಹುಲಿ, ಕರಡಿ, ಚಿರತೆ, ನರಿ, ತೋಳ
ನಾಡನಾಕ್ರಮಿಸಿ ಜಪ್ಪಿಸಿ ಕುಳಿತು, ಜಪಮಾಲೆ ಎಣಿಸುತಿವೆ
ಗುಂಡಾಡಿಸುತ್ತ ಬಾಲ.
ಅತ್ತ ಕತ್ತಲೆಯಲ್ಲ, ಇತ್ತ ಬೆಳಕೂ ಅಲ್ಲ;
ಮೋಟುಮರ ದೆವ್ವದಾಕಾರ ತಾಳಿರುವ ಸಂಧಿಕಾಲ.
ಎಂಥ ಕತ್ತಲೆಯಲ್ಲು ಸ್ವಂತ ತೇಜವ ಬಿಡದ
ಚಿಕ್ಕೆ ಬೆಳಕಿನ ಧೈರ್‍ಯ, ಶಾಂತಿ, ಔದಾರ್‍ಯ
ಈ ನಾಡಿನೆದೆಯಲ್ಲಿ ಮೂಡಬಹುದು;
ಇಂದಿನೀ ಕಂಬ, ತೊಲೆ, ಜಂತಿ, ತಂತಿಯ ಮೇಲೆ
ಇದರ ಬದುಕಿನ ಹಂತವೇರಲಿಹುದು:
ಮುಖ ಮುಖದ ನಡುವಿರುವ ಮಂಜು ಪರದೆಯು ಸರಿದು
ನಾಳಿನ ನವೋದಯವ ತೋರಲಿಹುದು.
*****
