‘ಬಿಡುವಿಲ್ಲ, ಅರ್‍ಜಂಟು!’ ಟಾರುಬೀದಿಯ ತುಡಿತ!
ಕಾರು ಮೋಟಾರು ಸೈಕಲ್ಲು ಟಾಂಗಾ ಟ್ರಕ್ಕು
ಉಸಿರು ಕಟ್ಟುವ ತೆರದಿ ಬಟ್ಟೆಯಲ್ಲಿ ಹಾಸು ಹೊಕ್ಕು!
ಗಡಿಯಾರದೆಡೆಬಿಡದ ಟಕ್ಕುಟಕ್ಕಿನ ಬಡಿತ!
ಅಫೀಸು ಶಾಲೆ ಕಾಲೇಜು ಅಂಗಡಿ ಬ್ಯಾಂಕು
ಎಳೆಯುತಿಹವಯಸ್ಕಾಂತದೋಲು ಜೀವಾಣುಗಳ
ಮೂಗುದಾರವ ಜಗ್ಗಿ! ನೂರುಗಾಲಿಯ ಕೀಲ
ಸವೆದು ಕಿರುಗುಟ್ಟುತಿವೆ: ನರನಿಗೆ ಜಯಪರಾಕು!
ಬೀದಿಯಂಚಿನ ಕಾಲುದಾರಿಯಲಿ ದನಗಾಹಿ
ಮಹಿಷವಾಹನನಾಗಿ ಕೊಳಲೂದಿ ಸಾಗಿಹನು
ನೋಡಿದಿರ? ನೋಡದಿದ್ದರು ಸರಿಯೆ; ಅವನೇನು
ಮಂತ್ರಿಯೆ? ಯಾವುದಾದರು ಸಭೆಯ ಮನಮೋಹಿ
ಗಾರುಡಿಯೆ? ಅವನಲ್ಲ ಬಿಡಿ; ಆದರೆನ್ನಾಣೆ
ಅಂಥ ಮನಸಿನ ಶಾಂತಿ ಯಾರಿಗಿಹುದೋ ಕಾಣೆ!
*****