ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿಗಳು
ಕಾರ್ಯಕ್ರಮ : ಎಚ್.ಎ.ಎಲ್.ನ ‘ವಿಮಾನ’ ಸಂಘದ ವಾರ್ಷಿಕೋತ್ಸವ ಮತ್ತು ಹಿರಿಯ ನಟ ಅಶ್ವತ್‌ರವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
ಸ್ಥಳ : ಡಾ||ರಾಜ್‌ಕುಮಾರ್ ವೇದಿಕೆ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
ದಿನಾಂಕ : ೦೪-೦೬-೨೦೦೬
ವೇಳೆ : ಬೆಳಿಗ್ಗೆ ೧೧-೩೦
ಆಯೋಜನೆ : ’ವಿಮಾನ’ ಸಂಘ
ನಟ ನಟಿಯರು ಅವಕಾಶಗಳಿದ್ದ ಕಾಲದಲ್ಲಿ ಸಂಪಾದನೆ ಮಾಡಿದ್ದನ್ನು ದುಂದುವೆಚ್ಚ ಮಾಡುತ್ತಾ ಹೋದರೆ ಮುಂದೆ ಅವಕಾಶಗಳಿಲ್ಲದ ಮುಪ್ಪಿನ ಕಾಲದಲ್ಲಿ ತೊಂದರೆಪಡಬೇಕಾದೀತು ಎಂದು ಹಿರಿಯ ನಟ ಕೆ.ಎಸ್.ಅಶ್ವತ್ ಕಿರಿಯರಿಗೆ ತಿಳಿಮಾತು ಹೇಳಿದರು.
ಅವರು ಎಚ್.ಎ.ಎಲ್. ಕಾರ್ಖಾನೆಯ ’ವಿಮಾನ’ ಸಂಘ ಕೊಡಮಾಡುವ ’ಕಾಯಕಶ್ರೀ’ ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಮದರಾಸಿನಲ್ಲಿ ಕಳೆದ ಆರಂಭದ ದಿನಗಳನ್ನು ಜ್ಞಾಪಿಸಿಕೊಂಡ ಅವರು, ಇದ್ದ ಸರ್ಕಾರಿ ನೌಕರಿಯನ್ನು ಬಿಟ್ಟು, ಚಿತ್ರರಂಗದಲ್ಲೇ ನನ್ನ ನೆಲೆ ಎಂದುಕೊಂಡು ಅಲ್ಲಿಗೆ ಹೋದೆ. ಆದರೆ ಅಲ್ಲಿ ನನಗೆ ಅಂಥ ಸ್ವಾಗತ ಸಿಗಲಿಲ್ಲ, ಅದೇ ಸಂದರ್ಭದಲ್ಲಿ ಕರ್ಣಾಟಕದಲ್ಲಿ ಅ.ನ.ಕೃ ಅವರ ನಾಯಕತ್ವದಲ್ಲಿ ಕನ್ನಡ ಚಲನಚಿತ್ರರಂಗದ ಪುನರುತ್ಥಾನಕ್ಕಾಗಿ ಚಳುವಳಿ ಆರಂಭವಾಗಿತ್ತು. ಅವರ ಕರೆಗೆ ಓಗೊಟ್ಟ ನಮ್ಮಂತ ನಟರು ’ಕನ್ನಡ ಚಲನಚಿತ್ರ ಕಲಾವಿದರ ಸಂಘ ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸತೊಡಗಿದೆವು. ೧೯೬೨ ರ ಗಾಳಿಗೋಪುರ ಚಿತ್ರದಿಂದ ಜನ ನನ್ನನ್ನು ಗುರುತಿಸಲಾರಂಭಿಸಿದರು ಎಂದು ಹೇಳಿದರು.
ಅಂದಿನ ಕಾಲದಲ್ಲಿ ಕನ್ನಡಿಗರಿಗೆ ಕನ್ನಡ ನಟರ ಬಗ್ಗೆ ಅಂತಹ ಕುತೂಹಲಗಳಿರಲಿಲ್ಲ ಎಂದ ಅಶ್ವತ್, ವರದಾ ನದಿಯ ಪ್ರವಾಹಕ್ಕೆ ಸಿಕ್ಕಿ ಮೃತಪಟ್ಟವರ ಸಹಾಯಾರ್ಥ ಕನ್ನಡ ಚಿತ್ರರಂಗದವರು ಪ್ರವಾಸ ಮಾಡಿ ನಿಧಿ ಸಂಗ್ರಹಿಸಿಕೊಟ್ಟ ನಂತರ, ನಟ ನಟಿಯರ ಬಗ್ಗೆ ಗೌರವ ಮೂಡಿತು ಎಂದು ಹೇಳಿದರು.
ಕನ್ನಡ ಚಿತ್ರರಂಗ ಈಗ ಆರ್ಥಿಕವಾಗಿ ಬಲವಾಗಿದ್ದು ಪೋಷಕ ನಟರೂ ಸೇರಿದಂತೆ ಎಲ್ಲರಿಗೂ ಒಳ್ಳೆಯ ಸಂಭಾವನೆ ಸಿಗುತ್ತಿದೆ. ಹಿಂದೆ, ಕೊಟ್ಟರೆ ಉಂಟು ಇಲ್ಲದಿದ್ದರೆ ಇಲ್ಲ . ನನ್ನ ಕಷ್ಟದ ದಿನಗಳಲ್ಲಿ ನಾನು ಯಾರನ್ನೂ ಏನನ್ನೂ ಕೇಳಿದವನಲ್ಲ ಎಂದ ಅಶ್ವತ್, ಇದು ಜಂಭದ ಮಾತಲ್ಲ, ಸ್ವಾಭಿಮಾನದ ಮಾತು ಎಂದರು. ಹೊಟ್ಟೆಪಾಡಿಗಾಗಿ ನಟನೆ ಮಾಡಿದ್ದನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ’ವಿಮಾನ’ ಸಂಘದವರಿಗೆ ಕೃತಜ್ಞತೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಂಸ್ಕೃತಿ ಇಲಾಖೆಯ ಕಾ.ತ.ಚಿಕ್ಕಣ್ಣ, ಅಧಿಕಾರ ಮತ್ತು ಹಣ ನಮ್ಮ ಸಂಸ್ಕೃತಿ ಮನಸ್ಸುಗಳನ್ನು ಕೆಡಿಸದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ’ವಿಮಾನ’ ವಿಭಾಗದ ಕಾರ್ಯಪಾಲಕ ನಿರ್ದೇಶಕ ಸುಜಿತ್ ಪಂತ್ ಮತ್ತು ಗಾಯಕಿ, ನಟಿ ಎಂ.ಡಿ.ಪಲ್ಲವಿ ಯವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಮ್.ಡಿ.ಪಲ್ಲವಿ, ಮಾಧ್ಯಮಗಳಲ್ಲಿ ಕನ್ನಡ ಭಾಷೆ ಕಲುಷಿತಗೊಳ್ಳುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಚಲನಚಿತ್ರ, ರೇಡಿಯೊ, ಕಿರುತೆರೆ ಎಲ್ಲವುಗಳಲ್ಲೂ ಆಂಗ್ಲ ಮಿಶ್ರಿತ ಸಂಭಾಷಣೆಗಳನ್ನು ನಾವಿಂದು ಕೇಳಬೇಕಾಗಿದೆ, ಯುವ ಜನರೂ ಸಹ ಇದೇ ಕಲುಷಿತ ಭಾಷೆಯ ಅನುಕರಣೆ ಮಾಡುತ್ತಿದ್ದಾರೆ, ಪ್ರೇಕ್ಷಕರಾದ ನೀವು ಇದನ್ನು ಪ್ರತಿಭಟಿಸಬೇಕೆಂದು ಕರೆ ನೀಡಿದರು .
ನಂತರ ಅವರು ಅಡಿಗರ “ಯಾವ ಮೋಹನ ಮುರಳಿ ಕರೆಯಿತು” ಗೀತೆಯನ್ನು ಸುಶ್ರಾವ್ಯಗಾಗಿ ಹಾಡಿದರು.
ವಿಮಾನ ಕಾರ್ಖಾನೆಯ ಕನ್ನಡ ಸಂಘದ ಅಧ್ಯಕ್ಷ ಡಾ||ಜಿ.ಎಸ್.ಫಾಲಾಕ್ಷ ಮಾತನಾಡಿ, ಕನ್ನಡದಲ್ಲಿ ಎಲ್ಲಾ ಇದೆ-ಕನ್ನಡಿಗರ ಪಾಲ್ಗೊಳ್ಳುವಿಕೆಯೊಂದನ್ನು ಬಿಟ್ಟು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ’ವಿಮಾನ’ ವಿಭಾಗದ ಮಹಾ ವ್ಯವಸ್ಥಾಪಕರಾದ ಅಶೋಕ್ ನಾಯಕ್‌ರವರು ಮಾತನಾಡಿ, ಎಚ್.ಎ.ಎಲ್.ನಲ್ಲಿ ಕನ್ನಡದ ಕೆಲಸಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಅಶ್ವತ್‌ರವರ ಅಭಿನಯದ ಬಗ್ಗೆ ಮಾತನಾಡಿ, ಅವರ ನಟನೆ ಹೊಸ ಜವಾಬ್ದಾರಿಯುತ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳಲು ನೆರವಾಯಿತು ಎಂದರು.
ವೇದಿಕೆಯಲ್ಲಿ ಜಾನಪದ ಲೋಕದ ಅಧ್ಯಕ್ಷ ಜಿ.ನಾರಾಯಣ, ವಿಮಾನ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ ಫಾಲಾಕ್ಷ ಉಪಸ್ಥಿತರಿದ್ದರು.
ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಸುಜಿತ್ ಪಂತ್‌ರವರು ವಿತರಿಸಿದರು. ಕಾರ್ಯಕ್ರಮದಲ್ಲಿ ಬೇಲೂರು ಕೃಷ್ಣಮೂರ್ತಿ ವಿರಚಿತ ’ಅವಾಂತರದ ಅಳಿಯ’ ಎಂಬ ಹಾಸ್ಯ ನಾಟಕವನ್ನು ಪ್ರದರ್ಶಿಸಲಾಯಿತು.
ಭಾಗ್ಯಶ್ರಿ ಪ್ರಾರ್ಥಿಸಿದರು. ಸದಾನಂದ ಪೈ ಸೊಗಸಾಗಿ ನಿರೂಪಣೆ ಮಾಡಿ ವಂದಿಸಿದರು.
ಕಾರ್ಯಕ್ರಮ : ’ಕರ್ಣಾಟಕ ತಿಲಕ’ ಪ್ರಶಸ್ತಿ ಪ್ರದಾನ ಸಮಾರಂಭ
ಸ್ಥಳ : ಪುಟ್ಟಣ್ಣ ಚೆಟ್ಟಿ ಪುರಭವನ
ದಿನಾಂಕ: ೦೨-೦೬-೨೦೦೬
ವೇಳೆ : ಸಂಜೆ ೫-೩೦
ಆಯೋಜನೆ : ಕರುನಾಡ ರಕ್ಷಣಾ ವೇದಿಕೆ
ಸಾಧಕರನ್ನು ಗುರುತಿಸಿ ಸನ್ಮಾನಿಸಲು ಹಿಂದಿನ ಕಾಲದಲ್ಲಿ ರಾಜ-ಮಹಾರಾಜರುಗಳಿದ್ದರು. ಈಗ ಆ ಕಾರ್ಯವನ್ನು ಸರ್ಕಾರದ ಜೊತೆ ಸಂಘ-ಸಂಸ್ಥೆಗಳು ಮಾಡಬೇಕಿದೆ ಎಂದು ಜೆ.ಡಿ.ಎಸ್.ರಾಜ್ಯಾಧ್ಯಕ್ಷ ತಿಪ್ಪಣ್ಣ ಹೇಳಿದರು.
ಕರುನಾಡ ರಕ್ಷಣಾ ಸೇನೆ ಬಸವ ಜಯಂತಿಯ ಅಂಗವಾಗಿ ಕೊಡಮಾಡುತ್ತಿರುವ ’ಕರ್ಣಾಟಕ ತಿಲಕ-೨೦೦೬’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರುನಾಡ ರಕ್ಷಣಾ ಸೇನೆಯ ಕಾರ್ಯವನ್ನು ಶ್ಲಾಘಿಸಿದ ಅವರು ಸರ್ಕಾರಗಳು ಗುರುತಿಸ್೦ಅಲಾಗದ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವುದು ಆದರಣೀಯ ಎಂದರು. ಪ್ರಶಸ್ತಿ ಸ್ವೀಕರಿಸಿದ ಗಣ್ಯರಲ್ಲಿ ಆಯುರ್ವೇದ ವೈದ್ಯ ಕೆ.ಸಿ ಬಲ್ಲಾಳ್, ವಿಜಯ ಕಾಲೇಜಿನ ಪ್ರಾಂಶುಪಾಲ ಎನ್.ಜಯಪ್ಪ, ಮಹಿಳಾ ಉದ್ಯಮಿ ಸುವರ್ಣಾ ಚನ್ನಣ್ಣ, ಜನಪದ ಸಾಹಿತ್ಯದಲ್ಲಿ ಅಪಾರ ಸೇವೆ ಸಲ್ಲಿಸಿರುವ ರಿಸರ್ವ್ ಬ್ಯಾಂಕ್ ಕನ್ನಡ ಸಂಘದ ವಿ.ಎಸ್.ಕಲ್ವಾಡಿ, ಕುಂದಾಪುರದ ಜೇನು ಕೃಷಿ ತಜ್ಞ ಕಿಶನ್‌ಕುಮಾರ ಕೆಂಚನಸೂರ್, ಪೌರಾಣಿಕ ನಾಟಕ ಕ್ಷೇತ್ರದ ದುರ್ಗಮ್ಮ, ಬ್ಯಾಳಗಿ ಶಿವಪ್ರಸಾದ್, ಶಿಲ್ಪಿ ವೆಂಕಟಶ್ಯಾಮಪ್ಪ ಮುಂತಾದವರಿದ್ದರು. ಒಟ್ಟು ೨೮ ಗಣ್ಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಳದ ಮಠದ ಶಾಂತವೀರ ಸ್ವಾಮಿಗಳು ಸಮಾಜದ ಸೇವೆ ಮಾಡುವ ಮಹನೀಯರನ್ನು ಗೌರವಿಸುವುದೂ ಒಂದು ಸಾಧನೆ ಎಂದರು.
ತಿಪ್ಪಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಶಾಂತವೀರಸ್ವಾಮಿಗಳು ಸನ್ಮಾನಿತರಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಯುರ್ವೆದ ವೈದ್ಯ ಕೆ.ಸಿ.ಬಲ್ಲಾಳ್ ನಾವು ಮಾಡಿದ ಅಳಿಲು ಸೇವೆಗೆ ಈ ಸನ್ಮಾನ ಬಹಳ ಹೆಚ್ಚೇ ಆಯಿತು ಎಂದರು. ಆಯುರ್ವೇದ ನಮ್ಮ ದೇಹಕ್ಕೆ, ಆಹಾರ ಪದ್ಧತಿಗಳಿಗೆ ಹೊಂದಿಕೆಯಾಗುವ ಪುರಾತನ ವೈದ್ಯ ಪದ್ಧತಿ ಆದ್ದರಿಂದಲೇ ಅದು ತನ್ನ ಪ್ರಾಧಾನ್ಯತೆಯನ್ನು ಇಂದಿಗೂ ಉಳಿಸಿಕೊಂಡಿದೆ ಎಂದರು.
ಅರುಣ ಚಂದ್ರಶೇಖರ ಪ್ರಾರ್ಥನೆ ಮಾಡಿ, ನಿರೂಪಿಸಿದರು. ಕರುನಾಡ ಸೇನೆಯ ರಾಜ್ಯಾಧ್ಯಕ್ಷ ಲೋಕನಾಥ್ ವಂದಿಸಿದರು.
ಕಾರ್ಯಕ್ರಮ :”ಕನ್ನಡದ ಮುತ್ತಿನ ಕಥೆ ರಾಜಕುಮಾರ್” ಪುಸ್ತಕ ಬಿಡುಗಡೆ ಸಮಾರಂಭ
ಸ್ಥಳ : ಯವನಿಕ ಸಭಾಂಗಣ , ನೃಪತುಂಗ ರಸ್ತೆ, ಬೆಂಗಳೂರು
ದಿನಾಂಕ: ೦೧-೦೬-೨೦೦೬
ವೇಳೆ : ಸಂಜೆ ೪-೩೦
ಪರಿಪೂರ್ಣ ವ್ಯಕ್ತಿಗಳೆನಿಸಿಕೊಳ್ಳಲು ತಪ್ಪುಗಳನ್ನು ಒಪ್ಪಿಕೊಳ್ಳುವ ಮನೋಭಾವವಿರಬೇಕು, ಸಾಮಾನ್ಯರೂ ಅನುಸರಿಸಬಹುದಾದ ಸಾಧಕರ ಗುಂಪಿಗೆ ಡಾ||ರಾಜ್ ಸೇರುತ್ತಾರೆ, ಇಂತಹ ಪ್ರಭಾವವುಳ್ಳ ವ್ಯಕ್ತಿಗಳು ಕೆಲವೇ ಕೆಲವರು ಎಂದು ತರಂಗ ಪತ್ರಿಕೆಯ ಸಂಪಾದಕಿ ಸಂಧ್ಯಾ.ಎಸ್.ಪೈ ಹೇಳಿದರು.ಅವರು ಸಿನಿಮಾ ಸಾಹಿತ್ಯ ಪ್ರಕಾಶನ ಹೊರತಂದಿರುವ ಪತ್ರಕರ್ತ ಬಿ.ಗಣಪತಿಯವರ “ಕನ್ನಡದ ಮುತ್ತಿನ ಕಥೆ ರಾಜಕುಮಾರ್” ಕೃತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಈ ಪುಸ್ತಕ ಯುವಜನತೆಗೆ ದಾರಿ ದೀಪಿಕೆಯಾಗಲಿ ಎಂದು ಅವರು ಹಾರೈಸಿದರು.
ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಡಾ||ರಾಜ್‌ರವರ ವ್ಯಕ್ತಿತ್ವವನ್ನು ಸೀಮಿತ ಶಬ್ದಗಳಲ್ಲಿ ಹಿಡಿದಿಡಲಾಗದು, ಒಂದು ಮಾತು ಅಥವಾ ಘಟನೆಯ ಮೂಲಕ ರಾಜ್ ವ್ಯಕ್ತಿತ್ವ ಅನಾವರಣವಾಗದು. ಅವರ ವಿನಯ, ಮತ್ತು ಶ್ರಮದೊಂದಿಗೆ ಬೆರೆತ ಪ್ರತಿಭೆ ಇತರರಿಗೆ ಆದರ್ಶಪ್ರಾಯ ಎಂದು ಹೇಳಿದರು. ಡಾ||ರಾಜ್‌ರವರು ತಮ್ಮ ವಿನಯ ಮತ್ತು ಸಜ್ಜನಿಕೆಯಿಂದಲೇ ಮೇರುನಟರಾದರು, ಕನ್ನಡದ ಕಣ್ಮಣಿಯಾದರು ಎಂದು ಹೇಳಿದ ಭಟ್, ವಿಶ್ವಾಸ ಮತ್ತು ನಂಬಿಕೆಯ ಬಗೆಗೆ ಮಾತನಾಡಿ, ಪತ್ರಕರ್ತರಿಗೆ ಈ ಎರಡೂ ಗುಣಗಳ ಅಗತ್ಯವಿದೆ ಮತ್ತು ಇವೆರಡೂ ಬಿ.ಗಣಪತಿ ಅವರಲ್ಲಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಮಾತನಾಡಿ, ಡಾ|| ರಾಜಕುಮಾರ್ ವ್ಯಕ್ತಿತ್ವದಲ್ಲಿ ವಿಕಾರ, ವಿಕೃತಿಗಳಿರಲಿಲ್ಲ, ಹೆಚ್ಚು ನಿರೀಕ್ಷಿಸಿದಷ್ಟೂ ಚೆನ್ನಾಗಿ ನಟಿಸುತ್ತಿದ್ದರು, ರಾಜ್‌ರವರು ಸಾಂಸ್ಕೃತಿಕ ಮತ್ತು ಸಾಮಾಜಿಕ ಒತ್ತಡಗಳ ನಡುವೆ ಅರಳಿದ ಜನಪರ ನಾಯಕ ಎಂದು ಹೇಳಿದರು. ದೊಡ್ಡ ಕಲಾವಿದ ಎಂದು ರಾಜ್ ಯಾವತ್ತೂ ಭಾವಿಸಿರಲಿಲ್ಲ, ಸಾಮಾಜಿಕ ಇತಿಹಾಸಕ್ಕೆ ರಾಜ್ ಹೊಸ ಸೇರ್ಪಡೆ , ಅನುಭವ ಅವರ ಅಧ್ಯಯನ ಎಂದು ನುಡಿದ ಅವರು ರಾಜ್ ಜೀವನ ಅನುಕರಣೀಯ ಎಂದು ಹೇಳಿದರು.
ಪುಸ್ತಕದ ಕರ್ತೃ ಹಾಗು ಪತ್ರಕರ್ತರಾದ ಬಿ.ಗಣಪತಿಯವರು ಮಾತನಾಡಿ, ನನಗೆ ಕನಸುಗಳನ್ನು ಈಡೇರಿಸಿಕೊಳ್ಳಲು ಒಂದು ನೆಲೆ ಸಿಕ್ಕಿರಲಿಲ್ಲ. ಪತ್ರಿಕೋದ್ಯಮ ಅವಕಾಶ ನೀಡಿ ನನ್ನನ್ನು ಬೆಳೆಸಿತು, ಇದು ನನ್ನ ಪ್ರಥಮ ಪುಸ್ತಕ; ಡಾ||ರಾಜ್‌ರವರು ಏನು ಹೇಳಿದರೋ ಅದನ್ನಷ್ಟೇ ಬರೆದಿದ್ದೇನೆ ಎಂದು ತಿಳಿಸಿದರು.
ಶಿವರಾಜ್‌ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುನೀತ್ ರಾಜ್‌ಕುಮಾರ್, ಪ್ರಕಾಶಕ ರವಿಚಂದ್ರ ರಾವ್ ಹಾಜರಿದ್ದರು.
ಕಾರ್ಯಕ್ರಮ : ನಾಟಕ – “ಸ್ವರ್ಣಮೂರ್ತಿ”
ಸ್ಥಳ : ರವೀಂದ್ರ ಕಲಾಕ್ಷೇತ್ರ
ದಿನಾಂಕ: ೩೧-೦೫-೨೦೦೬
ವೇಳೆ : ಸಂಜೆ ೦೬-೩೦
ಆಯೋಜನೆ : ಕೆಂಪೇಗೌಡ ಜಯಂತ್ಯುತ್ಸವ ಸಮಿತಿ, ಕನ್ನಡ ಸಂಸ್ಕೃತಿ ಇಲಾಖೆ
ಅ.ನ.ಕೃ ವಿರಚಿತ, ಮ. ನಾ ಮೂರ್ತಿ ನಿರ್ದೇಶನದ ಸ್ವರ್ಣಮೂರ್ತಿ ನಾಟಕವನ್ನು ವೀಕ್ಷಿಸುವ ಅವಕಾಶವೊಂದು ಮೊನ್ನೆ ಒದಗಿಬಂತು .ಪೌರಾಣಿಕ ನಾಟಕಗಳೆಂದರೆ ನನಗೆ ಅಂತ ಆಸಕ್ತಿಯೇನಿಲ್ಲ.ಆದರೆ ಪೌರಾಣಿಕ ನಾಟಕಗಳಲ್ಲಿರುವ ನಾಟಕೀಯತೆ ನನಗೆ ಇಷ್ಟವಾಗುತ್ತದೆ. ಒಬ್ಬ ನಟನಿಗೆ ಬೇಕಾದುದು ನಾಟಕೀಯತೆಯೇ ಹೊರತು ವಾಸ್ತವಕ್ಕೆ ಹತ್ತಿರವಾಗುವಂತೆ ನಟಿಸುವುದಲ್ಲ ಎಂದೇ ನನ್ನ ಭಾವನೆ .ವಾಸ್ತವವನ್ನು ನಾಟಕೀಯವಾಗಿ ಅಭಿನಯಿಸಿದರೇ ಚೆನ್ನ.
ಸ್ವರ್ಣಮೂರ್ತಿ ನಾಟಕ ರಾಮಾಯಣದಲ್ಲಿ ರಾಮ ಗರ್ಭಿಣಿ ಸೀತೆಯನ್ನು ಪುರಪ್ರಜೆಯೊಬ್ಬನ ವ್ಯಂಗ್ಯದ ಮಾತು ಕೇಳಿ ವನವಾಸಕ್ಕೇ ಕಳುಹಿಸುವ ಸನ್ನಿವೇಷವನ್ನಾಧರಿಸಿದ್ದು, ಸಮಾಜದ ಇಂದಿನ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತದೆ.
ಸ್ವರ್ಣಮೂರ್ತಿ ನಾಟಕದ ರಾಮ ’ನೀತಿಪುರುಷ ’ ಗುಣವಾಚಕವನ್ನು ಮರೆತವನಂತೆ ಕಾಣಿಸುತ್ತಾನೆ .ರಾಜಕೀಯ ಮಹತ್ವಾಕಾಂಕ್ಷೆಗಾಗಿ ಸೀತಾಮಾತೆಯನ್ನು ಬಲಿಕೊಟ್ಟೆಯಲ್ಲ ಎಂದು ತಮ್ಮ ಲಕ್ಷ್ಮಣನೇ ಜರಿಯುತ್ತಾನೆ. ಯಾವಾಗಲೂ ಅಣ್ಣನ ಇಚ್ಛೆಯಂತೆ ನೆಡೆಯುತ್ತಿದ್ದ ಲಕ್ಷ್ಮಣ ಇಲ್ಲಿ ರಾಮನ ನಿರ್ಧಾರವನ್ನು ಪ್ರತಿಭಟಿಸುತ್ತಾನೆ . ಆದರೆ ರಾಜಾಜೆಯನ್ನು ಶಿರಸಾವಹಿಸಿ ಪಾಲಿಸಿ ಸೀತೆಯನ್ನು ಕಾಡಿಗೆ ಬಿಟ್ಟು ಬರುತ್ತಾನೆ. ವಿನಯಶೀಲೆ ಊರ್ಮಿಳೆಯೂ ರಾಮನ ನಿರ್ಧಾರವನ್ನು ಪ್ರಶ್ನಿಸುತ್ತಾಳೆ. ಸೀತೆ ಎಂದಿನಂತೆ ಶೋಷಣೆಗೆ ಒಳಗಾ(ದ)ಗುತ್ತಿರುವ ಮಹಿಳೆಯನ್ನು ಪ್ರತಿನಿಧಿಸುತ್ತಾಳೆ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಸಿದ್ಧವಾಗುವ ಇಂದಿನ ರಾಜಕಾರಣಿಗಳಿಗೂ ’ಸ್ವರ್ಣಮೂರ್ತಿ’ಯ ರಾಮನಿಗೂ ವ್ಯತ್ಯಾಸ ಕಾಣಿಸುವುದಿಲ್ಲ.
ನಾಟಕ ಮುಂದುವರೆದಂತೆ ರಾಮನ ಅಂತರಾಳ ಬಯಲಾಗುತ್ತಾ ಹೋಗುತ್ತದೆ. ಸೀತೆಯ ಸ್ವರ್ಣ ಪುತ್ತಳಿಯನ್ನು ಅಂತಃಪುರದಲ್ಲಿ ಪ್ರತಿಷ್ಠಾಪಿಸಿ ಅದರ ಮುಂದೆ ರೋಧಿಸುತ್ತ ನಿಂತ ರಾಮ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ. ಆದರೆ ಆಪ್ತಸೇವಕ(ಕಂಚುಕ)ನ ಕಣ್ಣಲ್ಲಿ ತುಚ್ಛವಾಗುತ್ತಾನೆ. ಕಂಚುಕ ರಾಮನ ನಿರ್ಧಾರವನ್ನು ಪ್ರತಿಭಟಿಸಿ ನಿವೃತ್ತಿ ಘೋಷಿಸುತ್ತಾನೆ.
ಕಾಡಿಗೆ ಕಳುಹಿಸಿದ ಸೀತೆಯನ್ನು ಮರಳಿ ಕರೆಸಿಕೋ ಎಂದು ವಸಿಷ್ಠರಾದಿಯಾಗಿ ಎಲ್ಲರೂ ಹೇಳಿದರೂ ರಾಮ ಕಠಿಣವಾಗುತ್ತಾ ಹೋಗುತ್ತಾನೆ. ಲಕ್ಷ್ಮಣ,ಊರ್ಮಿಳೆ ನಾರುಮಡಿಯನ್ನುಟ್ಟು ಕಾಡಿಗೆ ತೆರಳುತ್ತಾರೆ. ರಾಮ ಒಂಟಿಯಾಗುತ್ತಾನೆ.
ಆಗಲೆ ಅವನಿಗೆ ಅಶ್ವಮೇಧಯಾಗದ ಹುಚ್ಚು ತಲೆಗತ್ತುತ್ತದೆ. ಸೀತೆಯನ್ನು ಪಾತಿವ್ರತ್ಯದ ಪರೀಕ್ಷೆಗೊಳಪಡಿಸಬೇಕೆನ್ನುತ್ತಾನೆ. ವಸಿಷ್ಠರ ಮೂಲಕ ತನ್ನ ನಿರ್ಧಾರಗಳನ್ನು ಸೀತೆಗೆ ತಲುಪಿಸುತ್ತಾನೆ. ಸೀತೆ ದುಃಖಾತಿರೇಖದಿಂದ ಕುಸಿಯುತ್ತಾಳೆ ; ಪ್ರಾಣತ್ಯಾಗ ಮಾಡುತ್ತಾಳೆ.
ಅವಳ ಪ್ರಾಣತ್ಯಾಗದ ವಿಷಯ ವಸಿಷ್ಠರಿಂದ ತಿಳಿದ ರಾಮ ’ಪಷ್ಚಾತ್ತಾಪದ ಮೂರ್ತಿ’ ಯಾಗುತ್ತಾನೆ. ರಾಜಕಾರಣಕ್ಕಾಗಿ ಸೀತೆಯನ್ನು ಬಲಿಕೊಟ್ಟೆನಲ್ಲ ಎಂದು ’ಸ್ವರ್ಣಮೂರ್ತಿ’ಯ ಎದುರು ನಿಂತು ರೋಧಿಸುವ ದೃಶ್ಯದೊಂದಿಗೆ ನಾಟಕ ಮುಗಿಯುತ್ತದೆ.
ರಾಮ ಕಾಡಿಗೆ ಹೋಗಬೇಕಾದ ಸಂದರ್ಭದಲ್ಲಿಸೀತೆ ಸತಿಧರ್ಮವನ್ನು ಪಾಲಿಸಿದಳು. ಆದರೆ ಸೀತೆ ಕಾಡಿಗೆ ಹೋಗಬೇಕಾದಾಗ ರಾಮ ಅವಳ ಜೊತೆಗಿದ್ದು ಪತಿಧರ್ಮವನ್ನು ಪಾಲಿಸಬೇಕಿತ್ತಲ್ಲವೆ ? ಎಂದು ಲಕ್ಷ್ಮಣ ಪ್ರಶ್ನಿಸುವುದು ನಾಟಕದ ಆಶಯವನ್ನು ಎತ್ತಿಹಿಡಿಯುತ್ತದೆ.
ಶ್ರೀರಾಮನ ಪಾತ್ರಧಾರಿ ವೆಂಕಟೇಶ್, ಲಕ್ಷ್ಮಣನ ಪಾತ್ರಧಾರಿ ಸ್ಟ್ಯಾಂಪ್ ವೆಂಕಟೇಶ್ ಮುಂದೆ ಪೇಲವವಾಗುತ್ತಾರೆ. ಅದಕ್ಕೆ ಕೃತಿ, ಪಾತ್ರಕ್ಕಿಂತ ಪಾತ್ರಧಾರಿಯ ಶರೀರ, ಶಾರೀರ ಕಾರಣವಿರಬಹುದು.
ಕಂಚುಕಿ ಪಾತ್ರಧಾರಿ ಮ.ನಾ.ಮೂರ್ತಿ ತಮ್ಮ ವಿಶಿಷ್ಟ ಹಾವಭಾವಭಿನಯಗಳಿಂದ ಗಮನ ಸೆಳೆಯುತ್ತಾರೆ.
ಸೀತೆ, ಊರ್ಮಿಳೆ ಪಾತ್ರಧಾರಿಗಳ ಬಗ್ಗೆ ಹೆಚ್ಚಿಗೆ ಹೇಳುವುದೇನಿಲ್ಲ.
ಹಿನ್ನೆಲೆ ಸಂಗೀತ ಎಲ್ಲಿಯೂ ತಾಳ ತಪ್ಪುವುದಿಲ್ಲ. ಪೌರಾಣಿಕ ನಾಟಕಗಳಿಗೆ ಅಗತ್ಯವಾದ ವಿಶೇಷ ರಂಗಸಜ್ಜಿಗೆ ಮನೋಹರವಾಗಿತ್ತು. ನೆರಳು, ಬೆಳಕಿನ ಸಂಯೋಜನೆ ಪಾತ್ರಧಾರಿಗಳ ಭಾವನೆಗಳನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಯಿತು.
ಕೆಂಪೇಗೌಡ ಜಯಂತ್ಯುತ್ಸವದ ಪ್ರಯುಕ್ತ ನೆಡೆದ ನಾಟಕೋತ್ಸವದಲ್ಲಿ ಸ್ವರ್ಣಮೂರ್ತಿ ನಾಟಕವನ್ನು ’ಹರಿಹರಸುತ ಕಲಾ ಮಂಡಲಿ’ ಯ ಕಲಾವಿದರು ಅಭಿನಯಿಸಿದರು.
ಕಾರ್ಯಕ್ರಮ :ರಾಜ್ಯಮಟ್ಟದ ಸುಗಮ ಸಂಗೀತ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ
ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು
ದಿನಾಂಕ : ೨೯-೦೫-೨೦೦೬
ವೇಳೆ : ಸಂಜೆ ೦೬-೩೦
ಆಯೋಜನೆ : ’ರಮಾ’
ಮಳೆಗಾಲದ ಸಂಜೆಗಳು ಸಾಮಾನ್ಯವಾಗಿ ಮನೆಯೊಳಗೇ ಕಳೆದು ಹೋಗುತ್ತವೆ. ಹೊರಗೆ ಮಳೆ ಬೀಳುತ್ತಿದ್ದರೆ ಎಲ್ಲಿಗಾದರೂ ಹೊರಡಲು ಯಾರಿಗೂ ಮನಸ್ಸಿರುವುದಿಲ್ಲ. ಆದರೆ ಆವತ್ತಿನ ಆ ಸಂಜೆ ಹಾಗಿರಲಿಲ್ಲ. ಹೊರಗೆ ಜಿಟಿ ಜಿಟಿ ಮಳೆಯಿದ್ದರೂ ರವೀಂದ್ರ ಕಲಾಕ್ಷೇತ್ರ ಸಂಗೀತಾಸಕ್ತರಿಂದ ತುಂಬಿ ಹೋಗಿತ್ತು.ಅದು ಕರ್ಣಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್ ಪ್ರಾಯೋಜಕತ್ವದ, ಬಿ.ವಿ.ಜಗದೀಶ್ ಕುಟುಂಬ ಪ್ರತಿಷ್ಠಾನದ ಸಹಯೋಗದೊಂದಿಗೆ ’ರಮಾ’(ರತ್ನಮಾಲ ಪ್ರಕಾಶ್ ಮತ್ತು ಮಾಲತಿ ಶರ್ಮ)ಆಯೋಜಿಸಿದ್ದ ರಾಜ್ಯಮಟ್ಟದ ಸುಗಮ ಸಂಗೀತ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ.
ಕಾರ್ಯಕ್ರಮಕ್ಕೆ ಸಂಗೀತಲೋಕದ ದಿಗ್ಗಜ ಆರ್.ಕೆ.ಶ್ರೀಕಂಠನ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಿ.ಅಶ್ವತ್, ಸಂಗೀತ ನಿರ್ದೆಶಕ ಹಂಸಲೇಖ, ರತ್ನಮಾಲ ಪ್ರಕಾಶ್, ಮಾಲತಿ ಶರ್ಮ,ಲಹರಿ ರೆಕಾರ್ಡಿಂಗ್ ಕಂಪನಿಯ ವೇಲು, ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿ, ಬಿ.ವಿ.ಜಗದೀಶ್, ಐ.ಎ.ಎಸ್.ಅಧಿಕಾರಿ ಪೆರುಮಾಳ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಆಹ್ವಾನಿತರಾಗಿ ಶ್ಯಾಮಲಾ ಭಾವೆ, ಆರ್.ಕೆ.ಪದ್ಮನಾಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಂ.ಶ್ರೀನಿವಾಸ, ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಷಿ, ಬೆ.ಮ.ಪಾ ದ ಜೈರಾಜ್, ’ಸಂಗೀತ ಗಂಗಾ’(ಜಿ.ವಿ.ಅತ್ರಿಯವರ)ದ ಹೇಮಾ ಪ್ರಸಾದ್ ಮುಂತಾದವರು ಬಂದಿದ್ದರು.
ಕಾರ್ಯಕ್ರಮ ಎಚ್.ಎಸ್.ವೆಂಕಟೇಶ ಮೂರ್ತಿಯವರ “ಸಾವಿರ ಬಳ್ಳಿ ನಸು ನಗುವ ಹೂಚೆಲ್ಲಿ ಗಾಳಿ ಬಯಲಲಿ ಗಂಧ ತೇಲುತಿರಲಿ” ಆಶಯ ಗೀತೆಯೊಂದಿಗೆ ಆರಂಭವಾಯಿತು.
ಬಿ.ವಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಗಮ ಸಂಗೀತ ಕ್ಷೇತ್ರದ ಪ್ರತಿಭಾನ್ವೇಷಣೆಗಾಗಿ ತಮ್ಮ ’ಜಗದೀಶ ಕುಟುಂಬ ಪ್ರತಿಷ್ಠಾನ’ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಬಹುಕಲೆಗಳಲ್ಲಿ ಸಂಗೀತ ಕಲೆಯೇ ಶ್ರೇಷ್ಠ ಎಂದು ಸಾಹಿತಿ ಎಚ್.ಎಸ್.ವಿ.ಯವರು ಹೇಳಿದರು. ಸಾಹಿತ್ಯದಲ್ಲಿ ದೋಷಗಳಿರಬಹುದು; ಆದರೆ ಸಂಗೀತದಲ್ಲಿ ದೋಷವೆಂಬುದಿಲ್ಲ. ಸಂಗೀತ ಕಲೆ ಸಾತ್ವಿಕತೆಯನ್ನು ಎಚ್ಚರಿಸುತ್ತದೆ.ಸಂಗೀತಗಾರರು ಸರಸ್ವತಿಯ ಜಿಹ್ವಾ(ನಾಲಗೆ)ಸ್ವರೂಪರು.ಸುಗಮ ಸಂಗೀತ ಕ್ಷೇತ್ರದ ಹೊಸ ಪ್ರತಿಭೆಗಳು ಹಳೆ ನದಿಯ ಹೊಸ ಅಲೆಗಳಿದ್ದಂತೆ ಎಂದು ಅವರು ತಿಳಿಸಿದರು.
ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಎಂದಿನ ಪ್ರಾಸಬದ್ಧ ಶೈಲಿಯಲ್ಲಿ ಮಾತನಾಡಿ, ಜೀವನದಲ್ಲಿ, ಹಂಬಲ, ಅದನ್ನು ಸಾಧಿಸುವ ಛಲ, ಸಾಧಿಸಿದಾಗಿನ ಧನ್ಯತೆ ಪ್ರಮುಖ ಘಟ್ಟಗಳು, ಸಾಹಿತ್ಯವೆಂಬುದು ಜೀವನದ ಸ್ಥಿತಿಯನ್ನು ತೋರಿದರೆ ಸಂಗೀತ ಅದರ ಗತಿಯನ್ನು ತೋರುತ್ತದೆ ಎಂದರು. ಇಂದಿನ ಯಾಂತ್ರಿಕ ಗೊಂದಲದ ಪರಿಸ್ಥಿತಿಯಲ್ಲಿ ನಮ್ಮನ್ನು ಸಮಸ್ಥಿತಿಯಲ್ಲಿರಿಸಬಲ್ಲದ್ದು ಸಂಗೀತವೊಂದೇ ಎಂದು ಅವರು ತಿಳಿಸಿದರು.
ಸುಗಮ ಸಂಗೀತ ಕ್ಷೇತ್ರದ ಉಳಿವಿಗೆ ಯಾವುದೇ ಸಮಸ್ಯೆಗಳಿಲ್ಲ, ಇದ್ದರೆ ಅದು ಚಿತ್ರಸಂಗೀತಕ್ಕೆ ಮಾತ್ರ ಎಂದು ಎಸ್.ಪಿ.ಬಿ ಹೇಳಿದರು.ಮಹಾರಾಷ್ಟ್ರದಲ್ಲಿ ಸುಗಮ ಸಂಗೀತ ಕ್ಷೇತ್ರದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು ಸಿನಿಮಾ ಪ್ರಭಾವ ಇಲ್ಲದ ಕಾರ್ಯಕ್ರಮಗಳಿಗೂ ಕನ್ನಡದಲ್ಲಿ ಪ್ರೋತ್ಸಾಹವಿದೆ ಎಂಬುದಕ್ಕೆ ಅಶ್ವತ್‌ರವರ ’ಕನ್ನಡವೇ ಸತ್ಯ’ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು. ಗಾಯನ ವೃತ್ತಿಯ ಆರಂಭದ ದಿನಗಳನ್ನು ಜ್ಞಾಪಿಸಿಕೊಂಡ ಅವರು ಕರ್ನಾಟಕ ನನ್ನನ್ನು ದತ್ತು ಮಗನನ್ನಾಗಿ ಸ್ವೀಕರಿಸಿದೆ ಎಂದರು. ಪಾಶ್ಚಾತ್ಯ ಸಂಗೀತ ಪ್ರಭಾವದ ಬಗ್ಗೆ ಮಾತನಾಡಿದ ಅವರು ಯುವಜನತೆ ಇದರಿಂದ ಆಕರ್ಷಿತಗೊಂಡರೂ ಅದು ತಾತ್ಕಾಲಿಕ, ಭಾರತೀಯ ಸಂಗೀತ ನಮ್ಮ ಭಾವಗಳಲ್ಲಿ ಭದ್ರ ಬುನಾದಿ ಹಾಕಿಕೊಂಡು ಬೆಳೆಯುತ್ತಿದೆ. ನಮ್ಮ ಬಹಳಷ್ಟು ಸಂಗೀತ ಪರಿಕರಗಳು ವಿದೇಶಿಯಾದರೂ, ನಾವು ಅವುಗಳನ್ನು ನಮ್ಮ ಸಂಗೀತಕ್ಕೆ ಒಗ್ಗಿಸಿಕೊಳ್ಳುವುದರಲ್ಲಿ ಸಫಲರಾಗಿದ್ದೇವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ಸಂಗೀತವನ್ನು ಮಾಧ್ಯಮಗಳು ಮತ್ತು ಕಂಪ್ಯೂಟರ್‌ಗಳ ಸಹಾಯದಿಂದ ಸುಲಭವಾಗಿ ಅಭ್ಯಾಸ ಮಾಡಬಹುದು ಎಂದು ತಿಳಿಸಿದ ಅವರು ಆಕಾಶವಾಣಿಯಲ್ಲಿ ಸುಗಮ ಸಂಗೀತಕ್ಕೆ ಪ್ರಾಧಾನ್ಯತೆ ಕಡಿಮೆಯಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಶ್ವತ್‌ರವರ ಭಾವಗೀತೆ ಗಾಯನದಲ್ಲಿನ ತನ್ಮಯತೆಯನ್ನು ಎಸ್.ಪಿ.ಬಿಯವರು ಹೊಗಳಿದರು.
ಐ.ಎ.ಎಸ್ ಅಧಿಕಾರಿ ಪೆರುಮಾಳ್‌ರವರ ತಮಿಳು ಶೈಲಿಯ ಸ್ಪಷ್ಟ ಕನ್ನಡ ಭಾಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ಆರ್.ಕೆ.ಶ್ರೀಕಂಠನ್‌ರವರು, ಕಲಾರಸಿಕರಿರುವವರೆಗೆ ಕಲೆ ಬೆಳೆಯುತ್ತಿರುತ್ತದೆ, ಕನ್ನಡನಾಡಿನ ಸಂಗೀತ ಕ್ಷೇತ್ರ ಬಹು ದೊಡ್ಡದು, ಸುಗಮ ಸಂಗೀತಕ್ಕೂ ತನ್ನದೇ ಆದ ಶಾರೀರ, ಶರೀರ ಧರ್ಮವಿದೆ ಎಂದು ಹೇಳಿದರು. ಸಿ.ಅಶ್ವತ್, ರತ್ನಮಾಲ, ಮಾಲತಿ ಶರ್ಮ ಮುಂತಾದವರು ಸುಗಮ ಸಂಗೀತ ಕ್ಷೇತ್ರದ ತಾರೆಗಳು ಎಂದ ಅವರು ಸುಗಮ ಸಂಗೀತ ಕ್ಷೇತ್ರ ಅತಿಶಯವಾಗಿ ಬೆಳೆಯಲಿ ಎಂದು ಹಾರೈಸಿದರು.
“ನಾ ಹಾಡುವೆನು ನಿಮಗಾಗಿ” ಸುಗಮ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂವರಿಗೆ(ಪ್ರಥಮ ಹೇಮ, ದ್ವಿತೀಯ ಚಿನ್ಮಯ ಆತ್ರೇಯ, ತೃತೀಯ ದಿವ್ಯ ಹನುಮಾನ್) ಬಹುಮಾನ ವಿತರಿಸಲಾಯಿತು.
ನಂತರ ನೆಡೆದ ಸಂಗೀತ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ, ’ನಮ್ಮೂರ ಮಂದಾರ ಹೂವೆ…”ಎಂಬ ಅಶ್ವತ್‌ರವರ ಸಂಗೀತದ ಹಾಡನ್ನು ಹಾಡಿದರು. ಅಶ್ವತ್‌ರವರು ’ಮುಕ್ತ’ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಹಾಡಿದರು. ದಿವ್ಯ ಹನುಮಾನ್ ಕೆ.ಎಸ್.ನರಸಿಂಹಸ್ವಾಮಿಯವರ “ತವರ ಸುಖದೊಳೆನ್ನ ಮರೆತಿಹಳು ಎನ್ನನೆ” ಎಂಬ ಗೀತೆಯನ್ನು ಹಾಡಿದರು. ಗಾಯಕಿ ಸಂಗೀತಾ ಕಟ್ಟಿ ದ.ರಾ.ಬೇಂದ್ರೆ ರಚಿತ, ಸಿ.ಅಶ್ವತ್ ಸಂಗೀತದ “ಹಿಂದ ನೋಡದ ಗೆಳತಿ” ಗೀತೆಯನ್ನು ಹಾಡಿದರು.
ಕಾರ್ಯಕ್ರಮ ಮುಗಿದಾಗ ಮಳೆ ಬಂದು ನಿಂತ ಸ್ಥಿತಿಯಿತ್ತು.. ಮತ್ತು ಹೊರಗೆ ಮಳೆ ನಿಂತಿತ್ತು.
*****