ಕನ್ನಡ ಸಾಹಿತ್ಯ ಸಮ್ಮೇಳನ, ಅಧ್ಯಕ್ಷೆ ಸ್ಥಾನದ ಭಾಷಣ – ಮೂಡುಬಿದಿರೆ

ಧನ್ಯತೆಯ ಧ್ಯಾಸ

ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ ಈ ಮಣೆ ಹತ್ತಿ ಪ್ಲಾವಿತಳಾಗಿ, ತುಸು ಭಾವುಕಳೂ ಆಗಿ ನಿಂತಿದ್ದೇನೆ. ಮೂಡಬಿದಿರೆಯ ಈ ಮಂಜುಳ ಹರ್ಷಾಭಿಷೇಕದ ಮಂಗಳಮಯ ಸಮ್ಮೇಳನ ನನಗೆ ಪುರಾಣಗಳು ಹೇಳುವ ದೇವಪುಷ್ಪ ವೃಷ್ಟಿಯ ಪುಳಕಾನುಭವವೂ ಆಗುತ್ತಿದೆಯೆಂದು ಪ್ರಾಂಜಲವಾಗಿ ನಿವೇದಿಸುತ್ತೇನೆ.

ನನ್ನ ನಿಡುಬಾಳಿನಲ್ಲಿ ಕಂಡುಂಡ ಋತಸತ್ಯಗಳನ್ನು, ನಂಬಿ ನಡೆದ ಸಿದ್ಧಾಂತಗಳನ್ನು, ಯೋಗ್ಯ ಹಾಗೂ ಮೌಲಿಕವೆಂದು ಹೊಳೆದ ಚಿಂತನೆಗಳನ್ನು ಮನಬಿಚ್ಚಿ ನುಡಿಯಲು ನೀವೆಲ್ಲ ಸ್ಫೂರ್ತಿಯಾಗಬೇಕೆಂದು ಪ್ರಾರ್ಥಿಸುತ್ತೇನೆ. ಎಲ್ಲ ವಿಷಯಗಳನ್ನು ಕುರಿತು ಹೇಳುವ ಪ್ರಜ್ಞಾಪ್ರಭುತ್ವವಾಗಲಿ ಸರ್ವಜ್ಞತ್ವವಾಗಲಿ ನನಗೆ ಇಲ್ಲ. ನಾನು ಬಲ್ಲ ಹಾಗೂ ಗ್ರಹಿಸಿದ ವಿಚಾರಗಳನ್ನು ನಿರೂಪಿಸುವಾಗ ಕೂಡ ಸರ್ವಜ್ಞತ್ವವನ್ನು ಆರೋಪಿಸಿಕೊಂಡು ಹೂಂಕರಿಸುವ ಅಹಂಕಾರ ನನ್ನನ್ನು ಆಕ್ರಮಿಸದಿರಲಿ.

ಅಧ್ಯಕ್ಷಭಾಷಣದ ಆರಂಭದಲ್ಲಿಯೇ ಹೇಳಬೇಕಾದ ಕೆಲವು ಸಂಗತಿಗಳನ್ನು ಮೊದಲು ಪ್ರಸ್ತಾಪಿಸುತ್ತೇನೆ. ನಾನು ನಿಂತಿರುವ ವೇದಿಕೆಗೆ ಹೆಸರಿಟ್ಟಿರುವ ಮಹಾಕವಿ ರತ್ನಾಕರವರ್ಣಿಗೂ ನನ್ನ ಅಧ್ಯಯನ-ಅಧ್ಯಾಪನ ಶಿಸ್ತಿಗೂ ಅರ್ಧಶತಮಾನದ ಬೆಸುಗೆಯಿದೆ. ಪ್ರೌಢಶಾಲೆಯಲ್ಲಿ ಭರತೇಶ ವೈಭವದ ಸಾಂಗತ್ಯ ಪದ್ಯಗಳ ವಾಚನ ಪರಿಚಯವಾಗಿ, ಕಾಲೇಜು ತರಗತಿಯಲ್ಲಿ ಶತಕಗಳ ಹಾಗೂ ಸಮಗ್ರ ಭರತೇಶ ವೈಭವದ ಅನುಸಂಧಾನವಾಯಿತು. ಆ ಮಹಾಕಾವ್ಯವನ್ನು ೧೯೬೭ರಲ್ಲಿ ಪ್ರೊ.ಜಿ. ಬ್ರಹ್ಮಪ್ಪ, ಪ್ರೊ. ಹಂಪನಾ ಮತ್ತು ನಾನು, ಹೊಸ ಓಲೆಗರಿಗಳ ನೆರವಿನಿಂದ ಸಂಪಾದಿಸಿದ್ದೆವು. ಇದೀಗ ಅದರ ಮರುಮುದ್ರಣ ಮಾಡಿ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು ಈ ಸಮ್ಮೇಳನದಲ್ಲಿ ಬಿಡುಗಡೆ ಆಗುತ್ತಿದೆ. ೧೯೭೯ರಲ್ಲಿ ಡಾ. ಹಂಪನಾ ೨೩೮ ರತ್ನಾಕರನ ಹಾಡುಗಳನ್ನು ಏಕೈಕ ಹಸ್ತ ಪ್ರತಿಯ ಸಹಾಯದಿಂದ ಸಂಪಾದಿಸಿದಾಗಲೂ ನಾನು ಸಹಕರಿಸಿದ್ದೆ. ರತ್ನಾಕರನ ಕಾವ್ಯಗಳನ್ನು ಕುರಿತು ಇದೇ ಮೂಡಬಿದಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಚಾರ ಸಂಕಿರಣ ನಡೆಸಿದಾಗಲೂ ನಾನು ಭಾಗವಹಿಸಿದ್ದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಏರ್ಪಾಡಾಗುತ್ತಿದ್ದ ಉಪನ್ಯಾಸಗಳಿಗೆ ಇಲ್ಲಿಗೆ ನಾನು ಆಗಮಿಸಿದ ನೆನಪು ಹಸಿರಾಗಿದೆ. ಈ ೭೧ನೆಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಮಹಾಪೋಷಕರಾದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರು ಪಟ್ಟಾಭಿಷಕ್ತರಾದ ಶುಭ ದಿವಸ ಕೂಡ, ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನನ್ನನ್ನೂ ಬರಮಾಡಿಕೊಂಡಿದ್ದರು.

ಸಾವಿರ ಕಂಬದ ಬಸದಿ ಹೆಸರಿನ ಇಲ್ಲಿಯ ಉತ್ಕ ಷ್ಟ ತ್ರಿಭುವನ ತಿಲಕ ಚೂಡಾಮಣಿ ಚೈತ್ಯಾಲಯ ಮತ್ತು ಇತರ ಬಸದಿಗಳ ವಾಸ್ತುಶಿಲ್ಪದ ದರ್ಶನದಿಂದ ರೋಮಾಂಚಗೊಂಡಿದ್ದೇನೆ. ಆಳುಪರು, ಚೌಟರು, ಅಜಿಲರು ಮತ್ತು ಬಂಗರು ಹೊಂದಿದ್ದ ಧಾರ್ಮಿಕ ಶ್ರದ್ಧೆ, ಕಲಾಪ್ರೇಮವನ್ನು ಇಲ್ಲಿಯ ೧೮ ಜಿನಾಲಯಗಳಲ್ಲದೆ ಇನ್ನಿತರ ೧೮ ದೇವಾಲಯಗಳೂ ಕೆರೆಗಳೂ ಶಾಸನಗಳೂ ಸಾರುತ್ತಿವೆ. ಸಮಸ್ತ ಆಗಮ ಪರಂಪರೆಯ ಸಾರ ಸಮಸ್ತವನ್ನು ಗರ್ಭೀಕರಿಸಿದ ಧವಲ, ಜಯಧವಲ, ಮಹಾಧವಲದ ಏಕೈಕ ಸಂರಕ್ಷಿತ ಹಸ್ತಪ್ರತಿ ಇಲ್ಲಿನ ಶ್ರುತಭಂಡಾರದ ತವನಿಧಿಯಾಗಿ ಬೆಳಗಿದ್ದನ್ನೂ ಹಾಗೂ ವಿದ್ವನ್ಮಣಿಗಳಾದ ಶಾಸ್ತ್ರಿಗಳ ಪರಂಪರೆಯಿಂದ ಸುಶೋಭಿತವಾದುದನ್ನೂ, ಇನ್ನು ಎಂದೆಂದಿಗೂ ಸಿಗಲಾರದೆಂದು ತಿಳಿದಿದ್ದ ನಾಗವರ್ಮನ ವರ್ಧಮಾನಪುರಾಣ ಇಲ್ಲಿನ ಶ್ರುತ ಭಂಡಾರದಿಂದ ಬೆಳಕು ಕಂಡಿತೆಂಬುದನ್ನೂ, ಕನ್ನಡ ಸಾಹಿತ್ಯ ಪರಂಪರೆಯ ಉಜ್ವಲ ದೀಪಸ್ತಂಭವಾದ ವಡ್ಡಾರಾಧನೆಯ ಪರಿಷ್ಕಾರಕ್ಕೆ ಇಲ್ಲಿನ ತಾಳೆಗರಿ ಗ್ರಂಥಗಳು ಮುಖ್ಯ ಆಕರವೆಂಬುದನ್ನೂ ಕನ್ನಡ ವಿದ್ವತ್ತು ಬಲ್ಲುದು. ಕನ್ನಡ ಸಾಹಿತ್ಯ, ಸಂಸ್ಕ ತಿ, ವಾಸ್ತು, ಶಿಲ್ಪ ಮತ್ತು ಕಲೆಗಳಿಗೆ ತನ್ನ ವಿಶಿಷ್ಟ ಕೊಡುಗೆ ನೀಡಿ ಅಕ್ಷಯ ಭಂಡಾರವೆನಿಸಿದ ಮೂಡಬಿದರೆಯಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆಗೆ ನನ್ನನ್ನು ಸರ್ವಾನುಮತದಿಂದ ಆರಿಸಿದ್ದರ ಹಿಂದೆ ಅತೀತ ಶಕ್ತಿಯೊಂದು ಪ್ರವರ್ತನಶೀಲವಾಗಿರಬೇಕೆಂದು ಊಹಿಸುತ್ತೇನೆ. ರತ್ನಾಕರವರ್ಣಿಯ ಹೆಸರಿನ ವೇದಿಕೆ ಹತ್ತಿಸಿ, ಮಹಾಕವಿಯ ಹೆಗಲಮೇಲೆ ಕೂಡಿಸಿ, ಸಾಹಿತ್ಯ ಜಗತ್ತಿಗೆ ನಾನು ಕಾಣುವಂತೆ ಅಕ್ಕರೆ ತೋರಿದವರಿಗೆಲ್ಲ ಸಾರ್ದ್ರ ಹೃದಯಳಾಗಿ ನಮಸ್ಕರಿಸುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಯಂತೂ ಕರ್ನಾಟಕಕ್ಕೇ ಅಲ್ಲದೆ ಭಾರತಕ್ಕೂ ಜಗತ್ತಿಗೂ ಹಲವು ವಿಷಯಗಳಲ್ಲಿ ಮಾದರಿ. ಬಹು ಭಾಷೆಗಳವರು ಒಟ್ಟೊಟ್ಟಿಗೆ ನಗುನಗುತ್ತ ಸಾಮರಸ್ಯದಿಂದ ಬಾಳುವುದು ಸಾಧ್ಯವಿದೆ ಎಂಬ ಲಕ್ಷಣಕ್ಕೆ ಈ ಜಿಲ್ಲೆ ಲಕ್ಷ ವಾಗಿದೆ. ಅನನ್ಯ ಯಕ್ಷಗಾನ ಕಲೆಯ ತಾಯಿನೆಲ ಆಗಿರುವುದಲ್ಲದೆ ಬ್ಯಾಂಕಿಂಗ್ ಮತ್ತು ಹೋಟೆಲ್ ಉದ್ಯಮಗಳಿಗೆ ಮೇಲ್ಪಂಕ್ತಿಯಾಗಿದೆ. ಇಲ್ಲಿನ ಧರ್ಮ ಸಮನ್ವಯ, ಹೊಸದರತ್ತ ತುಡಿಯುವಿಕೆ, ಸಾಹಸಕ್ಕಾಗಿ ದೂರ ದೂರದ ಊರು-ನಾಡುಗಳಿಗೆ ದಾಂಗುಡಿಯಿಡುವ ವಿಜಗೀಷು ಪ್ರವೃತ್ತಿ ಅನುಕರಣಯೋಗ್ಯವಾದುದು. ಮುಂಬಯಿಯಲ್ಲಿರುವ ಲಕ್ಷಾಂತರ ಕನ್ನಡಿಗರಲ್ಲಿ ಬಹುಪಾಲಿನವರು ತುಳುನಾಡಿನವರು. ಪರಮದೇವಕವಿಯ ತುರಂಗಭಾರತ ಮೊದಲು ಬೆಳಕು ಕಂಡಿದ್ದು ಅಲ್ಲಿ, ತೌಳವರ ನೆರವಿನಿಂದ. ಮುಂಬಯಿ ನಗರಸಭೆ ಬ್ರಿಟಿಷರಿಗೆ ಒಪ್ಪಿಸಿದ ಮಾನಪತ್ರ ಕನ್ನಡದಲ್ಲಿದ್ದುದಕ್ಕೆ ಕಾರಣ ಇಲ್ಲಿಂದ ಅಲ್ಲಿಗೆ ಹೋಗಿ ಹೆಸರು ಮಾಡಿದ ವೀರಾಭಿಮಾನಿ ತೌಳವರು.

ಬಹುಭಾಷೆಯ ಈ ನೆಲದಲ್ಲಿ ತುಳು ಹೆಚ್ಚು ಜನರ ತಾಯಿನುಡಿ. ಕೊಂಕಣಿ ಮಾತೃಭಾಷೆಯಾಗಿರುವ ಸಹಸ್ರಾರು ಜನರಿದ್ದಾರೆ. ಬ್ಯಾರಿಗಳಿದ್ದಾರೆ. ಮೋಯ ಮಾತಾಡುವವರಿದ್ದಾರೆ. ಹೀಗೆ ಮನೆಯ ಮಾತು ತುಳುವೊ ಕೊಂಕಣಿಯೊ ಮತ್ತೊಂದೊ ಇದ್ದರೂ ಈ ಜಿಲ್ಲೆಯ ಜನರು ಶಾಲೆಯಲ್ಲಿ ಓದುವುದು ಕಲಿಯುವುದು ಬರೆಯುವುದು ಕನ್ನಡ ಭಾಷೆ. ಇವರೆಲ್ಲ ತಮ್ಮ ತುಳು ಅಥವಾ ಕೊಂಕಣಿಯಲ್ಲಿ ಪತ್ರ ಬರೆಯುವಾಗ ಬಳಸುವುದು ಕನ್ನಡ ಲಿಪಿಯನ್ನು. ಹೀಗೆ ಇಲ್ಲಿನ ಜನಪದರು ಭಾವಿಸುವುದು, ಬಾಳಿಸುವುದು ಕನ್ನಡವನ್ನು. ಮಾತೃಭಾಷೆಯಾದ ತುಳು, ಕೊಂಕಣಿಯನ್ನು ಉಳಿಸಿಕೊಂಡು ಕನ್ನಡದ ಮೇಲಾಳಿಕೆಯನ್ನು ಮಾನ್ಯಮಾಡಿದ ಇಂಥ ಹೃದಯ ಸಂಪನ್ನರ ಸಿರಿಗಂಧದ ನೆಲದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಅದರ ಕೇಂದ್ರದಲ್ಲಿ ನಿಲ್ಲುವ ಗೌರವ ಪ್ರಾಪ್ತಿಗಾಗಿ ಹರ್ಷಪುಳಕಿತಳಾಗಿದ್ದೇನೆ.

ಕನ್ನಡ – ಕರ್ನಾಟಕ : ಒಳನಾಡು

ಕನ್ನಡ ನಿನ್ನೆ ಮೊನ್ನೆ ಹುಟ್ಟಿದ ಕೂಸುಕಂದಯ್ಯನಲ್ಲ. ಅದು ಎರಡೂವರೆ ಸಾವಿರ ವರ್ಷಗಳ ಸಾತತ್ಯ, ಸತ್ವ ಮತ್ತು ಸತ್ಯ. ಅದರ ಬೆಳಕಿನಲ್ಲಿ ಕೋಟಿಕೋಟಿ ಕನ್ನಡಿಗರು ಬಾಳಿದ್ದಾರೆ. ಶತಮಾನಗಳ ಹಾಸಿನಲ್ಲಿ ರಾಜರು ಆಳಿದರು, ಸಾಹಿತ್ಯ ಕೃತಿಗಳು ಬೆಳಗಿದುವು. ಸಂಸ್ಕ ತ, ಪ್ರಾಕೃತಗಳ ಶ್ರೇಷ್ಠ ಕಾವ್ಯಗಳ ಸಾರಸಮಸ್ತವನ್ನೂ ಹೀರಿ ಸೂರೆ ಮಾಡಿ ಅದನ್ನು ಕನ್ನಡದ ಕಾಲುವೆಯಲ್ಲಿ ಹರಿಸಿದರು. (ಇದೇ ತತ್ವ ಇಂಗ್ಲಿಷ್ ಹಾಗೂ ಇತರ ವಿದೇಶೀಯ ಭಾಷೆಗಳಿಗೂ, ತಮಿಳು ತೆಲುಗು ಬಂಗಾಳಿ ಮರಾಠಿ ಹಿಂದಿ ಮೊದಲಾದ ದೇಶೀ ಭಾಷೆಗಳಿಗೂ ಅನ್ವಯವಾಗಬೇಕು). ಸಂಸ್ಕ ತ ಪ್ರಾಕೃತಗಳಿಗೆ ಕನ್ನಡ ಎಲ್ಲ ರೀತಿಯಲ್ಲೂ ಸರಿಸಮವೆಂದು ತೋರಿಸಿದ ಆದ್ಯರು ಶ್ರಮಣರು, ಶರಣರು, ದಾಸರು. ಅವರೆಲ್ಲ ಕನ್ನಡದಲ್ಲಿ ಭಾವಿಸಿ ಅನುಭವಿಸಿದರಲ್ಲದೆ ಕನ್ನಡಕ್ಕಿರುವ ಅಗಾಧ ಹಸಿವು, ಜೀರ್ಣಶಕ್ತಿ ಮತ್ತು ಅಸ್ಮಿತೆಯನ್ನು ತೋರಿಸಿದರು. ಕನ್ನಡದ ಮೂಲಕ ದುಃಖ ದುಮ್ಮಾನ ತೋಡಿಕೊಂಡರು, ಸುಖ ಸುಮ್ಮಾನ ಪಡೆದರು. ಮಾತೃ ಭಾಷೆಯನ್ನು ಸಂಪನ್ನಗೊಳಿಸಿದರು. ಕುತ್ತಿಗೆಯವರೆಗೆ ಬಂದ ಕುತ್ತಗಳಿಂದ ಕನ್ನಡವನ್ನು ಬದುಕಿಸಿದ ಮೃತ್ಯುಂಜಯರವರು. ಚಿರಂಜೀವ ಕೃತಿಗಳ ಅಮೃತ ಕಲಶ ತಂದ ವೈನತೇಯರವರು.

ಭಾಷೆಯ ಸಂರಚನೆಯಲ್ಲಿ ತರಬಹುದಾದ ಸುಧಾರಣೆಯ ದಿಕ್ಕಿನತ್ತ ಹೊರಟವರು ಸಹಜ ಪ್ರಕ್ರಿಯೆಯಿಂದ ಕೂಡಿದ ವ್ಯತ್ಯಾಸಗಳನ್ನು ಚಿಂತಿಸುವಾಗ ಮೂಲ ಬೇರು, ಬುಡ ಒಣಗದಂತೆ, ಅದರ ಪಸಿಮೆ ಇರುವಂತೆ ನೋಡಿಕೊಳ್ಳುವುದೂ ಮುಖ್ಯವೆ. ಕನ್ನಡ ಭಾಷೆ ಯಾವತ್ತೂ ನಿಂತ ನೀರಾಗದೆ ಹರಿಯುವ ತೀರ್ಥವಾಗಿದೆ. ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಇಂಗ್ಲಿಷ್ ಶಬ್ದಗಳು ವಿಲೀನಗೊಳ್ಳುವ ಪ್ರಕ್ರಿಯೆ ದಟ್ಟವಾಗುತ್ತದೆ. ಕನ್ನಡದ ಕುಂದಣದಲ್ಲಿ ಅನೇಕ ಇಂಗ್ಲಿಷ್ ಹರಳುಗಳನ್ನು ಈಗಾಗಲೆ ಕೂಡಿಸಲಾಗಿದೆ. ಕನ್ನಡ ನಿಘಂಟಿನಲ್ಲಿ ಸಾವಿರಾರು ಇಂಗ್ಲಿಷ್ ಮಾತುಗಳು ಕೋದುಕೊಂಡಿವೆ. ಪ್ರಾಕೃತ ಮತ್ತು ಸಂಸ್ಕ ತ ಶಬ್ದಗಳು ಕನ್ನಡದಲ್ಲಿ ಹಾಸುಹೊಕ್ಕಾಗಿ ಬೆರೆಯುವ ಕಾರ್ಯ ಹತ್ತನೆಯ ಶತಮಾನದ ವೇಳೆಗೆ ಪೂರೈಸಿತ್ತು. ನಡುಗನ್ನಡದ ಕಾಲಘಟ್ಟದಲ್ಲಿ ಅರಬ್ಬಿ ಮತ್ತು ಪಾರಸಿ ಭಾಷೆಗಳ ಪ್ರಭಾವವನ್ನು ಕನ್ನಡ ಅರಗಿಸಿಕೊಂಡಿತು. ಕನ್ನಡ-ಇಂಗ್ಲಿಷ್ ಭಾಷಾಸಂಕರ ಇನ್ನೂರು ವರ್ಷಗಳಿಂದ ಆಮೆವೇಗದಿಂದ ಆರಂಭವಾಗಿ ಇದೀಗ ಮೊಲದ ವೇಗ ಪಡೆಯುತ್ತಿದೆ. ಈ ಕನ್ನಡ ಇಂಗ್ಲಿಷ್ ಬೆರಸಿದ ‘ಕಂಗ್ಲಿಷ್’ ಬಳಕೆ ಹಳ್ಳಿಗಳವರೆಗೆ ದಾಂಗುಡಿಯಿಟ್ಟಿದೆ. ಅರಬ್ಬಿ, ಪಾರಸಿ, ಇಂಗ್ಲಿಷ್, ಹಿಂದಿ ಬೆರಸಿದ ‘ಹಿಂಗ್ಲಿಷ್’ಬೇರೆ ಚಾಲ್ತಿಯಲ್ಲಿದೆ. ಇವೇನೂ ಗಾಬರಿಯ ವಿಷಯಗಳಲ್ಲ. ಭಾಷೆಯಲ್ಲಿ ಮಡಿವಂತಿಕೆಗೆ ಜಾಗವಿಲ್ಲ ಎಂಬುದು. ನಿತ್ಯದ ವ್ಯವಹಾರಕ್ಕೆ ಅನಿವಾರ್‍ಯವಾದ ಹೊಸ ಶಬ್ದಗಳು ಬರಲಿ. ಆದರೆ ಅನಗತ್ಯವಾಗಿ ಇದನ್ನು ಉತ್ತೇಜಿಸಬಾರದು, ನಮ್ಮಲ್ಲಿರುವ ಮಾತುಗಳನ್ನು ಮೂಲೆಗೊತ್ತಿ ಅನಗತ್ಯವಾಗಿ ಅನ್ಯಭಾಷೆಯ ಶಬ್ದಗಳನ್ನು ಬಳಸುವುದನ್ನು ಖಂಡಿಸಬೇಕು.

ಸಾಹಿತಿಗಳಲ್ಲದೆ ವಿಶೇಷವಾಗಿ ಜನಸಾಮಾನ್ಯರು ಕನ್ನಡವನ್ನು ಸಾವಿರಾರು ವರ್ಷಗಳಿಂದ ಸಲಹಿದ್ದಾರೆ. ಅವರ ಅಸೀಮ ಅಕ್ಕರೆಯಿಂದಾಗಿ ಇಂದಿಗೂ ಕನ್ನಡ ಕೋಟಿಕೋಟಿ ಜನರ ತಾಯ್ನುಡಿಯಾಗಿದೆ. ಜನಮನ ತನ್ನ ನಾಡು ನುಡಿ ಪ್ರೇಮವನ್ನೂ ನುಡಿಜಾಣರಿಗೆ ಹೆಚ್ಚಿನ ಮನ್ನಣೆಯನ್ನೂ ಬಗೆ ಬಗೆಯಲ್ಲಿ ಪ್ರಕಟಿಸಿದ್ದಾರೆ. ಕುವೆಂಪು, ಬೇಂದ್ರೆ, ಮಾಸ್ತಿ, ವಿಸೀ ಮೊದಲಾದವರ ಹೆಸರುಗಳನ್ನು ಬಡಾವಣೆಗಳಿಗೆ, ರಸ್ತೆಗಳಿಗೆ ನಾಮಕರಣ ಮಾಡಿದ್ದಾರೆ. ಪಂಪ ಮಹಾಕವಿ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದೆ. ಕನ್ನಡಿಗರ ಈ ಉತ್ಕಟ ನಾಡುನುಡಿ ಅಭಿಮಾನ, ನುಡಿಜಾಣರಿಗೆ ನಮನ ಅನನ್ಯವೆನಿಸುವಷ್ಟಿದೆ. ಕುರಿತೋದದ ಜನರೂ ಪರಂಪರೆಗೆ ಪ್ರಾಂಜಲವಾಗಿ, ಒಮ್ಮೊಮ್ಮೆ ಅತಿಭಾವುಕವೆನಿಸುವಷ್ಟು ಸ್ಪಂದಿಸುವ ರೀತಿಗೆ ಬೆರಗಾಗಿದ್ದೇನೆ.

ಕನ್ನಡಕ್ಕೆ ಸಾರ್ವಭೌಮಸ್ಥಾನ ಇರಬೇಕೆಂಬುದಕ್ಕೆ ಯಾವ ರಾಜಕೀಯ ಪಕ್ಷವೂ ವಿರೋಧವಾಗಿಲ್ಲ. ಕನ್ನಡವನ್ನು ಬಾಲವಾಡಿ ಮತ್ತು ಪ್ರಾಥಮಿಕ ಹಂತದಿಂದಲೇ ಗಟ್ಟಿಗೊಳಿಸಬೇಕೆಂಬುದನ್ನು ಉತ್ರೆ ಕ್ಷಿಸಬೇಕಾಗಿಲ್ಲ. ಕನ್ನಡದ ಕಾಳುಗಳನ್ನು ಮಕ್ಕಳ ಮನಸ್ಸಿನ ಹೊಲದಲ್ಲಿ ಬಿತ್ತಬೇಕು. ಚಿಕ್ಕವರಿಗೆ ಪ್ರಾಮುಖ್ಯ ಕೊಡುವುದನ್ನು ರಾಷ್ಟ್ರಾಧ್ಯಕ್ಷರಾದ ಎ.ಪಿ.ಜೆ. ಅಬ್ದುಲ್ ಕಲಾಮರಿಂದ ಕಲಿಯಬೇಕು. ಬಾಲವಾಡಿಗಳ ಹಂತದಿಂದಲೇ ಕನ್ನಡದ ಕೂಸುಗಳನ್ನು ಕನ್ನಡದಿಂದ ಕಿತ್ತು ಬೇರೆ ಕಡೆ ನಾಟಿ ಮಾಡಲಾಗುತ್ತಿದೆ. ಕಿರಿಯ ಪ್ರಾಥಮಿಕ ತರಗತಿಯಿಂದ ಕನ್ನಡ ಪಠ್ಯ ಕಡ್ಡಾಯವಾಗುವುದು ಸಮಂಜಸವಾದ ನಿರ್ಧಾರ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಂತೂ ಇದು ಅತ್ಯಗತ್ಯ. ಕನ್ನಡ ಕಲಿಕೆ ಕಡ್ಡಾಯವಾಗುವುದರೊಂದಿಗೆ ಅದನ್ನು ಕಾಟಾಚಾರವಾಗಿ ಕಲಿಸಿದಂತೆ ಕಣ್ಣೊರಸುವುದಾಗಬಾರದು.

ಕನ್ನಡ ಕಲಿಸದಿದ್ದರೆ ಎಲ್ಲ ಕಾನ್ವೆಂಟುಗಳನ್ನೂ ಇಂಗ್ಲಿಷ್ ಮಾಧ್ಯಮಶಾಲೆಗಳನ್ನೂ ಸರ್ಕಾರ ತಕ್ಷಣ ರಾಷ್ಟ್ರೀಕರಣಗೊಳಿಸಿ ತನ್ನ ಆಡಳಿತ ಕಕ್ಷೆಗೆ ತೆಗೆದುಕೊಳ್ಳುವುದು ಸೂಕ್ತ. ಕನ್ನಡ ಶಾಲೆಗಳ ಸ್ಥಿತಿಗತಿ ಆಮೂಲಾಗ್ರವಾಗಿ ಸುಧಾರಣೆಯಾಗುವ ಜರೂರಿದೆ. ವಿದ್ಯೆ ಇಂದು ವಾಣಿಜ್ಯವಾಗಿದೆ. ಸಂಪಾದನೆಗೆಂದು ಹೋಟೆಲೊ ಅಂಗಡಿಯೊ ಕಲ್ಯಾಣಮಂಟಪವೊ ಪ್ರಾರಂಭ ಮಾಡುವುದಕ್ಕಿಂತ ಇಂಗ್ಲಿಷ್ ಮಾಧ್ಯಮಶಾಲೆ ತೆರೆಯುವುದು ಧಿಡೀರ್ ಧನಾಢ್ಯತೆಗೆ ರಾಜಮಾರ್ಗ. ಅದರಿಂದ ಅಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗೆ ಸುಲಭವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕನ್ನಡಶಾಲೆಗಳ ದುಸ್ಥಿತಿ ಕಣ್ಣಿಗೆ ಬಡಿಯುತ್ತದೆ. ಈ ದುರವಸ್ಥೆಯನ್ನು ತಪ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ. ಇಂಗ್ಲಿಷ್ ಶಾಲೆಗಳಿಗಿಂತ ಕನ್ನಡಶಾಲೆಗಳು ಶುಭ್ರವಾಗಿದ್ದು ಸಮವಸ್ತ್ರವೂ ಜಾರಿಗೆ ಬರಲಿ ಎಂಬುದು ಕನ್ನಡಪರ ಚಿಂತಕರ ಅಪೇಕ್ಷೆ.

ಬಾಲವಾಡಿಯಿಂದ ಸ್ನಾತಕೋತ್ತರದವರೆಗೆ, ಅಡಿಯಿಂದ ಹಿಡಿದು ಮುಡಿಯತನಕ ಇಂಗ್ಲಿಷ್ ಮಾಧ್ಯಮದ್ದೇ ದರಬಾರು. ‘ತುರ್ತುನಿಗಾ ಕೊಡಬೇಕಾದ ಆಲಯ’ದೊಳಗೆ ದೂಡಿರುವ ಕನ್ನಡ ಮಾಧ್ಯಮಕ್ಕೆ ಆಮ್ಲಜನಕವಿತ್ತು ಉಳಿಸಬೇಕಾಗಿ ಬಂದಿದೆ. ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರು ಆಳುತ್ತಿದ್ದಾಗ ಕನ್ನಡಕ್ಕೆ ಇದ್ದ ಶೈಕ್ಷಣಿಕ ಸ್ಥಾನ ಮನ್ನಣೆ, ನಮ್ಮವರೇ ಆಳುವ ಸಂದರ್ಭದಲ್ಲಿ ತಪ್ಪಿಹೋಗಿರುವುದು ವಿಪರ್ಯಾಸ.

ಇಂಗ್ಲಿಷ್ ಎಂಬುದು ಅಧಿಕಾರ, ಘನತೆ, ಗೌರವ, ಮನ್ನಣೆ, ಪ್ರತಿಷ್ಠೆ ಹಾಗೂ ಪ್ರಚಾರ ಇರುವ ಹಾಗೂ ಹೆರುವ ಭಾಷೆಯೆಂಬ ಪ್ರತೀತಿ ಪ್ರಬಲವಾಗಿ ಹಬ್ಬಿದೆ. ಕನ್ನಡಕ್ಕೆ ಕೀಳರಿಮೆ ಅಂಟಿಕೊಂಡಿದೆ. ಇದು ಸರಿದೂಗಬೇಕಾದರೆ ಇರುವ ದಾರಿ ಒಂದೇ, ಇಂಗ್ಲಿಷಿನ ಸ್ಥಾನಮಾನವನ್ನು ಕನ್ನಡವೂ ಕರ್ನಾಟಕದಲ್ಲಿ ಪಡೆಯಬೇಕು. ಕನ್ನಡವನ್ನು ಪುಷ್ಟವಾಗಿಸುವ ಸಬಲೀಕರಣದ ಕೆಲಸ ನಮ್ಮಿಂದಲೇ ಆಗಬೇಕು. ಮಕ್ಕಳಿಗಿಂತ ಹೆಚ್ಚಾಗಿ ತಾಯಿತಂದೆ ನೆಂಟರು ಇಂಗ್ಲಿಷನ್ನು ಧ್ಯಾನಿಸುತ್ತಾರೆ. ಇಂಗ್ಲಿಷಿಗೆ ಅಧಿಕಾರಾರೂಢರ ಕುಮ್ಮಕ್ಕಿನೊಂದಿಗೆ ಬಂಡವಾಳಶಾಹಿಗಳ ಬೆಂಬಲವಿದೆ. ದೇಸೀಯ ಸಂಸ್ಕ ತಿಯ ಬುಡಕ್ಕೆ ಸಿಡಿಲು ಬಡಿಯಲು ಬಿಡಬಾರದು. ಇಂಗ್ಲಿಷು ವಸಾಹತುಶಾಹಿಯ ಪರಿಣಾಮವಾಗಿ ತಲೆಯೆತ್ತಿತ್ತು. ಇಂಗ್ಲಿಷನ್ನು ನಿರಾಕರಿಸುವುದು ಸಾಧುವಲ್ಲ, ಸಾಧ್ಯವಿಲ್ಲ. ಜ್ಞಾನದ ಆ ಕಿಟಕಿಯನ್ನು ಮುಚ್ಚಬೇಕಾಗಿಲ್ಲ. ಸಾಹಿತ್ಯ ಎಲ್ಲರಿಗೂ ಅಲ್ಲ ಎಂದು ಸರ್ವಜ್ಞ ಹೇಳಿದ ಹಾಗೆ, ಇಂಗ್ಲಿಷು ಎಲ್ಲರಿಗೂ ಅಲ್ಲ. ಅದು ಕೆಲವರಿಗಷ್ಟೇ ಬೇಕು. ಆ ಕೆಲವರಿಗಾಗಿ ಕೋಟ್ಯಂತರರು ಗೊಬ್ಬರವಾಗಬೇಕಾಗಿಲ್ಲ. ಕನ್ನಡವನ್ನು ಬಿಡದೆ ಇಂಗ್ಲಿಷ್ ಶಿಕ್ಷಣ ಬಯಸುವವರು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲು ಎಲ್ಲ ಪರ್‍ಯಾಯ ಅನುಕೂಲಗಳಿರಲಿ.

ಬಹು ಭಾಷೆಗಳ ಭಾರತದಲ್ಲಿ ಶಿಷ್ಟ, ಪ್ರತಿಷ್ಠಿತ ಎಂದು ಮಾನ್ಯತೆ ಪಡೆದ ಸಾಹಿತ್ಯಕ ಭಾಷೆಗಳು ಸಾಕಷ್ಟಿವೆ. ಕೇಂದ್ರ ಸಾಹಿತ್ಯ ಅಕಾದೆಮಿ ಡೋಗ್ರಿ, ಮೈಥಿಲೀ, ರಾಜಸ್ತಾನಿ ಮತ್ತು ಸಿಂಧಿ ಭಾಷೆಗಳೂ ಸೇರಿ ೨೨ ಭಾಷೆಗಳಿಗೆ ಮಣೆಹಾಸಿದೆ. ಭಾರತದ ಯಾವೊಂದು ಅಧಿಕೃತ ಮನ್ನಣೆ ಪಡೆದ ಭಾಷೆಯಲ್ಲಿ ಬರೆದರೂ ಲೇಖಕರು ಪ್ರಾದೇಶಿಕರಾಗಿ ಪರಿಣಿತರಾಗುತ್ತಾರೆ. ಪ್ರಾದೇಶಿಕ ಪ್ರಗತಿಗೆ ಕೊಡುವ ಆದ್ಯತೆ ಅರಾಷ್ಟ್ರೀಯವಲ್ಲ. ವಿಚಿತ್ರವೆಂದರೆ ಯೂರೋಪು ರಾಷ್ಟ್ರಗಳಲ್ಲಿ ವ್ಯವಹಾರದಲ್ಲಿರುವ, ನಮಗಿಂತ ಬಹಳ ಕಡಿಮೆ ಸಂಖ್ಯೆಯ ಜನರಾಡುವ ಭಾಷೆಯಲ್ಲಿ ಬರೆದರೂ “ರಾಷ್ಟ್ರೀಯ ಲೇಖಕ”ರೆಂಬ ಮಾನ್ಯತೆಗಳಿಸುತ್ತಾರೆ. ಹಿಂದಿಯಲ್ಲಿ ಬರೆದವರಿಗೆ ಸಿಗುವ ಪ್ರಸಾರ-ಪ್ರಚಾರ ಹಿಂದಿಯೇತರ ಭಾರತೀಯ ಭಾಷೆಗಳವರಿಗೂ ಸಿಗಬೇಕು. ಇನ್ನೂ ವಿರೋಧಾಭಾಸವೆಂದರೆ, ಭಾರತದಲ್ಲಿಯು, ಕೇವಲ ಶೇಕಡಾ ಇಬ್ಬರು ಮಾತಾಡುವ ಇಂಗ್ಲಿಷ್ ಭಾಷೆಯಲ್ಲಿ ಬರೆದವರಿಗೆ ಬಹುದೂರದವರೆಗೆ, ಭಾರತವೇ ಅಲ್ಲದೆ ಅದರ ಆಚೆಗೂ ಚಾಚಿಕೊಳ್ಳುವ ಅವಕಾಶವಿದೆ. ಇದು ಇಂದು ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ಬರೆಹಗಾರರಿಗೆ ಇರುವ ವ್ಯಾಪ್ತಿಯ ಮಿತಿ ಮತ್ತು ಸವಾಲು. ಲೇಖಕರು, ಅದರಲ್ಲಿಯೂ ಲೇಖಕಿಯರು, ಈ ಪ್ರಸಾ(ಚಾ)ರ ಪ್ರವಾಹದ ಎದುರು ಈಜಿ, ದಾಟಿ “ರಾಷ್ಟ್ರೀಯ ಭಾಷೆ”, “ರಾಷ್ಟ್ರೀಯ ಸಾಹಿತಿ” ಎಂಬ ಎರಡು ಮಿಥ್‌ಗಳನ್ನು ಮೀರಬೇಕಾದ ದೊಡ್ಡ ಸವಾಲಿದೆ.

ಕನ್ನಡ : ಗಡಿನಾಡು, ಹೊರನಾಡು

ಕನ್ನಡನಾಡು ಎಂದು ಹೇಳಿದಾಗ ಅದು ಬರಿಯ ಭೌತಿಕ ಜಗತ್ತಲ್ಲ. ಕನ್ನಡ ಎನ್ನುವುದು ಐದುಕೋಟಿ ಕನ್ನಡಿಗರ ಭಾವಪ್ರಪಂಚ. ಭಾವಜಗತ್ತಿನ ಮುಂದೆ ಮೂರುಲೋಕ ಕೂಡ ಹುಲ್ಲು ಕಡ್ಡಿ. ಹೊರನಾಡ ಕನ್ನಡಿಗರ ಕಡೆ ನಿಗಾ ಇರುವುದು ಅವಶ್ಯಕ. ಮಹಾರಾಷ್ಟ್ರದಲ್ಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ದೆಹಲಿಯಲ್ಲಿ ಇರುವಂತೆ ಮುಂಬಯಿಯಲ್ಲಿಯೂ ಕರ್ನಾಟಕ ಸರಕಾರದ ಒಡೆತನವಿರುವ ಒಂದು ಕನ್ನಡ ಭವನ ಅವಶ್ಯವಿದೆ. ಒಳನಾಡಿನ ಚಟುವಟಿಕೆಯೊಂದಿಗೆ ಸಾಂಸ್ಕ ತಿಕ ಸಂಪರ್ಕ ಸದಾ ಜೀವಂತವಾಗಿದ್ದರೆ ಅಲ್ಲಿ ಕನ್ನಡ ಬಳಗ ಬಾಡುವುದಿಲ್ಲ. ಒಂದು ಕಾಲಕ್ಕೆ ಕನ್ನಡ ಶಾಲೆಗಳು ಮುಂಬಯಿಯಲ್ಲಿ ನೂರಾರಿದ್ದುವು. ಈಗಲೂ ಮುಂಬಯಿಯ ನಗರಪಾಲಿಕೆ ನೆರವಿನಿಂದ ೬೩ ಕನ್ನಡ ಶಾಲೆಗಳು ನಡೆಯುತ್ತಿವೆ. ಆದರೆ ಭಾರತದ ಎಲ್ಲ ಪ್ರಾಂತಗಳಂತೆ ಇಲ್ಲಿಯೂ ಇಂಗ್ಲಿಷ್ ಶಾಲೆಗಳು ಹಬ್ಬುತ್ತ ಕನ್ನಡಶಾಲೆಗಳನ್ನು ಕಬಳಿಸುತ್ತಿವೆ. ಗೋವಾದಲ್ಲಿ ಇಂದಿಗೂ ಕನ್ನಡ ಶಾಲೆಗಳಿವೆಯಾದರೂ ಅವರಿಗೆ ಬೇಕಾದ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಕನ್ನಡ ಪಠ್ಯಗಳನ್ನು ಉಚಿತವಾಗಿ ಪೂರೈಸುವ ಮೂಲಕ ಅಲ್ಲಿ ಕನ್ನಡದ ಕಲಿಕೆ ಬತ್ತದಂತೆ ನಿಲ್ಲಿಸಬಹುದು. ಮುಂಬಯಿ, ಕಾಸರಗೋಡು ಕನ್ನಡಿಗರ ಪ್ರತಿನಿಧಿಗಳು, ಸಾಹಿತ್ಯ ಪರಿಷತ್ತಿನಲ್ಲಿದ್ದಾರೆ. ಇದರಂತೆ ಎಲ್ಲ ಅಕಾಡೆಮಿಗಳಲ್ಲಿಯೂ ಒಬ್ಬೊಬ್ಬರು ಸದಸ್ಯರು ಇರುವುದು ಸೂಕ್ತ. ಗೋವಾಕ್ಕೂ ಒಂದು ಪ್ರಾತಿನಿಧ್ಯವಿರಲಿ. ಸಾಂಸ್ಕ ತಿಕ ಪರಂಪರೆಯ ಬೇರುಗಳ ಪಸಿಮೆ ಒಣಗದೆ ಇರಬೇಕಾದರೆ ಇಲ್ಲಿಂದ ಗೊಬ್ಬರ ನೀರು ಸರಬರಾಜು ನಿಲ್ಲಬಾರದು. ತೇವ ಇದ್ದರೆ ಜೀವ ಉಸಿರಾಡುತ್ತಿರುತ್ತದೆ.

ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಕ್ಕೆ ಆದ್ಯತೆ ಕೊಡುವ ನೆಲೆಯಲ್ಲೇ ಹೊರನಾಡ ಕನ್ನಡಿಗರಿಗೂ ಸೂಕ್ತ ಪ್ರಾತಿನಿಧ್ಯ ಇರಬೇಕೆಂಬುದನ್ನು ಮರೆಯುವಂತಿಲ್ಲ. ಮುಂಬಯಿ, ಮದರಾಸು, ಕಾಸರಗೋಡು, ಮದುರೈ, ಹೈದರಾಬಾದು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎಂ, ಎಂ.ಫಿಲ್, ಪಿ‌ಎಚ್.ಡಿ ಓದುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ಹತ್ತು ಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿವೇತನ ಕೊಟ್ಟು ಅಲ್ಲಿ ಕನ್ನಡ ಕಲಿಯಲೂ ಕಲಿಸಲೂ ಕಾಲೂರಿ ನಿಲ್ಲಲೂ ಅನುವು ಮಾಡುವುದು ಒಳ್ಳೆಯದು. ಗಡಿಯ ಎಡೆಗಳಲ್ಲೂ ಈ ಹೊರನಾಡುಗಳಲ್ಲೂ ಕನ್ನಡದ ಸೊಲ್ಲೂ ಸೊಗಡೂ ಸೂಸುವ ಹಾಗೆ ತಿಂಗಳಿಗೊಂದು ಸಾಂಸ್ಕ ತಿಕ ಕಾರ್ಯಕ್ರಮವನ್ನು ಅಕಾಡೆಮಿಗಳ ಮೂಲಕ ಏರ್ಪಡಿಸುವುದು ಸೂಕ್ತ.

ಬಳ್ಳಾರಿ ಜಿಲ್ಲೆಯ ಕಪ್ಪಗಲ್ಲು ಹಳ್ಳಿಯಲ್ಲಿ ವರ್ಷದುದ್ದಕ್ಕೂ ಮಿಡಿಯುವ ಕನ್ನಡ ನಾಡಿಯ ಸ್ಪಂದನ ಅನುಕರಣೀಯ ಯೋಗ್ಯವಾಗಿದೆ. ವಾಸ್ತವವಾಗಿ ಭಾಷೆಯ ಪ್ರೇಮ ಇನ್ನೂ ಬಲವಾಗಿ ಉಳಿದಿರುವುದು ಹಳ್ಳಿಗಳಲ್ಲೇ. ಅದರಿಂದ ಹೊಸ ಉಪಕ್ರಮಗಳು ಹಳ್ಳಿಯಿಂದಲೇ ಆರಂಭವಾಗಬೇಕು, ಪಟ್ಟಣಗಳು ಅದಕ್ಕೆ ಸ್ಪಂದಿಸಿ ಅನುರಣಿಸಲಿ. ಸಿಗರೇಟು ಪ್ಯಾಕುಗಳ ಮೇಲೆ ಸಣ್ಣಕ್ಷರಗಳಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಮುದ್ರಿಸಿದಂತಾಗಬಾರದು ‘ಕನ್ನಡ ಉಳಿಸಿ, ಕನ್ನಡ ಬಳಸಿ’ ಎಂಬ ಗೋಡೆ ಬರೆಹ. ಕನ್ನಡ ರಾಜ್ಯೋತ್ಸವ ನವೆಂಬರೋತ್ಸವ ಮಾತ್ರ ಆಗದೆ ವರ್ಷವಿಡೀ ಆಚರಣೆಯಲ್ಲಿರುವ ನಿತ್ಯೋತ್ಸವವೆನಿಸುವತ್ತ ಅಣಿಯಾಗಲಿ, ಸಮಗ್ರ ಕರ್ನಾಟಕವೇ ಕನ್ನಡಿಗರ ಆಶೋತ್ತರಗಳ ವೇದಿಕೆಯಾಗಲಿ, ಕನ್ನಡಿಗರು ಅಭಿಮಾನಶೂನ್ಯರಾಗದಿರಲಿ ಎಂಬುದು ಅಂತರಂಗದ ಮಾತಾದರೆ ಅದಕ್ಕೆ ಪುಷ್ಟಿ ಬರುತ್ತದೆ.

ಭಾಷಾವಾರು ಪ್ರಾಂತ್ಯ ರಚನೆಯಿಂದ ಆಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಕರ್ನಾಟಕದ ಏಕೀಕರಣವಾಗಿ ನಮಗೆ ಬರಬೇಕಾದ ನೆಲವೆಲ್ಲ ಒಂದು ಆಡಳಿತದ ಕೆಳಗೆ ಬಂದಿದೆ ಎಂದಲ್ಲ. ನಮಗೆ ಸೇರಬೇಕಾದ ಎಷ್ಟೋ ಭೂಮಿ, ಊರು ಕೇರಿ ಇನ್ನೂ ನೆರೆರಾಜ್ಯಗಳಲ್ಲಿ ಉಳಿದಿದೆ. ಏಕೀಕರಣಾನಂತರದ ಕರ್ನಾಟಕದಲ್ಲಿ ಅನ್ಯಭಾಷೆಗಳ ಪ್ರಾಬಲ್ಯ, ಪ್ರತಿಷ್ಠೆ, ಸವಲತ್ತು, ಶಿಕ್ಷಣಾನುಕೂಲ ತಗ್ಗಿಲ್ಲ. ಆದರೆ ಕರ್ನಾಟಕದ ಪಕ್ಕದ ಪ್ರಾಂತ್ಯಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಿತಿ ದಯನೀಯವಾಗಿದೆ, ಹಿಂದೆ ಇದ್ದುದಕ್ಕಿಂತ ಶೇಕಡಾ ಎಪ್ಪತ್ತೈದರಷ್ಟು ಕಡಿಮೆಯಾಗಿದೆ. ಕನ್ನಡ ಶಾಲಾ ಕಾಲೇಜುಗಳೂ, ಕನ್ನಡ ಶಿಕ್ಷಕರೂ ತಮಿಳುನಾಡು, ಆಂಧ್ರ ಮತ್ತು ಕೇರಳದಲ್ಲಿ ನಾಲ್ಕನೆಯ ಒಂದು ಭಾಗಕ್ಕೆ ಕುಗ್ಗಿದೆ. ಇಷ್ಟೆಲ್ಲ ಹೊಡೆತ ತಿಂದರೂ ಕನ್ನಡ ಮಾತ್ರ ತುಟಿಪಿಟಕ್ ಎನ್ನದೆ ತೆಪ್ಪಗಿದೆ. ಇದಕ್ಕೆ ತದ್ವಿರುದ್ಧವಾಗಿ ಕರ್ನಾಟಕದಲ್ಲಿ ಅನುಕೂಲಗಳು ಅಧಿಕವಿದ್ದೂ ಹೊರಭಾಷೆಗಳವರು ಆಗಾಗ ಅನ್ಯಾಯವಾಗಿದೆಯೆಂದು ಬೊಬ್ಬೆ ಹಾಕುತ್ತಿದ್ದಾರೆ. ಬಾಯಿದ್ದವರು ಬರಗಾಲದಲ್ಲಿಯೂ ಬದುಕುತ್ತಾರೆ, ಸುಭಿಕ್ಷದಲ್ಲೂ ವಿಜೃಂಭಿಸುತ್ತಾರೆ. ಇಂದು ನಮ್ಮ ಯಾವ ಜಿಲ್ಲೆಯೂ ಶುದ್ಧ ಕನ್ನಡ ಜಿಲ್ಲೆಯಾಗಿ ಉಳಿದಿಲ್ಲ. ಈ ಉದಾಸೀನ ಪ್ರವೃತ್ತಿ ಹೀಗೆಯೇ ಮುಂದುವರಿದರೆ ನಮ್ಮ ಜೀವಿತ ಕಾಲದಲ್ಲಿಯೇ ಕನ್ನಡ ಕಣ್ಮರೆಯಾಗಬಹುದೆಂಬ ಭೀತಿ ಬಂದಿದೆ. ಗಡಿಗಳೆಡೆಯಲ್ಲಿ ಕಟ್ಟೆಚ್ಚರ ಸಡಿಲವಾಗಿದೆ. ಕೊಳ್ಳೆಗಾಲ ತಾಲೂಕಿಗೆ ಸೇರಿದ ೧೮೦೦ ಎಕರೆ ಭೂಮಿಯನ್ನು ತಮಿಳುನಾಡು ಒತ್ತರಿಸಿದೆಯೆಂದು ಗುಂಡ್ಲುಪೇಟೆ ಶಾಸಕರು ಶಾಸನಸಭೆಯಲ್ಲಿ ಪ್ರಸ್ತಾಪಿಸಿದ ವರದಿ ಗಾಬರಿ ತರುತ್ತದೆ. ಈ ವಿಚಾರದಲ್ಲಿ ನಿಜಾಂಶ ಏನು, ಕರ್ನಾಟಕ ಸರ್ಕಾರ ಕೈಗೊಂಡ ಕ್ರಮವೇನು ತಿಳಿಯದು. ಇಂತಹುದು ಆಗಬಾರದು ಮತ್ತು ಇದು ಮರುಕಳಿಸಬಾರದು.

ಕೇರಳ ಸರಕಾರ ಯಾವುದೇ ರೀತಿಯಲ್ಲಿ ಕಾಸರಗೋಡಿನ ಕನ್ನಡತನವನ್ನು ನಿರ್ವೀರ್ಯಗೊಳಿಸುತ್ತ ಕ್ರಮೇಣ ಕೊಲ್ಲದಂತೆ ನಿಗಾವಹಿಸಬೇಕಾದ ಅನಿವಾರ್‍ಯ ಬಂದಿದೆ. ಅಲ್ಲಿನ ಕನ್ನಡವೆಂದಾಗ ಕೇವಲ ಕನ್ನಡ ಭಾಷೆಯಷ್ಟೇ ಅಲ್ಲ. ಅದರೊಂದಿಗೆ ಅವಿಭಾಜ್ಯವಾಗಿ ಬೆಸೆದ ಇತಿಹಾಸ, ಕೋಟೆಕೊತ್ತಲ, ಯಕ್ಷಗಾನ, ಜಾನಪದ, ಪರಂಪರೆ, ಸಾಹಿತ್ಯ ಸಂಸ್ಕ ತಿಯೂ ಸಂರಕ್ಷಿಸಲ್ಪಡಬೇಕು. ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಕಲ್ಪಿತವಾದ ಸವಲತ್ತುಗಳೂ ಕಾಸರಗೋಡು ಜಿಲ್ಲಾದ್ಯಂತ ಹಾಗೂ ಕೇರಳದ ಎಲ್ಲ ಕನ್ನಡಿಗರಿಗೂ ಸಿಗಬೇಕು. ಕಾಸರಗೋಡು ಜಿಲ್ಲೆ ಇಡಿಯಾಗಿ ಕನ್ನಡ ನಾಡಿನೊಂದಿಗೆ ಕೂಡಲಸಂಗಮವಾಗುವವರಿಗೆ ಈ ಎಲ್ಲ ಹಕ್ಕೊತ್ತಾಯ ಜೀವಂತವಾಗಿ ಜಾರಿಯಲ್ಲಿರಬೇಕು. ಜೊತೆಗೆ ಉಭಯ ಸರಕಾರಗಳು ಶಾಶ್ವತ ಅನುದಾನವನ್ನು ಮಂಜೂರು ಮಾಡಲು ನಾನು ಆಗ್ರಹಪಡಿಸುತ್ತೇನೆ. ಅಲ್ಲಿನ ಕನ್ನಡ ಶಾಲೆಗಳು ಒಣಗದಂತೆ, ದುರ್ಬಲಗೊಳ್ಳದೆ ಚೈತನ್ಯದಿಂದ ಇರುವಂತೆ ಮಾಡುವ ಜವಾಬ್ದಾರಿ ಎರಡೂ ಸರಕಾರಗಳ ಮೇಲಿದೆ. ಕೇರಳದ ಮಲೆಯಾಳ ಮಾತಾಡುವ ಲಕ್ಷಾಂತರ ಪ್ರಜೆಗಳು ಕರ್ನಾಟಕದ ದೊಡ್ಡ ಕೊಡೆಯ ಅಡಿಯಲ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆಂಬ ಸಂಗತಿಯನ್ನು ಕೇರಳ ಸರ್ಕಾರ ಮರೆಯಬಾರದೆಂಬುದನ್ನು ರಾಜಕೀಯ ಭಾಷೆಯ ನೆಲೆಯಲ್ಲಿ ಜ್ಞಾಪಿಸಬಯಸುತ್ತೇನೆ.

ಇದೇ ನೆಲೆಯ ಮಾತು ಮಹಾರಾಷ್ಟ್ರ ಸರಕಾರಕ್ಕೂ ಅನ್ವಯಿಸುತ್ತದೆ. ಮುಂಬಯಿಯಲ್ಲಿ ಹಾಗೂ ಇಡೀ ಮಹಾರಾಷ್ಟ್ರದಲ್ಲಿ ಕನ್ನಡಿಗರು ಎಂದೂ ಒಂದು ಭಾಷಾದ್ವೀಪವಾಗಿ ಪ್ರತ್ಯೇಕ ಹಕ್ಕೊತ್ತಾಯಗಳನ್ನು ಮುಂದಿಟ್ಟಿಲ್ಲ. ಅದರ ಬದಲು ಕನ್ನಡಿಗರು ಆ ರಾಜ್ಯದ ಮುಖ್ಯವಾಹಿನಿಯಲ್ಲಿ ವಿಲೀನವಾಗಿದ್ದಾರೆ. ಹೀಗಿದ್ದೂ ಅವರ ಮೇಲೆ ಆಗಾಗ ವಿನಾಕಾರಣ ಕಾಲುಕೆರೆದು ಹಲ್ಲೆ ಮಾಡುವುದು ನಿಲ್ಲಬೇಕು. ಬೆಳಗಾವಿ ಮಹಾನಗರದಲ್ಲೂ ಅದರ ಗಡಿಗಳಲ್ಲೂ ತಂಟೆ ತಕರಾರು ತೆಗೆದು ಗಲಾಟೆ ಮಾಡುವುದು ನಿಂತಿಲ್ಲ. ಇದು ಅವರ ತಪ್ಪೋ ಅಥವಾ ಅವರು ನಿಂತ ನೆಲದ ತಪ್ಪೊ ಎಂದು ಯೋಚಿಸುವಂತಿದೆ. ಇದಕ್ಕೆ ಇರುವ ಪರಿಹಾರದ ಮಹಾಮಾರ್ಗವೆಂದರೆ ಮಹಾಜನ ವರದಿಯೇ ಐತೀರ್ಪೆಂದು ತಲೆಬಾಗುವುದು. ಅದು ಜಾರಿಗೆ ಬರುವವರೆಗೆ ಈಗ ಇರುವ ವ್ಯವಸ್ಥೆಯಲ್ಲಿ ಸೌಹಾರ್ದವನ್ನು ಕಲಕಿ ರಾಡಿಗೊಳಿಸದೆ ಒಟ್ಟಿಗೆ ಬಾಳುವುದು ಮುಖ್ಯ. ಮಹಾಜನ ವರದಿಯನ್ನು ಮತ್ತೆ ತಿರುಚುವ, ತೆರೆಯುವ ಪ್ರಶ್ನೆಯೇ ಇಲ್ಲ. ಒಂದು ರೂಪಕದ ಮೂಲಕ ಇದರ ಸೂಕ್ಷ ವನ್ನು ಅನಾವರಣಗೊಳಿಸುತ್ತೇನೆ. ಒಬ್ಬ ಶಾಲಾ ಅಧ್ಯಾಪಕರಿಗೆ ಇಬ್ಬರು ಮಕ್ಕಳಿದ್ದರು. ಆ ಅಧ್ಯಾಪಕರು ಕರ್ನಾಟಕದಲ್ಲಿದ್ದಾಗ ಒಬ್ಬ ಮಗ ಹುಟ್ಟಿದ, ಮಹಾರಾಷ್ಟ್ರದಲ್ಲಿ ಇದ್ದಾಗ ಇನ್ನೊಬ್ಬ ಮಗ ಹುಟ್ಟಿದ. ಕರ್ನಾಟಕದಲ್ಲಿ ಹುಟ್ಟಿದ ಮಗನಿಗೆ ಎಷ್ಟು ಕೊಟ್ಟರೆ ಅಷ್ಟಕ್ಕೇ ತೃಪ್ತನಾಗುತ್ತಿದ್ದ. ಆದರೆ ಮಹಾರಾಷ್ಟ್ರದಲ್ಲಿದ್ದಾಗ ಹುಟ್ಟಿದವನಿಗೆ ಎಷ್ಟು ಕೊಟ್ಟರೂ ತೃಪ್ತನಾಗದೆ ಅದು ಬೇಕು, ಇದು ಬೇಕು, ಇನ್ನೂ ಬೇಕು ಎಂದು ರಂಪ ಮಾಡುತ್ತಿದ್ದ. ಮಹಾಜನ ವರದಿಯ ಸಂಬಂಧದಲ್ಲಿಯೂ ಇದೇ ಬಗೆಯ ಗದ್ದಲ ಮಾಡುತ್ತಿರುವವರು ಯಾರು ಮತ್ತು ಯಾಕೆ ಎಂದು ನಾನು ವಿಸ್ತರಿಸುವುದು ಅನಗತ್ಯ. ಇಷ್ಟು ಮಾತ್ರ ನಿಜ. ಭಗವಂತ ಬಂದರೂ ಬೆಳಗಾವಿಯನ್ನು ಕನ್ನಡಿಗರಿಗೆ ಒಪ್ಪಿಸುತ್ತಾನೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂಬುದು ಸತ್ಯಸ್ಯ ಸತ್ಯ.

ಕರ್ನಾಟಕದ ಏಕೀಕರಣವನ್ನು ೧.೧೧.೧೯೫೯ರಂದು ಅಂದಿನ ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದರು ಅಧಿಕೃತವಾಗಿ ಉದ್ಘಾಟಿಸಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ. ಜಯಚಾಮರಾಜ ಒಡೆಯರ್, ಎಸ್. ನಿಜಲಿಂಗಪ್ಪ ಮೊದಲಾದ ನಾಡಿನ ಗಣ್ಯರು ಮತ್ತು ಸಹಸ್ರ ಸಹಸ್ರ ಸಂಖ್ಯೆಯ ಕನ್ನಡಿಗರು ಭಾಗವಹಿಸಿದ ಮರೆಯಲಾಗದ ಮಹತ್ವದ ಸಮಾರಂಭದ ಅದು ಆ ಐತಿಹಾಸಿಕ ಘಟನೆಯ ನೆನಪಿಗಾಗಿ ಇದುವರೆಗೆ ಏನೊಂದೂ ಸ್ಮಾರಕ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದ ಬಳಿ ನಿರ್ಮಾಣವಾಗಿಲ್ಲ. ಕನ್ನಡ ನಾಡಿನ ಇತಿಹಾಸದಲ್ಲಿ ಅಪೂರ್ವ ಕ್ಷಣವನ್ನು ಕಂಡ ಜಾಗದಲ್ಲಿ ಸೂಕ್ತ ಸ್ಮಾರಕ ಇರಬೇಕಾದ ಅಗತ್ಯ ಮತ್ತು ಮಹತ್ವವನ್ನು ಹೆಚ್ಚು ವಿಸ್ತರಿಸಿ, ಉತ್ಪ್ರೇಕ್ಷಿಸಿ ಹೇಳುವ ಅಗತ್ಯವಿಲ್ಲ. ಈ ಕೆಲಸಕ್ಕೆ ಸರ್ಕಾರ ಕೂಡಲೆ ಗಮನ ಕೊಡಬೇಕೆಂದು ಒತ್ತಾಯಿಸುತ್ತೇನೆ.

ಒಟ್ಟು ಕನ್ನಡಿಗರಲ್ಲಿ ದೇಸೀ ಕನ್ನಡಿಗರು ವಿದೇಶೀ ಕನ್ನಡಿಗರಿಗೆ ಬೆಂಬಲಿಗರೆಂಬುದಕ್ಕೆ ಅರೆಕೊರೆ ಇರಬಾರದು. ಒಳನಾಡು ಕನ್ನಡಿಗರಿಗೆ ಇರುವ ಪ್ರಮಾಣದಲ್ಲಿ ಹೊರನಾಡು ಕನ್ನಡಿಗರಿಗೆ ಸವಲತ್ತುಗಳನ್ನು ವಿಸ್ತರಿಸುವುದಕ್ಕೆ ಮಿತಿಗಳುಂಟು, ದಿಟವೆ. ಹಾಗೆಂದು ಹೊರನಾಡು ಮತ್ತು ಹೊರದೇಶಗಳ ಕನ್ನಡಿಗರತ್ತ ನಮ್ಮ ಲಕ್ಷ ನಿಲ್ಲಬಾರದು. ಅಲ್ಲೆಲ್ಲ ಕನ್ನಡವನ್ನು ಜೀವಂತವಾಗಿ ರಿಸಲು ಸುಸಂಬದ್ಧ, ಪರಿಣಾಮಕಾರಿ ‘ಪ್ಯಾಕೇಜ್’ ಸಿದ್ಧಪಡಿಸುವುದು ಸೂಕ್ತ. ದೃಶ್ಯ-ಶ್ರವ್ಯ ಮಾಧ್ಯಮಗಳ ಪ್ರಭಾವಿಶಕ್ತಿಯನ್ನು ದುಡಿಸಿಕೊಳ್ಳುವುದರೊಂದಿಗೆ ಕಲಾವಿದರ ಪ್ರತಿಭೆಯನ್ನೂ ಬಳಸಬಹುದು. ಎಲ್ಲ ಅಕಾಡೆಮಿಗಳ ಒಟ್ಟು ಕಾರ್ಯಕ್ರಮಗಳಲ್ಲಿ ಮೂರನೆಯ ಒಂದು ಭಾಗ ಕಡ್ಡಾಯವಾಗಿ ಹೊರನಾಡು ಕನ್ನಡಿಗರ ನೆರವಿಗಿರಲಿ.

ಉದ್ಯೋಗಗಳಿಗೆ ನೇಮಕಾತಿಯ ನಿಯಮಗಳು ಕನ್ನಡಪರವಾಗಿಲ್ಲ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ನ್ಯಾಯ ಯಾವಾಗಲೂ ಲಭಿಸಿಲ್ಲ. ಸಿಬ್ಬಂದಿಯ ನೇಮಕದಲ್ಲಿ ಕರ್ನಾಟಕಕ್ಕೆ ‘ಶೂನ್ಯ ಸಂಪಾದನೆಯೊಂದೇ ಗ್ಯಾರಂಟಿ’ ಎನ್ನುವಂತಾಗಿದೆ. ಮೊದಲೇ ನಿರುದ್ಯೋಗ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿರುವಾಗ ಯುವ ಕನ್ನಡ ಚೇತನಗಳಿಗೆ ಉದ್ಯೋಗಾವಕಾಶದ ಬಾಗಿಲುಗಳು ಹೀಗೆ ಮುಚ್ಚಿದ್ದರೆ ನಾಡಿಗೆ ಹಿನ್ನಡೆ ಕಟ್ಟಿಟ್ಟ ಬುತ್ತಿ. ಕೇಂದ್ರ ಸರಕಾರ ನಡೆಸುವ ಪ್ರತಿಯೊಂದು ಪರೀಕ್ಷೆಯೂ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವುದು ಅನಿವಾರ್‍ಯ. ಕೇಂದ್ರದ ನೇಮಕಾತಿಗಳಲ್ಲಿ ಪ್ರತಿರಾಜ್ಯದವರಿಗೂ ಇಂತಿಷ್ಟು ನೌಕರಿಯೆಂದು ಶೇಕಡಾವಾರು ಪ್ರಮಾಣವನ್ನು ಗೊತ್ತುಪಡಿಸಿ ಸಮರ್ಪಕ ಪಾಲು ಕರ್ನಾಟಕಕ್ಕೆ ಸಿಗುವುದು ಅತ್ಯವಶ್ಯ. ಈ ದಿಶೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕರ್ನಾಟಕದ ಶಾಸಕರು ತಮ್ಮ ಹಕ್ಕೊತ್ತಾಯಗಳನ್ನು ಅಂಕಿ ಅಂಶಗಳೊಂದಿಗೆ ಬಲಿಷ್ಠವಾಗಿ ಪ್ರತಿಪಾದಿಸುವುದು ಅತ್ಯಗತ್ಯ. ನೈ‌ಋತ್ಯ ರೈಲ್ವೆ ಕಾರ್ಯಾಲಯ ಹೆಸರಿಗೆ ಹುಬ್ಬಳ್ಳಿಯಲ್ಲಿದ್ದರೂ ಅಲ್ಲಿಯ ಸಿಬ್ಬಂದಿಯವರು ಅನ್ಯಭಾಷಿಕರು, ಹೊರಗಿನವರು.

ಕರ್ನಾಟಕ ಏಕೀಕರಣ ಶ್ರಮ-ಪ್ರೇಮ ಮಿಶ್ರಿತ ಸಾಧನೆಯಿಂದ ಸಂಭವಿಸಿದೆ. ಬೇರೆ ಬೇರೆಯಾಗಿ ಹಂಚಿಹೋಗಿದ್ದ ನಾಡಿನ ಭಾಗಗಳು ಸೇರಿ ಒಂದಾಗಿರುವ ಕರ್ನಾಟಕವನ್ನು ಮತ್ತೆ ಸೀಳಿ ಹೋಳುಗಳಾಗಲು ಬಿಡಬಾರದು. ಪ್ರತ್ಯೇಕತೆಯ ಕೂಗು ಆರೋಗ್ಯಕರವಲ್ಲ.

ಪ್ರಾದೇಶಿಕ ಅಸಮಾನತೆ ಇದೆಯೆಂಬ ಭಾವನೆಯನ್ನು ಬೇರುಸಹಿತ ಮೊದಲು ಕಿತ್ತುಹಾಕುವುದಕ್ಕೆ ಆದ್ಯತೆಯಿರಲಿ. ನಮ್ಮನ್ನು ಅಲಕ್ಷ್ಯ ಮಾಡುತ್ತಿದ್ದಾರೆಂಬ ಅಪಸ್ವರ ಬಲಿತು ದೊಡ್ಡದಾಗಲು ಬಿಡಬಾರದು. ಇಷ್ಟು ವರ್ಷ ಒಟ್ಟಿಗೆ ಇದ್ದರೂ ನಮ್ಮತ್ತ ಕಣ್ಣೆತ್ತಿ ನೋಡಲಿಲ್ಲ, ಕಾಳಜಿ ತೋರಿಸುತ್ತಿಲ್ಲ, ಮುಖ್ಯ ವಾಹಿನಿಯಿಂದ ದೂರವಿಟ್ಟಿದ್ದಾರೆ – ಎಂಬಿತ್ಯಾದಿ ಸಂಶಯದ ಕಾಳುಗಳು ಅಖಂಡ ಕರ್ನಾಟಕದ ಯಾವ ಭಾಗದಲ್ಲೂ ಮೊಳಕೆಯೊಡೆಯಲು ಬಿಡಬಾರದು. ಕೊರತೆಯ, ಕೊರಗಿನ ಮುಲುಕು ಮೂಡದಂತೆ ಅಕ್ಕರೆಯ ತೆಕ್ಕೆಯ ಮುತುವರ್ಜಿ ನೇವರಿಸುತ್ತಿರಲಿ. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಬಳಸುವಂತಾಗಬಾರದು.

ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ನ್ಯಾಯಪೀಠ ಬೇಗ ಆಗಲಿ. ಮೀನ ಮೇಷ ಎಣಿಸಿ ಗುಣಿಸಿ ನ್ಯಾಯಯುತ ಬೇಡಿಕೆಯನ್ನು ಮುಂದೂಡುವುದು ಬೇಡ. ಜೊತೆಗೆ ಮುಖ್ಯಮಂತ್ರಿಗಳ ಕಾರ್ಯಾಲಯ ಕಚೇರಿಯೊಂದು ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ತೆರೆದು ತಿಂಗಳಲ್ಲಿ ಒಂದು ದಿನ ಉತ್ತರ ಕರ್ನಾಟಕದ ಆ ಕಚೇರಿಯಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿರುವುದು ತುಂಬ ಒಳ್ಳೆಯ ಮಾರ್ಗ. ಏಕೆಂದರೆ ವಿಶ್ವಾಸವಿದೆ ಎಂದು ಮಾತಿನಲ್ಲಿ ಹೇಳಿದರೆ ಸಾಲದು, ಜನಕ್ಕೆ ಅಂಥ ನಂಬಿಕೆ ಬರುವುದು ಬಹಳ ಮುಖ್ಯ. ಸರಕಾರದ ಇಚ್ಛಾಶಕ್ತಿ ಕನ್ನಡಪರವಾಗಿದೆ ಎಂಬುದು ಜನಮನಕ್ಕೆ ನಾಟಬೇಕು.

ನೆಲ, ಜಲ, ರೈತ : ಸಮಸ್ಯೆಯ ಚಕ್ರತೀರ್ಥ

ನೆಲ, ಜಲ, ಮತ್ತು ವಿದ್ಯುತ್ತು ಇದ್ದರೆ ರೈತರು ಬಂಗಾರ ಬೆಳೆದಾರು. ಆದರೆ ಭೂಮಿಯಿದ್ದೂ ರೈತರು ನೀರು ಇಲ್ಲದೆ ಪರದಾಡುತ್ತಿದ್ದಾರೆ. ಕ್ಷಾಮಡಾಮರಗಳಿಗೆ ನಾಂದಿ ಜಲಕ್ಷಾಮ. ಅಂತರ್ಜಲದ ಸೆಲೆಗಳು ಬತ್ತುತ್ತಾ ಪೂರಾ ನೀರು ಇಂಗಿಹೋಗುತ್ತಿದೆ. ಕೆರೆಗಳ ಹೂಳು ತೆಗೆಯುವ ಹಳೆಯ ರೂಢಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕನ್ನಡ ನಾಡು ಕೆರೆಗಳ ಬೀಡು. ಕೆರೆಗಳಲ್ಲಿ ಊಳು ತೆಗೆಸುವುದು ಅಪರೂಪವಾಗುತ್ತಿದೆ. ಜಲಾಶಯಗಳಲ್ಲಿ ತುಂಬಿದ ಊಳು ತೆಗೆಸುವುದು ಕಷ್ಟ. ಊಳು ತುಂಬಿದ ಕಾರಣ ಶೇಕಡಾ ೨೫ರಷ್ಟು ನೀರಿನ ಸಂಗ್ರಹ ಪ್ರಮಾಣ ಕಡಮೆಯಾಗಿದೆಯೆನ್ನಲಾಗಿದೆ. ಅದರಿಂದ ಈ ನಷ್ಟದ ಪ್ರಮಾಣಕ್ಕೆ ಅನುಗುಣವಾದ ಪರಿಹಾರಕ್ಕೆ, ಅಂದರೆ ಈಗ ಕರ್ನಾಟಕಕ್ಕೆ ಗೊತ್ತು ಮಾಡಿರುವ ಪ್ರಮಾಣಕ್ಕೆ, ಈ ಊಳು ತುಂಬಿದ ಕಾರಣ ಕಡಮೆ ಆಗಿರುವ ಹೊರಹರಿವಿನ ಶೇಕಡಾ ಪ್ರಮಾಣದಷ್ಟು ನೀರಿಗೆ ಹಕ್ಕೊತ್ತಾಯ ನಿಲ್ಲಿಸಬಾರದು. ಜೊತೆಗೆ ಅನುತ್ಪಾದಕ ಹಾಗೂ ನಷ್ಟದ ಬಿಳಿ ಆನೆ ಸಾಕೊ ರೀತಿಯ ಯೋಜನೆಗಳಿಗೆ ದುಡ್ಡು ಸುರಿಯುವುದನ್ನು ತಪ್ಪಿಸೋಣ ಮತ್ತು ಅಂತರ್ಜಲ ಪುನರುತ್ಪಾದಕವಾಗಿಸುವ ಜಲಯೋಜನೆಗಳಿಗೆ ಚೈತನ್ಯ ತುಂಬೋಣ.

ಹೀಗೆ ಹೇಳುವಾಗ ನಾನು ಹೆಚ್ಚು ಒತ್ತು ಕೊಡುತ್ತಿರುವುದು ಹಮ್ಮಿಕೊಂಡಿರುವ ಯೋಜನೆಗಳನ್ನು ಬೇಗ ಬೇಗ ಪೂರೈಸುವುದಕ್ಕೆ. ಚಿತ್ರಾವತಿ ತೊರೆಗೆ ಪರಗೋಡು ಅಡ್ಡಕಟ್ಟೆ ಕಟ್ಟುವುದನ್ನು ಏನೇ ಆದರೂ ನಿಲ್ಲಿಸದೆ ಪೂರೈಸಲಾಗುವುದೆಂಬ ಕೆಚ್ಚು ತೋರಿದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರನ್ನು ಅಭಿನಂದಿಸುತ್ತೇನೆ. ಇದೇ ದಿಟ್ಟ ನಿಲುವನ್ನು ಇತರ ನೀರಾವರಿ ಯೋಜನೆಗಳಿಗೂ ತೋರಿಸಿದರೆ “ಅಭಿನವ ಭಗೀರಥ” ರೆಂಬ ಕೀರ್ತಿಗೆ ಪಾತ್ರರಾಗಬಹುದು. ಬಚಾವತ್ ನ್ಯಾಯಾಧಿಕರಣದ ‘ಎ ಸ್ಕೀಂ’ ಶಿಫಾರಸಿನಂತೆ ಕೃಷ್ಣಾನದಿ ಕೊಳ್ಳದ ಹಳ್ಳಗಳಿಂದ ಸಿಗುವ ನೀರಿನ ಪಾಲನ್ನು ಬಳಸಿದಂತೆ ‘ಬಿ ಸ್ಕೀಂ’ ನ ಹೆಚ್ಚುವರಿ ನೀರನ್ನೂ ಕರ್ನಾಟಕ ಧಾರಾಳವಾಗಿ ಬಳಸುವ ಧೈರ್ಯ ಮತ್ತು ವಿವೇಕ ತೋರಬೇಕು. ಆಂಧ್ರ ಸರಕಾರ ಈ ಕೆಲಸ ಮಾಡಿದೆ. ಸಿಂಗಟಾಲೂರು ನೀರಾವರಿ ಯೋಜನೆಯ ಗಾತ್ರವನ್ನು ಹಿಗ್ಗಿಸಿದ್ದು ‘ಬಿ ಸ್ಕೀಂ’ಗೆ ಅನುಗುಣ ವಾಗಿರುವುದರಿಂದ ನಮ್ಮ ಆ ಯೋಜನೆ ಬೇಗ ಪೂರ್ಣಗೊಳ್ಳಬೇಕು.

ನಗರವಾಸಿಗಳೂ ನೀರನ್ನು ಮಿತವಾಗಿ ಬಳಸುವ ಅಗತ್ಯವಿದೆ. ದಿನನಿತ್ಯ ಬಕೆಟ್ಟುಗಟ್ಟಲೆ ನೀರು ಸುರಿದು ಮೀಯುವವರೊಂದು ಕಡೆ, ಮೂರು ನಾಲ್ಕು ದಿನಕ್ಕೊಮ್ಮೆ ಸ್ನಾನ ಮಾಡಲು ನೀರಿಗೆ ಬರ ಇರುವವರು ಇನ್ನೊಂದು ಕಡೆ. ಈ ಎರಡು ತುದಿಗಳ ಸಮನ್ವಯವೆಂದರೆ ಕೇವಲ ಸ್ನಾನಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ನೀರಿನ ಸದ್ವಿನಿಯೋಗ ಹೇಗೆಂಬ ಗಂಭೀರ ಪರಾಮರ್ಶೆಯ ಜರೂರು ಒದಗಿದೆಯೆಂಬತ್ತ ಗಮನ ಕೇಂದ್ರೀಕರಿಸುವುದು; ಹನಿಹನಿ ಕೂಡಿದರೆ ಹಳ್ಳ ಎಂಬ ಜಾಣ್ಣುಡಿಯು ವಾಸ್ತವವಾಗಲೆಂಬ ಗ್ರಹಿಕೆ.

ವ್ಯವಸಾಯ, ಜಗತ್ತಿನ ಹಳೆಯ ವೃತ್ತಿ. ನಮ್ಮ ಸಂಸ್ಕ ತಿ ಐದುಸಾವಿರ ವರ್ಷಗಳಷ್ಟು ಹಳೆಯದು ಎಂದು ಹೆಮ್ಮೆಯಿಂದ ಭಾಷಣ ಮಾಡುತ್ತೇವೆ. ಕೃಷಿ ಹನ್ನೆರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಈ ಉದ್ದ ನಡಿಗೆಯಲ್ಲಿ ರೈತರು ಬೇಸಾಯ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆ ಅಳವಡಿಸುತ್ತ ಬಂದಿದ್ದಾರೆ. ಎಷ್ಟೇ ಕಷ್ಟಗಳು ಎದುರಾದರೂ ವೃತ್ತಿಗೆ ವಿದಾಯ ಹೇಳದೆ, ನಂಬಿದ ನೆಲವನ್ನು ಕೈಬಿಡದೆ ಬಾಳಿದ್ದಾರೆ. ನೀರಿನ ಆಸರೆ ಹುಡುಕುತ್ತ ಆಗಾಗ ವಲಸೆ ಹೋಗಿರಬಹುದು. ಹೀಗಿದ್ದೂ ರೈತರು ಕಂಗಾಲಾಗಿ ಸರಣಿ ಆತ್ಮಹತ್ಯೆಗೆ ಹೊರಟಿದ್ದು ಇತ್ತೀಚಿನ ವರ್ಷಗಳಲ್ಲಿ. ಅದು ತನ್ನ ಪರಾಕಾಷ್ಠೆ ಮುಟ್ಟಿದ್ದು ಈ ವರ್ಷ. ಪರ್ಯಾಯ ಕುಸುಬುಗಳನ್ನು ಕಲಿತಿಲ್ಲದ ರೈತರು ಗುಳೆ ಹೊರಟಿದ್ದಾರೆ. ಒಂದು ಅಂದಾಜಿನಂತೆ ಸುಮಾರು ಅಯ್ವತ್ತು ಸಾವಿರ ರೈತರು ಕರ್ನಾಟಕ ಬಿಟ್ಟು ವಲಸೆ ಹೋಗಿದ್ದಾರೆ. ಪ್ರಪಂಚಕ್ಕೂ ಭಾರತಕ್ಕೂ ಬರಗಾಲ ಹೊಸದಲ್ಲ. ಹಾಗೆ ನೋಡುವುದಾದರೆ ಕರ್ನಾಟಕದ ಅಧಿಕೃತ ಇತಿಹಾಸ ಅನಾವರಣಗೊಳ್ಳುವುದೇ ಬರಗಾಲದ ಹಿನ್ನೆಲೆಯಲ್ಲಿ. ಉತ್ತರ ಭಾರತದಲ್ಲಿ ೧೨ ವರ್ಷಗಳ ಭೀಕರ ಬರಬಂದಾಗ ಮೌರ್ಯ ಸಾಮ್ರಾಟ ಚಂದ್ರಗುಪ್ತನು ಶ್ರುತಕೇವಲಿ ಭದ್ರಬಾಹು ಮತ್ತು ಸಾವಿರಾರು ಮುನಿಗಳೊಂದಿಗೆ ಸುಭಿಕ್ಷ ಕನ್ನಡ ನಾಡಿಗೆ ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಆಗಮಿಸಿ ಶ್ರವಣಬೆಳಗೊಳದಲ್ಲಿ ನೆಲಸಿದನು. ಇಂತಹ ಸಮೃದ್ಧ ಕರ್ನಾಟಕ ಕಳೆದ ೨೦ ವರ್ಷಗಳಿಂದ ಸರಿಯಾದ, ಹದವಾದ ಮಳೆಗಾಲವನ್ನು ಕಾಣಲಿಲ್ಲ. ಹಿಂದೆಲ್ಲ ರಾಜಮಹಾರಾಜರು ಉಗ್ರಾಣಗಳ ದವಸಧಾನ್ಯವನ್ನು ಜನರಿಗೆ ಹಂಚಿದರು. ಮಠಮಾನ್ಯಗಳು ಜನತೆಗೆ ಗಂಜಿ ಊಟಕ್ಕೆ ನೆರವಾದರು. ಈಗ ಸರ್ಕಾರ ತನ್ನ ಕೈಲಾದುದನ್ನು ಮಾಡುತ್ತ ಬಂದಿದೆ, ಸಹಾಯ ಹಸ್ತ ಚಾಚಲು ಹಿಂದೆ ಬಿದ್ದಿಲ್ಲ. ಇಂಥ ಸಂದರ್ಭದಲ್ಲಿ ರೈತರ ಮಕ್ಕಳಾದ ಗ್ರಾಮೀಣ ಕನ್ನಡಿಗ ಯುವಕರಿಗೆ ಕೃಪಾಂಕವಿತ್ತು ನೇಮಕ ಮಾಡಿದ್ದು ಒಳ್ಳೆಯ ಉಪಕ್ರಮ. ಈ ನೆಲದ ಮಕ್ಕಳಿಗೆ ಉದ್ಯೋಗದಲ್ಲಿ ಯಾವಾಗಲೂ ಆದ್ಯತೆಯಿರಲಿ.

ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಮಳೆಬೆಳೆ ಸರಿಯಾಗಿಲ್ಲ. ನೀರೂ ಇಲ್ಲ, ವಿದ್ಯುತ್ತೂ ಇಲ್ಲ. ಸಾಲಸೋಲ ಅಧಿಕವಾಗಿದ್ದುದು ಕ್ರಮೇಣ ಅಧಿಕತರವಾಗಿ, ಕಡೆಗೆ ಅಧಿಕತಮವಾಯಿತು. ಒಂದು ವರ್ಷ ಸುಧಾರಿಸಿದರು, ಎರಡನೆಯ ವರ್ಷ ಕೂಡಿಟ್ಟ ಆಪದ್ಧನ ಮುಗಿಯಿತು, ಮೂರನೆಯ ವರ್ಷ ದನಕರು ಮಾರಿದರು. ನಾಲ್ಕನೆಯ ವರ್ಷ ಪಾತ್ರೆ ಪಡಗ ಆಸ್ತಿ ಮಾರಿದರು. ಈಗ ಇನ್ನೇನೂ ಉಳಿಯದೆ ತ್ರಾಣ ಇರುವ ಕೆಲವರು ಗುಳೆ ಹೋದರು. ಅನೇಕರು ಪ್ರಾಣ ತೆತ್ತರು. ಮಳೆಯಾಗಿ ಬೆಳೆ ಬರುತ್ತದೆ, ಮಾಡಿದ ಸಾಲ ತೀರಿಸೋಣ ಎಂಬ ಕನಸುಗಳೊಂದಿಗೆ ಇಟ್ಟ ಬೆಳೆಯೂ ಒಟ್ಟೊಟ್ಟಿಗೆ ಒಣಗಿದುವು. ಕಡು ಬಡತನದ ಸಿಡಿಲ ಹೊಡೆತ ತಾಳಲಾರದೆ ಪ್ರಾಣತೆತ್ತ ರೈತರ ಸರಣಿ ಆತ್ಮಹತ್ಯೆ ನೆನೆದಾಗ ನನಗೆ ಜನಪದ ಗೀತೆಯೊಂದು ನೆನಪಾಗುತ್ತದೆ:

ಬಡವರು ಸತ್ತರೆ ಸುಡಲಿಕೆ ಸೌದಿಲ್ಲೊ
ಒಡಲ ಬೆಂಕೀಲಿ ಹೆಣ ಬೆಂದೊ
ದೇವರೆ ಬಡವರಿಗೆ ಸಾವ ಕೊಡಬೇಡೊ||

ಇಂಥ ರೈತರು ಬೆಳೆದು, ಕೊಟ್ಟ ಅನ್ನ ತಿಂದು ಬೆಳೆದ ನಾನು ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವವನ್ನು ಕೃತಜ್ಞತೆಯಿಂದ ರೈತರ ಚಿರಸ್ಮರಣೆಗೆ ಸಮರ್ಪಿಸುತ್ತೇನೆ. ಆದರೆ ಅದೇ ಉಸಿರಿನಲ್ಲಿ ನಮ್ಮ ರೈತರು ಬದುಕಿನ ಸವಾಲನ್ನು ಎದುರಿಸುತ್ತ ಬಂದ ಎದೆಗಾರಿಕೆಯನ್ನು ಕಳೆದುಕೊಳ್ಳಬಾರದೆಂದೂ ಕೋರುತ್ತೇನೆ. ತಮ್ಮನ್ನು ಕಾಪಾಡುವವರೂ ಕೇಳುವವರೂ ಯಾರೂ ಇಲ್ಲವೆಂಬ ಹತಾಶೆಕಾಡಿ, ‘ಭೂಮಿ ನಂಬಿ ನಾವು ಕೆಟ್ಟೆವು. ಈ ನೆಲ ಉಳೋದು ಬಿಟ್ಟು ನೌಕರಿ ಚಾಕರಿ ಮಾಡಲು ಹೋಗಿದ್ದರೆ ಬದುಕುತ್ತಿದ್ದೆವು’ ಎಂಬ ಭಾವನೆ ಬಲವಾಗುತ್ತಿದೆ. ಹೆಂಗಸರು ‘ಇನ್ನು ಅಡುಗೆ ಮನೆ ಬೇಡ’ ಎಂದೂ, ರೈತರು ‘ಇನ್ನು ಭೂಮಿ ಬೇಡ, ಹೊಲಕ್ಕೆ ಹೋಗುವುದಿಲ್ಲ’ ಎಂದೂ ವಿದಾಯ ಹೇಳಿದರೆ ಮನೆಗೂ ನೆಲಕ್ಕೂ ಬೆಂಕಿ ಬಿದ್ದ ಹಾಗೆ. ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಹುದೆ ಎಂದು ನಾಡು ಚಿಂತಿಸಬೇಕು. ಕರುಣೆ, ಅನುಕಂಪ, ಸಹಾನುಭೂತಿಗಳು ಸಾಲುವುದಿಲ್ಲ. ಆತನ ಆರ್ಥಿಕ ಸ್ಥಿತಿಗತಿ ಸುಧಾರಿಸುವ ಹಾಗೆ ಶಾಶ್ವತ ಪರಿಹಾರದ ದಾರಿಗಳನ್ನು ಹುಡುಕಬೇಕು.

೨೫-೩೦ ಎಕರೆಗಿಂತ ಕಡಿಮೆ ಭೂಮಿಯ ಸಣ್ಣ ರೈತರಿಗೆ ಸಾಲವನ್ನು ಮನ್ನಾಮಾಡಿ ಉತ್ತೇಜಿಸಬೇಕು. ಹಸಿರು ಕ್ರಾಂತಿ ಎಂಬುದು ಹೆಸರಿಗಷ್ಟೆ. ಹಳ್ಳಿಗಳ ಅಭಿವೃದ್ಧಿ ತೃಪ್ತಿಕರವಾಗಿಲ್ಲ. ಕೃಷಿವಲಯಕ್ಕೆ ಹೊಸ ಚೈತನ್ಯ ತುಂಬಬೇಕಾಗಿದೆ. ರೈತರಿಗೆ ಕೃಷಿ ಆಧಾರಿತ ಉದ್ಯೋಗಗಳು ಗ್ರಾಮಪರಿಸರದಲ್ಲಿಯೇ ಕಲ್ಪಿತವಾದರೆ ಗುಳೆ ಹೋಗುವುದು ತಪ್ಪಿ ಸ್ವಾವಲಂಬಿತ ಬದುಕಿಗೆ ದಾರಿಯಾಗುತ್ತದೆ. ಸರ್ಕಾರದೊಂದಿಗೆ ಸಾಹಿತಿಗಳೂ ರೈತರ ಸಮಸ್ಯೆಗೆ ಮುಖಾಮುಖಿಯಾಗಿ ನಿಂತು ಸಾಂತ್ವನ ಹೇಳಬೇಕು. ಸಾಹಿತಿಗಳಾದ ನಾವೆಲ್ಲ ನಿಮ್ಮ ಜೊತೆಗೆ ಇದ್ದೀವಿ ಎಂದು ಧೈರ್‍ಯ ಹೇಳಬೇಕು.

ಮುನ್ನೂರು ವರ್ಷ ಆಳಿದ ಪರಕೀಯರ ಗುರುತು ಗಾಯಗಳು ಪೂರಾ ಅಳಿಸುವ ಮೊದಲೆ ಮತ್ತೆ ಹೊರಗಿನವರ ಪ್ರವೇಶದ ಹಿಂದೆ ಪ್ರವರ್ತಿಸುವ ಮೂಲ ಆಶಯಗಳನ್ನು ಗುಮಾನಿಯಿಂದ ಹೆಕ್ಕಬೇಕಾಗಿದೆ. ಏಕೆಂದರೆ ಹಾಲಿ ಎದುರಿಸುತ್ತಿರುವ ಇಕ್ಕಟ್ಟಿನ ನಡುವೆ ‘ಗ್ಯಾಟ್’ ಒಪ್ಪಂದದಿಂದ ದೂರಗಾಮಿ ದುಷ್ಪರಿಣಾಮಗಳಿಗೆ ಒಳಗಾಗುವ ಅಪಾಯವೂ ಎದುರಾಗಿದೆ. ಈಸ್ಟ್ ಇಂಡಿಯಾ ಕಂಪನಿ ಮಾರು ವೇಷಗಳಲ್ಲಿ ಮರುಕಳಿಸಿ ಭಾರತವನ್ನು ನುಂಗಿ, ಆಪೋಷನಕ್ಕೆ ಕಾಯುತ್ತಿವೆ. ಗ್ಯಾಟ್ ಎಂಬುದು ಅದರ ಒಂದು ಸುಧಾರಿತ ಆವೃತ್ತಿ, ಮೆಟ್ರೊ ಎಂಬುದು ಅದರದೇ ಇನ್ನೊಂದು ರೂಪ. ಬಹುರಾಷ್ಟ್ರೀಯ ಕಂಪನಿಗಳ ಈ ವಿವಿಧೋದ್ದೇಶಗಳಿಗೆ ವಿವಿಧ ದೇಶಗಳನ್ನು ಕಬಳಿಸಿ ನುಂಗಿ ನೀರು ಕುಡಿಯುವ ಆಶಯವಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶಭಾಷೆಗಳ ಬಗ್ಗೆ ಅಸಡ್ಡೆ. ಸ್ಥಳೀಯ ವಿಚಾರದಲ್ಲಿ ನಿರ್ದಯಿಗಳು. ಇಲ್ಲಿನ ಸಂಪತ್ತು ಮಾತ್ರ ಬೇಕೆಂಬುದು ಹಗಲು ದರೋಡೆಯಲ್ಲದೆ ಮತ್ತೇನು? ಕರ್ನಾಟಕವನ್ನು ಕಡೆಗಣಿಸಿ ವಿಜೃಂಭಿಸಬಯಸುವ ಪ್ರವೃತ್ತಿಗಳನ್ನು ಹತ್ತಿಕ್ಕಿದರೆ ತಪ್ಪಲ್ಲ. ಕೃಷಿಯೇ ಭಾರತದ ಶಕ್ತಿ ಎಂಬುದನ್ನು ವಿದೇಶಿ ಜಾಣರು ಚೆನ್ನಾಗಿ ಬಲ್ಲರು. ಕಡಿಮೆ ದರದಲ್ಲಿ ವಿದೇಶಿ ಸರಕುಗಳನ್ನು ಆರಂಭದ ವರ್ಷ ಒದಗಿಸುತ್ತ ಕ್ರಮೇಣ ಇಲ್ಲಿನ ವ್ಯವಸಾಯ ಮತ್ತು ಮಾರುಕಟ್ಟೆಯನ್ನು ದಾಸ್ಯಕ್ಕೆ ತಳ್ಳುವ ಷಡ್ಯಂತ್ರಜಾಲ ಸಿದ್ಧವಾಗುತ್ತಿದೆ. ಹತ್ತು ದಿನ ಇಟ್ಟರೂ ಕೆಡದಂಥ ಹಾಲನ್ನು ಡೆನ್ಮಾರ್ಕಿನವರು ಇಲ್ಲಿಯೂ ಹಂಚಿದರೆ ಇಲ್ಲಿನ ಎಮ್ಮೆ ಹಸುಗಳನ್ನೂ ಹಾಲನ್ನೂ ಕೇಳುವವರು ಯಾರು? ಇಳುವರಿ ಹೆಚ್ಚಲೆಂಬ ಕಾರಣಕ್ಕೆ ವಿದೇಶಿ ಮಿಶ್ರತಳಿ ಕಾಳು ಬಳಸುತ್ತಾರೆ. ಆದರೆ ಮುಂದಿನ ಬೆಳೆಗೆ ಅವು ನಿರುಪಯೋಗಿ, ಮರು ಉತ್ಪಾದಕವಲ್ಲ. ಅದರಿಂದ ಮತ್ತೆ ವಿದೇಶಿ ಮಾಲಕರ ಬಳಿ ಬಿತ್ತನೆ ಕಾಳಿಗೆ ಕೈಯೊಡ್ಡಿ ಪಾಳಿ ನಿಲ್ಲುವುದು ತಪ್ಪುವುದಿಲ್ಲ. ಈ ದಿಕ್ಕಿನ ಲೆಕ್ಕಾಚಾರವನ್ನು ನಮ್ಮ ರೈತ ಸಂಘಗಳು ಪರಿಭಾವಿಸಬೇಕಾದ ಸಂಕ್ರಮಣಾವಸ್ಥೆ ಬಂದಿದೆ. ಹೀಗೆ ಹೇಳುವಾಗ ಮತ್ತೆ ಹಳೆಯ ಪದ್ಧತಿಗಳಿಗೇ ಗಂಟು ಬೀಳಬೇಕೆಂದು ನಾನು ಸೂಚಿಸುತ್ತಿಲ್ಲ. ಕಾಲಕಾಲಕ್ಕೆ ತಕ್ಕ ಬದಲಾವಣೆ ಆಗುವಾಗಲೂ ನಾಳೆಗಳ ಮುನ್ನೋಟವೂ ನೆನಪಿರಲೆಂಬ ಗ್ರಹಿಕೆಯಿಂದ ಈ ನಾಲ್ಕು ಮಾತು ಆಡಿದ್ದೇನೆ.

ಶತಮಾನಗಳಿಂದ ಸ್ವಾಭಿಮಾನಿಗಳಾಗಿ ಬಾಳುತ್ತ ಬಂದಿರುವ ನೇಗಿಲಯೋಗಿಗಳು ಮರ್ಯಾದಾ ಪುರುಷೋತ್ತಮರು. ಈ ನಮ್ಮ ಅನ್ನದಾತರು ಇಂದು ಸರಣಿ ಆತ್ಮಹತ್ಯೆಯತ್ತ ಅಭಿಮುಖರಾಗಿರುವುದು ಕಳವಳಕಾರಿಯಾದ ಬೆಳವಣಿಗೆ. ಅಲ್ಲೊಬ್ಬ ಇಲ್ಲೊಬ್ಬರೆಂದು ಆರಂಭವಾಗಿ ಒಟ್ಟೊಟ್ಟಿಗೆ ಕುಟುಂಬಗಳೇ ಉರುಳಿಗೆ ಕೊರಳೊಡ್ಡಿದ ವರದಿಗಳು ತಲ್ಲಣಗೊಳಿಸುತ್ತಿವೆ. ಈ ದಾರುಣ ಘಟನೆಗಳಿಗೆ ವಿಷಣ್ಣರಾಗಿ ಮೊಸಳೆ ಕಣ್ಣೀರು ಸುರಿಸಿ ವಿರಮಿಸದೆ ನಾವೀಗ ಈ ಇಡೀ ಪ್ರಸಂಗಗಳ ಹಿಂದಿರುವ ವಾಸ್ತವವನ್ನು ಸರಿಯಾಗಿ ಅರಿತು ಪರಿಹಾರದ ದಾರಿಗಳನ್ನು ಹುಡುಕುವ ವಿವೇಕ ತೋರಬೇಕೆನಿಸಿದೆ. ರೈತರೇ ಅಲ್ಲದೆ ಇದೇ ಬಗೆಯ ಬವಣೆ ಬೇಗುದಿಯಲ್ಲಿ ಬೇಯುತ್ತಿರುವ, ಕೈಮಗ್ಗಗಳನ್ನು ನಂಬಿದ ನೇಕಾರರನ್ನೂ ಗಿರಣಿಗಳನ್ನು ಅವಲಂಬಿಸಿದ ಕಾರ್ಮಿಕರನ್ನೂ ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುವವರನ್ನೂ ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕಾಗಿದೆ. ಬೇಕಾಬಿಟ್ಟಿ ಬಂದ್‌ಗೆ ಕರೆಕೊಡುವುದರಿಂದ ಇವರೆಲ್ಲರಿಗೂ ಆಗುವ ಬೃಹತ್ ಪ್ರಮಾಣದ ನಷ್ಟವನ್ನೂ ಗಮನಿಸಬೇಕು.

ಪುರುಷ ಪ್ರಧಾನವಾದ ಕುಟುಂಬಗಳಲ್ಲಿ ಆರ್ಥಿಕ ವಹಿವಾಟು ಬಹುವಾಗಿ ಯಜಮಾನ ಗಂಡಸಿನ ಕಾರ್ಯಭಾರವಾಗಿರುವುದರಿಂದ ಈಗಿನ ಆತ್ಮಹತ್ಯೆಯು ಅದಕ್ಕೆ ಆತ ತೆತ್ತಬೆಲೆಯೆ – ಎಂಬುದನ್ನೂ ಪರಾಮರ್ಶಿಸಬೇಕು. ಹಾಲಿ ಇರುವ ಸಾಂಸಾರಿಕ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಟು ತಂದುಕೊಂಡು ಹೆಂಗಸರಿಗೂ ಮನೆಯ ಆರ್ಥಿಕ ವಹಿವಾಟನ್ನು ವಹಿಸಿದ ಪಕ್ಷದಲ್ಲಿ ಈ ದುರಂತ ನಿವಾರಣೆಯಾದೀತೆ ಎಂದೂ ಪರಿಶೀಲಿಸಬೇಕು. ಇತ್ತೀಚೆಗೆ ಪ್ರಬಲ ಚಳವಳಿಯಾಗಿ ಹಳ್ಳಿಗಳವರೆಗೂ ಹಬ್ಬುತ್ತಿರುವ ಸ್ತ್ರೀಶಕ್ತಿ ಸಂಘಟನೆಯ ಸಬಲೀಕರಣ ಪ್ರಗತಿಯನ್ನು ಗಮನಿಸಿದಾಗ ಹೆಣ್ಣಿಗೆ ಆರ್ಥಿಕ ಸಬಲತೆ ತರುವ ನಿಟ್ಟಿನಲ್ಲಿಯೂ ಕಾರ್ಯತತ್ಪರರಾಗಬಹುದು. ರೈತರಿಗೂ ಕೂಲಿನಾಲಿಗಳಿಗೂ ಕಾರ್ಮಿಕರಿಗೂ ನೀಡುವ ಸಾಲಗಳಿಗೆ ಬಡ್ಡಿದರ ಬಹಳ ಕಡಿಮೆ ಇರಬೇಕು. ಚಕ್ರಬಡ್ಡಿ ಹಾಕಬಾರದು. ಮತ್ತು ದೀರ್ಘಾವಧಿ ಸಾಲ ಸುಲಭವಾಗಿ ಶೀಘ್ರವಾಗಿ ಸಿಗುವಂತಾಗಬೇಕು ಮಧ್ಯವರ್ತಿಗಳ ಬೋನುಗಳಿಂದ ಬಿಡಿಸಿ ಕೃಷಿ ಮಾರುಕಟ್ಟೆ ಸಂಘಗಳ ಮೂಲಕ ರೈತನ ಬೆಳೆಗೆ ನ್ಯಾಯಬೆಲೆ ಸಿಗುವಂತೆ ಕೊಳ್ಳಬೇಕು. ಆತ ಇಡೀ ವರ್ಷ ಬಂಡವಾಳ ಹೂಡಿ ಸರಿಯಾದ ಬೆಲೆ ಸಿಗಲಿಲ್ಲವೆಂದು ಹತಾಶನಾಗಿ ಹೊಲದಲ್ಲೂ ರಸ್ತೆ ಬದಿಯಲ್ಲೂ ತನ್ನ ಬೇಗೆಯನ್ನು ಬಿಸಾಕಿ ಕೈಚೆಲ್ಲುತ್ತಿದ್ದಾನೆ. ದಲ್ಲಾಳಿಗಳೊಂದಿಗೆ ಪೈಪೋಟಿಯಿಂದ ಸ್ಪರ್ಧಿಸಲಾಗದೆ ಮುಗ್ಗರಿಸುತ್ತಿದ್ದಾನೆ.

ರೈತರು ಬರ್ಬರತೆಗೆ ಒಲಿದವರಲ್ಲವಾದರೂ ಸಿಟ್ಟಿಗೇಳುವ ರಟ್ಟೆ ಬಲ ಇಲ್ಲವೆಂದಲ್ಲ. ಆದರೆ ಭೂಮಿಯನ್ನು ನಂಬಿದ ಅವರಿಗೆ ಭೂಮಿತೂಕದ ತಾಳ್ಮೆಯೂ ಸಹಜವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ರೈತರ ಸಂಘಟನೆಯನ್ನು ಪುರಸ್ಕರಿಸಬೇಕು. ತಾನು ಬೆಳೆದದ್ದಕ್ಕೆ ಸರಿಯಾದ ಬೆಲೆ, ಪ್ರತಿಫಲ ಸಿಗಬೇಕೆಂಬುದು ನ್ಯಾಯ. ಕಾಯಕ ಜೀವಿಗಳ ಹೊಟ್ಟೆಯ ಮೇಲೆ ಬರೆ ಹಾಕಬಾರದು. ದಳ್ಳಾಳಿಗಳ ಬೋನಿಗೆ ಬೀಳದಂತೆ ರಕ್ಷಿಸುತ್ತ ಕಡಮೆ ಬಡ್ಡಿಯಲ್ಲಿ ಸುಲಭವಾಗಿ ಸಾಲ ಸಿಗುವಂತಾಗಬೇಕು.

ಮಹಿಳೆ : ಲೇಖಕಿಯ ಸುತ್ತಮುತ್ತ

ನಾನು ಮೊದಲಿಂದ ಸ್ತ್ರೀವಾದಿಯೆಂಬ ಠಸ್ಸೆ ಒತ್ತಿದ್ದಾರೆ. ಇದನ್ನು ಬೇಷರತ್ತಾಗಿ ಒಪ್ಪಿಕೊಳ್ಳಲು ನನಗೆ ಯಾವ ಮುಜುಗರವೂ ಇಲ್ಲ. ಮಹಿಳೆಯರ ಪರವಾಗಿ ಮುಂದೆ ನಿಂತು ಮಾತಾಡುವುದು ನನಗೆ ದಣಿವರಿಯದ ಪ್ರಿಯವಾದ ಕಾಯಕ. ಮಹಿಳೆಯನ್ನು ಎಲ್ಲೆಡೆ ಎರಡನೆಯ ದರ್ಜೆಯವಳೆಂದು ತಿಳಿಯುವ ಪರಿಪಾಟಿ ಈಗಲೂ ನಿಂತಿಲ್ಲ. ಹೆಣ್ಣು ಭ್ರೂಣಹತ್ಯೆ ವ್ಯವಸ್ಥಿತವಾಗಿ ಮುಂದುವರಿದಿದೆ. ಹೆಂಗಸರೇ ಹೆಂಗಸರಿಗೆ ಹಗೆಗಳಾಗದೆ, ತಮ್ಮನ್ನು ಕೀಳಾಗಿ ಕಾಣುವ ಕೀಳರಿಮೆಯಿಂದ ನರಳದೆ ಸಂಘಟಿತರಾಗಿ ಆತ್ಮಸ್ಥೈರ್ಯ ತಾಳಬೇಕು. ಹೆಣ್ಣು, ಲೋಕ ಹೇಳುವಷ್ಟು ದುರ್ಬಲಳೇನಲ್ಲ. ಕಳೆದ ಮೂರು ದಶಕಗಳಿಂದ ಈಚೆಗೆ ಸ್ತ್ರೀಪರವಾದ ಹೋರಾಟ ಹುರಿಗೊಳ್ಳುತ್ತಿದೆ. ವಿದೇಶಗಳಲ್ಲಿಯೂ ಸ್ತ್ರೀಯ ಶೋಷಣೆ ಅವ್ಯಾಹತವಾಗಿ ನಡೆದಿದೆ. ಆದರೆ ಹೆಣ್ಣಿಗೆ ಸರಿಸಮಾನ ಸ್ಥಾನಮಾನ ಸಿಗಬೇಕೆಂಬ ಹೋರಾಟ ಅಲ್ಲಿ ದಟ್ಟವಾಗಿದೆ. ಇಲ್ಲಿಗಿಂತ ಅಲ್ಲಿ ಸ್ತ್ರೀ ಆರ್ಥಿಕವಾಗಿ ಸಬಲೆ.

ಇಪ್ಪತ್ತು ಮೂವತ್ತು ವರ್ಷಗಳ ಹಿಂದಣ ಮಹಿಳಾ ಸಾಹಿತ್ಯದೊಂದಿಗೆ ಇಂದಿನ ಲೇಖಕಿಯರ, ಕೃತಿಗಳನ್ನು ಹೋಲಿಸಿದರೆ ಸ್ತ್ರೀಯರ ಬರೆಹ ನಿಚ್ಚಳವಾಗಿ ಗುಣಾತ್ಮಕವಾಗಿ ಮೌಲಿಕವಾಗುತ್ತಿರುವುದು ಕಾಣುತ್ತದೆ. ಅದರಲ್ಲಿಯೂ ೧೯೮೫-೯೦ ರಿಂದ ಈಚೆಗಿನ ಲೇಖಕಿಯರ ಬರವಣಿಗೆ ಮಹತ್ತರವಾದ ಬೆಳವಣಿಗೆಯನ್ನು ಬಿಂಬಿಸಿದೆ. ಹೀಗಿದ್ದೂ ಮಹಿಳಾ ಸಾಹಿತ್ಯಕ್ಕೆ ಸಿಗಬೇಕಾದ ಮನ್ನಣೆ, ಪುರಸ್ಕಾರ ಸಿಕ್ಕಿಲ್ಲ.

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯನ್ನು ಪಕ್ಕಕ್ಕೆ ಸರಿಸುವ ರೂಢಿ ಈಗಲೂ ಇದೆ. ಆದರೆ ಸ್ತ್ರೀಯ ಸ್ವಾಭಿಮಾನ ಜಾಗೃತವಾಗಿದೆ. ಆಕೆ ಮಹಿಳೆಯೆಂಬ ರಿಯಾಯಿತಿ ಅಥವಾ ಸಹಾನುಭೂತಿ ಬೇಡವೆಂದು ಹೇಳುವ ಸ್ಥಿತಿಯಲ್ಲಿದ್ದಾಳೆ. ಸಾಹಿತ್ಯದಲ್ಲಿ ಲಿಂಗಭೇದ ಆಧಾರಿತ ತಾರತಮ್ಯವನ್ನೂ ವಿರೋಧಿಸಬೇಕು. ಆತ್ಯಂತಿಕವಾಗಿ ನಿಲ್ಲುವುದು ಮಾಡಿದ ದೊಡ್ಡ ಸಾಧನೆಗಳ ಗುಣಮಟ್ಟ. ತನ್ನ ಅರ್ಹತೆಯಿಂದಲೇ ಸೋಪಾನಗಳನ್ನೇರಿ ಎತ್ತರಗಳನ್ನು ಎಟುಕಿಸುವ ಈ ಆರೋಗ್ಯಕರ ಧೋರಣೆ ಶ್ಲಾಘ್ಯವಾದುದು. ಅಮೂರ್ತ ಸಿದ್ಧಾಂತಗಳಲ್ಲಿ ಸಾಹಿತ್ಯ ಅರಳುವುದಿಲ್ಲ. ಅದಕ್ಕೆ ಈ ನೆಲದ ಬದುಕಿನ ಬದ್ಧತೆ ಇರುತ್ತದೆ. ಶ್ರೇಷ್ಠ ಸಾಹಿತ್ಯ ಪ್ರಾದೇಶಿಕ ಹಾಗೂ ರಾಷ್ಟ್ರೀಯ ತುರ್ತುಗಳಿಗೆ ಸ್ಪಂದಿಸುತ್ತ ಕಡೆಗೆ ಎಲ್ಲ ಪರಿಮಿತ ಒತ್ತಡಗಳನ್ನು ಮೀರಿ ಜಾಗತಿಕ ಎತ್ತರಗಳಿಗೆ ಎಟುಕಬೇಕು. ಅಂದರೆ ಸಮಸ್ತ ಮನುಷ್ಯರ ಪರವಾಗಿ ನಿಂತು ಎಲ್ಲ ರೀತಿಯಿಂದ ಶೋಷಣೆಯನ್ನೂ ಸರ್ವಾಧಿಕಾರವನ್ನೂ ತುಳಿತವನ್ನೂ ಧಿಕ್ಕರಿಸಬೇಕೆಂಬ ಅರಿವು ಲೇಖಕಿಯರಿಗಿದೆ.

ದೇಶದ ಮುಖ್ಯವಾಹಿನಿಯೆಂದರೆ ಅದು ಪುರುಷ ವಾಹಿನಿಯೆಂಬ ಗ್ರಹಿಕೆಯಲ್ಲಿ ತಿದ್ದುಪಡಿ ಬರಲಿ. IZಜ್ಞಿ oಠ್ಟಿಛಿZಞ ಎಂದರೆ IZಛಿ oಠ್ಟಿಛಿZಞ ಮಾತ್ರ ಎಂಬ ಹೇಳಿಕೆಗೆ ಸಾಹಿತ್ಯವೂ ಹೊರತಲ್ಲ. ‘ಸಾಹಿತ್ಯ ಪುರುಷ ಪ್ರಧಾನ ಹಾಗೂ ಪುರುಷ ಕೇಂದ್ರಿತವಾಗಿದ್ದು ಸ್ತ್ರೀ ಅದರ ಅಂಚಿನಲ್ಲಷ್ಟೇ ಸಂಚರಿಸಬಹುದು, ಬಟ್ಟೆಯ ತುದಿಗಳಲ್ಲಿ ಅಲಂಕಾರಕ್ಕೆ ಇಳಿಯಬಿಟ್ಟ ಬಣ್ಣದ ಎಳೆಗಳಂತೆ. ಕಳೆದ ಎರಡು ದಶಕಗಳಿಂದ ಹಲವಾರು ಮಹಿಳೆಯರು ಲೇಖಣಿ ಹಿಡಿದಿದ್ದಾರೆ -ಎಂದಾಕ್ಷಣ ಪೊರಕೆ, ಲಟ್ಟಣಿಗೆ, ಸೌಟು ಕೆಳಗಿಟ್ಟಿದ್ದಾಳೆ ಎಂದು ಅರ್ಥವಲ್ಲ, ಈ ಶತಮಾನದಲ್ಲಿ ಬರೆಹಗಾರ್ತಿಯರ ಬಳಗ ದಟ್ಟವಾಗಿದ್ದು ಅವರ ಬರೆಹವೂ ಮಹತ್ವದಾಗುತ್ತಿದೆ. ಕಳೆದ ಶತಮಾನ ಮಹಿಳೆಯರು ಸಹಸ್ರಮಾನಗಳ ಮೌನ ಮುರಿದು ಮಾತಾಡಿದ ಹಾಗೂ ಬರೆಯತೊಡಗಿದ ಕಾಲಮಾನವಾದರೆ, ಈ ಶತಮಾನ ಆ ಬರೆಹ ಮತ್ತು ಮಾತನ್ನು ಶ್ರೇಷ್ಠ ಕಲಾಕೃತಿಯಾಗಿಸುವ ಹಂತ. ಸಾಮಾಜಿಕ, ಸಾಂಸ್ಕ ತಿಕ, ಆರ್ಥಿಕ, ರಾಜಕೀಯ ಪ್ರಗತಿಗೆ ಪಾಲುದಾರಳೆಂಬ ಗ್ರಹಿಕೆ ಸ್ಥಾಪಿತವಾಗುತ್ತಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯು ಅಸ್ಪಶ್ಯರೆಂದೊ ಶೂದ್ರರೆಂದೊ ಕೆಲವರನ್ನು ಕೀಳಾಗಿ ಕಂಡಂತೆ ಲೇಖಕಿಯರನ್ನು ಕಡೆಗಣಿಸುವುದು ಅಸಾಧ್ಯವೆಂಬ ವಾಸ್ತವತೆ ಮನವರಿಕೆ ಆಗುತ್ತಿದೆ. ಮಾನದಂಡದ ಈ ಪಲ್ಲಟದಿಂದಾಗಿ, ಸಮಗ್ರ ಭಾರತೀಯ ಚರಿತ್ರೆಯನ್ನು, ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯ ಚರಿತ್ರೆಯನ್ನು ಮತ್ತೆ ಬರೆದು ಲೇಖಕಿಯರಿಗೆ ತೋರಿರುವ ಅನಾದರವನ್ನು ಸರಿಪಡಿಸಬೇಕಾಗಿದೆ. ನ್ಯಾಯವಾಗಿ, ಅರ್ಹತೆಯಿಂದ ಸಲ್ಲಬೇಕಾದ ನಮ್ಮ ಪಾಲನ್ನು ನಮಗೆ ಕೊಡಿ ಎಂದು ಲೇಖಕಿಯರು ಆಗ್ರಹಿಸುವ ತನಕ ಕಾಯಬೇಕಾಗಿಲ್ಲ.

ಮಹಿಳೆಯರನ್ನು ಮಾರಾಟದ ಸರಕು ಎಂಬಂತೆ ಬಿಂಬಿಸುತ್ತ ಇಂದಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ಜಾಹಿರಾತು ಲೋಕದ ಪಾಪದ ಮುಖವನ್ನು ಕುರಿತು ನಾನು ಹೇಳಲೇಬೇಕಾದ ಪ್ರತಿಕ್ರಿಯೆ ಇದೆ. ಪ್ರತಿದಿವಸ ಮಾಧ್ಯಮಗಳಲ್ಲಿ ಮುದ್ರಣವಾಗುವ, ದೂರದರ್ಶನದಲ್ಲಿ ಪ್ರಸಾರವಾಗುವ ಅರ್ಥಹೀನ ಜಾಹಿರಾತುಗಳು ವಾಕರಿಕೆ ತರುತ್ತವೆ. ಗಂಡಸರು ಮುಖಕ್ಷೌರ ಮಾಡಿಕೊಳ್ಳುವ ರೇಜರ್ ಮತ್ತು ಬ್ಲೇಡುಗಳ, ಧರಿಸುವ ಒಳ ಚಡ್ಡಿಯ ಜಾಹಿರಾತಿಗೆ ಮಹಿಳೆಯನ್ನು ಬಳಸಿಕೊಳ್ಳುವ ರೀತಿ ಅಸಹ್ಯ ಹುಟ್ಟಿಸುತ್ತದೆ. ಸುವಾಸನೆಯ ದ್ರವ್ಯಗಳನ್ನು ಪುರುಷ ಮೈಗೆ ಸಿಂಡಪಿಸಿಕೊಂಡ ಕೂಡಲೆ ಹೆಂಗಸರು ಮೈಮರೆತು ಓಡೋಡಿ ಬರುತ್ತಾರೆಂದೂ, ತಂಪುಪಾನೀಯ ಶೀರ್ಷೆಯನ್ನು ಗಂಡಸರ ಕೈಯಲ್ಲಿ ನೋಡುವುದೆ ತಡ ಸ್ತ್ರೀಯರು ದಡದಡಿಸಿ ಬಂದು ಮುತ್ತಿಕೊಳ್ಳುತ್ತಾರೆಂದೂ ತುಚ್ಛವಾಗಿ ತೋರಿಸಲಾಗುತ್ತಿದೆ. ಇಂಥ ಜಾಹಿರಾತುಗಳು ಆರೋಗ್ಯಕರ ಸಮಾಜಕ್ಕೆ ಶತ್ರುಗಳು. ಮಹಿಳೆಯರಿಗೇ ಅಲ್ಲದೆ ಪುರುಷರಿಗೂ ಅಪಮಾನಕರವಾದ ಈ ಬಗೆಯ ಜಾಹಿರಾತುಗಳನ್ನು ಖಂಡಿಸಬೇಕು. ಮಹಿಳೆಯರನ್ನು ಕೀಳಾಗಿ ಕಾಣಿಸುವ ಈ ದುರ್ಬಳಕೆಯನ್ನು ನಿಯಂತ್ರಿಸುವಂತೆ, ಪ್ರಪಂಚದಾದ್ಯಂತ ಅನ್ವಯಿಸುವಂತೆ ಜಾಹಿರಾತು ನೀತಿಸಂಹಿತೆಯನ್ನು ಜಾರಿಗೆ ತರಬೇಕೆಂದು ಈ ವೇದಿಕೆಯಿಂದ ಆಗ್ರಹಪಡಿಸುತ್ತೇನೆ. ಕೆಲವು ಮಾನವೀಯ ಘನತೆಯನ್ನು ಮಾನ್ಯಮಾಡಿ ಸ್ತ್ರೀಪುರುಷರೆಂಬ ತಾರತಮ್ಯಗಳಿಲ್ಲದೆ ಮಾನವತೆಯ ಮಣೆಯ ಮೇಲೆ ನಿಲ್ಲಿಸುವ ವಿವೇಕ ಆಳಬೇಕು.

ಮಹಿಳೆ ಹಿಂದುಳಿದವರಲ್ಲಿ ಬಹು ಹಿಂದುಳಿದವಳು, ಶೋಷಿತರಲ್ಲಿ ಬಹು ಶೋಷಿತಳು. ಸಾಮಾಜಿಕವಾಗಿ ಮಂದುವರಿದ ಸಮಾಜವಿರಲಿ, ಧಾರ್ಮಿಕವಾಗಿ ಮೇಲು ಜಾತಿಯ ಸಂಸಾರಗಳಾಗಲಿ, ಆರ್ಥಿಕವಾಗಿ ಸದೃಢವಾದ ಕುಟುಂಬಗಳಿರಲಿ – ಎಲ್ಲೆಲ್ಲೂ ಮಹಿಳೆಗೆ ಎರಡನೆಯ ಸಾಲು. ಸುಲಿಗೆಯ ರೂಪ ಸ್ವರೂಪ ವ್ಯತ್ಯಾಸಗೊಳ್ಳಬಹುದೇ ಹೊರತು ಶೋಷಣೆ ನಿಂತಿಲ್ಲ. ಕೊಳಚೆ ಪ್ರದೇಶಗಳ ಹೆಂಗಸರು, ಮಕ್ಕಳು ಶಿಕ್ಷಣ ಸೌಲಭ್ಯದಿಂದ ದೂರ ಇದ್ದಾರೆ. ಲೈಂಗಿಕ ಕಿರುಕುಳ ಹಾಗೂ ಕೌಟಿಂಬಿಕ ಕಲಹಗಳಿಗೆ ಮೀಸಲಾದ ಕಾನೂನನ್ನು ಸಾಮಾಜಿಕ, ಮಾನಸಿಕ ದೃಷ್ಟಿಯಿಂದ ವಿಶ್ಲೇಷಿಸುವತ್ತ ಕಾರ್ಯವಿಧಾನವನ್ನು ಅಳವಡಿಸಿಕೊಂಡು ಮಹಿಳಾ ಆಯೋಗ ಇನ್ನೂ ಸಶಕ್ತವಾಗಬೇಕು. ಇಂದು ಹೆಣ್ಣಿಗೆ ಸ್ವಾಭಿಮಾನದ ಹಸಿವು ಮುಖ್ಯವೆನಿಸಿದೆಯೆಂಬ ಅರಿವು ಪುರುಷರಲ್ಲೂ ಉಂಟಾಗಿ ಸಹಕರಿಸುತ್ತಿರುವುದು ಸ್ವಾಗತಾರ್ಹ. ಇಷ್ಟಿದ್ದೂ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಲೋಕಸಭಾ ಸದಸ್ಯರು, ಒಂದಿಲ್ಲೊಂದು ಕಾರಣಗಳನ್ನು ಮುಂದಿಟ್ಟು, ಮುಂದೂಡುತ್ತಿರುವುದು ದುರಂತ. ರಾಜಕೀಯ ಇಚ್ಛಾಶಕ್ತಿ ಮಹಿಳಾಪರ ಧೋರಣೆಗೆ ಓಗೊಟ್ಟು ಬೇಗ ಸ್ಪಂದಿಸಿದರೆ ಸ್ತ್ರೀಶಕ್ತಿಯ ಸಂಘಟನೆಗೆ ಸಿಂಹಬಲ ಬರುತ್ತದೆ.

ಭಾರತದಲ್ಲಿ ಅಕ್ಷರಸ್ಥ ಸ್ತ್ರೀಯರ ಸಂಖ್ಯೆ ಕಡಿಮೆ. ಲೇಖಕಿಯರು ಮತ್ತೂ ಕಡಿಮೆ. ಸ್ತ್ರೀಯರ ಲೇಖನಕ್ಷೇತ್ರದ ಹಸಿರು ಕ್ರಾಂತಿಗೆ ಅಂತಾರಾಷ್ಟ್ರೀಯ ಮಹಿಳಾವರ್ಷ ಪ್ರೇರಣೆಯಾದದ್ದು ನಿಜ. ಮಹಿಳಾ ಸಾಹಿತ್ಯದ ನೆಲೆಬೆಲೆಯ ಪರಾಮರ್ಶೆಗೂ ಆತ್ಮಾವಲೋಕನಕ್ಕೂ ಭೂಮಿಕೆ ಸೃಷ್ಟಿಯಾದದ್ದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ೧೯೭೫ರಲ್ಲಿ ನಡೆಸಿದ ಲೇಖಕಿಯರ ಸಮ್ಮೇಳನದಲ್ಲಿ. ಅದು ಮೊತ್ತಮೊದಲ ಐತಿಹಾಸಿಕ ಹೆಜ್ಜೆ. ಅಲ್ಲಿಂದ ವೈಚಾರಿಕ, ವೈಜ್ಞಾನಿಕ ಬುದ್ಧಿ ಭಾವಗಳ ಸಿದ್ಧತೆಯ ಮಶಾಲು ಹಿಡಿದು ಹೊರಟ ಲೇಖಕಿಯರ ಗಂಭೀರ, ಸೃಜನಶೀಲ ಕೃತಿಗಳು ಹೊರಬರಲು ಸಾಧ್ಯವಾಯಿತು. ಸಾಹಿತ್ಯದಲ್ಲಿ ಲಿಂಗಭೇದ ಆಧರಿಸಿದ ತಾರತಮ್ಯ ಇಲ್ಲವೆಂಬ ಅರಿವಿನಿಂದ ಸತ್ವಶಾಲಿ ಬರವಣಿಗೆಯೇ ಮೌಲಿಕವೆಂಬ ಗ್ರಹಿಕೆ ಗಟ್ಟಿಯಾಯಿತು. ಸಾಹಿತ್ಯದ ಪಲ್ಲಟಗಳ ಹಾಗೂ ಸಾಮಾಜಿಕ ಸ್ಥಿತ್ಯಂತರಗಳ ಅರಿವಿನ ಸ್ಪೋಟದಿಂದ ಲೇಖಕಿಯರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕ್ರಿಯಾಶೀಲರಾಗಿದ್ದಾರೆ.

ನಾನು ಅದೃಷ್ಟಶಾಲಿ. ನನ್ನ ಕೆಲವು ಕನಸುಗಳು ನನಸಾದುವು, ಪ್ರಯತ್ನಗಳು ಫಲಿಸಿದುವು. ಕರ್ನಾಟಕ ಸರ್ಕಾರ ಪ್ರತಿವರ್ಷ ಅತ್ತಿಮಬ್ಬೆಯ ಹೆಸರಿನಲ್ಲಿ ಸಾಹಿತ್ಯಕವಾಗಿ ದೀರ್ಘಕಾಲಿಕ ಮಹತ್ಸಾಧನೆ ಮಾಡಿದ ಮಹತ್ವದ ಲೇಖಕಿಗೆ ಒಂದು ಲಕ್ಷ ರೂಪಾಯಿ ನಗದನ್ನೂ ಒಳಗೊಂಡ ಪ್ರಶಸ್ತಿಯಿಂದ ಪುರಸ್ಕರಿಸಬೇಕೆಂದು ಎಡೆಬಿಡದೆ ಸರಕಾರವನ್ನು ಕಾಡಿದೆ. ನನ್ನ ಹೋರಾಟದ ಸಾಂಸ್ಕ ತಿಕ ಆಯಾಮವನ್ನು ಮನಗಂಡು ಘನ ಕರ್ನಾಟಕ ಸರ್ಕಾರ ನಾನಿತ್ತ ಸೂಚನೆಯನ್ನು ಪೂರ್ತಿಯಾಗಿ ಮಾನ್ಯಮಾಡಿತು. ನನ್ನ ಮನವಿಗೆ ಸಂಪೂರ್ಣ ಸ್ಪಂದಿಸಿದ, ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರನ್ನೂ ಸಂಸ್ಕ ತಿ ಸಚಿವೆಯಾಗಿದ್ದ ಬಿ.ಟಿ. ಲಲಿತಾನಾಯಕ ಅವರನ್ನೂ ಇಂದೂ ಸಹ ಕೃತಜ್ಞತೆಯಿಂದ ನೆನೆಯುತ್ತೇನೆ.

ಅಬ್ಬಕ್ಕರಾಣಿಯ ಸಾಹಸ ಆಕೆಯ ಜೀವಿತ ಕಾಲದಲ್ಲಿ ಜಾಗತಿಕ ವೇದಿಕೆಗೆ ಸಂದಿತ್ತು. ಆ ತಾಯಿ ಮಗಳು ಧೈರ್ಯ ಸಾಹಸ ತೋರಿರದಿದ್ದರೆ ದೇಶದ ಇತಿಹಾಸ ಪಲ್ಲಟಗೊಂಡು ಇಂದು ಭಾರತವನ್ನು ಬ್ರಿಟಿಷರ ಬದಲು ಪೋರ್ಚುಗೀಸರು ಆಳುತ್ತಿದ್ದರು. ಅಂಥ ಸ್ವಾಭಿಮಾನಿ ರಾಣಿಯ ನೆನಪನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಏನೇನು ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ಹಲವು ಸಲ ಸೂಚಿಸಿದ್ದೇನೆ. ಮಂಗಳೂರು ಬಂದರಿಗೂ, ಮಂಗಳೂರಿಂದ ಹೊರಡುವ ಅಥವಾ ಬರುವ ರೈಲು ಒಂದಕ್ಕೆ ಅಬ್ಬಕ್ಕರಾಣಿಯ ಹೆಸರಿಡುವುದರಲ್ಲಿ ಔಚಿತ್ಯವಿದೆ.

ದೀರ್ಘಕಾಲ ಆಳಿದ ಏಕಮೇವಾದ್ವಿತೀಯ ಮಹಾಮಂಡಲೇಶ್ವರಿ, ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ನೆನಪನ್ನು ಚಿರಸ್ಥಾಯಿಗೊಳಿಸುವ ದಿಕ್ಕಿನಲ್ಲಿ ಈ ನಾಡು ಮಾಡಬೇಕಾದ ಕೆಲಸಗಳನ್ನು ಸರಕಾರದ ಹಾಗೂ ಜನತೆಯ ಗಮನಕ್ಕೆ ತಂದಿದ್ದು ಇನ್ನೂ ನೆನೆಗುದಿಗೆ ಬಿದ್ದಿವೆ. ಹೊನ್ನಾವರ, ಹಾಡುವಳ್ಳಿ, ಬಾರಕೂರು, ಭಟ್ಕಳ, ನಗಿರೆ ರಾಜ್ಯಗಳನ್ನು ಒಳಗೊಂಡ ವ್ಯಾಪಕ ಪ್ರದೇಶವನ್ನು ಗೆರಸೊಪ್ಪೆ ರಾಜಧಾನಿಯಿಂದ ಆಳಿದ ಈ ಮಹಾರಾಣಿ ಕರ್ನಾಟಕದ ಸಾಹಿತ್ಯ, ಶಿಲ್ಪ, ಕಲೆ, ವಾಣಿಜ್ಯ ವ್ಯವಹಾರ, ಸಂಸ್ಕ ತಿ ಪುರೋಭಿವೃದ್ಧಿಗೆ ನೀಡಿದ ಕೊಡುಗೆ ದೊಡ್ಡದು.

ಮಹಿಳಾ ವಿಶ್ವವಿದ್ಯಾಲಯ ಆಗಬೇಕೆಂದು ನಿರಂತರವಾಗಿ ೧೯೯೩ರಿಂದ ಒಕ್ಕೊರಲಿಂದ ಸಾರುತ್ತ ಬಂದಿದ್ದೆ. ನೂರಾರು ವೇದಿಕೆಗಳಿಂದ ಹಕ್ಕೊತ್ತಾಯ ಮಾಡುತ್ತ ಸರಕಾರದ ಮೇಲೆ ಒತ್ತಡ ಏರಿದ್ದಲ್ಲದೆ ಸಾರ್ವಜನಿಕ ಅಭಿಪ್ರಾಯವನ್ನೂ ರೂಪಿಸಿದೆ. ನಮ್ಮ ಘನ ಸರಕಾರ ಈ ವರ್ಷದಿಂದ ಮಹಿಳಾ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಇದಕ್ಕಾಗಿ ಸರಕಾರವನ್ನು ಅಭಿನಂದಿಸಲು ಹರ್ಷಿಸುತ್ತೇನೆ.

ಜನಭಾಷೆಯಾದ ಕನ್ನಡವನ್ನು ಮಹಾಕಾವ್ಯದ ಭಾಷೆಯನ್ನಾಗಿಸಿದ ಆದಿಕವಿ ಪಂಪನ ೧೧೦೦ನೆಯ ಹುಟ್ಟುಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲು ಜನತೆಗೂ ಸರಕಾರಕ್ಕೂ ಕರೆ ಕೊಟ್ಟಿದ್ದು ಬಹುವಾಗಿ ಈಡೇರಿದೆ. ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮ ಗಳಾದುವು. ಸಾರ್ವಜನಿಕ ಸಂಘ ಸಂಸ್ಥೆಗಳೂ ಶಾಲಾ ಕಾಲೇಜುಗಳೂ ವಿಶ್ವವಿದ್ಯಾನಿಲಯಗಳೂ ಪಂಪನ ಕಾವ್ಯಗಳ ಚಿಂತನ ಮಂಥನ ನಡೆಸಿವೆ. ನನಗೆ ತಿಳಿದಂತೆ ೯೦ ಕಾರ್ಯಕ್ರಮಗಳಾಗಿವೆ. ಪ್ರತಿವರ್ಷ ಪಂಪ ಪ್ರಶಸ್ತಿಯನ್ನು ಸಹ ಸರಕಾರ ನೀಡುತ್ತ ಬಂದಿದೆ.

ಕನ್ನಡ ಸಂಸ್ಕ ತಿ ಇಲಾಖೆ ಈ ವಿಚಾರದಲ್ಲಿ ಆದ್ಯತೆ ಮೇರೆಗೆ ಕಾರ್‍ಯಪ್ರವೃತ್ತವಾಗಲು ತಕ್ಷಣ ನಾನುಕೊಟ್ಟ ಮನವಿ ಪತ್ರದ ಮೇಲೇ ಸೂಚನೆಯಿತ್ತು ಚಾಲನೆ ನೀಡಿದ ಮುಖ್ಯಮಂತ್ರಿ ಯವರಿಗೆ ಈ ವೇದಿಕೆಯಿಂದ ವಂದನೆ ಹೇಳುತ್ತೇನೆ. ಅಲ್ಲದೆ ಅವರು ಈ ಸಂಬಂಧವಾಗಿ ತುರ್ತಾಗಿ ಮಾಡಲೇಬೇಕಾದ ಇನ್ನೊಂದು ಕಾರ್ಯಕ್ರಮಕ್ಕೂ ಮುಂದಾಗಬೇಕೆಂದು ಪ್ರಾರ್ಥಿಸುತ್ತೇನೆ. ನಾನು ಮಾಡಿದ ಮನವಿ ಹಾಗೂ ಮಂಡಿಸಿದ ಸೂಚನೆಗಳಲ್ಲಿ ಶಿಖರ ಪ್ರಾಯವಾದುವು ಎರಡು:
ಕರ್ನಾಟಕಾಂಧ್ರ ಸರಕಾರಗಳು ಸಂಯುಕ್ತವಾಗಿ ಸಹಯೋಗದಿಂದ ಆಂಧ್ರದ ಕರೀಂನಗರ ಜಿಲ್ಲೆಯ ಗಂಗಾಧರಂ ತಾಲೂಕಿನ ಕುರ್ಕ್ಯಾಲ ಗ್ರಾಮದ ಹತ್ತಿರವಿರುವ ಜಿನವಲ್ಲಭನ ಶಾಸನ ಇರುವ ಮಹತ್ವದ ಗುಡ್ಡವನ್ನು ರಾಷ್ಟ್ರೀಯ ಸ್ಮಾರಕವಾಗಿ ಕಾಪಾಡುವುದು ಜರೂರು ಆಗಬೇಕು. ಅದನ್ನು ಸಾಹಿತ್ಯ, ಸಂಸ್ಕ ತಿ ಮಹತ್ವದ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕು. ಮೂಲನಿಧಿಯಾದ ಶಿಲ್ಪ ಹಾಗೂ ಶಾಸನಕ್ಕೆ ಧಕ್ಕೆ ಆಗದಂತೆ ಆ ಬೆಟ್ಟವನ್ನು ಹತ್ತಲೂ ಇಳಿಯಲೂ ಮೆಟ್ಟಿಲನ್ನು ಮಾಡಿಸಬೇಕು, ಎರಡೂ ರಾಜ್ಯದ ಮುಖ್ಯಮಂತ್ರಿಗಳೊಮ್ಮೆ ಅಲ್ಲಿಗೆ ಸಂಸ್ಕ ತಿ ಸೌಹಾರ್ದವರ್ಧನ ಯಾತ್ರೆ ಮಾಡುವುದು ಅಗತ್ಯ. ತೆಲುಗು ಭಾಷೆಯ ಪ್ರಥಮ ಹಾಗೂ ಪ್ರಾಚೀನ ಪದ್ಯಗಳನ್ನು ಅಲ್ಲಿ ಪಂಪನ ತಮ್ಮ ಜಿನವಲ್ಲಭ ಕ್ರಿ.ಶ. ೯೫೦ರಲ್ಲಿ ಬರೆದಿದ್ದಾನೆ. ಸಂಸ್ಕ ತ – ತೆಲುಗು- ಕನ್ನಡ ಮೂರು ಭಾಷೆಗಳಲ್ಲಿ ಆ ಶಾಸನವಿದೆ. ತೆಲುಗು ಭಾಷೆಯ ಆದಿಕವಿ ಜಿನವಲ್ಲಭನ ಹಾಗೂ ಕನ್ನಡದ ಆದಿಕವಿ ಪಂಪನ ನೆನಪನ್ನು ಹೊತ್ತು ಎತ್ತರದಲ್ಲಿ ನಿಂತಿರುವ ಈ ಭವ್ಯ ಸ್ಮಾರಕದ ಮಹತ್ವವನ್ನು ನಾನಿಲ್ಲಿ ಮತ್ತೆ ಉತ್ಪ್ರೇಕ್ಷಿಸಬೇಕಾದ ಅಗತ್ಯವಿಲ್ಲ. ಉಭಯ ಸರಕಾರಗಳಿಗೆ ಕೀರ್ತಿ ತರುವ ಈ ಕೆಲಸವನ್ನು ಅವಶ್ಯ ಮಾಡಬೇಕಾದ ಕರ್ತವ್ಯವೆಂದು ಪರಿಗಣಿಸಬೇಕು.
ಪಂಪ ಕರ್ನಾಟಕಾಂಧ್ರವಲ್ಲದೆ ಇಡೀ ಭಾರತದ ರಾಷ್ಟ್ರಕವಿ. ಆತನ ಕಾವ್ಯಗಳ ಸಾಹಿತ್ಯಕ ಹಾಗೂ ಸಾಂಸ್ಕ ತಿಕ ಅಭಿವ್ಯಾಪಕ ಆಯಾಮವನ್ನು ಭಾರತಕ್ಕೆ ಬಿತ್ತರಿಸುವ ರೀತಿಯಲ್ಲಿ ದೆಹಲಿಯಲ್ಲಿ ಇಂಗ್ಲಿಷಿನಲ್ಲಿ ಮೂರು ದಿವಸಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಂಯೋಜಿಸಬೇಕೆಂದು ಸರಕಾರಕ್ಕೆ ಒಪ್ಪಿಸಿದ್ದ ಹಾಗೂ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ಅವರ ಸಹಿಯೊಂದಿಗೆ ಸಂಸ್ಕ ತಿ ಇಲಾಖೆಗೆ ರವಾನೆಯಾದ ಪತ್ರದಲ್ಲಿ ನಮೂದಿಸಿದ್ದೆ. ಅದು ಇನ್ನೂ ಕಾರ್ಯಗತ ಆಗಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಕೃಪೆಯಿಟ್ಟು ಈ ವಿಚಾರದಲ್ಲಿ ಸೂಕ್ತ ಆದೇಶವನ್ನು ಕೊಡಬೇಕೆಂದು ಪ್ರಾರ್ಥಿಸುತ್ತೇನೆ. ಕನ್ನಡವನ್ನೂ ಕರ್ನಾಟಕವನ್ನೂ ತನ್ನೆಲ್ಲ ರಾಜಕೀಯ ವೈಭವದೊಂದಿಗೆ ಪ್ರತಿಷ್ಠಾಪಿಸಿದ ಪಂಪನ ಪ್ರಯತ್ನ ಅನನ್ಯವಾದದ್ದು. ಪಂಪನ ಹೆಸರು ಹೇಳಿದರೆ, ಅವನ ಕಾವ್ಯ ಓದಿದರೆ ಮಿಂಚಿನ ಸಂಚಾರವಾಗುತ್ತದೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ ಚಿಮ್ಮುತ್ತದೆ. ಭಾರತೀಯ ಭಾಷೆಗಳಲ್ಲಿಯೇ ವ್ಯಾಸಭಾರತವನ್ನು ಸಂಸ್ಕ ತದಿಂದ ಜನಭಾಷೆಗೆ ಜಗ್ಗಿ ಇಳಿಸಿದವನು ಕನ್ನಡದ ಪಂಪನೇ ಮೊತ್ತಮೊದಲಿಗನೆಂಬುದನ್ನು ನೆನೆದಾಗ ಈಗಲೂ ಮೈ ನವಿರೇಳುತ್ತದೆ. ಅದರಿಂದ ಕನ್ನಡದ ಏಳಿಗೆಗೆ, ಕನ್ನಡದ ಮಹತ್ವವನ್ನು ಅನ್ಯಭಾಷಾ ಸಾಹಿತ್ಯ ವಲಯದಲ್ಲಿ ನಿಲ್ಲಿಸುವುದಕ್ಕೆ ಈ ರಾಷ್ಟ್ರೀಯ ವಿಚಾರ ಸಂಕಿರಣ ಅಧಿಷ್ಠಾನವಾಗುತ್ತದೆ.
ತಂತ್ರಜ್ಞಾನ : ಸವಾಲು, ಜವಾಬು

ನಮ್ಮ ಕಾಲದ ಸಾಧನೆಗಳ ಬೃಹತ್ತು ಮಹತ್ತು ಅಸೀಮವಾದುದು ದೀರ್ಘಕಾಲ ದೊಡ್ಡಬಾಳು ಬದುಕಿದ ಬಹುದೊಡ್ಡ ಲೇಖಕರು ಆಗಿಹೋದ ಶತಮಾನ. ಸಂಪರ್ಕ ಸುಲಭವಾಗಿದೆ, ಸಂವಹನ ಸೌಕರ್ಯ ಹೆಚ್ಚಿದೆ. ಇಂದು ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಮನುಷ್ಯ ಲೋಕವನ್ನು ತಬ್ಬಿದೆ. ಈ ವಿದ್ಯುನ್ಮಾನ – ಟೆಕ್ನಾಲಜಿಯೆಂಬ ಬಾಹುಬಂಧನ ಧೃತರಾಷ್ಟ್ರ ಆಲಿಂಗನ ಆಗದಂತೆ ಎಚ್ಚರ ಇರಬೇಕು. ಹೈಟೆಕ್ ನಮಗೆ ಶಾಪವಾಗದೆ ವರವಾಗಿ ಬರಬೇಕು. ಯಾವುದೇ ಆವಿಷ್ಕಾರ ಮನುಷ್ಯ ಸಂಬಂಧವನ್ನು ಹಾಗೂ ಪುಸ್ತಕ ಸಂಸ್ಕ ತಿಯನ್ನು ಅಳಿಸಿ ಹಾಕಲು ಬಿಡಬಾರದು. ಕನ್ನಡ ಭಾಷೆ ಹಾಗೂ ಲಿಪಿಯ ನಾಶ ಆಗಬಾರದು. ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ಮೆಲ್ಲಗೆ ನುಸುಳುತ್ತಿವೆ. ಇದು ಬಿಡಾರದೊಳಗೆ ಒಂಟೆ ತಲೆಹಾಕಿದಂತೆ ಆಗಬಾರದು. ಮೆಟ್ರೊ ಬೃಹತ್ ಮಳಿಗೆ ಬೆಂಗಳೂರಲ್ಲಿ ಕಾಲೂರಿದೆ. ಇದು ಕೊಳ್ಳುಬಾಕತನದ ಚಟ ಹುಟ್ಟಿಸಿ ಆಮೇಲೆ ನಮ್ಮನ್ನು ಗುಲಾಮರನ್ನಾಗಿಸುವ ವಿದೇಶಿ ಹುನ್ನಾರ. ಪರ್‍ಯಾಯವಾಗಿ ಕನ್ನಡ ಸಂಸ್ಕ ತಿಯ ಮೇಲೆ ನಡೆಯುವ ಹಲ್ಲೆ.

ಆಧುನೀಕರಣ, ಜಾಗತೀಕರಣ ಎಂಬುವು ಕನ್ನಡದ ಕುತ್ತಿಗೆ ಅದುಮಿ ಉಸಿರಾಟವನ್ನು ನಿಲ್ಲಿಸುವ ದಿಕ್ಕಿನಲ್ಲಿ ಹಬ್ಬಲು ಬಿಡಬಾರದು. ಕನ್ನಡ ರಾಷ್ಟ್ರೀಯತೆಯ ಗಟ್ಟಿ ಬುಡ ಬೇರುಗಳನ್ನು ಸಡಿಲಿಸಲು ತೊಡಗಿದರೆ ಒಡನೆಯೇ ಸಾಹಿತಿಗಳೂ ಕಲಾವಿದರೂ ತಮ್ಮ ಲೇಖನಿ ಕುಂಚಗಳನ್ನು ಖಡ್ಗವಾಗಿಸಿ ಝಳಪಿಸಲು ಸಿದ್ಧವಾಗಿರಬೇಕು. ಪ್ರಸ್ತುತಕ್ಕೆ ಬೇಕಾದ ಪ್ರಖರ ಸಾಹಿತ್ಯ ಪಥ ನಿರ್ಮಾಣವಾಗಿ ಹೊಸಪಂಥ ಹುಟ್ಟಿ ಸಮಾಜಮುಖಿ ನೆಲೆಗಳತ್ತ ಹುರಿಗೊಳ್ಳಲಿ. ತುಂಬ ಉಮೇದಿನಿಂದ ಭೋರ್ಗರೆದು ವೇಗವಾಗಿ ಹೊರಟಿರುವ ಮಾಹಿತಿ ತಂತ್ರಜ್ಞಾನದ ಓಘದಲ್ಲಿ ಕನ್ನಡದ ತಂತ್ರಾಂಶ ಸೊರಗದಂತೆ ವರ್ತಿಸೋಣ. ಕಂಪ್ಯೂಟರ್ ವಿದ್ಯುನ್ಮಾನದತ್ತವಾದ ಈ ಟಿ.ವಿ., ವಿಡಿಯೊ ಆಟಗಳು ಕನ್ನಡ ಭಾಷೆಗೆ ಮಾರಕವೊ ಪೂರಕವೊ ಎಂಬ ವಾಗ್ವಾದ ನಡೆದಿದೆ. ದೂರದರ್ಶನದ ಮುಂದೆ ಮುಂಜಾವಿನಿಂದ ಸಂಜೆಯತನಕ ಅಂಟಿಕೊಂಡ ಕಣ್ಣನ್ನು ಬೇರೆ ಕಡೆ ಹೊರಳಿಸದ ಆಬಾಲವೃದ್ದರು ಕೋಟಿಗಟ್ಟಲೆ ಇದ್ದಾರೆಂದು ಸಮೀಕ್ಷೆಗಳು ವರದಿಮಾಡಿವೆ. ಧಾರಾವಾಹಿಗಳಿಗೆ ತನ್ನನ್ನು ತೆತ್ತುಕೊಂಡ ಬುದ್ಧಿ ಭಾವಗಳಿಗೆ ಅವುಗಳ ಪ್ರಸಾರ ವೇಳೆಯಲ್ಲಿ ಎಂಥ ಹತ್ತಿರದ, ಆಪ್ತ ನೆಂಟರಿಷ್ಟರು ಬಂದರೂ ‘ಈ ಶನಿಗಳು ಯಾಕೆ ವಕ್ರಿಸಿದರೊ’ ಎಂದು ಗೊಣಗುವರು ಇದ್ದಾರೆ. ಕ್ಯಾಸೆಟ್ಟುಗಳೂ ಸಿಡಿಗಳೂ ಸುಲಭವಾಗಿ ಸಿಗುತ್ತವೆ. ಇವುಗಳೊಂದಿಗೆ ಟಿವಿ ಮುಂದೆ ಕುಳಿತರೆ ಅದೇ ಜಗತ್ತು. ಹೊರಗೆ ಬಾಂಬು ಹಾಕಿದರೂ ಅಲ್ಲಾಡರು.

ಹಳೆಯದೆಲ್ಲ ಹೊನ್ನಲ್ಲ ಎಂದು ಅಲ್ಲಗಳೆಯುವ, ಹಳತೆಲ್ಲ ಹಳಸಲಲ್ಲ ಎಂದು ಮೆಚ್ಚುವ ಎರಡು ತುದಿಗಳಿರುತ್ತವೆ. ಈ ತುದಿಗಳ ಸಮನ್ವಯದೊಂದಿಗೆ ವೈಚಾರಿಕ, ವೈಜ್ಞಾನಿಕ ಚಿಂತನ ಮಂಥನ ಜಗತ್ತಿನಲ್ಲಿ ವಿಪುಲವಾಗಿ ನಡೆದಿವೆ. ಪರಿಣಾಮವಾಗಿ ನಾನಾ ಜ್ಞಾನ ಕ್ಷೇತ್ರಗಳಲ್ಲಿ ವಿನೂತನ ಜಾಗತಿಕ ಪರಿಕಲ್ಪನೆಗಳು ಚಿಗುರಿವೆ. ಜಾಗತಿಕ ಚಿಂತನೆಗಳು ದೇಶೀಯ ಹಾಗೂ ಸ್ಥಳೀಯ ಕ್ರಿಯೆಗಳ ಹಾಸಿನಲ್ಲಿ ಹೆಣೆದುಕೊಳ್ಳಬೇಕು.

ತಂತ್ರಜ್ಞಾನದ ಅನನ್ಯ ಚೈತನ್ಯವನ್ನು ಅಲಕ್ಷಿಸುವಂತಿಲ್ಲ. ತಂತ್ರಜ್ಞಾನ ಹೊಸಕಾಲದ ಅನಿವಾರ್ಯತೆ. ಹೊಸಕಾಲವನ್ನು ಹೊಸ ತಂತ್ರಜ್ಞಾನದ ಮೂಲಕವೇ ಪಳಗಿಸಿ, ದುಡಿಸಿ ನಾಡು ಅಭಿವೃದ್ಧಿ ಹೊಂದಬೇಕು. ನಾವು ವಿiನುಗಳಂತೆ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜುವುದು ಸಾಧ್ಯವಿಲ್ಲ.

ವಿಜ್ಞಾನವೇ ಸರ್ವಜ್ಞ ಅಥವಾ ಸರ್ವಸ್ವ ಅಲ್ಲ. ಅದರ ಗ್ರಹಿಕೆಗೂ ಮೀರಿದ ಸಂಗತಿಗಳು, ಸಂಬಂಧಗಳು ಸೃಷ್ಟಿಯಲ್ಲಿವೆ. ಅಕ್ಷರ ಜ್ಞಾನದ ಆಚೆಗೂ ಚಾಚಿರುವ ಅದ್ಭುತಗಳಿವೆ. ವಿದ್ಯಾವಂತರೆಲ್ಲ ವಿಚಾರವಂತರಲ್ಲ. ಅವಿದ್ಯಾವಂತರೆಲ್ಲ ಅಜ್ಞಾನಿಗಳಲ್ಲ. ಅವಿದ್ಯಾವಂತ ಜ್ಞಾನಿಗಳೂ ಅಶಿಕ್ಷಿತರ ಸಂಸ್ಕ ತಿಯೂ ಉಪಾದೇಯವೇ.

ಆಧುನೀಕರಣ ಎಂದೂ ಉದಾರೀಕರಣ, ಕೈಗಾರಿಕೀಕರಣ, ಜಾಗತೀಕರಣ, ಖಾಸಗೀಕರಣ, ನಗರೀಕರಣ ಎಂದೂ ಹೊಸ ಪಂಚಕರಣಗಳು ಮೊಳಗುತ್ತಿವೆ. ಇವುಗಳಿಗೆ ನಾವು ಸ್ಪಂದಿಸದಿರುವುದು ಸಾಧ್ಯವಿಲ್ಲ. ಹೊಸದನ್ನು ಬರಮಾಡಿಕೊಳ್ಳಲು ಅನುಮಾನಗಳೂ ಆತಂಕಗಳೂ ಇರುವುದು ಸಹಜ. ಒಂದು ವ್ಯವಸ್ಥೆಗೆ, ಜೀವನ ಶೈಲಿಗೆ, ಚಿಂತನಾಕ್ರಮಕ್ಕೆ ಒಗ್ಗಿದ ನಮ್ಮ ಬುದ್ಧಿ ಭಾವಗಳು ಬದಲಾವಣೆಗೆ ತಯಾರಾಗದೆ ತಕರಾರು ಮಾಡುತ್ತವೆ.

ಜಾಗತೀಕರಣ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನದಿಂದ ಎಲ್ಲ ಸಮಸ್ಯೆಗಳೂ ಕರಗಿ ಹೋಗಿ ಬಾಳು ಒಮ್ಮೆಲೇ ಸುಗಮಗೊಳ್ಳತ್ತದೆಂಬುದು ಭ್ರಮೆಯೆನಿಸಿದರೂ ಅದು ಬೊಗಳೆಯಲ್ಲ. ಜಾಗತೀಕರಣದ ದೂರಗಾಮಿ ಪರಿಣಾಮಗಳ ವಿಚಾರದಲ್ಲಿ ಗುಮಾನಿಗಳಿವೆ, ನಿಜ. ಹಾಗೆಂದು ಅದರ ಸಾಧಕ ಬಾಧಕಗಳನ್ನು ಈಗಲೇ ದಿಢೀರನೆ ತೀರ್ಪು ಕೊಡುವುದು ಬೇಡ. ಜ್ಞಾನಪಥ ಚಲನಶೀಲವಾಗಿರುತ್ತದೆ. ಹೊಸ ವಿಚಾರಗಳ ಬೀಜ ಚೆಲ್ಲುತ್ತ ಶಿಲಾಯುಗದಿಂದ ಮನುಷ್ಯ ಬಹಳ ದೂರ ಬಂದಿದ್ದಾನೆ. ತನ್ನ ಅರಿವನ್ನು ಸಮಾಜದ ಮೇಲ್ಮೆಗೆ ಬಳಸಿದಾಗ ಮೇಲೇರಿದ್ದಾನೆ, ಅಪಮಾರ್ಗದ ವಿನಾಶಕ್ಕೆ ಉಪಯೋಗಿಸಿದಾಗ ನೆಲಕಚ್ಚಿದ್ದಾನೆ. ಶ್ರೇಷ್ಠ ಮೌಲ್ಯಗಳ ಸದಭಿರುಚಿಯನ್ನು ಉಳಿಸುತ್ತ, ಸುಸಂಸ್ಕ ತ ಸಮಾಜದ ಹೃದಯದ ಬಡಿತ ನಿಲ್ಲದಂತೆ ಉಸಿರಾಡಿಸುವ ಚಿಂತಕರು ಎಲ್ಲ ದೇಶಗಳಲ್ಲೂ ಇದ್ದಾರೆ. ಕನ್ನಡ ಸಾಹಿತ್ಯದ ಸಂದರ್ಭದಲ್ಲೂ ಈ ಪರಂಪರೆಯಿದೆ. ಲೇಖಕರಿಗೆ ಬೇಕಾಗಿರುವುದು ಗನ್ ಅಲ್ಲ, ತ್ರಿಶೂಲ ಅಲ್ಲ, ಆಮಿಷಗಳಿಗೆ ಬಾಗದ ಪೆನ್ನು. ನಿಜದನಿಯ ಲೇಖನದ ಮೊನಚಿಗೆ ಹರಿಹರರೂ ಅಂಜುವರು. ನಮ್ಮ ಲೇಖಣಿಯ ಹರಿತವನ್ನು ಹೈಟೆಕ್ ವಿದ್ಯುನ್ಮಾನ ಮೊಂಡು ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಅಂತಿಮವಾಗಿ ಲೇಖಕರದು.

ಜಾಗತಿಕ ಪ್ರeಗೆ ಸಮಾನಾಂತರವಾಗಿ ಕನ್ನಡ ತನ್ನ ಧಾರಣಶಕ್ತಿಗೆ ಸಜ್ಜಾಗದೆ ಗತ್ಯಂತರವಿಲ್ಲ. “ಇದು ವೈಜ್ಞಾನಿಕ ಯುಗ, ಹೈಟೆಕ್ ಕಾಲ. ಕೈಗಾರಿಕಾದಿ ಉದ್ಯಮಗಳಿಗೆ, ಗಣಕಯಂತ್ರಗಳಿಗೆ, ತಂತ್ರಾಂಶಗಳಿಗೆ, ಕಂಪ್ಯೂಟರಿಗೆ ಆದ್ಯತೆ. ಅದರಿಂದ ಸಾಹಿತ್ಯದ ಅಗತ್ಯ ಇದೆಯೆ” – ಎಂಬ ಪ್ರಶ್ನೆ ಎದ್ದಿದೆ. ಯಾವ ಯುಗದಲ್ಲೂ ಸಾಹಿತ್ಯವನ್ನು ಗೌಣವೆಂದು ಗುಡಿಸಿ ಹಾಕುವಂತಿಲ್ಲ. ಸಾಹಿತ್ಯ ಶಾಸ್ತ್ರವೂ ಹೌದು, ವಿಜ್ಞಾನವೂ ಹೌದು, ಮನೋವಿಜ್ಞಾನವೂ ಹೌದು. ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಸ್ತ ಜ್ಞಾನಗಳ ಕಲಿಕೆಗೆ ಕನ್ನಡ ಸಶಕ್ತವಾಗಿದೆಯೆಂದು ಜಗತ್ತಿಗೆ ತೋರಿಸಲು ವಿಜ್ಞಾನಿಗಳು ಕನ್ನಡವನ್ನು ಬಳಸಬೇಕು.

ಇಂಥ ಆತ್ಮಪ್ರತ್ಯಯ ಮೂಡಲು ಕನ್ನಡ ನಡೆದು ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಬೇಕು. ಇಡೀ ದಕ್ಷಿಣ ಏಷಿಯಾರಾಷ್ಟ್ರಗಳ ಪ್ರಭುತ್ವದ ಭಾಷೆಯಾಗಿ ರಾಜರ ಒಡ್ಡೋಲಗಗಳಲ್ಲಿ ಸಂಸ್ಕ ತ ಪ್ರತಿಷ್ಠಿತವಾಗಿದ್ದ ಕಾಲಘಟ್ಟದಲ್ಲಿ ಶ್ರೀ ವಿಜಯ (೮೫೦), ಆದಿ ಗುಣವರ್ಮ (೯೦೦), ಪಂಪ (೯೪೧) ಪೊನ್ನ (೯೯೫), ರನ್ನ (೯೯೩) ಮೊದಲಾದವರು ಪುಟ್ಟ ಪ್ರದೇಶದ ಜನಭಾಷೆಯಾದ ಕನ್ನಡವನ್ನು ರಾಜಮನ್ನಣೆಯ ಆಸ್ಥಾನ ಭಾಷೆಯಾಗಿಸಿ, ಮಹಾಕಾವ್ಯಗಳ ಭಾಷೆಯಾಗಿಸಿ ಕೀಳರಿಮೆಯ ಬೇರುಗಳನ್ನು ಕತ್ತರಿಸಿದರು, ಕನ್ನಡದ ಸೃಷ್ಟಿ ಶಕ್ತಿಯನ್ನು ಎತ್ತರಿಸಿದರು. ಅದೇ ರೀತಿ ಇಂದು ಶ್ರೇಷ್ಠ ವಿಜ್ಞಾನಿಗಳು ಕನ್ನಡದಲ್ಲಿ ಸ್ವತಂತ್ರ, ಸ್ವೋಪಜ್ಞ, ಅನ್ಯಾವಲಂಬಿಯಲ್ಲದ, ಅನುಕರಣವಲ್ಲದ ಅಸಲು ಕೃತಿಗಳಿಗೆ ಜನ್ಮದಾತರಾಗಬೇಕು. ವಿನೂತನ ವೈಜ್ಞಾನಿಕ ಆವಿಷ್ಕಾರಗಳು ಹೀಗೆ ಕನ್ನಡದಲ್ಲಿಯೇ ಉದ್ಭವಿಸಿದರೆ ಆಗ ಕನ್ನಡ ಮಾತೃಕೆಯಾಗುತ್ತದೆ. ಜೊತೆಗೆ ವಿಜ್ಞಾನವನ್ನು ಕನ್ನಡದಲ್ಲಿ ಮನಮುಟ್ಟುವಂತೆ ಹೇಳಲು ಸಾಧ್ಯವಾದಾಗ ಸಹಜವಾಗಿ ಕನ್ನಡ ಮಾಧ್ಯಮಕ್ಕೆ ಶಕ್ತಿ ಬರುತ್ತದೆಯಲ್ಲದೆ ಕನ್ನಡ ಕಲಿಯುವರಿಗೂ ಕಲಿಸುವವರಿಗೂ ವಿಶ್ವಾಸದೊಂದಿಗೆ ಉತ್ಸಾಹ ಗರಿಗೆದರುತ್ತದೆ.

ತಂತ್ರಜ್ಞಾನದ ನಿರಾಕರಣೆ ಸಲ್ಲದು. ಕನ್ನಡ ಜಗತ್ತಿಗೆ ತಂತ್ರಜ್ಞಾನದ ಪ್ರವೇಶ ಸ್ವಾಗತಾರ್ಹ. ಎರಡು ದಶಕಗಳಿಂದಲೂ ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ಸಂತಸದಾಯಕ ಸಂಗತಿ. ತಂತ್ರಜ್ಞಾನವನ್ನು ಒಂದು ಭಾಷೆಗೆ ತರುವಾಗ ತಂತ್ರಜ್ಞಾನದ ಸಲಕರಣೆಗಳ (ಟೆಕ್ನಾಲಜಿ ಟೂಲ್ಸ್) ನಿರ್ಮಾಣ ಆಯಾ ಭಾಷೆಯ ಜಾಯಮಾನ ಮತ್ತು ಸಾಂಸ್ಕ ತಿಕ ವಿನ್ಯಾಸಕ್ಕೆ ಧಕ್ಕೆಯಾಗದಂತೆ ನಿರ್ಮಿಸಬೇಕು. ಜೊತೆಗೆ ತಂತ್ರಜ್ಞಾನವೆಂದಾಕ್ಷಣ ಕನ್ನಡತನವನ್ನು ಕ್ಲಿಷ್ಟಗೊಳಿಸಲಾಗಲಿ ನಷ್ಟಗೊಳಿಸಲಾಗಲಿ ಸಂಯೋಜಿಸಲಾಗುತ್ತಿಲ್ಲ ಎಂಬ ಅಂಶ ಆದರ್ಶವಾಗಿರಬೇಕು. ಕನ್ನಡಕ್ಕೆ ಮಾರಕವಾಗದೆ ಪೂರಕವಾಗಿ ತಂತ್ರಜ್ಞಾನ ಸಲಕರಣೆಗಳನ್ನು ನಿರ್ಮಿಸುವಾಗ ಗಮನಿಸಬಹುದಾದ ಕೆಲವು ಸಂಕೀರ್ಣ ಸಂಗತಿಗಳನ್ನು ಸಂಗ್ರಹವಾಗಿ ಪ್ರಸ್ತಾಪಿಸುತ್ತೇನೆ.

೧. ಒಸಿ‌ಆರ್ (uಇ = umಠಿಜ್ಚಿZ eZZಠಿಛ್ಟಿ ಛ್ಚಿಟಜ್ಞಜಿಠಿಜಿಟ್ಞ), ಅಂದರೆ ‘ಚಾಕ್ಷುಷ ಅಕ್ಷರ ಗುರುತಿಸುವಿಕೆ’ ಎಂಬ ತಂತ್ರಾಂಶದ ನಿರ್ಮಾಣ ಕನ್ನಡಕ್ಕೆ ಅತ್ಯವಶ್ಯಕವಾದದ್ದು. ಈ ತಂತ್ರಾಂಶದಿಂದ ನೂರಾರು ವರ್ಷಗಳ ಹಳೆಯ ಪ್ರತಿಯ ಮರು ಮುದ್ರಣ ಸುಲಭ ಸಾಧ್ಯವಾಗುತ್ತದೆ. ಆದರೆ ಹಳೆಯ ಓಲೆಗರಿ ಪ್ರತಿಗಳನ್ನು ‘ಸ್ಕಾ ನ್’ ಮಾಡಿ ಯಥಾವತ್ತಾಗಿ ಅದನ್ನು ಕಂಪ್ಯೂಟರ್ ಮುಖಾಂತರ ಸಂರಕ್ಷಿಸಬೇಕೇ ಹೊರತು ಮೂಲಪ್ರತಿಯನ್ನೇ ತಿದ್ದುವ ಪರಿಪಾಠವನ್ನು ಪ್ರಾರಂಭಿಸಬಾರದು. ಅಂದರೆ ಒಸಿ‌ಆರ್ (uಇ) ಅನ್ನು ಸಾಧಕವನ್ನಾಗಿ ಉಪಯೋಗಿಸಿಕೊಳ್ಳಬೇಕೇ ವಿನಾ ಬಾಧಕವಾಗಿ ಅಲ್ಲ.

೨. ಪಠ್ಯದಿಂದ ವಾಕ್ (ಠಿಛ್ಡಿಠಿ ಠಿಟ omಛಿಛ್ಚಿe=SSಖ) ಮತ್ತು ವಾಕ್‌ನಿಂದ ಪಠ್ಯ (omಛಿಛ್ಚಿe ಠಿಟ ಠಿಛ್ಡಿಠಿ = ಖSS) ಎಂಬ ತಂತ್ರಾಂಶ ನಿರ್ಮಾಣದಲ್ಲಿ ಕನ್ನಡ ಭಾಷೆಯ ವಾಕ್ಯ ವಿಜ್ಞಾನ (ಖqsಠಿZ) ಮತ್ತು ಶಬ್ದಾರ್ಥ ವಿಜ್ಞಾನಕ್ಕೆ (ಖಛಿಞZಠಿಜ್ಚಿo) ಲೋಪ ಬರದಂತೆ ಕಾರ್ಯನಿರ್ಮಾಣ ಸಮರ್ಪಕ ರೀತಿಯಲ್ಲಿ ಸಂಯೋಜಿತವಾಗಬೇಕು.

೩. ಸ್ವಯಂ ವಾಕ್ ಜ್ಞಾನ (ZಠಿಟಞZಠಿಜ್ಚಿ omಛಿಛ್ಚಿe ಛ್ಚಿಟಜ್ಞಜಿಠಿಜಿಟ್ಞ = ಅಖ್ಟ) ತಂತ್ರಾಂಶ ನಿರ್ಮಾಣದಲ್ಲಿಯೂ ಕನ್ನಡ ಭಾಷಾ ಪ್ರಯೋಗದೊಂದಿಗೆ ಕನ್ನಡ ಉಪಭಾಷೆಗಳ ಪ್ರಯೋಗವನ್ನೂ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕಾದ ಜವಾಬ್ದಾರಿಯೂ ಇದೆ.

೪. ಯಂತ್ರ ಭಾಷಾಂತರವೂ ಸ್ವಾಗತಾರ್ಹವೇ ಆದರೂ ಇದು ‘ವಾಕ್’ನಿಂದ ‘ವಾಕ್’ಗೆ (omಛಿಛ್ಚಿe ಠಿಟ omಛಿಛ್ಚಿe) ರೂಪದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಯಂತ್ರಮುಖೇನ ಪ್ರವಹಣಗೊಳ್ಳುವುದರಿಂದ ಭಾಷೆಯ ಕಣ ಕಣವನ್ನೂ ಪರಿಗಣಿಸಿ ಭಾಷೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ.

೫. ಕನ್ನಡ ಭಾಷೆಗೊಂದು ಪ್ರತ್ಯೇಕ ವಿದ್ಯುನ್ಮಾನ ಅಂಚೆಯ (ಜ್ಚಿಟbಛಿ) ಉಪಯೋಗ ಲಭ್ಯವಾಗಬೇಕು. ಇದಕ್ಕಾಗಿ ವಿದ್ಯುನ್ಮಾನ ನಿಘಂಟುಗಳು ನಿರ್ಮಾಣವಾಗಬೇಕಲ್ಲದೆ ವಿದ್ಯುನ್ಮಾನ ಕೃತಿಗಳ ಅವತರಣಿಕೆಯೂ ಆಗಬೇಕು. ವಿದ್ಯುನ್ಮಾನ ನಿಘಂಟುಗಳ ಉಪಯುಕ್ತತೆ ವ್ಯಾಪಕವಾಗಿರಲು ಅವು ಏಕಭಾಷಾ ಆಗಿರದೆ ದ್ವಿಭಾಷಾ ತ್ರಿಭಾಷಾ ಬಹುಭಾಷಾ ನಿಘಂಟುಗಳಾಗಿರಬೇಕು. ಇಂಥ ವಿದ್ಯುನ್ಮಾನ ನಿಘಂಟುಗಳಂದ ಕನ್ನಡ ಭಾಷಾ ಸಾಹಿತ್ಯ ಕರ್ನಾಟಕ ದಾಟಿ ಹೊರನಾಡುಗಳಲ್ಲಿಯೂ ದಾಂಗುಡಿಯಿಡುತ್ತದೆ. ಇನ್ನು ಮುಂದೆ ಕರ್ನಾಟಕ ಪಸರಿಸುವ ಪರಿ ಇದಾದೀತು.

೬. ಈ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಕನ್ನಡ ವರ್ಣಮಾಲೆ ಕಳೆದುಹೋಗದಂತೆ ಹೆಚ್ಚಿನ ನಿಗಾ ವಹಿಸಬೇಕು. ಕನ್ನಡ ಅಕ್ಷರಗಳಿಗೆ ಧಕ್ಕೆ ಆಗದೆ ಯಥಾವತ್ತಾಗಿ ಉಳಿಯಬೇಕೆಂದು ಹೇಳುವಾಗ ಕೆಲವು ದ್ವಂದ್ವಗಳೂ ಎದುರಾಗಬಹುದು. ಉದಾಹರಣೆಗೆ ವಿi-ಮೀ, ಪು-ಪು, ಪೂ-ಪೂ, ಪೊ-ಪೊ ಎಂಬ ಎರಡೆರಡು ಸಮಾನ ರೂಪಗಳಲ್ಲಿ ಯಾವುದಾದರೂ ಒಂದನ್ನು ಒಪ್ಪಿಕೊಳ್ಳುವುದರಿಂದ ಸುಭಗತೆ, ಸರಳತೆ ಬರುತ್ತದೆ. ಹೊಸದಾಗಿ ಕಲಿಯುವವರಿಗೆ ಗೊಂದಲಗಳಿರುವುದಿಲ್ಲ.

ಇಂದು ಅನೇಕ ಜಾಲತಾಣಗಳು ಲಭ್ಯವಿವೆ. ಕಾಲದ, ಸ್ಥಳದ, ಪರಿಸರದ ನಿರ್ಬಂಧಗಳನ್ನು ಸೀಮೋಲ್ಲಂಘನ ಮಾಡಿ ಮಾಹಿತಿಯು ವಿಶ್ವಾದ್ಯಂತ ಲಭ್ಯವಾಗುತ್ತಿದೆ. ಇದು ಅಯಾಚಿತವಾಗಿ ಅವಲೀಲೆಯಿಂದ ದಕ್ಕುತ್ತಿರುವ ಕಾರಣಕ್ಕಾಗಿಯೂ ಮಾಹಿತಿ ತಂತ್ರಜ್ಞಾನ ಸಲಕರಣೆಗಳನ್ನು (ಜ್ಞ್ಛಿಟ್ಟಞZಠಿಜಿಟ್ಞ ಠಿಛ್ಚಿeಟ್ಝಟಜqs ಠಿಟಟ್ಝo) ಅಳವಡಿಕೆಯಲ್ಲಿ ಅತ್ಯಂತ ಕಾಳಜಿ ವಹಿಸಬೇಕಾದ ಗುರುತರವಾದ ಹೊಣೆಯಿದೆ.

ಮುಖ್ಯವಾಗಿ ಭಾರತೀಯ ವಿಜ್ಞಾನ ಸಂಸ್ಥೆಯಂಥ ತಜ್ಞರು ಕನ್ನಡ ಭಾಷೆಗೆ ಮಾಹಿತಿ ತಂತ್ರಜ್ಞಾನ ಸಲಕರಣೆಗಳನ್ನು ನಿರ್ಮಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಮಾಹಿತಿ ತಂತ್ರಜ್ಞಾನದ ಉಪಯೋಗ ಎಷ್ಟೆಂಬುದನ್ನು ಬಲ್ಲವರೆಲ್ಲ ಸ್ವಾಗತಿಸುತ್ತಾರೆ. ಒಂದೇ ಒಂದು ಅಯಸ್ಕಾಂತ ತಟ್ಟೆ (‘ಸಿಡಿ’)ಯಲ್ಲಿ ಸುಮಾರು ಐನೂರು ಪುಸ್ತಕಗಳನ್ನು ಅಳವಡಿಸಬಲ್ಲ ಸೌಕರ್ಯವಿದೆಯೆಂದ ಮೇಲೆ ಅದರ ಅನುಕೂಲ, ಮಿತವ್ಯಯಾಸಕ್ತಿ ದೊಡ್ಡ ಆಕರ್ಷಣೆಯಾಗಿದೆ. ಈ ಅನುಕೂಲ ನಾಳೆ ನಮ್ಮ ಮುದ್ರಣ ಕ್ಷೇತ್ರಕ್ಕೆ ಸವಾಲಾಗಿ ನಿಲ್ಲಲೂಬಹುದು. ಒಂದೊಂದು ಅಯಸ್ಕಾಂತ ತಟ್ಟೆ (‘ಸಿಡಿ’) ನೂರಾರು ಗ್ರಂಥಗೆಳನ್ನು ಹಿಡಿದುಕೊಡುವಾಗ ಇನ್ನು ಮುಂದೆ ಮುದ್ರಕರು, ಪ್ರಕಾಶಕರು, ವಿತರಕರು, ಲೇಖಕರು ಕಷ್ಟಗಳಿಗೆ ಸಿಕ್ಕಿ ಬೀಳಬಹುದಲ್ಲವೆ? – ಈ ನಿಟ್ಟಿನಲ್ಲಿಯೂ ನಾವು ಇಂದೇ ಮುನ್ನೆಚ್ಚರಿಕೆ ವಹಿಸಬೇಕಾದ ಜರೂರು ಬಂದಿದೆ. ಒಂದರಿಂದ ೨೫ರ ವರೆಗೆ ಮಗ್ಗಿ ಹೇಳುತ್ತ ಮಕ್ಕಳ ಜ್ಞಾಪಕ ಶಕ್ತಿಯನ್ನು ಹರಿತವಾಗಿಡಲು ಶಾಲೆಯಲ್ಲಿ ಶಿಕ್ಷಣ ಕೊಡುತ್ತಿದ್ದರು. ಕ್ಯಾಲಿಕ್ಯುಲೇಟರ್‌ನ ಬಹುಬಳಕೆಯಿಂದ ಆ ಪದ್ಧತಿಯಲ್ಲಿ ಆಸಕ್ತಿ ಬತ್ತಿ ಹೋಗಿದೆ. ಎರಡು ಎರಡು ಸೇರಿದರೆ ಎಷ್ಟು ಎಂಬುದಕ್ಕೂ ಕ್ಯಾಲಿಕ್ಯುಲೇಟರನ್ನು ಆಶ್ರಯಿಸುವಂತಾದರೆ ಬುದ್ಧಿಗೆ ತುಕ್ಕು ಹಿಡಿಯುತ್ತದೆ. ಈಗ ಕಂಪ್ಯೂಟರಿನ ಮೂಲಕ ಓದು, ಬರೆಹ, ಪತ್ರವ್ಯವಹಾರ ಜನಪ್ರಿಯವಾಗುತ್ತಿದೆ. ಇದರಿಂದ ಮುಂದೆ ಕೈಯಿಂದ ಅಕ್ಷರಗಳನ್ನು ಬರೆಯುವ ಪರಿಪಾಟಿಯೂ ತಪ್ಪಬಹುದು. ಇಂದು ಇರುವ ವಿದ್ಯಾವಂತರು ಮತ್ತು ಅವಿದ್ಯಾವಂತರು ಎಂಬೆರಡು ವರ್ಗಗಳಿಗೆ ಸಮಾನಾಂತರವಾಗಿ ಕಂಪ್ಯೂಟರ್ ಇರುವವರು ಮತ್ತು ಇಲ್ಲದವರ ನಡುವೆ ಬಿರುಕು ಮೂಡಿ ಎರಡು ವರ್ಗಗಳು ಏರ್ಪಡಬಹುದು. ಆದ್ದರಿಂದ ತಂತ್ರಜ್ಞಾನವೆಂಬುದು ಕೇವಲ ಮಾಹಿತಿಯನ್ನು ‘ಕೊಳ್ಳೋದು-ಮಾರೋದು’ ಎಂಬ ಯಾಂತ್ರಿಕ ವ್ಯವಹಾರ ಆಗದೆ ವಿದ್ಯೆಯನ್ನು ಸೃಷ್ಟಿಸುತ್ತ ಕನ್ನಡವನ್ನು ಹದಗೊಳಿಸುವ ಕಾರ್ಯಗತಿಯಾಗಲಿ. ದೇಶೀಯ ಭಾಷೆಗಳನ್ನು ಒತ್ತರಿಸುತ್ತ ಇಂಗ್ಲಿಷಿನಂಥ ಪ್ರಪಂಚದ ಬಲಿಷ್ಠ ಭಾಷೆಯ ಮುನ್ನುಗ್ಗುವಿಕೆಯನ್ನು ಎದುರಿಸಿ ನಿಲ್ಲುವ ತಾಕತ್ತನ್ನು ಕನ್ನಡಕ್ಕೆ ಈ ವಿದ್ಯುನ್ಮಾನ ತಾಂತ್ರಿಕ ಸಲಕರಣೆ ತುಂಬಬೇಕಾಗಿದೆ. ಫ್ರೆಂಚ್, ಜರ್ಮನ್, ಹಂಗೇರಿಯನ್ ಮೊದಲಾದ ಯೂರೋಪಿಯನ್ ಭಾಷೆಗಳು ಇಂಥ ಸಾಮರ್ಥ್ಯದಿಂದ ಇಂಗ್ಲಿಷಿನ ದಾಳಿಯನ್ನು ಹಿಮ್ಮೆಟ್ಟಿಸಿ ನಿಂತಿರುವ ದೃಷ್ಟಾಂತಗಳಿಂದ ಸ್ಫೂರ್ತಿಗೊಳ್ಳೋಣ. ಸಹಸ್ರಮಾನಗಳ ಹಿಂದೆ ಶ್ರಮಣ ಪರಂಪರೆ ಜನಭಾಷೆಗೆ ನಾಲಗೆಯಾದದ್ದು ಇಂಥ ಜನಮುಖಿ ತುಡಿತಗಳಿಂದ. ಶತಮಾನಗಳ ಹಿಂದೆ ಸಂಸ್ಕ ತದ ಯಜಮಾನ್ಯವನ್ನು ದೂರವಿಟ್ಟು ‘ಅನ್ಯರ ಮನೆಯ ಬಾವಿಯ ಸಿಹಿನೀರಿಗಿಂತ ನಮ್ಮ ಮನೆಯ ಉಪ್ಪುನೀರೇ ಲೇಸೆಂದು’ ಕನ್ನಡವನ್ನು ಪೊರೆದ ಶರಣರ, ದಾಸರ ಮಾದರಿ ನಮಗೆ ದಾರಿದೀಪವಾಗಬೇಕು. ವಿದ್ಯುನ್ಮಾನ ಸಾಧನೆಗಳು ಕನ್ನಡಕ್ಕೆ ದಕ್ಕುವ ದಿಕ್ಕಿನಲ್ಲಿ ಏನೇನು ಮಾಡಬೇಕೆಂಬುದನ್ನು ಸೂಚಿಸುವಂಥ ಪರಿಣತಿ ಗಳಿಕೆಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಸಮಯ ಸಾಮರ್ಥ್ಯವನ್ನು ಕೇಂದ್ರೀಕರಿಸಬೇಕು.

ಬಹುತಾಂತ್ರಿಕ ಆಧುನೀಕರಣ ಮತ್ತು ಜಾಗತೀಕರಣದ ತುಡಿತದಿಂದಾಗಿ ಪ್ರಾದೇಶಿಕ ಭಾಷೆಯ ಯುವ ಪ್ರತಿಭೆಗಳು ಮಾತೃಭಾಷೆಯನ್ನು ತೊರೆದು ಇ-ಶಿಕ್ಷಣಕೆ ಪಲಾಯನ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಮೊದಲೇ ಪರಿಮಿತವಾಗಿದ್ದ ಪ್ರಾದೇಶಿಕ ಭಾಷೆಗಳ ಓದುಗರ ಪ್ರಮಾಣ ಈಗ ಮತ್ತಷ್ಟು ಇಳಿಮುಖಗೊಂಡಿದೆ. ಇಂಥ ಇಳಿಗಾಲದಲ್ಲಿ ಕನ್ನಡಕ್ಕೆ ಉಳಿಗಾಲ ಎಲ್ಲಿ, ಹೇಗೆ ಎಂಬುದು ಗಂಭೀರ ಪರಿಭಾವನೆಯ ಸಮಸ್ಯೆ. ಇದನ್ನು ಮತ್ತಷ್ಟು ಉಲ್ಬಣಗೊಳಿಸಿರುವುದು ಹೊಸ ಪೀಳಿಗೆ ತಾಯಿಭಾಷೆಯ ಹೊಕ್ಕಳ ಬಳ್ಳಿಯಿಂದ ಕಳಚಿಕೊಳ್ಳುತ್ತಿರುವುದಲ್ಲದೆ ತಾಯಿಭಾಷೆಯ ಸಾಹಿತ್ಯದಿಂದಲೂ ದೂರ ಸರಿಯುತ್ತಿರುವುದು. ಸವಾಲುಗಳು ಹೀಗೆ ಸಂಕೀರ್ಣತರಗೊಳ್ಳುತ್ತ ಸಾಗುತ್ತಿರುವಾಗ ಅದಕ್ಕೆ ಸಡ್ಡು ಹೊಡೆದು ಸಜ್ಜಾಗಿ ನಿಲ್ಲುವ ಕಸುವು ಇದೆಯೆ ಎಂಬ ಶೋಧನೆಯ ತುರ್ತು ಒದಗಿದೆ. ಮಾತೃಭಾಷೆ ಯಾವುದೇ ಇರಲಿ, ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡವನ್ನು ಒಪ್ಪಿಕೊಳ್ಳಬೇಕು. ಕನ್ನಡವನ್ನು ಒಪ್ಪಿಕೊಳ್ಳದವರಿಗೆ ಇಲ್ಲಿ ಜಾಗ ಸಿಗುವುದಿಲ್ಲವೆಂಬ ಒತ್ತಡ ತರುವುದಲ್ಲದೆ ರಾಜಧಾನಿಯಾದ ಬೆಂಗಳೂರು ಮೊದಲು ಕನ್ನಡಮಯವಾಗಬೇಕು. ಈ ಸಿಲಿಕಾನ್ ನಗರ ಕನ್ನಡವಾದರೆ ಇಡೀ ಕರ್ನಾಟಕ ಕನ್ನಡವಾಗುತ್ತದೆ. ಆಡಳಿತ ಗಂಗೋತ್ರಿಯಾದ ವಿಧಾನಸೌಧ ಕನ್ನಡವಾದರೆ ಬೆಂಗಳೂರು ತನಗೆ ತಾನು ಕನ್ನಡವಾಗುತ್ತದೆ. ರಾಜಧಾನಿಯಲ್ಲಿ ಕನ್ನಡವನ್ನು ಜೀವಂತವಾಗಿಡಲು ಹಾಗೂ ಕನ್ನಡದ ಬೇರುಗಳು ಒಣಗದಂತೆ ಸತತವಾಗಿ ಎಚ್ಚರಿಸುತ್ತಿರುವ ಕನ್ನಡ ಚಳವಳಿಗಾರರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಪುಸ್ತಕ ಸಂಸ್ಕ ತಿ

ಮನುಷ್ಯರನ್ನು ಹತ್ತಿರವಾಗಿಸುವ ಹಾಗೂ ಮನಸ್ಸುಗಳನ್ನು ಕೂಡಿಸುವ ಸಾಹಿತ್ಯ ನಿರ್ಮಿತಿ ಅಚ್ಯುತವಾಗಿ ನಡೆಯಬೇಕು. ಉದಾರೀಕರಣ ಹಾಗೂ ಜಾಗತೀಕರಣದ ಪರಿಣಾಮ ಪುಸ್ತಕ ಸಂಸ್ಕ ತಿಯ ಸಂದರ್ಭದಲ್ಲಿ ಯಾವ ಸ್ವರೂಪದ್ದಾಗಿ ಪರಿಣಮಿಸೀತೆಂಬ ಸಮೀಕ್ಷೆ ನಡೆಯಲಿ. ಪುಸ್ತಕ ಸಂಸ್ಕ ತಿ ಅವಿನಾಶಿಯೆಂದು ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಪುಸ್ತಕಗಳ ಸ್ವರೂಪ, ಬಳಸುವ ಸಾಮಗ್ರಿ ಬದಲಾಗುತ್ತ ಬಂದಿದೆ. ಓಲೆಗರಿಯಿಂದ ಕಾಗದಕ್ಕೆ ಮುದ್ರಣ ಕಲೆ ನಾಗಲೋಟದಿಂದ ಬೆಳೆಯುತ್ತ ಬದಲಾಗುತ್ತ ಚಲನಶೀಲವಾಗಿದೆ. ಇಂದು ಅಚ್ಚಾಗಿ ಹೊರಬರುತ್ತಿರುವ ಪುಸ್ತಕಗಳ ಚೆಲುವಿಗೆ ಮಾರುಹೋಗುತ್ತೇವೆ. ಹಿಂದೆಂದೂ ಕಾಣದಂಥ ಅಂದ ಚೆಂದದ ಬೊಂಬೆಗಳಂತೆ ಮನಮೋಹಕ ಹೊರಪುಟ ಹೊದಿಕೆಯೊಂದಿಗೆ ಕನ್ನಡ ಪುಸ್ತಕಗಳು ಹೊರಬರುತ್ತಿವೆ. ಸತ್ವಶಾಲಿ ಒಳಹೂರಣವೂ ಉಂಟು. ಓಲೆಗರಿ, ಕಾಗದಗಳ ಯುಗ ಮುಗಿದು ಕ್ಯಾಸೆಟ್ಟು, ಫ್ಲಾಪಿ, ಸಿಡಿರಾಂಗಳ ಕಾಲದಲ್ಲಿದ್ದೇವೆ. ಸಾಹಿತಿಗಳು ಅಕ್ಷರ ಸಂಸ್ಕ ತಿಯ ವಕ್ತಾರರು ಹಾಗೂ ಪುಸ್ತಕ ಸಂಸ್ಕ ತಿಯ ವಾರಸುದಾರರು.

ಹೈಟೆಕ್ ಮತ್ತು ಮಾಹಿತಿ ತಂತ್ರಜ್ಞಾನದ ನೆರಳು ಎಲ್ಲ ಕ್ಷೇತ್ರಗಳ ಮೇಲೆ ಬೀಳುತ್ತಿರುವಾಗ ಸಾಹಿತಿಗಳೂ ಕಲಾವಿದರೂ ಚಲನಚಿತ್ರ ನಿರ್ಮಾಪಕರೂ ಪುಸ್ತಕ ಪ್ರಕಾಶಕರೂ ತಟಸ್ಥರಾಗುವುದು ಅಸಾಧ್ಯ. ಪುಸ್ತಕ ಸಂಸ್ಕ ತಿಯ ಅಪಾಯಗಳನ್ನು ನಿವಾರಿಸುವುದಕ್ಕೂ ಸನ್ನದ್ಧವಾಗಿರಬೇಕಾಗುತ್ತದೆ. ನಾಡಿನ ಸಂಸ್ಕ ತಿಯ ಅಂತಸ್ಸತ್ವವನ್ನು ಅರಿಯಲೂ ಪರಿಚಯಿಸಲೂ ಸೂಕ್ತ ಪರಿಸರವನ್ನು ನಿರ್ಮಿಸುವ ಸದುದ್ದೇಶ ಪ್ರೇರಿತರಾಗಿ ಹಿಂದೆ ಕೆಂಗಲ್ ಹನುಮಂತಯ್ಯನವರು ಕನ್ನಡ-ಸಂಸ್ಕ ತಿ ಇಲಾಖೆಯನ್ನು ತೆರೆದರು, ಹಳ್ಳಿಗಳಲ್ಲಿ ಉಪನ್ಯಾಸಗಳಿಗೆ ಎಡೆಮಾಡಿದರು, ಎರಡು ರೂಪಾಯಿಗೆ ಕುಮಾರವ್ಯಾಸ ಭಾರತ ಕಾವ್ಯ ಜನರಿಗೆ ಎಟುಕುವಂತೆ ಮಾಡಿದರು. ಇಂದು ಪುಸ್ತಕ ವಿತರಣಾ ನೀತಿ ಸಂಹಿತೆಯನ್ನು ರೂಪಿಸಿ ಗ್ರಂಥ ಉದ್ಯಮವನ್ನು ಸಶಕ್ತವಾಗಿಸಬೇಕಾಗಿದೆ. ವಿಶ್ವವಿದ್ಯಾಲಯಗಳು, ಅನುದಾನಿತ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕ ತಿ ಇಲಾಖೆ, ಪುಸ್ತಕ ಪ್ರಾಧಿಕಾರ – ಇವೆಲ್ಲದರ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯಲಿ. ಓದುಗನಿಗೆ ಒಂದೇ ಸೂರಿನಡಿ ತನಗೆ ಬೇಕಾದ ಪುಸ್ತಕ ಸಿಗುವ ಹಾಗೆ ಅನುಕೂಲ ಕಲ್ಪಿಸುವುದೆಂದರೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಮಾರಾಟ ಮಳಿಗೆ ತೆರೆಯಲಿ.

ಲೇಖಕ, ಪ್ರಕಾಶಕ, ಮುದ್ರಕ, ವಿತರಕ, ವಾಚಕ – ಇವು ಅಯ್ದು ಪುಸ್ತಕ ಸಂಸ್ಕ ತಿಯ ಪಂಚಾಂಗ. ಲೇಖಕ – ಪ್ರಕಾಶಕರಿಗೆ ಪ್ರಶಸ್ತಿಗಳಿರುವಂತೆ ಮುದ್ರಕರಿಗೂ ವಿತರಕರಿಗೂ, ಅದರಲ್ಲಿಯೂ ಏಕವ್ಯಕ್ತಿ ವಿತರಕರಿಗೂ, ಪ್ರಶಸ್ತಿಯ ಪ್ರೋತ್ಸಾಹವಿರಲಿ.

ಪುಸ್ತಕ ಸಂಸ್ಕ ತಿ ಸಂವರ್ಧನೆಗೆ ಸಾಹಿತ್ಯ ಸಮ್ಮೇಳನ ಗಟ್ಟಿ ಅಡಿಪಾಯವಾಗುತ್ತಿದೆ. ಓದುಗರ ಸಂಖ್ಯೆ ಇಳಿಮುಖವಾಗಿಲ್ಲ ಮತ್ತು ವಾಚನಾಭಿರುಚಿ ಒಣಗಿಲ್ಲ ಎಂಬುದಕ್ಕೆ ಪುಸ್ತಕ ಮಳಿಗೆಗಳು ಕನ್ನಡಿ ಹಿಡಿದಿವೆ. ಆದರೆ ಪೋಷಕರೂ ಅಧ್ಯಾಪಕರೂ ಶಾಲಾ ಮಕ್ಕಳಿಗೆ ರಜೆ ಬಂದರೆ ಪ್ರವಾಸ, ಪಿಕ್‌ನಿಕ್, ಚಲನಚಿತ್ರ, ಮನರಂಜನೆಗೆ ಕರೆದುಕೊಂಡು ಹೋಗುತ್ತಾರೆ. ಗ್ರಂಥಾಲಯಗಳಿಗಂತೂ ಹೋಗುವುದಿಲ್ಲ. ಹೀಗಿರುವಾಗ ಪುಸ್ತಕ ಪ್ರೀತಿ ಬತ್ತದೆ ಹಸಿರಾಗುವುದು ಹೇಗೆ. ಬುದ್ಧಿವಂತಿಕೆಯೊಂದಿಗೆ ಹೃದಯವಂತಿಕೆಗೆ, ಬೌದ್ಧಿಕ ವಿಕಾಸದೊಂದಿಗೆ ಮಾನಸಿಕ ಪಕ್ವತೆಗೆ ಓದು ಸಹಕಾರಿ. ಯಂತ್ರಮಾನವನಾಗದೆ ಹೃದಯ ಸಿರಿಯ ನಾಗರಿಕರಾಗಲು ಪುಸ್ತಕ ಪ್ರೀತಿ ಸಹಾಯವಾಗುತ್ತದೆ.

ಕರ್ನಾಟಕದಲ್ಲಿ ಚಲನಚಿತ್ರೋದ್ಯಮ ಪ್ರತಿಭಾ ಸಂಪನ್ನರ ಕ್ಷೇತ್ರವಾಗಿ ವರ್ಧಿಸುತ್ತಿದೆ. ನಟನಟಿಯರೂ ನಿರ್ದೇಶಕ ನಿರ್ಮಾಪಕರೂ ಕರ್ನಾಟಕದ ಸಾಂಸ್ಕ ತಿಕ ಪರಂಪರೆಯನ್ನು ಜನತೆಗೆ ಪ್ರಭಾವಶಾಲಿಯಾಗಿ ತಲಪಿಸುವ ದಿಕ್ಕಿನಲ್ಲಿ ಪ್ರಶಂಸಾರ್ಹ ರೀತಿಯಲ್ಲಿ ಶ್ರಮಿಸುತ್ತಿರುವ ಈ ಇಡೀ ಸಮುದಾಯವನ್ನು ಅಭಿನಂದಿಸುತ್ತೇನೆ. ಕಿರುತೆರೆಯ ಕ್ಷೇತ್ರದವರೂ ಹಿರಿತೆರೆಯವರಿಗಿಂತ ಕಡಿಮೆಯಿಲ್ಲದಂತೆ ಉತ್ತಮ ಧಾರಾವಾಹಿಗಳಿಂದ ಮನುಷ್ಯ ಸಮಾಜದ ಕತ್ತಲೆ ಬೆಳಕನ್ನು ಬಿಂಬಿಸುತ್ತಿದ್ದಾರೆ. ಅತ್ಯಾಚಾರ, ಕಳ್ಳತನ, ಕ್ರೌರ್‍ಯ, ದರೋಡೆ, ವಂಚನೆ, ಹಿಂಸೆಗಳಿಂದ ಸಮಾಜದ ನೆಮ್ಮದಿಯನ್ನು ಕೊಲ್ಲುವ ವ್ಯಕ್ತಿ, ಶಕ್ತಿ, ಪ್ರವೃತ್ತಿಗಳನ್ನು ಈ ಮಾಧ್ಯಮಗಳು ಬಯಲಿಗೆಳೆಯುತ್ತಿವೆ. ಆದರೆ ಇವನ್ನು ಅತಿಯಾಗಿ ಉತ್ಪ್ರೇಕ್ಷಿಸಿ ವೈಭವೀಕರಿಸುವುದಕ್ಕೆ ನಿಯಂತ್ರಣವಿರಬೇಕು.

ಸಾಹಿತ್ಯದಂತೆ ಮಾಧ್ಯಮಗಳೂ ಮನೆ ಮನಸ್ಸುಗಳನ್ನು ಮುರಿಯುವ ಹಾಗೂ ಹುರಿದುಮುಕ್ಕುವ ದಿಕ್ಕಿಗೆ ಹೆಜ್ಜೆ ಹಾಕುವುದಕ್ಕೆ ಪ್ರಚೋದನೆಯಾಗಬಾರದು. ಜನಮುಖಿ ಹಾಗೂ ಜೀವಪರ ತುಡಿತದ ತರಂಗಗಳಿಗೆ ಅಂತರಂಗ ಪುಟಿಯುವಂಥ ಪ್ರೇರಣೆ ಬರಲಿ. ಹೊಸಪೀಳಿಗೆಯ ಅರಳುವ ಪ್ರತಿಭೆಗಳಿಗೆ, ಸೃಜನಶೀಲ ಕರ್ಷಣಕ್ಕೆ ಎಂಥ ಪ್ರತಿಕೂಲ ಆತಂಕಗಳಿವೆ ಎಂಬುದನ್ನು ಬಲ್ಲೆ. ಇಡೀ ಭಾರತೀಯ ಪ್ರಜ್ಞಾವಲಯದಲ್ಲಿ ತುಂಬಿ ತುಳುಕುತ್ತ ಒಳಗೊಳಗೇ ಹಬ್ಬುತ್ತಿರುವ ಮಾಫಿಯ ಷಡ್ಯಂತ್ರ ಜಾಲ ಈ ಶ್ರವ್ಯ-ದೃಶ್ಯ ಮಾಧ್ಯಮಗಳನ್ನು ಆವರಿಸಿರುವುದು ಗೊತ್ತಿದೆ. ಆದರೆ ಇಂಥ ಇಕ್ಕಟ್ಟುಗಳ ಅಡಕತ್ತರಿಗೆ ಸಿಲುಕದೆ, ಪೂರ್ವಗ್ರಹದ ವಿಮರ್ಶೆಗಳ ಬುತ್ತಿಯನ್ನು ಬೆನ್ನಲ್ಲಿ ಕಟ್ಟಿಕೊಳ್ಳದೆ ಆರೋಗ್ಯಕರ ಸಮಾಜಕ್ಕೆ ಆಮ್ಲಜನಕ ತುಂಬುವ ಒತ್ತಾಸೆಯೇ ಮುಖ್ಯ ಪ್ರೇರಣೆಯಾಗಿರಲಿ. ಯಾವುದೇ ವೃತ್ತಿಯ ಪಾವಿತ್ರ್ಯ, ಘನತೆ ಮತ್ತು ಕ್ರಮವನ್ನು ಅಬದ್ಧವಾಗಿ ಯದ್ವಾತದ್ವಾ ತೋರಿಸುವುದು ಅರ್ಥಹೀನವಾಗುತ್ತದೆ. ಪೊಲೀಸರನ್ನು ನಿಷ್ಪ್ರಯೋಜಕರು, ದಡ್ಡರು ಎಂಬಿತ್ಯಾದಿಯಾಗಿ ಅಪಹಾಸ್ಯ ಹಾಗೂ ಗೇಲಿ ಮಾಡಿ ತೋರಿಸುವ ಪ್ರವೃತ್ತಿ ವಾಡಿಕೆಯಲ್ಲಿದೆ. ನ್ಯಾಯಾಲಯದ ನಡವಳಿಕೆಯಲ್ಲಿ ವಕೀಲರು ಮೇಜು ಮುರಿಯುವ ಹಾಗೆ ಗುದ್ದಿ ಕಟ್ಟಡ ಬಿರಿಯಂತೆ ಕೂಗಾಡುವುದು ಅವಾಸ್ತವ ಚಿತ್ರಣ. ಆಸ್ಪತ್ರೆ ಮತ್ತು ವೈದ್ಯ ವೃತ್ತಿಯನ್ನು ಪ್ರತಿನಿಧಿಸುವ ರೀತಿಯೂ ಅಷ್ಟೆ. ರೋಗಿಗೆ ನೇರವಾಗಿ ಒಬ್ಬನಿಂದ ಇನ್ನೊಬ್ಬನಿಗೆ ರಕ್ತ ಕೊಡುವಂತೆ ತೋರಿಸುವುದು ಅಪಹಾಸ್ಯವಾಗುತ್ತದೆ.

ಕನ್ನಡ ಅಧ್ಯಾಪಕರನ್ನು ಗೇಲಿ ಮಾಡುವುದು, ಶಾಲಾ ಕಾಲೇಜುಗಳನ್ನೂ ಚುಡಾಯಿಸಿ ಅಸಭ್ಯವಾಗಿ ರೌಡಿಗಳಂತೆ ವರ್ತಿಸುವುದೊಂದೇ ಇಂದಿನ ಹುಡುಗರು ನಡೆದುಕೊಳ್ಳುವ ಸಹಜ ನಡೆವಳಿಕೆ – ಎಂಬಂತೆ ಬಿಂಬಿಸುವುದು ಸರಿಯಲ್ಲ. ಇವೆಲ್ಲವೂ ಪ್ರೇಕ್ಷಕರ ಗುಣಮಟ್ಟವನ್ನು ಕೀಳಾಗಿ ತಿಳಿದು ಚಿತ್ರಿಸುವ ವಿಧಾನ. ವಾಸ್ತವತೆಯನ್ನು ಕೊಲ್ಲದೆ ಕತೆಯ ಹಂದರವನ್ನು ಪ್ರಭಾವಶಾಲಿಯಾಗಿ ಮಾಡುವ ಸಾಮರ್ಥ್ಯ ಬಳಕೆಯಾಗಲಿ ಎಂದು ಹೇಳುವಾಗ ಚಿತ್ರಣ ಆದರ್ಶಗಳ ಮುದ್ದೆಯಾಗಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಯಾವುದೇ ವೃತ್ತಿಗಳಲ್ಲಿ ತಾಂಡವವಾಡುವ ಕೊರಮರನ್ನು ಬಯಲಿಗೆಳೆಯುವಾಗ ವಸ್ತುಸ್ಥಿತಿಯ ತಪ್ಪು ಚಿತ್ರಣ, ದೋಷಗಳು ನುಸುಳಬಾರದೆಂಬ ಪ್ರೇಕ್ಷಕರ ಪರವಾದ ಸೂಚನೆಯಿದೆ. ಕನ್ನಡದ ಮಾತುಗಳನ್ನು ಮುಳುಗಿಸಿ ಅದರ ಮೇಲೆ ಅತಿಯಾಗಿ ಅನಗತ್ಯವಾಗಿ ಇಂಗ್ಲಿಷ್ ಸವಾರಿ ಮಾಡಿಸುವುದನ್ನು ದೃಶ್ಯ ಮಾಧ್ಯಮಗಳು ನಿಯಂತ್ರಿಸಬೇಕು.

ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಸಾಹಿತ್ಯ, ಸಂಸ್ಕ ತಿ ಕ್ಷೇತ್ರಗಳ ಅನಭಿಷಿಕ್ತ ಸೌರ್ವಭೌಮ ಸಂಸ್ಥೆ. ನಾಡು ನುಡಿ ಕಲೆ ಸಂಸ್ಕ ತಿಗಳ ಸರ್ವಾಂಗೀಣ ಸಂವರ್ಧನೆಗಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಂಸ್ಥೆ. ಲೇಖಕರಿಗೂ ಸಾಹಿತ್ಯಾಸಕ್ತರಿಗೂ ಅಂತರ್ಜಾಲವನ್ನು ನೇಯುವ, ಸಾಂಸ್ಕ ತಿಕ ಚೈತನ್ಯವನ್ನು ಉಕ್ಕಿಸುವ ಸಂಸ್ಥೆ. ನಾಡಿನ ಉದ್ದಗಲಗಳಲ್ಲಿ ಇದರ ಕೊಂಬೆ ರೆಂಬೆಗಳು ಪಲ್ಲವಿಸಿವೆ. ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಲ್ಲದೆ ಇತರ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿವೆ. ಆದರೆ ಅಲ್ಲಿಯೂ ಸಾಹಿತಿಗಳಿಗೇ ವೇದಿಕೆಗಳು ಸಲ್ಲುವಂತೆ ನಿಗಾ ವಹಿಸುವುದು ಒಳ್ಳೆಯದು.

ಕನ್ನಡ ಚೈತನ್ಯಕ್ಕೆ ಎಲ್ಲವನ್ನೂ ತಾಳಬಲ್ಲ ಕಸುವು ಇದೆ. ಎಂಥದೇ ಕಠಿಣಗಳನ್ನು ಜೀರ್ಣಿಸಿಕೊಂಡು ಪುಷ್ಟವಾಗುವ ವಿಶೇಷ ಮಹಿಮೆಯಿದೆ. ಪರ ಭಾಷೆಗಳನ್ನು, ಪರ ಸಂಸ್ಕ ತಿ ಮತ್ತು ವಿಚಾರಗಳನ್ನೂ ತನ್ನ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುತ್ತ ಕನ್ನಡ ಬೆಳೆದುಬಂದಿದೆ. ಕನ್ನಡದ ಸಾಂಸ್ಕ ತಿಕ ಪರಂಪರೆಯ ನಿಜದನಿಯನ್ನು ಮೊದಲು ದಾಖಲಿಸಿದ ಕವಿ ಶ್ರೀವಿಜಯ. ಕವಿರಾಜಮಾರ್ಗದಲ್ಲಿ ಆತ ಈ ಸಂಗತಿಯನ್ನು ಹಿಡಿದಿಟ್ಟ ಪದ್ಯ ಹೀಗಿದೆ:

ಕಸವರಮೆಂಬುದು ನೆರೆ ಸೈ
ರಿಸಲಾರ್ಪೊಡೆ ಪರ ವಿಚಾರಮಂ ಪರಧರ್ಮ್ಮಮುಮಂ
ಕಸವೇಂ ಕಸವರಮೇನು
ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ||

ನಮಗೆ ಬೇಕಾದದ್ದು ಎಲ್ಲ ಭಾಷೆಯವರೂ ಎಲ್ಲ ಧರ್ಮದವರೂ ಎಲ್ಲ ವಯಸ್ಸಿನವರೂ ಒಟ್ಟಿಗೆ ಸೌಹಾರ್ದದಿಂದ ಬಾಳಬಹುದಾದ ಸಂತೋಷ. ಅಂತರಂಗದಲ್ಲಿ ಪ್ರೀತಿಯ ಅಂತರ್ಜಲ ಪಾತಾಳಕ್ಕಿಳಿದಿದೆ, ರಿಗ್ ಹಾಕಿ ನೂರಾರು ಅಡಿ ಆಳಕ್ಕಳಿದರೂ ಇದು ಚಿಮ್ಮುವುದು ಕಷ್ಟವಾಗಿದೆ. ಶಬ್ದಗಳ ಅಳವಡಿಕೆಯಲ್ಲಿ ತೀರ ಮಡಿವಂತಿಕೆ ಬೇಡ. ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಹೊಸ ನುಡಿಗಳು ಸೇರ್ಪಡೆ ಆದರೆ ತಪ್ಪಿಲ್ಲ. ಆಯ್ದ ಅನ್ಯಭಾಷೆಯ ಮಾತುಗಳು ಕನ್ನಡ ನೇಯಿಗೆಯಲ್ಲಿ ಧಾರಾಳವಾಗಿ ಹೆಣೆದುಕೊಳ್ಳಲಿ. ಸಾವಿರಾರು ವರ್ಷಗಳಿಂದ ಕನ್ನಡ ಬಾಳಿದ್ದು ಹೀಗೆ, ಬೆಳೆದದ್ದು ಹಾಗೆ. ಜನಪ್ರಿಯ ನಿಘಂಟಿನ ಆವೃತ್ತಿಗಳು ಹೊಸ ಶಬ್ದಗಳ ಸೇರ್ಪಡೆಯಿಂದ ಪರಿಷ್ಕ ತಗೊಂಡು ಸಾಹಿತ್ಯ ಪರಿಷತ್ತಿನ ಪ್ರಕಟನೆಯಾಗಿ ಪ್ರತಿವರ್ಷ ಹೊರಬರುತ್ತಿರಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದು ಸುಲಭ ಬೆಲೆಯಲ್ಲಿ ಸಿಗಲಿ. ಜನಕ್ಕೆ ಕನ್ನಡದಲ್ಲಿ ಅಕ್ಕರೆಯಿದೆ ಎಂಬುದಕ್ಕೆ ಇಂಥ ಸಾಹಿತ್ಯ ಸಮ್ಮೇಳನಗಳು ಜ್ವಲಂತ ಸಾಕ್ಷಿ. ಹಾಸನದ ಸಮ್ಮೇಳನದಂತೆ ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನಗಳ ನೇರ ಪ್ರಸಾರವಾಗಬೇಕು. ಕೋಟ್ಯಂತರ ಜನ ಮನೆಯಲ್ಲಿ ಕುಳಿತು ದೂರದರ್ಶನದಲ್ಲಿ ಸಾಹಿತ್ಯ ಸಮ್ಮೇಳನವನ್ನು ನೋಡಿ ಸವಿಯುವಂತಾಗಲಿ.

ಪ್ರಾದೇಶಿಕ ಭಾಷೆಗೆ ಸಂಸ್ಕ ತಿಗೆ ತನ್ನದೇ ಆದೊಂದು ಸೊಗಡು, ಮೊಹರು, ಘಾಟು ಇರುತ್ತದೆ. ಭಾಷಾ ಏಕರೂಪತೆಗೆ ಗದ್ದುಗೆ ಹತ್ತಿಸುವುದಕ್ಕಿಂತ ಸ್ಥಳೀಯ ವೈವಿಧ್ಯಗಳನ್ನು ಉಳಿಸಿ ಬಾಳಿಸುವುದು ಒಳ್ಳೆಯದು. ಇದನ್ನು ಪತ್ರಿಕೆಗಳೂ ಬಳಸಿ ಪ್ರೋತ್ಸಾಹಿಸಬೇಕು. ಪತ್ರಿಕೆಗಳಿಂದಾಗಿ ಕನ್ನಡ ಭಾಷೆ, ಒಂದು ಶಿಷ್ಟರೂಪಕ್ಕೆ ಹೆಜ್ಜೆ ಹಾಕುತ್ತಲಿದೆ. ಆದರೆ ಉತ್ತರ ಕರ್ನಾಟಕದ ಪತ್ರಿಕೆಗಳು ಅಲ್ಲಿಯ ಜನಭಾಷೆಯ ವಿಶಿಷ್ಟತೆಯನ್ನು ಬಿಂಬಿಸುವುದು ಚೆನ್ನು. ಹೀಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೆಗಳು ಅಲ್ಲಿಯ ಪ್ರಾದೇಶಿಕ ಭಾಷೆಯ ಸ್ವರೂಪವನ್ನು ಬಿಡಬಾರದು. ಜನಭಾಷೆಯ ಸೊಗಸು ಇರುವುದೇ ಅದರ ಸೊಗಡಿನಲ್ಲಿ. ತನ್ನ ಸ್ವಂತಿಕೆಯ ಸ್ವರೂಪವನ್ನು ಬಳಸಲು ಯಾವ ಕೀಳರಿಮೆಯೂ ಕಾಡಬಾರದು.

ಸಮ್ಮೇಳನ ಇನ್ನಷ್ಟು ಪ್ರಭಾವಶಾಲಿ ಆಗಲು ಸಾಧ್ಯವಿದೆ. ಗೋಷ್ಠಿಗಳ ವಿನ್ಯಾಸ ಅರ್ಥಪೂರ್ಣವಾಗಿಸಬಹುದು ನಾಲ್ಕೆ ದು ತಿಂಗಳ ಮುಂಚೆಯೇ ಪತ್ರವ್ಯವಹಾರ ನಡೆಸಿದರೆ ಪ್ರಬಂಧಕಾರರಿಗೆ ಸಿದ್ಧತೆಗೆ ಹೆಚ್ಚು ಸಮಯಾವಕಾಶವಿರುತ್ತದೆ.

ಸಾಹಿತ್ಯ ಪರಿಷತ್ತಿನ ಜಿಲ್ಲೆ ಮತ್ತು ತಾಲ್ಲೂಕು ಘಟಕಗಳ ಪುನಶ್ಚೇತನಕ್ಕೆ ತಕ್ಕ ತಳಪಾಯವೆಂದರೆ ಕನ್ನಡ ಭವನಗಳ ನಿರ್ಮಾಣ. ಬಹೂಪಯೋಗಿ ಜಿಲ್ಲಾ ಕನ್ನಡ ಭವನಗಳ ಪರಿಕಲ್ಪನೆಯನ್ನು ೧೯೭೮-೭೯ರಲ್ಲಿ ಆಗಿನ ಪರಿಷದಧ್ಯಕ್ಷರು ಸರಕಾರಕ್ಕೆ ಒಪ್ಪಿಸಿದ್ದರೂ ಇದುವರೆಗೆ ನಾಲ್ಕೆ ದು ಜಿಲ್ಲಾ ಕನ್ನಡ ಭವನಗಳು ರೂಪಗೊಂಡಿವೆ. ಇದು ಇನ್ನೂ ಬೇಗ ವ್ಯಾಪಕವಾಗಿ ಎಲ್ಲ ಜಿಲ್ಲೆ – ತಾಲ್ಲೂಕುಗಳಿಗೆ ಹಬ್ಬಿದರೆ ಆಗ ಕನ್ನಡಪರ ಸಾಹಿತ್ಯ ಸಂಸ್ಕ ತಿ ಚಟುವಟಿಕೆಗಳಿಗೆ ಕಾಯಕಲ್ಪವಾಗುತ್ತದೆ. ಕನ್ನಡದ ಪುಸ್ತಕಗಳು, ಪ್ರಕಾಶಕರು ಯಾರೇ ಇರಲಿ, ಎಲ್ಲ ಲೇಖಕರ ಪುಸ್ತಕಗಳು ಕನ್ನಡ ಭವನದಲ್ಲಿ ದೊರೆಯುವಂತಾಗಲಿ. ಕನ್ನಡ ಕಾರ್ಯಕ್ರಮಗಳಿಗೆ ಅದರಲ್ಲಿ ಸುಸಜ್ಜಿತ, ಅತ್ಯಾಧುನಿಕ ಸಭಾಂಗಣವಿರಲಿ. ಲಾಭ-ನಷ್ಟ ಇರದ ಕಡಿಮೆ ಬಾಡಿಗೆ ದರದಲ್ಲಿ ಆ ಸಭಾಂಗಣ ಎಲ್ಲ ಕನ್ನಡ ಚಟುವಟಿಕೆಗಳಿಗೆ ಸಿಗಬೇಕೆ ವಿನಾ ಅದು ಮದುವೆಗಳಿಗೆ ತೆರೆದ ಇನ್ನೊಂದು ಕಲ್ಯಾಣಮಂಟಪ ಆಗಬಾರದು.

ಕನ್ನಡ ಸಾಹಿತ್ಯ ಮೊದಲು ಧರ್ಮಕೇಂದ್ರಿತವಾಗಿತ್ತು, ಸಂಸ್ಕ ತ ಪ್ರಾಕೃತ ಪ್ರೇರಿತವಾಗಿತ್ತು. ಅನಂತರ ಅದರ ಪ್ರೇರಣೆ ಪರಿಕಲ್ಪನೆ ಇಂಗ್ಲಿಷ್ ಸಾಹಿತ್ಯದಿಂದ ಮೂಡಿ ಕನ್ನಡವೂ ಇಂಗ್ಲಿಷ್ ಕೇಂದ್ರಿತವಾಯಿತು. ಈಗೀಗ ಅದು ಹೈಟೆಕ್ ಕೇಂದ್ರಿತವಾಗುತ್ತಿದೆ. ಅನಿವಾರ್‍ಯವಾಗಿ ಆಗುವ ಬದಲಾವಣೆಗಳನ್ನು ಎಚ್ಚರಿಕೆಯಿಂದ ಬರಮಾಡಿಕೊಳ್ಳೋಣ. ಸುಗಮ ಜೀವನ ಮುಕ್ತದ್ವಾರವಾಗಿರಲಿ. ಆದರೆ ಇವೆಲ್ಲವೂ ಮಾನವ ಹಾಗೂ ಕನ್ನಡ ಕೇಂದ್ರಿತವಾಗಿಯೇ ಕ್ರಿಯಾಶೀಲವಾಗಿರುವಂತೆ ನಿರ್ವಹಿಸುವ ಹೊಣೆ ಜ್ಞಾನಿಗಳನ್ನು ಅವಲಂಬಿಸಿದೆ.

ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಮನ್ವಂತರದ ಮತ್ತೊಂದು ವೈಶಿಷ್ಟ್ಯವೂ ಪರಿಭಾವನ ಯೋಗ್ಯವಾಗಿದೆ. ಹತ್ತನೆಯ ಶತಮಾನದಲ್ಲಿದ್ದ ಪಂಪನ ೧೧೦೦ನೆಯ ಜನ್ಮೋತ್ಸವ ಮುಗಿದು ಇಪ್ಪತ್ತನೆಯ ಶತಮಾನದ ಕುವೆಂಪು ಅವರ ಶತಮಾನೋತ್ಸವ ಪ್ರಾರಂಭವಾದದ್ದು ಆಕಸ್ಮಿಕವಿರಲಾರದು. ಹೊಸಗನ್ನಡಕ್ಕೆ ಹೊಸದಿಕ್ಕು, ದನಿ, ಬಿಗಿಬನಿ ನೀಡಿದ ಕುವೆಂಪುರವರು ಆದಿಕವಿ ಪಂಪನ ಮಹಾನ್ ಪರಂಪರೆ ವಿಚ್ಛಿನ್ನವಾಗದಂತೆ ಮುಂದುವರಿಸಿದವರು. ಕುವೆಂಪು ವಿರಚಿತ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಭಾವಗೀತೆ ಕರ್ನಾಟಕದ ನಾಡಗೀತೆಯಾಗಿರುವುದು ಔಚಿತ್ಯಪೂರ್ಣವಾಗಿದೆ. ಭಾರತ ಅಸ್ತಿತ್ವದಲ್ಲಿ ಇದ್ದರೆ ಆಗ ಕರ್ನಾಟಕವೂ ಅಸ್ತಿತ್ವದಲ್ಲಿ ಇರುತ್ತದೆ. ಹಾಗೆಂದು ಪ್ರಾದೇಶಿಕ ಸ್ವಂತಿಕೆಯನ್ನು, ವ್ಯಕ್ತಿತ್ವವನ್ನು ಮಾರಿಕೊಳ್ಳುವುದು ಅಂತ ಅರ್ಥವಲ್ಲ. ಕುವೆಂಪು ಪ್ರತಿಷ್ಠಾನ ನೊಂದಾವಣೆ ಆದದ್ದು ಮತ್ತು ಪ್ರತಿಷ್ಠಾನದ ವಿಳಾಸ ನಮ್ಮ ಮನೆಯದೇ ಆಗಿದ್ದುದು ಮರೆಯಲಾಗದ ನೆನಪು. ಕುವೆಂಪು ಶತಮಾನೋತ್ಸವ ಆರಂಭವಾಗುತ್ತಿರುವ ಡಿಸೆಂಬರ್ ತಿಂಗಳಲ್ಲಿ ಮತ್ತು ಆ ಮಹಾಕವಿಯ ಕವಿತೆ ಜಯಭಾರತ ಜನನಿಯ ತನುಜಾತೆ ಕನ್ನಡ ನಾಡಗೀತೆ ಆದ ಸುಸಂದರ್ಭದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದೂ, ಇದರ ಅಧ್ಯಕ್ಷತೆಯ ಗೌರವ ನನಗೆ ಪ್ರಾಪ್ತವಾಗಿರುವುದೂ ನನಗೆ ದಕ್ಕಿದ ಸಿರಿಸಂಪದ.

ಹಳ್ಳಿಗಳ ಅಚ್ಚಗನ್ನಡದ ಹಳೆಯ ಹೆಸರುಗಳನ್ನು ಸಂಸ್ಕ ತಮಯವಾಗಿಸುವುದು ತರವಲ್ಲ. ಸಾಂಸ್ಕ ತಿಕ ಇತಿಹಾಸ ಹಿನ್ನೆಲೆ ಇರುವ ಎಮ್ಮೆಯೂರು, ಬೆಳ್ಳೂರುಗಳನ್ನು ಸುರಧೇನುಪುರ, ಶ್ವೇತಪುರ ಎಂದೇಕೆ ಬದಲಾಯಿಸಬೇಕು. ದೊಮ್ಮಲೂರನ್ನು ಭಗತ್‌ಸಿಂಗ್‌ನಗರ ಮಾಡುವುದರಲ್ಲಿ ಅರ್ಥವಿಲ್ಲ. ಕನ್ನಡ ಪರಂಪರೆಯ ಮೇಲೆ ಆಗುವ ಈ ಬಗೆಯ ಗದಾಪ್ರಹಾರವನ್ನು ತಡೆಯುವ ಭೀಮಬಲ ಸಾಹಿತ್ಯ ಪರಿಷತ್ತಿನಿಂದ ವ್ಯಕ್ತವಾಗಬೇಕು. ನಮ್ಮ ನಾಡಿನ ಮೂಲೆ ಮುಡುಕುಗಳಿಗೆ ಕನ್ನಡವನ್ನು ಬೆಳಗಿಸುವ ನಂದಾದೀಪವಾಗುವುದರ ಜೊತೆಗೆ ಅವಿರತ ಎಚ್ಚರಿಸುವ ದುಂದುಭಿಯೂ ಆಗಿರಬೇಕು.

ಸಂಕೀರ್ಣ ಚಿಂತನೆಗಳು

ರಾಜಕಾರಣದ ಸ್ವರೂಪ ಇಂದು ಹಿಂದೆ ಇದ್ದಂತಿಲ್ಲ. ಏಕಪಕ್ಷದ ಬದಲು ಬಹುಪಕ್ಷಗಳು ಸಖ್ಯದಿಂದ ಆಡಳಿತ ನಡೆಸುವುದು ಶಕ್ಯವಾಗಿದೆ. ಒಂದು ದೇಶದ ಭಯೋತ್ಪಾದಕತೆಯನ್ನು ಇನ್ನೊಂದು ದೇಶ ತಟಸ್ಥ ಪ್ರೇಕ್ಷಕನಾಗಿ ನೋಡುವುದು ತಪ್ಪೆಂಬ, ಕಷ್ಟ ಸುಖಗಳಲ್ಲಿ ಪರಸ್ಪರರು ನೆರವಿಗೆ ಒದೆಗಲ್ಲಾಗಿ ನಿಲ್ಲಬೇಕೆಂಬ ತವಕ ಬಂದಿದೆ. ಅಸ್ತ್ರಶಸ್ತ್ರಗಳ ಬಲ, ಸೈನ್ಯ ಬಲ, ಆರ್ಥಿಕ ಬಲಗಳ ಪ್ರಮತ್ತತೆಗೆ ಧಕ್ಕೆಯಾಗಿದೆ. ಒಟ್ಟಾರೆ ಪಶ್ಚಿಮದ ಸಾಂಸ್ಕ ತಿಕ ಯಾಜಮಾನ್ಯ ನೆಲಕಚ್ಚುತ್ತಿದೆ. ಸಾಮ್ರಾಜ್ಯಶಾಹಿಗಳ ಠೇಂಕಾರ ಮುಗಿಯಿತು. ತಾನೇ ಲೋಕನಾಯಕನೆಂಬ ಅಮಲಿನಿಂದ ಸೊಕ್ಕಿದವರು ಬಾಗಿ ನಡೆಯುವುದರ ವಿವೇಕಕ್ಕೆ ಸ್ಪಂದಿಸಿದ್ದಾರೆ. ತನ್ನ ಬೆಂಕಿಯಿಂದಲೇ ಬೆಳಕು, ತನ್ನ ಕೋಳಿಯಿಂದಲೇ ಬೆಳಗು-ಎಂಬ ಭ್ರಾಂತಿಯಲ್ಲಿ ಮೆರೆಯುವುದು ಇನ್ನು ಸಾಧ್ಯವಾಗದೆಂಬ ತಿಳಿವಳಿಕೆಯ ತರಂಗಗಳು ಅನುರಣಿಸುತ್ತ ಗೋಳವನ್ನು ಆವರ್ತಿಸಿವೆ.

ಲೋಕಸಭೆಯ ಮಧ್ಯಂತರ ಚುನಾವಣೆಯದಿನಾಂಕವನ್ನು ಗೊತ್ತುಪಡಿಸುವ ಮೊದಲೆ ಪ್ರಚಾರ ಪ್ರಾರಂಭವಾಗಿದೆ. ತಪ್ಪೇನಲ್ಲ. ಆದರೆ ಆಡಳಿತಾರೂಢರೂ ಇತರರೂ ಮಾಡುತ್ತಿರುವ ಆರೋಪ ಪ್ರತ್ಯಾರೋಪಗಳು ಘನತೆ ತರುವಂತಹುದಲ್ಲ. ಈ ಬಗೆಯ ಚುನಾವಣೆಯ ಪ್ರಚಾರ ವೈಖರಿ ಅಸಹ್ಯ ಹುಟ್ಟಿಸುತ್ತಿದೆ. ಪರಸ್ಪರ ಕಚ್ಚಾಡುತ್ತ ಮಣ್ಣೆರೆಚುವ ಈ ಜನಕ್ಕೆ ಮತಕೊಡಬೇಕೆ ಎಂದು ಚಿಂತಿಸುವಂತಾಗಿದೆ. ತಮ್ಮ ಪಕ್ಷದ ಸಿದ್ಧಿ ಸಾಧನೆಗಳನ್ನು ವೈಭವೀಕರಿಸಿ ಹೇಳಿದರೂ ಸಹಿಸಬಹುದು. ಆದರೆ ಎದುರು ಪಕ್ಷಗಳನ್ನು ಹಳಿಯುವುದು ಸರಿಯಲ್ಲ. ಅದರಲ್ಲಿಯೂ ವ್ಯಕ್ತಿನಿಂದನೆ ಕೆಳಮಟ್ಟಕ್ಕೆ ಇಳಿದಿರುವುದು ಅಕ್ಷಮ್ಯ. ಚುನಾವಣಾ ಆಯೋಗವು ಎಲ್ಲ ಪಕ್ಷಗಳಿಗೂ ಒಂದು ಏಕರೂಪದ ಪ್ರಚಾರ ಸಂಹಿತೆಯನ್ನು ಅನುಶಾಸನವಾಗಿಸಬೇಕು. ಚುನಾವಣಾ ಸಂಹಿತೆಯಲ್ಲಿ

ಯಾರೂ ಯಾವ ಪಕ್ಷವನ್ನೂ ಖಂಡಿಸಕೂಡದು
ಯಾರೂ ಯಾವ ವ್ಯಕ್ತಿಯನ್ನೂ ನಿಂದಿಸಕೂಡದು
ಎಂಬ ಎರಡು ಅಂಶಗಳಿಗೆ ಒತ್ತುಕೊಡಬೇಕು. ಈ ಲಕ್ಷಣರೇಖೆಯನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಚುನಾವಣಾ ಅಭ್ಯರ್ಥಿತನಕ್ಕೆ ಅನರ್ಹಗೊಳಿಸಬೇಕು. ವಿಧಾನಸಬೆಗಾಗಲಿ, ಲೋಕ ಸಭೆಗಾಗಲಿ ಎಲ್ಲ ಚುನಾವಣೆಯೂ ಆರೋಗ್ಯಕರ ನೆಲೆಯಲ್ಲಿ ಗಂಭೀರವಾಗಿ ನಡಯಬೇಕೆಂದು ಮತದಾರರು ಬಯಸುತ್ತಾರೆ. ಎಲ್ಲ ಪಕ್ಷಗಳೂ ಜನಸೇವೆಗೆಂದು ಹುಟ್ಟಿದ ಶ್ರೇಷ್ಠ ಪಕ್ಷಗಳು. ನಾನು ಯಾವ ಪಕ್ಷಕ್ಕೂ ಸೇರಿದವಳಲ್ಲ ಎನ್ನುವುದಕ್ಕಿಂತಾ ಎಲ್ಲ ಪಕ್ಷಗಳಿಗೂ ಸೇರಿದವಳು ಎಂದು ಹೇಳುವುದರಲ್ಲಿ ಅರ್ಥವಿದೆ. ಜನಪರ ಜೀವಪರ ತುಡಿತದ, ಮಾನವೀಯ ಕಾಳಜಿಯ ಪಕ್ಷಗಳಿಗೆ ನನ್ನ ಸಹಮತ ಉಂಟು.

ದೀನದಲಿತರ ದುಃಖದುಮ್ಮಾನಗಳನ್ನು ಹೋಗಲಾಡಿಸಿ ಕಣ್ಣೀರನ್ನು ಒರೆಸುವುದಕ್ಕೆ ನಾಡು ಮುಂದಾಗಬೇಕೆಂದು ನೂರು ವರ್ಷಗಳ ಹಿಂದೆ ಸಿಂಹವಾಣಿ ಮೊಳಗಿಸಿದ್ದು ಸ್ವಾಮಿ ವಿವೇಕಾನಂದರು. ಅವರು ‘ದರಿದ್ರ ದೇವೋ ಭವ’ ಎಂಬ ವಾಕ್ಯ ಹೇಳಿದರು. ನಾವು ಅದರೊಂದಿಗೆ ಕೃಷಿಕ ದೇವೋಭವ, ಕಾರ್ಮಿಕ ದೇವೋಭವ, ಎಂದೂ ಸೇರಿಸಬಹುದು. ನಿಜ, ದುಡಿಯುವವರೇ ದೇವರು. ಶ್ರಮವೇ ದೇವರು. ಮೈಗಳ್ಳರು ಪ್ರೇತಗಳು. ದಶಾವತಾರಗಳಿಂದ ರಾಮನಾಗಿ ಕೃಷ್ಣನಾಗಿ, ಬುದ್ಧನಾಗಿ, ಯಾವುದಾದರೂ ಒಂದು ರೂಪದಲ್ಲಿ ದೇವರು ಬರುತ್ತಾನೆಂಬ ನಂಬಿಕೆಗೆ ಇಂಬುಕೊಟ್ಟು ಹೇಳುವುದಾದರೆ, ಇಂದು ದೇವರು ನಾಡಿಗಾಗಿ, ಜನರಿಗಾಗಿ ದುಡಿಯುವವರ ರೂಪದಲ್ಲಿ ಬಂದಿದ್ದಾನೆಂದು ತಿಳಿಯಬಹುದು.

ಜಾತಿಮತ ಮಠ ಮಂದಿರ ಮಸೀದಿ ಚರ್ಚು ಗುಡಿ ಗೋಪುರಗಳು ಅವುಗಳ ಪಾಡಿಗೆ ಅವು ಇರಲಿ. ಧರ್ಮಗಳೂ ಧರ್ಮಗುರುಗಳೂ ಮಠಾಧೀಶರೂ ಸಮಾಜದ ಹಿತಚಿಂತಕರು. ಧರ್ಮದಿಂದ ಧರ್ಮಸಂಸ್ಥೆಗಳಿಂದ ಅಶಾಂತಿ ಇಲ್ಲ. ಆದರೆ ಧರ್ಮಾಂಧರಾದ ಮೂಲಭೂತವಾದಿ ರಕ್ಕಸರಿಂದ ರಕ್ತಪಾತಗಳಾಗುತ್ತಿವೆ. ಮತಗಳಿಂದ ಅಪಾಯವಾಗಲಿಲ್ಲ. ಮತಾಂಧರಿಂದ ಗಂಡಾಂತರ ಬಂದಿದೆ. ಮತ ಧರ್ಮಗಳಲ್ಲಿ ಗುರುಪೀಠಗಳಲ್ಲಿ ಜನಮುಖಿ ಹಾಗೂ ಸಹಿಷ್ಣುತೆ – ಸಹಕಾರ – ಸಮನ್ವಯಗಳ ಧೋರಣೆ ಕಾಣಿಸದಿದ್ದಾಗ ಮುಖ ಮೋರೆ ನೋಡದೆ ಸಮಾಜ ಮತ್ತು ಸರಕಾರ ತನ್ನ ಗದಾಪ್ರಹಾರ ಮಾಡುವುದು ತಪ್ಪಲ್ಲ. ಪೂಜಾ ಸ್ಥಳಗಳೂ ಪ್ರಾರ್ಥನಾ ಮಂದಿರಗಳೂ ಸಿಡಿಮದ್ದು, ಬಂದೂಕು ತುಂಬಿದ ಆಯುಧಾಗಾರ ಆಗಬಾರದು. ಹೋಳಿ ಹಬ್ಬದ ದಿವಸ, ಮೊಹರಮ್ಮಿನ ಹಬ್ಬದಲ್ಲಿ, ಜಾತ್ರೆತೇರು ಹರಿಯುವಾಗ, ಉರುಸು ಸಾಗುವಾಗ ಅಣ್ಣತಮ್ಮಂದಿರೆಂದು ಅಪ್ಪಿ ಆಲಂಗಿಸುವುದು ಅದೊಂದು ಗಳಿಗೆಯ ತೋರಿಕೆಯ ನಾಟಕಾಭಿನಯ ಆಗಬಾರದು. ಬದುಕಿನುದ್ದಕ್ಕೂ ನಿತ್ಯ ನಡೆವಳಿಕೆಯಲ್ಲಿ ಭ್ರಾತೃತ್ವ, ಸೌಹಾರ್ದ ಬೇರು ಬಿಟ್ಟು ಜೀವಂತವಾಗಬೇಕು. ನನ್ನದೊಂದು ಕವಿತೆ ನೆನಪಾಗುತ್ತಿದೆ.

ನಾ ಬರೆದೆ ನಿಮಗಾಗಿ
ನಾ ಬರೆದೆ ನನಗಾಗಿ
ನಾ ಬರೆದೆ ಜನಕಾಗಿ
ನಾ ಬರೆದೆ ಜಗಕಾಗಿ
ಎಲ್ಲರಿಗು ತಲಪಲಿ ನನ್ನ ಈ ಕವನ
ಎಲ್ಲರಿಗು ಸೇರಲಿ ನನ್ನ ಈ ಕವನ
ಎಲ್ಲರಿಗೂ ದೊರಕಲಿ ನನ್ನ ಈ ಕವನ
ಶತ್ರುತ್ವ ತೊಲಗಲಿ
ಮಿತ್ರತ್ವ ಉಳಿಯಲಿ
ಭ್ರಾತೃತ್ವ ಬೆಳೆಯಲಿ
ಎಲ್ಲರಿಗು ಸೇರಲಿ ನನ್ನ ಈ ಕವನ
ಸಹನೆಯ ಬಿತ್ತೋಣ
ಶಾಂತಿಯ ಬೆಳೆಯೋಣ
ಮಾನವತೆ ಉಳಿಸೋಣ
ಎಲ್ಲರಿಗು ದೊರಕಲಿ ನನ್ನ ಈ ಕವನ

ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನಾತ್ಮಕ ಹಕ್ಕು. ಇದಕ್ಕೆ ಯಾವತ್ತೂ ಚ್ಯುತಿ ಬರಬಾರದು. ತಮಗೆ ಇಷ್ಟ ಬಂದ ದೈವವನ್ನು ಮನಬಂದಂತೆ ಪೂಜಿಸುವ ಸ್ವಾತಂತ್ರ ಕ್ಕೆ ಧಕ್ಕೆಯಾಗದಿರಲಿ. ಆದರೆ ಧ್ವನಿವರ್ಧಕ ಬಳಸಿ ಇಡೀ ಪರಿಸರದ ಪ್ರಶಾಂತತೆಯನ್ನು ಕಲಕುವುದು, ಬಲವಂತ ಮಾಘಸ್ನಾನ ಮಾಡುವುದು ಬೇಡ. ಅವರವರ ಮನೆಯಲ್ಲಿ, ಮಂದಿರದಲ್ಲಿ ಮಾಡುವ ಮಂತ್ರ ಪಠನ, ಪೂಜೆ ಅವರವರಿಗಷ್ಟೇ ಸೀಮಿತವಾಗಿದ್ದು ಉಳಿದವರ ಮೇಲೆ ಹೇರುವ ದಬ್ಬಾಳಿಕೆ ಸರಿಯಲ್ಲ. ಪೂಜಾ ಮಂದಿರ ಹಾಗೂ ಪ್ರಾರ್ಥನಾ ಸ್ಥಳಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿ ಶಬ್ದ ಮಾಲಿನ್ಯಗೊಳಿಸುವುದು ತಕ್ಷಣ ನಿಲ್ಲಿಸುವುದು ಲೇಸು. ಯಾವುದೇ ಒಂದು ಧರ್ಮವನ್ನು ಕುರಿತು ನಾನು ಇಲ್ಲಿ ಉಲ್ಲೇಖಿಸುತ್ತಿಲ್ಲ. ಎಲ್ಲ ಧರ್ಮಗಳ ಪೂಜಾ ಸ್ಥಳಗಳಿಗೂ ಪ್ರಾರ್ಥನಾ ಮಂದಿರಗಳಿಗೂ ಅನ್ವಯಿಸುವ ಏಕರೂಪದ ಶಾಸನ ತಂದು ಧ್ವನಿವರ್ಧಕಗಳನ್ನು ಅಳವಡಿಸುವಂತೆ ನಿಯಂತ್ರಿಸಿದರೆ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಶಾಂತಿಪ್ರಿಯರಿಗೆ, ಕಾರ್ಯಮಗ್ನರ ನೆಮ್ಮದಿಗೆ ಪೂಜಾಸ್ಥಳಗಳು ಉಪಕಾರ ಮಾಡಿದಂತೆ ಆದೀತು.

ಇರಲಿರಲಿ ಅವರವರ ಧರ್ಮಗುಡಿಗಳು
ಅಂತರ್ಮುಖಿಯಾಗಿರಲಿ ಆರಾಧಿಸುವ ಹಕ್ಕುಗಳು
ತಂತಮ್ಮ ಮಂತ್ರ ಪಠಣ ಪೂಜಾ ಘೋಷಗಳು
ನಿರಂತರ ನಡೆಯುತಿರಲಿ ನಿಲ್ಲದೆಯೆ ಹಗಲಿರಳು
ಗುಡಿಗೋಪುರ ಚರ್ಚುಗಳಲಿ ಮಸೀದಿಗಳಲಿ
ಪರಮ ಪವಿತ್ರ ಪೂಜಾ ಮಂದಿರಗಳಲಿ
ಹೊಮ್ಮಲಿ ಧೂಪಧೂಮ ಅಗರು ಕರ್ಪೂರ
ಆರತಿ ಬೆಳಗಲಿ ಗಂಟೆಜಾಗಟೆಯು ಮೊಳಗಲಿ
ಮುಗಿದು ಮಣಿಯುವ ಮನಸು ಕನಸುಗಳಿಗೆ
ಉಣಿಸಲಿ ಗ್ರಹಿಸಲಿ ದೈವ ಅನುಗ್ರಹಿಸಲಿ
ಬಾಳು ನೆಮ್ಮದಿಗೆ ಪ್ರಾರ್ಥನೆಗಳು ಘಟಿಸಲಿ
ಯಾರ ತಕರಾರು ಅಡ್ಡಿ ಹಂಗು ಹಸಾದ
ಜನರ ಮೌನ ಪ್ರಾರ್ಥನೆಗೆ ಅಡ್ಡ ಬರದಿರಲಿ
ನಿಶ್ಯಬ್ದ ಪರಮ ಪ್ರಾರ್ಥನೆಯ ಕದಡುವೀ
ಧ್ವನಿವರ್ಧಕಗಳ ಬಳಕೆಗೆ ನಿಷೇಧವಿರಲಿ

ಕನ್ನಡ ಸಾಹಿತ್ಯದ ಉದ್ದಕ್ಕೂ ಭಿನ್ನಪಾತಳಿಗಳಲ್ಲಿ ಎದ್ದುಕಾಣುವ ಬಂಡಾಯ ಸಹ ಸಾಂಸ್ಕ ತಿಕ ಸರ್ವಾಧಿಕಾರ ಧೋರಣೆಯ ವಿರುದ್ಧವಾಗಿತ್ತು. ಭಾಷೆಯ ದಬ್ಬಾಳಿಕೆಯನ್ನು ಧಿಕ್ಕರಿಸಿದ್ದು, ಮಾರ್ಗ-ದೇಸಿ ಹಾಗೂ ವಸ್ತುಕ-ವರ್ಣಕ ಪಲ್ಲಟ, ಛಂದಸ್ಸಿನಲ್ಲಾದ ಮಾರ್ಪಾಟು, ಜನಭಾಷೆಯನ್ನು ಮಹಾಕಾವ್ಯ ಮತ್ತು ಆಸ್ಥಾನದ ಭಾಷೆಯಾಗಿಸಿದಂತೆ ಮತ್ತೆ ಅದನ್ನು ಜನಭಾಷೆಗೇ ಜಗ್ಗಿದ್ದು-ಇವೆಲ್ಲ ಕನ್ನಡ ಸಾಹಿತ್ಯ ಕಂಡ ಸ್ಥಿತ್ಯಂತರಗಳು. ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಕನ್ನಡ ನಡೆದುಬಂದ ದಾರಿಯ ಈ ವೈವಿಧ್ಯಗಳ ದಿವ್ಯ ತಿರುವು ನಮ್ಮ ಸಾಹಿತ್ಯದ ಶಕ್ತಿ. ರತ್ನಾಕರವರ್ಣಿಯ ಸಂದೇಶ ಸಾರ್ವಕಾಲಿಕ ವಾಸ್ತವಕ್ಕೆ ಕೆತ್ತಿದೆ ಪ್ರತಿಮೆ, ಎತ್ತಿದ ಸೊಲ್ಲು :

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯ ಮಂಚಿದಿಯೆನೆ ತೆಲುಗರು
ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣ ||

ಇಡೀ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಹೀಗೆ ತನ್ನ ಭಾಷೆಯೊಂದಿಗೆ ನೆರೆಹೊರೆಯ ಜನರ ತಾಯಿಭಾಷೆಯನ್ನೂ ಪರಿಭಾವಿಸಿ ಅಕ್ಕರೆಯುಕ್ಕಿ ಹೀಗೆ ಚಿಂತಿಸಿದ ಹೃದಯಸಿರಿ ಅಪರೂಪ. ಸಾಹಿತಿಗಳಿಗೂ ಇದು ದಿಕ್ಸೂಚಿಯಾಗಿರುವ ಮಾತು. ದೂರದ ಇಂಗ್ಲಿಷ್ ಭಾಷೆಯಲ್ಲಿ ಏನಾಗುತ್ತಿದೆ ಎಂದು ವಾಗ್ವಾದ ನಡೆಸುತ್ತೇವೆ, ಅದು ತಪ್ಪಲ್ಲ ಎಂಬುದೂ ದಿಟವೆ. ಆದರೆ ನಮ್ಮ ಅಕ್ಕಪಕ್ಕದ ಭಾಷೆಗಳಲ್ಲಾಗುತ್ತಿರುವ ಪ್ರಗತಿ ಪಲ್ಲಟಗಳ ಪರಿಚಯವೇ ಇರುವುದಿಲ್ಲವೆಂಬುದು ವಿಷಾದನೀಯ. ನಮ್ಮ ಬದುಕಿನ ಸಾಂಸ್ಕ ತಿಕ ಬೇರುಗಳಿಗೆ ತಾಕಿದ, ಉಸಿರಿಗೆ ಹತ್ತಿರದ ಭಾಷಾಸಾಹಿತ್ಯದ ಪರಿಚಯ ಇರಬೇಕಾದುದು ಅನಿವಾರ್‍ಯ ಹಾಗೂ ಪ್ರಯೋಜನಕಾರಿ. ಭಾಷಾ ಬಾಂಧವ್ಯದ ಬೆಸುಗೆಗೆ, ಸಾಂಸ್ಕ ತಿಕ ಇರಬೇಕಾದುದು ಅನಿವಾರ್‍ಯ ಹಾಗೂ ಪ್ರಯೋಜನಕಾರಿ. ಭಾಷಾ ಬಾಂಧವ್ಯದ ಬೆಸುಗೆಗೆ, ಸಾಂಸ್ಕ ತಿಕ ‘ಕೊಡು-ಪಡೆ’ಗಳಿಗೆ ಇದು ದಾರಿ ತೆರೆಯುತ್ತದೆ. ರತ್ನಾಕರವರ್ಣಿಯ ಈ ತಿಳಿವಳಿಕೆಯ ಬೆಳಕು ಇಂದಿನ ಯುಗಕ್ಕೆ ತೀರ ಅವಶ್ಯ. ರತ್ನಾಕರವರ್ಣಿಯ ಹಾಡುಗಳು ಮೈಲಿಗೆಯಲ್ಲ. ನಮ್ಮ ಸಂಗೀತಗಾರರು ಸಂಗೀತ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಡಬೇಕು. ಜೇನು ಸವರಿದ ಸುಮಧುರ ಕಂಠಸಿರಿಯಿಂದ ಕನ್ನಡ ಕವಿತೆಗಳನ್ನು ಹಾಡಿ ಮನೆ ಮನಗಳನ್ನು ತಣಿಸಿ ಕುಣಿಸುತ್ತಿರುವ ಸುಗಮ ಸಂಗೀತಗಾರರನ್ನು ಅಭಿನಂದಿಸುತ್ತೇನೆ. ಈ ಕಲಾವಿದರು ಆಧುನಿಕ ಕವಿತೆಗಳ ಜೊತೆಗೆ ಪ್ರಾಚೀನ ಕಾವ್ಯಗಳಿಂದಲೂ ಆರಿಸಿದ ಅರ್ಥಪೂರ್ಣ ಪದ್ಯಗಳನ್ನು ಹಾಡುವುದು ಅಗತ್ಯ. ಆ ಮೂಲಕ ಪರಂಪರೆಯ ಸುವರ್ಣ ಕೊಂಡಿ ಕಳಚಿ ಹೋಗದ ಹಾಗೆ ಪುನರುಜ್ಜೀವಿಸಬೇಕು. ಕನ್ನಡ ಕಾವ್ಯಪರಂಪರೆಯ ಸಾತತ್ಯವನ್ನು ಪುನರುತ್ಥಾನಿಸುವುದಕ್ಕೆ ಗಮಕಿಗಳೂ ಪ್ರಯತ್ನಶೀಲರಾಗಿರುವುದು ಶ್ಲಾಘನೀಯ. ಗಮಕಿಗಳು ಚಂಪೂಕಾವ್ಯಗಳನ್ನೂ ರಗಳೆ ವಚನಗಳನ್ನೂ ಬೇರೆಬೇರೆ ಷಟ್ಪದಿ ಕಾವ್ಯಗಳನ್ನೂ ಹಾಡಿ ಗಮಕಕ್ಕೆ ವಿಸ್ತಾರ ಮತ್ತು ವೈವಿಧ್ಯ ತರಬೇಕು.

ಜೀವಸಂಕುಲವನ್ನು ಕಾಪಾಡಿದ, ಈಗಲೂ ರಕ್ಷಿಸುತ್ತಿರುವ ಅಮೃತ ಚೈತನ್ಯದ ಆಮ್ಲಜನಕಕ್ಕೆ ಚ್ಯುತಿ ಬಾರದಂತೆ ಉಳಿಸುವ ನೈತಿಕ ಹೊಣೆ ಹೊತ್ತು, ಪರಿಸರಮಾಲಿನ್ಯಕ್ಕೆ ಎಡೆಕೊಡುವುದಿಲ್ಲವೆಂಬ ದೃಢ ಪ್ರತಿe ನಮ್ಮದಾಗಲಿ. ಗಿಡಮರಗಳ ಮಹತ್ವವನ್ನು ಮನಗಾಣಿಸುವ ಪಾಠಗಳು ಪಠ್ಯಗಳಲ್ಲಿ ಹೆಚ್ಚು ಸೇರಲಿ.

ಕಾಶ್ಮೀರದಲ್ಲಿ ದಿನನಿತ್ಯ ನಿರಂತರವಾಗಿ ನಡೆಯುತ್ತಿರುವ ಬರ್ಬರ ಹತ್ಯಾಕಾಂಡ ಕಲ್ಲೆದೆಗಳನ್ನೂ ತಲ್ಲಣಗೊಳಿಸುವಂಥದು. ಉಗ್ರಗಾಮಿ ಭಯೋತ್ಪಾದಕರು ಹಿಂಸಾಕಾಂಡದಲ್ಲಿ ವಿಜೃಂಭಿಸುತ್ತ ಅಮಾಯಕ ನಾಗರಿಕರನ್ನು, ಕಾಶ್ಮೀರಿ ಪಂಡಿತರನ್ನು, ಹತ್ಯೆ ಮಾಡುತ್ತಿದ್ದಾರೆ. ಹಿಂಸೆಗೆ ಪ್ರತಿಹಿಂಸೆ ಪರಿಹಾರವಲ್ಲವೆಂಬ ದಿಟದ ಮನವರಿಕೆಯಾದರೂ ಜೀವಹಾನಿಗೆ ವಿರಾಮ ಸಾಧ್ಯವಾಗಿಲ್ಲ. ಒಮ್ಮೆ ಭಾರತದ ತೊಟ್ಟಿಲು ತೂಗುತ್ತ ಇನ್ನೊಮ್ಮೆ ಪಾಕಿಸ್ತಾನವನ್ನು ಚಿವುಟುತ್ತ, ಮದ್ದು ಗುಂಡು ಯುದ್ಧವಿಮಾನ ಸರಬರಾಜು ಮಾಡುತ್ತ, ಹಲವು ರಾಷ್ಟ್ರಗಳನ್ನು ಅಲ್ಲೋಲ ಕಲ್ಲೋಲಗೊಳಿಸುವ ಬಲಿಷ್ಠ ಗೋಮುಖ ವ್ಯಾಘ್ರಗಳನ್ನು ಸಂಪೂರ್ಣ ನಂಬಬಾರದು. ಭಾರತ, ಚೈನಾ, ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರು ಮುಂತಾದ ರಾಷ್ಟ್ರಗಳೆಲ್ಲ ಒಗ್ಗೂಡಿದರೆ ಅಮೆರಿಕವನ್ನು ಮೂಸುವವರು ಯಾರು? ಈ ಕಾರಣಕ್ಕಾಗಿಯೇ ಅಭಿವೃದ್ಧಿ ಪಥದಲ್ಲಿರುವ ನಮ್ಮಂಥ ದೇಶಗಳ ನಡುವೆ ಹೊಂದಾಣಿಕೆ ಸಾಧ್ಯವಾಗದಂತೆ ಒಡಕುಮೂಡಿಸಲು ಬಲಿಷ್ಠ ರಾಷ್ಟ್ರದ ಹುನ್ನಾರ. ಅಮೆರಿಕದ ಸೊಕ್ಕು ಮಣ್ಣುಮುಕ್ಕುವ ದಿನಗಳು ಹತ್ತಿರ ಬಂದಿವೆ. ಭಯೋತ್ಪಾದಕತೆಯನ್ನು ಹತ್ತಿಕ್ಕುವ ದಿಕ್ಕಿನಲ್ಲಿ ಮುಂದುವರಿದ ರಾಷ್ಟ್ರಗಳು ಪರಾವಲಂಬಿ ಗಳಾಗಿದ್ದಾರೆ. ಸಾಮೂಹಿಕ ಸಂಘಟನೆಯಿಂದಲೇ ಸಮೂಹ ಸನ್ನಿಯನ್ನು ಬಗ್ಗುಬಡಿಯಲು ಸಾಧ್ಯವೆಂಬ ವಾಸ್ತವ ಪ್ರe ಎಚ್ಚೆತ್ತಿದೆ.

ರಾಷ್ಟ್ರೀಯ ಪಕ್ಷಗಳ ಅಟ್ಟಹಾಸದಲ್ಲಿ ಪ್ರಾಂತೀಯ ಪಕ್ಷಗಳು ಕುಸಿಯಬಾರದು. ಪ್ರಾಂತೀಯ ಪಕ್ಷಗಳ ಕುತ್ತಿಗೆ ಹಿಚುಕುವ ಹುನ್ನಾರಗಳಿಗೆ ಬಲಿಯಾಗಬಾರದು. ರಾಷ್ಟ್ರೀಯ ಭಾಷೆಗಳ ಮೆರವಣಿಗೆಯಲ್ಲಿ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಧರ್ಮದ ಸೋಗಿನಲ್ಲಿ ದೇಸೀಯ ಜನಪದರ ಧರ್ಮಗಳೂ ಕಳೆದುಹೋಗಬಾರದು. ರಾಷ್ಟ್ರೀಯ ಪ್ರಧಾನ ಸಂಸ್ಕ ತಿಯ ಹಮ್ಮು ಬಿಮ್ಮುಗಳಲ್ಲಿ ಪ್ರಾದೇಶಿಕ ಸಮಸಂಸ್ಕ ತಿಗಳ ಉಸಿರು ಕಟ್ಟಬಾರದು. ದೇಸೀಯ ಹಾಗೂ ಸ್ಥಳೀಯ ತತ್ವಗಳಿಗೆ ಸಲ್ಲಬೇಕಾದ ಮಹತ್ವ, ಮನ್ನಣೆ ಇತ್ತು ಉಳಿಸಿಕೊಳ್ಳುವುದು ಒಳ್ಳೆಯದು. ಪ್ರಾದೇಶಿಕ ವೈವಿಧ್ಯ ಅಪಾಯಕಾರಿಯಲ್ಲ.

ಭಾರತ ರಜಗಳ ಮಹಾರಾಜ. ಪ್ರಗತಿ ಬಯಸುವ ಯಾವ ರಾಷ್ಟ್ರದಲ್ಲಿಯೂ ಇಲ್ಲಿರುವಷ್ಟು ರಜಗಳಿಲ್ಲ. ಹೊಸವರ್ಷದ ಪಂಚಾಂಗ ಹಿಡಿದರೆ ಮೊದಲು ನೋಡುವುದು ಆ ವರ್ಷದಲ್ಲಿ ಎಷ್ಟು ರಜಗಳಿವೆ, ರಜದ ಹಬ್ಬಗಳು ಭಾನುವಾರ ಬಂದು ಎಷ್ಟು ರಜ ತಪ್ಪಿತು – ಎಂದು! ಹಾಲಿ ಇರುವ ರಜಗಳ ಏರ್ಪಾಟನ್ನು ಮುರಿದು ಮರುಸಂಯೋಜನೆ ಮಾಡುವುದರತ್ತ ಪರಿಭಾವಿಸುವ ಹಂತ ಮುಟ್ಟಿದ್ದೇವೆ. ಇಡೀ ದೇಶಕ್ಕೆ ಅನ್ವಯಿಸುವಂತೆ ವರ್ಷಕ್ಕೆ ಇಷ್ಟು ಎಂದು ರಜಗಳ ಸಂಹಿತೆ ಜಾರಿಗೊಳ್ಳುವುದು ಲೇಸು. ಸಾರ್ವತ್ರಿಕ ರಜಗಳು ರಾಷ್ಟ್ರೀಯ ಮಹತ್ವದ್ದಾಗುವುದು ಸೂಕ್ತ : ಆಗಸ್ಟ್ ೧೫, ಅಕ್ಟೋಬರ್ ೨, ಜನವರಿ ೨೬ – ಈ ಮೂರು ದಿನಗಳಷ್ಟೆ ಇಡೀ ಭಾರತಕ್ಕೆ ಅನ್ವಯಿಸುವ ರಜೆಯ ದಿನಗಳಾಗುವುದು ಸಮಂಜಸ. ಆಯಾ ಪ್ರಾಂತ್ಯದ ಸಾಂಸ್ಕ ತಿಕ ಮಹತ್ವದ ಹಾಗೂ ಜಾತಿಮತಧರ್ಮದ ಸೋಂಕು ಇರದ ಒಂದು ದಿನ ವರ್ಷದ ರಜಕ್ಕೆ ಅರ್ಹವಾಗಬಹುದು. ಕರ್ನಾಟಕದಲ್ಲಿ ನವೆಂಬರ್ ೧ ರಾಜ್ಯೋತ್ಸವ ಮಹತ್ವದ ರಜದ ದಿವಸವಾಗುವುದು ಸರಿ. ಉಳಿದಂತೆ ಉದ್ಯೋಗದಲ್ಲಿರುವ ಪ್ರತಿಯೊಬ್ಬರಿಗೂ ವರ್ಷದಲ್ಲಿ, ಅವರ ಗಳಿಕೆಯ ರಜವಲ್ಲದೆ, ಒಟ್ಟು ಇಪ್ಪತ್ತು ದಿನಗಳ ಸಾಂದರ್ಭಿಕ ರಜ ಪಡೆಯಲು ಅವಕಾಶವಿದ್ದರೆ ಸಾಕು. ಒಟ್ಟಾರೆ, ಎಲ್ಲ ಮತಧರ್ಮಗಳೂ ಶ್ರೇಷ್ಠವೆ ಆಗಿರುವುದರಿಂದ ಯಾವೊಂದನ್ನೂ ನಿಯಮ ಮುರಿದು ಓಲೈಸಬೇಕಾಗಿಲ್ಲ. ಆತ್ಯಂತಿಕವಾಗಿ ರಾಷ್ಟ್ರಧರ್ಮಕ್ಕೆ ಮನ್ನಣೆ ಸಲ್ಲಲಿ.

ಸಮೂಹ ಸನ್ನಿಯಿಂದ ಸಾಂಸ್ಕ ತಿಕ ಚಳವಳಿಗಳು ಹದ್ದು ಮೀರಿ, ದಾರಿತಪ್ಪಿದ್ದುಂಟು. ಅತಿಭಾವುಕತೆಯ ಅಪಸ್ಮಾರದಿಂದ ಪಥಭ್ರಷ್ಟರಾಗುವ ಅಪಾಯ ತಪ್ಪಿದ್ದಲ್ಲ. ಮುಷ್ಕರ, ಧರಣಿ, ಪ್ರತಿಭಟನೆ, ಬಂದ್ ಮೊದಲಾದುವು ಇಂದು ಮೂಲಾರ್ಥದಿಂದ ಬಹುದೂರ ಬಂದು, ತಮ್ಮ ಶಕ್ತಿಯ ಪಾವಿತ್ರ ವನ್ನು ಕೆಡಿಸಿ ದುರುಪಯೋಗ ಮಾಡುತ್ತಿವೆ. ನಮ್ಮ ಯಾವುದೇ ವಿರೋಧಾಭಿವ್ಯಕ್ತಿಯ ವಿಧಾನ ಪ್ರಗತಿಚಕ್ರದ ಚಾಲನೆಯನ್ನು ನಿಲ್ಲಿಸಬಾರದು. ಮಾತತ್ತಿದರೆ ಬಂದ್‌ಗೆ ಕರೆ ಕೊಡುವುದು ವಿಪರ್ಯಾಸ. ಸಮಾಜದ ಸೌಷ್ಠವ ಚಲನೆಯನ್ನೇ ಅಸ್ತವ್ಯಸ್ತಗೊಳಿಸುವ ‘ಬಂದ್’, ಜೀವವಿರೋಧಿಯಾದ ಉಪಕ್ರಮ. ಅದರಿಂದ ಆಗುವ ಅನಾಹುತ, ನಷ್ಟ, ನೋವು ಊಹಾತೀತ. ಮುನ್ನಡೆಯನ್ನು ಬಯಸುವ ರಾಷ್ಟ್ರಗಳ, ಶತ್ರುಗಳು ಬಂದ್ ಮತ್ತು ಮುಷ್ಕರ. ಹೀಗೆ ಹೇಳುವಾಗ ಧರಣಿ, ಮುಷ್ಕರ, ಪ್ರತಿಭಟನೆ ತೋರದೆ ಎಲ್ಲ ದಬ್ಬಾಳಿಕೆಯನ್ನು ಮೌನವಾಗಿ ಸಹಿಸಿಕೊಳ್ಳಬೇಕೆಂದು ಅರ್ಥವಲ್ಲ. ಮಾನವ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳನ್ನು ಸುಲಿಗೆ ಮಾಡುವ, ದಮನಗೊಳಿಸುವ ಎಲ್ಲ ಹುನ್ನಾರಗಳನ್ನು ಬಯಲಿಗೆ ಎಳೆದು ಖಂಡಿಸಬಾರದೆಂದಲ್ಲ. ಸಾಮ್ರಾಜ್ಯಷಾಹಿ ಪ್ರಮತ್ತತೆಯನ್ನು ಬಗ್ಗುಬಡಿಯುವುದು ಅನಿವಾರ್‍ಯ. ಆದರೆ ವಿರೋಧವನ್ನು ದಾಖಲಿಸುವ ವಿಧಾನದ ಸ್ವರೂಪ ಉತ್ಪಾದಕವಾಗಿರಬೇಕು. ಪ್ರತಿಭಟನೆಯ ಪ್ರತೀಕವಾಗಿ ಕಪ್ಪು ಪಟ್ಟಿಯನ್ನು ಧರಿಸಿ ಕೆಲಸಕ್ಕೆ ಹಾಜರಾಗಬಹುದು, ಕೆಲಸದ ಅವಧಿ ಮುಗಿಸಿ ಅನಂತರ ಜನತಾಂತ್ರಿಕವಾದ ಸಂಧಾನದ ಮಾರ್ಗಗಳಿಂದ ಪ್ರತಿಭಟನೆ ಸಂಬಂಧದ ಸಭೆ ನಡೆಸಬಹುದು.

ಹೀಗೆಯೇ ಭಾರತದ ಸರ್ವಾಂಗೀಣ ಪ್ರಗತಿಗಾಗಿ ಸಂವಿಧಾನಾತ್ಮಕವಾಗಿ ಅಳವಡಿಸಬೇಕಾದ ಇನ್ನೊಂದು ಜರೂರು ಜನಸಂಖ್ಯಾಸ್ಫೋಟ ನಿಯಂತ್ರಣ. ಜಾತಿಮತ ಧರ್ಮ ಪಕ್ಷ ಪ್ರದೇಶಗಳ ತಾರತಮ್ಯ ತೋರದೆ, ಒಬ್ಬರು ಅಥವಾ ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿಗೆ ಅವಕಾಶ ಕೊಡದಂತೆ ಜನಸಂಖ್ಯೆಯನ್ನು ನಿಯಂತ್ರಿಸುವ ಕಾಯಿದೆ ೨೦೦೫ ರಿಂದ ಜಾರಿಗೆ ಬರಬೇಕು.

ಉಲ್ಬಣಿಸುತ್ತಿರುವ ಪ್ರಜಾಸಂಖ್ಯೆಯ ನಿಯಂತ್ರಣ ಗೋಳದ ಅಗತ್ಯಗಳಲ್ಲೊಂದು. ಭಾರತದ ಹಲವು ಸಮಸ್ಯೆಗಳಿಗೆ ಜನಸಂಖ್ಯಾಸ್ಫೋಟ ಕಾರಣ. ಜನರಿಗೆ ಇದರ ಅರಿವನ್ನು ಮೂಡಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ, ಜನರೂ ಇದರಲ್ಲಿ ಕೈಜೋಡಿಸಿ ಸಹಕರಿಸಬೇಕು. ಜನಸಂಖ್ಯೆಯನ್ನು ಹತೋಟಿ ಮೀರದಂತೆ ಹಿಡಿತಕ್ಕೆ ತರಬೇಕಾದರೆ ಕಠಿಣ ಕ್ರಮಕ್ಕೂ ಮುಂದಾಗಬೇಕು. ಯಾವ ಧರ್ಮವೂ ಪ್ರಜೆಯೂ ದೇಶಕ್ಕಿಂತ ದೊಡ್ಡದಾಗಬಾರದು. ಮುಂದಿನ ವರ್ಷದಿಂದಲೇ ಸುಗ್ರೀವಾಜ್ಞೆ ಹೊರಡಿಸಿ ವಿಧಿಸಬೇಕಾದ ಷರತ್ತು:

೧. ಯಾವ ಪಕ್ಷವೇ ಆಗಲಿ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲಬೇಕಾದರೆ ಇಬ್ಬರಿಗಿಂತ ಹೆಚ್ಚು ಮಕ್ಕಳಿರಕೂಡದು. ಚುನಾವಣೆ ಸಮೀಪಿಸುತ್ತಿದೆ, ಚುನಾವಣೆಗೆ ನಿಲ್ಲುವವರು ಕನ್ನಡ ಬಲ್ಲವರಾಗಿರಬೇಕು ಕನ್ನಡ ಬಲ್ಲವರಿಗೆ ಸೀಟು ಕನ್ನಡ ತಿಳಿದವರಿಗೆ ಓಟು ಎನ್ನುವುದು ಚುನಾವಣೆಯ ಒಂದು ತಾರಕ ಮಂತ್ರವಾಗಬೇಕು. ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗೆ ಕೂಡ ಇದೇ ನಿಯಮ.

೨. ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿದ್ದರೆ ಅಂಥ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿವೇತನ ಕೊಡಬಾರದು.

೩. ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರ ಸಾಲ ಕೊಡಬಾರದು. ಕೆಲಸಕ್ಕೆ ಸೇರುವಾಗ ಎರಡು ಮಕ್ಕಳಿದ್ದು ಆಮೇಲೆ ಹೆಚ್ಚು ಮಕ್ಕಳಾದರೆ ಯಾವುದೇ ಮುಂಬಡ್ತಿಗಳು ಸಿಗುವುದಿಲ್ಲವೆಂಬಂತಾಗಬೇಕು.

೪. ಅಲ್ಪಸಂಖ್ಯಾತ ಅಥವಾ ಧಾರ್ಮಿಕ ಕಾರಣಗಳ ರಿಯಾಯಿತಿ ಖಂಡಿತ ಇರಬಾರದು.

೫. ಕಾರ್ಮಿಕರೂ ರೈತರೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಗೂ ಈ ನಿಯಮವಿರಬೇಕು.

೬. ಈ ನಿಯಮ ಪಾಲನೆಯಿಂದ ರೈತ ಕುಟುಂಬಗಳಿಗೆ ಹೆಚ್ಚು ಸುಖಪ್ರಾಪ್ತಿಯಿದೆ. ಆಸ್ತಿಯ ಹಂಚಿಕೆಯೂ ದೊಡ್ಡ ಕುಟುಂಬ ನಿರ್ವಹಣೆಯ ಹೊಣೆಯೂ ನಿವಾರಣೆ ಆಗುತ್ತದೆ. ಸಾಲಗಾರರಾಗುವುದು ತಪ್ಪುತ್ತದೆ.

*
*
*

ಅನೇಕಾನೇಕ ಪ್ರಶ್ನೆಗಳ ಸರಮಾಲೆ ಹಿಡಿದು ಅಧ್ಯಕ್ಷಭಾಷಣವನ್ನು ಲಂಬಿಸುವ ಅಪೇಕ್ಷೆ ಇಲ್ಲ. ನನಗೆ ನನ್ನ ಮಿತಿಯ ಅರಿವು ಇದೆ. ಕೆಲವೇ ಸಂಕೀರ್ಣ ಸಮಸ್ಯೆಗಳಿಗೆ ಸ್ಪಂದಿಸಿ ನನ್ನ ಗ್ರಹಿಕೆಗಳ ನಿರ್ವಚನಕ್ಕೆ ಸೀಮಿತಗೊಳಿಸಿದ್ದೇನೆ. ಸಮಾಜ, ಸಾಹಿತ್ಯ, ಸಂಸ್ಕ ತಿ, ಭಾಷೆ ಕುರಿತು ನನ್ನೊಳಗೆ ಮಿಡುಕುತ್ತ ಚಿಮುಗುಡುವ ಭಾವನೆಗಳನ್ನು ನಿಮ್ಮ ಮಡಿಲಿಗಿಟ್ಟಿದ್ದೇನೆ. ನಾನು ಹುಟ್ಟಿದಂದಿನಿಂದ ಕನ್ನಡದ ಶಿಷ್ಯೆ. ಸಮಗ್ರ ಕನ್ನಡ ಪರಂಪರೆಯೇ ನನ್ನ ಪಠ್ಯ, ಕರ್ನಾಟಕವೇ ನನ್ನ ಪಾಠಶಾಲೆ. ಈ ಕನ್ನಡ ಶಾಲೆಯಲ್ಲಿ ನಾನು ಜೀವನ ಪಾಠಗಳನ್ನು ಕಲಿತು ಬೆಳೆದ ವಿದ್ಯಾರ್ಥಿನಿ. ಹತ್ತಾರು ಸಂಗತಿಗಳಿಗೆ ಮುಖಾಮುಖಿಯಾಗುತ್ತ ಮಾತಾಡಿದ್ದೀನೆ. ಇದು ನನಗೆ ನಾನು ಗಟ್ಟಿಯಾಗಿ ಹೇಳಿಕೊಂಡ ಉಪನ್ಯಾಸವೂ ಹೌದು. ಆಶಾವಾದಿಯಾದ ನನ್ನ ಕಳಕಳಿಯನ್ನು ಪ್ರಾಮಾಣಿಕ ಪರಿಭಾವನೆಯನ್ನು ಆಲಿಸುವ ಔದಾರ್ಯ ತೋರಿದ ತಮ್ಮ ಹೃದಯಸಿರಿಗೆ, ಸುಹೃದ್ ಗಣಾವೃತ ಕನ್ನಡ ಜನ ಸಂಸದಾಂತರ್ಗತ ನಿರ್ಮಲ ಜ್ಯೋತಿಗೆ ನಮಸ್ಕರಿಸುತ್ತೇನೆ.

ದಿನಾಂಕ: ೧೮ ಡಿಸೆಂಬರ್, ೨೦೦೩, ಸ್ಥಳ: ಮೂಡುಬಿದಿರೆ (ಕವಿ ಮುದ್ದಣ್ಣ ನಗರ)
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ