ಒಂದೆ ಉಸಿರಿಗೆ ಹಸಿರ ಹೊಮ್ಮಿಸುವ; ನೂರು ಬಗೆ
ಭಾವ ಕುಸುಮವನೆತ್ತಿ ಗಾಳಿಸುಳಿಯಲಿ ಹೀಗೆ
ನರುಗಂಪ ತೇಲಿಸುವ; ಹಂಬಲದ ಸವಿದನಿಗೆ
ತುಂಬಿ ಆಲಿಸುವ; ಮನಸಿನ ಮಧ್ಯಬಿಂದುವಿಗೆ
ಕನಸು-ಕಾಮನಬಿಲ್ಲು ವರ್‍ತುಳವ ರಚಿಸಿ, ನೆಲ-
ಮುಗಿಲನೊಂದು ಸಲ ಬಂಧಿಸಿ ಜೀವ ಸ್ಪಂದಿಸುವ;
ಮೋಡದೊಡಲಿಗೆ ಮಿಂಚು ಸಂಚರಿಸಿ ಹನಿಗರೆವ
ರಾಗ ಲಹರಿಯ ತೊರೆಗಳೋಡಿ ತಬ್ಬಿವೆ ಕಡಲ.
ಕೋಟಿ ಮೈಲಂತರದ ನೀಹಾರಿಕೆಯ ನಾಡಿ-
ಮಿಡಿತ ತಟ್ಟಿತು ಕಿವಿಗೆ; ನಾದದ ಕೂದಲೆಳೆಯಲಿ
ಪೃಥ್ವಿತೂಗಿರೆ, ಸೂರ್‍ಯಚಂದ್ರರಿಗು ಜೋಕಾಲಿ.
ಪಾತಾಳಗವಿಗೆ ತೆರೆದವು ನೂರು ಬೆಳಕಿಂಡಿ.
ಹೊಕ್ಕಳ ಹುರಿಯ ಕತ್ತರಿಸಿ ಮುಗಿಯೆ ಶಹನಾಯಿ
ಆಗಸದ ಚಿಪ್ಪೊಡೆದು ಜೀವ ತೆರೆಯಿತು ಬಾಯಿ.
*****
