ಕೊಡೆ

ಚನ್ನವೀರ ಕಣವಿ

ಕೊಡೆ ಹಿಡಿಯುತ್ತೇವೆ:
ಬಿಸಿಲಿಗೆ, ಮಳೆಗೆ, ದೊಡ್ಡವರ ಕಾರು
ಸಿಡಿಸುವ ಕೊಳೆಗೆ, ಆಗದವರು
ಎದುರಿಗೆ ಬಂದಾಗ ಮರೆಗೆ-
ಹೊತ್ತು ಬಂದಂತೆ.

ಮತ್ತೊಬ್ಬರ ತಲೆಗೆ
ನೆರಳು ಮಾಡುವ ಉಸಾಬರಿಗೆ
ಹೋಗಿ ಚುಚ್ಚುತ್ತೇವೆ;
ಮೆಚ್ಚುತ್ತೇವೆ: ಹೆಣ್ಣು ಏರಿಸಿದ
ಹೂವಿನ ಕೊಡೆಗೆ-ತಂತಿ ಮೇಲಿನ ನಡಿಗೆ.

ಏಕಚಕ್ರಾಧಿಪತಿಯ ಬೆಳ್ಗೊಡೆಗೆ
ಬೆಂಕಿ ಹಚ್ಚುತ್ತೇವೆ. ಮೆರೆಸುತ್ತೇವೆ
ಉಧೋ ಉಧೋ ಎಂದು
ಛತ್ರ ಚಾಮರ ಹಿಡಿದು
ಪಲ್ಲಕ್ಕಿಯಲ್ಲಿ ಬೇಕಾದ ದೇವರನಿಟ್ಟು.

ಹೊತ್ತು ಹೋದಂತೆ ಮಡಿಚಿ
ಹಿಡಿಯುತ್ತೇವೆ ನಮ್ಮ ಅಭಿರುಚಿ-
ಗೆ ತಕ್ಕಂತೆ: ಬೆದರಿಸಲಿಕ್ಕೆ
ನಾಯಿಗೆ, ನಡೆಯಲಿಕ್ಕೆ
ಊರುಗೋಲಾಗಿ.
*****
೧೯೭೪

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.