ಇಜಿಪ್ಷಿಯನ್ ಗಣಿತದ ಹುಡುಗಿಯನ್ನು ನೋಡುತಾ


ಇಜಿಪ್ಷಿಯನ್ ಹುಡುಗಿಯ
ನಿರಾಕಾರ
ಮಸ್ತಿಷ್ಕ,
ನಿರಾಕಾರ
ಗಣಿತದಲ್ಲೆಲ್ಲೋ ಹುದುಗಿ,

ಅಲ್ಲೇಲ್ಲೋ
ಒಳಗೆ-

ಮಾನಸ ಪಪೈರಸ್‌ನ
ಮೇಲೆ,
ಗಣ-ಉಪಗಣ
ಅಂತೆಲ್ಲಾ
ವಿಭಾಜಿಸಿ,
ಕೂಡಿ ಕಳೆದು,
ಗುಣಿಸಿ,
ಅನುಲೋಮ ವಿಲೋಮ,
ಕ್ರಯ ವಿಕ್ರಯ ಮಾಡಿ,
ಆಕಾರ ತಳೆದು
ಆಕರವಾದ
ಬೀಜಾಕ್ಷರಗಳೆಲ್ಲಾ
ಕುಣಿದು ಕುಪ್ಪಳಿಸುವಾಗ.

ಥಟ್ಟನೇ,
ಹೊರಗೆ ಕಂಡಿದ್ದು-

ಇವಳು.

ನೆತ್ತಿಯ ಮೇಲೆ,
ತೊಂಬತ್ತು ಡಿಗ್ರಿ
ಕೋನದಲ್ಲಿ,
ಉರಿಯುವ
ವರ್ಜೀನಿಯಾದ ಕೆಂಗೋಳದ,
ತೊಂಬತ್ತು ಡಿಗ್ರಿ ಉಷ್ಣಾಂಶ
-ದಲ್ಲೂ,
‘ಥೀಟಾ’ ಮಾದರಿಯ
ಕಿವಿ ಕೂಡಾ ಕಾಣದಂತೆ
ಅವುಚಿಸುತ್ತಿದ್ದ ರುಮಾಲಿನಲ್ಲಿ,
ಉಂಗುಷ್ಟವನ್ನೂ ಮರೆಸಿದ್ದ
ನಿಲುವಂಗಿಯಲ್ಲಿ,
ತಲೆ ತಗ್ಗಿಸಿ
ನಡೆವ
ಇವಳ
ಬಿರುನಡೆ.

ಮತ್ತು,

ಅಲ್ಲಿ ಇವಳ ನಾಡಿನ
ಸ್ಫಿಂಕ್ಸ್ ಮೇಲಿಲ್ಲದ,
ತ್ರಿಕೋಣ ಮೂಗಿನ
ಮೇಲಿನ,
ಇವಳ
ವರ್ತುಳದ ಕನ್ನಡಕ-
ದತ್ತ,

ಒಂದೇ ಒಂದು
ಘಳಿಗೆ-

ಎದುರಿಗೆ ಕೂದಲು
ಹಾರಿಸುತ್ತಾ,
ಜಾಗ್ ಮಾಡುತ್ತಾ,
ಮಾತ್ರ
ಎದೆ, ತೊಡೆಗೆ
ರೋಮನ್ ಐದಂಕಿಯಂತೆ
ತುಂಡುಬಟ್ಟೆಯ,
ತೊಟ್ಟ,
ಹೆಡ್‌ಫೋನಿನಿಂದ
ಅದೇ ‘ಥೀಟಾ’ ಮಾದರಿಯ
ಕಿವಿಮುಚ್ಚಿದ್ದ,
ಅಮೇರಿಕನ್ ಹುಡುಗಿಯ
ಕಣ್ಣಿಂದ,
ಅವಳೀ ಘನ,
ಪಂಚಕೋನಾಕೃತಿಗಳಿಂದ,
ಸಿಡಿದೆದ್ದ,
ಒಂಬತ್ತು/ಹನ್ನೊಂದರ
ಕಿಡಿನೋಟ!

ಇವಳತ್ತ,
ಅವಳು ನೋಡುವ,
ಅವಳದ್ದೇ ಆದ
ಇನ್ನೊಂದು
ಆಯಾಮ!

ಪೂರ್ವಿಕರ
ನಿರಾಪಾಯ
ಗಣಿತದ ಮೇಲೆ
ಕಟ್ಟಿದ ಗಟ್ಟಿ
ಪಿರಮಿಡ್‌ಗೆ
ಆಕಾಶವಿರಿಯುವ
ಮೊನೆ!!

‘ಹೆಸರು
ಹಮೀದಾ ಆದರೂ,
ಆಕಡೆಯ
ಭಾಸ್ಕರಂಗೂ
ಈಕಡೆಯ
ಪೈಥಗೊರಸ್‌ಗೂ
ನಡುವೆ
ನಂಟು
ಗಂಟುಹಾಕಿದ್ದು
ನಾನು’- ಅಂತಾ,
ಎದೆಯುಬ್ಬಿಸಿ,
ಇವಳು
ಅವಳಿಗೆ
ಹೇಳಬೇಕಿತ್ತು,

ಅಂತ ನನಗನ್ನಿಸಿತು.
*****
ಮೇ ೨೮, ೨೦೦೨

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.